ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಅಕ್ಟೋಬರ್ 6, 2015

ನಿಂದಕರಿಗೆ ನಮಸ್ಕಾರ!


     ದೂರುವವರು, ದೂಷಿಸುವವರು ಇರುವ ಕಾರಣದಿಂದಲೇ ಜನರು ತಮ್ಮ ನಡವಳಿಕೆಯ ಬಗ್ಗೆ ಎಚ್ಚರದಿಂದಿರುತ್ತಾರೆ. ಪಕ್ಷಿಗಳಿಗೆ ಅಪಾಯವಿರದಿರುತ್ತಿದ್ದರೆ ಅವು ನಿರಾತಂಕವಾಗಿ ಓಡಾಡಿಕೊಂಡಿದ್ದು ಹಾರುವುದನ್ನೇ ಮರೆತುಬಿಡುತ್ತಿದ್ದವಲ್ಲವೇ? ಅದೇ ರೀತಿ ನಿಂದಕರಿಂದಾಗಿ ಜನರು ತಪ್ಪು ಮಾಡಬಯಸುವುದಿಲ್ಲ. ದೂರುವುದು, ದೂಷಿಸುವುದು ಒಂದು ಹಂತದವರೆಗೆ ಒಳ್ಳೆಯದು. ತಪ್ಪನ್ನು ಸರಿಯಾಗಿಸುವ ದೃಷ್ಟಿಯಿಂದ ಮಾಡುವ ನಿಂದನೆಗಳು ಒಳ್ಳೆಯದು. ಆದರೆ ನಿಂದನೆ, ದೂಷಣೆಗಳನ್ನೇ ಹವ್ಯಾಸವಾಗಿರಿಸಿಕೊಂಡ, ದೂಷಣೆಯಲ್ಲೇ ಮತ್ತು ಅದರಿಂದ ಇತರರಿಗೆ ಆಗುವ ಹಿಂಸೆಯಿಂದಲೇ ಸಂತೋಷ ಪಡುವ ಮನೋಭಾವ ಹೊಂದಿದ ಕೆಲವು ವಿಕ್ಷಿಪ್ತ ಮನಸ್ಕರಿಂದ ಸಮಸ್ಯೆಗೆ ಪರಿಹಾರ ಸಿಗುವುದಿರಲಿ, ಸಮಸ್ಯೆ ಇನ್ನೂ ಜಟಿಲವಾಗುತ್ತದೆ. ತಪ್ಪು ಕಂಡು ಹಿಡಿಯುವುದು ಸುಲಭ; ದೂರುವುದೂ ಸುಲಭ; ಆದರೆ ಅದಕ್ಕೆ ಪರಿಹಾರದ ದಾರಿಯನ್ನು ಸೂಚಿಸುವುದು ಮತ್ತು ಅದರಂತೆ ನಡೆಯುವುದು ಉತ್ತಮವಾದ ನಡವಳಿಕೆಯೆನಿಸುತ್ತದೆ. ಮನಸ್ಸು ಶಾಂತ ಸ್ಥಿತಿಯಲ್ಲಿ ಇರಬೇಕೆಂದರೆ ಮೊದಲು ಇತರರಲ್ಲಿ ತಪ್ಪು ಕಂಡು ಹಿಡಿಯಲು ಹೋಗದೆ, ತಮ್ಮ ತಪ್ಪುಗಳನ್ನು ಗುರುತಿಸಿಕೊಂಡು ತಿದ್ದಿ ನಡೆಯುವುದನ್ನು ಅಭ್ಯಸಿಸಬೇಕು. ಇತರರ ತಪ್ಪುಗಳ ಬಗ್ಗೆಯೇ ಚಿಂತಿಸುವುದು ಮತ್ತು ಎತ್ತಿ ಆಡುವುದರಿಂದ ನೆಮ್ಮದಿ ಹಾಳಾಗುತ್ತದೆ. ನೆಮ್ಮದಿ ಹಾಳಾಗುವುದೆಂದರೆ ನಾಶದ ಹಾದಿ ಹಿಡಿದಂತೆಯೇ ಸರಿ.
