ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಅಕ್ಟೋಬರ್ 2, 2016

ಕಷ್ಟಗಳು ಇರಲಿ!


     ಇದೇನಪ್ಪಾ ಇದು? ಎಲ್ಲರೂ ಸುಖಕ್ಕಾಗಿ ಹಂಬಲಿಸುವಾಗ ಇದೇನಿದು ವಿಚಿತ್ರ ಅನಿಸಿಕೆ? ಎಂದು ಅನ್ನಿಸುವುದು ಸಹಜವೇ. ನಿಜ, ಸುಖವಿರಬೇಕು, ಒಳ್ಳೆಯ ಕಾಲ ಬರಬೇಕು. ವಿಚಾರ ಮಾಡೋಣ. ಸುಖ ನಮ್ಮನ್ನು ತೃಪ್ತರನ್ನಾಗಿಸಿದರೆ ಕಷ್ಟಗಳು ನಮ್ಮಲ್ಲಿನ ಅತ್ಯುತ್ತಮ ಸಂಗತಿಗಳು, ಪ್ರತಿಭೆಗಳು ಹೊರಬರಲು ಕಾರಣವಾಗುತ್ತವೆ. ನಾವು ಯಾರು ಯಾರನ್ನು ಮಹಾತ್ಮರು, ಸ್ಮರಣೀಯರು ಎಂದು ಗೌರವಿಸುತ್ತೇವೋ, ಪೂಜಿಸುತ್ತೇವೋ ಅವರೆಲ್ಲರೂ ಕಷ್ಟಗಳ ಸರಮಾಲೆಯನ್ನೇ ಧರಿಸಿ, ಎದುರಿಸಿ ಮುಂದೆಬಂದವರು! ಸುಖವಾಗಿ ಬೆಳೆದವರು, ಹಣ, ತೋಳ್ಬಲಗಳಿಂದ ಮೇಲೆ ಬಂದವರು, ಅಧಿಕಾರ ಹಿಡಿದವರುಗಳು ಲೌಕಿಕವಾಗಿ ಎಷ್ಟೇ ಉನ್ನತವಾದ ಸ್ಥಾನಗಳಲ್ಲಿದ್ದರೂ ಅವರು ಜನಮಾನಸದಲ್ಲಿ ಉಳಿದಿಲ್ಲ. ರಾಮಚಂದ್ರ ೧೪ ವರ್ಷಗಳ ಕಾಲ ವನವಾಸದಲ್ಲಿರಬೇಕಾಯಿತು, ಹೆಜ್ಜೆ ಹೆಜ್ಜೆಗೆ ತೊಂದರೆಗಳು ಎದುರಾದವು, ಪತ್ನಿ ಸೀತೆಯ ಅಪಹರಣವಾಯಿತು. ರಾವಣನನ್ನು ಸೋಲಿಸಿ ಮರಳಿ ಪತ್ನಿಯನ್ನು ಕರೆತಂದರೂ ಲೋಕಾಪವಾದಕ್ಕೆ ಒಳಗಾಗಬೇಕಾಯಿತು. ಆದರೆ ಇವುಗಳು ಆತನ ಆದರ್ಶಗಳನ್ನು ಅಲುಗಾಡಿಸಲಿಲ್ಲ, ಬದಲಾಗಿ ಗಟ್ಟಿಗೊಳಿಸಿದವು. ಕೃಷ್ಣ ಹುಟ್ಟುವ ಕ್ಷಣದಿಂದಲೇ ಆತನ ಜೀವಕ್ಕೆ ಕುತ್ತುಗಳು ಎದುರಾದವು. ಇದರಿಂದಾಗಿ ಸದಾ ಜಾಗೃತನಾಗಿರಲು, ಸಮಯ, ಸಂದರ್ಭಗಳಿಗೆ ಅನುಸಾರವಾಗಿ ಚಾಣಾಕ್ಷತನದಿಂದ ಎದುರಿಸುವ ಕಲೆ ಅವನಿಗೆ ಸಿದ್ಧಿಸಿತು. ಧರ್ಮ ಸಂಸ್ಥಾಪನೆಗಾಗಿ ಅರ್ಜುನನಾದಿಯಾಗಿ ಎಲ್ಲರನ್ನೂ ಪ್ರೇರಿಸುವ ಶಕ್ತಿ ಅವನಲ್ಲಿತ್ತು. ಇತ್ತೀಚಿನ ಉದಾಹರಣೆಗಳನ್ನೇ ನೋಡೋಣ. ಮಹಾತ್ಮ ಗಾಂಧಿ, ಅಂಬೇಡ್ಕರ್, ಅಬ್ದುಲ್ ಕಲಾಮರಂತಹ ಮಹಾನ್ ನಾಯಕರುಗಳೆಲ್ಲಾ ಕಷ್ಟಗಳನ್ನೇ ಹಾಸಿ ಹೊದ್ದಿದ್ದವರು. ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿದ ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಕನ್ನಡನಾಡಿನ ಸಂಗೊಳ್ಳಿ ರಾಯಣ್ಣ, ದೊಂಡಿಯವಾಘ ಮೊದಲಾದವರು ಬಡತನದ ಕುಟುಂಬಗಳಿಂದ ಬಂದವರೇ ಆಗಿದ್ದರು. ಜೀವಮಾನದ ಹೆಚ್ಚು ಅವಧಿಯನ್ನು ಜೈಲಿನಲ್ಲೇ ಕಳೆದಿದ್ದ ನೆಲ್ಸನ್ ಮಂಡೇಲಾ, ಮ್ಯಾನ್ಮಾರಿನ (ಬರ್ಮಾ) ಸೂಕಿ ಅದಮ್ಯ ಚೇತನಗಳಿಗೆ ಸಾಕ್ಷಿಗಳು! ಇಂತಹ ನೂರಾರು, ಸಾವಿರಾರು ಉದಾಹರಣೆಗಳನ್ನು ಕೊಡಬಹುದು.
     ನಾವು ದೇವರನ್ನು ಯಾವಾಗ ಜ್ಞಾಪಿಸಿಕೊಳ್ಳುತ್ತೇವೆ? ಕಷ್ಟಗಳು ಬಂದಾಗ ಮಾತ್ರ ದೇವರ ನೆನಪಾಗುತ್ತದೆ. ಸಂಕಟ ಬಂದಾಗ ವೆಂಕಟರಮಣ! ನಮ್ಮ ತೊಂದರೆ, ದುಃಖಗಳನ್ನು ಪರಿಹರಿಸದ ದೇವರ ಮೇಲೆ ಸಿಟ್ಟನ್ನೂ ಮಾಡಿಕೊಳ್ಳುತ್ತೇವೆ. ಎಷ್ಟು ಪರೀಕ್ಷೆ ಮಾಡುತ್ತೀಯಾ ದೇವರೇ ಎಂದು ಕಷ್ಟಗಳಿಗೆ ಅವನೇ ಕಾರಣನೆಂಬಂತೆ ದೂರುತ್ತೇವೆ. ಅದೇ ಯಶಸ್ಸಿನ ಅಲೆಯ ಮೇಲೆ ತೇಲುತ್ತಿರುವಾಗ, ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುವಾಗ ದೇವರ ನೆನಪೇ ಆಗುವುದಿಲ್ಲ. ಕಟ್ಟಿದ ದೊಡ್ಡ ಬಂಗಲೆ, ಐಷಾರಾಮಿ ಕಾರು, ದೊಡ್ಡ ಆಸ್ತಿಗೆ ಒಡೆಯರಾದುದು ಸ್ವಂತ ಪರಿಶ್ರಮದ ಫಲದಿಂದ ಎಂದು ಅಂದುಕೊಳ್ಳುವ ನಾವು ವಹಿವಾಟಿನಲ್ಲಿ ದೊಡ್ಡ ನಷ್ಟವಾಗಿ ಎಲ್ಲವನ್ನೂ ಕಳೆದುಕೊಳ್ಳುವ ಹಂತ ಬಂದಾಗ ಮಾತ್ರ ದೇವರನ್ನು ನಿಷ್ಕರುಣಿ ಎಂದುಬಿಡುತ್ತೇವೆ.
     ಸುಖವಾಗಿರುವುದು, ಆನಂದವಾಗಿರುವುದು ತಪ್ಪಲ್ಲ. ವಾಸ್ತವವಾಗಿ ಎಲ್ಲಾ ಜೀವಿಗಳೂ ಸುಖವಾಗಿ, ಆನಂದವಾಗಿ ಬದುಕುವ ಸಲುವಾಗಿಯೇ ಹುಟ್ಟಿದ್ದು, ಅದನ್ನು ಗಳಿಸಲು ಶ್ರಮಿಸುತ್ತಲೇ ಇರುತ್ತವೆ. ನಾವು ಸುಖವಾಗಿದ್ದಾಗ, ಆನಂದವಾಗಿದ್ದಾಗ ಹೇಗಿರುತ್ತೇವೆ? ಆನಂದ, ಪ್ರೀತಿ, ಯಶಸ್ಸು, ವಿಶ್ವಾಸ, ಒಳ್ಳೆಯ ಸಂಬಂಧಗಳು, ಆರೋಗ್ಯ ಇವೆಲ್ಲವೂ ಸುಖವಾಗಿರುವಾಗ ಇರುವಂತಹವು. ಎಲ್ಲವೂ ಸಮೃದ್ಧವಾಗಿದ್ದು ಸಂತೋಷವಾಗಿದ್ದಾಗ ನಾವು ಸೋಮಾರಿಗಳಾಗಿರುತ್ತೇವೆ. ಅಶಿಸ್ತಿನ ಜೀವನ ನಮ್ಮದಾಗುತ್ತದೆ. ಮನಸ್ಸಿಗೆ ಬೇಕೆನ್ನಿಸಿದುದನ್ನು ಸೇವಿಸಿ ಬೊಜ್ಜು ಬೆಳೆಸಿಕೊಳ್ಳುತ್ತೇವೆ. ಅದೇ ನಮ್ಮ ಆರೋಗ್ಯ ಹದಗೆಟ್ಟಾಗ ಸಿಕ್ಕಿದ್ದನ್ನು ತಿನ್ನದೆ ಶಿಸ್ತಿನಿಂದ ಇರಬೇಕೆಂದು ಅಂದುಕೊಳ್ಳುತ್ತೇವೆ. ಮತ್ತೆ ಮೊದಲಿನಂತೆ ಆರೋಗ್ಯ ಸರಿಯಾದಾಗ ಅದನ್ನು ಮರೆತುಬಿಡುತ್ತೇವೆ. ಇಂದು ತಿಂದುಬಿಡೋಣ, ನಾಳೆಯಿಂದ ಸರಿಯಾಗಿ ಇದ್ದರಾಯಿತು ಅಂದುಕೊಳ್ಳುತ್ತೇವೆ. ಯಶಸ್ಸು ಬಂದಾಗ ನಮಗೆ ಅಹಂ ಜಾಸ್ತಿಯಾಗುತ್ತದೆ. ನಮ್ಮ ಮೇಲೆ ನಮಗಿರುವ ವಿಶ್ವಾಸ, ನಮ್ಮಲ್ಲಿನ ಹಣ, ಅಧಿಕಾರ, ಜನರ ಬೆಂಬಲ ನಮ್ಮನ್ನು ಅಹಂಕಾರಿಗಳನ್ನಾಗಿ ಮಾಡುತ್ತದೆ, ಮದದಿಂದ ಮತ್ತೇರಿಬಿಡುತ್ತೇವೆ. ಇತರರನ್ನು ನಿಕೃಷ್ಟವಾಗಿ ಕಾಣುವಂತೆ ಮಾಡುತ್ತದೆ. ಚಿಕ್ಕಂದಿನಲ್ಲಿ ಬಡತನದಿಂದ ಬೆಳೆದು ಸ್ವಂತ ಪರಿಶ್ರಮದಿಂದ ಮುಂದೆ ಬಂದಿದ್ದೇನೆ ಅನ್ನುವುದೂ ಹೊಗಳಿಕೊಳ್ಳುವ ಸಾಧನವಾಗುತ್ತದೆ. ಇತರರು ನಮ್ಮೊಡನೆ ಒಳ್ಳೆಯ ಸಂಬಂಧ ಹೊಂದಿದ್ದಾರೆ ಅನ್ನುವುದು ಅವರುಗಳು ಏನು ಹೇಳಿದರೂ ಕೇಳುತ್ತಾರೆ ಎಂಬ ಭಾವನೆ ಬಲವಾಗಿಸುತ್ತದೆ ಮತ್ತು ಅವರನ್ನು ಕೇಳದೆಯೇ ಅವರ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿಸುತ್ತದೆ. ಹೊಗಳಿಕೆ ಮಾತ್ರ ಇಷ್ಟವಾಗುತ್ತದೆ. ಸದುದ್ದೇಶದ ಟೀಕೆಗಳನ್ನೂ ಸಹಿಸಿಕೊಳ್ಳದ ಮನೋಪ್ರವೃತ್ತಿ ಬರುತ್ತದೆ.  ಇಂತಹ ಹಲವಾರು ಸಂಗತಿಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು. ಸುಖವಾಗಿರುವಾಗ ನಮ್ಮಲ್ಲಿನ ಕೆಟ್ಟ ಪ್ರವೃತ್ತಿಗಳು ಪ್ರಕಟಗೊಳ್ಳುತ್ತಾಹೋಗುತ್ತವೆ ಮತ್ತು ಶತ್ರುಗಳು ಹೆಚ್ಚಾಗುತ್ತಾರೆ.
     ಕಷ್ಟದ ಸಂದರ್ಭಗಳಲ್ಲಿ ಅದರಿಂದ ಹೊರಬರಲು ನಾವು ನಮ್ಮ ಅತ್ಯುತ್ತಮ ಪ್ರತಿಭೆಯನ್ನು ಉಪಯೋಗಿಸಿಕೊಳ್ಳುತ್ತೇವೆ. ನಾವು ಆಗ ವಿನೀತರಾಗಿರುತ್ತೇವೆ, ನಡವಳಿಕೆಯಲ್ಲಿ ಸಂಯಮವಿರುತ್ತದೆ, ಕೋಪವನ್ನು ನಿಗ್ರಹಿಸಿಕೊಳ್ಳುತ್ತೇವೆ, ಶಿಸ್ತಿನಿಂದ ವರ್ತಿಸುತ್ತೇವೆ, ಅಹಂಕಾರ ಹತ್ತಿರವೂ ಸುಳಿಯುವುದಿಲ್ಲ. ಯಾರೊಬ್ಬರನ್ನೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಏಕೆಂದರೆ ಒಂದಲ್ಲಾ ಒಂದು ಸಮಯದಲ್ಲಿ ಅವರ ಸಹಕಾರವೂ ಬೇಕಾದೀತು ಎಂಬ ಪ್ರಜ್ಞೆ ಜಾಗೃತವಿರುತ್ತದೆ. ದೇವರ ನೆನಪು ಮಾಡಿಕೊಳ್ಳುತ್ತೇವೆ, ಗುರು-ಹಿರಿಯರನ್ನು ಗೌರವಿಸುತ್ತೇವೆ. ಒಟ್ಟಾರೆಯಾಗಿ ಕಷ್ಟಕಾಲದಲ್ಲಿ ನಾವು ಸಜ್ಜನರಾಗಿರುತ್ತೇವೆ! ಹಾಗಾದರೆ, ಕಷ್ಟಗಳೇ ಇರಲಿ ಎನ್ನುತ್ತೀರಾ ಎಂದರೆ, ಖಂಡಿತಾ ಇಲ್ಲ, ಕಷ್ಟಗಳು ಹೋಗಿ ಸುಖ, ಸಮೃದ್ಧಿ, ಶಾಂತಿಯ ದಿನಗಳು ಬರಲಿ ಎಂಬುದೇ ಎಲ್ಲರ ಹಾರೈಕೆಯಾಗಿದೆ. ವೇದಗಳು, ಎಲ್ಲಾ ಧರ್ಮಗ್ರಂಥಗಳೂ ಸಕಲರ ಹಿತವನ್ನೇ ಸಾರುತ್ತಿವೆ. ಸ್ವಂತ ಮತ್ತು ಸಮಾಜದ ಹಿತ ಎಲ್ಲಿದೆಯೆಂದರೆ ಕಷ್ಟಕಾಲದಲ್ಲಿ ನಾವು ಹೇಗಿದ್ದೆವೋ, ನಮ್ಮ ಸ್ವಭಾವ ಯಾವ ರೀತಿ ಒಳ್ಳೆಯದಿದ್ದಿತ್ತೋ ಸುಖವಾಗಿರುವ ಕಾಲದಲ್ಲೂ ನಮ್ಮ ಸ್ವಭಾವ ಅದೇ ರೀತಿ ಇರಬೇಕಾದುದೇ ಆಗಿದೆ. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದುಕೊಂಡ ಎಂಬ ಗಾದೆಯಂತೆ ಸುಖ ಬಂತೆಂದು ನಮ್ಮ ಕಷ್ಟಕಾಲದ ದಿನಗಳನ್ನು ಮರೆತು, ಆ ದಿನಗಳಲ್ಲಿನ ನಮ್ಮ ನಡೆಗಳನ್ನು ಮರೆತು ಹುಂಬರಂತೆ ವರ್ತಿಸಿದರೆ ಅದು ನಮಗೂ ಮತ್ತು ಸಮಾಜಕ್ಕೂ ಹಾನಿ ತರುವುದರಲ್ಲಿ ಸಂದೇಹವಿಲ್ಲ.
