ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಮಾರ್ಚ್ 26, 2018

ಒಳ್ಳೆಯ ದಿನಗಳು ಬರಲಿವೆ!


     ಹೌದು, ಒಳ್ಳೆಯ ದಿನಗಳು ಬರಲಿವೆ! ಈ ಮಾತನ್ನು ಯಾವುದೇ ರಾಜಕೀಯ ನಾಯಕರನ್ನು ಸಮರ್ಥಿಸಲು ಬರೆಯುತ್ತಿಲ್ಲ ಅಥವ ಈ ಮಾತಿಗೆ ರಾಜಕೀಯ ಮಹತ್ವವನ್ನೂ ಕೊಡಬೇಕಿಲ್ಲ. ನಾನು ಸಹಜವಾದ ವಿಷಯವನ್ನು ಸಹಜವಾಗಿ ಪ್ರಸ್ತಾಪಿಸುವ ಸಲುವಾಗಿ ಈ ವಾಕ್ಯವನ್ನು ಆರಿಸಿಕೊಂಡಿರುವೆ, ಅಷ್ಟೆ. ಪ್ರತಿಯೊಬ್ಬರೂ ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದುಕೊಂಡೇ ಜೀವಿಸುತ್ತಾರೆ ಎಂಬುದು ಸತ್ಯ. ಈಗ ಇರುವುದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಬಾಳಬೇಕು ಎಂಬುದೇ ಎಲ್ಲರ ಪ್ರಬಲವಾದ ಇಚ್ಛೆಯಾಗಿರುವುದರಿಂದ, ಈಗ ಇರುವ ಕಷ್ಟದ, ದುಃಖದ ಸ್ಥಿತಿಯನ್ನು ಸಹಿಸಿಕೊಂಡು ಮುಂದುವರೆಯುವುದು, ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾಭಾವನೆಯಿಂದ! ಒಳ್ಳೆಯ ದಿನಗಳಿಗಾಗಿ ನಮ್ಮ ಪ್ರಯತ್ನ ಅಚಲವಾಗಿದ್ದರೆ, ಸತತವಾಗಿದ್ದರೆ ಆ ದಿನಗಳು ಬಂದೇ ಬರುತ್ತವೆ. 
      ನಾವು ಒಂದು ವಿಧದ ಆಸೆ, ಭರವಸೆ, ನಿರೀಕ್ಷೆಯ ಕಾರಣದಿಂದಾಗಿ ಬದುಕಿರುತ್ತೇವೆಯೇ ಹೊರತು, ಕೇವಲ ಈಗಿನ ಅನುಭವಗಳ ಕಾರಣಗಳಿಂದ ಅಲ್ಲ. ನಮ್ಮೊಳಗೆ ಅದೇನೋ ಇದೆ, ಅದು ಈ ನಿರೀಕ್ಷೆಯ ಬಲದಿಂದ ನಮ್ಮನ್ನು ಬಂಧಿಸಿರುತ್ತದೆ. ಈಗಿರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಆಸೆಯೇ ನಮ್ಮನ್ನು ಬಂಧಿಸುವ ಆ ಶಕ್ತಿಯಾಗಿದೆ. ಇದೇ ಆತ್ಮೋನ್ನತಿಯ ಆಸೆ!      ನಮ್ಮ ಅಸ್ತಿತ್ವಕ್ಕೆ, ಬದುಕಿಗೆ ಬೆಲೆ ಬರುವುದೇ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಅಂತರ್ಗತ ಪ್ರಜ್ಞೆಯಿಂದ ಎಂಬುದನ್ನು ನಾವು ಗಮನಿಸಬೇಕು. ಆತ್ಮಾವಲೋಕನ ಮಾಡಿಕೊಂಡರೆ ತಿಳಿದೀತು, ಈ ಪ್ರಪಂಚದಲ್ಲಿ ಇಂದು ನಾವು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ನಾವು ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ನಾವು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ನಾವು ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುಂತೆ, ಸಹನೀಯವಾಗುವಂತೆ ಮಾಡುತ್ತದೆ ಎಂಬುದು ಸತ್ಯವಲ್ಲವೇ? ಈ ಆಸೆ ಹೊರನೋಟಕ್ಕೆ ಕಾಣುವುದಿಲ್ಲ. ಆದರೆ ಇದು ನಮ್ಮೊಳಗೇ ನಮಗೆ ಕಾಣದಂತೆಯೇ ಕೆಲಸ ಮಾಡುತ್ತಿರುತ್ತದೆ. ಈ ಬದುಕುವ, ಮೇಲೇರುವ ಆಸೆ ನಮ್ಮ ವಿಚಿತ್ರ ಮತ್ತು ವಿಶಿಷ್ಟವಾದ ಗುಣವಾಗಿದೆ. ಈ ಗುಣದ ಕಾರಣವನ್ನು ತರ್ಕದ ಮೂಲಕ ತಿಳಿಯುವುದು ಸಾಧ್ಯವಿದೆಯೆಂದು ಅನ್ನಿಸುವುದಿಲ್ಲ. ಇದು ತರ್ಕಾತೀತವಾದ ವಿಸ್ಮಯವೆನ್ನಬಹುದು.
     ಒಂದು ಅರ್ಥದಲ್ಲಿ ನೋಡಿದರೆ ನಾವು ಬದುಕಿರುವ, ಉಸಿರಾಡುತ್ತಿರುವ ಪ್ರತಿದಿನವೂ ಒಳ್ಳೆಯ ದಿನವೇ! ಏಕೆಂದರೆ ಮತ್ತಷ್ಟು ಒಳ್ಳೆಯದನ್ನು ನೋಡಲು, ಕಾಣಲು ಪ್ರತಿದಿನವೂ ಅವಕಾಶ ಮಾಡಿಕೊಡುತ್ತದೆ. ಕೆಲವು ದಿನಗಳು ಕೆಟ್ಟ, ಕಷ್ಟದ, ದುಃಖದ ದಿನಗಳೆಂದು ನಮಗೆ ಅನ್ನಿಸಬಹುದು. ಒಳ್ಳೆಯ ದಿನಗಳ, ಸಂತೋಷದ ಕ್ಷಣಗಳ ಉತ್ಕಟ ಅನುಭವವಾಗಬೇಕಾದರೆ ದುಃಖ, ಕಷ್ಟಗಳ ಅನುಭವವೂ ಆಗಬೇಕು. ಬೆಳಿಗ್ಗೆ ಎದ್ದಾಗ ನಮ್ಮ ಭುಜಗಳ ಮೇಲೆ ತಲೆ ಇದ್ದರೆ, ಇಂದು ಶುಭದಿನ, ಶುಭವಾಗಲಿದೆ ಎಂದೇ ದಿನವನ್ನು ಪ್ರಾರಂಭಿಸಿದರೆ ಆ ದಿನ ಶುಭವಾಗಿಯೇ ಇರುತ್ತದೆ. 1975-77ರಲ್ಲಿ ಅಂದಿನ ಶ್ರೀಮತಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರಾಳ ತುರ್ತು ಪರಿಸ್ಥಿತಿ ಹೇರಿ, ಪ್ರಜಾಫ್ರಭುತ್ವಕ್ಕೆ ಕಳಂಕ ತಂದಿದ್ದ ಸಂದರ್ಭದಲ್ಲಿ ಅದೆಷ್ಟು ಅಮಾಯಕರು ಜೀವ ಕಳೆದುಕೊಂಡರೋ, ಕಷ್ಟ-ನಷ್ಟಗಳನ್ನು ಅನಭವಿಸಿದರೋ ಲೆಕ್ಕವಿಲ್ಲ. ಸ್ವತಃ ನಾನೂ ಹಾಸನದ ಜೈಲಿನಲ್ಲಿ ಭಾರತ ರಕ್ಷಣಾ ಕಾಯದೆಯ ಅಡಿಯಲ್ಲಿ ಬಂಧಿಸಲ್ಪಟ್ಟಿದ್ದೆ. 13 ಸುಳ್ಳು ಕ್ರಿಮಿನಲ್ ಮೊಕದ್ದಮೆಗಳನ್ನು ನನ್ನ ಮೇಲೆ ಹೂಡಲಾಗಿತ್ತು. ನನ್ನನ್ನು ನೌಕರಿಯಿಂದ ತೆಗೆದಿದ್ದರು. ಆಗ ಜೈಲಿನ ಗೋಡೆಯನ್ನು ಒರಗಿಕೊಂಡು ಅನಿಶ್ಚಿತ ಭವಿಷ್ಯದ ಕುರಿತು ಚಿಂತಿಸುತ್ತಿದ್ದ ದಿನಗಳನ್ನು ನೆನೆಸಿಕೊಂಡರೆ ಇಂದಿನ ಪ್ರತಿಯೊಂದು ದಿನವೂ ನನಗೆ ಸಂತೋಷದ ದಿನವಾಗಿ ಕಾಣುತ್ತದೆ. ಅಂದಿನ ಕಷ್ಟದ ದಿನಗಳು ಮುಂದೆ ನನ್ನನ್ನು ಮಾನಸಿಕವಾಗಿ ಮತ್ತಷ್ಟು