ರಸಭರಿತ ಫಲಮೂಲ ಕೊಂಬೆ ತಾನಲ್ಲ|
ಫಲಸತ್ವ ಸಾಗಿಪ ಮಾರ್ಗ ತಾನಹುದು||
ಮಾಡಿದೆನೆನಬೇಡ ನಿನ್ನದೆನಬೇಡ|
ಜಗವೃಕ್ಷರಸ ಹರಿದ ಕೊಂಬೆ ನೀನು ಮೂಢ||
ಕೊಂಬೆಯಲ್ಲಿ ಗೊಂಚಲು ಗೊಂಚಲಾಗಿ ಬಿಟ್ಟ ಫಲಗಳನ್ನು ಕಂಡು ಕೊಂಬೆ ತನ್ನಿಂದ ಈ ಫಲಗಳು ಎಂದು ಹೆಮ್ಮೆ ಪಡಬಹುದೇ? ಮರದ ಬೇರು, ವಿವಿಧ ಅಂಗಾಂಗಗಳು ನೆಲ, ಜಲ, ಗಾಳಿ, ಬೆಳಕುಗಳಿಂದ ಪಡೆದ ಸತ್ವಗಳು ಕೊಂಬೆಯ ಮೂಲಕ ಸಾಗಿ ರೂಪಿತವಾದುದೇ ಫಲ. ಅದಕ್ಕೆ ಕೊಂಬೆಯೂ ಸಹಕಾರಿ ಹೊರತು ಅದೇ ಮೂಲವಲ್ಲ. ಅದೇ ರೀತಿ ನಾವು ಏನನ್ನು ಮಾಡಿದ್ದೇವೆ, ಸಾಧಿಸಿದ್ದೇವೆ ಎಂದು ಅಂದುಕೊಳ್ಳುತ್ತೀವೋ ಅದಕ್ಕೆ ನಾವೂ ಕಾರಣರು ಎಂದಷ್ಟೇ ಹೇಳಿಕೊಳ್ಳಬಹುದು. ನಾವೇ ಕಾರಣರು ಎಂದು ಹೇಳಲಾಗದು. ನಾವು ವಾಹಕಗಳಷ್ಟೆ. ಎಂತಹ ವಾಹಕರು ಎಂಬುದು ನಮ್ಮಿಂದ ಆಗುವ ಕಾರ್ಯಗಳು ತೋರಿಸುತ್ತವೆ. ಒಳ್ಳೆಯ ವಾಹಕಗಳಾಗಿದ್ದಲ್ಲಿ ಒಳ್ಳೆಯ ಫಲಗಳು, ಕೆಟ್ಟದಾಗಿದ್ದಲ್ಲಿ ಕೊಳೆತ, ಕೆಟ್ಟ ಫಲಗಳು ಗೋಚರಿಸುತ್ತವೆ.
ಕಶ್ಮಲಭರಿತ ನೀರನ್ನು ಶುದ್ಧವಾದ ಪಾತ್ರೆಗೆ ಹಾಕಿದಾಕ್ಷಣ ನೀರು ಶುದ್ಧವಾಗುವುದಿಲ್ಲ. ಅದೇ ರೀತಿ ಶುದ್ಧವಾದ ನೀರನ್ನು ಕಶ್ಮಲಭರಿತ ಪಾತ್ರೆಗೆ ಹಾಕಿದರೆ ನೀರೂ ಅಶುದ್ಧವಾಗುತ್ತದೆ. ಆದ್ದರಿಂದ ನಾವು ಶುದ್ಧ ವಾಹಕಗಳಾಗಬೇಕೆಂದರೆ ಎಚ್ಚರಿಕೆಯಿಂದಿರಬೇಕು. ನಮ್ಮ ಆಹಾರ -ಅಂದರೆ, ಕೇವಲ ತಿನ್ನುವುದು, ಕುಡಿಯುವುದು ಮಾತ್ರ ಅಲ್ಲ ನೋಡುವುದು, ಕೇಳುವುದು, ಗ್ರಹಿಸುವುದು, ಇತ್ಯಾದಿಗಳೂ ಸೇರಿ- ಶುದ್ಧವಾಗಿರಬೇಕು. ಒಂದು ಉದಾಹರಣೆ ನೀಡಿದರೆ ಅರ್ಥವಾಗಬಹುದು. ಸ್ನೇಹಿತರೊಬ್ಬರ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಅವರ ೩ ವರ್ಷದ ಚಿಕ್ಕ ಮಗು ಒಬ್ಬರು ಹಿರಿಯರನ್ನು ಕುರಿತು 'ನೀನು ಪೆದ್ದ, ದಂಡ' ಎಂದಿತು. ಚಿಕ್ಕ ಮಗುವಾದ್ದರಿಂದ ಆ ಮಗುವಿನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಹಿರಿಯರು ಯಾವುದೋ ಕಾರಣಕ್ಕೆ ಹೊರಗೆ ಹೋದಾಗ ಅಲ್ಲಿದ್ದ ಮಗುವಿನ ಸಂಬಂಧಿಯೊಬ್ಬರು 'ಮಗು ಸರಿಯಾಗಿ ಹೇಳಿತು, ಬಿಡು, ಅವರು ಮಾಡುವುದೂ ಹಾಗೆಯೇ, ಇರುವುದೂ ಹಾಗೆಯೇ' ಎಂದರು. ಅಲ್ಲೇ ಕುಳಿತಿದ್ದ ಮಗು ಖುಷಿಯಿಂದ ಇದನ್ನು ಕೇಳಿಸಿಕೊಂಡಿತು. ಈ ಪ್ರಸಂಗ ನನ್ನನ್ನು ವಿಚಾರಕ್ಕೆ ದೂಡಿತು. ಹಿರಿಯರಿಗೂ ಆ ಸಂಬಂಧಿಗೂ ಅಷ್ಟಾಗಿ ಸರಿಯಿರಲಿಲ್ಲ. ಅದು ಮಗುವಿನ ಮೂಲಕ ಹೊರಬಿತ್ತು ಅಷ್ಟೆ. ಅವರು ಹಿರಿಯರ ಬೆನ್ನ ಹಿಂದೆ ಯಾವಾಗಲೋ ಆಡಿದ ಮಾತುಗಳನ್ನು ಮಗು ಪುನರುಚ್ಛರಿಸಿತ್ತಷ್ಟೆ. ಈಗ ಅವರು ಮಗು ಆಡಿದ ಮಾತನ್ನು ಅನುಮೋದಿಸಿ ಆಡಿದ ಮಾತಿನಿಂದ ಮಗುವಿಗೆ ತಾನು ಮಾಡಿದ್ದು ಸರಿ ಎಂದು ಶಹಭಾಸಗಿರಿ ಕೊಟ್ಟಂತಾಯಿತು. ಮಗು ಮುಂದೆ ಇಂತಹ ಮಾತುಗಳನ್ನು ಇನ್ನೂ ಹೆಚ್ಚು ಹೆಚ್ಚಾಗಿ ಆಡಲು ಪ್ರೇರೇಪಿಸಿದಂತೆ ಆಯಿತು. ಕಲುಷಿತ ಭಾವನೆಯನ್ನು ವಾಹಕರಾಗಿ ಅವರು ಆ ಮಗುವಿಗೂ ಹರಿಸಿದರಲ್ಲವೇ? ಇದು ಸರಿಯೇ? ಮಕ್ಕಳು ನಿಷ್ಕಲ್ಮಷವಾದ ಪಾತ್ರೆಯಿದ್ದಂತೆ. ಆ ಪಾತ್ರೆಗೆ ಕಲ್ಮಷಗಳನ್ನು ತುಂಬಬಾರದಿತ್ತಲ್ಲವೇ?
ಮನುಷ್ಯನ ಸ್ವಭಾವವೇ ವಿಚಿತ್ರ. ತನಗೆ ಬೇಕಾದವರ ಬಗ್ಗೆ ಯಾರಾದರೂ ಪ್ರಿಯವಾದ ವಿಷಯ ಹೇಳಿದರೆ ಅದಕ್ಕೆ ಮತ್ತಷ್ಟು ಒತ್ತುಕೊಟ್ಟು ಇನ್ನೊಬ್ಬರಿಗೆ ಹೇಳುತ್ತಾನೆ. ತನಗಾಗದವರ ಬಗ್ಗೆ ಒಳ್ಳೆಯ ಸಂಗತಿ ಕೇಳಿದರೆ ಅದನ್ನು ತಿರುಚಿ ತಮ್ಮ ಕೆಟ್ಟ ಅಭಿಪ್ರಾಯ ಸೇರಿಸಿ ಹೇಳುತ್ತಾನೆ. ಅವರ ಬಗ್ಗೆ ಕೆಟ್ಟ ವಿಷಯ ಕೇಳಿದರಂತೂ ಸಂಭ್ರಮಿಸಿ ಎಲ್ಲರಿಗೂ ಹರಡುತ್ತಾನೆ. ಆತ್ಮೀಯರು ಸೀನಿದರೆ ಸಾಕು, ಏನೋ ಆಗಿಹೋಯಿತೆಂದು ಕಳವಳ ಪಡುತ್ತಾರೆ. ಇಷ್ಟಪಡದವರು ಗಂಭೀರ ಕಾಯಿಲೆಯಿಂದ ನರಳುತ್ತಿದ್ದರೂ 'ಅವರಿಗೇನಾಗಿದೆ? ಇನ್ನೂ ಗಟ್ಟಿಗಡತವಾಗಿದ್ದಾರೆ. ಎಷ್ಟು ಜನರನ್ನು ಹಾಳುಮಾಡಬೇಕೋ?' ಎಂದು ಉದ್ಗರಿಸುತ್ತಾರೆ. ಇಂತಹವರನ್ನು ಒಳ್ಳೆಯ ವಾಹಕರೆನ್ನಬಹುದೆ? ಸಂಬಂಧಗಳು ಹಾಳಾಗುವುದು ಇಂತಹ ನಡವಳಿಕೆಗಳಿಂದಲೇ.
ಇನ್ನು ಕೆಲವರಿರುತ್ತಾರೆ. ಕೆಟ್ಟ ವಿಷಯ ಕೇಳಿದರೆ ಕೇಳಿಸಿಕೊಂಡು ಸುಮ್ಮನಾಗುತ್ತಾರೆಯೇ ಹೊರತು ಅದನ್ನು ಹರಡಲು ಹೋಗುವುದಿಲ್ಲ. ಒಳ್ಳೆಯ ವಿಷಯಗಳಿಗೆ ಸ್ಪಂದಿಸುತ್ತಾರೆ. ಇವರು ಒಳ್ಳೆಯ ವಾಹಕರು. ಇಂತಹವರನ್ನು ಸಾಮಾನ್ಯವಾಗಿ ಜನ ಒಳ್ಳೆಯವರೆಂದು ಗುರುತಿಸುತ್ತಾರೆ. ಇವರ ಮಾತುಗಳಿಗೆ ಗೌರವ ಕೊಡುತ್ತಾರೆ. ಸಂಬಂಧಗಳು ಉಳಿಯುವುದು, ಬೆಳೆಯುವುದು ಇಂತಹವರಿಂದಲೇ ಎಂಬುದರಲ್ಲಿ ಅನುಮಾನವಿಲ್ಲ.
ಕುಟುಂಬದ ಮುಖ್ಯಸ್ಥ ಮುಖ್ಯ ವಾಹಕನಾದರೆ ಕುಟುಂಬದ ಸದಸ್ಯರುಗಳು ಉಪವಾಹಕಗಳಿದ್ದಂತೆ. ವಾಹಕ, ಉಪವಾಹಕಗಳಲ್ಲಿ ಯಾವುದೇ ಒಂದು ಸರಿಯಿಲ್ಲದಿದ್ದರೂ ಒಂದು ಘಟಕವಾಗಿ ಕುಟುಂಬಕ್ಕೇ ಕೆಟ್ಟ ಹೆಸರು ಬರುತ್ತದೆ. ಈ ವಿಚಾರದಲ್ಲಿ ಎಚ್ಚರವಿರುವುದು ಒಳ್ಳೆಯದು. ಒಬ್ಬರಿದ್ದಂತೆ ಇನ್ನೊಬ್ಬರು ಇಲ್ಲದಿರುವುದರಿಂದ ಇದಕ್ಕೆ ಪರಿಹಾರ ಕಷ್ಟಸಾಧ್ಯ. ಗೀತೆಯ 'ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನಾ' ಎಂಬಂತೆ ಬಂದದ್ದನ್ನು ಸ್ವೀಕರಿಸಿ ನಡೆಯುವುದೊಂದೇ ಆಗ ಉಳಿಯುವ ಮಾರ್ಗ. ಆದರೆ ಒಬ್ಬರ ಕಾರಣದಿಂದ ಕುಟುಂಬದ ಎಲ್ಲರಿಗೂ ಕೆಟ್ಟ ಹೆಸರು ಬರುವಂತಾಗುವುದು ಒಳ್ಳೆಯ ಲಕ್ಷಣವಂತೂ ಅಲ್ಲ.
ನಾವೆಷ್ಟು ಒಳ್ಳೆಯವರು ಎಂಬುದರ ಅಳತೆಗೋಲು ನಮ್ಮಲ್ಲೇ ಇದೆ. ಕುಟುಂಬದ ಸದಸ್ಯರುಗಳ, ಬಂಧುಗಳ, ಸ್ನೇಹಿತರ ಪಟ್ಟಿ ಮಾಡಿರಿ. ಆ ಹೆಸರುಗಳ ಮುಂದೆ ಎರಡು ಕಲಮುಗಳು ಇರಲಿ. ಒಂದು ಕಲಮಿನಲ್ಲಿ ನಿಮ್ಮ ದೃಷ್ಟಿಯಲ್ಲಿ ಅವರು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸಿ. ಇನ್ನೊಂದು ಕಲಮಿನಲ್ಲಿ ಅವರ ದೃಷ್ಟಿಯಲ್ಲಿ ನೀವು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸಿ. ಒಂದು ಆಶ್ಚರ್ಯದ ಸಂಗತಿ ನಿಮಗೇ ಗೋಚರಿಸುವುದು. ಸಾಮಾನ್ಯವಾಗಿ ಎರಡು ಕಲಮುಗಳ ವಿವರ ಒಂದೇ ಆಗಿರುತ್ತದೆ. ನೀವು ಒಳ್ಳೆಯವರೆಂದು ಹೇಳುವವರು ನಿಮ್ಮನ್ನೂ ಒಳ್ಳೆಯವರೆಂದು ಭಾವಿಸುವರು. ನೀವು ಕೆಟ್ಟವರೆನ್ನುವವರು ನಿಮ್ಮನ್ನು ಒಳ್ಳೆಯವರೆಂದು ಹೇಳಲಾರರು. ಕೊನೆಯಲ್ಲಿ ಎಷ್ಟು ಒಳ್ಳೆಯವರು ಮತ್ತು ಕೆಟ್ಟವರು ಎಂಬುದನ್ನು ಲೆಕ್ಕ ಹಾಕಿರಿ. ಒಳ್ಳೆಯವರು ಎಂಬ ಸಂಖ್ಯೆ ಜಾಸ್ತಿ ಬಂದರೆ ನೀವು ಒಳ್ಳೆಯವರೇ. ಕೆಟ್ಟವರು ಎಂಬ ವಿವರ ಹೆಚ್ಚಾಗಿದ್ದರೆ ತಿದ್ದಿಕೊಳ್ಳುವ, ಬದಲಾಗುವ ಅಗತ್ಯವಿದೆ ಎಂದೇ ಅರ್ಥ. ಈ ಜಗತ್ತು ಕನ್ನಡಿಯಿದ್ದಂತೆ. ಒಳ್ಳೆಯವರಿಗೆ ಒಳ್ಳೆಯದಾಗಿ, ಕೆಟ್ಟವರಿಗೆ ಕೆಟ್ಟದಾಗಿ ಕಾಣುತ್ತದೆ. ಕನ್ನಡಿಯ ಪ್ರತಿಬಿಂಬವೂ ಅಷ್ಟೆ. ನಾವು ಎಷ್ಟು ದೂರದಲ್ಲಿರುತ್ತೇವೋ ಪ್ರತಿಬಿಂಬವೂ ಅಷ್ಟೇ ದೂರದಲ್ಲಿರುತ್ತದೆ. ಇದರ ಅರ್ಥವನ್ನು ಬಿಡಿಸಿ ಹೇಳುವ ಅಗತ್ಯವಿಲ್ಲವಲ್ಲವೇ?
ಈ ಬದುಕು ಮೂರುದಿನದ್ದು ಎಂಬುದು ಎಲ್ಲರಿಗೂ ಗೊತ್ತಿದ್ದರೂ ನಾವು ಚಿರಂಜೀವಿಗಳು ಎಂಬಂತೆ ವರ್ತಿಸುತ್ತೇವೆ. ಇತರರ ಬಗ್ಗೆ 'ಅವನು ಏಕೆ ಹಾಗಾಡುತ್ತಾನೆ? ಹೋಗುವಾಗ ಎಲ್ಲಾ ಹೊತ್ತುಕೊಂಡು ಹೋಗುತ್ತಾನಾ?' ಎಂದು ಹೇಳುವ ನಾವು ಅದೇ ತತ್ವವನ್ನು ನಮಗೆ ಹೇಳಿಕೊಳ್ಳುತ್ತೇವೆಯೇ? ಒಂದು ವೇಳೆ ನಾವು ಸದ್ಯದಲ್ಲೇ ಸಾಯುತ್ತೇವೆ ಎಂಬುದು ನಮ್ಮ ಅರಿವಿಗೆ ಬಂದಾಗ ಮತ್ತು ಏನಾದರೂ ಹೇಳಲು ಐದು ನಿಮಿಷ ಮಾತ್ರ ಅವಕಾಶ ಸಿಕ್ಕಾಗ ನಾವು ಏನು ಹೇಳಬಹುದು, ಊಹಿಸಿಕೊಳ್ಳಿ. ಆ ಮಾತನ್ನು ಈಗಲೇ ಏಕೆ ಹೇಳಬಾರದು? ಜೀವನ ಪೂರ್ತಿ ಉತ್ತಮ ರೀತಿಯಲ್ಲಿ ಬಾಳಲು ಸಿದ್ಧತೆ ಮಾಡಿಕೊಳ್ಳುವುದರಲ್ಲಿಯೇ ಕಳೆಯುವ ನಾವು ಉತ್ತಮವಾಗಿ ಬಾಳುವುದಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ.
ಸಂಬಂಧಗಳಲ್ಲಿ ಬರುವ ದೊಡ್ಡ ಸವಾಲೆಂದರೆ ಏನನ್ನಾದರೂ ಪಡೆಯುವ ಸಲುವಾಗಿಯೇ ಸಂಬಂಧಗಳನ್ನು ಹೆಚ್ಚಿನವರು ಬೆಳೆಸುವುದೇ ಆಗಿದೆ. ಅವರು ಇತರರು ತಮಗೆ ಒಳಿತು ಮಾಡಲಿ ಎಂದು ಬಯಸಿ ಸಂಬಂಧ ಬೆಳೆಸುತ್ತಾರೆ. ಸಂಬಂಧಗಳು ಏನನ್ನಾದರೂ ಕೊಡುವ ಸಲುವಾಗಿ, ಪಡೆಯುವ ಸಲುವಾಗಿ ಅಲ್ಲ ಎಂದುಕೊಂಡರೆ ಸಂಬಂಧಗಳು ಉಳಿಯುತ್ತವೆ, ಬೆಳೆಯುತ್ತವೆ. ಬರ್ನಾರ್ಡ್ ಶಾ ಹೇಳಿದಂತೆ "ಸಾಯುವ ಮುನ್ನ ನಮ್ಮಲ್ಲಿರುವ ಒಳ್ಳೆಯದನ್ನೆಲ್ಲಾ ಕೊಟ್ಟುಬಿಡೋಣ. ಸಂತೋಷ ಹಂಚಿಕೊಳ್ಳೋಣ- ಅದು ದ್ವಿಗುಣಗೊಳ್ಳುತ್ತದೆ. ದುಃಖವನ್ನೂ ಹಂಚಿಕೊಳ್ಳೋಣ- ಅದು ಅರ್ಧ ಕಡಿಮೆಯಾಗುತ್ತದೆ". ಒಡಲಗುಡಿಯ ರಜ-ತಮಗಳ ಗುಡಿಸಿ ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ ಮನದ ಕತ್ತಲ ಕಳೆದು ತಿಳಿವಿನ ಬೆಳಕ ಪಸರಿಸೋಣ; ಒಳ್ಳೆಯವರಾಗೋಣ.
*************
-ಕ.ವೆಂ.ನಾಗರಾಜ್.
`ಒಡಲಗುಡಿಯ ರಜ-ತಮಗಳ ಗುಡಿಸಿ ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ ಮನದ ಕತ್ತಲ ಕಳೆದು ತಿಳಿವಿನ ಬೆಳಕ ಪಸರಿಸೋಣ; ಒಳ್ಳೆಯವರಾಗೋಣ.' ಉತ್ತಮ ಸ೦ದೇಶ ಸಾರುವ ಮಾರ್ಗದರ್ಶಕ ಲೇಖನಕ್ಕಾಗಿ ಧನ್ಯವಾದಗಳು ಸರ್, ನನ್ನ ಬ್ಲಾಗ್ ಗೆ ಭೇಟಿ ಕೊಡಿ.
ಪ್ರತ್ಯುತ್ತರಅಳಿಸಿವಂದನೆಗಳು, ಪ್ರಭಾಮಣಿ ಮತ್ತು ಶ್ರೀಧರರೇ.
ಪ್ರತ್ಯುತ್ತರಅಳಿಸಿSundara, upayukta lekhana sir..Prakanegaagi dhanyavadagalu......
ಪ್ರತ್ಯುತ್ತರಅಳಿಸಿವಂದನೆ, ಅಶೋಕ ಕೊಡ್ಲಾಡಿಯವರೇ.
ಪ್ರತ್ಯುತ್ತರಅಳಿಸಿಸಂಪದದಲ್ಲಿ ಬಂದ ಪ್ರತಿಕ್ರಿಯೆಗಳು:
ಪ್ರತ್ಯುತ್ತರಅಳಿಸಿsathishnasa on December 7, 2011 - 4:06pm
>> ಈ ಬದುಕು ಮೂರುದಿನದ್ದು ಎಂಬುದು ಎಲ್ಲರಿಗೂ ಗೊತ್ತಿದ್ದರೂ ನಾವು ಚಿರಂಜೀವಿಗಳು ಎಂಬಂತೆ ವರ್ತಿಸುತ್ತೇವೆ ಇತರರ ಬಗ್ಗೆ ಅವನು ಏಕೆ ಹಾಗಾಡುತ್ತಾನೆ ? ಹೋಗುವಾಗ ಎಲ್ಲಾ ಹೊತ್ತುಕೊಂಡು ಹೋಗುತ್ತಾನಾ ? ಎಂದು ಹೇಳುವ ನಾವು ಅದೇ ತತ್ವವನ್ನು ನಮಗೆ ಹೇಳಿ ಕೊಳ್ಳುತ್ತೇವೆಯೇ ?<< ನಿಜ ನಾವುಗಳು ಇಲ್ಲಿ ಯಾರು ಶಾಶ್ವತವಾಗಿ ಇರುವುದಿಲ್ಲ ಎಂಬುದನ್ನು ಒಮ್ಮೆ ಯೋಚಿಸಿದರೆ ಸಾಕು ಆದರೆ ಇದು ಗೊತ್ತಿದ್ದು ನಾವು ಮಾಯೆಗೊಳಗಾಗುತ್ತೇವೆ ಇದೇ ವಿಪರ್ಯಾಸ, ಬೇರೆಯವರಲ್ಲಿನ ತಪ್ಪನ್ನು ಹುಡುಕುವ ನಾವು ನಮ್ಮಲ್ಲಿನ ತಪ್ಪನ್ನು ಬೇರೆಯವರು ಹೇಳಿದಾಗ ಸೈರಿಸುವುದಿಲ್ಲ ಬದಲಾವಣೆ ನಮ್ಮಲ್ಲಿಯೇ ಬರಬೇಕು. ಒಳ್ಳೆಯ ವೈಚಾರಿಕ ಲೇಖನ ನಾಗರಾಜ್ ರವರೇ. .......ಸತೀಶ್
kavinagaraj on December 8, 2011 - 8:57am
ಪೂರಕ ಪ್ರತಿಕ್ರಿಯೆ ಸಂತಸ ನೀಡಿದೆ, ಸತೀಶರೇ.
makara on December 7, 2011 - 9:13pm
ಕವಿಗಳೇ, <>+1 <>+1; ಈ ಎರಡೂ ನುಡಿಮುತ್ತುಗಳು ನನಗೆ ಬಹಳ ಹಿಡಿಸಿದವು. ಮನಸ್ಸನ್ನು ಶುದ್ಧಿಮಾಡಿಕೊಳ್ಳಲು ಪ್ರೇರೇಪಣೆಯನ್ನೀಯುತ್ತದೆ ನಿಮ್ಮ ಲೇಖನ. ಮೇಲೆ ಉದಾಹರಿಸಿದ ಮೊದಲನೆ ವಾಕ್ಯ ದುರ್ಯೋಧನ ಮತ್ತು ಧರ್ಮರಾಯರ ಕತೆಯನ್ನು ನೆನೆಪಿಸಿತು. ಒಮ್ಮೆ ಶ್ರೀ ಕೃಷ್ಣ ದುರ್ಯೋಧನನಿಗೆ ಒಬ್ಬ ಒಳ್ಳೆಯ ಮನುಷ್ಯನನ್ನು ಹುಡುಕಿಕೊಂಡು ಬಾ ಎಂದು ಹೇಳಿದನಂತೆ, ಆಗ ಬಹಳ ಹುಡುಕಿದ ದುರ್ಯೋಧನನಿಗೆ ಒಬ್ಬನೂ ಒಳ್ಳೆಯವನು ಸಿಗಲಿಲ್ಲವಂತೆ ಅವನು ಕೃಷ್ಣನ ಬಳಿಗೆ ಬಂದು ಪ್ರಪಂಚವೆಲ್ಲಾ ಬರೀ ಕೆಟ್ಟವರಿಂದ ತುಂಬಿದೆ ಜಗತ್ತಿನಲ್ಲಿ ಒಬ್ಬನೇ ಒಬ್ಬನೂ ಒಳ್ಳೆಯವನಿಲ್ಲ ಎಂದನಂತೆ. ಅದೇ ರೀತಿ ಕೃಷ್ಣ ಧರ್ಮರಾಯ ಒಬ್ಬನೇ ಒಬ್ಬ ಕೆಟ್ಟವನು ತನಗೆ ಸಿಗಲಿಲ್ಲ ಎಂದು ವಾಪಸು ಬಂದನಂತೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ:
kavinagaraj on December 8, 2011 - 8:59am
:)) ಶ್ರೀಧರರೇ, ನೀವು ಕೊಟ್ಟ ಉದಾಹರಣೆ ಸೂಕ್ತವಾಗಿದೆ. ಧನ್ಯವಾದಗಳು.
Chikku123 on December 8, 2011 - 10:19am
ಒಂದು ಉತ್ತಮ ಲೇಖನ ಸರ್ ಒಳ್ಳೆಯವನು ಕೆಟ್ಟವನು ಅಂತ ನಾವೇ ವ್ಯಾಖ್ಯಾನ ಕೊಟ್ಕೊಂಡು ಬಿಟ್ಟಿದ್ದೇವೆ ಅನ್ಸತ್ತೆ ಆದರೆ ಮನುಷ್ಯ ಅಥವಾ ಮಾನವ ಅನ್ನುವವನು ಸಹಜವಾಗಿ ಸರಳವಾಗಿ ಸುಂದರವಾಗಿದ್ದರೆ (ವ್ಯಕ್ತಿತ್ವ) ಅವನ ಆ ಹೆಸರಿಗೊಂದು ಅರ್ಥ ಬರುವುದು ನನ್ನ ಪ್ರಕಾರ.
kavinagaraj on December 8, 2011 - 12:51pm
<<>> ಜೊತೆಗೆ ಅಂತಹ ವ್ಯಕ್ತಿತ್ವದಿಂದ ಇತರರಿಗೆ ನೋವಾಗದಿದ್ದರೆ ಒಳ್ಳೆಯವನೆನ್ನಬಹುದು. ಧನ್ಯವಾದ, ಚಿಕ್ಕೂ.
Chikku123 on December 9, 2011 - 2:46pm
ನಿಜ ನಿಜ, ನಿಮ್ದನ್ನ ನನ್ದಕ್ಕೆ ಸೇರಿಸಿ ಒನ್ದು ಸ್ಟೆಟ್ಮೆನ್ಟ್ ಮಾಡಿದೆ :) (ಎಫ್ ಬಿನಲ್ಲಿ).
kavinagaraj on December 9, 2011 - 3:46pm
:)
venkatb83 on December 8, 2011 - 8:26pm
ಕವಿ ನಾಗರಾಜ ಅವ್ರೆ >> ಒಳ್ಳೆಯ ಆಶಯದ ಈ ನಿಮ್ಮ ಬರಹ ಹಿಡಿಸ್ತು. >>.ಅದರಲ್ಲೂ ಕೆಲ ಉದಾಹರಣೆಗಳು(ಕನ್ನಡಿ) ಗಮನ ಸೆಳೆದವು.. >>ನಿಮ್ಮ ಬರಹದ ಕೆಲವನ್ನಾದರೂ ನಾವ್ ಅಳವಡಿಸಿಕೊಳ್ಳಬಹುದು.. ಧನ್ಯವಾದಗಳು...
kavinagaraj on December 9, 2011 - 10:27am
ಮುದ ನೀಡುವ ಪ್ರತಿಕ್ರಿಯೆಗೆ ವಂದನೆ, ಸಪ್ತಗಿರಿಯವರೇ.
rasikathe on December 9, 2011 - 10:42am
ಬಹಳ ಚೆನ್ನಾಗಿ ಬರೆದಿದ್ದೀರ ನಾಗರಾಜ್ ಅವರೆ, ಎಲ್ಲರಿಗೂ ಗೊತ್ತಿರುವಸಂಗತಿಯೇ ಆದರೂ ನಾವು ಇದನ್ನು ಮನದಟ್ಟು ಮಾಡಿಕೊಳ್ಳುವುದರಲ್ಲಿ ನಿಷ್ಯಕ್ತರಲ್ಲವೇ?????? ಮೀನಾ.
kavinagaraj on December 9, 2011 - 11:32am
<<< ನಾವು ಇದನ್ನು ಮನದಟ್ಟು ಮಾಡಿಕೊಳ್ಳುವುದರಲ್ಲಿ ನಿಷ್ಯಕ್ತರಲ್ಲವೇ??????>>> ಅದಕ್ಕಾಗಿಯೇ ಈ ಎಲ್ಲಾ ಗೊಂದಲಗಳು!! ಪ್ರತಿಕ್ರಿಯೆಗೆ ಧನ್ಯವಾದಗಳು, ಮೀನಾ ಸುಬ್ಬರಾವ್ ರವರೇ.