ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಅಕ್ಟೋಬರ್ 26, 2010

ಸೇವಾಪುರಾಣ20: ಗುಲ್ಬರ್ಗ ತೋರಿಸಿದರು-5 : 20 ಅಂಶಗಳ ಕಾರ್ಯಕ್ರಮಗಳ ಭರಾಟೆ

ಅಮಲ್ದಾರರ ಇಂಗ್ಲಿಷ್!
     ಸೇಡಂನ ತಹಸೀಲ್ದಾರರು ಎಸ್ಸೆಸ್ಸೆಲ್ಸಿ ಸಹ ತೇರ್ಗಡೆಯಾಗಿರಲಿಲ್ಲ. ಹೈದರಾಬಾದ್ ಕರ್ನಾಟಕದ ಪ್ರದೇಶ ಕರ್ನಾಟಕದೊಂದಿಗೆ ವಿಲೀನವಾದಾಗ ಅಲ್ಲಿನ ನೌಕರರ ಸೇವೆ ಸಹ ಕರ್ನಾಟಕ ಸರ್ಕಾರದ ಸೇವೆಯೊಂದಿಗೆ ವಿಲೀನಗೊಂಡಿತ್ತು. ಆ ಸಂದರ್ಭದಲ್ಲಿ ಹಲವು ನೌಕರರಿಗೆ ಅನುಕೂಲವಾಗಿ ಬಡ್ತಿಗಳೂ ಸಿಕ್ಕಿದ್ದವು. ನಮ್ಮ ತಹಸೀಲ್ದಾರರೂ ಸಹ ಆ ರೀತಿ ಬಡ್ತಿ ಪಡೆದವರಾಗಿದ್ದರು. ತಹಸೀಲ್ದಾರರಾದ ಮೇಲೆ ಇಂಗ್ಲಿಷಿನಲ್ಲಿ ಮಾತನಾಡಲು, ಬರೆಯಲು ಪ್ರಯತ್ನಿಸುತ್ತಿದ್ದರು. ಆಗ ಕಛೇರಿಯ ವ್ಯವಹಾರಗಳು ಇಂಗ್ಲಿಷಿನಲ್ಲಿಯೂ ನಡೆಯುತ್ತಿತ್ತು. ಈಗಿನಷ್ಟು ಪ್ರಮಾಣದಲ್ಲಿ ಕನ್ನಡ ಬಳಕೆಯಾಗದೇ ಇದ್ದುದೂ ಸಹ ಇದಕ್ಕೆ ಕಾರಣವಾಗಿತ್ತು. ಅವರು ಅಭಾಸಕರವಾಗಿ ಇಂಗ್ಲಿಷ್ ಬಳಸುತ್ತಿದ್ದುದನ್ನು ಕಂಡು ಇತರರು ಒಳಗೊಳಗೇ ನಗುತ್ತಿದ್ದರೂ ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ. ಅವರು ತಾವು ಚೆನ್ನಾಗಿಯೇ ಇಂಗ್ಲಿಷ್ ಮಾತನಾಡುತ್ತಿದ್ದೇನೆಂದು ಭಾವಿಸಿದ್ದರು. 'After coming to Sedam, I improved English' ಎಂದು ಆಗಾಗ್ಯೆ ಹೆಮ್ಮೆಯಿಂದ ಹೇಳುತ್ತಿದ್ದರು.

20 ಅಂಶಗಳ ಕಾರ್ಯಕ್ರಮಗಳ ಭರಾಟೆ
     ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮದ ಪ್ರಚಾರದ ಭರಾಟೆ ಆಗ ಉತ್ತುಂಗ ಸ್ಥಿತಿಯಲ್ಲಿತ್ತು. ಇಂದಿರಾಗಾಂಧಿಯವರು ಬಡವರ ಬಂಧು ಎಂದು ತೋರಿಸಲು ಮತ್ತು ತುರ್ತು ಪರಿಸ್ಥಿತಿ ದೌರ್ಜನ್ಯಗಳನ್ನು ಮರೆಮಾಚಲು ಇದನ್ನು ಅಸ್ತ್ರವಾಗಿ  ಬಳಸುತ್ತಿದ್ದರು. ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸುರವರು ಭಾಗವಹಿಸಿದ ಒಂದು ಬೃಹತ್ ಸಭೆ ಗುಲ್ಬರ್ಗದಲ್ಲಿಯೂ ಜನವರಿ, 1977ರಲ್ಲಿ ಏರ್ಪಾಡಾಗಿತ್ತು. ಎಲ್ಲಾ ತಾಲ್ಲೂಕುಗಳಿಂದಲೂ ಜನರನ್ನು, ವಿವಿಧ ಯೋಜನೆಗಳ ಫಲಾನುಭವಿಗಳನ್ನು ಲಾರಿಗಳಲ್ಲಿ ಕರೆತರಲು ಸೂಚನೆ ಕೊಟ್ಟಿದ್ದರು. ನನಗೆ ಸೇಡಂನಿಂದ 6 ಲಾರಿಗಳಲ್ಲಿ ಜನರನ್ನು ಮತ್ತು ಫಲಾನುಭವಿಗಳನ್ನು ಕರೆದೊಯ್ಯಲು ತಹಸೀಲ್ದಾರರು ಆದೇಶಿಸಿದ್ದರು. ನನಗೆ ಆಗುವುದಿಲ್ಲವೆಂದೂ ಫಲಾನುಭವಿಗಳಾದ 10 ಜನರನ್ನು ಮಾತ್ರ ಕರೆದೊಯ್ಯುವುದಾಗಿ ತಿಳಿಸಿದೆ. ತಹಸೀಲ್ದಾರರೇ ಇತರ ಸಿಬ್ಬಂದಿ ನೆರವಿನಿಂದ 3 ಲಾರಿಗಳನ್ನು ಕಳಿಸಲು ಏರ್ಪಾಡು ಮಾಡಿದರು. ನಾನೂ ಅಂತಹ ಒಂದು ಲಾರಿಯಲ್ಲಿ 10 ಫಲಾನುಭವಿಗಳೊಂದಿಗೆ ಗುಲ್ಬರ್ಗಕ್ಕೆ ಹೋಗಿದ್ದೆ. ಲಾರಿಗಳಲ್ಲಿ ಸಭೆ, ಸಮಾರಂಭಗಳಿಗೆ ಜನರನ್ನು ಆಯೋಜಕರು ಮತ್ತು ಅವರ ಪರ ಕೆಲಸ ಮಾಡುವವರು ಕರೆದೊಯ್ಯುವ ಪರಿಪಾಠ ಪ್ರಾರಂಭವಾಗಿದ್ದು ಆಕಾಲದಲ್ಲಿಯೇ. ಈಗ ಅದು ಅನಿವಾರ್ಯವಾಗಿದೆ ಮತ್ತು ಬೃಹತ್ತಾಗಿ ಬೆಳೆದಿದೆ.

ತಂಗಿಯ ಮದುವೆಗೆ ರಜ ಕೊಡಲಿಲ್ಲ
     ನಾನು ಸೇಡಂಗೆ ಹೋಗಿ ಕೆಲವು ತಿಂಗಳುಗಳಾಗಿದ್ದವು. ಹಾಸನದ ಶ್ರೀ ಶಂಕರಮಠದಲ್ಲಿ ದಿನಾಂಕ 06-02-1977ರಲ್ಲಿ ನನ್ನ ತಂಗಿಯ ಮದುವೆಗೆ ಏರ್ಪಾಡಾಗಿತ್ತು. ಹಿರಿಯ ಮಗನಾಗಿ ಮದುವೆ ಕೆಲಸಕಾರ್ಯಗಳಿಗಾಗಿ ಓಡಾಡಬೇಕಾಗಿದ್ದು ನನ್ನ ಕರ್ತವ್ಯವಾಗಿತ್ತು. ಅದಕ್ಕಾಗಿ 15 ದಿನಗಳ ರಜೆ ಕೋರಿದರೆ ತಹಸೀಲ್ದಾರರು ವಿನಾಕಾರಣ ನನ್ನ ಮನವಿ ತಿರಸ್ಕರಿಸಿದರು. ನಾನು ಗುಲ್ಬರ್ಗಕ್ಕೆ ಲಾರಿಯಲ್ಲಿ ಜನರನ್ನು ಕರೆದೊಯ್ಯಲು ಸಹಕರಿಸದಿದ್ದುದಕ್ಕೆ ಅವರಿಗೆ ನನ್ನ ಮೇಲೆ ಸಿಟ್ಟು ಬಂದಿದ್ದಿರಬಹದು.  ನಾನು ಯಾವುದೇ ಬಾಕಿ ಕೆಲಸಗಳನ್ನು ಉಳಿಸಿಕೊಂಡಿರಲಿಲ್ಲ. ತುರ್ತು ಕೆಲಸಗಳೂ ಇರಲಿಲ್ಲ. ಮರುದಿನ 14 ದಿನಗಳ ರಜೆ ಅರ್ಜಿ ಸಲ್ಲಿಸಿದರೆ ಅದನ್ನೂ ತಹಸೀಲ್ದಾರರು ತಿರಸ್ಕರಿಸಿದರು. ಖುದ್ದು ಮನವಿಗೂ ಬೆಲೆ ಕೊಡಲಿಲ್ಲ. ನಂತರದಲ್ಲಿ 13,12,10, 9,8,7,6 ದಿನಗಳಿಗೆ ರಜೆ ಕೋರಿ ಸಲ್ಲಿಸಿದ ರಜೆ ಅರ್ಜಿಗಳಿಗೂ ಅದೇ ಗತಿಯಾಯಿತು. ನನ್ನ ಹಾಸನದ ಆರೆಸ್ಸೆಸ್ ಮಿತ್ರರಿಗೆ ವಿಷಯ ತಿಳಿದು ಅವರುಗಳು ನನ್ನ ತಂದೆಯವರನ್ನು ಕಂಡು ತಾವು ಯಾವುದೇ ಕೆಲಸ ಮಾಡಲು ಸಿದ್ಧವಿರುವುದಾಗಿಯೂ ತಮ್ಮ ಸಹಾಯ ಪಡೆಯಬಹುದೆಂದೂ ಹೇಳಿದ್ದರು. ನನ್ನ ತಂದೆ ಅವರ ಸಹಾಯ ಪಡೆಯಲು ಇಷ್ಟಪಡಲಿಲ್ಲ. ತುರ್ತುಪರಿಸ್ಥಿತಿ ಇನ್ನೂ ಜಾರಿಯಲ್ಲಿದ್ದುದು ಕಾರಣವಿರಬಹುದು. ನನಗೆ ಅತ್ಯಂತ ಬೇಸರವಾಗಿತ್ತು. ಸೇಡಂನಿಂದ ಹಾಸನಕ್ಕೆ ಹೋಗಲು 2 ದಿನ, ಬರಲು 2ದಿನ ಬೇಕಿದ್ದು 5 ದಿನಗಳು ಸಾಂದರ್ಭಿಕ ರಜೆ ಹಾಕಿ ಹೊರಟುಬಿಟ್ಟೆ. ತಂಗಿಯ ಮದುವೆಗೆ ನೆಂಟನ ಹಾಗೆ ಬಂದು ಹೋಗಬೇಕಾಗಿ ಬಂದದ್ದಕ್ಕೆ ನನಗೆ ನನ್ನ ಮೇಲೇ ಜಿಗುಪ್ಸೆಯಾಗಿತ್ತು. ಅಲ್ಲಿಗೆ ಬಂದಾಗಲೂ ಮಫ್ತಿ ಪೋಲಿಸರ ಕಾಟ ತಪ್ಪಲಿಲ್ಲ. ಕಣ್ಣಿಗೆ ಕಂಡ ಇಬ್ಬರು ಮಫ್ತಿ ಪೋಲಿಸರಿಗೆ ಸಮಯಾಸಮಯದ ಅರಿವಿಲ್ಲದೆ ಬಂದ ಅವರ ನಡವಳಿಕೆ ಬಗ್ಗೆ ಚೆನ್ನಾಗಿ ಛೀಮಾರಿ ಹಾಕಿ ಊಟ ಮಾಡಿಕೊಂಡು ಹೋಗುವಂತೆ ತಿಳಿಸಿದ್ದೆ. 'ತಪ್ಪು ತಿಳಿಯಬಾರದೆಂದೂ, ಮದುವೆಗೆ ಬರಬಹುದಾದ ಆರೆಸ್ಸೆಸ್ ನಾಯಕರನ್ನು ಗಮನಿಸುವ ಬಗ್ಗೆ ಮೇಲಾಧಿಕಾರಿಗಳ ಸೂಚನೆಯಂತೆ ಬಂದಿದ್ದಾಗಿಯೂ' ಬೇಸರ ಮಾಡಿಕೊಳ್ಳಬಾರದೆಂದೂ ಅವರು ತಿಳಿಸಿದ್ದರು.

ಜಿಲ್ಲಾಧಿಕಾರಿಯವರ ಮಾನವೀಯತೆ
     ರಜೆ ಮುಗಿಸಿ ವಾಪಸು ಬಂದರೆ ಜಿಲ್ಲಾಧಿಕಾರಿಯವರ ಕಾರಣ ಕೇಳುವ ನೋಟೀಸು ನನಗಾಗಿ ಕಾಯುತ್ತಿತ್ತು. ತಹಸೀಲ್ದಾರರು ನಾನು ಕರ್ತವ್ಯಕ್ಕೆ ಅನಧಿಕೃತ ಗೈರುಹಾಜರಾಗಿದ್ದೆನೆಂದು ಜಿಲ್ಲಾಧಿಕಾರಿಯವರಿಗೆ ಅರೆಸರ್ಕಾರಿ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿಯವರನ್ನು ಖುದ್ದಾಗಿ ಕಂಡು ವಿವರಣೆ ಕೊಡಬಯಸಿ ಅದಕ್ಕಾಗಿ ಅನುಮತಿಸಲು ಲಿಖಿತ ಮನವಿ ನೀಡಿದುದನ್ನೂ ತಹಸೀಲ್ದಾರರು ತಿರಸ್ಕರಿಸಿದರು. ಅಂತಹ ಸಮಯದಲ್ಲೂ ತಹಸೀಲ್ದಾರರು ನನ್ನ ರಜಾ ಅರ್ಜಿಗಳ ಮೇಲೆ ಇಂಗ್ಲಿಷಿನಲ್ಲಿ ಬರೆದಿದ್ದ ಷರಾಗಳನ್ನು ಕಂಡು ನಗು ಬರುತ್ತಿತ್ತು. ನಾನು 5 ದಿನಗಳ ಸಾಂದರ್ಭಿಕ ರಜೆ ಕೋರಿದ್ದ ಅರ್ಜಿ ಮೇಲೆ 'Put up the applicant. Where is he? Who is give permission to left the headqarters? Report D.C. Direct d.o.letter' ಎಂದು ಬರೆದಿದ್ದರು. ನಾನು ತಹಸೀಲ್ದಾರರು ತಿರಸ್ಕರಿಸಿದ್ದ ರಜೆ ಅರ್ಜಿಗಳನ್ನೆಲ್ಲವನ್ನೂ ತೆಗೆದುಕೊಂಡು ಜಿಲ್ಲಾಧಿಕಾರಿಯವರನ್ನು ಕಾಣಲು ಗುಲ್ಬರ್ಗಕ್ಕೆ ಮರುದಿನ ಹೊರಟೆ. ಅಂದು ಬೆಳಿಗ್ಗೆ ಜಿಲ್ಲಾಧಿಕಾರಿಯವರು ಕಛೇರಿಯಲ್ಲಿದ್ದರೂ ನನಗೆ ಭೇಟಿ ಮಾಡಲು ಅವಕಾಶ ಕೊಡಲಿಲ್ಲ. ನಾನು ಅಲ್ಲೇ ಕಾದಿದ್ದು ಮಧ್ಯಾಹ್ನ ಅವರ ಛೇಂಬರಿನ ಬಾಗಿಲಿನ ಬಳಿ ದಫೇದಾರ ಇಲ್ಲದ ಸಮಯ ಸಾಧಿಸಿ ಒಳಗೆ ಹೋಗಿ ಜಿಲ್ಲಾಧಿಕಾರಿಯವರಿಗೆ ನಮಸ್ಕರಿಸಿದೆ. ಆಗ ಮುನಿಸ್ವಾಮಿ ಎಂಬುವವರು ಜಿಲ್ಲಾಧಿಕಾರಿಯಾಗಿದ್ದರು. (ನಂತರದ ದಿನಗಳಲ್ಲಿ ಅವರು ಮೈಸೂರು ವಿಭಾಗಾಧಿಕಾರಿಯವರೂ ಆಗಿದ್ದರು. ಯಾವುದೋ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡು ಇಹಯಾತ್ರೆ ಮುಗಿಸಿದರು.) ಅವರು ನನ್ನನ್ನು ದುರುಗುಟ್ಟಿ ನೋಡಿದರು. ಕಾರಣ ಕೇಳಿದ ನೋಟೀಸಿಗೆ ಉತ್ತರ ಕೊಡಲು ಬಂದಿದ್ದೇನೆಂದು ಹೇಳಿದ್ದಕ್ಕೆ 'ಗೆಟ್ ಔಟ್' ಎಂದರು. ನಾನು ಪಟ್ಟು ಬಿಡದೆ ಕೇವಲ ಐದು ನಿಮಿಷಗಳ ಕಾಲಾವಕಾಶ ಕೋರಿದೆ. ಎಲ್ಲಾ ವಿಷಯ ವಿವರಿಸಿದೆ. ತಹಸೀಲ್ದಾರರು ತಿರಸ್ಕರಿಸಿದ್ದ ಎಲ್ಲಾ ರಜೆ ಅರ್ಜಿಗಳನ್ನೂ ಅವರ ಮುಂದಿಟ್ಟೆ. ತಂಗಿಯ ಮದುವೆಗೆ ಓಡಾಡಲಾರದ ನನ್ನ ಅಸಹಾಯಕತೆ ಹೇಳಿಕೊಳ್ಳುವಾಗ ಗಂಟಲುಬ್ಬಿ ಕಣ್ಣಂಚಿನಲ್ಲಿ ನೀರು ತುಳುಕಿತ್ತು. ವಿಷಯ ಅರ್ಥವಾದ ಜಿಲ್ಲಾಧಿಕಾರಿಯವರು ತಮ್ಮ ಕುರ್ಚಿಯಿಂದ ಎದ್ದುಬಂದು ನನ್ನನ್ನು ಬಲವಂತವಾಗಿ ಕುಳ್ಳಿರಿಸಿದರು. ಹೃದಯಪೂರ್ವಕವಾಗಿ ನನಗಾದ ತೊಂದರೆ ಬಗ್ಗೆ ನನ್ನ ಕ್ಷಮೆ ಕೇಳಿ ದೊಡ್ಡತನ ದರು. ದಫೇದಾರರನ್ನು ಕರೆದು ಚಹಾ ತರಿಸಿ ನನಗೆ ಕುಡಿಯುವಂತೆ ಕೋರಿದರು. ಆಪ್ತ ಸಹಾಯಕರನ್ನು ಕರೆಸಿ 'ಇದು ವಿನಾಕಾರಣ ತೊಂದರೆ ನೀಡಿದ ಸ್ಪಷ್ಟ ಪ್ರಕರಣವಾಗಿದ್ದು, ತಹಸೀಲ್ದಾರರ ವರ್ತನೆಗಾಗಿ ಅವರಿಗೆ ಎಚ್ಚರಿಕೆ' ನೀಡುವ ಬಗ್ಗೆ ಒಂದು ಪತ್ರವನ್ನು ಉಕ್ತಲೇಖನ ನೀಡಿದರು. ಪತ್ರ ಸಿದ್ಧವಾಗುವವರೆಗೆ ನನ್ನನ್ನು ಅಲ್ಲೇ ಕುಳ್ಳಿರಿಸಿ ನಂತರ ತಹಸೀಲ್ದಾರರಿಗೆ ಕೊಡಬೇಕಾದ ಪತ್ರದ ಪ್ರತಿಯನ್ನು ನನ್ನ ಕೈಲೇ ಕೊಟ್ಟು ಕಳಿಸಿದರು. ಪತ್ರದ ಪ್ರತಿಯನ್ನು ಜಿಲ್ಲೆಯ ಎಲ್ಲಾ ಕಂದಾಯಾಧಿಕಾರಿಗಳಿಗೂ ಮಾಹಿತಿಗಾಗಿ ಕಳಿಸಿದ್ದರು. ಅವರಿಗೆ ವಂದಿಸಿ ಹೊರಬಂದೆ.
(ಕಾಲಘಟ್ಟ: 1977).                                                                                 ..ಮುಂದುವರೆಯುವುದು.

