ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಏಪ್ರಿಲ್ 26, 2014

ಹೀಗೂ ಉಂಟು!

ಅರ್ಥವಿಲ್ಲದ ಇಲಾಖಾ ವಿಚಾರಣೆಗಳು - ೪: 
ಹೀಗೂ ಉಂಟು!
     ಹಣ ನುಂಗಿ ದಕ್ಕಿಸಿಕೊಂಡ ಮತ್ತು ಕೆಲಸ ಮಾಡದೆಯೂ ಸುಮಾರು ಎಂಟು ವರ್ಷಗಳ ಕಾಲ ಸಂಬಳ ಪಡೆದು ಸಹಜ ನಿವೃತ್ತಿಯಾದ ನೌಕರನ, ಸಾರ್ವಜನಿಕರಿಗೆ ಸೇರಬೇಕಾದ ಟನ್ನುಗಟ್ಟಲೆ ಅಕ್ಕಿ, ಗೋಧಿಗಳನ್ನು ಅಧಿಕಾರಿಗಳೇ ಕಾಳಸಂತೆಯಲ್ಲಿ ಮಾರಿ ರೆಡ್ ಹ್ಯಾಂಡಾಗಿ ಸಿಕ್ಕಿಹಾಕಿಕೊಂಡರೂ ಶಿಕ್ಷೆಯಾಗದೆ ಪಾರಾದ, ಭೂರಹಿತ ಕೃಷಿಕಾರ್ಮಿಕರ ಹೆಸರಿನಲ್ಲಿ ೫೦ ಎಕರೆ ಅರಣ್ಯ ಪ್ರದೇಶವನ್ನು ಐವರು ಕೋಟ್ಯಾಧೀಶ್ವರರು ನುಂಗಿ ನೀರು ಕುಡಿದ ಸಂಗತಿಗಳನ್ನು ಹಿಂದಿನ ಲೇಖನಗಳಲ್ಲಿ ಕಂಡೆವು. ಹಣ ದುರುಪಯೋಗ ಮಾಡಿಕೊಂಡುದು ತಿಳಿದರೂ ಮೇಲಾಧಿಕಾರಿಗಳೇ ರಕ್ಷಣೆಗೆ ನಿಂತ ಪ್ರಕರಣದ ಕುರಿತು ಈಗ ನೋಡೋಣ.
     ಅವನು ಒಬ್ಬ ಗ್ರಾಮಲೆಕ್ಕಿಗ, ಹೆಸರು ಫರ್ನಾಂಡಿಸ್ ಎಂದಿಟ್ಟುಕೊಳ್ಳೋಣ. ಇದು ೩೦ ವರ್ಷಗಳ ಹಿಂದಿನ ಘಟನೆ. ಬ್ಯಾಂಕಿನ ನಕಲಿ ಸೀಲು ಮಾಡಿಟ್ಟುಕೊಂಡು ವಸೂಲು ಮಾಡಿದ ಪೂರ್ಣ ಹಣ ಗುಳುಂ ಮಾಡಿಯೂ ದಕ್ಕಿಸಿಕೊಂಡಿದ್ದ ಒಬ್ಬನ ಕಥೆ ಹಿಂದೆಯೇ ಹೇಳಿರುವೆ. ಇವನು ಅಷ್ಟು ಪ್ರಚಂಡನಲ್ಲವಾದರೂ ಅವನ ತಮ್ಮನೆನ್ನಬಹುದು. ಇವನು ಮಾಡುತ್ತಿದ್ದುದೇನೆಂದರೆ, ವಸೂಲಾದ ಸರ್ಕಾರಿ ಬಾಕಿಗಳನ್ನು ಬೇರೆ ಬೇರೆ ಶೀರ್ಷಿಕೆಗಳಲ್ಲಿ ಬೇರೆ ಬೇರೆ ಚಲನ್ನುಗಳಲ್ಲಿ ಬರೆದು ಬ್ಯಾಂಕಿಗೆ ಜಮ ಮಾಡಬೇಕಿದ್ದು, ಇವನು ವಸೂಲಾದ ನೀರು ತೆರಿಗೆ, ನಿರ್ವಹಣಾಕರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಹಣ ಜಮಾ ಮಾಡುತ್ತಿದ್ದ. ಈ ಬಾಬಿನಲ್ಲಿ ಬರುತ್ತಿದ್ದ ಹಣ ಜಾಸ್ತಿ ಇದ್ದುದರಿಂದ ಹೀಗೆ ಮಾಡುತ್ತಿದ್ದನೇನೋ! ಈ ಕೆಲಸ ಸುಮಾರು ೪ ವರ್ಷಗಳ ವರೆಗೆ ನಡೆದಿದ್ದರೂ ಯಾರೊಬ್ಬರ ಗಮನಕ್ಕೆ ಬಂದಿರಲಿಲ್ಲವೆಂದರೆ ಆಶ್ಚರ್ಯವೇ ಸರಿ. ನಂತರದಲ್ಲಿ ಗ್ರಹಚಾರವಶಾತ್ ಒಬ್ಬರು ಉಪತಹಸೀಲ್ದಾರರು ಅವನ ದಫ್ತರ್ ತನಿಖೆ ಮಾಡಿದಾಗ ಈ ವಿಷಯ ಹೊರಬಿದ್ದಿತ್ತು. ತಕ್ಷಣದಲ್ಲಿ ಅವರು ಗ್ರಾಮಲೆಕ್ಕಿಗ ಆ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿದ್ದ ದಿನದಿಂದಲೂ ಪರಿಶೀಲಿಸಿದಾಗ ಸುಮಾರು ೬೦ ಸಾವಿರ ರೂ. ದುರುಪಯೋಗವಾಗಿದ್ದು ಗೊತ್ತಾಯಿತು. ೩೦ ವರ್ಷಗಳ ಹಿಂದಿನ ೬೦ ಸಾವಿರವೆಂದರೆ ಈಗಿನ ಬೆಲೆ ಎಷ್ಟು ಎಂಬುದನ್ನು ನಿಮ್ಮ ಊಹೆಗೇ ಬಿಡುವೆ. ವಿಷಯ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಯಿತು. ಗ್ರಾಮಲೆಕ್ಕಿಗನನ್ನು ಅಮಾನತ್ತಿನಲ್ಲಿ ಇರಿಸಿದರು. ಈ ಹಂತದಲ್ಲಿ ಅವನಿಂದ ದುರುಪಯೋಗವಾದ ಹಣವನ್ನು ಕಟ್ಟಿಸಲು ಪ್ರಯತ್ನಿಸಲಾಯಿತು. ಕ್ರಿಮಿನಲ್ ಮೊಕದ್ದಮೆ ಹೂಡುವ ಭಯ ತೋರಿಸಿದ್ದಾಯಿತು. ಆದರೆ, ಕಟ್ಟಲು ಅವನಲ್ಲಿ ಬಿಡಿಗಾಸೂ ಇರಲಿಲ್ಲ. ಸಿಕ್ಕ ಹಣವನ್ನೆಲ್ಲಾ ಆತ ಬಾಂಬೆ, ಮದರಾಸುಗಳಿಗೆ ಹೋಗಿ ಹೆಣ್ಣು, ಹೆಂಡಗಳಿಗೆ ಸುರಿದುಬಿಟ್ಟಿದ್ದ ಅವನು ಅಕ್ಷರಶಃ ಪಾಪರ್ ಆಗಿದ್ದ. ಸಂಬಳ ಬಿಟ್ಟರೆ ಬೇರೆ ಗತಿಯಿರಲಿಲ್ಲ. ಉಪತಹಸೀಲ್ದಾರ್, ರೆವಿನ್ಯೂ ಇನ್ಸಪೆಕ್ಟರ್ ಜೊತೆಗೂಡಿ ಬೇರೊಂದು ತಾಲ್ಲೂಕಿನಲ್ಲಿದ್ದ ಫರ್ನಾಂಡಿಸನ ತಂದೆಯನ್ನು ಕಂಡು, ಹಣ ಕಟ್ಟದಿದ್ದರೆ ಮಗ ಜೈಲಿಗೆ ಹೋಗುತ್ತಾನೆಂದು ತಿಳಿಸಿದಾಗ ಮನೆಯ ಮರ್ಯಾದೆಗೆ ಅಂಜಿದ ಆ ಬಡಪಾಯಿ ರೈತ ತನ್ನ ಹೆಸರಿನಲ್ಲಿದ್ದ ಜೀವನಾಧಾರವಾಗಿದ್ದ ಎರಡೂವರೆ ಎಕರೆ ಜಮೀನಿನಲ್ಲಿ ಎರಡು ಎಕರೆ ಜಮೀನು ಮಾರಿ, ಮಗ ನುಂಗಿ ಹಾಕಿದ್ದ ಹಣವನ್ನು ಸರ್ಕಾರಕ್ಕೆ ಕಟ್ಟಿದ. ಮರ್ಯಾದೆಗೆ ಅಂಜುವ ಅಪ್ಪನಿಗೆ ಮನೆಹಾಳು ಮಗ! 
     ಜಿಲ್ಲಾಧಿಕಾರಿಯವರಿಂದ ಇಲಾಖಾ ವಿಚಾರಣೆ ಏಕೆ ಮಾಡಬಾರದೆಂದು ಸಂಬಂಧಿಸಿದ ಗ್ರಾಮಲೆಕ್ಕಿಗ, ಅವನ ಲೆಕ್ಕಪತ್ರಗಳನ್ನು ಸರಿಯಾಗಿ ಪರಿಶೀಲಿಸದಿದ್ದ ರೆವಿನ್ಯೂ ಇನ್ಸ್ ಪೆಕ್ಟರುಗಳು, ಗುಮಾಸ್ತರುಗಳು, ಉಪತಹಸೀಲ್ದಾರರುಗಳು ಸೇರಿದಂತೆ ೧೩ ನೌಕರರುಗಳಿಗೆ ನೋಟೀಸುಗಳು ಜಾರಿಯಾದವು. ಒಬ್ಬ ಚಾಣಾಕ್ಷ ಉಪತಹಸೀಲ್ದಾರ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸುವಾಗ ತನ್ನ ಹೆಸರಿನ ಬದಲಿಗೆ ನನ್ನ ಹೆಸರನ್ನು ಸೇರಿಸಿದ್ದರಿಂದ ನನಗೂ ನೋಟೀಸು ಬಂದಿತ್ತು. ವಾಸ್ತವಾಂಶ ತಿಳಿಸಿ ನಾನು ಉತ್ತರಿಸಿದ್ದೆ. ಫರ್ನಾಂಡಿಸ್ ಜಿಲ್ಲಾಧಿಕಾರಿಯವರ ಕಛೇರಿಯ ಹಿರಿಯ ಆಧಿಕಾರಿಗೆ ಐದು ಸಾವಿರ ರೂ. ನೈವೇದ್ಯ ಅರ್ಪಿಸಿ ಕೈಮುಗಿದು ಬಚಾವು ಮಾಡಲು ಕೋರಿಕೊಂಡ. ಕಾಣಿಕೆಯಿಂದ ಸಂತೃಪ್ತರಾದ ಅಧಿಕಾರಿಯ ಸಲಹೆಯಂತೆ ತಹಸೀಲ್ದಾರರು ಸರ್ಕಾರಕ್ಕೆ ಬರಬೇಕಾಗಿದ್ದ ಹಣ ಪೂರ್ಣವಾಗಿ ಬಂದಿರುವುದರಿಂದ ನೌಕರರಿಗೆ ಎಚ್ಚರಿಕೆ ನೀಡಿ ಪ್ರಕರಣ ಮುಗಿಸಬಹುದೆಂದು ಪತ್ರ ಬರೆದರು. ವಿಷಯ ಮುಗಿದೇಹೋಯಿತು. ವಿಚಾರಣೆ ನಡೆಯಲೇ ಇಲ್ಲ. ಒಂದು ವೇಳೆ ವಿಚಾರಣೆ ನಡೆದಿದ್ದರೆ, ತಾತ್ಕಾಲಿಕವಾಗಿಯಾದರೂ ಹಣ ದುರುಪಯೋಗವಾಗಿದ್ದುದು ರುಜುವಾತಾಗಿ ಫರ್ನಾಂಡಿಸ್ ನೌಕರಿ ಕಳೆದುಕೊಳ್ಳುತ್ತಿದ್ದ! ಈ ಪ್ರಕರಣದಲ್ಲಿ ಯಾವುದೋ ಒಂದು ಸಂದರ್ಭದ ಹಣ ದುರುಪಯೋಗವಾಗಿರಲಿಲ್ಲ. ಸತತವಾಗಿ ೪ ವರ್ಷಗಳ ಕಾಲ ಪ್ರತಿತಿಂಗಳೂ ವಸೂಲಾದ ಸರ್ಕಾರಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡುದು ಸಣ್ಣ ಅಪರಾಧವಾಗಿರಲಿಲ್ಲ. ಇಂತಹ ಅಪರಾಧ ಮಾಡಿಯೂ ಒಬ್ಬ ನೌಕರನ ವಿರುದ್ಧ ಇಲಾಖಾ ವಿಚಾರಣೆಯೇ ನಡೆಯಲಿಲ್ಲವೆಂದರೆ ಭ್ರಷ್ಠ ವ್ಯವಸ್ಥೆಯ ಬಗ್ಗೆ ಏನು ಹೇಳಬೇಕೋ ತಿಳಿಯದು. ಅವನಿಗೆ ಸಹಕರಿಸಿದ ಅಥವ ಗಮನಿಸದೆ ಕರ್ತವ್ಯಲೋಪ ಮಾಡಿದ ಇತರ ೧೩ ಸಹೋದ್ಯೋಗಿಗಳೂ ಬಚಾವಾದರು. ಮೇಲಾಧಿಕಾರಿ ಪ್ರಾಮಾಣಿಕರಾಗಿದ್ದಿದ್ದರೆ, ಕಥೆಯೇ ಬೇರೆಯದಿರುತ್ತಿತ್ತು. ಜಡ್ಡುಗಟ್ಟಿದ ವ್ಯವಸ್ಥೆ ಸುಧಾರಣೆಯಾಗಬೇಕೆಂದರೆ ಜನರು ಜಾಗೃತರಾಗುವುದೊಂದೇ ಮಾರ್ಗ.
-ಕ.ವೆಂ.ನಾಗರಾಜ್.
**************
ದಿನಾಂಕ 23-04-2014ರ ಜನಹಿತ ಪತ್ರಿಕೆಯ ಅಂಕಣ 'ಜನಕಲ್ಯಾಣ'ದಲ್ಲಿ ಪ್ರಕಟಿತ