ಬಲಿಷ್ಠನನ್ನಾಗಿ ಮಾಡಿದವು ಎಂದರೆ ಅದರಲ್ಲಿ ಉತ್ಪ್ರೇಕ್ಷೆಯಿಲ್ಲ. ಕೆಟ್ಟ ದಿನಗಳನ್ನು ನಿಭಾಯಿಸಬಲ್ಲವನು ಒಳ್ಳೆಯ ದಿನಗಳನ್ನು ಕಾಣಬಲ್ಲ. ಜೀನ್ ಸೈಮನ್ಸ್ ಎಂಬಾಕೆ ಬರೆಯುತ್ತಾಳೆ, "ನನ್ನ ತಾಯಿಯ ಜೀವನ ನರಕವಾಗಿತ್ತು. ಆಕೆ 14 ವರ್ಷದವಳಾಗಿದ್ದಾಗ ನಾಝಿಗಳ ಯಾತನಾಶಿಬಿರದಲ್ಲಿ ಬಂದಿಯಾಗಿದ್ದಳು. ಈಗ ಜೀವನದ ಬಗ್ಗೆ ಅವಳ ಅನಿಸಿಕೆಯೆಂದರೆ, ಭೂಮಿಯ ಮೇಲಿನ ಪ್ರತಿಯೊಂದು ದಿನವೂ ಶುಭದಿನವೇ!" ಮೃತ್ಯುವಿನ ದರ್ಶನ ಮಾಡಿಬಂದು ಬದುಕುಳಿದವರೆಲ್ಲರ ಅನುಭವವೂ ಸಾಮಾನ್ಯವಾಗಿ ಇದೇ ಆಗಿರುತ್ತದೆ.
     ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾವಾದವೇ ಜೀವನ; ಅಯ್ಯೋ, ಎಲ್ಲವೂ ಮುಗಿಯಿತು ಎನ್ನುವ ನಿರಾಶಾವಾದವೇ ಮರಣ. ಆಶಾವಾದಕ್ಕೆ ದುರ್ಯೋಧನ ಉತ್ತಮ ಉದಾಹರಣೆಯಾಗಿದ್ದಾನೆ. ತಾನೊಬ್ಬನೇ ಹಸ್ತಿನಾಪುರವನ್ನು ಆಳಬೇಕು, ಪಾಂಡವರನ್ನು ಸೋಲಿಸಲೇಬೇಕು ಎಂಬ ಛಲದಿಂದ ಕುರುಕ್ಷೇತ್ರದ ಯುದ್ದದಲ್ಲಿ ತೊಡಗಿದ್ದಾಗ, ಅವನ ಕಣ್ಣಮುಂದೆಯೇ ಅವನ ಸಹೋದರರು ಹತರಾದರು, ದ್ರೋಣ, ಭೀಷ್ಮ, ಕರ್ಣರಂತಹ ಅತಿರಥ, ಮಹಾರಥರೆಲ್ಲರೂ ಧರೆಗುರುಳಿದರು. ಆದರೂ ಅವನಿಗೆ ವಿಶ್ವಾಸವಿತ್ತು, ಶಕುನಿ ಇನ್ನೂ ಇದ್ದಾನೆ, ಯುದ್ಧದಲ್ಲಿ ಗೆಲ್ಲುವಂತೆ ಮಾಡುತ್ತಾನೆ. ಸ್ವತಃ ತಾನು ಸಾಯುವವರೆಗೂ ತಾನೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಇಟ್ಟುಕೊಂಡೇ ಸತ್ತವನು ಅವನು. ದುರ್ಯೋಧನನ ಜೀವನ ನಮಗೆ ಆದರ್ಶವಲ್ಲದಿದ್ದರೂ, ಅವನ ಎಡೆಬಿಡದ ಆಶಾವಾದ, ಛಲಗಳು ಅನುಕರಣೀಯವಾಗಿವೆ.
     ಕೇವಲ ಆಸೆ, ಭರವಸೆ, ನಿರೀಕ್ಷೆಗಳೇ ನಮ್ಮ ಒಳ್ಳೆಯ ದಿನಗಳ ನಿರೀಕ್ಷೆಗೆ ಸಾಕಾಗುವುದಿಲ್ಲ. ನಮ್ಮ ಒಳ್ಳೆಯ ದಿನಗಳನ್ನು ಬೇರೆ ಯಾರೋ ತಂದುಕೊಡುತ್ತಾರೆ ಎಂದು ನಿರೀಕ್ಷಿಸುವುದೂ ತರವಲ್ಲ. ನಾವು ಯಾರೋ ನಮಗೆ ಒಳ್ಳೆಯ ದಿನಗಳನ್ನು ತಂದುಕೊಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡು ಕೈಕಟ್ಟಿ ಕುಳಿತರೆ ಹಿಂದೆ ಉಳಿಯುವವರು, ಭ್ರಮನಿರಸನಕ್ಕೆ ಪಕ್ಕಾಗುವವರು ನಾವೇನೇ. ನಮ್ಮ ಒಳ್ಳೆಯ ದಿನಗಳಿಗಾಗಿ ನಾವೇ ಶ್ರಮಿಸಬೇಕು. ವಿವೇಕಾನಂದರು ಹೇಳಿದಂತೆ, ನಮ್ಮ ಏಳಿಗೆಯ ಶಿಲ್ಪಿಗಳು ನಾವೇ! ಪರದೇಶದ ಒಬ್ಬ ಯಾತ್ರಿಕ ಒಮ್ಮೆ ಒಬ್ಬ ಸನ್ಯಾಸಿಯನ್ನು ಭೇಟಿ ಮಾಡಿದನಂತೆ. ಒಂದು ಸಣ್ಣ ಗುಡಿಸಲಿನಲ್ಲಿದ್ದ ಆ ಸನ್ಯಾಸಿಯ ಹತ್ತಿರ ಇದ್ದುದು ಒಂದು ಚಾಪೆ ಮತ್ತು ಒಂದು ಕುಡಿಯುವ ನೀರಿನ ಪಾತ್ರೆ ಅಷ್ಟೆ. ಆಶ್ಚರ್ಯಗೊಂಡ ಯಾತ್ರಿಕ ಸನ್ಯಾಸಿಯನ್ನು ಕೇಳಿದನಂತೆ: "ಸ್ವಾಮಿ, ನಿಮ್ಮ ಪೀಠೋಪಕರಣಗಳು ಎಲ್ಲಿ?" ಸನ್ಯಾಸಿಯಿಂದ ಮರುಪ್ರಶ್ನೆ ಬಂದಿತು: "ನಿಮ್ಮ ಪೀಠೋಪಕರಣಗಳು ಎಲ್ಲಿ?" ಯಾತ್ರಿಕ ಹೇಳಿದ, "ಸ್ವಾಮಿ, ನಾನೊಬ್ಬ ಯಾತ್ರಿಕ. ನನ್ನ ಪೀಠೋಪಕರಣಗಳು ನನ್ನ ಊರಿನಲ್ಲಿವೆ". ಸನ್ಯಾಸಿ ಹೇಳಿದನಂತೆ, "ನಾನೂ ಒಬ್ಬ ಯಾತ್ರಿಕ!" ಜೀವನದ ಪಾಠ ಇಲ್ಲಿದೆ. ಜನರು ತಾವು ಶಾಶ್ವತವಾಗಿರುತ್ತೇವೆಂದುಕೊಂಡು ಮೂರ್ಖರಂತೆ ಬಾಳುತ್ತಾರೆ. ಅರ್ಥ ಮಾಡಿಕೊಂಡರೆ ನಮ್ಮ ಜೀವನದ ಪ್ರತಿದಿನವೂ ಶುಭದಿನ ಆಗಿರಲೇಬೇಕು! ಎಲ್ಲರಿಗೂ, ಎಲ್ಲಾ ದಿನಗಳೂ ಶುಭದಿನಗಳಾಗಲೆಂದು ಆಶಿಸೋಣ. ನಿಜ ಅಲ್ಲವೇ? ಒಳ್ಳೆಯ ದಿನಗಳು ಖಂಡಿತಾ ಬರಲಿವೆ! ಸ್ವಾಗತಿಸಲು ಸಿದ್ಧರಾಗೋಣ. 
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು: