ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಆಗಸ್ಟ್ 28, 2017

ಹೊಗಳಿಕೆಯ ನಿರೀಕ್ಷೆ


     ಹೊಗಳಿಕೆಯ ನಿರೀಕ್ಷೆ ಕುಡಿತದ ಚಟವಿದ್ದಂತೆ. ಕುಡಿಯುವುದು ಕೆಟ್ಟದ್ದು ಎಂದು ಗೊತ್ತಿದ್ದರೂ ಕುಡಿತ ಬಿಡಲಾರದ ಕುಡುಕನಂತೆ, ಹೊಗಳಿಕೆಯಲ್ಲಿ ಸತ್ಯವಿರಲಿ, ಇಲ್ಲದಿರಲಿ, ಇತರರು ತಮ್ಮನ್ನು ಹೊಗಳುತ್ತಿರಬೇಕು ಎಂದು ನಿರೀಕ್ಷಿಸುವವರಿಗೇನೂ ಕೊರತೆಯಿಲ್ಲ. ಅಂತಹವರು ಕೊನೆಗೆ ಯಾವ ಸ್ಥಿತಿ ತಲುಪುತ್ತಾರೆಂದರೆ, ಹೊಗಳುಭಟರನ್ನು ಮಾತ್ರ ಗೌರವಿಸುತ್ತಾರೆ, ಅವರ ಮಾತನ್ನು ಮಾತ್ರ ಕೇಳುತ್ತಾರೆ, ಆತ್ಮ ಪ್ರಶಂಸೆ ಮಾಡಿಕೊಳ್ಳುತ್ತಾರೆ. ಸದುದ್ದೇಶದ ಟೀಕೆಗಳೂ ಸಹ್ಯವೆನಿಸುವುದಿಲ್ಲ. ತಾವು ದೊಡ್ಡ ಮನುಷ್ಯರೆಂದು ಬೀಗುತ್ತಾರೆ ಮತ್ತು ತಮ್ಮನ್ನು ಎಲ್ಲರೂ ಗೌರವಿಸಬೇಕು ಎಂಬ ಅಪೇಕ್ಷೆ ಬೆಳೆಸಿಕೊಳ್ಳುತ್ತಾರೆ. ತಮ್ಮ ಏಳಿಗೆಯನ್ನೇ ಬಯಸುವ ಆತ್ಮೀಯರನ್ನೂ ಸಹ ಅವರು ತಮ್ಮನ್ನು ಹೊಗಳುವುದಿಲ್ಲವೆಂಬ ಕಾರಣಕ್ಕೆ ದೂರವಿಟ್ಟುಬಿಡುತ್ತಾರೆ. ಈ ಚಟದಿಂದಾಗಿ ಅವರು ತಮ್ಮ ಹಿರಿಮೆಗೆ ಚ್ಯುತಿ ತಂದುಕೊಳ್ಳುತ್ತಾರೆ. ಮೇಲೇರುತ್ತಿರುವವರು, ಉನ್ನತ ಸ್ಥಾನದಲ್ಲಿರುವವರು, ಪ್ರತಿಭಾನ್ವಿತರು ಕೆಳಕ್ಕೆ ಜಾರಿದ ನಂತರವಷ್ಟೇ ಅವರುಗಳಿಗೆ ತಪ್ಪಿನ ಅರಿವಾಗುವುದು! 300 ಜನ ಚಪ್ಪಾಳೆ ತಟ್ಟುವವರು ಮುಂದೆ ಇದ್ದಾಗ ಜೊತೆಗೆ ಇರುವ ಮೂರು ಜನರನ್ನು ಕಡೆಗಣಿಸಿಬಿಡುತ್ತಾರೆ. ಇದು ಹೊಗಳಿಕೆಯಿಂದ ಉದ್ಭವಿಸುವ, ವಿವೇಚನಾಶಕ್ತಿಯನ್ನು ಮುಚ್ಚಿಹಾಕುವ ಪೊರೆ. ರಾಜಕೀಯ, ಸಾಹಿತ್ಯ, ಅಧಿಕಾರ, ಇತ್ಯಾದಿ ಯಾವುದೇ ಕ್ಷೇತ್ರದಲ್ಲಿ ಇಂತಹ ಬೆಳವಣಿಗೆ ಕಂಡುಬರುತ್ತಿರುತ್ತದೆ. ಈ ಕಾರಣಕ್ಕಾಗಿಯೇ ಬಸವಣ್ಣನವರು ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸದಿರಿ ಎಂದಿದ್ದು.
     ಹೊಗಳಿಕೆಯ ನಿರೀಕ್ಷೆ ಎಂತಹ ಪ್ರಮಾದವನ್ನು ಉಂಟು ಮಾಡುತ್ತದೆ ಎಂಬುದಕ್ಕೆ ಈ ಉದಾಹರಣೆ ಕೊಡಬಹುದು. ಸುಮಾರು 1500 ವರ್ಷಗಳ ಹಿಂದೆ ಇದ್ದ ಭಾರವಿ ಒಬ್ಬ ದೊಡ್ಡ ವಿದ್ವಾಂಸ, ಪ್ರಸಿದ್ಧ ಸಂಸ್ಕೃತ ಕಾವ್ಯ 'ಕಿರಾತಾರ್ಜುನೀಯ' ರಚಿಸಿದ್ದವನು. ಅವನು ಚಿಕ್ಕವನಾಗಿದ್ದಾಗ ಗುರುಗಳಿಂದ ಎಲ್ಲಾ ವಿದ್ಯೆಗಳಲ್ಲೂ ಪಂಡಿತನಾಗಿ ವಾಪಸು ಬಂದಾಗ ಅವನ ಪಾಂಡಿತ್ಯ, ಸಾಮರ್ಥ್ಯ ಕಂಡು ಊರವರೆಲ್ಲಾ ಹೊಗಳುತ್ತಿದ್ದರೂ ಅವನ ಅಪ್ಪ ಮಾತ್ರ ಸುಮ್ಮನಿರುತ್ತಿದ್ದರು. ಭಾರವಿಗೆ ಅಪ್ಪನಿಂದಲೂ ಹೊಗಳಿಸಿಕೊಳ್ಳಬೇಕೆಂಬ ಆಸೆ. ಬರೆದಿದ್ದೆಲ್ಲವನ್ನೂ ಅಪ್ಪನಿಗೆ ಒಪ್ಪಿಸುತ್ತಿದ್ದ. ಎಲ್ಲಾ ಕೇಳುತ್ತಿದ್ದ ಅಪ್ಪ, 'ಇನ್ನೂ ಚೆನ್ನಾಗಿ ಬರೆಯಬಹುದಿತ್ತು' ಎಂದುಬಿಡುತ್ತಿದ್ದ. ಹೀಗೆ ಅನೇಕ ಸಲ ಆಯಿತು. ಇಡೀ ಊರೇ ಹೊಗಳುತ್ತಿದ್ದರೂ ಅಪ್ಪ ಮಾತ್ರ ಹಂಗಿಸುವುದನ್ನು ಕಂಡು ಭಾರವಿಗೆ ಅಪ್ಪನ ಮೇಲೆ ಸಿಟ್ಟು ಹೆಚ್ಚಾಗುತ್ತಾ ಹೋಯಿತು. ಎಷ್ಟರ ಮಟ್ಟಿಗೆ ಅಂದರೆ ಅಪ್ಪನನ್ನು ಕೊಂದೇಬಿಡಬೇಕು ಅಂದುಕೊಂಡ. ಒಂದು ರಾತ್ರಿ ಅಟ್ಟದ ಮೇಲೆ ಕುಳಿತು ಅಪ್ಪ-ಅಮ್ಮ ಊಟ ಮಾಡಿ ಮಲಗುವುದನ್ನೇ ಕಾಯುತ್ತಿದ್ದ. ನಿದ್ದೆ ಮಾಡಿದ ಸಮಯದಲ್ಲಿ ಅಪ್ಪನನ್ನು ಕೊಲ್ಲಬೇಕು ಎಂಬುದು ಅವನ ಯೋಜನೆ. ಅಪ್ಪ ಊಟ ಮುಗಿಸಿ ಎಲೆ-ಅಡಿಕೆ ಹಾಕಿಕೊಳ್ಳುತ್ತಿದ್ದಾಗ ಅಮ್ಮ ಹೇಳುತ್ತಿದ್ದಳು, "ಭಾರವಿ ಅಷ್ಟೊಂದು ಬುದ್ಧಿವಂತ. ಎಲ್ಲರೂ ಅವನನ್ನು ಮೆಚ್ಚುತ್ತಾರೆ. ನೀವು ಮಾತ್ರ ಅವನನ್ನು ಮೂದಲಿಸುತ್ತಲೇ ಇರುತ್ತೀರಿ. ಅವನು ಬಹಳ ಬೇಜಾರು ಮಾಡಿಕೊಂಡಿದ್ದಾನೆ". ಅದಕ್ಕೆ ಅಪ್ಪ, "ನನಗೆ ಗೊತ್ತು, ಅವನು ತುಂಬಾ ಜಾಣ. ಅವನನ್ನು ಹೊಗಳಿದರೆ ತೃಪ್ತಿ ಆಗಿ ಸುಮ್ಮನಿದ್ದುಬಿಡ್ತಾನೆ. ನಾನು ಹೀಗೆ ಮಾಡಿದರೆ ಅವನು ಇನ್ನೂ ಹೆಚ್ಚು ಸಾಧನೆ ಮಾಡಿ ಇನ್ನೂ ಮುಂದೆ ಬರುತ್ತಾನೆ. ಅದೇ ನನ್ನ ಆಸೆ". ಭಾರವಿಗೆ ದುಃಖ ತಡೆಯಲಾಗಲಿಲ್ಲ. ಕೆಳಗೆ ಬಂದವನೇ ಅಪ್ಪನ ಕಾಲು ಹಿಡಿದು ಕ್ಷಮೆ ಕೇಳಿದ. ಅಪ್ಪ-ಅಮ್ಮರಿಗೆ ವಿಧೇಯನಾಗಿ ಹೆಚ್ಚಿನ ಸಾಧನೆ ಮಾಡಿ ಜಗತ್ಪ್ರಸಿದ್ಧನಾದ. ಅಪ್ಪ-ಅಮ್ಮರ ಮಾತುಗಳು ಅವನ ಕಿವಿಗೆ ಬಿದ್ದಿರದೇ ಇದ್ದಿದ್ದರೆ ಅನಾಹುತವಾಗಿಬಿಡುತ್ತಿತ್ತು.
     ಹಾಗಾದರೆ ಹೊಗಳಿಕೆ ಕೆಟ್ಟದ್ದೇ? ಖಂಡಿತಾ ಅಲ್ಲ, ಹೊಗಳಿಕೆ ಕೆಟ್ಟದ್ದಲ್ಲ, ಹೊಗಳಿಕೆಯ ನಿರೀಕ್ಷೆ ಕೆಟ್ಟದ್ದು ಅಷ್ಟೆ. ಹೊಗಳಿಕೆ ಒಂದು ಅದ್ಭುತ ಉತ್ತೇಜಕ ಟಾನಿಕ್. ಆ ಟಾನಿಕ್ ಅನ್ನು ಹಿತಮಿತವಾಗಿ ಸೇವಿಸಬೇಕು. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಜೇನನ್ನು ಸ್ವಲ್ಪ ಸೇವಿಸಿದರೆ ಉಲ್ಲಾಸವಾಗುತ್ತದೆ, ಹೆಚ್ಚಾದರೆ ಹೊಟ್ಟೆ ಕೆಡುತ್ತದೆ. ಹೊಗಳಿಕೆ ಚಮತ್ಕಾರ ಮಾಡಬಲ್ಲದು. ನೀನು ಮಾಡಬಲ್ಲೆ, ದೊಡ್ಡ ಶಕ್ತಿವಂತ ನೀನು ಎಂದು ಹನುಮಂತನನ್ನು ಉತ್ತೇಜಿಸಿದಾಗ ಅವನು ಸಮುದ್ರವನ್ನೇ ಲಂಘಿಸಿ ಲಂಕೆ ತಲುಪಿದ. ಒಬ್ಬ ಕ್ರೀಡಾಪಟು, ವಿದ್ಯಾರ್ಥಿ, ಸಾಧಕ, ಯೋಧ, ಹೀಗೆ ಯಾರೇ ಇರಲಿ ಉತ್ತೇಜಿಸಿದಾಗ ಅವರಲ್ಲಿನ ಅತ್ಯುತ್ತಮ ಶಕ್ತಿ, ಅತ್ಯುತ್ತಮ ಪ್ರತಿಭೆ ಹೊರಬರುತ್ತದೆ. ಕೀಳರಿಮೆ ಓಡಿಸಲು ಇದಕ್ಕಿಂತ ಉತ್ತಮ ಔಷಧಿ ಇರಲಾರದು. ಖ್ಯಾತ ನಟಿ ಮರ್ಲಿನ್ ಮನ್ರೋ ಹೇಳಿದ್ದ ಮಾತಿದು: 'ನಾನು ಚಿಕ್ಕವಳಾಗಿದ್ದಾಗ ಯಾರೂ ನನ್ನನ್ನು ನೀನು ಸುಂದರವಾಗಿದ್ದೀಯ ಎಂದು ಹೇಳಲಿಲ್ಲ. ಪ್ರತಿಯೊಬ್ಬ ಚಿಕ್ಕ ಹುಡುಗಿಗೂ ನೀನು ಚೆನ್ನಾಗಿದ್ದೀಯಾ ಎಂದು ಅವಳು ಸುಂದರವಾಗಿರಲಿ, ಇಲ್ಲದಿರಲಿ, ಹೇಳಲೇಬೇಕು'. ಆತ್ಮ ವಿಶ್ವಾಸ ಉತ್ತೇಜಿಸುವ ಹೊಗಳಿಕೆಯ ಮಾತುಗಳಿಂದ ಸಾಧಕರು ಉದಯಿಸುತ್ತಾರೆ.
     ಹೊಗಳಿಕೆಯ ಮತ್ತೊಂದು ಮುಖ ನೋಡೋಣ. ವಿಷಾದದ ಸಂಗತಿಯೆಂದರೆ ಹೆಚ್ಚಿನವರು ಹೊಗಳಿಸಿಕೊಂಡು ಹಾಳಾಗಲು ಬಯಸುತ್ತಾರೆಯೇ ಹೊರತು, ಟೀಕಿಸಿಕೊಂಡು ಉಳಿಯಲು ಇಷ್ಟಪಡಲಾರರು. ಯಾರನ್ನಾದರೂ ಹಾಳು ಮಾಡಬೇಕೆಂದರೆ ಅವರನ್ನು ಯದ್ವಾ ತದ್ವಾ ಹೊಗಳಿದರೆ ಆಯಿತು. ಇದು ನರಕಕ್ಕೆ ಹೋಗುವ ದಾರಿಯನ್ನು ಸುಂದರವಾದ ರೀತಿಯಲ್ಲಿ ಅಲಂಕರಿಸಿದಂತೆ! ಹೊಗಳಿಸಿಕೊಂಡವರು ತಮ್ಮ ತಪ್ಪುಗಳನ್ನು ಇನ್ನಷ್ಟು ಹೆಚ್ಚು ಮಾಡುತ್ತಾರೆ ಮತ್ತು ಫಲಿತಾಂಶ, ಅವರು ಕೆಳಗೆ ಬೀಳುತ್ತಾರೆ. ಹೊಗಳುವುದು ಹಾಳು ಮಾಡುವುದಕ್ಕೆ, ಬಯ್ಯುವುದು ಬದುಕುವುದಕ್ಕೆ ಎಂಬ ಆಡು ಮಾತಿನಲ್ಲಿ ಅರ್ಥವಿದೆ. ಶಕುನಿ ಕೌರವರನ್ನು ಹೊಗಳಿ, ಹೊಗಳಿ ಅವರನ್ನು ನಾಶ ಮಾಡುವ ಒಳ ಇಚ್ಛೆಯನ್ನು ನೆರವೇರಿಸಿಕೊಂಡ. ರಾಜಕೀಯ ನಾಯಕರನ್ನು, ಹಿರಿಯ ಅಧಿಕಾರಿಗಳನ್ನು ಹೊಗಳಿ, ಓಲೈಸಿ ಸ್ವಾರ್ಥ ಈಡೇರಿಸಿಕೊಳ್ಳುವವರನ್ನು ಸಾಮಾನ್ಯವಾಗಿ ಕಾಣುತ್ತಲೇ ಇರುತ್ತೇವೆ. ಅಂತಹವರ ಹಿಂದೆ ಹಿಂಡು ಹಿಂಡು ಹಿಂಬಾಲಕರುಗಳು ಕಾಣಸಿಗುತ್ತಾರೆ. ಅಧಿಕಾರ ಹೋಯಿತೋ, ಅವರ ಹಿಂದೆ ನರಪಿಳ್ಳೆಯೂ ಇರುವುದಿಲ್ಲ.
     ಹೊಗಳಿಕೆಯನ್ನು ಇಷ್ಟಪಡದಿರುವವರು ಇದ್ದಾರೆಯೇ? ದೇವರನ್ನೂ ಹೊಗಳಿ ಮೆಚ್ಚಿಸಲು ಪ್ರಯತ್ನಿಸುವವರು ನಾವು. ಸಹಸ್ರನಾಮ ಪಠಣ, ಪೂಜೆ, ಪುನಸ್ಕಾರ, ಇತ್ಯಾದಿಗಳೂ ಸಹ ದೇವರನ್ನು ಹೊಗಳುವ ಕ್ರಿಯೆಗಳೇ! ಇಡೀ ಜಗತ್ತನ್ನೇ ನಮ್ಮ ಉಪಯೋಗಕ್ಕಾಗಿ ಕೊಟ್ಟಿರುವ ಭಗವಂತನನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ, ಹೀಗಾಗಿ ಅವನ ಅಗಾಧತೆಯನ್ನು ನೆನೆಯುವಾಗ ವಿಶೇಷಣಗಳನ್ನು ಬಳಸಲೇಬೇಕಾಗುತ್ತದೆ. ಆದರೆ ಪರಮಾತ್ಮನಿಗೆ ಸ್ತುತಿಯೂ ಒಂದೇ, ನಿಂದೆಯೂ ಒಂದೇ. ಇಂತಹ ಕ್ರಿಯೆಗಳು ಉಪಾಸನೆಯ ಹೆಸರಿನಲ್ಲಿ ಆತ್ಮೋನ್ನತಿಯನ್ನು ಪಡೆಯುವ ಪ್ರಯತ್ನವೆಂಬ ಅರಿವು ಸಾಧಕರಿಗೆ ಮಾತ್ರ ತಿಳಿದಿರುತ್ತದೆ.
     ಹೊಗಳಿಕೆ ಹಿತಮಿತವಾಗಿ ಬಳಸಬೇಕಾದ ಸಂಗತಿಯಾಗಿದೆ. ಮೆಚ್ಚುಗೆ ವ್ಯಕ್ತಪಡಿಸಲು ಹೊಗಳಿಕೆ ಉತ್ತಮ ಸಾಧನ. ಹೊಗಳಬೇಕಾದ ಸಂದರ್ಭದಲ್ಲಿ ಜಿಪುಣತನ ತೋರದೆ ಹೊಗಳೋಣ. ಕೀಳರಿಮೆಯಿಂದ ನರಳುವವರನ್ನು ಹೊಗಳಿ ಅವರಲ್ಲಿನ ಆತ್ಮವಿಶ್ವಾಸ ಜಾಗೃತಗೊಳಿಸೋಣ. ಮುನ್ನಡೆಯುತ್ತಿರುವವರನ್ನು ಬೆನ್ನುತಟ್ಟಿ ಹೆಚ್ಚು ಸಾಧನೆ ಮಾಡಲು ಪ್ರೇರಿಸೋಣ. ಹೊಗಳಿಕೆಯನ್ನು ಸ್ವಾರ್ಥದ ಸಲುವಾಗಿ ಬಳಸಿಕೊಳ್ಳುವವರ ಜೊತೆ ಎಚ್ಚರದಿಂದ ಇರೋಣ. ಹೊಗಳಿಕೆ ನಮ್ಮನ್ನು ಉಬ್ಬಿಸಿ ಮೈಮರೆಸದಿರುವಂತೆ ಜಾಗೃತರಾಗಿರೋಣ. ಉಪಕಾರ ಮಾಡಿ ಹೊಗಳಿಕೆ ನಿರೀಕ್ಷಿಸದಿರೋಣ. ನಾವೇ ಉಪಕೃತರಾದಾಗ ಉಪಕರಿಸಿದವರನ್ನು ಮರೆಯದೆ ಹೊಗಳೋಣ. ಹೊಗಳಿಕೆ ಸಂಬಂಧಿಸಿದವರೆಲ್ಲರಿಗೆ ಆನಂದ ತರುತ್ತದೆ. ಒಂದು ಮಾತು ನೆನಪಿಡೋಣ: ನಮ್ಮ ಕುರಿತ ಎಲ್ಲಾ ಹೊಗಳಿಕೆಗಳಿಗೂ ನಾವು ಹಕ್ಕುದಾರರಾಗಬಹುದು, ಅವುಗಳನ್ನು ನಮ್ಮ ಹೃದಯ ಮತ್ತು ಮೆದುಳು ಒಪ್ಪುವುದಾದರೆ ಮಾತ್ರ!
-ಕ.ವೆಂ. ನಾಗರಾಜ್.