     ನಾವು ಪ್ರವರ್ಧಮಾನಕ್ಕೆ ಬರುವಲ್ಲಿ ಸುತ್ತಲಿನ ಸಮಾಜದ ಕೊಡುಗೆಯೂ ಇದೆಯೆಂಬುದನ್ನು ಅರಿವಿನಲ್ಲಿರಿಸಿಕೊಂಡು ನಾವು ಮುಂದೆ ಬಂದಂತೆ ಹಿಂದಿರುವ ಇತರರನ್ನೂ ಮುಂದೆ ಬರಲು ಸಹಕರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಋಗ್ವೇದದ ಈ ಮಂತ್ರದ ಕರೆ ಆಪ್ಯಾಯಮಾನವಾಗಿದೆ:   'ಉತ ದೇವಾ ಅವಹಿತಂ ದೇವಾ ಉನ್ನಯಥಾ ಪುನಃ | ಉತಾಗಶ್ಚಕ್ರುಷಂ ದೇವಾ ದೇವಾ ಜೀವಯಥಾ ಪುನಃ || (ಋಕ್.೧೦.೧೩೭.೧)' ಹೇ, ದಾನಶೀಲರಾದ ವಿದ್ವಾಂಸರೇ, ಕೆಳಗೆ ಬಿದ್ದವನನ್ನು ಮತ್ತೆ ಮೇಲಕ್ಕೆತ್ತಿರಿ. ಮತ್ತು ಪುಣ್ಯಾತ್ಮರೇ, ಪಾಪ ಮಾಡುವವನಲ್ಲಿ, ಮರಳಿ ಸರಿದಾರಿಗೆ ತಂದು ನವಜೀವನವನ್ನು ತುಂಬಿಸಿರಿ ಎಂಬುದು ಈ ಮಂತ್ರದ ಅರ್ಥ. ನಾವೂ ಒಂದೊಮ್ಮೆ ಕಷ್ಟಪಟ್ಟವರೇ ಅಲ್ಲವೇ? ಇತರರ ಕಷ್ಟಗಳಿಗೂ ಮರುಗೋಣ, ಸಹಾಯಹಸ್ತ ಚಾಚೋಣ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಸಮಚಿತ್ತದಲ್ಲಿ ನಡೆದರೆ ಅಂತಹ ವ್ಯಕ್ತಿ ಪರಿಪೂರ್ಣ ಮಾನವತ್ವದ ಕಡೆಗೆ ಹೆಜ್ಜೆಯಿಡುತ್ತಿದ್ದಾನೆ ಎಂದೇ ತಿಳಿಯಬೇಕು. ಮಹತ್ವದ ಸಂಗತಿಯೆಂದರೆ, ಕಷ್ಟಕಾಲದಲ್ಲಿ ನಾವು ಹೇಗೆ ಶಿಸ್ತಿನಿಂದ, ವಿನೀತತೆಯಿಂದ, ಸಂಯಮದಿಂದ ಇದ್ದೆವೋ ಅದೇ ರೀತಿ ಸುಖ ಬಂದಾಗಲೂ ನಡೆದುಕೊಂಡರೆ ನಮಗೆ ಕಷ್ಟಗಳೇ ಬರಲಾರವು!
-ಕ.ವೆಂ.ನಾಗರಾಜ್.

3 ಕಾಮೆಂಟ್‌ಗಳು: