ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಆಗಸ್ಟ್ 29, 2011

ಮೂಢ ಉವಾಚ - 67

ಅಸುರರೆಲ್ಲಿಹರೆಂದು ಅರಸುವುದು ತರವೆ
ಅತಿಮಾನ ತೋರಿ ಮದದಿ ಮೆರೆಯುವರು |
ಹಿರಿಯರನೆ ನಿಂದಿಸಿ ಡಂಭ ತೋರುವರು
ಪರರ ನೋಯಿಪರು ಅಸುರರೇ ಮೂಢ ||


ನಾನೇ ಎಲ್ಲ ನಾನಿಲ್ಲದರಿಲ್ಲವೆಂಬಹಮಿಕೆ
ಪರರ ಜರೆವ ಗುಣ ಗುರುಹಿರಿಯರೆನದೆ |
ಬಯಸಿರಲು ಸಿಗದಿರೆ ಉಮ್ಮಳಿಪ ಕೋಪ
ಅಸೂಯೆ ಅಸುರರ ಆಸ್ತಿ ಮೂಢ ||


ಗುರಿಯ ತಲುಪಲು ಕುಟಿಲೋಪಾಯ ಮಾಡಿ
ಪರರ ಮೆಚ್ಚ್ಚಿಸಲು ಡಂಭದಾಚರಣೆಯ ಮಾಡಿ |
ಕಾಮರಾಗಬಲದಿಂ ಕೀಳು ಫಲಕಾಗಿ ಹಂಬಲಿಪ
ಅಹಂಕಾರಿಗಳು ಸಾಧಕಾಸುರರು ಮೂಢ ||


ಬಿತ್ತಿದಾ ಬೀಜದೊಲು ಬೆಳೆಯು
ನೋಡುವ ನೋಟ ಕೇಳುವ ಮಾತು |
ಆಡುವ ಮಾತು ಸೇವಿಪಾಹಾರ
ಸಾತ್ವಿಕವಿರೆ ಸಾತ್ವಿಕನು ನೀ ಮೂಢ ||

