ಹೆಜ್ಜೆ 1:
ಜ್ಞಾನ ಜಂಬದಿಂದ ನುಡಿಯಿತು: "ನೀವು ಪುಣ್ಯವಂತರು. ಲಕ್ಷಾಂತರ ಜೀವಜಂತುಗಳಲ್ಲಿ ಮಾನವರಾಗಿ ಜನಿಸಿರುವ ನೀವು ಪುಣ್ಯವಂತರು. ಇದಕ್ಕೆ ಮುಂಚೆ ನೀವು ಏನೇನಾಗಿ ಜನಿಸಿದ್ದಿರೋ ನಿಮಗೆ ತಿಳಿಯದು. ನಿಮ್ಮ ಪೂರ್ವ ಕರ್ಮದ ಫಲವಾಗಿ ಈಗ ನರಜನ್ಮ ಪಡೆದಿದ್ದೀರಿ. ಇತರ ಜೀವಿಗಳಿಗೂ ನಿಮಗೂ ಒಂದು ಮುಖ್ಯ ವ್ಯತ್ಯಾಸವೆಂದರೆ ನಿಮಗೆ ವಿವೇಚನಾ ಶಕ್ತಿ ಇರುವುದು! ಸರಿ ಯಾವುದು, ತಪ್ಪು ಯಾವುದು, ಏನು ಮಾಡಬೇಕು, ಏನು ಮಾಡಬಾರದು ಎಂಬ ತಿಳುವಳಿಕೆ ನಿಮಗೆ ಇದೆ. ಇದನ್ನು ನೀವು ಸರಿಯಾಗಿ ಬಳಸಿಕೊಂಡರೆ ನೀವು ಉನ್ನತ ಸ್ಥಾನಕ್ಕೇರುವಿರಿ. ಇಲ್ಲದಿದ್ದರೆ ಕೆಳಗೆ ಬೀಳುವಿರಿ. ಇಷ್ಟಕ್ಕೂ ನಿಮಗೆ ಈ ವಿವೇಚನಾ ಶಕ್ತಿ ಬಂದಿರುವುದೇ ನನ್ನಿಂದ. ಹೃದಯಕ್ಕೂ, ಮೆದುಳಿಗೂ ಆಪ್ತವಾದ ಜ್ಞಾನ ಪಡೆಯುವವರು ಜ್ಞಾನಿಗಳೆನಿಸಿಕೊಳ್ಳುತ್ತಾರೆ. ನಾನು ಇಲ್ಲದಿದ್ದಿದ್ದರೆ ನಿಮ್ಮನ್ನು ಯಾರು ಲೆಕ್ಕಕ್ಕೆ ಇಟ್ಟುಕೊಳ್ಳುತ್ತಿದ್ದರು?"
"ಹೌದು, ಹೌದು. ನಿನ್ನಿಂದಲೇ ಜಗತ್ತಿಗೆ ಬೆಳಕಾಗಿದೆ. ನೀನೇ ದೊಡ್ಡವನು" ಎಂದು ಎಲ್ಲರೂ ತಲೆದೂಗಿ ಜ್ಞಾನಕ್ಕೆ ನಮಸ್ಕರಿಸಿದರು.
ಹೆಜ್ಜೆ 2:
ಜ್ಞಾನ ನುಡಿದುದನ್ನು ಕೇಳುತ್ತಿದ್ದ ಮಾತು ನಗುತ್ತಾ ಹೇಳಿತು: "ಜ್ಞಾನ ಹೇಳಿದ್ದು ಸರಿ. ಆದರೆ ಈ ಜ್ಞಾನ ಅನ್ನುವುದು ಬಂದಿದ್ದಾದರೂ ಎಲ್ಲಿಂದ ಎಂಬುದು ನಿಮಗೆ ಗೊತ್ತಿದೆಯೇ? ನಾನು ಇರದಿದ್ದರೆ ಜ್ಞಾನ ಅನ್ನುವುದು ಎಲ್ಲಿರುತ್ತಿತ್ತು? ನಿಮ್ಮ ಒಳಗೆ ಜನಿಸುವ ಭಾವನೆಗಳ ಪ್ರಕಟರೂಪವೇ ನಾನಾಗಿರುವೆ. ಅತ್ಯಂತ ಪುರಾತನವಾದ ಜ್ಞಾನಭಂಡಾರವಾದ ವೇದಗಳು ಮೊದಲು ಒಡಮೂಡಿದ್ದು ಮಾತಿನ ಮೂಲಕವೇ. ವೇದವಿರಲಿ, ಭಗವದ್ಗೀತೆ, ಬೈಬಲ್, ಕುರಾನ್, ಮುಂತಾದುವೆಲ್ಲಾ ಮೊದಲು ಮೂಡಿದ್ದು ನನ್ನಿಂದಲೇ. ಅರ್ಥವಾಗಲಿಲ್ಲವೇ? ವಿವರಿಸುವೆ ಕೇಳಿ. ಭಗವದ್ಗೀತೆಯಲ್ಲಿರುವುದೇನು? ಕೃಷ್ಣ ಹೀಗೆ ಹೇಳಿದ, ಅರ್ಜುನ ಹೀಗೆ ಕೇಳಿದ, ಸಂಜಯ ಈ ರೀತಿ ಹೇಳಿದ, ಇತ್ಯಾದಿಗಳಲ್ಲವೇ? ಮೊದಲು ಕೃಷ್ಣ, ಅರ್ಜುನ ಮುಂತಾದವರು ಮಾತನಾಡಿದ್ದರಿಂದಲೇ ಅಲ್ಲವೇ ಗೀತೆ ಹೊರಬಂದಿದ್ದು? ಈ ಜಗತ್ತು ನಡೆದಿರುವುದು, ನಡೆಯುತ್ತಿರುವುದು ಮತ್ತು ನಡೆಯುವುದು ನನ್ನಿಂದಲೇ! ಹಾಳಾಗುವುದೂ ನನ್ನಿಂದಲೇ! ಗೊತ್ತಾಯಿತೇ, ಜ್ಞಾನಕ್ಕಿಂತ ದೊಡ್ಡವನು ನಾನೇ!"
"ಹೌದಲ್ಲವೇ? ಮಾತೇ ಜ್ಞಾನಕ್ಕಿಂತ ದೊಡ್ಡದು" ಎಂದು ಕೇಳಿದವರು ಮಾತನ್ನು ಸ್ತುತಿಸಿದರು.
ಮಾತಿನಲಿ ವಿಷಯ ಭಾಷೆಯಲಿ ಭಾವ
ಅನುಭವದಿ ಪಾಂಡಿತ್ಯ ಮೇಳವಿಸಿ |
ಕೇಳುಗರಹುದಹುದೆನುವ ಮಾತುಗಾರ
ಸರಸತಿಯ ವರಸುತನು ಮೂಢ ||
ಹೆಜ್ಜೆ 3:
"ಅಯ್ಯೋ ಹುಚ್ಚಪ್ಪಗಳಿರಾ, ಜ್ಞಾನ ಮತ್ತು ಮಾತಿನ ಮಾತುಗಳಿಗೆ ಮರುಳಾಗಿಬಿಟ್ಟಿರಾ?" -ಮನಸ್ಸು ನಗುತ್ತಾ ಪ್ರಶ್ನಿಸಿ ಮುಂದುವರೆಯಿತು: "ಈ ಜ್ಞಾನ ಮತ್ತು ಮಾತುಗಳ ಯಜಮಾನ ನಾನು ಎಂಬುದನ್ನು ಮರೆತುಬಿಟ್ಟಿರಾ? ನನ್ನೊಳಗೇ ಈ ಎರಡೂ ಇರುವುದು. ನೀವು ಏನೇ ಮಾಡಿರಿ, ಏನೇ ಮಾತನಾಡಿರಿ, ಹೀಗೆ ಮಾಡಬೇಕು, ಹೀಗೆ ಮಾತನಾಡಬೇಕು ಎಂದು ನಿರ್ಧರಿಸುವವನು ನಾನು! ಮನಸ್ಸು ಹೇಳಿದಂತೆ ನೀವು ಮಾಡುತ್ತೀರಿ, ಮಾತನಾಡುತ್ತೀರಿ. ನಾನು ಎಷ್ಟು ಪ್ರಭಾವಶಾಲಿ ಎಂದರೆ ನೀವು ನಿಮ್ಮನ್ನು ನಿಮ್ಮ ಮನಸ್ಸಿನೊಂದಿಗೇ ಗುರುತಿಸಿಕೊಳ್ಳುತ್ತೀರಿ. ನೀವು ಅಂದರೆ ನಿಮ್ಮ ಮನಸ್ಸೇ ಎಂದುಕೊಳ್ಳುತ್ತೀರಿ ಅಲ್ಲವೇ? ಪ್ರಪಂಚದಲ್ಲಿ ನೀವು ಏನು ಸಾಧಿಸುತ್ತೀರೋ ಅದಕ್ಕೆಲ್ಲಾ ನಾನೇ ಕಾರಣನಾಗಿದ್ದೇನೆ. ಜೀವನದಲ್ಲಿ ಗಳಿಸುವ ಅನುಭವಗಳೆಲ್ಲವೂ ಕ್ರಿಯೆಗಳ ಕಾರಣಗಳಿಂದಲೇ ಬಂದಿದೆ ಮತ್ತು ಆ ಕ್ರಿಯೆಗಳ ಹಿಂದೆ ಅವನ್ನು ಮಾಡಿಸಿದ ನಿಮ್ಮ ಮನಸ್ಸು ಕೆಲಸ ಮಾಡಿದೆ. ಎಲ್ಲಾ ಅನುಭವಗಳು ಮತ್ತು ಎಲ್ಲಾ ಕಾರ್ಯಗಳು ನಿಯಂತ್ರಿಸಲ್ಪಟ್ಟಿರುವುದು ನನ್ನಿಂದಲೇ! ಒಂದು ಅರ್ಥದಲ್ಲಿ ನಾನೇ ಪ್ರಪಂಚವಾಗಿರುವೆ. ಈಗ ಹೇಳಿ ಯಾರು ದೊಡ್ಡವರು?"
ಕೇಳುತ್ತಿದ್ದವರಿಗೆ ಮನಸ್ಸಿನ ಮಾತನ್ನು ಒಪ್ಪದೇ ಬೇರೆ ದಾರಿ ಎಲ್ಲಿರುತ್ತದೆ? "ಹೌದು, ಜ್ಞಾನ ಮತ್ತು ಮಾತುಗಳಿಗಿಂತ ಮನಸ್ಸೇ ದೊಡ್ಡದು" ಎಂದು ತಲೆಯಾಡಿಸಿದರು.
ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||
ಹೆಜ್ಜೆ 4:
ಗಹಗಹಿಸಿ ನಗುತ್ತಿದ್ದ ಶಬ್ದ ಬಂದ ಕಡೆಗೆ ತಿರುಗಿ ನೋಡಿದರೆ ಅಲ್ಲಿ ಇಚ್ಛಾಶಕ್ತಿ ಚಪ್ಪಾಳೆ ತಟ್ಟಿಕೊಂಡು ನಗುತ್ತಿದ್ದುದು ಕಾಣಿಸಿತು. ಅದು ಹೇಳಿತು: "ನೀವು ಮಾನವರು ದೊಡ್ಡವರು, ನಿಮಗೆ ವಿವೇಚನಾಶಕ್ತಿ ಇದೆ ಎಂದು ಜಂಬಪಟ್ಟುಕೊಳ್ಳುತ್ತೀರಿ. ಆದರೆ, ಯಾರು ಏನು ಹೇಳಿದರೂ ಅದಕ್ಕೆ ಕುರಿಗಳಂತೆ ತಲೆ ಆಡಿಸಿಬಿಡುತ್ತೀರಿ. ಇದೇನಾ ನಿಮ್ಮ ವಿವೇಚನಾಶಕ್ತಿ? ಬಲಶಾಲಿ ಮನಸ್ಸನ್ನೇ ನಿಯಂತ್ರಣ ಮಾಡುವವನು ನಾನು. ನಿಮಗೆ ನನ್ನ ನೆನಪಾಗಲಿಲ್ಲವೇ? ನಾನು ಇಲ್ಲದಿರುವ ಜಗತ್ತಿನ ಯಾವುದೇ ಸೃಷ್ಟಿ ಇಲ್ಲವೇ ಇಲ್ಲ. ಪಂಚಭೂತಗಳಿಗೂ ಸಹ ತಮ್ಮದೇ ಆದ ಇಚ್ಛಾಶಕ್ತಿ ಇದೆ. ನಾನು ಇರುವುದರಿಂದಲೇ ಎಲ್ಲವೂ ತಮ್ಮ ತಮ್ಮ ಗುಣ, ಸ್ವಭಾವ, ಅಸ್ತಿತ್ವಗಳನ್ನು ಉಳಿಸಿಕೊಂಡಿರುವುದು! ಇಲ್ಲದಿದ್ದರೆ ಒಂದು ಇನ್ನೊಂದರ ಗುಣಗಳನ್ನು ಅರಗಿಸಿಕೊಂಡು ಒಂದೇ ಆಗಿಬಿಡುತ್ತಿದ್ದವು. ನೀವು ಬದುಕಿರುವುದೂ, ನಿಮ್ಮಲ್ಲಿ ರಕ್ತಸಂಚಾರ ಸಾಗುವುದು, ಹೃದಯ ಬಡಿದುಕೊಳ್ಳುವುದು, ಉಸಿರಾಟ ನಡೆಯುವುದು, ಇತ್ಯಾದಿ ಎಲ್ಲವೂ ಒಂದು ನಿರ್ದಿಷ್ಟವಾದ ಇಚ್ಛಾಶಕ್ತಿಯಿಂದಲೇ ನಡೆಯುತ್ತಿಲ್ಲವೇ? ಇಷ್ಟೆಲ್ಲಾ ಶಕ್ತಿ ಇರುವ ನನಗೆ ನಿಮ್ಮ ಮನಸ್ಸನ್ನು ನಿಯಂತ್ರಿಸುವುದು ಕಷ್ಟವೇನಲ್ಲ. ಆದರೆ ಆ ಶಕ್ತಿಯನ್ನು ನೀವು ಉಪಯೋಗಿಸಿಕೊಳ್ಳದಿದ್ದರೆ ಅದು ನಿಮ್ಮ ಹುಚ್ಚುತನವೋ, ಪೆದ್ದುತನವೋ, ಮತ್ತೊಂದೋ ಮಾತ್ರ ಕಾರಣವಾಗಿದೆ. ನನ್ನನ್ನು ಸರಿಯಾಗಿ ಉಪಯೋಗಿಸಿಕೊಂಡರೆ ನೀವು ಅದ್ಭುತವನ್ನೇ ಸಾಧಿಸಬಲ್ಲಿರಿ. ಕೃತಕ ಕಾಲುಗಳಿಂದ ಹಿಮಾಲಯವನ್ನೇ ಏರಿದ ತರುಣಿ ಅರುಣಿಮಾ ಸಿನ್ಹಳಂತಹ ವಿಶೇಷ ಸಾಧಕರು ನನ್ನನ್ನು ಬಳಸಿಕೊಂಡದ್ದರಿಂದಲೇ ಅದು ಅವರಿಗೆ ಸಾಧ್ಯವಾಗಿದೆ.
ಮನಸ್ಸು ಚಂಚಲವಾಗಿದೆ. ನಿಮ್ಮನ್ನು ಪುಸಲಾಯಿಸಿ ಹಾಳು ಮಾಡುವುದು ಅದೇ. ಸಿಗರೇಟು ಸೇದುವುದು ಕೆಟ್ಟದ್ದು, ಕುಡಿಯುವುದು ಕೆಟ್ಟದ್ದು ಅಂತ ನಿಮಗೆ ಗೊತ್ತಿಲ್ಲವಾ? ಆದರೂ ಅದನ್ನು ಬಿಡಲೊಲ್ಲಿರೇಕೆ? 'ಇದೊಂದು ಸಲ', 'ಇದೊಂದು ಸಲ' ಅನ್ನುತ್ತಾ ಸದಾ ಕಾಲ ಆ ಚಟಗಳಿಗೇ ಅಂಟಿಕೊಳ್ಳುವಂತೆ ಮಾಡುವುದು ನಿಮ್ಮ ಮನಸ್ಸೇ ಅಲ್ಲವೇ? ನನ್ನನ್ನು ಒಮ್ಮೆ ಆಶ್ರಯಿಸಿ ನೋಡಿ, ಆಗ ನಿಮಗೆ ಗೊತ್ತಾಗುತ್ತದೆ ನನ್ನ ಕರಾಮತ್ತು! ಸಂಕಲ್ಪ ಮಾಡಿ, ಇಚ್ಛಾಶಕ್ತಿ ಧರಿಸಿ ಕೊಡವಿಕೊಂಡು ಮೇಲೆದ್ದರೆ ಮನಸ್ಸಿನ ಪ್ರಲೋಭನೆಗಳು ಹೇಳದೆ ಕೇಳದೇ ಓಡಿಬಿಡುತ್ತವೆ. ಆಗ ನಿಮಗೆ ನೀವೇ ಯಜಮಾನರಾಗುತ್ತೀರಿ. ಈಗ ಹೇಳಿ, ಯಾರು ದೊಡ್ಡವರು, ನಾನೋ ಆಥವ ಮನಸ್ಸೋ?"
ಇಚ್ಛಾಶಕ್ತಿಯ ಮಾತನ್ನು ಯಾರೂ ಅಲ್ಲಗಳೆಯಲು ಸಾಧ್ಯವಿರಲಿಲ್ಲ. ಎಲ್ಲರೂ ಮುಖ ಮುಖ ನೋಡಿಕೊಂಡು 'ಹೌದು, ಹೌದು' ಎಂದು ತಲೆದೂಗಿದರು.
ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು ಹಿಂದಕ್ಕೆ ಇಡದೆ |
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸುವುದು ಮೂಢ ||
ಹೆಜ್ಜೆ 5:
ಇಚ್ಛಾಶಕ್ತಿಯನ್ನು ಪಕ್ಕಕ್ಕೆ ದೂಡಿ ಮುಂದೆ ನಿಂತ ಸ್ಮರಣಶಕ್ತಿ (ಚಿತ್ತ) ಕೇಳುಗರನ್ನು ಕುರಿತು ವಿಚಾರಿಸಿಕೊಳ್ಳಲಾರಂಭಿಸಿತು: "ಆಯಿತಾ? ಇನ್ನು ನನ್ನ ಮಾತು ಕೇಳಿ. ನಾನು ಇಲ್ಲದಿದ್ದರೆ ನಿಮ್ಮ ಇಚ್ಛಾಶಕ್ತಿ ಮೂರು ಕಾಸಿಗೂ ಬೆಲೆ ಬಾಳುವುದಿಲ್ಲ. ನೆನಪಿನ ಶಕ್ತಿಯೇ ಇಲ್ಲದಿದ್ದರೆ ಎಷ್ಟು ಪಾಂಡಿತ್ಯ ಇದ್ದರೆ ಏನು ಪ್ರಯೋಜನ? ಘಳಿಗೆಗೊಂದು ಮಾತನಾಡಿ, 'ಕ್ಷಣ ಚಿತ್ತ, ಕ್ಷಣ ಪಿತ್ತ' ಎಂದು ಉಗಿಸಿಕೊಳ್ಳುತ್ತೀರಿ. ನೆನಪಿಟ್ಟುಕೊಳ್ಳುವ ಮತ್ತು ಅದನ್ನು ಉಳಿಸಿಕೊಳ್ಳುವ ಶಕ್ತಿ ಇದ್ದರೆ ಮಾತ್ರ ಇಚ್ಛಾಶಕ್ತಿ ಕೆಲಸ ಮಾಡಬಲ್ಲದು, ಮನಸ್ಸು ಕೇಳಬಲ್ಲುದು, ಸರಿಯಾದ ಮಾತು ಹೊರಬರುವುದು ಮತ್ತು ಜ್ಞಾನಕ್ಕೆ ಅರ್ಥ ಬರುವುದು! ಒಂದು ಘಳಿಗೆಯ ಹಿಂದೆ ಏನಾಯಿತು ಎಂಬುದೇ ನೆನಪಿನಲ್ಲಿ ಇಟ್ಟುಕೊಳ್ಳಲಾಗದವನು, ಇಚ್ಛಾಶಕ್ತಿಯನ್ನು ಬಳಸಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಿಲ್ಲ. ಏಕೆಂದರೆ ಹಿಂದಿನ ಸಂಗತಿಗಳು, ಅನುಭವಗಳು, ನಿಶ್ಚಯಗಳು, ಇತ್ಯಾದಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮನಸ್ಸಿನಲ್ಲಿ ಸಂಕಲ್ಪ ಮೂಡಲು ಅತ್ಯಗತ್ಯವಾಗಿದೆ. ಸೋಲಿನ, ಅವಮಾನದ, ದೈಹಿಕ, ಮಾನಸಿಕ ಪೆಟ್ಟುಗಳ ನೆನಪು ಇದ್ದರೆ ಅವು ನಿಮ್ಮನ್ನು ಮುಂದೆ ಅಂತಹ ಪ್ರಸಂಗ ಬರದಂತೆ ಎಚ್ಚರಿಸುತ್ತವೆ ಮತ್ತು ಛಲದಿಂದ ಮುಂದೆಬರಲು, ಗೆಲ್ಲಲು, ಸಾಧಿಸಲು ಸಹಾಯಕವಾಗುತ್ತವೆ. ಇದಕ್ಕೆ ಎಷ್ಟು ಉದಾಹರಣೆಗಳು ಬೇಕು? ಇರಲಿ ಬಿಡಿ. ನನ್ನ ನೆನಪು ನಿಮಗಿದ್ದರೆ ನನ್ನ ಶಕ್ತಿಯನ್ನು ನೀವೇ ಅರ್ಥ ಮಾಡಿಕೊಳ್ಳುವಿರಿ".
"ಹೌದು, ನಾವು ಮರೆತೇಬಿಟ್ಟಿದ್ದೆವು. ತಪ್ಪಾಯಿತು ಕ್ಷಮಿಸು. ನೆನಪಿನ ಶಕ್ತಿಯಾದ ಚಿತ್ತವೇ ದೊಡ್ಡದು" ಎಂದು ಎಲ್ಲರೂ ಆ ಶಕ್ತಿಗೆ ನಮಸ್ಕರಿಸಿದರು.
ಹೆಜ್ಜೆ 6:
"ನಿಮಗೆ ಒಳ್ಳೆಯ ಜ್ಞಾನವಿರಬಹುದು, ವಾಕ್ಕೊಡೆಯರಾಗಿರಬಹುದು, ಒಳ್ಳೆಯ ಮನಸ್ಸಿರಬಹುದು, ಅಂದುಕೊಂಡಂತೆ ಮಾಡುವ ಇಚ್ಛಾಶಕ್ತಿಯಿರಬಹುದು. ನೀವು ತಿಳಿದಂತೆ ಇಚ್ಛಾಶಕ್ತಿಯೇ ಉಳಿದವುಗಳಿಗಿಂತ ದೊಡ್ಡದಿರಬಹುದು. ಇಚ್ಛಾಶಕ್ತಿಗೂ ಮಿಗಿಲಾದುದು ನೆನಪಿನ ಶಕ್ತಿ ಎಂಬುದನ್ನೂ ಒಪ್ಪುವೆ. ಇವುಗಳಿಗಿಂತ ಮಿಗಿಲಾದವನು ನಾನು ಎಂದು ನಾನು ಜಂಬ ಕೊಚ್ಚಿಕೊಳ್ಳುವುದಿಲ್ಲ. ನನ್ನ ಮಾತು ಕೇಳಿ ನೀವೇ ನಿರ್ಧರಿಸಿ"- ಶಾಂತ ಮತ್ತು ಧೃಢವಾದ ಕಂಚಿನ ಕಂಠದೊಂದಿಗೆ ಹೊರಬಂದ ಮನೋಕೇಂದ್ರೀಕರಣ(ಧ್ಯಾನ)ದ ಈ ಮಾತು ಎಲ್ಲರನ್ನೂ ಅದರತ್ತ ಗಮನಿಸುವಂತೆ ಮಾಡಿತು.. ಅದು ಮುಂದುವರೆಸಿತು: "ಧೀ ಯಾನವೇ ಧ್ಯಾನ. ಅದೊಂದು ಉತ್ತಮವಾದ ಗುಣ. ನೀವು ನಿಮ್ಮ ಎಷ್ಟರಮಟ್ಟಿಗೆ ಕೇಂದ್ರೀಕರಿಸಲು ಸಾಧ್ಯವೋ, ಅರ್ಥಾತ್ ಧ್ಯಾನಿಸುತ್ತೀರೊ, ಅಷ್ಟರ ಮಟ್ಟಿಗೆ ಇತರರಿಗಿಂತ ಮೇಲಿರುತ್ತೀರಿ. ಕೇಂದ್ರೀಕರಿಸುವುದೆಂದರೆ ಮನಸ್ಸಿನ ಸ್ಥಿರತೆ ಹೊಂದುವುದು. ಎಲ್ಲೆಲ್ಲಿ ಯಾವುದೇ ರೀತಿಯ ಧೃಡತೆಯನ್ನು, ಯಾವುದೇ ರೀತಿಯ ಸ್ಥಿರತೆ ಕಾಣುವುದೋ ಅಲ್ಲಿ ಕೇಂದ್ರೀಕರಣ ಇರುತ್ತದೆ. ಮನಸ್ಸನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತೊಡಗಿಸುವುದು ಮತ್ತು ಆ ದಿಕ್ಕಿನಲ್ಲೇ ಸತತ ಪ್ರಯತ್ನದಿಂದ ಮನಸ್ಸನ್ನು ಆ ನಿರ್ದಿಷ್ಟ ವಿಚಾರದಿಂದ ಹೊರಳದಿರುವಂತೆ ನೋಡಿಕೊಳ್ಳುವುದೇ ಕೇಂದ್ರೀಕರಣ. ಒಂದು ನಿರ್ದಿಷ್ಟ ಸಂಗತಿಯೊಂದಿಗೆ ಕುರಿತು ಆತ್ಮಪೂರ್ವಕವಾಗಿ, ಬೇರೆ ಯೋಚನೆಗಳು ಬರದಂತೆ ನೋಡಿಕೊಂಡು, ಒಂದಾಗುವುದೇ ಕೇಂದ್ರೀಕರಣ. ಇದೇ ಧ್ಯಾನ! ಯಾರಾದರೂ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಾಧನೆಯನ್ನು ಮಾಡಿದ್ದರೆ, ಅದು ಕೇಂದ್ರೀಕರಿಸುವ ಶಕ್ತಿಯ ಕಾರಣದಿಂದ ಆದದ್ದಾಗಿದೆ. ಅದು ದೇವರೇ ಆಗಿರಬಹುದು, ಮನುಷ್ಯನೇ ಆಗಿರಬಹುದು, ಮನಸ್ಸು ಕೇಂದ್ರೀಕರಿಸಿ ಮಾಡಿದ ಕಾರಣದಿಂದಲೇ ಯಶಸ್ಸು ಲಭಿಸಿರುವುದಾಗಿದೆ. ಯೋಚನೆಯನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತೊಡಗಿಸುವುದೇ ಯಶಸ್ಸಿನ ಕಾರಣವಾಗಿದೆ. ನೀವು ಈ ರೀತಿ ಮಾಡಿದ್ದೇ ಆದಲ್ಲಿ, ಜ್ಞಾನ, ವಾಕ್ಕು, ಮನಸ್ಸು, ಇಚ್ಛಾಶಕ್ತಿ, ನೆನಪಿನ ಶಕ್ತಿಗಳು ನಿಮ್ಮ ವಶವಾಗುವುದರಲ್ಲಿ ಅನುಮಾನವೇ ಇಲ್ಲ. ಯೋಚಿಸಿ, ಧ್ಯಾನಿಸಿ, ನಿರ್ಧರಿಸಿ."
ಜಗದೊಡೆಯ ಪರಮಾತ್ಮನಲಿ ಭಕ್ತಿ
ಏಕಾಂತದಲಿ ಧ್ಯಾನ ಆತ್ಮಾನುಸಂಧಾನ |
ಗುರುವಿನಲಿ ಶ್ರದ್ಧೆ ಸುಜನ ಸಹವಾಸ
ಸಾಧಕರ ದಾರಿಯಿದು ನೋಡು ಮೂಢ ||
ಕೇಳಿದವರೆಲ್ಲರೂ ತಮ್ಮ ತಲೆಗಳಿಗೆ ಕೆಲಸ ಕೊಟ್ಟರು. "ನಿಜ, ನಿಜ. ಮನೋಕೇಂದ್ರೀಕರಣದಿಂದ ನಮಗೆ ಯಶಸ್ಸು ಸಿಗುತ್ತದೆ" ಎನ್ನದಿರಲು ಅವರಿಗೆ ಸಾಧ್ಯವಾಗಲಿಲ್ಲ. ನಡೆಯಬೇಕಾದ ಇನ್ನೂ ಎಷ್ಟು ಹೆಜ್ಜೆಗಳಿವೆಯೋ ಎಂದು ಅವರ ಒಳಮನಸ್ಸುಗಳು ವಿಚಾರ ಮಾಡಲು ಪ್ರಾರಂಭಿಸಿದುದು ಒಳ್ಳೆಯ ಬೆಳವಣಿಗೆ ಎನ್ನಬಹುದಲ್ಲವೇ?
-ಕ.ವೆಂ.ನಾಗರಾಜ್.
**************
ದಿನಾಂಕ 25.05.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: