ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಮಾರ್ಚ್ 27, 2015

ಪಂಚಶಕ್ತಿಗಳ ಮಹತ್ವ - ಭಾಗ ೩: ವಾಯು


     ಪಂಚಭೂತಗಳಲ್ಲಿ ಒಂದಾದ ವಾಯು ಒಂದು ಪ್ರಧಾನ ಶಕ್ತಿಯಾಗಿದೆ. ಜೀವಿಗಳು ಜೀವ ಧರಿಸಲು ಸಾಧ್ಯವಾಗಿರುವುದು ಈ ವಾಯುವಿನಿಂದಾಗಿಯೇ! ಹೀಗಾಗಿ ವಾಯುವು ಭೂಮಿ, ಜಲ, ಅಗ್ನಿಗಳಿಗಿಂತಲೂ ಮೇಲಿನ ಸಂಗತಿಯಾಗಿದೆ. ಸಾಮಾನ್ಯವಾಗಿ ಗಾಳಿ ಎನ್ನುವ ಇದನ್ನು ವಾತ, ಪವನ, ಪ್ರಾಣ ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತಾರೆ. ವಾಯು ಎಷ್ಟು ಮುಖ್ಯ ಎಂಬುದಕ್ಕೆ ಒಂದು ಕಥೆ ಹೇಳುತ್ತಾರೆ. ಒಮ್ಮೆ ದೇಹದ ಅಂಗಗಳು, ಇಂದ್ರಿಯಗಳನ್ನು ನಿಯಂತ್ರಿಸುವ ದೇವರುಗಳಲ್ಲಿ ಯಾರು ಹೆಚ್ಚು ಎಂಬ ಬಗ್ಗೆ ಸ್ಪರ್ಧೆ ಉಂಟಾಯಿತಂತೆ. ಒಂದರ ನಂತರ ಒಂದರಂತೆ ಅವರುಗಳು ದೇಹವನ್ನು ಬಿಟ್ಟು ಹೋಗಿ ಪರಿಣಾಮ ವೀಕ್ಷಿಸಿದರಂತೆ. ಒಬ್ಬೊಬ್ಬ ದೇವರೂ ದೇಹ ಬಿಟ್ಟಾಗಲೂ ಅದರ ಪರಿಣಾಮವಾಗಿ ಏರುಪೇರುಗಳಾಗುತ್ತಿದ್ದವಂತೆ. ಉದಾಹರಣೆಗೆ ಕಣ್ಣು ಕಾಣಿಸದಿರುವುದು, ಕಿವಿ ಕೇಳಿಸದಿರುವುದು, ಇತ್ಯಾದಿ. ಕೊನೆಯಲ್ಲಿ ವಾಯುದೇವ ಬಿಟ್ಟು ಹೊರಡಲು ಅನುವಾಗುತ್ತಿದ್ದಂತೆ ಇತರ ಎಲ್ಲಾ ದೇವರುಗಳಿಗೂ ಬಲವಂತವಾಗಿ ಹೊರದೂಡಲ್ಪಡುವ ಅನುಭವ ಉಂಟಾಯಿತಂತೆ. ವಾಯು ಇದ್ದರೆ ಮಾತ್ರ ತಮ್ಮ ಅಸ್ತಿತ್ವ, ಇಲ್ಲದಿದ್ದರೆ ತಮಗೆ ಅಸ್ತಿತ್ವ ಇಲ್ಲ ಎಂಬುದನ್ನು ಮನಗಂಡ ಅವರುಗಳು ವಾಯುವೇ ಪ್ರಧಾನ ಎಂಬುದನ್ನು ಒಪ್ಪಿಕೊಂಡರಂತೆ. ಇದು ಕಥೆಯಾದರೂ ಇದರಲ್ಲಿ ಸತ್ಯವಿದೆ, ಸತ್ವವಿದೆ.
     ಮನುಷ್ಯನ ಹುಟ್ಟು ಮತ್ತು ಸಾವು ಎರಡೂ ಉಸಿರಿನ ಮೇಲೆ ನಿಂತಿದೆ. ಹುಟ್ಟುವ ಕ್ಷಣದಿಂದಲೇ ಆರಂಭವಾಗುವ ಉಸಿರಾಟ ಸಾವಿನವರೆಗೂ ನಿರಂತರವಾಗಿ ಮುಂದುವರೆಯುತ್ತದೆ. ಉಸಿರು ನಿಂತಾಗ ಜೀವವೂ ನಿಲ್ಲುತ್ತದೆ. ಒಬ್ಬ ಮನುಷ್ಯ ಒಂದು ನಿಮಿಷಕ್ಕೆ 30 ಸಲ ಉಸಿರಾಡುತ್ತಾನೆ ಎಂದಿಟ್ಟುಕೊಂಡರೆ ಮತ್ತು ಅವನು 100ವರ್ಷ ಬದುಕುತ್ತಾನೆ ಎಂದುಕೊಂಡರೆ ಅವನ ಜೀವಿತಾವಧಿಯಲ್ಲಿ ಒಟ್ಟು 30x60x24x365x100 ಸಲ ಉಸಿರಾಡುತ್ತಾನೆ! ಒಂದೊಂದು ಸಲ ಉಸಿರಾಡಿದಾಗಲೂ ಅಷ್ಟರ ಮಟ್ಟಿಗೆ ನಾವು ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ. ಈ ಉಸಿರು ಯಾವಾಗ ಪ್ರಾರಂಭವಾಗುತ್ತದೆ, ಯಾವಾಗ ನಿಲ್ಲುತ್ತದೆ, ಯಾರಿಗೆ ಗೊತ್ತು? ಈ ಉಸಿರಿನ ನಿಯಂತ್ರಣ ಯಾರದ್ದು? ಉಸಿರಾಡುವ ನಮ್ಮದಂತೂ ಇರಲಾರದು. ಏಕೆಂದರೆ ನಾವು ನಿದ್ದೆ ಮಾಡುತ್ತಿರುವಾಗಲೂ, ನಮಗೆ ಎಚ್ಚರವಿಲ್ಲದೆ ಇರುವಾಗಲೂ ನಾವು ಉಸಿರಾಡುತ್ತಲೇ ಇರುತ್ತೇವೆ! ನಮ್ಮ ನಿಯಂತ್ರಣವಿದ್ದಿದ್ದರೆ ನಾವು ಉಸಿರಾಡುವುದನ್ನು ನಿಲ್ಲಿಸುತ್ತಲೇ ಇರುತ್ತಿರಲಿಲ್ಲ. ಏಕೆಂದರೆ, ಸಾಯುವುದಕ್ಕೆ ಯಾರು ಇಷ್ಟ ಪಡುತ್ತಾರೆ?
     ಆ ದೇವರು ನಮ್ಮಲ್ಲಿ ನಾವು ಸಾಯುವುದೇ ಇಲ್ಲವೆಂಬಂತೆ ಭಾವಿಸುವ ಅದು ಯಾವ ಭ್ರಾಮಕ ಅಂಶವನ್ನು ಸೇರಿಸಿದ್ದಾನೋ ಗೊತ್ತಿಲ್ಲ. ಈ ಭಾವನೆ ಇರುವುದರಿಂದಲೇ ನಾವು ಸರಿಯಾಗಿ ಬದುಕುತ್ತಿಲ್ಲ. ಕೊನೆಯ ಪಕ್ಷ ನಾವು ಯಾವಾಗ ಸಾಯುತ್ತೇವೆ ಎಂಬುದಾದರೂ ಗೊತ್ತಿದ್ದಿದ್ದರೆ ಸ್ವಲ್ಪ ಕಾಲವಾದರೂ ಸರಿಯಾಗಿ ಬದುಕುತ್ತೇವೇನೋ! ಬದುಕಿಯೇ ಇರುತ್ತೇವೆಂಬ ಭ್ರಮೆಯಲ್ಲಿ ಜನರು ಸಾಯುತ್ತಾ ಬದುಕಿದ್ದಾರೆ. ಮತಾಂಧರಾಗಿ ಜನರ ಮಾರಣ ಹೋಮ ಮಾಡುತ್ತಿರುವವರು ಇರುವಲ್ಲಿ, ಹಣಕ್ಕಾಗಿ, ಆಸ್ತಿಗಾಗಿ ಕುಟುಂಬದವರನ್ನೇ ಕೊಲ್ಲುವ ಮನೋಭಾವವಿರುವವರಲ್ಲಿ, ಹಣಕ್ಕಾಗಿ, ಅಧಿಕಾರಕ್ಕಾಗಿ, ಹೆಸರಿಗಾಗಿ ಏನೂ ಮಾಡಲು ಹೇಸದವರು ಇರುವಲ್ಲಿ ಸಾವು ಗಹಗಹಿಸಿ ನಗುತ್ತಿದೆ. ಸಾಯುತ್ತಿದ್ದೇವೆ, ಸಾಯುತ್ತೇವೆ ಎಂಬ ಅರಿವು ನಮಗೆ ಉಂಟಾದರೆ ನಾವು ಬದುಕುತ್ತೇವೆ. ಇಲ್ಲದಿದ್ದರೆ ಸಾಯುತ್ತಾ ಬದುಕುತ್ತೇವೆ. ಸಾಯುತ್ತಾ ಬದುಕುವುದಕ್ಕಿಂತ ಬದುಕಿ ಸಾಯುವುದು ಉತ್ತಮವಲ್ಲವೇ?
     ಉಸಿರು ಹೇಗೆ ನಮ್ಮ ಜೀವನಾಧಾರವಾಗಿದೆಯೋ ಹಾಗೆಯೇ ನಮ್ಮನ್ನು, ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲೂ ಸಹಕಾರಿಯಾಗಿದೆ. ಕೋಪ ಬಂದಾಗ ಭುಸುಗುಡುತ್ತಾ ವೇಗವಾಗಿ ಉಸಿರಾಡುತ್ತೇವೆ. ಶೋಕದಲ್ಲಿದ್ದಾಗ, ಸಂತೋಷದಲ್ಲಿದ್ದಾಗ, ಶಾಂತವಾಗಿದ್ದಾಗ ಉಸಿರಾಡುವ ರೀತಿಗಳೇ ಬೇರೆಯಾಗಿರುತ್ತವೆ. ಶಾಂತವಾಗಿರುವಾಗ ಉಸಿರಾಟ ಬಹಳ ನಿಧಾನವಾಗಿರುತ್ತದೆ. ಆದ್ದರಿಂದ ಕೋಪ ಬಂದಾಗ, ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭಗಳಲ್ಲಿ ಸ್ವಲ್ಪ ಹೊತ್ತು ನಿಧಾನವಾಗಿ ಮತ್ತು ದೀರ್ಘವಾಗಿ ಉಸಿರಾಟ ಮಾಡಿದರೆ ಮನಸ್ಸು ತಹಬಂದಿಗೆ ಬರುತ್ತದೆ. ಪ್ರಾಣಾಯಾಮ ಮನಸ್ಸನ್ನು ಶಾಂತಗೊಳಿಸಲು ಸಹಕಾರಿಯಾದ ಕ್ರಮವಾಗಿದೆ. ಪ್ರಾಣಾಯಾಮದಲ್ಲಿ ಉಸಿರನ್ನು ಹೊರಬಿಡುವುದಕ್ಕೆ ರೇಚಕ, ಸಾಧ್ಯವಾದಷ್ಟು ಉಸಿರನ್ನು ಹೊರಗೇ ತಡೆಹಿಡಿದಿಡುವುದಕ್ಕೆ ಬಾಹ್ಯ ಕುಂಭಕ, ಉಸಿರನ್ನು ಒಳಗೆ ತೆಗೆದುಕೊಳ್ಳುವುದಕ್ಕೆ ಪೂರಕ, ಸಾಧ್ಯವಾದಷ್ಟು ಉಸಿರನ್ನು ಒಳಗೇ ತಡೆಹಿಡಿದಿಡುವುದಕ್ಕೆ ಅಭ್ಯಂತರ ಕುಂಭಕ ಎನ್ನುತ್ತಾರೆ. ಈ ನಾಲ್ಕೂ ಸೇರಿದರೆ ಒಂದು ಪ್ರಾಣಾಯಾಮ ಎನ್ನುತ್ತಾರೆ. ವಿವಿಧ ರೀತಿಯ ಪ್ರಾಣಾಯಾಮಗಳಿದ್ದು ಅದರಿಂದ ದೇಹದ ಕಾಯಿಲೆಗಳ ಉಪಶಮನಕ್ಕೆ ಸಹಕಾರಿಯಾಗುವಂತಹವೂ ಇವೆ. ತಿಳಿದವರಿಂದ ಕಲಿತು ಪ್ರಾಣಾಯಾಮದ ಅಭ್ಯಾಸ ಮಾಡುವುದು ಒಳಿತು. ಸರಿಯಾದ ವಿದ್ಯೆ ಕಲಿಸುವವರು ಸಿಗದಿದ್ದರೆ ಅಥವ ಕಲಿಯಲು ಸಾಧ್ಯವಾಗದಿದ್ದರೆ ದೀರ್ಘ ಶ್ವಾಸೋಚ್ಛ್ವಾಸಗಳೇ ಸಾಕಾಗುತ್ತದೆ. ದೀರ್ಘ ಉಸಿರಾಟ ದೀರ್ಘ ಆಯಸ್ಸಿನ ರಹಸ್ಯವೆಂದು ಹೇಳುತ್ತಾರೆ. ದೀರ್ಘಕಾಲ ಬದುಕುವ ಆಮೆ ಬಹಳ ನಿಧಾನವಾಗಿ ಉಸಿರಾಡುತ್ತದೆ. ಪ್ರಾಣಾಯಾಮದ ಮಂತ್ರಗಳಿವು:
ಓಂ ಭೂಃ| ಓಂ ಭುವಃ| ಓಂ ಸ್ವಃ| ಓಂ ಮಹಃ| ಓಂ ಜನಃ| ಓಂ ತಪಃ| ಓಂ ಸತ್ಯಂ|
     ಸರ್ವರಕ್ಷಕ ದೇವ ಸದ್ರೂಪನು, ಸರ್ವವ್ಯಾಪಿ ದೇವ ಚಿದ್ರೂಪನು, ಸರ್ವಪ್ರದ ದೇವ ಆನಂದಸ್ವರೂಪನು, ಸರ್ವಾಚ್ಛಾದಕ ದೇವ ಮಹತ್ತಮನು, ಸರ್ವ ಪ್ರಾಪ್ಯ ದೇವ ಜಗಜ್ಜನಕನು, ಜ್ಞಾನಸ್ವರೂಪ ದೇವ ತಪಃಸ್ವರೂಪನು, ಸಹನಶೀಲನು, ಅನಾದಿ ಅನಂತ ಸತ್ಯಸ್ವರೂಪನು ಎಂಬುದು ಈ ಮಂತ್ರದ ಅರ್ಥವಾಗಿದೆ.
     ಯಜ್ಞ ಮಾಡುವಾಗ, ಅಗ್ನಿಹೋತ್ರ, ಹೋಮ-ಹವನಗಳನ್ನು ಮಾಡುವಾಗ ಸಾಮಾನ್ಯವಾಗಿ ಈ ಮಂತ್ರವನ್ನೂ ಉಚ್ಛರಿಸಲಾಗುತ್ತದೆ:
ಓಂ ಭೂರ್ಭುವಃ ಸ್ವರಗ್ನಿ ವಾಯ್ವಾದಿತ್ಯೇಭ್ಯಃ ಸ್ವಾಹಾ| ಇದಮಗ್ನಿ ವಾಯ್ವಾದಿತ್ಯೇಭ್ಯಃ ಇದಂ ನ ಮಮ|| (ತೈತ್ತರೀಯ ಅರಣ್ಯಕ.೧೦.೩.)
     ಆ ಸಚ್ಚಿದಾನಂದ ಸ್ವರೂಪನಾದ ಪ್ರಭುವಿನ ನಾಯಕತ್ವ, ಪ್ರಾಣಾಧಾರಕತ್ವ, ಅಖಂಡತ್ವಗಳ ಅನುಭೂತಿಗಾಗಿ ಈ ಆತ್ಮನಿವೇದನೆ. ಇದು ಆ ದೇವನ ನೇತೃತ್ವ, ಪ್ರಾಣಪ್ರದತ್ವ ಮತ್ತು ಅಖಂಡತ್ವದ ಸಾಕ್ಷಾತ್ಕಾರಕ್ಕಾಗಿಯೇ ಹೊರತು ನನ್ನ ಸ್ವಾರ್ಥಕ್ಕಲ್ಲ ಎಂಬುದು ಈ ಮಂತ್ರದ ಅರ್ಥ. ಯಜ್ಞದ ಸಂದರ್ಭದಲ್ಲಿ ಅರ್ಪಿಸಲಾಗುವ ಔಷಧೀಯ ಗುಣಗಳುಳ್ಳ ಹವಿಸ್ಸು, ಸಮಿತ್ತುಗಳನ್ನು ಅಗ್ನಿ ಅರಗಿಸಿದರೆ, ವಾಯುವು ಅದನ್ನು ಸರ್ವರಿಗೂ ತಲುಪಿಸುವ ಕೆಲಸ ಮಾಡುತ್ತಾನೆ.
     ವೈಜ್ಞಾನಿಕವಾಗಿಯೂ ಸಹ ವಾತಾವರಣವೆಂದು ಕರೆಯಲಾಗುವ ವಾಯುವಿನ ಮಹತ್ವ ವಿವರಿಸಿದ್ದಾರೆ. ಈ ಅಂಶಗಳ ಕುರಿತು ವಿವರಿಸುತ್ತಾ ಹೋಗುವುದು ಈ ಲೇಖನದ ಉದ್ದೇಶವಲ್ಲವಾದ್ದರಿಂದ ಅದನ್ನು ವಿಸ್ತರಿಸುವುದಿಲ್ಲ. ವಾಯು ಒಂದು ಮಹತ್ವವಾದ ಶಕ್ತಿ ಎಂಬುದನ್ನು ಬಿಂಬಿಸುವುದಷ್ಟೇ ಈ ಲೇಖನದ ಉದ್ದೇಶವಾಗಿದೆ. ಜೀವನಾಧಾರವಾದ ವಾಯುವಿನ ಬಗ್ಗೆ ನಾವು ಕೃತಜ್ಞರಾಗಿರಬೇಕಿದೆ. ಹೇಗೆ ಎಂಬುದನ್ನು ಮುಂದೆ ನೋಡೋಣ.
     ಪ್ರತಿ ಮಾನವ ಮಾನವನೆನಿಸಿಕೊಳ್ಳಬೇಕಾದರೆ ಜೀವಿತಕಾಲದಲ್ಲಿ ಮೂರು ಋಣಗಳನ್ನು ತೀರಿಸಬೇಕಿರುತ್ತದೆ - ದೇವಋಣ, ಪಿತೃಋಣ ಮತ್ತು ಆಚಾರ್ಯಋಣ. ಪಿತೃಋಣ ಮತ್ತು ಆಚಾರ್ಯಋಣಗಳ ಬಗ್ಗೆ ಚರ್ಚಿಸುವುದು ಈ ವಿಷಯಕ್ಕೆ ಪೂರಕವಾಗುವುದಿಲ್ಲವಾದುದರಿಂದ ಇಲ್ಲಿ ಚರ್ಚಿಸುವುದು ಅನಗತ್ಯವಾಗುತ್ತದೆ. ಇನ್ನು ದೇವಋಣವನ್ನು ತೀರಿಸುವುದು ಹೇಗೆ? ದೇವರ ಧ್ಯಾನ ಮಾಡುತ್ತಾ ಕೂರುವುದೇ? ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗಿ ಪೂಜೆ ಸಲ್ಲಿಸುವುದೇ? ಇದಾವುದೂ ಅಲ್ಲ. ನಮ್ಮ ಶರೀರ ಪಂಚಭೂತಗಳಿಂದ ಕೂಡಿದ್ದು ಅಂತ್ಯದಲ್ಲಿ ಸೇರುವುದು ಪಂಚಭೂತಗಳಲ್ಲಿಯೇ! ನಮಗೆ ದೇವರ ಅನುಭವವಾಗಬೇಕೆಂದರೆ ಪಂಚಭೂತಗಳ ಸಹಾಯದಿಂದ, ಪಂಚಭೂತಗಳ ರೂಪದಲ್ಲಿಯೇ ಆಗಬೇಕು. ಈ ನೆಲ, ಜಲ, ಅಗ್ನಿ, ವಾಯು ಮತ್ತು ಆಕಾಶಗಳ ಪ್ರತಿ ನಮಗೆ ಜವಾಬ್ದಾರಿಯಿದೆ. ಅದೆಂದರೆ ಅವುಗಳನ್ನು ಹಾನಿ ಮಾಡದೆ ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗಳೂ 'ಜೀವಿಸಲು' ಅನುಕೂಲ ಮಾಡಿಕೊಡುವುದು!
     ಪ್ರಸ್ತುತ ವಾಯುವಿನ ಬಗ್ಗೆ ಮಾತನಾಡುತ್ತಿರುವುದರಿಂದ ವಾಯುವನ್ನು ಶುದ್ಧವಾಗಿಡುವಲ್ಲಿ ನಮ್ಮ ಕರ್ತವ್ಯವನ್ನು ನಿರ್ವಹಿಸುವ ಬಗ್ಗೆ ಗಮನಿಸೋಣ. ಇಂದು ವಾಯುಮಾಲಿನ್ಯದಿಂದ ಜಗತ್ತು ತಲ್ಲಣಿಸುತ್ತಿದೆ. ವಾಯುಮಾಲಿನ್ಯದಿಂದಾಗಿ ನೂರಾರು ರೀತಿಯ ಕಾಯಿಲೆಗಳು, ಸಾವು ಸಂಭವಿಸುವುದು, ಇತರ ಜೀವ ಜಗತ್ತುಗಳಿಗೂ ಆಪತ್ತು, ತಿನ್ನುವ ಆಹಾರ ಕಲುಷಿತವಾಗುವುದು, ಬೆಳೆಗಳು ರೋಗಗ್ರಸ್ಥವಾಗುವುದು, ಇತ್ಯಾದಿ ಗಂಭೀರ ಸಮಸ್ಯೆಗಳು ಉಂಟಾಗುತ್ತಿವೆ. ಭೋಪಾಲ್ ವಿಷಾನಿಲ ದುರಂತದಿಂದ ಸಾವಿರಾರು ಜನರು ಮೃತರಾದುದು, ಬದುಕಿರುವವರು ಶೇಷ ಜೀವನ ಪೂರ್ತಿ ವಾಸಿಯಾಗದ ಕಾಯಿಲೆಗಳಿಂದ ನರಳುತ್ತಿರುವುದು ನಮ್ಮ ಕಣ್ಣ ಮುಂದಿನ ಜ್ವಲಂತ ಉದಾಹರಣೆಯಾಗಿದೆ. ಫ್ಯಾಕ್ಟರಿಗಳಿಂದ ಹೊರಹೊಮ್ಮುವ ವಿಷಾನಿಲಗಳು, ವಾಹನಗಳ ಹೊಗೆ, ಅಣುವಿಕಿರಣ ಹೊಮ್ಮಿಸುವ ಮಿಲಿಟರಿ ಉಪಕರಣಗಳು, ಅಸಮರ್ಪಕ ತ್ಯಾಜ್ಯ ವಿಲೇವಾರಿ, ರಾಸಾಯನಿಕ ಅಸ್ತ್ರ-ಶಸ್ತ್ರಗಳು ಇತ್ಯಾದಿಗಳು ಮಾನವ ಕಾರಣದಿಂದಾಗಿ ಆಗುವ ಮಾಲಿನ್ಯಗಳಿಗೆ ಉದಾಹರಣೆಯಾಗಿ ಕೊಡಬಹುದು. ಮನೆಯ ಒಳಗೆ ಸರಿಯಾಗಿ ಗಾಳಿ, ಬೆಳಕು ಚಲಿಸಲು ಅವಕಾಶವಿಲ್ಲದಿದ್ದರೆ ಸಹ ಅಲ್ಲಿ ದೂಷಿತ ವಾತಾವರಣ ಸೃಷ್ಟಿಯಾಗುವುದೆಂಬುದನ್ನು ಗಮನಿಸಬೇಕು. ವಾಯುಮಾಲಿನ್ಯದಿಂದಾಗಿ ಹೃದ್ರೋಗಗಳು, ಕ್ಯಾನ್ಸರ್, ಆಸ್ತಮಾ ಮುಂತಾದ ರೋಗಗಳಲ್ಲದೆ ಮಕ್ಕಳು ಹುಟ್ಟುವಾಗಲೇ ಸಾಯುವ ಸಂಭವನೀಯತೆಯೂ ಇರುತ್ತದೆ.
     ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಜನಪರ ಕಾಳಜಿಯುಳ್ಳ ಜನರು ಮತ್ತು ಸಂಘ-ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ತಂದು ಯೋಜಿತ ರೀತಿಯಲ್ಲಿ ನಗರಗಳ ನಿರ್ಮಾಣ, ವಾಹನಗಳ ನಿಯಂತ್ರಣ, ವೈಜ್ಞಾನಿಕ ರೀತಿಯ ತ್ಯಾಜ್ಯ ವಿಲೇವಾರಿ, ವಾಯುಶುದ್ಧೀಕರಣದ ಕುರಿತು ಕ್ರಮಗಳನ್ನು ಅನುಸರಿಸುವಂತೆ ಮಾಡಬೇಕಿದೆ. ಭಾರತದಲ್ಲಿ ದೆಹಲಿ, ಕೊಲ್ಕತ್ತ, ಕಾನ್ಪುರ, ಲಕ್ನೌಗಳು ಅತ್ಯಂತ ಕಲುಷಿತ ನಗರಗಳೆಂದು ಹೆಸರಿಸಲ್ಪಟ್ಟಿವೆ. ಉದ್ಯಾನನಗರಿಯೆಂದು ಒಮ್ಮೆ ಹೆಸರಾಗಿದ್ದ ಬೆಂಗಳೂರನ್ನು ಇಂದು ಕಾಂಕ್ರೀಟ್ ನಗರಿ ಮಾತ್ರವಲ್ಲ ಕೊಳಚೆನಗರಿ ಎಂತಲೂ ಹೆಸರಿಸಬಹುದೇನೋ! ಇನ್ನು ವೈಯಕ್ತಿಕವಾಗಿ ನಾವುಗಳು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಮಾಲಿನ್ಯ ಉಂಟುಮಾಡುವವರನ್ನು ತಡೆಯುವ ಕೆಲಸವನ್ನೂ ಮಾಡಿದರೆ ಇದು ಖಂಡಿತವಾಗಿ ದೇವಋಣವನ್ನು ತೀರಿಸಿದಂತೆ ಆಗುತ್ತದೆ. ಈ ವೇದಮಂತ್ರ ಹೀಗೆ ಹೇಳುತ್ತದೆ:
ಯಸ್ಯ ಸೂರ್ಯಶ್ಚಕ್ಷುಶ್ಚಂದ್ರಮಾಶ್ಚ ಪುನರ್ಣವಃ| ಅಗ್ನಿಂ ಯಶ್ಚಕ್ರ ಅಸ್ಯಂ ತಸ್ಮೈ ಜ್ಯೇಷ್ಠಾಯ ಬ್ರಹ್ಮಣೇ ನಮಃ|| ಯಸ್ಯ ವಾತಃ ಪ್ರಾಣಾಪಾನೌ ಚಕ್ಷುರಂಗಿರಸೋ ಭವನ್| ದಿಶೋ ಯಶ್ಚಕ್ರೇ ಪ್ರಜ್ಞಾನೀಸ್ತಸ್ಯ ಜ್ಯೇಷ್ಠಾಯ ಬ್ರಹ್ಮಣೇ ನಮಃ|| (ಅಥರ್ವ.೧೦.೭.೩೨-೩೪)
     ಅರ್ಥ: 'ಸಕಲ ಜೀವಿಗಳಿಗೆ ಆಶ್ರಯವಾದ ಭೂಮಿ ಯಾರ ಪಾದಗಳಂತಿರುವುದೋ, ವಿಶಾಲ ಅಂತರಿಕ್ಷವು ಯಾರ ಉದರಸಮಾನವಾಗಿರುವುದೋ, ಉನ್ನತವಾದ ದ್ಯುಲೋಕವು ಯಾರ ಶಿರದಂತೆ ಇರುವುದೋ, ಪ್ರಕಾಶಮಾನವಾದ ಸೂರ್ಯ-ಚಂದ್ರರು ಯಾರ ಕಣ್ಣುಗಳಂತಿರುವುದೋ, ಉಜ್ವಲವಾಗಿ ಬೆಳಗುವ ಅಗ್ನಿಯು ಯಾರ ಮುಖದಂತಿರುವುದೋ, ಸರ್ವವ್ಯಾಪಿ, ಗತಿಶೀಲ ವಾಯು ಯಾರ ಪ್ರಾಣಾಪಾನಗಳಂತಿರುವುದೋ, ಪ್ರಕಾಶಮಾನ ಕಿರಣಗಳ ಸಮೂಹ ಯಾರ ಕಣ್ಣಿನ ಬೆಳಕಿನಂತಿರುವುದೋ, ಜ್ಞಾನ ಸಾಧಕ ದಿಕ್ಕುಗಳು ಯಾರ ಕರ್ಣಗಳಿಂತಿರುವುದೋ ಆ ಬ್ರಹ್ಮಾಂಡಸ್ವರೂಪಿ ಶರೀರಧಾರಿಯಾದ, ವಸ್ತುತಃ ಅಶರೀರನಾದ ಸರ್ವಶ್ರೇಷ್ಠ ಪರಮಾತ್ಮನಿಗೆ ನಮ್ಮ ಅತ್ಯಂತ ನಮ್ರತೆಯ ಭಕ್ತ್ಯಾದರಗಳ ನಮನಗಳು.' ಪಂಚಭೂತಗಳ ರೂಪದಲ್ಲಿ ಭಗವಂತನನ್ನು ಕಾಣಲು ಈ ಮಂತ್ರ ನಮ್ಮನ್ನು ಪ್ರೇರಿಸುವುದಿಲ್ಲವೇ?
-ಕ.ವೆಂ.ನಾಗರಾಜ್.
**************
ದಿನಾಂಕ  9-03-2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


3 ಕಾಮೆಂಟ್‌ಗಳು:

 1. H A Patil
  ಕವಿ ನಾಗರಾಜರವರಿಗೆ ವಂದನೆಗಳು
  ಪಂಚ ಮಹಾಭೂತಗಳ ಕುರಿತು ಬರೆಯುತ್ತಿರುವ ಸರಣಿ ಚೆನ್ನಾಗಿ ರೂಪಗೊಂಡು ಮೂಡಿ ಬರುತ್ತಿದೆ, ಸಂಸ್ಕೃತದ ಕುರಿತು ವಿಶೇಷ ಜ್ಞಾನವಿಲ್ಲದ ನಮ್ಮಂತಹವರಿಗೆ ಆ ಭಾಷೆಯಲ್ಲಿರುವ ಜ್ಞಾನವನ್ನು ನಮಗೆ ಉಣ ಬಡಿಸುತ್ತಿದ್ದೀರಿ, ವಾಯುವಿನ ಕುರಿತ ಈ ಲೇಖನದ ಜೊತೆಗೆ ಆತನ ಚಿತ್ರ ವಿಭಿನ್ನವಾಗಿ ಸುಂದರವಾಗಿ ಮೂಡಿ ಬಂದಿದೆ, ಈ ಜ್ಞಾನ ಗಂಗೆಯ ಹರಿವು ನಿರಂತರ ವಾಗಿರಲಿ ಧನ್ಯವಾದಗಳು.

  kavinagaraj
  ವಂದನೆಗಳು, ಪಾಟೀಲರೇ. ಈ ವಿಷಯಗಳ ಕುರಿತು ಅಧ್ಯಯನ ಮಾಡುತ್ತಾ ಹೋದಂತೆ ಬೆರಗಾಗುತ್ತಿದ್ದೇನೆ. ವಿಷಯಗಳು ಅಗಾಧ ವಿಸ್ತಾರ ಹೊಂದಿದ್ದಾಗಿವೆ. ಅಲ್ಪಮತಿಗೆ ತಿಳಿದಂತೆ ನನಗೆ ತಿಳಿದಿದ್ದನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳುವ ಕೆಲಸ ಮಾಡುತ್ತಿರುವೆ.

  nageshamysore
  ವಾಯುವಿನ ಮಹತ್ವವನ್ನು ತೊಳೆತೊಳೆಯಾಗಿ ಬಿಡಿಸಿಟ್ಟ ಮತ್ತೊಂದು ಅದ್ಭುತ ಲೇಖನ...! ಮಿಕ್ಕ ನಾಲ್ಕಕ್ಕೆ ಹೋಲಿಸಿದರೆ ವಾಯು ಮಾತ್ರವೆ ಜೀವಿಗಳ ಅಸ್ತಿತ್ವದ ಜತೆ ಅತ್ಯಂತ ಅನೋನ್ಯ, ಅವಿನಾಭಾವ ಸಂಬಂಧ ಹೊಂದಿರುವಂತೆ ಕಾಣುತ್ತದೆ. ಯಾಕೆಂದರೆ ವಾಯುವಿನ ಆಗಮನದೊಂದಿಗೆ ಆರಂಭವಾಗುವ ಜೀವಿಯ ಉಸಿರಾಟ ಜೀವದ ಅಸ್ತಿತ್ವದ ಕುರುಹು; ಅದೇ ಉಸಿರು ತೊರೆದಾಗ ಸ್ತಬ್ದವಾಗುವ ಜೀವಿಯ ಸ್ಥಿತಿ, ಸಾವಿನ ರೂಪದಲ್ಲಿ ಅದರ ಅಂತ್ಯವಾದ ಕುರುಹು. ಅದೆ ರೀತಿಯಲ್ಲಿ ಮತ್ತೊಂದು ಮಹತ್ವದ ಅಂಶವೆಂದರೆ ವಾಯುವಿಗೆ ಮಾತ್ರವೆ ಕಾಮರೂಪಿಯಾಗುವ ಸಾಮರ್ಥ್ಯ ಸಹಜವಾಗಿ ಬಂದಿರುವಂತೆ ಕಾಣುತ್ತದೆ. ಯಾಕೆಂದರೆ ಒತ್ತಡ ಹಾಕಿ ಅದನ್ನು ಕುಗ್ಗಿಸಬಹುದು, ಒತ್ತಡ ತೆಗೆದು ಹಿಗ್ಗಿಸಬಹುದು, ಪಾತ್ರೆಯ ಗಾತ್ರಕ್ಕನುಗುಣವಾಗಿ ಹೊಂದಾಣಿಸಬಹುದು. ಇಷ್ಟೊಂದು ಸಡಿಲ ಅವತಾರ ವೈವಿಧ್ಯದ ಸಾಧ್ಯತೆಯಿರುವುದು ಬರಿ ವಾಯುವಿಗೆ ಮಾತ್ರವೆ. ಅದರಿಂದಾಗಿಯೆ ಇರಬೇಕು ನಾವು ವ್ಯಾಯಾಮ, ಜಾಗಿಂಗ್ ಮಾಡಿದಾದ ನಿರ್ದಿಷ್ಠ ಸಾಮರ್ಥ್ಯದ ದೇಹದ ಪಾತ್ರೆ, ಹೆಚ್ಚು ವಾಯುಸೇವನೆ ಮಾಡಿ ಹೆಚ್ಚು ಶಕ್ತಿ ಪಡೆದು ಹೆಚ್ಚು ಚೇತನ ತುಂಬುವ ಚೇತೋಹಾರಿ ಅನುಭವ ನೀಡುವುದು. ಧನ್ಯವಾದ ಮತ್ತು ಅಭಿನಂದನೆಗಳು ಕವಿಗಳೆ!

  kavinagaraj
  ಪಂಚಭೂತಗಳಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಗುಣ ವೈಶಿಷ್ಟ್ಯಗಳಿವೆ. ವಾಯುವಿಗಿಂತ ಮಿಗಿಲಾದ ಆಕಾಶದ ಕುರಿತು ಮುಂದಿನ ಕಂತಿನಲ್ಲಿ ನೋಡೋಣ. ಉತ್ತಮವಾದ ವಿಚಾರಗಳಿಂದೊಡಗೂಡಿದ ಪ್ರತಿಕ್ರಿಯೆಗೆ ವಂದನೆಗಳೂ, ನಾಗೇಶರೇ.

  ಪ್ರತ್ಯುತ್ತರಅಳಿಸಿ
 2. ಮುಂದುವರೆದ ಈ ಭಾಗದಿಂದ ಇನ್ನಷ್ಟು ತತ್ವಗಳ ಆಂತರ್ಯ ಪರಿಚಯವಾಯಿತು.

  ತಾವು ಶ್ಲೋಕಗಳಿಗೆ ಕೊಟ್ಟ ಭಾವಾರ್ಥವೂ ಬಹು ಉಪಯುಕ್ತವಾಯಿತು.

  ಮನಸ್ಸಿನಾಳಕೆ ಇಳಿದ ಸಾಲು:
  'ಬದುಕಿಯೇ ಇರುತ್ತೇವೆಂಬ ಭ್ರಮೆಯಲ್ಲಿ ಜನರು ಸಾಯುತ್ತಾ ಬದುಕಿದ್ದಾರೆ'
  ಹೌದಲ್ಲವೇ!!

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ವಂದನೆಗಳು, ಬದರೀನಾಥರೇ. ಸದ್ವಿಚಾರಗಳ ಪ್ರಸಾರದಲ್ಲಿ ತಾವು ಮಾಡುತ್ತಿರುವ ಕೆಲಸ ವಾಯು ಮಾಡುವಂತೆಯೇ ಇದೆ.

   ಅಳಿಸಿ