8 ಕಾಮೆಂಟ್‌ಗಳು:

  1. ನಾನು ನಿಮ್ಮಷ್ಟು ಮಟ್ಟಕ್ಕೆ ಬೆಳೆಯಲಿಲ್ಲವೆಂದು ಅದಕ್ಕಾಗಿಯೇ ಬೇರೊಂದುಕಡೆ ಪ್ರತಿಕ್ರಿಯಿಸಿದ್ದು, ನಾಗರಾಜ್.
    ಲೇಖನ ಓದುವಾಗ ನಿಜವಾಗಿ ನನಗೆ ದು:ಖವಾಯ್ತು.ನಿಮ್ಮಂತ ನಿಷ್ಟುರ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಹೇಗೆ? ಎಂಬ ಬಗ್ಗೆ ಅಚ್ಛರಿಯಾಯ್ತು. ಸಾಧ್ಯವಿಲ್ಲ ಬಿಡಿ. ಎಲ್ಲರೂ ನಾಗರಾಜ್ ಆಗಲು ಸಾಧ್ಯವಿಲ್ಲ.

    ಪ್ರತ್ಯುತ್ತರಅಳಿಸಿ
  2. ಶ್ರೀಧರ್, ನಿಷ್ಠುರರಿಗೆ ನೋವು ಜಾಸ್ತಿ. ನಿಮ್ಮ ರೀತಿಯೇ ಸರಿಯಿರಬಹುದು.

    ಪ್ರತ್ಯುತ್ತರಅಳಿಸಿ
  3. ಪಾರ್ಥಸಾರಥಿ
    27OCT2010 1:07
    ತಮ್ಮ ಸೇವಾ ಅವದಿಯ ಲೇಖನ ಆಸಕಿತ್ ಮೂಡಿಸುತ್ತದೆ. ಆದರೆ ನಾಗರಾಜ್ ಸಾರ್ ರಾಜ್ಯಸರ್ಕಾರದ ಇಲಾಖೆಗಳಲ್ಲಿ ಇಂದಿಗೂ ಇದೆ ಪರಿಸ್ಥಿಥಿ ಇದೆ (ತುರ್ತು ಪರಿಸ್ಥಿಥಿ ಇಲ್ಲದಿದ್ದರು !!!) ತಮ್ಮಗಳ ಜೊತೆ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳದ ಅನೈತಿಕ ಕೆಲಸದಲ್ಲಿ ಕೈಜೋಡಿಸದ ಸಿದ್ಬಂದಿಗಳು ಇಂದಿಗೂ ನಾನ ರೀತಿಯ ಕಿರುಕುಳ ಅನುಭವಿಸುತ್ತಿದ್ದಾರೆ. ಅಂತವರಿಗೆಲ್ಲ ನಿಜಕ್ಕು ಕಡೆಯಪಕ್ಷ ನೈತಿಕ ದೈರ್ಯ ಕೊಡುವ ಕಾರ್ಯ ಖಂಡೀತ ಆಗಬೇಕಿದೆ. ತಮ್ಮಂತವರು ಆ ದಿಕ್ಕಿನಲ್ಲಿ ಏಕೇ ಯೋಚಿಸಬಾರದು.

    Kavinagaraj
    27OCT2010 5:22
    ನಿಮ್ಮ ಅನಿಸಿಕೆ ನಿಜ, ಪಾರ್ಥರವರೇ. ನನ್ನ ಕೈಲಾಗುವ ಮಟ್ಟಿಗೆ ಆ ಪ್ರಯತ್ನ ಮಾಡುತ್ತಲೇ ಇರುವೆ. ಧನ್ಯವಾದಗಳು.

    ಬೆಳ್ಳಾಲ ಗೋಪೀನಾಥ ರಾವ್
    27OCT2010 7:27
    ಅಬ್ಭಾ ತುಂಬಾ ದಿನಗಳಾದ ಮೇಲೆ ಹೊರಬಂತು
    ಸತ್ಯಕ್ಕೆ ಎಂದೂ ಸಾವಿಲ್ಲ. ಮುಂದುವರಿಯಲಿ ಕವಿಗಳೇ

    Kavinagaraj
    27OCT2010 7:46
    ವಂದನೆ, ಗೋಪಿನಾಥರೇ.

    ರಾಗೋಶಾ
    28OCT2010 7:59
    ಆಸಕ್ತಿದಾಯಕ ಲೇಖನ
    ಧನ್ಯವಾದಗಳು

    Kavinagaraj
    28OCT2010 12:06
    ಧನ್ಯವಾದಗಳು, ರಾಗೋಶಾ.

    ಚೇತನ್ ಕೋಡುವಳ್ಳಿ
    28OCT2010 12:56
    ತುಂಬಾ ಘಟನೆಗಳನ್ನು ಅನುಭವಿಸಿದ್ದೀರಿ
    ಮುಂದುವರೆಯುತ್ತಿರಲಿ ನಿಮ್ಮ ಸರಣಿ

    Kavinagaraj
    28OCT2010 9:43
    ವಂದನೆಗಳು, ಚಿಕ್ಕೂ.

    ಪ್ರತ್ಯುತ್ತರಅಳಿಸಿ
  4. ಪ್ರಾಮಾಣಿಕರಾಗಿದ್ದರೆ ಏನೆಲ್ಲಾ ಕಷ್ಟಗಳನ್ನು ಅನುಭವಿಸಬೇಕು ಎಂಬುದಕ್ಕೆ ತಮ್ಮ ಜೀವನಗಾಥೆಯೇ ಸಾಕ್ಷಿ... ತಮ್ಮ ಬರಹ ಮುಂದುವರಿಯಲಿ

    ಪ್ರತ್ಯುತ್ತರಅಳಿಸಿ