ಜನರು ಯಾವುದನ್ನು ಯಜ್ಞವೆನ್ನುತ್ತಾರೋ ಅದು ನಿಜವಾಗಿಯೂ ಬ್ರಹ್ಮಚರ್ಯವೇ ಆಗಿದೆ. ಯಜ್ಞವೆಂದರೆ ಕೇವಲ ಅಗ್ನಿಯನ್ನು ಉರಿಸುತ್ತಾ ಹೋಮ, ಹವನಗಳನ್ನು ಮಾತ್ರ ಮಾಡುವುದೆಂದು ಅರ್ಥವಲ್ಲ. ಎಲ್ಲಾ ಶ್ರೇಷ್ಠತಮ ಕರ್ಮಗಳೂ ಯಜ್ಞವೆಂದು ಶತಪತ ಬ್ರಾಹ್ಮಣದಲ್ಲಿ ಹೇಳಿದೆ. ಶ್ರೇಷ್ಠತಮ ಕರ್ಮಗಳು ಬ್ರಹ್ಮನನ್ನು ಅರಿಯಲು ಸಾಧನಗಳಾಗಿವೆ. ಯಾವುದನ್ನು ಉಪಾಸನೆ ಎನ್ನುತ್ತೇವೋ ಅದೂ ಬ್ರಹ್ಮಚರ್ಯವೇ ಆಗಿದೆ. ಏಕೆಂದರೆ ಉಪಾಸನೆಯಿಂದ ಪರಮಾತ್ಮನ ಅನುಭವವಾಗಲು ಸಾಧ್ಯವಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಸದ್ವಿಚಾರಗಳು, ಸತ್ಕರ್ಮಗಳು ಬ್ರಹ್ಮಚರ್ಯವೆನಿಸುತ್ತವೆ. ಸದ್ವಿಚಾರಗಳು, ಸತ್ಕರ್ಮಗಳು ಮಾತ್ರವೇ ಬ್ರಹ್ಮನನ್ನು, ಅಂದರೆ ಪರಮಾತ್ಮನನ್ನು, ಅರಿಯಲು ಮೆಟ್ಟಲುಗಳಾಗಿವೆ. ಜೈನ ಧರ್ಮ ಮತ್ತು ಬೌದ್ಧ ಧರ್ಮಗಳೂ ಸಹ ಬ್ರಹ್ಮಚರ್ಯಕ್ಕೆ ಮಹತ್ವ ನೀಡಿವೆ. ಮಹಾವೀರ ಮತ್ತು ಬುದ್ದರೂ ಬ್ರಹ್ಮಚರ್ಯ ಪಾಲನೆ ಮೋಕ್ಷಕ್ಕೆ ದಾರಿ ಎಂದಿದ್ದಾರೆ. ಬ್ರಹ್ಮಚರ್ಯ ಪಾಲನೆಯಿಂದ ವೀರ್ಯವೃದ್ಧಿಯಾಗುತ್ತದೆ, ದೈಹಿಕ, ಮಾನಸಿಕ ಶಕ್ತಿಗಳು ಪ್ರಬಲಗೊಳ್ಳುತ್ತವೆ, ಸದ್ವಿಚಾರಗಳಲ್ಲಿ ಆಸಕ್ತಿ ಮೂಡುತ್ತದೆ ಎಂದು ಪತಂಜಲಿ ಮಹರ್ಷಿಯವರ ಯೋಗಸೂತ್ರಗಳಲ್ಲಿ ಉಲ್ಲೇಖವಿದೆ.
ಬಾಲಕಿಯರೂ ಉಪನಯನ ಸಂಸ್ಕಾರ ಪಡೆಯಲು ಮತ್ತು ಬ್ರಹ್ಮಚರ್ಯ ಪಾಲಿಸಲು ಅಡ್ಡಿಯಿಲ್ಲವೆಂದು ಹಿಂದೆಯೇ ಹೇಳಿದೆ. ಕನ್ಯೆಯರ ದೇಹ ಪ್ರಕೃತಿನಿಯಮಾನುಸಾರ ಪುರುಷರಿಗಿಂತ ಬೇಗ ಯೌವನಕ್ಕೆ ಪ್ರವೇಶಿಸುವುದರಿಂದ ಅವರ ಬ್ರಹ್ಮಚರ್ಯದ ಅವಧಿ 16 ವರ್ಷಗಳಾಗಿರುತ್ತದೆ.(ಪಂ. ಸುಧಾಕರ ಚತುರ್ವೇದಿಯವರ ವೇದೋಕ್ತ ಜೀವನ ಪಥ - ಪು.60) ಬಾಲಕರೇ ಆಗಲಿ, ಬಾಲಕಿಯರೇ ಆಗಲಿ, ಬ್ರಹ್ಮಚರ್ಯದ ಅವಧಿ ಮುಗಿದ ನಂತರದಲ್ಲಿ ವೈವಾಹಿಕ ಜೀವನದಲ್ಲಿ ಮುಂದುವರೆಯಲೇಬೇಕೆಂದು ಕಡ್ಡಾಯವೇನಿಲ್ಲ. ತಮ್ಮದೇ ಆದ ಯಾವುದೇ ಘನ ಉದ್ದೇಶ, ಗುರಿ ಹೊಂದಿದ್ದಲ್ಲಿ ಅದನ್ನು ಸಾಧಿಸುವ ಸಲುವಾಗಿ ತಮಗೆ ಸರಿಯೆನ್ನಿಸುವ ಅವಧಿಯವರೆಗೆ ಅಥವ ಜೀವನಪರ್ಯಂತ ಬ್ರಹ್ಮಚಾರಿಗಳಾಗಿ ಮುಂದುವರೆಯಬಹುದು. ಇಂತಹ ಸಹಸ್ರಾರು ಸಾಧಕರುಗಳು ನಮ್ಮ ಕಣ್ಣಮುಂದೆಯೇ ಕಾಣಸಿಗುತ್ತಾರೆ. ಅನೇಕ ಸಾಧು-ಸಂತರುಗಳು, ವಿವಿಧ ಧಾರ್ಮಿಕ ನೇತಾರರುಗಳು, ಜೈನಮುನಿಗಳು, ಬೌದ್ಧಭಿಕ್ಷುಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅನೇಕ ಪ್ರಚಾರಕರುಗಳು ಆಜೀವನ ಪರ್ಯಂತ ಬ್ರಹ್ಮಚಾರಿಗಳಾಗಿಯೇ ಸಾಧನೆ ಮುಂದುವರೆಸಿರುವುದು ನಮ್ಮ ಕಣ್ಣಮುಂದಿದೆ. ಇದಕ್ಕೆ ಬೇಕಾಗಿರುವುದು ಮನೋನಿಗ್ರಹ ಶಕ್ತಿ, ಗುರಿ ಸಾಧಿಸುವ ಛಲ, ಉನ್ನತ ಧ್ಯೇಯಕ್ಕಾಗಿ ಜೀವನ ಮುಡುಪಿಡುವ ಅರ್ಪಣಾ ಮನೋಭಾವಗಳು. ಇದು ಎಲ್ಲರಿಗೂ ಸಾಧ್ಯವಾಗುವಂತಹುದಲ್ಲ. ಇದಕ್ಕೆ ಉದಾಹರಣೆಯಾಗಿ ಮನೋನಿಗ್ರಹ ಮಾಡಿಕೊಳ್ಳಲಾಗದೆ ನಗೆಪಾಟಲಿಗೆ ಈಡಾದ ಸಾಧು-ಸಂತರು ಎಂಬ ಹೆಸರಿಗೆ ಕಳಂಕ ತಂದವರನ್ನೂ ಕಾಣುತ್ತಿದ್ದೇವೆ. ಇಂತಹ ಕೆಲವರಿಂದ ಎಲ್ಲರೂ ಇಂತಹವರೇ ಏನೋ ಎಂಬ ಭಾವನೆ ಬರುವ ಸಂಭವವಿದೆ ಮತ್ತು ನೈಜ ಬ್ರಹ್ಮಚಾರಿಗಳನ್ನೂ ಸಂದೇಹದಿಂದ ನೋಡುವ, ಅವಮಾನಿಸುವ ಪ್ರಸಂಗಗಳಿಗೂ ಅವಕಾಶವಿದೆ.
