ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಮಾರ್ಚ್ 21, 2018

ಬಸವಣ್ಣನವರ ಜಾತಿ ಸರ್ಟಿಫಿಕೇಟು!


"ನಮಸ್ಕಾರ, ತಹಸೀಲ್ದಾರ್ ಸಾಹೇಬರಿಗೆ."
"ಓಹೋಹೋ, ರಾಯರು! ಬನ್ನಿ ಸಾರ್. ದೇವರ ದರ್ಶನ ಆದಂತಾಯಿತು. ಕೂತ್ಕೊಳಿ ಸಾರ್" ಎನ್ನುತ್ತಾ ತಹಸೀಲ್ದಾರರು ಶಿಷ್ಯನಿಗೆ ಕಾಫಿ ತರಲು ಹೇಳಿದರು.
"ಹೇಳಿ ಸಾರ್, ಏನು ಬರೋಣವಾಯಿತು?"
"ಒಂದು ಜಾತಿ ಸರ್ಟಿಫಿಕೇಟ್ ಬೇಕಿತ್ತು. ಕೌಂಟರಿನಲ್ಲಿ ಅರ್ಜಿ ಕೊಟ್ಟೆ. ತೆಗೆದುಕೊಳ್ಳಲಿಲ್ಲ. ತಹಸೀಲ್ದಾರರಿಗೇ ಕೊಡಿ ಅಂದರು. ಅದಕ್ಕೇ ನಿಮಗೇ ಕೊಡುತ್ತಿದ್ದೇನೆ. ತೆಗೆದುಕೊಳ್ಳಿ".
ಅರ್ಜಿ ನೋಡಿ ಬೆಚ್ಚಿಬಿದ್ದ ತಹಸೀಲ್ದಾರರು,
"ಏನ್ಸಾರ್ ಇದು? ಬಸವಣ್ಣನವರ ಜಾತಿ ಸರ್ಟಿಫಿಕೇಟಾ? ಯು ಮೀನ್ ಜಗಜ್ಯೋತಿ ಬಸವೇಶ್ವರ?"
"ಯಸ್, ಈ ಮೀನ್ ಜಗಜ್ಯೋತಿ ಬಸವೇಶ್ವರ. ಅವರ ತಂದೆ, ತಾಯಿ ಹೆಸರು, ಅವರ ಜಾತಿಯ ಬಗ್ಗೆ ಅಧಿಕೃತವಾದ ಮಾಹಿತಿ ಇರುವ ಪ್ರಮಾಣಿತ ದಾಖಲೆಗಳು ಎಲ್ಲಾ ಕೊಟ್ಟಿದ್ದೇನೆ. ಇವುಗಳ ಆಧಾರದಲ್ಲಿ ನನಗೆ ಜಾತಿ ಸರ್ಟಿಫಿಕೇಟ್ ಕೊಡಿ".
ದೇಶಾವರಿ ನಗೆ ನಗುತ್ತಾ ತಹಸೀಲ್ದಾರರು,
"ತಮಾಷೆ ಮಾಡ್ತಾ ಇದೀರಾ ಸಾರ್? ಅವರ ಜಾತಿ ಸರ್ಟಿಫಿಕೇಟ್ ಈಗ ಕೊಡೊಕ್ಕಾಗುತ್ತಾ?"
"ಏಕೆ ಕೊಡಕ್ಕಾಗಲ್ಲ? ಸತ್ತು ಹೋದವರಿಗೆ ಯಾವುದೇ ಸರ್ಟಿಫಿಕೇಟ್ ಕೊಡಬಾರದು ಅಂತ ಕಾನೂನು ಇನ್ನೂ ಬಂದಿಲ್ಲ."
"ಹಾಗಲ್ಲಾ ಸಾರ್. ಅಷ್ಟಕ್ಕೂ ನಿಮಗೆ ಹೇಗೆ ಕೊಡೊಕ್ಕಾಗತ್ತೆ? ನಿಮಗೂ ಅವರಿಗೂ ಏನು ಸಂಬಂಧ?"
"ಏನ್ರೀ ಅರ್ಥ? ಬಸವಣ್ಣನವರಿಗೂ ನಮಗೂ ಸಂಬಂಧವಿಲ್ಲ ಅಂದರೆ ಅವರು ಇನ್ನು ಯಾರಿಗೆ ಸಂಬಂಧ? ಬಸವಣ್ಣನವರು ಎಲ್ಲರಿಗೂ ಸಂಬಂಧಪಟ್ಟವರು."
ತಹಸೀಲ್ದಾರರು ಮೌನವಾಗಿ ಕುಳಿತಾಗ ರಾಯರೇ ಮುಂದುವರೆಸಿದರು,
"ನೋಡಿ, ಸರ್ಕಾರ ಲಿಂಗಾಯತರು ಹಿಂದೂಗಳಲ್ಲ, ಅವರೇ ಬೇರೆ ಅಂತ ಬೇರೆ ಧರ್ಮ ಘೋಷಣೆ ಮಾಡಕ್ಕೆ ಪ್ರಸ್ತಾವನೆ ಸಿದ್ಧಪಡಿಸಿದೆ. ನಾನು ಅದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅಪೀಲು ಮಾಡಿದ್ದೇನೆ. ಆ ಕೇಸಿಗೆ ಸಂಬಂಧಪಟ್ಟಂತೆ ಬಸವಣ್ಣನವರ ಜಾತಿ ದಾಖಲೆಯೂ ಬೇಕಾಗುತ್ತೆ. ಅದನ್ನು ತಹಸೀಲ್ದಾರರಿಂದ ಪಡೆದುಕೊಳ್ಳಬೇಕು ಎಂಬ ಮನವಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ. ಕೋರ್ಟಿನಿಂದಲೂ ತಮಗೆ ಸೂಚನೆ ಬರುತ್ತೆ. ನಾನೇ ಕೇಳಿದರೆ ಕಿರಿಕಿರಿ ಮಾಡಬಹುದು, ಕೊಡದೇ ಇರಬಹುದು ಎಂಬ ಸತ್ಯವೂ ನನಗೆ ಗೊತ್ತಿದ್ದರಿಂದ ಹೀಗೆ ಮಾಡಿದ್ದೇನೆ. ನನ್ನ ಪ್ರಯತ್ನವನ್ನೂ ಮಾಡೋಣ ಅಂತ ನಿಮ್ಮ ಹತ್ತಿರ ಬಂದಿದ್ದೇನೆ".
"ಸಾರ್, ನಮ್ಮನ್ನು ಮಧ್ಯಕ್ಕೆ ಸಿಕ್ಕಿಸಿಹಾಕುತ್ತಿದ್ದೀರ. ನಾನು ಎಷ್ಟಾದರೂ ನಿಮ್ಮ ಶಿಷ್ಯ. ನಿಮ್ಮಿಂದಲೇ ಪಾಠ ಕಲಿತವನು. ನೀವೇ ಒಂದು ದಾರಿ ತೋರಿಸಿಬಿಡಿ."
"ಬಸವಣ್ಣನವರ ಕಾಲದಲ್ಲಿ ಈಗಿನ ಜಾತಿ ಕಾನೂನು ಇರಲಿಲ್ಲ. ಅದಕ್ಕೇ ಅವರು ಅವರದೇ ಹೊಸಜಾತಿ ಕಟ್ಟಿದರು. ಬೇರೆ ಯಾವುದೇ ಜಾತಿಯವರು ಅವರ ಜಾತಿಗೆ ಸೇರಿಕೊಳ್ಳಲು ಅವಕಾಶವಿತ್ತು. ಸೇರಿಸಿಯೂಕೊಂಡರು. ಈಗ? ನಮ್ಮ ಅಪ್ಪ-ಅಮ್ಮನ ಜಾತಿ ಯಾವುದೋ ಅದೇ ನಮ್ಮ ಜಾತಿ! ಕಲಬೆರಕೆ ಆದರೆ ತಂದೆಯ ಜಾತಿಯೇ ಮಕ್ಕಳದೂ ಜಾತಿ. ಮುಸ್ಲಿಮ್ ಆಗಿಯೋ, ಕ್ರಿಶ್ಚಿಯನ್ ಆಗಿಯೋ ಮತಾಂತರ ಆದರೆ, ಯಾವುದೋ ವಶೀಲಿಬಾಜಿಯಿಂದ ಅವರಿಗೆ ಆ ಜಾತಿ ಸರ್ಟಿಫಿಕೇಟ್ ಕೊಡ್ತೀರಿ. ನನ್ನ ಮಗ ಮಾತೆ ಮಾದೇವಿಯಿಂದ ದೀಕ್ಷೆ ಪಡೆದುಕೊಂಡಿದ್ದಾನೆ ಅಂತ ದಾಖಲೆ ತೋರಿಸಿದರೆ ನೀವು ಅವನಿಗೆ ಲಿಂಗಾಯತ ಅಂತ ಸರ್ಟಿಫಿಕೇಟ್ ಕೊಡ್ತೀರಾ?"
"ಸಾರ್. ಅದೆಲ್ಲಾ ಬಿಟ್ಬಿಡಿ ಸಾರ್. ಈಗ ನಾನು ಏನು ಮಾಡಬಹುದು ಅನ್ನೋದಕ್ಕೆ ದಾರಿ ತೋರ್ಸಿ ಸಾರ್."
