ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಏಪ್ರಿಲ್ 15, 2011

ಮೂಢ ಉವಾಚ - 49

ಬೇಕು - ಸಾಕು
ಬಯಕೆಗಳಿರೆ ಬಡವ ಸಾಕೆಂದರದುವೆ ಸಿರಿ
ನಾನೆಂಬುದು ಅಜ್ಞಾನ ನನದೇನೆನಲು ಜ್ಞಾನ |
ದಾಸನಾದರೆ ಹಾಳು ಒಡೆಯನಾದರೆ ಬಾಳು
ಮನದೊಡೆಯನಾದವನೆ ಮಾನ್ಯ ಮೂಢ ||

ಬಯಸದಿರುವವರಿಹರೆ ಈ ಜಗದಿ ಸಂಪತ್ತು
ಪರರ ಮೀರಿಪ ಬಯಕೆ ತರದಿರದೆ ಆಪತ್ತು |
ಸಮಚಿತ್ತದಿಂ ನಡೆದು ಕರ್ಮಫಲದಿಂ ಪಡೆದ
ಜ್ಞಾನ ಸಂಪತ್ತಿಗಿಂ ಮಿಗಿಲುಂಟೆ ಮೂಢ ||
ತಿರುಳು
ಅರ್ಧ ಜೀವನವ ನಿದ್ದೆಯಲಿ ಕಳೆವೆ
ಬಾಲ್ಯ ಮುಪ್ಪಿನಲಿ ಕಾಲುಭಾಗವ ಕಳೆಯೆ |
ಕಷ್ಟ ಕೋಟಲೆ ಕಾಯಿಲೆ ಉದರಭರಣೆಗೆ
ಕಳೆದುಳಿವ ಬಾಳಿನಲಿ ತಿರುಳಿರಲಿ ಮೂಢ ||
ಮತ್ಸರ
ನೋಡುವ ನೋಟವದು ಭಿನ್ನವಾಗುವುದು
ಅತ್ತೆ ಸೊಸೆಯರ ನಡುವೆ ಹೆತ್ತವರ ನಡುವೆ |
ದ್ವೇಷ ಭುಗಿಲೇಳುವುದು ಸೋದರರ ನಡುವೆ
ಕಾಳ ಮತ್ಸರದ ಚೇಳು ಕುಟುಕೀತು ಮೂಢ ||
****************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು: