(ಚಿತ್ರ ಕೃಪೆ: ಅಂತರ್ಜಾಲ)
ನನ್ನ ಮನೆಯ ಮೇಲ್ಭಾಗದ ತಾರಸಿಯಲ್ಲಿ ಕುರ್ಚಿ ಹಾಕಿಕೊಂಡು ಕುಳಿತು ಶುಭ್ರ ಆಗಸವನ್ನು ನೋಡುತ್ತಾ ಕುಳಿತಿದ್ದೆ. ನೋಡುತ್ತಾ ನೋಡುತ್ತಾ ಹೋದಂತೆ ಆಕಾಶ ಮಂದಹಾಸ ಬೀರುತ್ತಾ ತೆರೆದುಕೊಳ್ಳುತ್ತಾ ಹೋಯಿತು. ಹೊರಗಣ್ಣು, ಒಳಗಣ್ಣುಗಳನ್ನು ಅಗಲಿಸಿ ವಿಸ್ಮಯದಿಂದ ನೋಡುತ್ತಿದ್ದ ನಾನು ಒಂದು ರೀತಿಯ ಅನಿರ್ವಚನೀಯ ಭಾವಪರವಶತೆಗೆ ಒಳಗಾಗಿದ್ದೆ. ಮನದೊಳಗೆ ಅರಿವಿಲ್ಲದಂತೆ ಮಂಥನ ಆರಂಭಗೊಂಡಿತ್ತು. ಆಕಾಶ ಎಂದಾಕ್ಷಣ ಅಚಾನಕವಾಗಿ ಮೇಲೆ ನೋಡುತ್ತೇವೆ. ಹಾಗಾದರೆ ಆಕಾಶ ಮೇಲೆ ಇದೆಯೇ? ಮೇಲೆ ಇದ್ದರೆ ಎಷ್ಟು ಮೇಲೆ ಇದೆ? ನಾವು ಅದನ್ನು ಕಾಣಲು ಎಷ್ಟು ಮೇಲೆ ಹೋದರೂ ಅದು ಅಷ್ಟೂ ಅಷ್ಟೂ ಮೇಲೆಯೇ ಹೋಗುತ್ತದಲ್ಲಾ! ಹಾಗಾದರೆ ಅದು ಮರೀಚಿಕೆಯೇ? ಹಾಗಾದರೆ ನಾವು ಕಾಣುವ ಆಕಾಶ ಅನ್ನುವುದಾದರೂ ಏನು? ಅದು ನಿಜಕ್ಕೂ ಇದೆಯೇ? ಇಲ್ಲ ಎನ್ನಲಾಗುವುದಿಲ್ಲ, ಆಕಾಶ ಇದೆ. ಆದರೆ ಅದು ಹೇಗಿದೆ? ಕಂಡೂ ಕಾಣದ ಆಕಾಶ ನಿಜಕ್ಕೂ ಒಂದು ಅದ್ಭುತ. ಆಕಾಶವನ್ನು ವೈಜ್ಞಾನಿಕವಾಗಿ ವಿವರಿಸಲು ಮಾನವನಿಗೆ ಶಕ್ಯವೆಂದು ನನಗೆ ಅನ್ನಿಸುತ್ತಿಲ್ಲ. ವೈಜ್ಞಾನಿಕವಾಗಿ ವಿವರಿಸಲು ಬರುವುದಿಲ್ಲವೆಂದು ಆಕಾಶವನ್ನು ಇಲ್ಲವೆಂದು ಹೇಳಲಾಗುವುದೆ? ಕಣ್ಣಿಗೆ ಕಾಣುವುವದನ್ನು ವಿಸ್ತರಿಸಿ ಏನು ಹೇಳಬಹುದೆಂದರೆ ಇಡೀ ಬ್ರಹ್ಮಾಂಡದ ವ್ಯಾಪ್ತಿ ಎಷ್ಟು ವಿಶಾಲವೋ, ವಿಸ್ತಾರವೋ ಅಷ್ಟೂ ವಿಸ್ತಾರದಲ್ಲಿ ಆಕಾಶ ಆವರಿಸಿದೆಯೆಂದು ಮಾತ್ರ ಹೇಳಬಹುದು.
