ಶಿವಮೊಗ್ಗ ಜಿಲ್ಲೆಯ ಹೊಸನಗರದ ಹುಂಚ (ಹೊಂಬುಜ) ಎಂಬ ಸ್ಥಳ ಕುಮುದ್ವತಿ ನದಿಯ ಉಗಮ ಸ್ಥಾನವಾಗಿದೆ. ಅಲ್ಲಿಗೆ ಸಮೀಪದ ಭಿಲ್ಲೇಶ್ವರ ದೇವಾಲಯದ ಮುಂದೆ ಇರುವ ಕುಮುದ್ವತಿ ತೀರ್ಥವೆಂದು ಕರೆಯಲ್ಪಡುವ ಕಲ್ಯಾಣಿಯೇ ಆ ಉಗಮ ಸ್ಥಾನ. ಅಲ್ಲಿ 1945ರಲ್ಲಿ ಕೊಳ ನಿರ್ಮಿತವಾಗಿದೆಯೆನ್ನುತ್ತಾರೆ. ಅಲ್ಲಿ ಚಿಲುಮೆಯಾಗಿ ಹೊರಬಂದ ನೀರು ಮುಂದೆ ಝರಿಯಾಗಿ, ನದಿಯಾಗಿ ಮಾರ್ಪಟ್ಟು ಹರಿಯುತ್ತಾ ಸುಮಾರು 60 ಕಿ.ಮೀ. ಕ್ರಮಿಸಿದ ನಂತರದಲ್ಲಿ ಚೋರಡಿಯ ಪ್ರದೇಶದಲ್ಲಿ ಹರಿಯುತ್ತದೆ. ಚೋರಡಿಯ ಮುಖ್ಯ ವಸತಿ ಪ್ರದೇಶದಿಂದ ಸುಮಾರು 4.5 ಕಿ.ಮೀ. ದೂರದಲ್ಲಿ ತಿರುಗಣಿ ಮಡು ಇದೆ. ಇಂಗ್ಲಿಷಿನ ಎಸ್ ಆಕಾರದಲ್ಲಿ ಈ ಭಾಗದಲ್ಲಿ ನದಿ ಹರಿಯುತ್ತಿದ್ದು ಎರಡನೆಯ ತಿರುವಿನಲ್ಲಿ ತಿರುಗುವಾಗ ಮಡುವಾಗಿ ಸ್ಥಳೀಯವಾಗಿ ತಿರುಗಣಿ ಮಡು ಎಂಬ ಹೆಸರನ್ನು ಪಡೆದುಕೊಂಡಿದೆ. ಬಂಜಾರ ಸಮುದಾಯದವರಿಗೆ ಈ ಸ್ಥಳ ಪವಿತ್ರವಾದುದಾಗಿದೆ. ಅವರು ಇದನ್ನು ಕಾಳೋಕೂಂಡೋ (ಆಳವಾದ ನೀರಿನ ತಾಣ) ಎಂಬ ಹೆಸರಿನಿಂದ ಕರೆಯುತ್ತಾರೆ. ಈ ಪ್ರದೇಶ ಅವರ ಸಮುದಾಯದ ಮಹಾಪುರುಷ ಸೇವಾಭಾಯಾರ ಹುಟ್ಟು ಮತ್ತು ಇತಿಹಾಸಕ್ಕೆ ಕಾರಣವಾದ ತಾಣವಾಗಿದ್ದು ಅವರು ಇದನ್ನು ಪವಿತ್ರ ಭಾವನೆಯಿಂದ ಕಾಣುತ್ತಾರೆ. ಸಪ್ತ ಮಾತೃಕೆಯರು ಸ್ನಾನ ಮಾಡಿದ ಸ್ಥಳವೆಂದು ಗೌರವದಿಂದ ಕಾಣುತ್ತಾರೆ.
