ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಅಕ್ಟೋಬರ್ 10, 2016

ಧೊಂಡಿಯವಾಘನ ಅಡಗುತಾಣವಾಗಿದ್ದ ಚೋರಡಿ ಅರಣ್ಯ ಪ್ರದೇಶ - ಕೋಟೆಹಾಳ್.


     ಧೊಂಡಿಯವಾಘನ ಭದ್ರವಾದ ಅನೇಕ ಅಡಗುತಾಣಗಳಲ್ಲಿ ಗಮನ ಸೆಳೆಯುವಂತಹದು ಮತ್ತು ಪ್ರಮುಖವಾಗಿದ್ದುದು ಚೋರಡಿಯ ಅರಣ್ಯ ಪ್ರದೇಶ. ಪ್ರಸ್ತುತ ಶಿವಮೊಗ್ಗ ತಾಲ್ಲೂಕಿನ ಹಳ್ಳಿಯಾದ ಚೋರಡಿ ಗ್ರಾಮ ದೊಡ್ಡ ಹಳ್ಳಿಯಾಗಿದ್ದು 19 ಚದರ ಕಿ.ಮೀ. ವಿಸ್ತೀರ್ಣ ಉಳ್ಳದ್ದಾಗಿದೆ. ಇದರಲ್ಲಿ ಸುಮಾರು 11.50 ಚದರ ಕಿ.ಮೀ. ಅರಣ್ಯ ಪ್ರದೇಶವಾಗಿದೆ. ಶಿವಮೊಗ್ಗದಿಂದ 28 ಕಿ.ಮೀ. ದೂರದಲ್ಲಿರುವ ಈ ಹಳ್ಳಿಯ ಜನಸಂಖ್ಯೆ 2011ರ ಜನಗಣತಿ ಅಂಕ ಅಂಶಗಳಂತೆ 2618 ಆಗಿದ್ದು 1305 ಪುರುಷರು ಮತ್ತು 1313 ಸ್ತ್ರೀಯರು ಇದ್ದಾರೆ. ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಈ ಗ್ರಾಮದಲ್ಲಿ ಸುಮಾರು 600 ಮನೆಗಳಿವೆ. ಸುಮಾರು ಶೇ. 80ರಷ್ಟು ಜನರು ಅಕ್ಷರಸ್ಥರು.
     ದೊಂಡಿಯವಾಘ ಬ್ರಿಟಿಷ್ ಸೈನ್ಯದೊಂದಿಗೆ ಮುಖಾಮುಖಿಯಾಗಿ ಸುತ್ತುವರೆಯಲ್ಪಟ್ಟು ತಪ್ಪಿಸಿಕೊಳ್ಳಲು ಮಾರ್ಗವೇ ಇಲ್ಲದಿದ್ದ ಸಂದರ್ಭದಲ್ಲಿ ತುಂಬಿ ಹರಿಯುತ್ತಿದ್ದ ಕುಮುದ್ವತಿ ನದಿಯ ತಿರುಗಣಿ ಮಡುವಿನಲ್ಲಿ ಕುದುರೆಯೊಂದಿಗೆ ಹಾರಿ ಆಚೆಯ ದಡ ಸೇರಿ ಶಿಕಾರಿಪುರದಲ್ಲಿ ರಕ್ಷಣೆ ಪಡೆದ ಸಂಗತಿಯಿಂದಾಗಿ ಚೋರಡಿಯ ಈ ಪರಿಸರ ಮಹತ್ವ ಪಡೆದಿದೆ. ಧೊಂಡಿಯನನ್ನು ಬೆನ್ನಟ್ಟಿ ಬಂದಿದ್ದ ಬ್ರಿಟಿಷರಿಗೆ ಅವನನ್ನು ನದಿಯ ಮಾರ್ಗವಾಗಿ ಹಿಂಬಾಲಿಸುವ ಧೈರ್ಯವಿರದೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂತಿರುಗಬೇಕಾಯಿತು. ಈ ಸ್ಥಳಕ್ಕೆ ಭೇಟಿ ಕೊಡಬೇಕೆಂಬ ಬಹಳ ದಿನಗಳ ಮನದಿಚ್ಛೆಗೆ ಕಾಲ ಕೂಡಿ ಬಂದಿತ್ತು. ಕಾರ್ಯನಿಮಿತ್ತ 27.09.2016ರಂದು ಶಿವಮೊಗ್ಗಕ್ಕೆ ಹೋಗಿದ್ದು, ಅಂದು ಈ ಸ್ಥಳಕ್ಕೆ ಭೇಟಿ ಕೊಡುವ ಬಗ್ಗೆ ಪೂರ್ವಭಾವಿಯಾಗಿ ಶಿವಮೊಗ್ಗದ ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಉಪನಿರ್ದೇಶಕರಾದ ಶ್ರೀ ಇಂದ್ರಾನಾಯಕ್ ಡುಂಗಾವತರಿಗೂ ತಿಳಿಸಿ ಹೋಗಿದ್ದೆ. ಧೊಂಡಿಯವಾಘನ ಅಭಿಮಾನಿಯಾದ ಅವರೇ ಸಂಬಂಧಿಸಿದ ಸ್ಥಳಗಳಿಗೆ ಕರೆದುಕೊಂಡು ಹೋಗಿ ತೋರಿಸಿದರು ಮತ್ತು ಹಲವು ಮಾಹಿತಿಗಳನ್ನು ಒದಗಿಸಿದರು. 
ಕೋಟೆಹಾಳ್
     ಗ್ರಾಮದಿಂದ ಸ್ವಲ್ಪ ದೂರ ಸಾಗಿದಾಗ ದರ್ಶನವಾದದ್ದು ಹಾಳು ಬಿದ್ದ ಕೋಟೆಯ ಅವಶೇಷ. ಜಂಬಿಟ್ಟಿಗೆಯಿಂದ ನಿರ್ಮಿತವಾದ ಕೋಟೆ ಸಂಪೂರ್ಣವಾಗಿ ಶಿಥಿಲವಾಗಿದೆ. ಬೆಳೆದ ಗಿಡ ಮರಗಳು, ಮುಳ್ಳುಕಂಟಿಗಳಿಂದಾಗಿ ಹತ್ತಿರ ಹೋದರೆ ಮಾತ್ರ ಇಲ್ಲೊಂದು ಕೋಟೆಯಿತ್ತು ಎಂಬುದು ತಿಳಿಯುತ್ತದೆ. ಕೋಟೆಯ ಸುತ್ತಲೂ ಕಂಡು ಬರುವ ಕಂದಕವೂ ಇದಕ್ಕೆ ಪುಷ್ಟಿ ನೀಡುತ್ತದೆ. ದೂರದಿಂದ ನೋಡಿದರೆ ಎತ್ತರದ ಪ್ರದೇಶ ಒಂದು ಗುಡ್ಡದಂತೆ ಕಾಣುತ್ತದೆ. ಈ ಪ್ರದೇಶಕ್ಕೆ ಕೋಟೆಹಾಳ್ ಎಂದು ಹೆಸರು ಇರುವುದು ಅನ್ವರ್ಥವಾಗಿದೆ. ಈಗ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣವೂ ಒಂದೊಮ್ಮೆ ಕೋಟೆಯ ಭಾಗವೇ ಆಗಿದ್ದ ಪ್ರದೇಶವಾಗಿದೆ. ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಚಂದ್ರಶೇಖರ್ ಮತ್ತು ಶಿಕ್ಷಕ ಶ್ರೀ ಶಂಕರ್ ಸಹ ನಮ್ಮೊಡನೆ ಕೋಟೆಯ ದಿಬ್ಬ ಹತ್ತುವ ಕೆಲಸದಲ್ಲಿ ಸೇರಿಕೊಂಡರು. ಅಷ್ಟೊಂದು ಎತ್ತರದ ಸ್ಥಳವಲ್ಲವಾಗಿದ್ದರೂ ಹತ್ತುವುದು ನಾವು ಆರಿಸಿಕೊಂಡ ಸ್ಥಳದಲ್ಲಿ ಸುಲಭವಾಗಿರಲಿಲ್ಲ. ಇಳಿಯುವಾಗ ಮಾತ್ರ ಸುಲಭವಾದ ದಾರಿಯಲ್ಲಿ ಹಿಂತಿರುಗಿದೆವು. ಅರಣ್ಯ ಇಲಾಖೆಗೆ ಸೇರಿದ ಈ ಜಾಗದ ಬಗ್ಗೆ ಪ್ರಾಚ್ಯ ವಸ್ತು ಇಲಾಖೆಯೂ ಗಮನ ಹರಿಸಬೇಕಿದೆ. ಇಲ್ಲಿನ ಪ್ರದೇಶ ಅಡಗಿಕೊಳ್ಳಲು ಹೇಳಿ ಮಾಡಿದಂತಹ ಸ್ಥಳವಾಗಿದ್ದು, ಹೊಂಚು ಹಾಕಿ ಬ್ರಿಟಿಷರ ಮೇಲೆರಗಿ ಅವರ ಅರಿವಿಗೆ ಬರುವುದರ ಒಳಗೆ ಸಾಕಷ್ಟು ಹಾನಿ ಉಂಟು ಮಾಡಿ ಅವರ ಶಸ್ತ್ರಾಸ್ತ್ರ, ಮದ್ದು-ಗುಂಡುಗಳನ್ನು ದೋಚಿ ಪರಾರಿಯಾಗುತ್ತಿದ್ದ ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ಪ್ರವೀಣನಾಗಿದ್ದ ಧೋಂಡಿಯವಾಘ ಇಂತಹ ಸ್ಥಳದಲ್ಲಿ ಅಡಗಿಕೊಂಡಿದ್ದರೆ ಶತ್ರುಗಳಿಗೆ ಹುಡುಕುವುದು ಸುಲಭದ್ದಾಗಿರಲಿಲ್ಲ. ಹುಡುಕಿಕೊಂಡು ಬಂದವರಿಗೇ ಆಪತ್ತು ಕಾದಿರುತ್ತಿತ್ತು. ಕೋಟೆಯ ಎತ್ತರದ ಪ್ರದೇಶದಲ್ಲಿ ನಿಂತು ನೋಡಿದರೆ ಕಾಣುವ ದೃಷ್ಯ ಚೇತೋಹಾರಿ. ಎಲ್ಲೆಲ್ಲೂ ಗಿಡ ಮರಗಳು, ಸುತ್ತಲೂ ಕಾಣುವ ಬೆಟ್ಟ ಗುಡ್ಡಗಳು ಆಯಾಸವನ್ನು ಮರೆಮಾಡುತ್ತವೆ. ಅರಣ್ಯ ಪ್ರದೇಶ ಒತ್ತುವರಿ, ಗಿಡ-ಮರಗಳ ಕಡಿತಗಳು, ಕಟ್ಟಡ ನಿರ್ಮಾಣಗಳು, ಇತ್ಯಾದಿಗಳ ನಡುವೆಯೂ ಈ ಪ್ರದೇಶ ಈಗಲೂ ಹೀಗಿರಬೇಕಾದರೆ ಹಿಂದೆ ಈ ಪ್ರದೇಶ ಹೇಗಿದ್ದಿರಬಹುದು ಎಂಬುದು ಕಲ್ಪನೆಗೆ ಬಿಟ್ಟ ಸಂಗತಿಯಾಗಿದೆ. ಕೋಟೆಹಾಳಿನ ಕೆಲವು ದೃಷ್ಯಗಳಿವು:ಮುಚ್ಚಿ ಹೋಗಿರುವ ಸುರಂಗ ಮಾರ್ಗ
     ಶಾಲೆಯ ಹಿಂಭಾಗದಲ್ಲಿ ಒಂದು ಕಾಲದಲ್ಲಿ ಇದ್ದಿರಬಹುದಾದ ಸುರಂಗದ ಕುರುಹು ಕಂಡು ಬರುತ್ತದೆ. ಗೊತ್ತಿದ್ದವರು ಹೇಳುವ ಪ್ರಕಾರ ಆ ಸುರಂಗ ಚೌಕಾಕಾರವಾಗಿದ್ದು ಸುಮಾರು ಒಂದು ಕಿ.ಮೀ. ಉದ್ದದ್ದಾಗಿತ್ತೆಂದು ಅವರ ಹಿರಿಯರು ಹೇಳುತ್ತಿದ್ದರಂತೆ. ಇದೂ ಸಹ ಜಂಬಿಟ್ಟಿಗೆಯಿಂದ ನಿರ್ಮಿತವಾದದ್ದಾಗಿದೆ. ಕಾಲನ ಹೊಡೆತಕ್ಕೆ ಸಿಕ್ಕಿ ಸುರಂಗ ಕುಸಿದಿರಬಹುದು, ಮುಚ್ಚಿಹೋಗಿರಬಹುದು. ಉತ್ಖನನ ಮಾಡಿದರೆ ಅನೇಕ ಐತಿಹಾಸಿಕ ಮಹತ್ವದ ಸಂಗತಿಗಳು ತಿಳಿಯುತ್ತದೆ. ಇತಿಹಾಸ ಸಂಶೋಧಕರುಗಳು, ಸ್ಥಳೀಯ ನಾಯಕರುಗಳು ಸರ್ಕಾರದ ಗಮನ ಸೆಳೆದು ಈ ಕಾರ್ಯ ಮಾಡುವುದು ಅಗತ್ಯವಾಗಿದೆ. ಧೊಂಡಿಯನ ಅಭಿಮಾನಿಗಳಾದ ಬಂಜಾರ ಟ್ರಸ್ಟಿನವರು ಸುರಂಗದ ಕುರುಹು ಕಾಣುತ್ತಿರುವ ಭಾಗದಲ್ಲಿ 'ಧೊಂಡಿಯವಾಘನ ಸುರಂಗ' ಎಂದು ನಾಮಫಲಕ ಹಾಕಿರುವುದು ಸೂಕ್ತವಾಗಿದೆ. ಧೊಂಡಿಯ ಸಹ ಈ ಸುರಂಗದ ಉಪಯೋಗ ಪಡೆದಿದ್ದಿರಬಹುದು.

-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