ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಜುಲೈ 28, 2011

ಮೂಢ ಉವಾಚ - 62

ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು
ಜಪತಪಕೆ ಮೇಣ್ ಹೋಮಹವನಕೆ ಮಿಗಿಲು |
ಸಕಲಫಲಕದು ಸಮವು ಆತ್ಮದರಿವಿನ ಫಲ
ಅರಿವಿನ ಪೂಜೆಯಿಂ ಪರಮಪದ ಮೂಢ ||


ವಿಷಯ ಬಿಟ್ಟವನು ಎನಿಸುವನು ಸಂನ್ಯಾಸಿ
ಮುಕ್ತಿಮಾರ್ಗಕಿದು ಕಠಿಣತಮ ಹಾದಿ |
ವಿವೇಕಿ ತಾ ಫಲಬಯಸದಾ ಕರ್ಮದಿಂ
ಸರಳ ದಾರಿ ಹಿಡಿಯುವನು ಮೂಢ ||


ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು |
ನಿರ್ಭಯತೆ ಮೇಳವಿಸೆನಿಸೆ ಸಮರ್ಥ
ದೇವಪ್ರಿಯನವನಲ್ಲದಿನ್ಯಾರು ಮೂಢ ||


ಮನಶುದ್ಧಿಯಿರದೆ ತಪವ ಮಾಡಿದೊಡೇನು
ದೇಹ ದಂಡಿಸಿದೊಡೇನು ಅಂತರಂಗವ ಮರೆತು |
ಉಪವಾಸದಿಂ ಫಲವೇನು ವಿವೇಕವಿರದಲ್ಲಿ
ಆಚಾರದೊಳು ವಿಚಾರವಿರಲಿ ಮೂಢ ||
***************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