ಬುಧವಾರ, ಆಗಸ್ಟ್ 24, 2011

ಕೆಳದಿ ಕವಿಮನೆತನ: ಬೇರು ಶೋಧಿಸಲು ಹೊರಟ ಚಿಗುರುಗಳು

ಕೆಳದಿ ಕವಿಮನೆತನ:  ಬೇರು ಶೋಧಿಸಲು ಹೊರಟ ಚಿಗುರುಗಳು
     ವಂಶಮೂಲವನರಸಿ ಜಾಡರಿತು ಸಾರೆ
     ಜಾಡು ಮುಗಿದೆಡೆಯಲ್ಲಿ ಜೀವಾಮೃತಧಾರೆ|
     ಮುನ್ನೂರು ವರುಷಗಳ ಹಾದಿಯಿದು ಜಾಣಾ
     ಹತ್ತು ತಲೆಮಾರುಗಳ ಯಶಗೀತೆ ಕಾಣಾ||
     ಮಾನವನ ಜೀವನದಲ್ಲಿ ಸಂಬಂಧಗಳಿಗೆ - ತಾಯಿ, ತಂದೆ, ಅಜ್ಜ, ಅಜ್ಜಿ, ಅಣ್ಣ, ತಂಗಿ, ಅಕ್ಕ, ತಮ್ಮ, ಗಂಡ, ಹೆಂಡತಿ, ಮಕ್ಕಳು, ಇತ್ಯಾದಿಗಳಿಗೆ - ಮಹತ್ವವಿದೆ. ಇಂದಿನ ಜೀವನಶೈಲಿ ಅವಿಭಕ್ತ ಕುಟುಂಬಗಳಿಗೆ ಮಾರಕವಾಗಿದೆ. ಈಗಿನ ಪೀಳಿಗೆಯವರಿಗೆ ಅವಿಭಕ್ತ ಕುಟುಂಬದ ಪರಿಚಯ ಬಹುಷಃ ಇಲ್ಲವೆಂದೇ ಹೇಳಬಹುದು. ಈಗಂತೂ ಕುಟುಂಬ ಎಂದರೆ ಗಂಡ, ಹೆಂಡತಿ, ಮಕ್ಕಳು ಮಾತ್ರ ಎನ್ನುವ ಭಾವನೆ ಬಂದಿರುವುದು ದುರಂತ. ಇತರ ಸಂಬಂಧಗಳಿಗೆ ಬೆಲೆ ಕೊಡದಿರುವುದರಿಂದ ಮುಂದೊಮ್ಮೆ ಚಿಕ್ಕಪ್ಪ, ದೊಡ್ಡಪ್ಪ, ಷಡ್ಡಕ, ಓರಗಿತ್ತಿ, ನಾದಿನಿ, ಮೈದುನ, ಸೋದರತ್ತೆ, ದಾಯಾದಿ, ಇತ್ಯಾದಿ ಸಂಬಂಧಗಳ ಅರ್ಥವೇ ಮಕ್ಕಳಿಗೆ ತಿಳಿಯದೇ ಹೋಗಬಹುದು. ಅಂಕಲ್, ಆಂಟಿ, ಕಸಿನ್‌ಗಳಲ್ಲೇ ಈಗ ಎಲ್ಲಾ ಮುಗಿದುಹೋಗುತ್ತಿದೆ. ಹೆಚ್ಚಿನ ಕುಟುಂಬಗಳಲ್ಲಿ ಈಗ ಒಂದೇ ಮಗುವಿರುವುದರಿಂದ ಆ ಮಕ್ಕಳಿಗೆ ಅಣ್ಣ, ತಮ್ಮ, ಅಕ್ಕ, ತಂಗಿ - ಇಂತಹ ಪ್ರೀತಿಯ ಅನುಬಂಧಗಳ ಅನುಭವವೂ ಆಗದೆ ಸ್ವಾರ್ಥಪ್ರೇರಿತ ಜನಾಂಗ ರೂಪಿತಗೊಳ್ಳುತ್ತಿದೆಯೇನೋ ಎಂದೂ ಭಾಸವಾಗುತ್ತಿದೆ. ಗಂಡ, ಹೆಂಡತಿ ಇಬ್ಬರೂ ಒಟ್ಟಿಗೆ ಇದ್ದರೆ ಅದೇ ಅವಿಭಕ್ತ ಕುಟುಂಬ ಎಂದು ಹೇಳುವ ಪರಿಸ್ಥಿತಿ ಇದೆ. ಒಳ್ಳೆಯ ನಾಗರಿಕ ಸಮಾಜ ರೂಪಿತವಾಗಬೇಕಾದರೆ ಸಮಾಜದ ಮೂಲಘಟಕವಾದ ಕುಟುಂಬಗಳಲ್ಲಿ ಉತ್ತಮ ಸಂಬಂಧ, ಸಾಮರಸ್ಯವಿರುವ ವಾತಾವರಣವಿರಬೇಕು ಎಂಬುದರಲ್ಲಿ ಅರ್ಥವಿದೆ. ಅಜ್ಜ, ಅಜ್ಜಿಯರ ಹೆಸರು, ವಿವರ ಹೆಚ್ಚಿನವರಿಗೆ ತಿಳಿದಿರಬಹುದು. ಆದರೆ ಮುತ್ತಜ್ಜ, ಮುತ್ತಜ್ಜಿಯರು, ಅವರ ಅಪ್ಪ.ಅಮ್ಮಂದಿರ ವಿವರಗಳು? ಬಹುಷಃ ತಿಳಿದಿರಲಾರದು. ತಿಳಿಯುವ ಆಸಕ್ತಿಯೂ ಇರಲಾರದು. ನಮ್ಮ ವಂಶವೃಕ್ಷದ ಬೇರಿನ ವಿವರಗಳನ್ನು ಹುಡುಕುವ ನಮ್ಮ ಪ್ರಯತ್ನದ ವಿವರಗಳನ್ನು ಹಂಚಿಕೊಳ್ಳಬೇಕೆಂಬ ತುಡಿತದ ಫಲವೇ ಈ ಲೇಖನ. 
     ಹತ್ತು ವರ್ಷಗಳ ಹಿಂದೆ ನಾವು ಕೆಳದಿ ಕವಿಮನೆತನದವರೆಂಬ ಕಲ್ಪನೆಯೂ ನಮಗೆ ಇರಲಿಲ್ಲ. ತಿಳಿದ ನಂತರ ಆದ ಸಂತೋಷವೂ ಅಷ್ಟಿಷ್ಟಲ್ಲ. ನನ್ನ ಅಜ್ಜ ದಿ. ಸುಬ್ರಹ್ಮಣ್ಯಯ್ಯನವರು (೧೯೦೪-೧೯೬೬) ಬಾಲ್ಯಾವಸ್ಥೆಯಲ್ಲೇ ತಮ್ಮ ತಂದೆ-ತಾಯಿಯರನ್ನು ಕಳೆದುಕೊಂಡು, ಕೊಪ್ಪದಲ್ಲಿದ್ದ ತಮ್ಮ ಅಜ್ಜ (ತಾಯಿಯ ತಂದೆ) ವೆಂಕಟಸುಬ್ಬಯ್ಯನವರ ಆಶ್ರಯದಲ್ಲಿ ಬೆಳೆದಿದ್ದರಿಂದ ಸಹಜವಾಗಿ ತಂದೆಯ ಕಡೆಯ ಸಂಬಂಧಗಳು ಬಿಟ್ಟುಹೋಗಿದ್ದಲ್ಲದೆ ಅವರ ಪರಿಚಯ ಮಕ್ಕಳು, ಮೊಮ್ಮಕ್ಕಳಿಗೆ ಆಗಲಿಲ್ಲ. ನಾವುಗಳೂ ನಮ್ಮ ಹೆಸರಿನ ಇನಿಷಿಯಲ್ ನಲ್ಲಿದ್ದ ಕೆ ಅಂದರೆ ಕೊಪ್ಪ ಎಂದೇ ಭಾವಿಸಿದ್ದೆವು. ಅಜ್ಜ ಸುಬ್ರಹ್ಮಣ್ಯಯ್ಯ ತರ್ಪಣಾದಿ ಕಾರ್ಯಗಳಲ್ಲಿ ಸ್ಮರಿಸಬೇಕಾದ ಹೆಸರುಗಳ ವಿವರಗಳನ್ನು ಒಂದು ಚೀಟಿಯಲ್ಲಿ ಬರೆದು ನಮ್ಮ ತಂದೆ ದಿ. ವೆಂಕಟಸುಬ್ಬರಾಯರಿಗೆ (೧೯೨೫-೨೦೦೯) ಕೊಟ್ಟಿದ್ದರು. ಈ ಚೀಟಿಯನ್ನು ಗಮನಿಸಿದ ನಾನು ಅದರಲ್ಲಿನ ವಿವರಗಳನ್ನು ಆಧರಿಸಿ ವಂಶವೃಕ್ಷ ಸಿದ್ಧಪಡಿಸಿ ೨೦೦೦ನೆಯ ಸಾಲಿನಲ್ಲಿ ಪ್ರತಿಗಳನ್ನು ಬಂಧುಗಳಿಗೆ ನೀಡಿದ್ದೆನು. ಅದರಲ್ಲಿ ಕೊಪ್ಪದ ವೆಂಕಣ್ಣನ ಅಮರ ವಂಶಾವಳಿ ಎಂದೇ ನಮೂದಿಸಿದ್ದೆನು. ವರ್ಷಕ್ಕೊಮ್ಮೆ ಅಥವಾ ಅಗತ್ಯ ಬಿದ್ದಾಗ ಈ ವಂಶವೃಕ್ಷದಲ್ಲಿ ಪರಿಷ್ಕರಣೆ ಮಾಡುತ್ತಿದ್ದೆನು. ಈರೀತಿ ಸಿದ್ಧಪಡಿಸಿದ ವಂಶವೃಕ್ಷದಲ್ಲಿ ಕಂಡು ಬಂದ ಹೆಸರುಗಳವರ ಅಣ್ಣ-ತಮ್ಮಂದಿರು, ಮಕ್ಕಳು, ಮೊಮ್ಮಕ್ಕಳ ವಿವರ ನಮಗೆ ಗೊತ್ತಿರಲಿಲ್ಲ. ಅವರುಗಳನ್ನು ಹೇಗಾದರೂ ಮಾಡಿ ಹುಡುಕಬೇಕು ಎಂಬ ಪ್ರಯತ್ನ ಸಾಗಿತು. ಯಾವ ಯಾವುದೋ ಸಮಾರಂಭಗಳಲ್ಲಿ. ಊರುಗಳಲ್ಲಿ ಅವರು ಹುಚ್ಚೂರಾಯರ ಮೊಮ್ಮಗ ಅಂತೆ, ರಾಮಣ್ಣನವರ ಸಂಬಂಧಿಗಳಂತೆ ಇತ್ಯಾದಿ ಕೇಳಿಬಂದಾಗ ಪರಿಚಯಿಸಿಕೊಂಡು ವಿಚಾರಿಸುತ್ತಿದ್ದೆ.  ವಿಚಾರಿಸಿದಾಗ ಅವರು ಸಂಬಂಧಿಗಳಲ್ಲ ಎಂದು ತಿಳಿದಾಗ ನಿರಾಶೆಯೂ ಆಗುತ್ತಿತ್ತು. ಹೇಳಬೇಕೆಂದರೆ ನನ್ನ ಹೆಚ್ಚಿನ ಗಮನ ಕೊಪ್ಪ ಮತ್ತು ಶಿವಮೊಗ್ಗಗಳಿಗೆ ಸೀಮಿತವಾಗಿತ್ತು. ಕಂದಾಯ ಇಲಾಖಾಧಿಕಾರಿಯಾಗಿ ನನಗಿದ್ದ ಕಾರ್ಯಬಾಹುಳ್ಯ ಸಹ ಈ ಕುರಿತು ಹುಡುಕಾಟಕ್ಕೆ ಅಡ್ಡಿಯಾಗಿತ್ತು.
     ರಾಜ್ಯ ಸಚಿವಾಲಯದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದ ನನ್ನ ತಮ್ಮ ಸುರೇಶ ಆರು ವರ್ಷಗಳ ಹಿಂದೆ ಸ್ವಇಚ್ಛಾ ನಿವೃತ್ತಿ ಪಡೆದು ಶಿವಮೊಗ್ಗದಲ್ಲಿ ನೆಲೆ ನಿಂತಾಗ ಆತನಿಂದ ಈ ಅನ್ವೇಷಣೆ ಮುಂದುವರೆಯಿತು. ನಾವಿಕ ಪತ್ರಿಕೆಯಲ್ಲಿ ಶಿವಮೊಗ್ಗದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಪ್ರವೇಶದ್ವಾರಕ್ಕೆ ಕವಿ ಸುಬ್ರಹ್ಮಣ್ಯಯ್ಯನವರ ಹೆಸರಿಡಬೇಕೆಂದು ಶ್ರೀ ಕೂಡ್ಲಿ ಜಗನ್ನಾಥಶಾಸ್ತ್ರಿಯವರು ಬರೆದ ಪತ್ರ ಗಮನಿಸಿ ಕವಿ ಸುಬ್ರಹ್ಮಣ್ಯಯ್ಯರೆಂದರೆ ನಮ್ಮ ಅಜ್ಜನೇ ಇರಬೇಕೆಂದು ಭಾವಿಸಿ ಅವರನ್ನು ನನ್ನ ತಮ್ಮ ವಿಚಾರಿಸಿದ. ಆದರೆ ಅವರು ಉಲ್ಲೇಖಿಸಿದ ಕವಿ ಸುಬ್ರಹ್ಮಣ್ಯಯ್ಯ ನಮ್ಮ ಅಜ್ಜ ಆಗಿರಲಿಲ್ಲ. ಆದರೆ ಕೆಳದಿಯ ಗುಂಡಾಜೋಯಿಸರನ್ನು ಸಂಪರ್ಕಿಸಲು ನೀಡಿದ ಅವರ ಸಲಹೆ ಮಾತ್ರ ಅತ್ಯಂತ ಅಮೂಲ್ಯವಾದುದಾಗಿತ್ತು. ಅವರ ಸಲಹೆಯಂತೆ ಕೆಳದಿ ಗುಂಡಾಜೋಯಿಸರನ್ನು ನನ್ನ ತಮ್ಮ ಸಂಪರ್ಕಿಸಿ ವಿಚಾರಿಸಿದಾಗ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಯಿತು. ಶ್ರೀ ಗುಂಡಾಜೋಯಿಸರ ಬಳಿ ಇದ್ದ ಕವಿಮನೆತನದ ವಂಶವೃಕ್ಷದ ವಿವರಗಳು ನಮ್ಮ ವಂಶವೃಕ್ಷದ ವಿವರಗಳಿಗೆ ತಾಳೆಯಾಯಿತು. ನವ್ಮ್ಮ ವಂಶವೃಕ್ಷದಲ್ಲಿನ ಮೇಲಿನ ಮೂರು ತಲೆಮಾರುಗಳ ವಿವರ ಅಲ್ಲಿನ ವಂಶವೃಕ್ಷದ ಕೆಳಗಿನ ಮೂರು ತಲೆಮಾರುಗಳ ವಿವರಗಳಿಗೆ ಹೊಂದಿಕೆಯಾಗುತ್ತಿದ್ದವು. ಎರಡು ವಂಶವೃಕ್ಷದಲ್ಲಿನ ಕೈಬಿಟ್ಟ ಕೊಂಡಿಗಳು ಸರಿಯಾಗಿ ಕೂಡಿಕೊಂಡವು. ಶ್ರೀ ಗುಂಡಾಜೋಯಿಸರ ಹತ್ತಿರವಿದ್ದ ವಂಶವೃಕ್ಷದಲ್ಲಿ ಹೆಸರಿಸಿದ್ದ ಬಂಧುಗಳನ್ನು ವಿಚಾರಿಸಲಾಗಿ ಅವರು ನಮ್ಮ ಗೋತ್ರದವರೇ ಆಗಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಅಜ್ಜ ಸುಬ್ರಹ್ಮಣ್ಯಯ್ಯನವರನ್ನು ಕಂಡಿದ್ದವರು, ಕೇಳಿದ್ದವರೇ ಆಗಿದ್ದಲ್ಲದೆ ನಮ್ಮ ಅಜ್ಜ ಅವರುಗಳ ಮನೆಗೆ ಹೋಗಿಬರುತ್ತಿದ್ದುನ್ನು ಧೃಢಪಡಿಸಿದ್ದು ಸಂಬಂಧ ಸರಪಳಿ ಒಂದಾಗಿದ್ದುದನ್ನು ಖಚಿತಪಡಿಸಿತು. ಕವಿಮನೆತನದ ಶ್ರೀ ಕೆಳದಿ ರಾಮಮೂರ್ತಿಯವರ ಬಳಿ ಇದ್ದ ವಂಶವೃಕ್ಷ ಸಹ ನಮ್ಮ ವಂಶವೃಕ್ಷದ ಪೂರ್ವಜರ ವಿವರಗಳೊಂದಿಗೆ ಹೊಂದಿಕೊಳ್ಳುತ್ತಿತ್ತು. ಹಲವಾರು ರೀತಿಯಲ್ಲಿ ಪರಿಶೀಲಿಸಿದಾಗ ವಿಷಯ ಮತ್ತಷ್ಟು ದೃಢಪಟ್ಟಿತು. ನಾವು ಕವಿಮನೆತನದವರೆಂದು ತಿಳಿದು ನಮಗೆ ಅತೀವ ಸಂತೋಷವಾಯಿತು. ೧೨ ತಲೆಮಾರುಗಳ ವಿವರವಿರುವ ಕ್ರೋಢೀಕರಿಸಿದ ವಂಶವೃಕ್ಷದಲ್ಲಿ ಹೆಸರಿಸಿದವರ ಮತ್ತು ಈಗ ಇರುವವರನ್ನು ಸಂಪರ್ಕಿಸುವ ಮಹತ್ವದ ಕೆಲಸ ಸೇರಿದಂತೆ ಸಫಲ ಅನ್ವೇಶಣೆ ಮಾಡಿದ ಸುರೇಶ ಮತ್ತು ಅವನ ಸಹಕಾರಿಗಳಿಗೆ ಅಭಿನಂದನೆ ಸಲ್ಲಬೇಕು. ಹುಡುಕುವ ಕಾರ್ಯದಲ್ಲಿ ಸ್ವಜನರೂ ಸೇರಿದಂತೆ ಇತರರಿಂದಲೂ ಕೆಲವರ ಅಪಹಾಸ್ಯ, ನಿಂದೆ, ಸಂಶಯ, ತಿರಸ್ಕಾರ, ಅಲಕ್ಷ್ಯ, ಅಸಹಕಾರಗಳ ಜೊತೆಗೆ ಮೆಚ್ಚುಗೆ ಸಹಕಾರಗಳೂ ಬೆರೆತು ಒಳ್ಳೆಯ ಅನುಭವ ದೊರಕಿತು.     ನಾವು ಕೆಳದಿ ಕವಿಮನೆತನದವರೆಂದು ತಿಳಿದ ನಂತರದಲ್ಲಿ ಹಲವಾರು ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆಯುತ್ತಾ ಹೋದವು. ಈ ಕುರಿತು ಮುಂದಿನ ಲೇಖನದಲ್ಲಿ ತಿಳಿಸುವೆ.


ದಿ. ಕವಿ ಸುಬ್ರಹ್ಮಣ್ಯಯ್ಯ

ದಿ. ಕವಿವೆಂಕಟಸುಬ್ಬರಾವ್


ತಂದೆ ಕೊಟ್ಟಿದ್ದ ವಿವರ ಬರೆದಿಟ್ಟುಕೊಂಡಿದ್ದ ದಿ. ವೆಂಕಟಸುಬ್ಬರಾಯರು

ವೆಂಕಟಸುಬ್ಬರಾವ್ - ಸೀತಮ್ಮರವರ ವಿವಾಹ ಆಹ್ವಾನ ಪತ್ರಿಕೆ
(ಕವಿ ವೆಂಕಣ್ಣಯ್ನನವರ ಮಗ ಕವಿ ಸುಬ್ರಹ್ಮಣ್ಯಯ್ಯನ ವಿಜ್ಞಾಪನೆಯ ಉಲ್ಲೇಖವಿದೆ)

ಮೊದಲು ಸಿದ್ಧಪಡಿಸಿದ್ದ ವಂಶವೃಕ್ಷ

ಶ್ರೀ ಗುಂಡಾಜೋಯಿಸರು ಒದಗಿಸಿದ ದಾಖಲೆ

ಶ್ರೀ ಕವಿರಾಮಮೂರ್ತಿಯವರು ಕೊಟ್ಟ ದಾಖಲೆ

ಕ್ರೋಢೀಕರಿಸಿದ ನಂತರದ ವಂಶವೃಕ್ಷ

ಕವಿನಾಗರಾಜ್
ಕವಿಸುರೇಶ್

ಶನಿವಾರ, ಆಗಸ್ಟ್ 20, 2011

ಧೊಂಡಿಯ ವಾಘನ ಖಡ್ಗ

     ಭಾರತ ಆಂಗ್ಲರ ಗುಲಾಮಗಿರಿಗೆ ಒಳಗಾಗಿದ್ದ ಕಾಲದ ಘಟನೆಯಿದು. ಕರ್ನಾಟಕವೂ ಸಹ  ಆಂಗ್ಲರ ಆಡಳಿತಕ್ಕೆ ಅಷ್ಟು ಸುಲಭವಾಗಿ ಪ್ರತಿರೋಧವಿಲ್ಲದೆ ಒಳಪಟ್ಟಿರಲಿಲ್ಲ. ಇಂತಹ ಪ್ರತಿರೋಧ ಒಡ್ಡಿ ಬ್ರಿಟಿಷರ ನಿದ್ದೆಗೆಡಿಸಿದವರಲ್ಲಿ ಧೊಂಡಿಯ ವಾಘ್ ಸ್ಮರಿಸಬೇಕಾದ ಹೆಸರು. ಹಿಂದಿನ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಪ್ರಸ್ತುತ ದಾವಣಗೆರೆ ಜಿಲ್ಲೆಯಲ್ಲಿರುವ ಚನ್ನಗಿರಿಯವನು ಧೊಂಡಿಯವಾಘ. ಕಟ್ಟುಮಸ್ತಾದ ದೇಹಧಾರ್ಢ್ಯ ಹೊಂದಿದ್ದ ಇವನು ೧೭೯೪ರಲ್ಲಿ ಟಿಪ್ಪುಸುಲ್ತಾನನ ಸೈನ್ಯಕ್ಕೆ ಸೇರಿದ. ಪರಧರ್ಮಸಹಿಷ್ಣು ಎಂದು ಬಣ್ಣಿಸಲಾಗುತ್ತಿರುವ ಮೈಸೂರು ಹುಲಿ ಟಿಪ್ಪುಸುಲ್ತಾನ್ ಇವನನ್ನು ಮುಸ್ಲಿಮನಾಗಿ ಮತಾಂತರ ಹೊಂದಲು ಒತ್ತಾಯಿಸಿದರೂ, ಪ್ರಲೋಭನೆಗಳನ್ನು ಒಡ್ಡಿದರೂ ಒಪ್ಪದ ಇವನನ್ನು ಬಲವಂತವಾಗಿ ಮತಾಂತರಿಸಲಾಯಿತು. ಆದರೂ ಸ್ವಧರ್ಮ ಬಿಡಲು ಒಪ್ಪದ ಇವನನ್ನು ಬಂಧಿಸಿ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿರಿಸಿದರು. ಟಿಪ್ಪು ಹತನಾಗುವವರೆಗೆ ಅಂದರೆ ೧೭೯೯ರವರೆಗೆ ಸೆರೆಮನೆಯಲ್ಲೇ ಸುಮಾರು ೫ ವರ್ಷಗಳ ಕಾಲ ಕಳೆದಿದ್ದ ಧೊಂಡಿಯ ನಂತರ ಅಲ್ಲಿಂದ ಪಾರಾಗಿ ಬಿದನೂರಿಗೆ ಬಂದು ತನ್ನದೇ ಒಂದು ಸೈನ್ಯ ಕಟ್ಟಿದ. ನೌಕರಿಯಿಂದ ತೆಗೆಯಲ್ಪಟ್ಟ ಸ್ವಾಭಿಮಾನಿ ನೌಕರರು, ಸೈನಿಕರು, ಬ್ರಿಟಿಷರ ಆಳ್ವಿಕೆಯಿಂದ ಬೇಸರಗೊಂಡಿದ್ದ ಯುವಕರು ಅವನೊಂದಿಗೆ ಸೇರಿಕೊಂಡರು. 
     ಬಿದನೂರು - ಶಿಕಾರಿಪುರ ಪ್ರದೇಶದಿಂದ ೧೮೦೦ರ ಸುಮಾರಿನಲ್ಲ್ಲಿ ಬ್ರಿಟಿಷರ ವಿರುದ್ಧ ಕ್ರಾಂತಿಯ ಬಾವುಟ ಹಾರಿಸಿದ ಇವನೊಂದಿಗೆ ಸುತ್ತಮುತ್ತಲಿನ ರಾಜರುಗಳು ಕೈಜೋಡಿಸಿದ್ದರು. ಕರಾವಳಿ ಪ್ರದೇಶದಲ್ಲಿ ಜಮಾಲಾಬಾದ್‌ನಿಂದ ಸೋದೆಯವರೆಗೆ ಮತ್ತು ಘಟ್ಟ ಪ್ರದೇಶದ ಮೇಲೆ ಬೆಳಗಾಮ್, ರಾಯಚೂರಿನವರೆಗೆ ಸಹ ಆತನ ಕ್ರಾಂತಿಯ ವ್ಯಾಪ್ತಿ ವಿಸ್ತರಿಸಿತ್ತು. ಧೊಂಡಿಯ ವಾಘ್‌ನನ್ನು ಮಣಿಸುವುದು ಆಂಗ್ಲರಿಗೆ ಸುಲಭವಾಗಿರಲಿಲ್ಲ. ಗೆರಿಲ್ಲಾ ಮಾದರಿಯಲ್ಲಿ ಹೊಂಚುಹಾಕಿ ಆಂಗ್ಲ ಸೈನಿಕರ ಮೇಲೆ ದಾಳಿ ಮಾಡಿ ಸಾಕಷ್ಟು ಕಷ್ಟ-ನಷ್ಟ ಉಂಟುಮಾಡಿ ಅವರು ಎಚ್ಚೆತ್ತು ತಿರುಗಿ ಬೀಳುವ ವೇಳೆಗೆ ಕಣ್ಮರೆಯಾಗುತ್ತಿದ್ದ ಅವನನ್ನು ಹಿಡಿಯುವ ಸಲುವಾಗಿಯೇ ಲಾರ್ಡ್ ವೆಲ್ಲೆಸ್ಲಿ  ಸೈನಿಕರ ಒಂದು ಪ್ರತ್ಯೇಕ ತಂಡವನ್ನೇ ನಿಯೋಜಿಸಿದ್ದ. ಒಂದೊಮ್ಮೆ ಈರೀತಿಯ ಹೋರಾಟ ಮಾಡಿದ ಸಂದರ್ಭದಲ್ಲಿ ಆಂಗ್ಲ ಸೈನಿಕರಿಂದ ತಪ್ಪಿಸಿಕೊಳ್ಳಲು ಹರಿಯುತ್ತಿದ್ದ ದೊಡ್ಡ ಹಳ್ಳವನ್ನು ತನ್ನ ಕುದುರೆಯನ್ನು ಹುರಿದುಂಬಿಸಿ ಹಾರಿಸಿದ ಧೀರನವನು. ಇಂತಹುದೇ ಮತ್ತೊಂದು ಸಂದರ್ಭದಲ್ಲಿ ಶಿಕಾರಿಪುರದ ಹುಚ್ಚರಾಯಸ್ವಾಮಿ (ಭ್ರಾಂತೇಶ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಆಂಜನೇಯ)  ದೇವಾಲಯದಲ್ಲಿ ಅಡಗಿ ರಕ್ಷಣೆ ಪಡೆದಿದ್ದು, ರಕ್ಷಿಸಿದ್ದಕ್ಕೆ ಕೃತಜ್ಞತೆಯಾಗಿ ತನ್ನ ಖಡ್ಗವನ್ನು ದೇವರಿಗೆ ಸಮರ್ಪಿಸಿದ್ದ ಧೊಂಡಿಯ ವಾಘ.
                                      ಧೊಂಡಿಯವಾಘನ ಖಡ್ಗ
     'ಎರಡು ಲೋಕಗಳ ಒಡೆಯ' ಎಂಬ ಬಿರುದು ಸಂಪಾದಿಸಿದ್ದ ಹುಲಿಯಂತೆಯೇ (ವಾಘ್ = ಹುಲಿ) ಹೋರಾಡಿದ ಅವನನ್ನು   ಆಂಗ್ಲರು ಶಿವಮೊಗ್ಗದ ಸಮೀಪ ಸುತ್ತುವರೆದಾಗ ಅಲ್ಲಿಂದ ತಪ್ಪಿಸಿಕೊಂಡು ಉತ್ತರ ಕರ್ನಾಟಕಕ್ಕೆ ಹೋದಾಗ ಮರಾಠಾ ಸೇನಾಪತಿ ಗೋಖಲೆಯಿಂದಲೂ ಪ್ರತಿರೋಧ ಎದುರಿಸಬೇಕಾಯಿತು. ಅಲ್ಲಿಂದಲೂ ತಪ್ಪಿಸಿಕೊಂಡು ಜೂನ್, ೧೮೦೦ರಲ್ಲಿ ತುಂಗಭದ್ರಾ - ಮಲಪ್ರಭಾ ನದಿಗಳ ನಡುವಿನ ಪ್ರದೇಶಕ್ಕೆ ಬಂದ ಇವನು ನಂತರದಲ್ಲಿ ಹೊಂಚು ಹಾಕಿ ೧೦೦೦೦ ಕುದುರೆ ಸವಾರರು, ೫೦೦೦ ಕಾಲ್ದಳ, ೮ಫಿರಂಗಿಗಳನ್ನು ಹೊಂದಿದ್ದ ಪ್ರಬಲ ಮರಾಠಾ ಸರದಾರ ಗೋಖಲೆಯನ್ನು ಎದುರಿಸಿ ಕೊಂದುಹಾಕಿದ್ದು ಆತನ ಧೈರ್ಯದ ಪ್ರತೀಕವೇ ಸರಿ. ಲಾರ್ಡ್ ವೆಲ್ಲೆಸ್ಲಿ ಧೊಂಡಿಯನನ್ನು ಮಲಪ್ರಭಾ ಬಲದಂಡೆಯ ಸಮೀಪಕ್ಕೂ ಬಂದು ಬೆನ್ನಟ್ಟಿದಾಗ ತನ್ನ ಸಾಮಗ್ರಿಗಳು, ಆನೆಗಳು, ಕುದುರೆಗಳನ್ನು ಬಿಟ್ಟು ಪುನಃ ತಪ್ಪಿಸಿಕೊಂಡು ಶಿರಹಟ್ಟಿಗೆ ಬಂದ. ನಿಜಾಮನ ಸೀಮೆ ತಲುಪಿದ ಇವನನ್ನು ಅಲ್ಲಿಯೂ ಬೆನ್ನಟ್ಟಿದ ಆಂಗ್ಲರು ಕೋಣಗಲ್ಲು ಎಂಬಲ್ಲಿ ಸುತ್ತುಗಟ್ಟಿದಾಗ ಧೊಂಡಿಯವಾಘ ೧೦-೦೯-೧೮೦೦ರಲ್ಲಿ ವೀರಮರಣ ಹೊಂದಿದ. ಅವಕಾಶ ಸಿಕ್ಕಿದ್ದರೆ ಧೊಂಡಿಯವಾಘ ಎರಡನೆಯ ಹ್ಶೆದರಾಲಿ ಆಗುತ್ತಿದ್ದ ಎಂಬುದು ಪ್ರಸಿದ್ಧ ಇತಿಹಾಸಕಾರ ಎಡ್ವರ್ಡ್ ಥಾರ‍್ನ್‌ಟನ್ನನ ಉದ್ಗಾರ. ಕುಟಿಲತೆಗೆ ಹೆಸರಾದ ಬ್ರಿಟಿಷರು ಕೇವಲ ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹದಿಂದ ಬೆದರಿ ದೇಶ ಬಿಟ್ಟು ಹೋದರು ಎಂಬುದು ಸರಿಯಲ್ಲ ಮತ್ತು ವಾಸ್ತವತೆಗೆ ಮಾಡಿದ ಅಪಚಾರವಾಗುತ್ತದೆ.  ಧೊಂಡಿಯವಾಘನಂತಹ ಅಸಂಖ್ಯಾತ ಹೋರಾಟಗಾರರ ಪಾಲು ಮಹತ್ವದ್ದಾಗಿದ್ದು  ಅವರೆಲ್ಲರ ಸಾಮೂಹಿಕ ಹೋರಾಟದ ಫಲವೇ ಸ್ವಾತಂತ್ರ್ಯ. ಅಂತಹವರನ್ನು ಗುರುತಿಸಿ ಗೌರವಿಸುವುದು, ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. 
                             
   ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಾಲಯ
     ಧೊಂಡಿಯವಾಘ್ ಶಿಕಾರಿಪುರದ ಹುಚ್ಚರಾಯಸ್ವಾಮಿಗೆ ಅರ್ಪಿಸಿದ್ದ ಖಡ್ಗ ಈಗಲೂ ದೇವಾಲಯದಲ್ಲಿದೆ. ವಿಜಯದಶಮಿಯಂದು ಈ ಖಡ್ಗದಿಂದಲೇ ಬನ್ನಿ ಕಡಿಯುವ ಸೌಭಾಗ್ಯ ಶಿಕಾರಿಪುರದ ತಾಲ್ಲೂಕು ದಂಡಾಧಿಕಾರಿಯವರಿಗೆ ಸಿಗುತ್ತದೆ. ಎರಡು ವರ್ಷಗಳು ಈ ಖಡ್ಗವನ್ನು ಹಿಡಿಯುವ ಮತ್ತು ಬನ್ನಿ ಕಡಿಯುವ ಪುಣ್ಯ ನನಗೆ ಸಿಕ್ಕಿತ್ತು. ಬ್ರಿಟಿಷರನ್ನು ನಡುಗಿಸಿದ ಧೊಂಡಿಯವಾಘನ ಖಡ್ಗವನ್ನು ನಾನು ಹಿಡಿದು ಬಾಳೆಯ ಕಂದನ್ನು ಕಡಿಯುವಾಗ ಹೆಮ್ಮೆಯಿಂದ ಉಬ್ಬಿದ್ದು ಸುಳ್ಳಲ್ಲ. ಆ ಕ್ಷಣಗಳನ್ನು ನೆನೆಸಿಕೊಂಡು ಈಗಲೂ ಪುಲಕಿತನಾಗುತ್ತಿರುತ್ತೇನೆ. 
*************************
-ಕ.ವೆಂ.ನಾಗರಾಜ್. 
(ಆಧಾರ: ಜ್ಞಾನಗಂಗೋತ್ರಿ -ಕಿರಿಯರ ವಿಶ್ವಕೋಶ-ಸಂಪುಟ-೭)


ಗುರುವಾರ, ಆಗಸ್ಟ್ 18, 2011

ಒಳ್ಳೆಯವರೇ ಕೆಟ್ಟವರು !


ಒಳ್ಳೆಯವರೇ ಕೆಟ್ಟವರು, 
ಏಕೆಂದರೆ ಅವರು ಒಳ್ಳೆಯವರು!


ಇದ್ದದ್ದು ಇದ್ದ ಹಾಗೆ ಹೇಳುವರು,
ಎದೆಗೆ ಒದೆಸಿಕೊಳ್ಳುವರು;
ಸಾವರಿಸಿಕೊಂಡೇಳುವ ಮುನ್ನ
ಮತ್ತೆ ಬಡಿಸಿಕೊಳ್ಳುವರು;
ಏಕೆಂದರೆ ಅವರು ಒಳ್ಳೆಯವರು!


ಲಂಚ ಬೇಡ ಬೇಡವೆನುವರು;
ಬದುಕಲರಿಯದ ಮೂರ್ಖರು;
ಲಂಚ ಕೊಡಲು ಮನಸಿರದವರು;
ಕಾಯ್ದು ಬಸವಳಿಯುವರು;
ಏಕೆಂದರೆ ಅವರು ಒಳ್ಳೆಯವರು!
****************
-ಕ.ವೆಂ.ನಾಗರಾಜ್.

ರಾಮಣ್ಣನ ತಪ್ಪು


     ರಾಮಣ್ಣ ದೂರದೂರಿನಲ್ಲಿದ್ದ ತನ್ನ ಹತ್ತಿರದ ಬಂಧು ಜಾನಕಪ್ಪನೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದ. ಯಾವುದೋ ಕಾರಣಕ್ಕೆ ಅವರ ನಡುವೆ ಸಂಬಂಧ ಅಷ್ಟೊಂದು ಸುಮಧುರವಾಗಿರಲಿಲ್ಲ. ಹಾಗೆಂದು ಅವರಲ್ಲಿ ಪರಸ್ಪರ ದ್ವೇಷವಿರಲಿಲ್ಲ. ಸಂಬಂಧ ಚೆನ್ನಾಗಿರಲು ಇತರ ಬಂಧುಗಳು ಬಿಡುತ್ತ್ತಿರಲಿಲ್ಲ. ರಾಮಣ್ಣ ಸಂಬಂಧ ಸರಿಪಡಿಸಲು ಮಾಡಿದ ಪ್ರಯತ್ನ ಈಡೇರುತ್ತಿರಲಿಲ್ಲ. ಈ ಕೊರಗು ಅವನನ್ನು ಕಾಡುತ್ತಲೇ ಇತ್ತು. ದೂರವಾಣಿಯಲ್ಲಿ ಮಾತನಾಡುತ್ತಿದ್ದಂತೆ ಅದೇ ಊರಿನಲ್ಲಿದ್ದ ರಾಮಣ್ಣನ ಅಣ್ಣ ತಮ್ಮಣ್ಣ ಜಾನಕಪ್ಪನ ಮನೆಗೆ ಬಂದ. ತಮ್ಮಣ್ಣ ಬಂದ ವಿಷಯ ತಿಳಿಸಿದ ಜಾನಕಪ್ಪ ಆಮೇಲೆ ಫೋನು ಮಾಡುವುದಾಗಿ ಹೇಳಿದ. ಸರಿ ಎಂದ ರಾಮಣ್ಣ ಫೋನು ಜೇಬಿನಲ್ಲಿಡಲು ಹೋದಾಗ ಜಾನಕಪ್ಪ ಮತ್ತು ತಮ್ಮಣ್ಣ ಮಾತನಾಡುತ್ತಿರುವುದು ಕೇಳಿಸಿತು. ಜಾನಕಪ್ಪ ಫೋನನ್ನು ಡಿಸ್ ಕನೆಕ್ಟ್ ಮಾಡಿರಲಿಲ್ಲವೆಂದು ತೋರುತ್ತದೆ. ತನ್ನ ಹೆಸರು ಪ್ರಸ್ತಾಪವಾಗಿದ್ದನ್ನು ಕೇಳಿದ ರಾಮಣ್ಣ ಫೋನನ್ನು ಜೇಬಿಗಿಡಲು ಹೋಗಿದ್ದವನು ಮತ್ತೆ ಕಿವಿಗಾನಿಸಿದ. ಅವರಿಬ್ಬರೂ ತನ್ನ ಬಗ್ಗೆ ದೂರುತ್ತಾ ಮಾತನಾಡುತ್ತಿದ್ದುದು ಕೇಳಿಸಿಕೊಂಡ. ತಾನು ಮಾಡದಿದ್ದುದನ್ನು ಮಾಡಿದ್ದೇನೆಂಬಂತೆ ಅವರಿಬ್ಬರೂ ಮಾತನಾಡುತ್ತಿದ್ದುದು ಅವನಿಗೆ ಬೇಸರ ತರಿಸಿತ್ತು. ತಾನು ಆರೀತಿ ಮಾಡದಿದ್ದುದು ಅವರಿಬ್ಬರಿಗೂ ಗೊತ್ತಿದ್ದರೂ ಹಾಗೆ ಮಾತನಾಡಿದ್ದು ಜಿಗುಪ್ಸೆ ತರಿಸಿತ್ತು. ಸ್ವಲ್ಪ ಹೊತ್ತು ಕೇಳಿ ರಾಮಣ್ಣನೇ ಫೋನನ್ನು ಡಿಸ್ ಕನೆಕ್ಟ್ ಮಾಡಿದ. ಎಷ್ಟೋ ಹೊತ್ತಿನ ನಂತರ ರಾಮಣ್ಣ ತಮ್ಮಣ್ಣನಿಗೆ ನೀವಿಬ್ಬರೂ ಮಾತನಾಡಿದ ವಿಷಯ ತನಗೆ ಗೊತ್ತಾಯಿತು ಎಂಬ ಸಂಗತಿ ಹೇಳಿದಾಗ  ತಮ್ಮಣ್ಣ ಕೂಗಾಡಿದ. ಇಬ್ಬರು ಮಾತನಾಡುತ್ತಿದ್ದಾಗ ಅದನ್ನು ಕದ್ದು ಕೇಳಿದ ನಡವಳಿಕೆ ಎಷ್ಟರ ಮಟ್ಟಿಗೆ ಸರಿ ಎಂದ, ಅನ್ ಡ್ಯೂ ಅಡ್ವಾಂಟೇಜ್ ಪಡೆದುಕೊಂಡೆಯೆಂದು ದೂಷಿಸಿದ. ಅವನ ಹತ್ತಿರ ಮಾತನಾಡಿ ಪ್ರಯೋಜನವಿಲ್ಲವೆಂದು ರಾಮಣ್ಣ ಸುಮ್ಮನಾದರೂ ತಮ್ಮಣ್ಣ ತಮ್ಮ ಮಾತನ್ನು ಕದ್ದು ಕೇಳಿದ ರಾಮಣ್ಣನ ಬಗ್ಗೆ ಅಪಪ್ರಚಾರಕ್ಕೆ ತೊಡಗಿದ. ಯಾರೇ ಆಗಲಿ, ಯಾರಾದರೂ ತನ್ನ ಬೆನ್ನ ಹಿಂದೆ ತನ್ನ ವಿರುದ್ಧ ಮಾತನಾಡುತ್ತಿರುವ ವಿಷಯ ಕಿವಿಗೆ ಬಿದ್ದರೆ ಅದನ್ನು ಕೇಳಿಸಿಕೊಳ್ಳುವುದು ತಪ್ಪು ಎಂದು ತಿಳಿದು ಸುಮ್ಮನೆ ಹೋಗುತ್ತಾರೆಯೇ, ಅಥವಾ ಕೇಳಿಸಿಕೊಳ್ಳುತ್ತಾರೆಯೇ, ಬೇರೆಯವರ ವಿಷಯವಾದರೆ ಕೇಳಿಸಿಕೊಳ್ಳುವುದು ಸರಿಯಲ್ಲ ಆದರೆ ತನ್ನ ಬಗ್ಗೆಯೇ ಮಾತನಾಡುತ್ತಿದ್ದರೆ ಕೇಳಿಸಿಕೊಳ್ಳದೇ ಇರುತ್ತಾರೆಯೇ ಎಂಬ ಸಾಮಾನ್ಯ ಸಂಗತಿ ತಮ್ಮಣ್ಣನಿಗೆ ತಿಳಿಯದೇ ಹೋಯಿತಲ್ಲಾ ಎಂದು ರಾಮಣ್ಣ ನೊಂದುಕೊಂಡ.
*********************************

ಸೋಮವಾರ, ಆಗಸ್ಟ್ 15, 2011

ಮೂಢ ಉವಾಚ - 66


ವಿಷವಿರುವವರೆಗೆ ಆರೋಗ್ಯವೆಲ್ಲಿ
ವಿಷಯ ತುಂಬಿರುವಲ್ಲಿ ಮುಕ್ತಿಯೆಲ್ಲಿ |
ಅರಿವು ಬಹುದೆಲ್ಲಿ ಅಹಮಿಕೆಯಿರುವಲ್ಲಿ
ಸಿದ್ಧಿಯದೆಲ್ಲಿ ಅರಿವು ಇರದಲ್ಲಿ ಮೂಢ ||


ಶ್ರವಣಕೆ ಶತಪಾಲು ಮಿಗಿಲು ಮನನ
ಮನನಕೆ ಶತಪಾಲು ಮಿಗಿಲನುಸರಣ |
ಅನುಸರಣಕಿಂ ಮಿಗಿಲಲ್ತೆ ನಿರ್ವಿಕಲ್ಪ
ನಿರ್ವಿಕಲ್ಪತೆಯಿಂ ಅರಿವು ಮೂಢ ||


ಎಲುಬಿರದ ನಾಲಿಗೆಯ ಮೆದುವೆಂದೆಣಿಸದಿರು
ಭದ್ರ ಹೃದಯವನು ಛಿದ್ರವಾಗಿಸಬಹುದು|
ಮನ ಮನೆಗಳ ಮುರಿದು ಕ್ಲೇಶ ತರಬಹುದು
ಕೆನ್ನಾಲಿಗೆಯ ತಣಿಪುದೆಂತೋ ಮೂಢ||


ನೊಂದಮನಕೆ ಶಾಂತಿಯನು ನೀಡುವುದು
ಮನವ ನೋಯಿಸಿ ನರಳಿಸುವುದು ನಾಲಿಗೆ|
ಜೀವವುಳಿಸೀತು ಹಾಳುಗೆಡವೀತು 
ನಾಲಿಗೆಯೆರಡಲಗಿನ ಕಠಾರಿ ಮೂಢ|| 

***************
-ಕ.ವೆಂ.ನಾಗರಾಜ್.

ಶುಕ್ರವಾರ, ಆಗಸ್ಟ್ 12, 2011

ನಾಗರ ಪಂಚಮಿ - ಪರಿಸರ ಪಂಚಮಿಯಾಗಲಿ




     ನಾಗರಪಂಚಮಿಯಂದು ನಾಗರನಿಗೆ ಹಾಲೆರೆದು, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುವ ಸಂಪ್ರದಾಯ ಚಾಲನೆಯಲ್ಲಿದೆ. ನಾಗರ ಪಂಚಮಿ ಆಚರಣೆ ಪರಂಪರೆಯಿಂದ ಮುಂದುವರೆಯಲು ಹಲವಾರು ಕಾರಣಗಳಿರಬಹುದು, ಅದಕ್ಕಾಗಿ ಹಲವಾರು ಪುರಾಣಕಥೆಗಳು ಇರಬಹುದು, ಹಲವಾರು ಕ್ಷೇತ್ರಗಳು ನಾಗಪೂಜೆಯ ಕಾರಣಕ್ಕೇ ಪ್ರಸಿದ್ಧವಾಗಿರುವುದೂ ಸತ್ಯ. ಎಲ್ಲಾ ಹಾವುಗಳನ್ನು ಪೂಜಿಸದೆ ನಾಗರವನ್ನೇ ಆಯ್ಕೆ ಮಾಡಿಕೊಳ್ಳಲು ಅದರ ಚುರುಕುತನ, ನಯನ ಮನೋಹರ ರೂಪ, ಹೊಂದಿರುವ ಭಯಂಕರ ವಿಷ ಹಾಗೂ ಭಯ ಸಹ ಕಾರಣವಾಗಿರಬಹುದು. ನಾಗರಹಾವನ್ನು ಕಾಮ ಹಾಗೂ ದ್ವೇಷಕ್ಕೆ ಸಂಕೇತವಾಗಿಯೂ ಬಳಸುತ್ತಿರುವುದು ವೇದ್ಯದ ಸಂಗತಿ.
     ನಾಗರಪಂಚಮಿಯ ಹಬ್ಬದಲ್ಲಿ ಕುಟುಂಬದವರು ಹಬ್ಬದ ಅಡಿಗೆ ಮಾಡಿ, ಹೊಸ ಬಟ್ಟೆಯುಟ್ಟು ಸಂಭ್ರಮಿಸುವುದು, ಸೋದರ-ಸೋದರಿಯರು ಬಾಂಧವ್ಯದ ಬೆಸುಗೆ ಗಟ್ಟಿ ಮಾಡಿಕೊಳ್ಳುವುದು ಒಳ್ಳೆಯದೇ. 'ನಾಗದೇವ'ನಿಗೆ ಸಂತುಷ್ಟಗೊಳಿಸಲು, ಅರಿತೋ, ಅರಿಯದೆಯೋ ತಪ್ಪಾಗಿದ್ದಲ್ಲಿ ತಮಗೆ ಕೇಡಾಗದಿರಲಿ ಎಂಬ ಬೇಡಿಕೆಗಾಗಿ, ಮಕ್ಕಳ ಭಾಗ್ಯ(?)ಕ್ಕಾಗಿ ನಾಗಪೂಜೆಯನ್ನು, ಪ್ರಾಯಶ್ಚಿತ್ತಕಾರ್ಯವನ್ನು ಹಬ್ಬದ ದಿನಗಳಲ್ಲದೆ ಇತರ ದಿನಗಳಲ್ಲೂ ಆಚರಿಸುವವರಿದ್ದಾರೆ.
     ಪ್ರಸ್ತುತ ಆಚರಣೆಯಲ್ಲಿರುವ ಹಾಲೆರೆಯುವ ಪದ್ಧತಿಯಿಂದ ನಾಗದೇವ ಸಂತುಷ್ಟಗೊಳ್ಳುವನೇ ಎಂಬ ಕುರಿತು ವಿಚಾರ ಮಾಡುವುದು ಒಳ್ಳೆಯದು. ಬಸವಣ್ಣನವರ ವಚನ "ಕಲ್ಲ ನಾಗರ ಕಂಡರೆ ಹಾಲನೆರೆವರಯ್ಯಾ, ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ" ಎಂಬುದು ಮಾನವನ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಹಾವು ಹಾಲು ಕುಡಿಯುವುದೇ, ಒಂದು ವೇಳೆ ಕುಡಿದರೂ ಅದು ಇಷ್ಟವಾದ ಆಹಾರವೇ ಎಂಬುದು ಸಂದೇಹಾಸ್ಪದ. ಒಂದು ವೇಳೆ ಹಾಲು ಅದಕ್ಕೆ ಇಷ್ಟವಾದ ಆಹಾರವೆಂದೇ ಇಟ್ಟುಕೊಂಡರೂ ಹುತ್ತಕ್ಕೆ ಹಾಲೆರೆದರೆ ಉದ್ದೇಶ ಈಡೇರುವುದೇ? ಎರೆಯುವುದಾದರೆ ಹಾವಿಗೇ ಎರೆಯಲಿ. ವರ್ಷಕ್ಕೊಮ್ಮೆ ಹಾಲೆರೆದರೆ ಉಳಿದ ೩೬೪ ದಿನಗಳಲ್ಲಿ ಅದಕ್ಕೆ ಹಾಲು ಎಲ್ಲಿ ಸಿಗುತ್ತದೆ? ಯೋಚಿಸಬೇಕಾದ ವಿಷಯವಿದಲ್ಲವೇ? ಹಾವು ಹಾಲು ಕುಡಿಯುವುದೆಂದೇನೂ ಇಲ್ಲ. ಕುಡಿಯಲು ನೀರಿಲ್ಲದಿದ್ದರೆ, ಬಾಯಾರಿಕೆಯಾದರೆ ಕುಡಿಯುತ್ತದೆ. ಹಾಲನೆರೆಯುವ ಶೇ. 95ಕ್ಕೂ ಹೆಚ್ಚು ಜನರು ಹಬ್ಬದ ದಿನದಂದು ಹುತ್ತವನ್ನು ಹುಡುಕಿಕೊಂಡು ಹೋಗಿ ಹಾಲು ಎರೆಯುವರು. ಹುತ್ತಕ್ಕೆ ಹಾಲು ಹಾಕುವುದರಿಂದ ಹುತ್ತಕ್ಕೆ ಹಾನಿಯಾಗುತ್ತದೆ, ಅಲ್ಲಿರಬಹುದಾದ ಹಾವಿನ ಏಕಾಂತಕ್ಕೆ ಭಂಗವಾಗುತ್ತದೆ, ಹಿಂಸೆಯಾಗುತ್ತದೆ, ತೊಂದರೆ ಅನುಭವಿಸುತ್ತದೆಯಲ್ಲವೇ? ಹೀಗೆ ತೊಂದರೆ ಕೊಟ್ಟು 'ನಾಗದೇವ' ಸಂತುಷ್ಟನಾದನೆಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ? ಸಂಪ್ರದಾಯವಾದಿಗಳು 'ಎಷ್ಟೋ ಪ್ರಶ್ನೆಗಳಿಗೆ ಸಮಂಜಸ ಉತ್ತರ ಸಿಗಲಾರದು ಮತ್ತು ಎಷ್ಟೋ ವಿಷಯಗಳು ತರ್ಕಕ್ಕೆ ನಿಲುಕಲಾರವು' ಎಂದು ಹೇಳುತ್ತಾರಾದರೂ, ಇಂತಹ ಆಚರಣೆ ಕುರಿತು ಪ್ರಶ್ನೆ ಮಾಡಬಾರದು, ತರ್ಕ ಮಾಡಬಾರದು ಎಂಬ ಅವರ ವಾದ ಸರಿಯೆಂದು ತೋರುವುದಿಲ್ಲ. ಅಪ್ಪ ಹಾಕಿದ ಆಲದಮರವೆಂದು ನೇಣು ಹಾಕಿಕೊಳ್ಳಲು ಹೋಗದೆ ಅದರ ನೆರಳಿನಲ್ಲಿ ಬಾಳಬಹುದು. 


     ನಗರ ಪ್ರದೇಶಗಳಲ್ಲಂತೂ ಹಾವಿಗೆ ತಾವೇ ಇಲ್ಲ. ಹೊರವಲಯಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಅವು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಅವುಗಳ ವಾಸಸ್ಥಾನಗಳನ್ನು ನಾಶಪಡಿಸಿ ಅವುಗಳ ಹೆಸರಿನಲ್ಲಿ ದೇವಸ್ಥಾನಗಳನ್ನು ಕಟ್ಟುತ್ತಿದ್ದಾನೆ ಮಾನವ! 


     ಉದ್ದೇಶ 'ನಾಗದೇವ'ನಿಗೆ ಸಂತುಷ್ಟಗೊಳಿಸಬೇಕು, ಆತನಿಂದ ತೊಂದರೆಯಾಗಬಾರದು ಎಂಬುದೇ ಆಗಿದ್ದಲ್ಲಿ ಹಬ್ಬವನ್ನು ಈರೀತಿ ಆಚರಿಸಬಹುದಲ್ಲವೇ?

೧. ಉರಗಗಳು ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡಬೇಕು.
೨. ತಮಗೆ ತೊಂದರೆಯಾದಾಗ ಮತ್ತು ಭಯವಾದಾಗ ಮಾತ್ರ ಹಾವುಗಳು ಕಚ್ಚುತ್ತವೆ. ಇಲ್ಲದಿದ್ದಲ್ಲಿ ಅವುಗಳಿಂದ ತೊಂದರೆಯಿಲ್ಲ. ಇಲಿಗಳು, ಕೀಟಗಳನ್ನು ಭಕ್ಷಿಸುವ ಅವು ರೈತಮಿತ್ರರು. ಜನರಲ್ಲಿ ಉರಗಗಳ ಕುರಿತು ಜಾಗೃತಿ ಮೂಡಿಸುವುದಲ್ಲದೆ ಪರಿಸರ ಸಂರಕ್ಷಣೆಯ ಕಡೆಗೆ ಗಮನ ಕೊಡಬೇಕು.
೩. ಹುತ್ತಕ್ಕೆ ಹಾಲೆರೆಯುವ ಬದಲು ಕೆಲವು ವಿಚಾರವಂತ ಮಠಾಧೀಶರು ಮಾಡುತ್ತಿರುವಂತೆ ಮಕ್ಕಳಿಗೆ ಹಾಲು ಹಂಚಬಹುದು.
೪. ಹಾವು ಅಥವ ಪ್ರಾಣಿಗಳ ಚರ್ಮ ಸುಲಿದು ತಯಾರಿಸುವ ಬೆಲ್ಟು, ಇತ್ಯಾದಿಗಳನ್ನು ಕೊಳ್ಳಬಾರದು. ಹಾವು ಬದುಕಿದ್ದಂತೆಯೇ ಹಾವಿನ ಚರ್ಮ ಸುಲಿದು, ಒದ್ದಾಡುತ್ತಿರುವ ಹಾವಿನ ದೇಹವನ್ನು ಎಸೆದು ಹೋಗುವ ಕ್ರೂರಿಗಳ ಕಾರ್ಯಕ್ಕೆ ಇದರಿಂದ ಕಡಿವಾಣ ಹಾಕಬಹುದು.
೫. ಇಂತಹ ಇತರ ಸೂಕ್ತವೆನಿಸುವ ಕಾರ್ಯಗಳನ್ನು ಕೈಗೊಳ್ಳಬಹುದು.
ಇನ್ನು ಮುಂದಾದರೂ ನಾಗರ ಪಂಚಮಿಯನ್ನು 'ಪರಿಸರ ಪಂಚಮಿ'ಯಾಗಿ ಆಚರಿಸಲಿ ಎಂಬುದು ಈ 'ನಾಗರಾಜ'ನ ಆಶಯ!
*************
-ಕ.ವೆಂ.ನಾಗರಾಜ್.

ಗುರುವಾರ, ಆಗಸ್ಟ್ 11, 2011

ಮೂಢ ಉವಾಚ - 65


ರಾಗರಹಿತ ಮನ ದೀಪದ ಕಂಬವಾಗಿ 
ಸಂಸ್ಕಾರ ಬತ್ತಿಯನು ಭಕ್ತಿತೈಲದಿ ನೆನೆಸಿ |
ದೇವನ ನೆನೆವ ಮನ ಬತ್ತಿಯನು ಹಚ್ಚಲು
ಜ್ಞಾನಜ್ಯೋತಿ ಬೆಳಗದಿಹದೆ ಮೂಢ ||


ಸತ್ವಗುಣ ಸಂಪನ್ನ ಸ್ವರ್ಗವನೆ ಸೇರುವನು
ಇದ್ದಲ್ಲೆ ಇರುವನು ರಾಜಸಿಕ ಗುಣದವನು |
ಪಶು ಪ್ರಾಣಿ ಕೀಟವಾಗುವನು ತಾಮಸಿಕ 
ಅಟ್ಟಡುಗೆಯುಣಬೇಕು ಇದು ಸತ್ಯ ಮೂಢ ||


ಸಾತ್ವಿಕತೆಯಿಂದ ಜ್ಞಾನ ಶಾಂತಿ ಆನಂದ
ರಾಜಸಿಕ ಪಡೆಯುವನು ಆಯಾಸ ನೋವ |
ಪರರ ನೋಯಿಪ ತಾಮಸವೆ ಅಜ್ಞಾನ
ಹಿತವದಾವುದೀ ಮೂರರಲಿ ಮೂಢ ||


ಶ್ರದ್ಧೆಯಿರಬೇಕು ಮಾಡುವ ಕಾರ್ಯದಲಿ
ಮೊದಲು ಕಾಯಕದ ಅರಿವು ಇರಬೇಕು  | 
ಬಿಡದಿರಬೇಕು ಗುರಿಯ ಸಾಧಿಪ ಛಲವ 
ಯೋಗ ಭೋಗಸಿದ್ಧಿಗಿದುವೆ ದಾರಿ ಮೂಢ ||
**************
-ಕ.ವೆಂ.ನಾಗರಾಜ್.

ಸೋಮವಾರ, ಆಗಸ್ಟ್ 8, 2011

ಮಂಕನ ಸಂಸಾರ


     ಮನೆಗೆ ಬಂದಿದ್ದ ಗೆಳತಿಯೊಂದಿಗೆ ಮಾತನಾಡುತ್ತಿದ್ದ ಅವಳು ಹೇಳುತ್ತಿದ್ದಳು:
"ಆ ಶ್ಯಾಮಲನ್ನ ನೋಡಿದರೆ ಖುಷಿಯಾಗುತ್ತೆ ಕಣೆ. ಯಾವಾಗಲೂ ನಗುನಗುತ್ತಾ ಇರುತ್ತಾಳೆ. ಮುಖ ಗಂಟು ಹಾಕಿಕೊಂಡು ಗುಮ್ ಅಂತ ಇರೋರ್ನ ಕಂಡು ಮೈ ಉರಿಯುತ್ತೆ". ಅವಳ ಗೆಳತಿ ನಗುತ್ತಿದ್ದರೆ, ಇವಳು ಪೇಪರ್ ಓದುತ್ತಾ ಕುಳಿತಿದ್ದ ಗಂಡನ ಕಡೆಗೆ ಕಿರು(ಕಡು)ನೋಟ ಬೀರಿದಳು. ಬೆಳಿಗ್ಗೆ ನಡೆದ ಮಾತಿನ ಚಕಮಕಿಯಿಂದ ಮುಖ ದಪ್ಪಗೆ ಮಾಡಿಕೊಂಡಿದ್ದ ಮಂಕನ ಮುಖ ಇನ್ನೂ ದಪ್ಪಗಾಯಿತು. ಅದೇ ಸಮಯಕ್ಕೆ ಪಕ್ಕದ್ಮನೆ ಗಿರಿಜಮ್ಮ ಬಂದವರು "ಮನೆಗೆ ನೆಂಟರು ಬಂದು ವಕ್ಕರಿಸಿಕೊಂಡಿದ್ದಾರೆ ಕಣ್ರೀ, ಹಾಲೆಲ್ಲಾ ಮುಗಿದಿದೆ. ಸಂಜೆ ತರಿಸಿ ಕೊಡ್ತೀನಿ, ಸ್ವಲ್ಪ ಹಾಲಿದ್ರೆ ಕೊಡಿ" ಎಂದವರು ಹದಿನೈದೇ ನಿಮಿಷ ಮಾತನಾಡಿದ್ದರು. ಅವರು ನಿಜವಾಗಿ ಗಂಡ ಕೊಡಿಸಿದ್ದ ಹೊಸ ಬಂಗಾರದ ಬಳೆ ತೋರಿಸಲು ಬಂದಿದ್ದು, ಹಾಲು ಒಂದು ನೆಪವಾಗಿತ್ತು. ಹೋಗುವಾಗ ಮಂಕನ ಹೆಂಡತಿಯಿಂದ "ನೀವು ಬಿಡ್ರಿ, ಗಿರಿಜಮ್ಮ, ಪುಣ್ಯವಂತರು. ನಿಮ್ಮ ಮನಸ್ಸಿನಲ್ಲಿ ಇರೋದನ್ನು ಅರ್ಥ ಮಾಡಿಕೊಳ್ಳೋ ಗಂಡನ್ನ ಪಡೆದಿದ್ದೀರಿ. ಎಲ್ಲರಿಗೂ ಆ ಪುಣ್ಯ ಇರಬೇಕಲ್ಲಾ" ಎಂಬ ಶಹಭಾಸಗಿರಿಯನ್ನೂ ಪಡೆದು ಹೋದರು. ತಿಂಡಿ ಆದ ಮೇಲೆ ಬಾಕಿಯಿದ್ದ ಕಾಫಿ ಸಲುವಾಗಿ ಕಾಯುತ್ತಲೇ ಇದ್ದ ಮಂಕನ ಮುಖ ಹೆಂಡತಿಯ ಪರೋಕ್ಷ ಕುಕ್ಕುಮಾತಿನಿಂದ ಮತ್ತಷ್ಟು ಕೆಂಪಡರಿತ್ತು.
     ಗೆಳತಿಯೊಂದಿಗೆ ಹರಟುತ್ತಾ ಪುರುಸೊತ್ತು ಮಾಡಿಕೊಂಡು ಕಾಫಿ ಮಾಡಿದ ಅವಳು ಗೆಳತಿಗೆ ಕೊಟ್ಟು ಗಂಡನ ಮುಂದೆಯೂ ಒಂದು ಲೋಟ ಕಾಫಿ ಕುಕ್ಕಿ ಪಿಸುಗುಟ್ಟಿದಳು: "ಉರಾ ಉರಾ ಅಂತಿರಬೇಡಿ. ಬಂದವರ ಎದುರಿಗಾದರೂ ನಗುನಗುತ್ತಾ ಇರಿ". ಮಂಕ ಮರುಮಾತಾಡದೆ ಅವಳನ್ನು ದುರುಗುಟ್ಟಿ ನೋಡುತ್ತಾ ಎದ್ದು ರೂಮಿಗೆ ಹೋದವನು ಕನ್ನಡಿಯಲ್ಲಿ ಮುಖ ನೋಡಿಕೊಂಡು ಬಲವಂತದ ನಗೆ ನಕ್ಕ. ಅವನ ಮುಖ ಅವನಿಗೇ ವಿಚಿತ್ರವಾಗಿ ಕಂಡಿತು. ಅದೇ ಸಮಯಕ್ಕೆ ಸ್ನೇಹಿತನನ್ನು ಹುಡುಕಿಕೊಂಡು ಮೂಢ ಅಲ್ಲಿಗೇ ಬರಬೇಕೇ! ಸ್ನೇಹಿತನನ್ನು ಕಂಡು ಮಂಕ ಇನ್ನಷ್ಟು ಚಿತ್ರವಿಚಿತ್ರವಾಗಿ ನಕ್ಕ!
*************
-ಕ.ವೆಂ.ನಾಗರಾಜ್.

ಮಂಗಳವಾರ, ಆಗಸ್ಟ್ 2, 2011

ಮೂಢ ಉವಾಚ - 64

ಧನಕನಕ ಅಧಿಕಾರ ಪದವಿ ಕೀರ್ತಿಗಳು
ಆತ್ಮಜ್ಞಾನದಲಿ ಸಿಗದೆಂದು ಕೊರಗದಿರು |
ಆನಂದ ಪ್ರಾಪ್ತಿ ಸುಖ ದುಃಖ ನಿವೃತ್ತಿ
ಆತ್ಮಜ್ಞಾನದಲೆ ಮುಕ್ತಿಯೋ ಮೂಢ ||


ದೇವ ಸುಜನ ಗುರು ಹಿರಿಯರಲಿ ಶ್ರದ್ಧೆ
ತನು ಶುದ್ಧಿ ಜೊತೆಜೊತೆಗೆ ಮನ ಶುದ್ಧಿ |
ನೇರ ನಡೆ ನುಡಿಯು ತ್ರಿಕರಣದಲಿರಲು
ಪರಮಪದಕಿದಕಿಂತ ತಪವುಂಟೆ ಮೂಢ ||


ದಂಡವಿಡುವುದು ಕುಜನರನು ಅಂಕೆಯಲಿ
ನ್ಯಾಯನೀತಿಗಳು ಗೆಲಿಪುವುವು ವಾದದಲಿ |
ಗೌಪ್ಯತೆಯುಳಿಸಿ ಮಾನ ಕಾಯ್ವುದೆ ಮೌನ
ಬದುಕ ಗೆಲಿಪುವುದು ಜ್ಞಾನ ಮೂಢ ||


ಸಂಕಟವ ಪರಿಹರಿಸೆ ವೆಂಕಟನ ಬೇಡುವರು
ಧನಕನಕ ಆಯಸ್ಸು ಸಂಪತ್ತು ಕೋರುವರು |
ಜ್ಞಾನಿಗಳರಿತಾರಾಧಿಪರು ನಿರ್ಮೋಹದಲಿ
ಅರಿವಿನ ದಾರಿಯರಸುವರು ಮೂಢ ||
***************
-ಕ.ವೆಂ.ನಾಗರಾಜ್.

ಸೋಮವಾರ, ಆಗಸ್ಟ್ 1, 2011

ಇಂತಹವರೂ ಇರುತ್ತಾರಾ?

     ಕುಟುಂಬದ ಯಾರಾದರೂ ಸದಸ್ಯರು ಅಥವ ಆತ್ಮೀಯರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರೆ ಅವರಿಗಾಗಿ ಕುಟುಂಬದ ಇನ್ನೊಬ್ಬರು (ಗಂಡ/ಹೆಂಡತಿ/ಮಗ/ಮಗಳು/ಸೋದರ/ ಸೋದರಿ/ಸ್ನೇಹಿತ/ಸ್ನೇಹಿತೆ, ಇತ್ಯಾದಿ) ತಮ್ಮ ಕಿಡ್ನಿಯೊಂದನ್ನು ದಾನ ಮಾಡಲು ಮುಂದೆ ಬರುವವರು ಇರಬಹುದು. ಆದರೆ ಪರಿಚಯವೇ ಇಲ್ಲದ, ಇಂತಹ ಸಮಸ್ಯೆ ಇರುವ ಯಾರಾದರೂ ಕಡುಬಡವರಿಗೆ ತಾವು ಬದುಕಿರುವಾಗಲೇ ತಮ್ಮ ಕಿಡ್ನಿಯೊಂದನ್ನು ದಾನ ಮಾಡಲು ಮುಂದೆ ಬಂದವರನ್ನು ಕಂಡಿದ್ದೀರಾ? ಅಂತಹ ಧೀಮಂತ ಮಹಿಳೆಯೊಬ್ಬರು ಇದ್ದಾರೆ, ಅವರೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದ ಶ್ರೀಮತಿ ಶಕುಂತಲಾ ಮಂಜುನಾಥರವರು.
                ಪತಿ ಮಂಜುನಾಥ ಮತ್ತು ಮಗ ಪ್ರವೀಣನೊಂದಿಗೆ ಶ್ರೀಮತಿ ಶಕುಂತಲಾ.

     ಸಾಣೇನಹಳ್ಳಿ ಶ್ರೀಗಳು ಪಂಡಿತಾರಾಧ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ನೇತ್ರದಾನ ಶಿಬಿರವೊಂದರಲ್ಲಿ ನೇತ್ರದಾನ ಮಾಡಲು ಮುಂದೆ ಬಂದ ಹಲವರು ಆ ಬಗ್ಗೆ ತಮ್ಮ ಒಪ್ಪಿಗೆ ಪತ್ರ ಬರೆದುಕೊಡುತ್ತಿದ್ದರು. ಶ್ರೀಮತಿ ಶಕುಂತಲಾ ಮಂಜುನಾಥರವರು ಬರೆದುಕೊಟ್ಟ ಪತ್ರದಲ್ಲಿದ್ದ ಒಕ್ಕಣೆ:
     "ನಾನು ನನ್ನ ಕಣ್ಣುಗಳನ್ನು ದಾನ ಮಾಡುತ್ತೇನೆ. ಇದು ನಾನು ಮೃತಳಾದ ಮೇಲೆ ಆಗುವ ಕಾಯಕ. ಆದರೆ ನಾನು ಜೀವಿತಾವಧಿಯಲ್ಲೇ ಕಡುಬಡವರಿಗೆ ನನ್ನ ಒಂದು ಮೂತ್ರಪಿಂಡ ಕಿಡ್ನಿ ಕೊಡಲು ಬಯಸಿದ್ದೇನೆ. ದಯವಿಟ್ಟು ಇದಕ್ಕೆ ಅವಕಾಶ ಕಲ್ಪಿಸಿಕೊಡಿ."
     ಈ ವಿಷಯವನ್ನು ಸಂಬಂಧಿಸಿದ ಸಂಸ್ಥೆ/ಆಸ್ಪತ್ರೆಗೆ ತಿಳಿಸುವ ಬಗ್ಗೆ ಆಕೆಗೆ ಏನೂ ಗೊತ್ತಿರಲಿಲ್ಲ. ಅಲ್ಲದೆ ಬಡವರಿಗೆ ಒದಗುವ ಖರ್ಚು ಹೊಂದಿಸಲು ಅವರಿಗೆ ಆಗದೇ ಇರಬಹುದಾದ್ದರಿಂದ, ಸ್ವಾಮಿಗಳಿಗೆ ಹೇಳಿದರೆ ಅವರು ಸಹಕಾರ ನೀಡಿ ಒಳ್ಳೆಯದಾಗಬಹುದೆಂಬ ಕಾರಣದಿಂದ ಅವರಿಗೆ ಪತ್ರ ಬರೆದುಕೊಟ್ಟಿದ್ದರು. ೫೦ ವರ್ಷದ ಶ್ರೀಮತಿ ಶಕುಂತಲಾ ಮಂಜುನಾಥರವರ ಪತಿ ಮಂಜುನಾಥರವರು ಒಬ್ಬ ಸಾಮಾನ್ಯ ರೈತ, ತೃಪ್ತ ಜೀವನ ನಡೆಸುತ್ತಿರುವವರಾಗಿದ್ದು ಪತ್ನಿಯ ನಿರ್ಧಾರದ ಬಗ್ಗೆ ಅವರ ಸಂಪೂರ್ಣ ಸಮ್ಮತಿ ಇದೆ. ಅವರ ಇಬ್ಬರು ಹೆಣ್ಣುಮಕ್ಕಳ ಮದುವೆ ಆಗಿದೆ. ಒಬ್ಬ ಗಂಡು ಮಗ ಪ್ರವೀಣ ತಾಯಿ ಮಾಡುವುದಾಗಿ ಹೇಳಿರುವ ಕೆಲಸ ಒಳ್ಳೆಯದಾಗಿದ್ದು ತಾನು ಏನೂ ಹೇಳುವುದಿಲ್ಲವೆನ್ನುತ್ತಾನೆ.
     ನೊಂದವರಿಗಾಗಿ ಮಿಡಿಯುವ ಹೃದಯವೀಣೆಯ ನಾದ ಎಲ್ಲರಿಗೂ ಕೇಳಲಿ, ಇತರರೂ ಪ್ರೇರಿತರಾಗಲಿ ಎಂಬುದೇ ಈ ಕಿರುಬರಹದ ಉದ್ದೇಶ.
********************
-ಕ.ವೆಂ.ನಾಗರಾಜ್.
(ಆಧಾರ: ವಿಜಯ ಕರ್ನಾಟಕ - ದಿ. ೧೦-೦೭-೨೦೧೧).

ಮೂಢ ಉವಾಚ - 63

ಮಂತ್ರ ಪಠಿಸಿದೊಡೇನು ಅರ್ಥವನರಿಯದೆ
ಜಪವ ಮಾಡಿದೊಡೇನು ಒಳತುಡಿತವಿರದೆ |
ವಿಚಾರವಿರದಾಚಾರದ ಬದುಕು ಬದುಕೆ
ಕಾರ್ಯದಲರ್ಥವಿರಲು ಬೆಳಕು ಮೂಢ ||


ಕಣ್ಮುಚ್ಚಿ ಮಣಮಣಿಸೆ ಜಪವೆನಿಸುವುದೆ
ಒಳಗಣ್ಣು ತೆರೆದು ಧ್ಯಾನಿಪುದೆ ಜಪವು |
ಮಡಿ ಮೈಲಿಗೆಯೆಂದು ಪರದಾಡಿದೊಡೇನು
ಮನಶುದ್ಧಿಯಿಲ್ಲದಿರೆ ವ್ಯರ್ಥ ಮೂಢ ||

ಪೂಜೆ ಮಾಡಿದೊಡೆ ಪಾಪ ಹೋಗುವುದೆ
ತನುಶುಚಿಯಾಗಿರಲು ಮನಶುಚಿಯಾಗುವುದೆ |
ಪಾಪ ಪುಣ್ಯಗಳ ಕೊಡುವವನು ಅವನಲ್ಲ
ನಿನ್ನ ನೀನರಿಯದಿರೆ ಫಲವಿಲ್ಲ ಮೂಢ ||


ಕಲಿವ ಶ್ರಮವಿರದೆ ಅರಿವು ಬಂದೀತೆ
ಇರುವಲ್ಲೆ ನಿಂತಿರಲು ದಾರಿ ಸವೆದೀತೆ |
ಆರಂಭವದು ವಿಷ ಅಂತ್ಯದಲಿ ಅಮೃತವು
ಪರಮಪದಕಾಗಿ ಪರಿತಪಿಸು ಮೂಢ ||
***************
-ಕ.ವೆಂ.ನಾಗರಾಜ್.