ಅವಸರ ಅವಸರವಾಗಿ ಹೋಗುತ್ತಿದ್ದ ಮಡ್ಡಿಯನ್ನು ತಡೆದು ಮಂಕ ಕೇಳಿದ:
'ಯಾಕೋ ಇಷ್ಟೊಂದು ಅರ್ಜೆಂಟಾಗಿ ಹೋಗುತ್ತಿದ್ದೀಯಾ?'
ಮಡ್ಡಿ: ನಿನಗೆ ಗೊತ್ತಿಲ್ಲವಾ? ಸ್ವಾಮಿ ಸತ್ಯಾನಂದರ ಶಿಷ್ಯ ಸತ್ಯಪ್ರೇಮಾನಂದ ಬಂದಿದ್ದಾರೆ. ಆ ಮೂಲೆಮನೆ ಗುಂಡಣ್ಣನ ಮನೇಲಿ ಉಳಕೊಂಡಿದಾರೆ. ಇವತ್ತು ಸಾಯಂಕಾಲ ಸತ್ಯೋಪದೇಶ ಇದೆ. ಈಗ 'ಸಂದೇಹಕ್ಕೆ ಸಮಾಧಾನ' ಅಂತ ಕಾರ್ಯಕ್ರಮ ಇದೆ. ಅವರನ್ನು ಕಂಡು ನಮಸ್ಕಾರ ಮಾಡಿ, ಕೆಲವು ಅನುಮಾನ ಪರಿಹಾರ ಮಾಡಿಕೊಳ್ಳೋಣ ಅಂತ ಹೋಗ್ತಾ ಇದೀನಿ. ಬರ್ತೀಯಾ? ಅವರು ಇದೇ ಊರಿನವರು ಕಣೋ.
ಮಂಕ: ಈ ಊರಿನವರಾ? ಯಾರು?
ಮಡ್ಡಿ: ಅದೇ, ತಿಕ್ಕಲು ಮೇಷ್ಟ್ರು ಶೀನ ಇದ್ದರಲ್ಲೋ, ಅವರ ಮಗ ಗೋವಿಂದ. ಅವರೇ ಈಗ ಸತ್ಯಾನಂದರ ಶಿಷ್ಯ ಸತ್ಯಪ್ರೇಮಾನಂದ.
ಮಂಕ: ಗೋವಿಂದನಾ? ಭಗ್ನಪ್ರೇಮಿ? ಆ ಉಂಡಾಡಿಗುಂಡನ್ನ ಯಾವ ಹುಡುಗಿ ಒಪ್ತಿದ್ದಳು ಹೇಳು. ಈಗ ಸತ್ಯಪ್ರೇಮಿ ಆಗಿದಾನಾ?
ಮಡ್ಡಿ: ಏಯ್, ಅವರ ಬಗ್ಗೆ ಹಗುರವಾಗಿ ಮಾತಾಡಬೇಡ ಕಣೋ. ಅವರನ್ನು ನೋಡಿದರೇ ನಮಸ್ಕಾರ ಮಾಡಬೇಕು ಅನ್ಸುತ್ತೆ. ಏನ್ ಕಳೆ ಅವರ ಮುಖದ ಮೇಲೆ! ಸತ್ಯಪ್ರೇಮಾನಂದ ಅಂದರೆ ಅವರೇನು ಸಾಮಾನ್ಯರಲ್ಲ. ಸತ್ಯ, ಸತ್ಯ ಅಂತ ಜಪ ಮಾಡ್ತಾ ಇರ್ತಾರೆ. ಊರೂರು ತಿರುಗಿ ಸತ್ಯೋಪದೇಶ ಮಾಡ್ತಾರೆ.
ಮಂಕ: 'ಸಂದೇಹಕ್ಕೆ ಸಮಾಧಾನ' ಕಾರ್ಯಕ್ರಮ ಅಂದೆಯಾ? ನನಗೆ ಅವರ ಬಗ್ಗೇನೇ ಸಂದೇಹವಿದೆ. ನಡಿ, ನಾನೂ ಬರ್ತೀನಿ. ಮುಠ್ಠಾಳ, ಮೂಢರನ್ನೂ ಕರಕೊಂಡು ಹೋಗೋಣ.
