ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಡಿಸೆಂಬರ್ 23, 2011

ಸಸ್ಯಾಹಾರ ಮತ್ತು ಹಿಂದೂಧರ್ಮ

     ಇತ್ತೀಚೆಗೆ ಎರಡು ಪ್ರಶ್ನೆಗಳನ್ನು ಕೇಳಲಾಯಿತು: ಹಿಂದುತ್ವ ದೇವರನ್ನು ನಂಬಬೇಕೆಂದು ಬಯಸುತ್ತದೆಯೇ? ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ?
     ಮೊದಲನೆಯ ಪ್ರಶ್ನೆಗೆ ಸಂಬಂಧಿಸಿದಂತೆ, ನಾನು ಹಿಂದುತ್ವ ಎಂದರೇನು ಮತ್ತು ಯಾರು ನಿಜವಾಗಿಯೂ ಹಿಂದು ಎಂಬ ಕುರಿತು ಚರ್ಚಿಸಿದ್ದೇನೆ. ಸಾರಾಂಶ ರೂಪದಲ್ಲಿ ಹೇಳಬೇಕೆಂದರೆ, ಹಿಂದುತ್ವ ಎನ್ನುವುದು ಸನಾತನ ಧರ್ಮ ಮತ್ತು ಆ ಧರ್ಮ ಅನಾದಿ ಕಾಲದ್ದು - ಅದು ಮೋಕ್ಷ ಸಂಪಾದನೆಯ ಮಾರ್ಗ ಹುಡುಕುವುದನ್ನು ಒಳಗೊಂಡಿದೆ. ಆದ್ದರಿಂದ ಯಾರು ಮೋಕ್ಷ ಬಯಸುತ್ತಾರೋ ಅವರು- ಅವರು ಯಾವ ರಾಷ್ಟ್ರೀಯರು, ಜಾತಿಯವರು, ಜನಾಂಗದವರು ಅಥವ ಲಿಂಗದವರು ಎಂಬ ಭೇಧವಿಲ್ಲದೆ- ನಿಜವಾದ ಹಿಂದು. ಆ ರೀತಿಯ ವಿಶಾಲ ಮನೋಭಾವದ ತಿಳುವಳಿಕೆಯಲ್ಲಿ ಹಿಂದುತ್ವ ಅನ್ನುವುದು ಜೀವನದ ರೀತಿ ಆಗುತ್ತದೆ, ಏಕೆಂದರೆ ಜೀವನದ ಮುಖ್ಯ ಉದ್ದೇಶದ ಹುಡುಕಾಟವೇ ಹಿಂದೂ ಜೀವನದ ಗುರಿ.
     ಮೇಲಿನ ಹಿನ್ನೆಲೆಯಲ್ಲಿ, ಎಲ್ಲಾ ಇತರ ಪ್ರಶ್ನೆಗಳನ್ನು, ಹಿಂದುತ್ವ ಸಸ್ಯಹಾರಿಯಾಗಿರಬೇಕೆಂದು ಬಯಸುತ್ತದೆಯೇ ಎಂಬ ಪ್ರಶ್ನೆ ಸೇರಿದಂತೆ, ಬಿಡಿಸಲು ಸುಲಭವೆನಿಸುತ್ತದೆ. ಜೀವನದ ಉದ್ದೇಶ ಮುಕ್ತಿ ಅಥವ ಮೋಕ್ಷವನ್ನು ಪಡೆಯುವುದಾದ್ದರಿಂದ ಅದನ್ನು ಪಡೆಯುವವರೆಗೆ ನಾವು ಬದುಕಿರಬೇಕು. ಸಾವು ಮಾತ್ರ ಮಾನಸಿಕ ಜಾಗೃತಿಯಾದಾಗ ಬರುವ ನಾನತ್ವದ ಸಾವು ತರಬಲ್ಲದು. ಆದ್ದರಿಂದ ದೇಹವನ್ನು ಸಧೃಢವಾಗಿ ಇಟ್ಟುಕೊಳ್ಳುವುದು ನಮ್ಮ ಧರ್ಮ. ಅದರ ಅರ್ಥ ಬದುಕಲಿಕ್ಕಾಗಿ ತಿನ್ನಬೇಕು (ಇನ್ನೊಂದು ರೀತಿಯಲ್ಲಿ ಅಲ್ಲ - ತಿನ್ನುವ ಸಲುವಾಗಿ ಬದುಕುವುದು!)
     ಜೀವನ ಜೀವದ ಮೇಲೆ ಜೀವಿಸಿದೆ. ಅದು ಪ್ರಕೃತಿಯ ನಿಯಮ. ನಾನು ಒಂದು ಪ್ರಾಣಿಯನ್ನು ತಿನ್ನುತ್ತೇನೋ ಅಥವ ಒಂದು ಸಸ್ಯವನ್ನು ತಿನ್ನುತ್ತೇನೋ, ಒಟ್ಟಿನಲ್ಲಿ ಒಂದು ಜೀವವನ್ನು ನಾಶಪಡಿಸಿದಂತೆಯೇ. ಎಲ್ಲಾ ಬಗೆಯ ಜೀವಮಾತ್ರರಲ್ಲಿ ಮಾನವ ಇತರ ಜೀವಿಗಳಿಗಿಂತ ಭಿನ್ನ. ಅವನಿಗೆ ಒಳ್ಳೆಯದು ಯಾವುದು, ಕೆಟ್ಟದು ಯಾವುದು ಎಂದು ತುಲನೆ ಮಾಡುವ ಶಕ್ತಿಯಿದೆ. ಅದು ಅವನಿಗೆ ಆಯ್ಕೆಯ ಸ್ವಾತಂತ್ರ್ಯವನ್ನೂ ಕೊಟ್ಟಿದೆ. ಸಸ್ಯಗಳು ಕೇವಲ ದೇಹ ಮತ್ತು ಬಹುಷಃ ಪ್ರಾರಂಭಿಕ ಹಂತದ ಮನಸ್ಸು ಹೊಂದಿರಬಹುದು. ಪ್ರಾಣಿಗಳು ದೇಹ ಮತ್ತು ಭಾವನೆಗಳು ಹಾಗೂ ನೋವನ್ನು ವ್ಯಕ್ತಪಡಿಸುವ ಮನಸ್ಸು ಹೊಂದಿರುವುದರ ಜೊತೆಗೆ ಪ್ರಾರಂಭಿಕ ಹಂತದ ಬುದ್ಧಿಶಕ್ತಿ ಹೊಂದಿರಬಹುದು. ಮಾನವ ದೇಹ ಮಾತ್ರವಲ್ಲ, ಮನಸ್ಸು ಮತ್ತು ಪರಿಶೀಲಿಸುವ, ನಿರ್ಧರಿಸುವ ಮತ್ತು ಆಯ್ಕೆ ಮಾಡುವ ಉತ್ತಮ ಬೆಳವಣಿಗೆ ಹೊಂದಿದ ಬುದ್ಧಿಶಕ್ತಿಯನ್ನೂ ಹೊಂದಿದ್ದಾನೆ. ಅವನಿಗೆ ಯಾವಾಗಲೂ ಮೂರು ಅವಕಾಶಗಳಿವೆ - 'ಕರ್ತುಂ ಶಖ್ಯಂ, ಅಕರ್ತುಂ ಶಖ್ಯಂ ತಥಾ ಅನ್ಯಥಾ ಕರ್ತುಂ ಶಖ್ಯಂ' - ಅವನು ಬೇಕೆಂದರೆ ಮಾಡಬಹುದು, ಮಾಡದಿರಬಹುದು ಮತ್ತು ಬೇರೆ ರೀತಿಯಲ್ಲಿ ಮಾಡಬಹುದು. ಪ್ರಾಣಿಗಳಿಗೆ ಮತ್ತು ಸಸ್ಯಗಳಿಗೆ ಆಯ್ಕೆಯ ಸ್ವಾತಂತ್ರ್ಯವಿರುವುದಿಲ್ಲ. ಅವು ಸಹಜ ರೀತಿಯಲ್ಲಿ ವರ್ತಿಸುತ್ತವೆ. ಹಸು ಊಟದ ಮುಂದೆ ಕುಳಿತು ತಾನು ಸಸ್ಯಹಾರಿಯಾಗಿರಬೇಕೋ ಅಥವ ಮಾಂಸಾಹಾರಿಯಾಗಿರಬೇಕೋ ಎಂದು ವಿಚಾರಿಸುತ್ತಾ ಕುಳಿತುಕೊಳ್ಳುವುದಿಲ್ಲ. ಅದೇ ರೀತಿ ಹುಲಿ ಸಹಾ. ಮನುಷ್ಯನಿಗೆ ಅಂತಹ ವಿವೇಚಿಸುವ ಬುದ್ಧಿ, ಶಕ್ತಿ ಇದೆ. ಸಸ್ಯಗಳು ಮತ್ತು ಪ್ರಾಣಿಗಳು ತಮ್ಮ ಕ್ರಿಯೆಗಳಲ್ಲಿ ಪಾಪ ಮಾಡುವುದಿಲ್ಲ, ಏಕೆಂದರೆ ಅವುಗಳ ಕ್ರಿಯೆಗಳಲ್ಲಿ ಇಚ್ಛಾಶಕ್ತಿ ಇರುವುದಿಲ್ಲ. ಆದರೆ ಮನುಷ್ಯನ ವಿಷಯದಲ್ಲಿ ಕಥೆಯೇ ಬೇರೆ. ನಿಮಗೆ ಈ ಚರ್ಚೆಯಲ್ಲಿ ಪಾಪವನ್ನು ಏಕೆ ತಂದೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಇರಲಿ, ವಿವರಿಸುತ್ತೇನೆ.
     ಪಾಪ ಎಂಬುದು ಮನಸ್ಸಿನ ತುಮುಲಗಳೇ ಹೊರತು ಮತ್ತೇನೂ ಅಲ್ಲ. ಈ ತುಮುಲಗಳೇ ಮೋಕ್ಷದೆಡೆಗಿನ ನನ್ನ ಪ್ರಯಾಣವನ್ನು ಅಡ್ಡಿಪಡಿಸುವುದು. ನಾನು ಸತ್ಯವನ್ನು ಸತ್ಯವಾಗೇ ಕಾಣಲು ಮನಸ್ಸು ಶುದ್ಧವಾಗಿರಬೇಕು (ಅಂದರೆ ತುಮುಲಗಳಿರಬಾರದು). (ಬೈಬಲ್ ಸಹ ಯಾರ ಮನಸ್ಸುಗಳು ಶುದ್ಧವಾಗಿದೆಯೋ ಅವರು ಅನುಗ್ರಹಿತರು ಎಂದು ಹೇಳುತ್ತದೆ.) ಪಾಪವನ್ನು ಹೆಚ್ಚು ವೈಜ್ಞಾನಿಕವಾಗಿ ವಿವರಿಸಬೇಕೆಂದರೆ - ಅದು ಮನಸ್ಸು ಮತ್ತು ಬುದ್ಧಿಶಕ್ತಿಗಳಲ್ಲಿನ ಅಂತರ. ಬುದ್ಧಿಶಕ್ತಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಗೊತ್ತಿರುತ್ತದೆ - ಆದರೂ ನಮಗೆ ತಪ್ಪೆಂದು ಗೊತ್ತಿದ್ದರೂ ಅದನ್ನೇ ಮಾಡುವಂತೆ ಆಗುತ್ತದೆ - ಅಂದರೆ ಬುದ್ಧಿಶಕ್ತಿ ಒಂದು ಹೇಳುತ್ತದೆ, ಆದರೆ ಬುದ್ಧಿಶಕ್ತಿ ಹೇಳಿದಂತೆ ಕೇಳಬೇಕಾದ ಮನಸ್ಸು ಬಂಡೆದ್ದು ತನಗೆ ಬೇಕಾದಂತೆ ಮಾಡುತ್ತದೆ. ಈ ಅಂತರವೇ ಪಾಪ. ಆ ರೀತಿ ಮಾಡಿದ ನಂತರ ಏನೋ ತಪ್ಪು ಮಾಡಿದ ಭಾವ ಮೂಡುತ್ತದೆ, ಏಕೆಂದರೆ ಬುದ್ಧಿಶಕ್ತಿ ತಾನು ಸೋತಿದ್ದರೂ ಸುಮ್ಮನಿರುವುದಿಲ್ಲ, ಅದು ನಾನು ಅದು ತಪ್ಪು ಎಂದು ಹೇಳಿದೆ. ಆದರೂ ಅದನ್ನು ಏಕೆ ಮಾಡಿದೆ? ಎಂದು ಚುಚ್ಚುತ್ತಲೇ ಇರುತ್ತದೆ. ಮನಸ್ಸಿನ ಶಾಂತಿ ಹೋದ ಮೇಲೆ ಮನುಷ್ಯನಿಗೆ ನರಕದ ಅನುಭವವಾಗುತ್ತದೆ. ಮನುಷ್ಯ ಪಾಪಕ್ಕಾಗಿ ಶಿಕ್ಷಿಸಲ್ಪಡುವುದಿಲ್ಲ, ಪಾಪದಿಂದ ಶಿಕ್ಷಿಸಲ್ಪಡುತ್ತಾನೆ. ಅದರ ಕುರಿತು ಚಿಂತಿಸಿ.
     ಎಲ್ಲಾ ಯೋಗಗಳೂ, ನೀವು ಸ್ಪಷ್ಟವಾಗಿ ವಿಮರ್ಶಿಸಿದರೆ, ದೇಹ, ಮನಸ್ಸು ಮತ್ತು ಬುದ್ಧಿಶಕ್ತಿಯನ್ನು ಒಗ್ಗೂಡಿಸುವ ಕ್ರಿಯೆಗಳೇ ಆಗಿವೆ. ಒಬ್ಬ ಯೋಗಿಗೆ - ಆತ ಏನು ಯೋಚಿಸುತ್ತಾನೆ, ಏನು ಮಾತನಾಡುತ್ತಾನೆ ಮತ್ತು ಏನು ಮಾಡುತ್ತಾನೆ ಎಲ್ಲವೂ ಒಂದೇ ರೀತಿಯದಾಗಿರುತ್ತದೆ, ಹೊಂದಾಣಿಕೆಯಿರುತ್ತದೆ (ಮನಸಾ -ವಾಚಾ - ಕರ್ಮಣಾ). ನಮ್ಮ ವಿಷಯದಲ್ಲಿ, ನಾವು ಯೋಚಿಸುವುದೇ ಒಂದು, ಆದರೆ ನಾವು ಏನು ಯೋಚಿಸುತ್ತೇವೆಯೋ ಅದನ್ನು ಹೇಳುವ ಧೈರ್ಯವಿರುವುದಿಲ್ಲ, ನಮ್ಮ ತುಟಿಗಳು ನಾವು ಯೋಚಿಸಿದ್ದಕ್ಕಿಂತ ಭಿನ್ನವಾಗಿ ಬೇರೇನನ್ನೋ ಹೇಳುತ್ತವೆ; ನಾವು ಆಡಿದ ಮಾತು ಮತ್ತು ನಂತರ ನಾವು ಮಾಡುವ ಕೆಲಸ, ಮತ್ತೆ ಅಲ್ಲಿ ವ್ಯತ್ಯಾಸ! - ಎಲ್ಲೂ ಸಮನ್ವಯತೆ ಇಲ್ಲವೇ ಇಲ್ಲ. ನಾವು ಗೊಂದಲದ ಜೀವನ ನಡೆಸುತ್ತಿದ್ದೇವೆ. ನಾವು ಇನ್ನೊಬ್ಬರನ್ನು ಮೋಸ ಮಾಡುವುದರ ಜೊತೆಗೆ ಇನ್ನೂ ಶೋಚನೀಯವೆಂದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತಿದ್ದೇವೆ, ಮತ್ತೂ ಶೋಚನೀಯವೆಂದರೆ ನಮಗೆ ಅದರ ಅರಿವೇ ಬರುವುದಿಲ್ಲ!
     ಈಗ ಒಂದು ಹುಲಿ ಬೇಟೆಯಾಡಿ ತಿಂದರೆ ಅದು ಪಾಪ ಮಾಡಿದಂತೆ ಆಗುವುದಿಲ್ಲ. ಏಕೆಂದರೆ ಅದರ ಬುದ್ಧಿಶಕ್ತಿ ಪ್ರಾರಂಭಿಕ ಹಂತದಲ್ಲಿದ್ದು, ಅದು ಕೊಲ್ಲುವ ಮುನ್ನ - ಕೊಲ್ಲಬೇಕೋ ಅಥವಾ ಬೇಡವೋ, ನಾನು ಮಾಂಸಾಹಾರಿಯಾಗಿರಬೇಕೋ ಅಥವ ಸಸ್ಯಾಹಾರಿಯಾಗಿರಬೇಕೋ - ಎಂದು ವಿಮರ್ಶಿಸುತ್ತಾ ಕೂರುವುದಿಲ್ಲ. ಅದಕ್ಕೆ ಹಸಿವಾದಾಗ, ಪ್ರಾಕೃತಿಕ ಬೇಡಿಕೆ ಈಡೇರಿಸಿಕೊಳ್ಳಲು ತನ್ನ ಬೇಟೆಯನ್ನು ಕೊಲ್ಲುತ್ತದೆ ಮತ್ತು ತಿನ್ನುತ್ತದೆ ಮತ್ತು ಅಗತ್ಯವಿರುವಷ್ಟು ತಿಂದ ನಂತರ ಉಳಿದುದನ್ನು ಬಿಡುತ್ತದೆ. ಅದಕ್ಕೆ ಹೊಟ್ಟೆಬಾಕತನ ಇಲ್ಲ. ಅದು ಅದರ ಸ್ವಧರ್ಮ. ಅದು ಸುಂದರ ಪರಿಸರ ವ್ಯವಸ್ಥೆಯನ್ನು ಪಾಲಿಸುತ್ತದೆ. ಮನುಷ್ಯನೊಬ್ಬ ಮಾತ್ರ ತನ್ನ ಹೊಟ್ಟೆಬಾಕತನದಿಂದ ಪರಿಸರ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾನೆ. ನಾನು ಸಸ್ಯಾಹಾರಿಯಾಗಿರಬೇಕೆ ಅಥವ ಮಾಂಸಾಹಾರಿಯಾಗಬೇಕೆ? ಎಂಬ ಪ್ರಶ್ನೆ ಅವನೊಬ್ಬನಿಂದ ಮಾತ್ರ ಬರಲು ಸಾಧ್ಯ. ಆ ಪ್ರಶ್ನೆ ಏಕೆ ಬರುತ್ತದೆ? ಏಕೆಂದರೆ ಅವನಿಗೆ ವಿವೇಚನೆ ಮಾಡುವ ಬುದ್ಧಿಶಕ್ತಿ ಇದೆ ಮತ್ತು ಅವನು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಇತರರನ್ನು ನೋಯಿಸಲು ಬಯಸದಿರುವುದರಿಂದ. ಆತನಿಗೆ ನೋವು ಎಂದರೆ ಏನೆಂದು ಗೊತ್ತಿದೆ, ಏಕೆಂದರೆ ಆತ ಇತರರು ಅವನಿಗೆ ನೋವುಂಟುಮಾಡಬಾರದೆಂದು ಬಯಸುತ್ತಾನೆ. ಸಸ್ಯಗಳೂ ಸಹ ಜೀವಿಗಳೇ, ಅವುಗಳಿಗೆ ನೋವುಂಟು ಮಾಡಬಹುದೇ? ಎಂದು ನೀವು ಕೇಳಬಹುದು. ಯಾವುದೇ ಜೀವ ವೈವಿಧ್ಯಕ್ಕೆ ಹಾನಿಯುಂಟು ಮಾಡದೆ ಬದುಕಲು ಸಾಧ್ಯವಿದ್ದರೆ ಅದು ಅತ್ಯುತ್ತಮ, ಆದರೆ ಅದು ಸಾಧ್ಯವಿಲ್ಲ. ಜೀವನ ಜೀವದ ಮೇಲೆ ಜೀವಿಸಿದೆ - ಅದು ಪ್ರಕೃತಿಯ ನಿಯಮ. ವಿವೇಚನಾಶಕ್ತಿಯುಳ್ಳ ಮನುಷ್ಯನಾಗಿ ನನ್ನ ಪಾತ್ರವೆಂದರೆ ನಾನು ಬದುಕಿರುವ ಸಲುವಾಗಿ ಪ್ರಕೃತಿಗೆ ಕನಿಷ್ಠ ಹಾನಿಯಾಗುವಂತೆ ನೋಡಿಕೊಳ್ಳುವುದು. ಸಸ್ಯಗಳ ನೋವಿನ ಬಗ್ಗೆ ನನಗೆ ಸ್ಪಷ್ಟ ತಿಳುವಳಿಕೆಯಿಲ್ಲ. ಆದ್ದರಿಂದ ಬದುಕಲಿಕ್ಕಾಗಿ ತಿನ್ನುವುದು ಮತ್ತು ತಿನ್ನಲಿಕ್ಕಾಗಿ ಬದುಕದಿರುವುದು ನಿರ್ಣಾಯಕ ಅಂಶವಾಗುತ್ತದೆ.
      ಭಗವದ್ಗೀತೆಯಲ್ಲಿ ಕೃಷ್ಣ ಒತ್ತಿ ಹೇಳುವುದೇನೆಂದರೆ ಒಬ್ಬ ಸಾಧಕ (ಮೋಕ್ಷಕ್ಕಾಗಿ ಹಂಬಲಿಸುವವನು) ಎಲ್ಲಾ ಜೀವಿಗಳ ವಿಷಯದಲ್ಲಿ ಅನುಕಂಪ ಹೊಂದಿರಬೇಕೆಂದು (ಸರ್ವ ಭೂತ ಹಿತೇರಥಾಃ). ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಬುದ್ಧಿಶಕ್ತಿ ಹರಿತವಾಗುತ್ತಾ ಹೋಗುತ್ತದೆ - ತೀಕ್ಷ್ಣ ಬುದ್ಧಿ ಸೂಕ್ಷ್ಮ ಬುದ್ಧಿಯಾಗುತ್ತಾ ಹೋಗುತ್ತದೆ. ಅಂದರೆ, ಮನಸ್ಸು ತಳಮಳರಹಿತ, ಶಾಂತ ಮತ್ತು ಸ್ವ-ನಿಯಂತ್ರಿತವಾಗುತ್ತದೆ. ಇತರರ ನೋವುಗಳಿಗೆ ಸ್ಪಂದಿಸುವ ಗುಣ ಸಹ ಬೆಳೆಯುತ್ತಾ ಹೋಗುತ್ತದೆ. ಆದ್ದರಿಂದ ಸಸ್ಯಾಹಾರಿಯಾಗುವುದು ಸೂಕ್ತ.
     ಸಾಂಪ್ರದಾಯಿಕ ಮಾಂಸಾಹಾರಿಗಳೂ ಸಹ ನಾಯಿಗಳು ಮತ್ತು ಬೆಕ್ಕುಗಳು ಅಥವ ಇತರ ಮಾನವ ಪ್ರಾಣಿಗಳನ್ನು ತಿನ್ನಲು ಇಷ್ಟಪಡುವುದಿಲ್ಲ! ಏಕೆ? ಎಷ್ಟೇ ಆದರೂ ಮಾಂಸ ಅಂದರೆ ಮಾಂಸವೇ! ಆದರೆ ಬಳಕೆಯಿಂದ ಅನುಕಂಪ ಬೆಳೆದಿರುತ್ತದೆ. ಮಾನವನನ್ನೇ ಹೋಲುವ ಆದರೆ ಪ್ರಾರಂಭಿಕ ಬುದ್ಧಿಶಕ್ತಿ ಹೊಂದಿರುವ ಹಲವು ಎರಡು ಕಾಲಿನ ಪ್ರಾಣಿಗಳಿವೆ. ಅವು ಪ್ರಾಣಿಗಳಂತೆ ವರ್ತಿಸುತ್ತವೆ. ಆದರೆ ವಿಕಸನವಾಗುತ್ತಾ ಹೋದಂತೆ ಅವುಗಳ ಬುದ್ಧಿಶಕ್ತಿ ಬೆಳೆಯುತ್ತಾ ಹೋಗುತ್ತದೆ ಎಂಬುದನ್ನು ಗಮನಿಸಿದರೆ ಪ್ರಕೃತಿಯಿಂದ ಎಷ್ಟು ಬೇಕೋ ಅಷ್ಟನ್ನು ಪಡೆದು ಸಸ್ಯಾಹಾರಿಯಾಗಿರುವುದು ಸೂಕ್ತವೆನಿಸುತ್ತದೆ. ಕೇವಲ ನಾಲಗೆಯ ಚಪಲವನ್ನು ತೃಪ್ತಿ ಪಡಿಸುವ ಸಲುವಾಗಿ ಯಾವುದೇ ಜೀವವಿಧಗಳನ್ನು ಘಾಸಿಗೊಳಿಸಬಾರದು.
     ಹಿಂದೂ ಒಬ್ಬ ಸಸ್ಯಾಹಾರಿಯಾಗಿರಬೇಕೇ? ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಾಗಲೇ ಉದ್ಭವಿಸಿರಬಹುದು, ನಿಮ್ಮ ಹೊಟ್ಟೆಯನ್ನು ತೃಪ್ತಿಪಡಿಸಲು ಇತರ ಜೀವಗಳನ್ನು ನೋಯಿಸಬಾರದೆಂಬ ಸೂಕ್ಷ್ಮತೆ ನಿಮಗೆ ಇದೆಯೆಂದು ಭಾವಿಸುವೆ. ಹಾಗಿದ್ದಲ್ಲಿ ನೀವು ಮಾಂಸಾಹಾರದಿಂದ ದೂರವಿರುವುದು ಉತ್ತಮ ಮತ್ತು ಆಗ ನೀವು ನಿಮ್ಮ ಬುದ್ಧಿಶಕ್ತಿಯೊಂದಿಗೆ ಶಾಂತವಾಗಿರಬಹುದು. ನೀವು ಸೂಕ್ಷ್ಮ ಭಾವನೆಯುಳ್ಳವರಾಗಿದ್ದರೆ, ನಿಮ್ಮ ಬುದ್ಧಿಶಕ್ತಿ ಹೇಳುವುದೇ ಒಂದಾದರೆ ಮತ್ತು ನಿಮ್ಮ ಮನಸ್ಸು ಕೆಳ ಸಂತೋಷಗಳನ್ನು ಬಯಸಿ ಬೇರೆ ದಾರಿಯಲ್ಲಿ ನಿರ್ದೇಶಿಸಿದರೆ ಮತ್ತು ನೀವು ನಿಮ್ಮ ಬುದ್ಧಿ ಹೇಳಿದ ದಾರಿ ಬಿಟ್ಟು ನಡೆದರೆ ನೀವು ಪಾಪ ಮಾಡಿದಂತೆ ಆಗುತ್ತದೆ. ಕೃಷ್ಣ ಹೇಳಿದಂತೆ ಅದು ನಿಮ್ಮ ಸ್ವಧರ್ಮದ ವಿರುದ್ಧವಾಗುತ್ತದೆ. ಜೊತೆಗೆ, ಈಗ ಸಾಂಪ್ರದಾಯಿಕ ಮಾಂಸಾಹಾರಿಗಳೂ ಸಸ್ಯಾಹಾರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಇತರ ಪ್ರಾಣಿಗಳ ಬಗ್ಗೆ ಅನುಕಂಪದಿಂದಲ್ಲ, ಆದರೆ ಅದು ತಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲವೆಂಬ ಕಾರಣಕ್ಕಾಗಿ.
     ನಾನಾಗಲೇ ತಿಳಿಸಿದ್ದೇನೆ, ಹಿಂದುತ್ವದಲ್ಲಿ ಹೀಗೆ ಮಾಡಿ ಮತ್ತು ಹೀಗೆ ಮಾಡಬೇಡಿ ಎಂಬುದಿಲ್ಲ, ಆದರೆ ನೀವು ನಿಮ್ಮ ಸ್ವಂತದ ಮಾಡಬಹುದಾದ ಮತ್ತು ಮಾಡಬಾರದ ಸಂಗತಿಗಳನ್ನು ನಿಮ್ಮ ಬುದ್ಧಿಶಕ್ತಿಯ ಮೌಲ್ಯ, ಸಂಸ್ಕೃತಿ, ಶಿಕ್ಷಣ ಮತ್ತು ಬದುಕಿನ ಪ್ರಾಥಮಿಕ ಗುರಿ ಆಧರಿಸಿ ನಿರ್ಧರಿಸಿಕೊಳ್ಳಿ. ನಿಮ್ಮ ಸ್ವಧರ್ಮವನ್ನು ನೀವು ಪಾಲಿಸುವುದರಿಂದ ನೀವು ನಿಮ್ಮೊಂದಿಗೆ ಸಮಾಧಾನದಿಂದಿರುವುದನ್ನು ಕಂಡುಕೊಳ್ಳುವಿರಿ. ಅದನ್ನು ಬೇರೆಯವರು ನಿರ್ಣಯಿಸುವುದಲ್ಲ, ನೀವೇ ನಿರ್ಣಯಿಸಿಕೊಳ್ಳುವುದು. ನೀವು ತಳಮಳಕ್ಕೆ ಒಳಗಾದಿರೆಂದರೆ ಅದರ ಅರ್ಥ ನೀವು ಅದರಿಂದ ಮನಸ್ಸಿನ ಶಾಂತಿ ಕಳೆದುಕೊಳ್ಳುತ್ತಿರುವಿರೆಂದು ಮತ್ತು ಅದೇ ಪಾಪ. ನಿಮ್ಮನ್ನು ನೀವೇ ನೀವು ತಿನ್ನುವ ಕೋಳಿ ಅಥವ ಹಸು ಎಂದಿಟ್ಟುಕೊಳ್ಳಿ. ನೀವು ನಿಮ್ಮನ್ನು ತಿನ್ನುವವರನ್ನು ಸಸ್ಯಾಹಾರಿಗಳಾಗಲು ಮತ್ತು ನಿಮ್ಮ ಜೀವ ಉಳಿಸಲು ಹೇಳುವುದಿಲ್ಲವೇ? ನೀವು ಪ್ರಾಣಿಯನ್ನು ನೀವೇ ಕೊಲ್ಲುತ್ತಿಲ್ಲವೆಂದೂ ಮತ್ತು ನೀವು ತಿಂದರೂ, ತಿನ್ನದಿದ್ದರೂ ಪ್ರಾಣಿಗಳು ಕೊಲೆಯಾಗುವುವು ಎಂದು ಹೇಳದಿರಿ. ನೀವು ತಿನ್ನದಿದ್ದರೆ ಒಂದು ಪ್ರಾಣಿ ಉಳಿಯುತ್ತದೆ. ಅದೇ ಬೇಡಿಕೆ ಮತ್ತು ಪೂರೈಕೆ. ನಾನು ಸ್ವತಃ ಕದಿಯದಿರಬಹುದು, ಆದರೆ ಕದ್ದ ಮಾಲನ್ನು ಅದು ಕದ್ದಮಾಲು ಎಂದು ಗೊತ್ತಿದ್ದೂ ಕೊಂಡರೆ, ಅದು ಅಪರಾಧ! ಅಲ್ಲವೇ? ಈಗ ಕೃತಕ ಮಾಂಸಗಳೂ ದೊರೆಯುತ್ತವೆ - ಆದ್ದರಿಂದ ಸತ್ತ ಮಾಂಸಕ್ಕೇಕೆ ಹಂಬಲಿಸಬೇಕು? ನಿಮ್ಮ ಹೊಟ್ಟೆಯನ್ನು ಸತ್ತ ಪ್ರಾಣಿಯ ಸ್ಮಶಾನವಾಗಬೇಕೆಂದು ಏಕೆ ಬಯಸುವಿರಿ?
     ಹಿಂದುತ್ವದ ದೃಷ್ಟಿಯಿಂದ ನೋಡಿದರೆ ಅದು ಇದನ್ನೆಲ್ಲಾ ಗಮನಿಸುವುದೇ ಇಲ್ಲ. ಅದು ಬಯಸುವುದೇನೆಂದರೆ ಸನಾತನ ಧರ್ಮದ ದಾರಿಯಲ್ಲಿ ನಡೆಯಬೇಕೆಂದಷ್ಟೆ. ಆದ್ದರಿಂದ ನಿಮ್ಮ ಮನಸ್ಸನ್ನು ಶಾಂತವಾಗಿ ಮತ್ತು ತಳಮಳರಹಿತವಾಗಿರುವಂತೆ ನೋಡಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡಿ. ಮನಸ್ಸಿನ ಶುದ್ಧತೆಯೇ ಮೋಕ್ಷ ಪಡೆಯುವ ದಾರಿ ಮತ್ತು ಅದು ಮಾನವ ಜೀವನದ ಗುರಿ. ನಾವು ಇಷ್ಟಪಟ್ಟು ಮಾಡಿದ ಕ್ರಿಯೆಗಳಿಂದ ಈ ಸಂಸಾರದ ಜಂಜಾಟಕ್ಕೆ ಸಿಲುಕಿದ್ದು, ನಾವು ಇಷ್ಟಪಟ್ಟು ಮಾಡುವ ಸಾಧನೆಯೊಂದೇ ಅದರಿಂದ ಹೊರಬರಲು ಸಾಧ್ಯ. ಭಗವಂತ ನಮಗೆ ಇದನ್ನು ಸಾಧಿಸಲು ಬುದ್ಧಿಶಕ್ತಿ ಕೊಟ್ಟಿದ್ದಾನೆ. ಕೃಷ್ಣ ಘೋಷಿಸಿದ್ದಾನೆ -ಪರಧರ್ಮಕ್ಕಿಂತ ಸ್ವಧರ್ಮದಲ್ಲಿ ಸಾಯುವುದು ಮೇಲು. ಸ್ವಧರ್ಮ (ಅದು ನೀವು ಯಾವ ಜಾತಿ ಅಥವ ಧರ್ಮಕ್ಕೆ ಸೇರಿರುವಿರಿ ಎಂಬುದಲ್ಲ) ಎಂದರೆ ಅಂತಿಮವಾಗಿ ನಿಮ್ಮ ಬುದ್ಧಿಶಕ್ತಿ ಅಥವ ಅಂತಃಸಾಕ್ಷಿ ಏನು ಹೇಳುತ್ತದೆಯೋ ಅದು. ಏಕೆಂದರೆ, ಕ್ರಿಯೆ ಮಾಡಿದ ನಂತರ ನಿಮ್ಮ ಮನಸ್ಸೇ ನಿಮ್ಮ ಬುದ್ಧಿಶಕ್ತಿಯೊಂದಿಗೆ ಲೆಕ್ಕ ಇತ್ಯರ್ಥ ಮಾಡಿಕೊಳ್ಳಬೇಕಿರುವುದು.
     ನಿಮಗೆ ನೀವೇ ಒಂದು ಉಪಕಾರ ಮಾಡಿಕೊಳ್ಳಿರಿ - ನಿಮಗೆ ಯಾವುದು ಅಗತ್ಯವಿದೆಯೋ ಅದನ್ನು ತಿನ್ನಿ ಮತ್ತು ಯಾವುದು ನಿಜವಾಗಿಯೂ ಅಗತ್ಯವಿಲ್ಲವೋ ಅದನ್ನು ಬಿಟ್ಟುಬಿಡಿ. ಆ ರೀತಿಯಲ್ಲಿ ನಿಮ್ಮ ಜೀವನವನ್ನು ಸರಳ, ಶಾಂತ ಮತ್ತು ಕಡಿಮೆ ಕೊಲೆಸ್ಟರಾಲ್ ನೊಂದಿಗೆ ಆರೋಗ್ಯವಂತವಾಗಿ ಮಾಡಿಕೊಳ್ಳಿ.
*********
ಮೂಲ ಇಂಗ್ಲಿಷ್ ಲೇಖಕರು: ಡಾ. ಕೆ. ಸದಾನಂದ, ವಾಷಿಂಗ್ಟನ್, ಡಿ.ಸಿ. ೨೦೩೭೫.
ಕನ್ನಡ ಅನುವಾದ :        ಕವಿ ನಾಗರಾಜ್.

ಬುಧವಾರ, ಡಿಸೆಂಬರ್ 21, 2011

ಲೋಕ ಕಲ್ಯಾಣಾರ್ಥ?

     ನಾನು ಮತ್ತು ನನ್ನ ಪತ್ನಿ ಇತ್ತೀಚೆಗೆ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನಕ್ಕೆ ಹೋಗಿದ್ದಾಗ ಕಂಡ ದೃಷ್ಯದ ಒಂದು ತುಣುಕು ಸೆರೆ ಹಿಡಿದು ಇಲ್ಲಿ ಹಾಕಿರುವೆ. ದೇವಸ್ಥಾನದ ಪ್ರಾಂಗಣದ ಸುತ್ತಲೂ ಹರಳು ಉಪ್ಪನ್ನು ಹರಡಲಾಗಿತ್ತು, ಅದರ ಮೇಲೆ ವ್ಯಕ್ತಿಯೊಬ್ಬರು ಹೊರಳುತ್ತಾ ಪ್ರದಕ್ಷಿಣೆ ಮಾಡುತ್ತಿದ್ದರು. ಹರಳು ಉಪ್ಪಾಗಿದ್ದರಿಂದ ಶರೀರಕ್ಕೆ ಚುಚ್ಚಿ ಅವರಿಗೆ ನೋವಾಗುತ್ತಿದ್ದುದು ಕಣ್ಣಿಗೆ ತಿಳಿಯುತ್ತಿತ್ತು. 'ಉರಿಯುವ ಗಾಯದ ಮೇಲೆ ಉಪ್ಪು ಸವರಿದಂತೆ' ಎಂಬ ಗಾದೆಯ ನೆನಪಾಯಿತು. ನೋವು ಅನುಭವಿಸಿ ಉರುಳುಸೇವೆ ಮಾಡುತ್ತಿದ್ದ ಅವರು ಉರುಳಲಾಗದೆ ಕೆಲವೊಮ್ಮೆ 5-10 ನಿಮಿಷಗಳು ಕಣ್ಣು ಮುಚ್ಚಿ ಅಲ್ಲೇ ಮಲಗಿರುತ್ತಿದ್ದರು. ಅವರನ್ನು ಅನುಸರಿಸಿ ಬರುತ್ತಿದ್ದ ಜೊತೆಯವರು ಭಜನೆ ಮಾಡುತ್ತಾ ಬರುತ್ತಿದ್ದರು. ಲೋಕ ಕಲ್ಯಾಣಾರ್ಥ ಅವರು ಹೀಗೆ ಉರುಳುಸೇವೆ ಮಾಡುತ್ತಿದ್ದರಂತೆ. ಇದರಿಂದ ಲೋಕಕಲ್ಯಾಣ ಹೇಗೆ ಆದೀತು ಎಂದು ನನಗಂತೂ ಅರ್ಥವಾಗಲಿಲ್ಲ. ಸುಮಾರು 50-60 ಮೂಟೆ ಉಪ್ಪು ಅಲ್ಲಿ ಸುರಿಯಲಾಗಿದ್ದು, ಅದು ನಂತರದಲ್ಲಿ ಉಪಯೋಗಕ್ಕೂ ಬರಲಾರದು. ಲೋಕಕಲ್ಯಾಣ ಹೇಗೆ ಆಗುತ್ತದೆ ಎಂದು ಯಾರಾದರೂ ಗೊತ್ತಿದ್ದರೆ ತಿಳಿಸುವಿರಾ?


ಮಂಗಳವಾರ, ಡಿಸೆಂಬರ್ 20, 2011

ಸತ್ತರು ಎನಲವರು ಹುಟ್ಟಿರಲೇ ಇಲ್ಲ!

     "ಶ್ರೀ. . . . . . . . . . . . ರವರು ಅತ್ಯಂತ ಜನಾನುರಾಗಿಯಾಗಿದ್ದು, ನಮಗೆಲ್ಲಾ ತುಂಬಾ ಬೇಕಾದವರಾಗಿದ್ದರು. ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವರ ಅಗಲಿಕೆಯ ದುಃಖವನ್ನು ಸಹಿಸುವುದು ನಮಗೇ ಇಷ್ಟು ಕಷ್ಟವಾಗಿರುವಾಗ ಅವರ ಕುಟುಂಬದವರಿಗೆ ಇನ್ನು ಹೇಗಾಗಿರಬೇಕು? ಅವರ ಕುಟುಂಬದವರೆಲ್ಲರಿಗೂ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದಯಾಮಯನಾದ ಭಗವಂತ ಕೊಡಲಿ ಎಂದು ಪ್ರಾರ್ಥಿಸೋಣ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ನಾವೆಲ್ಲರೂ ಎದ್ದುನಿಂತು ಎರಡು ನಿಮಿಷ ಮೌನ ಶ್ರದ್ಧಾಂಜಲಿ ಸಲ್ಲಿಸೋಣ" - ಗಣ್ಯರೊಬ್ಬರ ನಿಧನದ ಸಂದರ್ಭದಲ್ಲಿ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ವೇದಿಕೆಯಲ್ಲಿದ್ದವರೊಬ್ಬರು ಈ ರೀತಿಯಲ್ಲಿ ಕರೆ ಕೊಡುತ್ತಿದ್ದರು. ಮೃತ ಗಣ್ಯರ ಅಂತ್ಯಸಂಸ್ಕಾರ ಅದಾಗಲೇ ಆಗಿಹೋಗಿತ್ತು. ಅಗ್ನಿಯಲ್ಲಿ ಅರ್ಪಿತವಾಗಿ ಶರೀರ ಪಂಚಭೂತಗಳಲ್ಲಿ ಲೀನವಾಗಿತ್ತು. ಹಾಗಾದರೆ ಆ ಶರೀರದೊಂದಿಗೆ ಗುರುತಿಸಿಕೊಂಡಿದ್ದ ಆತ್ಮ ಇನ್ನೂ ಇತ್ತೇ? ಶರೀರ ಹೋದರೂ ಆತ್ಮ ಇರುತ್ತದೆಯೇ? ಸದ್ಗತಿ ಸಿಗುವುದು ಅಂದರೆ ಏನು? . . ಇತ್ಯಾದಿ ಪ್ರಶ್ನೆಗಳು ಕಾಡತೊಡಗಿದವು. ಶರೀರಕ್ಕೆ ಹೊರತಾದ ಆತ್ಮ ಒಂದು ಇದೆ ಅನ್ನುವುದನ್ನು ಒಪ್ಪಿ ಮಾಡುವ ಕ್ರಿಯೆಯೇ ಉತ್ತರಕ್ರಿಯಾದಿ ಸಂಸ್ಕಾರಗಳು. ಶರೀರವನ್ನು ಹೂಳುವುದಿರಬಹುದು, ಸುಡುವುದಿರಬಹುದು, ಪಾರ್ಸಿಗಳು ಮಾಡುವಂತೆ ರಣಹದ್ದುಗಳಿಗೆ ದೇಹವನ್ನು ಆಹಾರವಾಗಿ ಉಣಿಸುವುದಿರಬಹುದು, ಏನಾದರೂ ಇರಬಹುದು. ಇಂತಹ ಕ್ರಿಯೆಗಳಿಂದ ಮೃತಶರೀರ ಪಂಚಭೂತಗಳಲ್ಲಿ ವಿಲೀನವಾಗಲು ಸಹಕಾರಿಯಾಗುತ್ತದೆ.
    'ಜೀವಾತ್ಮ ಅನ್ನುವ ವಸ್ತು ಇರುವುದಿಲ್ಲ. ಅದು ಶರೀರದೊಂದಿಗೆ ಸಹಜವಾಗಿ ಉಂಟಾಗುವ ಚೈತನ್ಯವಿಶೇಷ. ಶರೀರ ನಷ್ಟವಾದೊಡನೆ ಅದೂ ನಾಶವಾಗುತ್ತದೆ' ಎಂಬ ವಾದವೂ ಇದೆ. ವಿಚಾರ ಮಾಡೋಣ. ಈ ಶರೀರ ಅನ್ನುವುದು ಜಡವಸ್ತುಗಳಿಂದ ಕೂಡಿದ ಒಂದು ಸುಂದರ ನಿರ್ಮಾಣ. ಅದಕ್ಕೆ ಚೈತನ್ಯ ಬಂದಿರುವುದು ಅದರೊಳಗಿರುವ ಪ್ರಾಣ/ಚೈತನ್ಯ/ಜೀವಾತ್ಮ/ಯಾವುದೋ ಶಕ್ತಿಯಿಂದ ಎಂದು ಒಪ್ಪಬಹುದಲ್ಲವೇ? ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಯಾವುದೇ ಮೂಲವಸ್ತುವಿಗೆ ನಾಶವಿರುವುದಿಲ್ಲ. ಅದು ರೂಪಾಂತರ ಹೊಂದಿದರೂ ಒಂದಲ್ಲಾ ಒಂದು ರೂಪದಲ್ಲಿ ಅಸ್ತಿತ್ವದಲ್ಲಿರುತ್ತದೆ. ಮೃತ ಶರೀರವನ್ನು ಸುಟ್ಟಾಗ/ಯಾವುದೇ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದಾಗ ಅದು ಬೂದಿಯಾಗಿಯೋ, ಆವಿಯಾಗಿಯೋ, ಮಣ್ಣಾಗಿಯೋ, ನೀರಾಗಿಯೋ ರೂಪಾಂತರ ಹೊಂದುತ್ತದೆ. ಆ ಶರೀರದೊಳಗಿದ್ದ ಜೀವ ಚೈತನ್ಯ ಏನಾಗುತ್ತದೆ? ನಾಶವಾಗುತ್ತದೆ ಎಂದರೆ ಅದು ಇನ್ನೂ ಯಾವುದೋ ರೀತಿಯಲ್ಲಿ ಇರಲೇಬೇಕಲ್ಲವೇ? ಮೊದಲು ಅದು ಯಾವ ರೂಪದಲ್ಲಿತ್ತು? ಅಂತ್ಯ ಸಂಸ್ಕಾರದ ನಂತರ ಯಾವ ರೂಪ ಹೊಂದುತ್ತದೆ ಎಂಬುದು ಯಾರಿಗೆ ಗೊತ್ತಿದೆ? ಶರೀರದೊಂದಿಗೆ ಸಹಜವಾಗಿ ಉಂಟಾಗುವ ಜೀವ ಚೈತನ್ಯವೆಂದರೆ ಅದನ್ನು ಸೃಷ್ಟಿಸಿದವರು ಯಾರು? ಜಡವಸ್ತು ತನ್ನಿಂದ ತಾನೇ ಏನಾದರೂ ಸೃಷ್ಟಿಸಲು ಸಾಧ್ಯವಿದೆಯೇ? ಇಲ್ಲ ಅನ್ನುತ್ತದೆ ವಿಜ್ಞಾನ. ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲಾರದು. ಒಂದು ವೇಳೆ ಜಡವಸ್ತು ಏನಾದರೂ ಸೃಷ್ಟಿಸಲು ಸಾಧ್ಯ ಎಂದು ವಾದಕ್ಕೋಸ್ಕರವಾಗಿ ಒಪ್ಪಿಕೊಂಡರೂ ಅದರಿಂದ ಮತ್ತೊಂದು ಜಡವಸ್ತು ನಿರ್ಮಾಣ ಸಾಧ್ಯವೇ ಹೊರತು ಚೈತನ್ಯದಿಂದ ಕೂಡಿದ ವಸ್ತು ನಿರ್ಮಾಣ ಆಗಲಾರದು. ಇರುವ ವಸ್ತುಗಳಿಂದ ಇಲ್ಲದ ವಸ್ತುವಿನ ಸೃಷ್ಟಿ ಹೇಗೆ ಸಾಧ್ಯ? ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಶರೀರದೊಳಗೆ ಜೀವ ಚೈತನ್ಯ ಸೇರಿದೆಯೇ ಹೊರತು, ಶರೀರದಿಂದ ಚೈತನ್ಯ ಉಂಟಾಗಿಲ್ಲ ಅನ್ನುವುದು ಹೆಚ್ಚು ತಾರ್ಕಿಕ. ಹೀಗೆಯೇ ಮುಂದುವರೆಸೋಣ. ಆ ಚೈತನ್ಯ ಮೊದಲು ಶರೀರದೊಳಗಿದ್ದಾಗ ವ್ಯಕ್ತಿ ಜೀವಂತನಾಗಿದ್ದ, ಇಲ್ಲದಾದಾಗ ಮೃತನಾದ ಅನ್ನಬಹುದು. ಹೊರಗಿನಿಂದ ವ್ಯಕ್ತಿಯ ಶರೀರದೊಳಗೆ ಬಂದು ಸೇರಿದ್ದ ಆ ಚೈತನ್ಯ ವ್ಯಕ್ತಿಯ ಮರಣಾನಂತರ ಶರೀರದ ಹೊರಗೆ ಇರುತ್ತದೆ. ಬದುಕಿದ್ದಾಗ ಒಂದು ರೂಪದಲ್ಲಿ, ಸತ್ತಾಗ ಇನ್ನೊಂದು ರೂಪದಲ್ಲಿ ಇರುತ್ತದೆ ಎಂದಾದರೆ ಯಾವ ರೂಪದಲ್ಲಿ ಇದ್ದೀತು ಅನ್ನುವುದು ಯಾರಿಗೆ ತಿಳಿದಿದೆ? ಇಂತಹ ವಿಶಿಷ್ಟ ಚೈತನ್ಯವನ್ನೇ ಜ್ಞಾನಿಗಳು ಜೀವಾತ್ಮ ಎನ್ನುತ್ತಾರೆ. ಜೀವಾತ್ಮಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ ಅನ್ನುವುದು ಈ ಅರ್ಥದಲ್ಲೇ ಇರಬೇಕು. 
ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಂ 
ಶ್ರೀ ಶಂಕರಾಚಾರ್ಯರ ಈ ಉಕ್ತಿ ಪುನರ್ಜನ್ಮವನ್ನು ಸಮರ್ಥಿಸುವುದರೊಂದಿಗೆ ಜೀವಚೈತನ್ಯದ ಅಮರತ್ವವನ್ನೂ ಸಾರುತ್ತಿದೆ. ಪುನರ್ಜನ್ಮವಿದ್ದಲ್ಲಿ ಹಳೆಯ ಶರೀರ ನಷ್ಟವಾದ ಮೇಲೆ, ಅದು ಪಂಚಭೂತಗಳಲ್ಲಿ ಸೇರಿಹೋದಮೇಲೆ ಆ ಜೀವಚೈತನ್ಯ ಬೇರೆ ಶರೀರದ ಮೂಲಕವೇ ಪ್ರಕಟಗೊಳ್ಳಬೇಕು/ಪುನರ್ಜನ್ಮ ಹೊಂದಬೇಕು.
     ಸಕಲ ಜೀವಿಗಳನ್ನು ಸೃಷ್ಟಿಸಿದವನು ಭಗವಂತ ಎಂದೂ ಸಹ ವಾದವಿದೆ. ಯಾವುದರಿಂದ ಸೃಷ್ಟಿಸಿದ? ಶೂನ್ಯದಿಂದಂತೂ ಆಗಿರಲಾರದು. ಶೂನ್ಯದಿಂದ ಸೃಷ್ಟಿ ಅನ್ನುವುದನ್ನು ವಿಜ್ಞಾನ ಸಹ ಒಪ್ಪುವುದಿಲ್ಲ. ಎಲ್ಲಾ ಜೀವಿಗಳೂ ಪರಮಾತ್ಮನ ಅಂಶಗಳೇ ಅಂದರೆ, ಇಷ್ಟೊಂದು ಜೀವಜಂತುಗಳು ಇರುವಾಗ ಅವೆಲ್ಲವನ್ನೂ ಪರಮಾತ್ಮ ತನ್ನ ಅಂಶದಿಂದಲೇ ಸೃಷ್ಟಿಸಿದ ಅಂದರೆ, ಸೃಷ್ಟಿಯ ನಂತರ ಅವನು  ಪರಿಪೂರ್ಣ ಎಂದೆನಿಸಿಕೊಳ್ಳಲಾರನು. ಭಗವಂತ ಸೃಷ್ಟಿಸಿದ ಅಂದರೆ ಏಕೆ ಸೃಷ್ಟಿಸಿದ ಎಂಬ ಪ್ರಶ್ನೆ ಬರುತ್ತದೆ. ಅವನಿಗೆ ಬೇಕಾಗಿತ್ತು, ಸೃಷ್ಟಿಸಿದ ಅಂದರೆ ಬೇಕು ಅನ್ನುವ ಭಾವನೆ ಬಂದ ತಕ್ಷಣ ಪರಮಾತ್ಮನಿಗೆ ಏನೂ ಬೇಕಿಲ್ಲದಾಗ, ಯಾವುದರ ಅಗತ್ಯವೂ ಇಲ್ಲದಿರುವಾಗ, ಇಂತಹ ಸೃಷ್ಟಿಗೆ ಅರ್ಥವೇ ಉಳಿಯುವುದಿಲ್ಲ, ಅಲ್ಲದೆ ಪರಮಾತ್ಮ ಪರಿಪೂರ್ಣ ಎಂಬ ಗುಣವಿಶೇಷತೆಗೆ ಧಕ್ಕೆ ಬರುತ್ತದೆ. ಸೂಕ್ತವಾದ ವಾದವೆಂದರೆ ಎಷ್ಟು ಜೀವಜಂತುಗಳಿವೆಯೋ ಅಷ್ಟು ಜೀವಾತ್ಮಗಳಿವೆ ಅನ್ನುವುದು. ಆ ಜೀವಾತ್ಮಗಳೂ ಪರಮಾತ್ಮನಂತೆ ಹುಟ್ಟು-ಸಾವುಗಳಿಲ್ಲದವು, ಪರಮಾತ್ಮನ ಪ್ರಜೆಗಳು ಅನ್ನುವುದು! ಶರೀರದೊಡನೆ ಇದ್ದಾಗ ಆತ್ಮಗಳು ಮಾಡುವ ಕರ್ಮವನ್ನನುಸರಿಸಿ ಹೊಸ ಜನ್ಮ ಪಡೆಯುವುವು. ಆ ಜನ್ಮ ಮಾನವಜನ್ಮವೇ ಆಗಬೇಕೆಂದಿಲ್ಲ, ಇಂತಹ ಲಿಂಗವೇ ಆಗಬೇಕೆಂದಿಲ್ಲ. 
ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ |
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ || (ಅಥರ್ವ: ೧೦.೮.೨೭)
     ಇದರ ಅರ್ಥ ಜೀವಾತ್ಮನೇ, ನೀನು ಸ್ತ್ರೀ, ನೀನು ಪುರುಷ, ನೀನು ಕುಮಾರ ಮತ್ತು ನೀನು ಕುಮಾರಿ. ವೃದ್ಧನಾಗಿ, ನಂತರ ಮತ್ತೆ ಜನಿಸಿ ಎಲ್ಲೆಡೆಯೂ ಮುಖ ಮಾಡುವೆ. ಭಗವಂತನಂತೆ ಜೀವಾತ್ಮನೂ ಲಿಂಗರಹಿತನಾಗಿದ್ದು ಧರಿಸಿದ ಶರೀರವನ್ನು ಅವಲಂಬಿಸಿ ಹೆಣ್ಣು, ಗಂಡು ಅನ್ನಿಸಿಕೊಳ್ಳುವುದು.
     ಮೃತ ಶರೀರವನ್ನು 'ವ್ಯಕ್ತಿಯ ಹೆಣ', 'ವ್ಯಕ್ತಿಯ ದೇಹ(ಬಾಡಿ)' ಅನ್ನುತ್ತೇವೆಯೇ ಹೊರತು ವ್ಯಕ್ತಿ ಅನ್ನುವುದಿಲ್ಲ. ಅಂದರೆ ಕೇವಲ ಶರೀರ ವ್ಯಕ್ತಿಯೆನಿಸುವುದಿಲ್ಲ. ಶರೀರದೊಳಗೆ ಜೀವಾತ್ಮನಿದ್ದಾಗ ಅದು ನಾಗರಾಜ, ಶ್ರೀಧರ, ಅಬ್ದುಲ್, ಡಿಸೋಜಾ, ಊರ್ಮಿಳಾ, ಇತ್ಯಾದಿಗಳಿಂದ ಗುರುತಿಸಲ್ಪಡುತ್ತದೆ. ಎಂತಹ ಚೋದ್ಯ! ಶರೀರಕ್ಕೆ ಸಾವಿದೆ, ಚೈತನ್ಯಕ್ಕಿಲ್ಲ. ಮಾಯೆಯೆಂದರೆ, ಶರೀರದೊಳಗಿನ ಚೈತನ್ಯವೂ ತನ್ನನ್ನು ಶರೀರದೊಂದಿಗೇ ಗುರುತಿಸಿಕೊಳ್ಳುತ್ತದೆ, ತಾನೇ ವ್ಯಕ್ತಿಯೆಂದು ಭಾವಿಸುತ್ತದೆ, ಚಿಂತನ-ಮಂಥನ ಮಾಡುತ್ತದೆ, ಸಕಲ ಸುಖವೂ ತನಗೇ ಬೇಕೆನ್ನುತ್ತದೆ, ಶರೀರ ಸಾಯುವವರೆಗೂ ಆ ಶರೀರ ನಾಶವಾಗುವುದನ್ನು ಬಯಸುವುದೇ ಇಲ್ಲ! ಆ ಶರೀರ ಮನುಷ್ಯನದಾಗಿರಬಹುದು, ಮನುಷ್ಯ ತಿಂದು ತೇಗುವ ಕೋಳಿ, ಹಂದಿಯದಾಗಿರಬಹುದು, ಯಾವುದೇ ಜೀವಜಂತುವಾಗಿರಬಹುದು! 


ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ |
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟುಸಾವುಗಳೆರಡು ಮಾಯೆ ಮೂಢ ||
**********************
-ಕ.ವೆಂ.ನಾಗರಾಜ್.
[ಆಧಾರ: ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ]

ಬುಧವಾರ, ಡಿಸೆಂಬರ್ 14, 2011

ಸೇವಾಭಾರತಿ - ಸವಿನೆನಪು

'ಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ಉರಿಯುವಾ'
     ಹಾಸನ ನಗರದಲ್ಲಿ ಸೇವಾಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವ ಸಲುವಾಗಿ ಅಕ್ಟೋಬರ್, ೧೯೯೩ರಲ್ಲಿ ಸೇವಾಭಾರತಿ ಸಂಸ್ಥೆ ಉದಯವಾಗಿ ಅದಕ್ಕಾಗಿ ೧೩ ಸದಸ್ಯರ ತಂಡ ಜೋಡಿಸಲಾಯಿತು. ಈ ಸಂಸ್ಥೆಯ ಸಂಯೋಜಕ ನಾನಾಗಿದ್ದರೆ, ಡಾ. ಗುರುರಾಜ ಹೆಬ್ಬಾರರು ಅಧ್ಯಕ್ಷರು, ಡಾ. ವೈ.ಎಸ್. ವೀರಭದ್ರಪ್ಪ ಹಾಗೂ ಡಾ. ಭಾರತಿ ರಾಜಶೇಖರ್ ರವರು ಉಪಾಧ್ಯಕ್ಷರು, ಶ್ರೀ ಹೆಚ್.ಬಿ ಲಕ್ಷ್ಮಣ್‌ರವರು ಕಾರ್ಯದರ್ಶಿ, ಶ್ರೀ ಸುಬ್ರಹ್ಮಣ್ಯ ಭಟ್‌ರವರು ಸಹಕಾರ್ಯದರ್ಶಿ, ಶ್ರೀ ಎಂ.ಎಸ್. ಶ್ರೀಕಂಠಯ್ಯನವರು ಖಜಾಂಚಿಯಾಗಿ, ಸದಸ್ಯರುಗಳಾಗಿ ಶ್ರೀಯುತರಾದ ಹರಿಹರಪುರ ಶ್ರೀಧರ್, ಕೆ. ವೆಂಕಟಯ್ಯ, ನರಹರಿ, ಗಿರಿಜಮ್ಮ, ಸೀತಾಲಕ್ಷ್ಮಮ್ಮ, ಡಾ. ದೇವದಾಸ್ ರವರುಗಳು ಇದ್ದರು. ಯೋಗ ಮತ್ತು ಸಂಸ್ಕೃತ ತರಗತಿಗಳು, ವೈದ್ಯಕೀಯ ಸೇವೆ, ಆಪ್ತ ಸಲಹಾ ಕೇಂದ್ರ ಮತ್ತು ಶಿಕ್ಷಣ ವಿಭಾಗಗಳಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ನಿರ್ಧರಿಸಿದೆವು. ಹೆಸರಿಗೆ ೧೩ ಜನರ ತಂಡವಿದ್ದರೂ ಡಾ. ಗುರುರಾಜ ಹೆಬ್ಬಾರ್ ಮತ್ತು ಡಾ. ವೈ.ಎಸ್. ವೀರಭದ್ರಪ್ಪನವರ  ಅತ್ಯಮೂಲ್ಯ ಸಹಕಾರ ಪಡೆದು ನಿಜವಾಗಿ ಸೇವಾಭಾರತಿಯ ಕೆಲಸದಲ್ಲಿ ತೊಡಗಿಕೊಂಡವರು ನಾನು, ಕೆ.ಇ.ಬಿ. ಇಂಜನಿಯರ್ ಶ್ರೀಧರ್ ಮತ್ತು ವಿಜಯಾ ಬ್ಯಾಂಕ್ ಉದ್ಯೋಗಿ ಲಕ್ಷ್ಮಣ್ ರವರು ಮಾತ್ರ. ಈ ಮಾತನ್ನು ಹೆಗ್ಗಳಿಕೆಗಾಗಿ ಹೇಳುತ್ತಿಲ್ಲ. ಇದು ವಾಸ್ತವ ಸಂಗತಿ. ನಮ್ಮ ಮೂವರ ತಂಡವನ್ನು  ೩ ಚಕ್ರಗಳ ಆಟೋರಿಕ್ಷಾಗೆ ಹೋಲಿಸಲಾಗುತ್ತಿತ್ತು. ೩ ಚಕ್ರಗಳ ಪೈಕಿ ಒಂದಕ್ಕೆ ತೊಂದರೆಯಾದರೂ ಸೇವಾ ಆಟೋ ಚಲಿಸುತ್ತಿರಲಿಲ್ಲ. ಸುಮಾರು ೪ ವರ್ಷಗಳ ಕಾಲ ಈ ಸೇವಾಚಟುವಟಿಕೆಗಳು ನಡೆದು ಜನಮನ್ನಣೆ ಗಳಿಸಿತ್ತು. ನಂತರದಲ್ಲಿ ಲಕ್ಷ್ಮಣ್ ಮೈಸೂರಿಗೆ ಮತ್ತು ನಾನು ಮಂಗಳೂರಿಗೆ ವರ್ಗಾವಣೆಗೊಂಡದ್ದರಿಂದ ಸೇವಾಚಟುವಟಿಕೆಗಳು ನಿಂತವು ಎಂದೇ ಹೇಳಬಹುದು. ಈಗ ಲಕ್ಷ್ಮಣ್ ರವರು ಮೈಸೂರಿನಲ್ಲೇ ಇದ್ದರೆ ನಾನು ಮತ್ತು ಶ್ರೀಧರ್ ಸ್ವಯಂ ನಿವೃತ್ತಿ ಪಡೆದು ಹಾಸನದಲ್ಲಿದ್ದೇವೆ. ಈಗ ಯಾರಾದರೂ ತರುಣರು ಸೇವಾಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಮುಂದೆ ಬಂದಲ್ಲಿ ನಮ್ಮಿಬ್ಬರ ಕ್ರಿಯಾತ್ಮಕ ಸಹಕಾರ ಅವರಿಗೆ ಖಂಡಿತವಾಗಿ ದೊರೆಯಲಿದೆ.  
'ಸೇವಾ ಆಟೋ'ದ ಮೂರು ಚಕ್ರಗಳು: ಶ್ರೀಧರ್, ನಾಗರಾಜ್, ಲಕ್ಷ್ಮಣ್ (1994ರ ಫೋಟೋ)
ಎಂಜಿನ್: ಡಾ. ಗುರುರಾಜ ಹೆಬ್ಬಾರ್
ಸೇವಾಚಟುವಟಿಕೆಗಳ ಸಂಕ್ಷಿಪ್ತ ನೋಟ:
೧. 'ಸೇವಾದಿನ'ದ ಆಚರಣೆ:
     ಸಮಾಜಸೇವೆಗಾಗಿಯೇ ತಮ್ಮ ಇಡೀ ಆಯಷ್ಯವನ್ನು ಧಾರೆಯೆರೆದು ಸಾವಿರಾರು ಯುವಕ-ಯುವತಿಯರಿಗೆ ಸಮಾಜ ಚಟುವಟಿಕೆಗಳನ್ನು ನಡೆಸಲು ಪ್ರೇರೇಪಿಸಿದ ದಿವ್ಯ ಚೇತನ ಸ್ವರ್ಗೀಯ ಅಜಿತಕುಮಾರರ ಪುಣ್ಯತಿಥಿಯ ದಿನದಂದು - ಅಂದರೆ ೩೦-೧೨-೧೯೯೩ರಂದು - ಸೇವಾದಿನವಾಗಿ ಆಚರಿಸಿದೆವು. ಪೂರ್ವಭಾವಿಯಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ (ವಿಷಯ: ಸಮಾಜಸೇವೆಯಲ್ಲಿ ನನ್ನ ಪಾತ್ರ) ಮತ್ತು ದೇಶಭಕ್ತಿ ಗೀತೆಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾಲೇಜು ವಿದ್ಯಾರ್ಥಿಗಳಿಗಾಗಿ 'ತ್ಯಾಗ ಮತ್ತು ಸೇವೆ - ಇವು ಭರತಖಂಡದ ಆದರ್ಶಗಳು' ಎಂಬ ವಿಷಯದ ಮೇಲೆ ಭಾಷಣ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿಜೇತರಿಗೆ ಸೇವಾದಿನದಂದು ಬಹುಮಾನಗಳನ್ನು ವಿತರಿಸಲಾಯಿತು. ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಪ್ರವಚನ ಮಂದಿರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ನಿಸ್ಪೃಹ ಸೇವೆ ಸಲ್ಲಿಸುತ್ತಿದ್ದ ಹಾಸನದ ಔಷಧ ಪರಿವೀಕ್ಷಕರಾದ ಶ್ರೀ ಕರುಣಾಕರ ಮೂಲ್ಯ ಮತ್ತು ಪೌರ ಕಾರ್ಮಿಕ ಶ್ರೀ ಓಬಳಯ್ಯನವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. 


೨. ಉಚಿತ ಆರೋಗ್ಯ ತಪಾಸಣಾ ಶಿಬಿರಗಳು:
     ಹಾಸನದ ಸಿದ್ದಯ್ಯನಗರ ಮತ್ತು ಅಂಬೇಡ್ಕರ್ ನಗರದ ನಿವಾಸಿಗಳ ಸಲುವಾಗಿ ಪ್ರತಿ ತಿಂಗಳಿನ ಮೊದಲ ಭಾನುವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿದ್ದು ಸೇವಾಭಾರತಿಯ ಉತ್ತಮ ಚಟುವಟಿಕೆಗಳಲ್ಲಿ ಹೆಸರಿಸಬಹುದಾದುದು. ವಿಷಾದದ ಸಂಗತಿಯೆಂದರೆ ಅಲ್ಲಿನ ಯುವಕರು ತಪಾಸಣಾ ಶಿಬಿರ ನಡೆಯುತ್ತಿದ್ದ ಸರ್ಕಾರಿ ಶಾಲೆಯ ಕಾಂಪೌಂಡಿನ ಮೇಲೆ ಕುಳಿತು ತಮಾಷೆ ನೋಡುತ್ತಿದ್ದರೇ ಹೊರತು ಕೈಜೋಡಿಸುತ್ತಿರದೇ ಇದ್ದುದು. ಸ್ವಲ್ಪ ದೂರದ ಸ್ಥಳದಿಂದ ಟೇಬಲ್ಲು, ಕುರ್ಚಿಗಳನ್ನೂ ನಾವು ಮೂವರೇ ಹೊತ್ತು ತರುತ್ತಿದ್ದರೂ ಆ ಯುವಕರಿಗೆ ಸಹಾಯ ಮಾಡಬೇಕೆಂದು ಅನ್ನಿಸುತ್ತಿರಲಿಲ್ಲ. ಹಲವಾರು ದಿನಗಳ ಕಾಲ ಸಿದ್ದಯ್ಯನಗರ ಮತ್ತು ಅಂಬೇಡ್ಕರ್ ನಗರದ ಮನೆಮನೆಗಳಿಗೆ ಹೋಗಿ ಅಲ್ಲಿನವರ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರ ಸಂಗ್ರಹ ಸಹ ನಾವು ಮೂವರೇ ಮಾಡಿದ್ದೆವು.ಅದಕ್ಕೆ ತಕ್ಕಂತೆ ಔಷಧಿ, ಮಾತ್ರಗಳನ್ನು ಹೊಂದಿಸಿ ತರಲಾಗುತ್ತಿತ್ತು. ಡಾ. ಗುರುರಾಜ ಹೆಬ್ಬಾರರು ತಮ್ಮೊಡನೆ ಇತರ ವೈದ್ಯರುಗಳು, ನರ್ಸ್‌ಗಳು, ಟೆಕ್ನಿಷಿಯನ್ನರುಗಳನ್ನು ಕರೆತರುತ್ತಿದ್ದರು. ಡಾ. ವೀರಭದ್ರಪ್ಪನವರು ಅಗತ್ಯದ ಔಷಧಿಗಳು, ಮಾತ್ರೆಗಳನ್ನು ಒದಗಿಸುತ್ತಿದ್ದರು. ಇವರಿಬ್ಬರ ಕಾರ್ಯ ನಮಗೆ ಕೆಲಸ ಮಾಡಲು ಉತ್ಸಾಹ ಕೊಡುತ್ತಿತ್ತು. ಹಲವಾರು ತಿಂಗಳುಗಳವರೆಗೆ (೦೨-೦೧-೯೪, ೦೬-೦೨-೯೪, ೦೬-೦೩-೯೪, ೦೩-೦೪-೯೪, ೦೧-೦೫-೯೪, ೦೫-೦೬-೯೪, ೦೩-೦೭-೯೪, ೦೭-೦೮-೯೪) ನಡೆದ ಇಂತಹ ಶಿಬಿರಗಳಿಂದ ಅಲ್ಲಿನ ನಿವಾಸಿಗಳಿಗೆ ಬಹಳ ಉಪಕಾರವಾಯಿತೆಂದೇ ಹೇಳಬಹುದು. ಸರ್ಕಾರದಿಂದ ಹಣದ ಅನುಕೂಲ ಪಡೆದು ಸ್ವಲ್ಪ ಭಾಗವನ್ನು ಮಾತ್ರ ಶಿಬಿರಗಳಿಗೆ ಉಪಯೋಗಿಸುತ್ತಿದ್ದೆವೆಂದು ಅಲ್ಲಿನ ಕೆಲವರ ತಪ್ಪು ಭಾವನೆಯಾಗಿತ್ತು. ಈ ಕುಹಕವನ್ನು ಸಹಿಸಿಕೊಂಡು ನಾವು ಕೆಲಸ ಮಾಡುತ್ತಿದ್ದೆವು. ಡಾ. ಗುರುರಾಜ ಹೆಬ್ಬಾರರು ತಮ್ಮ ಚಿಕಿತ್ಸಾಲಯದಲ್ಲಿ ಸೇವಾಭಾರತಿಯ ಹೆಸರಿನಲ್ಲಿ ಒಂದು ಗೋಲಕ ಇರಿಸಿದ್ದರು. ಆ ಗೋಲಕದಲ್ಲಿ ಸಂಗ್ರಹವಾಗುವ ಮೊಬಲಗನ್ನು ಸೇವಾಭಾರತಿಯ ಚಟುವಟಿಕೆಗಳಿಗೆ ವಿನಿಯೋಗಿಸಲಾಗುತ್ತಿತ್ತು.


೩.ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ:
     ಸಂಜೀವಿನಿ ಸಹಕಾರಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ೧೦-೦೯-೯೪ರಿಂದ ೧೨-೦೯-೯೪ರವರೆಗೆ ಉಚಿತ ನೇತ್ರ ಶಸ್ತ್ರಚಿಕಿತ್ಸಾಶಿಬಿರ ನಡೆಸಿದ್ದು ಹಲವರು ಇದರ ಉಪಯೋಗ ಪಡೆದದ್ದು ಉಲ್ಲೇಖನೀಯ ಸಂಗತಿ. ರೋಗಿಗಳಿಗೆ ಮತ್ತು ಅವರ ಸಹಾಯಕರುಗಳಿಗೆ ಉಚಿತ ಊಟೋಪಚಾರದ ವ್ಯವಸ್ಥೆ ಸಹ ಮಾಡಲಾಗಿತ್ತು.


೪. ಸಂಸ್ಕೃತ ಸಂಭಾಷಣಾ ಶಿಬಿರಗಳು:
     ೨೧-೦೨-೯೪ ರಿಂದ ೦೨-೦೩-೯೪ರವರೆಗೆ ಮತ್ತು ೧೦-೦೩-೯೪ರಿಂದ ೧೯-೦೩-೯೪ರವರೆಗೆ ಎರಡು ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಆಯೋಜಿಸಲಾಗಿತ್ತು.


೫. ರಕ್ತದಾನ ಯೋಜನೆ:
     ಗಾಂಧಿಜಯಂತಿ ದಿನವಾದ ೦೨-೧೦-೯೪ರಂದು ರಕ್ತದಾನ ಯೋಜನೆಯ ಉದ್ಘಾಟನೆಯಾಯಿತು. ಸೇವಾಭಾರತಿಯ ಪ್ರಕಟಣೆ ನೋಡಿ ನೂರಾರು ಜನರು ಆಗಮಿಸಿ ರಕ್ತದಾನಿಗಳಾಗಿ ತಮ್ಮ ಹೆಸರು ನೋಂದಾಯಿಸಿಕೊಂಡದ್ದು ವಿಶೇಷ. ಅವರೆಲ್ಲರ ರಕ್ತದ ವರ್ಗದ ಉಚಿತ ತಪಾಸಣೆ ಮಾಡಿ ಎಲ್ಲರಿಗೂ ಗುರುತಿನ ಕಾರ್ಡುಗಳನ್ನು ಕೊಡಲಾಯಿತು. ಅಪಘಾತ, ಶಸ್ತ್ರಚಿಕಿತ್ಸೆ, ಇತ್ಯಾದಿ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅವರ ಬಂಧುಗಳು, ಸ್ನೇಹಿತರಿಂದ ರಕ್ತ ಸಿಕ್ಕದ ಅನಿವಾರ್ಯ ಪ್ರಸಂಗಗಳಲ್ಲಿ ರಕ್ತದಾನಿಗಳಿಗೆ ಹೇಳಿಕಳುಹಿಸಿ ರಕ್ತ ಒದಗಿಸುವ ಹೊಣೆಯನ್ನು ನಾವು ಹೊತ್ತೆವು. ಈ ಯೋಜನೆ ಪ್ರಾರಂಭದ ನಂತರ ರಕ್ತ ಕೋರಿ ದೂರವಾಣಿ ಕರೆಗಳು ನಿರಂತರವಾಗಿ ಬರಲಾರಂಭಿಸಿದ್ದವು. ನೂರಾರು ರೋಗಿಗಳಿಗೆ ರಕ್ತದಾನ ಮಾಡಿ ಜೀವ ಉಳಿಸಿದ ಹೆಗ್ಗಳಿಕೆ ನಮ್ಮ ಸಂಸ್ಥೆಯದು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಸ್ವತಃ ನಾನೂ ೧೬ ಬಾರಿ ರಕ್ತದಾನ ಮಾಡಿದ್ದೇನೆ. ನನಗೆ ಮಧುಮೇಹ ಹಾಗೂ ಥೈರಾಯಿಡ್ ಸಮಸ್ಯೆ ಬಂದ ನಂತರದಲ್ಲಿ ರಕ್ತದಾನ ಮಾಡುವುದನ್ನು ನಿಲ್ಲಿಸಿದೆ. 


೬. ಸ್ವದೇಶಿ ಜಾಗರಣ ಆಂದೋಲನ:
      ಸ್ವದೇಶಿ ಜಾಗರಣ ಆಂದೋಲನದ ಅಂಗವಾಗಿ ಭಿತ್ತಿಚಿತ್ರಗಳು, ವ್ಯಂಗ್ಯಚಿತ್ರಗಳ ರಚನಾಸ್ಪರ್ಧೆ ಹಾಗೂ ಪ್ರದರ್ಶನವನ್ನು ೨೪-೧೨-೯೪ರಂದು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರದರ್ಶಿಸಲಾದ ಭಿತ್ತಿಚಿತ್ರಗಳು ಮತ್ತು ವ್ಯಂಗ್ಯಚಿತ್ರಗಳು ಆಕರ್ಷಣೀಯವಾಗಿದ್ದು ಜನಮನ ಸೆಳೆಯುವಲ್ಲಿ ಯಶಸ್ವಿಯಾದವು. 
     ಕಾಲೇಜು ವಿದ್ಯಾರ್ಥಿಗಳಿಗಾಗಿ 'ಸ್ವದೇಶೀ ಆಂದೋಲನದಿಂದಲೇ ದೇಶದ ಪ್ರಗತಿ ಸಾಧ್ಯ' ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸಿದ್ದು ಅನೇಕರು ಉತ್ಸಾಹದಿಂದ ಪಾಲುಗೊಂಡಿದ್ದು ವಿಶೇಷ.


೭. ಸೇವಾ-ಸ್ವದೇಶೀ-ಸುರಕ್ಷಾ ದಿನ:
     ಸ್ವದೇಶಿ ಜಾಗರಣ ವೇದಿಕೆಯೊಂದಿಗೆ ಕೂಡಿಕೊಂಡು ಸೇವಾಭಾರತಿಯ ಪ್ರಥಮ ವಾರ್ಷಿಕೋತ್ಸವವನ್ನು ೨೪-೧೨-೯೪ರಂದು ಹಾಸನದ ಗಣಪತಿ ಪೆಂಡಾಲಿನಲ್ಲಿ ಸೇವಾ-ಸ್ವದೇಶಿ-ಸುರಕ್ಷಾ ದಿನವಾಗಿ ಆಚರಿಸಲಾಯಿತು. ಸ್ವದೇಶಿ ಜಾಗರಣ ವೇದಿಕೆಯ ರಾಜ್ಯ ಸಂಚಾಲನಾ ಸಮಿತಿಯ ಸದಸ್ಯ ಶ್ರೀ ದಿನೇಶ ಕಾಮತರಿಂದ ಪ್ರಧಾನ ಭಾಷಣ ನೆರೆದಿದ್ದವರ ಮನದಲ್ಲಿ ವಿಚಾರಮಂಥನ ಎಬ್ಬಿಸಿತು. ನಿಸ್ಪೃಹ ಸೇವೆಯನ್ನು ಗುರುತಿಸಿ ಹಾಸನ ಜಿಲ್ಲಾಧಿಕಾರಿ ಕಛೇರಿಯ ಸಹಾಯಕ ಶ್ರೀ ಕೆ. ರಾಮಸ್ವಾಮಿ ಮತ್ತು ಸಂಜೀವಿನಿ ಸಹಕಾರಿ ಆಸ್ಪತ್ರೆಯ ದಾದಿ ಶ್ರೀಮತಿ ಎನ್.ಎಂ.ಕಮಲಮ್ಮರವರನ್ನು ಸನ್ಮಾನಿಸಲಾಯಿತು.


೮. ವಿನೂತನ ರಕ್ಷಾಬಂಧನ ಕಾರ್ಯಕ್ರಮ:
     ೨೫-೦೮-೯೬ರಂದು ಹಾಸನದ ಶಾಂತಿನಗರ ಬಡಾವಣೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ, ಮಾನವತಾ ಮತ್ತು ಪರಿಸರವಾದಿ ಸಂಘ, ಶಾಂತಿನಗರ ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗದೊಂದಿಗೆ ಪಾರ್ಥೇನಿಯಂ ನಿರ್ಮೂಲನಾ ಕಾರ್ಯಕ್ರಮ ಜೋಡಿಸಿಕೊಂಡು ರಕ್ಷಾಬಂಧನ ಕಾರ್ಯಕ್ರಮ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 


೯. ಸಾಂಸ್ಕೃತಿಕ ಚಟುವಟಿಕೆ:
     ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ೦೧-೦೯-೯೬ರಂದು ಕೆಳಕಂಡ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸುಂದರ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಮುದ್ದುಕೃಷ್ಣ ವೇಷ ಸ್ಪರ್ಧೆ: ೧-೩ ವರ್ಷದ ಮಕ್ಕಳಿಗೆ,
ಬಾಲಕೃಷ್ಣ ವೇಷ ಸ್ಪರ್ಧೆ:   ೪-೬ ವರ್ಷದ ಮಕ್ಕಳಿಗೆ
ಭಗವದ್ಗೀತಾ ಕಂಠಪಾಠ ಸ್ಪರ್ಧೆ: ಮಾಧ್ಯಮಿಕ ಶಾಲಾ ಮಕ್ಕಳಿಗೆ.
ಮಹಿಳೆಯರಿಗಾಗಿ: ದೇಶಭಕ್ತಿ ಗೀತೆ ಸ್ಪರ್ಧೆ, ದೇವರನಾಮ ಸ್ಪರ್ಧೆ, ರಂಗೋಲಿ ಸ್ಪರ್ಧೆ.
     ಮನಸ್ಸಿದ್ದಲ್ಲಿ ಮಾರ್ಗವಿದೆ. ಯುವಕ-ಯುವತಿಯರೇ, ಸೇವಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿರಿ. ನಿಮಗೆ ಪ್ರೇರಿಸುವ ಸಲುವಾಗಿಯೇ ಸೇವಾಭಾರತಿಯ ಚಟುವಟಿಕೆಗಳ ಮಾಹಿತಿ ಇಲ್ಲಿ ನೀಡಿದೆ. ಹಾಸನದಲ್ಲಿ ನಡೆಯುವ ಎಲ್ಲಾ ಸೇವಾ ಚಟುವಟಿಕೆಗಳಿಗೆ ನಮ್ಮ ಹೃತ್ಪೂರ್ವಕ ಸಹಕಾರವಿದೆ. 
     [ಸೇವಾಭಾರತಿಯ ಚಟುವಟಿಕೆಗಳ ಕೆಲವು ಫೋಟೋಗಳನ್ನು ಇಲ್ಲಿ ಕ್ಲಿಕ್ಕಿಸಿ ನೋಡಬಹುದು:  http://kavimana.blogspot.com/2011/12/blog-post_14.html]

ಲೋಕ ಹಿತದ ಕಾಯಕ ನಾಡಿಗಭಯದಾಯಕ
ವ್ಯಕ್ತಿ ವ್ಯಕ್ತಿಯಾಗಲಿಂದು ನೈಜ ರಾಷ್ಟ್ರ ಸೇವಕ
***************
-ಕ.ವೆಂ.ನಾಗರಾಜ್.



ನಮ್ಮ 'ಸೇವಾಭಾರತಿ'ಯ ಕೆಲವು ಚಟುವಟಿಕೆಗಳು - ಕ್ಯಾಮರಾ ಕಣ್ಣಿನಲ್ಲಿ

 ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದ ಒಂದು ನೋಟ


 'ರಕ್ತದಾನ ಯೋಜನೆ'ಯ ಪ್ರಾರಂಭ



 ಉಚಿತ ರಕ್ತವರ್ಗದ ಪರೀಕ್ಷೆ


ಇವರೂ ರಕ್ತದಾನಿಗಳಾಗಿ ನೋಂದಾಯಿಸಿಕೊಂಡವರು


'ಸೇವಾದಿನ'ದ ಆಚರಣೆ


 ನಿಸ್ಪೃಹ ಸೇವೆಗಾಗಿ ಶ್ರೀಮತಿ ಕಮಲಮ್ಮ ಮತ್ತು ಶ್ರೀ ರಾಮಸ್ವಾಮಿಯವರಿಗೆ ಸನ್ಮಾನ


 ಸ್ವದೇಶಿ-ಸುರಕ್ಷಾ-ಸೇವಾ ದಿನದ ಆಚರಣೆ





 ನಿಸ್ಪೃಹ ಸೇವೆಗಾಗಿ ಶ್ರೀ ಕರುಣಾಕರ ಮೂಲ್ಯ ಮತ್ತು ಶ್ರೀ ಓಬಳಯ್ಯನವರಿಗೆ ಸನ್ಮಾನ


 ಭಿತ್ತಿಚಿತ್ರ ಮತ್ತು ಕಾರ್ಟೂನ್ ಚಿತ್ರಗಳ ಸ್ಪರ್ಧೆಗೆ ಬಂದ ಚಿತ್ರಗಳ ಪ್ರದರ್ಶನ


 ಶ್ರೀ ಕೃಷ್ಣಜನ್ಮಾಷ್ಟಮಿಯ ವಿಶಿಷ್ಟ ಆಚರಣೆ



 ರಂಗವಲ್ಲಿ ಸ್ಪರ್ಧೆ




ಭಾನುವಾರ, ಡಿಸೆಂಬರ್ 11, 2011

ನನ್ನ ಆಕಾಶಯಾನ



                                      (ಚಿತ್ರ ಕೃಪೆ: ಅಂತರ್ಜಾಲ)
     ನನ್ನ ಮನೆಯ ಮೇಲ್ಭಾಗದ ತಾರಸಿಯಲ್ಲಿ ಕುರ್ಚಿ ಹಾಕಿಕೊಂಡು ಕುಳಿತು ಶುಭ್ರ ಆಗಸವನ್ನು ನೋಡುತ್ತಾ ಕುಳಿತಿದ್ದೆ. ನೋಡುತ್ತಾ ನೋಡುತ್ತಾ ಹೋದಂತೆ ಆಕಾಶ ಮಂದಹಾಸ ಬೀರುತ್ತಾ ತೆರೆದುಕೊಳ್ಳುತ್ತಾ ಹೋಯಿತು. ಹೊರಗಣ್ಣು, ಒಳಗಣ್ಣುಗಳನ್ನು ಅಗಲಿಸಿ ವಿಸ್ಮಯದಿಂದ ನೋಡುತ್ತಿದ್ದ ನಾನು ಒಂದು ರೀತಿಯ ಅನಿರ್ವಚನೀಯ ಭಾವಪರವಶತೆಗೆ ಒಳಗಾಗಿದ್ದೆ. ಮನದೊಳಗೆ ಅರಿವಿಲ್ಲದಂತೆ ಮಂಥನ ಆರಂಭಗೊಂಡಿತ್ತು. ಆಕಾಶ ಎಂದಾಕ್ಷಣ ಅಚಾನಕವಾಗಿ ಮೇಲೆ ನೋಡುತ್ತೇವೆ. ಹಾಗಾದರೆ ಆಕಾಶ ಮೇಲೆ ಇದೆಯೇ? ಮೇಲೆ ಇದ್ದರೆ ಎಷ್ಟು ಮೇಲೆ ಇದೆ? ನಾವು ಅದನ್ನು ಕಾಣಲು ಎಷ್ಟು ಮೇಲೆ ಹೋದರೂ ಅದು ಅಷ್ಟೂ ಅಷ್ಟೂ ಮೇಲೆಯೇ ಹೋಗುತ್ತದಲ್ಲಾ! ಹಾಗಾದರೆ ಅದು ಮರೀಚಿಕೆಯೇ? ಹಾಗಾದರೆ ನಾವು ಕಾಣುವ ಆಕಾಶ ಅನ್ನುವುದಾದರೂ ಏನು? ಅದು ನಿಜಕ್ಕೂ ಇದೆಯೇ? ಇಲ್ಲ ಎನ್ನಲಾಗುವುದಿಲ್ಲ, ಆಕಾಶ ಇದೆ. ಆದರೆ ಅದು ಹೇಗಿದೆ? ಕಂಡೂ ಕಾಣದ ಆಕಾಶ ನಿಜಕ್ಕೂ ಒಂದು ಅದ್ಭುತ. ಆಕಾಶವನ್ನು ವೈಜ್ಞಾನಿಕವಾಗಿ ವಿವರಿಸಲು ಮಾನವನಿಗೆ ಶಕ್ಯವೆಂದು ನನಗೆ ಅನ್ನಿಸುತ್ತಿಲ್ಲ. ವೈಜ್ಞಾನಿಕವಾಗಿ ವಿವರಿಸಲು ಬರುವುದಿಲ್ಲವೆಂದು ಆಕಾಶವನ್ನು ಇಲ್ಲವೆಂದು ಹೇಳಲಾಗುವುದೆ? ಕಣ್ಣಿಗೆ ಕಾಣುವುವದನ್ನು ವಿಸ್ತರಿಸಿ ಏನು ಹೇಳಬಹುದೆಂದರೆ ಇಡೀ ಬ್ರಹ್ಮಾಂಡದ ವ್ಯಾಪ್ತಿ ಎಷ್ಟು ವಿಶಾಲವೋ, ವಿಸ್ತಾರವೋ ಅಷ್ಟೂ ವಿಸ್ತಾರದಲ್ಲಿ ಆಕಾಶ ಆವರಿಸಿದೆಯೆಂದು ಮಾತ್ರ ಹೇಳಬಹುದು. 
     ಆಕಾಶ ಅಂದರೇನು? ಗೊತ್ತಿಲ್ಲ. ಆಕಾಶ ಎಷ್ಟು ದೊಡ್ಡದು? ಗೊತ್ತಿಲ್ಲ. ಆಕಾಶ ಹೇಗಿದೆ? ಗೊತ್ತಿಲ್ಲ. ಚಂದ್ರ ಎಲ್ಲಿದ್ದಾನೆ? ಆಕಾಶದಲ್ಲಿದ್ದಾನೆ. ಭೂಮಿ ಎಲ್ಲಿದೆ? ಅದೂ ಆಕಾಶದಲ್ಲಿದೆ. ಚಂದ್ರನ ಮೇಲೆ ನಿಂತವರಿಗೆ ಭೂಮಿ ಆಕಾಶದಲ್ಲಿರುವಂತೆ ಕಾಣುತ್ತದೆ. ಈರೀತಿ ಯೋಚಿಸಿದಾಗ ಗೊತ್ತಾಗುತ್ತದೆ, ಆಕಾಶ ಮೇಲೆ ಮಾತ್ರ ಇಲ್ಲ, ಎಲ್ಲೆಲ್ಲೂಇದೆ. ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ! ಈ ಜಗತ್ತು/ವಿಶ್ವ/ಬ್ರಹ್ಮಾಂಡ ಎಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನಲ್ಲ. ಇಂತಹ ಅಸಂಖ್ಯ ಭೂಮಿ, ಸೂರ್ಯ, ಚಂದ್ರ, ಎಣಿಕೆಗೆ ಸಿಕ್ಕದ ಬೃಹತ್ ನಕ್ಷತ್ರಗಳ ಬೃಹತ್ ಸಮೂಹ ಇದರಲ್ಲಿದೆ. ಅಲ್ಲೆಲ್ಲಾ ಆವರಿಸಿರುವುದು ಈ ಆಕಾಶವೇ! ಅಂದರೆ ನಾವೂ ಆಕಾಶದಲ್ಲೇ ಇದ್ದೇವೆ. ಆಕಾಶ ನಮ್ಮನ್ನು ಹೊಂದಿಕೊಂಡೇ ಇದೆ! ನಾವಷ್ಟೇ ಏಕೆ, ಎಲ್ಲಾ ಚರಾಚರ, ಜೀವ, ನಿರ್ಜೀವ ವಸ್ತುಗಳನ್ನೂ ಆಕಾಶ ಆವರಿಸಿದೆ. ಅಂದರೆ ಆಕಾಶ ಸರ್ವವ್ಯಾಪಿ. ಅದು ಇಲ್ಲದ ಸ್ಥಳವೇ ಇಲ್ಲ. ಜೀವಿಗಳ ದೇಹ ಪಂಚಭೂತಗಳಿಂದ - ಜಲ, ವಾಯು, ಅಗ್ನಿ, ಭೂಮಿ ಮತ್ತು ಆಕಾಶ -ಗಳಿಂದ ಆಗಿರುವುದೆಂಬುದು ಅಂಗೀಕೃತವಾದ ವಿಚಾರ. ಅಂದರೆ ಆಕಾಶ ನಮ್ಮೊಳಗೂ ಇದೆ, ಹೊರಗೂ ಇದೆ. ಒಳಗೂ ಇರುವ, ಹೊರಗೂ ಇರುವ, ಎಲ್ಲೆಲ್ಲೂ ಇರುವ, ಅದು ಇಲ್ಲದ ಸ್ಥಳವೇ ಇರದಿರುವುದು ಆಕಾಶ ಎಂದು ಅನ್ನಿಸಿದಾಗ ನಾನು ಒಂದು ರೀತಿಯ ಆನಂದಾನುಭೂತಿ ಅನುಭವಿಸಿದೆ. ನಾವು ಆಕಾಶವನ್ನು ಕಾಣದಿರಬಹುದು. ಆದರೆ ಆಕಾಶ ಸದಾ ನಮ್ಮನ್ನು ನೋಡುತ್ತಿರುತ್ತದೆ. ಆಕಾಶದ ಕಣ್ಣು ತಪ್ಪಿಸಿ ಯಾರಾದರೂ ಏನಾದರೂ ಮಾಡಲು ಸಾಧ್ಯವೇ? ಏನಾದರೂ ನಡೆಯಲು ಸಾಧ್ಯವೇ?  ಪರಮಾತ್ಮನನ್ನು ವರ್ಣಿಸುವಾಗ ಅವನು ಸರ್ವವ್ಯಾಪಿ, ಅವನಿಲ್ಲದ ಸ್ಥಳವೇ ಇಲ್ಲ, ಅವನು ಒಳಗೂ ಇದ್ದಾನೆ, ಹೊರಗೂ ಇದ್ದಾನೆ, ಎಲ್ಲೆಲ್ಲೂ ಇದ್ದಾನೆ, ಇತ್ಯಾದಿ ಹೇಳುವುದನ್ನು ಕೇಳಿದ್ದೇವೆ. ಅವನ ಗಮನಕ್ಕೆ ಬಾರದಂತೆ ಏನೂ ಜರುಗಲು ಸಾಧ್ಯವಿಲ್ಲವೆಂದು ಹೇಳುವುದನ್ನು ಕೇಳಿದ್ದೇವೆ. ಈ ವಿಶ್ವ ಬ್ರಹ್ಮಾಂಡವನ್ನು ನಿಯಂತ್ರಿಸುವ ವಿರಾಟ್ ಶಕ್ತಿಯ ಕುರಿತು ವೇದದಲ್ಲಿ ಹೀಗೆ ಹೇಳಿದೆ;
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ |
ತದಂತರಸ್ಯ ಸರ್ವಸ್ಯ ಅದು ಸರ್ವಸ್ಯಾಸ್ಯ ಬಾಹುತಃ || (ಯಜು. ೪೦.೫.)
     ಇದರ ಅರ್ಥ, ಅದು ವಿಶ್ವಕ್ಕೆ ಗತಿ ನೀಡುತ್ತದೆ, ಅದು ಸ್ವತಃ ಚಲಿಸುವುದಿಲ್ಲ, ಅದು ದೂರದಲ್ಲಿದೆ, ಅದೇ ಹತ್ತಿರದಲ್ಲಿಯೂ ಇದೆ. ಅದು ಇದೆಲ್ಲದರ ಒಳಗೂ ಇದೆ, ಇದೆಲ್ಲದರ ಹೊರಗೂ ಇದೆ. 
     ಈ ಎಲ್ಲಾ ಗುಣಗಳು ಆಕಾಶಕ್ಕೆ ಇರುವುದರಿಂದ ಆಕಾಶವನ್ನು 'ಕಣ್ಣಿಲ್ಲದೇ ಕಾಣಬಲ್ಲ ದೇವರ ಕಣ್ಣು' ಎಂದು ಭಾವಿಸಬಹುದೆಂದು ಅನ್ನಿಸಿದಾಗ ನನಗೆ ಏನೋ ಬೆಳಕು ಹೊಳೆದಂತಾಯಿತು. ಸ್ವಾಮಿ ವಿವೇಕಾನಂದರು ತಾವು ಭೇಟಿಯಾದ ಎಲ್ಲಾ ಸಾಧು-ಸಂತ-ಸನ್ಯಾಸಿಗಳನ್ನು ಒಂದು ಪ್ರಶ್ನೆ ಕೇಳುತ್ತಿದ್ದರು - "ಸ್ವಾಮಿ, ತಾವು ದೇವರನ್ನು ಕಂಡಿದ್ದೀರಾ?" ಇದೇ ಪ್ರಶ್ನೆಗೆ ಶ್ರೀ ರಾಮಕೃಷ್ಣ ಪರಮಹಂಸರು ನೀಡಿದ್ದ ಉತ್ತರವೆಂದರೆ -"ಹೌದು, ನಾನು ಕಂಡಿದ್ದೇನೆ. ದೇವರೊಂದಿಗೆ ಮಾತನ್ನೂ ಆಡಿದ್ದೇನೆ". ಈ ಪ್ರಸಂಗದ ಕುರಿತು ಚರ್ಚೆ ಇಲ್ಲಿ ಅಪ್ರಸ್ತುತವೆನಿಸೀತು. ನಾನಂತೂ ಪರಮಾತ್ಮನನ್ನು ಕಂಡಿಲ್ಲ, ಆದರೆ ಪರಮಾತ್ಮ ನನ್ನನ್ನು ಕಂಡಿದ್ದಾನೆ, ಕಾಣುತ್ತಿದ್ದಾನೆಂದು ನನಗೆ ಖಾತ್ರಿಯಾಗಿದೆ. ನನ್ನ ಅರಿವಿನ ಪರಿಮಿತಿಯಲ್ಲಿ ಪರಮಾತ್ಮನ ಇರುವಿಕೆಯ ರೀತಿಯನ್ನು ಅರ್ಥೈಸಿಕೊಂಡಿದ್ದೇನೆಂದು ಭಾವಿಸಿದ್ದೇನೆ. (ಬುದ್ಧನಿಗೆ ಭೋದಿವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಇವನಿಗೂ ಮನೆಯ ತಾರಸಿ ಮೇಲೆ ಕುಳಿತು ಆಕಾಶ ನೋಡುತ್ತಾ ಜ್ಞಾನೋದಯವಾಗಿರಬೇಕು ಎಂದು ತಮಾಷೆ ಮಾಡುವುದಾದರೆ ಅಥವ ಇವನಿಗೆ ಬುದ್ಧಿಭ್ರಮಣೆಯಾಗಿರಬಹುದೆಂದು ಯಾರಾದರೂ ಅಂದುಕೊಂಡರೆ ನನ್ನ ಅಭ್ಯಂತರವಿಲ್ಲ). 
     ಆಕಾಶ ಇಂತಹ ಸ್ಥಳದಲ್ಲಿ ಇದೆ, ಇಂತಹ ಸ್ಥಳದಲ್ಲಿ ಇರುವುದಿಲ್ಲವೆಂದು ಹೇಳಲಾಗುವುದಿಲ್ಲ. ಜೀವಿಗಳು ವಾಸವಿರಲು ಸಾಧ್ಯವೇ ಇರದ ಸ್ಥಳದಲ್ಲೂ ಅದಿದೆ, ಧಗಧಗಿಸುವ ಅಗ್ನಿಯ ಜೊತೆಗೂ ಇದೆ, ಭೋರ್ಗರೆಯುವ ಸಮುದ್ರ, ಸಾಗರಗಳಿರುವಲ್ಲೂ ಇದೆ. ಆಕಾಶವನ್ನು ಬೆಂಕಿ ಸುಡಲಾರದು, ನೀರು ತೋಯಿಸಲಾರದು, ಅದನ್ನು ಯಾವುದೇ ಆಯುಧದಿಂದ ಕತ್ತರಿಸಲಾಗದು, ಅದನ್ನು ಯಾರೂ ಏನೂ ಮಾಡಲಾರರು. ಬ್ರಹ್ಮಾಂಡದ ಸೃಷ್ಟಿಯ ಜೊತೆಗೂ ಅದು ಇರುತ್ತದೆ, ಪ್ರಳಯ, ವಿನಾಶ ಕಾಲದಲ್ಲೂ ಅದು ಇರುತ್ತದೆ. ಅದಕ್ಕೆ ಪ್ರಾರಂಭವಿಲ್ಲ, ಕೊನೆಯಿಲ್ಲ, ಅರ್ಥಾತ್ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಪರಮಾತ್ಮನನ್ನೂ ಹೀಗೆಯೇ ಇದ್ದಾನೆ ಅನ್ನುತ್ತೇವಲ್ಲವೇ? ಹಾಗಾದರೆ ದೇವರು ಆಕಾಶರೂಪದಲ್ಲಿ ಪ್ರಕಟನಾಗಿದ್ದಾನೆ ಅನ್ನಬಹುದಲ್ಲವೇ? ದೇವರ ವಿಶ್ವರೂಪ ದರ್ಶನವೆಂದರೆ ಇದೇ ಅಲ್ಲವೇ? ಒಳಗಣ್ಣಿದ್ದು ತೆರೆದು ನೋಡಬಲ್ಲವರು ಈ ವಿಶ್ವರೂಪವನ್ನು ಅವರ ಶಕ್ತ್ಯಾನುಸಾರ ಕಂಡಾರು. ನಿಜವಾಗಿ ದೇವರ ಪ್ರತಿನಿಧಿ ಎಂದು ಆಕಾಶವನ್ನು ಹೆಸರಿಸಬಹುದೇ ಹೊರತು, ಯಾವುದೇ ವ್ಯಕ್ತಿ ಅಥವ ಜೀವಿಯನ್ನು, ವಸ್ತುವನ್ನು ಇಂತಹ ಅಗಾಧ ಶಕ್ತಿಯ ಪ್ರತಿನಿಧಿ ಎಂದು ಹೇಳುವುದು, ದೇವರ ಮಗ ಅನ್ನುವುದು, ದೇವರ ರೂಪದಲ್ಲಿ ಕಾಣುವುದು ಸಮಂಜಸವೆನಿಸುವುದಿಲ್ಲ. ಎಲ್ಲರಲ್ಲೂ ಅವನ ಅಂಶವಿರುವುದರಿಂದ ಆ ವಿಶಾಲಾರ್ಥದಲ್ಲಿ ತೆಗೆದುಕೊಳ್ಳಬಹುದೇ ಹೊರತು, ಯಾರನ್ನೇ ಆಗಲಿ ದೇವರಂತೆ ಭಾವಿಸುವುದು ಸೂಕ್ತವಲ್ಲ. ನಾಶವಿರದ ಭಗವಂತನನ್ನು ನಾಶವಾಗಬಹುದಾದ ಸಂಗತಿಗಳಲ್ಲಿ ಗುರುತಿಸುವುದು ಎಷ್ಟರ ಮಟ್ಟಿಗೆ ಸರಿಯಾದೀತು? ಬೇಕಾದರೆ ದೇವಮಾನವರು, ಮಹಿಮಾವಂತರು, ವಿಶೇಷ ಶಕ್ತಿಯುಳ್ಳವರು, ಹೀಗೆ ಭಾವಿಸಬಹುದು. 
     ಆಕಾಶದ ಗುಣ ಹೇಗಿದೆ? ಅದಕ್ಕೆ ಗುಣವೇ ಇಲ್ಲ, ನಿರ್ಗುಣ. ಅದಕ್ಕೆ ಮಮಕಾರವೂ ಇಲ್ಲ, ಅಹಂಕಾರವೂ ಇಲ್ಲ. ಭೇದ-ಭಾವ ಮಾಡುವುದೇ ಇಲ್ಲ. ಜಾತಿ, ಮತ, ಪಂಥಗಳ ಕಟ್ಟಿಲ್ಲ. ಆ ದೇಶ, ಈ ದೇಶ ಅನ್ನುವುದು ಇಲ್ಲ. ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ, ಮುಂದೆಯೂ ಹೀಗೆಯೇ ಇರುತ್ತದೆ. ಇದು ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಭೌಮಿಕ ಸತ್ಯ. ಕೆಟ್ಟವರು, ಒಳ್ಳೆಯವರು, ಜೀವಿ, ನಿರ್ಜೀವಿ ಎಂದು ಎಣಿಸುವುದೇ ಇಲ್ಲ. ಯಾರು ಏನೇ ಮಾಡಿದರೂ ಅಡ್ಡಿಪಡಿಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಎಲ್ಲಾ ಆಗು-ಹೋಗುಗಳಿಗೆ, ಕ್ರಿಯೆಗಳಿಗೆ ಅದು ಕೇವಲ ಸಾಕ್ಷಿಯಾಗಿರುತ್ತದೆ. ಖಾಲಿ ಆಕಾಶವನ್ನು ಯಾವುದರಿಂದಲಾದರೂ ತುಂಬಿ ಭರ್ತಿ ಮಾಡಲು ಸಾಧ್ಯವಿದೆಯೇ? ಇಲ್ಲ, ಎಷ್ಟು ತುಂಬಿದರೂ, ಏನನ್ನು ತುಂಬಿದರೂ ಅದು ಭರ್ತಿಯಾಗುವುದೇ ಇಲ್ಲ. ಹಾಗೆಯೇ ನಾವು ಆಕಾಶವನ್ನು ಹೇಗೆ ಅರ್ಥ ಮಾಡಿಕೊಳ್ಳಲು ಹೊರಟರೂ ಅದು ಆಕಾಶವಾಗಿಯೇ, ಗೂಢವಾಗಿಯೇ ಉಳಿಯುತ್ತದೆ. ಆಕಾಶ ನಮ್ಮನ್ನು ಅರಗಿಸಿಕೊಳ್ಳುತ್ತದೆ. ನಾವು ಆಕಾಶವನ್ನಲ್ಲ. ಆಕಾಶ ನಮ್ಮ ಅಹಂ, ಮನಸ್ಸು, ಯೋಚನೆಗಳು, ಚಿಂತನೆಗಳು, ಜ್ಞಾನ, ಅಜ್ಞಾನ, ಎಲ್ಲವನ್ನೂ, ಎಲ್ಲಾ ಅಂದರೆ ಎಲ್ಲವನ್ನೂ, ನುಂಗಿ ನೀರು ಕುಡಿಯಬಲ್ಲುದು, ಅರ್ಥಾತ್ ಅರಗಿಸಿಕೊಳ್ಳಬಲ್ಲದು. ಪರಮಾತ್ಮ 'ನಿರ್ಮಮೋ ನಿರಹಂಕಾರಃ' ಎಂಬುದನ್ನು ತೋರ್ಪಡಿಸಿಕೊಂಡಿರುವುದು ಆಕಾಶದಿಂದಲೇ. ಆಕಾಶವನ್ನು ತೃಪ್ತಿ ಪಡಿಸಲು ಯಾವ ಪೂಜೆ ಮಾಡಬೇಕು? ಯಾವ ಪ್ರಾಣಿಯ ಬಲಿ ಕೊಡಬೇಕು? ಯಾವ ನೈವೇದ್ಯ ಇಡಬೇಕು? ಏನೂ ಮಾಡಬೇಕಿಲ್ಲ. 'ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ಕೆಟ್ಟದ್ದಕ್ಕೆ ಕೆಟ್ಟದ್ದು' ಎಂಬುದು ಜ್ಞಾನಿಗಳು, ಸಾಧಕರು ಹೇಳುವ ಮಾತು. ಪುನರ್ಜನ್ಮವನ್ನು ನಂಬದವರೂ ಸಹ ದೇವರು ಒಂದು 'ನಿರ್ಣಾಯಕ ದಿನ'ದಂದು ಎಲ್ಲಾ ಜೀವಿಗಳಿಗೆ ಅವರ ಕರ್ಮಕ್ಕನುಸಾರವಾಗಿ ಫಲ ಕೊಡುತ್ತಾನೆಂದು ನಂಬುತ್ತಾರೆ. ಪುನರ್ಜನ್ಮವನ್ನು ನಂಬುವವರಿಗೆ ಪೂರ್ವಾರ್ಜಿತ ಕರ್ಮದ ಅನುಸಾರ ಮುಂದಿನ ಜನ್ಮವೆಂದು ಹೇಳುತ್ತಾರೆ. ಒಟ್ಟಿನಲ್ಲಿ ನಾವು ಒಳ್ಳೆಯ ರೀತಿ ಬಾಳಬೇಕೆಂಬುದು ನೀತಿ. ಹಾಗೆ ಮಾಡಲು ಏನು ಅಡ್ಡಿ? ಆಕಾಶವನ್ನು ಕೃತಕ ಭಯ,ಭಕ್ತಿಗಳಿಂದ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಅದೇ ರೀತಿ ದೇವರನ್ನೂ ಭಯ-ಭಕ್ತಿಗಳಿಂದ ತೃಪ್ತಿಪಡಿಸಿ ನಮ್ಮ ಇಚ್ಛೆ ಈಡೇರಿಸಿಕೊಳ್ಳುವೆವೆಂಬುದು ಭ್ರಮೆ ಎಂದು ಆಕಾಶ ಸಾರುತ್ತಿದೆ. ನಮ್ಮ ಕಷ್ಟ-ನಷ್ಟಗಳಿಗೆ, ಒಳಿತು-ಕೆಡಕುಗಳಿಗೆ ದೇವರು ಕಾರಣನಲ್ಲ, ನಾವೇ ಎಂಬುದು ಆಕಾಶ ತನ್ನ ಇರುವಿಕೆಯ ರೀತಿಯಿಂದ ಹೇಳುತ್ತಿದೆಯೆಂದು ಅನ್ನಿಸುವುದಿಲ್ಲವೇ? 
     ಸಂದಿಗ್ಧ ಪರಿಸ್ಥಿತಿಯಲ್ಲಿ ಕೈಗಳನ್ನು ಮೇಲೆತ್ತಿ 'ದೇವರೇ ಕಾಪಾಡಪ್ಪಾ' ಅನ್ನುತ್ತೇವೆ. ಅಂದರೆ ದೇವರು ಮೇಲೆ ಇದ್ದಾನೆ ಎಂದು ಅಂದುಕೊಳ್ಳುತ್ತೇವೆ, ಆಕಾಶವನ್ನೂ ಮೇಲೆ ಇದೆ ಎಂದು ಭಾವಿಸಿದಂತೆ. ಆಕಾಶವನ್ನು ಬೆಟ್ಟ-ಗುಡ್ಡಗಳ ಮೇಲೆ, ರಾತ್ರಿಯಲ್ಲಿ ಮಿನುಗುವ ಚಂದ್ರ-ತಾರೆಗಳ ಹಿನ್ನೆಲೆಯಲ್ಲಿ ಕಾಣುವ ಸುಂದರ ದೃಷ್ಯಗಳ ರೀತಿಯಲ್ಲಿ ಕಾಣುವ ನಾವು ದೇವರೂ ವೈಕುಂಠ, ಕೈಲಾಸ, ಇತ್ಯಾದಿ ಬೇರೆಯೇ ಲೋಕಗಳಲ್ಲಿದ್ದಾನೆಂದು ಭಾವಿಸುತ್ತೇವೆ. ಕಾಶಿ, ಬದರಿ, ಕನ್ಯಾಕುಮಾರಿ, ಮೆಕ್ಕಾ, ಜೆರುಸಲೇಮ್, ಇತ್ಯಾದಿ ಸ್ಥಳಗಳು ದೇವರು ಇರುವ ವಿಶೇಷ ಸ್ಥಳಗಳೆಂದುಕೊಳ್ಳುತ್ತೇವೆ. ಆಕಾಶವನ್ನು ಮೇಲೆ ಮಾತ್ರ ಇದೆ ಎಂದು ಅಂದುಕೊಳ್ಳುವ ನಾವು ಅದು ನಮ್ಮೊಡನೆಯೇ ಇದೆ ಎಷ್ಟು ಜನ ಭಾವಿಸುತ್ತೇವೆ? ಕೈಗೆ ಸಿಗಲಾರದ ವಸ್ತುವನ್ನು ಗಗನಕುಸುಮವೆಂದು ವರ್ಣಿಸುತ್ತೇವೆ. ಆದರೆ, ಸದಾ ನಮ್ಮನ್ನು ಹೊಂದಿಕೊಂಡೇ ಇರುವ, ಆವರಿಸಿರುವ ಆಕಾಶವನ್ನು ಗಮನಿಸದ ನಾವುಗಳೇ ನಿಜವಾದ ಗಗನಕುಸುಮಗಳು. ಅಶನ, ವಸನ, ವಸತಿಗಳನ್ನು ಕರಣಿಸುವ ಭೂಮಿ ನಮ್ಮ ತಾಯಿಯಾದರೆ, ಸದಾ ನಮ್ಮೊಡನಿದ್ದು ನಮ್ಮನ್ನು ಗಮನಿಸುವ ಆಕಾಶ ನಮ್ಮ ತಂದೆ! ನಮ್ಮೊಂದಿಗಿದ್ದರೂ ತನ್ನ ಇರುವನ್ನು ಪ್ರಕಟಿಸದ, ನಮ್ಮ ಯಾವುದೇ ಚಟುವಟಿಕೆಗಳಿಗೆ ಅಡ್ಡಿಪಡಿಸದ, ಜಗತ್ತನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿರುವ ಆಗಸಕ್ಕಿಂತ ಹೆಚ್ಚು ವಾತ್ಸಲ್ಯಮಯಿ ತಂದೆ ಬೇರೆ ಯಾರಾದರೂ ಇರಲು ಸಾಧ್ಯವೇ? 
     ನಾಟಕದಲ್ಲಿ ವಿವಿಧ ಪಾತ್ರಧಾರಿಗಳು ನಾಟಕ ಆಡುವಾಗ ಪಾತ್ರಗಳೇ ಆಗಿ ಅನುಭವಿಸಿ ಆಡಿದರೂ ನಾಟಕ ಮುಗಿದ ನಂತರ ವಾಸ್ತವ ವ್ಯಕ್ತಿಗಳಾಗುತ್ತಾರೆ. ಆದರೆ ನಿಜ ಜೀವನ ನಾಟಕದಲ್ಲಿ? 'ಜಗದೀಶನಾಡುವಾ ಜಗವೇ ನಾಟಕರಂಗ' ಎಂಬ ಹಾಡು ಕೇಳಿದ್ದೇವೆಲ್ಲವೇ? ಈ ನಾಟಕರಂಗದ ಅದ್ಭುತ ಪರದೆ ಆಕಾಶ! ಈ ಪರದೆಯ ಮುಂದೆ ನಾವು-ನೀವೆಲ್ಲರೂ ಪಾತ್ರಧಾರಿಗಳೇ. ನಮ್ಮ ಪಾತ್ರಗಳನ್ನು ನಾವು ಎಷ್ಟು ತನ್ಮಯರಾಗಿ ನಿರ್ವಹಿಸುತ್ತೇವೆಂದರೆ ನಾವು ಆ ಪಾತ್ರಗಳೇ ಆಗಿಬಿಡುತ್ತೇವೆ. ನಾವು ನಿಜವಾಗಿ ಯಾರು ಎಂದು ತಲೆಕೆಡಿಸಿಕೊಳ್ಳುವುದೇ ಇಲ್ಲ, ಮತ್ತು ಪಾತ್ರವಲ್ಲದೆ ನಾವು ಬೇರೆ ಎಂದು ಅಂದುಕೊಳ್ಳುವುದೇ ಇಲ್ಲ.  ಈ ಜೀವನ ನಾಟಕದಲ್ಲಿ ನಮ್ಮದು ಕೆಲ ಸೀಮಿತ ಅವಧಿಗೆ ಬಂದು ಹೋಗುವ ಪಾತ್ರವಾಗಿದ್ದರೂ ನಾವು ಶಾಶ್ವತರೆಂದು ಅಂದುಕೊಂಡು, ನಮ್ಮ ಇರುವಿಕೆಯನ್ನು ಶಾಶ್ವತಗೊಳಿಸಲು, ನಮ್ಮತನವನ್ನು ಅಚ್ಚೊತ್ತಲು ಜೀವನ ಪೂರ್ತಿ ತೊಡಗಿಕೊಳ್ಳುತ್ತೇವೆ!
     ಒಂದು ಮೂಲವಸ್ತು ಯಾವ ಕಾಲಕ್ಕೂ ನಾಶವಾಗುವುದಿಲ್ಲವೆಂದು ರೂಪಾಂತರ ಮಾತ್ರ ಹೊಂದುವುದೆಂದು ವಿಜ್ಞಾನ ಹೇಳುತ್ತದೆ. ನಮ್ಮ ದೇಹ ಪಂಚಭೂತಗಳಿಂದ ಆಗಿದ್ದು ಆ ದೇಹಕ್ಕೆ ಅರ್ಥ ಕೊಡುವ ಒಂದು ಶಕ್ತಿ ಜೀವಾತ್ಮ. ಸತ್ತ ನಂತರದಲ್ಲಿ ದೇಹ ಪಂಚಭೂತಗಳಲ್ಲಿ ಸೇರಿ ಹೋಗುತ್ತದೆ. ಜೀವಾತ್ಮ? ಅದಕ್ಕೆ ನಾಶವಿಲ್ಲ. ನಂತರದಲ್ಲಿ ಅದು ಹೊಸ ಶರೀರವನ್ನು ಕಂಡುಕೊಳ್ಳುತ್ತದೆ ಎಂದು ತಿಳಿದವರು ಹೇಳುತ್ತಾರೆ. ವೈಜ್ಞಾನಿಕವಾಗಿ ಚಿಂತಿಸಿದರೂ ಪಂಚಭೂತಗಳಿಗೆ ಸೇರದ ಜೀವಾತ್ಮ ಯಾವುದಾದರೂ ರೂಪದಲ್ಲಿ ಇರಲೇಬೇಕಲ್ಲವೆ? ಈ ಎಲ್ಲಾ ಕ್ರಿಯೆಗಳಿಗೆ ಸಾಕ್ಷಿಯಾಗುವುದು ಆಕಾಶವೊಂದೇ! ಇದ್ದದ್ದು ಆಕಾಶದಲ್ಲಿ, ಹೋದದ್ದು ಆಕಾಶದಲ್ಲಿ, ಬರುವುದೂ ಆಕಾಶದಲ್ಲಿ! ಇದನ್ನು ವೈಜ್ಞಾನಿಕ ಆಸ್ತಿಕವಾದವೆನ್ನಬಹುದು. 
     "ರೀ, ಎಷ್ಟು ಹೊತ್ತು ಅಲ್ಲೇ ಕುಳಿತಿರುತ್ತೀರಿ? ಕತ್ತಲಾಯಿತು, ಒಳಗೆ ಬನ್ನಿ" ಎಂಬ ಕರೆ ನನ್ನನ್ನು ಎಚ್ಚರಿಸಿತು. ಆಕಾಶದಿಂದ ಭೂಮಿಗೆ ಬಂದೆ. ನನ್ನ ಆಕಾಶಯಾನ ಅಲ್ಲೇ ಮೊಟಕಾಯಿತು. ಇನ್ನೊಮ್ಮೆ ದೀರ್ಘ ಆಕಾಶಯಾನ ಮಾಡಬೇಕೆಂಬ ಇಚ್ಛೆಯೊಂದಿಗೆ ಮನೆಯೊಳಗೆ ಸೇರಿಕೊಂಡೆ.
***********

ಬುಧವಾರ, ಡಿಸೆಂಬರ್ 7, 2011

ನಾವೆಷ್ಟು ಒಳ್ಳೆಯವರು?


     ರಸಭರಿತ ಫಲಮೂಲ ಕೊಂಬೆ ತಾನಲ್ಲ|
     ಫಲಸತ್ವ ಸಾಗಿಪ ಮಾರ್ಗ ತಾನಹುದು||
     ಮಾಡಿದೆನೆನಬೇಡ ನಿನ್ನದೆನಬೇಡ|
     ಜಗವೃಕ್ಷರಸ ಹರಿದ ಕೊಂಬೆ ನೀನು ಮೂಢ||
     ಕೊಂಬೆಯಲ್ಲಿ ಗೊಂಚಲು ಗೊಂಚಲಾಗಿ ಬಿಟ್ಟ ಫಲಗಳನ್ನು ಕಂಡು ಕೊಂಬೆ ತನ್ನಿಂದ ಈ ಫಲಗಳು ಎಂದು ಹೆಮ್ಮೆ ಪಡಬಹುದೇ? ಮರದ ಬೇರು, ವಿವಿಧ ಅಂಗಾಂಗಗಳು ನೆಲ, ಜಲ, ಗಾಳಿ, ಬೆಳಕುಗಳಿಂದ ಪಡೆದ  ಸತ್ವಗಳು ಕೊಂಬೆಯ ಮೂಲಕ ಸಾಗಿ ರೂಪಿತವಾದುದೇ ಫಲ. ಅದಕ್ಕೆ ಕೊಂಬೆಯೂ ಸಹಕಾರಿ ಹೊರತು ಅದೇ ಮೂಲವಲ್ಲ. ಅದೇ ರೀತಿ ನಾವು ಏನನ್ನು ಮಾಡಿದ್ದೇವೆ, ಸಾಧಿಸಿದ್ದೇವೆ ಎಂದು ಅಂದುಕೊಳ್ಳುತ್ತೀವೋ ಅದಕ್ಕೆ ನಾವೂ ಕಾರಣರು ಎಂದಷ್ಟೇ ಹೇಳಿಕೊಳ್ಳಬಹುದು. ನಾವೇ ಕಾರಣರು ಎಂದು ಹೇಳಲಾಗದು. ನಾವು ವಾಹಕಗಳಷ್ಟೆ. ಎಂತಹ ವಾಹಕರು ಎಂಬುದು ನಮ್ಮಿಂದ ಆಗುವ ಕಾರ್ಯಗಳು ತೋರಿಸುತ್ತವೆ. ಒಳ್ಳೆಯ ವಾಹಕಗಳಾಗಿದ್ದಲ್ಲಿ ಒಳ್ಳೆಯ ಫಲಗಳು, ಕೆಟ್ಟದಾಗಿದ್ದಲ್ಲಿ ಕೊಳೆತ, ಕೆಟ್ಟ ಫಲಗಳು ಗೋಚರಿಸುತ್ತವೆ. 
     ಕಶ್ಮಲಭರಿತ ನೀರನ್ನು ಶುದ್ಧವಾದ ಪಾತ್ರೆಗೆ ಹಾಕಿದಾಕ್ಷಣ ನೀರು ಶುದ್ಧವಾಗುವುದಿಲ್ಲ. ಅದೇ ರೀತಿ ಶುದ್ಧವಾದ ನೀರನ್ನು ಕಶ್ಮಲಭರಿತ ಪಾತ್ರೆಗೆ ಹಾಕಿದರೆ ನೀರೂ ಅಶುದ್ಧವಾಗುತ್ತದೆ. ಆದ್ದರಿಂದ ನಾವು ಶುದ್ಧ ವಾಹಕಗಳಾಗಬೇಕೆಂದರೆ ಎಚ್ಚರಿಕೆಯಿಂದಿರಬೇಕು. ನಮ್ಮ ಆಹಾರ -ಅಂದರೆ, ಕೇವಲ ತಿನ್ನುವುದು, ಕುಡಿಯುವುದು ಮಾತ್ರ ಅಲ್ಲ ನೋಡುವುದು, ಕೇಳುವುದು, ಗ್ರಹಿಸುವುದು, ಇತ್ಯಾದಿಗಳೂ ಸೇರಿ- ಶುದ್ಧವಾಗಿರಬೇಕು. ಒಂದು ಉದಾಹರಣೆ ನೀಡಿದರೆ ಅರ್ಥವಾಗಬಹುದು. ಸ್ನೇಹಿತರೊಬ್ಬರ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಅವರ ೩ ವರ್ಷದ  ಚಿಕ್ಕ ಮಗು ಒಬ್ಬರು ಹಿರಿಯರನ್ನು ಕುರಿತು 'ನೀನು ಪೆದ್ದ, ದಂಡ' ಎಂದಿತು. ಚಿಕ್ಕ ಮಗುವಾದ್ದರಿಂದ ಆ ಮಗುವಿನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಹಿರಿಯರು ಯಾವುದೋ ಕಾರಣಕ್ಕೆ ಹೊರಗೆ ಹೋದಾಗ ಅಲ್ಲಿದ್ದ ಮಗುವಿನ ಸಂಬಂಧಿಯೊಬ್ಬರು  'ಮಗು  ಸರಿಯಾಗಿ ಹೇಳಿತು, ಬಿಡು, ಅವರು ಮಾಡುವುದೂ ಹಾಗೆಯೇ, ಇರುವುದೂ ಹಾಗೆಯೇ'  ಎಂದರು.  ಅಲ್ಲೇ ಕುಳಿತಿದ್ದ ಮಗು ಖುಷಿಯಿಂದ ಇದನ್ನು ಕೇಳಿಸಿಕೊಂಡಿತು. ಈ ಪ್ರಸಂಗ ನನ್ನನ್ನು ವಿಚಾರಕ್ಕೆ ದೂಡಿತು. ಹಿರಿಯರಿಗೂ ಆ  ಸಂಬಂಧಿಗೂ ಅಷ್ಟಾಗಿ ಸರಿಯಿರಲಿಲ್ಲ. ಅದು ಮಗುವಿನ ಮೂಲಕ ಹೊರಬಿತ್ತು ಅಷ್ಟೆ. ಅವರು ಹಿರಿಯರ ಬೆನ್ನ ಹಿಂದೆ ಯಾವಾಗಲೋ ಆಡಿದ ಮಾತುಗಳನ್ನು ಮಗು ಪುನರುಚ್ಛರಿಸಿತ್ತಷ್ಟೆ. ಈಗ ಅವರು ಮಗು ಆಡಿದ ಮಾತನ್ನು ಅನುಮೋದಿಸಿ ಆಡಿದ ಮಾತಿನಿಂದ ಮಗುವಿಗೆ ತಾನು ಮಾಡಿದ್ದು ಸರಿ ಎಂದು ಶಹಭಾಸಗಿರಿ ಕೊಟ್ಟಂತಾಯಿತು. ಮಗು ಮುಂದೆ ಇಂತಹ ಮಾತುಗಳನ್ನು ಇನ್ನೂ ಹೆಚ್ಚು ಹೆಚ್ಚಾಗಿ ಆಡಲು ಪ್ರೇರೇಪಿಸಿದಂತೆ ಆಯಿತು. ಕಲುಷಿತ ಭಾವನೆಯನ್ನು ವಾಹಕರಾಗಿ ಅವರು ಆ ಮಗುವಿಗೂ ಹರಿಸಿದರಲ್ಲವೇ? ಇದು ಸರಿಯೇ?  ಮಕ್ಕಳು ನಿಷ್ಕಲ್ಮಷವಾದ ಪಾತ್ರೆಯಿದ್ದಂತೆ. ಆ ಪಾತ್ರೆಗೆ ಕಲ್ಮಷಗಳನ್ನು ತುಂಬಬಾರದಿತ್ತಲ್ಲವೇ?
     ಮನುಷ್ಯನ ಸ್ವಭಾವವೇ ವಿಚಿತ್ರ. ತನಗೆ ಬೇಕಾದವರ ಬಗ್ಗೆ ಯಾರಾದರೂ ಪ್ರಿಯವಾದ ವಿಷಯ ಹೇಳಿದರೆ ಅದಕ್ಕೆ ಮತ್ತಷ್ಟು ಒತ್ತುಕೊಟ್ಟು ಇನ್ನೊಬ್ಬರಿಗೆ ಹೇಳುತ್ತಾನೆ. ತನಗಾಗದವರ ಬಗ್ಗೆ ಒಳ್ಳೆಯ ಸಂಗತಿ ಕೇಳಿದರೆ ಅದನ್ನು ತಿರುಚಿ ತಮ್ಮ ಕೆಟ್ಟ ಅಭಿಪ್ರಾಯ ಸೇರಿಸಿ ಹೇಳುತ್ತಾನೆ. ಅವರ ಬಗ್ಗೆ ಕೆಟ್ಟ ವಿಷಯ ಕೇಳಿದರಂತೂ ಸಂಭ್ರಮಿಸಿ ಎಲ್ಲರಿಗೂ ಹರಡುತ್ತಾನೆ. ಆತ್ಮೀಯರು ಸೀನಿದರೆ ಸಾಕು, ಏನೋ ಆಗಿಹೋಯಿತೆಂದು ಕಳವಳ ಪಡುತ್ತಾರೆ. ಇಷ್ಟಪಡದವರು ಗಂಭೀರ ಕಾಯಿಲೆಯಿಂದ ನರಳುತ್ತಿದ್ದರೂ 'ಅವರಿಗೇನಾಗಿದೆ? ಇನ್ನೂ ಗಟ್ಟಿಗಡತವಾಗಿದ್ದಾರೆ. ಎಷ್ಟು ಜನರನ್ನು ಹಾಳುಮಾಡಬೇಕೋ?' ಎಂದು ಉದ್ಗರಿಸುತ್ತಾರೆ. ಇಂತಹವರನ್ನು ಒಳ್ಳೆಯ ವಾಹಕರೆನ್ನಬಹುದೆ? ಸಂಬಂಧಗಳು ಹಾಳಾಗುವುದು ಇಂತಹ ನಡವಳಿಕೆಗಳಿಂದಲೇ.
     ಇನ್ನು ಕೆಲವರಿರುತ್ತಾರೆ. ಕೆಟ್ಟ ವಿಷಯ ಕೇಳಿದರೆ ಕೇಳಿಸಿಕೊಂಡು ಸುಮ್ಮನಾಗುತ್ತಾರೆಯೇ ಹೊರತು ಅದನ್ನು ಹರಡಲು ಹೋಗುವುದಿಲ್ಲ. ಒಳ್ಳೆಯ ವಿಷಯಗಳಿಗೆ ಸ್ಪಂದಿಸುತ್ತಾರೆ. ಇವರು ಒಳ್ಳೆಯ ವಾಹಕರು. ಇಂತಹವರನ್ನು ಸಾಮಾನ್ಯವಾಗಿ ಜನ ಒಳ್ಳೆಯವರೆಂದು ಗುರುತಿಸುತ್ತಾರೆ. ಇವರ ಮಾತುಗಳಿಗೆ ಗೌರವ ಕೊಡುತ್ತಾರೆ. ಸಂಬಂಧಗಳು ಉಳಿಯುವುದು, ಬೆಳೆಯುವುದು ಇಂತಹವರಿಂದಲೇ ಎಂಬುದರಲ್ಲಿ ಅನುಮಾನವಿಲ್ಲ. 
     ಕುಟುಂಬದ ಮುಖ್ಯಸ್ಥ ಮುಖ್ಯ ವಾಹಕನಾದರೆ ಕುಟುಂಬದ ಸದಸ್ಯರುಗಳು ಉಪವಾಹಕಗಳಿದ್ದಂತೆ. ವಾಹಕ, ಉಪವಾಹಕಗಳಲ್ಲಿ ಯಾವುದೇ ಒಂದು ಸರಿಯಿಲ್ಲದಿದ್ದರೂ ಒಂದು ಘಟಕವಾಗಿ ಕುಟುಂಬಕ್ಕೇ ಕೆಟ್ಟ ಹೆಸರು ಬರುತ್ತದೆ. ಈ ವಿಚಾರದಲ್ಲಿ ಎಚ್ಚರವಿರುವುದು ಒಳ್ಳೆಯದು. ಒಬ್ಬರಿದ್ದಂತೆ ಇನ್ನೊಬ್ಬರು ಇಲ್ಲದಿರುವುದರಿಂದ ಇದಕ್ಕೆ ಪರಿಹಾರ ಕಷ್ಟಸಾಧ್ಯ. ಗೀತೆಯ 'ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನಾ' ಎಂಬಂತೆ ಬಂದದ್ದನ್ನು ಸ್ವೀಕರಿಸಿ ನಡೆಯುವುದೊಂದೇ ಆಗ ಉಳಿಯುವ ಮಾರ್ಗ. ಆದರೆ ಒಬ್ಬರ ಕಾರಣದಿಂದ ಕುಟುಂಬದ ಎಲ್ಲರಿಗೂ ಕೆಟ್ಟ ಹೆಸರು ಬರುವಂತಾಗುವುದು ಒಳ್ಳೆಯ ಲಕ್ಷಣವಂತೂ ಅಲ್ಲ.
     ನಾವೆಷ್ಟು ಒಳ್ಳೆಯವರು ಎಂಬುದರ ಅಳತೆಗೋಲು ನಮ್ಮಲ್ಲೇ ಇದೆ. ಕುಟುಂಬದ ಸದಸ್ಯರುಗಳ, ಬಂಧುಗಳ, ಸ್ನೇಹಿತರ ಪಟ್ಟಿ ಮಾಡಿರಿ. ಆ ಹೆಸರುಗಳ ಮುಂದೆ ಎರಡು ಕಲಮುಗಳು ಇರಲಿ. ಒಂದು ಕಲಮಿನಲ್ಲಿ ನಿಮ್ಮ ದೃಷ್ಟಿಯಲ್ಲಿ  ಅವರು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸಿ. ಇನ್ನೊಂದು ಕಲಮಿನಲ್ಲಿ ಅವರ ದೃಷ್ಟಿಯಲ್ಲಿ ನೀವು  ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸಿ. ಒಂದು ಆಶ್ಚರ್ಯದ ಸಂಗತಿ ನಿಮಗೇ ಗೋಚರಿಸುವುದು. ಸಾಮಾನ್ಯವಾಗಿ ಎರಡು ಕಲಮುಗಳ ವಿವರ ಒಂದೇ ಆಗಿರುತ್ತದೆ. ನೀವು ಒಳ್ಳೆಯವರೆಂದು ಹೇಳುವವರು ನಿಮ್ಮನ್ನೂ ಒಳ್ಳೆಯವರೆಂದು ಭಾವಿಸುವರು. ನೀವು ಕೆಟ್ಟವರೆನ್ನುವವರು ನಿಮ್ಮನ್ನು ಒಳ್ಳೆಯವರೆಂದು ಹೇಳಲಾರರು. ಕೊನೆಯಲ್ಲಿ ಎಷ್ಟು ಒಳ್ಳೆಯವರು ಮತ್ತು ಕೆಟ್ಟವರು ಎಂಬುದನ್ನು ಲೆಕ್ಕ ಹಾಕಿರಿ. ಒಳ್ಳೆಯವರು ಎಂಬ ಸಂಖ್ಯೆ ಜಾಸ್ತಿ ಬಂದರೆ ನೀವು ಒಳ್ಳೆಯವರೇ. ಕೆಟ್ಟವರು ಎಂಬ ವಿವರ ಹೆಚ್ಚಾಗಿದ್ದರೆ ತಿದ್ದಿಕೊಳ್ಳುವ, ಬದಲಾಗುವ ಅಗತ್ಯವಿದೆ ಎಂದೇ ಅರ್ಥ. ಈ ಜಗತ್ತು ಕನ್ನಡಿಯಿದ್ದಂತೆ. ಒಳ್ಳೆಯವರಿಗೆ ಒಳ್ಳೆಯದಾಗಿ, ಕೆಟ್ಟವರಿಗೆ ಕೆಟ್ಟದಾಗಿ ಕಾಣುತ್ತದೆ. ಕನ್ನಡಿಯ ಪ್ರತಿಬಿಂಬವೂ ಅಷ್ಟೆ. ನಾವು ಎಷ್ಟು ದೂರದಲ್ಲಿರುತ್ತೇವೋ ಪ್ರತಿಬಿಂಬವೂ ಅಷ್ಟೇ ದೂರದಲ್ಲಿರುತ್ತದೆ. ಇದರ ಅರ್ಥವನ್ನು ಬಿಡಿಸಿ ಹೇಳುವ ಅಗತ್ಯವಿಲ್ಲವಲ್ಲವೇ?
     ಈ ಬದುಕು ಮೂರುದಿನದ್ದು ಎಂಬುದು ಎಲ್ಲರಿಗೂ ಗೊತ್ತಿದ್ದರೂ ನಾವು ಚಿರಂಜೀವಿಗಳು ಎಂಬಂತೆ ವರ್ತಿಸುತ್ತೇವೆ. ಇತರರ ಬಗ್ಗೆ 'ಅವನು ಏಕೆ ಹಾಗಾಡುತ್ತಾನೆ? ಹೋಗುವಾಗ ಎಲ್ಲಾ ಹೊತ್ತುಕೊಂಡು ಹೋಗುತ್ತಾನಾ?' ಎಂದು ಹೇಳುವ ನಾವು ಅದೇ ತತ್ವವನ್ನು ನಮಗೆ ಹೇಳಿಕೊಳ್ಳುತ್ತೇವೆಯೇ? ಒಂದು ವೇಳೆ ನಾವು ಸದ್ಯದಲ್ಲೇ ಸಾಯುತ್ತೇವೆ ಎಂಬುದು ನಮ್ಮ ಅರಿವಿಗೆ ಬಂದಾಗ ಮತ್ತು ಏನಾದರೂ ಹೇಳಲು ಐದು ನಿಮಿಷ ಮಾತ್ರ ಅವಕಾಶ ಸಿಕ್ಕಾಗ ನಾವು ಏನು ಹೇಳಬಹುದು, ಊಹಿಸಿಕೊಳ್ಳಿ. ಆ ಮಾತನ್ನು ಈಗಲೇ ಏಕೆ ಹೇಳಬಾರದು? ಜೀವನ ಪೂರ್ತಿ ಉತ್ತಮ ರೀತಿಯಲ್ಲಿ ಬಾಳಲು ಸಿದ್ಧತೆ ಮಾಡಿಕೊಳ್ಳುವುದರಲ್ಲಿಯೇ ಕಳೆಯುವ ನಾವು ಉತ್ತಮವಾಗಿ ಬಾಳುವುದಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ.
     ಸಂಬಂಧಗಳಲ್ಲಿ ಬರುವ ದೊಡ್ಡ ಸವಾಲೆಂದರೆ  ಏನನ್ನಾದರೂ ಪಡೆಯುವ ಸಲುವಾಗಿಯೇ ಸಂಬಂಧಗಳನ್ನು  ಹೆಚ್ಚಿನವರು ಬೆಳೆಸುವುದೇ ಆಗಿದೆ. ಅವರು ಇತರರು ತಮಗೆ ಒಳಿತು ಮಾಡಲಿ ಎಂದು ಬಯಸಿ ಸಂಬಂಧ ಬೆಳೆಸುತ್ತಾರೆ. ಸಂಬಂಧಗಳು ಏನನ್ನಾದರೂ ಕೊಡುವ ಸಲುವಾಗಿ, ಪಡೆಯುವ ಸಲುವಾಗಿ ಅಲ್ಲ ಎಂದುಕೊಂಡರೆ ಸಂಬಂಧಗಳು ಉಳಿಯುತ್ತವೆ, ಬೆಳೆಯುತ್ತವೆ.  ಬರ್ನಾರ್ಡ್ ಶಾ ಹೇಳಿದಂತೆ "ಸಾಯುವ ಮುನ್ನ ನಮ್ಮಲ್ಲಿರುವ ಒಳ್ಳೆಯದನ್ನೆಲ್ಲಾ ಕೊಟ್ಟುಬಿಡೋಣ. ಸಂತೋಷ ಹಂಚಿಕೊಳ್ಳೋಣ- ಅದು ದ್ವಿಗುಣಗೊಳ್ಳುತ್ತದೆ. ದುಃಖವನ್ನೂ ಹಂಚಿಕೊಳ್ಳೋಣ- ಅದು ಅರ್ಧ ಕಡಿಮೆಯಾಗುತ್ತದೆ". ಒಡಲಗುಡಿಯ ರಜ-ತಮಗಳ ಗುಡಿಸಿ ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ ಮನದ ಕತ್ತಲ ಕಳೆದು ತಿಳಿವಿನ ಬೆಳಕ ಪಸರಿಸೋಣ; ಒಳ್ಳೆಯವರಾಗೋಣ. 
*************
 -ಕ.ವೆಂ.ನಾಗರಾಜ್. 

ಭಾನುವಾರ, ಡಿಸೆಂಬರ್ 4, 2011

ಎಲ್ಲಾ ಮರೆತುಬಿಡಿ, ಎಲ್ಲರೂ ಚೆನ್ನಾಗಿರಿ

     ದಿ. ಕವಿ ವೆಂಕಟಸುಬ್ಬರಾಯರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: "ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ". ಸಂಬಂಧಪಟ್ಟವರು, ಪಡದಿದ್ದವರು ಎಲ್ಲರಿಗೂ ಈ ಮಾತು ಹೇಳುತ್ತಿದ್ದುದು, ಕೈಹಿಡಿದುಕೊಂಡು ಈ ಮಾತು ಪುನರುಚ್ಛರಿಸುತ್ತಿದ್ದುದು, ಕೆಲವರಿಂದ ಈ ಕುರಿತು ಭಾಷೆ ಪಡೆಯುತ್ತಿದ್ದುದನ್ನು ಕಂಡ ಕೆಲವರಿಗೆ ಅದು ಅರಳು ಮರಳಿನ ಮಾತಿನಂತೆ ಕಂಡಿರಬಹುದು. ಆದರೆ ಅಂತರ್ಮುಖಿಯಾಗಿ ಯೋಚಿಸಿದಾಗ ಉತ್ತಮ ಬದುಕಿನ ಸಂದೇಶ ಇದರಲ್ಲಡಗಿರುವುದು ಗೋಚರಿಸದೆ ಇರದು. 'ಲೋಕೋ ಭಿನ್ನರುಚಿಃ' ಎಂಬಂತೆ ಭಿನ್ನ ಅಭಿರುಚಿಗಳ ಜನರ ನಡುವೆ ಸಮನ್ವಯ ಸಾಧಿಸಬೇಕೆಂದರೆ ಈ ಸಂದೇಶದ ಪಾಲನೆಯಿಂದ ಮಾತ್ರ ಸಾಧ್ಯ.
     ಸುಮಾರು ಹತ್ತು ವರ್ಷಗಳ ಹಿಂದಿನ ಪ್ರಸಂಗ: ನಾನು ಅರಕಲಗೂಡಿನಲ್ಲಿ ತಹಸೀಲ್ದಾರನಾಗಿದ್ದಾಗ ಒಂದು ಜಮೀನಿನ ತಕರಾರು ಪ್ರಕರಣ ನನ್ನ ಮುಂದೆ ಬಂದಿತ್ತು. ಗಂಡ ಅಪಘಾತದಲ್ಲಿ ಮೃತನಾದ ನಂತರ ಆತನ ಹೆಸರಿನಲ್ಲಿದ್ದ  ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಡಲು ಮಧ್ಯ ವಯಸ್ಕ ವಿಧವೆ ಕೋರಿದ್ದ ಅರ್ಜಿಗೆ ಗಂಡನ ಅಣ್ಣಂದಿರು ತಕರಾರು ಸಲ್ಲಿಸಿದ್ದರು. ವಿಚಾರಣೆ ಕಾಲದಲ್ಲಿ ತಿಳಿದು ಬಂದಿದ್ದೇನೆಂದರೆ ಮೃತನ ತಂದೆ-ತಾಯಿಗೆ ನಾಲ್ಕು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಮೃತನನ್ನು ಹೊರತುಪಡಿಸಿ ಉಳಿದವರೆಲ್ಲಾ ಒಳ್ಳೆಯ ಸ್ಥಿತಿಯಲ್ಲಿದ್ದರು. ಮಗಳನ್ನು ಸಿರಿವಂತ ಕುಟುಂಬಕ್ಕೆ ಕೊಟ್ಟು ವಿವಾಹ ಮಾಡಲಾಗಿತ್ತು. ಹಿರಿಯ ಮಗ ಬೆಂಗಳೂರಿನ ಸರ್ಕಾರಿ ಕಾಲೇಜೊಂದರ ಪ್ರೊಫೆಸರ್, ಎರಡನೆಯವನು ತುಮಕೂರಿನಲ್ಲಿ ಇಂಜನಿಯರ್, ಕೊನೆಯ ಮಗ ಪ್ರೌಢಶಾಲೆಯ ಉಪಾಧ್ಯಾಯ. ಮೃತ ವ್ಯಕ್ತಿ ಮೂರನೆಯವನಾಗಿದ್ದು ಅವಿದ್ಯಾವಂತ. ತಂದೆ-ತಾಯಿಗೆ ಪಿತ್ರಾರ್ಜಿತವಾಗಿ ಬಂದಿದ್ದ ನಾಲ್ಕು ಎಕರೆ ತರಿ ಜಮೀನು ಇತ್ತು. ಒಳ್ಳೆಯ ಸ್ಥಿತಿಯಲ್ಲಿದ್ದ ಉಳಿದ ಮಕ್ಕಳು ಅವಿದ್ಯಾವಂತ ಸಹೋದರನೂ ಚೆನ್ನಾಗಿರಲಿ, ಹಳ್ಳಿಯನ್ನು ಬಿಟ್ಟುಬರಲು ಇಚ್ಛಿಸದ ತಂದೆ-ತಾಯಿಗೆ ಆಸರೆಯಾಗಿರಲಿ ಎಂಬ ಭಾವನೆಯಿಂದ ಪಿತ್ರಾರ್ಜಿತ ಸ್ವತ್ತನ್ನು ಅವನ ಹೆಸರಿಗೆ ಖಾತೆ ಮಾಡಿಕೊಡಲು ಒಪ್ಪಿಗೆ ಸೂಚಿಸಿ, ಜಮೀನಿನ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಟ್ಟು ಅವನ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದರು. ಬಡಕುಟುಂಬದ ಹೆಣ್ಣನ್ನು ಮದುವೆಯಾಗಿದ್ದ  ಅವನ ಬದುಕಿಗೂ ಇದರಿಂದ ಭದ್ರತೆ ಬಂದಿತ್ತು. ಕೆಲವು ವರ್ಷಗಳ ನಂತರ ಆತ ಅಪಘಾತದಲ್ಲಿ ತೀರಿದಾಗ ಜಮೀನಿನ ಪಾಲು ಕೇಳುವುದರೊಂದಿಗೆ ಮೃತನ ಹೆಂಡತಿಯ ಹೆಸರಿಗೆ ಖಾತೆ ಮಾಡಿಕೊಡಬಾರದೆಂದು  ಮೃತನ ಅಣ್ಣಂದಿರು ತಕರಾರು ಮಾಡಿದ್ದರು. ಜಮೀನು ಕೈತಪ್ಪಿದಲ್ಲಿ ಆಸರೆಯಿಲ್ಲದೆ ಬೀದಿಗೆ ಬೀಳಲಿದ್ದ ಮೃತನ ಹೆಂಡತಿ, ಮದುವೆ ವಯಸ್ಸಿಗೆ ಬಂದಿದ್ದ ಅವನ ಮಗಳ ಕುರಿತು ತಕರಾರುದಾರರಿಗೆ ಮರುಕವಿರಲಿಲ್ಲ. ಕೊನೆಯ ಮಗನೊಬ್ಬ ಮಾತ್ರ ಅತ್ತಿಗೆಯ ಪರವಾಗಿ ಮಾತನಾಡಿದ್ದ. ಅಧಿಕಾರದಲ್ಲಿದ್ದ ಪ್ರಭಾವಿ ರಾಜಕಾರಣಿಯೊಬ್ಬರು ತಕರಾರುದಾರರ ಪರವಾಗಿ ತೀರ್ಪು ನೀಡಲು ಒಂದು ರೀತಿಯ ಬೆದರಿಕೆಯ ಒತ್ತಾಯ ಮಾಡಿದ್ದರು. ಕಾಲೇಜು ಪ್ರೊಫೆಸರರು ಹತ್ತು ಸಾವಿರ ರೂ. ಲಂಚದ ಆಮಿಷ ಒಡ್ಡಿದ್ದರು. ಇದನ್ನು ಲೆಕ್ಕಿಸದೆ, ಜಮೀನಿನ ಮೇಲಿನ ಹಕ್ಕನ್ನು ಮೊದಲೇ ಬಿಟ್ಟುಕೊಟ್ಟು ಮೃತನ ಹೆಸರಿಗೆ ಖಾತೆ ಮಾಡಿಕೊಡಲು ತಕರಾರುದಾರರು ಹಿಂದೆ ಬರೆದುಕೊಟ್ಟಿದ್ದ ಒಪ್ಪಿಗೆ ಪತ್ರ ಹಾಗೂ ಮೃತ ಗಂಡನ ಹೆಸರಿನಲ್ಲಿದ್ದ ಜಮೀನು ಇವುಗಳನ್ನು ಪರಿಗಣಿಸಿ ಮೃತನ ಪತ್ನಿಯ ಹೆಸರಿಗೆ ಖಾತೆ ಮಾಡಲು ತೀರ್ಪು ನೀಡಿದಾಗ ಜಮೀನು ಕೈತಪ್ಪಿ ಹೋಗುವುದೆಂದೇ ಆತಂಕದಲ್ಲಿದ್ದ ಆ ಬಡ ಹೆಣ್ಣು ಮಗಳು ತನ್ನ ಮಗಳೊಂದಿಗೆ ಬಂದು ಎಲ್ಲರ ಎದುರಿಗೇ   ನನ್ನ ಕಾಲು ಮುಟ್ಟಿ ನಮಸ್ಕರಿಸಿದ ಪ್ರಸಂಗ ನೆನಪಿನಲ್ಲಿ ಉಳಿದಿದೆ. ಆಗ ಆಕೆ ಕಾಲೇಜು ಪ್ರೊಫೆಸರರ ಪತ್ನಿಗೂ ತನಗೂ ಒಮ್ಮೆ ಸಂಸಾರಕ್ಕೆ ಸಂಬಂಧಿಸಿದ ವಿಷಯಕ್ಕೆ ಜಗಳವಾಗಿತ್ತೆಂದೂ, ಕುಟುಂಬಗಳಲ್ಲಿ ಪರಸ್ಪರ ಮನಸ್ತಾಪಕ್ಕೆ ಇದೇ ಕಾರಣವಾಗಿ ಈ ಹಂತಕ್ಕೆ ಬಂದು ತಾನು ಬೀದಿಗೆ ಬೀಳುವ ಪ್ರಸಂಗ ಒದಗಿತೆಂದೂ ಕಣ್ಣೀರಿಟ್ಟು ಹೇಳಿದ್ದಳು. ಮುಂದೊಮ್ಮೆ ಕಾಲೇಜು ಪ್ರೊಫೆಸರರು ಭೇಟಿಯಾದಾಗ ಅವರೊಂದಿಗೆ ಸಮಾಲೋಚಿಸಿ, ಚರ್ಚಿಸಿ, ಮನವೊಲಿಸಿ ದೊಡ್ಡ ಸ್ಥಾನದಲ್ಲಿರುವ ಅವರು ಪ್ರಸಂಗ ಇಲ್ಲಿಗೇ ಮುಕ್ತಾಯಗೊಳಿಸಿದಲ್ಲಿ ಆಗುವ ಸತ್ಪರಿಣಾಮದ ಕುರಿತು ಹಾಗೂ ಇದರಿಂದ ನಿಜಕ್ಕೂ ದೊಡ್ಡವರೆನಿಸಿಕೊಳ್ಳುತ್ತೀರೆಂದು ಮನವರಿಕೆ ಮಾಡಿಕೊಟ್ಟಾಗ ನನ್ನ ತೀರ್ಪಿನ ವಿರುದ್ಧ ಅವರು ಸಲ್ಲಿಸಬೇಕೆಂದಿದ್ದ್ದ ಮೇಲುಮನವಿಯನ್ನು ಸಲ್ಲಿಸಲಿಲ್ಲ. ಕೆಟ್ಟ ಘಳಿಗೆಯೊಂದರಲ್ಲಿ ಕುಟುಂಬದ ಸದಸ್ಯರುಗಳಲ್ಲಿ ಉಂಟಾಗುವ ಮನಸ್ತಾಪ ಮಾನವೀಯತೆಯನ್ನೇ ಹೇಗೆ ಮರೆಸುತ್ತದೆ ಎಂಬುದನ್ನು ತೋರಿಸುವುದಷ್ಟೇ ಈ ಪ್ರಸಂಗ ಉಲ್ಲೇಖಿಸಿದ ಉದ್ದೇಶ. ಹಲವಾರು ಕಾರಣಗಳಿಗಾಗಿ ಉಂಟಾಗುವ ಜಗಳ, ಮನಸ್ತಾಪಗಳನ್ನು ಮರೆತು ಪರಸ್ಪರರನ್ನು ಕ್ಷಮಿಸಿ ಮುನ್ನಡೆದಲ್ಲಿ ಸಂಬಂಧಗಳು ಉಳಿದುಕೊಳ್ಳುತ್ತವೆ. ಇಲ್ಲದಿದ್ದಲ್ಲಿ ಸಂಬಂಧಗಳು ಹಳಸುತ್ತದೆ. ಹಳಸಿದ ಸಂಬಂಧಗಳ ಲಾಭ ಇತರರಿಗೆ ಆಗುತ್ತದೆ. ಸಂಬಂಧಿಸಿದವರು ನಗೆಪಾಟಲಿಗೆ ಒಳಗಾಗುವರಲ್ಲದೆ ಅವರ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಹೊರಟುಹೋಗುತ್ತದೆ. ಸಂಬಂಧಗಳು ಕಳಚಿದ ಬಗ್ಗೆ ಮನದಾಳದಲ್ಲಿ ನೋವು ಉಳಿಯುತ್ತದೆ. ಹೊಂದಿಕೊಂಡು ನಡೆದಲ್ಲಿ ಸಂಬಂಧಗಳು ಮಧುರವಾಗಿ ಉಳಿಯದಿದ್ದರೂ ಹಾಳಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ ಎಂಬ ಮಾತು ಅರ್ಥಪೂರ್ಣವೆನಿಸುತ್ತದೆ. ಮನ ನೋಯುವಂತಹ ಕೆಲವು ಸಂಗತಿಗಳು ಘಟಿಸಿದ  ಸಂದರ್ಭಗಳಲ್ಲಿ ನಾನು ನನ್ನ ಸ್ವಭಾವಕ್ಕೆ ವಿರುದ್ಧವಾಗಿ ತಕ್ಷಣದಲ್ಲಿ ಕೋಪದಿಂದ ಪ್ರತಿಕ್ರಿಯೆ ವ್ಯಕ್ತಪಡಿಸದೆ ಇದ್ದುದರಿಂದ ಸಂಬಂಧಗಳು ಉಳಿದುಕೊಂಡಿರುವುದು ನನ್ನ ವೈಯಕ್ತಿಕ ಅನುಭವ. 
     ಅಡಿಗಡಿಗೆ ಕಾಡಿ ಶಿರನರವ ತೀಡಿ
     ಮಿಡಿದಿಹುದು ಉಡಿಯೊಳಗಿನ ಕಿಡಿಯು|
     ಗಡಿಬಿಡಿಯಲಡಿಯಿಡದೆ ತಡೆತಡೆದು
     ಸಿಡಿನುಡಿಯ ನೀಡು ಸಿಹಿಯ ಮೂಢ||
     ಹೊಂದಾಣಿಕೆಯಿದ್ದಲ್ಲಿ ಸಂಬಂಧಗಳು ಚೆನ್ನಾಗಿರುತ್ತದೆ. ಸಂಬಂಧಗಳು ಚೆನ್ನಾಗಿದ್ದಲ್ಲಿ ಜೀವನ ಸಹನೀಯವೆನಿಸುತ್ತದೆ. ಸಂಬಂಧಗಳು ಹಾಳಾಗಲು ಕಾರಣಗಳೇನು ಎಂದು ವಿಶ್ಲೇಷಿಸುವುದು ಋಣಾತ್ಮಕ ಚಿಂತನೆಯಾಗುತ್ತದೆ. ಸಂಬಂಧಗಳು ಹಾಳಾಗದಿರಲು ಏನು ಮಾಡಬಹುದು ಎಂದು ಧನಾತ್ಮಕವಾಗಿ ನೋಡೋಣ. ಸಂಬಂಧಗಳು ಉಳಿಯಬೇಕೆಂದರೆ - ೧. ಸಂಬಂಧಗಳು ಇರಬೇಕು, ಉಳಿಯಬೇಕು, ಬೆಳೆಯಬೇಕು ಎಂಬ ಮನೋಭಾವ, ೨. ಕುಟುಂಬ ಎಂದರೆ ಕೇವಲ ಗಂಡ, ಹೆಂಡತಿ ಮತ್ತು ಮಕ್ಕಳು ಮಾತ್ರ ಎಂಬ ಸೀಮಿತ ಪರಿಧಿಯಿಂದ ಹೊರಬರುವುದು. ೩. ಕುಟುಂಬದ ಸದಸ್ಯರುಗಳಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಮನಸ್ತಾಪಗಳ ಸಂದರ್ಭಗಳು ಬಾರದಂತೆ ನೋಡಿಕೊಳ್ಳುವುದು, ೪. ತಾಳ್ಮೆ, ಸಹನೆಯಿಂದ ವರ್ತಿಸುವುದು, ಕೋಪತಾಪದ ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸದೆ ಸೂಕ್ತ ಸಮಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು, ೫. ಮೂರನೆಯ ವ್ಯಕ್ತಿಗಳು ಮೂಗು ತೂರಿಸಿ ಸಂಬಂಧಗಳನ್ನು ಕೆಡಿಸಲು ಅವಕಾಶ ಕೊಡಬಾರದು, ಅವರು ಹೇಳುವ ಮಾತುಗಳಲ್ಲಿ ನಿಜವಿದ್ದರೂ ಅದಕ್ಕೆ ಪ್ರಾಮುಖ್ಯತೆ ನೀಡದಿರುವುದು, ೬. ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಬರಲು ಸಂಬಂಧಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು, ಆದರೆ ನಮಗಿಂತ ಚೆನ್ನಾಗಿರುವ ಸಂಬಂಧಿಗಳ ಕುರಿತು ಹೊಟ್ಟೆಕಿಚ್ಚು ಪಡದೆ, ಉತ್ತಮ ಸ್ಥಿತಿಯಲ್ಲಿರದವರನ್ನು ಕಡೆಗಣಿಸದೆ ಇರುವ ಮನೋಭಾವ ಇರಬೇಕು. ನಾವು ದೊಡ್ಡವರಾಗಲು ಇತರರನ್ನು ಚಿಕ್ಕವರಾಗಿ ಬಿಂಬಿಸಬೇಕಿಲ್ಲ. ನಾವು ದೊಡ್ಡತನದಿಂದ ವರ್ತಿಸಬೇಕಷ್ಟೆ. ೭. ಮಾತುಕತೆಗಳಲ್ಲಿ ಸಂಯಮವಿರಬೇಕು. ವ್ಯಕ್ತಿಗಳನ್ನು ಮುದುಕ, ಮುದುಕಿ, ಕುಂಟ, ಕುರುಡ, ಕುಳ್ಳ, ಲಂಬು, ಪೆದ್ದ, ಹುಚ್ಚ, ಇತ್ಯಾದಿ ವಿಶೇಷತೆಗಳನ್ನು ಜೋಡಿಸಿ ಎದುರಿನಿಂದಾಗಲೀ, ಹಿಂದಿನಿಂದಾಗಲೀ ಸಂಬೋಧಿಸಬಾರದು. ಇತರರ ಅಭಿಪ್ರಾಯಗಳನ್ನು ಅವು ನಮಗೆ ಸರಿಯೆನಿಸದಿದ್ದರೂ ಗೌರವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಎದುರಿಗಿಲ್ಲದ ವ್ಯಕ್ತಿಗಳ ಬಗ್ಗೆ ಸಹ ಹಗುರವಾಗಿ ಮಾತನಾಡಬಾರದು. ಒಂದಲ್ಲಾ ಒಂದು ಸಂದರ್ಭದಲ್ಲಿ ಆ ಮಾತು ಅವರಿಗೆ ತಲುಪುತ್ತದೆ ಹಾಗೂ ಅದರಿಂದ ಮಾತನಾಡಿದವರು ಸಣ್ಣವರಾಗುತ್ತಾರೆ ಎಂಬ ಅರಿವಿರಬೇಕು.  ೮. ತಮ್ಮದು ತಪ್ಪು ಎಂದು ಕಂಡುಬಂದರೆ ಹಿಂಜರಿಕೆ ತೋರದೆ ಒಪ್ಪಿಕೊಂಡು ಸರಿಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದು, ೯. ಸಂಬಂಧಗಳನ್ನು ಕೆಡಿಸುವವರಿಂದ ದೂರವಿರುವುದು, ೧೦. ಯಾರನ್ನೂ ದೂರದಿರುವುದು, ಯಾರಿಗೂ ಕೇಡೆಣಿಸದಿರುವುದು, . . ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇದರಲ್ಲಿನ ಒಂದೊಂದು ಅಂಶಗಳ ಕುರಿತೂ ಸ್ವವಿಮರ್ಶೆ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೆ ಅವಶ್ಯವಾಗಿದೆ.
     'ಬಾಳು, ಬಾಳಗೊಡು' ಎಂದ ಮಹಾವೀರ, 'ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು' ಎಂದ ಏಸುಕ್ರಿಸ್ತ, 'ಇವನಾರವ, ಇವನಾರವ ಎಂದೆಣೀಸದಿರಯ್ಯ, ಇವ ನಮ್ಮವನೆಂದೆಣಿಸಯ್ಯ' ಎಂದ ಬಸವಣ್ಣ,  'ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು' ಎಂದ ಸರ್ವಜ್ಙನೇ ಮುಂತಾದ ದಾರ್ಶನಿಕರು, ಸಂತರು ಒತ್ತಿ ಹೇಳುವುದು ಒಂದೇ ವಿಷಯ - ಮನುಷ್ಯನಿಗೆ ಇರಬೇಕಾಧ ಹೊಂದಾಣಿಕೆಯ ಮನೋಭಾವ. ನಮ್ಮದು ತಪ್ಪಿದ್ದರೆ ತಿದ್ದಿಕೊಂಡು ನಡೆಯೋಣ. ಇತರರ ತಪ್ಪನ್ನು ಕ್ಷಮಿಸೋಣ. ಕ್ಷಮಿಸುವ ಮನೋಭಾವ ದೈವತ್ವದ ಗುಣ.      ಸ್ವಾಮಿ ವಿವೇಕಾನಂದರ ಈ ವಾಣಿಯನ್ನುನೆನಪಿನಲ್ಲಿಡೋಣ:
          Doing good to others is virtue (Dharma); injuring others is sin. Strength and manliness are virtue; weakness and cowardice are sin. Independence is virtue; dependence is sin. Loving others is virtue; hating others is sin. Faith in God and one’s own Self is virtue; doubt is sin. Know that talking ill of others in private is a sin. You must wholly avoid it. Many things may occur to the mind, but it gradually makes a mountain of a molehill if you try to express them. Everything is ended if you forgive and forget.”
     ಆದ್ದರಿಂದ ಮರೆಯೋಣ; ಮರೆತು ಚೆನ್ನಾಗಿರೋಣ.