ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಡಿಸೆಂಬರ್ 13, 2012

ಕೆಳದಿ ಮೂಲ ಸಂಸ್ಥಾನದ ಮನ್ನೆಯ ಚೌಡಪ್ಪನಾಯಕ


     17ನೆಯ ಶತಮಾನದ ಕವಿಲಿಂಗಣ್ಣ ಅನುಪಮ ರೀತಿಯಲ್ಲಿ ಮಾಡಿರುವ ಜಂಬೂದ್ವೀಪವನ್ನು ಸುತ್ತುವರೆದಿದ್ದ ಸಮುದ್ರದ ರಮ್ಯ ವರ್ಣನೆಯನ್ನು ಹಾಗೂ ಕವಿ ಕಂಡಿದ್ದ ಕರ್ಣಾಟಕ ದೇಶದ ವರ್ಣನೆಯನ್ನು ಹಿಂದಿನ ಲೇಖನಗಳಲ್ಲಿ ಮಾಡಿಕೊಟ್ಟಿರುವೆ. ಸಕಲ ಸಂಪದ್ಭರಿತವಾದ ಆ ಕರ್ಣಾಟಕ ದೇಶದ ಮುಖಕಮಲವಾಗಿ ಸ್ವರ್ಗಸಮಾನವಾಗಿ ಮೆರೆಯುತ್ತಿದ್ದ ಪಟ್ಟಣವೇ ಕೆಳದಿ. ಪ್ರಸ್ತುತ ಕೆಳದಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಸಾಗರದಿಂದ ೮ ಕಿ.ಮೀ. ದೂರದಲ್ಲಿರುವ ಒಂದು ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ. 14ನೆಯ ಶತಮಾನದ ಕಾಲದ ಕಥೆಯಿದು. ಕೆಳದಿಯ ಪಕ್ಕದಲ್ಲಿದ್ದ ಹಳ್ಳಿಬಯಲು ಎಂಬ ಗ್ರಾಮದಲ್ಲಿ  ಬಸವಪ್ಪ - ಬಸವಮಾಂಬೆ ಎಂಬ ಶಿವಭಕ್ತ ದಂಪತಿ ವಾಸವಿದ್ದರು. ಬೇಸಾಯ ಮಾಡಿ ಜೀವಿಸಿದ್ದ ಅವರು ದೈವಭಕ್ತಿಯುಳ್ಳವರು, ಉತ್ತಮ ನಡೆ ನುಡಿಯುಳ್ಳವರಾಗಿ ಜನಾನುರಾಗಿಯಾಗಿದ್ದರು. ಸುಧಾಕರನ ಸದ್ರೂಪಿಯೆನಿಸಿದ ಚೌಡಪ್ಪ ಮತ್ತು 'ಇಂದುವಿನೊಡನುಜ್ವಲಿಸುವ ಮಂದಾರಂ ಜನಿಸಿದಂತೆ' ಭದ್ರಪ್ಪ ಎಂಬ ಇಬ್ಬರು ಮಕ್ಕಳನ್ನು ಪಡೆದ ಆ ದಂಪತಿ ಸುಖ-ಸಂತೋಷಾತಿಶಯದಿಂದ ಜೀವನ ನಡೆಸಿದ್ದರು. ಆ ಮಕ್ಕಳೂ ಸಹ ಉತ್ತಮ ರೀತಿಯಲ್ಲಿ ಬೆಳೆದು ವ್ಯವಸಾಯ, ವ್ಯಾಪಾರಗಳಲ್ಲಿ ತಂದೆ-ತಾಯಿಯರಿಗೆ ಸಹಕಾರಿಗಳಾಗಿ ಪ್ರವರ್ಧಮಾನಕ್ಕೆ ಬಂದದ್ದಲ್ಲದೆ, ಭುಜಬಲ ಪರಾಕ್ರಮಿಗಳಾಗಿಯೂ ಹೆಸರು ಗಳಿಸಿದರು. ಈ ಚೌಡಪ್ಪ ಮುಂದೆ ಕರ್ನಾಟಕದ ಹೆಮ್ಮೆಯ ಸಂಸ್ಥಾನವೊಂದರ ಸ್ಥಾಪಕನಾಗುವನೆಂದು ಆಗ ಯಾರೂ ಎಣಿಸಿರಲಿಲ್ಲ. 
     ಸಾಮಾನ್ಯ ಕುಟುಂಬದ ಕುಡಿಯೊಂದು ಕೆಳದಿ ಸಿಂಹಾಸನಾಧೀಶನಾದುದೇ ಒಂದು ರೋಚಕ ಕಥೆ. ವಿವಾಹ ಯೋಗ್ಯ ವಯಸ್ಸಿಗೆ ಬಂದಾಗ ಚೌಡಪ್ಪ, ಭದ್ರಪ್ಪರಿಗೆ ಬಸವಪ್ಪ-ಬಸವಮಾಂಬೆ ದಂಪತಿ ಉತ್ತಮ ಕುಲದ ಕನ್ಯೆಯರೊಂದಿಗೆ ಮದುವೆ ಮಾಡಿದರು. ಆ ಕಾಲಕ್ಕೆ ಅಗತ್ಯವಾಗಿದ್ದ ವಿದ್ಯಾಭ್ಯಾಸ, ಶಸ್ತ್ರಾಭ್ಯಾಸಗಳಲ್ಲೂ ಪರಿಣಿತರೆನಿಸಿದ, ಶಕ್ತಿಯಲ್ಲಿ, ಯುಕ್ತಿಯಲ್ಲಿ ಅಗ್ರಜರೆನಿಸಿದ ಚೌಡಪ್ಪ-ಭದ್ರಪ್ಪರು ಸಹಜವಾಗಿ ಗ್ರಾಮದಲ್ಲಿ ಮುಂಚೂಣಿಯಲ್ಲಿ ಗುರುತಿಸಲ್ಪಟ್ಟಿದ್ದರು. ದಿನಗಳು ಸಾಗುತ್ತಿದ್ದವು. ಒಂದು ದಿನ  ಒಂದು ವಿಚಿತ್ರ ಸಂಗತಿ ಜರುಗಿತು. "ಮಗೂ, ಚವುಡಾ" ಎಂಬ ಆಪ್ಯಾಯಮಾನ ಧ್ವನಿ ಬಂದೆಡೆಗೆ ಚೌಡಪ್ಪ ಹಿಂತಿರುಗಿ ನೋಡಿದರೆ ಅಲ್ಲಿ ವೃದ್ಧನಾದರೂ ಧೃಢಕಾಯನಾದ, ತೇಜೋವಂತನಾದ ಜಂಗಮ ಮುಗುಳ್ನಗುತ್ತಾ ಅಲ್ಲಿ ನಿಂತಿದ್ದ. ಅವನ ಹೊಳಪು ಕಂಗಳು, ಸೆಳೆಯುವ ವ್ಯಕ್ತಿತ್ವ ಕಂಡು ಬೆರಗಾಗಿ ಮೂಕನಾಗಿ ನಿಂತಿದ್ದ ಚೌಡಪ್ಪನನ್ನು ಜಂಗಮನ ಪುನರುಚ್ಛರಿತ "ಮಗೂ, ಚವುಡಾ" ಎಂಬ ವಾಣಿ ಎಚ್ಚರಗೊಳಿಸಿತು. ಜಂಗಮನಿಗೆ ನಮಸ್ಕರಿಸಿದ ಚೌಡಪ್ಪ ಆತನ ಮುಂದಿನ ನುಡಿಗಳಿಗಾಗಿ ಕಾತರಿಸಿದ. ಕಂಚಿನ ಕಂಠದಿಂದ ಜಂಗಮ ನುಡಿದ, "ಮಗೂ, ಕೆಳದಿಯ ಸೀಗೆವಳ್ಳಿಯ ಸೀಗೆಮೆಳೆಯ ಮಧ್ಯದಲ್ಲಿ ಶ್ರೀ ರಾಮೇಶ್ವರ ನೆಲೆಸಿದ್ದಾನೆ. ಲಿಂಗರೂಪಿಯಾದ ಆ ಮೂರ್ತಿ ಹುತ್ತದಿಂದ ಮುಚ್ಚಿಹೋಗಿದೆ. ನಿನ್ನ ಮನೆಯ ಕಪಿಲೆ ಬಣ್ಣದ ಹಸು ತನ್ನ ಕರುವಿನೊಂದಿಗೆ ದಿನಾ ಅಲ್ಲಿಗೆ ಹೋಗಿ ಹಾಲು ಸುರಿಸಿ ಬರುತ್ತಿದೆ. ಅದೇ ನಿನಗೆ ಲಿಂಗವಿರುವ ಸ್ಥಳ ತೋರಿಸುತ್ತದೆ. ರಾಮೇಶ್ವರನಿಗೆ ನೀನು ಸದ್ಭಕ್ತಿಯಿಂದ ಪೂಜೆ ಸಲ್ಲಿಸಿದ್ದೇ ಆದಲ್ಲಿ ನೀನು ಭೂವಲ್ಲಭನಾಗುವೆ." ಮೂಕ ವಿಸ್ಮಿತ ಚೌಡಪ್ಪ ಜಂಗಮನಿಗೆ ಮತ್ತೆ ದೀರ್ಘದಂಡ ನಮಸ್ಕಾರ ಮಾಡಿ ಎದ್ದು ನೋಡಿದರೆ ಜಂಗಮ ಅಲ್ಲಿರಲಿಲ್ಲ. ಧಿಗ್ಗನೆ ಕಣ್ಣು ಬಿಟ್ಟ ಚೌಡಪ್ಪನಿಗೆ ಅದು ಕನಸು ಎಂದು ಅರಿವಾಗಲು ಸ್ವಲ್ಪ ಸಮಯವೇ ಆಯಿತು. ಬೆಳಗಿನ ಜಾವದ ಕನಸು ನನಸಾಗುತ್ತದೆ ಎಂದು ಕೇಳಿದ್ದ ಚೌಡಪ್ಪನಿಗೆ ಮತ್ತೆ ನಿದ್ರೆ ಬರಲಿಲ್ಲ. ಕನಸಿನ ವಿಚಾರವನ್ನು ತಾಯಿಗೆ ಹೇಳುವವರೆಗೂ ಅವನಿಗೆ ಸಮಾಧಾನವಿರಲಿಲ್ಲ. ಎಲ್ಲವನ್ನೂ ಕೇಳಿಸಿಕೊಂಡ ಬಸವಾಂಬಿಕೆ ಆನಂದತುಂದಿಲಳಾಗಿ, "ಚೌಡಾ, ನಿನ್ನ ಕನಸಿನಲ್ಲಿ ಬಂದವನು ಸಾಕ್ಷಾತ್ ಪರಶಿವನೇ ಸರಿ. ಶಿವ ಹೇಳಿದಂತೆ ಶ್ರೀ ರಾಮೇಶ್ವರನಿಗೆ ನಡೆದುಕೋ. ನಿನಗೆ ಖಂಡಿತಾ ಶುಭವಾಗುವುದು. ಇದರಲ್ಲಿ ಅನುಮಾನವೇ ಇಲ್ಲ" ಎಂದಳು. 
     ಮರುದಿನವೇ ಚೌಡಪ್ಪ ಕಪಿಲೆ ಬಣ್ಣದ ಹಸುವನ್ನು ಗಮನಿಸಲು ಆಳನ್ನಿಟ್ಟು ನೋಡಲಾಗಿ ಅದು ಹುತ್ತದ ಬಳಿಗೆ ಹೋಗಿ ಹಾಲು ಸುರಿಸಿ ಬಂದಿದ್ದು ನಿಜವೆಂದು ತಿಳಿದು ಆಶ್ಚರ್ಯಚಕಿತನಾದ. ಜಂಗಮ ಕನಸಿನಲ್ಲಿ ಹೇಳಿದಂತೆ ಹುತ್ತವನ್ನು ಅಗೆದು ಮಣ್ಣು ಸರಿಸಿ ನೋಡಿದರೆ ಅಲ್ಲಿ ಮಂಗಳಕರವಾಗಿ ಶೋಭಿಸುತ್ತಿದ್ದ ಲಿಂಗವನ್ನು ಕಂಡು ಭಯಭಕ್ತಿಂದ ನಮಿಸಿದರು. ತಡ ಮಾಡದೆ ಸುತ್ತ ಮುತ್ತಲಿನ ಜಾಗವನ್ನು ಹಬ್ಬಿದ್ದ ಪೊದೆ, ಬಳ್ಳಿ, ಮುಳ್ಳುಕಂಟಿಗಳಿಂದ ಮುಕ್ತಗೊಳಿಸಿ ಸಮತಟ್ಟುಗೊಳಿಸಿ, ಅಲ್ಲಿ ಒಂದು ಹುಲ್ಲಿನ ಗುಡಿಸಲನ್ನು ನಿರ್ಮಿಸಿ ಆ ಮೂರ್ತಿಗೆ ಪ್ರತಿ ದಿನ ಪೂಜೆ-ಪುನಸ್ಕಾರಗಳು ನಡೆಯುವಂತೆ ನೋಡಿಕೊಂಡದ್ದಲ್ಲದೆ ಚೌಡಪ್ಪ ತಾನೂ ಸಹ ಪ್ರತೀದಿನ ಹಳ್ಳಿಬಯಲಿನಿಂದ ಬಂದು ಲಿಂಗವನ್ನು ಪೂಜಿಸುವ ಕಟ್ಟಳೆ ರೂಢಿಸಿಕೊಂಡನು. [ಈಗಿನ ಕೆಳದಿ ರಾಮೇಶ್ವರ ದೇವಾಲಯದ ಉಗಮ ಈ ರೀತಿ ಆಗಿದ್ದೆಂದು ಪ್ರತೀತಿ.]
                                   ಕೆಳದಿ ರಾಮೇಶ್ವರ ದೇವಾಲಯ              
     ಹಲವು ದಿನಗಳ ನಂತರದಲ್ಲಿ ಎಂದಿನಂತೆ ಚೌಡಪ್ಪ ನಿತ್ಯಕರ್ಮಗಳು, ಪೂಜೆ ಮುಗಿಸಿಕೊಂಡು ತನ್ನ ಭತ್ತದ ಹೊಲಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಆತನ ದಾರಿಗಡ್ಡ ಬಂದ ಓತಿಕ್ಯಾತವೊಂದು ಹಲವಾರು ಸಲ ತಲೆಯನ್ನು  ಮೇಲಕ್ಕೆ ಕೆಳಕ್ಕೆ ಆಡಿಸತೊಡಗಿದ್ದನ್ನು ಕಂಡು ಅದನ್ನು ಓಡಿಸಿದರೂ ಅದು ಹತ್ತಿರದ ಮಾವಿನಮರವೇರಿ ಅದೇ ರೀತಿ ತಲೆಯಾಡಿಸತೊಡಗಿತ್ತು. ಆಶ್ಚರ್ಯವೆನಿಸಿದರೂ ಅದಕ್ಕೆ ಮಹತ್ವ ಕೊಡದೆ ಎಂದಿನ ಕೆಲಸ ಕಾರ್ಯಗಳನ್ನು ಮಾಡಿ ಆಯಾಸವಾದಾಗ ಮಾವಿನಮರದ ತಂಪಿನಲ್ಲಿ ಒರಗಿಕೊಂಡಾಗ ಆಗಿದ್ದ ಆಯಾಸ, ಬೀಸುತ್ತಿದ್ದ ತಂಗಾಳಿ ಸೇರಿಕೊಂಡು ಮೈಮರೆಯುವಂತಹ ನಿದ್ರೆ ಅವನನ್ನು ಆವರಿಸಿತು. ಮಗ ಬರಲು ತಡವಾದ್ದರಿಂದ ಕಳವಳಗೊಂಡ ತಾಯಿ ಬಸವಾಂಬೆ ಅವನನ್ನು ಹುಡುಕಿಕೊಂಡು ಹೊಲಕ್ಕೆ ಬಂದಾಗ ಕಂಡ ದೃಷ್ಯದಿಂದ ಅವಳ ಎದೆ ಝಲ್ಲೆನಿಸಿತ್ತು. ಮಗ ಗಾಢನಿದ್ರೆಯಲ್ಲಿ ಮಲಗಿದ್ದರೆ ಭಯಂಕರ ಸರ್ಪವೊಂದು ಆತನ ತಲೆಯ ಮೇಲೆ ಹೆಡೆಯಾಡಿಸುತ್ತಿತ್ತು. ಮಗನನ್ನು ಎಬ್ಬಿಸಲು ಹೋದರೆ ಅವನನ್ನು ಸರ್ಪ ಎಲ್ಲಿ ಕಚ್ಚೀತೋ ಎಂಬ ಭಯದೊಂದಿಗೆ ಹಾಗೂ ಅದನ್ನು ಓಡಿಸಲೂ ಬೇರೆ ಉಪಾಯಗಾಣದೆ ದಿಕ್ಕು ತೋಚದೆ ಎವೆಯಿಕ್ಕದೆ ಸರ್ಪವನ್ನೇ ನೋಡುತ್ತಾ ಅವಾಕ್ಕಾಗಿ ನಿಂತುಬಿಟ್ಟಿದ್ದಳು. ಸ್ವಲ್ಪ ಸಮಯದ ನಂತರ ಆ ಹಾವು ಮೆಲ್ಲನೇ ಸರಿದು ಹೋದದ್ದೇ ತಡ ಬಸವಾಂಬೆ ಮಗನನ್ನು ಎಬ್ಬಿಸಿ ಅಪ್ಪಿಕೊಂಡು ಕಣ್ಣೀರು ಸುರಿಸುತ್ತಾ, "ನಮ್ಮ ಪುಣ್ಯ ಹಾಗೂ ದೇವರ ದಯೆಂದ ನೀನು ಬದುಕಿದೆ" ಎಂದು ಹೇಳಿ ನಡೆದ ಸಂಗತಿ ತಿಳಿಸಿ ಅಲ್ಲಿಯೇ ಸಮೀಪದಲ್ಲಿ ಮೆಲ್ಲನೆ ಹರಿದುಹೋಗುತ್ತಿದ್ದ ಹಾವನ್ನು ಬೆರಳು ಮಾಡಿ ತೋರಿಸಿದಳು. ಆ ಸರ್ಪವಾದರೋ ಗದ್ದೆಯೊಳಗೆ ಇಳಿದು ಸರಿದಾಡಿ ಇವರನ್ನೇ ತಿರುತಿರುಗಿ ನೋಡುತ್ತಾ ಬರುವಂತೆ ಸನ್ನೆ ಮಾಡಿ ಕರೆವಂತೆ ಹೋಗುತ್ತಿತ್ತು. ಇವರೂ ಮೆಲ್ಲನೆ ಹಿಂಬಾಲಿಸಲಾಗಿ ಒಂದು ಸ್ಥಳದಲ್ಲಿ ನಿಂತ ಆ ಸರ್ಪ ಆ ಸ್ಥಳವನ್ನು ಎರಡು ಮೂರು ಸಲ ತಲೆಯಿಂದ ಒತ್ತಿ ಒತ್ತಿ ತೋರಿಸಿತು. ನಂತರ ನೋಡ ನೋಡುತ್ತಿದ್ದಂತೆಯೇ ಆ ಸರ್ಪ ಎಲ್ಲಿಗೆ ಹೋಯಿತು ಎಂಬುದು ಅವರಿಗೆ ಗೊತ್ತಾಗಲೇ ಇಲ್ಲ. ಸರ್ಪ ಮುಟ್ಟಿ ತೋರಿಸಿದ್ದ ಸ್ಥಳವನ್ನು ಗುರುತಿಟ್ಟು ತಾ ಮಗ ಇಬ್ಬರೂ ಅದೇ ಘಟನೆಯ ಬಗ್ಗೆ ಚರ್ಚಿಸುತ್ತಾ ಮನೆಗೆ ಹಿಂತಿರುಗಿದರು. 
     ತಾವು ಕಂಡಿದ್ದ ಸರ್ಪ ಕಾರಣಸರ್ಪವೇ ಆಗಿದ್ದಿರಬೇಕೆಂದು ಭಾವಿಸಿದ ಅವರು ಆ ಸ್ಥಳವನ್ನು ಪರೀಕ್ಷಿಸಲು ನಿರ್ಧರಿಸಿದರು. ಸ್ನಾನ, ಪೂಜಾದಿಗಳನ್ನು ಮುಗಿಸಿಕೊಂಡು ಕೆಲವು ನಂಬಿಕಸ್ತ ಬಂಟರೊಂದಿಗೆ ಹೊಲಕ್ಕೆ ಹೋಗಿ ಗುರುತಿಸಿಟ್ಟಿದ್ದ ಸ್ಥಳದಲ್ಲಿ ಅಗೆದು ನೋಡಿದರೆ ಅವರ ಆಶ್ಚರ್ಯಕ್ಕೆ ಪಾರವೇ ಇಲ್ಲದಂತೆ ಒಂದು ದೊಡ್ಡ ನಿಕ್ಷೇಪವೇ ಇರುವ ಕೊಪ್ಪರಿಗೆಯೂ ನಾಗರಮರಿಯಂತೆ ಬಳುಕುವ ಒಂದು ಕತ್ತಿಯೂ ಅವರಿಗೆ ದೊರಕಿತು. ಆ ನಿಧಿಯನ್ನು ಅಡಗಿಸಿ ಇಟ್ಟುಕೊಂಡ ಅವರು ಆ ಸ್ಥಳದಲ್ಲಿ ಒಂದು ತಕ್ಕದಾದ ಮನೆಯನ್ನು ಕಟ್ಟಿಸಿಕೊಂಡು ಅಲ್ಲಿಯೇ ನೆಲೆ ನಿಂತರು. 
     ದಿನಗಳು ಕಳೆದಂತೆ ಒಂದು ಶುಭಘಳಿಗೆಯಲ್ಲಿ ಚೌಡಪ್ಪ ತಂದೆಯೆನಿಸಿದ. ಜಾತಕ ಫಲ ನೋಡಿಸಲಾಗಿ ರಾಜಯೋಗವಿರುವ, ಉಜ್ವಲ ಭವಿಷ್ಯದ ಪುತ್ರನೆಂದು ತಿಳಿದು ಸಂತೋಸಿದ ಅವರು ಪೂಜೆ, ಪುನಸ್ಕಾರಗಳು, ದಾನ-ಧರ್ಮಾದಿಗಳನ್ನು ಸಂತೋಷದಿಂದ ಮಾಡಿದರು. ಮಗನಿಗೆ ಸದಾಶಿವ ಎಂದು ನಾಮಕರಣ ಮಾಡಿ ಹರ್ಷಿಸಿದರು. ಸದಾಶಿವ ಹಿರಿಯರ ಒಲುಮೆ-ಬಲುಮೆಗಳಿಂದ ಬೆಳೆದು ಪ್ರಾಪ್ತ ವಯಸ್ಕನಾದಾಗ ಸತ್ಕುಲಜಾತೆಯರಾದ ವೀರಮಾಂಬೆ, ಭದ್ರಮಾಂಬೆ ಎಂಬ ಇಬ್ಬರು ಕನ್ಯಾಮಣಿಗಳನ್ನು ತಂದುಕೊಂಡು ಸದಾಶಿವನಿಗೆ ವಿವಾಹವನ್ನು ವೈಭವದಿಂದ ನೆರವೇರಿಸಿದರು. ಶ್ರೀ ರಾಮೇಶ್ವರ ದೇವಸ್ಥಾನವನ್ನು ಮರಮುಟ್ಟುಗಳಿಂದ ಅಲಂಕೃತಗೊಳಿಸಿ ಆನಂದಪಟ್ಟರು. ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದಿದ ಚೌಡಪ್ಪ ಆಳು-ಕಾಳುಗಳು, ಸೈನಿಕರುಗಳು, ಅಂಗರಕ್ಷಕರು, ಪರಿಜನರನ್ನು ನಿಯಮಿಸಿಕೊಂಡದ್ದಲ್ಲದೆ ಅಕ್ಕ ಪಕ್ಕದ ಗ್ರಾಮಗಳನ್ರ್ನ ತನ್ನ ಅಧೀನಕ್ಕೊಳಪಡಿಸಿಕೊಂಡು ಭುಜಬಲ ಪರಾಕ್ರಮಿಯೆನಿಸಿದನು. ವೀರಶೈವ ಮತಾನುಯಾಯಾಗಿ ಸಚ್ಚಾರಿತ್ರ್ಯವಂತನಾಗಿ ದಾನಧರ್ಮಗಳನ್ನು ಮಾಡುತ್ತಾ ಹೆಸರುಗಳಿಸಿದನು,
     ಚೌಡಪ್ಪನ ಕೀರ್ತಿಯನ್ನು ಸಹಿಸದವರು ಅವನ ಕುರಿತು ಹೇಳಿದ ಚಾಡಿಮಾತುಗಳನ್ನು  'ವಿದ್ಯಾನಗರೀಕಾಂತಾಚ್ಯುತರಾಯಂ ಗುಣವಂತನಸೂಯಕರ ಮುಖದಿ ಕೇಳ್ದೀಕಥೆಯಂ' [ಕೆ.ನೃ.ವಿ.೧. ೫೪] ಮನದಲ್ಲೇ ಆಲೋಚಿಸುತ್ತಾನೆ. ವಿಜಯನಗರ ಸಾಮ್ರಾಜ್ಯಕ್ಕೂ ಕೆಳದಿ ಸಂಸ್ಥಾನಕ್ಕೂ ನಂಟು ಪ್ರಾರಂಭವಾಗುವುದು ಈ ಹಂತದಿಂದಲೇ. ಬಲಿಷ್ಠ ಚೌಡಪ್ಪನ ನೆರವಿನಿಂದ ಶತ್ರುಗಳಾದ ತುರುಕರೂ ಮತ್ತು ಬೇಡರನ್ನು ಎದುರಿಸುವ ಕೆಲಸ ಮಾಡಬಹುದೆಂದೂ, ಚಾಡಿಮಾತುಗಳನ್ನು ಕೇಳಿ ವೃಥಾ ಅನುಮಾನಿಸದೆ ಜಾಣ್ಮೆಯಿಂದ, ಉಪಾಯದಿಂದ ವ್ಯವಹರಿಸುವುದು ಉಚಿತವೆಂದು  ಭಾವಿಸಿದ ಅವನು ಹಳ್ಳಿಬಯಲಿಗೆ ಕುದುರೆ, ರಥ, ನಿಯೋಗಿ ಜನರನ್ನು ಕಳುಹಿಸಿ ಉಚಿತವಾದ ಆದರಗಳೊಂದಿಗೆ ಚೌಡಪ್ಪನನ್ನು ಬರಮಾಡಿಕೊಳ್ಳುತ್ತಾನೆ. 'ಸ್ವಸ್ತಿ ಶ್ರೀ ಸಮಸ್ತ ಭುವನಾಶ್ರಯ ಪೃಥ್ವೀವಲ್ಲಭ ಶ್ರೀಮನ್ಮಹಾರಾಜಾಧಿರಾಜ ಪರಮೇಶ್ವರಭಕ್ತ ಪರಮ ಭಟ್ಟಾರಕ ಸತ್ಯಾಶ್ರಯ ಪದವಾಕ್ಯ ಪ್ರಮಾಣ ಪಾರಾವಾರಪಾರೀಣ ಶ್ರೀಮನ್ಮಹಾಮಂಡಲೇಶ್ವರ ಪ್ರತ್ಯರ್ಥಿ ರಾಜ ವಿಭಾಡ ಶ್ರೀ ವಿರೂಪಾಕ್ಷ ಪಾದಪದ್ಮಾರಾಧಕ ಶ್ರೀ ವೀರಪ್ರತಾಪ ದಕ್ಷಿಣಸಮುದ್ರಾದಿ ನರ್ಮದಾನದ್ಯಂತ ಭೂಮಂಡಲೈಕಚ್ಛತ್ರಾದಿಪ ಸಕಲವರ್ಣಾಶ್ರಮಾಚಾರಧರ್ಮ ಪ್ರತಿಪಾಲಕ ಶ್ರೀ ವಿದ್ಯಾನಗರರಾಜಧಾನೀ ರತ್ನ ಸಿಂಹಾಸನಾಧೀಶ್ವರನಪ್ಪ' ಕೃಷ್ಣರಾಯ [ಗಮನಿಸಿ, ಇವು ವಿಜಯನಗರದ ಅರಸರ ಬಿರುದುಬಾವಲಿಗಳು!] ಮನದೊಳಗಣ ಮಾತುಗಳನ್ನು ಆಡುವ ಮುನ್ನ ಉಭಯಕುಶಲೋಪರಿ ಮಾತುಗಳನ್ನಾಡುತ್ತಾನೆ. ಕೆಳದಿನೃಪ ವಿಜಯದಲ್ಲಿ ಚೌಡಪ್ಪನನ್ನು  ಅಚ್ಯತರಾಯ ಕರೆಕಳುಹಿಸುತ್ತಾನೆ ಎಂದಿದ್ದು, ಅದರಲ್ಲೇ ಮುಂದಿನ ವಚನ ಭಾಗದಲ್ಲಿ ಕೃಷ್ಣರಾಯ ಚೌಡಪ್ಪನೊಂದಿಗೆ ಮಾತನಾಡುತ್ತಾನೆ ಎಂದಿರುವುದು ಕಂಡುಬರುತ್ತದೆ. ಅಚ್ಯುತರಾಯ ಕೇವಲ ೩ ವರ್ಷಗಳು ರಾಜ್ಯವಾಳಿದ್ದು, ನಂತರದಲ್ಲಿ ವಿಜಯನಗರ ಸಾಮ್ರಾಜ್ಯ ವೈಭವದ ಅತ್ಯುನ್ನತ ಕಾಲ ಕಂಡ ಕೃಷ್ಣದೇವರಾಯನ ಆಳ್ವಿಕೆಯಿತ್ತು. ಬಹುಷಃ ಸಂದಿಗ್ಧ ಕಾಲದಲ್ಲಿ, ಅಂದರೆ ಕೃಷ್ಣದೇವರಾಯ ರಾಜ್ಯಭಾರ ವಹಿಸಿಕೊಂಡ ತರುಣದಲ್ಲೇ ಚೌಡಪ್ಪ ಮತ್ತು ವಿಜಯನಗರದ ಅರಸರ ಮುಖಾಮುಖಿಯಾಗಿರಬೇಕು. 
     ರಾಜನೀತಿಯಲ್ಲಿ ನಿಷ್ೞಾತನಾಗಿದ್ದ ಕೃಷ್ೞದೇವರಾಯ ಚಾತುರ್ಯದಿಂದ, ಕುಶಲತೆಯಿಂದ ಚೌಡಪ್ಪ ಮತ್ತು ಅವನ ಸೋದರ ಭದ್ರಪ್ಪರನ್ನು ವಿಚಾರಿಸುವ ಮಾತುಗಳ ನಡುವೆ ಕೇಳಿದ: 
     "ಚೌಡಪ್ಪ, ಭದ್ರಪ್ಪರೇ, ನೀವು ಒಂದು ಕಾಲದಲ್ಲಿ ಸಾಮಾನ್ಯರಂತೆ ಬಾಳಿದ್ದವರು. ನೀವು ಇಷ್ಟೊಂದು ಬಲಾಢ್ಯ ಮತ್ತು ಶ್ರೀಮಂತರಾದುದಕ್ಕೆ ನಿಮಗೆ ಸಿಕ್ಕಿದ ನಿಧಿ ಕಾರಣವೆಂದು ಕೇಳಿದ್ದೇವೆ. ನಿಜವೆ? ಹಾಗೆ ಸಿಕ್ಕಿದ ನಿಧಿಯನ್ನು ರಾಜಭಂಡಾರಕ್ಕೆ ಒಪ್ಪಿಸಬೇಕಿದ್ದುದು ನಿಮ್ಮ ಕರ್ತವ್ಯವಾಗಿತ್ತಲ್ಲವೇ? ಹಾಗೆ ಮಾಡದೆ ನಿಮಗೆ ಏನೂ ಗೊತ್ತಿಲ್ಲವೆಂಬಂತೆ ನಡೆದುಕೊಳ್ಳುತ್ತಿರುವುದು ಸರಿಯೇ? ಆ ನಿಧಿಯನ್ನು ಒಪ್ಪಿಸಿ ನಿಮ್ಮ ಕೀರ್ತಿ, ಗೌರವಗಳನ್ನು ಉಳಿಸಿಕೊಳ್ಳುವಿರಲ್ಲವೇ?" 
     ಈ ನೇರ ಪ್ರಶ್ನೆಯಿಂದ ವಿಚಲಿತರಾಗದ ಚೌಡಪ್ಪ, ಭದ್ರಪ್ಪರು ತಾವು ಕೃಷಿ ಮತ್ತು ವ್ಯಾಪಾರ ಮೂಲದಿಂದ ಜೀವನ ನಿರ್ವಹಿಸುತ್ತಿದ್ದುದು, ಜಂಗಮ ಸ್ವಪ್ನದಲ್ಲಿ ನುಡಿದ ಮಾತಿನಂತೆ ರಾಮೇಶ್ವರ ಲಿಂಗ ಗೋಚರಿಸಿದುದು, ದೇವರ ಕೃಪೆಯಿಂದ ದೊರೆತ ನಿಧಿಯ ವಿವರಗಳನ್ನು ವಿಷದವಾಗಿ ಹೇಳಿದ್ದನ್ನು ಕೇಳಿದಾಗ ಆಶ್ಚರ್ಯಚಕಿತನಾದ ವಿಜಯನಗರದ ದೊರೆ, ಅವರ ಬಲಾಢ್ಯ ಆಕಾರ, ನಿರ್ಭೀತಿಯ ನಡೆನುಡಿಗಳು, ಹಸನ್ಮುಖ, ತೇಜಸ್ಸುಗಳಿಂದ ಪ್ರಭಾವಿತನಾದ. ಚಾಡಿಕೋರರ ಮಾತುಗಳನ್ನು ಕೇಳಿ ಅವರಗಳನ್ನು  ನೋಯಿಸುವುದು ಸರಿಯಲ್ಲವೆಂದು ಮನಗಂಡ ಕೃಷ್ೞದೇವರಾಯ ಅವರಿಂದ ತಮಗೆ ತೊಂದರೆ ಕೊಡುತ್ತಿದ್ದ ತುರುಕರು ಮತ್ತು ಬೇಡರ ಉಪಟಳವನ್ನು ಹಾಗೂ ಕಿರಿಕಿರಿ ಮಾಡುತ್ತಿದ್ದ ತುಂಡು ಪಾಳೆಯಗಾರರನ್ನು ನಿಗ್ರಹಿಸುವ ಕೆಲಸ ಮಾಡಿಸಬಹುದೆಂದು ಮನದಲ್ಲೇ ತೀರ್ಮಾನಿಸಿ ನುಡಿದ: "ಚೌಡಪ್ಪ, ಭದ್ರಪ್ಪರೇ, ನಿಮ್ಮ ಮಾತುಗಳು, ನಡೆನುಡಿಗಳು ನಮಗೆ ನೀವು ದೇವಕೃಪೆಯುಳ್ಳವರೆಂದು ಮನವರಿಕೆ ಮಾಡಿವೆ. ನಮಗೆ ಕೆಲವು ತುಂಡು ಪಾಳೆಯಗಾರರಿಂದ, ತುರುಕರಿಂದ ಮತ್ತು ಬೇಡರಿಂದ ಉಪದ್ರವಗಳಾಗುತ್ತಿದ್ದು ಅವರುಗಳ ನಿಗ್ರಹಕ್ಕೆ ನೀವು ನಮಗೆ ಅನುಕೂಲಿಗಳಾಗಿ, ಸಹಾಯಕರಾಗಿ ಕಾರ್ಯ ಮಾಡಬೇಕೆಂಬುದು ನಮ್ಮ ಬಯಕೆ."  ಚೌಡಪ್ಪ, ಭದ್ರಪ್ಪರು ಸಮ್ಮತಿಸಿದರು. ಚಾಡಿಮಾತುಗಳನ್ನು ಕೇಳಿ ಚೌಡಪ್ಪ, ಭದ್ರಪ್ಪರಿಗೆ ಸಿಕ್ಸಿದ ನಿಧಿ ರಾಜಬೊಕ್ಕಸಕ್ಕೆ ಸೇರಿಸಿಕೊಳ್ಳುವ ಕುರಿತು ನಿರ್ಧರಿಸಬೇಕಾಗಿದ್ದ ಆ ಭೇಟಿ ಸಂತೋಷದಾಯಕವಾದ ರೀತಿಯಲ್ಲಿ ಕೊನೆಗೊಂಡಿತು. ಅವರುಗಳಿಗೆ ಅನುಕೂಲವಾಗಿರಲೆಂಬ ಕಾರಣದಿಂದ ಕುದುರೆಗಳು, ರಥ, ಛತ್ರ, ಚಾಮರಾದಿಗಳನ್ನೂ ಮತ್ತು ಕೆಲವು ಕಾಲದವರೆಗೆ ಇರಲೆಂದು ಕೆಲವು ಸೈನಿಕರನ್ನೂ ಕೊಟ್ಟು, ಆಭರಣಗಳು, ತಾಂಬೂಲಗಳೊಂದಿಗೆ ಬೀಳ್ಕೊಡಲಾಯಿತು. 
