ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಜುಲೈ 25, 2011

ಅಧಿಕಾರ ಮತ್ತು ದರ್ಪ

     ಒಬ್ಬರು ಜಿಲ್ಲಾಧಿಕಾರಿಯವರ (ಈಗ ಅವರು ರಾಜ್ಯಮಟ್ಟದ ಅಧಿಕಾರಿ) ಕುಟುಂಬದವರು ಅಮ್ಯೂಸ್‌ಮೆಂಟ್ ಪಾರ್ಕ್‌ನ ಖಾಯಂ ಬಳಕೆದಾರರಾಗಿದ್ದು ಬಿಲ್ಲಿನ ಮೊತ್ತ ರೂ. ೫ ಲಕ್ಷ ದಾಟಿದಾಗ ಮಾಲಿಕರು ಬಿಲ್ ಪಾವತಿಗೆ ಒತ್ತಾಯಿಸಿದರು. ಪರಿಣಾಮ, ಆ ಜಿಲ್ಲಾಧಿಕಾರಿ ಸರಕಾರಿ ಭೂಮಿ ಒತ್ತುವರಿ ಮಾಡಿ ಪಾರ್ಕ್ ನಿರ್ಮಿಸಿದ ಆರೋಪ ಮಾಡಿ ನೋಟೀಸು ಹೊರಡಿಸಿ, ಕೆಎಟಿಯಿಂದ ತಡೆಯಾಜ್ಞೆ ಇದ್ದರೂ ಲೆಕ್ಕಿಸದೆ ತೆರವು ಕಾರ್ಯಾಚರಣೆ ನಡೆಸಿದರೆಂದು ಆರೋಪಿಸಿ ಅವರ ವಿರುದ್ಧ ಅಮ್ಯೂಸ್‌ಮೆಂಟ್ ಪಾರ್ಕಿನ ಮಾಲಿಕರು ಉಚ್ಛನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ ಬಗ್ಗೆ ೨೯-೦೬-೨೦೧೧ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ವರದಿ ಓದಿದೆ. ಆ ವರದಿಗೆ 'ತಿಂದು ಹೋದ ಕೆಡವಿ ಹೋದ' ಎಂಬ ಆಕರ್ಷಕ ಶೀರ್ಷಿಕೆ ಕೊಟ್ಟಿದ್ದಾರೆ. ಹಿಂದಿ ಚಲನಚಿತ್ರ ನೋಡಲು ಥಿಯೇಟರ್‌ಗೆ ಕುಟುಂಬ ಸಮೇತ ಹೋದಾಗ ಹಣ ಕೇಳಿದರೆಂದು ಥಿಯೇಟರ್ ಮಾಲಿಕರಿಗೆ ನೋಟಿಸ್ ಜಾರಿ ಮಾಡಿದ ಬಗ್ಗೆ, ಯಾವುದೇ ವಾಣಿಜ್ಯ ಮಳಿಗೆಗೆ ಹೋದರೂ ಹಣ ನೀಡದ ಬಗ್ಗೆ ಸಹ ಪತ್ರಿಕೆಯಲ್ಲಿ ಪ್ರಕಟವಾಗಿದೆ. ನಾನು ಪುತ್ತೂರು ತಾಲ್ಲೂಕಿನಲ್ಲಿ ತಹಸೀಲ್ದಾರನಾಗಿ ಕಾರ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅಧಿಕಾರಿ ಅಲ್ಲಿ ಪುತ್ತೂರು ಉಪವಿಭಾಗಾಧಿಕಾರಿಯಾಗಿದ್ದರು. ಅವರ ಕುರಿತು ನನ್ನ ಒಂದೆರಡು ಅನುಭವವನ್ನು ತಮ್ಮೊಂದಿಗೆ ಹಂಚಿಕೊಳ್ಳಬಯಸಿ ಈ ಬರಹ.
     ಆಗ ಪುತ್ತೂರಿನ ಎ.ಪಿ.ಎಂ.ಸಿ.ಯ ಆಡಳಿತಾಧಿಕಾರಿಯೂ ಅವರೇ ಆಗಿದ್ದು ಅಡಿಕೆಯ ಅಕ್ರಮ ಸಾಗಾಣಿಕೆ ಮೇಲೆ ನಿಗಾ ಇರಿಸಿದ್ದ ಅವರು ರಾತ್ರೋರಾತ್ರಿ ಒಬ್ಬರೇ ಜೀಪಿನಲ್ಲಿ ಹೊರಟು ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ಮಾಡುತ್ತಿದ್ದರು. ಆರೀತಿ ಒಬ್ಬರೇ ಹೋಗುವುದು ಸೂಕ್ತವಲ್ಲವೆಂದು, ಅಪಾಯ ಒದಗಬಹುದಾದ್ದರಿಂದ ಜೊತೆಯಲ್ಲಿ ಒಬ್ಬರು ಪೋಲಿಸರನ್ನಾದರೂ ಕರೆದೊಯ್ಯಬೇಕೆಂದು ನಾನು ಸಲಹೆ ಮಾಡಿದ್ದರೂ ಅವರು ಯಾರನ್ನೂ ನಂಬುತ್ತಿರಲಿಲ್ಲ. ಲೆಕ್ಕಪತ್ರಗಳನ್ನು ಸರಿಯಾಗಿ ಇಡದ ಬಗ್ಗೆ ಮತ್ತು ಇತರ ವಿಷಯಗಳ ಬಗ್ಗೆ ವರ್ತಕರು ಮತ್ತು ಅವರ ನಡುವೆ ಮನಸ್ತಾಪಗಳು ಜರುಗುತ್ತಲೇ ಇತ್ತು. ಕೊನೆಗೊಮ್ಮೆ ಎಲ್ಲಾ ವರ್ತಕರು ತಮಗಾಗುತ್ತಿರುವ ಕಿರುಕುಳ ಪ್ರತಿಭಟಿಸಿ ಅವರ ಕಛೇರಿಯ ಮುಂದೆ ಧರಣಿ ಪ್ರತಿಭಟನೆ ಪ್ರಾರಂಭಿಸಿದರು. ಉಪವಿಭಾಗಾಧಿಕಾರಿ ಕಛೇರಿಗೆ ಹೋಗುವಾಗ, ಬರುವಾಗ ಮತ್ತು ಅವರನ್ನು ಕಂಡಾಗಲೆಲ್ಲಾ ಅವರ ವಿರುದ್ಧ ಧಿಕ್ಕಾರದ ಕೂಗು ಮೊಳಗುತ್ತಿತ್ತು. ಎರಡು ದಿನಗಳಾದರೂ ಆ ಅಧಿಕಾರಿ ಕ್ಯಾರೇ ಅನ್ನಲಿಲ್ಲ. ನಾನು ಅಲ್ಲಿನ ತಹಸೀಲ್ದಾರನಾದ್ದರಿಂದ ಕಾನೂನು - ಸುವ್ಯವಸ್ಥೆ ದೃಷ್ಟಿಯಿಂದ ಅಧಿಕಾರಿಯೊಂದಿಗೆ ಚರ್ಚಿಸಿದರೆ ಅವರು 'ಎಷ್ಟು ದಿವಸ ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ, ಅವರನ್ನು ವಿಚಾರಿಸುವುದು ಬೇಡ' ಅಂದರು. ನಾನು ವರ್ತಕರೊಂದಿಗೆ ಮಾತನಾಡಲೇ ಎಂದು ಕೇಳಿದರೆ, 'ಮಾತನಾಡಿ, ಆದರೆ ನಾನು ಅವರ ಹತ್ತಿರ ಹೋಗುವುದೂ ಇಲ್ಲ, ಅವರನ್ನು ಕರೆಸುವುದೂ ಇಲ್ಲ'ವೆಂದರು. ಮೂರು ದಿನದಿಂದ ಧರಣಿ ಕುಳಿತು ಬಸವಳಿದಿದ್ದ ವರ್ತಕರು ಸಿಟ್ಟಾಗಿದ್ದರು, ಆಗ ಅಲ್ಲಿನ ವಿಧಾನಸಭಾ ಸದಸ್ಯರಾಗಿದ್ದ ಶ್ರೀ ಸದಾನಂದಗೌಡರು ಸಹ ಉಪವಿಭಾಗಾಧಿಕಾರಿಯವರ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನಾನು ಮಧ್ಯಸ್ತಿಕೆ ವಹಿಸಿ ಮುಕ್ತಾಯಗೊಳಿಸಲು ಕೋರಿದ್ದರು. ವರ್ತಕರೊಂದಿಗೆ ಹಲವು ಗಂಟೆಗಳ ಕಾಲ ಮಾತನಾಡಿ ಅವರ ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹರಿಸಲು ಪ್ರಯತ್ನಿಸಲಾಗುವುದೆಂದು ತಿಳಿಸಿದಾಗ ಈ ಮಾತು ಉಪವಿಭಾಗಾಧಿಕಾರಿಯವರು ಹೇಳಿದರೆ ಸಾಕು, ಧರಣಿ ಮುಗಿದರೆ ಸಾಕು ಎಂದು ನಮಗೂ ಅನ್ನಿಸಿದೆ ಎಂಬ ಅಂತರಂಗದ ಅಭಿಪ್ರಾಯ ಧುರೀಣರಿಂದ ಬಂದಿತು. ಉಪವಿಭಾಗಾದಿಕಾರಿಯವರಿಗೆ ಬಾಯಿಮಾತಿಗೆ ಆದರೂ 'ಪರಿಶೀಲಿಸುವೆ, ಮುಕ್ತಾಯಗೊಳಿಸಿ' ಎಂದು ಹೇಳಲು ಕೇಳಿದರೆ ಅವರು ಒಪ್ಪಲಿಲ್ಲ. ಕೊನೆಗೆ 'ನಿಮ್ಮ ಪರವಾಗಿ ನಾನೇ ಹೇಳುತ್ತೇನೆ, ವರ್ತಕರ ಸಂಘದ ಪದಾಧಿಕಾರಿಗಳನ್ನು ತಮ್ಮ ಛೇಂಬರಿಗೆ ಕರೆಸಿದಾಗಿ ನೀವು ಸುಮ್ಮನಿರಿ' ಎಂದು ಅವರನ್ನು ಒಪ್ಪಿಸಿ ಧುರೀಣರನ್ನು ಕರೆಯಿಸಿ ಅವರಿಗೆಲ್ಲಾ ಚಹ ತರಿಸಿಕೊಟ್ಟು 'ತಮ್ಮ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲು ಒಪ್ಪಿದ್ದಾರೆ, ಜಿಲ್ಲಾಧಿಕಾರಿ ಸಹ ಗಮನಿಸಲಿದ್ದಾರೆ' ಎಂದು ಆಶ್ವಾಸನೆ ಕೊಟ್ಟಾಗ ಮುಷ್ಕರ ಕೊನೆಗೊಂಡಿತು. ಹೊರಗೆ ಇದ್ದ ವರ್ತಕರು 'ಅಸಿಸ್ಟೆಂಟ್ ಕಮಿಷನರ್‌ಗೆ ಧಿಕ್ಕಾರ, ತಹಸೀಲ್ದಾರರಿಗೆ ಜೈ' ಎಂದು ಘೋಷಣೆ ಹಾಕಿದಾಗ ನನಗೆ ಇರುಸು ಮುರುಸಾಗಿತ್ತು. ಇಲ್ಲಿ ಒಂದು ಮಾತು ಹೇಳಲು ಮರೆತೆ. ಮುಷ್ಕರ ನಡೆಯುವಾಗ ಅವರು ಕಛೇರಿಯಲ್ಲಿ ಹೆಚ್ಚು ಕಾಲ ಇರುತ್ತಿರಲಿಲ್ಲ. ಮನೆಯಲ್ಲೇ ಕಡತಗಳನ್ನು ನೋಡುತ್ತಿದ್ದರು, ಅಥವ ಪ್ರವಾಸ ಮಾಡುತ್ತಿದ್ದರು. ಆಗ ಅವರನ್ನು ಮಾತನಾಡಿಸಲು ಅವರ ಮನೆಗೆ ಹೋದಾಗ ಮನೆಯ ಒಳಗೆ ಕರೆಯದೆ ಗೇಟಿನ ಬಳಿಯಲ್ಲೇ ನಿಲ್ಲಿಸಿ ನನ್ನೊಡನೆ ಮಾತನಾಡಿದ್ದರು. ಸೌಜನ್ಯಕ್ಕಾದರೂ ಒಳಗೆ ಕರೆಯದ ಅವರ ಮನೆಗೆ ನಾನು ಮುಂದೆ ಎಂತಹ ತುರ್ತು ಸಮಯದಲ್ಲೂ ಮತ್ತೆಂದೂ ಹೋಗಿರಲಿಲ್ಲ.
     ಆಗ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದ್ದ ಸಮಯ. ಚುನಾವಣೆಯ ಹಿಂದಿನ ದಿನ ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕಳುಹಿಸಿಯಾಗಿತ್ತು. ಕೈಕರ ಎಂಬ ಗ್ರಾಮ ಪಂಚಾಯಿತಿಯ ಚುನಾವಣೆಯ ರಿಟರ್ನಿಂಗ್ ಅಧಿಕಾರಿಯೊಬ್ಬರು ಒಂದು ಪ್ರಮಾದ ಎಸಗಿದ್ದರು. ಅದೆಂದರೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರ ಹೆಸರು ಮತದಾರರ ಪಟ್ಟಿಯಲ್ಲಿ ತೆಗೆದುಹಾಕಲ್ಪಟ್ಟಿದ್ದರೂ ಅದನ್ನು ಗಮನಿಸದೆ ಅವರ ನಾಮಪತ್ರವನ್ನು ಅಂಗೀಕರಿಸಿದ್ದರು. ಮತದಾರರ ಪಟ್ಟಿಯಲ್ಲಿ ಅವರ ಹೆಸರಿಲ್ಲದ್ದರಿಂದ ಆ ವ್ಯಕ್ತಿಗೆ ಮತದಾನ ಮಾಡಲು ಸಂಬಂಧಿಸಿದ ಮತಗಟ್ಟೆ ಅಧಿಕಾರಿ ಸಹಜವಾಗಿ ಅವಕಾಶ ಕೊಡಲಿಲ್ಲ. ಅಭ್ಯರ್ಥಿಗೇ ಮತ ನೀಡಲು ಅವಕಾಶ ಕೊಡದಿದ್ದಾಗ ಅಲ್ಲಿ ಕಾವೇರಿದ ವಾತಾವರಣ ಉಂಟಾಯಿತು. ಆ ಅಭ್ಯರ್ಥಿ ಬಿಜೆಪಿಯ ಅಭ್ಯರ್ಥಿಯಾಗಿದ್ದು, ಪಕ್ಷದ ಅಭಿಮಾನಿಗಳೂ ಗುಂಪುಕೂಡಲಾರಂಭಿಸಿದ್ದರು. ಜನ ನೂರಾರು ಸಂಖ್ಯೆಯಲ್ಲಿ ಒಟ್ಟುಗೂಡಿ ಮತದಾನ ಸ್ಥಗಿತಗೊಂಡಿತ್ತು. ವಿಷಯ ತಿಳಿದ ಉಪವಿಭಾಗಾಧಿಕಾರಿಯವರೂ ಮತ್ತು ನಾನೂ ಆ ಗ್ರಾಮಕ್ಕೆ ಧಾವಿಸಿದೆವು. ಅಭ್ಯರ್ಥಿಗೆ ನಿಯಮಾನುಸಾರ ಮತ ನೀಡಲು ಅವಕಾಶವಿಲ್ಲವೆಂದು ತಿಳಿ ಹೇಳಿದರೂ ಅದನ್ನು ಒಪ್ಪುವ ಸ್ಥಿತಿಯಲ್ಲಿ ಜನರು ಇರಲಿಲ್ಲ. ಆ ಗಲಾಟೆಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರಚಾಡುತ್ತಿದ್ದಾಗ ಎಲ್ಲರೂ ಮಾತನಾಡುವುದು ಸರಿಯಲ್ಲ, ನಿಮ್ಮಲ್ಲೇ ೩-೪ ಜನ ಮುಖಂಡರನ್ನು ಆರಿಸಿ ಮಾತನಾಡಿರಿ, ನಾವು ಇಲ್ಲೇ ಇರುತ್ತೇವೆ ಎಂದು ಪಕ್ಕದ ಶಾಲಾ ಕೊಠಡಿಯಲ್ಲಿ ಕುಳಿತೆವು. ಜನರು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದು, ನೋಡ ನೋಡುತ್ತಿದ್ದಂತೆ ನಾವು ಕೊಠಡಿಯ ಒಳಗೆ ಇದ್ದಂತೆಯೇ ಹೊರಗಿನಿಂದ ಚಿಲಕ ಹಾಕಿ ಬೀಗ ಹಾಕಿಬಿಟ್ಟರು. ನನ್ನೊಡನೆ ಒಳಗಿದ್ದ ಅಧಿಕಾರಿ ಸಿಟ್ಟಿನಿಂದ ಕೊತಕೊತನೆ ಕುದಿಯುತ್ತಿದ್ದರು. ಬೆಳ್ಳಗಿದ್ದ ಅವರ ಮುಖ ಕೆಂಪೇರಿತ್ತು. ಆಗ ಮೊಬೈಲ್ ಫೋನು ಬಳಕೆಗೆ ಬಂದಿರಲಿಲ್ಲ. ನಮ್ಮ ಜೀಪುಗಳಲ್ಲಿ ವೈರ್ ಲೆಸ್ ಸೆಟ್ ಇದ್ದರೂ ನಾವು ಶಾಲಾಕೊಠಡಿಯಲ್ಲಿ ಬಂದಿಗಳಾಗಿದ್ದೆವು. ಅವರು ೧೪೪ನೆ ಸೆಕ್ಷನ್ ಜಾರಿ ಹೇಗೆ ಮಾಡುವುದು?, ಲಾಠಿ ಚಾಜ್ ಮಾಡಲು, ಫೈರಿಂಗ್ ಮಾಡಲು ಪ್ರೊಸೀಜರ್ ಹೇಗೆ? ಎಂದು ನನ್ನನ್ನು ವಿಚಾರಿಸುತ್ತಿದ್ದರು. ನಾನು ಅವರನ್ನು ಸಮಾಧಾನಿಸಿ ಅದೆಲ್ಲಾ ಅಗತ್ಯ ಬರುವುದಿಲ್ಲ. ಎಲ್ಲಾ ಸರಿಯಾಗುತ್ತದೆ ಎಂದು ಅವರಿಗೆ ಹೇಳಿ, ಕಿಟಕಿಯಿಂದಲೇ ಮುಖ್ಯರೆಂದು ಕಂಡ ಕೆಲವರೊಡನೆ ಮಾತಾಡಿದೆ. 'ನೀವು ದಕ್ಷಿಣ ಕನ್ನಡದವರು ಬುದ್ಧಿವಂತರು, ಕಾನೂನಿಗೆ ಬೆಲೆ ಕೊಡುವವರು ಎಂದು ತಿಳಿದಿದ್ದೇನೆ. ನೀವು ಏನು ಮಾಡುತ್ತಿದ್ದೀರೆಂಬ ಅರಿವು ನಿಮಗಿದೆಯೇ? ಚುನಾವಣೆ ಕೇವಲ ನಿಮ್ಮ ಒಂದು ಗ್ರಾಮದಲ್ಲಿ ನಡೆಯುತ್ತಿಲ್ಲ. ಇಡೀ ತಾಲ್ಲೂಕಿನ ಚುನಾವಣೆ ನಡೆಸುವ ಜವಾಬ್ದಾರಿ ನನಗಿದೆ. ಇಡೀ ಉಪವಿಭಾಗದ ಚುನಾವಣೆ ಹೊಣೆ ಉಪವಿಭಾಗಾಧಿಕಾರಿಯವರದ್ದು. ನೀವು ಹೀಗೆ ಮಾಡಿದರೆ ಅದರ ಪರಿಣಾಮ ಏನಾಗುತ್ತದೆ ಗೊತ್ತಿದೆಯೇ?' ಎಂದು ಕೇಳಿದಾಗ ಅವರು ಅಳುಕಿದರು. ಅವರು 'ದಯವಿಟ್ಟು ತಪ್ಪು ತಿಳಿಯಬೇಡಿ, ಶಾಸಕರು ಬರ್ತಾ ಇದಾರೆ. ಅವರು ಬರಲಿ ಅಂತ ಹೀಗೆ ಮಾಡಿದಿವಿ' ಅಂದರು. ನಾನು ಸ್ವಲ್ಪ ಸಿಟ್ಟಿನಿಂದಲೇ 'ಶಾಸಕರು ಬರಲಿ ಅಂತ ಕೂಡಿ ಹಾಕಿದರೆ ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಇದು ಚುನಾವಣೆ ಸಮಯ, ಹೀಗೆಲ್ಲಾ ಮಾಡಿದರೆ ಅದರ ಪರಿಣಾಮ ಸಹ ಎದುರಿಸಲೇ ಬೇಕು. ಶಾಸಕರ ಜೊತೆ ಮಾತಾಡಬೇಕು ಅಂದರೆ ನಾನು ಮಾತಾಡುತ್ತೇನೆ. ಈಗ ಮೊದಲು ಬಾಗಿಲು ತೆಗೆಯಿರಿ' ಎಂದು ಹೇಳಿದೆ. ಜನರು 'ನಿಮ್ಮನ್ನು ಬಿಟ್ಟರೆ ಮತ್ತೆ ನೀವು ಇಲ್ಲಿಗೆ ಬರುವುದಿಲ್ಲ. ಬಂದರೂ ಪೋಲಿಸರನ್ನು ಕರೆದುಕೊಂಡು ಬರುತ್ತೀರಿ. ಲಾಠಿಚಾರ್ಜು ಮಾಡಿಸುತ್ತೀರಿ' ಎಂದು ಹೇಳಿದರು. 'ನೀವು ತೆಗೆಯದಿದ್ದರೆ ಅದರ ಪರಿಣಾಮ ಇನ್ನೂ ಗಂಭೀರವಾಗುತ್ತದೆ. ನಿಮ್ಮ ಶಾಸಕರು ಬಂದ ಮೇಲೆ ತಿಳಿಸಿ. ನಾನು ಖಂಡಿತಾ ಬರುತ್ತೇನೆ. ಈಗ ಕೆಲಸ ಮಾಡಲು ಬಿಡಿ' ಎಂದಾಗ 'ತಪ್ಪು ತಿಳಿಯಬೇಡಿ, ಶಾಸಕರು ಬಂದಾಗ ಬಂದು ಪರಿಹರಿಸಬೇಕು, ನಮ್ಮ ಅಭ್ಯರ್ಥಿಗೆ ಓಟು ಹಾಕಲು ಅವಕಾಶ ಕೊಡಬೇಕು, ಅಲ್ಲಿಯವರೆಗೂ ಯಾರಿಗೂ ಓಟು ಹಾಕಲು ಬಿಡುವುದಿಲ್ಲ' ಎಂದು ಹೇಳಿ ಬಾಗಿಲು ತೆರೆದರು. ನಾವು ವಾಪಸು ಪುತ್ತೂರಿಗೆ ಹೊರಟೆವು. ದಾರಿಯಲ್ಲಿ ಉಪವಿಭಾಗಾಧಿಕಾರಿ ಪೋಲಿಸರನ್ನು ಕಳಿಸಿ ಜನರನ್ನು ಚದುರಿಸಲು ವ್ಯವಸ್ಥೆ ಮಾಡುವಂತೆ ಡಿವೈಎಸ್ಪಿರವರಿಗೆ ವೈರ್‌ಲೆಸ್‌ನಿಂದ ಮಾತನಾಡಿಯೇಬಿಟ್ಟರು. ನಾನು ಅವರಿಗೆ 'ಅಂತಹುದೆಲ್ಲಾ ಬೇಡ ಸಾರ್, ಅಲ್ಲಿ ಚುನಾವಣೆ ನಡೆದರೆ ನಡೆಯಲಿ, ಇಲ್ಲದಿದ್ದರೆ ಆ ಒಂದು ಮತಗಟ್ಟೆಯಲ್ಲಿ ಚುನಾವಣೆ ರದ್ದಾದರೆ ಮರುಚುನಾವಣೆಗೆ ವ್ಯವಸ್ಥೆ ಮಾಡಬಹುದು. ಲಾಠಿ ಚಾರ್ಜು ಆಗಿ ೪-೫ ಜನರಿಗೆ ಪೆಟ್ಟಾದರೆ, ಫೈರಿಂಗ್ ಆಗಿ ಯಾರಾದರೂ ಸತ್ತರೆ, ಅದು ದೊಡ್ಡ ಸುದ್ದಿಯಾಗುತ್ತದೆ, ಕಛೇರಿಯ ಮುಂದೆ ಸಾವಿರಾರು ಜನ ಸೇರುತ್ತಾರೆ, ಗಲಾಟೆಗೆ ಅವಕಾಶವಾಗುತ್ತದೆ, ಅಲ್ಲೂ ಸಮಸ್ಯೆ ಆಗಿ ರಾಜ್ಯಮಟ್ಟದಲ್ಲೂ ಸುದ್ದಿಯಾಗುತ್ತದೆ' ಎಂದು ಹೇಳುತ್ತಿದ್ದೆ. ಅರ್ಧ ದಾರಿ ಹೋದಾಗ ಎಮ್.ಎಲ್.ಎ. ಸದಾನಂದಗೌಡರು ಗ್ರಾಮಕ್ಕೆ ಬರುತ್ತಿದ್ದವರು ಎದುರಿಗೆ ಸಿಕ್ಕರು. ನಾನು ಅವರಿಗೆ ಎಲ್ಲಾ ವಿಷಯ ವಿವರಿಸಿ ಈಗ ಏನೇ ಮಾಡಿದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಅಭ್ಯರ್ಥಿಗೆ ಓಟು ಹಾಕಲು ಅವಕಾಶವಿಲ್ಲ. ಸ್ಪರ್ಧಿಸಿದವರಲ್ಲಿ ಇತರರು ಯಾರಾದರೂ ಕೋರ್ಟಿನಲ್ಲಿ ಕೇಸು ಹಾಕಿದರೆ ಮಾತ್ರ ಅಭ್ಯರ್ಥಿಗೆ ಅನಾನುಕೂಲವಾಗಬಹುದು. ಇಲ್ಲದಿದ್ದರೆ ಏನೂ ತೊಂದರೆಯಿಲ್ಲ. ಸಂಬಂಧಿಸಿದ ಚುನಾವಣಾಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಾಗ ಅವರು ಅರ್ಥ ಮಾಡಿಕೊಂಡರೂ ಸಹ ತಮ್ಮ ಪಕ್ಷದ ಅಭ್ಯರ್ಥಿಗೆ ಅನಾನುಕೂಲವಾದ ಬಗ್ಗೆ ಅಸಮಾಧಾನ ತೋರ್ಪಡಿಸಿದರು. ನಾನು ಉಪವಿಭಾಗಾಧಿಕಾರಿಯವರಿಗೆ ಪುತ್ತೂರಿಗೆ ಹೋಗಲು ಕೋರಿ ನಾನು ಶಾಸಕರೊಂದಿಗೆ ಪುನಃ ಗ್ರಾಮಕ್ಕೆ ಹೋದೆ. ಅಲ್ಲಿ ಸಾಕಷ್ಟು ಬಿಸಿಬಿಸಿ ವಾಗ್ವಾದಗಳಾದರೂ ಕೊನೆಗೆ ಶಾಸಕರ ಸಹಕಾರದಿಂದ ಚುನಾವಣೆ ಮುಂದುವರೆಸುವಲ್ಲಿ ನಾನು ಸಫಲನಾದೆ. ಅಷ್ಟು ಹೊತ್ತಿಗೆ ಅಲ್ಲಿಗೆ ಉಪವಿಭಾಗಾಧಿಕಾರಿ ಕಳಿಸಿದ್ದ ಎರಡು ಪೋಲಿಸ್ ವ್ಯಾನುಗಳ ಭರ್ತಿ ಪೋಲಿಸರು ಅಲ್ಲಿ ಬಂದಿಳಿದರು. ನಾನು ಮಾತನಾಡಿ ಸೀಮಿತ ಪೋಲಿಸರನ್ನು ಮಾತ್ರ ಅಲ್ಲಿ ಉಳಿಸಿ ಉಳಿದವರನ್ನು ವಾಪಸು ಕಳಿಸಿದೆ. ನನ್ನ ಆ ಕೆಲಸ ಗಮನಿಸುತ್ತಿದ್ದ ಜನರ ಮೆಚ್ಚುಗೆ ಗಳಿಸಿತು. ಅಲ್ಲಿ ಅಂದು ಶೇ. ೭೮ ಮತದಾನ ಆಯಿತು. ಚುನಾವಣೆ ನಂತರ ಎಣಿಕೆಯಾದಾಗ ಆ ಅಭ್ಯರ್ಥಿ ಸೋತಿದ್ದರಿಂದ ಮುಂದೆ ಬೇರೆ ಸಮಸ್ಯೆ ಬರಲಿಲ್ಲ.
     ಈ ಅಧಿಕಾರಿ ಐ.ಎ.ಎಸ್. ಕೇಡರ್ ಗೆ ಸೇರಿದವರಾಗಿದ್ದು ೨-೩ ವರ್ಷಗಳಲ್ಲಿ ಜಿಲ್ಲಾಧಿಕಾರಿಯಾಗಿ ಹೋಗಲಿದ್ದರಿಂದ ಅವರ ಮಾತು ನಡೆಯುತ್ತಿತ್ತು. ಅವರು ಪ್ರಭಾವ ಬೀರಿ ಆಪತ್ತು ನಿರ್ವಹಣೆಗೆ ಮೀಸಲಿದ್ದ ಹಣದಲ್ಲಿ ರೂ. ೨-೩ ಲಕ್ಷ ಹಣವನ್ನು ಪುತ್ತೂರಿನ ತಮ್ಮ ಸರ್ಕಾರಿ ನಿವಾಸದ ದುರಸ್ತಿಗೆ ಅವಕಾಶವಿಲ್ಲದಿದ್ದರೂ ಬಳಸಿಕೊಂಡರು. ಕಛೇರಿಯ ತಮ್ಮ ಛೇಂಬರಿನ ನವೀಕರಣಕ್ಕೂ ಮಳೆ ಕಾರಣ ಕಟ್ಟಡಕ್ಕೆ ಹಾನಿಯಾಯಿತೆಂದು ಆ ಹಣ ಬಳಸಿದರು. ಜಿಲ್ಲೆಯ ಪತ್ರಿಕೆಗಳಲ್ಲಿ ಈ ಬಗ್ಗೆ ಬಂದರೂ ಕ್ರಮೇಣ ವಿಷಯ ತಣ್ಣಗಾಯಿತು. ಅವರ ಸ್ವಭಾವ, ಗುಣಗಳ ಪರಿಚಯವಿರುವ ನನಗೆ ಅವರ ಮೇಲೆ ಈಗ ಬಂದಿರುವ ಆರೋಪಗಳಲ್ಲಿ ಸತ್ಯಾಂಶವಿದ್ದರೂ ಇರಬಹುದೆಂದು ಅನ್ನಿಸುತ್ತಿದೆ. ರೀತಿ, ನೀತಿಗಳು ಸರಿಯಿದ್ದರೆ ದರ್ಪವನ್ನು ಕೆಲಮಟ್ಟಿಗೆ ಸಹಿಸಬಹುದು. ಆದರೆ ಎಲ್ಲಾ ಕಾಲಕ್ಕೂ ದರ್ಪದಿಂದ ಅಧಿಕಾರ ನಡೆಸುವುದು ಅಪೇಕ್ಷಣೀಯವಲ್ಲವೆಂದು ನನ್ನ ವೈಯಕ್ತಿಕ ಅಭಿಪ್ರಾಯ. ನನಗೆ ಹೆಚ್ಚು ಕಾಡುವ ವಿಷಯವೆಂದರೆ ಈ ಅಧಿಕಾರಿಯ ದರ್ಪದ ಅಧಿಕಾರದ ಫಲ (ಬಿಟ್ಟಿ ಮೋಜು, ಮಸ್ತಿ, ಶಾಪಿಂಗ್, ಇತ್ಯಾದಿ) ಅನುಭವಿಸುತ್ತಿರುವ ಇವರ ಮಕ್ಕಳು ಮುಂದೆ ಎಷ್ಟು ಉತ್ತಮ ನಾಗರಿಕರಾಗಬಹುದು ಎಂಬುದು!

4 ಕಾಮೆಂಟ್‌ಗಳು:

 1. ಬ್ರಷ್ಟ,ದರ್ಪ ಅಧಿಕಾರಿಗಳೂ ಇರ್ತಾರೆ,ಸಜ್ಜನ-ಪ್ರಾಮಾಣಿಕ ಅಧಿಕಾರಿಗಳೂ ಇರ್ತಾರೆ.ಮಾಧ್ಯಮದವರು ಕೆಟ್ಟವರ ಬಗ್ಗೆ ಬರೆಯುತ್ತಾರೆ. ಸಜ್ಜನರು-ಪ್ರಾಮಾಣಿಕರು ಎಲೆಮರೆಕಾಯಿಯಂತೆ ತಮ್ಮ ಕರ್ತವ್ಯ ತಾವು ನಿರ್ವಹಿಸುತ್ತಿರುತ್ತಾರೆ. ಅವರು ಪ್ರಚಾರಕ್ಕೆ ಬರುವುದೇ ಇಲ್ಲ.ಹಾಸನದಿಂದ ಬೆಂಗಳೂರಿಗೆ ವರ್ಷದಲ್ಲಿ ಲಕ್ಷಾಂತರ ಪ್ರಯಾಣಿಕರು ಸುರಕ್ಷಿತವಾಗಿ ತಲುಪಿದ್ದು ಸುದ್ಧಿಯಾಗುವಿದಿಲ್ಲ. ಯಾವುದೋ ವಾಹನ ಬ್ರೇಕ್ ಫೈಲ್ ಆಗಿ ಮರಕ್ಕೆ ಡಿಕ್ಕಿಯಾದುದು ಪತ್ರಿಕೆಯ ಮುಖಪುಟದ ಸುದ್ಧಿಯಾಗುತ್ತೆ!!

  ಪ್ರತ್ಯುತ್ತರಅಳಿಸಿ
 2. ನಾನು ಕೆಟ್ಟವರ ಬಗ್ಗೆ ಬರೆದೆನೆಂದು ಆಕ್ಷೇಪಣೆಯೇ, ಶ್ರೀಧರ್? ನನ್ನ ಕಳಕಳಿ ಅವರ ಮಕ್ಕಳ ಬಗ್ಗೆ! ಸಂತತಿ ಮುಂದುವರೆಯಬಾರದಲ್ಲವೇ?
  -ನಾಗರಾಜ್.

  ಪ್ರತ್ಯುತ್ತರಅಳಿಸಿ
 3. ನಿಮ್ಮ ಅಧಿಕಾರದ ಅವಧಿಯಲ್ಲಿನ ಸ೦ದಿಗ್ಧ ಪರಿಸ್ಥಿತಿಗಳಲ್ಲಿ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ನನಗೆ ಬಹಳ ಮೆಚ್ಚುಗೆಯಾದವು. ಭವಿಷ್ಯದ ಪ್ರಜೆಗಳ ಬಗೆಗಿನ ನಿಮ್ಮ ಕಾಳಜಿ ಆದರಣೀಯ ಸರ್, ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 4. ನಿಮ್ಮ ಪ್ರತಿಕ್ರಿಯೆ ಪ್ರೋತ್ಸಾಹದಾಯಕವಾಗಿದೆ, ಪ್ರಭಾಮಣಿಯವರೇ. ವಂದನೆಗಳು.
  -ನಾಗರಾಜ್.

  ಪ್ರತ್ಯುತ್ತರಅಳಿಸಿ