ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಮಾರ್ಚ್ 12, 2010

ಮೂಢ ಉವಾಚ - 2














                       ಕೊರತೆ
ಗುಣವಿರದ ಹಣವಂತ ವಿನಯವಿಲ್ಲದ ವಿದ್ಯೆ |
ಗುರುವಿರದ ಗುರುಕುಲ ಒಡೆಯನಿಲ್ಲದ ಮನೆಯು ||
ಇದ್ದರೇನು ಇಲ್ಲದಿರೇನು ತಳವಿರದ ಮಡಕೆಯು |
ಲೋಕ ಕೊರತೆಯ ಸಂತೆ ಚಿಂತೆಯಾ ಕಂತೆ ಮೂಢ ||
                       ಲೋಭ
ಸ್ನೇಹ ಪ್ರೀತಿಯಲು ಲಾಭವನೆ ಅರಸುವರು |
ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು ||
ವಿಶ್ವಾಸದಮೃತಕೆ ವಿಷವ ಬೆರೆಸುವರಿಹರು |
ಇಂಥವರ ಸಂಗದಿಂ ದೂರವಿರು ಮೂಢ ||
                       ನಾನತ್ವ
ತಾವೆ  ಮೇಲೆಂಬರು ಇತರರನು ಹಳಿಯುವರು |
ಪರರೇಳಿಗೆಯ ಸಹಿಸರು ಕಟುಕಿ ಮಾತಾಡುವರು ||
ಅರಿಯರವರು ಇತರರಿಗೆ ಬಯಸುವ ಕೇಡದು |
ಎರಡಾಗಿ ಬಂದೆರಗುವುದೆಂಬುದನು ಎಲೆ ಮೂಢ ||
                        ಬಯಕೆ
ಬಯಕೆಗೆ ಕೊನೆಯಿಲ್ಲ ಬಯಕೆಗೆ ಮಿತಿಯಿಲ್ಲ |
ಬಯಕೆ ಬೀಜಾಸುರನ ಸಂತತಿಗೆ ಸಾವಿಲ್ಲ ||
ಬಯಕೆ ಜೀವನವು ಬಯಸುವುದು ತಪ್ಪಲ್ಲ |
ಸ್ವಬಲವೇ ಹಂಬಲಕೆ ಬೆಂಬಲವು ಮೂಢ ||
-ಕ.ವೆಂ.ನಾಗರಾಜ್.

1 ಕಾಮೆಂಟ್‌:

  1. ಅಬ್ದುಲ್ ಲತೀಫ್ ಸಯ್ಯದ್
    15MAY2010 11:01

    "ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು||"
    ತುಂಬಾ ಸುಂದರ ಸಾಲುಗಳು, ಆದರೆ ಇವನ್ನು ಅರಿತು ಬಾಳುವನೆ ಮನುಜ?

    ಕೌಶಿಕ
    15MAY2010 11:05
    ಅರ್ಥ ಆದವರು ಬಾಳಿ, ನಂತರ ಬೇರೆಯವರಿಗೆ ದಾರಿದೀಪ ಆಗಬಹುದಲ್ವಾ ಅಬ್ದುಲ್ ಅಣ್ಣಾ...

    ಪ್ರತ್ಯುತ್ತರಅಳಿಸಿ