ಶುಕ್ರವಾರ, ಆಗಸ್ಟ್ 18, 2017

ಒಂಟಿತನದ ವಿಶ್ವರೂಪ


     ಒಂಟಿತನ ಸಾಮಾನ್ಯವಾಗಿ ಎಲ್ಲರೂ ಅನುಭವಿಸುವ ಅನಿವಾರ್ಯ ಸ್ಥಿತಿ. ತಾನೊಬ್ಬನೇ, ತನ್ನೊಡನೆ ಇತರರಿಲ್ಲವೆಂಬ ಭಾವವನ್ನು ಒಂಟಿತನವೆನ್ನಬಹುದು. ಇಂತಹ ಸ್ಥಿತಿಯಲ್ಲಿ ಆಹಾರ ರುಚಿಸುವುದಿಲ್ಲ, ನೀರು ಹಿತವಾಗುವುದಿಲ್ಲ. ಆಹಾರ ಸೇವಿಸಿದರೂ ಅನಿವಾರ್ಯ ಕ್ರಿಯೆಯಂತೆ ಜರುಗುವುದು. ಯಾವುದರಲ್ಲೂ ಆಸಕ್ತಿಯಿರದು. ಆಲಸ್ಯತನ. ಸಮಯ ನಿಧಾನವಾಗಿ ಚಲಿಸುವುದು. ತಾತ್ಕಾಲಿಕ ಒಂಟಿತನ ಸಹ್ಯವಾಗಬಹುದು. ದೀರ್ಘಕಾಲದ ಅನಿವಾರ್ಯ ಒಂಟಿತನ ಖಿನ್ನತೆಗೆ ದೂಡುತ್ತದೆ, ಕಾಯಿಲೆಗಳಿಗೂ ದಾರಿ ಮಾಡಿಕೊಡುತ್ತದೆ. ಒಂಟಿತನದಿಂದ ಬರುವ ಹತಾಶೆ, ಸಿಟ್ಟು, ಅಸಹಾಯಕತೆಗಳು ಹುದುಗಿಸಿಟ್ಟಿದ್ದ ಆಕ್ರೋಶ ಒಮ್ಮೆಲೇ ಹೊರನುಗ್ಗಿ ಅಸಹ್ಯಕರ ವಾತಾವರಣ ಸೃಷ್ಟಿಸಿ, ಸಂಬಂಧಗಳನ್ನು ಮುರಿಯುವಂತೆ ಮಾಡಬಹುದು. ಪರಿಸ್ಥಿತಿ ಬಿಗಡಾಯಿಸಿ ಸರಿಪಡಿಸಲಾಗದ ಹಾನಿ ಉಂಟು ಮಾಡಬಹುದು. ದುರ್ಬಲ ಮನಸ್ಕರು ಆತ್ಮಹತ್ಯೆ ಸಹ ಮಾಡಿಕೊಳ್ಳಬಹುದು. ಒಂಟಿತನ, ಸ್ನೇಹಕ್ಕಾಗಿ ಹಪಹಪಿಸುವ ಹಂಬಲಿಕೆಯ ಸೂಚಿ.
     ಒಂದು ಉದಾಹರಣೆ ನೋಡೋಣ. ಅವನೊಬ್ಬ ಆದರ್ಶವಾದಿ. ನ್ಯಾಯ, ನೀತಿ, ಧರ್ಮ ಎನ್ನುವ ಅವನಿಗೆ ಕುಟುಂಬದ ಸದಸ್ಯರ ಸಹಕಾರ ಸಿಗುವುದಿಲ್ಲ. ನಾಲ್ಕು ಜನರಂತೆ ಅವನಿಲ್ಲ್ಲವೆಂಬ ಆತಂಕ ಅವನ ಪೋಷಕರಿಗೆ. ಅನೇಕ ರೀತಿಯಲ್ಲಿ ತಿಳಿಹೇಳುತ್ತಾರೆ, ಅವರಿವರಿಂದ ಉಪದೇಶ ಮಾಡಿಸುತ್ತಾರೆ. ಆದರೆ ಆದರ್ಶದ ಬೆನ್ನು ಬಿದ್ದ ಯುವಕನಿಗೆ ಅವಾವುದೂ ರುಚಿಸುವುದಿಲ್ಲ. ಒಳ್ಳೆಯ ವಿಚಾರಕ್ಕೆ ಮನೆಯವರೇ ಬೆಂಬಲಿಸದಿದ್ದರೆ ಹೇಗೆ ಎಂಬುದು ಅವನ ವಾದ. ಕೊನೆಗೆ ಮನೆಯವರು ಸುಮ್ಮನಾದರೂ ಅವರ ಕಿರಿಕಿರಿ, ಗೊಣಗಾಟಗಳು ತಪ್ಪುವುದಿಲ್ಲ. ಕಠಿಣ ಆದರ್ಶದ ಹಾದಿ ಹಿಡಿದ ಅವನಿಗೆ ಮನೆಯ ಹೊರಗೂ ಪ್ರೋತ್ಸಾಹ ಸಿಗುವುದಿಲ್ಲ. ಬೆನ್ನು ತಟ್ಟುವವರಿಲ್ಲದ ಅವನನ್ನು ಪ್ರಿಯರ ಹೀನೈಕೆ ಕುಗ್ಗಿಸುತ್ತದೆ, ಒಂಟಿತನ ಕಾಡುತ್ತದೆ. ಒಳ್ಳೆಯವನಾಗು, ನೀನು ಒಂಟಿಯಾಗುವೆ ಎಂಬ ಮಾತು ಅವನಂತಹವರಿಗೆ ಹೊಂದುತ್ತದೆ.
     ಹದಿಹರೆಯದ ಹುಚ್ಚು ಪ್ರೇಮಿಗಳ ಒಂಟಿತನ ಮತ್ತೊಂದು ತರಹ. ಅವನಿಲ್ಲದೆ/ಅವಳಿಲ್ಲದೆ ಬಾಳು ಶೂನ್ಯ ಎಂದು ಕೊರಗುವ, ಹುಚ್ಚಾಗುವ ದೇವದಾಸಗಳದ್ದು ಒಂದು ರೀತಿಯಾದರೆ, ತನಗೆ ದಕ್ಕದ ಅವಳು/ಅವನು ಬೇರೆಯವರಿಗೂ ಸಿಗಬಾರದೆಂದು ಆಸಿಡ್ ಎರಚುವ, ಕೊಲೆ ಮಾಡುವರದು ಮತ್ತೊಂದು ರೀತಿ. ಆತ್ಮಹತ್ಯೆ ಮಾಡಿಕೊಳ್ಳುವವರದು ಮಗದೊಂದು ರೀತಿ. ಕೊನೆಯವರೆಗೂ ಮದುವೆಯಾಗದೇ ಉಳಿಯುವ ಭಗ್ನಪ್ರೇಮಿಗಳನ್ನೂ, ಮಾನಸಿಕ ಕಾಯಿಲೆಗಳಿಂದ ನರಳುವವರನ್ನೂ ಕಾಣಬಹುದು. ಅತಿಯಾಗಿ ಹಚ್ಚಿಕೊಂಡ ಸ್ನೇಹಿತರು, ಬಂಧುಗಳು, ಮನೆಯವರು ಯಾರೇ ಆಗಲಿ ದೂರವಾದಾಗ/ಕಾಲವಾದಾಗ ಸಹ ಒಂಟಿತನ ಕಾಡದೇ ಇರದು.. ವೃದ್ಧಾಪ್ಯದಲ್ಲಿ ಮಕ್ಕಳು ಏನು ಮಾಡದಿದ್ದರೂ ಪರವಾಗಿಲ್ಲ, ಪ್ರೀತಿಯಿಂದ ಮಾತನಾಡಿಸಿದರೆ ಸಾಕು ಎಂದು ಹಂಬಲಿಸುವ ವೃದ್ಧರ ಸಂಖೆಯೂ ಕಡಿಮೆಯಿಲ್ಲ. ಪ್ರೀತಿ, ವಿಶ್ವಾಸ, ಸ್ನೇಹದ ಕೊರತೆಯೇ ಒಂಟಿತನದ ಮೂಲ. ಒಂಟಿತನ ಕಾಡಬಾರದೆಂದರೆ ಪರಸ್ಪರ ಪ್ರೀತಿ, ವಿಶ್ವಾಸಗಳಿಗೆ ಲೋಪವಾಗದಂತೆ ನೋಡಿಕೊಳ್ಳುವುದು ಅಗತ್ಯ.
     ಹಿತವಾದ ರೀತಿಯ ಒಂಟಿತನವಿದೆ. ಅದೆಂದರೆ ವಿವಿಧ ರಂಗಗಳಲ್ಲಿ ಸುಪ್ರಸಿದ್ಧರಾದವರ, ಮುಖಂಡರ, ಹಿರಿಯ ಅಧಿಕಾರಿಗಳ ಒಂಟಿತನ. ಅವರು  ಒಂಟಿತನವನ್ನು ಒಪ್ಪಿಕೊಳ್ಳಲೇಬೇಕು. ಒಂಟಿಯಾಗಿರುವುದೆಂದರೆ ಇತರರಿಗಿಂತ ಭಿನ್ನವಾಗಿರುವುದು, ಇತರರಿಗಿಂತ ಭಿನ್ನವೆಂದರೆ ಒಂಟಿಯಾಗಿರುವುದು ಎಂಬುದು ಅವರ ಮಟ್ಟಿಗೆ ಸರಿ. ಅವರ ಒಂಟಿತನದಲ್ಲೇ ಸೃಜನಾತ್ಮಕ ಶಕ್ತಿ ಹೊರಹೊಮ್ಮುತ್ತದೆ. ಇದರಲ್ಲೂ ಒಂದು ಅಪಾಯವಿದೆ. ಅದೆಂದರೆ ಸುಪ್ರಸಿದ್ಧರಾದವರು ಕಾರಣಾಂತರಗಳಿಂದ ಪ್ರಸಿದ್ಧಿ ಕಳೆದುಕೊಂಡರೆ, ಬಹುಪರಾಕ್ ಹೇಳುತ್ತಿದ್ದವರು ಇದ್ದಕ್ಕಿದ್ದಂತೆ ಕಣ್ಮರೆಯಾದರೆ ಅವರು ಅನುಭವಿಸುವ ಒಂಟಿತನದ ನೋವು ವರ್ಣನಾತೀತ.
     ಇನ್ನೊಂದು ಅಪಾಯಕಾರಿ ಒಂಟಿತನವಿದೆ. ಅದೆಂದರೆ ಒಟ್ಟಿಗಿದ್ದರೂ ಕಾಡುವ ಒಂಟಿತನ. ಎಲ್ಲೆಲ್ಲೂ ನೀರು, ಕುಡಿಯಲು ತೊಟ್ಟೂ ನೀರಿಲ್ಲ ಎಂಬಂತಹ ಸ್ಥಿತಿ ಅದು. ಒಂದು ಉದಾಹರಣೆ ನೋಡೋಣ. ಒಂದು ಕುಟುಂಬದವರು ಒಟ್ಟಿಗೇ ಟಿವಿ ನೋಡುತ್ತಿರುತ್ತಾರೆ. ಪರಸ್ಪರ ಮಾತುಗಳು ಅನಿವಾರ್ಯವಾದರೆ ಮಾತ್ರ ಆಡುತ್ತಾರೆ. ಅವರವರ ಪಾಡು ಅವರಿಗೆ. ಪರಸ್ಪರರನ್ನು ಸಹಿಸಿಕೊಂಡು ಹೋಗುತ್ತಿರುತ್ತಾರೆ. ಅಸಹನೀಯವಾದಾಗ ಕಿರುಚಾಡುತ್ತಾರೆ, ಜಗಳವಾಡುತ್ತಾರೆ, ಅನಿವಾರ್ಯವೆಂಬಂತೆ ಸುಮ್ಮನಾದರೂ ಎಲ್ಲರೂ ಅಲ್ಲಿ ಒಂಟಿಗಳೇ. ಕಛೇರಿಗಳಲ್ಲೂ ಅಷ್ಟೇ. ಒಂಟಿತನವನ್ನು ಅನುಭವಿಸುವ ಅಧಿಕಾರಿಗಳು, ನೌಕರರನ್ನು ಕಾಣಬಹುದು. ಇಲ್ಲಿ ಗಮನಿಸುವ ಅಂಶವೆಂದರೆ ಸ್ವಂತಿಕೆಗೆ, ಅಹಂಗೆ ಬೀಳುವ ಪೆಟ್ಟು ಒಂಟಿತನವಾಗಿ ಕಾಡುವುದು! ಪರಸ್ಪರರ ಅಪನಂಬಿಕೆಯಿಂದ ಉಂಟಾಗುವ ಒಂಟಿತನ ನರಕಸದೃಶ. ಉದ್ದೇಶೂರ್ವಕವಾಗಿ ಅಹಂಗೆ ಪೆಟ್ಟು ಕೊಡುವ ಕುಟುಂಬದವರಿಂದಲೇ, ಜೊತೆಗಾರರಿಂದಲೇ ನೋವು ಅಧಿಕವಾಗಿ ಒಂಟಿತನ ಕಾಡುತ್ತದೆ.
     ಒಂಟಿತನದ ತಾಪ ಕಡಿಮೆ ಮಾಡಿಕೊಳ್ಳಲು ಮಾರ್ಗಗಳಿವೆ. ಓದುವುದು, ಬರೆಯುವುದು, ಸಂಗೀತ ಕೇಳುವುದು, ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯ ಅಭ್ಯಾಸಗಳಾದರೆ, ದುಶ್ಚಟಗಳಿಗೆ ದಾಸರಾಗುವುದು ಇನ್ನೊಂದು ರೀತಿಯ ಪಲಾಯನ. ಸಿಗರೇಟು ಸೇದುವುದು, ಕುಡಿಯುವುದು, ಜೂಜಾಡುವುದು, ವೇಶ್ಯಾಸಂಗ, ಇತ್ಯಾದಿಗಳು ಇದರಲ್ಲಿ ಸೇರುತ್ತವೆ. ಕ್ರಮೇಣ ದುಶ್ಚಟಗಳು ಅವರನ್ನೇ ಆಕ್ರಮಿಸಿ ಅವರನ್ನಲ್ಲದೆ ಅವರ ಅವಲಂಬಿತರಿಗೂ ತೊಂದರೆ ಕೊಡುತ್ತವೆ. ಸರಿಯಾಗಿ ಬಳಸಿಕೊಂಡಲ್ಲಿ ಒಂಟಿತನ ವರವಾಗುತ್ತದೆ. ಒಳ್ಳೆಯ ಸಾಹಿತ್ಯ, ಸಂಗೀತ, ಇತ್ಯಾದಿಗಳು ಕುಡಿಯೊಡೆಯುವುದು ಆಗಲೇ. ಪ್ರೀತಿಸುವವರ, ತನ್ನನ್ನು ಗುರುತಿಸುವವರ ಕೊರತೆ ನೀಗಿಸಿಕೊಳ್ಳಲು ಅವರೇ ಇತರರನ್ನು ಪ್ರೀತಿಸಲು, ಇತರರನ್ನು ಗೌರವಿಸಲು ಮುಂದಾದರೆ ಅವರಿಂದಲೂ ಪ್ರತಿ ಪ್ರೀತಿ, ಪ್ರತಿ ಗೌರವ ಸಿಗಲಾರದೆ? ಪ್ರೀತಿ, ವಿಶ್ವಾಸಗಳು ಒಂಟಿಯಲ್ಲವೆಂದು ಭಾವಿಸುವಂತೆ ಮಾಡುತ್ತದೆ. ಸಮುದಾಯ, ಸಂಘಟನೆ, ಜಾತಿ, ಧರ್ಮ, ಗುಂಪು, ಇತ್ಯಾದಿಗಳೂ ಒಂಟಿತನವನ್ನು ಹೋಗಲಾಡಿಸುವ ಸಲುವಾಗಿಯೇ ಹುಟ್ಟಿಕೊಂಡದ್ದು. ದುಃಖ ಅನುಭವಿಸಲು ಒಬ್ಬರು ಇದ್ದರೂ ಆಗುತ್ತದೆ, ಆದರೆ ಸಂತೋಷ ಹಂಚಿಕೊಳ್ಳಲು ಇಬ್ಬರಾದರೂ ಇರಬೇಕು. ಇತರ ಹೃದಯಗಳ ಮಿಡಿತ ಕೇಳದವರ ಹೃದಯ ಬಾಡುತ್ತದೆ, ಇತರರ ಮಾತುಗಳನ್ನು ಕೇಳಲಿಚ್ಛಿಸದವನ ಮೆದುಳು ಕುಗ್ಗುತ್ತದೆ.
     ಒಂಟಿತನದಂತೆಯೇ ತೋರುವ, ಆದರೆ ಒಂಟಿತನವಲ್ಲದ, ಒಂಟಿತನಕ್ಕೆ ಹೋಲಿಸಲಾಗದ ಸಂಗತಿಯೊಂದಿದೆ. ಅದೇ ಏಕಾಂತ. ಏಕಾಂತ ಬೇರೆ, ಒಂಟಿತನ ಬೇರೆ. ಒಂಟಿತನ ತನ್ನತನದ ಬಡತನವಾದರೆ, ಏಕಾಂತ ತನ್ನತನದ ವೈಭವ. ಏಕಾಂತದಲ್ಲಿ ಬರಹಗಾರ ಅರ್ಥವಾಗದ ಸಂಗತಿಗಳಿಗೆ ಅರ್ಥ ಹುಡುಕುತ್ತಾನೆ, ಸಂಗೀತಗಾರ ಹೊಸ ಆಯಾಮಗಳ ಕುರಿತು ಧ್ಯಾನಿಸುತ್ತಾನೆ, ವಿವಿಧ ಸ್ತರಗಳವರು ಅಭಿರುಚಿಗೆ ತಕ್ಕಂತೆ ಮುಂದುವರೆಯುವ ಕುರಿತು ಚಿಂತಿಸುತ್ತಾರೆ, ಸಾಧಕ ಬದುಕಿನ ಅರ್ಥ ತಿಳಿಯುವ ಪ್ರಯತ್ನ ನಡೆಸುತ್ತಾನೆ. ಆಗ ಅವರುಗಳ ಜೊತೆಗಿರುವುದು ದಾರಿ ತೋರಿಸುವ ಅವರ ಅಂತರಂಗ. ತಪ್ಪುಗಳನ್ನು ಇತರರ ಎದುರಿಗೆ ಒಪ್ಪಿಕೊಳ್ಳದಿದ್ದರೂ ಅಂತರಂಗದೆದುರು ತಲೆಬಾಗಲೇಬೇಕು, ಅದುವರೆಗೆ ಗೋಚರಿಸದ ಸತ್ಯ ಗೋಚರಿಸುವುದೇ ಏಕಾಂತದ ಮಹಿಮೆ. ಏಕಾಂತ ಪ್ರೌಢತೆಯ ಸಂಕೇತ. ಅಲ್ಲಿ ಚಟುವಟಿಕೆಯಿದೆ, ಚಲನೆಯಿಲ್ಲದ ಕ್ರಿಯೆಯಿದೆ, ಶ್ರಮವಿರದ ಕೆಲಸವಿದೆ, ಕಣ್ಣು ಮೀರಿದ ದೃಷ್ಟಿಯಿದೆ, ಬಯಕೆ ಮೀರಿದ ಆಸೆಯಿದೆ, ಅನಂತ ತೃಪ್ತಿಯ ಭಾವವಿದೆ. ಏಕಾಂತ ತನ್ನತನವನ್ನು ಬೆಳೆಸುತ್ತದೆ. ಅಂತರಂಗ ಬಹಿರಂಗಕ್ಕೆ ಹೊಂದಿಕೆಯಾಗದಿದ್ದರೆ ಒಂಟಿತನ ಕಾಡುತ್ತದೆ. ಏಕಾಂತ ಹೊಂದಿಕೆ ಮಾಡಿಕೊಳ್ಳುವ ದಾರಿ ತೋರುತ್ತದೆ. ನಾವು ನಾವಾಗಿರಲು ಏಕಾಂತದಲ್ಲಿ ಮಾತ್ರ ಸಾಧ್ಯ. ಇತರರೊಂದಿಗೆ ಇದ್ದಾಗ ನಾವು ನಮ್ಮತನವನ್ನು ಕಳೆದುಕೊಳ್ಳುತ್ತೇವೆ.  ಇತರರು ಏನೆಂದುಕೊಳ್ಳುತ್ತಾರೆಂದೋ, ತಪ್ಪು ತಿಳಿಯುತ್ತಾರೆಂದೋ ಅಥವಾ ಮೆಚ್ಚಿಸುವ ಸಲುವಾಗಿಯೋ ಇಷ್ಟವಿಲ್ಲದಿದ್ದರೂ ನಮ್ಮತನಕ್ಕೆ ಹೊರತಾಗಿ ವರ್ತಿಸುತ್ತೇವೆ, ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುತ್ತೇವೆ. ಏಕಾಂತದಲ್ಲಿ ಹಾಗಲ್ಲ, ಅಲ್ಲಿ ಅಂತರಂಗ ಬಹಿರಂಗಗಳಿಗೆ ಹೊಂದಿಕೆಯಿರುತ್ತದೆ. ಆದ್ದರಿಂದ ಅಲ್ಲಿ ಸಂತೋಷವಿರುತ್ತದೆ. ಸಾಧನೆಗೆ, ಧ್ಯಾನಕ್ಕೆ, ಮನನಕ್ಕೆ, ವಿಮರ್ಶೆಗೆ, ಹೇಗಿರಬೇಕೆಂದು ನಿರ್ಧರಿಸುವುದಕ್ಕೆ, ಉತ್ತಮ ರೀತಿಯಲ್ಲಿ ಮುಂದುವರೆಯುವುದಕ್ಕೆ ಏಕಾಂತದಲ್ಲಿ ಅವಕಾಶವಿದೆ. ಇತರರನ್ನು ಕೈಯಿಂದ ಮುಟ್ಟುವುದಕ್ಕೂ ಹೃದಯದಿಂದ ಮುಟ್ಟುವುದಕ್ಕೂ ವ್ಯತ್ಯಾಸ ತಿಳಿಯುವುದು ಏಕಾಂತದಲ್ಲೇ.
                      -ಕ.ವೆಂ.ನಾಗರಾಜ್.

