ರಾಗರಹಿತ ಮನ ದೀಪದ ಕಂಬವಾಗಿ
ಸಂಸ್ಕಾರ ಬತ್ತಿಯನು ಭಕ್ತಿತೈಲದಿ ನೆನೆಸಿ |
ದೇವನ ನೆನೆವ ಮನ ಬತ್ತಿಯನು ಹಚ್ಚಲು
ಜ್ಞಾನಜ್ಯೋತಿ ಬೆಳಗದಿಹದೆ ಮೂಢ ||
ಸತ್ವಗುಣ ಸಂಪನ್ನ ಸ್ವರ್ಗವನೆ ಸೇರುವನು
ಇದ್ದಲ್ಲೆ ಇರುವನು ರಾಜಸಿಕ ಗುಣದವನು |
ಪಶು ಪ್ರಾಣಿ ಕೀಟವಾಗುವನು ತಾಮಸಿಕ
ಅಟ್ಟಡುಗೆಯುಣಬೇಕು ಇದು ಸತ್ಯ ಮೂಢ ||
ಸಾತ್ವಿಕತೆಯಿಂದ ಜ್ಞಾನ ಶಾಂತಿ ಆನಂದ
ರಾಜಸಿಕ ಪಡೆಯುವನು ಆಯಾಸ ನೋವ |
ಪರರ ನೋಯಿಪ ತಾಮಸವೆ ಅಜ್ಞಾನ
ಹಿತವದಾವುದೀ ಮೂರರಲಿ ಮೂಢ ||
ಶ್ರದ್ಧೆಯಿರಬೇಕು ಮಾಡುವ ಕಾರ್ಯದಲಿ
ಮೊದಲು ಕಾಯಕದ ಅರಿವು ಇರಬೇಕು |
ಬಿಡದಿರಬೇಕು ಗುರಿಯ ಸಾಧಿಪ ಛಲವ
ಯೋಗ ಭೋಗಸಿದ್ಧಿಗಿದುವೆ ದಾರಿ ಮೂಢ ||
**************
-ಕ.ವೆಂ.ನಾಗರಾಜ್.
ಶ್ರದ್ಧೆಯಿರಬೇಕು ಮಾಡುವ ಕಾರ್ಯದಲಿ
ಪ್ರತ್ಯುತ್ತರಅಳಿಸಿಮೊದಲು ಕಾಯಕದ ಅರಿವು ಇರಬೇಕು !!!!
ಎಂಥ ಮಾತು.... ಚೆನ್ನಾಗಿದೆ ಸರ್ !!!
ತಾಣಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು, ಗಿರೀಶರೇ.
ಪ್ರತ್ಯುತ್ತರಅಳಿಸಿ