ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಡಿಸೆಂಬರ್ 23, 2011

ಸಸ್ಯಾಹಾರ ಮತ್ತು ಹಿಂದೂಧರ್ಮ

     ಇತ್ತೀಚೆಗೆ ಎರಡು ಪ್ರಶ್ನೆಗಳನ್ನು ಕೇಳಲಾಯಿತು: ಹಿಂದುತ್ವ ದೇವರನ್ನು ನಂಬಬೇಕೆಂದು ಬಯಸುತ್ತದೆಯೇ? ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ?
     ಮೊದಲನೆಯ ಪ್ರಶ್ನೆಗೆ ಸಂಬಂಧಿಸಿದಂತೆ, ನಾನು ಹಿಂದುತ್ವ ಎಂದರೇನು ಮತ್ತು ಯಾರು ನಿಜವಾಗಿಯೂ ಹಿಂದು ಎಂಬ ಕುರಿತು ಚರ್ಚಿಸಿದ್ದೇನೆ. ಸಾರಾಂಶ ರೂಪದಲ್ಲಿ ಹೇಳಬೇಕೆಂದರೆ, ಹಿಂದುತ್ವ ಎನ್ನುವುದು ಸನಾತನ ಧರ್ಮ ಮತ್ತು ಆ ಧರ್ಮ ಅನಾದಿ ಕಾಲದ್ದು - ಅದು ಮೋಕ್ಷ ಸಂಪಾದನೆಯ ಮಾರ್ಗ ಹುಡುಕುವುದನ್ನು ಒಳಗೊಂಡಿದೆ. ಆದ್ದರಿಂದ ಯಾರು ಮೋಕ್ಷ ಬಯಸುತ್ತಾರೋ ಅವರು- ಅವರು ಯಾವ ರಾಷ್ಟ್ರೀಯರು, ಜಾತಿಯವರು, ಜನಾಂಗದವರು ಅಥವ ಲಿಂಗದವರು ಎಂಬ ಭೇಧವಿಲ್ಲದೆ- ನಿಜವಾದ ಹಿಂದು. ಆ ರೀತಿಯ ವಿಶಾಲ ಮನೋಭಾವದ ತಿಳುವಳಿಕೆಯಲ್ಲಿ ಹಿಂದುತ್ವ ಅನ್ನುವುದು ಜೀವನದ ರೀತಿ ಆಗುತ್ತದೆ, ಏಕೆಂದರೆ ಜೀವನದ ಮುಖ್ಯ ಉದ್ದೇಶದ ಹುಡುಕಾಟವೇ ಹಿಂದೂ ಜೀವನದ ಗುರಿ.
     ಮೇಲಿನ ಹಿನ್ನೆಲೆಯಲ್ಲಿ, ಎಲ್ಲಾ ಇತರ ಪ್ರಶ್ನೆಗಳನ್ನು, ಹಿಂದುತ್ವ ಸಸ್ಯಹಾರಿಯಾಗಿರಬೇಕೆಂದು ಬಯಸುತ್ತದೆಯೇ ಎಂಬ ಪ್ರಶ್ನೆ ಸೇರಿದಂತೆ, ಬಿಡಿಸಲು ಸುಲಭವೆನಿಸುತ್ತದೆ. ಜೀವನದ ಉದ್ದೇಶ ಮುಕ್ತಿ ಅಥವ ಮೋಕ್ಷವನ್ನು ಪಡೆಯುವುದಾದ್ದರಿಂದ ಅದನ್ನು ಪಡೆಯುವವರೆಗೆ ನಾವು ಬದುಕಿರಬೇಕು. ಸಾವು ಮಾತ್ರ ಮಾನಸಿಕ ಜಾಗೃತಿಯಾದಾಗ ಬರುವ ನಾನತ್ವದ ಸಾವು ತರಬಲ್ಲದು. ಆದ್ದರಿಂದ ದೇಹವನ್ನು ಸಧೃಢವಾಗಿ ಇಟ್ಟುಕೊಳ್ಳುವುದು ನಮ್ಮ ಧರ್ಮ. ಅದರ ಅರ್ಥ ಬದುಕಲಿಕ್ಕಾಗಿ ತಿನ್ನಬೇಕು (ಇನ್ನೊಂದು ರೀತಿಯಲ್ಲಿ ಅಲ್ಲ - ತಿನ್ನುವ ಸಲುವಾಗಿ ಬದುಕುವುದು!)
     ಜೀವನ ಜೀವದ ಮೇಲೆ ಜೀವಿಸಿದೆ. ಅದು ಪ್ರಕೃತಿಯ ನಿಯಮ. ನಾನು ಒಂದು ಪ್ರಾಣಿಯನ್ನು ತಿನ್ನುತ್ತೇನೋ ಅಥವ ಒಂದು ಸಸ್ಯವನ್ನು ತಿನ್ನುತ್ತೇನೋ, ಒಟ್ಟಿನಲ್ಲಿ ಒಂದು ಜೀವವನ್ನು ನಾಶಪಡಿಸಿದಂತೆಯೇ. ಎಲ್ಲಾ ಬಗೆಯ ಜೀವಮಾತ್ರರಲ್ಲಿ ಮಾನವ ಇತರ ಜೀವಿಗಳಿಗಿಂತ ಭಿನ್ನ. ಅವನಿಗೆ ಒಳ್ಳೆಯದು ಯಾವುದು, ಕೆಟ್ಟದು ಯಾವುದು ಎಂದು ತುಲನೆ ಮಾಡುವ ಶಕ್ತಿಯಿದೆ. ಅದು ಅವನಿಗೆ ಆಯ್ಕೆಯ ಸ್ವಾತಂತ್ರ್ಯವನ್ನೂ ಕೊಟ್ಟಿದೆ. ಸಸ್ಯಗಳು ಕೇವಲ ದೇಹ ಮತ್ತು ಬಹುಷಃ ಪ್ರಾರಂಭಿಕ ಹಂತದ ಮನಸ್ಸು ಹೊಂದಿರಬಹುದು. ಪ್ರಾಣಿಗಳು ದೇಹ ಮತ್ತು ಭಾವನೆಗಳು ಹಾಗೂ ನೋವನ್ನು ವ್ಯಕ್ತಪಡಿಸುವ ಮನಸ್ಸು ಹೊಂದಿರುವುದರ ಜೊತೆಗೆ ಪ್ರಾರಂಭಿಕ ಹಂತದ ಬುದ್ಧಿಶಕ್ತಿ ಹೊಂದಿರಬಹುದು. ಮಾನವ ದೇಹ ಮಾತ್ರವಲ್ಲ, ಮನಸ್ಸು ಮತ್ತು ಪರಿಶೀಲಿಸುವ, ನಿರ್ಧರಿಸುವ ಮತ್ತು ಆಯ್ಕೆ ಮಾಡುವ ಉತ್ತಮ ಬೆಳವಣಿಗೆ ಹೊಂದಿದ ಬುದ್ಧಿಶಕ್ತಿಯನ್ನೂ ಹೊಂದಿದ್ದಾನೆ. ಅವನಿಗೆ ಯಾವಾಗಲೂ ಮೂರು ಅವಕಾಶಗಳಿವೆ - 'ಕರ್ತುಂ ಶಖ್ಯಂ, ಅಕರ್ತುಂ ಶಖ್ಯಂ ತಥಾ ಅನ್ಯಥಾ ಕರ್ತುಂ ಶಖ್ಯಂ' - ಅವನು ಬೇಕೆಂದರೆ ಮಾಡಬಹುದು, ಮಾಡದಿರಬಹುದು ಮತ್ತು ಬೇರೆ ರೀತಿಯಲ್ಲಿ ಮಾಡಬಹುದು. ಪ್ರಾಣಿಗಳಿಗೆ ಮತ್ತು ಸಸ್ಯಗಳಿಗೆ ಆಯ್ಕೆಯ ಸ್ವಾತಂತ್ರ್ಯವಿರುವುದಿಲ್ಲ. ಅವು ಸಹಜ ರೀತಿಯಲ್ಲಿ ವರ್ತಿಸುತ್ತವೆ. ಹಸು ಊಟದ ಮುಂದೆ ಕುಳಿತು ತಾನು ಸಸ್ಯಹಾರಿಯಾಗಿರಬೇಕೋ ಅಥವ ಮಾಂಸಾಹಾರಿಯಾಗಿರಬೇಕೋ ಎಂದು ವಿಚಾರಿಸುತ್ತಾ ಕುಳಿತುಕೊಳ್ಳುವುದಿಲ್ಲ. ಅದೇ ರೀತಿ ಹುಲಿ ಸಹಾ. ಮನುಷ್ಯನಿಗೆ ಅಂತಹ ವಿವೇಚಿಸುವ ಬುದ್ಧಿ, ಶಕ್ತಿ ಇದೆ. ಸಸ್ಯಗಳು ಮತ್ತು ಪ್ರಾಣಿಗಳು ತಮ್ಮ ಕ್ರಿಯೆಗಳಲ್ಲಿ ಪಾಪ ಮಾಡುವುದಿಲ್ಲ, ಏಕೆಂದರೆ ಅವುಗಳ ಕ್ರಿಯೆಗಳಲ್ಲಿ ಇಚ್ಛಾಶಕ್ತಿ ಇರುವುದಿಲ್ಲ. ಆದರೆ ಮನುಷ್ಯನ ವಿಷಯದಲ್ಲಿ ಕಥೆಯೇ ಬೇರೆ. ನಿಮಗೆ ಈ ಚರ್ಚೆಯಲ್ಲಿ ಪಾಪವನ್ನು ಏಕೆ ತಂದೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಇರಲಿ, ವಿವರಿಸುತ್ತೇನೆ.
     ಪಾಪ ಎಂಬುದು ಮನಸ್ಸಿನ ತುಮುಲಗಳೇ ಹೊರತು ಮತ್ತೇನೂ ಅಲ್ಲ. ಈ ತುಮುಲಗಳೇ ಮೋಕ್ಷದೆಡೆಗಿನ ನನ್ನ ಪ್ರಯಾಣವನ್ನು ಅಡ್ಡಿಪಡಿಸುವುದು. ನಾನು ಸತ್ಯವನ್ನು ಸತ್ಯವಾಗೇ ಕಾಣಲು ಮನಸ್ಸು ಶುದ್ಧವಾಗಿರಬೇಕು (ಅಂದರೆ ತುಮುಲಗಳಿರಬಾರದು). (ಬೈಬಲ್ ಸಹ ಯಾರ ಮನಸ್ಸುಗಳು ಶುದ್ಧವಾಗಿದೆಯೋ ಅವರು ಅನುಗ್ರಹಿತರು ಎಂದು ಹೇಳುತ್ತದೆ.) ಪಾಪವನ್ನು ಹೆಚ್ಚು ವೈಜ್ಞಾನಿಕವಾಗಿ ವಿವರಿಸಬೇಕೆಂದರೆ - ಅದು ಮನಸ್ಸು ಮತ್ತು ಬುದ್ಧಿಶಕ್ತಿಗಳಲ್ಲಿನ ಅಂತರ. ಬುದ್ಧಿಶಕ್ತಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಗೊತ್ತಿರುತ್ತದೆ - ಆದರೂ ನಮಗೆ ತಪ್ಪೆಂದು ಗೊತ್ತಿದ್ದರೂ ಅದನ್ನೇ ಮಾಡುವಂತೆ ಆಗುತ್ತದೆ - ಅಂದರೆ ಬುದ್ಧಿಶಕ್ತಿ ಒಂದು ಹೇಳುತ್ತದೆ, ಆದರೆ ಬುದ್ಧಿಶಕ್ತಿ ಹೇಳಿದಂತೆ ಕೇಳಬೇಕಾದ ಮನಸ್ಸು ಬಂಡೆದ್ದು ತನಗೆ ಬೇಕಾದಂತೆ ಮಾಡುತ್ತದೆ. ಈ ಅಂತರವೇ ಪಾಪ. ಆ ರೀತಿ ಮಾಡಿದ ನಂತರ ಏನೋ ತಪ್ಪು ಮಾಡಿದ ಭಾವ ಮೂಡುತ್ತದೆ, ಏಕೆಂದರೆ ಬುದ್ಧಿಶಕ್ತಿ ತಾನು ಸೋತಿದ್ದರೂ ಸುಮ್ಮನಿರುವುದಿಲ್ಲ, ಅದು ನಾನು ಅದು ತಪ್ಪು ಎಂದು ಹೇಳಿದೆ. ಆದರೂ ಅದನ್ನು ಏಕೆ ಮಾಡಿದೆ? ಎಂದು ಚುಚ್ಚುತ್ತಲೇ ಇರುತ್ತದೆ. ಮನಸ್ಸಿನ ಶಾಂತಿ ಹೋದ ಮೇಲೆ ಮನುಷ್ಯನಿಗೆ ನರಕದ ಅನುಭವವಾಗುತ್ತದೆ. ಮನುಷ್ಯ ಪಾಪಕ್ಕಾಗಿ ಶಿಕ್ಷಿಸಲ್ಪಡುವುದಿಲ್ಲ, ಪಾಪದಿಂದ ಶಿಕ್ಷಿಸಲ್ಪಡುತ್ತಾನೆ. ಅದರ ಕುರಿತು ಚಿಂತಿಸಿ.
     ಎಲ್ಲಾ ಯೋಗಗಳೂ, ನೀವು ಸ್ಪಷ್ಟವಾಗಿ ವಿಮರ್ಶಿಸಿದರೆ, ದೇಹ, ಮನಸ್ಸು ಮತ್ತು ಬುದ್ಧಿಶಕ್ತಿಯನ್ನು ಒಗ್ಗೂಡಿಸುವ ಕ್ರಿಯೆಗಳೇ ಆಗಿವೆ. ಒಬ್ಬ ಯೋಗಿಗೆ - ಆತ ಏನು ಯೋಚಿಸುತ್ತಾನೆ, ಏನು ಮಾತನಾಡುತ್ತಾನೆ ಮತ್ತು ಏನು ಮಾಡುತ್ತಾನೆ ಎಲ್ಲವೂ ಒಂದೇ ರೀತಿಯದಾಗಿರುತ್ತದೆ, ಹೊಂದಾಣಿಕೆಯಿರುತ್ತದೆ (ಮನಸಾ -ವಾಚಾ - ಕರ್ಮಣಾ). ನಮ್ಮ ವಿಷಯದಲ್ಲಿ, ನಾವು ಯೋಚಿಸುವುದೇ ಒಂದು, ಆದರೆ ನಾವು ಏನು ಯೋಚಿಸುತ್ತೇವೆಯೋ ಅದನ್ನು ಹೇಳುವ ಧೈರ್ಯವಿರುವುದಿಲ್ಲ, ನಮ್ಮ ತುಟಿಗಳು ನಾವು ಯೋಚಿಸಿದ್ದಕ್ಕಿಂತ ಭಿನ್ನವಾಗಿ ಬೇರೇನನ್ನೋ ಹೇಳುತ್ತವೆ; ನಾವು ಆಡಿದ ಮಾತು ಮತ್ತು ನಂತರ ನಾವು ಮಾಡುವ ಕೆಲಸ, ಮತ್ತೆ ಅಲ್ಲಿ ವ್ಯತ್ಯಾಸ! - ಎಲ್ಲೂ ಸಮನ್ವಯತೆ ಇಲ್ಲವೇ ಇಲ್ಲ. ನಾವು ಗೊಂದಲದ ಜೀವನ ನಡೆಸುತ್ತಿದ್ದೇವೆ. ನಾವು ಇನ್ನೊಬ್ಬರನ್ನು ಮೋಸ ಮಾಡುವುದರ ಜೊತೆಗೆ ಇನ್ನೂ ಶೋಚನೀಯವೆಂದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತಿದ್ದೇವೆ, ಮತ್ತೂ ಶೋಚನೀಯವೆಂದರೆ ನಮಗೆ ಅದರ ಅರಿವೇ ಬರುವುದಿಲ್ಲ!
     ಈಗ ಒಂದು ಹುಲಿ ಬೇಟೆಯಾಡಿ ತಿಂದರೆ ಅದು ಪಾಪ ಮಾಡಿದಂತೆ ಆಗುವುದಿಲ್ಲ. ಏಕೆಂದರೆ ಅದರ ಬುದ್ಧಿಶಕ್ತಿ ಪ್ರಾರಂಭಿಕ ಹಂತದಲ್ಲಿದ್ದು, ಅದು ಕೊಲ್ಲುವ ಮುನ್ನ - ಕೊಲ್ಲಬೇಕೋ ಅಥವಾ ಬೇಡವೋ, ನಾನು ಮಾಂಸಾಹಾರಿಯಾಗಿರಬೇಕೋ ಅಥವ ಸಸ್ಯಾಹಾರಿಯಾಗಿರಬೇಕೋ - ಎಂದು ವಿಮರ್ಶಿಸುತ್ತಾ ಕೂರುವುದಿಲ್ಲ. ಅದಕ್ಕೆ ಹಸಿವಾದಾಗ, ಪ್ರಾಕೃತಿಕ ಬೇಡಿಕೆ ಈಡೇರಿಸಿಕೊಳ್ಳಲು ತನ್ನ ಬೇಟೆಯನ್ನು ಕೊಲ್ಲುತ್ತದೆ ಮತ್ತು ತಿನ್ನುತ್ತದೆ ಮತ್ತು ಅಗತ್ಯವಿರುವಷ್ಟು ತಿಂದ ನಂತರ ಉಳಿದುದನ್ನು ಬಿಡುತ್ತದೆ. ಅದಕ್ಕೆ ಹೊಟ್ಟೆಬಾಕತನ ಇಲ್ಲ. ಅದು ಅದರ ಸ್ವಧರ್ಮ. ಅದು ಸುಂದರ ಪರಿಸರ ವ್ಯವಸ್ಥೆಯನ್ನು ಪಾಲಿಸುತ್ತದೆ. ಮನುಷ್ಯನೊಬ್ಬ ಮಾತ್ರ ತನ್ನ ಹೊಟ್ಟೆಬಾಕತನದಿಂದ ಪರಿಸರ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾನೆ. ನಾನು ಸಸ್ಯಾಹಾರಿಯಾಗಿರಬೇಕೆ ಅಥವ ಮಾಂಸಾಹಾರಿಯಾಗಬೇಕೆ? ಎಂಬ ಪ್ರಶ್ನೆ ಅವನೊಬ್ಬನಿಂದ ಮಾತ್ರ ಬರಲು ಸಾಧ್ಯ. ಆ ಪ್ರಶ್ನೆ ಏಕೆ ಬರುತ್ತದೆ? ಏಕೆಂದರೆ ಅವನಿಗೆ ವಿವೇಚನೆ ಮಾಡುವ ಬುದ್ಧಿಶಕ್ತಿ ಇದೆ ಮತ್ತು ಅವನು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಇತರರನ್ನು ನೋಯಿಸಲು ಬಯಸದಿರುವುದರಿಂದ. ಆತನಿಗೆ ನೋವು ಎಂದರೆ ಏನೆಂದು ಗೊತ್ತಿದೆ, ಏಕೆಂದರೆ ಆತ ಇತರರು ಅವನಿಗೆ ನೋವುಂಟುಮಾಡಬಾರದೆಂದು ಬಯಸುತ್ತಾನೆ. ಸಸ್ಯಗಳೂ ಸಹ ಜೀವಿಗಳೇ, ಅವುಗಳಿಗೆ ನೋವುಂಟು ಮಾಡಬಹುದೇ? ಎಂದು ನೀವು ಕೇಳಬಹುದು. ಯಾವುದೇ ಜೀವ ವೈವಿಧ್ಯಕ್ಕೆ ಹಾನಿಯುಂಟು ಮಾಡದೆ ಬದುಕಲು ಸಾಧ್ಯವಿದ್ದರೆ ಅದು ಅತ್ಯುತ್ತಮ, ಆದರೆ ಅದು ಸಾಧ್ಯವಿಲ್ಲ. ಜೀವನ ಜೀವದ ಮೇಲೆ ಜೀವಿಸಿದೆ - ಅದು ಪ್ರಕೃತಿಯ ನಿಯಮ. ವಿವೇಚನಾಶಕ್ತಿಯುಳ್ಳ ಮನುಷ್ಯನಾಗಿ ನನ್ನ ಪಾತ್ರವೆಂದರೆ ನಾನು ಬದುಕಿರುವ ಸಲುವಾಗಿ ಪ್ರಕೃತಿಗೆ ಕನಿಷ್ಠ ಹಾನಿಯಾಗುವಂತೆ ನೋಡಿಕೊಳ್ಳುವುದು. ಸಸ್ಯಗಳ ನೋವಿನ ಬಗ್ಗೆ ನನಗೆ ಸ್ಪಷ್ಟ ತಿಳುವಳಿಕೆಯಿಲ್ಲ. ಆದ್ದರಿಂದ ಬದುಕಲಿಕ್ಕಾಗಿ ತಿನ್ನುವುದು ಮತ್ತು ತಿನ್ನಲಿಕ್ಕಾಗಿ ಬದುಕದಿರುವುದು ನಿರ್ಣಾಯಕ ಅಂಶವಾಗುತ್ತದೆ.
      ಭಗವದ್ಗೀತೆಯಲ್ಲಿ ಕೃಷ್ಣ ಒತ್ತಿ ಹೇಳುವುದೇನೆಂದರೆ ಒಬ್ಬ ಸಾಧಕ (ಮೋಕ್ಷಕ್ಕಾಗಿ ಹಂಬಲಿಸುವವನು) ಎಲ್ಲಾ ಜೀವಿಗಳ ವಿಷಯದಲ್ಲಿ ಅನುಕಂಪ ಹೊಂದಿರಬೇಕೆಂದು (ಸರ್ವ ಭೂತ ಹಿತೇರಥಾಃ). ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಬುದ್ಧಿಶಕ್ತಿ ಹರಿತವಾಗುತ್ತಾ ಹೋಗುತ್ತದೆ - ತೀಕ್ಷ್ಣ ಬುದ್ಧಿ ಸೂಕ್ಷ್ಮ ಬುದ್ಧಿಯಾಗುತ್ತಾ ಹೋಗುತ್ತದೆ. ಅಂದರೆ, ಮನಸ್ಸು ತಳಮಳರಹಿತ, ಶಾಂತ ಮತ್ತು ಸ್ವ-ನಿಯಂತ್ರಿತವಾಗುತ್ತದೆ. ಇತರರ ನೋವುಗಳಿಗೆ ಸ್ಪಂದಿಸುವ ಗುಣ ಸಹ ಬೆಳೆಯುತ್ತಾ ಹೋಗುತ್ತದೆ. ಆದ್ದರಿಂದ ಸಸ್ಯಾಹಾರಿಯಾಗುವುದು ಸೂಕ್ತ.
     ಸಾಂಪ್ರದಾಯಿಕ ಮಾಂಸಾಹಾರಿಗಳೂ ಸಹ ನಾಯಿಗಳು ಮತ್ತು ಬೆಕ್ಕುಗಳು ಅಥವ ಇತರ ಮಾನವ ಪ್ರಾಣಿಗಳನ್ನು ತಿನ್ನಲು ಇಷ್ಟಪಡುವುದಿಲ್ಲ! ಏಕೆ? ಎಷ್ಟೇ ಆದರೂ ಮಾಂಸ ಅಂದರೆ ಮಾಂಸವೇ! ಆದರೆ ಬಳಕೆಯಿಂದ ಅನುಕಂಪ ಬೆಳೆದಿರುತ್ತದೆ. ಮಾನವನನ್ನೇ ಹೋಲುವ ಆದರೆ ಪ್ರಾರಂಭಿಕ ಬುದ್ಧಿಶಕ್ತಿ ಹೊಂದಿರುವ ಹಲವು ಎರಡು ಕಾಲಿನ ಪ್ರಾಣಿಗಳಿವೆ. ಅವು ಪ್ರಾಣಿಗಳಂತೆ ವರ್ತಿಸುತ್ತವೆ. ಆದರೆ ವಿಕಸನವಾಗುತ್ತಾ ಹೋದಂತೆ ಅವುಗಳ ಬುದ್ಧಿಶಕ್ತಿ ಬೆಳೆಯುತ್ತಾ ಹೋಗುತ್ತದೆ ಎಂಬುದನ್ನು ಗಮನಿಸಿದರೆ ಪ್ರಕೃತಿಯಿಂದ ಎಷ್ಟು ಬೇಕೋ ಅಷ್ಟನ್ನು ಪಡೆದು ಸಸ್ಯಾಹಾರಿಯಾಗಿರುವುದು ಸೂಕ್ತವೆನಿಸುತ್ತದೆ. ಕೇವಲ ನಾಲಗೆಯ ಚಪಲವನ್ನು ತೃಪ್ತಿ ಪಡಿಸುವ ಸಲುವಾಗಿ ಯಾವುದೇ ಜೀವವಿಧಗಳನ್ನು ಘಾಸಿಗೊಳಿಸಬಾರದು.
     ಹಿಂದೂ ಒಬ್ಬ ಸಸ್ಯಾಹಾರಿಯಾಗಿರಬೇಕೇ? ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಾಗಲೇ ಉದ್ಭವಿಸಿರಬಹುದು, ನಿಮ್ಮ ಹೊಟ್ಟೆಯನ್ನು ತೃಪ್ತಿಪಡಿಸಲು ಇತರ ಜೀವಗಳನ್ನು ನೋಯಿಸಬಾರದೆಂಬ ಸೂಕ್ಷ್ಮತೆ ನಿಮಗೆ ಇದೆಯೆಂದು ಭಾವಿಸುವೆ. ಹಾಗಿದ್ದಲ್ಲಿ ನೀವು ಮಾಂಸಾಹಾರದಿಂದ ದೂರವಿರುವುದು ಉತ್ತಮ ಮತ್ತು ಆಗ ನೀವು ನಿಮ್ಮ ಬುದ್ಧಿಶಕ್ತಿಯೊಂದಿಗೆ ಶಾಂತವಾಗಿರಬಹುದು. ನೀವು ಸೂಕ್ಷ್ಮ ಭಾವನೆಯುಳ್ಳವರಾಗಿದ್ದರೆ, ನಿಮ್ಮ ಬುದ್ಧಿಶಕ್ತಿ ಹೇಳುವುದೇ ಒಂದಾದರೆ ಮತ್ತು ನಿಮ್ಮ ಮನಸ್ಸು ಕೆಳ ಸಂತೋಷಗಳನ್ನು ಬಯಸಿ ಬೇರೆ ದಾರಿಯಲ್ಲಿ ನಿರ್ದೇಶಿಸಿದರೆ ಮತ್ತು ನೀವು ನಿಮ್ಮ ಬುದ್ಧಿ ಹೇಳಿದ ದಾರಿ ಬಿಟ್ಟು ನಡೆದರೆ ನೀವು ಪಾಪ ಮಾಡಿದಂತೆ ಆಗುತ್ತದೆ. ಕೃಷ್ಣ ಹೇಳಿದಂತೆ ಅದು ನಿಮ್ಮ ಸ್ವಧರ್ಮದ ವಿರುದ್ಧವಾಗುತ್ತದೆ. ಜೊತೆಗೆ, ಈಗ ಸಾಂಪ್ರದಾಯಿಕ ಮಾಂಸಾಹಾರಿಗಳೂ ಸಸ್ಯಾಹಾರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಇತರ ಪ್ರಾಣಿಗಳ ಬಗ್ಗೆ ಅನುಕಂಪದಿಂದಲ್ಲ, ಆದರೆ ಅದು ತಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲವೆಂಬ ಕಾರಣಕ್ಕಾಗಿ.
     ನಾನಾಗಲೇ ತಿಳಿಸಿದ್ದೇನೆ, ಹಿಂದುತ್ವದಲ್ಲಿ ಹೀಗೆ ಮಾಡಿ ಮತ್ತು ಹೀಗೆ ಮಾಡಬೇಡಿ ಎಂಬುದಿಲ್ಲ, ಆದರೆ ನೀವು ನಿಮ್ಮ ಸ್ವಂತದ ಮಾಡಬಹುದಾದ ಮತ್ತು ಮಾಡಬಾರದ ಸಂಗತಿಗಳನ್ನು ನಿಮ್ಮ ಬುದ್ಧಿಶಕ್ತಿಯ ಮೌಲ್ಯ, ಸಂಸ್ಕೃತಿ, ಶಿಕ್ಷಣ ಮತ್ತು ಬದುಕಿನ ಪ್ರಾಥಮಿಕ ಗುರಿ ಆಧರಿಸಿ ನಿರ್ಧರಿಸಿಕೊಳ್ಳಿ. ನಿಮ್ಮ ಸ್ವಧರ್ಮವನ್ನು ನೀವು ಪಾಲಿಸುವುದರಿಂದ ನೀವು ನಿಮ್ಮೊಂದಿಗೆ ಸಮಾಧಾನದಿಂದಿರುವುದನ್ನು ಕಂಡುಕೊಳ್ಳುವಿರಿ. ಅದನ್ನು ಬೇರೆಯವರು ನಿರ್ಣಯಿಸುವುದಲ್ಲ, ನೀವೇ ನಿರ್ಣಯಿಸಿಕೊಳ್ಳುವುದು. ನೀವು ತಳಮಳಕ್ಕೆ ಒಳಗಾದಿರೆಂದರೆ ಅದರ ಅರ್ಥ ನೀವು ಅದರಿಂದ ಮನಸ್ಸಿನ ಶಾಂತಿ ಕಳೆದುಕೊಳ್ಳುತ್ತಿರುವಿರೆಂದು ಮತ್ತು ಅದೇ ಪಾಪ. ನಿಮ್ಮನ್ನು ನೀವೇ ನೀವು ತಿನ್ನುವ ಕೋಳಿ ಅಥವ ಹಸು ಎಂದಿಟ್ಟುಕೊಳ್ಳಿ. ನೀವು ನಿಮ್ಮನ್ನು ತಿನ್ನುವವರನ್ನು ಸಸ್ಯಾಹಾರಿಗಳಾಗಲು ಮತ್ತು ನಿಮ್ಮ ಜೀವ ಉಳಿಸಲು ಹೇಳುವುದಿಲ್ಲವೇ? ನೀವು ಪ್ರಾಣಿಯನ್ನು ನೀವೇ ಕೊಲ್ಲುತ್ತಿಲ್ಲವೆಂದೂ ಮತ್ತು ನೀವು ತಿಂದರೂ, ತಿನ್ನದಿದ್ದರೂ ಪ್ರಾಣಿಗಳು ಕೊಲೆಯಾಗುವುವು ಎಂದು ಹೇಳದಿರಿ. ನೀವು ತಿನ್ನದಿದ್ದರೆ ಒಂದು ಪ್ರಾಣಿ ಉಳಿಯುತ್ತದೆ. ಅದೇ ಬೇಡಿಕೆ ಮತ್ತು ಪೂರೈಕೆ. ನಾನು ಸ್ವತಃ ಕದಿಯದಿರಬಹುದು, ಆದರೆ ಕದ್ದ ಮಾಲನ್ನು ಅದು ಕದ್ದಮಾಲು ಎಂದು ಗೊತ್ತಿದ್ದೂ ಕೊಂಡರೆ, ಅದು ಅಪರಾಧ! ಅಲ್ಲವೇ? ಈಗ ಕೃತಕ ಮಾಂಸಗಳೂ ದೊರೆಯುತ್ತವೆ - ಆದ್ದರಿಂದ ಸತ್ತ ಮಾಂಸಕ್ಕೇಕೆ ಹಂಬಲಿಸಬೇಕು? ನಿಮ್ಮ ಹೊಟ್ಟೆಯನ್ನು ಸತ್ತ ಪ್ರಾಣಿಯ ಸ್ಮಶಾನವಾಗಬೇಕೆಂದು ಏಕೆ ಬಯಸುವಿರಿ?
     ಹಿಂದುತ್ವದ ದೃಷ್ಟಿಯಿಂದ ನೋಡಿದರೆ ಅದು ಇದನ್ನೆಲ್ಲಾ ಗಮನಿಸುವುದೇ ಇಲ್ಲ. ಅದು ಬಯಸುವುದೇನೆಂದರೆ ಸನಾತನ ಧರ್ಮದ ದಾರಿಯಲ್ಲಿ ನಡೆಯಬೇಕೆಂದಷ್ಟೆ. ಆದ್ದರಿಂದ ನಿಮ್ಮ ಮನಸ್ಸನ್ನು ಶಾಂತವಾಗಿ ಮತ್ತು ತಳಮಳರಹಿತವಾಗಿರುವಂತೆ ನೋಡಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡಿ. ಮನಸ್ಸಿನ ಶುದ್ಧತೆಯೇ ಮೋಕ್ಷ ಪಡೆಯುವ ದಾರಿ ಮತ್ತು ಅದು ಮಾನವ ಜೀವನದ ಗುರಿ. ನಾವು ಇಷ್ಟಪಟ್ಟು ಮಾಡಿದ ಕ್ರಿಯೆಗಳಿಂದ ಈ ಸಂಸಾರದ ಜಂಜಾಟಕ್ಕೆ ಸಿಲುಕಿದ್ದು, ನಾವು ಇಷ್ಟಪಟ್ಟು ಮಾಡುವ ಸಾಧನೆಯೊಂದೇ ಅದರಿಂದ ಹೊರಬರಲು ಸಾಧ್ಯ. ಭಗವಂತ ನಮಗೆ ಇದನ್ನು ಸಾಧಿಸಲು ಬುದ್ಧಿಶಕ್ತಿ ಕೊಟ್ಟಿದ್ದಾನೆ. ಕೃಷ್ಣ ಘೋಷಿಸಿದ್ದಾನೆ -ಪರಧರ್ಮಕ್ಕಿಂತ ಸ್ವಧರ್ಮದಲ್ಲಿ ಸಾಯುವುದು ಮೇಲು. ಸ್ವಧರ್ಮ (ಅದು ನೀವು ಯಾವ ಜಾತಿ ಅಥವ ಧರ್ಮಕ್ಕೆ ಸೇರಿರುವಿರಿ ಎಂಬುದಲ್ಲ) ಎಂದರೆ ಅಂತಿಮವಾಗಿ ನಿಮ್ಮ ಬುದ್ಧಿಶಕ್ತಿ ಅಥವ ಅಂತಃಸಾಕ್ಷಿ ಏನು ಹೇಳುತ್ತದೆಯೋ ಅದು. ಏಕೆಂದರೆ, ಕ್ರಿಯೆ ಮಾಡಿದ ನಂತರ ನಿಮ್ಮ ಮನಸ್ಸೇ ನಿಮ್ಮ ಬುದ್ಧಿಶಕ್ತಿಯೊಂದಿಗೆ ಲೆಕ್ಕ ಇತ್ಯರ್ಥ ಮಾಡಿಕೊಳ್ಳಬೇಕಿರುವುದು.
     ನಿಮಗೆ ನೀವೇ ಒಂದು ಉಪಕಾರ ಮಾಡಿಕೊಳ್ಳಿರಿ - ನಿಮಗೆ ಯಾವುದು ಅಗತ್ಯವಿದೆಯೋ ಅದನ್ನು ತಿನ್ನಿ ಮತ್ತು ಯಾವುದು ನಿಜವಾಗಿಯೂ ಅಗತ್ಯವಿಲ್ಲವೋ ಅದನ್ನು ಬಿಟ್ಟುಬಿಡಿ. ಆ ರೀತಿಯಲ್ಲಿ ನಿಮ್ಮ ಜೀವನವನ್ನು ಸರಳ, ಶಾಂತ ಮತ್ತು ಕಡಿಮೆ ಕೊಲೆಸ್ಟರಾಲ್ ನೊಂದಿಗೆ ಆರೋಗ್ಯವಂತವಾಗಿ ಮಾಡಿಕೊಳ್ಳಿ.
*********
ಮೂಲ ಇಂಗ್ಲಿಷ್ ಲೇಖಕರು: ಡಾ. ಕೆ. ಸದಾನಂದ, ವಾಷಿಂಗ್ಟನ್, ಡಿ.ಸಿ. ೨೦೩೭೫.
ಕನ್ನಡ ಅನುವಾದ :        ಕವಿ ನಾಗರಾಜ್.

4 ಕಾಮೆಂಟ್‌ಗಳು:

  1. ಶ್ರೀ ನಾಗರಾಜ್ ರವರೆ,

    ನಿಮ್ಮ ಲೇಖನಕ್ಕೆ ನನ್ನ ಅನಿಸಿಕೆ.


    ಬದುಕಲು ಆಹಾರ ಅವಶ್ಯಕ. ಹಿತವಾದ ಮಿತವಾದ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಇದು ಸಸ್ಯಹಾರವೋ ಮಾಂಸಹಾರವೋ ಎಂಬುದು ಇಲ್ಲಿನ ಪ್ರಶ್ನೆ. ಇಲ್ಲಿ ಧರ್ಮದ ಪ್ರಶ್ನೆ ಬೇಡ.

    ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರಗಳಲ್ಲಿ ಎಲ್ಲವು ನಮ್ಮ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತವೆ. ನಮ್ಮ ಬದುಕಿಗೆ ಇದು ಸಹಕಾರಿಯಾಗುತ್ತವೆ. ನಮ್ಮ ಆಯ್ಕೆಯಲ್ಲಿ ಯಾವುದು ಹಿತವೋ ಅದು ನಮ್ಮ ಬದುಕಿನ ದಾರಿಯಾಗುತ್ತದೆ. ಇದು ಸರಿ, ಇದು ತಪ್ಪು ಎಂದು ನಿರ್ಧಾರ ಮಾಡುವುದು ಆಹಾರದ ವಿಚಾರದಲ್ಲಿ ಸಲ್ಲ. ಆನೆಗೆ ಯಾವುದು ಹಿತವೋ ಅದು ಸಿಂಹಕ್ಕೆ ಹಿತವಾಗಬೇಕಿಲ್ಲ. ನಮಗೆ ಹಿತವಾದದ್ದು ಬೇರೊಬ್ಬರಿಗೆ ಅಹಿತವಾಗಬಹುದು. ಆದ್ದರಿಂದ ಆಹಾರದ ವಿಚಾರದಲ್ಲಿ ಅವರವರ ದೇಹ ಪ್ರಕೃತಿಯನ್ನು ಅನುಸರಿಸಿ ಬೇಕು ಬೇಡಗಳು ನಿರ್ಧಾರವಾಗುತ್ತದೆ. ಇಲ್ಲಿ ಒಂದನ್ನು ಸ್ಪಷ್ಟವಾಗಿ ಹೇಳಬಹುದು ಯಾವ ಆಹಾರವನ್ನೇ ಆದರು ಹಿತವಾಗಿ ಮಿತವಾಗಿ ಸೇವಿಸಿದರೆ ದೇಹಕ್ಕೆ, ಮನಸ್ಸಿಗೆ ಒಳ್ಳೆಯದು. "ಅಧಿಕಸ್ಯ ಅಮೃತಂ ವಿಷಂ".



    ವಂದನೆಗಳೊಂದಿಗೆ,

    ಪ್ರಕಾಶ್

    ಪ್ರತ್ಯುತ್ತರಅಳಿಸಿ
  2. ಈ ವಿಚಾರದಲ್ಲಿ ವೇದವು ಏನು ಹೇಳುತ್ತದೆ? ಇಲ್ಲಿ ನೋಡಿ
    http://agniveer.com/6122/no-beef-in-vedas-ka/
    ಕೊಂಡಿಯಲ್ಲಿರುವ ಲೇಖನದ ಒಂದು ಭಾಗ ಇಲ್ಲಿದೆ.
    [ಯಜುರ್ವೇದ ೧೪.೮
    ದ್ವಿಪಾದ ಹಾಗು ಚತುಷ್ಪಾದ ಜೀವಿಗಳನ್ನು ರಕ್ಷಿಸು
    ಕ್ರವಿದ - ಕ್ರವ್ಯ (ಕೊಂದ ನಂತರ ಬರುವ ಮಾಂಸ) + ಅದ (ತಿನ್ನುವವನು) = ಮಾಂಸ ತಿನ್ನುವವನು
    ಪಿಶಾಚ – ಪಿಸಿತ (ಮಾಂಸ) + ಅಶ (ತಿನ್ನುವವನು) = ಮಾಂಸ ತಿನ್ನುವವನು
    ಅಸುತೃಪ – ಅಸು (ಉಸಿರಾಡುವ ಜೀವಿ) + ತೃಪ (ತನ್ನನ್ನು ತಾನೆ ತೃಪ್ತಿಪಡಿಸಿ ಕೊಳ್ಳುವವನು) = ಇನ್ನೊಂದು ಜೀವಿಯನ್ನು ಆಹಾರಕ್ಕೆಂದು ಬಳಸುವವನು
    ಗರ್ಭದ ಮತ್ತು ಅಂಡದ – ಗರ್ಭವನ್ನು ಅಥವ ಮೊಟ್ಟೆಯನ್ನು ತಿನ್ನುವವನು
    ವೇದ ಲಿಪಿಗಳಲ್ಲಿ ಮಾಂಸ ತಿನ್ನುವವರನ್ನು ಯಾವಾಗಲು ನೀಚ ದೃಷ್ಟಿಯಿಂದ ನೋಡಲಾಗಿದೆ. ಮಾಂಸ ತಿನ್ನುವವರನ್ನು ರಾಕ್ಷಸ, ಪಿಷಾಚಿ, ಹಾಗು ಇತರೆ ಪ್ರೇತಗಳಿಗೆ ಸಮಾನಾರ್ಥಕವಾಗಿದೆ ಹಾಗು ಇವೆಲ್ಲರನ್ನು ನಾಗರೀಕ ಸಮಾಜದಿಂದ ಹೊರಗಿಡಿಸಲಾಗಿದೆ]

    ಇನ್ನು ನನ್ನ ಅಭಿಪ್ರಾಯ:
    ಮನುಷ್ಯನ ಶರೀರವು ಮಾಂಸಾಹಾರಮಾಡಲು ರಚಿತವಾಗಿಲ್ಲವೆಂಬ ಮಾತು ಕೇಳಿರುವೆ.
    ಸಸ್ಯಾಹಾರವನ್ನು ತಿಂದು ಜೀರ್ಣಿಸಿಕೊಳ್ಳಲು ಸಾಮರ್ಥ್ಯವೇ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಮಾಂಸಾಹರವನ್ನು ಈಗ ಉಪಯೋಗಿಸುತ್ತಿರುವವರೂ ಕೂಡ ತ್ಯಜಿಸುವ ಕಾಲ ದೂರವಿಲ್ಲ.
    ನಿರ್ಮಲ ಮನೋಭಾವಕ್ಕೆ ಸಾತ್ವಿಕ ಆಹಾರವೇ ಬೇಕು

    ಪ್ರತ್ಯುತ್ತರಅಳಿಸಿ
  3. ಆತ್ಮೀಯರಾದ ಪ್ರಕಾಶ್ ಮತ್ತು ಶ್ರೀಧರರಿಗೆ ವಂದನೆ. ಮೊದಲನೆಯದಾಗಿ ಇದು ಅನುವಾದಿತ ಲೇಖನವಾದ್ದರಿಂದ ನನ್ನ ಅಭಿಪ್ರಾಯ ವ್ಯಕ್ತನೆಗೆ ಅವಕಾಶವಿಲ್ಲ. ಸೇವಿಸುವ ಆಹಾರ (ಕೇಳುವುದು, ನೋಡುವುದು ಸಹ ಆಹಾರವೇ)ನಮ್ಮ ಸ್ವಭಾವದ ಮೇಲೆ ಪರಿಣಾಮ ಬೀರುವುದು ಎಂಬುದು ನನ್ನ ಅಭಿಪ್ರಾಯ.ಯಾವ ಆಹಾರ ಸೇವಿಸಬೇಕೆಂಬುದಕ್ಕೆ ಸೂಕ್ತ ಆಯ್ಕೆ ನಮ್ಮದೇ. ತಕ್ಕ ಫಲ ಪಡೆಯುವವರೂ ನಾವೇ!

    ಪ್ರತ್ಯುತ್ತರಅಳಿಸಿ