ವ್ಯಕ್ತಿಯಿಂದ ಕುಟುಂಬ, ಕುಟುಂಬಗಳಿಂದ ಗ್ರಾಮ, ಗ್ರಾಮಗಳಿಂದ ನಗರ, ನಗರಗಳಿಂದ ರಾಜ್ಯ, ರಾಜ್ಯಗಳಿಂದ ದೇಶಕ್ಕೆ ಅರ್ಥ ಮತ್ತು ಸ್ವರೂಪ ಬರುತ್ತದೆ. ವ್ಯಕ್ತಿ ದೇಶದ ಮೂಲಭೂತ ಅಂಶ, ವ್ಯಕ್ತಿಯ ವ್ಯಕ್ತಿತ್ವ ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ, ಇಲ್ಲದಿದ್ದರೆ ಇಲ್ಲ. ವ್ಯಕ್ತಿತ್ವ ನಿರ್ಮಾಣವೇ ಗುರಿಯಾದ ಬ್ರಹ್ಮಚರ್ಯದ ಉದ್ದೇಶ ಪಾಲನೆಯಾದರೆ ದೇಶದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಪಾಶ್ಚಾತ್ಯರ ಭೋಗ ಸಂಸ್ಕೃತಿಯ ಅಂಧಾನುಕರಣೆ, ಸನಾತನ ಧರ್ಮದ ಉತ್ತಮ ಅಂಶಗಳನ್ನೂ ಸಹ ಗೊಡ್ಡು ಸಂಪ್ರದಾಯವೆಂದು ಹೀಗಳೆಯುವುದೇ ಪ್ರಗತಿಪರತೆ, ಮೌಲ್ಯಗಳನ್ನು ಎತ್ತಿಹಿಡಿಯುವ ಸಂಗತಿಗಳನ್ನು ವಿರೂಪಗೊಳಿಸಿ ಅವಮಾನಿಸುವವರೇ ಬುದ್ಧಿಜೀವಿಗಳು ಎಂದು ಕರೆಯಲ್ಪಡುತ್ತಿರುವ ಇಂದಿನ ದಿನಮಾನದಲ್ಲಿ ವ್ಯಕ್ತಿತ್ವವನ್ನು ರೂಪಿಸುವ ಅವಧಿಯಲ್ಲಿ, ಅಂದರೆ ಜೀವಿತದ ಪ್ರಥಮ ಇಪ್ಪತ್ತೈದು ವರ್ಷಗಳಲ್ಲಿ, ನೀಡಲಾಗುತ್ತಿರುವ ಶಿಕ್ಷಣ ಪದ್ಧತಿಯಲ್ಲಿ ನೈತಿಕ ಮೌಲ್ಯಗಳಿಗೆ ಸಿಗುತ್ತಿರುವ ಪ್ರಾಧಾನ್ಯತೆ ನಗಣ್ಯವೆಂದೇ ಹೇಳಬೇಕಾಗಿದೆ. ಬೇವು ಬಿತ್ತಿ ಮಾವು ನಿರೀಕ್ಷಿಸುವ ನಾವು ಹುಂಬರೇ ಸರಿ.
ಕೆಲವು ದಶಕಗಳ ಹಿಂದಿನ ಸ್ಥಿತಿ ಗಮನಿಸೋಣ. ಆಗ ಪ್ರತಿ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿರುತ್ತಿದ್ದವು, ಅವಿಭಕ್ತ ಕುಟುಂಬಗಳಿದ್ದವು, ಟಿವಿ ಇರಲಿಲ್ಲ, ಮನೆಯಲ್ಲಿ ಒಟ್ಟಾಗಿ ಬಾಳುವ ಮನೋಭಾವವಿರುತ್ತಿತ್ತು, ಸಂಬಂಧಗಳಿಗೆ ಮಾನ್ಯತೆಯಿತ್ತು, ನೈತಿಕ ಮೌಲ್ಯಗಳು ಅಷ್ಟಿಷ್ಟಾದರೂ ಇದ್ದವು. ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಒಟ್ಟಾಗಿ ಭಜನೆ, ಪ್ರಾರ್ಥನೆ ಮಾಡುವ ಪರಿಪಾಠವಿತ್ತು. ಒಟ್ಟಾರೆಯಾಗಿ ಸಂತೋಷಕ್ಕೆ ಕೊರತೆಯಿರಲಿಲ್ಲ. ಕುಟುಂಬದ ಸದಸ್ಯರು ಯಾರೊಬ್ಬರು ದುರ್ಬಲರಾಗಿದ್ದರೂ ಉಳಿದವರು ಅವರನ್ನು ಕೈಹಿಡಿದು ಎತ್ತುತ್ತಿದ್ದರು. ಹಣದಲ್ಲಿ ಬಡತನವಿದ್ದರೂ ಆತ್ಮಸ್ಥೈರ್ಯಕ್ಕೆ ಬಡತನವಿರಲಿಲ್ಲ.
