ನಾನು ಒಬ್ಬ ದೇಶಭಕ್ತ ಶ್ರೀಸಾಮಾನ್ಯ ವ್ಯಕ್ತಿಯ ಕುರಿತು ಈಗ ಹೇಳಹೊರಟಿರುವೆ. ಆತ ಬೇರೆ ಯಾರೂ ಅಲ್ಲ, ನಾನು ಕೆಲವು ವರ್ಷಗಳ ಹಿಂದೆ ಶಿಕಾರಿಪುರಾದ ತಹಸೀಲ್ದಾರನಾಗಿದ್ದಾಗ ನನ್ನ ಅಧೀನ ನೌಕರರಾಗಿದ್ದ ತಾಲ್ಲೂಕಿನ ಉಡುಗಣಿ ಹೋಬಳಿಯ ರೆವಿನ್ಯೂ ಇನ್ಸ್‌ಪೆಕ್ಟರ್ ಅಬ್ದುಲ್ ವಾಜಿದ್. ವಾಜಿದ್ ನನಗೆ ಏಕೆ ಇಷ್ಟವಾದರೆಂದರೆ ಆತ ಸರ್ಕಾರಿ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದುದಲ್ಲದೆ ಹೊಣೆಯರಿತು ಸಂದರ್ಭಾನುಸಾರ ಸಮಯೋಚಿತವಾಗಿ ನನಗೆ ಸಹಕಾರ ನೀಡುತ್ತಿದ್ದರಿಂದ ಮತ್ತು ಇತರರಂತೆ ಕೆಲಸದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸದೆ ಇದ್ದುದರಿಂದ. ಹೆಚ್ಚು ಇಷ್ಟವಾದದ್ದೇಕೆಂದರೆ ಆತ ತಾಯ್ನೆಲ ಭಾರತವನ್ನು ಪ್ರೀತಿಸುತ್ತಿದ್ದುದರಿಂದ ಮತ್ತು ಅದನ್ನು ತೋರಿಕೆಗಾಗಿ ಅಲ್ಲದೆ ನಿಜವಾದ ಭಾವನೆಯಿಂದ ಮುಕ್ತವಾಗಿ ವ್ಯಕ್ತಪಡಿಸುತ್ತಿದ್ದರಿಂದ. ಹಲವಾರು ಪ್ರಸಂಗಗಳು ನಾವು ಪರಸ್ಪರ ಅಭಿಮಾನದಿಂದ ಕಾಣಲು ಕಾರಣವಾದವು. ಒಂದು ಸಣ್ಣ ಉದಾಹರಣೆ ಹೇಳಬೇಕೆಂದರೆ ಒಂದು ಗ್ರಾಮದಲ್ಲಿ ಅಕ್ರಮ ಸಾಗುವಳಿಗೆ ಸಂಬಂಧಿಸಿದಂತೆ ಒಬ್ಬ ಬಲಾಢ್ಯ ವ್ಯಕ್ತಿಯನ್ನು ವೈಷಮ್ಯದಿಂದಾಗಿ ಕೊಲೆ ಮಾಡಲಾಗಿತ್ತು. ಗ್ರಾಮದಲ್ಲಿ ಎರಡು ಗುಂಪುಗಳಿದ್ದವು. ಪೋಲಿಸರು ಎರಡು ಗುಂಪುಗಳವರನ್ನೂ ಸೆಕ್ಷನ್ ೧೪೪ರಂತೆ ಪ್ರಕರಣ ದಾಖಲಿಸಿ ಶಾಂತಿ ಕಾಪಾಡುವ ಬಗ್ಗೆ ಕ್ರಮ ಕೈಗೊಳ್ಳಲು ಕೋರಿ ಪ್ರಥಮ ವರ್ತಮಾನ ವರದಿ ಕೊಟ್ಟಿದ್ದರು. ನೋಟಿಸ್ ಜಾರಿ ಮಾಡಿ ಕರೆಯಿಸಿದರೆ ಪರಸ್ಪರರಲ್ಲಿ ದ್ವೇಷ ಜಾಸ್ತಿಯಾಗುವುದೆಂಬ ಅನುಮಾನ ನನಗಿತ್ತು. ಕೊಲೆಯಾಗಿ ಎರಡು ದಿನಗಳ ನಂತರದ ಸಾಯಂಕಾಲ ಆ ಗ್ರಾಮಕ್ಕೆ ಭೇಟಿ ಕೊಡುವ ಸಲುವಾಗಿ ರೆವಿನ್ಯೂ ಇನ್ಸ್‌ಪೆಕ್ಟರ್ ಮತ್ತು ಗ್ರಾಮಲೆಕ್ಕಿಗರನ್ನು ಬರಹೇಳಿದೆ. ಅದಾಗಲೇ ಸಂಜೆ ೬ ಘಂಟೆಯಾಗಿತ್ತು. ರೆವಿನ್ಯೂ ಇನ್ಸ್‌ಪೆಕ್ಟರ್ ವಾಜಿದ್ 'ಆ ಗ್ರಾಮಕ್ಕೆ ಮಾಮೂಲು ದಿನಗಳಲ್ಲೇ ಸಾಯಂಕಾಲ ಹೋಗುವುದು ಒಳ್ಳೆಯದಲ್ಲ, ಈಗ ಪರಿಸ್ಥಿತಿ ಬಿಗುವಿನಿಂದ ಇದ್ದು ಬೆಳಿಗ್ಗೆ ಹೋಗುವುದು ಒಳ್ಳೆಯದು' ಎಂದು ಸೂಚಿಸಿದರು. ಹೋಗಲೇಬೇಕೆಂದಿದ್ದಲ್ಲಿ ಪೋಲಿಸರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕೆಂಬ ಸಲಹೆಯನ್ನೂ ಕೊಟ್ಟರು. ಅದು ಅವರು ಕೆಲಸ ತಪ್ಪಿಸಿಕೊಳ್ಳಲು ಹೇಳಿದ್ದಾಗಿರದೆ ಪ್ರಾಮಾಣಿಕವಾಗಿ ಹೇಳಿದ್ದಾಗಿತ್ತು. ಸಮಸ್ಯೆಯಿಂದ ದೂರವಿದ್ದಷ್ಟೂ ಅವು ಪ್ರಬಲವಾಗುವುದೆಂದು ನನ್ನ ಅನುಭವದಿಂದ ಕಂಡುಕೊಂಡಿದ್ದರಿಂದ ಅವರಿಗೆ ಧೈರ್ಯ ಹೇಳಿ ಗ್ರಾಮಕ್ಕೆ ಕರೆದುಕೊಂಡು ಹೋದೆ. ನಾನು ಹೋದ ಕೂಡಲೇ ಗ್ರಾಮದ ಜನರು ಮನೆಗಳನ್ನು ಸೇರಿಕೊಂಡರು. ಹೊರಗಡೆ ಕಾಣಿಸಿಕೊಳ್ಳಲಿಲ್ಲ. ಗ್ರಾಮದ ಒಂದು ದೇವಸ್ಥಾನದ ಜಗಲಿ ಮುಂದೆ ಕುಳಿತು ಕೆಲವರನ್ನು