ಇಂದಿನ ಫೇಸ್ ಬುಕ್, ಟ್ವಿಟರ್, ವಾಟ್ಸಪ್ ಯುಗದಲ್ಲಿ ಗಂಡು-ಹೆಣ್ಣು ಪರಸ್ಪರ ನೋಡಿ ವಿವಾಹವಾಗುವ ರೀತಿ-ನೀತಿಗಳೇ ಬದಲಾಗಿವೆ. ಹಿರಿಯರ ಪಾತ್ರ ಔಪಚಾರಿಕವಾಗಿ ಉಳಿದಿದೆಯೆನ್ನಬಹುದು. ಹಳೆಯ ರೀತಿ-ನೀತಿ, ಸಂಪ್ರದಾಯಗಳನ್ನು ಉಳಿಸಿಕೊಂಡಿರುವ ಕುಟುಂಬಗಳೂ ಇವೆಯೆನ್ನುವುದು ಸ್ವಲ್ಪ ಸಮಾಧಾನದ ಸಂಗತಿ. ಇಂತಹ ಒಂದು ಕುಟುಂಬದ ಹಿರಿಯರು ಮಗನಿಗೆ ಹೆಣ್ಣು ನೋಡುತ್ತಿದ್ದರು. ಸಾಫ್ಟ್‌ವೇರ್ ಇಂಜನಿಯರ್ ಆದ ಆ ಹುಡುಗನನ್ನು ನೋಡಿದ ಕೆಲವು ವಧು ಮತ್ತು ಅವರ ಮನೆಯವರು ಔಪಚಾರಿಕ ಮಾತುಕತೆಗಳ ನಂತರ ಹೊರಡುತ್ತಿದ್ದಾಗ ಸಂಬಂಧಗಳು ಕೂಡಿಬಂತೆಂದೇ ಎರಡೂ ಕುಟುಂಬಗಳವರಿಗೆ ಭಾಸವಾಗುತ್ತಿತ್ತು. ಆದರೆ ಮರುದಿನ ಅಥವ ಅಂದು ರಾತ್ರಿಯೇ ಹುಡುಗಿಯ ತಂದೆ ಅಥವ ತಾಯಿಯಿಂದ ಹುಡುಗನ ಮನೆಯವರಿಗೆ 'ಋಣಾನುಬಂಧವಿಲ್ಲ, ಅನ್ಯಥಾ ಭಾವಿಸದಿರಿ' ಎಂಬರ್ಥದ ದೂರವಾಣಿ ಸಂದೇಶ ಬರುತ್ತಿತ್ತು. ಹೀಗೆ ಹಲವು ಸಲ ಪುನರಾವರ್ತನೆಯಾದಾಗ ಇದರ ಕಾರಣ ತಿಳಿಯದೆ ಹುಡುಗನ ಮನೆಯವರು ಗೊಂದಲಕ್ಕೊಳಗಾಗಿದ್ದರು. ಇದರ ಕಾರಣ ತಿಳಿದದ್ದು, ಇನ್ನೊಬ್ಬ ಬಂಧುವಿನ ಮನೆಯ ಹುಡುಗಿಯೊಂದಿಗೆ ವಿವಾಹದ ಪ್ರಸ್ತಾಪ ಬಂದ ಸಂದರ್ಭದಲ್ಲಿ! ಹುಡುಗ-ಹುಡುಗಿ ಮನೆಯವರಿಬ್ಬರೂ ಮೊದಲಿನಿಂದಲೂ ಪರಿಚಿತರೇ ಆಗಿದ್ದರು. ಪರಸ್ಪರ ನೋಡಿದ, ಮಾತನಾಡಿದ ಶಾಸ್ತ್ರ ಮುಗಿಸಿ ವಾಪಸಾದ ನಂತರದಲ್ಲಿ ಹುಡುಗ ಇದ್ದ ಬಾಡಿಗೆ ಮನೆಯ ಮಾಲಕಿ ಹುಡುಗಿಯ ಮನೆಗೆ ದೂರವಾಣಿ ಮೂಲಕ 'ಹುಡುಗ ಸರಿಯಿಲ್ಲವೆಂದೂ, ಹುಡುಗನ ತಾಯಿ ಗಟವಾಣಿ ಆಗಿದ್ದು ನಿಮ್ಮ ಮಗಳು ಸುಖವಾಗಿರುವುದಿಲ್ಲವೆಂದೂ' ಹೇಳಿದ್ದರು. ಪರಿಚಿತರೇ ಆಗಿದ್ದರಿಂದ ಹುಡುಗಿಯ ತಂದೆ-ತಾಯಿ ಮರುದಿನ ಪುನಃ ಬಂದು ವಿಚಾರಿಸಿದಾಗ ಸತ್ಯ ಹೊರಬಿದ್ದಿತ್ತು. ಮನೆ ಮಾಲಕಿಯ ಮಗ ಉಡಾಳನಾಗಿದ್ದು ಅವನನ್ನು ಮದುವೆಯಾಗಲು ಯಾವ ಹುಡುಗಿಯೂ ಒಪ್ಪದೆ ವಿವಾಹವಾಗಿರಲಿಲ್ಲ, ವಿವಾಹದ ವಯಸ್ಸೂ ಸಹ ಮೀರುತ್ತಾ ಬಂದಿತ್ತು. ಇತರರ ಮನೆಯಲ್ಲಿ ವಿವಾಹಗಳಾಗುತ್ತಿದ್ದುದು ಉಡಾಳನ ತಾಯಿಗೆ ಸಹಿಸಲಾಗುತ್ತಿರಲಿಲ್ಲ. ಹೀಗಾಗಿ ಬೇರೆ ಮನೆಗಳಲ್ಲಿ ಮದುವೆ ಪ್ರಸ್ತಾಪಗಳು ಬಂದ ಸಂದರ್ಭದಲ್ಲಿ ಹೇಗೋ ಮಾಡಿ ವಿಳಾಸ/ದೂರವಾಣಿ ತಿಳಿದುಕೊಂಡು ದೂರವಾಣಿ ಮಾಡಿ ಸುಳ್ಳು ಆರೋಪ ಹೊರಿಸಿ ಮದುವೆ ಪ್ರಸ್ತಾಪಗಳು ಮುರಿದುಹೋಗುವಂತೆ ಮಾಡಿ ಸಂತೋಷಪಡುತ್ತಿದ್ದರು. ಇದು ಅಸೂಯೆಯಿಂದ ಮೂಡುವ ವಿಕೃತಿಗೆ ಒಂದು ಸಣ್ಣ ಉದಾಹರಣೆಯಷ್ಟೆ.
ಇನ್ನೊಬ್ಬರಿಗೆ ಆಗುವ ಹಿಂಸೆ, ಅವಮಾನಗಳನ್ನು ಕಂಡು ಸಂತೋಷಿಸುವುದು, ಸ್ವತಃ ಇನ್ನೊಬ್ಬರಿಗೆ ಹಿಂಸೆ ನೀಡಿ, ಅವಮಾನಿಸಿ ಸಂತೋಷಿಸುವುದೇ ವಿಕೃತಿ. ಈ ವಿಕೃತಿ ಅನ್ನುವುದು ಮನುಷ್ಯನ ಅಂತರ್ಗತ ಸ್ವಭಾವವೆಂದರೆ ತಪ್ಪಾಗಲಾರದು. ಪ್ರಮಾಣ ಹೆಚ್ಚು, ಕಡಿಮೆ ಇರಬಹುದೇನೋ! ಯಾರನ್ನು ಕಂಡರೆ ಅಸೂಯೆಯೆನಿಸುವುದೋ, ಯಾರನ್ನು ಕಂಡರೆ ದ್ವೇಷವಿದೆಯೋ ಅಂತಹವರು ತೊಂದರೆಗೊಳಗಾದಾಗ, 'ಅವನಿಗೆ ಹಾಗೆಯೇ ಆಗಬೇಕು, ಮೆರೀತಿದ್ದ ಬಡ್ಡೀಮಗ' ಎಂದು ಸಂತೋಷಪಡದಿರುವವರು ವಿರಳರೇ ಸರಿ. ಕೆಟ್ಟವರು ಅನ್ನಿಸಿಕೊಂಡವರು ಹಿಂಸೆಗೊಳಪಟ್ಟಾಗ, ಅವಮಾನಿತರಾದಾಗ ಒಳ್ಳೆಯವರು ಅನ್ನಿಸಿಕೊಂಡವರೂ ಸಂತೋಷಿಸುವುದು ಸಾಮಾನ್ಯವಾಗಿ ನಡೆಯುವ ಕ್ರಿಯೆಯಾಗಿದೆ. ವಿಕೃತಿಯ ಕ್ರೂರ ಪರಾಕಾಷ್ಠೆಯೆಂದರೆ ಚಿತ್ರವಿಚಿತ್ರ ಹಿಂಸೆ ನೀಡಿ ಕೊಲ್ಲುವುದು, ಲೈಂಗಿಕವಾಗಿ ಶೋಷಿಸಿ ಸಿಕ್ಕಿಬೀಳಬಾರದೆಂದು ಹತ್ಯೆಗೈಯುವುದು, ಇತ್ಯಾದಿಗಳು. ವಿಕೃತಿಗೆ ಹಲವಾರು ಕಾರಣಗಳಿರುತ್ತವೆ. ಪ್ರಾರಂಭದಲ್ಲಿ ಹೇಳಿದ ಅಸೂಯೆ ಸಹ ಅಂತಹ ಒಂದು ಕಾರಣವಾಗಿದೆ. ಇತರ ಕಾರಣಗಳ ಕುರಿತೂ ಸಂಕ್ಷಿಪ್ತವಾಗಿ ನೋಡೋಣ.
ದುರಾಸೆ ಅನ್ನುವುದು ಜಗತ್ತಿನ ಅನೇಕ ಸಮಸ್ಯೆಗಳಿಗೆ ಮೂಲಕಾರಣವಾಗಿದೆ. ಲಂಚಗುಳಿತನ, ಭ್ರಷ್ಠಾಚಾರ, ಇತ್ಯಾದಿಗಳಿಗೆ ದುರಾಸೆಯೇ ಕಾರಣ. ಇದಕ್ಕೆ ಪಕ್ಕಾದವರು ಸಂವೇದನಾಶೀಲತೆಯನ್ನೇ ಕಳೆದುಕೊಳ್ಳುತ್ತಾರೆ. ಬಡವ, ದಿಕ್ಕಿಲ್ಲದವ ಎಂಬುದರ ಪರಿವೆಯೇ ಇಲ್ಲದೆ ಲಂಚಕ್ಕೆ ಕೈಚಾಚುವವರು ಹೃದಯಹೀನರಲ್ಲದೇ ಮತ್ತೇನು? ಸರ್ಕಾರದ ಖಜಾನೆಗೇ ಕನ್ನ ಕೊರೆಯುವ ಪುಡಾರಿಗಳು, ಅಧಿಕಾರಿಗಳಿಂದಾಗಿ ಸಾರ್ವಜನಿಕರ ಹಣ ಮತ್ತು ಸ್ವತ್ತುಗಳು ಕೆಲವೇ ಕೆಲವರ ಪಾಲಾಗುತ್ತವೆ. ಸಾಮಾನ್ಯರು ಇದರಿಂದ ಪಡುವ ಪಡಿಪಾಟಲುಗಳ ಬಗ್ಗೆ ಅವರಿಗೆ ಚಿಂತೆಯೇ ಇರುವುದಿಲ್ಲ. ಯಾರು ಹಾಳಾದರೆ ನನಗೇನು, ನಾನು ಸುಖವಾಗಿದ್ದರೆ ಆಯಿತು ಎನ್ನುವುದೂ ವಿಕೃತಿಯ ಒಂದು ಮುಖ. ಸ್ವಾರ್ಥದ ಸಲುವಾಗಿ ದೇಶದ ಹಿತವನ್ನೇ ಕಡೆಗಣಿಸುವ ಜನನಾಯಕರುಗಳನ್ನೂ ಕಾಣುತ್ತಿರುವ ದೌರ್ಭಾಗ್ಯ ನಮ್ಮದಾಗಿದೆ. ಹಣವಿದ್ದವರು ಎಂತಹ ಘೋರ ಅಪರಾಧ ಮಾಡಿದರೂ ತಪ್ಪಿಸಿಕೊಳ್ಳಬಹುದು ಎಂಬ ವಾತಾವರಣವಿರುವುದು ಮತ್ತು ಇದರಿಂದ ಆಘಾತಕ್ಕೊಳಗಾಗುವ ನೊಂದವರನ್ನು ಕಂಡು ಹರ್ಷಿಸುವ ವಿಕೃತತೆಯನ್ನೂ ಕಾಣುತ್ತಿದ್ದೇವೆ.
ಕಾಮಾತುರರು ಮೆರೆಯುವ ವಿಕೃತತೆ ಮಾನವೀಯತೆಯನ್ನೇ ಅಣಕಿಸುತ್ತದೆ. ಪ್ರಿಯಕರನ ನೆರವಿನಿಂದ ಪತಿಯನ್ನೇ ಕೊಲೆ ಮಾಡುವುದು, ಅಡ್ಡಿಯಾಗುತ್ತಾರೆಂದು ಎಳೆ ಮಕ್ಕಳನ್ನೇ ಸಾಯಿಸುವುದು, ಅಸಹಾಯಕತೆ, ದೌರ್ಬಲ್ಯಗಳನ್ನು ದುರುಪಯೋಗಿಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸುವುದು, ಚಿಕ್ಕ ಕಂದಮ್ಮಗಳ ಮೇಲಿನ ಅತ್ಯಾಚಾರ ಮುಂತಾದ ಸುದ್ದಿಗಳು ದಿನಬೆಳಗಾದರೆ ರಾಚುತ್ತಿರುತ್ತವೆ. ಆಸ್ತಿಗಾಗಿ ಕುಟುಂಬದವರನ್ನೇ ಕೊಲೆ ಮಾಡುವುದು, ಮತ್ಸರದಿಂದಾಗಿ ಬೆಳೆದು ನಿಂತ ಪೈರಿಗೇ ಬೆಂಕಿ ಹಚ್ಚುವುದು, ಮದದ ಕಾರಣದಿಂದಾಗಿ ಅಸಹಾಯಕರು, ದುರ್ಬಲರನ್ನು ಹಂಗಿಸಿ, ಹಿಂಸಿಸಿ ಆನಂದಿಸುವುದು, ಒಂದೇ, ಎರಡೇ ವಿಕೃತಿಯ ನೂರಾರು ಉದಾಹರಣೆಗಳನ್ನು ಕೊಡಬಹುದು. ಧೃತರಾಷ್ಟ್ರನ ಪುತ್ರಮೋಹ ನ್ಯಾಯ, ನೀತಿ, ಧರ್ಮಗಳನ್ನೇ ನುಂಗಿ ನೀರು ಕುಡಿದಿದ್ದಲ್ಲದೆ ಮಹಾಭಾರತ ಯುದ್ಧಕ್ಕೇ ಕಾರಣವಾಯಿತು. ಇಂದಿನ ರಾಜಕಾರಣದಲ್ಲೂ ಪುತ್ರವ್ಯಾಮೋಹ, ವಂಶವ್ಯಾಮೋಹ, ಜಾತಿ ವ್ಯಾಮೋಹ, ಅಧಿಕಾರದ ಮೋಹಗಳು ದೇಶವನ್ನು ಅಧೋಗತಿಗೆ ಒಯ್ಯುತ್ತಿವೆ. ಯಾರು ವಿಕೃತಿಯ ನಿಯಂತ್ರಣ ಮಾಡಬೇಕೋ ಅವರುಗಳೇ ವಿಕೃತಿಯ ಪೋಷಕರಾಗಿದ್ದಾರೆ. ತನ್ನ ಮಾತೇ ನಡೆಯಬೇಕು, ತಾನು ಹೇಳಿದಂತೆಯೇ ಎಲ್ಲವೂ ಆಗಬೇಕು ಎಂದು ಬಯಸುವವರು ಅದಕ್ಕಾಗಿ ಹಲವಾರು ತಂತ್ರ-ಕುತಂತ್ರಗಳನ್ನು ಹೆಣೆಯುವುದಲ್ಲದೆ ಈ ಅಹಮ್ಮಿಗಾಗಿ ಕುಟುಂಬದ ಸದಸ್ಯರ - ಅವರು ಗಂಡ, ಹೆಂಡತಿ, ಮಕ್ಕಳು, ತಂದೆ, ತಾಯಿ ಯಾರೇ ಆಗಿರಲಿ - ಭಾವನೆಗಳಿಗೂ ಬೆಲೆಕೊಡದೆ ಅವರುಗಳ ಮನಸ್ಸನ್ನು ಘಾಸಿಪಡಿಸುವುದನ್ನೂ ಕಾಣುತ್ತಿರುತ್ತೇವೆ. ಮನುಷ್ಯನನ್ನು ಕೊಲ್ಲುವುದಕ್ಕಿಂತ ಘೋರ ಅಪರಾಧ ಮನಸ್ಸುಗಳನ್ನು ಕೊಲ್ಲುವುದೇ ಆಗಿದೆ.
ಐಸಿಸ್ ಉಗ್ರರು ನೂರಾರು ಜನರ ಸಮ್ಮುಖದಲ್ಲಿ ಹಲವರ ಶಿರಚ್ಛೇದವನ್ನು ವಿಕೃತಾನಂದ ಮೆರೆಯುತ್ತಾ ಮಾಡುವುದು, ನೆರೆದಿದ್ದವರೂ ಸಹ ಆನಂದದಿಂದ ಅದನ್ನು ವೀಕ್ಷಿಸುವ ಹಲವಾರು ವಿಡಿಯೋಗಳು, ಸೆರೆಹಿಡಿದ ಅಮಾಯಕ ಹೆಣ್ಣುಮಕ್ಕಳನ್ನು ಉಗ್ರರು ಕಾಮತೃಷೆ ತೀರಿಸಿಕೊಳ್ಳಲು ಬಳಸುವ ಮತ್ತು ಅವರನ್ನು ಹರಾಜಿನ ಮೂಲಕ ವಿಕ್ರಯಿಸುವ ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿರುವುದು ಪರಮವಿಕೃತ್ಯಗಳಿಗೆ ಸಾಕ್ಷಿಯಂತಿವೆ.
ವಿಕೃತಿಯ ಮನೋಭಾವ ಮೂಡಲು ಹಲವಾರು ಕಾರಣಗಳನ್ನು ಕೊಡಬಹುದು. ಸ್ವತಃ ವಿಕೃತ್ಯಕ್ಕೆ ಬಲಿಯಾಗಿರುವುದು, ಮನೆಯ ವಾತಾವರಣ, ಹೊಂದಿರುವ ಸ್ನೇಹಿತರು, ಪರಿಸರ, ತಪ್ಪು ಮಾರ್ಗದರ್ಶನದ ಪ್ರಭಾವ, ಮತಾಂಧತೆ, ಸ್ವಾರ್ಥ, ದುರಾಸೆ, ಅಹಂ, ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭ, ಇತ್ಯಾದಿ ಹಲವು ಸಂಗತಿಗಳು ವಿಕೃತಿಯ ಪೋಷಕವಾಗಿವೆ. ಆದರೆ ಪ್ರಧಾನವಾದ ಕಾರಣ ಸೇವಿಸುವ ಆಹಾರ ಎಂದರೆ ಆಶ್ಚರ್ಯವಾಗಬಹುದಾದರೂ ಇದು ಸತ್ಯಸಂಗತಿಯಾಗಿದೆ. ಇಲ್ಲಿ ಆಹಾರವೆಂದರೆ ಕೇವಲ ತಿನ್ನುವ ಕ್ರಿಯೆ ಮಾತ್ರ ಅಲ್ಲ ಎಂಬುದನ್ನು ನೆನಪಿಡಬೇಕು. ಕಣ್ಣಿನಿಂದ ನೋಡುವ, ಕಿವಿಯಿಂದ ಕೇಳುವ, ಮೂಗಿನಿಂದ ಆಸ್ವಾದಿಸುವ, ಚರ್ಮದಿಂದ ಸ್ಪರ್ಷಿಸುವ ಸಂಗತಿಗಳಲ್ಲದೆ ಮನೋವ್ಯಾಪಾರಗಳೂ ಆಹಾರದ ವ್ಯಾಪ್ತಿಯಲ್ಲಿ ಬರುತ್ತವೆ. ಈಗ ವಿಷಯ ಸ್ಪಷ್ಟವಾಗಿರಬಹುದು. ಒಳ್ಳೆಯ ಆಹಾರ ಸೇವಿಸಿದರೆ ನಾವು ಒಳ್ಳೆಯವರು, ಕೆಟ್ಟ ಆಹಾರ ಸೇವಿಸಿದರೆ ನಾವು ಕೆಟ್ಟವರಾಗುತ್ತೇವೆ ಎಂಬುದು ಸರಳ ನಿಯಮ. ಈ ಕುರಿತು ಸ್ವಲ್ಪ ವಿವರವಾಗಿ ನೋಡೋಣ.
'ನೀನು ಹೊಟ್ಟೆಗೆ ಏನು ತಿಂತೀಯ?'- ಯಾರಾದರೂ ಏನಾದರೂ ಅಚಾತುರ್ಯವೆಸಗಿದಾಗ, ತಪ್ಪು ಮಾಡಿದಾಗ ಈ ರೀತಿ ಪ್ರತಿಕ್ರಿಯಿಸುತ್ತಾರಲ್ಲವೇ? ಸೇವಿಸುವ ಆಹಾರ ನಮ್ಮ ಕೃತಿಯ ಮೇಲೆ, ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ ಎಂಬುದೇ ಇದರ ಅರ್ಥ. ಆಯುರ್‍ವೇದದಲ್ಲಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರದ ಬಗ್ಗೆ ವಿವರಣೆ ಸಿಗುತ್ತದೆ. ಸಾತ್ವಿಕ ಗುಣವೆಂದರೆ ರಚನಾತ್ಮಕ, ಸ್ಪಷ್ಟ ಮತ್ತು ಜೀವನವನ್ನು ಪೋಷಿಸುವುದಾಗಿದೆ. ಶಾಂತಿ, ನೆಮ್ಮದಿ, ಪ್ರೀತಿ, ಇತ್ಯಾದಿಗಳು ಸಾತ್ವಿಕರ ಲಕ್ಷಣಗಳು. ಸಾತ್ವಿಕರು ಸಾಮಾನ್ಯವಾಗಿ ಆಧ್ಯಾತ್ಮಿಕ ಒಲವುಳ್ಳವರು, ಸರಳರು, ಉದ್ವೇಗರಹಿತರು, ಸಂತುಷ್ಟರು, ಕೋಪನಿಗ್ರಹಿಗಳಾಗಿದ್ದು, ಅವರ ವಿಚಾರಗಳು ಸ್ಪಷ್ಟವಾಗಿರುತ್ತವೆ. ಅವರು ಇತರರಿಗೆ ಸಂತೋಷ ಕೊಡುವವರು, ಉತ್ಸಾಹಿತರು, ಕುತೂಹಲಿಗಳು ಮತ್ತು ಪ್ರೇರಕರಾಗಿರುತ್ತಾರೆ. ಸಾತ್ವಿಕ ಆಹಾರ ಸತ್ವಯುತವಾಗಿದ್ದು ಸುಲಭವಾಗಿ ಜೀರ್ಣವಾಗುವಂತಹದು ಮತ್ತು ಹಗುರವಾಗಿರುತ್ತವೆ. ಹದವಾಗಿ ಬೇಯಿಸಿದ ತರಕಾರಿಗಳು, ಕಳಿತ ಹಣ್ಣುಗಳು, ಕಾಳುಗಳು, ಜೇನುತುಪ್ಪ, ಶುಂಠಿ, ಸ್ವಲ್ಪ ಪ್ರಮಾಣದ ತುಪ್ಪ, ಹಸುವಿನ ಹಾಲು ಇತ್ಯಾದಿಗಳು ಸಾತ್ವಿಕ ಆಹಾರದ ಪಟ್ಟಿಯಲ್ಲಿವೆ. ಸತ್ವವನ್ನು ಹೆಚ್ಚಿಸಿಕೊಳ್ಳಲು ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ಸತ್ಸಂಗಗಳು, ಪ್ರಶಾಂತವಾದ ಮತ್ತು ಹಿತಕರ ವಾತಾವರಣಗಳು ಸಹಾಯಕಾರಿ. ನೋಡುವ ನೋಟಗಳು, ಕೇಳುವ ಸಂಗತಿಗಳು, ಓದುವ ಪುಸ್ತಕಗಳು ಒಳ್ಳೆಯದಾಗಿದ್ದಲ್ಲಿ, ಧನಾತ್ಮಕವಾಗಿದ್ದಲ್ಲಿ ಅವೂ ಸಹ ಸಾತ್ವಿಕ ಗುಣವನ್ನು ವೃದ್ಧಿಸುತ್ತವೆ.
ರಾಜಸಿಕತೆಯೆಂದರೆ ಮನ್ನುಗ್ಗುವ ಮತ್ತು ಚಟುವಟಿಕೆಯಿಂದ ಒಡಗೂಡಿದ ಸ್ವಭಾವ. ಅತಿಯಾದಲ್ಲಿ ಇದು ಅತಿ ಚಟುವಟಿಕೆ ಮತ್ತು ತಳಮಳಕ್ಕೂ ಕಾರಣವಾಗುತ್ತದೆ. ಅವಿಶ್ರಾಂತ ಮನಸ್ಸು ಭಯ, ಕಾತುರ ಮತ್ತು ಉಗ್ರತೆಯಿಂದ ಚಡಪಡಿಸುತ್ತದೆ. ಮಿತಿಯಲ್ಲಿರುವ ರಾಜಸಿಕತೆ ಒಳ್ಳೆಯ ಫಲ ನೀಡುತ್ತದೆ, ಸಮಾಜಕ್ಕೆ ಉಪಕಾರಿಯಾಗಿರುತ್ತದೆ. ಅತಿಯಾದಲ್ಲಿ ಗರ್ವ, ಸ್ಪರ್ಧೆ, ಅತಿಕ್ರಮಣಕಾರಿ ಮನೋಭಾವ ಮತ್ತು ಮತ್ಸರಕ್ಕೆ ರಹದಾರಿಯಾಗುತ್ತದೆ. ಅತಿ ರಾಜಸಿಕತೆಯಲ್ಲಿ ಯಾವುದು ಒಳ್ಳೆಯದೆಂದು ಹೃದಯಕ್ಕೆ ಗೊತ್ತಿದ್ದರೂ, ಮನಸ್ಸು ಮಾತ್ರ ಬೇರೆಲ್ಲೋ ಕೊಂಡೊಯ್ದುಬಿಡುತ್ತದೆ. ಹಿಡಿತದಲ್ಲಿರುವ ರಾಜಸಿಕತೆ ಗುರಿ ತಲುಪಲು ಮತ್ತು ಸಮಾಜವನ್ನು ಸರಿಯಾಗಿ ಕೊಂಡೊಯ್ಯಲು ಸಹಕಾರಿಯಾಗಿರುತ್ತದೆ. ನೋಡುವ ದೃಷ್ಯಗಳು/ಸಂಗತಿಗಳು, ದಾರಿ ತಪ್ಪಿಸುವ ಚಿತ್ರಗಳು, ಧಾರಾವಾಹಿಗಳು, ಕೇಳುವ ಕೆಟ್ಟ ಮಾತುಗಳು, ವಾಸಿಸುವ ಅಶಾಂತ ಪರಿಸರ ಸಹ ರಾಜಸಿಕತೆಗೆ ಪ್ರಚೋದಿಸುತ್ತವೆ. ಅತಿಯಾದ ವ್ಯಾಯಾಮ, ಅತಿಯಾದ ಪ್ರಯಾಣ, ಅತಿಯಾದ ಮಾತುಗಳು, ಅತಿಯಾದ ಕೆಲಸಗಳು, ಅತಿಯಾದ ಮನರಂಜನೆಗಳೂ ಸಹ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಕರಿದ, ಹರಿದ ಪದಾರ್ಥಗಳು, ಚಾಕೊಲೇಟುಗಳು, ಅತಿಯಾದ ಸಿಹಿ, ಉಪ್ಪು, ಖಾರದ ಪದಾರ್ಥಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳು ರಾಜಸಿಕ ಆಹಾರದ ಪಟ್ಟಿಯಲ್ಲಿ ಇವೆ.
ತಾಮಸಿಕತೆ ನಾಶ ಮಾಡುವ ಗುಣವಾಗಿದೆ. ಆಲಸ್ಯ, ಜಡತ್ವ, ನಿರಾಶೆ, ಖಿನ್ನತೆ, ಕ್ರೋಧ ಇದರ ಉತ್ಪನ್ನಗಳು. ನಿದ್ರೆ, ವಿಶ್ರಾಂತಿ, ಮುನ್ನುಗ್ಗದಿರುವಿಕೆ, ಇತ್ಯಾದಿಗಳು ಸಂದರ್ಭಗಳಲ್ಲಿ ಅವಶ್ಯವಾಗಿದ್ದು ತಾಮಸಿಕತೆಯೂ ಸಹ ಸ್ವಲ್ಪ ಮಟ್ಟಿಗೆ ಅಗತ್ಯವಾದುದೇ ಆಗಿದೆ. ಆದರೆ ತಮೋಗುಣ ಹೆಚ್ಚಾದರೆ ಅನರ್ಥಕಾರಿ. ಕೀಳು ಅಭಿರುಚಿಯ ಚಿತ್ರಗಳು, ಕೀಳು ಮನೋಭಾವದ ಚಾನೆಲ್ಲುಗಳು, ಅಂತರ್ಜಾಲದ ಅಶ್ಲೀಲ ತಾಣಗಳು ತಾಮಸಿಕತೆಯ ಬೆಂಕಿಗೆ ತುಪ್ಪ ಸುರಿಯುವಂತಹವಾಗಿವೆ. ತಾಮಸಿಕರು ಸ್ವನಾಶಕ್ಕೆಡೆಮಾಡುವ ಜೀವನಶೈಲಿ ಮತ್ತು ಆಹಾರಸೇವನೆಯ ಅಭ್ಯಾಸದವರಾಗಿರುತ್ತಾರೆ. ಅತಿಯಾದ ಆಹಾರ ಸೇವನೆ, ಅತಿಯಾದ ಕಾಮ ಚಟುವಟಿಕೆ, ಮಾದಕ ದ್ರವ್ಯಗಳ ಸೇವನೆ ಮಾಡಲು ಹಂಬಲಿಸುತ್ತಾರೆ. ಪರಿಣಾಮವಾಗಿ ನಿಸ್ತೇಜತೆ, ಭಾರವಾದ ಮನಸ್ಸಿನೊಂದಿಗೆ ಏನು ಮಾಡಬೇಕೆಂದು ತೋಚದ ಸ್ಥಿತಿಗೆ ತಲುಪುತ್ತಾರೆ. ತಮ್ಮ ಮತ್ತು ಇತರರ ಬಗ್ಗೆ ಲೆಕ್ಕಿಸದಂತೆ ಇರುತ್ತಾರೆ. ಕೊನೆಯಲ್ಲಿ ಯಾವ ಸ್ಥಿತಿಗೆ ತಲುಪುತ್ತಾರೆಂದರೆ ತಮಗೆ ತಾವು ಸಹಾಯ ಮಾಡಿಕೊಳ್ಳಲಾಗದಂತಾಗಿ ಇತರರನ್ನು ಆಶ್ರಯಿಸಬೇಕಾಗುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧರಿಸಲಾರರು ಮತ್ತು ಅಸ್ಪಷ್ಟ ಮನಸ್ಸಿನಿಂದಾಗಿ ಒಳ್ಳೆಯ ನಿರ್ಧಾರ ತಳೆಯಲಾರರು. ತಾಮಸಿಕ ಆಹಾರ ಕಡಿಮೆ ಸತ್ವಯುತವಾಗಿದ್ದು, ಜೀವಕ್ಕೆ ಪೋಷಕವಾಗಿರುವುದಿಲ್ಲ. ಹಳೆಯದಾದ ಮತ್ತು ತಂಗಳು ಆಹಾರ, ಅತಿಯಾಗಿ ಕರಿದ ಮತ್ತು ಹುರಿದ ಪದಾರ್ಥಗಳು, ಸುಲಭವಾಗಿ ಜೀರ್ಣವಾಗದ ಗಡಸು ಆಹಾರ, ಹೆಚ್ಚು ಅನ್ನಿಸುವಷ್ಟು ಮಾಂಸಾಹಾರ, ಇತ್ಯಾದಿಗಳು ತಾಮಸಿಕವೆನಿಸುವ ಆಹಾರಗಳ ಪಟ್ಟಿಯಲ್ಲಿ ಸೇರಿವೆ. ಮಾದಕ ದ್ರವ್ಯಗಳು, ಡ್ರಗ್ಸ್ ಮುಂತಾದವು ತಾಮಸ ಗುಣ ಪ್ರಚೋದಕಗಳು. ಇವು ರಾಜಸಿಕ ಪರಿಣಾಮಗಳನ್ನೂ ಬೀರುತ್ತವೆ. ಮೆದುಳಿನ ಮೇಲೆ ಪ್ರಭಾವ ಬೀರುವ, ಅದನ್ನು ಮಂಕುಗೊಳಿಸುವ ಪದಾರ್ಥಗಳೆಲ್ಲವೂ ತಾಮಸಿಕ ಆಹಾರವೆನಿಸುವುವು.
ಒಂದು ಒಳ್ಳೆಯ ಸುದ್ದಿಯೆಂದರೆ, ಸಾತ್ವಿಕರೇ ಬೇರೆ, ರಾಜಸಿಕರೇ ಬೇರೆ ಮತ್ತು ತಾಮಸಿಕರೇ ಬೇರೆ ಎಂದು ಪ್ರತ್ಯೇಕವಾಗಿ ಗುರುತಿಸಲ್ಪಡುವವರು ಇರುವದಿಲ್ಲ. ಪ್ರತಿಯೊಬ್ಬರೂ ಸಾತ್ವಿಕರೂ, ರಾಜಸಿಕರೂ ಮತ್ತು ತಾಮಸಿಕರೂ ಆಗಿದ್ದು, ಈ ಮೂರೂ ಗುಣಗಳ ಮಿಶ್ರಣವಾಗಿರುತ್ತಾರೆ. ಕೆಲವರಲ್ಲಿ ಕೆಲವೊಂದು ಗುಣಗಳು ಪ್ರಧಾನವಾಗಿರುತ್ತವೆ. ಆ ಪ್ರಧಾನ ಗುಣಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಎಂತಹ ಒಳ್ಳೆಯ ಅವಕಾಶ! ನಾವು ಏನಾಗಬೇಕು, ಹೇಗಿರಬೇಕು ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಬಲ್ಲೆವು. ಅದನ್ನು ನಾವು ಸೂಕ್ತವಾಗಿ ಆರಿಸಿಕೊಳ್ಳುವ 'ಅನ್ನ'ದ ಮೂಲಕ ಮತ್ತು ಬದಲಾಯಿಸಿಕೊಳ್ಳುವ ಜೀವನಶೈಲಿಯಿಂದ ಪಡೆದುಕೊಳ್ಳಬಲ್ಲೆವು. ವಿಕೃತಿಯಿಂದ ಸುಕೃತಿಯೆಡೆಗೆ ಸಾಗಲು ಉತ್ತಮ 'ಆಹಾರ' (ಕೇವಲ ತಿನ್ನುವುದಲ್ಲ, ನೋಡುವುದು, ಕೇಳುವುದು, ಪಂಚೇಂದ್ರಿಯಗಳಿಂದ ಸ್ವೀಕರಿಸುವುದೂ ಸೇರಿದಂತೆ) ಸೇವಿಸುವುದೇ ಉಪಾಯವಾಗಿದೆ, ಪರ್ಯಾಯ ಮಾರ್ಗವಿಲ್ಲ.
-ಕ.ವೆಂ.ನಾಗರಾಜ್.
**************
ದಿನಾಂಕ 7-09-2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: