ಸೈಕಲ್ಲಿನಲ್ಲಿ ಭಾರತ ಸುತ್ತಿದ
ಕಾಶಿ ಶೇಷಾದ್ರಿ ದೀಕ್ಷಿತರ ಅಪ್ರತಿಮ ಸಾಧನೆಯ ಕಿರುಪರಿಚಯ
ಕಾಶಿ ದೀಕ್ಷಿತರೆಂದೇ ಕರೆಯಲ್ಪಡುವ ತೀರ್ಥಹಳ್ಳಿಯ ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರಿಗೆ ನವದೆಹಲಿಯ ಸಿ ಎನ್ ಆರ್ ಐ ಸಂಸ್ಥೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಕಳೆದ ಜೂನ್ ತಿಂಗಳಿನಲ್ಲಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಿಂದೆ ಭಾರತ, ನೇಪಾಳ, ಭೂತಾನಗಳಲ್ಲಿ ಸುಮಾರು ೩ ವರ್ಷ ಬೈಸಿಕಲ್ ಪ್ರವಾಸ ಮಾಡಿದ ಹಾಗೂ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡ ಇವರ ಸಾಧನೆ ಗುರುತಿಸಿ ನೀಡಿದೆ. ಅಂತರರಾಷ್ಟ್ರೀಯ ಸಾಮಾಜಿಕ ಮತ್ತು ಆರ್ಥಿಕ ಸುಧಾರಣಾ ಸಂಸ್ಥೆ, ಭಾರತೀಯ ಅಭಿವೃದ್ಧಿ ನಿಗಮದ ವಾರ್ಷಿಕೋತ್ಸವದಲ್ಲಿ ಶ್ರೀ ದೀಕ್ಷಿತರಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಕೆ.ಹೆಚ್.ಮುನಿಯಪ್ಪ 'ಭಾರತೀಯ ಸಮಾಜರತ್ನ' ಪ್ರಶಸ್ತಿ ನೀಡಿ ಗೌರವಿಸಿದರು. ಕೆಳದಿ ಕವಿಮನೆತನದ ಮತ್ತು ಬಂಧು-ಬಳಗದವರ ನಾಲ್ಕನೆಯ ವಾರ್ಷಿಕ ಸಮಾವೇಶವನ್ನು ಶ್ರೀಯುತರು ತೀರ್ಥಹಳ್ಳಿಯಲ್ಲಿ ೨೭-೧೨-೨೦೦೯ರಲ್ಲಿ ಶ್ರೀಯುತರು ಆಯೋಜಿಸಿದ್ದನ್ನು ಈ ಸಂದರ್ಭದಲ್ಲಿ ನೆನೆಯಬಯಸುತ್ತೇನೆ. ಇವರ ಸಾಧನೆಯ ಕಿರುಪರಿಚಯವನ್ನು ಈ ಮೂಲಕ ಮಾಡಿಕೊಡಲು ನನಗೆ ಸಂತೋಷವಾಗುತ್ತಿದೆ.
ದಾರಿ ಸುಂದರವಿರಲು ಗುರಿಯ ಚಿಂತ್ಯಾಕೆ
ಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ |
ಕಲ್ಲಿರಲಿ ಮುಳ್ಳಿರಲಿ ಹೂವು ಹಾಸಿರಲಿ
ರೀತಿ ಸುಂದರವಿರೆ ಯಶ ನಿನದೆ ಮೂಢ ||
ಏನಾದರೂ ಸಾಧನೆ ಮಾಡಬೇಕೆಂದು ಬಯಸಿದವರೆಲ್ಲರೂ ಗುರಿ ಸಾಧಿಸುವುದಿಲ್ಲ, ಅದು ಸುಲಭದ ಕೆಲಸವೂ ಅಲ್ಲ. ಮನೋಬಲ, ಛಲ ಇರುವವರಿಗಷ್ಟೇ ಇದು ಸಾಧ್ಯ. ಅಂದುಕೊಂಡದ್ದನ್ನು ಸಾಧಿಸಿದ ವಿರಳ ವ್ಯಕ್ತಿಗಳಲ್ಲಿ ಒಬ್ಬರು ಕಾಶಿ ಶೇಷಾದ್ರಿ ದೀಕ್ಷಿತ್. ೧೯೭೮ರ ಮೇ ೩೧ರಂದು ಸೈಕಲ್ಲಿನಲ್ಲಿ ಅಖಿಲ ಭಾರತ ಪ್ರವಾಸ ಮಾಡಲು ಹೊರಟಾಗ ತೀರ್ಥಹಳ್ಳಿಯ ತರುಣ ಕೆ.ಜಿ. ಶೇಷಾದ್ರಿ ದೀಕ್ಷಿತರ ವಯಸ್ಸು ೨೬ ವರ್ಷಗಳು. ಮೃದು ಸ್ವಭಾವದ ಹಾಗೂ ಅಂತಹ ಹೇಳಿಕೊಳ್ಳುವಂತಹ ದೇಹಧಾರ್ಢ್ಯತೆಯನ್ನು ಹೊಂದಿರದಿದ್ದ ಈ ತರುಣ ಇಂತಹ ಸಾಧನೆ ಮಾಡಿಯಾನೆಂದು ಹೆಚ್ಚಿನವರು ಭಾವಿಸಿರಲಿಲ್ಲ. ಸಾಧನೆ ಮಾಡಲು ಮನೋಬಲ ಮುಖ್ಯ ಎಂಬುದನ್ನು ಸಾಧಿಸಿ ತೋರಿಸಿದ ಈ ತರುಣ ಪ್ರವಾಸಕ್ಕೆ ತೆಗೆದುಕೊಂಡ ಅವಧಿ ೩ ವರ್ಷ ೨ ತಿಂಗಳುಗಳು. ಕ್ರಮಿಸಿದ ದೂರ ಸುಮಾರು ೫೫ಸಾವಿರ ಕಿ.ಮೀ.ಗಳು. ಗಳಿಸಿದ ಅನುಭವ ಅಪಾರ. ಪ್ರವಾಸ ಮುಗಿಸಿ ದಿನಾಂಕ ೨೦-೦೭-೧೯೮೧ರಂದು ತೀರ್ಥಹಳ್ಳಿಗೆ ಬಂದಾಗ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಊರಿನಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಆರತಿ ಬೆಳಗಿದರು. ಮನದುಂಬಿ ಹರಸಿದರು. ಸನ್ಮಾನ, ಪ್ರಶಸ್ತಿಗಳು ಅರಸಿ ಬಂದವು.
ಸೈಕಲ್ ಪ್ರವಾಸ ಮಾಡಿದ 26 ವರ್ಷದ ತರುಣ ದೀಕ್ಷಿತ್
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದ ದೀಕ್ಷಿತರು ಇತರ ಕಾರ್ಯಕರ್ತರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಅನೇಕ ಪ್ರೇಕ್ಷಣಿಯ ಹಾಗೂ ಯಾತ್ರಾಸ್ಥಳಗಳಿಗೆ ಚಿಕ್ಕಂದಿನಿಂದಲೇ ಸೈಕಲ್ಲಿನಲ್ಲೇ ಪ್ರವಾಸ ಮಾಡಿದ ಹಿಂದಿನ ಅನುಭವ ಇಂತಹ ಸಾಹಸಕ್ಕೆ ಕೈಹಾಕಲು ಸ್ಫೂರ್ತಿ ನೀಡಿತ್ತು. ಕೇವಲ ಕಂಬ ಮುಟ್ಟಿ ವಾಪಸು ಬಂದಿದ್ದಲ್ಲಿ ಪ್ರವಾಸವನ್ನು ಇನ್ನೂ ಕ್ಷಿಪ್ರ ಅವಧಿಯಲ್ಲಿ ಅವರು ಪೂರ್ಣಗೊಳಿಸಬಹುದಿತ್ತು. ಆದರೆ ಪ್ರತಿ ರಾಜ್ಯದ ಪ್ರತಿ ಸ್ಥಳವನ್ನು ಒಳಹೊಕ್ಕು ನೋಡುವ ಅಭಿಲಾಷೆ ಪ್ರವಾಸದ ಅವಧಿಯನ್ನು ೩ವರ್ಷಕ್ಕೂ ಮೇಲ್ಪಟ್ಟು ಹೆಚ್ಚಿಸಿತು. ದಿನವೊಂದಕ್ಕೆ ಸುಮಾರು ೬೦ ರಿಂದ ೮೦ ಕಿ.ಮೀ. ಸೈಕಲ್ ತುಳಿಯುತ್ತಿದ್ದ ಅವರು ತ್ರಿಪುರ ಮತ್ತು ನಾಗಾಲ್ಯಾಂಡ್‌ಗಳನ್ನು ಬಿಟ್ಟು ಉಳಿದೆಲ್ಲಾ ರಾಜ್ಯಗಳಿಗೆ ಭೇಟಿ ಕೊಟ್ಟಿದ್ದಾರೆ. ನಿರ್ಬಂಧದ ಕಾರಣ ಈ ಎರಡು ರಾಜ್ಯಗಳನ್ನು ನೋಡಲಾಗಲಿಲ್ಲವೆಂದು ಹೇಳುತ್ತಾರೆ. ಈ ಪ್ರವಾಸಕ್ಕೆ ಅವರಿಗೆ ಸುಮಾರು ಐದು ಸಾವಿರ ರೂ. ಖರ್ಚಾಗಿದ್ದು ಮನೆಯವರಿಂದ ಬಂದ ಎರಡು ಸಾವಿರ ರೂ. ಬಿಟ್ಟರೆ ಉಳಿದ ಹಣವೆಲ್ಲಾ ಪ್ರಯಾಣಕಾಲದಲ್ಲಿ ಅಭಿಮಾನಿಗಳು, ಸಂಘ ಸಂಸ್ಥೆಗಳಿಂದ ದೇಣಿಗೆಯಾಗಿ ಬಂದದ್ದು. ಪ್ರವಾಸ ಕಾಲದಲ್ಲಿ ಆಹಾರ, ವಸತಿ ಹಾಗೂ ಸೂಕ್ತ ಮಾರ್ಗದರ್ಶನ ನೀಡಿದ ರಾಷ್ಟ್ರೀಯ ಸ್ವಯಂಸೇವಕಸಂಘದ ಸಹಾಯವನ್ನು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಹಲವರು ಗಣ್ಯರೂ ಸಹ ನೆರವು ನೀಡಿದ ಕುರಿತು ಸ್ಮರಿಸುತ್ತಾರೆ. ಇವರ ಜೊತೆಗೆ ಪ್ರವಾಸ ಹೊರಟಿದ್ದ ಸಂಗಡಿಗ ಶ್ರೀ ಅನಂತ ಪದ್ಮನಾಭ ಕರ್ನಾಟಕ ಪ್ರವಾಸದುದ್ದಕ್ಕೂ ಜೊತೆಗಿದ್ದು ಮಹಾರಾಷ್ಟ್ರದಲ್ಲಿ ಪ್ರವಾಸ ಮೊಟಕುಗೊಳಿಸಿ ಹಿಂತಿರುಗಿದರೂ ಇವರು ಧೃತಿಗೆಡದೆ ಏಕಾಂಗಿಯಾಗಿ ಪ್ರವಾಸ ಮುಂದುವರೆಸಿ ಪೂರ್ಣಗೊಳಿಸಿದ ಸಾಹಸಿ.
ಇವರ ಪ್ರವಾಸಕಾಲದ ಅನುಭವಗಳ ತುಣುಕುಗಳು:
*ಸುದೀರ್ಘ ಪ್ರಯಾಣಕಾಲದಲ್ಲಿ ೧೦ ಟೈರುಗಳನ್ನು, ೧೨ ಟ್ಯೂಬುಗಳನ್ನು ಮತ್ತು ಒಮ್ಮೆ ಚೈನನ್ನು ಬದಲಾಯಿಸಬೇಕಾಯಿತು.
*ಮಹಾರಾಷ್ಟ್ರದ ಮುಲ್ಕಾಪುರ ಸೈಕಲ್ ರೇಸ್ ಅಸೋಸಿಯೇಷನ್ ಏರ್ಪಡಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ೧೬೦ ಕಿ.ಮೀ. ದೂರವನ್ನು ೫ ಗಂಟೆ ೧೨ ನಿಮಿಷಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಪಡೆದರು. ಸ್ಪರ್ಧೆ ಪ್ರಾರಂಭವಾಗುವ ಸಮಯಕ್ಕೆ ಅಲ್ಲಿಗೆ ಹೋಗಿದ್ದ ಅವರು ಆಯೋಜಕರನ್ನು ಕೋರಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಸಮಯದ ಅಭಾವದಿಂದ ತಿಂಡಿಯನ್ನೂ ತಿಂದಿರಲಿಲ್ಲ. ಉಳಿದ ಸ್ಪರ್ಧಿಗಳಂತೆ ದಾರಿಯಲ್ಲಿ ಬಳಸಲು ಗ್ಲೂಕೋಸ್ ಇರಲಿ, ನೀರೂ ಹೊಂದಿರಲಿಲ್ಲ. ಹೀಗಾಗಿ ಗಮ್ಯಸ್ಥಾನ ತಲುಪಿದ ನಂತರ ಬಳಲಿ ಕುಸಿದ ಇವರಿಗೆ ಆಯೋಜಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ತೀವ್ರ ಸ್ನಾಯು ಸೆಳೆತದಿಂದ ನರಳಿದ ಅವರು ವಾಪಸು ತೀರ್ಥಹಳ್ಳಿಗೆ ಬಂದು ಕೆಲವು ದಿನಗಳು ವಿಶ್ರಾಂತಿ ಪಡೆದು ಪುನಃ ಪ್ರವಾಸ ಮುಂದುವರೆಸಿದರು.
*ಮರಾಠಿ, ಹಿಂದಿ, ಗುಜರಾತಿ ಭಾಷೆಗಳನ್ನೂ ಪ್ರವಾಸ ಇವರಿಗೆ ಕಲಿಸಿಕೊಟ್ಟಿತು.
*ಮಧ್ಯಪ್ರದೇಶದ ಇಂದೂರಿಗೆ ೮೦ ಕಿ.ಮೀ. ದೂರದ ಭೋಂರ್ಗ್ ಎಂಬಲ್ಲಿ ಬಿಲ್ಲು, ಬಾಣಗಳಿಂದ ಶಸ್ತ್ರಸಜ್ಜಿತರಾದ ಸುಮಾರು ೧೨ ನಗ್ನ ಆದಿವಾಸಿಗಳು ಇವರ ಮೇಲೆ ಹಲ್ಲೆ ಮಾಡಿ ಹೊಡೆದು ಕ್ಯಾಮರಾ, ವಾಚು, ಹಣ, ಬಟ್ಟೆ ಎಲ್ಲವನ್ನೂ ದೋಚಿದರು. ಅರಣ್ಯ ಕಾವಲುಗಾರ ಅಲ್ಲಿಗೆ ಬಂದಿದ್ದರಿಂದ ಸೈಕಲ್ ಬಿಟ್ಟು ಓಡಿಹೋಗಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇವರನ್ನು ಆತ ಉಪಚರಿಸಿ ಸಹಕರಿಸಿದ.
*ಉತ್ತರ ಭಾರತದ ಹಲವೆಡೆ ಇವರಿಗೆ ಕೆಲಸ ಹುಡುಕಿಕೊಂಡು ಬಂದಿದ್ದರೂ ಗುರಿ ಸಾಧನೆ ಸಲುವಾಗಿ ನಿರಾಕರಿಸಿದ್ದು ಹೆಗ್ಗಳಿಕೆ.
*ಮಾಜಿ ಪ್ರಧಾನಿ ಶ್ರೀ ಮೊರಾರ್ಜಿ ದೇಸಾಯಿ, ಮಾಜಿ ಉಪರಾಷ್ರಪತಿ ಶ್ರೀ ಬಿ.ಡಿ. ಜತ್ತಿ, ಜನತಾ ಪಕ್ಷದ ನೇತಾರ ಶ್ರೀ ಅಟಲ್ ಬಿಹಾರಿ ವಾಜಪೇಯಿ (ಆಗ ಅವರು ಪ್ರಧಾನ ಮಂತ್ರಿಯಾಗಿರಲಿಲ್ಲ), ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರುಗಳನ್ನು ಭೇಟಿ ಮಾಡಿದ್ದಾರೆ.
*ಬಿಲಾಸಪುರದ ಬಳಿ ಕಾಡಿನಲ್ಲಿ ಕರಡಿ ಎದುರಿಗೆ ಬಂದಿದ್ದು, ಹತ್ತಿರವಿದ್ದ ಕಾಗದ, ತರಗೆಲೆಗಳನ್ನು ಸೇರಿಸಿ ಬೆಂಕಿ ಹೊತ್ತಿಸಿದ್ದರಿಂದ ಸುಮ್ಮನೆ ಹೋಯಿತು.
*ಕೊಳೆತ ಸಗಣಿಯಲ್ಲಿರುವ ಹುಳುಗಳನ್ನು ಎಣ್ಣ್ಣೆಯಲ್ಲಿ ಹುರಿದು ಅತಿಥಿಗಳನ್ನು ಸತ್ಕರಿಸುವ ಸಂಪ್ರದಾಯದ ಪರಿಚಯ ಇವರಿಗೆ ಭೂತಾನಿನಲ್ಲಾಯಿತು.
*ಚಂಬಲ್ ಕಣಿವೆ ಬಳಿ ಡಕಾಯಿತರು ಇವರನ್ನು ಪೋಲಿಸ್ ಬೇಹುಗಾರನಿರಬೇಕೆಂದು ಶಂಕಿಸಿ ಅಪಹರಿಸಿಕೊಂಡು ಹೋಗಿದ್ದರೂ, ನಿಜಸಂಗತಿ ತಿಳಿದು ಹೂಹಾರ ಹಾಕಿ ಸನ್ಮಾನಿಸಿ ಖರ್ಚಿಗೆ ಹಣ ಕೊಟ್ಟು ಬೀಳ್ಕೊಟ್ಟಿದ್ದರು.
*ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದೆಲ್ಲೂ ಯುವಕರಿಂದ ನಿರೀಕ್ಷಿತ ಪ್ರೋತ್ಸಾಹ ಅವರಿಗೆ ಸಿಗಲಿಲ್ಲ.
ಪ್ರವಾಸಕಾಲದಲ್ಲಿ ದೀಕ್ಷಿತರಿಗೆ ಭಾರತದ ವಿವಿಧತೆಯ ಪ್ರತ್ಯಕ್ಷ ದರ್ಶನವಾಯಿತು. ಜನರನ್ನು, ಸ್ಥಳಗಳನ್ನು ಸಮೀಪದಿಂದ ನೋಡಿದರು. ಓದಿ ತಿಳಿಯುವುದಕ್ಕಿಂತ ನೋಡಿ ತಿಳಿಯುವ ಅನುಬವವೇ ವಿಶಿಷ್ಟವೆಂದು ಮನಗಂಡ ಅವರು ಜನರ ದಯನೀಯ ಸ್ಥಿತಿ ಕಂಡು ಮರುಗಿದರು. ಸಮಾಜಕ್ಕೆ ಉಪಯುಕ್ತವಾಗಿ ಬಾಳಬೇಕೆಂಬ ಅವರ ಮನೋಭಾವ ಗಟ್ಟಿಗೊಂಡಿತು. ದೀಕ್ಷಿತರು ಮಾಡಬೇಕಾದ ಒಂದು ಕೆಲಸ ಬಾಕಿ ಉಳಿದಿದೆ. ಅದೆಂದರೆ ತಮ್ಮ ಅನುಭವಗಳನ್ನು ಬರಹ ರೂಪದಲ್ಲಿಳಿಸಿ ಇತರರಿಗೆ ಪ್ರೇರಣೆ ನೀಡುವುದು. ಅದನ್ನೂ ಶೀಘ್ರವಾಗಿ ಪೂರ್ಣಗೊಳಿಸಲೆಂದು ಹಾರೈಸೋಣ.