ಬಂಜಾರರ ಧಾರ್ಮಿಕ ಸ್ಥಳವಾದ ಈ ಪ್ರದೇಶ ಐತಿಹಾಸಿಕವಾಗಿಯೂ ಮಹತ್ವ ಪಡೆದದ್ದು ಧೊಂಡಿಯವಾಘನಿಂದಾಗಿ! ಟಿಪ್ಪುವಿನ ಸೆರೆಮನೆಯಲ್ಲಿ ಐದು ವರ್ಷಗಳ ಕಾಲ ಚಿತ್ರಹಿಂಸೆ ಅನುಭವಿಸಿದ್ದ ಧೊಂಡಿಯವಾಘ ಟಿಪ್ಪು ಬ್ರಿಟಿಷರಿಂದ ಹತನಾದ ನಂತರದಲ್ಲಿ ಬಿಡುಗಡೆಯ ಭಾಗ್ಯ ಪಡೆದ ಬಂಧಿತರಲ್ಲಿ ಒಬ್ಬನಾಗಿದ್ದ. ಹೊರಬಂದವನೇ ಧೊಂಡಿಯ ಮಾಡಿದ ಮೊದಲ ಕೆಲಸವೆಂದರೆ ಬಿದನೂರಿಗೆ (ಈಗಿನ ನಗರ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ) ಧಾವಿಸಿ ಟಿಪ್ಪು ಮತ್ತು ಹೈದರರಿಂದ ಸಂತ್ರಸ್ತರಾಗಿದ್ದ ಸೈನಿಕರನ್ನು ಒಟ್ಟುಗೂಡಿಸಿ ತನ್ನದೇ ಒಂದು ಸೈನ್ಯ ಕಟ್ಟಿದ್ದು ಮತ್ತು ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ್ದು! ಟಿಪ್ಪು ಸೈನ್ಯದಲ್ಲಿದ್ದಾಗ ಅನೇಕ ಯುದ್ಧಗಳಲ್ಲಿ, ಕಾಳಗಗಳಲ್ಲಿ ಭಾಗಿಯಾಗಿದ್ದಲ್ಲದೆ ಅವನ ಮತ್ತು ಬ್ರಿಟಿಷರ ತಂತ್ರ, ಕುತಂತ್ರಗಳನ್ನು ಕಂಡವನಾಗಿದ್ದ. ಟಿಪ್ಪು ಧೊಂಡಿಯನನ್ನು ಮುಸ್ಲಿಮನನ್ನಾಗಿಸಲು ಪ್ರಯತ್ನಿಸಿ ವಿಫಲನಾಗಿ ಬಲವಂತದಿಂದ ಮತಾಂತರ ಮಾಡಿಸಿದ್ದ. ಸತ್ತರೂ ಸರಿಯೇ, ಮುಸ್ಲಿಮನಾಗಿ ಬಾಳಲಾರೆ ಎಂಬ ಅವನ ನಿರ್ಧಾರ ಅವನನ್ನು ಟಿಪ್ಪುವಿನ ಬಂದಿಯಾಳು ಆಗುವಂತೆ ಮಾಡಿ ಐದು ವರ್ಷಗಳ ಕಾಲ ಚಿತ್ರಹಿಂಸೆ ಅನುಭವಿಸುವಂತೆ ಮಾಡಿತ್ತು. ನೇರ ಯುದ್ಧದಲ್ಲಿ ಬ್ರಿಟಿಷರನ್ನು ಸೋಲಿಸುವುದು ಕಷ್ಟವೆಂಬುದನ್ನು ಅರಿತಿದ್ದ ಧೊಂಡಿಯ ಗೆರಿಲ್ಲಾ ಮಾದರಿಯ ಯುದ್ಧ ತಂತ್ರ ಬಳಸಿ ಅವರನ್ನು ಹಣ್ಣುಗಾಯಿ, ನೀರುಗಾಯಿ ಮಾಡುವಲ್ಲಿ ಸಫಲನಾಗಿದ್ದ. ಬಂಜಾರರು ಅವನ ಬೆನ್ನಿಗಿದ್ದು ಅಡಗುತಾಣಗಳಲ್ಲಿ ಅವನಿಗೆ ಆಹಾರ ಸಾಮಗ್ರಿ ಒದಗಿಸುವುದಲ್ಲದೆ, ಸೈನಿಕರಾಗಿಯೂ ಸಹಕರಿಸಿದ್ದರು. ಶಿವಾಜಿಗೆ ಮಹರ್ ಜನಾಂಗದವರು ಬೆನ್ನೆಲುಬಾಗಿದ್ದಂತೆ ಧೊಂಡಿಯನಿಗೆ ಬಂಜಾರರ ಸಹಾಯ ಅಮೂಲ್ಯವಾದುದಾಗಿತ್ತು. ಕಾಡು-ಮೇಡುಗಳಲ್ಲಿ ಸಂಚರಿಸಿ ಅನುಭವವಿದ್ದ ಬಂಜಾರರು ಧೋಂಡಿಯವಾಘನ ರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಸುರಕ್ಷಿತ ಸ್ಥಳಗಳ ಮಾಹಿತಿ, ಇದ್ದ ಸ್ಥಳಕ್ಕೆ ಆಹಾರ ಮತ್ತಿತರ ಆವಶ್ಯಕ ಸಾಮಗ್ರಿಗಳನ್ನು ಒದಗಿಸುತ್ತಿದ್ದವರು, ಬ್ರಿಟಿಷರ ಚಲನವಲನಗಳ ಮಾಹಿತಿ ನೀಡುತ್ತಿದ್ದವರು ಇವರುಗಳೇ ಆಗಿದ್ದರು.