     ಕೆಲ ಕಾಲಾನಂತರದಲ್ಲಿ ಬೇಡರು ಹಾಗೂ ಕೆಲವು ಪುಂಡು ಪಾಳೆಯಗಾರರು ವಿಜಯನಗರದ ಸೀಮೆಯಲ್ಲಿ ಒಟ್ಟಾಗಿ ಬಂಡೆದ್ದು ಪ್ರಜೆಗಳನ್ನು ಹಿಂಸಿಸತೊಡಗಿದಾಗ ರಾಯ ಚೌಡಪ್ಪ, ಭದ್ರಪ್ಪರಿಗೆ ಅವರನ್ನು ನಿಗ್ರಹಿಸಲು ಕೋರಿ ಸಹಾಯಕ್ಕೆ ಸೈನ್ಯವನ್ನೂ ಕೊಟ್ಟು ವೀಳೆಯ ನೀಡಿದನು. [ವೀಳೆಯ ನೀಡಿದ್ದನ್ನು ಸ್ವೀಕರಿಸಿದರೆ ಕೆಲಸ ಮಾಡಲು ಒಪ್ಪಿಕೊಂಡಂತೆ ಆಗಿ, ಅದಕ್ಕೆ ಬದ್ಧರಾಗಿ ನಡೆದುಕೊಳ್ಳುವುದು ಪದ್ಧತಿ. ಈಗ ಇದು 'ಸುಪಾರಿ'ಯಾಗಿ ಭೂಗತ ಲೋಕದಲ್ಲಿ ಚಾಲ್ತಿಯಲ್ಲಿರುವುದು ತಿಳಿದ ಸಂಗತಿ.] ವೀಳೆಯ ಪಡೆದ ಸೋದರರು ಒಪ್ಪಿದ ಕಾರ್ಯಕ್ಕೆ ಮುನ್ನುಗ್ಗಿದಾಗ ಉಭಯತರರಿಗೂ ಘೋರ ಕದನವೇರ್ಪಟ್ಟಿತು. ರಾಯನ ಸೈನಿಕರು ಅವರ ದಾಳಿಯನ್ನು ಎದುರಿಸಲಾರದೆ ಹಿಮ್ಮೆಟ್ಟುತ್ತಿರುವುದನ್ನು ಕಂಡ ಚೌಡಪ್ಪ ಅವರನ್ನು ಹುರಿದುಂಬಿಸಿ ತಾನೇ ಮುಂದಾಳಾಗಿ ಅರಿಭಯಂಕರನಾಗಿ 'ಕುಂತವನಾಂತರಿಸಂತತಿಯಂ ತಗುಳುತ್ತಾಂತ ಸುಭಟರಂ ತಿವಿತಿವಿದೋರಂತಂತಕನಂ ತೋರಿಸುತಿಂತಾ ಚೌಡೇಂದ್ರನಂಕದೊಳ್ ಸೈವರಿದಂ!' [ಕೆನೃವಿ.೧.೬೨] ಇನ್ನೊಂದೆಡೆ ಭದ್ರಪ್ಪ ತನ್ನ ಖಡ್ಗದಿಂದ ವೀರಾವೇಶದಿಂದ ಶತ್ರುಸಮೂಹವನ್ನು ಯಮಪುರಿಗೆ ಕಳುಹಿಸುತ್ತಿದ್ದನು. ಇವರುಗಳ ಆರ್ಭಟ, ಯುದ್ಧಕುಶಲತೆಗೆ ಶತ್ರುಪಡೆ ದಿಕ್ಕೆಟ್ಟು ಅಪಾರ ಸಾವು ನೋವುಗಳಿಗೆ ಪಕ್ಕಾಗಿ ಸೋತು ಶರಣಾಯಿತು. ರಾಯರಿಗೇ ಎದುರಿಸಲು ಕಷ್ಟವಾಗಿದ್ದ ಶತ್ರುಪಡೆಯನ್ನು ಮಣಿಸಿದ ಚೌಡಪ್ಪ-ಭದ್ರಪ್ಪರನ್ನು ಅತ್ಯಾನಂದದಿಂದ ಎದುರುಗೊಂಡ ಕೃಷ್ಣದೇವರಾಯ ಅವರನ್ನು ಅಪ್ಪಿಕೊಂಡು ಸ್ವಾಗತಿಸಿ ಅವರುಗಳ ಬಾಯಿಂದ ಯುದ್ಧದ ವಿವರಗಳನ್ನು ಮರಳಿ ಮರಳಿ ಕೇಳಿ ಸಂತೋಷಿಸಿದ. ಅವರುಗಳಿಗೆ ರಾಜೋಚಿತವಾದ ಉಡುಗೊರೆಗಳು, ಚಿನ್ನದ ಲೇಪನ ಮಾಡಿದ ಪಲ್ಲಕ್ಕಿ, ಮುಂತಾದುವನ್ನೂ ತಾಂಬೂಲದೊಂದಿಗೆ ನೀಡಿ ಅಭಿನಂದಿಸಿ, ಗೌರವ ಪೂರ್ವಕವಾಗಿ ಬೀಳ್ಕೊಟ್ಟ.
     ದಿನಗಳು ಮಧುರವಾಗಿ ಸಾಗುತ್ತಿದ್ದ ಸಂದರ್ಭದಲ್ಲೇ ವಿಜಯನಗರದ ಉತ್ತರದಲ್ಲಿದ್ದ ತುರುಕರು ಕುತಂತ್ರದಿಂದ ರಾಜ್ಯದ ಮೇಲೆ ಆಕ್ರಮಣ ಮಾಡುವರೆಂಬ ಸುದ್ದಿ ಗುಪ್ತಚಾರರಿಂದ ತಿಳಿದ ಕೃಷ್ಣದೇವರಾಯ ಅವರನ್ನು ತಡೆಯಲು ಚೌಡಪ್ಪ-ಭದ್ರಪ್ಪರೇ ಸಮರ್ಥರೆಂದು ಭಾವಿಸಿ ಆಪ್ತ ಮಂತ್ರಾಲೋಚನೆ ನಡೆಸಿ, ಒಂದು ನಿರ್ಧಾರಕ್ಕೆ ಬಂದನು. ಆ ನಿರ್ಧಾರ ಕೆಳದಿ ಸಂಸ್ಥಾನದ ಉದಯಕ್ಕೆ ನಾಂದಿ ಹಾಡಿತು. 
     ಚೌಡಪ್ಪ-ಭದ್ರಪ್ಪರನ್ನು ಆತ್ಮೀಯತೆ ಹಾಗೂ ಗೌರವಗಳಿಂದ ಆಹ್ವಾನಿಸಿ, ಅವರಿಗೆ ಆತಿಥ್ಯ ನೀಡಿ ಬಳಿಕ ಹತ್ತಿರ ಕುಳ್ಳಿರಿಸಿಕೊಂಡು ಕೃಷ್ಣದೇವರಾಯ ಹೇಳಿದ:
     "ಚೌಡಪ್ಪನವರೇ, ಭದ್ರಪ್ಪನವರೇ, ನೀವು ಬಲಶಾಲಿಗಳು, ಧೈರ್ಯಶಾಲಿಗಳು. ನಿಮ್ಮ ಸ್ನೇಹ ಮತ್ತು ಸಹಕಾರ ನಮಗೆ ಅಮೂಲ್ಯವಾಗಿದೆ. ನಮ್ಮ ಶತ್ರುಗಳನ್ನು ತಡೆಯುವ ಸಾಮರ್ಥ್ಯಶಾಲಿಗಳು ನೀವೇ ಆಗಿದ್ದೀರಿ. ನಮ್ಮ ರಾಜ್ಯದ ಚಂದ್ರಗುತ್ತಿ, ಕೆಳದಿಯ ಪ್ರದೇಶಗಳಲ್ಲಿ ಹೊರಪಾಳಯದಲ್ಲಿ ಸ್ವತಂತ್ರರಾಗಿ ಅಧಿಕಾರ ನಡೆಸುವ ಪರಮಾಧಿಕಾರ ನಿಮಗೆ ಕೊಡುವೆ. ಈ ಗೌರವಕ್ಕೆ ಪ್ರತಿಯಾಗಿ ನೀವುಗಳು ನಮ್ಮ ಸಹಕಾರಿಗಳಾಗಿ, ನಮ್ಮವರೇ ಆಗಿ ನಡೆದುಕೊಳ್ಳಬೇಕು. ನಿಮಗೆ ಕೆಳದಿ, ಇಕ್ಕೇರಿ, ಹೆಬ್ಬೈಲು, ಯಲಗಳಲೆ, ....., ಮೋದೂರು, ಕಲಿಸೆ ಮತ್ತು ಲಾತವಡಿ ಎಂಬ ಎಂಟು ಮಾಗಣೆಗಳನ್ನು ವಹಿಸಿಕೊಡುವೆ. ಈ ಎಂಟು ಭೂಪ್ರದೇಶಗಳನ್ನು ನೀವುಗಳು ವಂಶ ಪಾರಂಪರ್ಯವಾಗಿ ಅನುಭವಿಸಿಕೊಂಡು, ಸುಖದಿಂದ ಬಾಳಬೇಕು."
     ಅವರ ಸಮ್ಮುಖದಲ್ಲೇ ಈ ಕುರಿತು ಶಾಸನವನ್ನೂ ಬರೆಸಿ, ಉಚಿತವಾದ ಉಡುಗೊರೆಗಳು, ಚತುರಂಗ ಬಲ (ಆನೆ, ಕುದುರೆ, ರಥ, ಕಾಲಾಳುಗಳು)ವನ್ನೂ ಕೊಟ್ಟುದಲ್ಲದೆ, ಅರಿದಲೆ, ಶಂಖ, ಚಕ್ರ, ಕನಕಚೌರಿ, ಸೀಗುರಿ, ಉಭಯಚಮರ, ಸರನೇಜ ಎಂಬ ಬಿರುದುಗಳನ್ನೂ ಇತ್ತು ಸನ್ಮಾನಿಸಿದನು. ಇನ್ನು ಮುಂದೆ ಚೌಡಪ್ಪನನ್ನು 'ಕೆಳದಿ ಮೂಲ ಸಂಸ್ಥಾನದ ಮನ್ನೆಯ ಚೌಡಪ್ಪನಾಯಕ'ನೆಂದು ಸಂಬೋಧಿಸತಕ್ಕದ್ದೆಂದು ಸುತ್ತಮುತ್ತಲಿನ ರಾಜರುಗಳಿಗೆ ಸಂದೇಶ ಕಳುಹಿಸಲಾಯಿತು. ಕೆಳದಿ ಸಂಸ್ಥಾನದ ಉದಯಕ್ಕೆ ಇಲ್ಲಿ ನಾಂದಿಯಾಯಿತು. ರಾಜಮುದ್ರೆ, ಆಜ್ಞೆ, ಘೋಷಣೆ, ನಾಣ್ಯ ಚಲಾವಣೆ ಮುಂತಾದ ಅಧಿಕಾರಗಳನ್ನು  ಸ್ವತಂತ್ರವಾಗಿ ಚಲಾಸಲು ಚೌಡಪ್ಪನಿಗೆ ಅಧಿಕಾರ ಪ್ರಾಪ್ತವಾಯಿತು. ವಿಜಯನಗರದ ಅರಸರ ಕಾರ್ಯಗಳನ್ನು ತಮ್ಮ ಕಾರ್ಯಗಳೆಂದೇ ಭಾವಿಸಿ ಮಾಡಬೇಕೆಂದು ಸೂಚಿಸಲಾಯಿತು. ಅಮೂಲ್ಯ ಚಿನ್ನದಾಭರಣಗಳು, ವಸ್ತ್ರಗಳ ಸಹಿತವಾಗಿ ತಾಂಬೂಲವಿತ್ತು ಚೌಡಪ್ಪ-ಭದ್ರಪ್ಪರನ್ನು ಗೌರವದಿಂದ ಬೀಳ್ಕೊಡಲಾಯಿತು. ಬೀಗುತ್ತಾ ಕೆಳದಿಪುರವನ್ನು ಪ್ರವೇಶಿಸಿದ ಅವರು ಸುಂದರವಾದ ಅರಮನೆಯನ್ನು ನಿರ್ಮಿಸಿದರು. ಶಾಲಿವಾಹನ ಶಕ 1422ರ ಸಿದ್ಧಾರ್ಥಿ ಸಂವತ್ಸರದ ಮಾಘ ಶುದ್ಧ ತದಿಗೆಯಂದು (ಕ್ರಿ.ಶ. 1500) ವಿಧಿವತ್ತಾಗಿ ಚೌಡಪ್ಪನಾಯಕ ಕೆಳದಿ ಸಂಸ್ಥಾನದ  ಪ್ರಥಮ ರಾಜಪಟ್ಟವನ್ನು ಅಲಂಕರಿಸಿದನು. ತನ್ನ ಅಧೀನಕ್ಕೊಳಪಟ್ಟ ಕೆಳದಿ, ಇಕ್ಕೇರಿ, ಹೆಬ್ಬೈಲು, ಯಲಗಳಲೆ, ಮೋದೂರು, ಕಲಿಸೆ, ಮೊದಲಾದ ಎಂಟು ಮಾಗಣೆಗಳಲ್ಲಿನ ಪ್ರಜಾಪರಿವಾರದವರಿಂದ ಗೌರವ, ಮನ್ನಣೆ ಪಡೆದದ್ದಲ್ಲದೆ, ಸುತ್ತಮುತ್ತಲಿನ ರಾಜರುಗಳಿಗೆ ಉಚಿತವಾದ ಉಡುಗೊರೆಗಳ ಸಹಿತ ಪತ್ರಗಳನ್ನು ಬರೆಸಿ ಕೆಳದಿ ಸಂಸ್ಥಾನದ ಸ್ಥಾಪತ್ಯ ಸಾಧಿಸಿದನು. ವಿಜಯನಗರ ಸಾಮ್ರಾಜ್ಯದ ಗಡಿಗಳ ರಕ್ಷಣೆಯ ಕಾರಣಕ್ಕಾಗಿ ಕೃಷ್ೞದೇವರಾಯ ಕೆಳದಿ ಸಂಸ್ಥಾನದ ಉದಯಕ್ಕೆ ಕಾರಣನಾದರೂ ಸಹ, ಮುಂದೆ ವಿಜಯನಗರದ ಪತನಾನಂತರದಲ್ಲಿ ಕೆಳದಿ ಸಂಸ್ಥಾನವು ವಿಜಯನಗರದ ಐತಿಹಾಸಿಕ ಪರಂಪರೆ ಮುಂದುವರೆಸಿಕೊಂಡು ಬಂದು ಸ್ವತಂತ್ರ ಮತ್ತು ಬಲಾಢ್ಯ ಸಂಸ್ಥಾನವಾಗಿ ಪ್ರಸಿದ್ಧಿ ಹೊಂದಿತು.
     ರಾಮೇಶ್ವರನ ಕೃಪೆಯಿಂದ ಒದಗಿದ ಸೌಭಾಗ್ಯವನ್ನು ನೆನೆದು ದೇವಸ್ಥಾನದ ಗರ್ಭಗೃಹವನ್ನು ಕಲ್ಲಿನ ಕಟ್ಟಡವಾಗಿಸಿದನು. ದೇವಸ್ಥಾನ ಪೂಜಾ ಕೈಂಕರ್ಯಗಳಿಗಾಗಿ ಹಳ್ಳಿಬಯಲು ಗ್ರಾಮವನ್ನು ಉಂಬಳಿಯಾಗಿತ್ತನು. ಧಾರ್ಮಿಕ ಕಾರ್ಯಗಳ ಜೊತೆಗೆ ವಿಜಯನಗರದ ಅರಸರ ಅಪೇಕ್ಷೆಯ ಕೆಲಸಕಾರ್ಯಗಳನ್ನೂ ಜಯಪ್ರದಗೊಳಿಸುತ್ತಾ, ಪ್ರಜಾಪರಿವಾರದವರ ಮತ್ತು ವಿಜಯನಗರದ ಅರಸರ ಮನ್ನಣೆ ಪಡೆದು ವೈಭವದಿಂದ ಬಾಳು ಸಾಗುತ್ತಿತ್ತು.
     ಹೀಗಿರಲು ಒಮ್ಮೆ ಚೌಡಪ್ಪನಾಯಕ ತನ್ನ ಮಗ ಸದಾಶಿವನೊಡನೆ ಇಕ್ಕೇರಿಯಲ್ಲಿ ಸಂಚರಿಸುತ್ತಿದ್ದಾಗ ಮೊಲವೊಂದು ದೊಡ್ಡ ನಾಯಿಯನ್ನು ಓಡಿಸಿಕೊಂಡು ಹೋಗುತ್ತಿದ್ದುದನ್ನು ಕಂಡು ಆಶ್ಚರ್ಯಚಕಿತನಾಗಿ ಇದು ವಿಶೇಷವಾದ ಸ್ಥಳವೆಂದು ಮನಗಂಡು ಆ ಸ್ಥಳದಲ್ಲಿ ಭವ್ಯವಾದ ಅರಮನೆ ಕಟ್ಟಿಸಿದನು. ಅರಮನೆಗೆ ಅಗತ್ಯದ ಇನ್ನಿತರ ಸೌಲಭ್ಯಗಳನ್ನೆಲ್ಲಾ ಕಲ್ಪಿಸಿದ ನಂತರ ಇಕ್ಕೇರಿ ಪಟ್ಟಣದ ಅಭಿವೃದ್ಧಿಯನ್ನೂ ಮಾಡಿ, ಶಾಲಿವಾಹನ ಶಕ 1434ರ ಪ್ರಜೋತ್ಪತ್ತಿ ಸಂವತ್ಸರದ ಮಾಘ ಶುದ್ಧ ಪಂಚಮಿಯಂದು (ಕ್ರಿ.ಶ. 1512) ಕೆಳದಿಯಿಂದ ಇಕ್ಕೇರಿಗೆ ರಾಜಪರಿವಾರ ಸ್ಥಳಾಂತರಗೊಂಡಿತು. ಧರ್ಮಪರಿಪಾಲಕನಾಗಿ, ಪ್ರಜಾಪ್ರಿಯನಾಗಿ ಬಾಳಿದ ಕೆಳದಿ ಸಂಸ್ಥಾನದ ಮೂಲ ಅರಸ ಚೌಡಪ್ಪ ಶಾಲಿವಾಹನ ಶಕ 1436ರ ಶ್ರೀಮುಖ ಸಂವತ್ಸರದ ಶ್ರಾವಣ ಶುದ್ಧ ದ್ವಿತೀಯದವರೆಗೆ (ಕ್ರಿ.ಶ.1514) ಸುಮಾರು ಹದಿಮೂರುವರೆ ವರ್ಷಗಳವರೆಗೆ ರಾಜ್ಯವನ್ನಾಳಿ ಕೆಳದಿ ಸಂಸ್ಥಾನಕ್ಕೆ ಭದ್ರ ಬುನಾದಿಯಾದವನು. ಯಾವ ವಿಜಯನಗರದ ಸಂಸ್ಥಾನದ ಹಿತರಕ್ಷಣೆಯ ಸಲುವಾಗಿ ಕೆಳದಿಯ ಸ್ವತಂತ್ರ ಅಸ್ತಿತ್ವ ಉಂಟಾಗಿತ್ತೋ, ಆ ವಿಜಯನಗರ ಸಾಮ್ರಾಜ್ಯ ಕ್ರಿ.ಶ. 1565ರ ಸುಮಾರಿಗೆ ಪತನವಾಯಿತು. ಆ ನಂತರವೂ ಸುಮಾರು ಎರಡು ಶತಮಾನಗಳ ಕಾಲ ವಿಜಯನಗರದ ವೈಭವ, ಪರಂಪರೆಯನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿ, ಕರ್ಣಾಟಕದ ಹೆಮ್ಮೆಯ ಸ್ವತಂತ್ರ ಮತ್ತು ವಿಶಾಲ ಸಂಸ್ಥಾನವಾಗಿ ಕೆಳದಿ ಸಂಸ್ಥಾನ ಬೆಳಗಿತು. ಈ ಕಾರಣದಿಂದಲೇ ಕೆಳದಿ ಮೂಲ ಸಂಸ್ಥಾನದ ಹೆಮ್ಮೆಯ ಮನ್ನೆಯ  ಚೌಡಪ್ಪನಾಯಕ ಗತಿಸಿ ಐದು ಶತಮಾನಗಳು ಉರುಳಿದರೂ ಅವನ ಹೆಸರು ಕರ್ಣಾಟಕದ ಇತಿಹಾಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ. 
-ಕ.ವೆಂ.ನಾಗರಾಜ್.
[ಆಧಾರ: ಲಿಂಗಣ್ಣ ಕವಿಯ 'ಕೆಳದಿನೃಪ ವಿಜಯ']
****************
ಕೆಳಗೆ ಕ್ಲಿಕ್ಕಿಸಿ ಹಿಂದಿನ ಲೇಖನಗಳನ್ನು ಓದಬಹುದು:
1. ಜಂಬೂದ್ವೀಪದ ಭರತ ಖಂಡ
2. 4 ಶತಮಾನಗಳ ಹಿಂದಿನ ಕರ್ಣಾಟಕ ದೇಶ - ಕವಿ ಕಂಡಿದ್ದಂತೆ      

6 ಕಾಮೆಂಟ್‌ಗಳು:

  1. ಆತ್ಮೀಯ ನಾಗರಾಜರೆ,
    ಚೌಡಪ್ಪ ನಾಯಕನ ರೋಚಕ ಗಾಥೆ, ಉತ್ತಮ ಲೇಖನವಾಗಿ ಮೂಡಿಬಂದಿದೆ. ಚರಿತ್ರೆಯಲ್ಲಿ ಹುದುಗಿ ಹೋದ ಮಾಹಿತಿಯ ಮೇಲೆ ಬೆಳಕು ಚೆಲ್ಲಿ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. Keladi, Ikkeri naanu saddaa naanu thirugaaduttidda sthalagalu - 1970-73ra sumaarinalli. Nantharavoo alligella aageega hogibandaddide. Eega allina vivaragalannu Linganna Kaviya 'Keladi Nrupavijaya' aadhaaradalli vivaravaagi neediddakke dhanyavaadagalu. Keladi Gunda Joisaru Linganna Kaviya vamshadavaru endu kelidde.

    ಪ್ರತ್ಯುತ್ತರಅಳಿಸಿ
  3. ಧನ್ಯವಾದಗಳು, ಅರುಣರೇ. ಕೆಳದಿ ಗುಂಡಾಜೋಯಿಸರ ತಾಯಿ ಮೂಕಾಂಬಿಕಮ್ಮನವರು ಕೆಳದಿ ಕವಿಮನೆತನದ ಧೀಮಂತ ದಿ.ಎಸ್.ಕೆ.ಲಿಂಗಣ್ಣಯ್ಯನವರ ಮಗಳು. ಜೋಯಿಸ್ ಮನೆತನದವರೂ ಕವಿಮನೆತನದವರೂ ಬಂಧುಗಳು.

    ಪ್ರತ್ಯುತ್ತರಅಳಿಸಿ
  4. ಇತಿಹಾಸದ ಈ ಸ್ವರ್ಣ ವೈಭವವನ್ನು ಮಕ್ಕಳಿಗೆ ಕಲಿಸುವುದನ್ನು ಬಿಟ್ಟು ಏನೇನೋ ಕಲಿಸುವ ಎಡಬಿಡಂಗಿ ಬುದ್ಧಿಜೀವಿಗಳಿಗೆ ಏನು ಹೇಳಬೇಕು...ಉತ್ತಮ ಮಾಹಿತಿ

    ಪ್ರತ್ಯುತ್ತರಅಳಿಸಿ
  5. ನಾವು, ನೀವೇ ಆ ಕೆಲಸ ಮಾಡೋಣ! ವಂದನೆಗಳು, ರಾಜೇಶರಾಯರೇ.

    ಪ್ರತ್ಯುತ್ತರಅಳಿಸಿ