ಇಂದಿನ ಮಕ್ಕಳ ಪರಿಸ್ಥಿತಿ ನೋಡಿದರೆ ಮರುಕವಾಗುತ್ತದೆ. ವೈವಾಹಿಕ ಸಂಬಂಧಗಳೇ ಮಹತ್ವ ಕಳೆದುಕೊಳ್ಳುತ್ತಿರುವ, ಇಂದು ಮದುವೆ, ನಾಳೆ ವಿಚ್ಛೇದನ ಎಂಬುದು ಸಾಮಾನ್ಯವಾಗುತ್ತಿರುವ, ಒಪ್ಪಂದ ಆಧಾರದ ಸಂಬಂಧಗಳು ಹೆಚ್ಚುತ್ತಿರುವಾಗ, ವಿಚ್ಛೇದನದ ಕಾರಣದಿಂದ ಮತ್ತು ಪತಿ-ಪತ್ನಿಯರ ನಡುವಣ ಸಾಮರಸ್ಯದ ಕೊರತೆಯಿಂದ ಅನಾಥಪ್ರಜ್ಞೆಯಿಂದ ನರಳುವ ಮಕ್ಕಳನ್ನು ಕಂಡರೆ ದಿಗಿಲಾಗುತ್ತದೆ. ಮಕ್ಕಳಿಗೆ ಸುಮಾರು 6 ವರ್ಷಗಳಾಗುವವರೆಗೆ, ಮೆದುಳು ಇನ್ನೂ ಬಲಿಯಬೇಕಾಗಿರುವುದರಿಂದ, ಅವರಿಗೆ ಕಲಿಕೆಯ ಶ್ರಮ ಕೊಡಬಾರದೆಂದು ಮನೋಶಾಸ್ತ್ರಜ್ಞರು ಮತ್ತು ಶಿಕ್ಷಣತಜ್ಞರು ಹೇಳುತ್ತಾರೆ. ಆದರೆ, ನಗರಗಳಲ್ಲಿ ಗಂಡ-ಹೆಂಡತಿಯರಿಬ್ಬರೂ ದುಡಿಯಲು ಹೋಗುವವರಾದರೆ ಇನ್ನೂ ತಾಯಿಯ ಮಡಿಲಿನಲ್ಲೇ ಪಿಳಿಪಿಳಿ ಕಣ್ಣು ಬಿಟ್ಟು ಆಟವಾಡಬೇಕಾದ ಮಕ್ಕಳನ್ನೂ ಶಿಶುಕೇಂದ್ರ(ಬೇಬಿ ಕೇರ್)ಗಳಲ್ಲಿ ಬಿಟ್ಟುಹೋಗುತ್ತಾರೆ. ಅಲ್ಲಿ ಮಕ್ಕಳನ್ನು ಸುಧಾರಿಸಲಾಗದೆ ನಿದ್ರೆ ಮಾತ್ರೆ ಕೊಟ್ಟು ಮಲಗಿಸುತ್ತಾರೆಂದೂ ದೂರುಗಳಿವೆ. ಒಂದು ಶಿಶುಕೇಂದ್ರದಲ್ಲಂತೂ ಮಕ್ಕಳಿಗೆ ಹರಕುಬಟ್ಟೆ ಹಾಕಿ ಭಿಕ್ಷಾಟನೆಗೆ ಕರೆದೊಯ್ಯಲು ಬಾಡಿಗೆಗೆ ಒದಗಿಸುತ್ತಿದ್ದ ಬಗ್ಗೆ ಮಾಧ್ಯಮಗಳಲ್ಲಿ ಬಂದಿತ್ತು. ಹುಟ್ಟುತ್ತಲೇ ಬೇಬಿ ಸಿಟ್ಟಿಂಗ್, 2-3 ವರ್ಷವಾಗುತ್ತಲೇ ಎಲ್.ಕೆ.ಜಿ., ನಂತರ ಯು.ಕೆ.ಜಿ., ನಂತರ ಒಂದನೆಯ ತರಗತಿಗೆ ಮಕ್ಕಳನ್ನು ದಾಖಲಿಸುವುದು (ಅದೂ ಆಂಗ್ಲ ಮಾಧ್ಯಮದ ಶಾಲೆಗಳಿಗೆ) ಕಾಣುತ್ತಿದ್ದೇವೆ. ಶಾಲೆಗಳಲ್ಲೂ ಡೇ ಕೇರ್ ಸೌಲಭ್ಯವಿದ್ದು ತಂದೆ/ತಾಯಿ ಕೆಲಸ ಮುಗಿಸಿಕೊಂಡು ಬರುವವರೆಗೂ ಶಾಲೆ ಮುಗಿದ ನಂತರವೂ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ನಗರಗಳಲ್ಲಿದೆ. ಮೊದಲ ಪಾಠಶಾಲೆಯಾಗಬೇಕಾಗಿದ್ದ ಮನೆಯೇ ಮಕ್ಕಳನ್ನು ಮನೆಯಿಂದ ಹೊರಗೆ ಹಾಕುವ ಪ್ರಕ್ರಿಯೆಗೆ ಹುಟ್ಟುತ್ತಲೇ ಚಾಲನೆ ಕೊಡುತ್ತಿದೆ. ಮೊದಲ ಪಾಠಶಾಲೆಯೇ ಇಂದಿನ ಮಕ್ಕಳಿಗೆ ಇಲ್ಲ. ಮೊದಲ ಶಿಕ್ಷಕರಾದ ತಾಯಿ-ತಂದೆಯರಿಗೆ ಪುರುಸೊತ್ತೇ ಇಲ್ಲ.
-ಕ.ವೆಂ.ನಾಗರಾಜ್.