ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಫೆಬ್ರವರಿ 10, 2011

ಮೂಢ ಉವಾಚ -43 : ಮಾತು

ಮಾತಾಗಲಿ ಮುತ್ತು ತರದಿರಲಿ ಆಪತ್ತು
ಮಾತು ನಿಜವಿರಲಿ ನೋವು ತರದಿರಲಿ |
ಪ್ರಿಯವಾದ ಹಿತವಾದ ನುಡಿಗಳಾಡುವನು
ಜನಾನುರಾಗಿ ನುಡಿಯೋಗಿ  ಮೂಢ ||


ಮಾತಿಗೆ ಮಾತು ತರದಿರದೆ ಆಪತ್ತು
ವಾದ ವಿವಾದದಲಿ ಪ್ರೀತಿಯೇ ತೂತು |
ಎಲ್ಲರ ಮಾತುಗಳನಾಲಿಸುವನೊಬ್ಬನೆ
ಪ್ರತಿಯಾಡದ ಪರಮಾತ್ಮನೊಬ್ಬನೆ ಮೂಢ ||


ಮಾತಿನಲಿ ಹಿತವಿರಲಿ ಮಿತಿ ಮೀರದಿರಲಿ
ಮಾತಿನಿಂದಲೆ ಸ್ನೇಹ ಮಾತಿನಿಂ ದ್ವೇಷ |
ಮಾತಿನಿಂದಲೆ ಒಳಿತು ಮಾತಿನಿಂ ಕೆಡುಕು
ಮಾತು ಮುತ್ತಂತಿರಲಿ ಮೂಢ ||


ಮಾತು ಕಟ್ಟೀತು ಮಾತು ಕೆಡಿಸೀತು
ಮಾತು ಉಳಿಸೀತು ಮಾತು ಕಲಿಸೀತು |
ಮಾತು ಅಳಿಸೀತು ಮಾತು ನಲಿಸೀತು
ಅನುಭವದ ಮಾತು ಮುತ್ತು ಮೂಢ ||
*************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. ಮನಬಿಚ್ಚಿದಾ ಮಾತು ನೋವ ಹೊರಹಾಕೀತು, ಮೌನ ಮಡುವ ಕಟ್ಟಿ ನೋವ ಹೆಚ್ಚಿಸೀತು, ಮನದೊಳಗೆ ಮರೆಮಾಚಿ ಮೌನ ದಿಂದೇನು?ಮನದ ಮಾತು ಹೊರಹಾಕಿ ಹಗುರವಾಗುವುದೆ ಲೇಸು. ಈಗ ಹೇಳಿ ಮೌನ ಸರಿಯೇ? ಮನ ಬಿಚ್ಚಿದ ಮಾತು ಸರಿಯೇ? ಚುಚ್ಚುಮಾತು ಮಾತ್ರ ಬೇಡವೆಂಬುದು ನನ್ನ ಮನದ ಮಾತು.

    ಪ್ರತ್ಯುತ್ತರಅಳಿಸಿ