ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಜನವರಿ 31, 2013

ಸತ್ಯೋಪದೇಶ



     ಅವಸರ ಅವಸರವಾಗಿ ಹೋಗುತ್ತಿದ್ದ ಮಡ್ಡಿಯನ್ನು ತಡೆದು ಮಂಕ ಕೇಳಿದ:
'ಯಾಕೋ ಇಷ್ಟೊಂದು ಅರ್ಜೆಂಟಾಗಿ ಹೋಗುತ್ತಿದ್ದೀಯಾ?'
ಮಡ್ಡಿ:  ನಿನಗೆ ಗೊತ್ತಿಲ್ಲವಾ? ಸ್ವಾಮಿ ಸತ್ಯಾನಂದರ ಶಿಷ್ಯ ಸತ್ಯಪ್ರೇಮಾನಂದ ಬಂದಿದ್ದಾರೆ. ಆ ಮೂಲೆಮನೆ ಗುಂಡಣ್ಣನ ಮನೇಲಿ ಉಳಕೊಂಡಿದಾರೆ. ಇವತ್ತು ಸಾಯಂಕಾಲ ಸತ್ಯೋಪದೇಶ ಇದೆ. ಈಗ 'ಸಂದೇಹಕ್ಕೆ ಸಮಾಧಾನ' ಅಂತ ಕಾರ್ಯಕ್ರಮ ಇದೆ. ಅವರನ್ನು ಕಂಡು ನಮಸ್ಕಾರ ಮಾಡಿ, ಕೆಲವು ಅನುಮಾನ ಪರಿಹಾರ ಮಾಡಿಕೊಳ್ಳೋಣ ಅಂತ ಹೋಗ್ತಾ ಇದೀನಿ. ಬರ್ತೀಯಾ? ಅವರು ಇದೇ ಊರಿನವರು ಕಣೋ.
ಮಂಕ:  ಈ ಊರಿನವರಾ? ಯಾರು?
ಮಡ್ಡಿ:  ಅದೇ, ತಿಕ್ಕಲು ಮೇಷ್ಟ್ರು ಶೀನ ಇದ್ದರಲ್ಲೋ, ಅವರ ಮಗ ಗೋವಿಂದ. ಅವರೇ ಈಗ ಸತ್ಯಾನಂದರ ಶಿಷ್ಯ ಸತ್ಯಪ್ರೇಮಾನಂದ.
ಮಂಕ:  ಗೋವಿಂದನಾ? ಭಗ್ನಪ್ರೇಮಿ? ಆ ಉಂಡಾಡಿಗುಂಡನ್ನ ಯಾವ ಹುಡುಗಿ ಒಪ್ತಿದ್ದಳು ಹೇಳು. ಈಗ ಸತ್ಯಪ್ರೇಮಿ ಆಗಿದಾನಾ?
ಮಡ್ಡಿ:  ಏಯ್, ಅವರ ಬಗ್ಗೆ ಹಗುರವಾಗಿ ಮಾತಾಡಬೇಡ ಕಣೋ. ಅವರನ್ನು ನೋಡಿದರೇ ನಮಸ್ಕಾರ ಮಾಡಬೇಕು ಅನ್ಸುತ್ತೆ. ಏನ್ ಕಳೆ ಅವರ ಮುಖದ ಮೇಲೆ! ಸತ್ಯಪ್ರೇಮಾನಂದ ಅಂದರೆ ಅವರೇನು ಸಾಮಾನ್ಯರಲ್ಲ. ಸತ್ಯ, ಸತ್ಯ ಅಂತ ಜಪ ಮಾಡ್ತಾ ಇರ್ತಾರೆ. ಊರೂರು ತಿರುಗಿ ಸತ್ಯೋಪದೇಶ ಮಾಡ್ತಾರೆ.
ಮಂಕ:  'ಸಂದೇಹಕ್ಕೆ ಸಮಾಧಾನ' ಕಾರ್ಯಕ್ರಮ ಅಂದೆಯಾ? ನನಗೆ ಅವರ ಬಗ್ಗೇನೇ ಸಂದೇಹವಿದೆ. ನಡಿ, ನಾನೂ ಬರ್ತೀನಿ. ಮುಠ್ಠಾಳ, ಮೂಢರನ್ನೂ ಕರಕೊಂಡು ಹೋಗೋಣ.
     ಮಂಕ, ಮಡ್ಡಿ, ಮುಠ್ಠಾಳ, ಮೂಢರು ಗರಿ ಗರಿ ಬಟ್ಟೆ ಧರಿಸಿ ಮೂಲೆಮನೆ ಗುಂಡಣ್ಣನ ಮನೆಯ ಹತ್ತಿರ ಹೋದರೆ ಅಲ್ಲಿ ಜನವೋ ಜನ. ಹಣ್ಣು-ಹಂಪಲು ತಟ್ಟೆ ಹಿಡಿದುಕೊಂಡು ಸ್ವಾಮಿಗಳಿಗೆ ಅರ್ಪಿಸಿ ಆಶೀರ್ವಾದ ಪಡೆಯಲು ದೊಡ್ಡ ಕ್ಯೂ ಇತ್ತು. ಧ್ವನಿವರ್ಧಕದಲ್ಲಿ ಗುಂಡಣ್ಣನ ಧ್ವನಿ ಕೇಳಿಸುತ್ತಿತ್ತು: "ಈಗ ಕಾರ್ಯಕ್ರಮ ಪ್ರಾರಂಭ ಆಗುತ್ತೆ. ನಮಸ್ಕಾರ ಮಾಡುವವರು ಕಾರ್ಯಕ್ರಮ ಆದ ಮೇಲೆ ಆಶೀರ್ವಾದ ಪಡೆಯಬಹುದು. ಈಗ ಎಲ್ಲರೂ ಹಾಲಿನಲ್ಲಿ ಕುಳಿತುಕೊಳ್ಳಬೇಕು." ನಾಲ್ವರು ಮಿತ್ರರು ಮುಂಭಾಗದಲ್ಲಿ ಜಾಗ ಹಿಡಿದು ಕುಳಿತರು. ದೊಡ್ಡ ಮೆತ್ತನೆಯ ಕುರ್ಚಿಯ ಮೇಲೆ ಕುಳಿತಿದ್ದರು ಗೋವಿಂದ -ಅಲ್ಲಲ್ಲ ಸತ್ಯಪ್ರೇಮಾನಂದ! ಹಿಂಭಾಗದಲ್ಲಿ "ಸತ್ಯವನ್ನೇ ಹೇಳುತ್ತೇನೆ, ನಾನು ಹೇಳಿದ್ದೇ ಸತ್ಯ" ಎಂಬ ಫಲಕ ತೂಗುಹಾಕಿತ್ತು. ಕುರ್ಚಿಯ ಪಕ್ಕದಲ್ಲಿ ಭಕ್ತರು ಹಾಕಿದ್ದ ಹಾರಗಳ ರಾಶಿಯೇ ಇತ್ತು. ಇನ್ನೊಂದು ಮೂಲೆಯಲ್ಲಿ ಹಣ್ಣಿನ ಅಂಗಡಿಯಲ್ಲಿ ಇಡಬಹುದಾದಷ್ಟು ಹಣ್ಣುಗಳಿದ್ದವು. ಗುಂಡಣ್ಣ, "ಗುರುಗಳು ನಮ್ಮ ಊರಿಗೆ ಬಂದಿರುವುದು ನಮ್ಮ ಸೌಭಾಗ್ಯ. ಹೆಸರಿಗೆ ತಕ್ಕಂತೆ ಅವರು ಸತ್ಯವನ್ನು ಎಷ್ಟು ಪ್ರೇಮಿಸುತ್ತಾರೆಂದರೆ ಅಷ್ಟು ಪ್ರೇಮಿಸುತ್ತಾರೆ. ಅದಕ್ಕೇ ಅವರ ಗುರುಗಳು ಅವರಿಗೆ ಈ ಹೆಸರಿಟ್ಟಿದ್ದಾರೆ. ಬಂದಿರುವ ಭಕ್ತರು ತಮ್ಮ ಅನುಮಾನಗಳಿದ್ದರೆ ಹೇಳಿಕೊಂಡು ಅವರಿಂದ ಪರಿಹರಿಸಿಕೊಳ್ಳಬಹುದು. ಸಾಯಂಕಾಲ ಅವರು ಸತ್ಯೋಪದೇಶ ಮಾಡುತ್ತಾರೆ. ಆಗಲೂ ಎಲ್ಲರೂ ಬಂದು ಆಶೀರ್ವಾದ ಪಡೆಯಬೇಕು" ಎಂದು ಭಕ್ತಿಯಿಂದ ಗುರುಗಳ ಕಾಲಿಗೆ ಬಿದ್ದು, ಪಕ್ಕದಲ್ಲಿ ಕುಳಿತುಕೊಳ್ಳುವಾಗ ಜಮಖಾನ ಕಾಲಿಗೆ ತೊಡರಿ ಕುಕ್ಕರಿಸಿ ಕುಳಿತ. ಹಿಂಬಾಲಿಸುವ ಜನರೇ ಜಾಸ್ತಿ ಇದ್ದದ್ದರಿಂದ ಮೊದಲ ಪ್ರಶ್ನೆ ಕೇಳಲು ಯಾರೂ ಮುಂದಾಗಲಿಲ್ಲ. ಮಂಕನೇ ಮೊದಲಿಗೆ ಎದ್ದು ನಿಂತು ಕೇಳಿದ:
"ಗುರುಗಳೇ, ಸತ್ಯ ಹೇಳಬೇಕು ನಿಜ. ಆದರೆ ಸಮಯ, ಸಂದರ್ಭ ನೋಡಿ ಹೇಳಬೇಕು, ಅಲ್ಲವೇ?"
ಸತ್ಯ:  ಸತ್ಯ ಹೇಳುವುದಕ್ಕೆ ಹೆದರಬಾರದು. ಎಂತಹ ಸಂದರ್ಭದಲ್ಲೂ ಸತ್ಯವನ್ನೇ ಹೇಳಬೇಕು.
ಮಂಕ:  ಸ್ವಾಮಿ, ಒಬ್ಬ ಕಳ್ಳತನ ಮಾಡಬೇಕು ಅಂತ ಮಧ್ಯರಾತ್ರೀಲಿ ಹೋಗ್ತಾ ಇದ್ದಾಗ ಬೀಟ್ ಪೋಲಿಸ್ ಕೈಗೆ ಸಿಕ್ಕಿ, ಅವನನ್ನು ಎಲ್ಲಿಗೆ ಹೋಗ್ತಾ ಇದೀಯಾ ಅಂತ ಕೇಳಿದರೆ 'ಕಳ್ಳತನ ಮಾಡಕ್ಕೆ' ಅಂತ ಹೇಳಿದರೆ ಅವನನ್ನು ಸೀದಾ ಪೋಲಿಸ್ ಠಾಣೆಗೆ ಎಳಕೊಂಡು ಹೋಗಲ್ವೇ? ಅದಕ್ಕೇ ಸಮಯ ನೋಡಿ ಸತ್ಯ ಹೇಳಬೇಕು ಅಂತ ನಾನು ಹೇಳಿದ್ದು.
ಸತ್ಯ:  ಶಿಷ್ಯಾ, ಅವನು ಕಳ್ಳತನ ಮಾಡಕ್ಕೆ ಅಂತ ನಿಜ ಹೇಳಿದ್ರೆ ತಮಾಷೆ ಮಾಡ್ತಾ ಇದಾನೆ ಅಂದುಕೊಂಡು ಬಿಟ್ಟು ಕಳಿಸುತ್ತಾರೆ. ಮನೇಗೆ ಹೋಗ್ತಾ ಇದೀನಿ ಅಂತ ಸುಳ್ಳು ಹೇಳಿದ್ರೆ, ಪೋಲಿಸ್ನೋನು ನಂಬದೆ ಕಳ್ಳತನ ಮಾಡಕ್ಕೆ ಹೋಗ್ತಾ ಇದೀಯ ಅಂತ ದಬಾಯಿಸಿ ಎಳಕೊಂಡು ಹೋಗ್ತಾನೆ.
ಮೂಢ:  ಸತ್ಯ ಹೇಳೋದರಿಂದ ಇನ್ನೊಬ್ಬರಿಗೆ ತೊಂದರೆ ಆಗುತ್ತೆ, ಅವರ ಮನಸ್ಸಿಗೆ ನೋವಾಗುತ್ತೆ ಅನ್ನೋದಾದರೆ?
ಸತ್ಯ:  ಸತ್ಯ, ಸತ್ಯ, ಸತ್ಯ. ಅದೇ ಮುಖ್ಯ. ಅದರಿಂದ ಯಾರು ಸತ್ತರೂ ಪರವಾಗಿಲ್ಲ, ಅತ್ತರೂ ಪರವಾಗಿಲ್ಲ. ನಾನು ಸತ್ಯದೀಕ್ಷೆ ಪಡೆಯಲು ಕಾರಣ ಆದ ಘಟನೆ ಬಗ್ಗೆ ಹೇಳುವೆ. ಒಂದು ದಿನ ರಾತ್ರಿ ಸುಮಾರು ೧೧ ಗಂಟೆ ಇರಬಹುದು. ಯಾರೋ ಒಬ್ಬರು ನಮ್ಮ ಮನೆ ಬಾಗಿಲು ಬಡಿದರು. ಬಾಗಿಲು ತೆಗೆದು ನೋಡಿದರೆ ಒಬ್ಬ ವ್ಯಕ್ತಿ 'ನನ್ನನ್ನು ಇಬ್ಬರು ಅಟ್ಟಿಸಿಕೊಂಡು ಬರ್ತಾ ಇದಾರೆ. ದಯವಿಟ್ಟು ಸ್ವಲ್ಪ ಹೊತ್ತು ನಿಮ್ಮ ಮನೆಯಲ್ಲಿ ಅಡಗಿಕೊಂಡಿರಲು ಅವಕಾಶ ಕೊಡಿ' ಅಂತ ಕೇಳಿದರು. ನಾನು ಅವರನ್ನು ಒಳಕ್ಕೆ ಕರೆದುಕೊಂಡು ಬಾಗಿಲು ಹಾಕಿದೆ. ಐದೇ ನಿಮಿಷದಲ್ಲಿ ಮತ್ತೆ ಬಾಗಿಲು ಬಡಿದ ಸದ್ದು ಕೇಳಿ ಬಾಗಿಲು ತೆಗೆದರೆ, ಇಬ್ಬರು 'ಇಲ್ಲಿಗೆ ಹಳದಿ ಷರ್ಟು ಹಾಕಿಕೊಂಡೋರು ಒಬ್ಬರು ಬಂದರಾ?' ಅಂತ ಕೇಳಿದರು. ಒಳಗೆ ಇದ್ದ ವ್ಯಕ್ತಿ ಸನ್ನೆ ಮಾಡಿ ಹೇಳಬೇಡಿ ಅಂದರೂ ಸತ್ಯ ಹೇಳಬೇಕು ಅನ್ನುವ ನನ್ನ ತತ್ವಕ್ಕೆ ಬದ್ಧನಾಗಿ ಅವನು ಇರುವ ವಿಷಯ ಹೇಳಿದೆ. ಅವರು ಒಳಕ್ಕೆ ನುಗ್ಗಿದವರೇ ಹಳದಿ ಷರ್ಟಿನವನನ್ನು ಹಿಡಿದು ಚಚ್ಚಿ ಅವನ ಜೇಬಿನಲ್ಲಿದ್ದ ಹಣ, ಹಾಕಿಕೊಂಡಿದ್ದ ಉಂಗುರ, ಸರಗಳನ್ನೂ ಕಸಿದು ಓಡಿಹೋದರು. ಆಮೇಲೆ ಹಳದಿ ಷರ್ಟಿನವನು ನನ್ನನ್ನು ಬಾಯಿಗೆ ಬಂದಂತೆ ಬೈದು ಹೋದ. ಮಾರನೆಯ ದಿನ ಕೆಲವರು ಅವನೊಂದಿಗೆ ಬಂದು ನನಗೆ ಹಿಗ್ಗಾಮುಗ್ಗಾ ಹೊಡೆದರು. ನಾನು ಒಂದು ವಾರ ಆಸ್ಪತ್ರೆಯಲ್ಲಿರಬೇಕಾಯಿತು. ಆಮೇಲೆ ನಾನು ಮಾಡಿದ ಮೊದಲ ಕೆಲಸ ಅಂದರೆ ಸ್ವಾಮಿ ಸತ್ಯಾನಂದರನ್ನು ಕಂಡು ದೀಕ್ಷೆ ಪಡೆದು ಅವರ ಮಠದಲ್ಲೇ ಉಳಿದದ್ದು. ಅಲ್ಲಿ ಭದ್ರವಾದ ರಕ್ಷಣೆ ಇರುವುದರಿಂದ ಆಮೇಲೆ ನಾನು ನಿರ್ಭಯವಾಗಿ ಸತ್ಯ ಹೇಳುವ ಕೆಲಸ ಮುಂದುವರೆಸಿಕೊಂಡು ಬಂದಿದ್ದೇನೆ.
ಮುಠ್ಠಾಳ:  ಗುರುಗಳೇ, ಅಪ್ರಿಯವಾದ ಸತ್ಯ ಹೇಳಬೇಡಿ ಅಂತ ಹೇಳ್ತಾರೆ. ನೀವು ನೋಡಿದರೆ ಹೀಗೆ ಹೇಳ್ತೀರಿ.
ಸತ್ಯ:  ಹಾಗೆ ಹೇಳುವವರೆಲ್ಲಾ ಮೂರ್ಖರು.
ಮಡ್ಡಿ:  ಕೋರ್ಟಿನಲ್ಲಿ ಪ್ರಮಾಣ ಮಾಡಿಸ್ತಾರೆ, 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಅಂತ. ಆದರೆ ಲಾಯರ್, 'ನಾನು ಹೇಳಿಕೊಟ್ಟಂತೆ ಮಾತ್ರ ಹೇಳು, ಸತ್ಯ ಹೇಳಿದರೆ ಕೆಟ್ಟುಹೋಗ್ತೀಯಾ' ಅಂತಾರೆ. ನಿಜ ಅಲ್ಲವಾ?
ಸತ್ಯ:  ಅಲ್ಲಿ ಮಾಡಿಸುವ ಪ್ರಮಾಣ ಸರಿಯಲ್ಲ. ನಾನು ಹೇಳುವುದೆಲ್ಲಾ ಸತ್ಯ ಅಂತ ಹೇಳಬಾರದು. ನೋಡಿ, ಇಲ್ಲಿ ಬೋರ್ಡು ಹಾಕಿಲ್ಲವಾ, ನಾನು ಹೇಳಿದ್ದೇ ಸತ್ಯ ಅಂತ! ಹಾಗೆ ಹೇಳಬೇಕು.
ಮಡ್ಡಿ:  ಅರ್ಥವಾಗಲಿಲ್ಲ, ಗುರುಗಳೇ.
ಸತ್ಯ:  ಸತ್ಯ ಅಂದರೇನು? ಮೊದಲು ತಿಳಿದುಕೊಳ್ಳಿ. ಅದು ಏನಾದರೂ ಆಗಿರಲಿ, ಹೇಗಾದರೂ ಆಗಿರಲಿ, ನಿನಗೆ ಏನು ಅನ್ನಿಸುತ್ತೋ ಅದು ಸತ್ಯ. ನಿನಗೆ ಅದು ಸತ್ಯ ಅಂತ ಅನ್ನಿಸಿದರೆ, ಬೇರೆಯವರು ಹೇಳುವುದು, ತಿಳಿದುಕೊಂಡಿರುವುದು ಸರಿಯಲ್ಲ. ನಾನು ಹೇಳಿದ್ದೇ ಸತ್ಯ, ಬೇರೆಯವರದು ಸುಳ್ಳು, ತಪ್ಪು ಅಂತಲೇ ಹೇಳಬೇಕು. ಯಾರು ಏನಾದರೂ ಅನ್ನಲಿ, ಅವರಿಗೆ ನೋವಾದರೂ ಆಗಲಿ, ಬೇಸರವಾದರೂ ಆಗಲಿ, ಡೋಂಟ್ ಕೇರ್ ಅನ್ನುವಂತೆ ಇರಬೇಕು. ಏಕೆಂದರೆ ಅದು ನಿನ್ನ ಸತ್ಯ, ನೀನು ಕಂಡುಕೊಂಡ ಸತ್ಯ! ಇಂತಹ ಸತ್ಯದ ಮಹಿಮೆ ಅಪಾರ!! ಕುಂಟನನ್ನು ಕುಂಟ ಅಂದರೆ, ಕುರುಡನನ್ನು ಕುರುಡ ಅಂದರೆ ಅವರು ಬೇಜಾರು ಮಾಡಿಕೊಂಡರೆ ಅದು ಅವರ ಹಣೆಬರಹ.
ಮಡ್ಡಿ:  ನೀನು ಹೇಳ್ತಾ ಇರೋದು ಸತ್ಯ ಅಲ್ಲ ಅಂತ ಆಧಾರ ಕೊಟ್ಟು ವಾದ ಮಾಡಿದ್ರೆ ಏನು ಮಾಡಬೇಕು?
ಸತ್ಯ:  ಅದಕ್ಯಾಕೆ ಹೆದರಬೇಕು?  ಸರ್ವಜ್ಞನ ಹೆಸರಿನಲ್ಲಿ ಯಾರು ಯಾರೋ ಏನೇನೋ ವಚನಗಳನ್ನು ಬರೆದಿದ್ದಾರೆ ಅಂತಾರೆ. ಅಂಥವನ್ನು ಉದಾಹರಣೆ ಕೊಡು. ಅಥವ ಸರ್ವಜ್ಞ ಹೇಳಿದ ಮಾತು ಅಂತ ನೀನೇ ಒಂದು ತ್ರಿಪದಿ ಬರೆದು ಕೊನೆಗೆ ಸರ್ವಜ್ಞ ಅಂತ ಸೇರಿಸು. ಅದನ್ನೇನು ಸರ್ವಜ್ಞ ಬರೆದಿದ್ದೋ ಅಲ್ಲವೋ ಅಂತ ಯಾರು ತನಿಖೆ ಮಾಡ್ತಾರೆ. ಅಲ್ಲಿಗೆ ಎಲ್ಲರೂ ಬಾಯಿ ಮುಚ್ಚಿಕೊಂಡು ಒಪ್ಪಲೇಬೇಕು. ಇಂತಹ ಅನೇಕ ವಿಷಯ, ರಹಸ್ಯಗಳನ್ನು ಸತ್ಯದೀಕ್ಷೆ ಪಡೆಯುವವರಿಗೆ ಹೇಳಿಕೊಡುತ್ತೇನೆ.
ಮೂಢ:  ಸ್ವಾಮಿ ದಯಾನಂದರು 'ಸತ್ಯವನ್ನೇ ಹೇಳು, ಆದರೆ ಸತ್ಯ ಹೇಳುತ್ತೇನೆಂದು ಶಪಥ ಮಾಡಬೇಡ. ಏಕೆಂದರೆ ಸತ್ಯ ಅನ್ನುವುದನ್ನು ನೀನೇ ತಪ್ಪು ತಿಳಿದುಕೊಂಡಿರಬಹುದು. ಅದರಿಂದ ಬೇರೆಯವರಿಗೆ ತೊಂದರೆ ಆಗಬಹುದು' ಅಂತ ಹೇಳುತ್ತಿದ್ದರಂತೆ. ನೀವು ಬೇರೆ ತರಹ ಹೇಳ್ತಾ ಇದೀರಿ. ನಮಗೆ ಗೊಂದಲ ಆಗಿದೆ, ಪರಿಹರಿಸಿ ಸ್ವಾಮಿ."
ಸತ್ಯ:  ಗೊಂದಲ ಎಲ್ಲಿದೆ? ದಯಾನಂದರು ಏನೇ ಹೇಳಲಿ, ನಿರ್ದಯಾನಂದರೂ ಏನೇ ಹೇಳಲಿ. ನಾನು ಹೇಳಿದ್ದೇ ಸತ್ಯ, ಹೇಳೋದೆಲ್ಲಾ ಸತ್ಯ ಅಂದಾಗ, ಅದು ತಪ್ಪಾಗಿದ್ದರೂ ಅದು ನಮ್ಮ ಸತ್ಯ. ಸರಿಯಿರಲಿ, ಇಲ್ಲದಿರಲಿ ಅದರ ಗೊಡವೆ ಬೇಡ, ಬೇರೆಯವರು ವಿರೋಧಿಸಲಿ, ತಲೆ ಕೆಡಿಸಿಕೊಳ್ಳೋದೇ ಬೇಡ. ಅವರ ತಲೆ ಕೆಟ್ಟು ಹೋಗಲಿ. ಸತ್ಯ ನಮ್ಮದು, ನಮ್ಮದೇ ಸತ್ಯ. ಅದರಲ್ಲೇ ಇರುವುದು ಸತ್ವ. ಬಾಯಿ ತಪ್ಪಿ ಕಾಗೆ ಬೆಳ್ಳಗಿದೆ ಅಂತ ಅಂದಿರಿ ಅಂತ ಇಟ್ಟುಕೊಳ್ಳಿ. ಅದೇ ಸರಿಯೆಂದು ವಾದಿಸಿ. ಕಪ್ಪು, ಬಿಳಿ ಅನ್ನೋದನ್ನೆಲ್ಲಾ ನಮಗಾಗದವರು ಮಾಡಿದ್ದು. ನಿಜವಾಗಿ ಹೇಳಬೇಕೆಂದರೆ ಬೆಳ್ಳಗೆ ಕಾಣುವುದು ಕಪ್ಪು ಬಣ್ಣ. ಕತ್ತಲೆಯಂತೆ ಕಾಣುವುದು ಬಿಳಿ ಬಣ್ಣ ಅಂತ ಹೇಳಿ. ಅದು ನಿಜವಾದ ಸತ್ಯ. ಯಾರು ಒಪ್ಪಲಿ, ಬಿಡಲಿ, ಅದು ಸತ್ಯ, ಸತ್ಯ, ಸತ್ಯ. ಸತ್ಯ ಹೇಳಿದರೆ ಸತ್ತಾಗ ಬಡಕೊಳ್ಳುವಂತೆ ಬಡಕೊಳ್ಳುವವರನ್ನು ಕಂಡು ಮರುಕವಾಗುತ್ತದೆ.
ಮೂಢ:  ಬೇರೆಯವರಿಗೆ ಹಾನಿ ಮಾಡುವಂತಹುದು ಸತ್ಯವಲ್ಲ. ನನಗೆ ಮಾತ್ರ ಒಳ್ಳೆಯದಾಗಲಿ ಅಂತ ಬಯಸುವುದೂ ಸತ್ಯ ಅಲ್ಲ. ಎಲ್ಲರಿಗೂ ಒಳ್ಳೆಯದಾಗಲೀ ಅಂತ ಬಯಸುವುದು ಮಾತ್ರ ಸತ್ಯ ಅಂತ ನಮ್ಮ ಹಿರಿಯರು ಹೇಳಿಕೊಟ್ಟಿದ್ದಾರೆ. ಬೇರೆಯವರಿಗೆ ಕೆಟ್ಟದಾದ್ರೂ ಅದು ಸತ್ಯ ಅಂತ ನೀವು ಹೇಳ್ತೀರಿ. ನಾವು ಯಾರ ಮಾತು ಕೇಳಬೇಕು?
ಸತ್ಯ:  ಆ ಹಿರಿಯರು ಅನ್ನಿಸಿಕೊಂಡವರಿಗೆ ತಲೆ ಇಲ್ಲ. ಅವರು ಸರಿಯಾಗಿ ಹೇಳಿಲ್ಲ. ನಾನು ಹೇಳಿದ್ದೇ ಸತ್ಯ. ಹೇಳುವುದೇ ಸತ್ಯ. ಕೇಳಿದರೆ ಉದ್ಧಾರ ಆಗ್ತೀರಿ. ಇಲ್ಲದಿದ್ದರೆ ಹಾಳಾಗಿ ಹೋಗ್ತೀರಿ. ನಿಮಗೆ ಇಷ್ಟ ಆಗಲಿ, ಬಿಡಲಿ, ನಾನಂತೂ ನನ್ನ ಸತ್ಯ ಹೇಳಿಯೇ ಹೇಳ್ತೀನಿ. ಆನೆ ನಡೆದಿದ್ದೇ ದಾರಿ, ನಾನು ಹೇಳಿದ್ದೇ ಸತ್ಯ. ಇಂದು ಸಾಯಂಕಾಲ ಸತ್ಯೋಪದೇಶವಿದೆ. ಎಲ್ಲರೂ ಬನ್ನಿ. ಸತ್ಯ ಹೇಳುವ ದೀಕ್ಷೆ ಪಡೆಯಿರಿ. ಜೈ, ಸದ್ಗುರು ಸತ್ಯಾನಂದ, ನನ್ನ ಸತ್ಯದಿಂದ ಜಗಕಾನಂದ!
**************
-ಕ.ವೆಂ.ನಾಗರಾಜ್.

ಸೋಮವಾರ, ಜನವರಿ 28, 2013

ಮೂಢ ಉವಾಚ - 93


ಕೀಳರಿಮೆ ಪಡಬೇಡ ಹೀಗಳೆವರ ಮುಂದೆ 
ಜಾರಿ ಬೀಳಲು ಬೇಡ ನಗುವವರ ಮುಂದೆ |
ಜನವ ಮೆಚ್ಚಿಸಲ್ ಸುಳ್ಳು ಹೇಳಲು ಬೇಡ
ಮನವು ಮೆಚ್ಚಿದೊಡೆ ಸಾಕೆಲವೊ ಮೂಢ || ..೩೨೫

ಭಕ್ತಿಯಿಲ್ಲದ ಪೂಜೆ ವಿನಯವಿಲ್ಲದ ವಿದ್ಯೆ 
ಗುರುವಿರದ ಶಾಲೆ ಒಡೆಯನಿಲ್ಲದ ಮನೆ |
ಇದ್ದರೇನಿಲ್ಲದಿರೇನ್ ತಳವಿರದ ಮಡಕೆ 
ಲೋಕವಿದು ಕೊರತೆಯ ಸಂತೆ ಮೂಢ || ..೩೨೬

ಅನುಭವಿಸಿದ ದುಃಖ ಭಯವಾಗಿ ಕಾಡೀತು
ದುಃಖದ ಸೋಂಕೆಲ್ಲಿ ಭಯವಿಲ್ಲದವಗೆ |
ಸುಖದ ನೆನಪುಗಳು ಬಯಕೆ ತರದಿರದೆ
ಬಯಕೆ ದುಃಖಕ್ಕೆ ದೂಡೀತು ಮೂಢ || ..೩೨೭

ಪುಟ್ಟಿಸಿದ ರವಿಯನೇ ಮುಸುಕುವುದು ಮೋಡ
ನನ್ನಿಂದ ನಾಬರಲು ನನ್ನನೇ ಮರೆಸುವುದು |
ನಾನತ್ವ ಬಿಗಿಯುವ ಕಗ್ಗಂಟೆ ಮಮಕಾರ
ಅರಿತೆನೆಂಬಹಮಿಕೆಗೆ ಸಿದ್ಧಿ ದೂರವು ಮೂಢ || ..೩೨೮
************
-ಕ.ವೆಂ.ನಾಗರಾಜ್.

ಶುಕ್ರವಾರ, ಜನವರಿ 25, 2013

ಕುಲದ ನೆಲೆಯ ಬಲ್ಲಿರಾ?



     "ಈ ಮನುವಾದಿಗಳು ದೇಶವನ್ನು ಅಧೋಗತಿಗೆ ತಂದಿದ್ದಾರೆ. ಶತಶತಮಾನಗಳಿಂದ ನಮ್ಮನ್ನು ತುಳಿಯುತ್ತಾ, ಶೋಷಿಸುತ್ತಾ ಬಂದಿದ್ದಾರೆ. ಅವರನ್ನು ಮಟ್ಟ ಹಾಕಬೇಕು. ಆಗ ಮಾತ್ರ ನಮ್ಮ ಉದ್ಧಾರ ಸಾಧ್ಯ" - ಪುಟ್ಟರಾಜುವಿನ ಭಾಷಣ ಈ ಮಾತಿನೊಂದಿಗೆ ಮುಕ್ತಾಯವಾದಾಗ ಜನ ಚಪ್ಪಾಳೆ ತಟ್ಟಿದರು. ಯಾವುದೋ ಗುಂಗಿನಲ್ಲಿದ್ದ, ಪರಸ್ಪರ ಮಾತಿನಲ್ಲಿ ಮಗ್ನರಾಗಿದ್ದ ಇನ್ನಿತರರೂ ಎಚ್ಚೆತ್ತು ಚಪ್ಪಾಳೆ ತಟ್ಟಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಣ್ಣಸ್ವಾಮಿಯ ಮೇಲೆ ಪುಟ್ಟರಾಜುವಿನ ಮಾತು ಬಹಳ ಪ್ರಭಾವ ಬೀರಿತ್ತು. ಮನುವಾದಿಗಳನ್ನು ಮಟ್ಟ ಹಾಕಲು ಏನಾದರೂ ಮಾಡಬೇಕೆಂದು ಸಣ್ಣಸ್ವಾಮಿಗೆ ಅನ್ನಿಸಿತು. ಏನು ಮಾಡಬಹುದೆಂದು ಪುಟ್ಟರಾಜುವಿನೊಂದಿಗೇ ಚರ್ಚಿಸಬೇಕೆಂದುಕೊಂಡ ಅವನಿಗೆ ಅವಕಾಶವೂ ಒದಗಿಬಂದಿತು. ಒಮ್ಮೆ ಗೆಳೆಯರೊಡನೆ ಎಡವಟ್ಟು ಮಂಜನ ಮನೆಯಲ್ಲಿ ಪಾನಗೋಷ್ಠಿ ವ್ಯವಸ್ಥೆ ಆಗಿದ್ದಾಗ ಪುಟ್ಟರಾಜುವೂ ಬಂದಿದ್ದ. ಕುರುಕಲು ತಿಂಡಿ ತಿನ್ನುತ್ತಾ ಒಳಕ್ಕೆ ಚೈತನ್ಯರಸ ಇಳಿಯುತ್ತಿದ್ದಂತೆಯೇ ಮಾತುಕತೆಗೆ ರಂಗೇರಿತ್ತು. ಎಲ್ಲರದೂ ಒಂದು ದಾರಿಯಾದರೆ ಎಡವಟ್ಟನದೇ ಬೇರೆ ದಾರಿ ಎಂಬಂತೆ ಅಡ್ಡಪ್ರಶ್ನೆಗಳನ್ನೇ ಹಾಕುತ್ತಿದ್ದ ಮಂಜನಿಗೆ ಉತ್ತರ ಕೊಡಲಾರದ ಗೆಳೆಯರು ಅವನನ್ನು ಎಡವಟ್ಟು ಮಂಜ ಎಂದೇ ಕರೆಯುತ್ತಿದ್ದರು.
ಸಣ್ಣಸ್ವಾಮಿ: ಪುಟ್ಟರಾಜು, ನೀನು ಅವತ್ತು ಮಾಡಿದ ಭಾಷಣ ಬೊಂಬಾಟಾಗಿತ್ತು. ಮನುವಾದಿಗಳನ್ನು ಮಟ್ಟ ಹಾಕಬೇಕು ಅಂದ ಮಾತಂತೂ ನನಗೆ ಬಹಳ ಇಷ್ಟವಾಯಿತು. ನೂರಾರು ವರ್ಷಗಳಿಂದ ನಮ್ಮನ್ನು ತುಳಿಯುತ್ತಾ ಬಂದಿರುವ ಅವರನ್ನು ಮಟ್ಟ ಹಾಕಕ್ಕೆ ನಿಜವಾಗಿಯೂ ಏನಾದರೂ ಮಾಡಲೇಬೇಕು ಕಣ್ಲಾ. ಏನು ಮಾಡಬಹುದು?
ಪುಟ್ಟರಾಜು ಏನನ್ನೋ ಹೇಳಲು ಬಾಯಿ ತೆರೆಯುತ್ತಿದ್ದಂತೆ ಮಂಜ ಅಡ್ಡಬಾಯಿ ಹಾಕಿದ:
ಮಂಜ: ಲೋ, ಪುಟ್ಟರಾಜ, ನಿಂಗೆ ಎಷ್ಟಲಾ ವಯಸ್ಸು?
ಪು: ಇಪ್ಪತ್ತೆಂಟು. ಯಾಕಲಾ?
ಮಂಜ: ಅಲ್ಲಾ, ನೂರಾರು ವರ್ಷದಿಂದ ತುಳೀತಿದಾರೆ ಅಂದೆಯಲ್ಲಾ, ಅದಕ್ಕೇ ಕೇಳಿದೆ.
ಪು: ನನ್ನನ್ನು ಅಂತ ಹೇಳ್ಲಿಲ್ಲ ಕಣ್ಲಾ, ನಮ್ಮನ್ನು ಅಂತ ಅಂದೆ.
ಮಂಜ: ನಾವು ಅಂದರೆ ನಮ್ಮ ಜಾತಿಯೋರು! ಅಲ್ಲವೇನ್ಲಾ?
ಪು: ಹೂಂ.
ಮಂಜ: ನೀನು ಪುನರ್ಜನ್ಮ ನಂಬ್ತೀಯಾ?
ಪು: ಯಾಕಲಾ?
ಮಂಜ: ಉತ್ತರ ಹೇಳು, ಮೊದಲು.
ಪು: ಒಂದೊಂದು ಸಲ ಪುನರ್ಜನ್ಮ ಇದೆ ಅಂತ ಅನ್ಸುತ್ತೆ, ಒಂದೊಂದು ಸಲ ಇಲ್ಲ ಅಂತ ಅನ್ಸುತ್ತೆ.
ಮಂಜ: ಪುನರ್ಜನ್ಮ ಇಲ್ಲ ಅಂದರೆ ನೂರಾರು ವರ್ಷದಿಂದ ತುಳೀತಿದಾರೆ ಅನ್ನೋ ಮಾತಿಗೆ ಅರ್ಥ ಇರಲ್ಲ. ಇದೇ ಅಂತ ಅಂದುಕೊಂಡರೆ ಹಿಂದೆಯೂ ಇದೇ ಜಾತೀಲಿ ಹುಟ್ಟಿದ್ದೆವಾ ಅನ್ನೋದು ಗ್ಯಾರೆಂಟಿ ಏನು? ಏನೋ ನಮ್ಮ ಅಪ್ಪ-ಅಮ್ಮ ಈ ಜಾತಿಯವರು, ಆದ್ದರಿಂದ ನಮ್ಮದೂ ಈ ಜಾತಿ. ನಾವೇನಾದರೂ ದೇವರನ್ನು ಕೇಳಿಕೊಂಡಿದ್ದೆವಾ, ಈ ಜಾತೀಲಿ ಹುಟ್ಟಿಸು ಅಂತಾ? ಹಿಂದೆ ಬೇರೆ ಇನ್ನು ಯಾವುದೋ ಜಾತಿಯಲ್ಲಿ ಹುಟ್ಟಿರಬಹುದಲ್ವಾ? ದೇವರನ್ನು ಇಂಥಾ ಜಾತೀಲೇ ಹುಟ್ಟಿಸು ಅಂತ ಕೇಳಿಕೊಂಡು ಹುಟ್ಟಲು ಸಾಧ್ಯ ಇದ್ದಿದ್ದರೆ ನೀನು ನಿನ್ನನ್ನು ಯಾವ ಜಾತೀಲಿ ಹುಟ್ಟಿಸು ಅಂತ ಕೇಳಿಕೊಳ್ತಾ ಇದ್ದೆ?
ಪು: ತಲೆ ತಿನ್ನಬೇಡ ಕಣ್ಲಾ.
ಮಂಜ: ಮನುವಾದ ಅಂದ್ರೆ ಏನು?
ಪು: ಈ ಪುಳಿಚಾರುಗಳು ನಮ್ಮನ್ನು ತುಳಿಯೋಕೆ ಮಾಡ್ಕೊಂಡಿರೋ ಒಂದು ಗ್ರಂಥ.
ಮಂಜ: ಅದರಲ್ಲಿ ಏನಿದೆ? ನೀನು ಅದನ್ನು ಓದಿದೀಯಾ?
ಪು: ನಾನು ಓದಿಲ್ಲ ಕಣ್ಲಾ. ಅದನ್ನು ಯಾವನು ಓದ್ತಾನೆ? ಅದರಲ್ಲಿ ವೇದಾನ ಬ್ರಾಹ್ಮಣರು ಅದರಲ್ಲೂ ಗಂಡಸರು ಮಾತ್ರ ಕಲಿಯಬೇಕು, ಹೆಂಗಸರಿಗೆ ಸ್ವಾತಂತ್ರ್ಯ ಕೊಡಬಾರದು, ಹಾಗೆ, ಹೀಗೆ ಅಂತ ಏನೇನೋ ಅಪದ್ಧ ಇದೆಯಂತೆ. ಒಟ್ಟಿನಲ್ಲಿ ನಮ್ಮನ್ನು ತುಳಿಯೋಕೆ ಏನು ಬೇಕೋ ಅದೆಲ್ಲಾ ಇದೆಯಂತೆ. 
ಮಂಜ: ನೀನು ಅದನ್ನು ಓದದೇ ಅದು ಹೆಂಗಲಾ ಹೇಳ್ತೀಯ? ನನ್ನ ಕ್ಲಾಸ್ ಮೇಟ್ ಹಾರುವ ಪ್ರಸಾದಿಗೂ ಮನುವಾದ ಅಂದ್ರೆ ಏನೂ ಅಂತಲೇ ಗೊತ್ತಿಲ್ಲ. ಅವರಪ್ಪ ಜೋಯಿಸರನ್ನೂ ಕೇಳಿದ್ದೆ. 'ಅದೇನೋ ಗೊತ್ತಿಲ್ಲ, ಮನುಷ್ಯರು ಹೇಗಿರಬೇಕು ಅಂತ ಬರೆದಿದ್ದಾರೆ, ಅಷ್ಟೇ ನನಗೆ ಗೊತ್ತಿರೋದು' ಅಂದರು. ಅವರೂ ಅದನ್ನು ಓದಿಲ್ಲವಂತೆ. ಅವರೊಬ್ಬರೇ ಅಲ್ಲ, ಹೆಚ್ಚಿನ ಹಾರುವರಿಗೂ ಸರಿಯಾಗಿ ಗೊತ್ತಿಲ್ಲ. ಮತ್ತೆ ಯಾಕಲಾ, ಈ ಜಟಾಪಟಿ?
ಪು: ನೀನೇನು ಬ್ರಾಮಣರ ಏಜೆಂಟ್ ಏನ್ಲಾ? ಅವರ ಪರ ಯಾಕ್ ಮಾತಾಡ್ತೀಯ? ಅವರೇನು ಅವರ ಜಾತಿ ಬಿಟ್ಟುಕೊಡ್ತಾರಾ? 
ಮಂಜ: ನಾನು ಯಾರ ಪರಾನೂ ಮಾತಾಡ್ತಿಲ್ಲ ಕಣ್ಲಾ. ನಂಗೆ ಅರ್ಥ ಆಗದೇ ಇರೋದು ಏನೆಂದರೆ ನಾವು ಹಿಂದೆ ಯಾವ ಜಾತೀಲಿ ಹುಟ್ಟಿದ್ದೆವು? ಮುಂದೆ ಯಾವ ಜನ್ಮದಲ್ಲಿ ಹುಟ್ತೀವಿ ಅನ್ನೋದು. ಈಗಿರೋ ಜಾತೀಲೇ ಮುಂದೇನೂ ಹುಟ್ಟುತ್ತೇವಾ? 
ಪು: ಇವನ್ಯಾವನ್ಲಾ ಇವನು? ತಲೆ ಗಬ್ಬೆಬ್ಬಿಸಿಬಿಟ್ಟ.
ಮಂಜ: ನಿನ್ನ ಮಾತು ಕೇಳಿಯೇ ಕಣ್ಲಾ ನನ್ನ ತಲೇನೂ ಗಬ್ಬೆದ್ದಿರೋದು. ಈ ಪ್ರಪಂಚ ಏನು ಇವತ್ತಿಂದಾ? ಬ್ರಾಮಣರು, ಕ್ರಿಶ್ಚಿಯನರು, ಸಾಬರು, ಬೌದ್ಧರು, ಜೈನರು, ಲಿಂಗಾಯತರು ಇಂಥವೆಲ್ಲಾ ಪ್ರಪಂಚ ಹುಟ್ಟಿದಾಗಿನಿಂದಲೂ ಇದ್ದವೇನ್ಲಾ? ಇವನ್ನೆಲಾ ಮಾಡಿದೋರು ಜನರೇ ಅಲ್ಲವೇನ್ಲಾ? 
ಪು: ಮತ್ತೆ ಯಾಕಲಾ ಆ ಪುಳಿಚಾರುಗಳು ಬ್ರಾಹ್ಮಣ ಮುಖದಿಂದ ಹುಟ್ಟಿದ, ಶೂದ್ರ ಕಾಲಿಂದ ಹುಟ್ಟಿದ ಅನ್ನೋದು?
ಮಂಜ: ಯಾರಾದ್ರೂ ಎಲ್ಲಿಂದ ಹುಟ್ತಾರೆ ಅನ್ನೋದು ಎಲ್ರಿಗೂ ಗೊತ್ತು. ಎಲ್ಲಾರೂ ಹುಟ್ಟೋದು ಒಂದೇ ಕಡೆಯಿಂದ.
ಪು: ಲೋ ಮಗನೇ. ಕೆಣಕಬೇಡ, ಒದ್ದುಬಿಡ್ತೀನಿ. ನಾನು ಹೇಳಿದ್ದು ಅವರು ಮೇಲೆ, ನಾವು ಕೆಳಗೆ ಅಂತ ಹೇಳೋ ರೀತಿ ಕಣ್ಲಾ ಇದು. 
ಮಂಜ: ಜಾತೀಲಿ ಮೇಲು-ಕೀಳು ಅನ್ನೋರು ಯಾರೇ ಆಗಲಿ ಅವರು ಸರಿಯಿಲ್ಲ. ಜಾತೀಲಿ ಮೇಲು-ಕೀಳು ಇದೆ ಅಂತ ತಿಳಿಯೋರೂ ಮೂರ್ಖರೇ. ಬ್ರಾಹ್ಮಣ ಅನ್ನಿಸಿಕೊಂಡೋನು ಕೆಟ್ಟದಾಗಿ ನಡೆದುಕೊಂಡರೆ ಅವನಿಗಿಂತ ಕೆಟ್ಟವರಿಲ್ಲ. ಶೂದ್ರ ಅನ್ನಿಸಿಕೊಂಡೋನು ಒಳ್ಳೆಯ ರೀತಿ ನಡೆದರೆ ಅವನನ್ನು ಮೇಲು ಅಂದರೆ ತಪ್ಪೇನೂ ಇಲ್ಲ. ಹುಟ್ಟೋ ಜಾತೀನೇ ಖಾಯಂ ಇಲ್ಲ. ಹಾಗಿರುವಾಗ ಹುಟ್ಟಿನ ಜೊತೆ ಬರೋ ಜಾತಿ ಹಿಡ್ಕೊಂಡು ಯಾಕೆ ಕಿತ್ತಾಡಬೇಕು? ಹುಟ್ಟು ನಮ್ಮದಲ್ಲ, ಸಾವೂ ನಮ್ಮದಲ್ಲ. ಮಧ್ಯ ಇರೋ ಬದುಕು ಮಾತ್ರ ನಮ್ಮದು ಕಣ್ಲಾ.  
ಪು: ಗ್ಯಾರೆಂಟಿ ಆಯ್ತು ಕಣ್ಲಾ. ಯಾರೋ ನಿನ್ನ ತಲೇನ ಚೆನ್ನಾಗಿ ತಿಕ್ಕೀದಾರೆ. ಅದಕ್ಕೇ ಹೀಗೆ ಮಾತಾಡ್ತಾ ಇದೀಯ.
ಮಂಜ: ನೀನೇ ಹೇಳ್ತೀಯ, ಜಾತಿ ಬಿಡಿ, ಮತ ಬಿಡಿ, ಮಾನವತೆಗೆ ಜೀವ ಕೊಡಿ ಅಂತ. ಗೋಡೆ ಮೇಲೆಲ್ಲಾ ಹೀಗೆ ಬರೀತಾರೆ, ನೀನು ಜಾತಿ ಬಿಡಕ್ಕೆ ತಯಾರಿದೀಯಾ?
ಪು: ಅದ್ಹೆಂಗಲಾ ಬಿಡಕ್ಕಾಗುತ್ತೆ? ನಮ್ಮ ಜಾತಿ ನಮಗೆ ದೊಡ್ಡದು, ನೀನು ಬಿಟ್ಟೀಯಾ?
ಮಂಜ: ಓ ಬಿಡ್ತೀನಿ. ಆದ್ರೆ ಒಂದು ಪ್ರಾಬ್ಲೆಮ್ಮು. ಈ ಜಾತಿ ಹೆಸರಿಂದನೇ ನನಗೆ ಕೆಲಸ ಸಿಕ್ಕಿರೋದು. ನನ್ನ ಮಗನಿಗೆ ಸ್ಕಾಲರ್ ಶಿಪ್ ಸಿಕ್ಕಿರೋದು. ಜಾತಿ ಬಿಟ್ಟರೆ ಇದಕ್ಕೆಲ್ಲಾ ಎಳ್ಳು-ನೀರು ಬಿಡಬೇಕಾಗುತ್ತೆ. ಅಷ್ಟಕ್ಕಾದರೂ ಜಾತಿ ಇಟ್ಕೊಳ್ಳಲೇಬೇಕು.
ಸಣ್ಣಸ್ವಾಮಿ: ನಮ್ಮ ನಂಜಪ್ಪ ಚರ್ಚಿಗೆ ಹೋಗ್ತಾನೆ, ಚರ್ಚಿನವರು ಅವರ ಆಸ್ಪತ್ರೇಲಿ ಅವನ ಮಗಳಿಗೆ ನರ್ಸು ಕೆಲಸ ಕೊಡಿಸಿದಾರೆ. ಆದ್ರೆ ಅವನು ಜಾತಿ ಬಿಟ್ಟಿಲ್ಲ. ಎರಡು ಕಡೇಗೂ ಹೋಗ್ತಾನೆ, ಎರಡು ಕಡೇನೂ ಅನುಕೂಲ ಪಡೀತಾ ಇದಾನೆ.
ಮಂಜ: ಈಗ ಹೇಳು, ಜಾತಿ ಮನುಷ್ಯರು ಮಾಡಿದ್ದಾ? ದೇವರು ಮಾಡಿದ್ದಾ? ದೇವರು ಮಾಡಿದ್ದಾದರೆ ಜಾತಿ ಬದಲಾಯಿಸಕ್ಕೆ ಆಗ್ತಾ ಇತ್ತಾ? ದೇವರೇ ಜಾತಿ ಮಾಡಿದ್ದಾಗಿದ್ರೆ ನೋಡಿದ ತಕ್ಷಣ ಇವರು ಇಂತಹ ಜಾತಿಯವರು ಅಂತ ಗೊತ್ತಾಗೋ ಹಾಗೆ ಮಾಡ್ತಾ ಇದ್ದ. ಈಗ ಕುದುರೆ ಇದೆ, ಕತ್ತೆ ಇದೆ, ನಾಯಿ ಇದೆ. ಅವು ಪ್ರಪಂಚದ ಎಲ್ಲೇ ಇರಲಿ, ನೋಡಿದ ಕೂಡಲೇ ಕುದುರೆ, ಕತ್ತೆ, ನಾಯಿ ಅಂತಾ ಹೇಳಬಹುದು. ಆದರೆ ಮನುಷ್ಯರನ್ನು ನೋಡಿ ಇವರು ಇಂತಹ ಜಾತಿಯವರು ಅಂತ ಹೇಳಕ್ಕೆ ಆಗುತ್ತಾ? ಮನುಷ್ಯ ಅಂತ ಮಾತ್ರ ಹೇಳ್ಬೋದು. ನಾಯಿ ಹೊಟ್ಟೇಲಿ ನಾಯಿ ಹುಟ್ಟುತ್ತೆ. ಅದಕ್ಕೇ ಅದು ನಾಯಿ ಜಾತಿ. ಮನುಷ್ಯರ ಹೊಟ್ಟೇಲಿ ಮನುಷ್ಯರೇ ಹುಟ್ಟೋದು. ಅದು ಮನುಷ್ಯ ಜಾತಿ ಅಷ್ಟೆ. ದೇವರು ಮಾಡಿದ್ದೂ ಅಷ್ಟೇ. ಮನುಷ್ಯರು ಆಮೇಲೆ ಆ ಜಾತಿ, ಈ ಜಾತಿ, ಮೇಲೆ, ಕೆಳಗೆ ಅಂತ ಮಾಡಿಕೊಂಡಿದ್ದು. 
ಪು: ಈಗ ನನ್ನ ದಾರೀಗೆ ಬಂದೆ ನೀನು. ಮನುಷ್ಯರೆಲ್ಲರೂ ಒಂದೇ. ಮೊದಲು ಈ ಜಾತಿ ಹೋಗಬೇಕು. ವಿಶ್ವಮಾನವರಾಗಬೇಕು.
ಮಂಜ: ನೀನೇ ನಿನ್ನ ಜಾತಿ ಬಿಡಕ್ಕೆ ತಯಾರಿಲ್ಲ. ಬೇರೆಯವರಿಗೆ ಯಾಕಲಾ ಹೇಳ್ತೀಯಾ? ವಿಶ್ವಮಾನವ ಅಂದರೆ ಎಲ್ಲಾ ಒಂದೇ ಅಂತ ತಾನೇ? ಹಾಗಾದ್ರೆ ನೀನು ಒಂದು ಜಾತಿಯವರನ್ನೇ ಏಕೆ ಬೈತೀಯಾ? 
ಪು: ಅವರಿಂದಾನೇ ದೇಶ ಹಾಳಾಗಿರೋದು ಅದಕ್ಕೇ.
ಮಂಜ: ಅವರಿಂದಾನೇ ದೇಶ ಉದ್ಧಾರ ಆಗಿರೋದು ಅಂತ ಅವರೂ ಹೇಳಬಹುದಲ್ಲವೇನ್ಲಾ? ಅವರನ್ನು ಬೈದರೆ ದೇಶ ಸರಿ ಹೋಗುತ್ತಾ? ಯಾರನ್ನಾದರೂ ಬೈದುಬಿಟ್ಟು ಸರಿ ಮಾಡಕ್ಕೆ ಸಾಧ್ಯ ಇದೆಯಾ? ಸರಿ ಅಂತ ಅವರಿಗೆ ಅನ್ನಿಸಿದರೆ ಅವರೇ ಸರಿ ಹೋಗ್ತಾರೆ. ನೀನು ಅವರನ್ನು ದ್ವೇಷ ಮಾಡುತ್ತಾ ಅವರು ನಿನ್ನನ್ನು ಪ್ರೀತಿಸಬೇಕು ಅಂತ ಬಯಸೋದು ಅಷ್ಟು ಸರಿ? ನೀನು ಇನ್ನೊಬ್ಬರನ್ನು ಅನ್ನುವುದನ್ನು ಬಿಟ್ಟರೆ ಅದೇ ದೊಡ್ಡ ಬದಲಾವಣೆ. ಮುಸ್ಲಿಮರು ಬೇರೆಯವರನ್ನು ಕಾಫಿರ್ ಅಂತ ಬೈದರೆ? ಕಾಫಿರರಿಗೆ ಬದುಕುವ ಹಕ್ಕಿಲ್ಲ ಅಂದರೆ? ಕ್ರಿಶ್ಚಿಯನ್ನರು ಇತರರನ್ನು ದ್ವೇಷಿಸುತ್ತಾ ಹೋದರೆ, ಮತಾಂತರ ಮಾಡುತ್ತಾ ಹೋದರೆ ಪರಿಸ್ಥಿತಿ ಸರಿಹೋಗುತ್ತಾ? ಹಿಂದೂಗಳು ಇತರ ಧರ್ಮದವರನ್ನು ಸಹಿಸದೇ ಹೋದರೆ? ಇದಕ್ಕೆಲ್ಲಾ ಕೊನೆ ಅನ್ನೋದು ಇದೆಯಾ? ಇನ್ನೊಂದು ವಿಷಯ. ಈಗ ನಮ್ಮಲ್ಲಿ ಜಾತಿ ಅನ್ನೋದು ಉಳಿಯೋದಕ್ಕೆ, ಬಲವಾಗುವುದಕ್ಕೆ ನಿಜವಾದ ಕಾರಣ ಈ ದರಿದ್ರ ರಾಜಕಾರಣಿಗಳು. ಅವರನ್ನು ಮೊದಲು ವಿಚಾರಿಸಿಕೊಳ್ಳಬೇಕು. ಎಲ್ಲರೂ ದೇಶ ಮುಂದುವರೆಯಬೇಕು ಅಂತ ಬಯಸಬೇಕಾಗಿರುವಾಗ, ಸಿಗೋ ಸ್ವಲ್ಪ ಲಾಭಕ್ಕೋಸ್ಕರ ನಮ್ಮ ಜಾತಿ ಹಿಂದುಳಿದವರ ಜಾತಿಗೆ ಸೇರಲಿ, ವರ್ಗಕ್ಕೆ ಸೇರಲಿ ಅಂತ ಹೊಡೆದಾಡ್ತಾ ಇದಾರೆ. ಜಾತಿಗೆ ಸರ್ಕಾರಿ ಮಾನ್ಯತೆ ಇದೆ. ಅದೇ ತಪ್ಪು. ಜಾತೀ ಆಧಾರದ  ಮೇಲೇನೇ ಸರ್ಕಾರ ನಡೆಸ್ತಾ ಇದಾರೆ. ಇದು ನಿಜವಾಗಿಯೂ ಜಾತ್ಯಾತೀತ ದೇಶ ಅಂತ ಹೇಳಕ್ಕಾಗುತ್ತೇನ್ಲಾ?
ಪು: ನೀನು ಏನ್ಲಾ ಹೇಳೋದು? ಇದನ್ನು ಬದಲಾಯಿಸೋಕೆ ಏನು ಮಾಡಬೇಕು? ನನ್ ತಲೆ ಗೊಜ್ಜಾಗಿ ಹೋಯಿತು. ತಂದೇ, ನಿನಗೆ ಕೈಮುಗೀತೀನಿ, ನೀನು ಏನು ಹೇಳಬೇಕೂಂತಿದೀಯಾ?
ಮಂಜ: ಬದಲಾಯಿಸೋಕೆ ನಾನು, ನೀನು ಯಾರಲಾ? ಎಲ್ಲರೂ ಎಲ್ಲರನ್ನೂ ಪ್ರೀತಿಸಬೇಕು ಅಂತ ತಾನೇ ನೀನು ಅವರನ್ನು ಬಯ್ಯೋ ಹಿಂದಿರುವ ಕಾರಣ? ಅದಕ್ಕೆ ಏನು ಮಾಡಬೇಕು? ನೀನು ಅದನ್ನು ಮೊದಲು ಅದನ್ನು ಮಾಡು. ನೀನು ಬೇರೆಯವರನ್ನು ಪ್ರೀತಿಸು. ಆಮೇಲೆ ಬೇರೆಯವರಿಗೆ ಹೇಳುವಂತೆ. ನೀನು ಮೊದಲು ಬದಲಾಗು.
ಪು: ನಾನೊಬ್ಬ ಬದಲಾಗಿಬಿಟ್ಟರೆ ದೇಶ ಬದಲಾಗಿಬಿಡುತ್ತಾ?
ಮಂಜ: ಎಲ್ಲರೂ ಬೇರೆಯವರು ಬದಲಾಗಲಿ ಅಂತಾರೆ. ತಾವು ಮಾತ್ರ ಬದಲಾಗಲ್ಲ. ಹೀಗಾದ್ರೆ ಬದಲಾವಣೆ ಆಗುತ್ತಾ? ಬೇರೆಯವರ ಬಗ್ಗೆ ಯೋಚಿಸೋದು ಬಿಟ್ಟು ಪ್ರತಿಯೊಬ್ಬರೂ ಅವರ ಪಾಡಿಗೆ ಅವರು ಬದಲಾಗಲಿ. ಆಗ ಬದಲಾವಣೆ ಆಗೇ ಆಗುತ್ತೆ. ಸಾವಿರಾರು ಮೈಲಿ ಪ್ರಯಾಣ ಪ್ರಾರಂಭ ಆಗೋದು ನಾವು ಇಡೋ ಮೊದಲ ಹೆಜ್ಜೆಯಿಂದಲೇ. ಆ ಹೆಜ್ಜೆ ನಮ್ಮಿಂದಲೇ ಶುರುವಾಗಲಿ. ಏನಂತೀರಾ ಫ್ರೆಂಡ್ಸ್? 
     ಎಲ್ಲರೂ 'ಚಿಯರ್ಸ್' ಅಂದರು. 'ಥತ್, ಇವತ್ತು ಕಿಕ್ಕೇ ಬರಲಿಲ್ಲ. ಎಲ್ಲಾ ಈ ಎಡವಟ್ಟು ಮಂಜನಿಂದ' ಎಂದು ಪುಟ್ಟರಾಜು ಗೊಣಗಾಡಿದರೆ ಉಳಿದವರು 'ನಮಗಂತೂ ಸಕತ್ ಕಿಕ್ ಸಿಕ್ಕಿತು' ಎಂದು ನಕ್ಕರು.
-ಕ. ವೆಂ.ನಾಗರಾಜ್.
     

ಬುಧವಾರ, ಜನವರಿ 23, 2013

ಶಿವಮೊಗ್ಗದ ಶಿವಪ್ಪನಾಯಕನ ಅರಮನೆ

ಸಸಿಯಂ ಶಿವಮೌಳಿಯನೈ
ದಿಸಿ ಕಡಲಂ ಪುಗಿಸಿ ಬಾಂಬೊಳೆಯನಹಿಪತಿಯಂ
ರಸೆಯಡಿಗಳ್ದಿ ಶಿವೇಂದ್ರನ
ಜಸಮೆಸಕದಿನುರ್ವಿ ಪರ್ವಿದುದು ಮೂಜಗಮಂ|| [ಕೆ.ನೃ.ವಿ. ೭.೧೧]
     ಚಂದ್ರನನ್ನು ಶಿವನ ತಲೆಗೇರಿಸಿ, ನದಿಯನ್ನು ಕಡಲಿಗೆ ಹೊಗಿಸಿ, ಆದಿಶೇಷನನ್ನು ಪಾತಾಳಕ್ಕೆ ಮುಳುಗಿಸಿದಂತೆ ಶಿವೇಂದ್ರನ ಕೀರ್ತಿ ಮೂರು ಲೋಕವನ್ನೂ ಹಬ್ಬಿತು ಎಂದು ೧೭ನೆಯ ಶತಮಾನದ ಕೆಳದಿ ಕವಿಲಿಂಗಣ್ಣನ ವರ್ಣನೆ. ಈ ಶಿವೇಂದ್ರ ಬೇರೆ ಯಾರೂ ಅಲ್ಲ, ಕೆಳದಿಯ ಪ್ರಸಿದ್ಧ ದೊರೆ ಶಿವಪ್ಪನಾಯಕ. ಶಿಸ್ತಿನ ಶಿವಪ್ಪನಾಯಕ ಎಂದೇ ಹೆಸರಾಗಿದ್ದ, ಕ್ರಿ.ಶ. ೧೬೪೬ ರಿಂದ ೧೬೬೦ರವರೆಗೆ ರಾಜ್ಯವನ್ನು ಆಳಿದ್ದ ಈತನ ಬೇಸಿಗೆ ಕಾಲದ ಅರಮನೆ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದ ಪಕ್ಕದಲ್ಲಿ ಇದೆ. ಮೊದಲು ಸುಮಾರು ೨೦೦ ಎಕರೆ ವಿಸ್ತೀರ್ಣದಲ್ಲಿ ಈ ಅರಮನೆಯಿತ್ತೆಂದು ಹೇಳಲಾಗಿದ್ದು, ಈಗ ಸುಮಾರು ೧೦ ಎಕರೆಯಷ್ಟು ಭಾಗ ಮಾತ್ರ ಉಳಿದಿದೆ. ಕೆಳದಿ ಅರಸರ ನಂತರದಲ್ಲಿ ಬ್ರಿಟಿಷರು ಇದನ್ನು ಬಳಸಿದ್ದರು. ರಾಣಿ ಚನ್ನಮ್ಮ ಶಿವಾಜಿಯ ಮಗ ರಾಜಾರಾಮನನ್ನು ಅವನು ಔರಂಗಜೇಬನಿಂದ ಸೋತು ಓಡಿಬಂದು ರಕ್ಷಣೆ ಕೋರಿದಾಗ ಈ ಅರಮನೆಯಲ್ಲೇ ಇರಲು ಅವಕಾಶ ನೀಡಿ ರಕ್ಷಿಸಿದ್ದಳೆನ್ನುತ್ತಾರೆ. ಸ್ವಾತಂತ್ರ್ಯಾನಂತರದಲ್ಲಿ ಸರ್ಕಾರವು ಇದನ್ನು ಅರಣ್ಯ ಇಲಾಖೆಯ ಉಗ್ರಾಣವಾಗಿ ಬಳಸಿಕೊಂಡಿತ್ತು. ಈಗ ಇದು ರಕ್ಷಿತ ಸ್ಮಾರಕವಾಗಿದೆ. ತೇಗ ಮತ್ತು ಬೀಟೆ ಮರಗಳನ್ನು ಉಪಯೋಗಿಸಿ ಕಟ್ಟಿರುವ ಈ ಅರಮನೆ ಪ್ರೇಕ್ಷಣೀಯವಾಗಿದೆ. ಅರಮನೆಯ ಎದುರು ಇರುವ ತೆರೆದ ಪ್ರಾಂಗಣದಲ್ಲಿ ಸಾಂಸ್ಕೃತಿಕ ಉತ್ಸವಗಳು, ಕಾರ್ಯಕ್ರಮಗಳು ನಡೆಯುತ್ತಿದ್ದು, ಅದನ್ನು ಮೇಲಿನ ಭಾಗದಿಂದ ರಾಜ ಮತ್ತು ಪರಿವಾರದವರು ವೀಕ್ಷಿಸಲು ಅನುಕೂಲವಾಗುವಂತೆ ಮೊದಲ ಅಂತಸ್ತಿನ ರಚನೆಯಾಗಿದೆ. ಅರಸರು ಇಲ್ಲಿ ದರ್ಬಾರು ನಡೆಸುತ್ತಿದ್ದರರೆನ್ನಲಾಗಿದೆ. 
     ಅರಮನೆಯ ಆವರಣದಲ್ಲಿ ಒಂದು ವಸ್ತು ಸಂಗ್ರಹಾಲಯವಿದ್ದು, ಪ್ರಾಚೀನ ವಿಗ್ರಹಗಳು, ಅನೇಕ ಅಮೂಲ್ಯ ವಸ್ತುಗಳು, ಆಯುಧಗಳು, ವೀರಗಲ್ಲುಗಳು, ತಾಡಪತ್ರಗಳು, ಉಡುಪುಗಳು, ಇತ್ಯಾದಿಗಳನ್ನು ಇತಿಹಾಸಾಸಕ್ತರು ನೋಡಿ ಕಣ್ತುಂಬಿಕೊಳ್ಳಬಹುದು. ಅರಮನೆಯ ಮತ್ತು ವಸ್ತು ಸಂಗ್ರಹಾಲಯದ ಕೆಲವು ಚಿತ್ರಗಳನ್ನು ನಿಮ್ಮ ಗಮನಕ್ಕೆ ಪ್ರಕಟಿಸಿದ್ದು, ಇದು ನಿಮ್ಮನ್ನು ಆ ಸ್ಥಳ ನೋಡಲು ಪ್ರೇರೇಪಿಸಲಿ ಎಂದು ಬಯಸುವೆ. 
     ಆಸಕ್ತರ ಮಾಹಿತಿಗೆ: ಪ್ರತಿ ಸೋಮವಾರ, ಎರಡನೆಯ ಶನಿವಾರ ಮತ್ತು ಸರ್ಕಾರಿ ರಜಾದಿನಗಳಲ್ಲಿ ಈ ಅರಮನೆಗೆ ಪ್ರವೇಶವಿರುವುದಿಲ್ಲ. ಉಳಿದ ದಿನಗಳಲ್ಲಿ ವೀಕ್ಷಣೆಗೆ ಅವಕಾಶವಿದೆ. ಇತರ ಸ್ಮಾರಕಗಳಿಗೆ ವ್ಯತಿರಿಕ್ತವಾಗಿ ಇದನ್ನು ಚೆನ್ನಾಗಿ ನಿರ್ವಹಿಸಲಾಗುತ್ತಿರುವುದು ಸಂತೋಷದ ವಿಷಯ.
-ಕ.ವೆಂ.ನಾಗರಾಜ್.





















ಸೋಮವಾರ, ಜನವರಿ 21, 2013

'ಬ್ರೇಕಿಂಗ್' ನ್ಯೂಸ್!


   ಗಾಬರಿಯಿಂದ ಮತ್ತು ನಡುಗುವ ಧ್ವನಿಯಿಂದ ಮಂಕ ದೂರವಾಣಿಯಲ್ಲಿ, "ಬೇಗ ಬಾರೋ. ನಾನು ಮಹಾರಾಜ ಪಾರ್ಕಿನಲ್ಲಿದ್ದೀನಿ. ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡು ಬಿಟ್ಟಿದ್ದೀನಿ. ಪರಿಹಾರ ಸಿಗದೇ ಇದ್ದರೆ ನಾನು ಸತ್ತು ಹೋಗಿಬಿಡ್ತೀನಿ. ಏನು ಮಾಡಬೇಕೋ ಗೊತ್ತಾಗ್ತಾ ಇಲ್ಲ" ಎಂದಾಗ ಮಡ್ಡಿ, "ಏನು ಸಮಾಚಾರ? ಗಾಬರಿಯಾಗಬೇಡ. ಈಗಲೇ ಹೊರಟುಬರ್ತೀನಿ" ಅಂದವನೇ ಪ್ಯಾಂಟು ಸಿಕ್ಕಿಸಿಕೊಂಡು ಸ್ಕೂಟರ್ ಹತ್ತಿ ಪಾರ್ಕಿಗೆ ಬಂದ. ಒಂದು ಮೂಲೆಯ ಬೆಂಚಿನಲ್ಲಿ ತಲೆಯ ಮೇಲೆ ಟವೆಲ್ ಹಾಕಿಕೊಂಡು ಕುಳಿತಿದ್ದವನು ಮಂಕ ಎಂದು ಗೊತ್ತಾದದ್ದು ಅವನು ಮಡ್ಡಿಯನ್ನು ಕುರಿತು 'ನಾನು ಇಲ್ಲಿದ್ದೀನಿ, ಬಾರೋ' ಎಂದು ಕರೆದಾಗಲೇ. ಆಗ ನಡೆದ ಸಂಭಾಷಣೆ:
ಮಡ್ಡಿ: ಯಾಕೋ ಹಿಂಗಿದೀಯ? ಏನಾಯ್ತೋ?
ಮಂಕ: ಸಂಕ್ರಾಂತಿ ಹಬ್ಬದ ಹಿಂದಿನ ದಿನ ನನಗೂ ನನ್ನ ಹೆಂಡತಿಗೂ ನಾನು ಹಬ್ಬಕ್ಕೆ ಸೀರೆ ಕೊಡಿಸಲಿಲ್ಲ ಎಂದು ಜಗಳ ಆಗಿದ್ದು ನಿನಗೆ ಗೊತ್ತಲ್ಲಾ?
ಮಡ್ಡಿ: ಹೌದು, ನೀನೇ ಹೇಳಿದ್ದೆ. ಸ್ವಲ್ಪ ತೊಂದರೆ ಇದೆ. ಶಿವರಾತ್ರಿ ಹೊತ್ತಿಗೆ ಕೊಡಿಸ್ತೀನಿ ಅಂದಿದ್ದೆಯಂತೆ.
ಮಂಕ: ಹೂಂ, ಕಣೋ. ಅವಳೂ ಸುಮ್ಮನಾಗಿದ್ದಳು. ಹಬ್ಬದ ದಿನ ಅವಳ ತಮ್ಮ ಮನೆಗೆ ಬಂದಿದ್ದ. ಅವನು ನನ್ನ ಹೆಂಡತಿ ತಲೆ ಕೆಡಿಸಿ ಮತ್ತೆ ನಮಗೆ ಜಗಳ ತಂದಿಟ್ಟ. ನಾನೂ ಸಿಟ್ಟಿಗೆದ್ದು ಎರಡು ಮಾತು ಜಾಸ್ತಿನೇ ಆಡಿದೆ. ಸಿಟ್ಟಿನಲ್ಲಿ ನಿನ್ನ ಕಟ್ಟಿಕೊಂಡು ಸಾಕಾಗಿ ಹೋಗಿದೆ ಡೈವೋರ್ಸ್ ಕೊಡ್ತೀನಿ ಅಂದೆ. ಅವತ್ತೆಲ್ಲಾ ದುಸುಮುಸುನಲ್ಲೇ ಕಳೀತು ಕಣೋ. ಮರುದಿನ ಬೆಳಿಗ್ಗೆ ಅವಳು ತನ್ನ ತಮ್ಮನ ಜೊತೆಗೆ ತೌರುಮನೆಗೆ ಹೊರಟೇಬಿಟ್ಟಳು ಕಣೋ. ನಾನೂ ಹೇಳೋ ಅಷ್ಟು ಹೇಳಿದೆ, ಕೇಳಲೇ ಇಲ್ಲ.
ಮಡ್ಡಿ: ಯಾಕಂತೆ?
ಮಂಕ: ನಾನು ಯಾವೋಳ ಜೊತೆಗೋ ಸಂಬಂಧ ಇಟ್ಟುಕೊಂಡಿದ್ದೇನಂತೆ. ಅದಕ್ಕೇ ಡೈವೋರ್ಸ್ ಮಾತಾಡ್ತಿದೀನಿ, ಹಾಗೆ, ಹೀಗೆ ಅಂತ ಅಂದಳು ಕಣೋ. ಏನು ಹೇಳಿದರೂ ಕೇಳಲಿಲ್ಲ. ಹೋದಳು. ಫೋನು ಮಾಡಿದರೆ ಸ್ವಿಚಾಫ್ ಮಾಡಿಕೊಂಡಿದ್ದಳು.
ಮಡ್ಡಿ: ಆಮೇಲೆ?
ಮಂಕ: ಅವಳು ಹೋದ ದಿವಸ ನಾನು ಊಟಾನೂ ಮಾಡದೆ ಬೇಜಾರಾಗಿ ಮಲಗಿಕೊಂಡಿದ್ದೆ. ಮಧ್ಯಾಹ್ನದ ಹೊತ್ತಿಗೆ ಯಾರೋ ಡಬ ಡಬ ಅಂತ ಬಾಗಿಲು ಬಡಿದರು. ತೆಗೆದು ನೋಡಿದರೆ ಟಿವಿಯವರು ಬಂದು ನನ್ನನ್ನು ಮುತ್ತಿಕೊಂಡರು. ಮಹಿಳಾ ಸಂಘದವರೂ ಬಂದಿದ್ದರು. ಹೆಗಲ ಮೇಲೆ ಬಣ್ಣ ಬಣ್ಣದ ಶಾಲಿನಂತಹುದನ್ನು ಹಾಕಿಕೊಂಡಿದ್ದ ಕೆಲವು ದಾಂಡಿಗರೂ ಇದ್ದರು. ಅವರು ನನ್ನನ್ನು ಏನೇನೋ ಕೇಳಿದರು. ನಾನು ತಬ್ಬಿಬ್ಬಾಗಿ ಮಾತನಾಡಲು ತಡವರಿಸಿದಾಗ ಎಲ್ಲರೂ ಸೇರಿ ನನ್ನನ್ನು ಹಿಗ್ಗಾಮುಗ್ಗಾ ಹೊಡೆದರು  ಕಣೋ. ಅವರಲ್ಲಿ ಒಬ್ಬಳು ಮಾರಿಮುತ್ತು ಅಂತಹವಳು ಇದ್ದಳು. ಅವಳನ್ನು ನೋಡಿದರೇ ಮೂರ್ಛೆ ಹೋಗುವಂತಾಗುತ್ತೆ. ಅವಳು ಚಪ್ಪಲಿಯಲ್ಲೂ ಹೊಡೆದಳು ಕಣೋ.
ಮುಂದೆ ಮಾತನಾಡಲಾಗದೇ ಮಂಕ ಬಿಕ್ಕಿ ಬಿಕ್ಕಿ ಅಳತೊಡಗಿದ. ಮಡ್ಡಿ ಸಮಾಧಾನ ಮಾಡಿದ.
ಮಡ್ಡಿ: ಯಾರೋ ಅವರು ಬಂದಿದ್ದವರು?
ಮಂಕ: ಆ 'ತೋರಣ' ಟಿವಿಯವರು. ಬಂದ ಜನ ಯಾರೂ ಅಂತಲೇ ನನಗೆ ಗೊತ್ತಿಲ್ಲ. ಅವರು ಏನು ಕೇಳಿದರೋ, ನಾನು ಏನು ಉತ್ತರ ಕೊಟ್ಟೆನೋ ನನಗೇ ಗೊತ್ತಿಲ್ಲ ಕಣೋ. ಟಿವಿಯವರು 'ಈಗ ಸ್ಟುಡಿಯೋಗೆ ಹೋಗಿ ಸುದ್ದಿ ಕೊಡಬೇಕು. ಇನ್ನು ಒಂದು ಗಂಟೆ ಬಿಟ್ಟು ಬರ್ತೀವಿ, ಇವನನ್ನು ಪೋಲಿಸರು ಬರುವವರೆಗೂ ಎಲ್ಲೂ ಹೋಗಲು ಬಿಡಬೇಡಿ' ಅಂತ ಅಲ್ಲಿದ್ದ ಜನಕ್ಕೆ ಹೇಳಿ ಹೋದರು. ಆ ಜನರಿಗೆ ಬಚ್ಚಲುಮನೆಗೆ ಹೋಗಿ ಬರ್ತೀನಿ ಅಂತ ಸುಳ್ಳು ಹೇಳಿ ಒಳಕ್ಕೆ ಹೋದವನು ಹಿಂದುಗಡೆ ಕಾಂಪೌಂಡು ಹಾರಿ ಇಲ್ಲಿ ಬಂದು ಕೂತಿದೀನಿ ಕಣೋ. ನಾನು ಇಲ್ಲಿರೋದು ಗೊತ್ತಾದರೆ ಕೊಂದೇ ಬಿಡ್ತಾರೋ ಏನೋ. ಆ ಜನ ನನ್ನ ಮನೇನ ಏನು ಮಾಡಿರ್ತಾರೋ ಗೊತ್ತಿಲ್ಲ. ಮೂಢಂಗೂ ವಿಷಯ ತಿಳಿಸು. ಅವನು ಏನಾದರೂ ಮಾಡ್ತಾನೆ. 
     ಅಳುತ್ತಾ, ಬಿಕ್ಕುತ್ತಾ ಮಾತನಾಡುತ್ತಿದ್ದ ಮಂಕನ ಗೋಳು ನೋಡಿ ಏನು ಹೇಳಬೇಕೋ ಗೊತ್ತಾಗದೇ ಅವನನ್ನು ಸಮಾಧಾನ ಮಾಡಿ 'ಸದ್ಯಕ್ಕೆ ನನ್ನ ಮನೆಗೆ ಬಂದಿರು' ಎಂದು ಹೇಳಿ ಸ್ಕೂಟರಿನಲ್ಲಿ ಕರೆದುಕೊಂಡು ಹೊರಟ. ಮಂಕ ಮುಖ ಕಾಣದಂತೆ ಟವೆಲಿನಲ್ಲಿ ಮುಖ ಮರೆ ಮಾಡಿಕೊಂಡು ಕುಳಿತಿದ್ದ. ಮಡ್ಡಿಯ ಹೆಂಡತಿ ಮಂಕನನ್ನು ಕಂಡವಳೇ, 'ಈ ದರಿದ್ರಾನ ನಮ್ಮ ಮನೆಗೆ ಯಾಕ್ರೀ ಕರಕೊಂಡು ಬಂದ್ರೀ?' ಅಂತ ಮನೆಯ ಬಾಗಿಲಲ್ಲೇ ಅಡ್ಡ ಹಾಕಿದಳು. ಅವಳನ್ನು ಸಮಾಧಾನಿಸಿ ಮನೆಯೊಳಗೆ ಕರೆದುಕೊಂಡು ಹೋಗಲು ಮಡ್ಡಿಗೆ ಸಾಕು ಸಾಕಾಯಿತು. ಟಿವಿಯಲ್ಲಿ ಮಂಕನನ್ನು ಜನರು ಹೊಡೆಯುತ್ತಿದ್ದ ದೃಷ್ಯವನ್ನು ಪದೇ ಪದೇ ತೋರಿಸಿ, 'ಪತ್ನಿಪೀಡಕ ಪತಿ ಪರಾರಿ' ಎಂಬ ಬ್ರೇಕಿಂಗ್ ನ್ಯೂಸ್ ಹಾಕಿದ್ದರು. ಮಡ್ಡಿಯ ಹೆಂಡತಿಯ ಸಿಟ್ಟಿನ ಕಾರಣ ಗೊತ್ತಾಯಿತು. ಮಂಕನ ಪತ್ನಿ ಕಣ್ಣೀರು ಹಾಕಿಕೊಂಡು 'ತನ್ನ ಗಂಡ ಯಾರೋ ಬೇರೆ ಒಬ್ಬರನ್ನು ಮದುವೆ ಆಗುವ ಸಲುವಾಗಿ ತನಗೆ ಡೈವೋರ್ಸ್ ಕೊಡ್ತೀನಿ ಅಂತ ಹೇಳಿ ನನ್ನನ್ನು ಬೀದಿಪಾಲು ಮಾಡುತ್ತಿದ್ದಾರೆ' ಎನ್ನುತ್ತಿದ್ದ ಸುದ್ದಿಯ ಕ್ಲಿಪಿಂಗ್ ಆಗಾಗ ಹಾಕುತ್ತಲೇ ಇದ್ದರು. ಟಿವಿ ನಿರ್ವಾಹಕ ರೋಗನಾಥ "ಮಂಕ ಮಳ್ಳನಂತೆ ಕಂಡರೂ ಪತ್ನಿಗೆ ಕೊಡಬಾರದ ಹಿಂಸೆ ಕೊಡುತ್ತಿದ್ದ; ವಿಚಾರಿಸಲು ಹೋಗಿದ್ದವರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ; ಪೋಲಿಸರು ಆರೋಪಿಯ ಹುಡುಕಾಟದಲ್ಲಿದ್ದಾರೆ. ಪರಾರಿಯಾದ ಪಾಪಿ ಪತಿಯ ವಿರುದ್ಧ ಜನರ ಆಕ್ರೋಷ ಎಷ್ಟಿತ್ತು ಎಂಬುದನ್ನು ಒಂದು ಬ್ರೇಕ್ ನಂತರ ನೋಡೋಣ. ಸದಾ ನಿಮ್ಮೊಂದಿಗೆ, ನಿಮ್ಮೆಲ್ಲರ ಅಚ್ಚುಮೆಚ್ಚಿನ ಸುಟ್ಟ-ಸೊಟ್ಟ-ಅಕಟಕಟ ಸುದ್ದಿಗಳನ್ನು ನೀಡುವ ತೋರಣ ನ್ಯೂಸ್" ಎಂದು ಹೇಳುತ್ತಿದ್ದುದನ್ನು ಕೇಳಿದ ಮಂಕ ಕುಸಿದುಬಿಟ್ಟ. ಜನರಿಂದ ಬಿದ್ದ ಪೆಟ್ಟಿನಿಂದ ಜರ್ಜರಿತನಾಗಿದ್ದ ಅವನಿಗೆ ಅದಕ್ಕಿಂತ ಈ ಸುದ್ದಿಯಿಂದ ಬಿದ್ದ ಪೆಟ್ಟು ದೊಡ್ಡದಾಗಿತ್ತು. ಮಡ್ಡಿ ಅವನನ್ನು ಸಮಾಧಾನಿಸಿ, ತನ್ನ ಪತ್ನಿಗೂ ನಿಜ ವಿಷಯ ತಿಳಿಸಿ ಅವಳನ್ನು ಒಪ್ಪಿಸಿ ಹಸಿದಿದ್ದ ಅವನಿಗೆ ತಿಂಡಿ, ಕಾಫಿ ಕೊಡಿಸಿದ. ಮಂಕನನ್ನು ತನ್ನ ಮನೆಯಲ್ಲೇ ಬಿಟ್ಟು, ಮಡ್ಡಿ ಮಂಕನ ಮನೆಯ ಸ್ಥಿತಿ ನೋಡಲು ಅವನ ಮನೆಗೆ ಹೋದರೆ ಮನೆಯ ಮುಂದೆ ಇಬ್ಬರು ಪೋಲಿಸರು ಕಾಯುತ್ತಿದ್ದರು. ಅವನ ಮನೆಯ ಟಿವಿ, ಪೀಠೋಪಕರಣಗಳು, ಸಾಮಾನುಗಳನ್ನು ಜನರು ಒಡೆದು ಹಾಕಿದ್ದು, ಮನೆಯ ಒಳಗೆ ಬಾಂಬು ಸಿಡಿದರೆ ಹೇಗಾಗುತ್ತದೋ ಹಾಗೆ ಆಗಿತ್ತು.
     ಇತ್ತ ಮೂಢನೂ ಟಿವಿಯ ಸುದ್ದಿ ನೋಡಿ ಬೆಚ್ಚಿದ್ದ. 'ಇದೇನಪ್ಪಾ ಗ್ರಹಚಾರ' ಎಂದು ನೋಡಿಕೊಂಡು ಬರೋಣವೆಂದು ಹೊರಡಲು ಸಿದ್ಧವಾಗುತ್ತಿದ್ದ ಹಾಗೇ ಮಡ್ಡಿಯ ಫೋನ್ ಬಂತು. ಮಡ್ಡಿ ಮತ್ತು ಮೂಢ ತಡ ಮಾಡದೆ ಮಂಕನ ಹೆಂಡತಿಯ ಊರಿಗೆ ಹೋದರು. ಮಂಕನ ಹೆಂಡತಿಯನ್ನು ಕಂಡು ಅಲ್ಲಿ ನಡೆದಿದ್ದ ಎಲ್ಲಾ ಸಂಗತಿಯನ್ನು ಅವಳಿಗೆ ತಿಳಿಸಿದರು. ಅವಳು ಗಾಬರಿಯಾಗಿ ಅಳತೊಡಗಿದಳು. ಅವಳು ಟಿವಿಯನ್ನೇ ನೋಡಿರಲಿಲ್ಲ. ತಮ್ಮನ ಮೇಲೆ ಎಗರಾಡಿದಳು. ದೇವರಂತಹ ಗಂಡನನ್ನು ಜನರಿಂದ ಹೊಡೆಸಿದ ತಮ್ಮನ ಮೇಲೆ ಕೆಂಡದಂತೆ ಉರಿದು ಬಿದ್ದಾಗ ನಿಜ ಸಂಗತಿ ಬಯಲಾಗಿತ್ತು. ತನ್ನ ಸ್ನೇಹಿತ ಮುಠ್ಠಾಳ ತೋರಣ ಟಿವಿಯಲ್ಲಿ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದು, ಟಿವಿಗೆ ಏನಾದರೂ ಹೊಸ ಸುದ್ದಿ ಕೊಟ್ಟರೆ ಅವನಿಗೆ ೫೦೦೦ ರೂ. ಸಿಗುತ್ತಿತ್ತಂತೆ. ಅದರ ನಾಲ್ಕು ಪಟ್ಟು ದುಡ್ಡನ್ನು ಮತ್ತು ಅದಕ್ಕೂ ಹೆಚ್ಚು ಹಣವನ್ನು ಸುದ್ದಿಗೆ ಸಂಬಂಧಿಸಿದವರಿಂದಲೇ ಅವರ ಶಕ್ತ್ಯಾನುಸಾರ ವಸೂಲು ಮಾಡಿಕೊಳ್ಳುತ್ತಿದ್ದರಂತೆ. ಅದರಲ್ಲಿ ೨೦೦೦ ರೂ. ಅನ್ನು ತನಗೆ ಕೊಡುವುದಾಗಿ ಪುಸಲಾಯಿಸಿ ಈ ಸುದ್ದಿ ಹೊರಬರುವಂತೆ ಮಾಡಿದ್ದನಂತೆ. ದುಡ್ಡಿನ ಆಸೆಗೆ ಮಾತ್ರ ಹೀಗೆ ಮಾಡಿದ್ದು, ಜನರನ್ನು ಸೇರಿಸಿ ಭಾವನಿಗೆ ಹೊಡೆಯುತ್ತಾರೆಂದು ತನಗೆ ನಿಜಕ್ಕೂ ಗೊತ್ತಿರಲಿಲ್ಲವೆಂದು ಅಕ್ಕನ ಕಾಲು ಹಿಡಿದು ಕ್ಷಮೆ ಕೇಳಿದ.  
     ಪ್ರಕರಣಕ್ಕೆ ಮುಕ್ತಾಯ ಹಾಡುವುದು ಹೇಗೆಂದು ಯೋಚಿಸಿದ ಮಂಕ, ಮೂಢರಿಗೆ ಒಂದು ಪ್ಲಾನು ಹೊಳೆಯಿತು. ಮಂಕನ ಭಾವಮೈದುನನನ್ನೂ ಕರೆದುಕೊಂಡು ಮುಠ್ಠಾಳನ ಮನೆಗೆ ಹೋಗಿ, 'ತಪ್ಪನ್ನು ಸರಿ ಮಾಡಿಸಿ ಸುಖಾಂತ್ಯವಾಗುವಂತೆ' ಮಾಡಬೇಕೆಂದು ಕೇಳಿಕೊಂಡರು. ಮುಠ್ಠಾಳ, 'ಇದು ಸುಮ್ಮನೆ ಆಗುವ ಕೆಲಸ ಅಲ್ಲ, ರೋಗನಾಥ ಒಪ್ಪಬೇಕು' ಅಂದ. ರೋಗನಾಥನೊಡನೆ ದೂರವಾಣಿಯಲ್ಲಿ ಮಾತನಾಡಿದ ನಂತರ, '೧೦೦೦೦ ರೂ. ಕೊಟ್ಟರೆ ಸರಿ ಮಾಡುತ್ತಾರೆ. ಇಂಥಾ ಕೇಸಿನಲ್ಲಿ ೫೦೦೦೦ಕ್ಕಿಂತ ಕಡಿಮೆ ಮುಟ್ಟಲ್ಲವಂತೆ. ಆದರೆ ಮಂಕ ಪಾಪರ್ ಮನುಷ್ಯ ಅಂತ ೧೦೦೦೦ಕ್ಕೆ ಒಪ್ಪಿದ್ದಾರೆ. ಮಂಕ ಮಾತ್ರ ಒಬ್ಬನೇ ಗುಟ್ಟಾಗಿ ಬರಬೇಕು. ನಮ್ಮ ಕರಿಬಣ್ಣದ ಕಾರು ಗೋವಿಂದ ಗ್ಯಾರೇಜ್ ಮುಂದೆ ಇರುತ್ತೆ. ಅಲ್ಲಿಗೆ ಸಾಯಂಕಾಲ ೬ಕ್ಕೆ ಸರಿಯಾಗಿ ಮಂಕ ಒಬ್ಬನೇ ಬಂದು ಹತ್ತಬೇಕು. ನೀವು ಯಾರೂ ಬರಬಾರದು' ಅಂದ. ಚೌಕಾಸಿ ಮಾಡುವುದಾದರೆ ಬರಲೇಬೇಡಿ ಅಂತಲೂ ಹೇಳಿದ. ಒಪ್ಪಿ ಹೊರಬಂದ ಮಂಕ, ಮೂಢರು ಮುಠ್ಠಾಳನನ್ನು ಮನೆಗೆ ವಾಪಸು ಕಳಿಸಿ, ಯಾರೂ ಹಿಂಬಾಲಿಸುತ್ತಿಲ್ಲವೆಂದು ಖಚಿತಪಡಿಸಿಕೊಂಡು ಹೋಗಿದ್ದು ಸೀದಾ ಲೋಕಾಯುಕ್ತರ ಬಳಿಗೆ. ವಿಷಯ ತಿಳಿದ ಅವರು ಎಲ್ಲಾ ಸಿದ್ಧತೆ ಮಾಡಿಕೊಂಡು ಹೋಗಲು ತಮ್ಮ ಎಸ್.ಪಿ.ಗೆ ಸೂಚನೆ ನೀಡಿದರು. 
     ಅಂದು ಸಂಜೆ "೧೦೦೦೦ ರೂ. ಲಂಚ ಸ್ವೀಕರಿಸುತ್ತಿದ್ದ 'ತೋರಣ' ಟಿವಿಯ ರಿಪೋರ್ಟರ್ ಮುಠ್ಠಾಳ ಮತ್ತು ನಿರ್ವಾಹಕ ರೋಗನಾಥನನ್ನು ಲೋಕಾಯುಕ್ತ ಪೋಲಿಸರು ಬಂಧಿಸಿದ್ದಾರೆಂದು, ಅಂದು ತೋರಣ ಟಿವಿಯಲ್ಲಿ ಪ್ರಸಾರವಾಗಿದ್ದ ಸುದ್ದಿ ಪೂರ್ವನಿಯೋಜಿತವಾಗಿದ್ದು ಅದರಿಂದಾಗಿ ಮಂಕನ ಸಂಸಾರ ಮುರಿದು ಬೀಳುವುದರಲ್ಲಿತ್ತೆಂದು, ಅವರ ಮನೆಗೆ ಆದ ಹಾನಿಗೂ ಸಹ ಅವರುಗಳೇ ಕಾರಣವೆಂದು ಮಡ್ಡಿ ನೀಡಿದ ದೂರಿನ ಪ್ರಕಾರ ತರಲೆಪೇಟೆ ಪೋಲಿಸರು ಕ್ರಿಮಿನಲ್ ಮೊಕದ್ದಮೆಯನ್ನು ಸಹ ದಾಖಲಿಸಿಕೊಂಡಿದ್ದಾರೆಂದು" 'ಕತ್ತರಿ' ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬಿತ್ತರವಾಗುತ್ತಿತ್ತು.
-ಕ.ವೆಂ.ನಾಗರಾಜ್.

ಶುಕ್ರವಾರ, ಜನವರಿ 18, 2013

ಲಂಡನ್ ಮಕ್ಕಳ ಸಂಸ್ಕೃತ ಪ್ರೇಮ






"ಬೈ ಡ್ಯಾಡ್, ಬೈ ಮಾಮ್, ಬೈ ತಾತ್"
     ಒಂದನೆಯ ತರಗತಿಯಲ್ಲಿ ಓದುತ್ತಿರುವ ನನ್ನ ಮೊಮ್ಮಗಳು ಪುಸ್ತಕದ ಮೂಟೆಯನ್ನು ಹೊತ್ತುಕೊಂಡು ಶಾಲೆಯ ಬಸ್ಸಿಗೆ ಹತ್ತುವಾಗ ಕೈಬೀಸಿ ಹೇಳಿದ್ದು ಹೀಗೆ. ಅವಳು ನನ್ನನ್ನು 'ತಾತ್' ಎಂದು ಕರೆಯುವುದಕ್ಕೆ ಕೊಟ್ಟಿದ್ದ ವಿವರಣೆ: "ತಾತಾ, ಗ್ರ್ಯಾಂಡ್ ಫಾದರ್, ಗ್ರ್ಯಾಂಡ್ ಪಾ ಈಸ್ ಟೂ ಲಾಂಗ್. ಸೋ ಐ ಕಾಲ್ ಯು ತಾತ್!" ಲಕ್ಷಗಟ್ಟಲೆ ಡೊನೇಶನ್ ಕೊಟ್ಟು ಸೇರಿಸಿದ್ದ ಆ ಪ್ರತಿಷ್ಠಿತ  ಶಾಲೆಯಲ್ಲಿ ಕನ್ನಡ ಮಾತನಾಡುವಂತಿರಲಿಲ್ಲ. ಎಲ್ಲಾ ಇಂಗ್ಲಿಷಿನಲ್ಲೇ ಆಗಬೇಕು. ಬೆಂಗಳೂರಿನಲ್ಲಿ ಕೆಲವು ದಶಕಗಳ ಹಿಂದೆ ಮಕ್ಕಳು ಮಾತ್ರ ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದವು. ಈಗ ಆ ಮಕ್ಕಳೂ ದೊಡ್ಡವರಾಗಿದ್ದಾರೆ. ಈಗ ಎಲ್ಲರೂ, ಎಲ್ಲೆಲ್ಲೂ ಇಂಗ್ಲಿಷಿನಲ್ಲೇ ಮಾತನಾಡುತ್ತಾರೆ. ಬೆಂಗಳೂರಿನಲ್ಲಿ ಅವಿದ್ಯಾವಂತರೂ ಸಹ ಇಂಗ್ಲಿಷಿನಲ್ಲಿ ಸರಾಗವಾಗಿ ಮಾತನಾಡಬಲ್ಲರು. ಅದೇ ಕನ್ನಡ ಮಾತನಾಡಬೇಕಾದರೆ ಕನ್ನಡಿಗರೇ ಬಹಳ ಕಷ್ಟಪಡುತ್ತಾರೆ. ಕನ್ನಡ ಬಾರದಿದ್ದವರು ಮಾತನಾಡುವ ಕನ್ನಡದ ಉಚ್ಛಾರದಂತೆ ಕನ್ನಡಿಗರೇ ಮಾತನಾಡುವುದನ್ನು ಕಂಡು ಅಚ್ಚರಿಪಟ್ಟಿದ್ದೇನೆ. ಹಿಂದೆ ಲಾರ್ಡ್ ಮೆಕಾಲೆ ಹೇಳಿದ್ದ, "ಈ ರೀತಿಯ ವಿದ್ಯಾಭ್ಯಾಸ ಕ್ರಮದಿಂದ ಇನ್ನು ಕೆಲವು ದಶಕಗಳಲ್ಲಿ ಇಂಡಿಯಾದಲ್ಲಿ ಕರಿಚರ್ಮದ ಬ್ರಿಟಿಷರು ಇರುತ್ತಾರೆ" ಎಂಬ ಮಾತು ನಿಜವಾಗಿದೆ. ಆದರೆ ಯಾವ ದೇಶದ ಗುಲಾಮಗಿರಿಯ ಕಾಣಿಕೆಯಾದ ಇಂಗ್ಲಿಷನ್ನು ಹೆಮ್ಮೆಯಿಂದ ಆಡುತ್ತೇವೋ, ಆ ದೇಶದ ರಾಜಧಾನಿ ಲಂಡನ್ನಿಗೆ ಸಂಬಂಧಿಸಿದ ಸಂಗತಿಯನ್ನು ನಿಮ್ಮೊಡನೆ ಹಂಚಿಕೊಳ್ಳುವೆ.
     ಅದು ಲಂಡನ್ನಿನ ಸೈಂಟ್ ಜೇಮ್ಸ್ ಜೂನಿಯರ್ ಸ್ಕೂಲ್. ಅಲ್ಲಿ ೧೯೭೫ರಿಂದಲೂ ಸಂಸ್ಕೃತವನ್ನು ಕಲಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸಂಸ್ಕೃತ ಕಲಿಯುತ್ತಿರುವವರ ಸಂಖ್ಯೆ ಇಂಗ್ಲೆಂಡಿನಲ್ಲಿ ಮಿತಿಯನ್ನು ಮೀರಿ ಬೆಳೆಯುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇಂಗ್ಲಿಷ್ ಮಾತನಾಡುವವರಿಗೆ ಸಂಸ್ಕೃತದ ಉಚ್ಛಾರ ಕಷ್ಟವಾದರೂ ಅಲ್ಲಿ ಸಂಸ್ಕೃತ ಕಲಿಯಲು ಬರುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಾರ್ಷಿಕ ಸಂಸ್ಕೃತ ಸಂಭಾಷಣಾ ಸ್ಪರ್ಧೆಯಲ್ಲಿ ತಮ್ಮ ಪುಟಾಣಿಗಳು ಭಾಗವಹಿಸಿ, ವೇದ ಮಂತ್ರ, ಉಪನಿಷತ್ತಿನ ಶ್ಲೋಕಗಳನ್ನು ಹೇಳುತ್ತಿದ್ದರೆ ಅದನ್ನು ಕೇಳುವ ಪೋಷಕರು, ತಂದೆ-ತಾಯಿಗಳು ಹೆಮ್ಮೆಯಿಂದ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಾರೆ. ಸಂಸ್ಕೃತ ವಿಭಾಗದ ಮುಖ್ಯಸ್ಥ ವಾರ್ವಿಕ್ ಜೆಸೊಪ್, "ಸಂಸ್ಕೃತ ಭಾಷೆ ಅದ್ಭುತವಾಗಿದೆ. ಸಂಸ್ಕೃತದ ಸಾಹಿತ್ಯ ಸ್ಫೂರ್ತಿದಾಯಕವಾಗಿದೆ ಮತ್ತು ತತ್ವಾದರ್ಶಗಳಿಂದ ಕೂಡಿದೆ. ಅದಕ್ಕಾಗಿ ಅದನ್ನು ಮಕ್ಕಳಿಗೆ ಕಲಿಸಿಕೊಡುತ್ತಿದ್ದೇವೆ" ಎನ್ನುತ್ತಾರೆ. ಇದೇ ಮಾತನ್ನು ಇಲ್ಲಿ ಯಾರಾದರೂ ಹೇಳಿದರೆ ವಿಚಾರವಂತರೆಂದು ಹಣೆಪಟ್ಟಿ ಹಚ್ಚಿಕೊಂಡವರು ಏನು ಹೇಳಬಹುದೆಂಬುದು ನಿಮಗೇ ಬಿಟ್ಟ ವಿಷಯ. ಸಂಸ್ಕೃತ ಕಲಿಯುವ ಮಕ್ಕಳನ್ನು ಕೇಳಿದರೆ ಅವರು ಹೇಳುವುದೇನೆಂದರೆ, "ಅದು ನಮಗೆ ಬಹಳ ಖುಷಿ ಕೊಡುತ್ತದೆ. ಅದು ನಮ್ಮ ಮೆಚ್ಚಿನ ಭಾಷೆ!"
     ಸಂಸ್ಕೃತ ಕಲಿಯುತ್ತಿದ್ದ ಒಬ್ಬ ವಿದ್ಯಾರ್ಥಿಯ ಹೃದಯದ ಮಾತಿದು: "ಸಂಸ್ಕೃತ ಕಲಿಯುವುದು ಒಂದು ವಿಶೇಷ ಅನುಭವ. ಅದನ್ನು ಕಲಿಯಲು ನನಗೆ ಬಹಳ ಆನಂದವಾಗುತ್ತದೆ, ಏಕೆಂದರೆ ಸಂಸ್ಕೃತ ಕಲಿಸುತ್ತಿರುವ ಕೆಲವೇ ಶಾಲೆಗಳಿದ್ದು, ಅದರ ಪೈಕಿ ನಾವೂ ಒಬ್ಬರು ಎಂಬುದು. ಅದು ನಮಗೆ ಹಲವಾರು ರೀತಿಯಲ್ಲಿ ಉಪಯೋಗವಾಗಿದೆ. ನಮ್ಮ ಉಚ್ಚಾರಣೆ ಸುಧಾರಿಸುತ್ತದೆ ಮತ್ತು ಪದಸಂಪತ್ತನ್ನು ಹೆಚ್ಚಿಸುತ್ತದೆ. ಪಾರಮಾರ್ಥಿಕ ಅನುಕೂಲಗಳೂ ಇವೆ. ರಾಮಾಯಣ ಮತ್ತು ಮಹಾಭಾರತದಂತಹ ಹಲವಾರು ಕಥೆಗಳಿದ್ದು, ಹಿಂದೆ ಪ್ರಪಂಚದಲ್ಲಿ ಏನೆಲ್ಲಾ ಆಯಿತು ಎಂಬುದನ್ನೂ ತಿಳಿಯಲು ಸಹಾಯ ಮಾಡುತ್ತದೆ."
     ಈ ಶಾಲೆಯಲ್ಲಿ ೪ ರಿಂದ ೧೮ ವರ್ಷಗಳವರೆಗೆ ಸಂಸ್ಕೃತ ಕಲಿಯಲು ಸೌಲಭ್ಯವಿದೆ. ನಂತರದಲ್ಲಿ ಪ್ರತಿಷ್ಠಿತ ಶಾಲೆಗಳಾದ ಆಕ್ಸ್ ಫರ್ಡ್, ಕೇಂಬ್ರಿಡ್ಜ್, ಎಡಿನ್ ಬರೋ ಮುಂತಾದ ಶಾಲೆಗಳಲ್ಲಿ ಮುಂದುವರೆದ ಸಂಸ್ಕೃತ ವಿದ್ಯಾಭಾಸ ಮಾಡಬಹುದಾಗಿದೆ. ಲಂಡನ್ ಶಾಲೆಗೆ ಸಂಬಂಧಿಸಿದ ಒಂದು ಕಿರುವಿಡಿಯೋ ಅನ್ನು ಈ ಲಿಂಕಿನಲ್ಲಿ ನೋಡಬಹುದು.
     ನಾನು ಕೇವಲ ಇಂಗ್ಲೆಂಡಿನ ಉದಾಹರಣೆ ನೀಡಿದ್ದರೂ, ಅಮೆರಿಕಾ ಸೇರಿದಂತೆ ಹಲವಾರು ವಿದೇಶಿ ರಾಷ್ಟ್ರಗಳಲ್ಲಿ ಸಂಸ್ಕೃತ ಕಲಿಕೆ ಗಣನೀಯವಾಗಿ ಹೆಚ್ಚಿದ್ದು, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ ಕಡಿಮೆಯಲ್ಲ. ಊರು ಕೊಳ್ಳೆ ಹೋದ ನಂತರದಲ್ಲಿ ನಮ್ಮವರಿಗೆ ಎಚ್ಚರವಾಗಬಹುದು.
-ಕ.ವೆಂ.ನಾಗರಾಜ್.

ಮಂಗಳವಾರ, ಜನವರಿ 15, 2013

ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ನಿಜವಾದ ಫೋಟೋ


     ಇದು ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ನಿಜವಾದ ಫೋಟೋ. ಸುಮಾರು ೧೬೦ ವರ್ಷಗಳ ಹಿಂದೆ ಬ್ರಿಟಿಷ್ ಫೋಟೋಗ್ರಾಫರ್ ಹಾಫ್ ಮನ್ ತೆಗೆದಿದ್ದ ಫೋಟೋ. ಕಳೆದ ವರ್ಷ ಭೋಪಾಲಿನಲ್ಲಿ ನಡೆದ ವಿಶ್ವ ಫೋಟೋಗ್ರಫಿ ಸಮ್ಮೇಳನದಲ್ಲಿ ಪ್ರದರ್ಶಿತವಾಗಿತ್ತು. ಪುರಾತತ್ವ ಮಹತ್ವದ ವಸ್ತುಗಳ ಸಂಗ್ರಹಕಾರರೊಬ್ಬರು ಈ ಚಿತ್ರವನ್ನು ಪ್ರದರ್ಶನಕ್ಕೆ ಕಳಿಸಿದ್ದರು. 

     ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ಈ ಭಾರತ ಕುವರಿಯ ಕುರಿತು ಬ್ರಿಟಿಷ್ ಜನರಲ್ ಹ್ಯೂಗ್ ರೋಸ್ ಉದ್ಗರಿಸಿದ್ದು ಹೀಗೆ: "ಅಪ್ರತಿಮ ಸುಂದರಿಯಾದ, ಜಾಣತನ ಮತ್ತು ತಾಳ್ಮೆಗೆ ಹೆಸರಾದ ಅವಳು ಬಂಡಾಯಗಾರರಲ್ಲಿ ಅತಿ ಹೆಚ್ಚು ಅಪಾಯಕಾರಿಯಾಗಿದ್ದಳು."

ಆಧಾರ ಮತ್ತು ಹೆಚ್ಚಿನ ಮಾಹಿತಿಗೆ:   http://www.we-indians.com/2011/07/06/jhansi-ki-rani-lakshmibai/

ಶುಕ್ರವಾರ, ಜನವರಿ 11, 2013

ನವಯುಗಾಚಾರ್ಯ ವಿವೇಕಾನಂದರಿಗೆ 150 ವರ್ಷಗಳು



ಶ್ರೀ ವಿವೇಕಾನಂದ ಗುರುವರ ನವಯುಗಾಚಾರ್ಯ

ರಾಮಕೃಷ್ಣರ ಭೀಮ ಶಿಷ್ಯನೆ ವೀರವೇದಾಂತೀ

ಭಾರತಾಂಬೆಯ ಧೀರಪುತ್ರನೆ ಸಾಧು ಭೈರವನೇ

ಸ್ಥೈರ್ಯದಚಲನೆ ಧೈರ್ಯದಂಬುಧಿ ಜಯತು ಜಯ ಜಯತು ||

-ಕುವೆಂಪು.

ಇಂದಿಗೆ ಶ್ರೀ ವಿವೇಕಾನಂದರು ಜನಿಸಿ ೧೫೦ ವರ್ಷಗಳಾಗಿವೆ. ೩೨ನೆಯ ಕಿರಿ 

ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಅವರು ತಮ್ಮ ನಡೆ-ನುಡಿಗಳಿಂದ ಇಂದಿಗೂ 

ನಮ್ಮೊಡನಿದ್ದಾರೆ. ಅವರ ಕನಸಿನ ಭವ್ಯ ಭಾರತ ನಿರ್ಮಾಣವನ್ನು 

ಸಾಕಾರಗೊಳಿಸಲು ಸಂಕಲ್ಪಿಸೋಣ.

ವಿವೇಕವಾಣಿ 


ಎಲ್ಲಕ್ಕಿಂತ ಹೆಚ್ಚಾಗಿ, ರಾಜಿಯಾಗುವ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮ 

ತತ್ವ, ಧ್ಯೇಯಗಳಿಗೆ ಅಂಟಿಕೊಂಡಿರಿ ಮತ್ತು ಬೆಂಬಲಿಗರನ್ನು ಗಳಿಸುವ 


ಆಸೆಯಿಂದ, ಇತರರ "ಹುಚ್ಚು ಭ್ರಮೆ"ಗಳೊಡನೆ ಹೊಂದಾಣಿಕೆ 


ಮಾಡಿಕೊಳ್ಳಬೇಡಿ. ನಿಮ್ಮ ಆತ್ಮವೇ ವಿಶ್ವಕ್ಕೆ ಆಧಾರವಾಗಿದೆ, ನಿಮಗೆ ಇನ್ನು 


ಯಾವ ಆಧಾರದ ಅಗತ್ಯವಿದೆ? 


-ಸ್ವಾಮಿ ವಿವೇಕಾನಂದ.

ಭಾನುವಾರ, ಜನವರಿ 6, 2013

ಜನಜಾಗೃತಿಯೇ ಭ್ರಷ್ಟಾಚಾರಕ್ಕೆ ಮದ್ದು! [ಶ್ರೀ ಮದನಗೋಪಾಲರೊಂದಿಗೆ ನಡೆಸಿದ ಸಂದರ್ಶನ]




   ಜನಪರ ಕಾಳಜಿಯನ್ನೂ, ಪ್ರಾಮಾಣಿಕತೆಯನ್ನೂ ಹೊಂದಿರುವ ರಾಜ್ಯದ ಸರಕಾರಿ ಅಧಿಕಾರಿಗಳ ಸಾಲಿನಲ್ಲಿ ಎದ್ದು ನಿಲ್ಲುವ ಹೆಸರು - ಮದನಗೋಪಾಲ್. ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು ರಾಜಕಾರಣದ ಆಗುಹೋಗುಗಳಿಗೆ ತಲೆ ಕೆಡಿಸಿಕೊಳ್ಳದೆ, ಪದೇ ಪದೇ ಬಂದೆರಗುವ ಸ್ವಾರ್ಥಕೇಂದ್ರಿತ ಒತ್ತಡಗಳಿಗೆ ಮಣಿಯದೆ, ನಿಜವಾದ ಅರ್ಥದಲ್ಲಿ 'ಸರಕಾರದ ಕೆಲಸ ದೇವರ ಕೆಲಸ' ಎಂದು ನಂಬಿ ನಡೆಯುತ್ತಿರುವವರು. ಇಂದು ಬಹುತೇಕ ಖಾಸಗಿ-ಸಾರ್ವಜನಿಕ ಎಂಬ ಭೇದವಿಲ್ಲದೆ, ಎಲ್ಲೆಡೆಗೂ ವ್ಯಾಪಿಸಿರುವ ಆಡಳಿತಶಾಹಿ ದುರಹಂಕಾರದ ಕಬಂಧಬಾಹುಗಳಿಗೆ ಪಕ್ಕಾಗದೆ, ಸಾಮಾನ್ಯ ವ್ಯಕ್ತಿಯನ್ನೂ ಆತ್ಮೀಯವಾಗಿ ಮಾತನಾಡಿಸುವ, ಆತನ ಕಷ್ಟ ಸುಖಗಳನ್ನು ಕೇಳಿಸಿಕೊಳ್ಳುವ ಸೌಜನ್ಯ ಉಳ್ಳವರು, ಮದನಗೋಪಾಲ್.
     'ಭ್ರಷ್ಟಾಚಾರದ ಬೇರು-ಬಿಳಿಲುಗಳು ಹೇಗೆಲ್ಲ ಹರಡಿವೆ ಮತ್ತು ಅದಕ್ಕೆ ಪರಿಹಾರವೇನು?' ಎಂಬ ಕುರಿತಾಗಿ ಅವರೊಂದಿಗೆ ನಾನು ಉತ್ಥಾನ ಪತ್ರಿಕೆಗಾಗಿ ನಡೆಸಿದ ಸಂದರ್ಶನ ಇಲ್ಲಿದೆ. 'ಉತ್ಥಾನ' ಮಾಸಪತ್ರಿಕೆಯ ಜನವರಿ, ೨೦೧೩ರ ಸಂಕ್ರಾಂತಿ ವಿಶೇಷಾಂಕದಲ್ಲಿ ಇದು ಪ್ರಕಟವಾಗಿದೆ. 'ಭ್ರಷ್ಟಾಚಾರದ ವಿರಾಡ್ ರೂಪ-ಕಾರಣ-ಪರಿಹಾರ' - ಇದು ಈ ವಿಶೇಷಾಂಕದ ವಿಶೇಷ ವಿಷಯ. ನ್ಯಾ. ಸಂತೋಷ ಹೆಗ್ಡೆಯವರ ಸಂದರ್ಶನವೂ ಸೇರಿದಂತೆ ಅನೇಕ ಉಪಯುಕ್ತ ಲೇಖನಗಳುಳ್ಳ ಈ ಸಂಚಿಕೆ ಸಮಯೋಚಿತವಾಗಿದೆ ಮತ್ತು ಓದಬೇಕಾದುದಾಗಿದೆ.
-ಕ.ವೆಂ.ನಾಗರಾಜ್.

ಪ್ರಶ್ನೆ: ನಿಮ್ಮನ್ನು ಒಬ್ಬರು ಜನಪರ ಕಾಳಜಿಯುಳ್ಳ ಅಧಿಕಾರಿ ಎಂದು ಜನ ಗುರುತಿಸುತ್ತಾರೆ. ನಿಮ್ಮ ಈ ವ್ಯಕ್ತಿತ್ವ ರೂಪಿತವಾಗುವಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಿದ ಸಂಗತಿಗಳು, ವ್ಯಕ್ತಿಗಳ ಬಗ್ಗೆ ತಿಳಿಸುವಿರಾ?
ಮ.ಗೋ: ನಾವು ಆಂಧ್ರದ ಗುಂಟೂರಿನಲ್ಲಿದ್ದೆವು. ನನ್ನ ತಂದೆ ಆಂಧ್ರಪ್ರದೇಶದಲ್ಲಿ ಕಮ್ಯೂನಿಸ್ಟ್ ಪಾರ್ಟಿಯ ಸ್ಥಾಪಕರಾಗಿದ್ದರು. ಅವರು ೧೭ ಭಯೋತ್ಪಾದನಾ ಪ್ರಕರಣಗಳಲ್ಲಿ ಆರೋಪಿಯಾಗಿದ್ದರು. ಒಂದು ಪ್ರಕರಣದಲ್ಲಿ ೬ ವರ್ಷಗಳ ಸೆರೆಮನೆವಾಸದ ಶಿಕ್ಷೆಗೆ ಗುರಿಯಾಗಿ ಯರವಡಾ ಮತ್ತು ಆಲಿಪುರ ಸೆರೆಮನೆಗಳಲ್ಲಿದ್ದರು. ನನ್ನ ಅಜ್ಜ ಗುಂಟೂರು ಕಾರ್ಪೋರೇಷನ್ನಿನ ಮೇಯರ್ ಆಗಿದ್ದರು. ೧೯೨೧ರಲ್ಲಿ ಗಾಂಧೀಜಿ ಅಸಹಕಾರ ಚಳುವಳಿಗೆ ಕರೆ ಕೊಟ್ಟಾಗ ತನ್ನ ಹುದ್ದೆಗೆ ರಾಜಿನಾಮೆ ನೀಡಿ ಚಳುವಳಿಯಲ್ಲಿ ಭಾಗವಹಿಸಿದ್ದರು. ನಂತರ ಅವರು ಕಾಂಗ್ರೆಸ್ ಚಳುವಳಿಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡರು. ನನ್ನ ಅಜ್ಜಿ ಸಹ ಕಾಂಗ್ರೆಸ್ ಪಕ್ಷದಲ್ಲಿದ್ದರು. ನನ್ನ ತಂದೆ ಬನಾರಸ್ ಯೂನಿವರ್ಸಿಟಿಯಲ್ಲಿ ೩ ವಿಷಯಗಳಲ್ಲಿ ಎಂ.ಎ. ಪದವಿ ಪಡೆದಿದ್ದರು. ನಂತರ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದರು, ರಾಜಿನಾಮೆ ಕೊಟ್ಟರು, ಕಮ್ಯೂನಿಸ್ಟ್ ಪಾರ್ಟಿ ಸೇರಿದರು.  'ಟೆರರಿಸ್ಟ್ಸ್ ಆಫ್ ಆಂಧ್ರ' ಎಂಬ ಹೆಸರಿನ ಪುಸ್ತಕದ ಒಂದು ಅಧ್ಯಾಯ ನನ್ನ ತಂದೆಯ ಕುರಿತದ್ದಾಗಿದೆ. ಏಕೋ ಏನೋ ಅವರು ಸಂತೋಷವಾಗಿರಲಿಲ್ಲ. ಸೂಕ್ಷ್ಮ ಮನಸ್ಕರು ಅಸತ್ಯವನ್ನು ಸಹಿಸುವುದಿಲ್ಲ. ಇಬ್ಬಗೆ ನೀತಿಗಳು ಅವರಿಗೆ ಸರಿಕಾಣದೆ ಕಮ್ಯೂನಿಸ್ಟ್ ಪಾರ್ಟಿಯಿಂದ ದೂರ ಸರಿದರು. ಪೂರ್ಣ ಆಧ್ಯಾತ್ಮಿಕತೆ ಕಡೆಗೆ ವಾಲಿದರು. ಹೃಷಿಕೇಶದಲ್ಲಿ ಸ್ವಾಮಿ ಶಿವಾನಂದರ ಬಳಿಗೆ ಹೋದರು. ಹೃಷಿಕೇಶದಲ್ಲಿ ಸುಮಾರು ೧೫ ವರ್ಷ ಇದ್ದರು.
     ನನ್ನ ಮೇಲೆ ಪ್ರಭಾವ ಬೀರಿದ ಇನ್ನೊಬ್ಬರೆಂದರೆ ತೆಲುಗಿನ ಪ್ರಸಿದ್ಧ ಸಾಹಿತಿ ಚಲಂರವರು. ನಾನು ೧೦ನೆಯ ತರಗತಿಯಲ್ಲಿದ್ದಾಗಿನಿಂದಲೇ ಅವರಿಗೆ ಪತ್ರ ಬರೆಯುವ ಅಭ್ಯಾಸ ಇಟ್ಟುಕೊಂಡಿದ್ದೆ. ೫-೬ ವರ್ಷಗಳು ಅವರಿಗೆ ಪತ್ರಗಳನ್ನು ಬರೆಯುತ್ತಿದ್ದೆ. ಅವರೂ ಉತ್ತರಿಸುತ್ತಿದ್ದರು. ಮೊದಲು ಕಟ್ಟಾ ನಾಸ್ತಿಕರಾಗಿದ್ದ ಅವರು ರಮಣ ಮಹರ್ಷಿಗಳನ್ನು ಭೇಟಿ ಮಾಡಿದ ನಂತರ ಪೂರ್ಣ ಬದಲಾಗಿದ್ದರು. ಮೊದಲು ದೇವರು ಇಲ್ಲವೆನ್ನುತ್ತಿದ್ದವರು ದೇವರಿದ್ದಾನೆ ಎನ್ನಲು ಪ್ರಾರಂಭಿಸಿದರು. ಈ ಮೊದಲು ಅವರ ನಾಸ್ತಿಕವಾದದ ಪ್ರತಿಪಾದನೆಯಿಂದ ಪ್ರಭಾವಿತರಾಗಿದ್ದವರು ಈ ಬದಲಾವಣೆಂದ ಕ್ರುದ್ಧರಾಗಿದ್ದರು. ಚಲಂ ಅವರು, 'ನಾನು ಏನು ನಂಬಿದ್ದೇನೋ ಅದು ನನಗೆ ಸತ್ಯ. ನಿಮಗೋಸ್ಕರ ನಾನು ಸುಳ್ಳು ಹೇಳುವುದಕ್ಕೆ ಆಗುವುದಿಲ್ಲ. ಈಗ ನನ್ನ ಮನಸ್ಸಿಗೆ ಒಪ್ಪಿಗೆಯಾಗಿದೆ, ದೇವರಿದ್ದಾನೆ' ಎಂದು ಹೇಳುತ್ತಿದ್ದರು.  ಅಷ್ಟೊಂದು ಕಠಿಣವಾಗಿ ಸತ್ಯವನ್ನು ಹೇಳುವುದನ್ನು ನಾನು ಚಲಂರವರಿಂದ ಕಲಿತೆ. ನನ್ನನ್ನು ಗೋಪಿ ಎಂದು ಕರೆಯುತ್ತಿದ್ದ ಅವರು ಒಮ್ಮೆ ಉತ್ತರಿಸಿದ್ದರು,  "ಗೋಪಿ, ಇಷ್ಟು ಪ್ರಶ್ನೆಗಳನ್ನು ಕೇಳಿ ತಲೆ ಯಾಕೆ ತಿನ್ನುತ್ತೀರಿ? ನಿಜದ ಅರಿವಾಗಲು  ತಿರುವಣ್ಣಾಮಲೈಗೆ ಬಂದುಬಿಡಿ." ರಮಣಾಶ್ರಮಕ್ಕೆ ೧೯೭೪ರಲ್ಲಿ ನಾನು ಮೊದಲು ಹೋಗಿದ್ದು. ನಾನು ಅಲ್ಲಿಗೆ ಹೋಗುವಂತೆ ಮಾಡಿದ್ದು ಏನು ಎಂದು ನನಗೆ ಗೊತ್ತಿಲ್ಲ. ಬಿ.ಕಾಂ. ಎರಡನೆಯ ವರ್ಷದಲ್ಲಿ ಓದುತ್ತಿದ್ದ ಆ ಸಮಯದಲ್ಲಿ ನಾನು ಜೀವನದ ಬೇರೆಯೇ ಪಥದಲ್ಲಿದ್ದೆ. ನಕ್ಸಲ್ ಚಳುವಳಿಯಿಂದ ಪ್ರಭಾವಿತನಾಗಿದ್ದೆ. ಅದರಲ್ಲಿ ಸಕ್ರಿಯನೂ ಆಗಿದ್ದೆ. ನನ್ನ ಅರಿವಿಗೇ ಬಾರದಂತೆ ನಾನು ಅದರಿಂದ ಹೊರಬಂದೆ. ನನ್ನ ಯೋಚಿಸುವ ಧಾಟಿಯೇ ಬದಲಾಯಿತು. ಋಣಾತ್ಮಕದಿಂದ ಸಂಪೂರ್ಣ ಧನಾತ್ಮಕವಾಗಿ ಅದು ಬದಲಾಯಿತು. ಅದು ರಮಣ ಮಹರ್ಷಿಗಳ  ಆಶೀರ್ವಾದವೆಂದೇ ಭಾವಿಸಿದ್ದೇನೆ. ನಾನು ಅಲ್ಲಿಗೆ ಹೋಗಿರದಿದ್ದರೆ ಈಗ ನಾನೇನಾಗಿರುತ್ತಿದ್ದೆನೋ ಗೊತ್ತಿಲ್ಲ.     
    ನನ್ನ ತಾಯಿ ಕೆಲಸದಲ್ಲಿದ್ದರು. ಜೋಗಿಪೇಟೆ, ಸಿದ್ದಿಪೇಟ್, ಆಮೇಲೆ ಹೈದರಾಬಾದ್.  ಜೋಗಿಪೇಟೆ, ಸಿದ್ದಿಪೇಟೆಗಳಲ್ಲಿ ನಾನು  ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಹೋಗುತ್ತಿದ್ದೆ. ಅಲ್ಲಿ ಆಟಗಳನ್ನು ಆಡಿಸುತ್ತಿದ್ದರು. ಹಿಂದುತ್ವದ ಬಗ್ಗೆ ಅವರು ಹೇಳುವ ವಿಶಾಲ ದೃಷ್ಟಿಕೋನದ ವಿಚಾರಗಳನ್ನು ಹೇಳುತ್ತಿದ್ದಾಗ ನನಗೆ ಸರಿಕಾಣುತ್ತಿತ್ತು. ಅದೇ ನನ್ನನ್ನು ರಮಣ  ಮಹರ್ಮಷಿಗಳಲ್ಲಿಗೆ ಹೋಗಲು ಪ್ರೇರಿಸಿರಬಹುದು. ನಮ್ಮ ಸಂಸ್ಕೃತಿ, ಪರಂಪರೆ ಬಗ್ಗೆ ಹೇಳುವುದು ನನ್ನ ಮೇಲೆ ಪ್ರಭಾವ ಬೀರಿದೆ. ಚಿಕ್ಕಂದಿನಲ್ಲಿ ಬಾಲಲ ಭಾಗವತಮು, ಬಾಲಲ ರಾಮಾಯಣಮು, ಇಂತಹವುಗಳನ್ನು ಓದಿದ್ದೆ. ಚಿಕ್ಕಂದಿನಲ್ಲಿನ ಇಂತಹ ಸಂಗತಿಗಳು ನಮಗೆ ಗೊತ್ತಿಲ್ಲದೆ ನಮ್ಮ ಮನಸ್ಸಿನಲ್ಲಿ ಅಚ್ಚು ಒತ್ತಿರುತ್ತವೆ. ಖಂಡಿತಾ ಅವು ಪ್ರಭಾವಿಯಾಗಿರುತ್ತವೆ. ನಮ್ಮ ಶಾಲೆಯಲ್ಲಿ ಕಡ್ಡಾಯವಾಗಿ ಭಗವದ್ಗೀತೆ ಹೇಳಿಸುತ್ತಿದ್ದರು. ಈಗ ಹಾಗೆ ಮಾಡಿ ಅಂದರೆ ಜಾತಿವಾದಿ, ಕಮ್ಯೂನಲ್ ಅನ್ನುತ್ತಾರೆ. ನಾನು ಓದಿದ್ದು ಸರ್ಕಾರಿ ಶಾಲೆಯಲ್ಲೇ, ಅಲ್ಲೇ ಇದನ್ನು ಹೇಳಿಕೊಡುತ್ತಿದ್ದರು. ೧೨ನೆಯ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ತೆಲುಗು ಮೀಡಿಯಮ್ಮಿನಲ್ಲೇ ಓದಿದ್ದು. ನಾವು ಕನಿಷ್ಠ ಎರಡು ಉಪನಿಷತ್ತುಗಳನ್ನು ಕಂಠಪಾಠ ಮಾಡಬೇಕಿತ್ತು. ಕೇನೋಪನಿಷತ್ ಮತ್ತು ಈಶಾವಾಸ್ಯೋಪನಿಷತ್ ಎರಡನ್ನೂ ನಾನು ಕಂಠಪಾಠ ಮಾಡಿದ್ದೆ. ಸುಮಾರು ೮ ವರ್ಷಗಳ ಕಾಲ ನಾನು ಜೆ. ಕೃಷ್ಣಮೂರ್ತಿಯವರ ವಿಚಾರಗಳನ್ನು ಅಭ್ಯಸಿಸಿದೆ. ಓಶೋರವರನ್ನು ಎರಡು ಸಲ ಭೇಟಿ ಮಾಡಿದ್ದೆ. ಪುಣೆ ಆಶ್ರಮಕ್ಕೆ ಹೋಗಿದ್ದೆ. ಹಲವಾರು ಉಪಾಧ್ಯಾಯರುಗಳು, ಲೆಕ್ಷರರುಗಳು, ಭಾಷಣಕಾರರು, ಸುತ್ತಮುತ್ತಲಿನವರು, ಗೊತ್ತಿರುವವರು, ಗೊತ್ತಿಲ್ಲದವರು, ಹೀಗೆ ಹಲವಾರು ವ್ಯಕ್ತಿಗಳ  ಪ್ರಭಾವ ನನ್ನ ಮೇಲೆ ಆಗಿದೆ. 

ಪ್ರಶ್ನೆ: ಇಂದಿನ ಪರಿಸ್ಥಿತಿಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ಕಾರ್ಯ ನಿರ್ವಹಿಸುವುದು ಅಷ್ಟು ಸುಲಭವಲ್ಲವೆನ್ನುವ ವಾತಾವರಣವಿದೆ. ನಿಮ್ಮ ಅಭಿಪ್ರಾಯ?
ಮ.ಗೋ: ನೋಡಿ, ಸತ್ಯಸಂಧತೆ, ದಕ್ಷತೆ ಇವೇ ಕೊನೆಯಲ್ಲ. ನಮ್ಮ ಕೆಲಸಗಳು ಜನಪರವಾಗಿರಬೇಕು, ಒಳ್ಳೆಯ ಗುಣಮಟ್ಟದ್ದಾಗಿರಬೇಕು. ನಾವು ಮಾಡುವ ಕೆಲಸ ಯಾರಿಗಾಗಿ? ಜನರಿಗಾಗಿ! ಜನರಿಗೆ ಮೂಲಭೂತ ಸೌಕರ್ಯಗಳು ಸರಿಯಾಗಿ ಸಿಗದಂತೆ ಭ್ರಷ್ಠಾಚಾರ ತಡೆಯುತ್ತಿದೆ. ಭ್ರಚ್ಠಾಚಾರ ಹೇಗೆ ಜನರ ಜೀವನವನ್ನು ಹೇಗೆ ಬಾಧಿಸುತ್ತಿದೆ ಎಂಬುದನ್ನು ಅರಿಯಬೇಕು. ಅದನ್ನು ಜನರಿಗೆ ತಿಳಿಯಹೇಳದಿದ್ದರೆ ಅವರಿಗೆ ಅರಿವು ಮೂಡುವುದಾದರೂ ಹೇಗೆ? ಅವರಿಗೆ ಅರಿವು ಬರದೆ ಎಷ್ಟು ಹೋರಾಟ ಮಾಡಿದರೂ ಪ್ರಯೋಜನ ಇಲ್ಲ. ತಮ್ಮ ದಕ್ಷತೆ, ಪ್ರಾಮಾಣಿಕತೆಗಳೊಂದಿಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನೂ ಅಧಿಕಾರಿಗಳು ಮಾಡಬೇಕು.

ಪ್ರಶ್ನೆ: ದಕ್ಷ, ಪ್ರಾಮಾಣಿಕ ಸೇವೆಗೆ ಸರ್ಕಾರದಲ್ಲಿ ಮಾನ್ಯತೆ ಇದೆಯೇ?
ಮ.ಗೋ: ಜನರಿಂದ ಇದೆ. ಪಟ್ಟಭದ್ರ ಹಿತಾಸಕ್ತರೂ ಇರುತ್ತಾರೆ. ಅವರಿಗೆ ಇಷ್ಟವಾಗದಿದ್ದಾಗ ಸಹಜವಾಗಿ ಅವರು ಅಡ್ಡಿ ಮಾಡುತ್ತಾರೆ. ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ನನ್ನನ್ನು ನಕ್ಸಲೈಟ್ ಎಂದು ಹೆಸರಿಸಿ ಸಸ್ಪೆಂಡ್ ಮಾಡಿದ್ದರು. ಮೂರು ಕಾರಣಗಳನ್ನು ಕೊಟ್ಟಿದ್ದರು: ಒಂದು, ನಾನು ನನ್ನ ಕೆಲಸಗಳನ್ನು ನಿರ್ಲಕ್ಷಿಸಿ ಹಳ್ಳಿಗಳಲ್ಲಿ ಪರಿಶಿಷ್ಟ-ಜಾತಿ/ಪಂಗಡಗಳ ಕಾಲೋನಿಗಳಲ್ಲಿ ಪ್ರವಾಸ ಮಾಡುತ್ತೇನೆ ಅಂತ.  ಎರಡು, ನಾನು ಭ್ರಷ್ಟಾಚಾರದ ವಿರುದ್ಧ ಮಾತನಾಡಿ ಸರ್ಕಾರವನ್ನು ಟೀಕಿಸಿದ್ದೇನೆಂದು. ಮೂರು, ನಾನು ಪರ್ಯಾಯ ಮೌಲ್ಯಗಳ ಬಗ್ಗೆ ಮಾತನಾಡಿ ಜನರನ್ನು ಬೇರೆ ನಾಯಕತ್ವದ ಬಗ್ಗೆ ಪ್ರಚೋದಿಸಿದ್ದೇನೆ ಎಂದು. ಈ ಆರೋಪಗಳು ಏನು ಎಂದು ಅದನ್ನು ಮಾಡಿದವರಿಗೇ ಗೊತ್ತಿರಬಹುದು. ನಾನು ನ್ಯಾಯಾಲಯಕ್ಕೆ ಹೋಗಲಿಲ್ಲ. ಭಾರತ ಸರ್ಕಾರಕ್ಕೆ ಮೇಲುಮನವಿ ಸಲ್ಲಿಸಿದೆ. ಒಂದೂವರೆ ತಿಂಗಳಲ್ಲಿ ನನ್ನ ಮರುನೇಮಕ ಆಯಿತು. ನಾನು ಭರವಸೆ ಬಿಟ್ಟಿರಲಿಲ್ಲ. ನಾನು ನಿರಾಶಾವಾದಿ ಅಲ್ಲ. ನನ್ನನ್ನು ಯಾರು ಹತಾಶರನ್ನಾಗಿ ಮಾಡಬಯಸುತ್ತಾರೋ ಅವರೇ ಹತಾಶರಾಗಬೇಕು. 'ಏನಪ್ಪಾ, ಎಷ್ಟು ಮಾಡಿದರೂ ಇವನು ಹಾಗೆಯೇ ಇದ್ದಾನೆ' ಅಂತ ಅವರಿಗೆ ಅನ್ನಿಸಬೇಕು. ನನ್ನ ಸೇವಾಕಾಲದಲ್ಲಿ ಕೆಟ್ಟ ಅಧಿಕಾರಿಗಳು, ರಾಜಕಾರಣಿಗಳಂತೆ ಒಳ್ಳೆಯವರನ್ನೂ ಕಂಡಿದ್ದೇನೆ. ಒಟ್ಟಾರೆಯಾಗಿ ನಾವು ಒಳ್ಳೆಯವರಾಗಿದ್ದರೆ, ನೇರ ನಡೆ ನುಡಿಯವರಾಗಿದ್ದರೆ ಅವರು ಒಪ್ಪಿಕೊಳ್ಳುತ್ತಾರೆ. 

ಪ್ರಶ್ನೆ: ಕೆಳಹಂತದಲ್ಲಿನ ಭ್ರಷ್ಠಾಚಾರ ನಿಯಂತ್ರಣಕ್ಕೆ ಮಾತ್ರ ಗಮನ ಹರಿಸಲಾಗುತ್ತಿದೆ. ಕೆಳಹಂತದವರನ್ನು ಮಾತ್ರ ನಿಯಂತ್ರಿಸುವುದು, ಶಿಕ್ಷೆಗೊಳಪಡಿಸುವುದು ಆಗುತ್ತಿದೆ. ಮೇಲ್ಮಟ್ಟದಲ್ಲೂ ನಿಯಂತ್ರಣಕ್ಕೆ ಗಮನ ಹರಿಸಬೇಡವೇ?
ಮ.ಗೋ: ಮೇಲ್ಮಟ್ಟದ ಅಧಿಕಾರಿಗಳು ಶಿಸ್ತುಬದ್ಧರಾಗಿದ್ದರೆ ಅಧೀನ ಅಧಿಕಾರಿಗಳೂ ಶಿಸ್ತುಬದ್ಧರಾಗಿರುತ್ತಾರೆ. ಕಾನೂನುಗಳು ಸಮಸ್ಯೆ ಪರಿಹರಿಸಲಾರವು. ಜನರು ಮಾತ್ರ ಬಗೆಹರಿಸಬಲ್ಲರು. ಜನರ ಜೀವನ ಮಟ್ಟದ ಮೇಲೆ ಭ್ರಷ್ಠಾಚಾರ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಜನರಿಗೆ ಎಲ್ಲಿಯವರೆಗೆ ಅರಿವಾಗುವುದಿಲ್ಲವೋ ಅಲ್ಲಿಯವರೆಗೆ ಪರಿಹಾರ ಕಷ್ಟ. ಕಾನೂನು ಭ್ರಷ್ಠಾಚಾರಿಗಳನ್ನು ಬಂಧಿಸಬಹುದು, ಶಿಕ್ಷೆ ಮಾಡಬಹುದು, ಆದರೆ ಮನೋಭಾವ ಬದಲಿಸಲಾರದು. ಮನೋಭಾವ ಬದಲಾಗಬೇಕು ಅಂದರೆ ಬದಲಾವಣೆ ಮೇಲಿನಿಂದ ಬರಬೇಕು, ಜನರೂ ಜಾಗೃತರಾಗಬೇಕು. 

ಪ್ರಶ್ನೆ: ಕೆಳಮಟ್ಟದ ಅಧಿಕಾರಿಗಳು ಯೋಜನೆಗಳನ್ನು ವಾಸ್ತವಿಕವಾಗಿ ಜಾರಿ ಮಾಡುವವರು, ಅನುಷ್ಠಾನಕ್ಕೆ ತರುವವರು, ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ನಿರ್ಭೀತವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಬಹುದಾದಂತಹ ವಾತಾವರಣ ಇಲ್ಲ ಎನ್ನುತ್ತಾರಲ್ಲ? 
ಮ.ಗೋ: ನನ್ನ ಅನುಭವದ ಪ್ರಕಾರ ಭ್ರಷ್ಠಾಚಾರ ಕೆಳಮಟ್ಟದಲ್ಲಿ ಕಡಿಮೆ. ಹೆಚ್ಚಿನ ಗುಮಾಸ್ತರುಗಳು, ಜವಾನರು, ಆರೋಗ್ಯ ನಿರೀಕ್ಷಕರು, ಇಂಜನಿಯರುಗಳು, ಶಿಕ್ಷಕರುಗಳು, ಡಾಕ್ಟರುಗಳು, ನರ್ಸುಗಳು, ಹೀಗೆ ಬಹಳ ನೌಕರರುಗಳು ಪ್ರಾಮಾಣಿಕರಾಗಿರುವುದನ್ನು ಕಂಡಿದ್ದೇನೆ. ಆದರೆ ಅವರಿಗೆ ನಿರಾಶೆ ಆಗ್ತಾ ಇದೆ. ಹಾಗೆ ಆಗಬಾರದು. ಅವರ ಸಂಖ್ಯೆ ಹೆಚ್ಚಾಗಬೇಕು, ಕಡಿಮೆಯಾಗಬಾರದು. ಆದರೆ ಅವರುಗಳಿಗೆ ಬಹಳ ಕಷ್ಟ ಇದೆ. ರಾಜಕಾರಣಿಗಳು, ಮೇಲಾಧಿಕಾರಿಗಳು, ಸಹೋದ್ಯೋಗಿಗಳ ಕಡೆಯಿಂದ ಸಾಕಷ್ಟು ತೊಂದರೆ ಇದೆ. ಅಂತಹ ಒಳ್ಳೆಯ ಕೆಲಸಗಾರರಿಗೆ ರಕ್ಷಣೆ ಕೊಡಬೇಕು. ಮೇಲಾಧಿಕಾರಿಯಾದವರು ಅವರ ತೊಂದರೆ ತಡೆಯಬೇಕು. 
     ನನಗೆ ಗೊತ್ತಿದ್ದ ಒಬ್ಬರು ಆಹಾರ ಉಪನಿರ್ದೇಶಕರು ಇದ್ದರು. ಅವರು ಸಾಕಷ್ಟು ಹಣ ಮಾಡಿದ ಬಗ್ಗೆ ನನಗೆ ಗೊತ್ತಿತ್ತು. ನಾನು ಅವರನ್ನು ಕರೆದು ಹೇಳಿದ್ದೆ, 'ನೋಡಿ, ನಾನು ನಿರ್ದೇಶಕನಾಗಿರುವವರೆಗೆ ನಿಮ್ಮ ವಿರುದ್ಧ ಯಾವುದೇ ದೂರು ಬರಬಾರದು. ನಿಮ್ಮ ಹಳೆಯ ಸಂಗತಿಗಳೆಲ್ಲಾ ನನಗೆ ಗೊತ್ತು. ಆಗಿದ್ದು ಆಯಿತು. ಮುಂದೆ ಸರಿಯಾಗಿರಬೇಕು' ಅಂತ. ನಂತರ ಅವರು ಹಗಲೂ ರಾತ್ರಿ ಕೆಲಸ ಮಾಡಿದರು, ಒಳ್ಳೆಯ ಕೆಲಸ ಮಾಡಿದರು. 'ಏನು ಮಂತ್ರ ಮಾಡಿದಿರಿ? ಅವರು ಅಷ್ಟೊಂದು ಬದಲಾಗಿದ್ದಾರೆ' ಅಂತ ಜನರೇ ನನ್ನನ್ನು ಕೇಳುತ್ತಿದ್ದರು. 

ಪ್ರಶ್ನೆ: ಒಳ್ಳೆಯ ಕೆಲಸಗಳಿಗೆ ಅಡ್ಡಿ-ಅಡಚಣೆಗಳು ಜಾಸ್ತಿ ಎನ್ನುತ್ತಾರೆ. ನಿಮ್ಮ ಅನುಭವ?
ಮ.ಗೋ: ನಾನು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಮಿಷನರ್ ಆಗಿ ಕೆಲಸ ಮಾಡುತ್ತಿದ್ದಾಗ ೮ನೆಯ ತರಗತಿ ವಿದ್ಯಾರ್ಥಿನಿಯರಿಗೆ ಸೈಕಲ್ ಕೊಡುವ ಯೋಜನೆ ಜಾರಿಗೆ ಬಂತು. ಆಗ ಕಡಿಮೆ ದರದಲ್ಲಿ ಬ್ರಾಂಡ್ ಸೈಕಲ್ಲುಗಳನ್ನು ಕೊಡಿಸಲು ಪ್ರಾಮಾಣಿಕ ಕೆಲಸ ಮಾಡಿದೆ. ಆಗ ಮಧ್ಯಾಹ್ನದ ಊಟ, ಉಚಿತ ಪಠ್ಯಪುಸ್ತಕಗಳನ್ನು ಕೊಡುವ ಯೋಜನೆ ಪ್ರೌಢಶಾಲೆಗೂ ವಿಸ್ತರಿಸಲಾಯಿತು. ಎಲ್ಲಾ ಯೋಜನೆಗಳ ಸಮರ್ಥ, ಸಮರ್ಪಕ ಜಾರಿಗೆ ತುಂಬಾ ಶ್ರಮ ಹಾಕಿದ್ದೆ. ಇದ್ದಕ್ಕಿದ್ದಂತೆ ನನ್ನನ್ನು ಆ ಹುದ್ದೆಯಿಂದ ಯಾವ ಕಾರಣವೂ ಇಲ್ಲದೆ ವರ್ಗಾಯಿಸಲಾಯಿತು. ನನಗೆ ಅತ್ಯಂತ ಬೇಸರವಾಗಿ ನನ್ನ ಕೆಲಸಕ್ಕೆ ರಾಜಿನಾಮೆ ನೀಡಿ ತಿರುವಣ್ಣಾಮಲೈಗೆ ಹೊರಟೆ. ದಾರಿಯಲ್ಲಿದ್ದಾಗ ಒಬ್ಬ ಪ್ರಮುಖ ವ್ಯಕ್ತಿಯಿಂದ ದೂರವಾಣಿ ಕರೆ ಬಂತು, ಅವರ ಹೆಸರು ಹೇಳುವುದಿಲ್ಲ, ಅವರು "ನೀವು ಏಕೆ ರಾಜಿನಾಮೆ ಕೊಟ್ಟಿರಿ? ಜನ ನಮ್ಮನ್ನೇ ದೂಷಿಸುತ್ತಾರೆ. ದಯವಿಟ್ಟು ರಾಜಿನಾಮೆ ವಾಪಸ್ ತೆಗೆದುಕೊಳ್ಳಿ" ಎಂದು ಕೋರಿದರು. ನಾನು, "ನನ್ನ ವರ್ಗಾವಣೆಗೆ ಕಾರಣ ಏನು?" ಎಂದು ಕೇಳಿದೆ. "ನೀವು ದಯವಿಟ್ಟು ಮುಖ್ಯಮಂತ್ರಿಯವರನ್ನು ಕಾಣಿ" ಎಂದರು. ನಾನು ಮುಖ್ಯಮಂತ್ರಿಯವರನ್ನು ಕೇಳಿದೆ, "ಸ್ವಾಮಿ, ನೀವೇ ವೇದಿಕೆಯ ಮೇಲಿನಿಂದ ಯೋಜನೆಗಳು ಚೆನ್ನಾಗಿ ಜಾರಿಯಾಗುತ್ತಿರುವ ಬಗ್ಗೆ ನನ್ನನ್ನು ಒಳ್ಳೆಯ ಅಧಿಕಾರಿ ಎಂದು  ಹೊಗಳಿದ್ದಿರಿ. ಈಗ ಕಾರಣವಿಲ್ಲದೆ ವರ್ಗಾಯಿಸಿದ್ದಾದರೂ ಏಕೆ?" ಎಂದು ಕೇಳಿದೆ. 'ಕಾರಣ ಏನೂ ಇಲ್ಲ, ಯಾರೋ ಒಬ್ಬರು ಸಿಟ್ಟಾಗುತ್ತಾರೆ ಹಾಗೆ, ಹೀಗೆ' ಅಂತ ಹೇಳಿದರು. ಒತ್ತಾಯಿಸಿದಾಗ 'ನೀವು ಅವರ ಕೋರಿಕೆಯಂತೆ ವರ್ಗಾವಣೆಗಳನ್ನು ಮಾಡುವುದಿಲ್ಲ' ಅಂದರು. ನಾನು ಹೇಳಿದೆ, "ಉತ್ತರ ಕರ್ನಾಟಕದಲ್ಲಿ ೨೫% ಹುದ್ದೆಗಳು ಖಾಲಿ ಇದೆ. ಅಲ್ಲಿಂದ ವರ್ಗಾವಣೆ ಮಾಡಿದರೆ ಇನ್ನೂ ಹೆಚ್ಚು ಹುದ್ದೆಗಳು ಖಾಲಿ ಆಗುತ್ತದೆ. ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತದೆ" ಎಂದೆ. 'ನೀವು ಹೇಳುವುದೇನೋ ಸರಿ. ಆದರೆ ರಾಜಕೀಯ ಕಾರಣಗಳೂ ಇರುತ್ತವೆ. ನೀವು ರಾಜಿನಾಮೆ ಮಾತ್ರ ಕೊಡಬೇಡಿ, ವಾಪಸ್ ತೆಗೆದುಕೊಳ್ಳಿ' ಎಂದರು. ಇಂತಹ ಕಾರಣಗಳು ನನಗೆ ಅರ್ಥವಾಗುವುದಿಲ್ಲ. ಅವರು ಅಲ್ಪಕಾಲಿಕ ಲಾಭಕ್ಕಾಗಿ ಹೀಗೆ ಮಾಡುತ್ತಾರೆ.
        ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಆಗುತ್ತಿತ್ತು, ಆಗುತ್ತಿದೆ. ಇದಕ್ಕಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೆ. ಹೀಗೆ ಮಾಡುತ್ತಿದ್ದಾಗ ಯಾವುದೇ ಶಿಷ್ಟಾಚಾರವಿಲ್ಲದೆ ನನ್ನನ್ನು ಅಲ್ಲಿಂದ ಎತ್ತಂಗಡಿ ಮಾಡಲಾಯಿತು. ಆಗ ನಾನು ೧೫ ದಿನ ರಜೆ ಹಾಕಿ ಕೈಲಾಸ ಮಾನಸ ಸರೋವರಕ್ಕೆ ಯಾತ್ರೆಯಲ್ಲಿದ್ದೆ. ಆಗ ನನಗೆ ನಿಜವಾಗಿಯೂ ಬಹಳ ಕೆಟ್ಟದೆನಿಸಿತು. ನಾನು ವರ್ಗಾವಣೆಗೆ ಅಂಜುವುದಿಲ್ಲ. ಆದರೆ ಒಳ್ಳೆಯ ಕೆಲಸಗಳಾಗುತ್ತಿದ್ದಾಗ ಯಾವುದೇ ಕಾರಣವಿಲ್ಲದೆ ವರ್ಗ ಮಾಡುವ ಹಿನ್ನೆಲೆಯ ಬಗ್ಗೆ ಬೇಸರವಾಗುತ್ತದೆ. 
          ಬಳ್ಳಾರಿ ಜಿಲ್ಲೆಯಲ್ಲಿ ಪ್ರೊಬೇಷನರ್ ಆಗಿದ್ದಾಗ ಜಿಲ್ಲಾಧಿಕಾರಿಯಾಗಿ ಶ್ರೀ ಸುಧೀರ್ ಕುಮಾರ್ ಇದ್ದರು. ಕಷ್ಟಪಟ್ಟು ಕೆಲಸ ಮಾಡುವ, ಪ್ರಾಮಾಣಿಕ, ದಕ್ಷ, ಧೈರ್ಯವಂತ, ಸರಳ ಅಧಿಕಾರಿ ಅವರು. ಲಕ್ಷ್ಮಣ್ ಗನ್ ಪ್ರಕರಣದಲ್ಲಿ ಅವರೇ ರೈಡ್ ಮಾಡಿ ಕೇಸು ಹಾಕಿದ್ದರು. ಅವರ ಜೀವಕ್ಕೆ ಬೆದರಿಕೆ ಇತ್ತು. ಅವರನ್ನು ಕೋರ್ಟಿಗೆ ಎಳೆಯಲಾಯಿತು. ಅವರನ್ನು ಅವರೇ ಸಮರ್ಥಿಸಿಕೊಳ್ಳಬೇಕಾಯಿತು. ಅವರ ಪರವಾಗಿ ಯಾರೂ ಇರಲಿಲ್ಲ, ಸರ್ಕಾರದ ಕಡೆಯಿಂದಲೂ ಸಹಾಯ ಸಿಗಲಿಲ್ಲ. ಅವರೇ ವಾದಿಸಿ ಸುಪ್ರೀಮ್ ಕೋರ್ಟಿನಲ್ಲೂ ಗೆದ್ದರು. ನಂತರ ಅವರು ಬೇಸರದಿಂದ ರಾಜಿನಾಮೆ ನೀಡಿ ಹೊರಬಂದರು. ಅವರು ಈಗ ಬಿಹಾರದಲ್ಲಿ ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ ಮೆಂಬರ್ ಆಗಿದ್ದಾರೆ. 

ಪ್ರಶ್ನೆ: ನೀವು ನೆನಪಿಸಿಕೊಳ್ಳುವಂತಹ ಸಂಗತಿಗಳು, ಘಟನೆಗಳ ಬಗ್ಗೆ ಹೇಳುವಿರಾ?
ಮ.ಗೋ: ನಾನಾಗ ಶಿಕ್ಷಣ ಇಲಾಖೆಯಲ್ಲಿದ್ದೆ. ಶ್ರೀ ಅರವಿಂದ ಲಿಂಬಾವಳಿಯವರು ಮಂತ್ರಿಗಳಾಗಿದ್ದರು. ಸಿಇಟಿ ಯಲ್ಲಿ ನಾನು ವೈಸ್ ಛೇರ್‌ಮನ್, ಅವರು ಛೇರ್ ಮನ್. ಒಬ್ಬ ಪ್ರೌಢ ಮಹಿಳೆ ಬಂದರು, "ನನ್ನ ಮಗನಿಗೆ  ಡಿಸ್‌ಫ್ಲೆಕ್ಸಿಯ, ನೀವು 'ತಾರೆ ಜಮೀನ್ ಪರ್' ನೋಡಿದ್ದೀರಾ? ನನ್ನ ಮಗನಿಗೆ ಅದೇ ಸಮಸ್ಯೆ ಇದೆ. ಇಂಜನಿಯರಿಂಗ್, ಮೆಡಿಕಲ್ ಸೀಟುಗಳಲ್ಲಿ ೩% ಅಂಗವಿಕಲರಿಗೆ ಮೀಸಲಿಟ್ಟಿದ್ದೀರಿ. ಅದರ ಸೀಟುಗಳು ಬೇರೆ ರೀತಿಯ ಅಂಗವಿಕಲರ ಪಾಲಾಗುತ್ತದೆ. ನನ್ನ ಮಗನಂತಹವರಿಗೆ ಒಂದು ಸೀಟೂ ಸಿಕ್ಕುವುದಿಲ್ಲ. ದಯವಿಟ್ಟು ಸಹಾಯ ಮಾಡಿ" ಎಂದು ಕೇಳಿದರು. ಲಿಂಬಾವಳಿಯವರಿಗೆ ವಿಷಯ ತಿಳಿಸಿದೆ. ಅವರು 'ಅದಕ್ಕೆ ಏನು ಮಾಡಬಹುದೋ ಮಾಡಿ, ನನ್ನ ಒಪ್ಪಿಗೆಯಿದೆ' ಅಂದರು. ನಾವು ಪ್ರವೇಶಾತಿ ನಿಯಮಕ್ಕೆ ವಿಶೇಷ ತಿದ್ದುಪಡಿ ಮಾಡಿ, ೧% ಅಥವ ೧/೨% ಇರಬಹುದು, ಅಷ್ಟು ಸೀಟುಗಳನ್ನು ವೈದ್ಯಕೀಯವಾಗಿ ಮಾನಸಿಕ ಕಾಯಿಲೆ ಕಾರಣದ ದೌರ್ಬಲ್ಯದವರಿಗೆ ಮೀಸಲಿಡಬೇಕು ಎಂದು ಪ್ರಸ್ತಾಪಿಸಿ, ಒಂದು ವಾರದಲ್ಲಿ ಆ ತಿದ್ದುಪಡಿಗೆ ಅಂಗೀಕಾರ ಪಡೆಯಲಾಯಿತು. ಮೊದಲು ವಿಶೇಷ ವರ್ಗದವರ ಕೌನ್ಸೆಲಿಂಗ್ ಆಗುತ್ತದೆ. ಆ ಸಂದರ್ಭದಲ್ಲಿ ನಮ್ಮನ್ನು ಭೇಟಿ ಮಾಡಿದ್ದ ಮಹಿಳೆ ಸಹ ಬಂದಿದ್ದರು. ಆಕೆಯ ಮಗನಿಗೆ ಸೀಟು ಸಿಕ್ಕಿತು. ಆಕೆ ಸಂತೋಷದಿಂದ ಅತ್ತುಬಿಟ್ಟಳು. ದೇಶದಲ್ಲಿ ಅದೇ ಮೊದಲು ಡಿಸ್‌ಫ್ಲೆಕ್ಸಿಯದಿಂದ ನರಳುತ್ತಿದ್ದವರಿಗೆ ಸೀಟು ಸಿಕ್ಕಿದ್ದು. ಆಕೆಗೆ ನಂಬಿಕೆಯೇ ಇರಲಿಲ್ಲ. ಅಂತಹವರೇ ನಮ್ಮ ಸರ್ಕಾರದ ರಾಯಭಾರಿಗಳು. ಯಾವುದೇ ಟಿವಿ ಜಾಹಿರಾತಿನ ಅಗತ್ಯವಿಲ್ಲ. ರಾಜಕಾರಣಿಗಳ ಬಗ್ಗೆ ಏನಾದರೂ ಹೇಳಬಹುದು. ಅವರಿಗೆ ಮನವರಿಕೆ ಮಾಡಿದರೆ ಇಂತಹ ಕೆಲಸಗಳು ಸಾಧ್ಯ. ಅವರಿಗೂ ಪ್ರಚಾರ ಬೇಕು.
     ನಂಜನಗೂಡಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದಾಗ ಒಮ್ಮೆ ಗೋವುಗಳ ಸಾಗಾಣಿಕೆ ಆಗುತ್ತಿದ್ದುದನ್ನು ನಿಲ್ಲಿಸಿದ್ದೆ. ಕೇರಳ ಮಾರ್ಗದಿಂದ ಅವುಗಳ ಕಳ್ಳಸಾಗಣೆ ಮಾಡುತ್ತಿದ್ದರು. ಹಸು ಮಾತ್ರ ಅಲ್ಲ, ಕರುಗಳೂ ಇದ್ದವು. ಆ ಜಾನುವಾರುಗಳ ಕಿವಿಯಲ್ಲಿ ತೂತುಗಳಿದ್ದವು. ಐ.ಆರ್.ಡಿ.ಪಿ. ಯೋಜನೆಯಲ್ಲಿ ಕೊಟ್ಟ ಹಸುಗಳಿಗೆ ಆ ರೀತಿ ಗುರುತು ಮಾಡುತ್ತಿದ್ದರು. ಐ.ಆರ್.ಡಿ.ಪಿ. ಹಸುಗಳು ಇಲ್ಲಿ ಹೇಗೆ ಬಂದವು ಅಂತ ವಿಚಾರಿಸುತಿದ್ದಾಗ ಡ್ರೈವರ್ ಓಡಿಹೋದ. ಕೆಲವು ಪ್ರಭಾವಿ ವ್ಯಕ್ತಿಗಳು ಅದರ ಹಿಂದೆ ಇರುವುದು ನನಗೆ ಗೊತ್ತಾಯಿತು, ಅವರ ಹೆಸರುಗಳು ಬೇಡ. ವಾಹನ ಜಪ್ತು ಮಾಡಿದೆವು, ವಿವಿಧ ಸೆಕ್ಷನ್‌ಗಳ ಪ್ರಕಾರ ಮೊಕದ್ದಮೆಗಳನ್ನು ದಾಖಲು ಮಾಡಿದೆವು. ನಾನು ಹಸುಗಳನ್ನು ಸಾಗಿಸುವುದನ್ನು ನಿಲ್ಲಿಸಿದ್ದೇನೆ, ನಾನು  ಆರೆಸ್ಸೆಸ್ಸಿನವನು ಅಂತ ಪ್ರಚಾರ ಮಾಡಿದರು. ಪತ್ರಿಕೆಗಳಲ್ಲೆಲ್ಲಾ ಈ ಬಗ್ಗೆ ಸುದ್ದಿಗಳು ಬಂದವು. ಹಸು ನಿಲ್ಲಿಸಿದ್ದಕ್ಕೂ ಅದಕ್ಕೂ ಏನು ಸಂಬಂಧವಿದೆ? ಅದು ಅಮಾನವೀಯ ಕೆಲಸವಾಗಿತ್ತು, ನಿಲ್ಲಿಸಿದೆ, ಅಷ್ಟೆ. ನಾನು ಮಾಡಿದ ಕೆಲಸಕ್ಕೂ ಆರೆಸ್ಸೆಸ್ಸಿಗೂ ಸಂಬಂಧವಿಲ್ಲ. ನನಗೆ ಹಸುಗಳನ್ನು ಕಂಡರೆ ಭಾವನಾತ್ಮಕವಾಗಿ ಪೂಜ್ಯ ಭಾವನೆಯಿದೆ, ಏಕೆಂದು ಗೊತ್ತಿಲ್ಲ. ನಾವು ಏನಾದರೂ ಒಳ್ಳೆಯ ಕೆಲಸ ಮಾಡಿದರೆ ಅದರ ಹಿಂದೆ ಥಿಯರಿ ಇರಬೇಕಿಲ್ಲ. ಕೆಟ್ಟದನ್ನು ಮಾಡಬೇಕಾದರೆ ಥಿಯರಿ ಬೇಕು. ಆಗ ನನ್ನನ್ನು ಆರೆಸ್ಸೆಸ್ಸಿನವನು ಎಂದು ದೂರಿದ್ದರು, ರಾಯಚೂರಿನಲ್ಲಿದ್ದಾಗ ನಕ್ಸಲೈಟ್ ಎಂದು ಹಣೆಪಟ್ಟಿ ಹಚ್ಚಿದ್ದರು.

ಪ್ರಶ್ನೆ: ಸುಮಾರು ೧೦ ವರ್ಷಗಳ ಹಿಂದೆ 'ಕೂಲಿಗಾಗಿ ಕಾಳು' ಯೋಜನೆಗೆ ಸಂಬಂಧಿಸಿದ ಕೋಟ್ಯಾಂತರ ರೂ. ಮೌಲ್ಯದ ಆಹಾರ ಸಾಮಗ್ರಿಗಳು ಮಂಗಳೂರು ಬಂದರಿನಲ್ಲಿ ವಿದೇಶಕ್ಕೆ ಸಾಗಿಸಲು ಸಿದ್ಧವಾಗಿದ್ದುದನ್ನು ಜಪ್ತಿ ಮಾಡಲಾಗಿತ್ತು. ಹಲವಾರು ಜಿಲ್ಲೆಗಳ ಹಲವಾರು ಅಧಿಕಾರಿಗಳು ಅದರಲ್ಲಿ ಭಾಗಿಯಾಗಿದ್ದರು. ಹೆಚ್ಚಿನ ಸಂಖ್ಯೆಯ ಅಧಿಕಾರಿಗಳನ್ನು ಬಂಧಿಸಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿತ್ತು. ಅದೇ ಅದಿಕಾರಿಗಳು ಇಂದೂ ಸೇವೆಯಲ್ಲಿ ಮುಂದುವರೆದಿದ್ದಾರೆ, ಅಷ್ಟೇ ಅಲ್ಲ ಉನ್ನತ ಹುದ್ದೆಗಳಲ್ಲೂ ಇದ್ದಾರೆ. ಇಂತಹ ಪರಿಸ್ಥಿತಿಗೆ ಏನು ಕಾರಣ?
ಮ.ಗೋ: ನಾನು ನಂಜನಗೂಡಿನಲ್ಲಿ ಎ.ಸಿ. ಆಗಿದ್ದಾಗ ನಡೆದ ಪ್ರಕರಣ ಇದು. ಬಿಳಗಿರಿರಂಗನಬೆಟ್ಟದಲ್ಲಿ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ೫೦ ಎಕರೆ ಜಾಗವನ್ನು ೫ ಜನರಿಗೆ ಭೂರಹಿತ ಕೃಷಿ ಕಾರ್ಮಿಕರು ಅಂತ ಮಂಜೂರು ಮಾಡಿದ್ದರು. ಅವರ ಪೈಕಿ ಸುಬ್ಬರಾವ್, ರಜನೀಕಾಂತ್, ಕೃಷ್ಣಮೂರ್ತಿ ಅವರೂ ಸೇರಿದ್ದರು.  ಅವರೆಲ್ಲಾ ಬೆಂಗಳೂರಿನ ಸದಾಶಿವನಗರದಲಿದ್ದವರು. ಇದರಲ್ಲಿ ರಹಸ್ಯ ಏನೂ ಇಲ್ಲ. ಎಲ್ಲಾ ದಾಖಲೆಗಳಿವೆ. ಸುಬ್ಬರಾವ್ ಅನ್ನುವವರು ಅಖಿಲ ಭಾರತ ಮಟ್ಟದ ಕೈಗಾರಿಕಾ ಸಂಸ್ಥೆಯೊಂದರ ಅಧ್ಯಕ್ಷರು. ರಜನೀಕಾಂತ್ ಬಗ್ಗೆ ಗೊತ್ತೇ ಇದೆ. ಎಲ್ಲರೂ ಕೋಟ್ಯಾಧೀಶ್ವರರೇ. ನಾನು ಈ ಬಗ್ಗೆ ವರದಿ ಕೊಟ್ಟಾಗ ನನ್ನ ಮೇಲಾಧಿಕಾರಿ ಸಂಬಂಧಿಸಿದವರಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿ ಒಂದು ಆದೇಶ ಮಾಡಿದರು. ಆ ಆದೇಶದಲ್ಲಿ ಮಂಜೂರಿದಾರರು ಬಹು ದೊಡ್ಡ ಮೊತ್ತವನ್ನು ಆ ಭೂಮಿಯನ್ನು ಸಾಗುವಳಿಗೆ ತರುವುದಕ್ಕೆ ಖರ್ಚು ಮಾಡಿದ್ದಾರೆ, ಆದ್ದರಿಂದ ಆ ಭೂಮಿಯನ್ನು ಸರ್ಕಾರಕ್ಕೆ ಮರಳಿ ತೆಗೆದುಕೊಳ್ಳುವುದು ನ್ಯಾಯವಲ್ಲ ಅಂತ ಹೇಳಿದ್ದರು. ಮೂರ್ಖನಿಗೂ ಗೊತ್ತಾಗುತ್ತದೆ, ಮಂಜೂರಿದಾರರು ಭೂರಹಿತ ಕೃಷಿಕಾರ್ಮಿಕರಲ್ಲ ಅಂತ. ಕೋಟ್ಯಾಧೀಶ್ವರನೊಬ್ಬ ತಾನು ಭೂರಹಿತ ಕೃಷಿ ಕಾರ್ಮಿಕ ಅಂತ ಧೃಢೀಕರಣ ಪತ್ರ ತೆಗೆದುಕೊಂಡಿದ್ದರೆ ಅದು ತಪ್ಪು ಎಂದು ತಿಳಿಯುವುದಕ್ಕೆ ದೊಡ್ಡ ಕಾನೂನಿನ ಅಗತ್ಯ ಇದೆಯೇ? ನಾನು ಛೀಫ್ ಸೆಕ್ರೆಟರಿಯವರಿಗೆ ದೂರು ಕೊಟ್ಟೆ. ಅದು ಲೋಕಾಯುಕ್ತಕ್ಕೆ ಹೋಯಿತು. ನಾನು ಸಾಕ್ಷಿ ಹೇಳಿದೆ. ನಾನು ಪ್ರಕರಣದ ಎಲ್ಲಾ ದಾಖಲೆಗಳ ಪ್ರತಿ ಇಟ್ಟುಕೊಂಡಿದ್ದೇನೆ, ಆ ಸಮಯದಲ್ಲಿ ತಹಸೀಲ್ದಾರ್, ರೆವಿನ್ಯೂ ಇನ್ಸ್ ಪೆಕ್ಟರ್, ಸರ್ವೆಯರ್, ಗ್ರಾಮಲೆಕ್ಕಿಗರು ಎಲ್ಲರನ್ನೂ ಅಮಾನತ್ತು ಮಾಡಿದ್ದರು. ನಂತರದಲ್ಲಿ ಅವರದು ಯಾರದೂ ತಪ್ಪಿಲ್ಲವೆಂದು ಸಿದ್ಧವಾಯಿತು. ಪ್ರಕರಣ ಮುಚ್ಚಿಹೋಯಿತು. ಅವರುಗಳಿಗೆ ಬಡ್ತಿಯೂ ಸಿಕ್ಕಿತು. 
     ಇನ್ನೊಂದು ಪ್ರಕರಣ ಹೇಳ್ತೀನಿ. ನಾನು ಬಿಜಾಪುರದ ಡಿ.ಸಿ. ಆಗಿದ್ದಾಗ ನಡೆದ ಸಂಗತಿ. ಆಹಾರ ಇಲಾಖೆಯ ಉಪನಿರ್ದೇಶಕರೊಬ್ಬರು ಪ್ರತಿ ತಿಂಗಳು ೩೦೦ ನ್ಯಾಯಬೆಲೆ ಅಂಗಡಿಗಳ ಪೈಕಿ ೫೦ ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ, ೫೦ ಅಂಗಡಿಗಳಿಗೆ ಗೋದಿಯನ್ನು ಬಿಡುಗಡೆ ಮಾಡುತ್ತಿರಲಿಲ್ಲ. ಅದರ ಮುಂದಿನ ತಿಂಗಳು ಬೇರೆ ಬೇರೆ ೫೦ ಅಂಗಡಿಗಳಿಗೆ ಕೊಡುತ್ತಿರಲಿಲ್ಲ, ಉಳಿದ ೨೫೦ ಅಂಗಡಿಗಳಿಗೆ ಬಿಡುಗಡೆ ಆಗುತ್ತಿತ್ತು. ಹೀಗೆ ರೊಟೇಶನ್ನಿನಂತೆ ಮಾಡುತ್ತಿದ್ದರು. ಆ ೫೦ ಅಂಗಡಿಗಳ ಅಕ್ಕಿ ಮತ್ತು ಗೋಧಿ ಸೋಲಾಪುರಕ್ಕೆ ಹೋಗುತ್ತಿತ್ತು. ಅಲ್ಲಿ ಅದನ್ನು ಹಿಟ್ಟು, ರವೆ ಮಾಡಿ ಮಾರಲಾಗುತ್ತಿತ್ತು. ಆಗ ನಾನು ಮತ್ತು ಎ.ಸಿ. ಅದನ್ನು ರೆಡ್ ಹ್ಯಾಂಡ್ ಆಗಿ ಹಿಡಿದೆವು. ಸಗಟು ಗೋಡೌನಿಗೆ ಹೋಗಿ ೫ ದಿನಗಳ ಕಾಲ ತಪಾಸಣೆ ಮಾಡಿದೆವು. ವ್ಯತ್ಯಾಸ ಇರುವುದು, ಅವ್ಯವಹಾರ ನಡೆದಿರುವುದು ಖಚಿತವಾಯಿತು. ವರದಿ ಸಿದ್ಧ ಮಾಡಿಕೊಂಡು, ಗೃಹ ಇಲಾಖೆಯ ಕಮಿಷನರ್ ಅವರನ್ನು ಸ್ವತಃ ಭೇಟಿ ಮಾಡಿ, ವಿಶೇಷ ಅನುಮತಿ ಪಡೆದು ಪ್ರಕರಣ ದಾಖಲಿಸಿದೆ. ಮನೋರಮಾ ಮಧ್ವರಾಜ್ ಆಹಾರ ಮಂತ್ರಿ ಆಗಿದ್ದರು. ಅವರ ಮನೆಗೇ ಹೋಗಿ ವಿಷಯ ತಿಳಿಸಿದೆ. ಜನರ ಆಹಾರ ಕದ್ದಿದ್ದಾರೆ, ಅವರಿಗೆ ಶಿಕ್ಷೆ ಆಗಬೇಕು ಅಂದೆ. ಅವರು ಒಪ್ಪಿದರು. ಸಿ.ಒ.ಡಿ. ತನಿಖೆಗೂ ಆದೇಶ ಮಾಡಿದರು. ಉಪನಿರ್ದೇಶಕರು, ಫುಡ್ ಇನ್ಸ್‌ಪೆಕ್ಟರರನ್ನು ಬಂಧಿಸಲಾಯಿತು. ಎರಡು ದಿನಗಳು ಅವರು ಜೈಲಿನಲ್ಲಿದ್ದು, ನಂತರ ಜಾಮೀನಿನ ಮೇಲೆ ಹೊರಬಂದರು. ೧೯೯೪ರಲ್ಲಿ ನಡೆದ ಕೇಸು ಇದು. ೨೦೦೮ರವರೆಗೂ ನಡೆಯಿತು. ನಾನೂ ಹೇಳಿಕೆಗಳನ್ನು ನೀಡಿದೆ. ಇಷ್ಟೆಲ್ಲಾ ಆದಮೇಲೂ ೧೪ ವರ್ಷಗಳ ನಂತರ ಅವರುಗಳು ನಿರ್ದೋಷಿ ಎಂದು ತೀರ್ಮಾನವಾಯಿತು. ಸಿ.ಓ.ಡಿ.ಯವರು ಆರೋಪಗಳು ಸಾಬೀತಾಗಿದೆಯೆಂದು ಹೇಳಿದ್ದರು. ಅವರು ಶಿಕ್ಷೆ ಕೊಡಲು ಬರುವುದಿಲ್ಲ. ಕೇವಲ ತನಿಖೆ ನಡೆಸಿ ವರದಿ ಕೊಡುತ್ತಾರೆ. ನಂತರ ಇಲಾಖಾ ವಿಚಾರಣೆ ನಡೆಯಿತು. ಅಲ್ಲೂ ನಾನು ಹೇಳಬೇಕಾದ್ದನ್ನೆಲ್ಲಾ ಹೇಳಿದೆ. ಏನಾಯಿತೋ ಗೊತ್ತಿಲ್ಲ, ಆರೋಪಗಳು ಸಾಬೀತಾಗಲಿಲ್ಲವೆಂದು ತೀರ್ಮಾನವಾಯಿತು. ಅಧಿಕಾರಿಗಳು ನನ್ನ ಹತ್ತಿರವೂ ಬಂದಿದ್ದರು, 'ಏನೋ ತಪ್ಪು ಮಾಡಿಬಿಟ್ಟಿದ್ದೇವೆ, ಕ್ಷಮಿಸಿ ಬಿಟ್ಟುಬಿಡಿ, ಸಾಕ್ಷಿ ಹೇಳಿಕೆ ಕೊಡಬೇಡಿ' ಅಂತ ಕೇಳಿದ್ದರು. ಆದರೆ ನನ್ನ ಕರ್ತವ್ಯ ನಾನು ಮಾಡಿದೆ. ಈ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ಏನೂ ಇರಲಿಲ್ಲ. ಆದರೂ ಅಧಿಕಾರಿಗಳು ಪಾರಾದರು.  ಕಾನೂನನ್ನು ಹೇಗೆ ತಿರುಚಬಹುದು ಎಂಬುದಕ್ಕೆ ಉದಾಹರಣೆ ಇದು. ವ್ಯವಸ್ಥೆಯಲ್ಲೇ ಹಾಗಾಗಿದೆ, ಏಕೋ ಗೊತ್ತಿಲ್ಲ.

ಪ್ರಶ್ನೆ: ತಾವೇ ಹೇಳಿದಂತೆ ತಾವೇ ಮುತುವರ್ಜಿ ವಹಿಸಿ ಕ್ರಮ ತೆಗೆದುಕೊಂಡ ಪ್ರಕರಣ ೧೪ ವರ್ಷಗಳ ನಂತರದಲ್ಲಿ ಏನೂ ಕ್ರಮ ಆಗದೆ ಬಿದ್ದುಹೋಯಿತು. ಇಂತಹ ಸ್ಥಿತಿಯ ಸುಧಾರಣೆಗೆ ಏನು ಕ್ರಮ ತೆಗೆದುಕೊಳ್ಳಬಹುದು?
ಮ.ಗೋ: ಇದು ಕಳೆದ ವರ್ಷದ ಪ್ರಕರಣ, ಬಹುಷಃ ಮಾರ್ಚಿ ತಿಂಗಳ ಕೊನೆಯಲ್ಲಿರಬೇಕು. ಇಂಜನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್ ಲೆಕ್ಚರರ್ಸ್‌ಗಳ ವೇತನಕ್ಕೆ ಸಂಬಂಧಿಸಿದ್ದು. ಫೈಲನ್ನು ಒಪ್ಪಿ ಮಂಜೂರಾತಿ ನೀಡಿ ೧೦ ದಿನ ಆಗಿತ್ತು. ಆಫೀಸಿನಲ್ಲಿ ಪೆಂಡಿಂಗ್ ಇತ್ತು. ಈ ಕೇಸಿನಲ್ಲಿ ನಾನು ಒಂದು ಪೈಸೆ ಲಂಚ ತೆಗೆದುಕೊಂಡಿರಲಿಲ್ಲ. ಆಗ ಕೆಲವರು ಲೆಕ್ಚರರ್ಸ್ ಅಸೋಸಿಯೇಷನ್ ಕಡೆಯಿಂದ ನನ್ನನ್ನು ಭೇಟಿ ಮಾಡಲು ಬಂದಿದ್ದರು. 'ಸರ್, ಈ ಫೈಲ್ ತಮ್ಮಲ್ಲಿ ಪೆಂಡಿಂಗ್ ಇದೆ. ನಾವು ಎಲ್ಲರೂ ಸೇರಿ ೪-೫ ಕೋಟಿ ಹಣ ಸಂಗ್ರಹಿಸಿ ಕೊಡ್ತೀವಿ. ಅದರ ಮೇಲೂ ಸಹ ಕೊಡ್ತೀವಿ. ದಯವಿಟ್ಟು ಮಂಜೂರಾತಿ ಕೊಡಿ' ಅಂದರು. ನಾನು ಅವರನ್ನು ನನ್ನ ಎದುರೇ ಕುಳಿತುಕೊಳ್ಳಲು ತಿಳಿಸಿದೆ. ಸಂಬಂಧಿಸಿದವರನ್ನು ಕರೆಸಿ, ಅವರಿಗೆ ನನ್ನ ಎದುರೇ ಆದೇಶವನ್ನು ಟೈಪ್ ಮಾಡಿಸಿದೆ. ಬಂದವರ ಎದುರಿಗೇ ಸಹಿ ಮಾಡಿ ಅವರಿಗೆ ಪ್ರತಿ ಕೊಟ್ಟೆ. ಅವರುಗಳ ವೇತನದಲ್ಲಿ ಗಣನೀಯವಾಗಿ ಹೆಚ್ಚಳವಾಗಿತ್ತು. ಯಾರಿಂದಲೂ ಒಂದು ರೂ. ಹಣ ಪಡೆಯಲಿಲ್ಲ. ಅಪರಾಧ ಆಗುವ ಮುನ್ನವೇ ಹಾಗೆ ಆಗದಂತೆ ನೋಡಿಕೊಳ್ಳುವುದು ಅಗತ್ಯ. 

ಪ್ರಶ್ನೆ: ಭ್ರಷ್ಠಾಚಾರ ಎಲ್ಲಾ ಸಮಸ್ಯೆಗಳಿಗೆ ಮೂಲ ಅಂತೀವಿ. ಅಧಿಕಾರ ಕೇಂದ್ರಿತ, ಜಾತಿ ಕೇಂದ್ರಿತ, ವಂಶ ಕೇಂದ್ರಿತ ರಾಜಕೀಯ ವ್ಯವಸ್ಥೆ ಸಹ ಭ್ರಷ್ಠಾಚಾರಕ್ಕೆ ಕಾರಣ ಅಲ್ಲವೇ?
ಮ.ಗೋ: ಇದಕ್ಕೆ ಅವರನ್ನು ದೂಷಿಸಿ ಪ್ರಯೋಜನ ಇಲ್ಲ. ಜನರು ಸರಿಯಾಗಬೇಕು. ರಾಜಕಾರಣಿಗಳಿಗೆ ಈಗ ಏನು ಭಾವನೆ ಬಂದಿದೆ ಅಂದರೆ ಖರ್ಚು ಮಾಡದಿದ್ದರೆ ಗೆಲ್ಲುವುದಿಲ್ಲ ಅಂತ. ಪ್ರಾಮಾಣಿಕರಾಗಿರುವ ರಾಜಕಾರಣಿಗಳು ಎಷ್ಟಿಲ್ಲ,. ಅವರೇ ಹೇಳ್ತಾರೆ, 'ಚೆನ್ನಾಗಿ ಕೆಲಸ ಮಾಡಿದರಷ್ಟೆ ಜನ ಓಟು ಕೊಡುವುದಿಲ್ಲ, ಹಣ ಹಂಚಲೇಬೇಕು' ಅಂತ. ಆ ಮನೋಭಾವ ಹೋಗಬೇಕು. ಭ್ರಷ್ಠಾಚಾರ ಅನ್ನುವುದು ಸಮಾಜದ ಕ್ಯಾನ್ಸರ್ ಇದ್ದ ಹಾಗೆ. ಅದು ಭಯೋತ್ಪಾದಕತೆಗಿಂತ ಹೆಚ್ಚು ಅಪಾಯಕಾರಿ. ರಾಜಕೀಯ ಪಕ್ಷಗಳಲ್ಲೂ ಜಾಗೃತಿ ಮೂಡಬೇಕು. ಒಂದು ಕಾಲ ಬರುತ್ತದೆ, ಬರಬೇಕು. ರಾಜಕೀಯ ಪಕ್ಷಗಳವರು, 'ನಾವು ದುಡ್ಡು ಕೊಡುವುದಿಲ್ಲ, ಚುನಾಯಿಸದಿದ್ದರೆ ಪರವಾಗಿಲ್ಲ' ಅನ್ನುವ ಕಾಲ ಬರಬೇಕು. ಇಲ್ಲದಿದ್ದರೆ ಮಾಫಿಯಾದವರು, ಮಧ್ಯವರ್ತಿಗಳು, ಅಪರಾಧಿಗಳು ಇವರುಗಳೆಲ್ಲಾ ರಾಜಕೀಯಕ್ಕೆ ಪ್ರವೇಶಿಸುತ್ತಾರೆ, ಹಣ ಖರ್ಚು ಮಾಡುತ್ತಾರೆ, ಗೆಲ್ಲುತ್ತಾರೆ. ಹಣ ಇದ್ದರೆ ರಾಜಕೀಯ ಮಾಡಬಹುದು ಅನ್ನುವ ಸ್ಥಿತಿ ಇದೆಯಲ್ಲಾ ಅದು ಬಹಳ ಕೆಟ್ಟದ್ದು.
  
ಪ್ರಶ್ನೆ: ಇಂತಹ ರಾಜಕೀಯ ವ್ಯವಸ್ಥೆಯಿಂದ ನಿಷ್ಠಾವಂತ ಅಧಿಕಾರಿ ಫುಟ್ ಬಾಲ್ ಆಗುತ್ತಾನಲ್ಲವೇ? 
ಮ.ಗೋ: ಇರುವ ಕಡೆ ಕೆಲಸ ಮಾಡಿಕೊಂಡು ಹೋಗಬೇಕು. ನಾನು ಹೇಳುತ್ತಿರುತ್ತೇನೆ. ಪ್ರಭಾವಿ ವಲಯ ಮತ್ತು ಕಳಕಳಿಯ ವಲಯ ಇರುತ್ತದೆ. ನಮ್ಮ ಕೆಲಸವನ್ನು ನಾವು ಸರಿಯಾಗಿ ಮಾಡಿದರೆ, ಅಂದರೆ ಸಮಯಕ್ಕೆ ಸರಿಯಾಗಿ ಕಛೇರಿಗೆ ಹೋಗುವುದು, ನೀತಿ ನಿಯಮಗಳನ್ನು ಪಾಲಿಸುವುದು, ನನ್ನ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ಕೆಲಸವಾಗುವಂತೆ ನೋಡಿಕೊಳ್ಳುವುದು, ಇತ್ಯಾದಿ. ಇದರಿಂದ ಖಂಡಿತ ಪ್ರಭಾವ ಆಗುತ್ತದೆ. ಇತರ ಸಮಸ್ಯೆಗಳಿಗೆ ಮಹತ್ವ ಕೊಡಬೇಡಿ. ಜನರು ಏನು ಮಾಡುತ್ತಾರೆ ಅಂದರೆ ಇತರರನ್ನು ಟೀಕಿಸುತ್ತಾರೆ, ತಾವು ಮಾತ್ರ ಬದಲಾಗಿರುವುದಿಲ್ಲ. ಬದಲಾವಣೆ ಮೊದಲು ನನ್ನಿಂದ  ಬರಬೇಕು. ನನ್ನ ಹತ್ತಿರ ೨೪ ಗಂಟೆಗಳಿಗಿಂತಲೂ ಹೆಚ್ಚು ಕಾಲ ಕಡತಗಳನ್ನು ಇಟ್ಟುಕೊಳ್ಳದಿದ್ದರೆ ನಾನು ನನ್ನ ಅಧೀನ ಅಧಿಕಾರಿಗಳನ್ನು ಕೇಳುವ ನೈತಿಕತೆ ನನಗೆ ಇರುತ್ತದೆ. ನನ್ನ ಹತ್ತಿರ ಬಾಕಿ ಇಲ್ಲ, ನೀವು ಏಕೆ ಇಟ್ಟುಕೊಂಡಿದ್ದೀರಿ ಅಂತ ಕೇಳಬಹುದು. ನಾನು ಸಮಸ್ಯೆಗಳನ್ನು ಪರಿಹರಿಸದಿರಬಹುದು. ಆದರೆ ಇಂತಹ ಮನೋಭಾವ ಖಂಡಿತಾ ಸುಧಾರಣೆ ತರುತ್ತದೆ, ಪ್ರಭಾವ ಬೀರುತ್ತದೆ. 

ಪ್ರಶ್ನೆ:  ಜನಪರ ಯೋಜನೆಗಳು ಎಷ್ಟು ಜನಪರವಾಗಿವೆ? ಹೇಗಿರಬೇಕು?
ಮ.ಗೋ: ಗುಜರಾತಿನಲ್ಲಿ ಜಾರಿಯಲ್ಲಿರುವ 'ಚಿರಂಜೀವಿ' ಯೋಜನೆ ಬಗ್ಗೆ ಅಭ್ಯಸಿಸಲು ಗುಜರಾತಿಗೆ ಹೋಗಿದ್ದೆ. ಹಳ್ಳಿಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿರುತ್ತವೆ. ಅಗತ್ಯ ಸಿಬ್ಬಂದಿ, ತಜ್ಞರ ಕೊರತೆ ಇರುತ್ತದೆ. ಅದಕ್ಕಾಗಿ ಈ ಯೋಜನೆ ಜಾರಿಗೆ ತಂದರು. ೧೦೦ ಹೆರಿಗೆಗಳನ್ನು ಮಾಡಿದರೆ ೨ ಲಕ್ಷ ರೂ.ಗಳು, ಒಂದು ಹೆರಿಗೆಗೆ ೨೦೦೦ ರೂ.ಗಳು. ಯಾವುದೇ ಖಾಸಗಿ ತಜ್ಞ ವೈದ್ಯರು ಬಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಶೇ. ೩೦ ಅನ್ನು ಮುಂಗಡವಾಗಿ ಸಂಭಾವನೆ ಕೊಡುತ್ತಾರೆ. ಉಳಿದ ಮೊಬಲಗನ್ನು ೧೦೦ ಹೆರಿಗೆ ಮಾಡಿದ ನಂತರ ಕೊಡುತ್ತಾರೆ. ಯಾವುದೇ ಮಧ್ಯವರ್ತಿಗಳಿಲ್ಲ, ನಿಗದಿತ ಕಾರ್ಯಪದ್ಧತಿ ಇಲ್ಲ. ಗುಜರಾತಿನಲ್ಲಿ ಮಾಡಿರುವ ಈ ಯೋಜನೆ ಪ್ರಪಂಚದಲ್ಲಿ ಮಾಡಿರುವ  ಅತ್ಯುತ್ತಮ ಯೋಜನೆಗಳಲ್ಲಿ ಒಂದು ಎಂದು ಹೇಳಬಲ್ಲೆ. ಇದನ್ನು ನಾವೂ ಅಳವಡಿಸಿಕೊಂಡಿದ್ದೇವೆ. ಭಾರತದಲ್ಲಿನ ಮೂರು ಅತ್ಯುತ್ತಮ ಕಾರ್ಯಕ್ರಮಗಳನ್ನು ಸರ್ಕಾರದ ಪ್ಲಾನಿಂಗ್ ಕಮಿಷನ್ ಗುರ್ತಿಸಿದೆ. ಗುಜರಾತಿನ 'ಚಿರಂಜೀವಿ' ಯೋಜನೆ, ಮಧ್ಯಪ್ರದೇಶದ 'ಬಾಲಶಕ್ತಿ' (ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು) ಮತ್ತು ಛತ್ತೀಸಘಡದ ಪಡಿತರ ಸಾಮಗ್ರಿಗಳ ಸಾಗಾಣಿಕೆ ಪದ್ಧತಿ. ಈ ಮೂರೂ ರಾಜ್ಯಗಳು ಬಿಜೆಪಿ ಆಡಳಿತಕ್ಕೆ ಸೇರಿದ್ದು ಅನ್ನುವುದು ಬೇರೆ ವಿಷಯ. ಇದನ್ನು ಬೇರೆ ಯಾರೋ ಹೇಳಿರುವುದಲ್ಲ, ಪ್ಲಾನಿಂಗ್ ಕಮಿಷನ್ನಿನವರು ಹೇಳಿರುವುದು. ಜನಪರವಾಗಿ ಹೇಗೆ ಕಾರ್ಯ ಮಾಡಬಹುದು ಎಂಬುದಕ್ಕೆ ಇವು ಉದಾಹರಣೆಯಷ್ಟೆ. ಅವರುಗಳು ಚುನಾವಣೆಯಲ್ಲಿ ಗೆಲ್ಲುತ್ತಾರೋ, ಇಲ್ಲವೋ ಅದು ಮುಖ್ಯವಲ್ಲ. ಆದರೆ ಜನರ ಹೃದಯ ಮುಟ್ಟುವ ಕೆಲಸಗಳು ಇಂತಹವೇ.
     ಒಳ್ಳೆಯ ಯೋಜನೆಯ ಅನುಷ್ಠಾನಕ್ಕೆ ರಾಜಕೀಯ ಹಿನ್ನೆಲೆ ಬೇಕಿಲ್ಲ, ದೊಡ್ಡ ಮೆದುಳಿನ ಅವಶ್ಯಕತೆಯಿಲ್ಲ, ಮನಸ್ಸಿನ ಶಕ್ತಿ ಬೇಕು ಅಷ್ಟೆ. ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿದರೆ ವ್ಯವಸ್ಥೆ ಕುರಿತು ಜನರಿಗೆ ನಂಬಿಕೆ ಬರುತ್ತದೆ. ಕಳ್ಳತನ ಕಾನೂನು ಪ್ರಕಾರ ಮಾಡಬಹುದು ಅಂತ ನಿಯಮ ಮಾಡಿದೆವು ಅಂತ ಇಟ್ಕೊಳ್ಳಿ. ನಾನೂ ಕೂಡಾ ಆ ಕಾನೂನಿನ ಬಲಿಪಶು ಆಗಬಹುದು. ಭ್ರಷ್ಠಾಚಾರವನ್ನು ಅಧಿಕೃತಗೊಳಿಸಿದೆವು ಅಂತ ಇಟ್ಕೊಳ್ಳಿ. ಆಗ ನನ್ನಿಂದ ಕೂಡಾ ಬೇರೆಯವರು ಹಣ ಮಾಡಬಹುದು. ಜನರು ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳಬಾರದು. ವ್ಯವಸ್ಥಿತ ಹಿಂಸಾಚಾರವಿದೆ, ಅದು ಬೇರೆ ತರಹ. ಅಸಂಘಟಿತ ಹಿಂಸಾಚಾರ ಇದೆ. ವಿನಾಕಾರಣ ಕೊಲೆಗಳಾಗುತ್ತವೆ. ಒಬ್ಬ ವೃದ್ಧೆ ಮನೆಯಲ್ಲಿದ್ದಾಗ ಹೋಗುತ್ತಾರೆ, ಸ್ವಲ್ಪ ಹಣಕ್ಕಾಗಿ ಅವಳನ್ನು ಕೊಲೆ ಮಾಡುತ್ತಾರೆ. ವ್ಯವಸ್ಥೆ ಮೇಲೆ ನಂಬಿಕೆ ಹೋದಾಗ ಹೀಗೆ ಆಗುತ್ತದೆ. ಇದನ್ನು ರಾಜಕಾರಣಿಗಳು, ಅಧಿಕಾರಿಗಳು ತಿಳಿದುಕೊಳ್ಳಬೇಕು. ಇಂದು ನನಗೆ ಗನ್ ಮ್ಯಾನ್ ಇದ್ದಾರೆ, ನಾಳೆ? ನಾನೂ ಕೂಡ ರಕ್ಷಿತನಲ್ಲ. 

ಪ್ರಶ್ನೆ: ಈ ವ್ಯವಸ್ಥೆಯ ಸುಧಾರಣೆ ಸಾಧ್ಯವೇ?
ಮ.ಗೋ: ಜನರ ಜೀವನಮಟ್ಟದ ಸುಧಾರಣೆ ಆಗಬೇಕು, ಅವರಲ್ಲಿ ತಿಳುವಳಿಕೆ ಮೂಡಿಸಬೇಕು. ಭ್ರಷ್ಠಾಚಾರದ ವಿಷಯವನ್ನೇ ಮೂಲಭೂತವಾಗಿ ತೆಗೆದುಕೊಂಡರೆ ಜನರ ಬೆಂಬಲ ಸಿಗುವುದು ಕಡಿಮೆ. ಏಕೆಂದರೆ ಅದು ಅಷ್ಟೊಂದು ಹಾಸುಹೊಕ್ಕಾಗಿದೆ. ಮೇಲಿನ ಹಂತದ ಜನರು ಮಾತ್ರ ಭ್ರಷ್ಠಾಚಾರಿಗಳೆಂದು ಹೇಳಲಾಗುವುದಿಲ್ಲ. ಆಫೀಸಿನ ಒಳಗೆ ಹೋಗಬೇಕೆಂದರೆ ೫ ರೂ. ಕೊಡಬೇಕು. ಬಡವರು ಬಡವರನ್ನೇ ಶೋಷಿಸುವುದಿದೆ. ಭ್ರಷ್ಠಾಚಾರದಿಂದ ನಿಮ್ಮ ಜೀವನದ ಮೇಲೆ ಯಾವ ಪರಿಣಾಮ ಆಗುತ್ತಿದೆ ಎಂಬ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಜನರ ಆಂದೋಲನ ಆಗದೆ ಬದಲಾವಣೆ ಕಷ್ಟ. ಜನ ಕೇಳಬೇಕು. ನಮ್ಮೂರಿನಲ್ಲಿ ಶಾಲೆ ಇಲ್ಲ, ಆಸ್ಪತ್ರೆ ಇಲ್ಲ, ಆಸ್ಪತ್ರೆ ಇದ್ದರೂ ಔಷಧಿ ಇಲ್ಲ, ರಸ್ತೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಸೌಕರ್ಯ ಇಲ್ಲ, ಏಕೆ ಕೊಡುವುದಿಲ್ಲ ಅಂತ ಕೇಳಬೇಕು. ಮಾಹಿತಿ ಹಕ್ಕು ಕಾಯದೆ ಇದೆ. ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಇ-ಆಡಳಿತ ಅತ್ಯಂತ ಪರಿಣಾಮಕಾರಿ ವ್ಯವಸ್ಥೆ. ಸಮರ್ಪಕವಾಗಿ ಜಾರಿ ಆಗಬೇಕು. ಅತ್ಯಂತ ಭಯಂಕರವೆಂದರೆ ಮಾನಸಿಕ ಭ್ರಷ್ಠಾಚಾರ. ಜನ ಟೀಕಿಸುತ್ತಾರೆ, ಆದರೆ ಅವರ ಜೀವನವೇ ಸರಿ ಇರುವುದಿಲ್ಲ. ಸಮರ್ಥನೆ ಮಾಡಿಕೊಳ್ಳುವುದರಿಂದ ಪ್ರಯೋಜನ ಇಲ್ಲ. ಒಳ್ಳೆಯ ಸಂಗತಿಗಳನ್ನು ಅಭ್ಯಾಸ ಮಾಡಿದರೆ ಕೆಟ್ಟ ಸಂಗತಿಗಳು ಓಡಿ ಹೋಗುವುವು. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಜನರು ಅದನ್ನು ಟೀಕಿಸಿ ಪ್ರಯೋಜನ ಇಲ್ಲ. ಭ್ರಷ್ಠಾಚಾರ ವಿರೋಧಕ್ಕಿಂತ ಅಂದರೆ ಒಳ್ಳೆಯ ಆಡಳಿತದ ಪರ ಇರಬೇಕು. ಯುದ್ಧ ವಿರೋಧಕ್ಕಿಂತ ಶಾಂತಿಪರವಾಗಿರುವುದು ಮೇಲು. ನೆಗೆಟಿವ್ ವಿಷಯಗಳನ್ನು ಟೀಕಿಸುವುದಕ್ಕಿಂತ ಪಾಸಿಟಿವ್ ವಿಷಯಗಳನ್ನು ಪ್ರೋತ್ಸಾಹಿಸಬೇಕು.  

ಪ್ರಶ್ನೆ: ಒಳ್ಳೆಯ ಆಡಳಿತಕ್ಕಾಗಿ ಏನು ಮಾಡಬಹುದು?
ಮ.ಗೋ: ಸಾಕಷ್ಟು ಒಳ್ಳೆಯ ಕಾರ್ಯಕ್ರಮಗಳಿವೆ. ಅದನ್ನು ಕಾಂಗ್ರೆಸ್ ಕಾರ್ಯಕ್ರಮ, ಬಿಜೆಪಿ ಕಾರ್ಯಕ್ರಮ, ಕಮ್ಯುನಿಸ್ಟ್ ಕಾರ್ಯಕ್ರಮ, ಇತ್ಯಾದಿ ಹೇಳದೆ ಅದನ್ನು ಜನರ ಕಾರ್ಯಕ್ರಮ ಅಂತ ಜಾರಿಗೆ ತರಬೇಕು. ಒಳ್ಳೆಯ ಆಡಳಿತಕ್ಕಾಗಿ ಒಂದು ರಾಷ್ಟ್ರೀಯ ಚಾರ್ಟರ್ ಏಕೆ ತರಬಾರದು? ಅದಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರ ಸಹಿ ಪಡೆಯಬೇಕು. ಚುನಾವಣಾ ಕಮಿಷನ್ ಅದನ್ನು ಕಡ್ಡಾಯ ಮಾಡಲಿ. ಆರೋಗ್ಯ ಸುಧಾರಣೆ, ಸಾಕ್ಷರತೆ, ಶಿಕ್ಷಣ, ಮೂಲಭೂತ ಸೌಕರ್ಯಗಳು, ಇತ್ಯಾದಿ ಹಲವಾರು ಅಂಶಗಳನ್ನು ಇಟ್ಟುಕೊಂಡು ಒಂದು ಸಾಮಾನ್ಯ ಕಾರ್ಯಕ್ರಮ ರೂಪಿಸಬೇಕು. ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು ಅದಕ್ಕೆ ಸಹಿ ಮಾಡಬೇಕು. ಯಾವ ಪಕ್ಷ ಅಧಿಕಾರಕ್ಕೆ ಬರಲಿ, ಹೋಗಲಿ ಈ ಮೂಲಭೂತ ಅಂಶಗಳನ್ನು ಜಾರಿ ಮಾಡಲು ಬದ್ಧರಿರಬೇಕು. ಇದನ್ನು ಏಕೆ ಮಾಡಬಾರದು? ಹಳ್ಳಿಯಲ್ಲಿ ಒಬ್ಬ ತಾಯಿ ಸಾಯುತ್ತಿದ್ದಾಳೆ ಅಂತ ಇಟ್ಕೊಳ್ಳಿ. ಆಕೆ ಕಾಂಗ್ರೆಸ್ ತಾಯಿ, ಬಿಜೆಪಿ ತಾಯಿ, ಕಮ್ಯುನಿಸ್ಟ್ ತಾಯಿ ಅಂತ ನೋಡಬೇಕೇನು? ಆಕೆಯ ಜೀವ ರಕ್ಷಿಸಬೇಕಲ್ಲವೇ? ಒಂದು ಮಗು ಹುಟ್ಟಿದ ೬ ತಿಂಗಳ ಒಳಗೇ ಸತ್ತರೆ ನಮ್ಮ ಜವಾಬ್ದಾರಿ ಇಲ್ಲವೇ? ಶಾಲೆಗೆ ಹೋಗಬೇಕಾದ ಮಗು ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದರೆ ನಮ್ಮ ಹೊಣೆಯಿಲ್ಲವೇ? ಹೆಚ್ಚಿನ ಕಾಯಿಲೆಗಳು ಒಳ್ಳೆಯ ಕುಡಿಯುವ ನೀರು ಸಿಗದೇ ಬರುವಂತಹವು. ಒಳ್ಳೆಯ ಕುಡಿಯುವ ನೀರು ಕೊಡುವುದು ನಮ್ಮ ಕರ್ತವ್ಯವಲ್ಲವೇ? ನೈರ್ಮಲ್ಯದ ಸಮಸ್ಯೆ, ಇದನ್ನು ಜಾರಿ ಮಾಡಲು ದೊಡ್ಡ ಕ್ರಾಂತಿ ಬೇಕೇ? ಒಂದು ರಾಷ್ಟ್ರೀಯ ಕಾರ್ಯಕ್ರಮ ರೂಪಿಸಬೇಕು. 
     ದೇಶದಲ್ಲಿ ದುಡ್ಡಿಲ್ಲ ಅಂತ ಏನೂ ಇಲ್ಲ. ಈಗ ಏನಾಗಿದೆ ಅಂದರೆ ಈಗ ದ್ವಂದ್ವರೀತಿಯಲ್ಲಿ ವಿಚಾರ ಮಾಡುವುದನ್ನು ಕಾಣುತ್ತಿದ್ದೇವೆ. ಒಂದು ಕಡೆ ಹೇಳ್ತಾರೆ, ನಮ್ಮ ಹತ್ತಿರ ದುಡ್ಡು ಇಲ್ಲ, ಸರ್ಕಾರ ನಡೆಸುವುದಕ್ಕೆ ಆಗುವುದಿಲ್ಲ, ಆದ್ದರಿಂದ ಖಾಸಗೀಕರಣ ಮಾಡಬೇಕು ಅಂತ. ಇನ್ನೊಂದು ಕಡೆ ಸರ್ಕಾರ ಸರಿಯಿಲ್ಲ, ಅದರ ವಿರುದ್ಧ ಬಂದೂಕು ಮುಖಾಂತರ ಹೋರಾಟ ಮಾಡಬೇಕು ಅನ್ನುವವರೂ ಇದ್ದಾರೆ. ಉದಾರವಾದದ ಪರ, ಉಗ್ರಗಾಮಿಗಳ ಪರ ಮಾತನಾಡುವವರಿಗೆ ಅವಕಾಶವಾಗಿರುವುದೇ ಭ್ರಷ್ಠಾಚಾರದ ಕಾರಣದಿಂದ. ಜನರಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಅದನ್ನು ನಕ್ಸಲೀಯರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಿಯಮಗಳು, ಕಾನೂನುಗಳ ತೊಡಕಿದ್ದರೆ ನಿವಾರಿಸಿ ಎಲ್ಲಾ ಕೊನೆಯ ಮೂಲೆಗಳಲ್ಲಿರುವ ಜನರಿಗೂ ಮೂಲಭೂತ ಸೌಕರ್ಯಗಳು ದೊರೆಯುವಂತೆ ಮಾಡಿದರೆ ಈ ಸಮಸ್ಯೆ ತಾನಾಗಿ ಪರಿಹಾರವಾಗುತ್ತದೆ. ಆಗ ಜನರಿಗೆ ಅರ್ಥವಾಗುತ್ತದೆ, ಇವರೇ ನಮ್ಮ ರಕ್ಷಕರು ಅಂತ. ತಪ್ಪು ಮಾರ್ಗದರ್ಶನ ಪಡೆದ ಯುವಕರಿಗೆ ತಿಳಿವಳಿಕೆ ಕೊಡುವ ಕೆಲಸ ಆಗಬೇಕು. ಸರ್ಕಾರ ಇದೆ ಜನರಿಗೆ ನಂಬಿಕೆ ಬರುವಂತೆ ಮಾಡಬೇಕು. ಜನರಿಗೆ ಆ ನಂಬಿಕೆ ಹೋಗುತ್ತಿದೆ, ಅದು ಒಳ್ಳೆಯದಲ್ಲ. ಜನರಿಗೆ ನಂಬಿಕೆ ಹೋದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟ. ಖಾಸಗೀಕರಣ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ಅವು ಕೆಲವನ್ನು ಬಗೆಹರಿಸಬಹುದು. ಅದೇ ಸಮಯದಲ್ಲಿ ಹಿಂಸಾಚಾರ ಸಹ ಸಮಸ್ಯೆ ಬಗೆಹರಿಸುವುದಿಲ್ಲ. ಒಳ್ಳೆಯ ಆಡಳಿತ ಮಾತ್ರ ಸಮಸ್ಯೆ ಪರಿಹರಿಸಬಲ್ಲದು. ಒಳ್ಳೆಯ ಆಡಳಿತ, ಪ್ರಾಮಾಣಿಕತೆಯೇ ಪರಿಹಾರ. ಇದು ಆಗಬೇಕೆಂದರೆ ನಾನು ಪದೇ ಪದೇ ಒತ್ತಿ ಹೇಳುತ್ತಿರುವಂತೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಎಲ್ಲಾ ಪ್ರಜ್ಞಾವಂತರಿಂದ, ಅಧಿಕಾರಿಗಳಿಂದ, ರಾಜಕಾರಣಿಗಳಿಂದ ಆಗಬೇಕು.
     ಜಲಸಂವರ್ಧಿನಿ ಯೋಜನೆ ಕರ್ನಾಟಕದಲ್ಲಿ ಉದ್ಘಾಟನೆ ಮಾಡಿದ್ದವರು ಅಣ್ಣಾ ಹಜಾರೆ. ಎಸ್.ಎಮ್.ಕೃಷ್ಣರವರು ಆಗ ಮುಖ್ಯಮಂತ್ರಿ. ಅಣ್ಣಾ ಹಜಾರೆಯವರು ಮಾತನಾಡುತ್ತಾ "ಆಡಳಿತದಲ್ಲಿ ಜನರು ಪಾಲ್ಗೊಳ್ಳುವುದು ಅಂದರೆ ಏನು?" ಎಂದು ಪ್ರಶ್ನಿಸಿ ಅವರೇ ಉತ್ತರಿಸಿದ್ದರು, "ಆಡಳಿತದಲ್ಲಿ ಜನರು ಪಾಲ್ಗೊಳ್ಳುವುದು ಅಲ್ಲ, ಜನರ ಕಾರ್ಯಕ್ರಮದಲ್ಲಿ ಸರ್ಕಾರ ಪಾಲ್ಗೊಳ್ಳುವುದು ಅನ್ನಬೇಕು." ಇದು ದಾರ್ಶನಿಕರ ಚಿಂತನಾಧಾಟಿ. 
     ನಾವು ಜನರನ್ನು ನಂಬಬೇಕು. ವ್ಯವಸ್ಥೆಯನ್ನು ನಂಬುತ್ತೇವೆ. ಜನರನ್ನು ಅನುಮಾನಿಸುತ್ತೇವೆ. ಇದು ಬ್ರಿಟಿಷರ ಕಾಲೊನಿಯಲ್ ಮನೋಭಾವ. ಈ ಸಂಸ್ಕೃತಿ ಅವರ ಆಡಳಿತದ ಹ್ಯಾಂಗೋವರ್! ನಾವು ಜನರನ್ನು ನಂಬಬೇಕು. ವ್ಯವಸ್ಥೆಯನ್ನು ಅನುಮಾನಿಸಬೇಕು. ಕೆಲಸಗಳು ಸರಿಯಾಗಿ ಆಗುತ್ತೋ ಇಲ್ಲವೋ ಅಂತ ನೋಡಿಕೊಳ್ಳಬೇಕು. ಆಗದಿದ್ದಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಶ್ರೀರಂಗಪಟ್ಟಣ ತಾಲ್ಲೂಕಿನ ಹಳ್ಳಿಯೊಂದರಲ್ಲಿ ನಮ್ಮ ಕೆಲಸದ ಕುರಿತು ಹೇಳುತ್ತಿದ್ದಾಗ ಪ್ರೌಢ ಮಹಿಳೆಯೊಬರು, "ನೀವೇನೂ ದೊಡ್ಡ ಕೆಲಸ ಮಾಡುತ್ತಿಲ್ಲ. ಸಮಾಜದಿಂದ ನೀವು ಸಾಲ ತೆಗೆದುಕೊಂಡಿದ್ದೀರಿ. ಸಮಾಜದ ಸಹಾಯದಿಂದಲೇ ನೀವು ಈ ಹುದ್ದೆಗೆ ಬಂದಿದ್ದೀರಿ. ಈಗ ನೀವು ಬಡ್ಡಿ ಕಟ್ಟುತ್ತಿದ್ದೀರಿ, ಅಷ್ಟೆ. ಇನ್ನೂ ಅಸಲು ತೀರಿಸಬೇಕಿದೆ" ಎಂದಿದ್ದರು. ಎಷ್ಟು ಸತ್ಯ!! ಈ ಮಾತು ಸಮಾಜದ ಎಲ್ಲರಿಗೂ ಅನ್ವಯವಾಗುತ್ತದೆ, ಎಲ್ಲರೂ ಅನ್ವಯಿಸಿಕೊಳ್ಳಬೇಕು. ಭ್ರಷ್ಠಾಚಾರವನ್ನು ಒಳ್ಳೆಯ ಆಡಳಿತ ಮಾತ್ರ ಹಿಂದಿಕ್ಕಬಹುದು. ಒಳ್ಳೆಯ ಆಡಳಿತ ಬೇಕೆಂದರೆ ಜನರು ಜಾಗೃತರಾಗಿ ಸರಿಯಾಗಿ ಸರ್ಕಾರದ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆಯೇ ಎಂದು ಗಮನಿಸುತ್ತಿರಬೇಕು.

ಗುರುವಾರ, ಜನವರಿ 3, 2013

ಟಿವಿಯ ಪಲ್ಲವಿ ನೋಡುಗರ ಅನುಪಲ್ಲವಿ

     4-5 ವರ್ಷದ ಹೆಣ್ಣು ಮಗುವನ್ನು ಹೇಗೆ ಸಾಯಿಸಬೇಕು, ಯಾವ ರೀತಿ ಯೋಜನೆಗಳನ್ನು ಹಾಕಬೇಕು, ಅವಳಿಗೆ ಹಾವು ಕಚ್ಚಿದರೆ ಒಳ್ಳೆಯ ಚಿಕಿತ್ಸೆ ಕೊಡದೆ ಸಾಯಿಸಬೇಕೆಂದು ಡಾಕ್ಟರರಿಗೆ ಲಂಚ ಕೊಡಬೇಕೇ? ಅಲಮೈರಾದಲ್ಲಿ ತುರುಕಿ ಬೀಗ ಹಾಕಿ ಉಸಿರುಗಟ್ಟಿಸಿ ಸಾಯಿಸಬೇಕೇ? ಕಣ್ಣಾಮುಚ್ಚೆ ಆಟ ಆಡುವ ನೆಪದಲ್ಲಿ ಮಗುವಿಗೆ ಕಣ್ಣಿಗೆ ಬಟ್ಟೆ ಕಟ್ಟಿ ನೀರಿನ ಸಂಪಿನೊಳಗೆ ಮುಳುಗಿಸಬೇಕೇ? ಮಹಡಿಯ ಮೇಲಿನಿಂದ ದೂಕಬೇಕೇ?, , , , , ಇತ್ಯಾದಿ ಹಲವಾರು ಪ್ಲಾನುಗಳು ನಿಮಗೆ ಬೇಕೇ? ಸಾಯಿಸಿದರೂ ಅನುಮಾನ ಬರದಂತೆ ಹೇಗೆ ಸಾಯಿಸಬಹುದು? ಅದರಲ್ಲೂ ಮಗುವಿನ ಅಜ್ಜಿ, ಚಿಕ್ಕಪ್ಪ, ಅತ್ತೆ, ಹತ್ತಿರದ ಸಂಬಂಧಿಗಳು ಮಗುವನ್ನು ಸಾಯಿಸುವ ಯೋಚನೆಯಲ್ಲೇ ಸದಾ ಇರುವುದನ್ನು ಕಾಣಬೇಕೇ? ಹಾಗಾದರೆ ಸುವರ್ಣ ಚಾನೆಲ್ಲಿನಲ್ಲಿ ಪ್ರಸಾರವಾಗುತ್ತಿರುವ 'ಪಲ್ಲವಿ ಅನುಪಲ್ಲವಿ' ಧಾರಾವಾಹಿ ತಪ್ಪದೆ ನೋಡಿ. ನಿಮಗೂ ಇಂತಹ ಹಲವಾರು ಮನೆಹಾಳು ಐಡಿಯಾಗಳು ಬರಬಹುದು. ಈ ಧಾರಾವಾಹಿ ನಿಮಗೆ ಇಷ್ಟವಾದರೆ ಅದರ ಲೇಖಕರು, ಪಾತ್ರಧಾರಿಗಳು, ಚಾನೆಲ್ ಮಾಲಿಕರು, ಕಾರ್ಯಕ್ರಮ ನಿರ್ವಾಹಕರು, ಪ್ರಾಯೋಜಕರು,... ಎಲ್ಲರನ್ನೂ ಅಭಿನಂದಿಸಿರಿ. ಇದು ವಿಕೃತರ ಸೃಷ್ಟಿ ಎನ್ನಿಸಿದರೆ ಸಂಬಂಧಿಸಿದವರಿಗೆ ಧಿಕ್ಕಾರ-ಗಟ್ಟಿಧ್ವನಿಯ ಧಿಕ್ಕಾರ ಹೇಳಲು ಮರೆಯದಿರಿ.

     ಇದು ಫೇಸ್ ಬುಕ್ಕಿನಲ್ಲಿ ನಾನು ಹಂಚಿಕೊಂಡ ನನ್ನ ಅನಿಸಿಕೆ. ಇದಕ್ಕೆ ಬಂದ ಪ್ರತಿಕ್ರಿಯೆಗಳಿವು:

ಶಂಕರ ದೇವಾಡಿಗ ಕೆಂಚನೂರು, Vishwanatha Sharma, Vishwanatha Sharma and 12 others like this.
ಹೆಸರು ಶಿವಾನಂದ್ ಉಸಿರು ಕನ್ನಡ: ಈ ಹಾಳಾದ ಮದ್ಯಮಗಳಿಂದ ಒಳ್ಳೆಂದಕಿಂತ ಕೆಟ್ಟದ್ದೇ ಜಾಸ್ತಿ, ಇಲ್ಲಿ ಮಾನವೀಯ ಮೌಲ್ಯಗಳಿಗಿಂತ ಅವರ TRP ನೆ ಅವರಿಗೆ ಮುಕ್ಯ, ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಮಾದ್ಯಮಗಳಿಗೆ ಕಡಿವಾಣ ಹಾಕಬೇಕು
Tuesday at 3:29pm · Like · 1
Parthasarathy Narasingarao ದಿಕ್ಕಾರ !
Tuesday at 3:33pm · Unlike · 1
Adur Chandru ಯಾಕ್ ದೇವ್ರು ಇವತ್ತು ಭ್ರಷ್ಟರ ಬಣ್ಣ ಬಯಲು ಮಾಡ್ತಿರೋದು ಮಾದ್ಯಮ ಅಲ್ವ............ ಆದ್ರೂ ಸ್ವಲ್ಪ ಜಾಸ್ತಿ ಆಯ್ತು. ಇದಕ್ಕೆ ನಮ್ಮದು ವಿರೋದ ಇದೆ
Tuesday at 3:34pm · Unlike · 1
ಹೆಸರು ಶಿವಾನಂದ್ ಉಸಿರು ಕನ್ನಡ ಎಲ್ಲಾ ತರದಲ್ಲೂ ಕೆಟ್ಟದ್ದು ಅಂತಾ ಹೇಳ್ತಾ ಇಲ್ಲ, ಅವರು ಮುನ್ನುಗ್ಗುವ ಬರದಲ್ಲಿ ಮೌಲ್ಯಗಳನ್ನ ಮರಿತಾ ಇದ್ದಾರೆ , ಬ್ರಷ್ಟರ ಬಣ್ಣ ಬಯಲು ಮಾಡ್ತಾ ಜನರ ಮುಖಗಳಿಗೂ ಚೆನ್ನಾಗಿ ಬಣ್ಣ ಬಳಿತಿದಾರೆ,
Tuesday at 3:38pm · Unlike · 2
Kavi Nagaraj ಹೇಗೆ ಭ್ರಷ್ಠಾಚಾರ ಮಾಡಬೇಕು, ಹೇಗೆ ಅತ್ಯಾಚಾರ ಮಾಡಬೇಕು, ಹೇಗೆ ಕೊಲೆ ಮಾಡಬೇಕು, ಹೇಗೆ ಹುಟ್ಟಲಿರುವ ಮಗುವನ್ನು ಹುಟ್ಟುವ ಮೊದಲೇ ಸಾಯಿಸಬೇಕು, ಹೇಗೆ ಬಾಲ್ಯವಿವಾಹ ಮಾಡಬೇಕು, ಇತ್ಯಾದಿಗಳನ್ನು ತೊರಿಸಿಕೊಡುತ್ತಿರುವವರೂ ಆ ಮಾಧ್ಯಮಗಳೇ!!
Tuesday at 3:42pm · Like · 3
ಸತೀಶ್. ಎನ್ ನಾಸ ದೇಶದ ಇಂದಿನ ಸ್ಥಿತಿಗೆ ನೇರವಾಗಿ ಮಾಧ್ಯಮಗಳೇ ಹೊಣೆಗಾರರು
Tuesday at 4:16pm · Unlike · 2
Vasanth Kumar ಮಾನವೀಯ ಮೌಲ್ಯಗಳಿಲ್ಲದ... ತುಕ್ಕು ಹಿಡಿದ ಪ್ರಲಾಪಗಳು... ಈ ಧಾರಾವಾಹಿಗಳು..
Tuesday at 4:45pm · Edited · Unlike · 2
Dhanapala Nelavagilu naanu khandisuve.
Tuesday at 7:30pm via mobile · Unlike · 1
Hariharapura Sridhar ನಾಗರಾಜ್, ಇದು ನಿಮ್ಮ ಕಣ್ಣಿಗೆ ಹೇಗೆ ಬಿತ್ತು? ಛೇ! ನಮ್ಮ ತಾಯಂದಿರಿಗೆ ಏನು ಹೇಳೋಣ! ಪ್ರಸಾರಮಾಡುವವರಿಗೆ, ಅದನ್ನು ನೋಡುವವರಿಗೆ ಧಿಕ್ಕಾರವಿರಲಿ!!
Tuesday at 8:59pm · Unlike · 2
Gajanana Naik dikaara dikaara ..
Tuesday at 9:34pm · Unlike · 1
Hariharapura Sridhar ನನಗ್ಯಾಕೋ ನಮ್ಮ ತಾಯಂದಿರಮೇಲೆ ಬಲು ಬೇಸರವಾಗುತ್ತಿದೆ. ನಿಮಗೆ ಸಿಟ್ಟು ಬರುತ್ತೆ, ಅಲ್ವಾ? ನಾನಂತೂ ಹತ್ತಾರು ಮನೆಗಳಲ್ಲಿ ತಾಯಂದಿರನ್ನು ನೋಡಿ ಬಲು ನೊಂದುಕೊಂಡಿದ್ದೇನೆ. ದಿನಕ್ಕೆ ನಾಲ್ಕಾರು ದಾರಾವಾಹಿಗಳನ್ನು ಅವರು ನೋಡಲೇ ಬೇಕು. ಅದೇ ದಾರವಾಹಿಯ ಸಮಯದಲ್ಲಿ ಯಾವುದಾದರೂ ಮುಖ್ಯ ಸಮಾಚಾರಗಳು ಪ್ರಕಟವಾಗುತ್ತಿದ್ದರೂ ಸುದ್ಧಿ ನೋಡಲು ಅವಕಾಶವಿಲ್ಲ. ಒಂದು ವೇಳೆ ಸುದ್ಧಿ ನೋಡಬೇಕೆಂದು ನೀವು ಚಾನಲ್ ಬದಲಿಸದರೆ ಕಥೆ ಮುಗಿದಂತೆಯೇ! 
"ಏನೋ ಬೇಜಾರು, ಅಂತಾ ದಾರಾವಾಹಿ ನೋಡ್ತಾರೆ, ಅವರಿಗ್ಯಾಕ್ರೀ ತೊಂದರೆ ಕೊಡ್ತೀರಿ? "......ದಾರಾವಾಹಿಯನ್ನು ನೋಡುವ ತಾಯಂದಿರ ಹೆಣ್ಣುಮಕ್ಕಳಿರ್ತಾರಲ್ಲಾ ಅಥವಾ ಸೊಸೆ ಇರ್ತಾರಲ್ಲಾ, ಅವರು ಅವರ ಪತಿಗೆ ಹೇಳುವ ಮಾತಿದು.
ಎಷ್ಟೋ ಮನೆಯಲ್ಲಿ ಈ ದಾರಾವಾಹಿಯನ್ನು ನೋಡಲು ಅವಕಾಶವಿಲ್ಲವೆಂದು ಎಲ್ಲಿ ದಾರಾವಾಹಿಯನ್ನು ನೋ ಡಲು ಯಾರೂ ಅಡ್ಡಿಮಾಡುವುದಿಲ್ಲವೋ ಅಂತಹಾ ಮಕ್ಕಳ ಮನೆಗೆ ಅವರ ತಾಯಂದಿರು ಹೋಗಿಬಿಡ್ತಾರೆ!!
ಹೌದು, ವಯಸ್ಸು ಅರವತ್ತು-ಎಪ್ಪತ್ತು ಆಗಿರುವ ತಾಯಂದಿರ ಕಥೆ ಇದು.
ಹೋಗಲೀ ನೋಡುವ ದಾರಾವಾಹಿಯ ಕಥೆ ಏನು ಗೊತ್ತಾ? ಗಂಡನಿಗೆ ಮೋಸ ಮಾಡಿ ಪ್ರಿಯಕರನ ಜೊತೆ ಮೋಜು ಮಾಡುವ ಹೆಣ್ಣಿನ ದೃಶ್ಯ! ಪ್ರಿಯಕರನಿಗಾಗಿ ಗಂಡನನ್ನು ಕೊಲೆಮಾಡಲು ಸಂಚು ರೂಪಿಸುವ ದೃಶ್ಯ! ತಮ್ಮ ಕಛೇರಿಯಲ್ಲಿ ಕೆಲಸಮಾಡುವ ಹುಡುಗಿರ ಜೊತೆ ಚೆಲ್ಲಾಟ‘ವಾಡುವ ಗೃಹಸ್ಥ ಭೂಪರು! 
ಹುಡುಗಿಯರ ರೌಢಿಸಮ್ !!
ಅಬ್ಭಬ್ಭಾ!! ನಿಜವಾಗಿ ಹೇಳ್ರೀ ನೀವು ನೋಡುವ ದಾರಾವಾಹಿಗಳಲ್ಲಿ ಮೇಲಿನ ಯಾವುದಾದರೊಂದು ದೃಶ್ಯ ಇಲ್ಲದೆ ದಾರಾವಾಹಿ ನಡೆಯುತ್ತದೆಯೇ? ಇಂತಹಾ ದಾರಾವಾಹಿಗಳನ್ನು ನೋಡುತ್ತಾ ಬಹುಪಾಲು ಕಾಲಕಳೆಯುವ ನಮ್ಮ ತಾಯಂದಿರನ್ನು ನೋಡಿದಾಗ ಅವರ ಇಂತಹ ಸ್ಥಿತಿ ಕಂಡು ಮರುಕ ಹುಟ್ಟುವುದಿಲ್ಲವೇ?
ಟಿ.ವಿ ಯಲ್ಲಿ ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳು ನಡೆಯುವುದಿಲ್ಲವೇ? ಹತ್ತಾರು ಚಾನಲ್ ಗಳಲ್ಲಿ ನಿಮ್ಮ ಮನಸ್ಸಿಗೆ ಮುದನೀಡುವ, ನಿಮ್ಮ ಅರಿವನ್ನು ಹೆಚ್ಚಿಸುವ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅನುಕೂಲವಾಗಬಲ್ಲ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಆದರೆ ಅವೆಲ್ಲಾ ಇಂತಹ ದಾರಾವಾಹಿಗಳನ್ನು ನೋಡುವವರಿಗೆ ಹಿಡಿಸದು, ಅಷ್ಟೇಕೆ, ಮಕ್ಕಳು ನೋಡಬಹುದಾದ ಕಾರ್ಯಕ್ರಮಗಳನ್ನು ಮಕ್ಕಳು ನೋಡುತ್ತಿದ್ದರೆ, ನಿಮಗೇನೂ ಕೆಲಸ ವಿಲ್ಲವೇನ್ರೋ, ಓದಿಕೊಳ್ಳಿ, ಎಂದು ಮಕ್ಕಳನ್ನು ಬೈದು, ಈ ತಾಯಂದಿರು ಮಾಡುವ ಕೆಲಸವೇನು ಗೊತ್ತಾ? ಮನೆಹಾಳುಮಾಡುವ ದಾರಾವಾಹಿಗಳನ್ನು ನೋಡುವುದೇ ಆಗಿದೆ. ಅಸಭ್ಯ ದೃಶ್ಯಗಳನ್ನು ನೋಡುವವರಲ್ಲಿ ಅತಿ ಹೆಚ್ಚಿನವರು ಅರವತ್ತು ಎಪ್ಪತ್ತು ವರ್ಷದ ತಾಯಂದಿರು, ಎಂಬ ನಾನು ಕಂಡ ಸತ್ಯವನ್ನು ಅತ್ಯಂತ ನೋವಿನಿಂದ ಹೇಳ ಬಯಸುತ್ತೇನೆ, ಅಲ್ಲದೆ ವಿಚಾರ ಮಾಡಲು ಸಮರ್ಥರಾದವರು ಅವರ ವಯಸ್ಸು ಎಷ್ಟೇ ಇರಲಿ, ಕೆಟ್ಟ ದಾರಾವಾಹಿಗಳನ್ನು ನೋಡುವವರಿಗೆ ಅವರು ಹಿರಿಯರಾದರೂ ಚಿಂತೆಇಲ್ಲ ತಿಳಿ ಹೇಳಲೇ ಬೇಕು. ದೂರ ದರ್ಶನ ನೋಡಲು ಒಂದು ನೀತಿ ಸಂಹಿತೆಯನ್ನು ರೂಪಿಸಿಕೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ.
ನನ್ನ ಮಾತಿಗೆ ಹಲವರು ಆಕ್ಷೇಪಣೆ ಮಾಡುತ್ತಾರೆಂಬ ಅರಿವು ನನಗಿದೆ." ಕೇವಲ ಹೆಂಗಸರು ನಿಮ್ಮ ಕಣ್ಣಿಗೆ ಬಿದ್ರಾ? ಗಂಡಸರು ನೋಡುವುದಿಲ್ಲವೇ? ಅನ್ನೋ ಮಾತು ಬಂದೇ ಬರುತ್ತೆ. ಹೌದು, ಗಂಡಸರು ನೋಡಿದರೆ ಅದೂ ತಪ್ಪೇ. ಆದರೆ ನನ್ನ ಕಣ್ಣಿಗೆ ತಾಯಂದಿರ ಸಂಖ್ಯೆ ಹೆಚ್ಚು ಕಂಡಿದೆ. ಅವರಲ್ಲಿ ಕ್ಷಮೆ ಕೋರುತ್ತಾ " ಅಮ್ಮಾ, ನೀವು ಒಂದು ಮನೆಯ ಹಿರಿಯರು, ಮನೆಯಲ್ಲಿ ಕೆಲವರಿಗೆ ತಾಯಿ, ಕೆಲವರಿಗೆ ಅತ್ತೆ, ಕೆಲವರಿಗೆ ಅಜ್ಜಿ.....ಆದರೆ ನೀವು ಎಲ್ಲರಿಗೂ ದೇವರು. ನೀವು ಸಮಾಜವನ್ನು ತಿದ್ದಬಲ್ಲಿರಿ, ನಿಮ್ಮನ್ನು ತಿದ್ದುವ ಹೀನ ಸ್ಥಿತಿ ಈ ಸಮಾಜಕ್ಕೆ ಬಾರದಿರಲೆಂದೇ ಭಗವಂತನಲ್ಲಿ ನನ್ನ ಪ್ರಾರ್ಥನೆ.
Tuesday at 9:52pm · Unlike · 3
Ramaprasad KV   
Tuesday at 11:29pm · Like
Sunil Agadi ಕೆಲವೊಂದು ಧಾರಾವಾಹಿಗಳು ಒಳ್ಳೆಯ ಸಂದೇಶಕಿಂತ ಜನರನ್ನು ಹಾದಿ ತಪ್ಪಿಸುವುದೇ ಜಾಸ್ತಿ ಹಾಗಾಗಿ ಜನರೇ ಇಂತಹ ಕಾರ್ಯಕ್ರಮಗಳನ್ನು ನೋಡಬೇಕೋ ಬೇಡೋ ಎಂದು ನಿರ್ಧಾರ ಮಾಡಬೇಕು. 
Yesterday at 7:33am · Unlike · 2
Kavi Nagaraj ಶ್ರೀಧರ ಮತ್ತು ಮಿತ್ರರ ಅಭಿಪ್ರಾಯಗಳು ಸರಿಯಾಗಿವೆ. ಇಂತಹ ಕಥೆಗಳನ್ನು ಬರೆಯುವ 'ಸಾಯಿತಿ'ಗಳನ್ನು, ಅದನ್ನು ಪ್ರಸಾರ ಮಾಡುವ ಚಾನೆಲ್ಲುಗಳನ್ನು ಖಂಡಿಸುವ ಪ್ರವೃತ್ತಿ ಬೆಳೆಸಿಕೊಳ್ಳೋಣ! ಸದ್ಯಕ್ಕೆ ಅದೊಂದೇ ಕಾಣಿಸುತ್ತಿರುವ ದಾರಿ!!
Yesterday at 9:31am · Like
Kavi Nagaraj ಫೇಸ್ ಬುಕ್ಕಿನಲ್ಲಿ ಸುವರ್ಣ ಚಾನೆಲ್ಲಿನ ಗುಂಪು ಇದೆ. ಅದರಲ್ಲಿ ನಿಮ್ಮ ಸಂದೇಶ (message) ದಾಖಲಿಸಿ.
Yesterday at 10:30am · Like · 1
Vasudevarao Rao These channels should be bombed to smithereens.
17 hours ago · Like
Prasad Kalladka ಡಬ್ಬ ದಾರಾವಾಹಿಗಳು
8 hours ago via mobile · Like
Kavi Nagaraj ಮುಂದುವರೆದ ಧಾರಾವಾಹಿಯ ಕಂತಿನಲ್ಲಿ ಆ ಎಳೆಯ ಮಗುವನ್ನು ಅಪಹರಿಸಿ ಕೊಲೆ ಮಾಡಲು ಸುಪಾರಿ ಕೊಡಿಸಿದ್ದಾರೆ!! ವಿಕೃತಾಧಮರು!!
12 minutes ago · Like · 1
Vishwamitra KN hennu makkalannu saayisuvavarige nanna dikkaara ide
10 hours ago · Unlike · 
·         anthoshkumar Lm ನನ್ನದೂ ಧಿಕ್ಕಾರವಿದೆ ನಾಗರಾಜ್ ಸರ್. ಇವತ್ತಿನ ಎಷ್ಟೋ ಅಪರಾಧಗಳಿಗೆ ಕಾರಣವಾಗುತ್ತಿರುವುದು ದೃಶ್ಯ ಮಾಧ್ಯಮದ "ಪಾಠ"ದಿಂದಾಗಿಯೇ!!
17 hours ago · Like      

Chandrashekhar Laxmeshwar Nannadu ondu Dikkaara...serial na srishtikartarige..

Bande Raja Mouni Kavi karmashesha

Parvathi Mahadev Serials galalli baree asooye hotteuri dwesha hagethana kuhaka ivugalanne hecchu doddadaagi prathibimbisi samaajavanna haalu maaduva sandeshave athiyaagiruttade. nijavaagi dhikkaare helabeku.. 

Mamatha Keelar ಆದರೂ ಜನರು ನೋಡ್ತಾರಲ್ಲ ಎಲ್ಲ ಕೆಲಸ ಬಿಟ್ಟು...

Girish Rv dharedra aa directru yavat saytano

16 hours ago via mobile · Like