ಬರಹೇಳಿದೆ. ಬೆರಳೆಣಿಕೆಯ ಜನರು ಬಂದಾಗ ಕುಶಲೋಪರಿಯಾಗಿ ಹತ್ತು ನಿಮಿಷ ಮಾತನಾಡುತ್ತಾ ಕಳೆದೆ. ನಾನು ಏಕೆ ಬಂದಿದ್ದೇನೆಂದು ಕುತೂಹಲವಿದ್ದವರಿಗೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಕ್ರಮೇಣ ಒಬ್ಬೊಬ್ಬರಾಗಿ ಸುಮಾರು ೪೦-೫೦ ಗ್ರಾಮಸ್ಥರು ಸೇರಿದರು. ಆಗ ವಿಷಯಕ್ಕೆ ಬಂದ ನಾನು ಅಪರಾಧ ನಡೆಯುವ ಮುನ್ನ ಅದನ್ನು ತಡೆಯುವ ಅಧಿಕಾರ ನನಗೆ ಇರುವ ಬಗ್ಗೆ, ಅದನ್ನು ಹೇಗೆ ಜಾರಿ ಮಾಡಬಹುದೆಂಬ ಬಗ್ಗೆ, ಅದರ ಪರಿಣಾಮಗಳ ಬಗ್ಗೆ, ಏನೇ ಗಲಾಟೆಯಾದರೂ ಗಲಾಟೆಗೆ ಕಾರಣರಾಗಬಹುದಾದ ಗ್ರಾಮಸ್ಥರ ಹೆಸರುಗಳನ್ನು ಹೇಳಿ ವಿವರಿಸಿದಾಗ ಮತ್ತು ಯಾವುದೇ ಸಣ್ಣ ಜಗಳವಾದರೂ ಅಧಿಕಾರವನ್ನು ಹಿಂದು ಮುಂದು ನೋಡದೆ ಯಾರ ಮಾತನ್ನೂ ಕೇಳದೆ ಕಠಿಣವಾಗಿ ಜಾರಿ ಮಾಡುತ್ತೇನೆಂದು ಮನವರಿಕೆ ಮಾಡಿಕೊಟ್ಟಾಗ ಅದು ಫಲ ಕೊಟ್ಟಿತು. ಪಕ್ಷಪಾತವಿಲ್ಲದೆ ಕೆಲಸ ಮಾಡುವ ವಾಜಿದರ ಬಗ್ಗೆ ಗ್ರಾಮಸ್ಥರಿಗೆ ಇದ್ದ ಒಳ್ಳೆಯ ಅಭಿಪ್ರಾಯ ಸಹ ಉಪಯೋಗಕ್ಕೆ ಬಂದಿತು. ಪ್ರಕರಣ ದಾಖಲಿಸುವ ಅವಶ್ಯಕತೆ ಬರಲಿಲ್ಲ. ಅಂದಿನಿಂದ ವಾಜಿದ್ ನಾನು ಏನೇ ಹೇಳಿದರೂ ಚಾಚೂ ತಪ್ಪದೆ ಮರುಮಾತನಾಡದೆ ಮಾಡುತ್ತಿದ್ದರು. ಯಾವುದೇ ಸಮಸ್ಯೆಯಿದ್ದರೂ - ಚಳುವಳಿಗಳು, ಕೋಮುಗಲಭೆಗಳು, ಜಮೀನು ಜಗಳಗಳು, ಆಡಳಿತಾತ್ಮಕ ವಿಷಯಗಳು, ಇತ್ಯಾದಿ - ಅವರು ಯಾವುದೇ ಪಕ್ಷಪಾತವಿಲ್ಲದೆ ಕೆಲಸ ಮಾಡುತ್ತಿದ್ದರು.
ವಾಜಿದ್ ಬಗ್ಗೆ ಹೇಳುವಾಗ ವಾಜಪೇಯಿ ಎಲ್ಲಿಂದ ಬಂದರು ಎಂದು ಕೇಳುವ ಮುಂಚೆ ಹೇಳಿಬಿಡುತ್ತೇನೆ. ಸುಮಾರು ೧೩ ವರ್ಷಗಳ ಹಿಂದಿನ ಮಾತು. ಆಗ ವಾಜಿದರು ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಗ್ರಾಮದ ಗ್ರಾಮಲೆಕ್ಕಿಗರಾಗಿದ್ದರು. ಆಗ ಭಾರತದ ಪ್ರಧಾನ ಮಂತ್ರಿಯಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ೩೦-೦೮-೧೯೯೮ರಂದು ಸಾಯಂಕಾಲ ೭-೩೦ ರಿಂದ ೮-೩೦ ರವರೆಗೆ ದೂರದರ್ಶನದಲ್ಲಿ ಜನರ ನೇರ ಸವಾಲುಗಳಿಗೆ ನೀಡಿದ ನೇರ ಉತ್ತರಗಳು ಬಿತ್ತರಗೊಂಡವು. ಅದನ್ನು ನೋಡಿ ತೀವ್ರ ಪ್ರಭಾವಿತರಾದ ವಾಜಿದ್ ಪ್ರಧಾನಮಂತ್ರಿಗಳಿಗೆ ೧೩-೦೯-೧೯೯೮ರಲ್ಲಿ ಪತ್ರವೊಂದನ್ನು ಬರೆದರು. ಸುಮಾರು ಮೂರು ಪುಟಗಳಷ್ಟು ದೊಡ್ಡದಾದ ಹಿಂದಿಯಲ್ಲಿ ಬರೆದ ಈ ಪತ್ರದಲ್ಲಿನ ಕೆಲವು ಸಾಲುಗಳು ಹೀಗಿವೆ:
"ಆದರಣೀಯ ಪ್ರಿಯ ಅಟಲಜಿ, ಪ್ರಣಾಮಗಳು.
. . . . . ಸವಾಲುಗಳಿಗೆ ನಿಮ್ಮ ಉತ್ತರದಿಂದ ನನಗೆ ಬಹಳ ಆನಂದವಾಗಿದೆ. . . ದೇಶಸೇವೆಯಲ್ಲಿ ಅಲ್ಪ ಪ್ರಮಾಣದಲ್ಲಾದರೂ ನಾನು ಉಪಯುಕ್ತನಾಗಬೇಕೆಂಬುದು ಒಬ್ಬ ದೇಶವಾಸಿಯಾಗಿ ನನ್ನ ಕರ್ತವ್ಯವಾಗುತ್ತದೆ. . . ನನ್ನ ಉದ್ದೇಶ ದೇಶದ ಏಕತೆ, ಅಖಂಡತೆಯನ್ನು ಉಳಿಸುವುದು, ಸೋದರತ್ವದ ಭಾವನೆಯಿಂದ ದೇಶವಾಸಿಗಳಲ್ಲಿ ದೇಶಭಕ್ತಿ ಮತ್ತು ದೇಶಾಭಿಮಾನ ಜಾಗೃತಗೊಳಿಸಲು ನನ್ನ ಪ್ರಯತ್ನವಿರುತ್ತದೆ.
ಭಾರತದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನಾನು ಮೂರು ಕವಿತೆಗಳನ್ನು ರಚಿಸಿರುವೆ. ಇದನ್ನು ದೇಶದ ಹೆಸರಿನಲ್ಲಿ ಸಮರ್ಪಿಸಿ ನಿಮಗೆ ತಲುಪಿಸುತ್ತಿದ್ದೇನೆ. ಮೂರು ಭಾಗಗಳಲ್ಲಿ ರಚಿಸಿರುವ ಈ ಕವಿತೆಗಳು: ಕಲ್ ಕಾ ಹಿಂದೂಸ್ಥಾನ್ (ನಿನ್ನೆಯ ಹಿಂದೂಸ್ಥಾನ), ಆಜ್ ಕಾ ಹಿಂದೂಸ್ಥಾನ್ (ಇಂದಿನ ಹಿಂದೂಸ್ಥಾನ) ಮತ್ತು ಕಲ್ ಕಾ ಹಿಂದೂಸ್ಥಾನ್ (ನಾಳೆಯ ಹಿಂದೂಸ್ಥಾನ).. . .
ದೇವರಾಣೆ, ದೇಶಭಕ್ತಿ ಮತ್ತು ಅಭಿಮಾನ ಹೊರತುಪಡಿಸಿ ಬೇರೆ ಯಾವುದೇ ಧರ್ಮ, ಪಕ್ಷ, ಭಾವನೆಗಳು ನನ್ನ ಮನದಲ್ಲಿಲ್ಲ. ಗೊತ್ತಿಲ್ಲದೆ ಏನಾದರೂ ತಪ್ಪಾದರೆ ದೇಶಕ್ಕಾಗಿ ಕ್ಷಮಿಸಿ.
. . . ನಿಮಗೆ ಕವಿತೆಗಳು ಇಷ್ಟವಾದರೆ ಸಂಸತ್ ಸದಸ್ಯರುಗಳ ಗಮನಕ್ಕೂ ತರಲು ಕೋರುವೆ. . . ಈಗ ದೇಶ ಕಠಿಣ ಮತ್ತು ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. . . ವ್ಯಕ್ತಿಯ ಹಿತ ಮುಖ್ಯವೇ ದೇಶದ ಹಿತ ಮುಖ್ಯವೇ ಎಂಬುದನ್ನು ನಾವು ಈಗ ತೀರ್ಮಾನಿಸಲೇಬೇಕಿದೆ.
. . . ಯುಗಯುಗಗಳಲ್ಲಿ ಹಿಂದೂಸ್ಥಾನವೇ, ನಿನಗೆ ಜಯ-ಜಯಕಾರ ಮೊಳಗಲಿ, ಸಪ್ತ ಸಮುದ್ರಗಳಾಚೆಯೂ ನಿನಗೆ ಜಯ-ಜಯಕಾರಗಳಾಗಲಿ. .
ನಿಮ್ಮ ವಿಶ್ವಾಸಿ,
ಕೆ.ಇ. ಅಬ್ದುಲ್ ವಾಜಿದ್.
ಮೇಲಿನ ಪತ್ರಕ್ಕೆ ಅಟಲ್ ಬಿಹಾರಿ ವಾಜಪೇಯಿಯವರು ಸ್ವತಃ ಸಹಿ ಮಾಡಿ ಕಳುಹಿಸಿದ ದಿನಾಂಕ ೧೬-೧೦-೧೯೯೮ರ ಪತ್ರದಲ್ಲಿ ಹೀಗೆ ತಿಳಿಸಿದ್ದರು:
"ಪ್ರಿಯ ಶ್ರೀ ಅಬ್ದುಲ್ ವಾಜೀದ್,
ನಿಮ್ಮ ಪತ್ರದೊಂದಿಗೆ ಸ್ವರಚಿತ ಕೆಲವು ಕವಿತೆಗಳು ತಲುಪಿವೆ. ಧನ್ಯವಾದಗಳು.
ನಿಮ್ಮ ಪತ್ರ ಮತ್ತು ರಚನೆಗಳನ್ನು ನಾನು ಓದಿದ್ದೇನೆ. ಅವುಗಳಲ್ಲಿ ಭಾವಪ್ರಧಾನವಾಗಿರುವ ಜೊತೆಜೊತೆಗೆ ದೇಶ ಮತ್ತು ಸಮಾಜ ಕುರಿತು ಮಾನವೀಯ ಸಂವೇದನೆಗಳನ್ನು ಜಾಗೃತಗೊಳಿಸುವ ದಿಸೆಯಲ್ಲಿ ಒಳ್ಳೆಯ ಪ್ರೇರಣೆಯಿದೆ. ನಾನು ಈ ಕ್ಷೇತ್ರದಲ್ಲಿ ನಿಮ್ಮ ಸಫಲತೆಗಾಗಿ ಹಾರೈಸುವೆ. ದೇಶಹಿತದ ಸಲುವಾಗಿ ಎಲ್ಲಾ ಸಾಧ್ಯವಿರುವ ಹೆಜ್ಜೆಗಳನ್ನಿಡಲಾಗುವುದು ಎಂಬ ವಿಚಾರದಲ್ಲಿ ತಾವು ವಿಶ್ವಾಸದಿಂದಿರಿ.
ಶುಭಕಾಮನೆಗಳೊಂದಿಗೆ,
ತಮ್ಮವ,
ಅಟಲ್ ಬಿಹಾರಿ ವಾಜಪೇಯಿ"
ವಾಜಿದರ ಕವಿತೆಗಳು:
೧. ಕಲ್ ಕಾ ಹಿಂದೂಸ್ಥಾನ್ (ನಿನ್ನೆಯ ಹಿಂದೂಸ್ಥಾನ)
ಇದರಲ್ಲಿ ಸ್ವಾತಂತ್ರ್ಯಪೂರ್ವ ಭಾರತದ ಚಿತ್ರಣ ಹೃದಯಕ್ಕೆ ಮುಟ್ಟುವಂತೆ ಚಿತ್ರಿಸಿದ್ದಾರೆ. ಬ್ರಿಟಿಷರ ಕುಟಿಲತೆ, ವಿಭಜಿಸಿ ಆಳುವ, ಒಬ್ಬರನ್ನೊಬ್ಬರು ಎತ್ತಿಕಟ್ಟುವ ಕೆಲಸಗಳನ್ನು ವಿವರಿಸಿ, ಗುಲಾಮಿತನದಿಂದ ಹೊರಬರಲು ಪ್ರೇರಿಸುತ್ತಾ "ಬನ್ನಿ ಸ್ವಾತಂತ್ರ್ಯದ ಜ್ಯೋತಿ ಬೆಳಗೋಣ" ಎಂದು ಕರೆ ನೀಡಿದ್ದಾರೆ.
೨. ಆಜ್ ಕಾ ಹಿಂದೂಸ್ಥಾನ್ (ಇಂದಿನ ಹಿಂದೂಸ್ಥಾನ)
ಇದರಲ್ಲಿ ಧರ್ಮ ಸಾಮರಸ್ಯದ ಮಹತ್ವ ಬಿಂಬಿಸಲಾಗಿದೆ. ರಾಮನ ಜೊತೆ ರಹೀಮನಿರಲಿ, ಕೃಷ್ಣನ ಕೈಯೊಂದಿಗೆ ಕರೀಮನ ಕೈ ಸೇರಲಿ ಎನ್ನುವ ಇವರು ದ್ವಾಪರದಿಂದ ತ್ರೇತಾಯುಗದವರೆಗೆ ಫಿರೌನ್, ನಮ್ರೂದ, ಮೀರಸಾದಿಕ್, ಕಂಸ, ಶಕುನಿ, ದುರ್ಯೋಧನ, ರಾವಣ ಇಂತಹವರನ್ನು ಜನ ನೆನೆಯಲು ಬಯಸುವುದಿಲ್ಲವೆನ್ನುತ್ತಾರೆ. ಜೀವನ ಅಲ್ಪವಾಗಿದೆ, ದೇಶಕ್ಕೆ ಏನು ಮಾಡಿದೆಯೆಂಬ ಲೆಕ್ಕ ಕೊಡಬೇಕಿದೆ, ಸಹಸ್ರಾರು ಜನರ ಬಲಿದಾನದಿಂದ ಬಂದ ವರದಾನವೀ ಸ್ವಾತಂತ್ರ್ಯ, "ಬನ್ನಿ, ಮತ್ತೊಮ್ಮೆ ಸ್ವಾತಂತ್ರ್ಯದ ಜ್ಯೋತಿ ಬೆಳಗೋಣ" ಎಂದು ಹುರಿದುಂಬಿಸಿದ್ದಾರೆ.
೩. ಭವಿಷ್ಯ್ ಕಾ ಹಿಂದೂಸ್ಥಾನ್ (ಭವಿಷ್ಯದ ಹಿಂದೂಸ್ಥಾನ)
ರಕ್ತಪಾತ, ಯುದ್ಧ, ಹಿಂಸಾತ್ಮಕ ಕ್ರಾಂತಿಗಳಿಂದ ಉಪಯೋಗವಿಲ್ಲ, ಶಾಂತಿ ಮಂತ್ರದಿಂದ ಸತ್ಯ-ಶಿವ-ಸುಂದರರ ಸಾಕಾರವಾಗುವುದು. ಬಡತನ ನಿವಾರಣೆ ಕ್ರಮಗಳ ಅಗತ್ಯತೆ, ಸಹನ- ಸದ್ಗುಣಶೀಲತೆಯ ಸಂಕಲ್ಪ ಕೈಗೊಳ್ಳುವ ಬಗ್ಗೆ, ದೇಶದ ಹಿತ, ಸಂರಕ್ಷಣೆಯ ಕಡೆಗೆ ಗಮನ, ಒಳ್ಳೆಯ ಪ್ರಜಾತಂತ್ರ, ದೇಶಹಿತಕ್ಕಾಗಿ ಪಕ್ಷ, ಪಂಥ, ಮತ, ಧರ್ಮಗಳನ್ನು ಬದಿಗಿಡುವುದು, ಇತ್ಯಾದಿಗಳನ್ನು ಹೃದಯಂಗಮವಾಗಿ ಮೂಡಿಸಿದ್ದಾರೆ. ಒಳ್ಳೆಯ ಕೆಲಸಕ್ಕೆ ಕೈಜೋಡಿಸೋಣ, ಕೆಟ್ಟ ಕೆಲಸಗಳನ್ನು ಖಂಡಿಸೋಣ, ಮಾತೃಭೂಮಿಯ ಋಣ ತೀರಿಸಲು ಸೇವೆ ಮಾಡೋಣ, ಈ ದೇಶ ನಮ್ಮದು, ನಾವಿ ದೇಶಕ್ಕಾಗಿ ಏನಾದರೂ ಮಾಡಲೇಬೇಕು ಎನ್ನುವ ಇವರ ಆಶಯವೆಂದರೆ: ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣದಲ್ಲಿ ಜನರು ಒಟ್ಟಾಗಿ ನಾವು ಒಂದೇ ಎಂದು ಹೇಳಲಿ, ದೇಶದಲ್ಲಿ ಸುಖ, ಶಾಂತಿ, ಏಕತೆ-ಅಖಂಡತೆಯ ಅಲೆ ಏಳಲಿ, ಪ್ರೀತಿ-ವಿಶ್ವಾಸಗಳ ಸುಂದರ ನಿರ್ಮಲ ಸಮಾಜ ಬರಲಿ ಎಂಬುದೇ. "ಯುಗಯುಗಗಳಲ್ಲಿ ಹಿಂದೂಸ್ಥಾನವೇ, ನಿನಗೆ ಜಯ-ಜಯಕಾರ ಮೊಳಗಲಿ, ಸಪ್ತ ಸಮುದ್ರಗಳಾಚೆಯೂ ನಿನಗೆ ಜಯ-ಜಯಕಾರಗಳಾಗಲಿ" ಎಂದು ಈ ಭಾವಜೀವಿ ಹೃದಯಪೂರ್ವಕ ಬಯಸಿದ್ದಾರೆ.
ದೇಶಭಕ್ತ ಶ್ರೀಸಾಮಾನ್ಯ ಅಬ್ದುಲ್ ವಾಜೀದರಿಗೆ ಶುಭವಾಗಲಿ.
**********************
ವಾಜಿದರ ರಚನೆಗಳ ಯಥಾಪ್ರತಿಗಳು:
ಅಟಲ ಬಿಹಾರಿ ವಾಜಪೇಯಿಯವರ ಪತ್ರ
ಮತ್ತೊಮ್ಮೆ ಅಬ್ದುಲ್ ವಾಜಿದರಿಗೆ ಶುಭಾಶಯಗಳು.
*************
-ಕ.ವೆಂ.ನಾಗರಾಜ್.