ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಅಕ್ಟೋಬರ್ 28, 2016

ಕೆಳದಿ ಚೆನ್ನಮ್ಮಾಜಿ ಮತ್ತು ಧೊಂಡಿಯವಾಘರನ್ನು ನೆನಪಿಸುವ ಚನ್ನಗಿರಿ

     ಚನ್ನಗಿರಿ - ಮೊದಲು ಶಿವಮೊಗ್ಗ ಜಿಲ್ಲೆಗೆ, ನಂತರದಲ್ಲಿ ಚಿತ್ರದುರ್ಗ ಜಿಲ್ಲೆಗೆ ಸೇರಿದ ತಾಲ್ಲೂಕಾಗಿದ್ದು ತದನಂತರದಲ್ಲಿ ಪ್ರಸ್ತುತ ದಾವಣಗೆರೆ ಜಿಲ್ಲೆಗೆ ಸೇರಿದ ಸಮೃದ್ಧ ತಾಲ್ಲೂಕು, ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಹೆಸರುವಾಸಿಯಾದ ತಾಲ್ಲೂಕು. 17ನೆಯ ಶತಮಾನದಲ್ಲಿ ಕೆಳದಿ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಚನ್ನಗಿರಿ ಅದಕ್ಕೂ ಮೊದಲು ಗಂಗರು, ಕಲ್ಯಾಣಿ ಚಾಲುಕ್ಯರು ಮತ್ತು ಪಾಂಡ್ಯರ ಆಳ್ವಿಕೆಗೆ ಒಳಪಟ್ಟಿತ್ತು. ಚನ್ನಗಿರಿಯ ಕೋಟೆಯ ಆವರಣದಲ್ಲಿ ಪ್ರಾಚ್ಯವಸ್ತು ಇಲಾಖೆಯವರು ಹಾಕಿರುವ ಫಲಕದಲ್ಲಿ ಈ ಪ್ರದೇಶದಲ್ಲಿ ಚೆನ್ನಮ್ಮಾಜಿಯು ಕೋಟೆಯನ್ನು ಕಟ್ಟಿಸಿದ ನಂತರ ಈ ಸ್ಥಳಕ್ಕೆ ಚನ್ನಗಿರಿ ಎಂಬ ಹೆಸರು ಬಂದಿತು ಎಂದು ಇದೆ. ಕೆಳದಿಯ ಕೆಚ್ಚೆದೆಯ ರಾಣಿ ಚೆನ್ನಮ್ಮಾಜಿ ಕ್ರಿ.ಶ. 1671ರಿಂದ 1698ರವರೆಗೆ ಆಳ್ವಿಕೆ ನಡೆಸಿದ್ದು ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದವಳು. ಶಿವಾಜಿಯ ಮಗ ರಾಜಾರಾಮ ಔರಂಗಜೇಬನಿಂದ ಸೋಲಿಸಲ್ಪಟ್ಟು ರಕ್ಷಣೆ ಕೋರಿ ಬಂದಾಗ ರಕ್ಷಣೆ ನೀಡಿದವಳು. ಪಾರಂಪರಿಕವಾಗಿ ಮರಾಠರಿಗೂ ಕೆಳದಿಯರಸರಿಗೂ ಸಂಘರ್ಷಗಳು ನಡೆಯತ್ತಿದ್ದರೂ ಶರಣಾಗಿ ಬಂದವರಿಗೆ ರಕ್ಷಣೆ ನೀಡುವ ಹಿಂದೂ ಪರಂಪರೆಯನ್ನು ಎತ್ತಿಹಿಡಿದು ಅಪಾಯ ಎದುರಿಸಿದವಳು. ಕ್ರುದ್ಧ ಔರಂಗಜೇಬ ಕೆಳದಿಯನ್ನು ಆಕ್ರಮಿಸಲು ಮುಂದಾದಾಗ ನಡೆದ ಘೋರ ಕದನದಲ್ಲಿ ಅವನನ್ನು ಸೋಲಿಸಿ ಹಿಮ್ಮೆಟ್ಟಿಸಿದವಳು!
     ಕೆಳದಿ ಅರಸರ ಚರಿತ್ರೆ ತಿಳಿಸುವ ಲಿಂಗಣ್ಣಕವಿಯ ಐತಿಹಾಸಿಕ ಕಾವ್ಯ 'ಕೆಳದಿನೃಪ ವಿಜಯ'ದ ಒಂಬತ್ತನೆಯ ಆಶ್ವಾಸದ 62ನೆಯ ಪದ್ಯ ಮತ್ತು ನಂತರದ ವಚನದಲ್ಲಿ ಕವಿ ಚನ್ನಗಿರಿಯ ಕುರಿತು ಹೀಗೆ ಹೇಳಿದ್ದಾನೆ:
"ವ|| ಇಂತು ಸಂಗ್ರಾಮದೊಳ್ ಮೈಸೂರ ಮಹೀಶ್ವರನ ದಳವಾಯಿ ತಿಮ್ಮಪ್ಪನಂ ನಿಗ್ರಹಿಸಿ ತತ್ಪುತ್ರನಾದ ಕೃಷ್ಣಪ್ಪನಂ ಕೈಸೆರೆವಿಡಿದು ಮರಳ್ದು ಕಳುಹಿಸಿ ಪರಮಪ್ರಖ್ಯಾತಿಯಂ ಪಡೆದು ತುಂಗಭದ್ರಾ ನದೀತೀರದೊಳ್
 ಕಂ || ತರುಣಿಯರ ಕುಲಶಿರೋಮಣಿ
ವರಚನ್ನಮ್ಮಾಜಿಯಾತ್ಮನಾಥನ ಪೆಸರೊಳ್
ಸ್ಥಿರಮಾದ ಸೋಮಶೇಖರ
ಪುರಮೆಂದೆನಿಪಗ್ರಹಾರಮಂ ವಿರಚಿಸಿದಳ್  || 62 ||
ವ|| ಇಂತು ಪ್ರಾಣಕಾಂತನಾದ ಸೋಮಶೇಖರನಾಯಕರ ಪೆಸರೊಳ್ ಸೋಮಶೇಖರಪುರಮೆಂದೆನಿಪಗ್ರಹಾರಮಂ ನಿರ್ಮಾಣಂಗೈಸಿ ಸ್ವಾಸ್ಥೆಕ್ಷೇತ್ರವೃತ್ತಿಗಳಂ ಕಲ್ಪಿಸಿ ಶ್ರೋತ್ರಿಯ ಬ್ರಾಹ್ಮಣರ್ಗೆ ಶಿವಾರ್ಪಿತಮಾಗಿ ಧಾರೆಯನೆರೆದು ಸ್ಥಿರಶಾಸನಮಂ ಬರೆಸಿತ್ತಳಂತುಮಲ್ಲದೆ ಬಸವಾಪಟ್ಟಣದ ಸೀಮಾಸನ್ನಿವೇಶದೊಳ್ ಹೂಲಿಕೆರೆಯೆಂಬ ಸ್ಥಳದೊಳ್ ವಿರಾಜಿಪ ಕೋಂಟೆಯಂ ಸ್ವಾಧೀನಂಗೈದದಕ್ಕೆ ಸ್ವನಾಮಾಂಕಿತಮಾದ ಚನ್ನಗಿರಿಯ ಕೋಂಟೆಯೆಂದು ಪೆಸರಿಟ್ಟು ತತ್ಪರಿಸ್ತರಣಮಂ ಬಲ್ಪುಗೈಸಿದಳಂತುಮಲ್ಲದೆಯುಂ"
     ಗದ್ಯಾರ್ಥ: ಯುದ್ಧದಲ್ಲಿ ಮೈಸೂರು ಅರಸರ ದಳವಾಯಿ ತಿಮ್ಮಪ್ಪನನ್ನು ಸೋಲಿಸಿ, ಅವನ ಮಗ ಕೃಷ್ಣಪ್ಪನನ್ನು ಸೆರೆಹಿಡಿದರೂ ಕ್ಷಮಿಸಿ ಮರಳಿ ಕಳುಹಿಸಿದ ಪ್ರಖ್ಯಾತಿ ಪಡೆದ ತರುಣಿಯರ ಕುಲಶಿರೋಮಣಿ ವರ ಚನ್ನಮ್ಮಾಜಿ ತನ್ನ ಗಂಡನ ಹೆಸರಿನಲ್ಲಿ ಸೋಮಶೇಖರಪುರವೆಂಬ ಅಗ್ರಹಾರ ನಿರ್ಮಾಣ ಮಾಡಿಸಿ ಶ್ರೋತ್ರೀಯ ಬ್ರಾಹ್ಮಣರಿಗೆ ಸ್ವಾಸ್ಥೆ, ಕ್ಷೇತ್ರ, ಉದ್ಯೋಗಗಳನ್ನು ಕಲ್ಪಿಸಿ ಶಿವಾರ್ಪಣವೆಂದು ಧಾರೆಯೆರೆದು ಶಾಶ್ವತ ಶಾಸನ ಬರೆಸಿಕೊಟ್ಟಳು. ಅದೂ ಅಲ್ಲದೆ ಬಸವಾಪಟ್ಟಣದ ಸೀಮೆಯ ಹತ್ತಿರ ಹೂಲಿಕೆರೆ(ಹುಲಿಕೆರೆ) ಎಂಬ ಸ್ಥಳದಲ್ಲಿ ಶೋಭಿಸುತ್ತಿದ್ದ ಕೋಟೆಯನ್ನು ಸ್ವಾಧೀನಪಡಿಸಿಕೊಂಡು ಅದಕ್ಕೆ ತನ್ನ ಹೆಸರಿನ ಅಂಕಿತದೊಂದಿಗೆ 'ಚನ್ನಗಿರಿ ಕೋಟೆ' ಎಂದು ಹೆಸರಿಟ್ಟು ಆ ಕೋಟೆಯನ್ನು ಬಲಪಡಿಸಿದಳು.
     ಚೆನ್ನಮ್ಮಾಜಿ ಹೊಸದಾಗಿ ಕೋಟೆಯನ್ನು ಕಟ್ಟಿಸದೆ ಇದ್ದ ಕೋಟೆಯನ್ನೇ ಅಭಿವೃದ್ಧಿ ಪಡಿಸಿ ಬಲಗೊಳಿಸಿದ್ದಳೆಂದು ಇದರಿಂದ ತಿಳಿದುಬರುತ್ತದೆ. ಸ್ವಾಭಿಮಾನಿ ಸ್ವಾತಂತ್ರ್ಯ ಹೋರಾಟಗಾರ ಧೊಂಡಿಯವಾಘನ ಜನ್ಮಸ್ಥಳವಾದ ಚನ್ನಗಿರಿಗೆ ದಿನಾಂಕ 19.10.2016ರಂದು ಹೋಗಿ ಚನ್ನಗಿರಿ ಕೋಟೆಯನ್ನು ವೀಕ್ಷಿಸಿದ ಸಂದರ್ಭದಲ್ಲಿ ತೆಗೆದ ಕೆಲವು ಚಿತ್ರಗಳು ಇಂದಿನ ಸ್ಥಿತಿಯನ್ನು ಬಿಂಬಿಸುತ್ತಿವೆ. ಕೋಟೆಯು ಇತರ ಪ್ರದೇಶಗಳಲ್ಲಿ ಕಂಡುಬರುವ ಕೋಟೆಗಳಷ್ಟು ವಿಶಾಲವಾದುದಾಗಿಲ್ಲ. ಎರಡು ಸುತ್ತು ಗೋಡೆಗಳನ್ನು ಹೊಂದಿರುವ ಕೋಟೆಯನ್ನು ಮಣ್ಣು, ಗಾರೆ ಮತ್ತು ಕಲ್ಲುಗಳನ್ನು ಅಳವಡಿಸಿ ನಿರ್ಮಿಸಲಾಗಿದೆ. ಅಂಡಾಕಾರವಾಗಿರುವ ಕೋಟೆಯಲ್ಲಿ ಏಳು ಬುರುಜುಗಳಿದ್ದು, ಎರಡು ಕಾವಲು ಗೋಪುರಗಳಿವೆ. ಒಂದು ಭಾಗದಲ್ಲಿ ಬಂಡೆಯನ್ನು ಕೊರೆದು ಮಾಡಿದ ಕೊಳವಿದ್ದು ಅದಕ್ಕೆ ಮೆಟ್ಟಲುಗಳಿವೆ. ಸಭಾಗೃಹವಿರಬಹುದೆಂದು ಹೇಳಬಹುದಾದ ಸ್ಥಳದ ಅಡಿಪಾಯ ಕಂಡುಬರುತ್ತದೆ. 18ನೆಯ ಶತಮಾನಕ್ಕೆ ಸೇರಿದೆಯೆನ್ನಲಾದ ಕೋಟೆ ರಂಗನಾಥ ಸ್ವಾಮಿಯ ದೇವಾಲಯವನ್ನೂ ಕೋಟೆಯ ಭಾಗದಲ್ಲಿ ಕಾಣಬಹುದು. ಹಳೆಯ ರಥ ಶಿಥಿಲಾವಸ್ಥೆಯಲ್ಲಿದೆ. ಹೊಸ ರಥದ ಮನೆಯಿದೆ. ಚಿತ್ರಗಳು ಕಥೆಯನ್ನು ಮುಂದವರೆಸುತ್ತವೆ. 
-ಕ.ವೆಂ.ನಾಗರಾಜ್.

















































ಶುಕ್ರವಾರ, ಅಕ್ಟೋಬರ್ 21, 2016

ಶಿವಾಜಿಯ ತಂದೆ ಷಹಜಿಯ ಸಮಾಧಿ - ಹೊದಿಗೆರೆ, ಚನ್ನಗಿರಿ ತಾ.





     ಶಿವಾಜಿಯ ತಂದೆ ಷಹಜಿ ಭೋಸ್ಲೆ ಕರ್ನಾಟಕದ ಹೊದಿಗೆರೆ (ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ) ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಕುದುರೆಯಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ಕ್ರಿ.ಶ. 1664ರ ಜನವರಿ, 23ರಂದು ಮೃತನಾದಾಗ ಆತನ ದೇಹವನ್ನು ಹೊದಿಗೆರೆಯಲ್ಲೇ ಸಮಾಧಿ ಮಾಡಲಾಯಿತು. ಆಗ ಹೊದಿಗೆರೆ ಕೆಳದಿಯ ರಾಜ್ಯದ ಸೀಮೆಯಲ್ಲೇ ಬರುತ್ತಿದ್ದು, ಷಹಜಿಯನ್ನು ಆ ಗ್ರಾಮದಲ್ಲೇ ಸಮಾಧಿ ಮಾಡಲು ಅವಕಾಶ ಕೊಟ್ಟದ್ದು ಕೆಳದಿಯ ಅರಸರೇ. ಸಮಾಧಿ ಮಾಡಲು ಅವಕಾಶ ಕೊಡಬೇಕೇ, ಬೇಡವೇ ಎಂಬ ಬಗ್ಗೆ ದೀರ್ಘವಾದ ಮಂತ್ರಾಲೋಚನೆ ನಡೆದು, ಕೊನೆಗೆ ಷಹಜಿ ಮರಣ ಹೊಂದಿದ ಸ್ಥಳದಲ್ಲೇ ಸಮಾಧಿಯನ್ನು ಗೌರವೋಚಿತವಾಗಿ ನಿರ್ಮಿಸಲಾಯಿತೆಂದು ಹೇಳಲಾಗಿದೆ. ಕೆಳದಿಯರಸರ ಮಾನವೀಯತೆಗೆ ಈ ಘಟನೆ ಸಾಕ್ಷಿಯಾಗಿದೆ. ಮರಾಠರಿಗೂ ಕೆಳದಿಯರಸರಿಗೂ ಪರಸ್ಪರ ಸಂಘರ್ಷ ಸಾಮಾನ್ಯವಾಗಿದ್ದರ ಹಿನ್ನೆಲೆಯಲ್ಲಿ ಈ ಘಟನೆಗೆ ಮಹತ್ವವಿದೆ. ಈ ಸಮಾಧಿಯನ್ನು ಕರ್ನಾಟಕ ಸರ್ಕಾರವು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಗ್ರಾಮದ ಒಂದು ವೃತ್ತಕ್ಕೆ ಷಹಜಿ ಸರ್ಕಲ್ ಎಂದು ನಾಮಕರಣವಾಗಿರುವುದನ್ನು ಗಮನಿಸಿದೆ.
     ದಿನಾಂಕ 19.10.2016ರಂದು ಈ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿನ ಚಿತ್ರಗಳಿವು:






-ಕ.ವೆಂ.ನಾಗರಾಜ್.
**********
[ಶಹಾಜಿಯ ಚಿತ್ರವನ್ನು ಅಂತರ್ಜಾಲದಿಂದ ಹೆಕ್ಕಿದೆ.]