     ಅಷ್ಟಕ್ಕೂ ಒಬ್ಬರನ್ನೊಬ್ಬರು ದೂರುವುದಾದರೂ ಏಕೆ? ಈ ಪ್ರಪಂಚದಲ್ಲಿ ಒಬ್ಬರು ಇದ್ದಂತೆ ಇನ್ನೊಬ್ಬರು ಇರುವುದಿಲ್ಲ. ಒಬ್ಬೊಬ್ಬರ ಸ್ವಭಾವ ಒಂದೊಂದು ತರಹ. ಎಲ್ಲರೂ ತಮ್ಮಂತೆಯೇ ಇರಬೇಕು, ತಮ್ಮಂತೆಯೇ ವಿಚಾರ ಹೊಂದಿರಬೇಕು, ತಮ್ಮ ವಿಚಾರವನ್ನು ಎಲ್ಲರೂ ಒಪ್ಪಬೇಕು ಎಂಬ ಅಂತರ್ಗತ ಅನಿಸಿಕೆಯೇ ದೂರುವುದಕ್ಕೆ ಮೂಲ. ಒಂದೇ ಕುಟುಂಬದ ಸದಸ್ಯರುಗಳೂ, ಒಂದೇ ಸಂಘ-ಸಂಸ್ಥೆಯ ಸದಸ್ಯರುಗಳೂ, ಆತ್ಮೀಯರೆಂದು ಭಾವಿಸುವ ಸ್ನೇಹಿತರ ವಲಯದಲ್ಲೂ ಪರಸ್ಪರ ಹೊಂದಾಣಿಕೆ ಆಗದ ಅನೇಕ ಸಂಗತಿಗಳು ಇರುತ್ತವೆ. ಆದರೂ ಇವರುಗಳು ಹೊಂದಿಕೊಂಡು ಹೋಗುವುದಕ್ಕೆ ಹೆಚ್ಚಿನ ಸಂಗತಿಗಳು ಪರಸ್ಪರರಿಗೆ ಒಪ್ಪಿಗೆಯಾಗುವುದೇ ಕಾರಣ. ನಾವು ಇತರರೊಂದಿಗೆ ಹೊಂದಿಕೊಂಡುಹೋಗುತ್ತೇವೆಂದರೆ ಅವರ ನ್ಯೂನತೆಗಳನ್ನು ನಾವು ಸಹಿಸಿಕೊಳ್ಳುತ್ತೇವೆ ಎಂದು ಅರ್ಥ. ಹಾಗೆಯೇ, ಇತರರು ನಮ್ಮೊಂದಿಗೆ ವಿಶ್ವಾಸವಾಗಿರುತ್ತಾರೆಂದರೆ ಅವರು ನಮ್ಮ ತಪ್ಪುಗಳನ್ನು ಸಹಿಸಿಕೊಳ್ಳುತ್ತಾರೆ ಎಂದು ಅರ್ಥ.
     ಕೆಲವರು ಕೆಲವೊಂದು ವಿಷಯಗಳಿಗೆ ಸಂಬಂಧಿಸಿದಂತೆ ಬದಲಾಗದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಅಂತಹವರು ಮುಂದೊಮ್ಮೆ ತಮ್ಮ ಅಭಿಪ್ರಾಯ ತಪ್ಪೆಂದು ಕಂಡಾಗಲೂ ತಿದ್ದಿಕೊಳ್ಳಲು ಮನಸ್ಸು ಮಾಡುವುದಿಲ್ಲ. ತಾವು ತಿಳಿದಿರುವುದೇ ಸತ್ಯ, ಇತರರು ಹೇಳುವುದೆಲ್ಲಾ ಸುಳ್ಳು, ತಪ್ಪು ಎಂದೇ ವಾದಿಸುತ್ತಾರೆ. ಉದ್ವೇಗದಿಂದ ಅನುಚಿತ ಪದಗಳನ್ನೂ ಬಳಸುತ್ತಾರೆ. ಇದು ಹಲವರ ಮನಸ್ಸನ್ನು ನೋಯಿಸುತ್ತದೆ. ಇದಕ್ಕೆ ಮದ್ದಿಲ್ಲ. 'ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲಾ ಹಳದಿ' ಎನ್ನುವಂತೆ ಅವರ ವರ್ತನೆ ಇರುತ್ತದೆ. ಪ್ರಪಂಚವನ್ನು ಅದು ಇದ್ದಂತೆಯೇ ನೋಡುವ, ಒಪ್ಪುವ ಮನಸ್ಸು ಇರಬೇಕು. ಮುಕ್ತ ಮನಸ್ಸಿನಿಂದ ಅಭಿಪ್ರಾಯಿಸಬೇಕು. ತಿದ್ದುವ, ತಿದ್ದಿಕೊಳ್ಳುವ  ಕೆಲಸವನ್ನು ಮೊದಲು ನಮ್ಮಿಂದಲೇ ಆರಂಭಿಸಬೇಕು. ಯಾರನ್ನಾದರೂ ದೂಷಿಸಿ, ಹಂಗಿಸಿ ಬದಲಾಯಿಸುತ್ತೇವೆ ಎನ್ನುವುದು ಅಸಾಧ್ಯದ ಮಾತು. ಪ್ರೀತಿಸುವವರ ಮಾತನ್ನು ಎಲ್ಲರೂ ಗೌರವಿಸುತ್ತಾರೆ, ದ್ವೇಷಿಸುವವರ ಮಾತನ್ನು ಯಾರೂ ಕೇಳಲಾರರು. ಬದಲಾವಣೆ ಹೃದಯದಿಂದ ಬರಬೇಕು, ಶುದ್ಧ ಮನಸ್ಸಿನಿಂದ ಬರಬೇಕು. ಶುದ್ಧ ಹೃದಯ, ಮನಸ್ಸುಗಳು ಇರುವವರಿಗೆ ಇತರರು ಅಶುದ್ಧರು ಎಂದು ಅನ್ನಿಸುವುದೇ ಇಲ್ಲ. ನಮ್ಮಲ್ಲೇ ಇಲ್ಲದುದನ್ನು ಇತರರಿಂದ ನಿರೀಕ್ಷಿಸಲಾಗುವುದೇ?
     ಇನ್ನು ಕೆಲವರು ಇರುತ್ತಾರೆ. ಅವರು ಪ್ರತಿ ವಿಷಯದಲ್ಲೂ ಮೂಗು ತೂರಿಸುವವರು, ಪ್ರತಿ ವಿಷಯದಲ್ಲೂ ಒಂದಲ್ಲಾ ಒಂದು ತಪ್ಪು ಕಂಡು ಹಿಡಿಯುವ ಮನೋಭಾವದವರು. ಸಾಮಾನ್ಯವಾಗಿ ತಾವೊಬ್ಬ ಪಂಡಿತ, ಹಿರಿಯ, ಹೆಚ್ಚು ತಿಳಿದವನು ಎಂದುಕೊಂಡಿರುವವರಲ್ಲಿ ಈ ಸ್ವಭಾವ ಕಾಣಬರುತ್ತದೆ. ತಮ್ಮ ಪಾಂಡಿತ್ಯದ ಕುರಿತು ಇತರರ ಗಮನ ಸೆಳೆಯುವುದು ಅವರ ಉದ್ದೇಶವಿರಬಹುದು. ದೂಷಿಸುವವರು ಒಂದು ರೀತಿಯಲ್ಲಿ ಒಳ್ಳೆಯದನ್ನೇ ಮಾಡುತ್ತಾರೆ.  ಸದುದ್ದೇಶದಿಂದ, ತಪ್ಪನ್ನು ಸರಿ ಮಾಡುವ ಕಾರಣದಿಂದ ಮಾಡುವ ದೂರು ಒಳಿತು ಮಾಡುತ್ತದೆ, ತಿದ್ದಿಕೊಂಡು ನಡೆಯಲು ಸಹಕಾರಿಯಾಗುತ್ತದೆ. ಮುಂದೆ ಎಚ್ಚರಿಕೆಯಿಂದ ನಡೆಯಬೇಕೆಂಬುದನ್ನು ಕಲಿಸುತ್ತದೆ. ಪೂರ್ವಾಗ್ರಹದ ಮತ್ತು ದುರುದ್ದೇಶದ ದೂರುಗಳೂ ಸಹ ನಮ್ಮ ಅನುಭವದ ಖಜಾನೆ ತುಂಬಲು ಸಹಕಾರಿಯಾಗುತ್ತವೆ. ಬೆಳೆಯುವ ಲಕ್ಷಣವೆಂದರೆ, ಇತರರ ತಪ್ಪುಗಳನ್ನು ಗಮನಿಸಿ ದೂರುವ ಪ್ರವೃತ್ತಿ ಬಿಟ್ಟು, ನಮ್ಮ ಸ್ವಂತದ ತಪ್ಪುಗಳನ್ನು ಗುರುತಿಸಿ ತಿದ್ದಿಕೊಂಡು ನಡೆಯಲು ಪ್ರಯತ್ನಿಸುವುದು. ನಾವು ನಮ್ಮ ಹಿರಿಯರನ್ನು, ಸೋದರ-ಸೋದರಿಯರನ್ನು, ಸಮಾಜವನ್ನು ದೂರುತ್ತೇವೆ, ನಮ್ಮನ್ನು ಮಾತ್ರ ದೂರಿಕೊಳ್ಳುವುದಿಲ್ಲ. ಬದಲಾಗಬೇಕಾದುದು ಅವರುಗಳಲ್ಲ, ನಾವೇ ಎಂಬ ಅರಿವು ಮೂಡಿದರೆ ನಾವು ಇತರರನ್ನು ದೂರುವುದಿಲ್ಲ. ನಮ್ಮ ಅತ್ಯಂತ ಘೋರವಾದ ತಪ್ಪುಗಳನ್ನೂ ನಾವು ಕ್ಷಮಿಸಿಕೊಂಡುಬಿಡುತ್ತೇವೆ. ಹಾಗಿರುವಾಗ, ಇತರರ ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸುವಷ್ಟಾದರೂ ನಾವು ದೊಡ್ಡವರಾಗಬಾರದೆ?  ದೂರುಗಳಿಂದ ಪಾಠ ಕಲಿಯೋಣ, ಪೂರ್ವಾಗ್ರಹದ ದೂರುಗಳನ್ನು ನಿರ್ಲಕ್ಷಿಸೋಣ, ಇತರರನ್ನು ದೂರದಿರೋಣ.
ನಿಂದಕರ ವಂದಿಸುವೆ ನಡೆಯ ತೋರಿಹರು
ಮನೆಮುರುಕರಿಂ ಮನವು ಮಟ್ಟವಾಗಿಹುದು |
ಕುಹಕಿಗಳ ಹರಸುವೆ ಮತ್ತೆ ಪೀಡಕರ
ಜರೆವವರು ಗುರುವಾಗರೇ ಮೂಢ ||
-ಕ.ವೆಂ.ನಾಗರಾಜ್.
***************
ದಿನಾಂಕ 21-09-2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

2 ಕಾಮೆಂಟ್‌ಗಳು:

  1. Dear Raju - Excellent article and 100% agree. I still remember when I was young, say 10 years when my father had told - still etched in my head that - when you point a finger on others, note that the thumb is pointing towards you. This means that you think twice of thrice about what we are missing before we point on others.

    Again, great post!

    Anantha

    ಪ್ರತ್ಯುತ್ತರಅಳಿಸಿ