ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಮಾರ್ಚ್ 7, 2011

ಮೂಢ ಉವಾಚ -44 : ಸಮರಸತೆ

ದಾಂಪತ್ಯವಿರೆ ಅನುರೂಪ ಮನೆಯು ಸ್ವರ್ಗ
ಗುರು ಶಿಷ್ಯ ಪ್ರೇಮದಿಂ ಮನುಕುಲವು ಧನ್ಯ |
ಶಬ್ದಗಳ ಜೋಡಿಸಲು ರಸಭಾವದನುರೂಪ
ಒಡಮೂಡುವುದುತ್ತಮ ಕಾವ್ಯ ಮೂಢ ||


ಎಣಿಸದಲೆ ಅವ ಕೀಳು ಇವ ಮೇಲು
ಬಡವ ಸಿರಿವಂತರೆನೆ ತರತಮವು ಇಲ್ಲ |
ನೋವು ನಲಿವಿನಲಿ ಉಳಿಸಿ ಸಮಚಿತ್ತ
ಬಲ್ಲಿದರು ಬಾಳುವರು ಕಾಣು ಮೂಢ ||


ಪತಿಗೆ ಹಿತವಾಗಿ ಸತಿ ಬಾಳಬೇಕು
ಸತಿಗೆ ಹಿತವಾಗಿ ಪತಿ ಬಾಳಬೇಕು |
ನಾನತ್ವ ಅಹಮಿಕೆ ಬದಿಯಲಿಡಬೇಕು
ಸಮರಸತೆ ಇರುವಲ್ಲಿ ಸಂಸಾರ ಮೂಢ ||


ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿಯಿದೆ ಮನಸಿನ ಬಲವಿದೆ |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದೊಡೆ ನಿನಗೆ ನೀನೆ ಶತ್ರು ಮೂಢ ||
****************
-ಕ.ವೆಂ.ನಾಗರಾಜ್.


1 ಕಾಮೆಂಟ್‌: