ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಏಪ್ರಿಲ್ 28, 2011

ಮೂಢ ಉವಾಚ - 52

ಅಂತ್ಯ
ದಿನಗಳುರುಳುವುವು ಅಂತೆ ಮನುಜನಾಯುವು
ಶಾಶ್ವತನು ತಾನೆಂಬ ಭ್ರಮೆಯು ಮುಸುಕಿಹುದು |
ಚದುರಂಗದ ರಾಜ ಮಂತ್ರಿ ರಥ ಕುದುರೆ ಕಾಲಾಳು
ಆಟದಂತ್ಯದಲಿ ಎಲ್ಲರೂ ಒಂದೆ ಮೂಢ ||
ಅವಿಚ್ಛಿನ್ನ
ಭೂಮಿಯೊಂದಿರಬಹುದು ಮಣ್ಣಿನ ಗುಣ ಭಿನ್ನ
ಜಲವೊಂದಿರಬಹುದು ಜಲದಗುಣ ಭಿನ್ನ |
ಜ್ಯೋತಿಯೊಂದಿರಬಹುದು ಪ್ರಕಾಶ ಭಿನ್ನ
ಭಿನ್ನದೀ ಜಗದಿ ಆತ್ಮವವಿಚ್ಛಿನ್ನ ಮೂಢ ||
ತಡ
ಯೌವನವು ಮುಕ್ಕಾಗಿ ಸಂಪತ್ತು ಹಾಳಾಗಿ
ಗೆಳೆಯರು ಮರೆಯಾಗಿ ಕೈಕಾಲು ಸೋತಿರಲು |
ನಿಂದೆ ಮೂದಲಿಕೆ ಸಾಲಾಗಿ ಎರಗಿರಲು
ಬದುಕಿನರ್ಥ ತಿಳಿದೇನು ಫಲ ಮೂಢ ||

ಬೇಟೆ
ಮದಭರಿತ ಯೌವನವ ಮುಪ್ಪು ತಿನ್ನುವುದು
ಸಾಕೆಂಬ ಭಾವವನು ಬೇಕೆಂಬುದಳಿಸುವುದು |
ಗುಣವನಸೂಯೆ ತಿನ್ನುವುದು ಒಂದನಿನ್ನೊಂದು
ನುಂಗದಿರುವುದಿದೆಯೇ ಜಗದಿ ಮೂಢ ||
********************
-ಕ.ವೆಂ.ನಾಗರಾಜ್.






2 ಕಾಮೆಂಟ್‌ಗಳು:

  1. ಸೋಲು ಗೆಲವು ಎರಡು ಅಂತ್ಯ ಒಂದೆ ಅಲ್ಲವೆ..
    ಹಲವು ಜನ ಹಲವು ಗುಣ ವಿಭಿನ್ನ ಇದೆಯಲ್ಲವೆ..
    ಮಲಗಿದರು ಕಣ್ಣು ತೆರೆದರೆ ಅಲ್ಲವೆ ಎಚ್ಚರಾಗುವುದು..
    ಬೇಟೆ ಆಡಿದರೆ ಅಲ್ಲವೆ ಫಲ ಸಿಗುವುದು...
    ನಿಮ್ಮ ಎಲ್ಲ ಸಾಲುಗಳು ಚೆನ್ನಾಗಿವೆ... ಹೇಗಿದೆ ವಿಶ್ರಾಂತ ಜೀವನ.. ಶುಭವಾಗಲಿ..

    ಪ್ರತ್ಯುತ್ತರಅಳಿಸಿ
  2. ಪ್ರಿಯ ಕೀರ್ತಿ, ಶುಭ ಹಾರೈಕೆ ಮತ್ತು ಸುಪ್ರತಿಕ್ರಿಯೆಗೆ ಧನ್ಯ.

    ಪ್ರತ್ಯುತ್ತರಅಳಿಸಿ