"ನೋಡಿ, ಬಸವಣ್ಣನವರು ಬ್ರಾಹ್ಮಣ ಅನ್ನೋದಕ್ಕೆ ದಾಖಲೆ ಇದೆ, ಲಿಂಗಾಯತ ಅನ್ನೋದಕ್ಕೆ ದಾಖಲೆ ಇದೆ. ವೀರಶೈವ ಅನ್ನೋದಕ್ಕೆ ದಾಖಲೆ ಇದೆ. ನಿಮಗೆ ಯಾವ ಸರ್ಟಿಫಿಕೇಟ್ ಕೊಡಬೇಕು ಅನ್ಸುತ್ತೋ ಅದನ್ನು ಕೊಡಿ."
"ಈಗಿನ ಕಾನೂನು ಪ್ರಕಾರ ಬಸವಣ್ಣನವರು ಬ್ರಾಹ್ಮಣ ಅಂತ ಕೊಡೋಕೆ ಅವಕಾಶವಿದೆ. ಹಾಗೆ ಕೊಟ್ಟರೆ ಸಿಎಮ್ ಸಾಹೇಬರು, ಮಿನಿಸ್ಟ್ರು ಪಾಟೀಲರು ಫುಟ್ ಬಾಲ್ ಆಡಿಬಿಡ್ತಾರೆ. ಲಿಂಗಾಯತ ಅಂತ ಕೊಟ್ಟರೆ ವೀರಶೈವರು ಮೇಲೆ ಬೀಳ್ತಾರೆ. ವೀರಶೈವ ಅಂತ ಕೊಟ್ರೆ ಲಿಂಗಾಯತರು ಸುಮ್ಮನಿರ್ತಾರಾ? ಒಟ್ಟಿನಲ್ಲಿ ಜನರ ಕೈಲಿ ಹೊಡೆಸಿಕೊಳ್ಳೋ ಕೆಲಸ."
"ಸರ್ಟಿಫಿಕೇಟ್ ಕೊಡಕ್ಕಾಗಲ್ಲ ಅಂತನಾದರೂ ಕೊಡಿ. ನನಗೆ ಎಂಥದೋ ಒಂದು ಸರ್ಟಿಫಿಕೇಟ್ ಬೇಕು ಅಷ್ಟೆ."
ಸಮಾಲೋಚನೆಗಾಗಿ ಕರೆಸಿದ್ದ ಡೆಪ್ಯುಟಿ ತಹಸೀಲ್ದಾರರು, 'ಎಸಿಯಿಂದ ಕ್ಲಾರಿಫೀಕೇಶನ್ ಪಡೆಯೋಣ ಸಾರ್,'ಎಂದು ಸಲಹೆ ಕೊಟ್ಟರು.
"ಪ್ರಯೋಜನ ಇಲ್ಲಾ ಕಣ್ರೀ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಿ ಅಂತ ನಮಗೇ ವಾಪಸು ಹಾಕಿಬಿಡ್ತಾರೆ."
ಇವರ ಪೇಚಾಟ ನೋಡಿದ ರಾಯರು, "ನಿಧಾನವಾಗಿ ಯೋಚಿಸಿ ನಿರ್ಧಾರಕ್ಕೆ ಬನ್ನಿ. ನಾನು ನಾಲ್ಕು ದಿನ ಬಿಟ್ಟು ಬರ್ತೇನೆ. ನೀವು ನನಗೆ ಉತ್ತರ ಕೊಡದೇ ಇದ್ದರೂ ಕೋರ್ಟಿಗಂತೂ ಉತ್ತರ ಹೇಳಲೇಬೇಕಾಗುತ್ತೆ. ನಮಸ್ಕಾರ."
ತಹಸೀಲ್ದಾರರು, 'ಈ ದರಿದ್ರ ಸರ್ಕಾರ' ಅಂತ ಏನೋ ಹೇಳಲು ಹೊರಟವರು ತುಟಿ ಕಚ್ಚಿಕೊಂಡು ಸುಮ್ಮನಾದರು. ತಲೆ ಮೇಲೆ ಕೈಹೊತ್ತು ಕುಳಿತರು.
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. ಹ ಹ ಹ ... ಒಳ್ಳೆಯ ನಗೆ ಪ್ರಹಸನ..
    ಗಂಭೀರವಾದ ವಿಷಯವನ್ನು ತಿಳಿ ಹಾಸ್ಯದ ಮೂಲಕ ಚಾಟಿ ಏಟು ನೀಡಿರುವ ನಿಮ್ಮ ಲೇಖನದ ಓಘ ಸೂಪರ್ ಇದೆ..

    ಸುಂದರ ಬರಹ ಸರ್

    ಪ್ರತ್ಯುತ್ತರಅಳಿಸಿ