ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಡಿಸೆಂಬರ್ 19, 2014

ದೇವರು- ಒಂದು ತರ್ಕವಿತರ್ಕ-4: ಒಬ್ಬನಲ್ಲದೆ ಹಲವರುಂಟೇ?

ಹಿಂದಿನ ಲೇಖನಕ್ಕೆ ಲಿಂಕ್: ದೇವರು ಒಂದು ತರ್ಕವಿತರ್ಕ - 3

ದೇವನೆಲ್ಲಿಹನೆಂದು ಚಾರ್ವಾಕ ಕೇಳುವನು
ಎಲ್ಲೆಲ್ಲು ಅವನೆಂದು ಆಸ್ತಿಕನು ಹೇಳುವನು |
ಕಾಣದಿಹ ದೇವನಿಹನೆಂದು ಹೇಳಿಸುವ
ಶಕ್ತಿ ಯಾವುದದಚ್ಚರಿಯು ಮೂಢ ||
     ದೇವರ ಬಗ್ಗೆ ಮನುಷ್ಯಜೀವಿ ಬಹಳ ತಲೆಕೆಡಿಸಿಕೊಂಡಿದ್ದಾನೆ. ದೇವರು ಒಬ್ಬನು ಮಾತ್ರನೇ? ಹಲವು ದೇವರಿದ್ದಾರೆಯೇ? ಅವನು ಆಕಾರಿಯೇ? ನಿರಾಕಾರಿಯೇ? ಇದ್ದಾನೆಯೋ, ಇಲ್ಲವೋ? ಅವನನ್ನು ಕಂಡವರುಂಟೆ? ಇತ್ಯಾದಿ ಕುರಿತು ಬಹು ಪುರಾತನ ಕಾಲದಿಂದಲೂ ಚರ್ಚೆ, ತರ್ಕ, ಜಿಜ್ಞಾಸೆ, ಸಿದ್ಧಾಂತಗಳ/ವಿಚಾರಗಳ ಮಂಡನೆ/ಖಂಡನೆ, ಪರ-ವಿರೋಧ ಸಂಘರ್ಷಗಳು ನಡೆಯುತ್ತಿವೆ, ಬಹುಷಃ ಇದು ನಡೆಯುತ್ತಲೇ ಇರುತ್ತದೆ. ದೇವರ ಕುರಿತು ವಿಚಾರ ಮಾಡುವ ಮೊದಲು ಮಾನವನ ಇತಿ-ಮಿತಿ ಕುರಿತು ಸ್ವಲ್ಪ ವಿಚಾರ ಮಾಡೋಣ. ಬೃಹತ್ ಬ್ರಹ್ಮಾಂಡದ ತುಲನೆಯಲ್ಲಿ ಅವನು ಒಬ್ಬ ಕ್ಷುದ್ರಾತಿಕ್ಷುದ್ರ ಜೀವಿ ಎಂಬುದನ್ನು ಒಪ್ಪಲೇಬೇಕು. ಅವನು ಕಂಡದ್ದು, ಕೇಳಿದ್ದು, ಅಧ್ಯಯನ ಮಾಡಿದ್ದು, ಅರಿತಿದ್ದುಗಳನ್ನು ಆಧರಿಸಿ ತನ್ನ ಬುದ್ಧಿಶಕ್ತಿ, ಕಲ್ಪನಾಶಕ್ತಿ, ವಿವೇಚನಾಶಕ್ತಿ ಆಧರಿಸಿ ಕೆಲವು ನಂಬಿಕೆಗಳನ್ನು, ವಿಚಾರಗಳನ್ನು ಒಪ್ಪಿಕೊಳ್ಳುತ್ತಾನೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಈ ಮೂಲವಿಚಾರವನ್ನು ಮನದಲ್ಲಿ ಇಟ್ಟುಕೊಂಡು ನನಗೆ ಸರಿ ಅನ್ನಿಸಿದ ಕೆಲವು ವಿಷಯಗಳನ್ನು 'ದೇವರು- ಒಂದು ತರ್ಕವಿತರ್ಕ' ಎಂಬ ಲೇಖನಮಾಲೆಯಲ್ಲಿ ಪ್ರಸ್ತಾಪಿಸಿದ್ದೆ. ಇದಕ್ಕೆ ಹೊರತಾದ ಹೊಸ ವಿಚಾರಗಳನ್ನು, ನನ್ನ ಅನಿಸಿಕೆ ತಪ್ಪೆಂದು ತೋರಿಸುವ ಪೂರ್ವಾಗ್ರಹ ಪೀಡಿತವಲ್ಲದ ಮಂಡನೆಗಳನ್ನು ಸರಿ ಅನ್ನಿಸಿದರೆ ಒಪ್ಪುವ ಮುಕ್ತ ಮನಸ್ಸನ್ನು ಇಟ್ಟುಕೊಂಡು ಮುಂದುವರೆಸುವೆ. ಒಬ್ಬ ಮಿತ್ರರು 'ದೇವರು ಒಬ್ಬನು ಮಾತ್ರ' ಎಂದು ಹೇಗೆ ಹೇಳುತ್ತೀರಿ ಎಂದು ತಮ್ಮ ಪ್ರತಿಕ್ರಿಯೆಯಲ್ಲಿ ಕೇಳಿದ್ದರು. ಇದು ವಿಚಾರ ಮಾಡಬೇಕಾದ ಸಂಗತಿಯೇ ಆಗಿದೆ.
ಪ್ರಶ್ನೆ:  Where is God?  (ದೇವರೆಲ್ಲಿದ್ದಾನೆ?) - ಈ ಪ್ರಶ್ನೆಗೆ ಎರಡು ಉತ್ತರಗಳಿವೆ:
ಉತ್ತರ-೧: He is nowhere.  (ಅವನು ಎಲ್ಲೂ ಇಲ್ಲ.)
ಉತ್ತರ-೨: He is now here.  (ಅವನು ಇಲ್ಲೇ ಇದ್ದಾನೆ.)
     ದೇವರ ಮಹಿಮೆಯನ್ನು ಬಣ್ಣಿಸುವ ಅನೇಕ ಕೃತಿಗಳನ್ನು ರಚಿಸಿದ ಸಂತ ಅಗಸ್ಟೀನ್ ಒಮ್ಮೆ ಸಮುದ್ರ ತೀರದಲ್ಲಿ ಅಡ್ಡಾಡುತ್ತಿದ್ದಾಗ ಒಬ್ಬ ಬಾಲಕ ಸಮುದ್ರದ ನೀರನ್ನು ತನ್ನ ಬೊಗಸೆಯಲ್ಲಿ ಹಿಡಿದು ಮರಳಿನಲ್ಲಿ ಮಾಡಿದ ಒಂದು ರಂಧ್ರಕ್ಕೆ ಹಾಕುತ್ತಿದ್ದುದನ್ನು ಕಂಡರು. ಆಶ್ಚರ್ಯದಿಂದ ಆ ಬಾಲಕನನ್ನು "ಇದೇನು ಮಾಡುತ್ತಿರುವೆ?" ಎಂದು ಕೇಳಿದರಂತೆ. ಆ ಬಾಲಕ, "ಈ ಸಮುದ್ರದ ನೀರನ್ನು ಈ ರಂಧ್ರದೊಳಗೆ ತುಂಬಿಸುತ್ತಿದ್ದೇನೆ" ಅಂದನಂತೆ. "ಈ ಚಿಕ್ಕ ರಂಧ್ರದ ಒಳಗೆ ಸಮುದ್ರದ ನೀರು ಹೇಗೆ ಹಿಡಿಯಬಲ್ಲದು?" ಎಂಬ ಪ್ರಶ್ನೆಗೆ ಬಾಲಕ ಮರುಪ್ರಶ್ನೆ ಮೂಲಕ ಉತ್ತರಿಸಿದ್ದು ಹೀಗೆ: "ನೀವು ಮಾಡುತ್ತಿರುವ ಕೆಲಸವೂ ಹೀಗೆಯೇ ಅಲ್ಲವೇ? ನಿಮ್ಮ ಮಿತಿಯಲ್ಲಿನ ಪದಗಳಿಂದ ದೇವರನ್ನು ವರ್ಣಿಸುತ್ತಿದ್ದೀರಿ. ಮಿತಿಯಿಲ್ಲದ ದೇವರನ್ನು ಮಿತಿಯಿರುವ ಪದಗಳಿಂದ ಬಣ್ಣಿಸಲು ಸಾಧ್ಯವೇ?" ದೇವರ ಕುರಿತು ಹೇಳಲಾಗಿರುವ ಎಲ್ಲಾ ವರ್ಣನೆಗಳು, ಬಣ್ಣನೆಗಳ ಸ್ಥಿತಿ ಹೀಗೆಯೇ ಇರುತ್ತದೆಯಲ್ಲವೇ? ಆದರೂ ಮಾನವನ ಸತ್ಯಾನ್ವೇಷಣೆಯ ಪ್ರಯತ್ನವನ್ನು ಮೆಚ್ಚಲೇಬೇಕು. ಒಬ್ಬನೇ ದೇವರು ಅನ್ನುವ ಬೈಬಲ್ ಹೇಳುತ್ತದೆ: "ನನ್ನ ಯೋಚನೆಗಳು ನಿಮ್ಮ ಯೋಚನೆಗಳಲ್ಲ ಮತ್ತು ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಲ್ಲ. ಏಕೆಂದರೆ ಸ್ವರ್ಗಗಳು ಭೂಮಿಗಿಂತ ಎತ್ತರದಲ್ಲಿವೆ ಮತ್ತು ನನ್ನ ಚಿಂತನೆಗಳು ನಿಮ್ಮ ಚಿಂತನೆಗಳಿಗಿಂತ ಎತ್ತರವಾಗಿವೆ ಹಾಗೂ ನನ್ನ ಮಾರ್ಗಗಳು ನಿಮ್ಮದಕ್ಕಿಂತ ಎತ್ತರವಾಗಿವೆ." ಕುರಾನ್ ಸಹ ಒಬ್ಬನೇ ದೇವರನ್ನು ಪ್ರತಿಪಾದಿಸುತ್ತಿದ್ದು, ಅದು ಹೇಳುತ್ತದೆ: "ದೇವರ ಮಾರ್ಗಗಳನ್ನು ಮಾನವಜೀವಿಗಳಿಗೆ ಗ್ರಹಿಸುವುದು ಕಷ್ಟ." ಅನಂತನಾದ ದೇವರನ್ನು ಅಲ್ಪ ಜ್ಞಾನದಿಂದ ಅರಿಯಲಾಗದು ಎಂದು ಹೇಳುವ ವೇದಗಳು ಸಹ ಒಬ್ಬನೇ ದೇವರೆಂದು ಸಾರಿ ಸಾರಿ ಹೇಳುತ್ತಿದೆ. ನಾವು ಅತ್ಯಲ್ಪರು ಎಂಬ ಅರಿವು ಮೂಡುತ್ತಾ ಹೋದಂತೆ ನಮ್ಮ ಅರಿವು ಹೆಚ್ಚಾಗುತ್ತಾ ಹೋಗುತ್ತದೆ.
ಅಲ್ಲೆಲ್ಲ ಇಲ್ಲೆಲ್ಲ ಮೇಲೆಲ್ಲ ಕೆಳಗೆಲ್ಲ
ಎಲ್ಲಿಂದ ಎಲ್ಲಿಗೂ ಮುಗಿದುದೇ ಇಲ್ಲ |
ಅವನೊಬ್ಬನೇ ಜಗದ ಎಲ್ಲೆಯನು ಬಲ್ಲ
ಕಣ್ಣರಳಿ ಬೆರಗಾಗಿ ನಿಂತಿಹನು ಮೂಢ || 
     ದೇವರು ಆಕಾರಿಯೋ, ನಿರಾಕಾರಿಯೋ ಇತ್ಯಾದಿ ಪ್ರಶ್ನೆಗಳು ಈಗ ಪ್ರಸ್ತಾಪಿಸಹೊರಟಿರುವ ಅಂಶಕ್ಕೆ ಪೂರಕವಾಗುವುದಿಲ್ಲವಾದ್ದರಿಂದ ಇಲ್ಲಿ ಅದನ್ನು ಒತ್ತಟ್ಟಿಗೆ ಇಟ್ಟು ಮುಂದೆ ಹೋಗೋಣ. ಈ ವಿಶ್ವಬ್ರಹ್ಮಾಂಡ ಅಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಸೂರ್ಯ ಅಲ್ಲ, ಒಂದು ಚಂದ್ರ ಅಲ್ಲ, ಅದರಲ್ಲಿ ಸೂರ್ಯನಿಗಿಂತಲೂ ಲಕ್ಷಾಂತರಪಟ್ಟು ದೊಡ್ಡದಾದ, ಅನಂತ ಆಕಾಶದಲ್ಲಿ ಅನೂಹ್ಯವಾದ ಎಲ್ಲೆಯಿರದ ಸ್ಥಳಗಳಲ್ಲಿ ಹರಡಿಕೊಂಡಿರುವ ಅನಂತ ಸಂಖ್ಯೆಯ ನಕ್ಷತ್ರಗಳ ಸಮೂಹವೇ ಇದೆ. ಇವುಗಳನ್ನು ಆ ಸ್ಥಳಗಳಲ್ಲಿ ಯಾವ ಆಧಾರವೂ ಇಲ್ಲದೆ ಇಟ್ಟವರು ಯಾರು? ಗೊತ್ತಿಲ್ಲ! ಸೂರ್ಯನ ಸುತ್ತ ಭೂಮಿ, ಮತ್ತಿತರ ಗ್ರಹಗಳು ಸುತ್ತಬೇಕು, ಇಂತಹ ಗತಿಯಲ್ಲೇ, ಇಂತಹ ಸಮಯದಲ್ಲೇ ಸುತ್ತಬೇಕು, ಹೀಗೆಯೇ ಸುತ್ತಬೇಕು ಎಂದು ನಿಗದಿಸಿದವರು ಯಾರು? ಗೊತ್ತಿಲ್ಲ! ಅಷ್ಟೊಂದು ದೊಡ್ಡದಾಗಿ ತಲೆ ಕೆಡಿಸಿಕೊಳ್ಳುವುದು ಬೇಡ. ನಮ್ಮ ಬುಡಕ್ಕೇ ಬರೋಣ. ನಾವು ಉಸಿರಾಡುವುದು, ನಮ್ಮ ದೇಹದಲ್ಲಿ ರಕ್ತಪರಿಚಲನೆ ಆಗುವುದು, ನಮ್ಮ ಹೃದಯ ಲಬ್ ಡಬ್ ಎಂದು ಬಡಿದುಕೊಳ್ಳುವುದು ನಮ್ಮ ಇಚ್ಛೆಯಿಂದ ಆಗುತ್ತಿದೆಯೇ? ನಾವು ನಿದ್ದೆ ಮಾಡುತ್ತಿದ್ದಾಗಲೂ, ನಮ್ಮ ಅರಿವಿಗೆ ಬಾರದ ಸ್ಥಿತಿಯಲ್ಲಿದ್ದಾಗಲೂ ಈ ಕ್ರಿಯೆಗಳು ನಡೆಯುತ್ತಿರುತ್ತವೆ. ಈ ಕ್ರಿಯೆಗಳಲ್ಲಿ ವ್ಯತ್ಯಾಸವಾದರೆ ನಾವು ಭೂತಕಾಲಕ್ಕೆ ಸೇರಿದವರಾಗುತ್ತೇವೆ. ಈ ಕ್ರಿಯೆಗಳಿಗೆ ಕಾರಣ ಏನು? ಯಾರು? ಗೊತ್ತಿಲ್ಲ! 'ಗೊತ್ತಿಲ್ಲ' ಎಂದಾಕ್ಷಣ 'ಇಲ್ಲ' ಎಂದಾಗುತ್ತದೆಯೇ? ಈ 'ಗೊತ್ತಿಲ್ಲ' ಅನ್ನುವುದು ಇದೆಯಲ್ಲಾ, ಅದೇ ದೇವರು!
     ನಮಗೆ ಇರುವ ಜ್ಞಾನ ಗುರು-ಹಿರಿಯರಿಂದ, ವಿದ್ವಾಂಸರುಗಳಿಂದ, ಅಧ್ಯಯನಗಳಿಂದ ಬಂದುದಾಗಿದೆ. ನೋಡುವುದರಿಂದ, ಕೇಳುವುದರಿಂದ, ತಿಳಿಯುವುದರಿಂದಲೂ ಈ ಜ್ಞಾನ ಸಿಗುತ್ತದೆ. ಇಂತಹ ಜ್ಞಾನ ಇಂದ್ರಿಯಗಮ್ಯವಾದ ಭೌತಿಕ ವಸ್ತುಗಳಲ್ಲೇ ಮಿತಿಯಾಗುವುದಿದ್ದು ಇದನ್ನು ವಿಜ್ಞಾನ ಎನ್ನಬಹುದು. ಈ ವಿಜ್ಞಾನ ಇನ್ನೂ ಶೈಶವಾವಸ್ಥೆಯಲ್ಲೇ ಇದ್ದು, ಇದರಿಂದ ಅತೀಂದ್ರಿಯ ವಿಷಯಗಳಾದ ಪರಮಾತ್ಮ, ಜೀವಾತ್ಮ, ಮೋಕ್ಷ, ಇತ್ಯಾದಿ ಸಂಗತಿಗಳ ಬಗ್ಗೆ ತಿಳಿಯಲಾಗಿಲ್ಲ. ಹಾಗೆಂದು ಇವು ಇಲ್ಲವೆನ್ನಲಾಗುವುದಿಲ್ಲ. ಇವುಗಳ ಬಗ್ಗೆ ತಿಳಿಯಲು ದಿವ್ಯಜ್ಞಾನ ಅವಶ್ಯಕವಾಗಿದ್ದು, ಮನುಷ್ಯನ ವಿಕಾಸಕ್ಕೆ ಇದು ಅನಿವಾರ್ಯವಾಗಿದೆ. ಸ್ವತಃ ನಾವು ವಿಜ್ಞಾನಿಗಳಲ್ಲದಿದ್ದರೂ ವಿಜ್ಞಾನಿಗಳು ಹೇಳುವುದನ್ನು ಒಪ್ಪಿಕೊಳ್ಳುತ್ತೇವೆ. ಏಕೆಂದರೆ ಅವರು ಅದನ್ನು ಪ್ರಯೋಗಗಳ ಮೂಲಕ ಕಂಡುಕೊಂಡಿರುತ್ತಾರೆ. ಹಾಗೆಯೇ ಆಧ್ಯಾತ್ಮಿಕ, ಪಾರಮಾರ್ಥಿಕ ವಿಷಯಗಳಲ್ಲಿ ನಮಗಿಂತ ಹೆಚ್ಚು ತಿಳಿದವರು, ಪಂಡಿತರುಗಳ ಮಾತನ್ನೂ ಮಿತಿಗೊಳಪಟ್ಟು ನಂಬುವುದು, ಬಿಡುವುದು ಸಂಬಂಧಿಸಿದವರಿಗೇ ಬಿಟ್ಟಿದ್ದು. ಸಾಧಕರುಗಳು ಗುರುವಿನ ಮಾರ್ಗದರ್ಶನದ ಜೊತೆಗೆ ಮನನ, ಚಿಂತನ, ಮಂಥನ ನಡೆಸಿ ಸತ್ಯಾನ್ವೇಷಣೆಯಲ್ಲಿ ತೊಡಗಿರುತ್ತಾರೆ. ಅತೀಂದ್ರಿಯವಾದ ಅನುಭವ, ಆತ್ಮ, ಪರಮಾತ್ಮರ ಕುರಿತ ಜ್ಞಾನವನ್ನು ಹೊಂದಿರುವ ಅನುಭಾವಿಗಳೂ ಇರುತ್ತಾರೆ. ಅಂತಹ ಸಾಧಕರ, ಅನುಭಾವಿಗಳ ವಿಚಾರಗಳೂ ನಮಗೆ ಮಾರ್ಗದರ್ಶಿಯಾಗಬಲ್ಲವು.
     ನಾಸ್ತಿಕರು ದೇವರಿಲ್ಲವೆನ್ನುತ್ತಾರೆ. ಆಸ್ತಿಕರಾದ ಎಲ್ಲರೂ, ಅವರು ಯಾವ ಮತ, ಪಂಥ, ಧರ್ಮದವರೇ ಆಗಿರಲಿ, ತಮಗಿಂತ ದೊಡ್ಡದಾದ ಯಾವುದೋ ಒಂದು ಶಕ್ತಿ, ತತ್ವವಿದ್ದು ಅದು ಇಡೀ ಬ್ರಹ್ಮಾಂಡದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತವಾಗಿದೆ ಎಂದು ನಂಬುತ್ತಾರೆ. ಹೆಚ್ಚಿನ ಸಾಂಪ್ರದಾಯಿಕರು ಈ ಶಕ್ತಿಯನ್ನು ವ್ಯಕ್ತಿಯ ರೂಪದಲ್ಲಿ ಭಾವಿಸಿ ಪೂಜಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ.  ವಿಪರ್ಯಾಸವೆಂದರೆ ಒಂದು ಮತದವರು ನಂಬುವ, ಒಪ್ಪುವ ಈ ಶಕ್ತಿಯನ್ನು ಇತರ ಮತ/ಪಂಥಗಳವರು ಒಪ್ಪುವುದಿಲ್ಲ/ ಮಾನ್ಯ ಮಾಡುವುದಿಲ್ಲ. ಹೀಗಾಗಿ ಎಷ್ಟು ಸಂಪ್ರದಾಯಗಳಿವೆಯೋ, ಎಷ್ಟು ಸಿದ್ಧಾಂತಗಳಿವೆಯೋ ಅಷ್ಟು ದೇವರುಗಳ ಸೃಷ್ಟಿಯಾಗಿಬಿಟ್ಟಿದೆ. ಒಂದೊಂದು ಸಂಪ್ರದಾಯದವರಲ್ಲೂ ಹಲವು ದೇವರುಗಳಿದ್ದಾರೆ! ಈಗಲೂ ಹೊಸ ಹೊಸ ದೇವರುಗಳ ಸೃಷ್ಟಿಯೂ ಆಗುತ್ತಿರುವುದನ್ನೂ ಕಾಣಬಹುದಾಗಿದೆ. ಹಿಂದೆ ಫರ್ಲಾಂಗು, ಮೈಲಿಗಳ ಕಲ್ಲುಗಳನ್ನು ರಸ್ತೆಯಲ್ಲಿ ಕಾಣಬಹುದಿತ್ತು. ಈಗ ಕಿ.ಮೀ. ಕಲ್ಲುಗಳಿವೆ. ಒಂದು ಫರ್ಲಾಂಗು ಕಲ್ಲನ್ನು ಅದಕ್ಕೆ ದೈವಿಶಕ್ತಿಯಿದೆ ಎಂದು ಭಾವಿಸಿ ಪೂಜಿಸಿ ಅದಕ್ಕೊಂದು ಪುಟ್ಟ ಗುಡಿ ಕಟ್ಟಿ ಫರ್ಲಾಂಗಮ್ಮ ಎಂದು ಹೆಸರಿಟ್ಟು ಪೂಜಿಸಿದ್ದುದೂ ಇತ್ತು. ಪ್ಲೇಗು ರೋಗ ಕಾಡುತ್ತಿದ್ದ ಕಾಲದಲ್ಲಿ ಪ್ಲೇಗಮ್ಮ ದೇವರನ್ನು ಪೂಜಿಸುತ್ತಿದ್ದವರೂ ಇದ್ದರು. ಈಗಲೂ ಜಾವಗಲ್ಲಿನಲ್ಲಿ ಪ್ಲೇಗಿನಮ್ಮ ದೇವಸ್ಥಾನ ನೋಡಬಹುದು. ಬೇರೆಡೆಯೂ ಇಂತಹ ದೇವರುಗಳ ಗುಡಿಯಿರಬಹುದು. ದೇವರುಗಳ ಸಂಖ್ಯೆ ಹೆಚ್ಚಾಗಲು ಇಂತಹವೂ, ಇದನ್ನು ಪ್ರೋತ್ಸಾಹಿಸುವ ಜನರಿರುವುದೂ ಕಾರಣವಾಗಿವೆ.
