ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಮಾರ್ಚ್ 17, 2010

ಮೂಢ ಉವಾಚ - 5












               
                             ಬಾಳು
ಬಾರದದು ಜನವು ಧನವು ಕಾಯದು 
ಕರೆ ಬಂದಾಗ ಅಡೆತಡೆಯು ನಡೆಯದು |
ಇರುವ ಮೂರು ದಿನ ಜನಕೆ ಬೇಕಾಗಿ 
ಜಗಕೆ ಬೆಳಕಾಗಿ ಬಾಳೆಲೋ ಮೂಢ ||


                   ತನ್ನತನ
ಸ್ವಾಭಿಮಾನಿಯ ಜಗವು ಗುರುತಿಪುದು 
ಹಸಿವಾದರೂ ಹುಲಿಯು ಹುಲ್ಲು ತಿನ್ನದು |
ಕೊಂಡಾಡಿದರೂ ಶಿರ ಚೆಂಡಾಡಿದರೂ 
ತನ್ನತನವ ಉಳಿಸಿಕೊಳ್ಳೆಲೋ ಮೂಢ ||


                    ನಡೆ ನುಡಿ
ಸಲ್ಲದ ನಡೆಯು ತೋರಿಕೆಯ ಜಪತಪವು 
ಪರರ ಮೆಚ್ಚಿಸಲು ಡಂಭದಾಚರಣೆಯು |
ಹಿತಕಾಯದು ಮರುಳೆ ಮತಿ ನೀಡದು 
ಕಪಟ ಫಲಕಾಗಿ ಬಳಲದಿರು ಮೂಢ ||


                    ಹಸಿವು
ಹಸಿದವಗೆ ಹುಸಿ ವೇದಾಂತ ಬೇಡ 
ಕಥೆ ಕವನ ಸಾಹಿತ್ಯ ಬೇಡ ಬೇಡ |
ಬಳಲಿದ ಉದರವನು ಕಾಡಬೇಡ 
ಮುದದಿ ಆದರಿಸಿ ಮೋದಪಡು ಮೂಢ ||
-ಕ.ವೆಂ.ನಾಗರಾಜ್.

3 ಕಾಮೆಂಟ್‌ಗಳು:

  1. ಕೆಳದಿಯ ಸು೦ದರ ಚಿತ್ರದೊಡನೆ ಮೂಢ ಉವಾಚ ಸು೦ದರವಾಗಿ ಮೂಡಿಬ೦ದಿದೆ.

    ಪ್ರತ್ಯುತ್ತರಅಳಿಸಿ
  2. ವೆ೦ಕಟೇಶಮೂರ್ತಿ. ವಿ.ಎಸ್.
    20MAY2010 5:53
    ನಾಗರಾಜ್ ರವರೇ
    ಮೂಢ ಉವಾಚ-೭ ಚೆನ್ನಾಗಿದೆ.."ತಿಮ್ಮ"ನೇ ಸ್ಪೂರ್ತಿಯೇ ಈ ನಿಮ್ಮ"ಮೂಢ"ನಿಗೆ?.. :)
    ನನ್ನಿ

    ಕೌಶಿಕ
    20MAY2010 6:03
    ನನಗೇನೋ ಸರ್ವಜ್ನಣ್ಣ್ ನ ಮಾತ್ಗಳ ಸ್ಪೂರ್ತಿ ಇದೆಯೇನೋ ಅನ್ನಿಸ್ತಾ ಇದೆ...


    Kavinagaraj
    20MAY2010 6:48
    ವೆಂಕಟೇಶಮೂರ್ತಿಗಳೇ, ಸ್ಪೂರ್ತಿ ಹಲವೆಡೆಗಳದು. ಮೂಲ ಅನುಭವದ್ದು. ಕಹಿ ಅನುಭವಗಳೇ ಹೆಚ್ಚಿನ ಸ್ಪೂರ್ತಿ ಕೊಟ್ಟಿದೆ ಎಂಬುದು ಕಹಿ ಸತ್ಯ.

    ಬೆಳ್ಳಾಲ ಗೋಪೀನಾಥ ರಾವ್
    20MAY2010 7:14
    ಕವಿವರ್ಯರೇ
    ಆಗಿಂದಾಗ ಮೆಲುಕು ಹಾಕುವಷ್ಟು ಅರ್ಥವತ್ತಾಗಿದೆ
    ಹಾಗೇ ಬರೀತಾ ಇರಿ
    ಧನ್ಯವಾದಗಳು

    ಶ್ರೀನಾಥ್ ಭಲ್ಲೆ
    20MAY2010 7:32
    ಸೊಗಸಾಗಿದೆ ..... ನಿಮ್ಮ ಕವನ ಓದಿ ಸ್ಪೂರ್ತಿ ಬಂದು ಹೀಗೆ ಬರೆದೆ:
    ಹೇಳಲಾಗಿಹುದು ಸುಲಭ ಪದಗಳಲಿ |
    ಬುದ್ದಿ ಮಾತುಗಳಿವು ಥರ ಥರದಲಿ ||
    ಬರವಣಿಗೆಯ ಹಿ೦ದಿಹುದು ಅನುಭವ ಗಾಢ |
    ಅರಿವು ಮೂಡಿಸಿಕೊ೦ಡು ನೀ ನೆಡೆಯೊ ಮೂಢ ||

    ಆಸು ಹೆಗ್ಡೆ
    21MAY2010 12:30
    ಸೊಗಸಾಗಿವೆ.
    ಆದರೆ ಇವು ಮೂಢ ಉವಾಚವೋ
    ಅಥವಾ ಮೂಢನಿಗೇ ಉವಾಚವೋ?

    Kavinagaraj
    21MAY2010 1:12
    ಎರಡೂ ಆಗಬಹುದು. ತಪ್ಪಿದ್ದರೆ ಎಷ್ಟಾದರೂ ಮೂಢ ಎಂದು ಸಹ್ಋದಯರು ಕ್ಷಮಿಸಬಹುದು! ಕಹಿ ಅನುಭವಗಳ ಹಿನ್ನೆಲೆಯಲ್ಲಿ ಹೀಗೆ ಮಾಡಬೇಡವೋ ಎಂದು ತನಗೆ ತಾನೇ ಹೇಳಿಕೊಳ್ಳುವುದರೊಂದಿಗೆ ಹೀಗೆ ಮಾಡಿದರೆ ಹೀಗಾಗುವುದು ಎಂದು ಕೇಳುವವರಿಗೆ(!) ತಿಳಿಸಿ ಮೂಢತನ ತೋರಿಸಿಕೊಳ್ಳಬಹುದು!

    ಪ್ರತ್ಯುತ್ತರಅಳಿಸಿ