ಮಂಗಳವಾರ, ಆಗಸ್ಟ್ 15, 2017

ನಮ್ಮವರು?

     ವಾಟ್ಸಪ್ ಗುಂಪುಗಳು, ಫೇಸ್ ಬುಕ್, ಇತ್ಯಾದಿಗಳಲ್ಲಿ ವಿಚಾರ ವಿರೋಧಿಗಳು ಪರಸ್ಪರ ಕೆಸರೆರಚಾಟದಲ್ಲಿ ಎಷ್ಟರ ಮಟ್ಟಿಗೆ ಹೋಗುತ್ತಾರೆಂದರೆ ಕೀಳು ಪದಪ್ರಯೋಗಗಳು, ನಿಂದನೆಗಳು ಪ್ರಯೋಗವಾಗುವುದನ್ನು ಗಮನಿಸಿರಬಹುದು. ಕೆಲವೊಮ್ಮೆ ಅದು ಪೊಲೀಸ್, ನ್ಯಾಯಾಲಯಗಳ ಮೆಟ್ಟಲಿಗೂ ತಲುಪುತ್ತವೆ, ಕಾನೂನು-ಸುವ್ಯವಸ್ಥೆ ಸಮಸ್ಯೆಗಳೂ ಉಂಟಾಗುತ್ತವೆ. ಸಾಮಾನ್ಯ ಉದಾಹರಣೆಯೆಂದರೆ ಮೋದಿ ಪರ ಮತ್ತು ವಿರೋಧಿ ಬಣಗಳು ಎದ್ದು ಕಾಣುತ್ತವೆ. ಮೋದಿಯವರ ಪ್ರತಿ ನಡೆಯನ್ನೂ ಹೊಗಳುವವರು ಇರುವಂತೆಯೇ, ಪ್ರತಿ ಮಾತಿನಲ್ಲೂ ಬೇರೆಯದೇ ಅರ್ಥ ಹುಡುಕಿ ದೂಷಿಸುವವರಿದ್ದಾರೆ. ವಿಶೇಷವೆಂದರೆ ತಮ್ಮವರ ತಪ್ಪುಗಳ ಬಗ್ಗೆ ಅವರು ತುಟಿಪಿಟಕ್ ಅನ್ನುವುದಿಲ್ಲ. ಕೇರಳದ ಮುಖ್ಯಮಂತ್ರಿ ಮಂಗಳೂರಿಗೆ ಭೇಟಿ ನೀಡಲು ಬಂದ ಸಂದರ್ಭದಲ್ಲೂ ಎರಡು ವಿಚಾರಗಳ ಸಂಘರ್ಷ ತಾರಕಕ್ಕೆ ಏರಿತ್ತು. ಇರಲಿ ಬಿಡಿ, ನಾನು ಹೇಳ ಹೊರಟಿರುವುದು ನಮ್ಮವರು ಮತ್ತು ಬೇರೆಯವರು ಎಂಬ ಬಗ್ಗೆ ನಮಗಿರುವ ಧೋರಣೆಯ ಬಗ್ಗೆ ಅಷ್ಟೆ.
     ನೀವು ಯಾವ ಜನ?- ಯಾವ ಜಾತಿಯೆಂದು ಕೇಳಿ ತಿಳಿದುಕೊಳ್ಳುವ ಸಲುವಾಗಿ ಎದುರಾಗಬಹುದಾದ ಪ್ರಶ್ನೆಯಿದು. ಕೆಲವರಿಗೆ ಈ ಪ್ರಶ್ನೆಯಿಂದ ಮುಜುಗರವೂ ಆಗುತ್ತದೆ. ಬರುವ ಉತ್ತರ ಬ್ರಾಹ್ಮಣ, ಲಿಂಗಾಯತ, ಗೌಡರು, ಕ್ರಿಶ್ಚಿಯನ್, ಮುಸ್ಲಿಮ್, ಇತ್ಯಾದಿಗಳಿದ್ದರೆ, ಮರುಪ್ರಶ್ನೆ ಬರುತ್ತದೆ, ಅದರಲ್ಲಿ ಯಾರು? ಸ್ಮಾರ್ಥ, ವೈಷ್ಣವ, ಮಾಧ್ವ, ದಾಸಗೌಡ, ಮುಳ್ಳುಗೌಡ, ಆರಾಧ್ಯ, ಶಿಯಾ, ಸುನ್ನಿ, ಪ್ರಾಟೆಸ್ಟೆಂಟ್ . . . . ಮರು ಉತ್ತರ ಹೀಗೆ ಸಾಗುತ್ತದೆ. ಅಷ್ಟಕ್ಕೇ ನಿಲ್ಲುವುದಿಲ್ಲ. ಆ ಒಳಜಾತಿಯಲ್ಲಿ ಒಳಪಂಗಡಗಳು, ಊರು, ಹೀಗೆ ಕುಲಾನ್ವೇಷಣೆ ಮುಂದುವರೆಯುತ್ತದೆ. ಇಬ್ಬರದೂ ಒಂದೇ ಜಾತಿ, ಒಳಜಾತಿಗಳಾದರೆ ಆತ್ಮೀಯತೆಯ ಬಂಧ ಗಟ್ಟಿಯಾಗುತ್ತದೆ. ಏಕೆ ಹೀಗೆ? ನಮ್ಮವರು, ಇತರೆಯವರು ಎನ್ನುವ ಭೇದ ಜಾತಿಗೆ ಮಾತ್ರ ಸೀಮಿತವಲ್ಲ. ವೃತ್ತಿ, ರಾಜಕೀಯ, ಕಲಿಯುವ ಕಲಿಕೆ, ಊರು, ಸ್ವಭಾವ, ಅಂತಸ್ತು, ಇತ್ಯಾದಿಗಳಿಗೂ ಅನ್ವಯವಾಗುತ್ತದೆ. ಈ ನಮ್ಮವರು ಪ್ರತಿಯೊಂದರಲ್ಲೂ ಇತರರಿಗಿಂತ ಮುಂದಿರಬೇಕು ಎಂಬ ಭಾವನೆ ಎಲ್ಲರಲ್ಲೂ ಅಂತರ್ಗತವಾಗಿರುತ್ತದೆ. ನಮ್ಮವರು ಎಂಬ ಭಾವನೆ ಪರಿಚಯವಿಲ್ಲದವರನ್ನೂ ಒಗ್ಗೂಡಿಸುತ್ತದೆ, ಇತರರು ಎನ್ನುವ ಭಾವನೆ ಪರಿಚಯವಿರುವರನ್ನೂ ಸಂಶಯದಿಂದ ನೋಡುವಂತೆ ಮಾಡುತ್ತದೆ.
     ಇಂದು ಕಾಣುತ್ತಿರುವ ದ್ವೇಷ, ಜಗಳ, ಭಿನ್ನಮತ, ಇತ್ಯಾದಿಗಳ ಮೂಲವೇ ಈ ನಮ್ಮವರು, ಇತರರು ಅನ್ನುವ ಭಾವನೆ. ನಮ್ಮ ದೇವರೇ ಬೇರೆ, ನಮ್ಮ ಧರ್ಮವೇ ಬೇರೆ, ನಮ್ಮ ಜಾತಿಯೇ ಬೇರೆ, ನಮ್ಮ ಆಚಾರವೇ ಬೇರೆ, ನಮ್ಮ ವಿಚಾರವೇ ಬೇರೆ - ಹೀಗೆ ನಾವೇ ಬೇರೆ, ನೀವೇ ಬೇರೆಗಳನ್ನು ಬೆಳೆಸುತ್ತಾ, ಪೋಷಿಸುತ್ತಾ ಬಂದುದರ ಫಲವಿದು. ಈ ಬೇರೆಗಳು ಬೆಳೆಯುತ್ತಾ ಬೆಳೆಯುತ್ತಾ ನಮ್ಮವರಲ್ಲೇ ನಮ್ಮ ಒಳಗಿನವರು, ಒಳಗಿನ ಒಳಗಿನವರು ಸಹ ಬೆಳೆಯುತ್ತಾ ಹೋದರು. ಎಷ್ಟು ಧರ್ಮಗಳು, ಎಷ್ಟು ಜಾತಿಗಳು, ಎಷ್ಟು ಪಂಗಡಗಳು, ಒಳಪಂಗಡಗಳು!! ಒಂದೇ ಧರ್ಮ, ಜಾತಿ, ಪಂಗಡಗಳವರಲ್ಲೇ ವಿಭಿನ್ನ ರೀತಿಯ ಆಚಾರ-ವಿಚಾರಗಳು!! ನಮ್ಮವರೇ ನಮಗೆ ಪರಕೀಯರಾಗುತ್ತಾ ಹೋದರು. ಈ ಭಾವನೆ ಪರಸ್ಪರರಲ್ಲಿ ದ್ವೇಷ, ವೈಮನಸ್ಸುಗಳನ್ನು ಉಂಟುಮಾಡಿ, ಒಂದಾಗದ ವಾತಾವರಣ ನಿರ್ಮಾಣವಾಯಿತು. ಈ ಒಳಜಗಳಗಳೇ ವಿದೇಶೀಯರು ನಮ್ಮ ದೇಶದ ಮೇಲೆ ಸಹಸ್ರ ವರ್ಷಗಳವರೆಗೆ ಹಿಡಿತ ಸಾಧಿಸಲು ಸಹಕಾರಿಯಾದವು.
     ನಮ್ಮಲ್ಲಿ ಈ ನಮ್ಮವರು, ಇತರರು ಭಾವನೆ ಎಷ್ಟು ರಕ್ತಗತವಾಗಿದೆಯೆಂದರೆ ಯಾರಾದರೂ ದಾರ್ಶನಿಕರು, ಸಂತರು ಭೇದ ಭಾವಗಳನ್ನು ದೂರಮಾಡಿ ಜಾತಿಗಳನ್ನು ಒಂದುಗೂಡಿಸಲು ಮಾಡುವ ಪ್ರಯತ್ನಕ್ಕೆ ಓಗೊಡುವವರದ್ದೇ ಮತ್ತೊಂದು ಧರ್ಮ/ಜಾತಿ ಆಗಿಬಿಡುತ್ತದೆ. ಇರುವ ಗುಂಪುಗಳ ಜೊತೆಗೆ ಮತ್ತೊಂದು ಗುಂಪು ಸೇರ್ಪಡೆಯಾಗುತ್ತದೆ. ಮಾನವತಾವಾದಿ ಬಸವಣ್ಣನವರ ಜಾತಿಗಳನ್ನು ಒಗ್ಗೂಡಿಸುವ ಕರೆಗೆ ಓಗೊಟ್ಟವರದ್ದೇ ಒಂದು ಪ್ರತ್ಯೇಕ ಜಾತಿಯಾದುದನ್ನು ಉದಾಹರಿಸಬಹುದು. ಶಂಕರಾಚಾರ್ಯರ ತತ್ವ, ಸಿದ್ಧಾಂತಗಳನ್ನು ಒಪ್ಪುವವರು ಸ್ಮಾರ್ತರೆನಿಸಿದರು. ಮಧ್ವಾಚಾರ್ಯರ ಅನುಯಾಯಿಗಳು ಮಾಧ್ವರಾದರು. ರಾಮಾನುಜರ ವಿಚಾರಗಳನ್ನು ಒಪ್ಪಿದವರು ವೈಷ್ಣವರೆನಿಸಿದರು. ಹೀಗೆ ಜಾತಿಗಳು ಹೆಚ್ಚುತ್ತಾ ಹೋದವು. ವಿಭಿನ್ನ ಆಚಾರ-ವಿಚಾರಗಳನ್ನು ರೂಢಿಸಿಕೊಂಡರು. ತಾವೇ ಹೆಚ್ಚು ಎಂದು ತರ್ಕ-ವಿತರ್ಕಗಳಲ್ಲಿ ಮುಳುಗಿಹೋದರು. ಜಾತಿಗಳು ಹೆಚ್ಚಿದಂತೆ ದೇವರುಗಳೂ ಹೆಚ್ಚಾಗುತ್ತಾ ಹೋದರು. ಸಮಾಜಕ್ಕೆ ಮಾರ್ಗದರ್ಶಿಯಾದ ಆದರ್ಶಪುರುಷರುಗಳನ್ನೂ, ಸಾಧು-ಸಂತರನ್ನೂ ದೇವರ ಮಟ್ಟಕ್ಕೆ ಏರಿಸಿ ದೇವರುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿರುವುದನ್ನೂ ಕಂಡಿದ್ದೇವೆ, ಕಾಣುತ್ತಲಿದ್ದೇವೆ. ಮುಸ್ಲಿಮರು, ಮುಸ್ಲಿಮೇತರರು ಎಂಬ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದಕತೆ ದೊಡ್ಡ ಪಿಡುಗಾಗಿದೆ.
     ಜಗತ್ತು ನಡೆದಿರುವುದೇ ಭಿನ್ನತೆಯಿಂದ! ಭಿನ್ನತೆಯಿರುವುದರಿಂದಲೇ ಜಗತ್ತಿಗೆ ಅರ್ಥವಿದೆ. ಆದರೆ ಈ ಭಿನ್ನತೆ ಪರಸ್ಪರರ ಉತ್ಕರ್ಷಕ್ಕೆ ಕಾರಣವಾಗಬೇಕೇ ಹೊರತು ಅವನತಿಗಲ್ಲ. ದೇವನ ಸೃಷ್ಟಿಯಲ್ಲೇ ಇರುವ ಭಿನ್ನತೆಗಳು ಪರಸ್ಪರರಿಗೆ ಪೂರಕವಾಗಿವೆ. ಆದರೆ ಮಾನವ ನಿರ್ಮಿತ ಭಿನ್ನತೆಗಳು ಅವನನ್ನು ಪಾತಾಳಕ್ಕೆ ತಳ್ಳುತ್ತಿವೆ. ಈ ನಮ್ಮವರು ಅನ್ನುವ ಭಾವನೆ ಎಷ್ಟು ಸಂಕುಚಿತವಾಗುತ್ತಾ ಹೋಗುತ್ತದೋ ಅಷ್ಟೂ ಸಮಸ್ಯೆಗಳ ತೀವ್ರತೆ ಹೆಚ್ಚುತ್ತಾ ಹೋಗುತ್ತದೆ. ನಮ್ಮವರು ಅನ್ನುವ ಭಾವನೆ ಒಳ್ಳೆಯದೇ; ಆದರೆ ಆ ಭಾವನೆ ವಿಶಾಲದೃಷ್ಟಿಯಿಂದ ಕೂಡಿ ನಮ್ಮವರ ಅಭಿವೃದ್ಧಿಯೊಂದಿಗೆ ಮತ್ತು ಆ ಮೂಲಕ ಇತರ ಎಲ್ಲರ ಅಭಿವೃದಿಯ ಧ್ಯೇಯ ಹೊಂದಿದ್ದಲ್ಲಿ ಉತ್ತಮ. ಭಿನ್ನತೆಗಳನ್ನು ಸಂಪೂರ್ಣವಾಗಿ ನಿವಾರಿಸಲು ಆಗದಿರುವುದನ್ನು ಅರ್ಥ ಮಾಡಿಕೊಂಡು ಭಿನ್ನತೆಗಳನ್ನು ಉನ್ನತಿಗೆ ಸಹಕಾರಿಯಾಗುವಂತೆ ಯಾರಿಗೂ ನೋವಾಗದಂತೆ ಸರ್ವ ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಬಳಸುವುದನ್ನು ಉತ್ತೇಜಿಸಬೇಕಿದೆ.
     ಇಂದು ಪ್ರಚಲಿತವಿರುವ ಅನೇಕ ಜಾತಿಗಳಿಗೆ, ಜಾತಿಪದ್ಧತಿಗೆ ವೇದಗಳೇ ಮೂಲವೆಂದು ಆರೋಪಿಸಲಾಗುತ್ತಿದೆ. ವೇದಗಳಲ್ಲಿ ಉಲ್ಲೇಖವಾಗಿರುವ ಚಾತುರ್ವಣ್ಯಗಳನ್ನು ಜಾತಿಗಳೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಯಾವುದೋ ಸುದೀರ್ಘ ಹಿಂದಿನ ಕಾಲದಲ್ಲಿ ಜಾತಿಯನ್ನು ಹುಟ್ಟಿನಿಂದ ಬರುವುದೆಂದು ಪರಿಗಣಿಸಲ್ಪಟ್ಟು, ಅದೇ ಮುಂದುವರೆದು, ಸಂಪ್ರದಾಯವಾದಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪೋಷಿಸಿಕೊಂಡು ಬರುತ್ತಿರುವುದೂ ಸತ್ಯ. ಸತ್ಯದ ಹಿನ್ನೆಲೆಯಲ್ಲಿ ಪೂರ್ವಾಗ್ರಹಪೀಡಿತರಾಗದೆ ಅಧ್ಯಯನ ಮಾಡುವವರಿಗೆ ವೇದಗಳಲ್ಲಿ ಜಾತಿಗಳು ಎಂದೂ ಹುಟ್ಟಿನಿಂದ ಬರುವುದೆಂದು ಪ್ರತಿಪಾದಿಸಿರುವುದು ಕಂಡುಬರುವುದಿಲ್ಲ. ಇಂದಿನ ವ್ಯವಸ್ಥೆಯೂ ಹುಟ್ಟಿನಿಂದ ಬರುವ ಜಾತಿಗೆ ಅನಗತ್ಯ ಪ್ರಾಧಾನ್ಯತೆ ನೀಡಿ, ರಾಜಕಾರಣಿಗಳು ಅಧಿಕಾರದ ಸಲುವಾಗಿ ಅದನ್ನು ಬಲಗೊಳಿಸುತ್ತಿರುವುದು ಕಠೋರ ಸತ್ಯ. ಇದರಿಂದಾಗಿ ದೇಶ ಸಂಕಟದ ಸಮಯಗಳಲ್ಲಿ ಒಂದಾಗಿ ನಿಲ್ಲುವುದೂ ದುಸ್ತರವೆಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. 
          ನಮ್ಮವರು, ಇತರರು ಎಂಬವು ನಮ್ಮ ಸೃಷ್ಟಿಯಾಗಿವೆ, ಭಗವಂತನ ಸೃಷ್ಟಿಯಲ್ಲ. ಭಗವಂತನ ಸೃಷ್ಟಿಯಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಅನೇಕ ರೀತಿಯ ವೈದ್ಯಕೀಯ ಪದ್ಧತಿಗಳಿವೆ - ಆಯುರ್ವೇದ, ಅಲೋಪತಿ, ಹೋಮಿಯೋಪತಿ, ಇತ್ಯಾದಿ. ಇವುಗಳಲ್ಲಿ ಯಾವುದು ಮೇಲು? ಯಾವುದು ಕೀಳು? ಎಲ್ಲಾ ವೈದ್ಯಕೀಯ ಶಾಸ್ತ್ರಗಳ ಉದ್ದೇಶ ಒಂದೇ, ಆರೋಗ್ಯ ಕಾಪಾಡುವುದು. ಪ್ರತಿಯೊಂದು ವಿಧಾನಕ್ಕೂ ಈಗಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮುಂದುವರೆಯಲು ಅವಕಾಶಗಳು ಮುಕ್ತವಾಗಿವೆ. ವೈದ್ಯರುಗಳಲ್ಲೇ ಹಲವು ವಿಶೇಷ ತಜ್ಞವೈದ್ಯರಿದ್ದಾರೆ - ನರರೋಗ, ಹೃದಯರೋಗ, ನೇತ್ರ, ದಂತ, ಮನೋರೋಗ ಹೀಗೆ ಹಲವಾರು ವಿಭಾಗಗಳಲ್ಲಿ ಪರಿಣತರಿದ್ದಾರೆ. ಇವರಲ್ಲಿ ಯಾರು ಹೆಚ್ಚು ಮತ್ತು ಯಾರು ಕಡಿಮೆ? ವೈದ್ಯರ ಮಗ ವೈದ್ಯನೇ ಆಗಬೇಕೆಂದಿದೆಯೇ? ವಕೀಲರ ಮಕ್ಕಳು ವಕೀಲರೇ ಆಗಿರುತ್ತಾರೆಯೇ? ಇದೇ ವಾದವನ್ನು ಜಾತಿಗಳ ವಿಚಾರದಲ್ಲೂ ಅನ್ವಯಿಸಬಹುದಲ್ಲವೇ? ಹುಟ್ಟಿನ ಜಾತಿಗೆ ಪ್ರಾಧಾನ್ಯತೆ ನೀಡಿ, ಒಡೆದು ಆಳುವ ವ್ಯವಸ್ಥೆ ಇರುವವರೆಗೂ ಜಾತಿ ಆಧಾರಿತ ಮೇಲು-ಕೀಳುಗಳಿಗೆ ಅವಕಾಶವಿದ್ದೇ ಇರುತ್ತದೆ. ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ| ಮಧ್ಯಮಾಸೋ ಮಹಸಾ ವಿವಾವೃಧುಃ|| ಸುಜಾತಾಸೋ ಜನುಷಾ ಪೃಶ್ನಿಮಾತರೋ| ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ|| [ಋಗ್. ೫.೫೯.೬] ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಉನ್ನತ ಸ್ಥಿತಿಗೆ ಏರಬಲ್ಲವರಾಗಿದ್ದಾರೆ ಎಂಬ ಈ ವೇದಮಂತ್ರದ ಕರೆ  ನಮಗೆ ಏಕೆ ಕೇಳಿಸುವುದಿಲ್ಲ? ದೇವರನ್ನು ಅರಿಯುವ ಕ್ರಿಯೆಗೆ ಜ್ಞಾನ, ಕರ್ಮ, ಉಪಾಸನೆಗಳು ಸಾಧನಾಪಥಗಳು. ಈ ಜ್ಷಾನ ಕರ್ಮ, ಉಪಾಸನೆಗಳು ಯಾವುದೇ ಒಂದು ಜಾತಿಯ, ಒಂದು ವರ್ಗದ, ಒಂದು ಧರ್ಮದ ಸ್ವತ್ತಲ್ಲ. ಎಲ್ಲಾ ಮಾನವರ ಸ್ವತ್ತು ಅದು, ಆಸಕ್ತಿ ಇರುವ ಯಾರೇ ಆದರೂ ಅದನ್ನು ಪಡೆಯಬಹುದು, ಮಾಡಬಹುದು, ಅನುಷ್ಠಾನಕ್ಕೆ ತರಬಹುದು. ಈ ಮೂಲತತ್ವ ಅರ್ಥವಾದರೆ, ನಮ್ಮ ಸಂಕುಚಿತತೆ ಕಡಿಮೆಯಾದೀತು!
-ಕ.ವೆಂ.ನಾಗರಾಜ್.

ಶುಕ್ರವಾರ, ಆಗಸ್ಟ್ 11, 2017

ಖಿನ್ನತೆಯ ಅಪಾಯ


     ಅಪಾಯಕಾರಿ ಖಿನ್ನತೆ ಹೇಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುತ್ತದೆಯೆಂಬದಕ್ಕೆ ನನ್ನದೇ ಉದಾಹರಣೆ ಕೊಡುವೆ. ಬೆಳ್ತಂಗಡಿಯಲ್ಲಿ ತಹಸೀಲ್ದಾರನಾಗಿದ್ದಾಗ ಕರಾವಳಿ ಉತ್ಸವದ ಸಲುವಾಗಿ ಧರ್ಮಸ್ಥಳಕ್ಕೆ ಹೋಗಿದ್ದೆ. ಆದೇ ಸಮಯದಲ್ಲಿ ಕಛೇರಿಯಲ್ಲಿದ್ದ ಶಿರಸ್ತೇದಾರರು ಮತ್ತು ಗುಮಾಸ್ತರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಲೋಕಾಯುಕ್ತ ಇನ್ಸ್‌ಪೆಕ್ಟರರಿಗೆ ನನ್ನನ್ನೂ ಪ್ರಕರಣದಲ್ಲಿ ಸಿಲುಕಿಸಬೇಕೆಂದಿತ್ತು. ಗುಮಾಸ್ತರು ಹೇಳಿಕೆಯಲ್ಲಿ ರಾಷ್ಟ್ರೀಯ ಉಳಿತಾಯ ಪತ್ರದ ಸಲುವಾಗಿ ಹಣ ಪಡೆದಿದ್ದೆಂದು ಹೇಳಿಕೆ ಕೊಟ್ಟಿದ್ದರು. ಇನ್ಸ್‌ಪೆಕ್ಟರರು ಅದನ್ನು ಹರಿದುಹಾಕಿ ತಹಸೀಲ್ದಾರರಿಗೆ ಕೊಡುವ ಸಲುವಾಗಿ ಪಡೆದಿದ್ದೆಂದು ಬರೆದುಕೊಡಲು ಸೂಚಿಸಿದ್ದರು. ಗುಮಾಸ್ತರು ಪುನಃ ಹಿಂದಿನಂತೆಯೇ ಬರೆದುಕೊಟ್ಟರು. ಇನ್ಸ್‌ಪೆಕ್ಟರರು ಗುಮಾಸ್ತರ ಕಪಾಳಕ್ಕೆ ಬಾರಿಸಿ, ನಿನಗೆ ಬದುಕುವುದಕ್ಕೆ ಗೊತ್ತಿಲ್ಲ. ಹೇಳಿದ ಹಾಗೆ ಬರೆದುಕೊಡು ಎಂದು ಗದರಿಸಿ ಪುನಃ ಹೇಳಿಕೆಯನ್ನು ಹರಿದುಹಾಕಿದ್ದರು. ಆ ಗುಮಾಸ್ತರು, 'ಸಾರ್, ತಹಸೀಲ್ದಾರರು ಒಳ್ಳೆಯವರು. ಅವರ ಬಗ್ಗೆ ಬರೆದುಕೊಡಲು ಮನಸ್ಸು ಒಪ್ಪುತ್ತಿಲ್ಲ. ಬಲವಂತ ಮಾಡಿದರೆ ನಾನೇ ಲಂಚ ತೆಗೆದುಕೊಂಡೆ ಎಂದು ಬರೆದುಕೊಡುತ್ತೇನೆ' ಎಂದು ಹೇಳಿ, ಪುನಃ ಹಿಂದಿನ ಹೇಳಿಕೆಯನ್ನೇ ಬರೆದುಕೊಟ್ಟರು. ಆ ಗುಮಾಸ್ತರನ್ನು ನಾನೆಂದೂ ಮರೆಯಲಾರೆ. ಶಿರಸ್ತೇದಾರರ ಮೇಜಿನ ಡ್ರಾಯರಿನಲ್ಲಿ 300 ರೂ. ಸಿಕ್ಕಿದ್ದು ಅದು ಪ್ರಕರಣಕ್ಕೆ ಸಂಬಂಧಿಸಿರಲಿಲ್ಲ. ಅವರು ಮಾತ್ರ ಇನ್ಸ್‌ಪೆಕ್ಟರರ ಸೂಚನೆಯಂತೆ ತಹಸೀಲ್ದಾರರಿಗೆ ಕೊಡುವ ಸಲುವಾಗಿ ಎಂದು ಬರೆದುಕೊಟ್ಟಿದ್ದರು. ಧರ್ಮಸ್ಥಳದಲ್ಲಿದ್ದ ನನಗೆ ಇನ್ಸ್‌ಪೆಕ್ಟರರು ಫೋನು ಮಾಡಿ ಕಛೇರಿಗೆ ಬರಲು ಸೂಚಿಸುತ್ತಿದ್ದರು. ಪ್ರಕರಣದ ಹಿನ್ನೆಲೆ ಅರಿಯದ ನಾನು ಕಛೇರಿಗೆ ಬಂದರೆ ತೊಂದರೆಯಾಗುವುದೆಂದು ಇನ್ನೊಬ್ಬ ಗುಮಾಸ್ತರು ಗುಟ್ಟಾಗಿ ಫೋನಿನಲ್ಲಿ ತಿಳಿಸಿದ್ದರು. ನಾನು ಜಿಲ್ಲಾಧಿಕಾರಿಯವರಿಗೆ ಮತ್ತು ಸಹಾಯಕ ಆಯುಕ್ತರಿಗೆ ಫೋನು ಮೂಲಕ ಇದ್ದ ವಿಷಯ ತಿಳಿಸಿದೆ. ಅವರೂ ನನಗೆ ಕಛೇರಿಗೆ ಹೋಗದಿರಲು ಸೂಚಿಸಿದರು. ಇನ್ಸ್‌ಪೆಕ್ಟರರು ನನಗೆ, 'ನೀನು ಎಲ್ಲಿ ಅಡಗಿದ್ದರೂ ಬಿಡುವುದಿಲ್ಲ' ಎಂದು ಏಕವಚನದಲ್ಲಿ ಹೇಳಿದ್ದು ಅಸಹ್ಯ ಮತ್ತು ಭಯ ಮೂಡಿಸಿತ್ತು. ನಾನು ಕೋರಿರದಿದ್ದರೂ ಜಿಲ್ಲಾಧಿಕಾರಿಯವರು ಲೋಕಾಯುಕ್ತ ಅಧೀಕ್ಷಕರೊಂದಿಗೆ ಮಾತನಾಡಿ 'ತಹಸೀಲ್ದಾರರ ಬಗ್ಗೆ ನನಗೆ ಗೊತ್ತಿದೆ. ಅವರ ತಪ್ಪಿದ್ದರೆ ಪ್ರಕರಣದಲ್ಲಿ ಸೇರಿಸಲು ಅಭ್ಯಂತರವಿಲ್ಲ. ಸುಮ್ಮಸುಮ್ಮನೆ ಸಿಲುಕಿಸಬೇಡಿ' ಎಂದಿದ್ದರು. ನಂತರದಲ್ಲಿ ನನಗೆ ಹೇಳಿಕೆ ಕೊಡಲು ಲೋಕಾಯುಕ್ತ ಕಛೇರಿಯಿಂದ ಸೂಚನೆ ಬಂದಿತ್ತು. ನನಗೆ ತಿಳಿದ ಸಂಗತಿ ಕುರಿತು ಹೇಳಿಕೆ ನೀಡಿದ್ದೆ. ನನ್ನ ಯಾವುದೇ ತಪ್ಪಿಲ್ಲದಿದ್ದರೂ ಪ್ರಕರಣದಲ್ಲಿ ಸಿಲುಕಿಸಬಹುದೆಂಬ ಆತಂಕದಲ್ಲಿ ಕಳೆದಿದ್ದ ಆ 3 ದಿನಗಳಲ್ಲಿ ನಾನು ನಾನಾಗಿರಲಿಲ್ಲ, ಹುಚ್ಚನಂತಾಗಿದ್ದೆ. ಒಂದು ವೇಳೆ ಸಿಲುಕಿಸಿದ್ದಿದ್ದರೆ ಬಂಧುಗಳು, ಸ್ನೇಹಿತರ ಎದುರಿಗೆ ಹೇಗೆ ಮುಖ ತೋರಿಸುವುದು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಮಗಳ ಮದುವೆ ಮಾಡಬೇಕಿದ್ದಿತು. ಈಗ ಆ ಘಟನೆಯ ಕುರಿತು ಅವಲೋಕಿಸಿದಾಗ ಅಂದಿನ ನಿರ್ಧಾರ ತಪ್ಪೆಂದು ಅನ್ನಿಸುತ್ತಿದೆ. ಇತರರು ಏನಾದರೂ ಅಂದುಕೊಳ್ಳುತ್ತಾರೆ ಎಂದು ನನ್ನ ಜೀವವನ್ನು ಬಲಿಗೊಡುವುದು ಸರಿಯಾಗುತ್ತಿರಲಿಲ್ಲ. ಪುಣ್ಯಕ್ಕೆ ನನ್ನನ್ನು ಆ ಪ್ರಕರಣದಲ್ಲಿ ಸಿಲುಕಿಸಿರಲಿಲ್ಲ. ಆ ಗುಮಾಸ್ತರು ನನ್ನ ಜೀವ ಉಳಿಸಿದ್ದರು ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ ಈ ಲೇಖನ ಬರೆಯಲು ಅವಕಾಶ ಸಿಕ್ಕಿದೆ.
     ಖಿನ್ನತೆ ಕೆಳಮಟ್ಟದ ಮನೋಸ್ಥಿತಿಯಾಗಿದ್ದು, ವ್ಯಕ್ತಿಯ ಯೋಚನೆಗಳು, ನಡವಳಿಕೆಗಳು, ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಖಿನ್ನತೆಗೊಳಗಾದವರು ಅತಂತ್ರ ಭಾವನೆಯಿಂದ ದುಃಖಿಸುತ್ತಾ, ಹತಾಶೆ ಮತ್ತು ಅಭದ್ರತೆಯ ಭಾವನೆಯಿಂದ ಕುಗ್ಗಿರುತ್ತಾರೆ. ಏನು ಮಾಡಬೇಕೆಂದು ತೋಚದೆ ಚಡಪಡಿಸುತ್ತಿರುತ್ತಾರೆ, ಹುಚ್ಚರಂತೆ ವರ್ತಿಸುತ್ತಾರೆ, ಕಿರುಚಾಡುತ್ತಾರೆ. ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಸಂತಸ ಕೊಡುತ್ತಿದ್ದ ಸಂಗತಿಗಳು ನೀರಸವೆನಿಸುತ್ತವೆ. ಮರೆವು ಬಾಧಿಸುತ್ತದೆ. ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ನಿದ್ರೆಯಲ್ಲಿ ನಡೆಯುವುದು, ಹೆಚ್ಚಾಗಿ ನಿದ್ರಿಸುವುದು, ಹಲವಾರು ದೈಹಿಕ ಕಾಯಿಲೆಗಳಿಂದ ನರಳುವುದು ಮುಂತಾದ ಅನುಭವಗಳಾಗುವುದರ ಜೊತೆಗೆ ಅವರು ಆತ್ಮಹತ್ಯೆ ಮಾಡಿಕೊಳ್ಳಬಹುದು ಅಥವ ಆತ್ಮಹತ್ಯೆಗೆ ಪ್ರಯತ್ನಿಸಬಹುದು. ಖಿನ್ನತೆಗೆ ಒಳಗಾದವರಿಗೆ ಸಹಾನುಭೂತಿಗಿಂತಲೂ, ಅವರೊಂದಿಗೆ ತಾವು ಇದ್ದೇವೆ ಎಂದು ಭದ್ರತೆಯ ಭಾವನೆಯನ್ನು ಒದಗಿಸುವುದು ಅತ್ಯಂತ ಸೂಕ್ತವಾದುದು.