     ದೇವರು ಒಬ್ಬನೇ ಎಂದು ಕ್ರೈಸ್ತರು, ಮುಸಲ್ಮಾನರು ಮಾತ್ರವಲ್ಲದೆ ಹಲವು ದೇವರನ್ನು ಪೂಜಿಸುವ ಹಿಂದೂಗಳೂ ನಂಬುತ್ತಾರೆ. ದೇವನೊಬ್ಬ, ನಾಮ ಹಲವು ಎಂದು ಬೋಧಿಸಿದ ಅನೇಕ ಸಾಧು-ಸಂತರುಗಳು, ದಾಸರುಗಳು, ದಾರ್ಶನಿಕರುಗಳ ಮಾರ್ಗದರ್ಶನ ನಮಗಿದೆ. ವಿಚಾರ ಮಾಡೋಣ. ನಮಗೆ ಈ ಬ್ರಹ್ಮಾಂಡ ಎಷ್ಟಿದೆ, ಹೇಗಿದೆ ಎಂಬುದೇ ತಿಳಿದಿಲ್ಲ. ಇನ್ನು ಇದೆಲ್ಲವನ್ನೂ ನಿಯಂತ್ರಿಸುವ ಆ ನಿಯಾಮಕನ ಬಗ್ಗೆ ಹೇಗೆ ತಿಳಿದೇವು! ನಮ್ಮ ಪರಿಸ್ಥಿತಿ ಸಂಕುಚಿತವಾಗಿದೆ, ಕೂಪಮಂಡೂಕಗಳಂತೆ ನಮ್ಮದೇ ಸರಿ ಅಂದು ವಾದಿಸಹೊರಡುತ್ತೇವೆ. ಸತ್ಯ ಅದಕ್ಕೂ ಹಿರಿದಾಗಿದೆ. ನಮ್ಮ ಮನೆಯೇ ನಮಗೆ ಒಂದು ಪ್ರಪಂಚ. ಈ ಮನೆಯಲ್ಲೂ ಒಳಗೆ ಕುಳಿತವರಿಗೆ ಹೊರಗಿನವರು ಕಾಣುವುದಿಲ್ಲ, ಹೊರಗಿನವರಿಗೆ ಒಳಗಿರುವವರು ಕಾಣುವುದಿಲ್ಲ. ಹೀಗಿರುವಾಗ ನಾವು ಸರ್ವಜ್ಞರು ಅಂದುಕೊಂಡರೆ ಆ ಸರ್ವ ಅನ್ನುವ ಪದಕ್ಕೆ ಅರ್ಥವೇ ಇಲ್ಲ. ಯಾರೂ ಸರ್ವಜ್ಞರಲ್ಲ. ಈ ಮಾತು ಹೇಳಿದರೆ ಕೆಲವರಿಗೆ ಕೋಪ ಬರುತ್ತದೆ. ಶಂಕರಾಚಾರ್ಯರು ಸರ್ವಜ್ಞರಲ್ಲವೇ, ರಾಮಾನುಜಾಚಾರ್ಯರು, ಮಧ್ವರು, ಬುದ್ಧ, ಮಹಾವೀರ ಮುಂತಾದವರು ಸರ್ವಜ್ಞರಲ್ಲವಾ ಅನ್ನುತ್ತಾರೆ. ಅವರುಗಳು ಯಾರೂ ತಮ್ಮನ್ನು ಸರ್ವಜ್ಞರು ಅಂದುಕೊಳ್ಳಲಿಲ್ಲ. ಅವರ ಅನುಯಾಯಿಗಳು ಅನ್ನುತ್ತಾರೆ! ಒಂದು ಭೂಪ್ರದೇಶವನ್ನು ಒಬ್ಬ ರಾಜ ಆಳಬಹುದು. ಅದೇ ೨೫ ರಾಜರು ಕಿತ್ತಾಡಿ ಆಳಿದರೆ ಆ ರಾಜ್ಯದಲ್ಲಿ ಬಾಳುವ ಪ್ರಜೆಗಳಿಗೆ ಏನು ಸುಖ? ಆದ್ದರಿಂದ ಒಬ್ಬ ನಿಯಾಮಕನನ್ನು ನಂಬಬೇಕು. ಹಲವಾರು ದೇವರುಗಳಿದ್ದರೆ ಈ ಬ್ರಹ್ಮಾಂಡದ ಆಗು-ಹೋಗುಗಳಲ್ಲಿ ಕಿಂಚಿತ್ತೂ ವ್ಯತ್ಯಯವಾಗದಂತೆ ನಿಯಂತ್ರಣ ಸಾಧ್ಯವಿತ್ತೇ? ಭೂಮಿ ಏಕೆ ಸೂರ್ಯನ ಸುತ್ತ ಸುತ್ತಬೇಕು? ಸೂರ್ಯನೇ ಭೂಮಿಯ ಸುತ್ತ ಸುತ್ತಲಿ ಎಂದು ಒಬ್ಬ ದೇವರು ಅಂದುಕೊಂಡು ಬದಲಾವಣೆ ಮಾಡಿದರೆ? ಇನ್ನೊಬ್ಬ ದೇವರು ಭೂಮಿಯೇ ಚಂದ್ರನ ಉಪಗ್ರಹದಂತೆ ಆಗಲಿ ಎಂದುಕೊಂಡರೆ? ಸುಮ್ಮನೆ ತರ್ಕದ ಸಲುವಾಗಿ ದೇವರೊಬ್ಬನೇ ಎಂದು ಹೇಳುವ ಸಲುವಾಗಿ ಇದನ್ನು ಹೇಳಿದ್ದಷ್ಟೇ ಹೊರತು, ಮತ್ತೇನಲ್ಲ. 
     ವೇದಗಳಲ್ಲಿ ದೇವರನ್ನು ಅನೇಕ ಹೆಸರುಗಳಲ್ಲಿ ಸಂಬೋಧಿಸಲಾಗಿದೆ. ಅಂತಹ ಒಂದು ಹೆಸರು 'ಸಂಪ್ರಶ್ನ' ಎಂಬುದು. ಒಂದು ಪ್ರಶ್ನೆಗೆ ಉತ್ತರ ಸಿಕ್ಕಿತು ಎಂದರೆ ಮತ್ತೊಂದು ಪ್ರಶ್ನೆ ಸಿದ್ಧವಿರುತ್ತದೆ. ಆ ಪ್ರಶ್ನೆಗೂ ಉತ್ತರ ಸಿಕ್ಕಿದರೆ ಮಗುದೊಂದು ಪ್ರಶ್ನೆ ಧುತ್ತೆಂದು ಬರುತ್ತದೆ. ಇದು ಮುಗಿಯುವುದೇ ಇಲ್ಲ. ಪ್ರಶ್ನೆಗಳಿಗೆ ಇನ್ನು ಉತ್ತರ ಕೊಡುವುದಕ್ಕೆ ಆಗುವುದಿಲ್ಲವೆಂದಾಗ ಉಂಟಾಗುವ ಆ ಮೌನ ಇದೆಯಲ್ಲಾ, ಅದನ್ನು ಅನಿರ್ವಚನೀಯ ಅನ್ನಬಹುದು, ಅದೂ ಸಹ ಉತ್ತರವೇ! ಪರಮಾತ್ಮನೂ ಸಹ ಅನಿರ್ವಚನೀಯ, ಉತ್ತರವಿಲ್ಲದ ಪ್ರಶ್ನೆ. ಅವನು ಹೀಗೆಯೇ ಇದ್ದಾನೆ ಅಂತ ಹೇಳಲು ಸಾಧ್ಯವಿಲ್ಲ, ಯಾರ ಯಾರ ಬುದ್ಧಿಶಕ್ತಿ, ಮೇಧಾಶಕ್ತಿ, ತಪಶ್ಶಕ್ತಿ ಎಷ್ಟೆಷ್ಟು ಹೆಚ್ಚುತ್ತಾ ಹೋಗುತ್ತೋ ಅಷ್ಟಷ್ಟು ಆ ಭಗವಂತನ ಜ್ಞಾನ ಕೂಡಾ ಹೆಚ್ಚುತ್ತಾ ಹೋಗುತ್ತೆ. 'ಪ್ರಶ್ನಿಸುವುದು' ಅಂದರೆ ತಿಳಿಯುತ್ತಾ ಹೋಗುವುದು, ಅರ್ಥಾತ್ ಜ್ಞಾನಿಗಳಾಗುವುದು. ಪ್ರಶ್ನೆಗಳಿಗೆ ಕೊನೆಯಿರುವುದಿಲ್ಲವೆಂದರೆ ಜ್ಞಾನಕ್ಕೆ ಮಿತಿಯಿಲ್ಲ ಎಂದರ್ಥ. ಸತ್ಯಾನ್ವೇಷಣೆ ಮಾಡುತ್ತಾ ಹೋದಂತೆ ನಮ್ಮ ಅರಿವು ಹೆಚ್ಚುತ್ತಾ ಹೋಗುತ್ತದೆ. ದೇವರು ಕಾಣುವುದಿಲ್ಲ, ಅದಕ್ಕೆ ನಂಬುವುದಿಲ್ಲವೆಂದರೆ ಏನು ಮಾಡಲಾದೀತು? ಆಕಾಶ ಸಹ ಕಣ್ಣಿಗೆ ಕಾಣುವುದಿಲ್ಲ. ಅದನ್ನು ಇಲ್ಲವೆನ್ನಲಾದೀತೇ? ಸಕ್ಕರೆಯ ರುಚಿಯೇ ಗೊತ್ತಿಲ್ಲದವರಿಗೆ ಸಕ್ಕರೆ ಸಿಹಿಯಾಗಿದೆ ಎಂದು ನೂರು ಸಲ ಹೇಳಿದರೂ ಅರ್ಥವಾಗದೇ ಹೋಗಬಹುದು. ಅವರು ಸಕ್ಕರೆಯನ್ನು ನಾಲಿಗೆಯ ಮೇಲೆ ಇರಿಸಿಕೊಂಡಾಗ ತಕ್ಷಣ ಅವರಿಗೆ ಸಕ್ಕರೆ ಸಿಹಿಯಾಗಿದೆ ಎಂಬುದು ಗೊತ್ತಾಗಿಬಿಡುತ್ತದೆ. ದೇವರ ವಿಚಾರವೂ ಹಾಗೆಯೇ. ಯಾರು ಎಷ್ಟು ಸಲ ಎಷ್ಟು ರೀತಿಯಲ್ಲಿ ಹೇಳಿದರೂ ನಮ್ಮ ತಲೆಗೆ ಹೋಗುವುದೇ ಇಲ್ಲ. ನಾವು ಅವನ ಬಗ್ಗೆ ಏನು ಅಂದುಕೊಂಡಿರುತ್ತೆವೆಯೋ ಅಷ್ಟೇ ನಮಗೆ ಅರ್ಥವಾಗುವುದು. ದೇವರನ್ನು ನಾವು ಅನುಭವಿಸಿದರೆ ಮಾತ್ರ ಅರಿಯಲು ಸಾಧ್ಯ. ಆ ಅನುಭವ ಬರಲು ಆತ್ಮಜ್ಞಾನ ಅವಶ್ಯಕವಿದೆ. ಆತ್ಮಜ್ಞಾನ ಗಳಿಸಲು ಜ್ಞಾನ, ಕರ್ಮ, ಉಪಾಸನೆಗಳೆಂಬ ಹಾದಿಯಲ್ಲಿ ಮುನ್ನಡೆಯಬೇಕು. ಒಂದು ವಿದ್ಯುತ್ ಬಲ್ಬು ಸ್ವಿಚ್ಚು ಹಾಕಿದರೆ ಹತ್ತಿಕೊಳ್ಳುತ್ತದೆ. ಸ್ವಿಚ್ಚು ಹಾಕದಿದ್ದರೆ ಆ ಬಲ್ಬು ೧೦೦ ವೋಲ್ಟಿನದಾಗಿರಲಿ, ೧೦೦೦ ವೋಲ್ಟಿನದಾಗಿರಲಿ ಹತ್ತುವುದೇ ಇಲ್ಲ. ಹಾಗೆಯೇ ದೇವರನ್ನು ಅರಿಯಲು ಧ್ಯಾನ (ಅದನ್ನು ಆತ್ಮಾವಲೋಕನ ಎಂದಾದರೂ ಅಂದುಕೊಳ್ಳಿ,) ಎಂಬ ಸ್ವಿಚ್ಚು ಹಾಕಬೇಕು. ಆ ಸ್ವಿಚ್ಚು ಇರುವುದು ನಮ್ಮೊಳಗೇ. ದೇವರನ್ನು ಅರಿಯಬೇಕಾದರೆ ಮೊದಲು ನಮ್ಮನ್ನು ನಾವು ಅರಿಯಬೇಕು. ಇದೇ ಸೊನ್ನೆ ಆದರೆ ಆತ್ಮನೂ ಇಲ್ಲ, ಪರಮಾತ್ಮನೂ ಇಲ್ಲ. ಎಲ್ಲವೂ ಪೊಳ್ಳು, ಜೊಳ್ಳು ಅಷ್ಟೆ.
     ಪರಮಾತ್ಮನನ್ನು ಅನುಭವಿಸಿ ತಿಳಿಯಬೇಕು ಅನ್ನುತ್ತೀರಲ್ಲಾ, ಇಡೀ ಬ್ರಹ್ಮಾಂಡದಲ್ಲೆಲ್ಲಾ ವ್ಯಾಪಿಸಿರುವ ಸರ್ವವ್ಯಾಪಕನಾದ ಅವನನ್ನು ಹುಲುಮಾನವರಾದ ನಾವು ಅರಿಯಲು ಸಾಧ್ಯವೇ ಎಂದು ಕೇಳಬಹುದು. ನೀರಿಗೆ ನಿಂಬೆರಸ, ಸಕ್ಕರೆ ಬೆರೆಸಿ ಒಂದು ಲೋಟ ಶರಬತ್ತು ಮಾಡಿದಿರೆಂದು ಇಟ್ಟುಕೊಳ್ಳೋಣ. ಆ ಶರಬತ್ತು ಹೇಗಿದೆ ಎಂದು ತಿಳಿಯಲು ಅದರ ಯಾವುದೇ ಭಾಗದ ಒಂದು ತೊಟ್ಟು ರುಚಿ ನೋಡಿದರೆ ಸಾಕಾಗುತ್ತದೆ.  ಹಿಮಾಲಯ ಪರ್ವತ ಬಹು ಎತ್ತರದವರೆಗೆ ಹಾಗೂ ಸುಮಾರು ೨೫೦೦ ಮೈಲುಗಳು ಉದ್ದದವರೆಗೆ ವ್ಯಾಪಿಸಿದೆ. ಯಾರಾದರೂ 'ಹಿಮಾಲಯವನ್ನು ನೋಡಿದ್ದೀರಾ?' ಎಂದರೆ 'ಓಹೋ, ನೋಡಿದ್ದೇವೆ' ಅನ್ನುತ್ತೇವೆ ಅಲ್ಲವೇ? ವಾಸ್ತವವಾಗಿ ನಾವು ನೋಡಿದ್ದು ಹಿಮಾಲಯದ ಯಾವುದೋ ಒಂದು ಪುಟ್ಟ ಭಾಗವನ್ನು ಮಾತ್ರ. ಆದರೂ ಪೂರ್ಣ ಹಿಮಾಲಯದ ಕುರಿತ ಕಲ್ಪನೆ ನಮ್ಮ ಅನುಭವಕ್ಕೆ ಬರುತ್ತದೆಯಲ್ಲವೇ? ಹಾಗೆಯೇ ದೇವರನ್ನು ಅನುಭವಿಸಿ ತಿಳಿಯಲು ಸಾಧ್ಯವಿದೆ. ಆ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕಷ್ಟೆ ಮತ್ತು ಶಕ್ತಿ ಗಳಿಸಿಕೊಳ್ಳಬೇಕಷ್ಟೆ! 
ತಿನಿಸ ಕಂಡೊಡನೆ ಹಸಿವು ಹಿಂಗುವುದೆ
ಜಠರಾಗ್ನಿ ತಣಿದೀತು ಸೇವಿಸಲು ತಾನೆ? |
ಅರಿವು ಇದ್ದೊಡನೆ ಪರಮಾತ್ಮ ಸಿಕ್ಕಾನೆ
ಅನುಭವಿಸಿ ಕಾಣಬೇಕವನ ಮೂಢ ||
-ಕ.ವೆಂ.ನಾಗರಾಜ್.
**************
ದಿನಾಂಕ 15.12.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

7 ಕಾಮೆಂಟ್‌ಗಳು:

  1. ’ ಅರಿವು ಇದ್ದೊಡನೆ ಪರಮಾತ್ಮ ಸಿಕ್ಕಾನೆ
    ಅನುಭವಿಸಿ ಕಾಣಬೇಕವನ ಮೂಢ’
    ನಿಜವಾದ ಮಾತು ಸಾರ್.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. Sripada Rao Manjunath
      Tumba sogasaagide.

      Gnanadev Bolde
      'ಗೊತ್ತಿಲ್ಲ' ಅನ್ನುವುದು ಇದೆಯಲ್ಲಾ, ಅದೇ ದೇವರು! . . . . .ಅದ್ಭುತ.

      ಅಳಿಸಿ
    2. Prakash Narasimhaiya
      ಆತ್ಮೀಯ ನಾಗರಾಜರೇ,
      ನಿಮ್ಮ ದೇವರು ಎಂಬ ಲೇಖನದ ತರ್ಕ ಮತ್ತು ವಿತರ್ಕ ಸೊಗಸಾಗಿ ಮೂಡಿ ಬಂದಿದೆ. ಅವರವರ ಭಾವಕ್ಕೆ ಅವರವರ ಭಕುತಿಗೆ ಎನ್ನಬೇಕಷ್ಟೇ! ಡಿ ವಿ ಜಿ ಯವರ ಹೇಳಿದ ಸಾಲುಗಳು ನೆನಪಿಗೆ ಬಂದವು .... " ದೇವರು ಇಲ್ಲಾ ಅಂತ ಎಲ್ಲಾ ಭಾರ ನೀನೆ ಹೊತ್ತು ಕೊಂಡು ಸಂಕಟ ಪಡುವ ಬದಲು, ದೇವರ ತಲೆಮೇಲೆ ಹಾಕಿ ನಿಶ್ಚಿಂತೆಯಿಂದ ಇರುವವನೇ ಜಾಣ. ದೇವರ ಬಗ್ಗೆ ನಾವು ಯಾಕೆ ತಲೆಕೆಡಿಸಿಕೊಳ್ಳಬೇಕು?"
      ಧನ್ಯವಾದಗಳು

      kavinagaraj
      ದೇವರ ಬಗ್ಗೆ ತಲೆ ಕೆಡಿಸಿಕೊಳ್ಳದವನೇ ಜಾಣ! ತಲೆ ಕೆಡಿಸಿಕೊಳ್ಳಬೇಕಾದುದು ನಮ್ಮ ಬಗ್ಗೆ!! ಧನ್ಯವಾದಗಳು, ಪ್ರಕಾಶರೇ.

      ಅಳಿಸಿ
    3. makara
      ಕವಿಗಳೆ,
      ನಿಮ್ಮ ವಿಚಾರ ಪೂರಿತ ಲೇಖನಕ್ಕೆ ಧನ್ಯವಾದಗಳು, ಅದಕ್ಕೆ ಪೂರಕವಾಗಿ ಚಿಕ್ಕಂದಿನಲ್ಲಿ ಸ್ವಾಮಿಗಳೊಬ್ಬರು ಹೇಳುತ್ತಿದ್ದ ಮಾತನ್ನು ಇಲ್ಲಿ ಪುನರುಲ್ಲೇಖಿಸುತ್ತಿದ್ದೇನೆ.
      ಒಬ್ಬನೇ ವ್ಯಕ್ತಿ ಅಮ್ಮನಿಗೆ ಮಗ, ಅಕ್ಕನಿಗೆ ತಮ್ಮ, ತಂಗಿಗೆ ಅಣ್ಣ, ಗೆಳೆಯರಿಗೆ ಸ್ನೇಹಿತ, ಶಾಲೆಯಲ್ಲಿ ವಿದ್ಯಾರ್ಥಿ. ಆಟದ ಮೈದಾನದಲ್ಲಿ ಆಟಗಾರ, ಸಿನಿಮಾ ನೋಡುವಾಗ ಪ್ರೇಕ್ಷಕ, ಹಾಡು ಹೇಳುವಾಗ ಗಾಯಕ,....ಹೀಗೆ ಏನೇನೋ ಆಗಲು ಸಾಧ್ಯವಿದೆ. ಅದೇ ರೀತಿ ಒಬ್ಬ ಜಡ್ಜ್ ಮನೆಯಲ್ಲಿ ಹೆಂಡತಿಗೆ ಗಂಡ, ಮಕ್ಕಳಿಗೆ ಅಪ್ಪ, ಕಾರನ್ನು ಡ್ರೈವ್ ಮಾಡಿಕೊಂಡು ಹೊರಟಾಗ ಡ್ರೈವರ್, ಹಿಂಬದಿಯಲ್ಲಿ ಕುಳಿತಾಗ ಪ್ರಯಾಣಿಕ...ಹೀಗೆ ವ್ಯಕ್ತಿ ಒಬ್ಬನೇ ಆದರೂ ಸಂದರ್ಭಕ್ಕೆ ತಕ್ಕಂತೆ ಅವನನ್ನು ಬೇರೆ ಬೇರೆ ಶಬ್ದಗಳಿಂದ ಕರೆಯುತ್ತೇವೆ. ಹೀಗೆ ದೇವನು ಒಬ್ಬನೇ ಆದರೂ ಸಹ ಅವನ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲೋಸುಗ ಅವನನ್ನು ಅನೇಕ ವಿಧವಾದ ಹೆಸರುಗಳಿಂದ ಕರೆಯುತ್ತೇವಷ್ಟೆ.

      kavinagaraj
      ಒಬ್ಬ ದೇವರು ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ಆ ದೇವರು ನಾವು ಹೇಳುವ ದೇವರೇ ಆಗಬೇಕೆಂದು ಬಂದೂಕು ಹಿಡಿದವರೂ ಇದ್ದಾರೆ!! ಧನ್ಯವಾದ, ಸೋದಾಹರಿತ ಪ್ರತಿಕ್ರಿಯೆಗೆ, ಶ್ರೀಧರರೇ.

      ಅಳಿಸಿ
    4. ಗಣೇಶ
      ಕವಿನಾಗರಾಜರೆ, ದೇವರು ಒಬ್ಬನೇ ಅಂತ ಇಟ್ಟುಕೊಳ್ಳೋಣ. ಮಾನವರು ಧರ್ಮ-ಕರ್ಮ ಅಂತೆಲ್ಲಾ ಕಾದಾಡುತ್ತಿದ್ದಾರೆ...ಅವರ ಸಂಗತಿ ಬಿಟ್ಟುಬಿಡೋಣ.
      ಎಲ್ಲವೂ ದೇವರ ಸೃಷ್ಟಿ ತಾನೆ? ಈ ಪ್ರಾಣಿಗಳು ದೇವರ ನಿಯಮದಂತೆ ಇರಬಹುದಲ್ವಾ? ಅಲ್ಲೆಲ್ಲಿ ಶಾಂತಿ ಇದೆ? ಅವುಗಳೂ ಒಂದಕ್ಕೊಂದು ಕಾದಾಡುತ್ತಿಲ್ಲವಾ? ವೃದ್ಧ, ಅಸಹಾಯಕ ಶಕ್ತಿಹೀನ ಪ್ರಾಣಿಯ ರಕ್ಷಣೆಗೆ ದೇವರು ಬಂದದ್ದು ಇದೆಯಾ?
      ಮಾನವನೂ ಪ್ರಾಣಿಗಳಂತೆಯೇ ಇದ್ದನಲ್ವಾ? ಆವಾಗ ಶಕ್ತಿವಂತರದ್ದೇ ಆಟ ನಡೆಯುತ್ತಿತ್ತು.ಇಂತಹವರಿಂದ ರಕ್ಷಣೆಗಾಗಿ, ಆಗಿನಕಾಲದ ಕೆಲ ಅಸಹಾಯಕ ಬುದ್ಧಿವಂತರು ದೇವರು/ಧರ್ಮ ಹುಟ್ಟುಹಾಕಿ, "ಹ್ರಾಂ ಹ್ರೂಂ..."ಎಂದೆಲ್ಲಾ ನಾಟಕ ಮಾಡಿದರು..(ಬಡ ಅಸಹಾಯಕ ಜನರ ಒಳಿತಿಗಾಗಿ)
      ಹಾಗೆಂದು ಧರ್ಮ ನಿಯಮಗಳನ್ನು ಬಿಡಿ ಎನ್ನುತ್ತಿಲ್ಲ. ಭಾರತದಲ್ಲಿ ಹುಟ್ಟಿದಾಗ ಇಲ್ಲಿನ ಪ್ರಜಾಪ್ರಭುತ್ವದ ನಿಯಮಗಳನ್ನು (ಸರಿಯೋ- ತಪ್ಪೋ), ಪಾಲಿಸುವುದು ಪ್ರತೀ ನಾಗರಿಕನ ಕರ್ತವ್ಯವೋ, ಹಾಗೇ ಆಯಾ ವ್ಯಕ್ತಿ ಜನಿಸಿದ ಮತ/ಧರ್ಮದ ಪಾಲನೆ ಮಾಡುವುದು ನ್ಯಾಯೋಚಿತ. ಹಿಂದಿನದ್ದೇ ಪವಿತ್ರ ಎನ್ನದೇ ಕಾಲಕ್ಕೆ ತಕ್ಕಂತೆ ತಪ್ಪುಗಳನ್ನು ತಿದ್ದಿಕೊಂಡು ಮುಂದುವರೆಯುವುದು ಒಳಿತು.

      kavinagaraj
      :) ಪ್ರತಿಕ್ರಿಯೆಗೆ ವಂದನೆಗಳು, ಗಣೇಶರೇ.
      ಅಸಹಾಯಕ ಬುದ್ಧಿವಂತರು, ದಡ್ಡರು ಯಾವಾಗಲೂ ಅಸಹಾಯಕರೇ! ಶಕ್ತಿವಂತರ ಆಟವೇ ಎಂದಿಗೂ ನಡೆಯುವುದು! ಆ ಶಕ್ತಿವಂತರೇ ಬುದ್ಧಿವಂತರಾದರೆ ಮಾತ್ರ ಬದಲಾವಣೆ ನಿರೀಕ್ಷಿಸಲಾದೀತು!

      ಅಳಿಸಿ