ಆಕಾಶ ಅಂದರೇನು? ಗೊತ್ತಿಲ್ಲ. ಆಕಾಶ ಎಷ್ಟು ದೊಡ್ಡದು? ಗೊತ್ತಿಲ್ಲ. ಆಕಾಶ ಹೇಗಿದೆ? ಗೊತ್ತಿಲ್ಲ. ಚಂದ್ರ ಎಲ್ಲಿದ್ದಾನೆ? ಆಕಾಶದಲ್ಲಿದ್ದಾನೆ. ಭೂಮಿ ಎಲ್ಲಿದೆ? ಅದೂ ಆಕಾಶದಲ್ಲಿದೆ. ಚಂದ್ರನ ಮೇಲೆ ನಿಂತವರಿಗೆ ಭೂಮಿ ಆಕಾಶದಲ್ಲಿರುವಂತೆ ಕಾಣುತ್ತದೆ. ಈರೀತಿ ಯೋಚಿಸಿದಾಗ ಗೊತ್ತಾಗುತ್ತದೆ, ಆಕಾಶ ಮೇಲೆ ಮಾತ್ರ ಇಲ್ಲ, ಎಲ್ಲೆಲ್ಲೂಇದೆ. ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ! ಈ ಜಗತ್ತು/ವಿಶ್ವ/ಬ್ರಹ್ಮಾಂಡ ಎಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನಲ್ಲ. ಇಂತಹ ಅಸಂಖ್ಯ ಭೂಮಿ, ಸೂರ್ಯ, ಚಂದ್ರ, ಎಣಿಕೆಗೆ ಸಿಕ್ಕದ ಬೃಹತ್ ನಕ್ಷತ್ರಗಳ ಬೃಹತ್ ಸಮೂಹ ಇದರಲ್ಲಿದೆ. ಅಲ್ಲೆಲ್ಲಾ ಆವರಿಸಿರುವುದು ಈ ಆಕಾಶವೇ! ಅಂದರೆ ನಾವೂ ಆಕಾಶದಲ್ಲೇ ಇದ್ದೇವೆ. ಆಕಾಶ ನಮ್ಮನ್ನು ಹೊಂದಿಕೊಂಡೇ ಇದೆ! ನಾವಷ್ಟೇ ಏಕೆ, ಎಲ್ಲಾ ಚರಾಚರ, ಜೀವ, ನಿರ್ಜೀವ ವಸ್ತುಗಳನ್ನೂ ಆಕಾಶ ಆವರಿಸಿದೆ. ಅಂದರೆ ಆಕಾಶ ಸರ್ವವ್ಯಾಪಿ. ಅದು ಇಲ್ಲದ ಸ್ಥಳವೇ ಇಲ್ಲ. ಜೀವಿಗಳ ದೇಹ ಪಂಚಭೂತಗಳಿಂದ - ಜಲ, ವಾಯು, ಅಗ್ನಿ, ಭೂಮಿ ಮತ್ತು ಆಕಾಶ -ಗಳಿಂದ ಆಗಿರುವುದೆಂಬುದು ಅಂಗೀಕೃತವಾದ ವಿಚಾರ. ಅಂದರೆ ಆಕಾಶ ನಮ್ಮೊಳಗೂ ಇದೆ, ಹೊರಗೂ ಇದೆ. ಒಳಗೂ ಇರುವ, ಹೊರಗೂ ಇರುವ, ಎಲ್ಲೆಲ್ಲೂ ಇರುವ, ಅದು ಇಲ್ಲದ ಸ್ಥಳವೇ ಇರದಿರುವುದು ಆಕಾಶ ಎಂದು ಅನ್ನಿಸಿದಾಗ ನಾನು ಒಂದು ರೀತಿಯ ಆನಂದಾನುಭೂತಿ ಅನುಭವಿಸಿದೆ. ನಾವು ಆಕಾಶವನ್ನು ಕಾಣದಿರಬಹುದು. ಆದರೆ ಆಕಾಶ ಸದಾ ನಮ್ಮನ್ನು ನೋಡುತ್ತಿರುತ್ತದೆ. ಆಕಾಶದ ಕಣ್ಣು ತಪ್ಪಿಸಿ ಯಾರಾದರೂ ಏನಾದರೂ ಮಾಡಲು ಸಾಧ್ಯವೇ? ಏನಾದರೂ ನಡೆಯಲು ಸಾಧ್ಯವೇ? ಪರಮಾತ್ಮನನ್ನು ವರ್ಣಿಸುವಾಗ ಅವನು ಸರ್ವವ್ಯಾಪಿ, ಅವನಿಲ್ಲದ ಸ್ಥಳವೇ ಇಲ್ಲ, ಅವನು ಒಳಗೂ ಇದ್ದಾನೆ, ಹೊರಗೂ ಇದ್ದಾನೆ, ಎಲ್ಲೆಲ್ಲೂ ಇದ್ದಾನೆ, ಇತ್ಯಾದಿ ಹೇಳುವುದನ್ನು ಕೇಳಿದ್ದೇವೆ. ಅವನ ಗಮನಕ್ಕೆ ಬಾರದಂತೆ ಏನೂ ಜರುಗಲು ಸಾಧ್ಯವಿಲ್ಲವೆಂದು ಹೇಳುವುದನ್ನು ಕೇಳಿದ್ದೇವೆ. ಈ ವಿಶ್ವ ಬ್ರಹ್ಮಾಂಡವನ್ನು ನಿಯಂತ್ರಿಸುವ ವಿರಾಟ್ ಶಕ್ತಿಯ ಕುರಿತು ವೇದದಲ್ಲಿ ಹೀಗೆ ಹೇಳಿದೆ;
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ |
ತದಂತರಸ್ಯ ಸರ್ವಸ್ಯ ಅದು ಸರ್ವಸ್ಯಾಸ್ಯ ಬಾಹುತಃ || (ಯಜು. ೪೦.೫.)
ಇದರ ಅರ್ಥ, ಅದು ವಿಶ್ವಕ್ಕೆ ಗತಿ ನೀಡುತ್ತದೆ, ಅದು ಸ್ವತಃ ಚಲಿಸುವುದಿಲ್ಲ, ಅದು ದೂರದಲ್ಲಿದೆ, ಅದೇ ಹತ್ತಿರದಲ್ಲಿಯೂ ಇದೆ. ಅದು ಇದೆಲ್ಲದರ ಒಳಗೂ ಇದೆ, ಇದೆಲ್ಲದರ ಹೊರಗೂ ಇದೆ.
ಈ ಎಲ್ಲಾ ಗುಣಗಳು ಆಕಾಶಕ್ಕೆ ಇರುವುದರಿಂದ ಆಕಾಶವನ್ನು 'ಕಣ್ಣಿಲ್ಲದೇ ಕಾಣಬಲ್ಲ ದೇವರ ಕಣ್ಣು' ಎಂದು ಭಾವಿಸಬಹುದೆಂದು ಅನ್ನಿಸಿದಾಗ ನನಗೆ ಏನೋ ಬೆಳಕು ಹೊಳೆದಂತಾಯಿತು. ಸ್ವಾಮಿ ವಿವೇಕಾನಂದರು ತಾವು ಭೇಟಿಯಾದ ಎಲ್ಲಾ ಸಾಧು-ಸಂತ-ಸನ್ಯಾಸಿಗಳನ್ನು ಒಂದು ಪ್ರಶ್ನೆ ಕೇಳುತ್ತಿದ್ದರು - "ಸ್ವಾಮಿ, ತಾವು ದೇವರನ್ನು ಕಂಡಿದ್ದೀರಾ?" ಇದೇ ಪ್ರಶ್ನೆಗೆ ಶ್ರೀ ರಾಮಕೃಷ್ಣ ಪರಮಹಂಸರು ನೀಡಿದ್ದ ಉತ್ತರವೆಂದರೆ -"ಹೌದು, ನಾನು ಕಂಡಿದ್ದೇನೆ. ದೇವರೊಂದಿಗೆ ಮಾತನ್ನೂ ಆಡಿದ್ದೇನೆ". ಈ ಪ್ರಸಂಗದ ಕುರಿತು ಚರ್ಚೆ ಇಲ್ಲಿ ಅಪ್ರಸ್ತುತವೆನಿಸೀತು. ನಾನಂತೂ ಪರಮಾತ್ಮನನ್ನು ಕಂಡಿಲ್ಲ, ಆದರೆ ಪರಮಾತ್ಮ ನನ್ನನ್ನು ಕಂಡಿದ್ದಾನೆ, ಕಾಣುತ್ತಿದ್ದಾನೆಂದು ನನಗೆ ಖಾತ್ರಿಯಾಗಿದೆ. ನನ್ನ ಅರಿವಿನ ಪರಿಮಿತಿಯಲ್ಲಿ ಪರಮಾತ್ಮನ ಇರುವಿಕೆಯ ರೀತಿಯನ್ನು ಅರ್ಥೈಸಿಕೊಂಡಿದ್ದೇನೆಂದು ಭಾವಿಸಿದ್ದೇನೆ. (ಬುದ್ಧನಿಗೆ ಭೋದಿವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಇವನಿಗೂ ಮನೆಯ ತಾರಸಿ ಮೇಲೆ ಕುಳಿತು ಆಕಾಶ ನೋಡುತ್ತಾ ಜ್ಞಾನೋದಯವಾಗಿರಬೇಕು ಎಂದು ತಮಾಷೆ ಮಾಡುವುದಾದರೆ ಅಥವ ಇವನಿಗೆ ಬುದ್ಧಿಭ್ರಮಣೆಯಾಗಿರಬಹುದೆಂದು ಯಾರಾದರೂ ಅಂದುಕೊಂಡರೆ ನನ್ನ ಅಭ್ಯಂತರವಿಲ್ಲ).
ಆಕಾಶ ಇಂತಹ ಸ್ಥಳದಲ್ಲಿ ಇದೆ, ಇಂತಹ ಸ್ಥಳದಲ್ಲಿ ಇರುವುದಿಲ್ಲವೆಂದು ಹೇಳಲಾಗುವುದಿಲ್ಲ. ಜೀವಿಗಳು ವಾಸವಿರಲು ಸಾಧ್ಯವೇ ಇರದ ಸ್ಥಳದಲ್ಲೂ ಅದಿದೆ, ಧಗಧಗಿಸುವ ಅಗ್ನಿಯ ಜೊತೆಗೂ ಇದೆ, ಭೋರ್ಗರೆಯುವ ಸಮುದ್ರ, ಸಾಗರಗಳಿರುವಲ್ಲೂ ಇದೆ. ಆಕಾಶವನ್ನು ಬೆಂಕಿ ಸುಡಲಾರದು, ನೀರು ತೋಯಿಸಲಾರದು, ಅದನ್ನು ಯಾವುದೇ ಆಯುಧದಿಂದ ಕತ್ತರಿಸಲಾಗದು, ಅದನ್ನು ಯಾರೂ ಏನೂ ಮಾಡಲಾರರು. ಬ್ರಹ್ಮಾಂಡದ ಸೃಷ್ಟಿಯ ಜೊತೆಗೂ ಅದು ಇರುತ್ತದೆ, ಪ್ರಳಯ, ವಿನಾಶ ಕಾಲದಲ್ಲೂ ಅದು ಇರುತ್ತದೆ. ಅದಕ್ಕೆ ಪ್ರಾರಂಭವಿಲ್ಲ, ಕೊನೆಯಿಲ್ಲ, ಅರ್ಥಾತ್ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಪರಮಾತ್ಮನನ್ನೂ ಹೀಗೆಯೇ ಇದ್ದಾನೆ ಅನ್ನುತ್ತೇವಲ್ಲವೇ? ಹಾಗಾದರೆ ದೇವರು ಆಕಾಶರೂಪದಲ್ಲಿ ಪ್ರಕಟನಾಗಿದ್ದಾನೆ ಅನ್ನಬಹುದಲ್ಲವೇ? ದೇವರ ವಿಶ್ವರೂಪ ದರ್ಶನವೆಂದರೆ ಇದೇ ಅಲ್ಲವೇ? ಒಳಗಣ್ಣಿದ್ದು ತೆರೆದು ನೋಡಬಲ್ಲವರು ಈ ವಿಶ್ವರೂಪವನ್ನು ಅವರ ಶಕ್ತ್ಯಾನುಸಾರ ಕಂಡಾರು. ನಿಜವಾಗಿ ದೇವರ ಪ್ರತಿನಿಧಿ ಎಂದು ಆಕಾಶವನ್ನು ಹೆಸರಿಸಬಹುದೇ ಹೊರತು, ಯಾವುದೇ ವ್ಯಕ್ತಿ ಅಥವ ಜೀವಿಯನ್ನು, ವಸ್ತುವನ್ನು ಇಂತಹ ಅಗಾಧ ಶಕ್ತಿಯ ಪ್ರತಿನಿಧಿ ಎಂದು ಹೇಳುವುದು, ದೇವರ ಮಗ ಅನ್ನುವುದು, ದೇವರ ರೂಪದಲ್ಲಿ ಕಾಣುವುದು ಸಮಂಜಸವೆನಿಸುವುದಿಲ್ಲ. ಎಲ್ಲರಲ್ಲೂ ಅವನ ಅಂಶವಿರುವುದರಿಂದ ಆ ವಿಶಾಲಾರ್ಥದಲ್ಲಿ ತೆಗೆದುಕೊಳ್ಳಬಹುದೇ ಹೊರತು, ಯಾರನ್ನೇ ಆಗಲಿ ದೇವರಂತೆ ಭಾವಿಸುವುದು ಸೂಕ್ತವಲ್ಲ. ನಾಶವಿರದ ಭಗವಂತನನ್ನು ನಾಶವಾಗಬಹುದಾದ ಸಂಗತಿಗಳಲ್ಲಿ ಗುರುತಿಸುವುದು ಎಷ್ಟರ ಮಟ್ಟಿಗೆ ಸರಿಯಾದೀತು? ಬೇಕಾದರೆ ದೇವಮಾನವರು, ಮಹಿಮಾವಂತರು, ವಿಶೇಷ ಶಕ್ತಿಯುಳ್ಳವರು, ಹೀಗೆ ಭಾವಿಸಬಹುದು.
ಆಕಾಶದ ಗುಣ ಹೇಗಿದೆ? ಅದಕ್ಕೆ ಗುಣವೇ ಇಲ್ಲ, ನಿರ್ಗುಣ. ಅದಕ್ಕೆ ಮಮಕಾರವೂ ಇಲ್ಲ, ಅಹಂಕಾರವೂ ಇಲ್ಲ. ಭೇದ-ಭಾವ ಮಾಡುವುದೇ ಇಲ್ಲ. ಜಾತಿ, ಮತ, ಪಂಥಗಳ ಕಟ್ಟಿಲ್ಲ. ಆ ದೇಶ, ಈ ದೇಶ ಅನ್ನುವುದು ಇಲ್ಲ. ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ, ಮುಂದೆಯೂ ಹೀಗೆಯೇ ಇರುತ್ತದೆ. ಇದು ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಭೌಮಿಕ ಸತ್ಯ. ಕೆಟ್ಟವರು, ಒಳ್ಳೆಯವರು, ಜೀವಿ, ನಿರ್ಜೀವಿ ಎಂದು ಎಣಿಸುವುದೇ ಇಲ್ಲ. ಯಾರು ಏನೇ ಮಾಡಿದರೂ ಅಡ್ಡಿಪಡಿಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಎಲ್ಲಾ ಆಗು-ಹೋಗುಗಳಿಗೆ, ಕ್ರಿಯೆಗಳಿಗೆ ಅದು ಕೇವಲ ಸಾಕ್ಷಿಯಾಗಿರುತ್ತದೆ. ಖಾಲಿ ಆಕಾಶವನ್ನು ಯಾವುದರಿಂದಲಾದರೂ ತುಂಬಿ ಭರ್ತಿ ಮಾಡಲು ಸಾಧ್ಯವಿದೆಯೇ? ಇಲ್ಲ, ಎಷ್ಟು ತುಂಬಿದರೂ, ಏನನ್ನು ತುಂಬಿದರೂ ಅದು ಭರ್ತಿಯಾಗುವುದೇ ಇಲ್ಲ. ಹಾಗೆಯೇ ನಾವು ಆಕಾಶವನ್ನು ಹೇಗೆ ಅರ್ಥ ಮಾಡಿಕೊಳ್ಳಲು ಹೊರಟರೂ ಅದು ಆಕಾಶವಾಗಿಯೇ, ಗೂಢವಾಗಿಯೇ ಉಳಿಯುತ್ತದೆ. ಆಕಾಶ ನಮ್ಮನ್ನು ಅರಗಿಸಿಕೊಳ್ಳುತ್ತದೆ. ನಾವು ಆಕಾಶವನ್ನಲ್ಲ. ಆಕಾಶ ನಮ್ಮ ಅಹಂ, ಮನಸ್ಸು, ಯೋಚನೆಗಳು, ಚಿಂತನೆಗಳು, ಜ್ಞಾನ, ಅಜ್ಞಾನ, ಎಲ್ಲವನ್ನೂ, ಎಲ್ಲಾ ಅಂದರೆ ಎಲ್ಲವನ್ನೂ, ನುಂಗಿ ನೀರು ಕುಡಿಯಬಲ್ಲುದು, ಅರ್ಥಾತ್ ಅರಗಿಸಿಕೊಳ್ಳಬಲ್ಲದು. ಪರಮಾತ್ಮ 'ನಿರ್ಮಮೋ ನಿರಹಂಕಾರಃ' ಎಂಬುದನ್ನು ತೋರ್ಪಡಿಸಿಕೊಂಡಿರುವುದು ಆಕಾಶದಿಂದಲೇ. ಆಕಾಶವನ್ನು ತೃಪ್ತಿ ಪಡಿಸಲು ಯಾವ ಪೂಜೆ ಮಾಡಬೇಕು? ಯಾವ ಪ್ರಾಣಿಯ ಬಲಿ ಕೊಡಬೇಕು? ಯಾವ ನೈವೇದ್ಯ ಇಡಬೇಕು? ಏನೂ ಮಾಡಬೇಕಿಲ್ಲ. 'ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ಕೆಟ್ಟದ್ದಕ್ಕೆ ಕೆಟ್ಟದ್ದು' ಎಂಬುದು ಜ್ಞಾನಿಗಳು, ಸಾಧಕರು ಹೇಳುವ ಮಾತು. ಪುನರ್ಜನ್ಮವನ್ನು ನಂಬದವರೂ ಸಹ ದೇವರು ಒಂದು 'ನಿರ್ಣಾಯಕ ದಿನ'ದಂದು ಎಲ್ಲಾ ಜೀವಿಗಳಿಗೆ ಅವರ ಕರ್ಮಕ್ಕನುಸಾರವಾಗಿ ಫಲ ಕೊಡುತ್ತಾನೆಂದು ನಂಬುತ್ತಾರೆ. ಪುನರ್ಜನ್ಮವನ್ನು ನಂಬುವವರಿಗೆ ಪೂರ್ವಾರ್ಜಿತ ಕರ್ಮದ ಅನುಸಾರ ಮುಂದಿನ ಜನ್ಮವೆಂದು ಹೇಳುತ್ತಾರೆ. ಒಟ್ಟಿನಲ್ಲಿ ನಾವು ಒಳ್ಳೆಯ ರೀತಿ ಬಾಳಬೇಕೆಂಬುದು ನೀತಿ. ಹಾಗೆ ಮಾಡಲು ಏನು ಅಡ್ಡಿ? ಆಕಾಶವನ್ನು ಕೃತಕ ಭಯ,ಭಕ್ತಿಗಳಿಂದ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಅದೇ ರೀತಿ ದೇವರನ್ನೂ ಭಯ-ಭಕ್ತಿಗಳಿಂದ ತೃಪ್ತಿಪಡಿಸಿ ನಮ್ಮ ಇಚ್ಛೆ ಈಡೇರಿಸಿಕೊಳ್ಳುವೆವೆಂಬುದು ಭ್ರಮೆ ಎಂದು ಆಕಾಶ ಸಾರುತ್ತಿದೆ. ನಮ್ಮ ಕಷ್ಟ-ನಷ್ಟಗಳಿಗೆ, ಒಳಿತು-ಕೆಡಕುಗಳಿಗೆ ದೇವರು ಕಾರಣನಲ್ಲ, ನಾವೇ ಎಂಬುದು ಆಕಾಶ ತನ್ನ ಇರುವಿಕೆಯ ರೀತಿಯಿಂದ ಹೇಳುತ್ತಿದೆಯೆಂದು ಅನ್ನಿಸುವುದಿಲ್ಲವೇ?
ಸಂದಿಗ್ಧ ಪರಿಸ್ಥಿತಿಯಲ್ಲಿ ಕೈಗಳನ್ನು ಮೇಲೆತ್ತಿ 'ದೇವರೇ ಕಾಪಾಡಪ್ಪಾ' ಅನ್ನುತ್ತೇವೆ. ಅಂದರೆ ದೇವರು ಮೇಲೆ ಇದ್ದಾನೆ ಎಂದು ಅಂದುಕೊಳ್ಳುತ್ತೇವೆ, ಆಕಾಶವನ್ನೂ ಮೇಲೆ ಇದೆ ಎಂದು ಭಾವಿಸಿದಂತೆ. ಆಕಾಶವನ್ನು ಬೆಟ್ಟ-ಗುಡ್ಡಗಳ ಮೇಲೆ, ರಾತ್ರಿಯಲ್ಲಿ ಮಿನುಗುವ ಚಂದ್ರ-ತಾರೆಗಳ ಹಿನ್ನೆಲೆಯಲ್ಲಿ ಕಾಣುವ ಸುಂದರ ದೃಷ್ಯಗಳ ರೀತಿಯಲ್ಲಿ ಕಾಣುವ ನಾವು ದೇವರೂ ವೈಕುಂಠ, ಕೈಲಾಸ, ಇತ್ಯಾದಿ ಬೇರೆಯೇ ಲೋಕಗಳಲ್ಲಿದ್ದಾನೆಂದು ಭಾವಿಸುತ್ತೇವೆ. ಕಾಶಿ, ಬದರಿ, ಕನ್ಯಾಕುಮಾರಿ, ಮೆಕ್ಕಾ, ಜೆರುಸಲೇಮ್, ಇತ್ಯಾದಿ ಸ್ಥಳಗಳು ದೇವರು ಇರುವ ವಿಶೇಷ ಸ್ಥಳಗಳೆಂದುಕೊಳ್ಳುತ್ತೇವೆ. ಆಕಾಶವನ್ನು ಮೇಲೆ ಮಾತ್ರ ಇದೆ ಎಂದು ಅಂದುಕೊಳ್ಳುವ ನಾವು ಅದು ನಮ್ಮೊಡನೆಯೇ ಇದೆ ಎಷ್ಟು ಜನ ಭಾವಿಸುತ್ತೇವೆ? ಕೈಗೆ ಸಿಗಲಾರದ ವಸ್ತುವನ್ನು ಗಗನಕುಸುಮವೆಂದು ವರ್ಣಿಸುತ್ತೇವೆ. ಆದರೆ, ಸದಾ ನಮ್ಮನ್ನು ಹೊಂದಿಕೊಂಡೇ ಇರುವ, ಆವರಿಸಿರುವ ಆಕಾಶವನ್ನು ಗಮನಿಸದ ನಾವುಗಳೇ ನಿಜವಾದ ಗಗನಕುಸುಮಗಳು. ಅಶನ, ವಸನ, ವಸತಿಗಳನ್ನು ಕರಣಿಸುವ ಭೂಮಿ ನಮ್ಮ ತಾಯಿಯಾದರೆ, ಸದಾ ನಮ್ಮೊಡನಿದ್ದು ನಮ್ಮನ್ನು ಗಮನಿಸುವ ಆಕಾಶ ನಮ್ಮ ತಂದೆ! ನಮ್ಮೊಂದಿಗಿದ್ದರೂ ತನ್ನ ಇರುವನ್ನು ಪ್ರಕಟಿಸದ, ನಮ್ಮ ಯಾವುದೇ ಚಟುವಟಿಕೆಗಳಿಗೆ ಅಡ್ಡಿಪಡಿಸದ, ಜಗತ್ತನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿರುವ ಆಗಸಕ್ಕಿಂತ ಹೆಚ್ಚು ವಾತ್ಸಲ್ಯಮಯಿ ತಂದೆ ಬೇರೆ ಯಾರಾದರೂ ಇರಲು ಸಾಧ್ಯವೇ?
ನಾಟಕದಲ್ಲಿ ವಿವಿಧ ಪಾತ್ರಧಾರಿಗಳು ನಾಟಕ ಆಡುವಾಗ ಪಾತ್ರಗಳೇ ಆಗಿ ಅನುಭವಿಸಿ ಆಡಿದರೂ ನಾಟಕ ಮುಗಿದ ನಂತರ ವಾಸ್ತವ ವ್ಯಕ್ತಿಗಳಾಗುತ್ತಾರೆ. ಆದರೆ ನಿಜ ಜೀವನ ನಾಟಕದಲ್ಲಿ? 'ಜಗದೀಶನಾಡುವಾ ಜಗವೇ ನಾಟಕರಂಗ' ಎಂಬ ಹಾಡು ಕೇಳಿದ್ದೇವೆಲ್ಲವೇ? ಈ ನಾಟಕರಂಗದ ಅದ್ಭುತ ಪರದೆ ಆಕಾಶ! ಈ ಪರದೆಯ ಮುಂದೆ ನಾವು-ನೀವೆಲ್ಲರೂ ಪಾತ್ರಧಾರಿಗಳೇ. ನಮ್ಮ ಪಾತ್ರಗಳನ್ನು ನಾವು ಎಷ್ಟು ತನ್ಮಯರಾಗಿ ನಿರ್ವಹಿಸುತ್ತೇವೆಂದರೆ ನಾವು ಆ ಪಾತ್ರಗಳೇ ಆಗಿಬಿಡುತ್ತೇವೆ. ನಾವು ನಿಜವಾಗಿ ಯಾರು ಎಂದು ತಲೆಕೆಡಿಸಿಕೊಳ್ಳುವುದೇ ಇಲ್ಲ, ಮತ್ತು ಪಾತ್ರವಲ್ಲದೆ ನಾವು ಬೇರೆ ಎಂದು ಅಂದುಕೊಳ್ಳುವುದೇ ಇಲ್ಲ. ಈ ಜೀವನ ನಾಟಕದಲ್ಲಿ ನಮ್ಮದು ಕೆಲ ಸೀಮಿತ ಅವಧಿಗೆ ಬಂದು ಹೋಗುವ ಪಾತ್ರವಾಗಿದ್ದರೂ ನಾವು ಶಾಶ್ವತರೆಂದು ಅಂದುಕೊಂಡು, ನಮ್ಮ ಇರುವಿಕೆಯನ್ನು ಶಾಶ್ವತಗೊಳಿಸಲು, ನಮ್ಮತನವನ್ನು ಅಚ್ಚೊತ್ತಲು ಜೀವನ ಪೂರ್ತಿ ತೊಡಗಿಕೊಳ್ಳುತ್ತೇವೆ!
