ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಡಿಸೆಂಬರ್ 14, 2011

ಸೇವಾಭಾರತಿ - ಸವಿನೆನಪು

'ಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ಉರಿಯುವಾ'
     ಹಾಸನ ನಗರದಲ್ಲಿ ಸೇವಾಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವ ಸಲುವಾಗಿ ಅಕ್ಟೋಬರ್, ೧೯೯೩ರಲ್ಲಿ ಸೇವಾಭಾರತಿ ಸಂಸ್ಥೆ ಉದಯವಾಗಿ ಅದಕ್ಕಾಗಿ ೧೩ ಸದಸ್ಯರ ತಂಡ ಜೋಡಿಸಲಾಯಿತು. ಈ ಸಂಸ್ಥೆಯ ಸಂಯೋಜಕ ನಾನಾಗಿದ್ದರೆ, ಡಾ. ಗುರುರಾಜ ಹೆಬ್ಬಾರರು ಅಧ್ಯಕ್ಷರು, ಡಾ. ವೈ.ಎಸ್. ವೀರಭದ್ರಪ್ಪ ಹಾಗೂ ಡಾ. ಭಾರತಿ ರಾಜಶೇಖರ್ ರವರು ಉಪಾಧ್ಯಕ್ಷರು, ಶ್ರೀ ಹೆಚ್.ಬಿ ಲಕ್ಷ್ಮಣ್‌ರವರು ಕಾರ್ಯದರ್ಶಿ, ಶ್ರೀ ಸುಬ್ರಹ್ಮಣ್ಯ ಭಟ್‌ರವರು ಸಹಕಾರ್ಯದರ್ಶಿ, ಶ್ರೀ ಎಂ.ಎಸ್. ಶ್ರೀಕಂಠಯ್ಯನವರು ಖಜಾಂಚಿಯಾಗಿ, ಸದಸ್ಯರುಗಳಾಗಿ ಶ್ರೀಯುತರಾದ ಹರಿಹರಪುರ ಶ್ರೀಧರ್, ಕೆ. ವೆಂಕಟಯ್ಯ, ನರಹರಿ, ಗಿರಿಜಮ್ಮ, ಸೀತಾಲಕ್ಷ್ಮಮ್ಮ, ಡಾ. ದೇವದಾಸ್ ರವರುಗಳು ಇದ್ದರು. ಯೋಗ ಮತ್ತು ಸಂಸ್ಕೃತ ತರಗತಿಗಳು, ವೈದ್ಯಕೀಯ ಸೇವೆ, ಆಪ್ತ ಸಲಹಾ ಕೇಂದ್ರ ಮತ್ತು ಶಿಕ್ಷಣ ವಿಭಾಗಗಳಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ನಿರ್ಧರಿಸಿದೆವು. ಹೆಸರಿಗೆ ೧೩ ಜನರ ತಂಡವಿದ್ದರೂ ಡಾ. ಗುರುರಾಜ ಹೆಬ್ಬಾರ್ ಮತ್ತು ಡಾ. ವೈ.ಎಸ್. ವೀರಭದ್ರಪ್ಪನವರ  ಅತ್ಯಮೂಲ್ಯ ಸಹಕಾರ ಪಡೆದು ನಿಜವಾಗಿ ಸೇವಾಭಾರತಿಯ ಕೆಲಸದಲ್ಲಿ ತೊಡಗಿಕೊಂಡವರು ನಾನು, ಕೆ.ಇ.ಬಿ. ಇಂಜನಿಯರ್ ಶ್ರೀಧರ್ ಮತ್ತು ವಿಜಯಾ ಬ್ಯಾಂಕ್ ಉದ್ಯೋಗಿ ಲಕ್ಷ್ಮಣ್ ರವರು ಮಾತ್ರ. ಈ ಮಾತನ್ನು ಹೆಗ್ಗಳಿಕೆಗಾಗಿ ಹೇಳುತ್ತಿಲ್ಲ. ಇದು ವಾಸ್ತವ ಸಂಗತಿ. ನಮ್ಮ ಮೂವರ ತಂಡವನ್ನು  ೩ ಚಕ್ರಗಳ ಆಟೋರಿಕ್ಷಾಗೆ ಹೋಲಿಸಲಾಗುತ್ತಿತ್ತು. ೩ ಚಕ್ರಗಳ ಪೈಕಿ ಒಂದಕ್ಕೆ ತೊಂದರೆಯಾದರೂ ಸೇವಾ ಆಟೋ ಚಲಿಸುತ್ತಿರಲಿಲ್ಲ. ಸುಮಾರು ೪ ವರ್ಷಗಳ ಕಾಲ ಈ ಸೇವಾಚಟುವಟಿಕೆಗಳು ನಡೆದು ಜನಮನ್ನಣೆ ಗಳಿಸಿತ್ತು. ನಂತರದಲ್ಲಿ ಲಕ್ಷ್ಮಣ್ ಮೈಸೂರಿಗೆ ಮತ್ತು ನಾನು ಮಂಗಳೂರಿಗೆ ವರ್ಗಾವಣೆಗೊಂಡದ್ದರಿಂದ ಸೇವಾಚಟುವಟಿಕೆಗಳು ನಿಂತವು ಎಂದೇ ಹೇಳಬಹುದು. ಈಗ ಲಕ್ಷ್ಮಣ್ ರವರು ಮೈಸೂರಿನಲ್ಲೇ ಇದ್ದರೆ ನಾನು ಮತ್ತು ಶ್ರೀಧರ್ ಸ್ವಯಂ ನಿವೃತ್ತಿ ಪಡೆದು ಹಾಸನದಲ್ಲಿದ್ದೇವೆ. ಈಗ ಯಾರಾದರೂ ತರುಣರು ಸೇವಾಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಮುಂದೆ ಬಂದಲ್ಲಿ ನಮ್ಮಿಬ್ಬರ ಕ್ರಿಯಾತ್ಮಕ ಸಹಕಾರ ಅವರಿಗೆ ಖಂಡಿತವಾಗಿ ದೊರೆಯಲಿದೆ.  
'ಸೇವಾ ಆಟೋ'ದ ಮೂರು ಚಕ್ರಗಳು: ಶ್ರೀಧರ್, ನಾಗರಾಜ್, ಲಕ್ಷ್ಮಣ್ (1994ರ ಫೋಟೋ)
ಎಂಜಿನ್: ಡಾ. ಗುರುರಾಜ ಹೆಬ್ಬಾರ್
ಸೇವಾಚಟುವಟಿಕೆಗಳ ಸಂಕ್ಷಿಪ್ತ ನೋಟ:
೧. 'ಸೇವಾದಿನ'ದ ಆಚರಣೆ:
     ಸಮಾಜಸೇವೆಗಾಗಿಯೇ ತಮ್ಮ ಇಡೀ ಆಯಷ್ಯವನ್ನು ಧಾರೆಯೆರೆದು ಸಾವಿರಾರು ಯುವಕ-ಯುವತಿಯರಿಗೆ ಸಮಾಜ ಚಟುವಟಿಕೆಗಳನ್ನು ನಡೆಸಲು ಪ್ರೇರೇಪಿಸಿದ ದಿವ್ಯ ಚೇತನ ಸ್ವರ್ಗೀಯ ಅಜಿತಕುಮಾರರ ಪುಣ್ಯತಿಥಿಯ ದಿನದಂದು - ಅಂದರೆ ೩೦-೧೨-೧೯೯೩ರಂದು - ಸೇವಾದಿನವಾಗಿ ಆಚರಿಸಿದೆವು. ಪೂರ್ವಭಾವಿಯಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ (ವಿಷಯ: ಸಮಾಜಸೇವೆಯಲ್ಲಿ ನನ್ನ ಪಾತ್ರ) ಮತ್ತು ದೇಶಭಕ್ತಿ ಗೀತೆಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾಲೇಜು ವಿದ್ಯಾರ್ಥಿಗಳಿಗಾಗಿ 'ತ್ಯಾಗ ಮತ್ತು ಸೇವೆ - ಇವು ಭರತಖಂಡದ ಆದರ್ಶಗಳು' ಎಂಬ ವಿಷಯದ ಮೇಲೆ ಭಾಷಣ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿಜೇತರಿಗೆ ಸೇವಾದಿನದಂದು ಬಹುಮಾನಗಳನ್ನು ವಿತರಿಸಲಾಯಿತು. ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಪ್ರವಚನ ಮಂದಿರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ನಿಸ್ಪೃಹ ಸೇವೆ ಸಲ್ಲಿಸುತ್ತಿದ್ದ ಹಾಸನದ ಔಷಧ ಪರಿವೀಕ್ಷಕರಾದ ಶ್ರೀ ಕರುಣಾಕರ ಮೂಲ್ಯ ಮತ್ತು ಪೌರ ಕಾರ್ಮಿಕ ಶ್ರೀ ಓಬಳಯ್ಯನವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. 


೨. ಉಚಿತ ಆರೋಗ್ಯ ತಪಾಸಣಾ ಶಿಬಿರಗಳು:
     ಹಾಸನದ ಸಿದ್ದಯ್ಯನಗರ ಮತ್ತು ಅಂಬೇಡ್ಕರ್ ನಗರದ ನಿವಾಸಿಗಳ ಸಲುವಾಗಿ ಪ್ರತಿ ತಿಂಗಳಿನ ಮೊದಲ ಭಾನುವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿದ್ದು ಸೇವಾಭಾರತಿಯ ಉತ್ತಮ ಚಟುವಟಿಕೆಗಳಲ್ಲಿ ಹೆಸರಿಸಬಹುದಾದುದು. ವಿಷಾದದ ಸಂಗತಿಯೆಂದರೆ ಅಲ್ಲಿನ ಯುವಕರು ತಪಾಸಣಾ ಶಿಬಿರ ನಡೆಯುತ್ತಿದ್ದ ಸರ್ಕಾರಿ ಶಾಲೆಯ ಕಾಂಪೌಂಡಿನ ಮೇಲೆ ಕುಳಿತು ತಮಾಷೆ ನೋಡುತ್ತಿದ್ದರೇ ಹೊರತು ಕೈಜೋಡಿಸುತ್ತಿರದೇ ಇದ್ದುದು. ಸ್ವಲ್ಪ ದೂರದ ಸ್ಥಳದಿಂದ ಟೇಬಲ್ಲು, ಕುರ್ಚಿಗಳನ್ನೂ ನಾವು ಮೂವರೇ ಹೊತ್ತು ತರುತ್ತಿದ್ದರೂ ಆ ಯುವಕರಿಗೆ ಸಹಾಯ ಮಾಡಬೇಕೆಂದು ಅನ್ನಿಸುತ್ತಿರಲಿಲ್ಲ. ಹಲವಾರು ದಿನಗಳ ಕಾಲ ಸಿದ್ದಯ್ಯನಗರ ಮತ್ತು ಅಂಬೇಡ್ಕರ್ ನಗರದ ಮನೆಮನೆಗಳಿಗೆ ಹೋಗಿ ಅಲ್ಲಿನವರ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರ ಸಂಗ್ರಹ ಸಹ ನಾವು ಮೂವರೇ ಮಾಡಿದ್ದೆವು.ಅದಕ್ಕೆ ತಕ್ಕಂತೆ ಔಷಧಿ, ಮಾತ್ರಗಳನ್ನು ಹೊಂದಿಸಿ ತರಲಾಗುತ್ತಿತ್ತು. ಡಾ. ಗುರುರಾಜ ಹೆಬ್ಬಾರರು ತಮ್ಮೊಡನೆ ಇತರ ವೈದ್ಯರುಗಳು, ನರ್ಸ್‌ಗಳು, ಟೆಕ್ನಿಷಿಯನ್ನರುಗಳನ್ನು ಕರೆತರುತ್ತಿದ್ದರು. ಡಾ. ವೀರಭದ್ರಪ್ಪನವರು ಅಗತ್ಯದ ಔಷಧಿಗಳು, ಮಾತ್ರೆಗಳನ್ನು ಒದಗಿಸುತ್ತಿದ್ದರು. ಇವರಿಬ್ಬರ ಕಾರ್ಯ ನಮಗೆ ಕೆಲಸ ಮಾಡಲು ಉತ್ಸಾಹ ಕೊಡುತ್ತಿತ್ತು. ಹಲವಾರು ತಿಂಗಳುಗಳವರೆಗೆ (೦೨-೦೧-೯೪, ೦೬-೦೨-೯೪, ೦೬-೦೩-೯೪, ೦೩-೦೪-೯೪, ೦೧-೦೫-೯೪, ೦೫-೦೬-೯೪, ೦೩-೦೭-೯೪, ೦೭-೦೮-೯೪) ನಡೆದ ಇಂತಹ ಶಿಬಿರಗಳಿಂದ ಅಲ್ಲಿನ ನಿವಾಸಿಗಳಿಗೆ ಬಹಳ ಉಪಕಾರವಾಯಿತೆಂದೇ ಹೇಳಬಹುದು. ಸರ್ಕಾರದಿಂದ ಹಣದ ಅನುಕೂಲ ಪಡೆದು ಸ್ವಲ್ಪ ಭಾಗವನ್ನು ಮಾತ್ರ ಶಿಬಿರಗಳಿಗೆ ಉಪಯೋಗಿಸುತ್ತಿದ್ದೆವೆಂದು ಅಲ್ಲಿನ ಕೆಲವರ ತಪ್ಪು ಭಾವನೆಯಾಗಿತ್ತು. ಈ ಕುಹಕವನ್ನು ಸಹಿಸಿಕೊಂಡು ನಾವು ಕೆಲಸ ಮಾಡುತ್ತಿದ್ದೆವು. ಡಾ. ಗುರುರಾಜ ಹೆಬ್ಬಾರರು ತಮ್ಮ ಚಿಕಿತ್ಸಾಲಯದಲ್ಲಿ ಸೇವಾಭಾರತಿಯ ಹೆಸರಿನಲ್ಲಿ ಒಂದು ಗೋಲಕ ಇರಿಸಿದ್ದರು. ಆ ಗೋಲಕದಲ್ಲಿ ಸಂಗ್ರಹವಾಗುವ ಮೊಬಲಗನ್ನು ಸೇವಾಭಾರತಿಯ ಚಟುವಟಿಕೆಗಳಿಗೆ ವಿನಿಯೋಗಿಸಲಾಗುತ್ತಿತ್ತು.


೩.ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ:
     ಸಂಜೀವಿನಿ ಸಹಕಾರಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ೧೦-೦೯-೯೪ರಿಂದ ೧೨-೦೯-೯೪ರವರೆಗೆ ಉಚಿತ ನೇತ್ರ ಶಸ್ತ್ರಚಿಕಿತ್ಸಾಶಿಬಿರ ನಡೆಸಿದ್ದು ಹಲವರು ಇದರ ಉಪಯೋಗ ಪಡೆದದ್ದು ಉಲ್ಲೇಖನೀಯ ಸಂಗತಿ. ರೋಗಿಗಳಿಗೆ ಮತ್ತು ಅವರ ಸಹಾಯಕರುಗಳಿಗೆ ಉಚಿತ ಊಟೋಪಚಾರದ ವ್ಯವಸ್ಥೆ ಸಹ ಮಾಡಲಾಗಿತ್ತು.


೪. ಸಂಸ್ಕೃತ ಸಂಭಾಷಣಾ ಶಿಬಿರಗಳು:
     ೨೧-೦೨-೯೪ ರಿಂದ ೦೨-೦೩-೯೪ರವರೆಗೆ ಮತ್ತು ೧೦-೦೩-೯೪ರಿಂದ ೧೯-೦೩-೯೪ರವರೆಗೆ ಎರಡು ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಆಯೋಜಿಸಲಾಗಿತ್ತು.


೫. ರಕ್ತದಾನ ಯೋಜನೆ:
     ಗಾಂಧಿಜಯಂತಿ ದಿನವಾದ ೦೨-೧೦-೯೪ರಂದು ರಕ್ತದಾನ ಯೋಜನೆಯ ಉದ್ಘಾಟನೆಯಾಯಿತು. ಸೇವಾಭಾರತಿಯ ಪ್ರಕಟಣೆ ನೋಡಿ ನೂರಾರು ಜನರು ಆಗಮಿಸಿ ರಕ್ತದಾನಿಗಳಾಗಿ ತಮ್ಮ ಹೆಸರು ನೋಂದಾಯಿಸಿಕೊಂಡದ್ದು ವಿಶೇಷ. ಅವರೆಲ್ಲರ ರಕ್ತದ ವರ್ಗದ ಉಚಿತ ತಪಾಸಣೆ ಮಾಡಿ ಎಲ್ಲರಿಗೂ ಗುರುತಿನ ಕಾರ್ಡುಗಳನ್ನು ಕೊಡಲಾಯಿತು. ಅಪಘಾತ, ಶಸ್ತ್ರಚಿಕಿತ್ಸೆ, ಇತ್ಯಾದಿ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅವರ ಬಂಧುಗಳು, ಸ್ನೇಹಿತರಿಂದ ರಕ್ತ ಸಿಕ್ಕದ ಅನಿವಾರ್ಯ ಪ್ರಸಂಗಗಳಲ್ಲಿ ರಕ್ತದಾನಿಗಳಿಗೆ ಹೇಳಿಕಳುಹಿಸಿ ರಕ್ತ ಒದಗಿಸುವ ಹೊಣೆಯನ್ನು ನಾವು ಹೊತ್ತೆವು. ಈ ಯೋಜನೆ ಪ್ರಾರಂಭದ ನಂತರ ರಕ್ತ ಕೋರಿ ದೂರವಾಣಿ ಕರೆಗಳು ನಿರಂತರವಾಗಿ ಬರಲಾರಂಭಿಸಿದ್ದವು. ನೂರಾರು ರೋಗಿಗಳಿಗೆ ರಕ್ತದಾನ ಮಾಡಿ ಜೀವ ಉಳಿಸಿದ ಹೆಗ್ಗಳಿಕೆ ನಮ್ಮ ಸಂಸ್ಥೆಯದು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಸ್ವತಃ ನಾನೂ ೧೬ ಬಾರಿ ರಕ್ತದಾನ ಮಾಡಿದ್ದೇನೆ. ನನಗೆ ಮಧುಮೇಹ ಹಾಗೂ ಥೈರಾಯಿಡ್ ಸಮಸ್ಯೆ ಬಂದ ನಂತರದಲ್ಲಿ ರಕ್ತದಾನ ಮಾಡುವುದನ್ನು ನಿಲ್ಲಿಸಿದೆ. 


೬. ಸ್ವದೇಶಿ ಜಾಗರಣ ಆಂದೋಲನ:
      ಸ್ವದೇಶಿ ಜಾಗರಣ ಆಂದೋಲನದ ಅಂಗವಾಗಿ ಭಿತ್ತಿಚಿತ್ರಗಳು, ವ್ಯಂಗ್ಯಚಿತ್ರಗಳ ರಚನಾಸ್ಪರ್ಧೆ ಹಾಗೂ ಪ್ರದರ್ಶನವನ್ನು ೨೪-೧೨-೯೪ರಂದು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರದರ್ಶಿಸಲಾದ ಭಿತ್ತಿಚಿತ್ರಗಳು ಮತ್ತು ವ್ಯಂಗ್ಯಚಿತ್ರಗಳು ಆಕರ್ಷಣೀಯವಾಗಿದ್ದು ಜನಮನ ಸೆಳೆಯುವಲ್ಲಿ ಯಶಸ್ವಿಯಾದವು. 
     ಕಾಲೇಜು ವಿದ್ಯಾರ್ಥಿಗಳಿಗಾಗಿ 'ಸ್ವದೇಶೀ ಆಂದೋಲನದಿಂದಲೇ ದೇಶದ ಪ್ರಗತಿ ಸಾಧ್ಯ' ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸಿದ್ದು ಅನೇಕರು ಉತ್ಸಾಹದಿಂದ ಪಾಲುಗೊಂಡಿದ್ದು ವಿಶೇಷ.


೭. ಸೇವಾ-ಸ್ವದೇಶೀ-ಸುರಕ್ಷಾ ದಿನ:
     ಸ್ವದೇಶಿ ಜಾಗರಣ ವೇದಿಕೆಯೊಂದಿಗೆ ಕೂಡಿಕೊಂಡು ಸೇವಾಭಾರತಿಯ ಪ್ರಥಮ ವಾರ್ಷಿಕೋತ್ಸವವನ್ನು ೨೪-೧೨-೯೪ರಂದು ಹಾಸನದ ಗಣಪತಿ ಪೆಂಡಾಲಿನಲ್ಲಿ ಸೇವಾ-ಸ್ವದೇಶಿ-ಸುರಕ್ಷಾ ದಿನವಾಗಿ ಆಚರಿಸಲಾಯಿತು. ಸ್ವದೇಶಿ ಜಾಗರಣ ವೇದಿಕೆಯ ರಾಜ್ಯ ಸಂಚಾಲನಾ ಸಮಿತಿಯ ಸದಸ್ಯ ಶ್ರೀ ದಿನೇಶ ಕಾಮತರಿಂದ ಪ್ರಧಾನ ಭಾಷಣ ನೆರೆದಿದ್ದವರ ಮನದಲ್ಲಿ ವಿಚಾರಮಂಥನ ಎಬ್ಬಿಸಿತು. ನಿಸ್ಪೃಹ ಸೇವೆಯನ್ನು ಗುರುತಿಸಿ ಹಾಸನ ಜಿಲ್ಲಾಧಿಕಾರಿ ಕಛೇರಿಯ ಸಹಾಯಕ ಶ್ರೀ ಕೆ. ರಾಮಸ್ವಾಮಿ ಮತ್ತು ಸಂಜೀವಿನಿ ಸಹಕಾರಿ ಆಸ್ಪತ್ರೆಯ ದಾದಿ ಶ್ರೀಮತಿ ಎನ್.ಎಂ.ಕಮಲಮ್ಮರವರನ್ನು ಸನ್ಮಾನಿಸಲಾಯಿತು.


೮. ವಿನೂತನ ರಕ್ಷಾಬಂಧನ ಕಾರ್ಯಕ್ರಮ:
     ೨೫-೦೮-೯೬ರಂದು ಹಾಸನದ ಶಾಂತಿನಗರ ಬಡಾವಣೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ, ಮಾನವತಾ ಮತ್ತು ಪರಿಸರವಾದಿ ಸಂಘ, ಶಾಂತಿನಗರ ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗದೊಂದಿಗೆ ಪಾರ್ಥೇನಿಯಂ ನಿರ್ಮೂಲನಾ ಕಾರ್ಯಕ್ರಮ ಜೋಡಿಸಿಕೊಂಡು ರಕ್ಷಾಬಂಧನ ಕಾರ್ಯಕ್ರಮ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 


೯. ಸಾಂಸ್ಕೃತಿಕ ಚಟುವಟಿಕೆ:
     ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ೦೧-೦೯-೯೬ರಂದು ಕೆಳಕಂಡ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸುಂದರ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಮುದ್ದುಕೃಷ್ಣ ವೇಷ ಸ್ಪರ್ಧೆ: ೧-೩ ವರ್ಷದ ಮಕ್ಕಳಿಗೆ,
ಬಾಲಕೃಷ್ಣ ವೇಷ ಸ್ಪರ್ಧೆ:   ೪-೬ ವರ್ಷದ ಮಕ್ಕಳಿಗೆ
ಭಗವದ್ಗೀತಾ ಕಂಠಪಾಠ ಸ್ಪರ್ಧೆ: ಮಾಧ್ಯಮಿಕ ಶಾಲಾ ಮಕ್ಕಳಿಗೆ.
ಮಹಿಳೆಯರಿಗಾಗಿ: ದೇಶಭಕ್ತಿ ಗೀತೆ ಸ್ಪರ್ಧೆ, ದೇವರನಾಮ ಸ್ಪರ್ಧೆ, ರಂಗೋಲಿ ಸ್ಪರ್ಧೆ.
     ಮನಸ್ಸಿದ್ದಲ್ಲಿ ಮಾರ್ಗವಿದೆ. ಯುವಕ-ಯುವತಿಯರೇ, ಸೇವಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿರಿ. ನಿಮಗೆ ಪ್ರೇರಿಸುವ ಸಲುವಾಗಿಯೇ ಸೇವಾಭಾರತಿಯ ಚಟುವಟಿಕೆಗಳ ಮಾಹಿತಿ ಇಲ್ಲಿ ನೀಡಿದೆ. ಹಾಸನದಲ್ಲಿ ನಡೆಯುವ ಎಲ್ಲಾ ಸೇವಾ ಚಟುವಟಿಕೆಗಳಿಗೆ ನಮ್ಮ ಹೃತ್ಪೂರ್ವಕ ಸಹಕಾರವಿದೆ. 
     [ಸೇವಾಭಾರತಿಯ ಚಟುವಟಿಕೆಗಳ ಕೆಲವು ಫೋಟೋಗಳನ್ನು ಇಲ್ಲಿ ಕ್ಲಿಕ್ಕಿಸಿ ನೋಡಬಹುದು:  http://kavimana.blogspot.com/2011/12/blog-post_14.html]

ಲೋಕ ಹಿತದ ಕಾಯಕ ನಾಡಿಗಭಯದಾಯಕ
ವ್ಯಕ್ತಿ ವ್ಯಕ್ತಿಯಾಗಲಿಂದು ನೈಜ ರಾಷ್ಟ್ರ ಸೇವಕ
***************
-ಕ.ವೆಂ.ನಾಗರಾಜ್.



4 ಕಾಮೆಂಟ್‌ಗಳು:

  1. ಅಂದಿನ ನೆನಪುಗಳನ್ನು ಕಣ್ಮುಂದೆ ತಂದಿದ್ದಕ್ಕೆ ಅನಂತ ಧನ್ಯವಾದಗಳು. ಹೌದು, ಯುವಕರು ಮುಂದೆ ಬಂದರೆ ಈಗಲೂ ವೈದ್ಯ ಮಿತ್ರರು ನಮ್ಮ ಕರೆಗೆ ಓಗೊಡುತ್ತಾರೆ. ಚಟುವಟಿಕೆಗಳನ್ನು ಪುನರಾರಂಭಿಸಬಹುದು.

    ಪ್ರತ್ಯುತ್ತರಅಳಿಸಿ
  2. ಆತ್ಮೀಯ ಶ್ರೀಧರ್ ಮತ್ತು ಮಿತ್ರರಲ್ಲಿ,

    ಸಾಕಷ್ಟು ಸಾಮಾಜಿಕ ಚಟುವಟಿಕೆ ಮಾಡಿದ್ದೀರ. ನಿಮ್ಮ ಸೇವಾ ಚಟುವಟಿಕೆಗಳ ಬಗ್ಗೆ ಬರೆದ ವರದಿ ಓದಿದೆ. ಧನ್ಯವಾದಗಳು ನಿಮ್ಮ ಕಳಕಳಿಗೆ.

    ಸಾಮಾಜಿಕ ಕ್ಷೇತ್ರದಲ್ಲಿ ಹಲವು ಹದಿನೆಂಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬದಲಿಗೆ ಯಾವುದಾದರು ಒಂದು ಕಾರ್ಯಕ್ರಮಕ್ಕೆ ನಮ್ಮನ್ನು ನಾವು ತೊಡಗಿಸಿಕೊಂಡು ಸತತ ಶ್ರಮಿಸಿದರೆ ಒಳಿತು ಎನ್ನುವುದು ನನ್ನ ವಯಕ್ತಿಕ ಅನುಭವದ ವಿಚಾರ. ಸೇವೆಗೆ ಕಾಲ ಯಾವತ್ತು ಮೀರಿರುವುದಿಲ್ಲ. ಈಗಲೂ ಯಾವುದಾದರು ಒಂದು ಕ್ಷೇತ್ರವನ್ನು ಆರಿಸಿಕೊಂಡು ಅದರಲ್ಲಿ ತೊಡಗಿಸಿಕೊಳ್ಳಲು ನಿರತರಾದರೆ ನಮ್ಮ ಸೇವೆಗೆ ಒಂದು ಹದ ಮತ್ತು ಸಾರ್ಥಕತೆ ಖಂಡಿತ ದೊರೆಯುತ್ತದೆ. ನಿಮ್ಮ ಪ್ರಯತ್ನಕ್ಕೆ ನಮ್ಮ ಸಹಕಾರ ಖಂಡಿತ ಇದೆ. ಒಳ್ಳೆಯದಾಗಲಿ. ನಮಸ್ಕಾರಗಳೊಂದಿಗೆ,

    ಪ್ರಕಾಶ್.

    ಪ್ರತ್ಯುತ್ತರಅಳಿಸಿ
  3. appa nimma mattu sridhar uncle team innu haage idhe - " ever green ".

    Bindu

    ಪ್ರತ್ಯುತ್ತರಅಳಿಸಿ