ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಏಪ್ರಿಲ್ 2, 2011

ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ! - 2

     ನಾನು ವಿಗ್ರಹಾರಾಧನೆಯನ್ನು ಸಮರ್ಥಿಸುವುದಿಲ್ಲವೆಂದ ಮಾತ್ರಕ್ಕೆ ಅದನ್ನು ವಿರೋಧಿಸುವುದಿಲ್ಲ. ಏಕೆಂದರೆ ನಾನು ಯಾವುದೇ ವಿಚಾರ, ತತ್ವಗಳನ್ನು ಪ್ರತಿಪಾದಿಸುವಷ್ಟು ಪ್ರಬುದ್ಧತೆ ಹೊಂದಿಲ್ಲ. ವಿಗ್ರಹ ಪೂಜೆಯಿಂದ ಶಾಂತಿ, ನೆಮ್ಮದಿ ಪಡೆಯುತ್ತಿರುವ/ಪಡೆಯಬಯಸುವ ಬಹುತೇಕರ ಶ್ರದ್ಧೆ, ನಂಬಿಕೆಗಳು ಸುಳ್ಳೆಂದು ನಾನು ಹೇಗೆ ಹೇಳಲಿ? ಅವರುಗಳ ಪ್ರಾರ್ಥನೆಗೆ ವಿಗ್ರಹಗಳು ಮಾಧ್ಯಮವಾಗಿರಬಹುದು. ವಿಗ್ರಹಗಳು ಅವರ ಮನೋಶಕ್ತಿಯ ಕೇಂದ್ರೀಕರಣಕ್ಕೆ ಸಾಧನ ಹಾಗೂ ಸಹಕಾರಿಯಾಗಿ ಇರಬಹುದು. ವಿಗ್ರಹಗಳನ್ನು ದೇವರೆಂದು ಭಾವಿಸಿ, ನಂಬಿ ಪೂಜಿಸುವವರ ಮಾನಸಿಕ ಚಿಂತನೆಯ ಅಲೆಗಳು ವಿಗ್ರಹಗಳಲ್ಲಿ ಕ್ರೋಢೀಕೃತಗೊಂಡು ಅಲ್ಲಿ ಶಕ್ತಿ ಸಂಚಯನ ಆಗಿರಬಹುದು. ಅಂತಹ ಸ್ಥಳಗಳು ಶಕ್ತಿ ಕೇಂದ್ರಗಳಾಗಿರಬಹುದು. ಇಲ್ಲೂ ಸಹ ವಿಗ್ರಹಗಳಿಗಿಂತ ಅವುಗಳನ್ನು ಪೂಜಿಸುವವರ ಮನೋಶಕ್ತಿಯೇ ನಿರ್ಧಾರಕವೆಂದು ನನ್ನ ವೈಯಕ್ತಿಕ ಅನಿಸಿಕೆ. ದೇವರನ್ನು ವಿಗ್ರಹಗಳಲ್ಲಿ ಅಥವ ವಿಗ್ರಹಗಳ ಮೂಲಕ ಕಾಣುವುದರಲ್ಲಿಯೂ ಅರ್ಥವಿರಬಹುದು, ಇಲ್ಲದಿರಬಹುದು. ಆದರೆ ವಿಗ್ರಹಗಳೇ ದೇವರೆಂದು ಭಾವಿಸುವುದು ತಾರ್ಕಿಕವಾಗಿಯೂ ಸಹ ಕಷ್ಟಕರ ಸಂಗತಿ. ಒಂದು ಹಂತದ ಪರಿಪಕ್ವತೆ ಬಂದ ನಂತರದಲ್ಲಿ ವಿಗ್ರಹ ಪೂಜೆಯ ಅಗತ್ಯ ಬಾರದೇ ಹೋಗಬಹುದು. ಕೆಲವು ದೇವಸ್ಥಾನಗಳಲ್ಲಿ ದೇವರ ಪ್ರಸಾದ ಕೇಳಿ ಬೇಡುತ್ತಾ ಕುಳಿತ ಭಕ್ತರನ್ನು ಗಮನಿಸಿದ್ದೀರಾ? ಬಲಗಡೆ ಹೂವು ಬಿದ್ದರೆ ಒಪ್ಪಿಗೆಯೆಂತಲೂ ಎಡಗಡೆ ಬಿದ್ದರೆ ಅಶುಭವೆಂದು ನಂಬುವ ಅವರು ದೇವರೊಂದಿಗೆ ಮಾತನಾಡುವ ಪರಿಯನ್ನೂ ನೋಡಿದ್ದೇನೆ. ತಮ್ಮ ಕಷ್ಟ ಸುಖ ತೋಡಿಕೊಳ್ಳುತ್ತಾ 'ಯಾಕಪ್ಪಾ ಇಷ್ಟು ಪರೀಕ್ಷೆ ಮಾಡುತ್ತೀಯಾ? ಇನ್ನೂ ಸತಾಯಿಸಬೇಡ, ಒಳ್ಳೆಯದು ಮಾಡಪ್ಪಾ, ಬೇಗ ಪ್ರಸಾದ ಕೊಡು' ಎಂಬಿವೇ ಇತ್ಯಾದಿ ಹಳಹಳಿಸುತ್ತಿರುತ್ತಾರೆ. ಪ್ರಸಾದ ಕೇಳಲು ಬಂದ ಇತರರೂ ಅವರ ಸರದಿಗಾಗಿ ಕಾಯುತ್ತಿರುತ್ತಾರೆ. ಹಲವರಿಗೆ ಅದು ಭ್ರಮೆಯಂತೆ ಕಂಡರೂ ಭಕ್ತರ ತದೇಕ ಚಿತ್ತತೆ, ನಂಬಿಕೆ ಅಲ್ಲಿ ಎದ್ದು ಕಾಣುತ್ತದೆ. ಅಲ್ಲಿಯೂ ಅವರ ಮನೋಶಕ್ತಿಯೇ ಪ್ರಮುಖವೆಂದು, ವಿಗ್ರಹವಲ್ಲವೆಂದು ನನಗೆ ಅನ್ನಿಸುತ್ತದೆ. ವೈದ್ಯರಲ್ಲಿನ ನಂಬಿಕೆ ಅರ್ಧ ಕಾಯಿಲೆ ವಾಸಿ ಮಾಡುವಂತೆ ದೇವರಲ್ಲಿನ ಅವರ ನಂಬಿಕೆ ಅವರಿಗೆ ನೆಮ್ಮದಿ, ಶಾಂತಿ ಕಂಡುಕೊಳ್ಳಲು ನೆರವಾಗಬಹುದು. ಮೊದಲಿನಿಂದ ಪೂರ್ವಜರು ಮತ್ತು ಸುತ್ತಮುತ್ತಲಿನವರು ಇಟ್ಟುಕೊಂಡು ಬಂದ ನಂಬಿಕೆ, ನಡವಳಿಕೆಗಳನ್ನು ಅವರು ಮುಂದುವರೆಸುತ್ತಾರೆ. ಮುಂದೆ ಅವರ ಮಕ್ಕಳೂ ಅದೇ ರೀತಿಯಲ್ಲಿ ಸಾಗಬಹದು.
     ಒಂದು ಪ್ರಾಂತದ ರಾಜನೊಬ್ಬ ಸ್ವಾಮಿ ವಿವೇಕಾನಂದರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭ. ಆ ರಾಜನಿಗೆ ವಿಗ್ರಹಾರಾಧನೆಯಲ್ಲಿ/ಮೂರ್ತಿ ಪೂಜೆಯಲ್ಲಿ ನಂಬಿಕೆಯಿರಲಿಲ್ಲ. ವಿಗ್ರಹಪೂಜೆ ಬಗ್ಗೆ ಆತ ನಿಕೃಷ್ಟವಾಗಿ ಮಾತನಾಡಿದುದನ್ನು ಶಾಂತವಾಗಿ ಆಲಿಸಿದ ವಿವೇಕಾನಂದರು ರಾಜನ ಭಾವಚಿತ್ರವೊಂದನ್ನು ತರಿಸಲು ಹೇಳಿದರು. ಭಾವಚಿತ್ರ ತಂದಾಗ ಅಲ್ಲಿದ್ದ ಸಭಾಸದರೊಬ್ಬರನ್ನು ಕರೆದು ಆ ಭಾವಚಿತ್ರದ ಮೇಲೆ ಉಗುಳಲು ಹೇಳಿದರು. ಆ ವ್ಯಕ್ತಿ ನಡುಗಿಹೋದರು -'ರಾಜರ ಭಾವಚಿತ್ರದ ಮೇಲೆ ಉಗುಳುವುದೇ?'. ವಿವೇಕಾನಂದರು ಹೇಳಿದರು -'ಇದು ರಾಜರ ಭಾವಚಿತ್ರವೇ ಹೊರತು ರಾಜರಲ್ಲ; ಉಗುಳಿದರೆ ರಾಜರಿಗೆ ಏನೂ ಆಗುವುದಿಲ್ಲ'. ಅದಕ್ಕೆ ಅವರು 'ಸ್ವಾಮಿ, ಇದು ಭಾವಚಿತ್ರವಿರಬಹುದು. ಆದರೆ ಇದರಲ್ಲಿ ನಾವು ರಾಜರನ್ನು ಕಾಣುತ್ತಿದ್ದೇವೆ. ಇದರ ಮೇಲೆ ಉಗುಳುವುದು ನಮಗೆ ಕಲ್ಪನೆಯಲ್ಲಿಯೂ ಅಸಾಧ್ಯ'. ಆಗ ವಿವೇಕಾನಂದರು ರಾಜರಿಗೆ 'ದೇವರ ವಿಗ್ರಹಗಳು ದೇವರಲ್ಲ. ಅದರೆ ಜನ ಅಲ್ಲಿ ದೇವರನ್ನು ಕಾಣುತ್ತಾರೆ. ಅವುಗಳನ್ನು ಪೂಜಿಸಿ ನೆಮ್ಮದಿ, ಶಾಂತಿ ಕಂಡುಕೊಳ್ಳುತ್ತಾರೆ. ಆದ್ದರಿಂದ ವಿಗ್ರಹಪೂಜೆಯನ್ನು ವಿರೋಧಿಸುವುದು ಸಲ್ಲ' ಎಂದು ಮನವರಿಕೆ ಮಾಡಿಕೊಟ್ಟಿದ್ದರು.
     ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದ ವೃತ್ತಾಂತಗಳು, ದೇವರ ಮಹಿಮೆ ಕೊಂಡಾಡುವ ಕಥೆಗಳು, ಬೈಬಲ್, ಕುರಾನ್, ಗುರುಗ್ರಂಥ ಸಾಹೀಬಾ, ವಿವಿಧ ಧರ್ಮಗ್ರಂಥಗಳು, ಇತ್ಯಾದಿಗಳು ಜನಸಮೂಹದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ, ಬೀರುತ್ತಿವೆ. ಎಲ್ಲಾ ಧರ್ಮಗ್ರಂಥಗಳು ಮೂಲಭೂತವಾಗಿ ಮನುಷ್ಯನ ಒಳ್ಳೆಯ ನಡವಳಿಕೆ ಬಗ್ಗೆ ಒತ್ತು ನೀಡಿವೆ. ಆದರೆ ಅವುಗಳನ್ನು ನಂಬುವ ಜನರ ನಡವಳಿಕೆ ಒಳ್ಳೆಯ ರೀತಿಯಲ್ಲಿ ಇದೆ ಎಂದು ಹೇಳಲಾಗುವುದಿಲ್ಲ. ದೇವರನ್ನು ಹಲವು ಹೆಸರುಗಳಲ್ಲಿ, ಹಲವು ರೂಪಗಳಲ್ಲಿ ಪೂಜಿಸುತ್ತಿರುವ ಮತ್ತು ಹೊಸ ಹೊಸ ದೇವರುಗಳು ಮತ್ತು ಪೂಜಾ ಪದ್ಧತಿಗಳನ್ನು ಹುಟ್ಟು ಹಾಕಲಾಗುತ್ತಿರುವ ಹಿಂದೂ ಸಮಾಜದಲ್ಲಿ ಪರಧರ್ಮ ಸಹಿಷ್ಣುತೆ ಮೈಗೂಡಿದೆ. ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯದಲ್ಲಿ ಪರಧರ್ಮ ಸಹಿಷ್ಣುತೆಯ ಕೊರತೆ ಕಂಡು ಬರುತ್ತಿರುವುದು ಸುಳ್ಳೇನಲ್ಲ. ಹಾಗೆಂದು ನಾನು ಯಾವುದೇ ಧರ್ಮದ ಪರ ಅಥವಾ ವಿರೋಧಿ ಅಲ್ಲ. ನನಗೆ ಅದರ ಅಗತ್ಯವೂ ಇಲ್ಲ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಗೊಂದಲ, ಸಮಸ್ಯೆ, ಸಂಘರ್ಷಗಳ ಬಗ್ಗೆ ಮಾತ್ರ ನನ್ನಲ್ಲಿ ತಳಮಳ ಇದೆ.