ಮಂಕ, ಮಡ್ಡಿ, ಮುಠ್ಠಾಳ, ಮೂಢರು ಗರಿ ಗರಿ ಬಟ್ಟೆ ಧರಿಸಿ ಮೂಲೆಮನೆ ಗುಂಡಣ್ಣನ ಮನೆಯ ಹತ್ತಿರ ಹೋದರೆ ಅಲ್ಲಿ ಜನವೋ ಜನ. ಹಣ್ಣು-ಹಂಪಲು ತಟ್ಟೆ ಹಿಡಿದುಕೊಂಡು ಸ್ವಾಮಿಗಳಿಗೆ ಅರ್ಪಿಸಿ ಆಶೀರ್ವಾದ ಪಡೆಯಲು ದೊಡ್ಡ ಕ್ಯೂ ಇತ್ತು. ಧ್ವನಿವರ್ಧಕದಲ್ಲಿ ಗುಂಡಣ್ಣನ ಧ್ವನಿ ಕೇಳಿಸುತ್ತಿತ್ತು: "ಈಗ ಕಾರ್ಯಕ್ರಮ ಪ್ರಾರಂಭ ಆಗುತ್ತೆ. ನಮಸ್ಕಾರ ಮಾಡುವವರು ಕಾರ್ಯಕ್ರಮ ಆದ ಮೇಲೆ ಆಶೀರ್ವಾದ ಪಡೆಯಬಹುದು. ಈಗ ಎಲ್ಲರೂ ಹಾಲಿನಲ್ಲಿ ಕುಳಿತುಕೊಳ್ಳಬೇಕು." ನಾಲ್ವರು ಮಿತ್ರರು ಮುಂಭಾಗದಲ್ಲಿ ಜಾಗ ಹಿಡಿದು ಕುಳಿತರು. ದೊಡ್ಡ ಮೆತ್ತನೆಯ ಕುರ್ಚಿಯ ಮೇಲೆ ಕುಳಿತಿದ್ದರು ಗೋವಿಂದ -ಅಲ್ಲಲ್ಲ ಸತ್ಯಪ್ರೇಮಾನಂದ! ಹಿಂಭಾಗದಲ್ಲಿ "ಸತ್ಯವನ್ನೇ ಹೇಳುತ್ತೇನೆ, ನಾನು ಹೇಳಿದ್ದೇ ಸತ್ಯ" ಎಂಬ ಫಲಕ ತೂಗುಹಾಕಿತ್ತು. ಕುರ್ಚಿಯ ಪಕ್ಕದಲ್ಲಿ ಭಕ್ತರು ಹಾಕಿದ್ದ ಹಾರಗಳ ರಾಶಿಯೇ ಇತ್ತು. ಇನ್ನೊಂದು ಮೂಲೆಯಲ್ಲಿ ಹಣ್ಣಿನ ಅಂಗಡಿಯಲ್ಲಿ ಇಡಬಹುದಾದಷ್ಟು ಹಣ್ಣುಗಳಿದ್ದವು. ಗುಂಡಣ್ಣ, "ಗುರುಗಳು ನಮ್ಮ ಊರಿಗೆ ಬಂದಿರುವುದು ನಮ್ಮ ಸೌಭಾಗ್ಯ. ಹೆಸರಿಗೆ ತಕ್ಕಂತೆ ಅವರು ಸತ್ಯವನ್ನು ಎಷ್ಟು ಪ್ರೇಮಿಸುತ್ತಾರೆಂದರೆ ಅಷ್ಟು ಪ್ರೇಮಿಸುತ್ತಾರೆ. ಅದಕ್ಕೇ ಅವರ ಗುರುಗಳು ಅವರಿಗೆ ಈ ಹೆಸರಿಟ್ಟಿದ್ದಾರೆ. ಬಂದಿರುವ ಭಕ್ತರು ತಮ್ಮ ಅನುಮಾನಗಳಿದ್ದರೆ ಹೇಳಿಕೊಂಡು ಅವರಿಂದ ಪರಿಹರಿಸಿಕೊಳ್ಳಬಹುದು. ಸಾಯಂಕಾಲ ಅವರು ಸತ್ಯೋಪದೇಶ ಮಾಡುತ್ತಾರೆ. ಆಗಲೂ ಎಲ್ಲರೂ ಬಂದು ಆಶೀರ್ವಾದ ಪಡೆಯಬೇಕು" ಎಂದು ಭಕ್ತಿಯಿಂದ ಗುರುಗಳ ಕಾಲಿಗೆ ಬಿದ್ದು, ಪಕ್ಕದಲ್ಲಿ ಕುಳಿತುಕೊಳ್ಳುವಾಗ ಜಮಖಾನ ಕಾಲಿಗೆ ತೊಡರಿ ಕುಕ್ಕರಿಸಿ ಕುಳಿತ. ಹಿಂಬಾಲಿಸುವ ಜನರೇ ಜಾಸ್ತಿ ಇದ್ದದ್ದರಿಂದ ಮೊದಲ ಪ್ರಶ್ನೆ ಕೇಳಲು ಯಾರೂ ಮುಂದಾಗಲಿಲ್ಲ. ಮಂಕನೇ ಮೊದಲಿಗೆ ಎದ್ದು ನಿಂತು ಕೇಳಿದ:
"ಗುರುಗಳೇ, ಸತ್ಯ ಹೇಳಬೇಕು ನಿಜ. ಆದರೆ ಸಮಯ, ಸಂದರ್ಭ ನೋಡಿ ಹೇಳಬೇಕು, ಅಲ್ಲವೇ?"
ಸತ್ಯ: ಸತ್ಯ ಹೇಳುವುದಕ್ಕೆ ಹೆದರಬಾರದು. ಎಂತಹ ಸಂದರ್ಭದಲ್ಲೂ ಸತ್ಯವನ್ನೇ ಹೇಳಬೇಕು.
ಮಂಕ: ಸ್ವಾಮಿ, ಒಬ್ಬ ಕಳ್ಳತನ ಮಾಡಬೇಕು ಅಂತ ಮಧ್ಯರಾತ್ರೀಲಿ ಹೋಗ್ತಾ ಇದ್ದಾಗ ಬೀಟ್ ಪೋಲಿಸ್ ಕೈಗೆ ಸಿಕ್ಕಿ, ಅವನನ್ನು ಎಲ್ಲಿಗೆ ಹೋಗ್ತಾ ಇದೀಯಾ ಅಂತ ಕೇಳಿದರೆ 'ಕಳ್ಳತನ ಮಾಡಕ್ಕೆ' ಅಂತ ಹೇಳಿದರೆ ಅವನನ್ನು ಸೀದಾ ಪೋಲಿಸ್ ಠಾಣೆಗೆ ಎಳಕೊಂಡು ಹೋಗಲ್ವೇ? ಅದಕ್ಕೇ ಸಮಯ ನೋಡಿ ಸತ್ಯ ಹೇಳಬೇಕು ಅಂತ ನಾನು ಹೇಳಿದ್ದು.
ಸತ್ಯ: ಶಿಷ್ಯಾ, ಅವನು ಕಳ್ಳತನ ಮಾಡಕ್ಕೆ ಅಂತ ನಿಜ ಹೇಳಿದ್ರೆ ತಮಾಷೆ ಮಾಡ್ತಾ ಇದಾನೆ ಅಂದುಕೊಂಡು ಬಿಟ್ಟು ಕಳಿಸುತ್ತಾರೆ. ಮನೇಗೆ ಹೋಗ್ತಾ ಇದೀನಿ ಅಂತ ಸುಳ್ಳು ಹೇಳಿದ್ರೆ, ಪೋಲಿಸ್ನೋನು ನಂಬದೆ ಕಳ್ಳತನ ಮಾಡಕ್ಕೆ ಹೋಗ್ತಾ ಇದೀಯ ಅಂತ ದಬಾಯಿಸಿ ಎಳಕೊಂಡು ಹೋಗ್ತಾನೆ.
ಮೂಢ: ಸತ್ಯ ಹೇಳೋದರಿಂದ ಇನ್ನೊಬ್ಬರಿಗೆ ತೊಂದರೆ ಆಗುತ್ತೆ, ಅವರ ಮನಸ್ಸಿಗೆ ನೋವಾಗುತ್ತೆ ಅನ್ನೋದಾದರೆ?
ಸತ್ಯ: ಸತ್ಯ, ಸತ್ಯ, ಸತ್ಯ. ಅದೇ ಮುಖ್ಯ. ಅದರಿಂದ ಯಾರು ಸತ್ತರೂ ಪರವಾಗಿಲ್ಲ, ಅತ್ತರೂ ಪರವಾಗಿಲ್ಲ. ನಾನು ಸತ್ಯದೀಕ್ಷೆ ಪಡೆಯಲು ಕಾರಣ ಆದ ಘಟನೆ ಬಗ್ಗೆ ಹೇಳುವೆ. ಒಂದು ದಿನ ರಾತ್ರಿ ಸುಮಾರು ೧೧ ಗಂಟೆ ಇರಬಹುದು. ಯಾರೋ ಒಬ್ಬರು ನಮ್ಮ ಮನೆ ಬಾಗಿಲು ಬಡಿದರು. ಬಾಗಿಲು ತೆಗೆದು ನೋಡಿದರೆ ಒಬ್ಬ ವ್ಯಕ್ತಿ 'ನನ್ನನ್ನು ಇಬ್ಬರು ಅಟ್ಟಿಸಿಕೊಂಡು ಬರ್ತಾ ಇದಾರೆ. ದಯವಿಟ್ಟು ಸ್ವಲ್ಪ ಹೊತ್ತು ನಿಮ್ಮ ಮನೆಯಲ್ಲಿ ಅಡಗಿಕೊಂಡಿರಲು ಅವಕಾಶ ಕೊಡಿ' ಅಂತ ಕೇಳಿದರು. ನಾನು ಅವರನ್ನು ಒಳಕ್ಕೆ ಕರೆದುಕೊಂಡು ಬಾಗಿಲು ಹಾಕಿದೆ. ಐದೇ ನಿಮಿಷದಲ್ಲಿ ಮತ್ತೆ ಬಾಗಿಲು ಬಡಿದ ಸದ್ದು ಕೇಳಿ ಬಾಗಿಲು ತೆಗೆದರೆ, ಇಬ್ಬರು 'ಇಲ್ಲಿಗೆ ಹಳದಿ ಷರ್ಟು ಹಾಕಿಕೊಂಡೋರು ಒಬ್ಬರು ಬಂದರಾ?' ಅಂತ ಕೇಳಿದರು. ಒಳಗೆ ಇದ್ದ ವ್ಯಕ್ತಿ ಸನ್ನೆ ಮಾಡಿ ಹೇಳಬೇಡಿ ಅಂದರೂ ಸತ್ಯ ಹೇಳಬೇಕು ಅನ್ನುವ ನನ್ನ ತತ್ವಕ್ಕೆ ಬದ್ಧನಾಗಿ ಅವನು ಇರುವ ವಿಷಯ ಹೇಳಿದೆ. ಅವರು ಒಳಕ್ಕೆ ನುಗ್ಗಿದವರೇ ಹಳದಿ ಷರ್ಟಿನವನನ್ನು ಹಿಡಿದು ಚಚ್ಚಿ ಅವನ ಜೇಬಿನಲ್ಲಿದ್ದ ಹಣ, ಹಾಕಿಕೊಂಡಿದ್ದ ಉಂಗುರ, ಸರಗಳನ್ನೂ ಕಸಿದು ಓಡಿಹೋದರು. ಆಮೇಲೆ ಹಳದಿ ಷರ್ಟಿನವನು ನನ್ನನ್ನು ಬಾಯಿಗೆ ಬಂದಂತೆ ಬೈದು ಹೋದ. ಮಾರನೆಯ ದಿನ ಕೆಲವರು ಅವನೊಂದಿಗೆ ಬಂದು ನನಗೆ ಹಿಗ್ಗಾಮುಗ್ಗಾ ಹೊಡೆದರು. ನಾನು ಒಂದು ವಾರ ಆಸ್ಪತ್ರೆಯಲ್ಲಿರಬೇಕಾಯಿತು. ಆಮೇಲೆ ನಾನು ಮಾಡಿದ ಮೊದಲ ಕೆಲಸ ಅಂದರೆ ಸ್ವಾಮಿ ಸತ್ಯಾನಂದರನ್ನು ಕಂಡು ದೀಕ್ಷೆ ಪಡೆದು ಅವರ ಮಠದಲ್ಲೇ ಉಳಿದದ್ದು. ಅಲ್ಲಿ ಭದ್ರವಾದ ರಕ್ಷಣೆ ಇರುವುದರಿಂದ ಆಮೇಲೆ ನಾನು ನಿರ್ಭಯವಾಗಿ ಸತ್ಯ ಹೇಳುವ ಕೆಲಸ ಮುಂದುವರೆಸಿಕೊಂಡು ಬಂದಿದ್ದೇನೆ.
ಮುಠ್ಠಾಳ: ಗುರುಗಳೇ, ಅಪ್ರಿಯವಾದ ಸತ್ಯ ಹೇಳಬೇಡಿ ಅಂತ ಹೇಳ್ತಾರೆ. ನೀವು ನೋಡಿದರೆ ಹೀಗೆ ಹೇಳ್ತೀರಿ.
ಸತ್ಯ: ಹಾಗೆ ಹೇಳುವವರೆಲ್ಲಾ ಮೂರ್ಖರು.
ಮಡ್ಡಿ: ಕೋರ್ಟಿನಲ್ಲಿ ಪ್ರಮಾಣ ಮಾಡಿಸ್ತಾರೆ, 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಅಂತ. ಆದರೆ ಲಾಯರ್, 'ನಾನು ಹೇಳಿಕೊಟ್ಟಂತೆ ಮಾತ್ರ ಹೇಳು, ಸತ್ಯ ಹೇಳಿದರೆ ಕೆಟ್ಟುಹೋಗ್ತೀಯಾ' ಅಂತಾರೆ. ನಿಜ ಅಲ್ಲವಾ?
ಸತ್ಯ: ಅಲ್ಲಿ ಮಾಡಿಸುವ ಪ್ರಮಾಣ ಸರಿಯಲ್ಲ. ನಾನು ಹೇಳುವುದೆಲ್ಲಾ ಸತ್ಯ ಅಂತ ಹೇಳಬಾರದು. ನೋಡಿ, ಇಲ್ಲಿ ಬೋರ್ಡು ಹಾಕಿಲ್ಲವಾ, ನಾನು ಹೇಳಿದ್ದೇ ಸತ್ಯ ಅಂತ! ಹಾಗೆ ಹೇಳಬೇಕು.
ಮಡ್ಡಿ: ಅರ್ಥವಾಗಲಿಲ್ಲ, ಗುರುಗಳೇ.
ಸತ್ಯ: ಸತ್ಯ ಅಂದರೇನು? ಮೊದಲು ತಿಳಿದುಕೊಳ್ಳಿ. ಅದು ಏನಾದರೂ ಆಗಿರಲಿ, ಹೇಗಾದರೂ ಆಗಿರಲಿ, ನಿನಗೆ ಏನು ಅನ್ನಿಸುತ್ತೋ ಅದು ಸತ್ಯ. ನಿನಗೆ ಅದು ಸತ್ಯ ಅಂತ ಅನ್ನಿಸಿದರೆ, ಬೇರೆಯವರು ಹೇಳುವುದು, ತಿಳಿದುಕೊಂಡಿರುವುದು ಸರಿಯಲ್ಲ. ನಾನು ಹೇಳಿದ್ದೇ ಸತ್ಯ, ಬೇರೆಯವರದು ಸುಳ್ಳು, ತಪ್ಪು ಅಂತಲೇ ಹೇಳಬೇಕು. ಯಾರು ಏನಾದರೂ ಅನ್ನಲಿ, ಅವರಿಗೆ ನೋವಾದರೂ ಆಗಲಿ, ಬೇಸರವಾದರೂ ಆಗಲಿ, ಡೋಂಟ್ ಕೇರ್ ಅನ್ನುವಂತೆ ಇರಬೇಕು. ಏಕೆಂದರೆ ಅದು ನಿನ್ನ ಸತ್ಯ, ನೀನು ಕಂಡುಕೊಂಡ ಸತ್ಯ! ಇಂತಹ ಸತ್ಯದ ಮಹಿಮೆ ಅಪಾರ!! ಕುಂಟನನ್ನು ಕುಂಟ ಅಂದರೆ, ಕುರುಡನನ್ನು ಕುರುಡ ಅಂದರೆ ಅವರು ಬೇಜಾರು ಮಾಡಿಕೊಂಡರೆ ಅದು ಅವರ ಹಣೆಬರಹ.
ಮಡ್ಡಿ: ನೀನು ಹೇಳ್ತಾ ಇರೋದು ಸತ್ಯ ಅಲ್ಲ ಅಂತ ಆಧಾರ ಕೊಟ್ಟು ವಾದ ಮಾಡಿದ್ರೆ ಏನು ಮಾಡಬೇಕು?
ಸತ್ಯ: ಅದಕ್ಯಾಕೆ ಹೆದರಬೇಕು? ಸರ್ವಜ್ಞನ ಹೆಸರಿನಲ್ಲಿ ಯಾರು ಯಾರೋ ಏನೇನೋ ವಚನಗಳನ್ನು ಬರೆದಿದ್ದಾರೆ ಅಂತಾರೆ. ಅಂಥವನ್ನು ಉದಾಹರಣೆ ಕೊಡು. ಅಥವ ಸರ್ವಜ್ಞ ಹೇಳಿದ ಮಾತು ಅಂತ ನೀನೇ ಒಂದು ತ್ರಿಪದಿ ಬರೆದು ಕೊನೆಗೆ ಸರ್ವಜ್ಞ ಅಂತ ಸೇರಿಸು. ಅದನ್ನೇನು ಸರ್ವಜ್ಞ ಬರೆದಿದ್ದೋ ಅಲ್ಲವೋ ಅಂತ ಯಾರು ತನಿಖೆ ಮಾಡ್ತಾರೆ. ಅಲ್ಲಿಗೆ ಎಲ್ಲರೂ ಬಾಯಿ ಮುಚ್ಚಿಕೊಂಡು ಒಪ್ಪಲೇಬೇಕು. ಇಂತಹ ಅನೇಕ ವಿಷಯ, ರಹಸ್ಯಗಳನ್ನು ಸತ್ಯದೀಕ್ಷೆ ಪಡೆಯುವವರಿಗೆ ಹೇಳಿಕೊಡುತ್ತೇನೆ.
ಮೂಢ: ಸ್ವಾಮಿ ದಯಾನಂದರು 'ಸತ್ಯವನ್ನೇ ಹೇಳು, ಆದರೆ ಸತ್ಯ ಹೇಳುತ್ತೇನೆಂದು ಶಪಥ ಮಾಡಬೇಡ. ಏಕೆಂದರೆ ಸತ್ಯ ಅನ್ನುವುದನ್ನು ನೀನೇ ತಪ್ಪು ತಿಳಿದುಕೊಂಡಿರಬಹುದು. ಅದರಿಂದ ಬೇರೆಯವರಿಗೆ ತೊಂದರೆ ಆಗಬಹುದು' ಅಂತ ಹೇಳುತ್ತಿದ್ದರಂತೆ. ನೀವು ಬೇರೆ ತರಹ ಹೇಳ್ತಾ ಇದೀರಿ. ನಮಗೆ ಗೊಂದಲ ಆಗಿದೆ, ಪರಿಹರಿಸಿ ಸ್ವಾಮಿ."
ಸತ್ಯ: ಗೊಂದಲ ಎಲ್ಲಿದೆ? ದಯಾನಂದರು ಏನೇ ಹೇಳಲಿ, ನಿರ್ದಯಾನಂದರೂ ಏನೇ ಹೇಳಲಿ. ನಾನು ಹೇಳಿದ್ದೇ ಸತ್ಯ, ಹೇಳೋದೆಲ್ಲಾ ಸತ್ಯ ಅಂದಾಗ, ಅದು ತಪ್ಪಾಗಿದ್ದರೂ ಅದು ನಮ್ಮ ಸತ್ಯ. ಸರಿಯಿರಲಿ, ಇಲ್ಲದಿರಲಿ ಅದರ ಗೊಡವೆ ಬೇಡ, ಬೇರೆಯವರು ವಿರೋಧಿಸಲಿ, ತಲೆ ಕೆಡಿಸಿಕೊಳ್ಳೋದೇ ಬೇಡ. ಅವರ ತಲೆ ಕೆಟ್ಟು ಹೋಗಲಿ. ಸತ್ಯ ನಮ್ಮದು, ನಮ್ಮದೇ ಸತ್ಯ. ಅದರಲ್ಲೇ ಇರುವುದು ಸತ್ವ. ಬಾಯಿ ತಪ್ಪಿ ಕಾಗೆ ಬೆಳ್ಳಗಿದೆ ಅಂತ ಅಂದಿರಿ ಅಂತ ಇಟ್ಟುಕೊಳ್ಳಿ. ಅದೇ ಸರಿಯೆಂದು ವಾದಿಸಿ. ಕಪ್ಪು, ಬಿಳಿ ಅನ್ನೋದನ್ನೆಲ್ಲಾ ನಮಗಾಗದವರು ಮಾಡಿದ್ದು. ನಿಜವಾಗಿ ಹೇಳಬೇಕೆಂದರೆ ಬೆಳ್ಳಗೆ ಕಾಣುವುದು ಕಪ್ಪು ಬಣ್ಣ. ಕತ್ತಲೆಯಂತೆ ಕಾಣುವುದು ಬಿಳಿ ಬಣ್ಣ ಅಂತ ಹೇಳಿ. ಅದು ನಿಜವಾದ ಸತ್ಯ. ಯಾರು ಒಪ್ಪಲಿ, ಬಿಡಲಿ, ಅದು ಸತ್ಯ, ಸತ್ಯ, ಸತ್ಯ. ಸತ್ಯ ಹೇಳಿದರೆ ಸತ್ತಾಗ ಬಡಕೊಳ್ಳುವಂತೆ ಬಡಕೊಳ್ಳುವವರನ್ನು ಕಂಡು ಮರುಕವಾಗುತ್ತದೆ.
ಮೂಢ: ಬೇರೆಯವರಿಗೆ ಹಾನಿ ಮಾಡುವಂತಹುದು ಸತ್ಯವಲ್ಲ. ನನಗೆ ಮಾತ್ರ ಒಳ್ಳೆಯದಾಗಲಿ ಅಂತ ಬಯಸುವುದೂ ಸತ್ಯ ಅಲ್ಲ. ಎಲ್ಲರಿಗೂ ಒಳ್ಳೆಯದಾಗಲೀ ಅಂತ ಬಯಸುವುದು ಮಾತ್ರ ಸತ್ಯ ಅಂತ ನಮ್ಮ ಹಿರಿಯರು ಹೇಳಿಕೊಟ್ಟಿದ್ದಾರೆ. ಬೇರೆಯವರಿಗೆ ಕೆಟ್ಟದಾದ್ರೂ ಅದು ಸತ್ಯ ಅಂತ ನೀವು ಹೇಳ್ತೀರಿ. ನಾವು ಯಾರ ಮಾತು ಕೇಳಬೇಕು?
ಸತ್ಯ: ಆ ಹಿರಿಯರು ಅನ್ನಿಸಿಕೊಂಡವರಿಗೆ ತಲೆ ಇಲ್ಲ. ಅವರು ಸರಿಯಾಗಿ ಹೇಳಿಲ್ಲ. ನಾನು ಹೇಳಿದ್ದೇ ಸತ್ಯ. ಹೇಳುವುದೇ ಸತ್ಯ. ಕೇಳಿದರೆ ಉದ್ಧಾರ ಆಗ್ತೀರಿ. ಇಲ್ಲದಿದ್ದರೆ ಹಾಳಾಗಿ ಹೋಗ್ತೀರಿ. ನಿಮಗೆ ಇಷ್ಟ ಆಗಲಿ, ಬಿಡಲಿ, ನಾನಂತೂ ನನ್ನ ಸತ್ಯ ಹೇಳಿಯೇ ಹೇಳ್ತೀನಿ. ಆನೆ ನಡೆದಿದ್ದೇ ದಾರಿ, ನಾನು ಹೇಳಿದ್ದೇ ಸತ್ಯ. ಇಂದು ಸಾಯಂಕಾಲ ಸತ್ಯೋಪದೇಶವಿದೆ. ಎಲ್ಲರೂ ಬನ್ನಿ. ಸತ್ಯ ಹೇಳುವ ದೀಕ್ಷೆ ಪಡೆಯಿರಿ. ಜೈ, ಸದ್ಗುರು ಸತ್ಯಾನಂದ, ನನ್ನ ಸತ್ಯದಿಂದ ಜಗಕಾನಂದ!
**************
-ಕ.ವೆಂ.ನಾಗರಾಜ್.
ಮೊದಲಿಗೆ ನೆನಪಾದದ್ದು ಕೇಫರ ಗಾಂಪರು.
ಪ್ರತ್ಯುತ್ತರಅಳಿಸಿಎಲ್ಲರಿಗೂ ಒಳ್ಳೆಯದಾಗಲೀ ಅಂತ ಬಯಸುವುದು ಮಾತ್ರ ಸತ್ಯ ಎನ್ನುವ ಹಿತಬೋಧೆ ತಿದ್ದಲಿ ನಮ್ಮ ಸಂಕುಚಿತ ಮನ.
ಧನ್ಯವಾದಗಳು, ಬದರೀನಾಥರೇ.
ಅಳಿಸಿ