2 ಕಾಮೆಂಟ್‌ಗಳು:

  1. ಪ್ರತ್ಯುತ್ತರಗಳು
    1. nageshamysore
      ಸತತ ದುರುಪಯೋಗ ಪಡಿಸಿಕೊಂಡ ರೀತಿಯಲ್ಲಿರುವ ಚಾಣಾಕ್ಷತೆ, ದಕ್ಷತೆ, ಚತುರತೆಯನ್ನು ಮೆಚ್ಚಿ ಬಿಟ್ಟುಬಿಟ್ಟಿರಬೇಕು :-)
      ಯಾರಿಗೆ ಗೊತ್ತು? ಇನ್ನು ಅಂತಹ ಎಷ್ಟೊ ರೀತಿಯ ಒಳ ಸೂಕ್ಷ್ಮಗಳೆಲ್ಲವನ್ನು ಹೇಳಿಕೊಡಲೊಬ್ಬ ಗುರುವು ಸಿಕ್ಕಿದಂತಾಯ್ತಲ್ಲ - ಅಂದುಕೊಂಡು ಬಿಟ್ಟಿರಲೂಬಹುದು...! (ಈಗಿನ ಐಟಿ ಜಗತ್ತಿನಲ್ಲಿ ಹ್ಯಾಕರರ ಪೀಡೆ ನಿಗ್ರಹಿಸಲು ಮತ್ತೊಬ್ಬ ಹ್ಯಾಕರನ್ನು ಆಯ್ದು ಉದ್ಯೋಗಕಿಟ್ಟುಕೊಳ್ಳುವ ಹಾಗೆ)
      ಪ್ರಾಮಾಣಿಕತೆ ಅನ್ನುವುದು ನೈತಿಕಪ್ರಜ್ಞೆಯ ರೂಪದಲ್ಲಿ ರಕ್ತವಾಗುವತನಕ ಈ ಕೂಪದಿಂದ ಬಿಡುಗಡೆಯಿಲ್ಲವೆನೊ?

      kavinagaraj
      ಯಥಾ ರಾಜಾ ತಥಾ ಪ್ರಜಾ! ಬದಲಾವಣೆ ಮೇಲಿನಿಂದ ಆರಂಭವಾಗಬೇಕು. ಮೇಲಿನ ಬದಲಾವಣೆ ಕೆಳಗಿನವರೇ ಮಾಡಬೇಕು!! :)

      partha
      ಇಂತಹ ಭ್ರಷ್ಟತೆಗಳನ್ನೇ ನೋಡುತ್ತ ಅಸಹ್ಯ ಹುಟ್ಟುತ್ತದೆ ನಾಗರಾಜ ಸರ್ , ನಿಮ್ಮ ಹಾಗೆ ಸ್ವತಂತ್ರ್ಯವಾಗಿಬಿಡುವುದಾ ಎನ್ನುವ ಆಲೋಚನೆಯು ಹುಟ್ಟುತ್ತಿದೆ, ಸಾದಕ ಭಾದಕಗಳನ್ನೆಲ್ಲ ಚಿಂತಿಸಬೇಕಾಗಿದೆ

      kavinagaraj
      ಧನ್ಯವಾದ ಪಾರ್ಥರೇ. ನನಗೂ ಸ್ವಾತಂತ್ರ್ಯ ಬೇಕು!! ಒಂದೊಮ್ಮೆ ಸಿಕ್ಕೀತು!! :)

      ಅಳಿಸಿ