     ಚಿಕ್ಕಂದಿನ ಕಷ್ಟಗಳು, ಪೋಷಕರ ತಾರತಮ್ಯ ಮಕ್ಕಳನ್ನು ಖಿನ್ನತೆಯಿಂದ ನರಳುವಂತೆ ಮಾಡುತ್ತವೆ. ಅದು ಮುಂದೆ ಜೀವನದುದ್ದಕ್ಕೂ ಬಾಧಿಸಬಹುದು. ಆರ್ಥಿಕ ಅನಾನುಕೂಲತೆ, ನಷ್ಟಗಳು, ನಿರುದ್ಯೋಗದ ಸಮಸ್ಯೆ, ವಾಸಿಯಾಗದ ಕಾಯಿಲೆಗಳು, ಅಪೌಷ್ಟಿಕತೆ, ಪ್ರೀತಿಸಿದವರ ದ್ರೋಹ, ದುರಂತ ಘಟನೆಗಳು, ಸಾಮಾಜಿಕವಾಗಿ ಒಂಟಿಯೆನಿಸುವುದು, ದಾಂಪತ್ಯದಲ್ಲಿನ ಸಮಸ್ಯೆಗಳು, ಅಸೂಯೆ/ಮತ್ಸರ, ಸ್ತ್ರೀಯರಲ್ಲಿ ಮೆನೋಪಾಸ್, ಇತ್ಯಾದಿಗಳೂ ಖಿನ್ನತೆಗೆ ಕಾರಣವಾಗಬಲ್ಲವು. ಖಿನ್ನತೆಗೆ ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರಕ್ಕಿಂತಲೂ ಮಾನಸಿಕ ಸಲಹೆ, ಚಿಕಿತ್ಸೆಗಳು ಪರಿಣಾಮಕಾರಿ.
     ಈ ಖಿನ್ನತೆ ಹೇಗೆ ಬರುತ್ತದೋ ಊಹಿಸಲಾಗದು. ಚಾಕೊಲೇಟ್ ಕೊಡಿಸಲಿಲ್ಲ, ಹೊಸ ಬಟ್ಟೆ ಕೊಡಿಸಲಿಲ್ಲ, ಅಪ್ಪ/ಅಮ್ಮ/ಉಪಾಧ್ಯಾಯರು ಬೈದರು, ನಿರೀಕ್ಷಿತ ಅಂಕಗಳು ಬರಲಿಲ್ಲ ಮುಂತಾದ ಕ್ಷುಲ್ಲಕ ಕಾರಣಗಳಿಗಾಗಿ ಜೀವ ಕಳೆದುಕೊಳ್ಳುವ ಮಕ್ಕಳೂ ಇರುತ್ತಾರೆ. ದೊಡ್ಡವರೆನಿಸಿಕೊಂಡವರೂ ಹೀಗೆ ಮಾಡಿದವರಿದ್ದಾರೆ. ಸೂಕ್ಷ್ಮ ಮನೋಭಾವದ ಇಂತಹವರೊಂದಿಗೆ ಜಾಗೃತರಾಗಿರುವುದು ಅವಶ್ಯವಾಗಿದೆ. ಹೆಚ್ಚಿನ ಸಮಸ್ಯೆಗಳು ಕೌಟುಂಬಿಕ ಸಾಮರಸ್ಯತೆಯ ಕೊರತೆಯಿಂದ ಬರುತ್ತವೆ. ಪತಿ/ಪತ್ನಿ ತನ್ನ ಮಾತೇ ನಡೆಯಬೇಕು, ತಾನು ಹೇಳಿದಂತೆಯೇ ಆಗಬೇಕು ಎಂದು ಸಾಧಿಸುವುದು, ಇನ್ನೊಬ್ಬರ ಭಾವನೆಗಳಿಗೆ ಬೆಲೆ ಕೊಡದಿರುವುದು, ಯಾವುದೋ ಹಳೆಯ ಸಂಗತಿಯನ್ನು ಹಿಡಿದುಕೊಂಡು ಸದಾ ಕಿರಿಕಿರಿ ಮಾಡುವುದು, ಜಗಳವಾಡುವುದು ಮಾಡುತ್ತಿದ್ದರೆ ಸಮರಸತೆಗೆ ಜಾಗವೆಲ್ಲಿ? ಒಂದು ಹಂತದವರೆಗೆ ಸಹಿಸಿಕೊಂಡಾರು, ಮಿತಿ ಮೀರಿದಾಗ ಎಡವಟ್ಟು ಆಗದೇ ಇರದು. ಸಂಸಾರ ಸಾರ ಕಳೆದುಕೊಳ್ಳುತ್ತದೆ.
     ಪ್ರತಿಯೊಬ್ಬರೂ ಒಂದಲ್ಲಾ ಒಂದು ಸಮಯದಲ್ಲಿ, ಒಂದಲ್ಲಾ ಒಂದು ಕಾರಣಕ್ಕಾಗಿ ಖಿನ್ನತೆಯಿಂದ ಬಳಲಿದವರೇ ಇರುತ್ತಾರೆ. ವಿವೇಚನೆ ಕೈಕೊಟ್ಟರೆ ಖಿನ್ನತೆಗೊಳಗಾದವರು ತಮ್ಮ ಜೀವನದ ಬಲೂನಿಗೆ ತಾವೇ ಪಿನ್ನು ಚುಚ್ಚಿಕೊಳ್ಳುತ್ತಾರೆ. ಆದ್ದರಿಂದ ಖಿನ್ನತೆಯಿಂದ ಹೊರಬಂದ ಸಮಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಂತಹ ಸಂದರ್ಭದಲ್ಲೂ ದುಡುಕದಿರುವ ನಿರ್ಧಾರವನ್ನು ಕೈಗೊಳ್ಳಬೇಕು. ಜೀವನವೆಂದರೆ ಅದೊಂದೇ ಸಮಸ್ಯೆ ಅಲ್ಲ, ಅದಕ್ಕೂ ಮೀರಿದ ಬಾಳು ಇದೆ, ಬದಲಿ ದಾರಿ/ಪರಿಹಾರಗಳು ಇವೆ ಎಂದು ಮನಗಾಣಬೇಕು. ದುಡುಕಿನ ಕಾರಣದಿಂದ ಮಕ್ಕಳು, ಪೋಷಕರು, ಪ್ರೀತಿಪಾತ್ರರುಗಳಿಗೆ ಆಗುವ ನೋವಿನ ಅರಿವು ಮೂಡಿಸಿಕೊಳ್ಳಬೇಕು. ನೆರವಾಗಬಲ್ಲ, ಆಸರೆಯ ಹಸ್ತ ಚಾಚಬಲ್ಲವರೊಂದಿಗೆ ಸಂಪರ್ಕದಲ್ಲಿರಬೇಕು, ಕಷ್ಟದ ಸಂದರ್ಭದಲ್ಲಿ ಅವರ ಸಹಾಯ ಪಡೆಯಬೇಕು ಎಂದು ನಿಶ್ಚಯಿಸಿಕೊಳ್ಳಬೇಕು. ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಬೇಕು, ತಮಗೆ ತಾವೇ ಆಸರೆಯಾಗಿ ನಿಲ್ಲುವ ಮನಸ್ಸು ಮಾಡಬೇಕು. ಹೀಗೆ ಮಾನಸಿಕವಾಗಿ ಬಲಗೊಂಡರೆ ಮಾತ್ರ ಖಿನ್ನತೆಯನ್ನು ಮೆಟ್ಟಿ ನಿಲ್ಲಬಲ್ಲ ಶಕ್ತಿ ಸಂಚಯವಾದೀತು.
     ಖಿನ್ನತೆಯಿಂದ ನರಳುವವರ ಕುಟುಂಬದ ಇತರರೂ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು. ಹಂಗಿಸಿ, ಭಂಗಿಸಿ ಮಾಡುವುದಕ್ಕಿಂತ ಚೆನ್ನಾಗಿರಲು ಏನು ಮಾಡಬೇಕೆಂದು ಯೋಚಿಸಿ ನಡೆದುಕೊಳ್ಳುವುದು ವಿವೇಕವಂತರ ಲಕ್ಷಣ. ಇಲ್ಲದಿದ್ದರೆ ಅನಾಹುತಗಳಿಗೆ ಎಡೆಯಾಗುತ್ತದೆ. ಕೋಪ, ಅಸಹನೆ, ದ್ವೇಷಗಳು ಇನ್ನೊಬ್ಬರನ್ನು ತಿದ್ದಲಾರವು. ಬದಲಾಗಿ ಅವು ದ್ವೇಷಿಸಿದವರನ್ನೇ ದಹಿಸುತ್ತದೆ. ಕ್ಷುಲ್ಲಕ ಕಾರಣಕ್ಕಾಗಿ ಯಾರೂ ದುಡುಕಲಾರರು, ಅದರ ಹಿಂದೆ ಸತತ ಕಿರಿಕಿರಿಯ ಹಿನ್ನೆಲೆ ಇದ್ದೀತು, ಕ್ಷುಲ್ಲಕ ಕಾರಣಗಳು ಕೇವಲ ನೆಪಗಳು ಎಂಬ ಅರಿವಿರಬೇಕು. ಕುಟುಂಬದ ಕಲಹಗಳಲ್ಲಿ ಗೆದ್ದವರು ಸೋಲುತ್ತಾರೆ, ಸೋಲುವವರು ಗೆಲ್ಲುತ್ತಾರೆ. ದುರಭಿಮಾನ ಒಳ್ಳೆಯದಲ್ಲ. ಖಿನ್ನತೆಯಿಂದ ಬಳಲುವವರಿಗೆ ಭದ್ರತೆಯ ಭಾವನೆ ನೀಡಿದರೆ ಸಮಸ್ಯೆ ಅರ್ಧ ಪರಿಹಾರವಾದಂತೆ. ಕಲ್ಲು, ಇಟ್ಟಿಗೆ, ಮರಳು, ಸಿಮೆಂಟುಗಳನ್ನು ಜೋಡಿಸಿ ಒಳ್ಳೆಯ ಕಟ್ಟಡ ಕಟ್ಟಬಹುದು, ಆದರೆ ಅದು ಒಳ್ಳೆಯ ಮನೆ ಅನ್ನಿಸಿಕೊಳ್ಳಬೇಕಾದರೆ ಅದರಲ್ಲಿ ವಾಸಿಸುವವರ ಹೃದಯಗಳ ಜೋಡಣೆ ಆದರೆ ಮಾತ್ರ ಸಾಧ್ಯ.
     ಸುಂದರವಾದ ಕಮಲ ಕೆಸರಿನಲ್ಲಿ ಬೆಳೆಯುತ್ತದೆ. ದುಃಖ, ಬಡತನ, ಕಾಯಿಲೆ, ಮೂದಲಿಕೆ, ನಷ್ಟ, ತೊಂದರೆಗಳು ಮುಂತಾದ ಅನೇಕ ಕಷ್ಟಗಳೆಂಬ ಕೆಸರಿನ ನಡುವೆ ಸುಂದರವಾದ ಜೀವನ ಕುಸುಮ ಅರಳಿಸುವವರು ನಾವಾಗಬೇಕು. ನಮ್ಮ ಬದುಕು ನಮ್ಮದು. ಅದನ್ನು ಇತರರ ಕಾರಣದಿಂದ ಹಾಳು ಮಾಡಿಕೊಳ್ಳಬಾರದು. ಜೀವನವೆಂದರೆ  ಶೇ.೧೦ರಷ್ಟು ನಮಗೆ ಏನು ಅನುಭವಕ್ಕೆ ಬರುತ್ತದೋ ಅದು ಮತ್ತು ಶೇ. ೯೦ರಷ್ಟು ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆಯೋ ಅದು! ಸಮರ್ಥವಾಗಿ ಪ್ರತಿಕ್ರಿಯಿಸೋಣ, ಖಿನ್ನತೆಯನ್ನು ಹೊಡೆದಟ್ಟೋಣ.
-ಕ.ವೆಂ.ನಾಗರಾಜ್.

ಯಾರು ನಮ್ಮವರು?