ಬ್ರಿಟಿಷ್ ಸೇನಾ ತುಕಡಿಗಳ ಮೇಲೆ ಆಯಕಟ್ಟಿನ ಸ್ಥಳಗಳಲ್ಲಿ ಹೊಂಚು ಹಾಕಿ ಅನಿರೀಕ್ಷಿತ ದಾಳಿ ನಡೆಸಿ ಅಪಾರ ಹಾನು ಉಂಟುಮಾಡುತ್ತಿದ್ದುದಲ್ಲದೆ ಅವರ ಶಸ್ತ್ರಾಸ್ತ್ರಗಳನ್ನೂ ಹೊತ್ತೊಯ್ಯುತ್ತಿದ್ದುದನ್ನು ತಪ್ಪಿಸಲು ಆಂಗ್ಲರು ಹೆಣಗಾಡಬೇಕಾಗಿತ್ತು. ತಂಗುದಾಣಗಳಲ್ಲಿ ಅವರು ಎಷ್ಟೋ ರಾತ್ರಿಗಳನ್ನು ಧೋಂಡಿಯನ ಅಂಜಿಕೆಯಿಂದ ನಿದ್ದೆಯಿಲ್ಲದೆ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಧೊಂಡಿಯನ ಉಪಟಳ ತಡೆಯಲಾರದೆ ಅವನನ್ನು ಹಿಡಿಯುವ ಸಲುವಾಗಿಯೇ ಲಾರ್ಡ್ ವೆಲ್ಲೆಸ್ಲಿ ಒಂದು ಪ್ರತ್ಯೇಕ ಸೈನಿಕರ ತಂಡವನ್ನೇ ನಿಯೋಜಿಸಿದ್ದ. ಒಮ್ಮೆ ಶಿವಮೊಗ್ಗದ ಕಡೆಯಿಂದ ಧಾವಿಸಿದ್ದ ಬ್ರಿಟಿಷರ ಸೇನೆಗೂ ಇವನಿಗೂ ಮುಖಾಮುಖಿಯಾಗಿ ಬ್ರಿಟಿಷರ ಕೈ ಮೇಲಾಗಿದ್ದನ್ನು ಗಮನಿಸಿದ ಧೋಂಡಿಯ ಮತ್ತು ಅವನ ಸಹಚರರು ಚದುರಿ ಚೋರಡಿಯ ಅರಣ್ಯ ಪ್ರದೇಶ ಸೇರಿದ್ದರು. ಅಲ್ಲಿಗೂ ಧಾವಿಸಿದ್ದ ಬ್ರಿಟಿಷರೊಡನೆ ಏಕಾಂಗಿಯಾದ ಧೋಂಡಿಯ ಸೆಣಸುತ್ತಾ ತಿರುಗಣಿ ಮಡುವಿರುವ ಜಾಗಕ್ಕೆ ಬಂದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಮಾರ್ಗ ಕಾಣದೆ ವಿಚಲಿತನಾಗಿದ್ದ. ಅನಿವಾರ್ಯವಾಗಿ ತಾನು ಏರಿದ್ದ ಕುದುರೆಯನ್ನೂ ಹುರಿದುಂಬಿಸಿ ತುಂಬಿ ಹರಿಯುತ್ತಿದ್ದ ನದಿಗೆ ಧುಮುಕಿಯೇ ಬಿಟ್ಟಿದ್ದ. ಸುಳಿಯಿದ್ದ ಆ ಜಾಗದಲ್ಲಿ ಆ ಸಾಹಸ ಮಾಡಲು ಎಂಟೆದೆ ಇದ್ದವರಿಗೆ ಮಾತ್ರ ಸಾಧ್ಯವಿತ್ತು. ಹಾಗಾಗಿ ಬ್ರಿಟಿಷರಿಗೆ ಅವನನ್ನು ಅಲ್ಲಿಯೂ ಹಿಂಬಾಲಿಸಲಾಗಿರಲಿಲ್ಲ. ನದಿಯನ್ನು ಸಾಹಸದಿಂದ ದಾಟಿ ಶಿಕಾರಿಪುರದ ಅರಣ್ಯ ಸೇರಿಕೊಂಡ ಧೊಂಡಿಯ ಸುಧಾರಿಸಿಕೊಂಡಿದ್ದ. ಶಿಕಾರಿಪುರದ ಆರಾಧ್ಯ ದೈವ ಹುಚ್ಚರಾಯಸ್ವಾಮಿಯನ್ನು (ಆಂಜನೇಯ) ತನ್ನ ರಕ್ಷಣೆಗೆ ಪ್ರಾರ್ಥಿಸಿಕೊಂಡಿದ್ದ. ಹೀಗೆ ಪಾರಾದ ನಂತರದಲ್ಲಿ ಹುಚ್ಚರಾಯಸ್ವಾಮಿಗೆ ತಲೆಬಾಗಿ ತನ್ನ ಖಡ್ಗವನ್ನು ಅರ್ಪಿಸಿ, ತನ್ನ ಶತ್ರುಗಳ ವಿರುದ್ಧ ಸೆಣೆಸಲು ಶಕ್ತಿ ಕೊಡಲು ಪ್ರಾರ್ಥಿಸಿದ್ದ.
