ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಮಾರ್ಚ್ 7, 2018

ಕುತಂತ್ರಕ್ಕೆ ಬಲಿಯಾದ ವಿಜಯನಗರದ ಅರಸ ರಾಮರಾಯ - Ramaraya, King of Vijayanagar - victim of treachery


     ಯವನರ ಇತಿಹಾಸವನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಅದೆಂದರೆ, ಅವರು ನೇರ ಯುದ್ಧಗಳಲ್ಲಿ ಜಯಿಸಿರುವುದು ವಿರಳ. ಕುತಂತ್ರಗಳು, ಮೋಸದ ನಡೆಗಳಿಂದ ಅವರು ಮುನ್ನಡೆಯುವುದಕ್ಕೆ ಸಹಕರಿಸುವ ದ್ರೋಹಿಗಳೂ ದೊಡ್ಡ ಮಟ್ಟದಲ್ಲಿ ಅವರ ಗೆಲುವಿಗೆ ಕಾರಣರು. ದೆಹಲಿಯನ್ನಾಳುತ್ತಿದ್ದ ರಜಪೂತ ದೊರೆ ಪೃಥ್ವೀರಾಜ ಚೌಹಾನನ ಮೇಲಿನ ದ್ವೇಷದಿಂದ ಮಹಮದ್ ಘೋರಿಗೆ ಸಹಾಯ ಮಾಡಿದ್ದವನು ನೆರೆಯ ಕನೌಜದ ರಾಜ ಜಯಚಂದ್ರ. ಹೀಗೆ ಸಹಾಯ ಮಾಡಿದವನಾದರೂ ಉದ್ಧಾರವಾದನೇ? ಇಲ್ಲ, ಆ ಜಯಚಂದ್ರನೂ ಘೋರಿಯಿಂದ ಕೊಲ್ಲಲ್ಪಟ್ಟ. ಇದರ ಪರಿಣಾಮವಾಗಿ ಭಾರತ ಶತಮಾನಗಳವರೆಗೆ ಮೊಘಲರ ಆಳ್ವಿಕೆಗೆ ಒಳಗಾಗಬೇಕಾಯಿತು. ಇತ್ತೀಚಿನ ಹೈದರಾಲಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಮೈಸೂರು ಒಡೆಯರರ ಸೈನ್ಯದಲ್ಲಿ ಒಬ್ಬ ಸಾಮಾನ್ಯ ಸರದಾರನಾಗಿದ್ದವನು ಪರಿಶ್ರಮದಿಂದ ಮುಂದೆ ಬಂದದ್ದೇನೋ ಸರಿ. ಆದರೆ ಆತ ಮೈಸೂರಿನ ಒಡೆಯನಾಗಲು ಪ್ರಯತ್ನಿಸಿದಾಗ ಎಚ್ಚೆತ್ತ ರಾಜಮಾತೆ ಮತ್ತು ನಿಷ್ಠರ ಸಹಾಯದಿಂದ ಸೋತು ಪಲಾಯನ ಮಾಡಬೇಕಾಗಿ ಬಂದಿತು. ಸೋದರ ಸಂಬಂಧಿ ಮಕ್ದುಮ್ ಅಲಿಯ ೬೦೦೦ ಸೈನಿಕರು ಮತ್ತು ಬೆಂಗಳೂರಿನಲ್ಲಿದ್ದ ತನ್ನ ೩೦೦೦ ಸೈನಿಕರೊಂದಿಗೆ ಪುನಃ ದಾಳಿ ಮಾಡಿದಾಗ, ಖಂಡೇರಾಯನ ನೇತೃತ್ವದ ಸೈನ್ಯದಿಂದ ಪುನಃ ಸೋತುಹೋಗಿದ್ದ. ಆಗ ಹೈದರಾಲಿಯ ನೆರವಿಗೆ ಬಂದವನು ಒಡೆಯರರ ಸಂಬಂಧಿ, ಗಡೀಪಾರಾಗಿದ್ದ ನಂಜರಾಜ ಅರಸ. ಅವನು ತನ್ನ ಸೈನ್ಯದ ಸಹಾಯವನ್ನೂ ಹೈದರಾಲಿಗೆ ಒದಗಿಸಿದ. ಆ ಸೈನ್ಯದ ಸಹಾಯದೊಂದಿಗೆ ಹೈದರಾಲಿ ಮತ್ತೆ ದಂಡೆತ್ತಿ ಬಂದ.  ಖಂಡೇರಾಯನ ಅಧಿಕಾರಿಗಳೊಂದಿಗೆ ನಂಜರಾಜ ಅರಸ ಗುಟ್ಟಾಗಿ ಒಪ್ಪಂದ ಮಾಡಿಕೊಂಡಿರುವಂತೆ ಖಂಡೇರಾಯನನ್ನು ಹಿಡಿದು ಹೈದರಾಲಿಗೆ ಒಪ್ಪಿಸುವಂತೆ ಸೃಷ್ಟಿಸಿದ ನಕಲಿ ಪತ್ರಗಳು ಖಂಡೇರಾಯನಿಗೆ ಸಿಗುವಂತೆ ಹೈದರಾಲಿ ವ್ಯವಸ್ಥೆ ಮಾಡಿದ್ದ. ಇದರಿಂದ ಖಂಡೇರಾಯ ಹೆದರಿ ಓಡಿಹೋಗಿದ್ದ. ನಾಯಕನಿಲ್ಲದ ಸೈನ್ಯವನ್ನು ಹೈದರಾಲಿ ಸುಲಭವಾಗಿ ಸೋಲಿಸಿದ್ದಲ್ಲದೆ ಮೈಸೂರಿಗೆ ಒಡೆಯನೆನಿಸಿದ. ನಂಜರಾಜ ಅರಸ ನೆರವಿಗೆ ಬರದೇ ಇದ್ದಿದ್ದರೆ ಕರುನಾಡಿನಲ್ಲಿ ಹೈದರ್ ಮತ್ತು ಟಿಪ್ಪೂರ ಆಡಳಿತ ಇರುತ್ತಲೇ ಇರಲಿಲ್ಲ. ನಂತರ ಕೆಳದಿ ಸಂಸ್ಥಾನದ ರಾಜಧಾನಿ ಬಿದನೂರಿನ ಮೇಲೆ ದಾಳಿ ಮಾಡಿದಾಗಲೂ ಹೈದರ್ ರಾಣಿ ವೀರಮ್ಮಾಜಿಯಿಂದ ಸೋತಿದ್ದ. ಅದರೆ ನಾಡದ್ರೋಹಿ ಮಂತ್ರಿ ಲಿಂಗಣ್ಣ ಅರಮನೆಯ ರಹಸ್ಯದ್ವಾರದ ರಹಸ್ಯ ತಿಳಿದ ಹೈದರ್ ಆ ಮಾರ್ಗದ ಮೂಲಕ ರಾಣಿ ಮತ್ತು ರಾಜಕುಮಾರನನ್ನು ಸೆರೆಹಿಡಿದು ಅಪಮಾರ್ಗದಲ್ಲಿ ಯಶಸ್ಸು ಗಳಿಸಿದ್ದ. ವಿಜಯನಗರ ಸಾಮ್ರಾಜ್ಯದ ಪತನವೂ ಸಹ ಯವನರು ಹೆಣೆದ ಮೋಸದ ಬಲೆಯ ಕಾರಣದಿಂದ ಆಗಿತ್ತು. ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದ ಲಿಂಗಣ್ಣಕವಿಯ ಕೃತಿ 'ಕೆಳದಿ ನೃಪವಿಜಯ'ದಲ್ಲಿ ವಿಜಯನಗರದ ಪತನದ ಸನ್ನಿವೇಶವನ್ನು ವಿವರಿಸಿರುವ ಪರಿ ಹೀಗಿದೆ:   
    "ವ|| ಮತ್ತಮದಲ್ಲದೆ ಯೆಡೆಯೆಡೆಗೆಳ್ತಂದು ದಾಳಿವರಿಯುತಿರ್ದವಿದ್ಧಕರ್ಣರ್ಕಳದಟಂ ಮುರಿದು ಭುಜಬಲ ಪ್ರತಾಪದಿಂ ರಾಜ್ಯಂಗೆಯುತ್ತುಮಿರಲಾ ಕಾಲದೊಳ್ ರಾಮರಾಯರ್ ವಿದ್ಯಾನಗರಿಯಿಂ ತೆರಳ್ದು ತುರುಷ್ಕರ ಮೇಲೆ ದಂಡೆತ್ತಿ ಪೋಗಿರಲ್ ತದ್ರಕ್ತಾಕ್ಷಿ ಸಂವತ್ಸರದ ಮಾಘಮಾಸ ದೊಳ್ ತುರುಷ್ಕ ಸೈನ್ಯಕ್ಕಂ ರಾಯಸೈನ್ಯಕ್ಕಂ ಮಹಾದ್ಭುತಮಾದ ಯುದ್ಧಂ ಪಣ್ಣಿ ರಾಯಸೈನ್ಯಕ್ಕಿದಿರ್ಚಿ ನಿಲಲಶಕ್ಯಮಾಗಿ ಯವನ ಸೈನ್ಯಂ ಮುರಿದು ಹರಿಹಂಚಾಗಲ್ ಬಳಿಕ್ಕಂ ಗೋಲುಕೊಂಡೆಯದ ಕುತುಬಶಾಹನುಂ ಅಮದಾನಗರದ ಭೈರಿಪಾತುಶಾಹನೆನಿಪ ನಿಜಾಮಶಾಹನುಂ ಇವರಿರ್ವರುಂ ಯುದ್ಧರಂಗದೊಳ್ಕೈಗೆಯ್ದು ನಿಂದು ನಿತ್ತರಿಸಲಮ್ಮದೆ ಪಲಾಯನಂ ಬಡೆದಿಂತು ರಾಯಸೈನ್ಯಮಂ ಮುರಿವುದಸಾಧ್ಯಮೆಂದಿರ್ವರ್ ಪಾತುಶಾಹರೊಂದಾಗಿ ಮಂತ್ರಾಲೋಚನೆಯಂ ರಚಿಸಿ ಮಾಯ ತಂತ್ರದಿಂ ಪೊರತು ಗೆಲ್ವುದಸಾಧ್ಯವೆಂದು ನಿಶ್ಚಯಂಗೆಯ್ದು ರಾಯರ ಸಮೀಪದೊಳ್ ಮುಖ್ಯಸೇವಕನಾಗಿ ವರ್ತಿಸುತಿರ್ದ ವಿಜಾಪುರದ ಅಲ್ಲಿ ಅದುಲಪಾತುಶಾಹಂಗೆ ಸಂಧಾನವನೊಡರ್ಚಿಸಿ ಜಾತ್ಯಭಿಮಾನ ಹೇತುಪಂಥಮಂ ಪುಟ್ಟಿಸಿ ಮಂತ್ರಂ ಭಿನ್ನಿಸದಂತು ಸ್ವಜಾತ್ಯಭಿಮಾನದೇವತಾಸಾಕ್ಷಿ ಪೂರ್ವಕವಾಗಿ ಖಡ್ಗಮಂ ಮುಟ್ಟಿಸಿ ಕ್ರಿಯಾಪೂರ್ವಕವಾಗಿ ತಪ್ಪದಂತು ಭಾಷೆಯಂ ತೆಗೆದುಕೊಂಡೀಪ್ರಕಾರದಿಂ ಅಲ್ಲಿ ಅದುಲಶಾಹನನೊಳಗು ಮಾಡಿಕೊಂಡು ಗೋಲುಕೊಂಡೆಯದ ಕುತುಬಶಾಹನುಂ ಅಮದಾನಗರದ ಭೈರಿನಿಜಾಮಶಾಹನುಂ ನಂಬುಗೆಯಾದೊಡೆ ಸಂಧಾನಮುಖದಿಂದೈತಂದು ಕಾಣ್ಬೆವೆಂದು ಹುಸಿಯ ವರ್ತಮಾನಮಂ ಪುಟ್ಟಿಸಿ ನಚ್ಚುಹಾಕಿ ರಾಯರಂ ಮೈಮರೆಸಿ ಸಮಯಸಾಧನೆಯಂ ರಚಿಸಿ ಬಳಿಕ್ಕಂ ವಿಜಾಪುರದ ಅಲ್ಲಿ ಅದುಲಶಾಹನ ಸಂಚಿನ ಮೇಲಾ ಪಾತುಶಾಹರೊಂದಾಗಿ ಮೋಸದ ಮೇಲೆ ಶಾಲಿವಾಹನ ಶಕ ವರ್ಷ ೧೪೮೭ನೆಯ ರಕ್ತಾಕ್ಷಿ ಸಂವತ್ಸರದ ಮಾಘಬಹುಳದಲ್ಲಿ ರಕ್ಕಸದಂಗಡಿಯೆಂಬ ಸ್ಥಳದಲ್ಲಿ ರಾಮರಾಯರಂ ಪಿಡಿದು ಶಿರಶ್ಛೇದನಂಗೈದು ಆ ಶಿರಮಂ ಕಾಶಿಗೆ ಕಳುಹಿತತ್ತತ್ಸ್ಥಾನಂಗಳಿಗೆಲ್ಲಂ ತಾವೇ ಸ್ವತಂತ್ರಕರ್ತು ಗಳಾಗಿರಲಿತ್ತಂ ರಾಯಸಂಸ್ಥಾನಂ ವಿಸ್ಖಲಿತಮಾಗಿ ವಿದ್ಯಾನಗರಂ ಪಾಳಾಗಲಾ ರಾಯರ ಮನೆವಾರ್ತೆ ಬೊಕ್ಕಸದ ಸೇನಬೋವ ಚಿನ್ನಭಂಡಾರದ ನಾರಣಪ್ಪಯ್ಯನೆಂಬಾತನಲ್ಲಿ ನಿತ್ತರಿಸಲಮ್ಮದೆ ಕುಟುಂಬಸಹಿತಂ ತೆರಳ್ದೈತಂದು ಚಿಕ್ಕಸಂಕಣನಾಯಕರ ಪಾದಾರವಿಂದವನಾಶ್ರಯಿಸಲವರ್ಗೆ ಪರಮಾಧಿಕಾರ ಭಾಗ್ಯಂಗಳನಿತ್ತು ಪೋಷಿಸಿದನಂತುಮಲ್ಲದೆಯುಂ . . ."
ಡಾ. ಕೆಳದಿ ಗುಂಡಾಜೋಯಿಸರು ಸರಳಗನ್ನಡದಲ್ಲಿ ಮಾಡಿರುವ ಗದ್ಯಾನುವಾದದ ಭಾಗ:
     "ವ|| ಮತ್ತೆ ಅದೂ ಅಲ್ಲದೆ, ಆಗಾಗ ಬಂದು ದಾಳಿ ಮಾಡುತ್ತಿದ್ದ ತುರುಕರ ಪರಾಕ್ರಮವನ್ನು ಮುರಿದು, ತನ್ನ ಭುಜಬಲಪರಾಕ್ರಮದಿಂದ ರಾಜ್ಯವನ್ನು ರಕ್ಷಿಸುತ್ತಿದ್ದನು. ಆ ಕಾಲದಲ್ಲಿ ರಾಮರಾಯರು ವಿದ್ಯಾನಗರ(ವಿಜಯನಗರ)ದಿಂದ ಹೊರಟು, ತುರುಕರ ಮೇಲೆ ದಂಡೆತ್ತಿ ಹೋಗಿ, ರಕ್ತಾಕ್ಷಿ ಸಂವತ್ಸರದ ಮಾಘಮಾಸದಲ್ಲಿ ತುರುಕರ ಸೈನ್ಯಕ್ಕೂ ಹಾಗೂ ರಾಯರ ಪಡೆಗೂ ಅದ್ಭುತವಾದ ಯುದ್ಧವು ನಡೆದು ರಾಯರ ಸೈನ್ಯದ ಎದುರಿಗೆ ಮುಸಲ್ಮಾನ ಸೈನ್ಯವು ನಿಲ್ಲಲಾರದೆ ಚದುರಿ ಹೋಯಿತು. ಆ ಬಳಿಕ ಗೋಲ್ಕೊಂಡೆಯ ಕುತುಬಶಾಹ, ಅಹಮ್ಮದಾನಗರದ ಭೈರಿ ಪಾತುಶಾಹನೆಂದು ಹೆಸರುಳ್ಳ ನಿಜಾಮಶಾಹ ಇವರಿಬ್ಬರೂ ಯುದ್ಧರಂಗದಲ್ಲಿ ಕೈಮಾಡಿದರೂ ನಿಲ್ಲಲಾಗದೆ ಪಲಾಯನ ಮಾಡಿದರು. ಈ ಈರ್ವರೂ ಬಾದುಷಾಹರೂ ಒಂದಾಗಿ ರಾಯರ ಸೈನ್ಯವನ್ನು ಸೋಲಿಸುವುದು ಅಸಾಧ್ಯವೆಂದು ಯೋಚಿಸಿ, ಮೋಸದಿಂದ ಹೊರತು ಬೇರೇನೂ ಉಪಾಯವು ನಡೆಯದೆಂದು ನಿಶ್ಚಯಿಸಿದರು. ರಾಯರ ಸಮೀಪದಲ್ಲಿ ಆಪ್ತ ಸೇವಕನಾಗಿದ್ದ ಬಿಜಾಪುರದ ಅಲ್ಲಿ ಆದುಲಬಾದಷಹನಿಗೆ ಸಂಧಾನದ ಮೂಲಕ ಮನವೊಪ್ಪಿಸಿ, ಜಾತ್ಯಭಿಮಾನಕ್ಕೆ ಕಾರಣವಾದ ಕಟ್ಟಾಣೆಯನ್ನು (ಪಂಥವನ್ನು) ಸೃಷ್ಟಿಮಾಡಿ, ಮಂತ್ರಾಲೋಚನೆಯು ವಿಫಲವಾಗದ ರೀತಿಯಲ್ಲಿ ತಮ್ಮ ಜಾತಿಯ ಅಭಿಮಾನದೇವರ ಸನ್ನಿಧಿಯಲ್ಲಿ, ಸಾಕ್ಷಿ ಪೂರ್ವಕವಾಗಿ ಕತ್ತಿಯನ್ನು ಮುಟ್ಟಿಸಿ, ಕಾರ್ಯವನ್ನು ಪೂರ್ತಿ ಮಾಡಲು ತಪ್ಪದ ರೀತಿಯಲ್ಲಿ ಭಾಷೆಯನ್ನು ತೆಗೆದುಕೊಂಡರು. ಈ ರೀತಿಯಿಂದ ಅಲ್ಲಿ ಆದುಲಶಾಹನನ್ನು ತಮ್ಮೊಳಗೆ ಮಾಡಿಕೊಂಡು ಗೋಲ್ಕೊಂಡೆಯ ಕುತುಬಶಾಹ, ಅಹಮ್ಮದಾನಗರದ ಭೈರಿ ನಿಜಾಮಶಾಹ ಇವರಲ್ಲಿ ನಂಬಿಗೆ ಬಂದ ಕೂಡಲೇ ಸಂಧಾನ ಮುಖದಿಂದ ಕರೆತಂದು ಕಾಣುವೆವೆಂದು ಸುಳ್ಳು ಸಮಾಚಾರವನ್ನು ಹುಟ್ಟಿಸಿ, ರಾಯರನ್ನು ಮೈಮರೆಯುವಂತೆ ಮಾಡಿ, ನಂಬಿಸಿ, ಸಮಯಸಾಧನೆಯನ್ನು ಕೈಗೊಂಡರು. ಬಳಿಕ ಬಿಜಾಪುರದ ಅಲ್ಲಿ ಆದುಲಶಾಹನ ಹೊಂಚಿನ ಮೇಲೆ ಬಾದಷಹರೊಂದಾಗಿ, ಮೋಸದಿಂದ ಶಾಲಿವಾಹನ ಶಕವರ್ಷ ೧೪೮೭ನೆಯ ರಕ್ತಾಕ್ಷಿ ಸಂವತ್ಸರದ ಮಾಘ ಬಹುಳದಲ್ಲಿ ರಕ್ಕಸದಂಗಡಿ ಎಂಬ ಸ್ಥಳದಲ್ಲಿ ರಾಮರಾಯರನ್ನು ಹಿಡಿದುಕೊಂಡು ಶಿರಶ್ಚೇದನ ಮಾಡಿದರು. ಆ ತಲೆಯನ್ನು ಕಾಶಿಗೆ ಕಳುಹಿಸಿ, ಆಯಾ ಸ್ಥಾನಗಳಿಗೆಲ್ಲಾ ತಾವೇ ಸ್ವತಂತ್ರರಾಗಿ ಕಾರ್ಯಭಾರವನ್ನು ಕೈಗೊಳ್ಳುತ್ತಾ ಇದ್ದರು. ಈ ಕಡೆಯಲ್ಲಿ ರಾಯರ ಸಂಸ್ಥಾನವು ಹಾಳಾಗಿ ವಿಜಯನಗರವು ಧೂಳೀಪಟವಾಯಿತು. ರಾಯರ ಮನೆವಾರ್ತೆಯಾದ ಬೊಕ್ಕಸದ ಅಧಿಕಾರಿಯೂ, ಸೇನಬೋವನೂ (ಶಾನುಭೋಗನೂ) ಆದ ಚಿನ್ನಭಂಡಾರದ ನಾರಣಪ್ಪಯ್ಯನೆಂಬವನು ಅಲ್ಲಿ ನಿಲ್ಲಲಾರದೆ ಕುಟುಂಬ ಸಹಿತವಾಗಿ ಓಡಿಬಂದು ಚಿಕ್ಕಸಂಕಣ್ಣನಾಯಕರ ಆಶ್ರಯವನ್ನು ಬೇಡಿ ಮೊರೆಹೊಕ್ಕನು. ನಾಯಕನು ಅವರಿಗೆ ಹೆಚ್ಚಿನ ಅಧಿಕಾರವನ್ನು ಇತ್ತು ತನ್ನ ರಾಜ್ಯದಲ್ಲಿ ಪೋಷಿಸುತ್ತಿದ್ದನು."
     ಈ ಲೇಖನದೊಂದಿಗೆ ಇರುವ, ಮುಸ್ಲಿಮ್ ಇತಿಹಾಸಕಾರ ರಫಿಯುದ್ದೀನ್ ಶಿರಾಝಿಯ ಕೃತಿಯಲ್ಲಿ (ಅನುವಾದ-ಅಬ್ದುಲ್ ಗನಿ ಇಮಾರತವಾಲೆ) (Tazkiratul Muluk,  Rafiuddin Shirazi;  translated by Abdul Gani Imaratwale) ಕಂಡುಬರುವ ಚಿತ್ರದಲ್ಲಿ ಯವನರು ರಾಮರಾಯನ ಕೈಕಾಲುಗಳನ್ನು ಕಟ್ಟಿಹಾಕಿ ಶಿರಚ್ಛೇದ ಮಾಡುತ್ತಿರುವ ದೃಷ್ಯವೇ ಭೀಭತ್ಸವಾಗಿದ್ದು, ಅವರ ಕ್ರೂರತೆಯ ದರ್ಶನ ಮಾಡಿಸುತ್ತಿದೆ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