ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಅಕ್ಟೋಬರ್ 6, 2016

ಅರವತ್ತಾರನೆಯ ಮೆಟ್ಟಲಿನಲ್ಲಿ . . .


     65 ಮೆಟ್ಟಲುಗಳನ್ನು ಹತ್ತಿ 66ನೆಯ ಮೆಟ್ಟಲಿನಲ್ಲಿ ನಿಂತು ಹತ್ತಿದ ಮೆಟ್ಟಲುಗಳ ಕಡೆಗೆ ಕಣ್ಣು ಹಾಯಿಸಿದಾಗ ಆದದ್ದು ಸಮ್ಮಿಶ್ರ ಅನುಭವದ ಅನುಭೂತಿ. ಮೊದಲಿನ ಮೆಟ್ಟಿಲುಗಳನ್ನು ನನ್ನನ್ನು ಹೊತ್ತು ನಡೆದ, ಕೈ ಹಿಡಿದು ನಡೆಸಿದ ಅಪ್ಪ-ಅಮ್ಮರ ನೆನಪು, ತಮ್ಮಂದಿರು, ತಂಗಿಯ ಜೊತೆಗೂಡಿ ಹೆಜ್ಜೆ ಹಾಕಿದ ನೆನಪು, ಗೆಳೆಯರೊಡನೆ ಆಟವಾಡುತ್ತಾ, ಕಲಿಯುತ್ತಾ ಹೆಜ್ಜೆ ಹಾಕಿದ ಸುಂದರ ನೆನಪುಗಳು, 21 ಮೆಟ್ಟಿಲು ಹತ್ತಿದ ಸಮಯದಲ್ಲಿ ಪದವೀಧರನಾದದ್ದು, ನಮಗೋಸ್ಕರ ಕಷ್ಟಪಟ್ಟ ತಂದೆ-ತಾಯಿಯರಿಗೆ ನೆರವಾಗಬೇಕೆಂಬ ಇಚ್ಛೆ ದಟ್ಟವಾದ ಹೊತ್ತು, ನೌಕರಿಗೆ ಸೇರಿದ ಒಂದೆರಡು ವರ್ಷದಲ್ಲೇ ಧುತ್ತೆಂದು ಎರಗಿದ್ದ ತುರ್ತು ಪರಿಸ್ಥಿತಿಯ ನೆನಪು, ಸೆರೆಮನೆ ವಾಸ, ಪೋಲಿಸ್ ಠಾಣೆ, ಜೈಲು, ಕೋರ್ಟು-ಕಛೇರಿಗಳ ತಾಕಲಾಟ, ಪೀಕಲಾಟ, ಕತ್ತಲೆ ಕಳೆದು ಬೆಳಕು ಕಂಡು ನೌಕರಿ ಮತ್ತೆ ಸಿಕ್ಕಿದ ಸಂತಸಗಳ ನೆನಪು, . . . ಒಂದೇ, ಎರಡೇ, ಎಲ್ಲವೂ ಮನಃಪಟಲದ ಮೇಲೆ ಹರಿದಾಡಿದವು. 28ನೆಯ ಮೆಟ್ಟಿಲು ಹತ್ತುತ್ತಲೇ ಜೊತೆಗೂಡಿದ ಜೀವನ ಸಂಗಾತಿಯೊಂದಿಗೆ ಮೆಟ್ಟಿಲೇರುವ ಕಾಯಕ ಮುಂದುವರಿಕೆ, ಮಗಳು ಮತ್ತು ಮಗನ ಆಟ-ಪಾಠಗಳನ್ನು ಕಂಡು ಸಂಭ್ರಮಿಸಿದ ಹೊತ್ತು, ಅವರನ್ನು ಓದಿಸಿ, ಬೆಳೆಸಿ ಮುಂದೆ ತರುವ ಹೊಣೆಗಾರಿಕೆ ನಿಭಾಯಿಸಿದ ತೃಪ್ತಿ ಪಡುವ ಸಮಯದಲ್ಲೇ ಸಾಕಷ್ಟು ಮೆಟ್ಟಿಲುಗಳನ್ನು ಏರಿಯಾಗಿತ್ತು. ಮಕ್ಕಳ ಮದುವೆ ಆಯಿತು, ಅವರಿಗೂ ಮಕ್ಕಳಾದವು. ಈಗ ಅವರು ಸ್ವತಂತ್ರರಾಗಿ ತಮ್ಮ ಹಾದಿಯಲ್ಲಿ ಮುನ್ನಡೆದಿದ್ದಾರೆ. ನನ್ನ ಮೇಲೆ ಅವರುಗಳು ಈಗ ಅವಲಂಬಿತರಲ್ಲ ಮತ್ತು ನನ್ನ ಅಗತ್ಯತೆ ಅವರಿಗೆ ಇಲ್ಲವೆಂಬುದು ಸಮಾಧಾನದ ಸಂಗತಿ. ಅವರುಗಳು ಮುನ್ನಡೆಯಲಿ, ಅವರಿಗೆ ಶುಭವಾಗಲಿ ಎಂಬುದು ಮನದಾಳದ ಹಾರೈಕೆ. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮತ್ತು ಕುಟುಂಬ ಸಾಮರಸ್ಯದ ಕಾರ್ಯ ನಿರ್ವಹಿಸಲು ತೊಡಗಿಕೊಳ್ಳುವ ಸಲುವಾಗಿ ಹೊಂದಿದ್ದ ತಹಸೀಲ್ದಾರ್ ಹುದ್ದೆಗೆ ಸ್ವಇಚ್ಛಾ ನಿವೃತ್ತಿ ಮೂಲಕ ವಿದಾಯ ಹೇಳಿ ಏಳು ವರ್ಷಗಳಾದವು. ಮನವೊಪ್ಪುವ ಕಾರ್ಯಗಳಲ್ಲಿ ತೊಡಗಿ ಸರ್ವಹಿತ ಬಯಸುವ ವೇದಗಳ ಆಶಯದಂತೆ ಮುನ್ನಡೆಯಲು ಅಡಿಯಿಟ್ಟು ಮೆಟ್ಟಿಲುಗಳನ್ನು ಹತ್ತುವ ಕಾಯಕ ಮುಂದುವರೆದಿದೆ.
     ಡಿವಿಜಿಯವರ ಈ ಕಗ್ಗ ಮನುಷ್ಯನ ಜೀವನದ ಪರಿಯನ್ನು ಸಮರ್ಥವಾಗಿ ವಿವರಿಸಿದೆ. ಎಲ್ಲರಿಗೂ ಇದು ಅನ್ವಯಿಸುತ್ತದೆ:
ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ 
ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ |
ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ 
ಬಾಯ ಚಪ್ಪರಿಸುವನು ಮಂಕುತಿಮ್ಮ ||
     ಈ ಭೂಮಿಯ ಒಲೆಯಲ್ಲಿ ನಮ್ಮ ಬಾಳನ್ನು ಬೇಯಿಸಿ ಬಾಯಿ ಚಪ್ಪರಿಸುವ ವಿಧಿಯ ರೀತಿಯೇ ಇದಾಗಿದೆ. ಯಾರ ಅನುಭವವೂ ಇದಕ್ಕೆ ಹೊರತಾಗಿಲ್ಲ.
     ಹೌದು, ಸಾಧಿಸಿದ್ದೇನು? ಸಿಕ್ಕಿದ್ದೇನು? ಇದರ ಪರಾಮರ್ಶೆ ಮಾಡಬೇಕಾದವನು ನಾನೇ! ನವರಸದ ಅನುಭವಗಳೂ ದಟ್ಟವಾಗಿ ಆಗಿವೆ. ಖುಷಿ ಪಟ್ಟಿದ್ದೇನೆ, ಸಂಕಟ ಪಟ್ಟಿದ್ದೇನೆ, ನೋವು ಅನುಭವಿಸಿರುವೆ, ಅತ್ತಿದ್ದೇನೆ, ನಕ್ಕಿದ್ದೇನೆ, ಗಳಿಸಿರುವೆ, ಕಳೆದಿರುವೆ. ಈ ಜೀವನದ ಪಾಠಶಾಲೆ ಅನುಭವ ಮೂಟೆಯನ್ನೇ ಹೊರಿಸಿದೆ. ಕೂಡಿಸಿ, ಕಳೆದು, ಗುಣಿಸಿ, ಭಾಗಿಸಿ ಉಳಿದ ಶೇಷವೇ ಈಗಿನ ನನ್ನ ಜೀವನವಾಗಿದೆ. ಸಾಮರಸ್ಯ ಬಯಸುವ ಮನಸ್ಸಿಗೆ ಸಾಮರಸ್ಯ ಕದಡುವ ಕೆಲಸ ಮಾಡುವವರನ್ನು  ಕಂಡಾಗ ಕಸಿವಿಸಿಯಾಗುತ್ತದೆ. ಒಳ್ಳೆಯ ರೀತಿಯಲ್ಲಿ ಬಾಳುವುದಕ್ಕೂ ಇರುವ ಅಡ್ಡಿ-ಅಡಚಣೆಗಳು ಹಲವು, ಮಾಡಬೇಕಾದ ಕರ್ತವ್ಯ ಮಾಡುವುದೂ ಸರಳವಲ್ಲವೆಂಬ ಹೆಚ್ಚಿನವರ ಅಭಿಪ್ರಾಯವೇ ನನ್ನದೂ ಆಗಿದೆ. ಅಭಿಮಾನ- ಅದು ಸ್ವಾಭಿಮಾನವೋ, ದುರಭಿಮಾನವೋ- ಎಲ್ಲೆ ಮೀರಬಾರದು ಮತ್ತು ನಂಬಿಕೆ ಕಳೆದುಕೊಳ್ಳಬಾರದು ಎಂಬುದು ನನ್ನ ಅನಿಸಿಕೆ. ನಂಬಿಕೆಯೇ ಜೀವನ. ಅದಿಲ್ಲದಿದ್ದರೆ ಜೀವನ ಅರ್ಥ ಕಳೆದುಕೊಳ್ಳುತ್ತದೆ. ಮನುಷ್ಯನ ಆರು ವೈರಿಗಳೊಂದಿಗೆ ಸಮರ ಸಾಗಿಯೇ ಇದೆ. ಸೋಲು-ಗೆಲವುಗಳೆರಡನ್ನೂ ಕಾಣುತ್ತಿರುವೆ. ಮದವೆಂಬ ವೈರಿಯನ್ನು ಮಣಿಸಿದ್ದಾಗಿದೆ. ಮತ್ಸರವೂ ತಂಟೆ ಮಾಡಲಾರದು. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮುಂದೆ ಬರುವವರನ್ನು ಕಂಡು ಮತ್ಸರ ಪಡುವುದೇನಿರುತ್ತದೆ? ನನ್ನ ಸಾಮರ್ಧ್ಯಕ್ಕೆ ತಕ್ಕಂತೆ ಸಾಧಿಸಬೇಕೆಂಬ ಭಾವ ಮಾತ್ರ ಸುಪ್ತವಾಗಿದೆ. ಇರುವುದೇ ಸಾಕೆಂಬ ಭಾವ ಲೋಭವನ್ನು ಹತ್ತಿಕ್ಕಿದೆ. ನಾವು-ನಮ್ಮವರು ಎಂಬ ಮೋಹ ಇದೆ. ಇದು ಇರಲೇಬೇಕು. ಆದರೆ ಈ ಮೋಹ ಇತರರಿಗೆ ತೊಂದರೆ ಕೊಡದಂತೆ ಇರುವಾಗ ಅವನೂ ಮಿತ್ರನಾಗಿಬಿಟ್ಟಿದ್ದಾನೆ. ಕ್ರೋಧವೂ ತಕ್ಕಮಟ್ಟಿಗೆ ಹಿಡಿತಕ್ಕೆ ಸಿಕ್ಕಿದೆ. ಇನ್ನು ಉಳಿದದ್ದು ಕಾಮ! ಇದರ ವಿಶೇಷವೆಂದರೆ ಆರು ವೈರಿಗಳಲ್ಲಿ ಒಂದಾದ ಕಾಮ ಚತುರ್ವಿಧ ಪುರುಷಾರ್ಥಗಳಲ್ಲೂ ಒಂದಾಗಿದೆ. ಬೇಕು, ಬೇಕು ಅನ್ನುವುದು ಕಾಮ. ಆದರೆ ಏನು ಬೇಕು ಎಂದು ಆರಿಸಿಕೊಳ್ಳುವುದು ಪುರುಷಾರ್ಥಕ್ಕೆ ದಾರಿ. ಈ ಹಾದಿಯಲ್ಲಿ ಸಾಗುವ ಮನೋಭಾವವಿರುವುದರಿಂದ ಸಾಧನೆಗೆ ತೊಂದರೆಯೇನಿಲ್ಲವೆಂದು ಅನ್ನಿಸಿದೆ. ಆದರೆ ಆರು ವೈರಿಗಳೊಡನೆ ಸಂಘರ್ಷ ಎಂದೂ ಮುಗಿಯದ ಸಂಘರ್ಷವಾಗಿದ್ದು ಸದಾ ಎಚ್ಚರವಿರಲೇಬೇಕು. ಈ ಎಚ್ಚರ ಸದಾ ಇರಲೆಂದು ನನ್ನ ಪ್ರಾರ್ಥನೆಯಿದೆ.
     ಅಗೋ! ಅಂತರಂಗ ಗದರಿಸುತ್ತಿದೆ: "ಲೋ, ನಾಗರಾಜ, ಸಾಕು ಮಾಡು, ಪ್ರಲಾಪ ನಿಲ್ಲಿಸು. ಹತ್ತುವ ಕೆಲಸ ಮುಂದುವರೆಸು. ನಿನ್ನ ಕೆಲಸ ನೀನು ಮಾಡು. ಜೊತೆಗೆ ಬರುವವರು ಬಂದೇ ಬರುತ್ತಾರೆ. ಒಂದು ಮಾತು ನೆನಪಿಟ್ಟುಕೋ. ಯಾರೋ ನಿನ್ನನ್ನು ಮುಂದೆ ಕರೆದುಕೊಂಡು ಹೋಗುತ್ತಾರೆ ಅಥವ ಯಾರೋ ನಿನ್ನನ್ನು ಕೆಳಗೆ ತಳ್ಳುತ್ತಾರೆ ಎಂಬುದನ್ನು ನಿನ್ನ ಮನಸ್ಸಿನಿಂದ ತೆಗೆದುಹಾಕಿಬಿಡು. ಮುಂದೆ ಹೋಗುವುದಾಗಲೀ, ಕೆಳಗೆ ಇಳಿಯುವುದಾಗಲೀ ಎರಡಕ್ಕೂ ನೀನೇ ಕಾರಣ ಹೊರತು ಬೇರೆಯವರಲ್ಲ. ಯಾರನ್ನೂ ದೂಷಿಸಬೇಡ. ನಿನ್ನಲ್ಲಿ ಶಕ್ತಿ ಇರುವವರೆಗೂ ಹತ್ತುತ್ತಲೇ ಇರು. ಇಡುವ ಒಂದೊಂದು ಹೆಜ್ಜೆಯೂ ನಿನ್ನನ್ನು ಮೇಲಕ್ಕೆ ಕರೆದೊಯ್ಯುತ್ತದೆ, ಗುರಿಗೆ ಹತ್ತಿರವಾಗಿಸುತ್ತದೆ. ನಿಲ್ಲಬೇಡ, ಮೇಲೆ ಹತ್ತು." 
     ಹೌದು, ಮೇಲಕ್ಕೆ ಏರಬೇಕು. ಮೇಲಕ್ಕೆ . . . ಮೇಲಕ್ಕೆ. . . . ತುಂಬಾ ಮೇಲಕ್ಕೆ. . . . .!! . . . . ತುಂಬಾ ತುಂಬಾ ಮೇಲಕ್ಕೆ . . . . . !!! . . . . . . . . .   

1 ಕಾಮೆಂಟ್‌:

  1. Ravi Kumar
    ಸರ್ ನಿಮ್ಮನ್ನ ನೇರವಾಗಿ ನೋಡಿಲ್ಲವಾದರೂ.. ಆಧ್ಯಾತ್ಮ ಏನು ಅಂತ ಗೊತ್ತಿರುವುದರಿಂದ .. ಯಾವುದನ್ನೂ ಬಿಟ್ಟರೂ ಆಧ್ಯಾತ್ಮವನ್ನು ಮಾತ್ರ ಬಿಗಿಯಾಗಿ ಹಿಡಿದಿಟ್ಟುಕೊಳ್ಳಿ.. ದಿನ ಎರಡು ಹೊತ್ತು ತಪ್ಪದೇ ಧ್ಯಾನ ಮಾಡಿ.. ( ಮಾಡ್ತಾ ಇದ್ದೀರ ಅಂತ ಅಂದುಕೊಳ್ಳುತ್ತೀನಿ..)
    ಇಷ್ಟು ವರ್ಷ ಸಂಸಾರ, ವೃತ್ತಿ, ಅಂತ ಬಹಿರಂಗ ಲೋಕದಲ್ಲಿ ಮುಳುಗಿದ್ದೀರಿ.. ಇನ್ನು ಇವೆಲ್ಲವನ್ನೂ ತಾವರೆ ಎಲೆಯ ಮೇಲಿನ ನೀರ ಗುಳ್ಳೆಯಂತೆ ಹೊತ್ತು ಕೊಂಡು.. ನಿಮ್ಮ ಶರೀರ, ಮನಸ್ಸು, ಆತ್ಮ ಈ ಮೂರನ್ನೂ, ಸರ್ವಸ್ವವನ್ನೂ ಆ ದಿವ್ಯ ಚೇತನಕ್ಕೆ ಸಮರ್ಪಿಸಿ ಅಂತರಂಗ ಲೋಕದೆಡೆಗೆ ಪ್ರಯಾಣ ಬೆಳೆಸಿರಿ..
    65 ದಾಟಿ 66 ರ ಕಡೆಗೆ ಹೆಜ್ಜೆ ಹಾಕಿದ್ದೀರ.. ಮಿಕ್ಕವರಂತೆ ನಿಮ್ಮನ್ನ ನೀವು "ನಿವೃತ್ತಿ ಜೀವನ" ಅಂದುಕೊಳ್ಳುತ್ತಾ.. ವಯಸ್ಸಾದವರು ಅಂತ ಮಾನಸೀಕವಾಗಿ ಮುದುಡದಿರಿ.. ವಯಸ್ಸು ದೇಹಕ್ಕೆ ಮನಸ್ಸಿಗಲ್ಲ.. ಧ್ಯಾನ ಯೋಗದಿಂದ ಪ್ರತಿ ದಿನವೂ ಪ್ರಾಣ ಚೈತನ್ಯವನ್ನು ತುಂಬಿಕೊಳ್ಳುತ್ತಾ, ಪ್ರತಿ ದಿನವನ್ನೂ ಯುವಕನಂತೆ ಉತ್ಸಾಹದಿಂದ ಕಾಣುತ್ತಾ,ಹೊಚ್ಚ ಹೊಸ ಜೀವನ ಆರಂಭಿಸಿರಿ..
    Ravi Kumar " ಯಾರನ್ನೂ ದೂಷಿಸ ಬೇಡ" ಅಂತ ನಿಮ್ಮ ಅಂತರಂಗ ಹೇಳಿದೆಯಲ್ಲವೆ?
    ಶ್ರೀ ಪರಮಹಂಸರಂತಹ ಯೋಗಿಗಳು ಹೇಳಿದಂತೆ, ದೂಷಿಸಿದವರನ್ನು ಕ್ಷಮಿಸುತ್ತಾ ಗುರಿಯತ್ತ ನೆಡಯುವುದೆ ಸರಿಯಾದ ಜೀವನ..

    ದೂಷಿಸುವವರಿಗೆ ಗೊತ್ತಿಲ್ಲ .. ಎಲ್ಲಾ ಆತ್ಮ ಜೀವಿಗಳೆಂಬ ಮಕ್ಕಳಾದ ಈ ನಾವು ಒಬ್ಬನೇ ಪರಮಾತ್ಮನೆಂಬ ತಂದೆಯ ಮಕ್ಕಳೆಂದು..
    ಮಾಗಿದ ಪ್ರಬುದ್ಧ ಮನಸಿನ ಅನಾವರಣ ಸರ್. ನಿಮ್ಮ ನುಡಿಗಳಿಗೆ ನಮನ.

    Kowshika Venkatasubbiah
    tumba chennagi barediddIri

    Swarna Ramakrishna
    ಕವಿ ನಾಗರಾಜ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.ಅನುಭವದ ಮಾತುಗಳನ್ನು ಓದಿ ಮನಸ್ಸು ಸಾಕಷ್ಟು ಚಯ್ತನ್ಯ ಪಡೆಯಿತು.

    Venkata Giriappa
    All the best happy birthday

    Bindu Nagaraj
    Appa, got goosebumps after reading this... So much of struggle - efficiently handled !! And Appa, we are still very much dependent on you, many times just a conversation over phone has boosted our morale and energy... Akshaya is so proud of you, that she talks abt you atleast 10 times a day :)

    Anantha Koppa
    Bindu: No one can beat dad-daughter relationship! God bless you and everyone!

    Bindu Nagaraj
    Thanks Chikkappa 😊

    Prasanna K
    ಅನುಭವದ ಮೂಸೆಯೊಳಗಿನಿಂದ ಬಂದ ಮಾತುಗಳು, ಸಕ್ಕತ್ ಸರ್.

    Manjunatha Gowda Holenarasipura
    ಒಂದೊಂದು ಪದವೂ, ಸಾಲೂ ನಿಮ್ಮ ಅನುಭವಾಮೃತದ ಸಾರ, ಓದಿದ ಮನವಿದು ಧನ್ಯ. ಶುಭವಾಗಲಿ ಹಿರಿಯರೆ

    ಪ್ರತ್ಯುತ್ತರಅಳಿಸಿ