ಬಂಜಾರರಲ್ಲಿ ಪ್ರಚಲಿತವಿರುವ ಕಥೆಯಂತೆ ಬ್ರಿಟಿಷರಿಂದ ಸುತ್ತುವರೆಯಲ್ಪಟ್ಟ ಧೊಂಡಿಯ ದಿಕ್ಕುಕಾಣದಂತಾಗಿ ಕಾಳೋಕೂಂಡೋ (ತಿರುಗಣಿ ಮಡು) ಹತ್ತಿರ ಬಂದಾಗ ಅವನ ಕುದುರೆ ಸಹ ನದಿಯನ್ನು ಕಂಡು ಗಾಬರಿಯಾಗಿರುತ್ತದೆ. ಆಗ ಅಲ್ಲಿಗೆ ಹತ್ತಿರದ ತಾಂಡಾದ ಬಳಿಯಲ್ಲಿ ಒಬ್ಬ ವೃದ್ಧೆ(ಡೊಕ್ರಿ) ಅವನಿಗೆ ಎದುರಾಗುತ್ತಾಳೆ. ಆಕೆ ಬೇರೆ ಯಾರೂ ಆಗಿರದೆ ವೇಷಧಾರಿಯಾಗಿದ್ದ ಮರಿಯಮ್ಮ (ಮಾರಮ್ಮ) ಆಗಿದ್ದು, ಆಕೆ ಮತ್ತು ಧೋಂಡಿಯನ ನಡುವಣ ಸಂಭಾಷಣೆ ಹೀಗಿತ್ತಂತೆ: (ಇದನ್ನು ಹಿಂದಿನ ತಲೆಮಾರಿನವರು ಹಾಡಿನ ರೂಪದಲ್ಲಿ ಹಾಡುತ್ತಿದ್ದರಂತೆ. ಈ ಮಾಹಿತಿ ಒದಗಿಸಿದವರು: ಶ್ರೀ ಇಂದ್ರಾನಾಯಕ್ ಡುಂಗಾವತ್.)
ಧೊಂಡಿಯ: ಯಾಡಿ ಸೇವಡೀತಿ ಫೀರಂಗಿವಾಳ್, ನಿಜಾಮೇರ್ ತುಕಡಿ, ಮರಾಠೇರ್ ತುಕಡಿ, ಘೋರ್‌ಲಿದೇಚೇ ಯಾಡಿ; ಕೊನಿಕತೋ ಎನೂರ ಹಾತೇಮ ಮರನೂ; ನವತೋ ತೂಮನ್ನ ತಾರ ಹಾತೇತಿ ಮಾರನಾಕೇ ಯಾಡೀ; ಮಾರ್ ಯಾಡಿ ಮರಿಯಮ್ಮ ಮನ್ನ ಮಾರಾನಾಕಿ ಕೇಲೂಚುಯೇ ಯಾಡೀ;
ಅರ್ಥ :- ತಾಯಿ ಎಲ್ಲಾ ಕಡೆಯಿಂದ ಬ್ರಿಟೀಷ್ ಸೈನ್ಯ, ನಿಜಾಮರ ಸೈನ್ಯ, ಮರಾಠಿ ಸೈನ್ಯ ನನ್ನನ್ನು ಆವರಿಸಿಕೊಂಡಿದೆ. ನನ್ನ ಬಳಿ ಎರಡು ರೀತಿಯ ಆಯ್ಕೆಮಾತ್ರ ಇದೆ. ಒಂದು ಈ ದುಷ್ಟರ ಕೈಯಲ್ಲಿ ಸಿಕ್ಕಿ ಸಾಯುವುದು, ಅಥವಾ ನಿನ್ನ ಕೈಯಿಂದಲೇ ನನ್ನನ್ನು ಸಂಹರಿಸಿ ಬಿಡು. ನನ್ನ ತಾಯಿ ಮರಿಯಮ್ಮ ನನ್ನನ್ನು ಸಂಹರಿಸಿದಳು ಎಂದು ತಿಳಿದು ಸಂತೋಷದಿಂದ ಸಾಯುತ್ತೇನೆ.