ಒಂದು ಮೂಲವಸ್ತು ಯಾವ ಕಾಲಕ್ಕೂ ನಾಶವಾಗುವುದಿಲ್ಲವೆಂದು ರೂಪಾಂತರ ಮಾತ್ರ ಹೊಂದುವುದೆಂದು ವಿಜ್ಞಾನ ಹೇಳುತ್ತದೆ. ನಮ್ಮ ದೇಹ ಪಂಚಭೂತಗಳಿಂದ ಆಗಿದ್ದು ಆ ದೇಹಕ್ಕೆ ಅರ್ಥ ಕೊಡುವ ಒಂದು ಶಕ್ತಿ ಜೀವಾತ್ಮ. ಸತ್ತ ನಂತರದಲ್ಲಿ ದೇಹ ಪಂಚಭೂತಗಳಲ್ಲಿ ಸೇರಿ ಹೋಗುತ್ತದೆ. ಜೀವಾತ್ಮ? ಅದಕ್ಕೆ ನಾಶವಿಲ್ಲ. ನಂತರದಲ್ಲಿ ಅದು ಹೊಸ ಶರೀರವನ್ನು ಕಂಡುಕೊಳ್ಳುತ್ತದೆ ಎಂದು ತಿಳಿದವರು ಹೇಳುತ್ತಾರೆ. ವೈಜ್ಞಾನಿಕವಾಗಿ ಚಿಂತಿಸಿದರೂ ಪಂಚಭೂತಗಳಿಗೆ ಸೇರದ ಜೀವಾತ್ಮ ಯಾವುದಾದರೂ ರೂಪದಲ್ಲಿ ಇರಲೇಬೇಕಲ್ಲವೆ? ಈ ಎಲ್ಲಾ ಕ್ರಿಯೆಗಳಿಗೆ ಸಾಕ್ಷಿಯಾಗುವುದು ಆಕಾಶವೊಂದೇ! ಇದ್ದದ್ದು ಆಕಾಶದಲ್ಲಿ, ಹೋದದ್ದು ಆಕಾಶದಲ್ಲಿ, ಬರುವುದೂ ಆಕಾಶದಲ್ಲಿ! ಇದನ್ನು ವೈಜ್ಞಾನಿಕ ಆಸ್ತಿಕವಾದವೆನ್ನಬಹುದು.
"ರೀ, ಎಷ್ಟು ಹೊತ್ತು ಅಲ್ಲೇ ಕುಳಿತಿರುತ್ತೀರಿ? ಕತ್ತಲಾಯಿತು, ಒಳಗೆ ಬನ್ನಿ" ಎಂಬ ಕರೆ ನನ್ನನ್ನು ಎಚ್ಚರಿಸಿತು. ಆಕಾಶದಿಂದ ಭೂಮಿಗೆ ಬಂದೆ. ನನ್ನ ಆಕಾಶಯಾನ ಅಲ್ಲೇ ಮೊಟಕಾಯಿತು. ಇನ್ನೊಮ್ಮೆ ದೀರ್ಘ ಆಕಾಶಯಾನ ಮಾಡಬೇಕೆಂಬ ಇಚ್ಛೆಯೊಂದಿಗೆ ಮನೆಯೊಳಗೆ ಸೇರಿಕೊಂಡೆ.
***********
hahaha.....naanu nimma vimaana yaanada anubhava irabeku ankondidde.....cHENNAGIDE SIR....
ಪ್ರತ್ಯುತ್ತರಅಳಿಸಿವಿಮಾನದ ನೆರವಿಲ್ಲದೇ ಮಾಡಿದ ಆಕಾಶಯಾನ! ಧನ್ಯವಾದ, ಕೊಡ್ಲಾಡಿಯವರೇ.
ಪ್ರತ್ಯುತ್ತರಅಳಿಸಿಶ್ರೀ ನಾಗರಾಜರವರೇ,
ಪ್ರತ್ಯುತ್ತರಅಳಿಸಿಆಕಾಶಯಾನವನ್ನು ಮಾಡಲು ಮಾಡಿಕೊಟ್ಟೆ ಈ ಅವಕಾಶಕ್ಕೆ ನಿಮಗೆ ಧನ್ಯವಾದಗಳು.
ಆಕಾಶದಲ್ಲಿ ವಿಹರಿಸುವಾಗ ಅದೆಷ್ಟೋ ವಿಚಾರಗಳನ್ನು ಪೋಣಿಸುತ್ತ ಪ್ರಯಾಣ ಬೇಜಾರಾಗದಂತೆ ನಮ್ಮನ್ನು ಕರೆದುಕೊಂಡು ಹೋಗಿದ್ದೀರಿ. ಆಕಾಶದಲ್ಲೇನಿದೆ? ಎಂದು ಪ್ರಶ್ನೆ ಮಾಡುವವರಿಗೆ ನಿಮ್ಮ ಲೇಖನ ಸ್ಪಷ್ಟ ಉತ್ತರವಾಗುತ್ತದೆ.
ಈ ಚಂದದ ವಿಹಾರಕ್ಕೆ ಬಂದ ನಾವು ಧನ್ಯರು.
ವಿಶ್ವಾಸದೊಂದಿಗೆ,
ಪ್ರಕಾಶ್.
ವಂದನೆಗಳು, ಪ್ರಕಾಶರವರೇ.
ಪ್ರತ್ಯುತ್ತರಅಳಿಸಿ