ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಸೆಪ್ಟೆಂಬರ್ 18, 2018

ಕವಿಕಿರಣ ಚಾರಿಟಬಲ್ ಟ್ರಸ್ಟ್


     ಸಧೃಢ ಮತ್ತು ಸ್ವಸ್ಥ ಭಾರತ ನಿರ್ಮಾಣಕ್ಕೆ ನಮ್ಮ ಅಳಿಲು ಸೇವೆಯೂ ಸಲ್ಲಲಿ ಎಂಬ ಉದ್ದೇಶದಿಂದ ಈ ವಿಶ್ವಸ್ತ ಸಂಸ್ಥೆಯ ರಚನೆಯಾಗಿದೆ. ಸಾರ್ವಜನಿಕ ಹಿತಾಸಕ್ತಿಯೇ ಪ್ರಧಾನವಾದ ಈ ಲಾಭರಹಿತ ಸಂಸ್ಥೆ ದಿನಾಂಕ   ೫-೦೯-೨೦೧೮ರಂದು ಅಧಿಕೃತವಾಗಿ ನೋಂದಾವಣೆಯಾಗಿದ್ದು, ಅಂದು ಶಿಕ್ಷಕರ ದಿನಾಚರಣೆಯ ದಿನವಾಗಿ ಗುರುಗಳನ್ನು ಸ್ಮರಿಸಿಕೊಳ್ಳುವ ದಿನವಾಗಿರುವುದೂ ವಿಶೇಷ. ಹಾಸನದಲ್ಲಿ ಪ್ರಧಾನ ಕಛೇರಿ ಹೊಂದಿರುವ ಈ ಸಂಸ್ಥೆ, ಬೆಂಗಳೂರು ಮತ್ತು ಶಿವಮೊಗ್ಗಗಳಲ್ಲಿ ತನ್ನ ಶಾಖಾ ಕಛೇರಿಗಳನ್ನು ತೆರೆದಿದೆ.
ಧ್ಯೇಯ ಮತ್ತು ಉದ್ದೇಶ:
* ಸಾಂಸ್ಕೃತಿಕ ಮತ್ತು ಸನಾತನ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಅಥವ ಅಂತಹ ಸಂಸ್ಥೆಗಳಿಗೆ ಅಗತ್ಯದ ನೆರವು, ಸಹಕಾರ ನೀಡುವುದು; ಗುರುಕುಲ ಪದ್ಧತಿಯ ಶಿಕ್ಷಣಕ್ಕೆ ಒತ್ತು ನೀಡುವುದು; ವೇದಾಧ್ಯಯನಕ್ಕೆ ಪ್ರೋತ್ಸಾಹ; 
* ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಸಮವಸ್ತ್ರ, ಪಠ್ಯಪುಸ್ತಕಗಳು, ಲೇಖನ ಸಾಮಗ್ರಿಗಳು, ಇತ್ಯಾದಿ ಒದಗಿಸುವುದು; ಬೋಧನೆ, ತರಬೇತಿ, ವೃತ್ತಿಪರ ಕೌಶಲ್ಯ ತರಬೇತಿಗಳು, ಮಾರ್ಗದರ್ಶನ ನೀಡುವುದು ಅಥವ ಈ ರೀತಿಯ ಕಾರ್ಯಗಳನ್ನು ಮಾಡುವವರಿಗೆ ಸಹಕಾರ ನೀಡುವುದು;
* ಪುರಾತನ ಸಾಂಸ್ಕೃತಿಕ, ಐತಿಹಾಸಿಕ ವಿಷಯಗಳಲ್ಲಿ ಅಧ್ಯಯನ, ಸಂಶೋಧನೆಗಳನ್ನು ನಡೆಸಲು ಅಗತ್ಯದ ಪ್ರೋತ್ಸಾಹ ಮತ್ತು ಸಹಕಾರ ನೀಡುವುದು; ವಿಶೇಷವಾಗಿ ಕೆಳದಿ ಸಂಸ್ಥಾನದ ಮತ್ತು ಕೆಳದಿ ಕವಿಮನೆತನಕ್ಕೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ; 
* ಸಕಾರಾತ್ಮಕ ವಿಷಯಗಳಿಗೆ ಆದ್ಯತೆ ನೀಡುವ ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕಗಳ ಮುದ್ರಣ ಮತ್ತು ಪ್ರಕಾಶನ ಮಾಡುವುದು ಅಥವ ಇಂತಹ ಸದುದ್ದೇಶದ ಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕಗಳ ಪ್ರಕಟಣೆಗೆ ನೆರವು ನೀಡುವುದು; ಇತಿಹಾಸ, ಸಂಸ್ಕೃತಿ, ಸಂಸ್ಕಾರ, ವೇದಗಳು, ಯೋಗ, ರಾಷ್ಟ್ರೀಯತೆಯ ಉದ್ದೀಪನೆ, ಕೋಮು ಸಾಮರಸ್ಯ, ಸಾಹಿತ್ಯ, ಇತ್ಯಾದಿಗಳಿಗೆ ಪ್ರಕಟಣೆಗಳಲ್ಲಿ ಆದ್ಯತೆ ನೀಡುವುದು; ನಕಾರಾತ್ಮಕ ವಿಷಯಗಳಿಗೆ ಆದ್ಯತೆ ಸಿಗುತ್ತಿರುವ ಇಂದಿನ ಕಾಲದಲ್ಲಿ ಸಜ್ಜನಶಕ್ತಿಯನ್ನು ಪ್ರಚೋದಿಸುವ ಕಾರ್ಯಕ್ಕೆ ಒತ್ತು ನೀಡುವುದು;
* ರಾಷ್ಟ್ರೀಯ ವಿಪತ್ತು ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭಗಳಲ್ಲಿ ಸಂತ್ರಸ್ತರ ನೆರವಿಗೆ ಧಾವಿಸುವುದು;
* ಮೇಲಿನ ವಿಷಯಗಳಿಗೆ ಪೂರಕವಾದ ಇನ್ನಿತರ ಕಾರ್ಯ ಚಟುವಟಿಕೆಗಳನ್ನು ನಡೆಸುವುದು.
     ಮೊದಲ ಕಾರ್ಯವಾಗಿ ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ' ಅರ್ಧವಾರ್ಷಿಕ ಪತ್ರಿಕೆಯನ್ನು ಪ್ರಕಟಿಸುವ ಹೊಣೆಯನ್ನು ಟ್ರಸ್ಟ್ ವಹಿಸಿಕೊಂಡಿದ್ದು, ಇದನ್ನು ಸಾರ್ವಜನಿಕ ಪತ್ರಿಕೆಯಾಗಿಸಿ ಪ್ರಥಮ ಹಂತದಲ್ಲಿ ತ್ರೈಮಾಸಿಕ ಪತ್ರಿಕೆಯಾಗಿ ಹೊರತರಲಾಗುವುದು. ನಂತರದ ವರ್ಷದಿಂದ ಇದನ್ನು ಮಾಸಿಕ ಪತ್ರಿಕೆಯಾಗಿ ಪರಿವರ್ತಿಸಲಾಗುವುದು. ಈ ಪತ್ರಿಕೆಯಲ್ಲಿ ಇತಿಹಾಸ, ವೇದಗಳ ಸಂದೇಶ, ಯೋಗದ ಮಹತ್ವ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ, ದೇಶದ ಸಮಗ್ರತೆ, ಭಾವೈಕ್ಯತೆ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಲೇಖನಗಳು ಇರಲಿವೆ. ಆಯಾ ವಿಷಯಗಳಲ್ಲಿ ಅಧ್ಯಯನ ಮಾಡಿರುವ ವಿದ್ವಜ್ಜನರ ಬರಹಗಳು ಶೋಭಿಸಲಿವೆ. 
     ಸಾವಿರಾರು ಮೈಲುಗಳ ಪ್ರಯಾಣವಾಗಲೀ, ಹಿಮಾಲಯ ಪರ್ವತ ಏರುವುದಾಗಲೀ ಪ್ರಾರಂಭವಾಗುವುದು ಇಡುವ ಮೊದಲ ಸಣ್ಣ ಹೆಜ್ಜೆಯಿಂದಲೇ! ಸಾಧಿಸುವ ಛಲ ಮತ್ತು ವಿಶ್ವಾಸದೊಂದಿಗೆ ಈ ಸಮಾಜಸೇವೆಯ ಕಾರ್ಯ ಪ್ರಾರಂಭಿಸಲಾಗಿದೆ. ಸಜ್ಜನ ಬಂಧುಗಳು ಸಹಕಾರಿಯಾಗಲಿದ್ದಾರೆ. ಅಂತಹ ಸಜ್ಜನ ಬಂಧುಗಳಲ್ಲಿ ನೀವೂ ಒಬ್ಬರಾಗಿ; ಸೇವಾಕಾರ್ಯಗಳಿಗೆ ದೇಣಿಗೆ ನೀಡಿ ಸಹಕರಿಸಿ, ನಮ್ಮೊಡನೆ ಹೆಜ್ಜೆ ಹಾಕಿರಿ ಎಂಬುದು ನಮ್ಮ ನಮ್ರ ವಿನಂತಿ.
         ಕ.ವೆಂ.ನಾಗರಾಜ್,  ಅಧ್ಯಕ್ಷರು ;   
ಕವಿ ವೆಂ. ಸುರೇಶ್,   ಉಪಾಧ್ಯಕ್ಷರು;   
ಹರಿಹರಪುರ ಶ್ರೀಧರ್,  ಕಾರ್ಯದರ್ಶಿ;  
ಡಾ.ಕೆ.ಜಿ. ವೆಂಕಟೇಶಜೋಯಿಸ್, ಸಹಕಾರ್ಯದರ್ಶಿ;  
ಎಂ.ಜೆ. ಪಾಂಡುರಂಗಸ್ವಾಮಿ,     ಪ್ರಕಟಣಾ ವಿಭಾಗದ ಮುಖ್ಯಸ್ಥರು;
ಎನ್.ಬಿಂದುರಾಘವೇಂದ್ರ, ಕೋಶಾಧಿಕಾರಿ. 
                     .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