ಡೊಕ್ರಿ: ಏ ವಾಘ್ ತೂ ಭೇಟೋಚಿ ಜಕೋ ಘೋಡೋ ತೋಳಾರಾಮ್ ಛ, ಕಸೇನ ಚಮಕರೋಚಿ; ಈ ಕಾಳೋಕೂಂಡೇಮ ಅಂಗೋಳಿಕೀದೋ ಹಮಾರ್ ಸೇವಾ; ಮರಿಯಮ್ಮಾರ್ ನಾಮ್ ಲೀದೋಚಿ, ತಾರ್ ತೋಳಾರಾಮ್ ಛ, ವಾಟ ದೇಕಾಳಚ
ಅರ್ಥ: ಹೇ ದೂಂಢಿಯಾವಾಘ್, ನೀನು ಕುಳಿತಿರುವ ಕುದುರೆಯು ಎಲ್ಲರಿಂದ ಆರಾಧಿಸಲ್ಪಡುವ ಶ್ರೀ ಸೇವಾಭಾಯರ ಕುದುರೆ ತೋಳಾರಾಮ ಆಗಿದೆ. ಈ ಕಾಳೊಕಂಡೋದಲ್ಲಿ ಸ್ನಾನ ಮಾಡಿದ ನಮ್ಮ ಸೇವಾಭಾಯ. ಮರಿಯಮ್ಮ ದೇವಿಯ ಹೆಸರು ಹೇಳಿದ್ದೀಯ. ಆ ತೋಳಾರಾಮನೇ ನಿನಗೆ ದಾರಿ ತೋರಿಸುತ್ತಾನೆ.
ಈ ಮಾತುಗಳನ್ನು ಕೇಳಿದ ಧೊಂಡಿಯ ಗಲಿಬಿಲಿಗೊಳಗಾಗುತ್ತಾನೆ. ತನ್ನ ಅಂತ್ಯ ಸಮೀಪಿಸಿದೆ ಎಂದು ಭಾವಿಸಿದ ಆತ ಕುದುರೆಯ ಮುಖವನ್ನು ನೋಡುತ್ತಾನೆ. ಆ ಕುದುರೆ ನಗುನಗುತ್ತಾ ಅವನನ್ನು ಹೊತ್ತಿದ್ದಂತೆಯೇ ತುಂಬಿ ಹರಿಯುತ್ತಿದ್ದ ಕುಮುದ್ವತಿಯ ಆಳವಾದ ಕಾಳೋಕುಂಡೋಗೆ ಧುಮುಕಿಯೇಬಿಡುವುದಲ್ಲದೆ ಅವನನ್ನು ಸುರಕ್ಷಿತವಾಗಿ ಅವನನ್ನು ಆಚೆ ದಡಕ್ಕೆ ಸೇರಿಸಿಬಿಡುತ್ತದೆ. ನಂತರದಲ್ಲಿ ಸೂರಖಂಡ್ (ಸೊರಬ) ತಲುಪಿ ಚಂದ್ರಗುತ್ತಿಯಲ್ಲಿ ಮತ್ತು ಬೆಳಗುತ್ತಿಯ ಗುಡಿಗಳಲ್ಲಿ ಪೂಜೆ ಸಲ್ಲಿಸುತ್ತಾನೆ. ಆಮೇಲೆ ಕೆಲಕಾಲ ತಲೆ ಮರೆಸಿಕೊಂಡು ಶಿಕಾರಿಪುರದ ಅರಣ್ಯ ಪ್ರದೇಶದಲ್ಲಿ ಅಲೆದಾಡುತ್ತಾನೆ.
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