     ನನ್ನ ಮನಸ್ಥಿತಿ ಹೇಗಿದೆಯೆಂದರೆ ಯಾವುದಾದರೂ ಉತ್ತಮ ಗ್ರಂಥ ಓದಿದಾಗ ಅದರಲ್ಲಿನ ಒಳ್ಳೆಯ ಅಂಶಗಳಿಗೆ ಮಾರುಹೋಗುತ್ತೇನೆ. ಯಾವುದು ಮನಸ್ಸಿಗೆ ಹಿತ, ಸಂತೋಷ ನೀಡುತ್ತದೆಯೋ ಮತ್ತು ಅದನ್ನು ಅಂತಃಸಾಕ್ಷಿ ಒಪ್ಪುತ್ತದೆಯೋ ಅದು ಒಳ್ಳೆಯದೆಂದೇ ನನ್ನ ಭಾವನೆ. ಚಿಕ್ಕಂದಿನಲ್ಲಿ ಪ್ರತಿದಿನ ಸಾಯಂಕಾಲ ಆಟ ಆಡಿಕೊಂಡು ಬಂದ ನಂತರ ಕೈಕಾಲುಮುಖ ತೊಳೆದುಕೊಂಡು ನಾವು ಐವರು ಮಕ್ಕಳು ನಮ್ಮ ತಾಯಿ ಹೇಳಿಕೊಡುತ್ತಿದ್ದ ಪ್ರಾರ್ಥನೆ, ಭಜನೆಗಳನ್ನು ಒಟ್ಟಿಗೆ ಹೇಳಿ ದೇವರಿಗೆ ನಮಸ್ಕಾರ ಮಾಡಿದ ನಂತರವೇ ಓದಿಕೊಳ್ಳಲು ತೊಡಗುತ್ತಿದ್ದೆವು. ಹಬ್ಬ ಹರಿದಿನಗಳಲ್ಲಿ ತಂದೆಯವರು ಮಾಡುತ್ತಿದ್ದ ದೇವರ ಪೂಜೆ ನಂತರ ಮಂಗಳಾರತಿ, ತೀರ್ಥ, ಪ್ರಸಾದ ಪಡೆದ ಮೇಲಷ್ಟೇ ನಮಗೆ ತಿಂಡಿ ಸಿಗುತ್ತಿತ್ತು. ಆ ದಿನಗಳಲ್ಲಿ ತೋರಣ ಕಟ್ಟುವುದು, ಗಣಪತಿ ಪೂಜೆಗೆ ಮಂಟಪ ಸಿದ್ಧಪಡಿಸುವುದು, ನವರಾತ್ರಿಯಲ್ಲಿ ಗೊಂಬೆಗಳನ್ನು ಅಂದವಾಗಿ ಜೋಡಿಸುವುದು, ಇತ್ಯಾದಿಗಳನ್ನು ಶ್ರದ್ಧೆಯಿಂದ ಮತ್ತು ಆಸಕ್ತಿಯಿಂದ ಮಾಡುತ್ತಿದ್ದೆ. ಸಾಮೂಹಿಕ ರಾಮನವಮಿ, ಗಣೇಶ ಉತ್ಸವಗಳ ಸಂದರ್ಭಗಳಲ್ಲಿ ಏರ್ಪಾಡಾಗುತ್ತಿದ್ದ ಹರಿಕಥೆಗಳು, ಸಂಗೀತ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ತಲ್ಲೀನನಾಗಿ ಕೇಳುತ್ತಿದ್ದೆ. ವಿಶೇಷವಾಗಿ ರಾಮಾಯಣ, ಮಹಾಭಾರತಗಳಿಗೆ ಸಂಬಂಧಿಸಿರುತ್ತಿದ್ದ ಹರಿಕಥೆಗಳು ನನ್ನ ಮೇಲೆ ತುಂಬಾ ಪರಿಣಾಮ ಬೀರಿವೆ. ರಾಮಾಯಣ, ಮಹಾಭಾರತಗಳು ನಿಜವಾಗಿಯೂ ನಡೆದಿದೆಯೋ, ಇಲ್ಲವೋ ಎಂಬಿತ್ಯಾದಿ ವಿವಾದಗಳ ಬಗ್ಗೆ ನನಗೆ ಆಸಕ್ತಿಯಿಲ್ಲ. ಆದರೆ ಅವುಗಳಲ್ಲಿ ತುಂಬಿರುವ ನೀತಿಪಾಠಗಳು, ಜೀವನದರ್ಶನ ಅನುಕರಣೀಯ.
     ದೇವರ ಕುರಿತು ಜಿಜ್ಞಾಸೆ, ದೇವರನ್ನು ಪೂಜಿಸುವ ರೀತಿ ಕುರಿತು ವಿವಿಧ ಆಲೋಚನೆಗಳು ಚಿಕ್ಕಂದಿನಿಂದಲೇ ಬಂದಿತ್ತು. ಹಬ್ಬ ಹರಿದಿನಗಳಲ್ಲಿ ತಂದೆಯವರು ಪೂಜೆ ಮಾಡುವ ಸಂದರ್ಭಗಳಲ್ಲಿ ನಾವು ಮಕ್ಕಳಿಗೆ ಸಹಜವಾದ ಆಟ, ಜಗಳಗಳಲ್ಲಿ ತೊಡಗಿ ಕಿರುಚಾಟ, ಅಳು, ಗಲಾಟೆ ಮಾಡುತ್ತಿದ್ದರಿಂದ ತಂದೆಯವರ ಏಕಾಗ್ರತೆಗೆ ಭಂಗ ಬಂದು ಅವರು ಸಿಟ್ಟಿಗೇಳುತ್ತಿದ್ದರು. ಆ ಸಿಟ್ಟಿನಲ್ಲಿ ಮಕ್ಕಳಲ್ಲಿ ದೊಡ್ಡವನಾದ ನನಗೆ ಬೈಗುಳ ಮತ್ತು ಪೆಟ್ಟುಗಳು ಬೀಳುವುದು ಸಾಮಾನ್ಯವಾಗಿತ್ತು. ಕೆಲವೊಮ್ಮೆ ನನ್ನ ತಪ್ಪಿಲ್ಲದಿದ್ದರೂ ನಾನು ಬೈಸಿಕೊಳ್ಳಬೇಕಾದಾಗ, ಪೆಟ್ಟು ತಿನ್ನಬೇಕಾಗಿ ಬಂದಾಗ ನನಗೆ ಸರಿಕಾಣುತ್ತಿರಲಿಲ್ಲ. ಆಗೆಲ್ಲಾ ನನ್ನ ಮನಸ್ಸು 'ಹಬ್ಬ ಮಾಡುವುದು ಎಲ್ಲರಿಗೂ ಒಳ್ಳೆಯದಾಗಲಿ, ಸಂತೋಷ ಸಿಗಲಿ ಎಂದು; ಇದರಿಂದ ಮನಸ್ಸಿಗೆ ಬೇಸರವಾಗುವುದಾದರೆ ಅಂತಹ ಹಬ್ಬ ಏಕೆ ಬೇಕು?' ಎಂದು ಯೋಚಿಸುತ್ತಿತ್ತು. ಚಿಕ್ಕಂದಿನಿಂದಲೇ ದೇವರ ಕುರಿತು ತರ್ಕ, ಜಿಜ್ಞಾಸೆಗಳಿಗೆ ಶ್ರೀಕಾರ ಬಿದ್ದಿತ್ತು.
     ಇಂದು ಯಾರನ್ನು ನಮ್ಮ ಕಷ್ಟ, ಕಾರ್ಪಣ್ಯಗಳಿಗಾಗಿ ಮೊರೆಯಿಡುತ್ತೇವೆಯೋ ಆ ದೇವರುಗಳೇ ಸಮಸ್ಯೆಗಳ ಮೂಲವಾಗಿರುವುದು ಯುಗಮಹಿಮೆ. ದೇವರಿಗಾಗಿ ಧರ್ಮಯುದ್ಧಗಳು, ಮಾರಣಹೋಮಗಳು ನಡೆಯುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ತಮ್ಮ ಮತ-ಧರ್ಮದ ವಿಸ್ತಾರದ ಹಿನ್ನೆಲೆಯೇ ದೇಶ-ದೇಶಗಳ ನಡುವೆ ನಡೆಯುವ ಯುದ್ಧಗಳ ನಿಜವಾದ ಕಾರಣವೆಂಬುದು ಸುಸ್ಪಷ್ಟ. ನಾನು ದೇವರು/ದೇವರುಗಳ ವಿರುದ್ಧ ಮಾತನಾಡುತ್ತಿಲ್ಲ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನದ ಬಗ್ಗೆ ಹೇಳುತ್ತಿದ್ದೇನೆ. ದೇವರ ಹೆಸರಿನಲ್ಲಿ ಅನೇಕ ಒಳ್ಳೆಯ ಜೊತೆಗೆ ಕೆಟ್ಟ ಸಂಪ್ರದಾಯಗಳೂ ಆಚರಿಸಲ್ಪಡುತ್ತಿವೆ. ನಿಜವಾಗಿಯೂ ದೇವರು ತನ್ನನ್ನು ಕುರಿತು ಜನರು ಪೂಜಿಸಬೇಕು, ಪ್ರಾರ್ಥಿಸಬೇಕು ಎಂದು ಬಯಸುತ್ತಾನೆ ಎಂದು ನಾನು ನಂಬುವುದಿಲ್ಲ. ದೇವರನ್ನು ಪೂಜಿಸುವುದು, ಪ್ರಾರ್ಥಿಸುವುದು ಜನರಿಗೆ ಬೇಕಾಗಿದೆಯೇ ಹೊರತು ದೇವರಿಗಲ್ಲ. ನೂರೆಂಟು ಪಾಪಕೃತ್ಯಗಳನ್ನು ಮಾಡಿ ಪರಿಹಾರರೂಪವಾಗಿ ದೇವರಿಗೆ ಪೂಜೆ-ಪುನಸ್ಕಾರಗಳನ್ನು ಮಾಡುವುದು, ಹುಂಡಿಗೆ ಹಣ ಹಾಕುವುದು, ಇತ್ಯಾದಿ ಮಾಡಿ ಪಾಪ ಕಳೆದುಕೊಂಡ ಭಾವನೆ ಮೂಡಿಸಿಕೊಳ್ಳುವುದು ಕಾಣುತ್ತೇವೆ. ಪಾಪ ಮಾಡಿದ್ದನ್ನು ಕ್ಷಮಿಸುವಂತಹ ದೇವರಿಗಿಂತ ಪಾಪಕ್ಕೆ ತಕ್ಕ ಶಿಕ್ಷೆ ಕೊಡುವ ದೇವರು ನನಗೆ ಇಷ್ಟ. ಏಕೆಂದರೆ ಹೀಗಿದ್ದರೆ ಕೆಟ್ಟದನ್ನು ಮಾಡಲು ಹಿಂಜರಿಯುವಂತಹ ವಾತಾವರಣ ಬರಬಹುದು. ಆದರೆ ನಮ್ಮ ಇಷ್ಟ, ಕಷ್ಟ ಅನುಸರಿಸಿ ದೇವರು ಇರುತ್ತಾನೋ, ಇಲ್ಲವೋ ಗೊತ್ತಿಲ್ಲ.
     ದೇವರ ಕುರಿತು ಜಿಜ್ಞಾಸೆ, ಗೊಂದಲಗಳು ಬಗೆಹರಿಸಲು ಆ ದೇವರೇ ಬರಬೇಕು! ಬಸವಣ್ಣನವರು ಎಲ್ಲಾ ಜಾತಿಗಳವರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು. ಆಗಿದ್ದೇನು? ಅಂತಹವರದ್ದೇ ಒಂದು ಜಾತಿ/ಧರ್ಮ ಆಯಿತು. ಮಧ್ಯಪ್ರದೇಶದಲ್ಲೂ ಸಹ ಜಾತಿ ಪದ್ಧತಿ ವಿರೋಧಿಸುವ ಗುಂಪಿದ್ದು, ಅವರನ್ನು 'ಅಜಾತರು' ಎಂಬ ಜಾತಿ ಹೆಸರು ಇಟ್ಟು ಅವರದೇ ಜಾತಿ ಮಾಡಿಬಿಟ್ಟಿದ್ದಾರೆ. ಯಾವುದೇ ಹೊಸ ವಿಚಾರ, ಜ್ಞಾನ ಪಸರಿಸುವವರನ್ನೂ ಸಹ ಪ್ರತ್ಯೇಕಿಸಿ ಹೆಸರಿಟ್ಟುಬಿಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸತ್ಯಾನ್ವೇಶಿಗಳು ಗೊಂದಲ, ತೊಂದರೆಗಳಿಗೆ ಸಿಲುಕುತ್ತಾರೆ.
     ವೇದಗಳ ಕುರಿತು ವೇದಾಧ್ಯಾಯಿ ಸುಧಾಕರ ಶರ್ಮರವರ ಉಪನ್ಯಾಸಗಳು ಸೇರಿದಂತೆ ಹಲವಾರು ಜ್ಞಾನವೇತ್ತರ ಮಾತುಗಳನ್ನು ಕೇಳಿದ ನಂತರ ಮತ್ತು ಸಂಬಂಧಿಸಿದ ವಿಚಾರಧಾರೆಗಳಿರುವ ಪುಸ್ತಕಗಳನ್ನು ಓದಿದ ನಂತರ ಸಂದೇಹಗಳು ಬಗೆಹರಿದಿಲ್ಲವಾದರೂ ನನ್ನ ವಿಚಾರ ಸರಿಯಾದ ದಾರಿಯಲ್ಲಿದೆಯೆಂಬ ಭಾವ ಮೂಡುತ್ತಿದ್ದು ಒಂದು ರೀತಿಯ ಅಭಿಪ್ರಾಯ ನನ್ನೊಳಗೆ ಸಾಂದ್ರೀಕೃತವಾಗುತ್ತಿದೆ. ಅವೆಂದರೆ:
೧. ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಿಸುವ ಅದ್ಭುತ ಶಕ್ತಿ ಇದೆ. ಅದನ್ನು ದೇವರೆಂದಾದರೂ ಕರೆಯಿರಿ, ಯಾವ ಹೆಸರಿನಲ್ಲಾದರೂ ಕರೆಯಿರಿ. ಆ ಶಕ್ತಿ ಎಲ್ಲರನ್ನೂ -ನಂಬುವವರನ್ನೂ, ನಂಬದವರನ್ನೂ, ಕೆಟ್ಟವರನ್ನೂ, ಒಳ್ಳೆಯವರನ್ನೂ - ಸಮಾನಭಾವದಿಂದ ಕಾಣುತ್ತದೆ. ಆ ಶಕ್ತಿ ಕೇವಲ ಮಾನವ ಜೀವಿಗಳಿಗೆ ಮತ್ತು ನಿರ್ದಿಷ್ಟ ಗಡಿ ಪ್ರದೇಶಗಳಿಗೆ ಮಾತ್ರ ಸೀಮಿತವಲ್ಲ.
೨. ನಮಗೆ ಆಗುವ ಎಲ್ಲಾ ಒಳಿತು ಕೆಡಕುಗಳಿಗೆ ನಾವೇ ಕಾರಣರೇ ಹೊರತು ಇತರರಲ್ಲ, ದೇವರಲ್ಲವೇ ಅಲ್ಲ. ದೇವಸ್ಥಾನಕ್ಕೆ ಹೋಗಿ ತಪ್ಪುಕಾಣಿಕೆ ಹಾಕುವುದರಿಂದ ಮತ್ತು ಕ್ಷಮಿಸಲು ಪ್ರಾರ್ಥಿಸುವುದರಿಂದ ಮಾಡಿದ ಪಾಪ ಹೋಗುವುದಿಲ್ಲ. ಮಾಡಿದ ಕರ್ಮಕ್ಕೆ ಅನುಸಾರವಾಗಿ ಫಲ ಕಟ್ಟಿಟ್ಟ ಬುತ್ತಿ.
೩. ಪುನರ್ಜನ್ಮವಿದೆ. ನಾವು ಮಾಡುವ ಒಳ್ಳೆಯ ಕೆಲಸಗಳು ಒಳಿತನ್ನೇ ತರುತ್ತದೆ, ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದಿನ ಜನ್ಮದಲ್ಲಿ!
೪. ಒಳ್ಳೆಯದು ಮತ್ತು ಸತ್ಯವೆಂದು ಭಾವಿಸುವ ದಾರಿಯಲ್ಲಿ ನಡೆಯುವುದೇ ದೇವರ ಪೂಜೆ.
೫. ಮೊದಲಿನಿಂದ ನಡೆದುಬಂದ ಸಂಪ್ರದಾಯಗಳನ್ನು ವಿಮರ್ಶಿಸಿ ಅದರಲ್ಲಿನ ಅರ್ಥಪೂರ್ಣ ಅಂಶಗಳನ್ನು ಉಳಿಸಿಕೊಂಡು ಪಾಲಿಸುವುದು. ಅರ್ಥವಿಲ್ಲದ ಮತ್ತು ಇತರರರಿಗೆ ನೋವು ಉಂಟುಮಾಡಬಹುದಾದ ಸಂಗತಿಗಳನ್ನು ಬಿಡುವುದು ಅಗತ್ಯ.
೬. ಸತ್ಯ ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹವಿಲ್ಲದೆ ಸ್ವೀಕರಿಸುವ ಮತ್ತು ಅಗತ್ಯವೆನಿಸಿದಲ್ಲಿ ನಮ್ಮನ್ನು ನಾವು ತಿದ್ದಿಕೊಳ್ಳುವ ಮನೋಭಾವ ಬರಬೇಕು.
     ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ. ಆತ ತನ್ನ ಕೆಲಸ ಮಾಡಿಯೇ ಮಾಡುತ್ತಾನೆ. ನಾವು ನಮ್ಮ ಕೆಲಸ ಮಾಡೋಣ, ಅಂದರೆ ನಾವು ಏಕೆ ಹುಟ್ಟಿದ್ದೇವೆ ಎಂಬುದನ್ನು ಅರಿತು ಸತ್ಯಾನ್ವೇಶಿಗಳಾಗಿ ನಡೆಯೋಣ, ಇರುವಷ್ಟು ಕಾಲ ಯಾರಿಗೂ ಉಪಕಾರ ಮಾಡದಿದ್ದರೂ ಅಪಕಾರವನ್ನಂತೂ ಮಾಡದಿರೋಣ!
************
-ಕ.ವೆಂ.ನಾಗರಾಜ್.

1 ಕಾಮೆಂಟ್‌:

  1. ಪ್ರಿಯಶ್ರೀ ನಾಗರಾಜ್,
    ಲೇಖನವನ್ನು ಪೂರ್ಣ ಒಡಿದ ಮೇಲೆ ನಾವಿಬ್ಬರೂ ಒಂದೇ ದೋಣಿಯಲ್ಲಿ ಸಾಗುತ್ತಿದ್ದೇವೆಂಬುದು ಇನ್ನೂ ಹೆಚ್ಚು ಖಚಿತವಾಯ್ತು. ಶರ್ಮರ ವಿಚಾರ ಧಾರೆಯನ್ನು ಕೇಳಿದಮೇಲೆ ನಮ್ಮ ಅಪ್ಪ-ಅಮ್ಮ, ಅಜ್ಜ-ಮುತ್ತಜ್ಜಂದಿರುಗಳಿಗೆ ಸತ್ಯದ ದಾರಿ ತೆರೆಯಲು ಅವಕಾಶವೇ ಇಲ್ಲವಾಗಿ ಹಿಂದಿನವರು ನಡೆಸಿಕೊಂಡುಬಂದಿದ್ದೆಲ್ಲಾ ಸತ್ಯ, ಅದೇ ಧರ್ಮ, ಎಂಬ ನಂಬಿಕೆಯಿಂದ ತಮ್ಮ ಜೀವನವನ್ನು ಮುಗಿಸಿಬಿಟ್ಟರಲ್ಲಾ! ಎಂದು ವ್ಯಥೆಯಾಗುತ್ತದೆ.ಯಾಕೆ ಹೀಗಾಯ್ತು? ಸತ್ಯವನ್ನು ಏಕೆ ಬಚ್ಚಿಟ್ಟಿದ್ದರು? ವಿಚಾರಮಂಥನ ಮಾಡುವಷ್ಟು ಸಾಮರ್ಥ್ಯವೇ ಇರಲಿಲ್ಲವೇ?ಎಂದು ಆಶ್ಚರ್ಯವಾಗುತ್ತದೆ.
    "ಮೊದಲಿನಿಂದ ನಡೆದುಬಂದ ಸಂಪ್ರದಾಯಗಳನ್ನು ವಿಮರ್ಶಿಸಿ ಅದರಲ್ಲಿನ ಅರ್ಥಪೂರ್ಣ ಅಂಶಗಳನ್ನು ಉಳಿಸಿಕೊಂಡು ಪಾಲಿಸುವುದು. ಅರ್ಥವಿಲ್ಲದ ಮತ್ತು ಇತರರರಿಗೆ ನೋವು ಉಂಟುಮಾಡಬಹುದಾದ ಸಂಗತಿಗಳನ್ನು ಬಿಡುವುದು ಅಗತ್ಯ"
    ಎಂಬ ನಿಮ್ಮ ಸಲಹೆ ಸಮಂಜಸವಾಗಿದೆ.

    ಪ್ರತ್ಯುತ್ತರಅಳಿಸಿ