     ವಾಟ್ಸಪ್ ಗುಂಪುಗಳು, ಫೇಸ್ ಬುಕ್, ಇತ್ಯಾದಿಗಳಲ್ಲಿ ವಿಚಾರ ವಿರೋಧಿಗಳು ಪರಸ್ಪರ ಕೆಸರೆರಚಾಟದಲ್ಲಿ ಎಷ್ಟರ ಮಟ್ಟಿಗೆ ಹೋಗುತ್ತಾರೆಂದರೆ ಕೀಳು ಪದಪ್ರಯೋಗಗಳು, ನಿಂದನೆಗಳು ಪ್ರಯೋಗವಾಗುವುದನ್ನು ಗಮನಿಸಿರಬಹುದು. ಕೆಲವೊಮ್ಮೆ ಅದು ಪೊಲೀಸ್, ನ್ಯಾಯಾಲಯಗಳ ಮೆಟ್ಟಲಿಗೂ ತಲುಪುತ್ತವೆ, ಕಾನೂನು-ಸುವ್ಯವಸ್ಥೆ ಸಮಸ್ಯೆಗಳೂ ಉಂಟಾಗುತ್ತವೆ. ಸಾಮಾನ್ಯ ಉದಾಹರಣೆಯೆಂದರೆ ಮೋದಿ ಪರ ಮತ್ತು ವಿರೋಧಿ ಬಣಗಳು ಎದ್ದು ಕಾಣುತ್ತವೆ. ಮೋದಿಯವರ ಪ್ರತಿ ನಡೆಯನ್ನೂ ಹೊಗಳುವವರು ಇರುವಂತೆಯೇ, ಪ್ರತಿ ಮಾತಿನಲ್ಲೂ ಬೇರೆಯದೇ ಅರ್ಥ ಹುಡುಕಿ ದೂಷಿಸುವವರಿದ್ದಾರೆ. ವಿಶೇಷವೆಂದರೆ ತಮ್ಮವರ ತಪ್ಪುಗಳ ಬಗ್ಗೆ ಅವರು ತುಟಿಪಿಟಕ್ ಅನ್ನುವುದಿಲ್ಲ. ಕೇರಳದ ಮುಖ್ಯಮಂತ್ರಿ ಮಂಗಳೂರಿಗೆ ಭೇಟಿ ನೀಡಲು ಬಂದ ಸಂದರ್ಭದಲ್ಲೂ ಎರಡು ವಿಚಾರಗಳ ಸಂಘರ್ಷ ತಾರಕಕ್ಕೆ ಏರಿತ್ತು. ಇರಲಿ ಬಿಡಿ, ನಾನು ಹೇಳ ಹೊರಟಿರುವುದು ನಮ್ಮವರು ಮತ್ತು ಬೇರೆಯವರು ಎಂಬ ಬಗ್ಗೆ ನಮಗಿರುವ ಧೋರಣೆಯ ಬಗ್ಗೆ ಅಷ್ಟೆ.
     ನೀವು ಯಾವ ಜನ?- ಯಾವ ಜಾತಿಯೆಂದು ಕೇಳಿ ತಿಳಿದುಕೊಳ್ಳುವ ಸಲುವಾಗಿ ಎದುರಾಗಬಹುದಾದ ಪ್ರಶ್ನೆಯಿದು. ಕೆಲವರಿಗೆ ಈ ಪ್ರಶ್ನೆಯಿಂದ ಮುಜುಗರವೂ ಆಗುತ್ತದೆ. ಬರುವ ಉತ್ತರ ಬ್ರಾಹ್ಮಣ, ಲಿಂಗಾಯತ, ಗೌಡರು, ಕ್ರಿಶ್ಚಿಯನ್, ಮುಸ್ಲಿಮ್, ಇತ್ಯಾದಿಗಳಿದ್ದರೆ, ಮರುಪ್ರಶ್ನೆ ಬರುತ್ತದೆ, ಅದರಲ್ಲಿ ಯಾರು? ಸ್ಮಾರ್ಥ, ವೈಷ್ಣವ, ಮಾಧ್ವ, ದಾಸಗೌಡ, ಮುಳ್ಳುಗೌಡ, ಆರಾಧ್ಯ, ಶಿಯಾ, ಸುನ್ನಿ, ಪ್ರಾಟೆಸ್ಟೆಂಟ್ . . . . ಮರು ಉತ್ತರ ಹೀಗೆ ಸಾಗುತ್ತದೆ. ಅಷ್ಟಕ್ಕೇ ನಿಲ್ಲುವುದಿಲ್ಲ. ಆ ಒಳಜಾತಿಯಲ್ಲಿ ಒಳಪಂಗಡಗಳು, ಊರು, ಹೀಗೆ ಕುಲಾನ್ವೇಷಣೆ ಮುಂದುವರೆಯುತ್ತದೆ. ಇಬ್ಬರದೂ ಒಂದೇ ಜಾತಿ, ಒಳಜಾತಿಗಳಾದರೆ ಆತ್ಮೀಯತೆಯ ಬಂಧ ಗಟ್ಟಿಯಾಗುತ್ತದೆ. ಏಕೆ ಹೀಗೆ? ನಮ್ಮವರು, ಇತರೆಯವರು ಎನ್ನುವ ಭೇದ ಜಾತಿಗೆ ಮಾತ್ರ ಸೀಮಿತವಲ್ಲ. ವೃತ್ತಿ, ರಾಜಕೀಯ, ಕಲಿಯುವ ಕಲಿಕೆ, ಊರು, ಸ್ವಭಾವ, ಅಂತಸ್ತು, ಇತ್ಯಾದಿಗಳಿಗೂ ಅನ್ವಯವಾಗುತ್ತದೆ. ಈ ನಮ್ಮವರು ಪ್ರತಿಯೊಂದರಲ್ಲೂ ಇತರರಿಗಿಂತ ಮುಂದಿರಬೇಕು ಎಂಬ ಭಾವನೆ ಎಲ್ಲರಲ್ಲೂ ಅಂತರ್ಗತವಾಗಿರುತ್ತದೆ. ನಮ್ಮವರು ಎಂಬ ಭಾವನೆ ಪರಿಚಯವಿಲ್ಲದವರನ್ನೂ ಒಗ್ಗೂಡಿಸುತ್ತದೆ, ಇತರರು ಎನ್ನುವ ಭಾವನೆ ಪರಿಚಯವಿರುವರನ್ನೂ ಸಂಶಯದಿಂದ ನೋಡುವಂತೆ ಮಾಡುತ್ತದೆ.
     ಇಂದು ಕಾಣುತ್ತಿರುವ ದ್ವೇಷ, ಜಗಳ, ಭಿನ್ನಮತ, ಇತ್ಯಾದಿಗಳ ಮೂಲವೇ ಈ ನಮ್ಮವರು, ಇತರರು ಅನ್ನುವ ಭಾವನೆ. ನಮ್ಮ ದೇವರೇ ಬೇರೆ, ನಮ್ಮ ಧರ್ಮವೇ ಬೇರೆ, ನಮ್ಮ ಜಾತಿಯೇ ಬೇರೆ, ನಮ್ಮ ಆಚಾರವೇ ಬೇರೆ, ನಮ್ಮ ವಿಚಾರವೇ ಬೇರೆ - ಹೀಗೆ ನಾವೇ ಬೇರೆ, ನೀವೇ ಬೇರೆಗಳನ್ನು ಬೆಳೆಸುತ್ತಾ, ಪೋಷಿಸುತ್ತಾ ಬಂದುದರ ಫಲವಿದು. ಈ ಬೇರೆಗಳು ಬೆಳೆಯುತ್ತಾ ಬೆಳೆಯುತ್ತಾ ನಮ್ಮವರಲ್ಲೇ ನಮ್ಮ ಒಳಗಿನವರು, ಒಳಗಿನ ಒಳಗಿನವರು ಸಹ ಬೆಳೆಯುತ್ತಾ ಹೋದರು. ಎಷ್ಟು ಧರ್ಮಗಳು, ಎಷ್ಟು ಜಾತಿಗಳು, ಎಷ್ಟು ಪಂಗಡಗಳು, ಒಳಪಂಗಡಗಳು!! ಒಂದೇ ಧರ್ಮ, ಜಾತಿ, ಪಂಗಡಗಳವರಲ್ಲೇ ವಿಭಿನ್ನ ರೀತಿಯ ಆಚಾರ-ವಿಚಾರಗಳು!! ನಮ್ಮವರೇ ನಮಗೆ ಪರಕೀಯರಾಗುತ್ತಾ ಹೋದರು. ಈ ಭಾವನೆ ಪರಸ್ಪರರಲ್ಲಿ ದ್ವೇಷ, ವೈಮನಸ್ಸುಗಳನ್ನು ಉಂಟುಮಾಡಿ, ಒಂದಾಗದ ವಾತಾವರಣ ನಿರ್ಮಾಣವಾಯಿತು. ಈ ಒಳಜಗಳಗಳೇ ವಿದೇಶೀಯರು ನಮ್ಮ ದೇಶದ ಮೇಲೆ ಸಹಸ್ರ ವರ್ಷಗಳವರೆಗೆ ಹಿಡಿತ ಸಾಧಿಸಲು ಸಹಕಾರಿಯಾದವು.
     ನಮ್ಮಲ್ಲಿ ಈ ನಮ್ಮವರು, ಇತರರು ಭಾವನೆ ಎಷ್ಟು ರಕ್ತಗತವಾಗಿದೆಯೆಂದರೆ ಯಾರಾದರೂ ದಾರ್ಶನಿಕರು, ಸಂತರು ಭೇದ ಭಾವಗಳನ್ನು ದೂರಮಾಡಿ ಜಾತಿಗಳನ್ನು ಒಂದುಗೂಡಿಸಲು ಮಾಡುವ ಪ್ರಯತ್ನಕ್ಕೆ ಓಗೊಡುವವರದ್ದೇ ಮತ್ತೊಂದು ಧರ್ಮ/ಜಾತಿ ಆಗಿಬಿಡುತ್ತದೆ. ಇರುವ ಗುಂಪುಗಳ ಜೊತೆಗೆ ಮತ್ತೊಂದು ಗುಂಪು ಸೇರ್ಪಡೆಯಾಗುತ್ತದೆ. ಮಾನವತಾವಾದಿ ಬಸವಣ್ಣನವರ ಜಾತಿಗಳನ್ನು ಒಗ್ಗೂಡಿಸುವ ಕರೆಗೆ ಓಗೊಟ್ಟವರದ್ದೇ ಒಂದು ಪ್ರತ್ಯೇಕ ಜಾತಿಯಾದುದನ್ನು ಉದಾಹರಿಸಬಹುದು. ಶಂಕರಾಚಾರ್ಯರ ತತ್ವ, ಸಿದ್ಧಾಂತಗಳನ್ನು ಒಪ್ಪುವವರು ಸ್ಮಾರ್ತರೆನಿಸಿದರು. ಮಧ್ವಾಚಾರ್ಯರ ಅನುಯಾಯಿಗಳು ಮಾಧ್ವರಾದರು. ರಾಮಾನುಜರ ವಿಚಾರಗಳನ್ನು ಒಪ್ಪಿದವರು ವೈಷ್ಣವರೆನಿಸಿದರು. ಹೀಗೆ ಜಾತಿಗಳು ಹೆಚ್ಚುತ್ತಾ ಹೋದವು. ವಿಭಿನ್ನ ಆಚಾರ-ವಿಚಾರಗಳನ್ನು ರೂಢಿಸಿಕೊಂಡರು. ತಾವೇ ಹೆಚ್ಚು ಎಂದು ತರ್ಕ-ವಿತರ್ಕಗಳಲ್ಲಿ ಮುಳುಗಿಹೋದರು. ಜಾತಿಗಳು ಹೆಚ್ಚಿದಂತೆ ದೇವರುಗಳೂ ಹೆಚ್ಚಾಗುತ್ತಾ ಹೋದರು. ಸಮಾಜಕ್ಕೆ ಮಾರ್ಗದರ್ಶಿಯಾದ ಆದರ್ಶಪುರುಷರುಗಳನ್ನೂ, ಸಾಧು-ಸಂತರನ್ನೂ ದೇವರ ಮಟ್ಟಕ್ಕೆ ಏರಿಸಿ ದೇವರುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿರುವುದನ್ನೂ ಕಂಡಿದ್ದೇವೆ, ಕಾಣುತ್ತಲಿದ್ದೇವೆ. ಮುಸ್ಲಿಮರು, ಮುಸ್ಲಿಮೇತರರು ಎಂಬ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದಕತೆ ದೊಡ್ಡ ಪಿಡುಗಾಗಿದೆ.
     ಜಗತ್ತು ನಡೆದಿರುವುದೇ ಭಿನ್ನತೆಯಿಂದ! ಭಿನ್ನತೆಯಿರುವುದರಿಂದಲೇ ಜಗತ್ತಿಗೆ ಅರ್ಥವಿದೆ. ಆದರೆ ಈ ಭಿನ್ನತೆ ಪರಸ್ಪರರ ಉತ್ಕರ್ಷಕ್ಕೆ ಕಾರಣವಾಗಬೇಕೇ ಹೊರತು ಅವನತಿಗಲ್ಲ. ದೇವನ ಸೃಷ್ಟಿಯಲ್ಲೇ ಇರುವ ಭಿನ್ನತೆಗಳು ಪರಸ್ಪರರಿಗೆ ಪೂರಕವಾಗಿವೆ. ಆದರೆ ಮಾನವ ನಿರ್ಮಿತ ಭಿನ್ನತೆಗಳು ಅವನನ್ನು ಪಾತಾಳಕ್ಕೆ ತಳ್ಳುತ್ತಿವೆ. ಈ ನಮ್ಮವರು ಅನ್ನುವ ಭಾವನೆ ಎಷ್ಟು ಸಂಕುಚಿತವಾಗುತ್ತಾ ಹೋಗುತ್ತದೋ ಅಷ್ಟೂ ಸಮಸ್ಯೆಗಳ ತೀವ್ರತೆ ಹೆಚ್ಚುತ್ತಾ ಹೋಗುತ್ತದೆ. ನಮ್ಮವರು ಅನ್ನುವ ಭಾವನೆ ಒಳ್ಳೆಯದೇ; ಆದರೆ ಆ ಭಾವನೆ ವಿಶಾಲದೃಷ್ಟಿಯಿಂದ ಕೂಡಿ ನಮ್ಮವರ ಅಭಿವೃದ್ಧಿಯೊಂದಿಗೆ ಮತ್ತು ಆ ಮೂಲಕ ಇತರ ಎಲ್ಲರ ಅಭಿವೃದಿಯ ಧ್ಯೇಯ ಹೊಂದಿದ್ದಲ್ಲಿ ಉತ್ತಮ. ಭಿನ್ನತೆಗಳನ್ನು ಸಂಪೂರ್ಣವಾಗಿ ನಿವಾರಿಸಲು ಆಗದಿರುವುದನ್ನು ಅರ್ಥ ಮಾಡಿಕೊಂಡು ಭಿನ್ನತೆಗಳನ್ನು ಉನ್ನತಿಗೆ ಸಹಕಾರಿಯಾಗುವಂತೆ ಯಾರಿಗೂ ನೋವಾಗದಂತೆ ಸರ್ವ ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಬಳಸುವುದನ್ನು ಉತ್ತೇಜಿಸಬೇಕಿದೆ.
     ಇಂದು ಪ್ರಚಲಿತವಿರುವ ಅನೇಕ ಜಾತಿಗಳಿಗೆ, ಜಾತಿಪದ್ಧತಿಗೆ ವೇದಗಳೇ ಮೂಲವೆಂದು ಆರೋಪಿಸಲಾಗುತ್ತಿದೆ. ವೇದಗಳಲ್ಲಿ ಉಲ್ಲೇಖವಾಗಿರುವ ಚಾತುರ್ವಣ್ಯಗಳನ್ನು ಜಾತಿಗಳೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಯಾವುದೋ ಸುದೀರ್ಘ ಹಿಂದಿನ ಕಾಲದಲ್ಲಿ ಜಾತಿಯನ್ನು ಹುಟ್ಟಿನಿಂದ ಬರುವುದೆಂದು ಪರಿಗಣಿಸಲ್ಪಟ್ಟು, ಅದೇ ಮುಂದುವರೆದು, ಸಂಪ್ರದಾಯವಾದಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪೋಷಿಸಿಕೊಂಡು ಬರುತ್ತಿರುವುದೂ ಸತ್ಯ. ಸತ್ಯದ ಹಿನ್ನೆಲೆಯಲ್ಲಿ ಪೂರ್ವಾಗ್ರಹಪೀಡಿತರಾಗದೆ ಅಧ್ಯಯನ ಮಾಡುವವರಿಗೆ ವೇದಗಳಲ್ಲಿ ಜಾತಿಗಳು ಎಂದೂ ಹುಟ್ಟಿನಿಂದ ಬರುವುದೆಂದು ಪ್ರತಿಪಾದಿಸಿರುವುದು ಕಂಡುಬರುವುದಿಲ್ಲ. ಇಂದಿನ ವ್ಯವಸ್ಥೆಯೂ ಹುಟ್ಟಿನಿಂದ ಬರುವ ಜಾತಿಗೆ ಅನಗತ್ಯ ಪ್ರಾಧಾನ್ಯತೆ ನೀಡಿ, ರಾಜಕಾರಣಿಗಳು ಅಧಿಕಾರದ ಸಲುವಾಗಿ ಅದನ್ನು ಬಲಗೊಳಿಸುತ್ತಿರುವುದು ಕಠೋರ ಸತ್ಯ. ಇದರಿಂದಾಗಿ ದೇಶ ಸಂಕಟದ ಸಮಯಗಳಲ್ಲಿ ಒಂದಾಗಿ ನಿಲ್ಲುವುದೂ ದುಸ್ತರವೆಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
          ನಮ್ಮವರು, ಇತರರು ಎಂಬವು ನಮ್ಮ ಸೃಷ್ಟಿಯಾಗಿವೆ, ಭಗವಂತನ ಸೃಷ್ಟಿಯಲ್ಲ. ಭಗವಂತನ ಸೃಷ್ಟಿಯಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಅನೇಕ ರೀತಿಯ ವೈದ್ಯಕೀಯ ಪದ್ಧತಿಗಳಿವೆ - ಆಯುರ್ವೇದ, ಅಲೋಪತಿ, ಹೋಮಿಯೋಪತಿ, ಇತ್ಯಾದಿ. ಇವುಗಳಲ್ಲಿ ಯಾವುದು ಮೇಲು? ಯಾವುದು ಕೀಳು? ಎಲ್ಲಾ ವೈದ್ಯಕೀಯ ಶಾಸ್ತ್ರಗಳ ಉದ್ದೇಶ ಒಂದೇ, ಆರೋಗ್ಯ ಕಾಪಾಡುವುದು. ಪ್ರತಿಯೊಂದು ವಿಧಾನಕ್ಕೂ ಈಗಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮುಂದುವರೆಯಲು ಅವಕಾಶಗಳು ಮುಕ್ತವಾಗಿವೆ. ವೈದ್ಯರುಗಳಲ್ಲೇ ಹಲವು ವಿಶೇಷ ತಜ್ಞವೈದ್ಯರಿದ್ದಾರೆ - ನರರೋಗ, ಹೃದಯರೋಗ, ನೇತ್ರ, ದಂತ, ಮನೋರೋಗ ಹೀಗೆ ಹಲವಾರು ವಿಭಾಗಗಳಲ್ಲಿ ಪರಿಣತರಿದ್ದಾರೆ. ಇವರಲ್ಲಿ ಯಾರು ಹೆಚ್ಚು ಮತ್ತು ಯಾರು ಕಡಿಮೆ? ವೈದ್ಯರ ಮಗ ವೈದ್ಯನೇ ಆಗಬೇಕೆಂದಿದೆಯೇ? ವಕೀಲರ ಮಕ್ಕಳು ವಕೀಲರೇ ಆಗಿರುತ್ತಾರೆಯೇ? ಇದೇ ವಾದವನ್ನು ಜಾತಿಗಳ ವಿಚಾರದಲ್ಲೂ ಅನ್ವಯಿಸಬಹುದಲ್ಲವೇ? ಹುಟ್ಟಿನ ಜಾತಿಗೆ ಪ್ರಾಧಾನ್ಯತೆ ನೀಡಿ, ಒಡೆದು ಆಳುವ ವ್ಯವಸ್ಥೆ ಇರುವವರೆಗೂ ಜಾತಿ ಆಧಾರಿತ ಮೇಲು-ಕೀಳುಗಳಿಗೆ ಅವಕಾಶವಿದ್ದೇ ಇರುತ್ತದೆ. ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ| ಮಧ್ಯಮಾಸೋ ಮಹಸಾ ವಿವಾವೃಧುಃ|| ಸುಜಾತಾಸೋ ಜನುಷಾ ಪೃಶ್ನಿಮಾತರೋ| ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ|| [ಋಗ್. ೫.೫೯.೬] ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಉನ್ನತ ಸ್ಥಿತಿಗೆ ಏರಬಲ್ಲವರಾಗಿದ್ದಾರೆ ಎಂಬ ಈ ವೇದಮಂತ್ರದ ಕರೆ  ನಮಗೆ ಏಕೆ ಕೇಳಿಸುವುದಿಲ್ಲ? ದೇವರನ್ನು ಅರಿಯುವ ಕ್ರಿಯೆಗೆ ಜ್ಞಾನ, ಕರ್ಮ, ಉಪಾಸನೆಗಳು ಸಾಧನಾಪಥಗಳು. ಈ ಜ್ಷಾನ ಕರ್ಮ, ಉಪಾಸನೆಗಳು ಯಾವುದೇ ಒಂದು ಜಾತಿಯ, ಒಂದು ವರ್ಗದ, ಒಂದು ಧರ್ಮದ ಸ್ವತ್ತಲ್ಲ. ಎಲ್ಲಾ ಮಾನವರ ಸ್ವತ್ತು ಅದು, ಆಸಕ್ತಿ ಇರುವ ಯಾರೇ ಆದರೂ ಅದನ್ನು ಪಡೆಯಬಹುದು, ಮಾಡಬಹುದು, ಅನುಷ್ಠಾನಕ್ಕೆ ತರಬಹುದು. ಈ ಮೂಲತತ್ವ ಅರ್ಥವಾದರೆ, ನಮ್ಮ ಸಂಕುಚಿತತೆ ಕಡಿಮೆಯಾದೀತು!
-ಕ.ವೆಂ.ನಾಗರಾಜ್.

ಭಾನುವಾರ, ಆಗಸ್ಟ್ 6, 2017

ಸಹನೆಯೆಂಬ ಮುಖವಾಡ


     ಹಿಂದೊಮ್ಮೆ ಪಾಕಿಸ್ತಾನದವರು ಭಾರತದ ಇಬ್ಬರು ಯೋಧರ ರುಂಡ-ಮುಂಡ ಬೇರ್ಪಡಿಸಿ ರುಂಡರಹಿತ ದೇಹಗಳನ್ನು ಬಿಟ್ಟಿದ್ದ ಸಂದರ್ಭದಲ್ಲಿ ಆಡಳಿತಾರೂಢರ ಪ್ರತಿಕ್ರಿಯೆ ಕೇವಲ ಬಾಯಿಮಾತಿನದಾಗಿತ್ತು. ಭಾರತದ ಉಗ್ರ ಪ್ರತಿಭಟನೆ ಎಂಬುದು ಕಾಗದದ ಮೇಲೆ ಮಾತ್ರ ದಾಖಲಾಗಿತ್ತು. ಇದನ್ನು ಸಹನೆಯೆನ್ನಬಹುದೇ? ಹೇಡಿತನವಷ್ಟೆ. ಪ್ರತಿಕ್ರಮ ತೆಗೆದುಕೊಳ್ಳಬಹುದಾಗಿದ್ದರೂ ತೆಗೆದುಕೊಳ್ಳದಿರುವುದಕ್ಕೆ ರಾಜಕೀಯ ಸ್ವಾರ್ಥ ಕಾರಣವಾಗಿತ್ತೆಂಬುದರಲ್ಲಿ ಅನುಮಾನವಿರಲಿಲ್ಲ. ಸಹನೆಯೆಂದರೆ ದಬ್ಬಾಳಿಕೆ, ಅನ್ಯಾಯಗಳನ್ನು ಸಹಿಸಿಕೊಳ್ಳುವುದಲ್ಲ. ಇರಲಿ ಬಿಡಿ, ನೈಜ ಸಹನೆಯ ಕುರಿತು ಗಮನಿಸೋಣ. ಸಹನೆಯೆಂದರೆ ಪ್ರಚೋದನೆ, ಕಿರಿಕಿರಿ, ದುರಾದೃಷ್ಟ, ನೋವು, ಕ್ಲಿಷ್ಟಕರ ಸನ್ನಿವೇಶಗಳು, ಇತ್ಯಾದಿಗಳನ್ನು ತಾಳ್ಮೆ ಕಳೆದುಕೊಳ್ಳದೆ, ಸಿಟ್ಟು ಮಾಡಿಕೊಳ್ಳದೆ, ಭಾವನೆಗಳನ್ನು ಹೊರತೋರ್ಪಡಿಸದೇ ಸ್ಥಿತಪ್ರಜ್ಞತೆಯಿಂದ, ನಿರ್ಭಾವುಕತೆಯಿಂದ ಸಹಿಸಿಕೊಳ್ಳುವ ಮತ್ತು ಅಳೆದು ತೂಗಿ ಯುಕ್ತ ನಿರ್ಧಾರ ತೆಗೆದುಕೊಳ್ಳುವ ಒಂದು ಅದ್ಭುತ ಗುಣ. ಜನನಾಯಕರು, ಸಾಧು-ಸಂತರು, ಹಿರಿಯರುಗಳಲ್ಲಿ, ಸಾಧಕರಲ್ಲಿ ಈ ಗುಣ ಕಾಣಬಹುದು. ಇದೊಂದು ದೈವಿಕ ಗುಣ. ಸಹನಾಶೀಲರು ಸಾಮಾನ್ಯವಾಗಿ ಜನಾನುರಾಗಿಗಳಾಗಿರುತ್ತಾರೆ, ಜನರು ಇಷ್ಟಪಡುವವರಾಗಿರುತ್ತಾರೆ. ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಕೆಲವೊಮ್ಮೆ ಸಹಜವಾಗಿ, ಕೆಲವೊಮ್ಮೆ ತನ್ನ ಸಂತೋಷಕ್ಕಾಗಿ, ಕೆಲವೊಮ್ಮೆ ಇತರರ ಸಂತೋಷಕ್ಕಾಗಿ, ಕೆಲವೊಮ್ಮೆ ಅನಿವಾರ್ಯವಾಗಿ ಅನೇಕ ರೀತಿಯ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಅವುಗಳ ಪೈಕಿ ಸಹನೆ ಎಂಬುದು ಅತ್ಯಂತ ಸುಂದರವಾದ ಮುಖವಾಡ.
      ಸಹನೆಯ ಮಹತ್ವವನ್ನು ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ದಾರ್ಶನಿಕವಾಗಿ ಅನೇಕ ಮಗ್ಗಲುಗಳಲ್ಲಿ ವಿಶ್ಲೇಷಿಸಬಹುದು. ವಿಜ್ಞಾನದ ಆವಿಷ್ಕಾರಗಳು ವಿಜ್ಞಾನಿಗಳ ಸಹನಾಸಹಿತವಾದ ಶ್ರಮದ ಫಲವೇ ಆಗಿದೆ. ಥಾಮಸ್ ಆಲ್ವಾ ಎಡಿಸನ್ ಹೇಳಿದ್ದಂತೆ ಒಂದು ಸಾವಿರ ಪ್ರಯೋಗಗಳು ವಿಫಲವಾದರೂ, ವಿಫಲ ಪ್ರಯೋಗಗಳಿಂದ ಆ ರೀತಿ ಮಾಡಿದರೆ ಪ್ರಯೋಜನವಾಗುವುದಿಲ್ಲ ಎಂಬ ಸಂಗತಿ ಗೊತ್ತಾಗುತ್ತದೆ. ಒಂದು ಕಾಗದವನ್ನೋ, ವಸ್ತುವನ್ನೋ ಇಟ್ಟುಕೊಂಡು ಅದರಲ್ಲಿ ಏನೋ ಮಾಡಬೇಕೆಂದು ಪ್ರಯತ್ನಿಸುವ ಪುಟ್ಟ ಮಗುವನ್ನು ಗಮನಿಸಿ. ಅದು ತದೇಕಚಿತ್ತದಿಂದ ಏನನ್ನೋ ಮಾಡುತ್ತಿರುತ್ತದೆ. ತನ್ನ ಮನಸ್ಸಿನಂತೆ ಆಗದಿದ್ದರೆ ಸಿಟ್ಟು ಮಾಡಿಕೊಂಡು ಅದನ್ನು ಎಸೆಯುತ್ತದೆ. ಆದರೆ ಅಲ್ಲಿಗೇ ನಿಲ್ಲಿಸುವುದಿಲ್ಲ, ಮತ್ತೆ ತೆಗೆದುಕೊಂಡು ಪ್ರಯತ್ನ ಮುಂದುವರೆಸುತ್ತದೆ. ಯಾರಾದರೂ ಹಿರಿಯರು ಅದಕ್ಕೆ ಸಹಾಯ ಮಾಡುತ್ತಾ, ಹೇಳಿಕೊಡುತ್ತಾ ಇದ್ದು, ಮಗು ತನ್ನ ಪ್ರಯತ್ನದಲ್ಲಿ ಯಶಸ್ವಿಯಾದರೆ ಆಗ ಅದು ಪಡುವ ಸಂತೋಷವನ್ನು ಕಂಡವರಿಗೂ ಸಂತೋಷವಾಗುತ್ತದೆ. ಸಹನೆ ಮೊಳಕೆಯೊಡೆಯುವುದು ಹೀಗೆ!
     ಧಾರ್ಮಿಕವಾಗಿ ಸಹನೆ ಅತ್ಯಂತ ಪ್ರಧಾನವಾಗಿ ಬೋಧಿಸಲ್ಪಟ್ಟ ವಿಷಯವಾಗಿದೆ. ದೇವರಿಗೆ ಹತ್ತಿರವಾಗಲು ಇರಬೇಕಾದ ರೀತಿ ನೀತಿಗಳನ್ನು ಸ್ಪಷ್ಟಪಡಿಸುವ ಧಾರ್ಮಿಕ ಸಂಪ್ರದಾಯಗಳು ಸಹನೆಗೆ ಪ್ರಾಧಾನ್ಯತೆ ನೀಡಿವೆ. ಸನಾತನ ಕಾಲದಲ್ಲಿ ಮೋಕ್ಷ ಸಂಪಾದನೆಗಾಗಿ ತಪಸ್ಸು, ಧ್ಯಾನಗಳಲ್ಲಿ ತೊಡಗಿರುತ್ತಿದ್ದ ಸಾಧು-ಸಂತ-ಸಂನ್ಯಾಸಿಗಳು ಸಹನೆಯ ಪ್ರತೀಕರಾಗಿದ್ದರು. ನೀನೂ ಜೀವಿಸು, ಇತರರನ್ನೂ ಜೀವಿಸಲು ಬಿಡು ಎಂಬ ಮಹಾವೀರನ ಬೋಧನೆಯಲ್ಲಿ ಕಾಣುವುದೂ ಸಹನೆಯ ನೀತಿಪಾಠ. ಏಸುಕ್ರಿಸ್ತ ತನ್ನವರಿಗಾಗಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಸಹಿಸಿದ್ದವನು. ತಾಳ್ಮೆಯಿಂದಿರುವ ವ್ಯಕ್ತಿ ಯೋಧನಿಗಿಂತಲೂ ಶ್ರೇಷ್ಠ, ರಾಜ್ಯವನ್ನು ಗೆದ್ದವನಿಗಿಂತ ತನ್ನ ಭಾವನೆಗಳನ್ನು ನಿಯಂತ್ರಿಸಿ ಗೆದ್ದವನೇ ಶ್ರೇಷ್ಠ ಎಂದು ಹೀಬ್ರೂ ಗಾದೆಯಿದೆ. ಒಬ್ಬ ಶ್ರೇಷ್ಠ ಮಹಮದೀಯ ಅಲ್ಲಾಹುವಿಗೆ ಸಮೀಪನಾಗಿರಬೇಕೆಂದರೆ ಶ್ರೇಷ್ಠ ರೀತಿಯಲ್ಲಿ ಜೀವಿಸಬೇಕು, ಸಹನಾಮಯಿಯಾಗಿರಬೇಕು. ಸಾಧನೆಗೆ ತಾಳ್ಮೆ ಅಗತ್ಯವೆಂದು ಬೌದ್ಧ ಧರ್ಮ ಪ್ರತಿಪಾದಿಸುತ್ತದೆ.
     ಸನಾತನ ಧರ್ಮವಂತೂ ಸಹಿಷ್ಣುತೆಗೆ ಪ್ರಾಧಾನ್ಯತೆ ನೀಡಿದ ಧiವಾಗಿದೆ. ಇದರಲ್ಲಿ ಸಹಿಷ್ಣುತೆಗೆ 10 ಪರೀಕ್ಷೆಗಳಿವೆ. ಅವೆಂದರೆ: ಅಹಿಂಸೆ, ಸತ್ಯ, ಅಸ್ತೇಯ (ಕದಿಯದಿರುವುದು), ಬ್ರಹ್ಮಚರ್ಯ, ದಯೆ, ಮೋಸ ಮಾಡದಿರುವುದು, ಕ್ಷಮಾಗುಣ, ಧೃತಿ, ಮಿತಾಹಾರ ಮತ್ತು ಶೌಚ. ಈ 10 ಸಂಗತಿಗಳನ್ನು ಪಾಲಿಸುವವರಿಗೆ ಸಹನಾಶಕ್ತಿ ತಾನಾಗಿ ಒಲಿದು ಬರುತ್ತದೆ. ಮತೀಯ/ಧಾರ್ಮಿಕ ಅಸಹನೆಗಳು ವಿಶ್ವದ ಬೃಹತ್ ಸಮಸ್ಯೆಯಾಗಿರುವುದಕ್ಕೆ ಕಾರಣ ಧರ್ಮಗಳದ್ದಲ್ಲ, ಅದನ್ನು ತಪ್ಪಾಗಿ ಅನುಸರಿಸುವ ಮತಾಂಧ ಅನುಯಾಯಿಗಳದು. ಎಲ್ಲಾ ಧರ್ಮಗಳ ಹಿರಿಯರೆನಿಸಿಕೊಂಡವರು ವಿಶ್ವಶಾಂತಿಯ ದೃಷ್ಟಿಯಿಂದ ಪರಸ್ಪರ ಸಮಾಲೋಚಿಸಿ ತಮ್ಮ ಅನುಯಾಯಿಗಳಿಗೆ ಸುಯೋಗ್ಯ ಮಾರ್ಗದರ್ಶನ ನೀಡದಿದ್ದರೆ ವಿನಾಶದ ಹಾದಿ ಖಂಡಿತ.
     ಸಹನೆ ಅನ್ನುವುದು ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿ ಇಡುವಂತಹ ನಿಯಂತ್ರಕ ಶಕ್ತಿ. ಸಹನೆ ಸಜ್ಜನರ ಆಸ್ತಿಯಾಗಿದ್ದು, ಉತ್ತಮ ಫಲಗಳನ್ನು ಕೊಡುತ್ತದೆ. ಅಸಹನೆಗೂ ಹಲವು ಮಗ್ಗಲುಗಳಿವೆ. ಸಹನೆಯ ಕಟ್ಟೆ ಒಡೆದಾಗ ಉಂಟಾಗುವ ಅಸಹನೆಯ ಪರಿಣಾಮ ಘೋರವಾಗಿರುತ್ತದೆ. ಮಿತಿಯಾಗಿದ್ದಾಗ ವಿಷವೂ ಅಮೃತವಾಗಬಹುದು, ಅತಿಯಾದರೆ ಅಮೃತವೂ ವಿಷವಾಗಬಹುದು. ಅವರು ಮುಂದಿದ್ದಾರೆ, ನಾವು ಹಿಂದಿದ್ದೇವೆ ಎಂಬ ಕಾರಣದಿಂದ ಉಂಟಾಗುವ ಅಸಹನೆ ಹತೋಟಿಯಲ್ಲಿದ್ದರೆ ನಾವೂ ಮುಂದುವರೆಯಲು ಅದು ಪ್ರೇರಿಸಬಹುದು. ಮಿತಿ ಮೀರಿದರೆ ಅದು ಮುಂದಿರುವವರ ವಿರುದ್ಧದ ದ್ವೇಷವಾಗಿಯೂ ಪರಿವರ್ತಿತವಾಗಬಹುದು. ಇದು ಬಂಧು-ಬಳಗಗಳಲ್ಲಿ, ವೃತ್ತಿ ವಲಯಗಳಲ್ಲಿ, ಜಾತಿ-ಜಾತಿಗಳ ನಡುವೆ ಸಾಮಾನ್ಯವಾಗಿ ಕಾಣಬರುವಂತಹದು. ವೈಚಾರಿಕ ಜಾಗೃತಿ ಮಾತ್ರ ಇದಕ್ಕೆ ಪರಿಹಾರ.
     ನಿರಂತರವಾದ ಕಿರುಕುಳ, ಯಾವುದೋ ಕಾರಣದಿಂದಾದ ವೈಮನಸ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸತತವಾಗಿ ಮಾಡುವ ದ್ವೇಷ ಸಹನೆಯ ಕಟ್ಟೆ ಒಡೆಯಲು ಸಾಕಾಗುತ್ತದೆ. ಎಲಾಸ್ಟಿಕ್ಕಿನ ಎಳೆಯನ್ನು ಒಂದು ಹಂತದವರೆವಿಗೂ ತುಂಡಾಗದಂತೆ ಎಳೆಯಬಹುದು. ಆದರೆ ಅದರ ಧಾರಣಾಶಕ್ತಿ ಮೀರಿ ಎಳೆದರೆ ತುಂಡಾಗುತ್ತದೆ. ಮನುಷ್ಯರ ನಡುವಣ ವ್ಯವಹಾರವೂ ಹೀಗೆಯೇ. ಒಂದು ಹಂತದವರೆಗೆ ಸಹಿಸುತ್ತಾರೆ. ಸಹಿಸಲು ಸಾಧ್ಯವೇ ಇಲ್ಲವೆಂದಾದಾಗ ಸ್ಫೋಟಕ ವಾತಾವರಣ ಉಂಟಾಗುತ್ತದೆ. ಆಗ ಮನಸ್ಸಿನ ನಿಯಂತ್ರಣ ಮೀರಿ ಸಹನೆಯ ಮುಖವಾಡ ಕಳಚುತ್ತದೆ, ಕ್ರೋಧಾಸುರ ಆವಾಹನೆಗೊಳ್ಳುತ್ತಾನೆ. ವಿವೇಕರಹಿತವಾದ ಆ ಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು, ಕೊಲೆ ಆಗಬಹುದು, ಆತ್ಮಹತ್ಯೆ ಮಾಡಿಕೊಳ್ಳಬಹುದು, ದೀರ್ಘಕಾಲದ ಸಂಬಂಧಗಳ ಇತಿಶ್ರೀ ಆಗಬಹುದು. ಏನೇ ಆದರೂ ಪರಿಣಾಮ ಮಾತ್ರ ಯಾರಿಗೂ ಹಿತವಾಗಿರುವುದಿಲ್ಲ. ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತರಾದಾಗ ಬರುವುದಿಲ್ಲವೆಂದು ಗೊತ್ತಾಗುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಅಸಹನೆಯ ಮುದ್ದು ಕೂಸುಗಳಾದ ಕೋಪ, ಮತ್ಸರ ಮತ್ತು ದ್ವೇಷಗಳು ವಿವೇಚನೆ ಮಾಡುವ ಶಕ್ತಿಯನ್ನು ನುಂಗಿಬಿಡುತ್ತವೆ, ಆ ಸ್ಥಿತಿಯಲ್ಲಿ ಅನಾಹುತ ನಡೆದುಹೋಗುತ್ತದೆ. ಅದರ ದೀರ್ಘಕಾಲದ ಪರಿಣಾಮವನ್ನು ಸಂಬಂಧಿಸಿದವರಲ್ಲದೆ ಅವರ ಕುಟುಂಬದವರೂ ಎದುರಿಸಬೇಕಾಗುತ್ತದೆ.
     ಸಾಮೂಹಿಕವಾಗಿ ಉಂಟಾಗುವ ಅಸಹನೆ ಅರಾಜಕತೆ, ಅಶಾಂತಿಗೆ ಕಾರಣವಾಗುತ್ತದೆ. ಸಾಮೂಹಿಕ ಅಸಹನೆ, ಅಶಾಂತಿಗೆ ಇಂದಿನ ರಾಜಕೀಯ ವ್ಯವಸ್ಥೆ, ವಿವಿಧ ಮಾಧ್ಯಮಗಳು, ಅರಾಜಕತೆ ಉತ್ತೇಜಿಸುವ ಬರಹಗಾರರು, ಮುಂತಾದವುಗಳು ಗಣನೀಯ ಪಾಲು ನೀಡುತ್ತಿವೆ. ಇದಕ್ಕೆ ಪರಿಹಾರವಿಲ್ಲವೇ ಅಂದರೆ ಖಂಡಿತಾ ಇದೆ. ಕಾಯಿಲೆ ಬಂದ ಮೇಲಿನ ಚಿಕಿತ್ಸೆಗಿಂತ ಕಾಯಿಲೆ ಬರದಂತೆ ನೋಡಿಕೊಳ್ಳುವುದೇ ಅತ್ಯುತ್ತಮವಾದ ಪರಿಹಾರ. ಸಹನೆ ಕಾಯ್ದುಕೊಳ್ಳಲು ಪೂರಕವಾದ ವಾತಾವರಣವನ್ನು ನಾವೇ ನಿರ್ಮಿಸಿಕೊಳ್ಳಬೇಕು. ನಮ್ಮ ಸ್ನೇಹಿತರು, ಪರಿಸರಗಳ ವಿಚಾರದಲ್ಲಿ ಜಾಗೃತರಾಗಿರಬೇಕು. ಎಲ್ಲೆಲ್ಲೂ ಕೆಟ್ಟದನ್ನು ಕಾಣುವ ದೃಷ್ಟಿಕೋನ ಬದಲಾಯಿಸಿಕೊಂಡು ಒಳಿತನ್ನು ಅರಸುವ ಮನೋಭಾವ ಮೂಡಿದರೆ, ಸಹಿಷ್ಣುತೆಗೆ ಪೂರಕವಾದ ೧೦ ಅಂಶಗಳ ಪಾಲನೆ ಮಾಡುವ ಪ್ರವೃತ್ತಿ ರೂಢಿಸಿಕೊಂಡರೆ ನಾವು ಖಂಡಿತಾ ಸಹನಶೀಲರಾಗುತ್ತೇವೆ. ಸಮಯಕ್ಕೆ ತನ್ನದೇ ಆದ ರಹಸ್ಯಗಳಿರುತ್ತವೆ. ಅದು ತನ್ನ ರಹಸ್ಯಗಳನ್ನು ಬಿಟ್ಟುಕೊಡುವವರೆಗೆ ಕಾಯುವುದೇ ಸಹನೆ! ತಾಳ್ಮೆ ಕಹಿಯಾಗಿರುತ್ತದೆ, ಆದರೆ ಅದರ ಫಲ ಸಿಹಿಯಾಗಿರುತ್ತದೆ. ಸಹನೆ ಎಂದಿಗೂ ದುರ್ಬಲರ ಅನಿವಾರ್ಯತೆಯಲ್ಲ, ಅದು ಬಲಶಾಲಿಗಳ ಆಯುಧ. ಸಹನೆ ಸಹಬಾಳ್ವೆಗೆ ಒತ್ತು ಕೊಡುತ್ತದೆ. ಅಸಹನೆಯ ಮೂಲ ಸ್ವಾರ್ಥಪರ ಚಿಂತನೆ. ಕೇವಲ ಸ್ವಕೇಂದ್ರಿತ ಚಿಂತನೆ ಮತ್ತು ವಿಚಾರಗಳು ಇತರರನ್ನು ದ್ವೇಷಿಸುವಂತೆ, ಸಹಿಸಿಕೊಳ್ಳದಿರುವಂತೆ ಮಾಡುತ್ತವೆ. ಸಹನೆ ಗುಣವಲ್ಲ, ಅದೊಂದು ಸಾಧನೆ. ಸಹನೆ ನಮ್ಮ ಸಂಪತ್ತೆನಿಸಲು ಅಸಹನೆಯ ಮೊಳಕೆ ನಮ್ಮೊಳಗೆ ಚಿಗುರದಂತೆ ಎಚ್ಚರವಿರಬೇಕು. ಸಹನೆ ಚಾರಿತ್ರ್ಯವನ್ನು ನಿರ್ಮಿಸುತ್ತದೆ; ಚಾರಿತ್ರ್ಯವಂತರು ಚರಿತ್ರೆಯ ವಿಷಯವಾಗುತ್ತಾರೆ, ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ.
-ಕ.ವೆಂ. ನಾಗರಾಜ್.

ಬುಧವಾರ, ಆಗಸ್ಟ್ 2, 2017

ತಿರುವು ಮತ್ತು ಅರಿವು


     ಜೀವನದಲ್ಲಿ ಬರುವ ತಿರುವುಗಳು ಬಾಳಿನ ದಿಕ್ಕನ್ನೇ ಬದಲಾಯಿಸಿಬಿಡುತ್ತವೆ. ಭಾರತದ ಅತ್ಯುತ್ತಮ ಗ್ರಂಥಪಾಲಕರು, ಜಗತ್ತಿನ ಅತ್ಯುತ್ತಮ ಹತ್ತು ಗ್ರಂಥಪಾಲಕರಲ್ಲಿ ಒಬ್ಬರು, ಪ್ರಪಂಚದ ಅತ್ಯಂತ ಗುಣಾನ್ವಿತರಲ್ಲಿ ಒಬ್ಬರು,  ಅಮೆರಿಕಾದ ಅಂತರರಾಷ್ಟ್ರೀಯ ಸಂಸ್ಥೆಯಿಂದ ಸಹಸ್ರಮಾನದ ವ್ಯಕ್ತಿಯೆಂಬ ಬಿರುದು ಪಡೆದವರು, ಬಿರುದಿನೊಂದಿಗೆ ಬಂದ 30 ಕೋಟಿ ರೂ. ಹಣವನ್ನೂ ಪೂರ್ಣವಾಗಿ ಬಡವರಿಗಾಗಿ ವಿನಿಯೋಗಿಸಿದವರು, ಹುದ್ದೆಯಿಂದ ಬಂದ ಸಂಬಳ, ಪೆನ್ಶನ್, ಇತ್ಯಾದಿಗಳನ್ನು ಸಹ ಪೂರ್ಣವಾಗಿ ದೀನ ದಲಿತರಿಗಾಗಿ ಖರ್ಚು ಮಾಡಿದ ಏಕೈಕ ವ್ಯಕ್ತಿ ಪಾಲಮ್ ಕಲ್ಯಾಣಸುಂದರಮ್‌ರವರ ಉದಾಹರಣೆಯನ್ನೇ ನೋಡೋಣ. ಅವರಲ್ಲಿ ಈ ಬದಲಾವಣೆ ಬಂದದ್ದಾದರೂ ಹೇಗೆ? ಹಿಂದೆ ಚೀನಾ-ಭಾರತ ಯುದ್ಧದ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದ ಆತ ಆಗಿನ ತಮಿಳುನಾಡಿನ ಮುಖ್ಯಮಂತ್ರಿಗಳಿಗೆ ಯುದ್ಧ ಸಂತ್ರಸ್ತರ ನಿಧಿಗಾಗಿ ಕೊರಳಲ್ಲಿದ್ದ ಚಿನ್ನದ ಸರವನ್ನೇ ತೆಗೆದುಕೊಟ್ಟಿದ್ದ. ನಂತರ ಆನಂದವಿಕಟನ್ ಪತ್ರಿಕೆಯ ಸಂಪಾದಕರಲ್ಲಿ ಹೋಗಿ ಆ ವಿಷಯವನ್ನು ಪ್ರಕಟಿಸಲು ಕೋರಿದ್ದ. ಪತ್ರಿಕೆಯ ಸಂಪಾದಕರಾಗಿದ್ದ ಬಾಲಸುಬ್ರಹ್ಮಣ್ಯಮ್, "ನೀನು ಸ್ವತಃ ದುಡಿದು ದಾನ ಕೊಟ್ಟಾಗ ಬಂದು ಹೇಳು, ಪ್ರಕಟಿಸುತ್ತೇನೆ" ಎಂದು ವಾಪಸು ಕಳಿಸಿದ್ದರು. ಆ ಮಾತು ಅವನ ಬಾಳಿನ ದಿಕ್ಕನ್ನೇ ತಿರುಗಿಸಿಬಿಟ್ಟಿತು. ಮುಂದೆ ಆತ ತಮಿಳುನಾಡಿನ ಶ್ರೀವೈಕುಂಠಮ್ ಕಲಾ ಕಾಲೇಜಿನ ಗ್ರಂಥಪಾಲಕನಾಗಿ ಸುಮಾರು 35 ವರ್ಷಗಳ ಕಾಲ ಕೆಲಸ ಮಾಡಿದಾಗ ಮಾಡಿದ್ದೇನೆಂದರೆ, ದುಡಿದ ಹಣವನ್ನು ಸ್ವಂತಕ್ಕೆ ಬಳಸದೆ ಪೂರ್ಣವಾಗಿ ಬಡಬಗ್ಗರಿಗಾಗಿ ಬಳಸಿದ್ದು. ಅದರ ಪರಿಣಾಮವೇ ಆತನನ್ನು ಮೇಲೆ ಹೇಳಿದ ಪ್ರಶಸ್ತಿಗಳು ಅರಿಸಿಕೊಂಡು ಬಂದವು. ದೌರ್ಭಾಗ್ಯವೆಂದರೆ ನಮಗೆ ಸಿನೆಮಾ, ಕಿರುತೆರೆಗಳ ನಾಯಕ-ನಾಯಕಿಯರ ಬಗ್ಗೆ ಇರುವ ಆಸಕ್ತಿಯ ಸ್ವಲ್ಪ ಅಂಶವಾದರೂ ಕಲ್ಯಾಣ ಸುಂದರಮ್‌ರಂತಹ ನಿಜವಾದ ಹೀರೋಗಳ ಬಗ್ಗೆ ಇಲ್ಲದಿರುವುದು!
     ಬಾಳದಾರಿಯಲ್ಲಿ ಸಾಗುವಾಗ ಹಲವು ಕವಲೊಡೆದ ದಾರಿಗಳು ಎದುರಾಗುತ್ತದೆ. ಯಾವ ದಾರಿ ಆರಿಸಿಕೊಳ್ಳುತ್ತೇವೆ ಎಂಬುದು ಮುಂದಿನ ಜೀವನವನ್ನು ನಿರ್ದೇಶಿಸುತ್ತದೆ. ಪಡೆಯುವ ಶಿಕ್ಷಣ, ಮಾಡುವ ಕೆಲಸ, ಆರಿಸಿಕೊಳ್ಳುವ ಸಂಗಾತಿ, ಪ್ರವೃತ್ತಿ, ಹವ್ಯಾಸಗಳು, ಪರಿಸರ, ಸಹವಾಸ, ಸಂಭವಿಸುವ ಘಟನೆಗಳು, ಅನಿರೀಕ್ಷಿತ ಸಂಗತಿಗಳು, ಸೋಲುಗಳು, ಅವಮಾನಗಳು ಜೀವನದ ದಿಕ್ಕನ್ನು ಬದಲಾಯಿಸಬಲ್ಲವು. ಆರಿಸಿಕೊಳ್ಳುವ ದಾರಿ ಕುರಿತು ಜಾಗೃತರಾಗಿರಬೇಕು. ಏಕೆಂದರೆ ನಮ್ಮ ಮಕ್ಕಳೂ ಸಹ ಆ ದಾರಿಯಲ್ಲಿ ಸಾಗುತ್ತಾರೆ! ದಾರಿ ಒಳ್ಳೆಯದಿದ್ದರೆ ಮಕ್ಕಳಿಗೂ, ಸಮಾಜಕ್ಕೂ ಒಳಿತು. ಇಲ್ಲದಿದ್ದರೆ ಸಮಾಜವಿರಲಿ, ಮಕ್ಕಳೂ ನಮ್ಮನ್ನು ಶಪಿಸುತ್ತಾರೆ.
     ಮಹಾಮಹಿಮರುಗಳು ಬದುಕಿನಲ್ಲಿ ಎದುರಿಸಿದ ಸಂದರ್ಭಗಳು ಅವರನ್ನು ಆ ಸ್ಥಾನಕ್ಕೆ ಏರಿಸಿದವು ಎಂಬುದನ್ನು ಗಮನಿಸಬೇಕು. ರಾಮ, ಕೃಷ್ಣ, ಏಸುಕ್ರಿಸ್ತರ ದೇವತ್ವಕ್ಕೆ ಸಹ ಇವೇ ಕಾರಣಗಳು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ವರ್ಣಬೇಧ ನೀತಿಯಿಂದ ಎದುರಿಸಿದ ಹಿಂಸೆ, ಅನ್ಯಾಯಗಳು ಅವರನ್ನು ಗಟ್ಟಿಗೊಳಿಸಿದವು. ಆಚರಣೆಯಲ್ಲಿದ್ದ ತಾರತಮ್ಯಗಳಿಂದ ನೊಂದ ಬಸವಣ್ಣ ತಾರತಮ್ಯರಹಿತ ಸಮಾಜನಿರ್ಮಾಣಕ್ಕೆ ಮುಂದುವರೆದರು. ಹಿಂದುಳಿದವರ, ದಲಿತರ ಹರಿಕಾರರಾಗಿ ಅಂಬೇಡ್ಕರ್ ಹೊರಹೊಮ್ಮಿದ್ದೂ ಹೀಗೆಯೇ!
     ಕುಪ್ರಸಿದ್ಧ ವ್ಯಕ್ತಿಗಳು ತಯಾರಾಗುವುದಕ್ಕೂ ಕಾರಣಗಳಿರುತ್ತವೆ. ಭ್ರಷ್ಠ ಆಡಳಿತ ವ್ಯವಸ್ಥೆ, ಭ್ರಷ್ಠ ನಾಯಕರುಗಳು ಖಳನಾಯಕರುಗಳ ನಿರ್ಮಾಣಕ್ಕೆ ಸಹಕಾರಿಗಳು. ಕೆಲವು ಸಂದರ್ಭಗಳಲ್ಲಿ ಪೋಲಿಸ್ ಠಾಣೆಗಳು ಮತ್ತು ಬಂದೀಖಾನೆಗಳೂ ಪಾತಕಿಗಳ ಉಗಮಕ್ಕೆ ಕಾರಣವಾಗುತ್ತವೆ. ನನ್ನದೇ ಉದಾಹರಣೆ ಕೊಡಬಯಸುವೆ. 1975-77ರ ತುರ್ತುಪರಿಸ್ಥಿತಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತನೆಂಬ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರದಿಂದ ಅನುಭವಿಸಿದ ಅಕಾರಣ ತೊಂದರೆಗಳು, ಹಿಂಸೆಗಳು, ಜೈಲುವಾಸ, ಸುಳ್ಳು ಕ್ರಿಮಿನಲ್ ಮೊಕದ್ದಮೆಗಳು, ನನ್ನ ಮನೆಯವರು ಹಾಕಿದ್ದ ಕಣ್ಣೀರುಗಳು ನನ್ನನ್ನು ಒಬ್ಬ ಹಿಂಸಾವಾದಿಯನ್ನಾಗಿಸಲು ಸಾಕಿತ್ತು. ನಿಮಗೆ ಆಶ್ಚರ್ಯವಾಗಬಹುದು, ನಾನು ಒಬ್ಬ ಜಿಲ್ಲಾಧಿಕಾರಿ ಮತ್ತು ಒಬ್ಬ ಪೋಲಿಸ್ ಅಧಿಕಾರಿಯೂ ಸೇರಿದಂತೆ ಬಹಳ ತೊಂದರೆ ನೀಡಿದ ಹಲವಾರು ಜನರನ್ನು ಕೊಲೆ ಮಾಡಲು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿದ್ದೆ. ಅಷ್ಟು ರೋಸಿಹೋಗಿದ್ದೆ. ನನ್ನ ನೌಕರಿ ಹೋಗಿತ್ತು, ಮತ್ತೆ ಸಿಗುತ್ತದೆಂಬ ಆಸೆಯಿರಲಿಲ್ಲ. ಜೈಲಿನ ಗೋಡೆಗೊರಗಿ ಕುಳಿತಾಗ ಯಾರನ್ನು ಹೇಗೆ ಮುಗಿಸಬೇಕೆಂಬ ಯೋಜನೆ ಮನದಲ್ಲೇ ರೂಪುಗೊಳ್ಳುತ್ತಿತ್ತು. ಯಾವ ಆರೆಸ್ಸೆಸ್ಸನ್ನು ಹಿಂಸೆಗೆ ಪ್ರಚೋದಿಸುವವರೆಂದು ಪೂರ್ವಾಗ್ರಹಪೀಡಿತರು ದೂಷಿಸುತ್ತಾರೋ, ಅಂತಹ ಆರೆಸ್ಸೆಸ್ಸಿನ ಹಿರಿಯರ ನಡವಳಿಕೆಗಳು ಮತ್ತು ಮಾರ್ಗದರ್ಶನಗಳು ನನ್ನನ್ನು ಹಿಂಸಾಮಾರ್ಗದಿಂದ ವಿಮುಖ ಮಾಡಿದವೆಂಬುದು ಸತ್ಯಸಂಗತಿ. ಒಂದೊಮ್ಮೆ ಎಡವಿದ್ದಿದ್ದರೆ ಅದೇ ದಾರಿಯಲ್ಲಿ ಮುಂದುವರೆಯಬೇಕಾದ ಅನಿವಾರ್ಯತೆ ನನಗೆ ಬರುತ್ತಿತ್ತು. ನಕ್ಸಲೀಯರು, ಉಗ್ರಗಾಮಿಗಳು ತಯಾರಾಗುವುದು ಹೀಗೆಯೇ!
     ಭಾರತದ ಕಾಶ್ಮೀರ ಕಣಿವೆಯ ದುರಂತ ಸ್ಥಿತಿಗೆ ಕಾರಣ, ಸಮಸ್ಯೆಯನ್ನು ಸರಿಯಾಗಿ ಗ್ರಹಿಸದೆ ಅಪಕ್ವವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದೇ ಎಂಬುದು ನಿರ್ವಿವಾದ. ಇಂತಹ ತಿರುವುಗಳೇ ಭಾರತವನ್ನು ಹಿಂದೆ ಮೊಘಲರ ಮತ್ತು ನಂತರ ಬ್ರಿಟಿಷರ ದಾಸ್ಯಕ್ಕೆ ದೂಡಿದ್ದುದು. ಪ್ಲಾಸಿ ಕದನದಲ್ಲಿ ರಾಬರ‍್ಟ್ ಕ್ಲೈವನಿಗೆ ಸಹಾಯ ಮಾಡಿದ ಮೀರ್ ಜಾಫರನಿಂದಾಗಿ ಭಾರತ ಎರಡು ಶತಮಾನಗಳ ಕಾಲ ದಾಸ್ಯಕ್ಕೊಳಗಾಗಬೇಕಾಯಿತು. ಬ್ರಿಟಿಷರು ಮತ್ತು ಸಿಖ್ಖರ ನಡುವಣ ಯುದ್ಧದಲ್ಲಿ ಬ್ರಿಟಿಷರಿಗೆ ನೆರವಾದ ಲಾಭಸಿಂಗ್, ಪೃಥ್ವಿರಾಜನನ್ನು ದ್ವೇಷಿಸುತ್ತಿದ್ದ ರಾಜ ಜಯಸಿಂಗನ ದ್ರೋಹದಿಂದಾಗಿ ಮುಸ್ಲಿಮರ ಆಳ್ವಿಕೆಗೆ ಒಳಪಟ್ಟ ಭಾರತ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಜೊತೆಗಾರ ಕ್ರಾಂತಿಕಾರರನ್ನೇ ಹಿಡಿದುಕೊಟ್ಟ ಸಹಚರರು, ಭಾರತದ ವಿಮುಕ್ತಿಗಾಗಿ ಸೈನ್ಯವನ್ನೇ ಕಟ್ಟಿ ಹೋರಾಡುತ್ತಿದ್ದ ನೇತಾಜಿ ಸುಭಾಷಚಂದ್ರಬೋಸರ ವಿರುದ್ಧ ಮಸಲತ್ತು ಮಾಡಿದ ಕಾಂಗ್ರೆಸ್ ನಾಯಕರ ಕುತಂತ್ರಗಳು ದೇಶದ ಕಾಲೆಳೆದವು.
     ಭಯೋತ್ಪಾದಕರ ಉಪಟಳ ಇಂದು ಮೇರೆ ಮೀರಿದೆ. ನಮ್ಮ ದೇಶದಲ್ಲೇ ಇದ್ದು, ದೇಶದ ಉಪ್ಪು ತಿಂದು ಬೆಳೆಯುತ್ತಿರುವ ಅನೇಕರು ಬಹಿರಂಗವಾಗಿ ದೇಶವನ್ನು ಹೀನಾಯವಾಗಿ ಟೀಕಿಸುವುದು, ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿರುವುದು ಒಳ್ಳೆಯ ಲಕ್ಷಣವಂತೂ ಅಲ್ಲ. ಒಟ್ಟು ಸಾಮಾಜಿಕ ಹಿತವನ್ನು ಗೌಣವಾಗಿಸಿ ಜಾತಿ, ಮತ, ಪಂಥ, ಲಿಂಗ, ಎಡವಿಚಾರ, ಬಲವಿಚಾರ ಎಂಬ ಸುಳಿಗಳಲ್ಲಿ ಜನರನ್ನು ಸಿಲುಕಿಸಿ ದೇಶವನ್ನು ಪಾತಾಳಕ್ಕೆ ಜಾರಿಸುವವರ ಕೈ ಮೇಲಾಗಿದೆ. ಇಂತಹ ಸ್ಥಿತಿಯಲ್ಲಿ ಉತ್ತಮ ಶಿಕ್ಷಣ ಪದ್ಧತಿ ಮತ್ತು ಅಭಿವೃದ್ಧಿಯ ಕಡೆಗೆ ಗಮನ ಮಾತ್ರ ದೇಶವನ್ನು ಉತ್ತಮ ತಿರುವಿಗೆ ತಂದು ನಿಲ್ಲಿಸಬಲ್ಲವು. ಬದಲಾವಣೆಯನ್ನು ವಿರೋಧಿಸುವ ಅರಾಜಕತಾವಾದಿಗಳ ಹಿಡಿತವನ್ನು ಸಡಿಲಿಸಬೇಕಿದೆ. ಕೇಸರೀಕರಣ, ಹಸಿರೀಕರಣ, ಎಡವಾದ, ಬಲವಾದ, ಇತ್ಯಾದಿ ಬದಿಗಿಟ್ಟು ಪೂರ್ವಾಗ್ರಹಪೀಡಿತರಾಗದೆ ದೇಶಕ್ಕೆ ಅಗತ್ಯವಿರುವುದಾದರೂ ಏನು ಎಂಬ ಬಗ್ಗೆ ಚಿಂತಿಸಬೇಕಿದೆ.    
     ಉತ್ತಮ ಆಧರ್ಶಗಳನ್ನು ಇಟ್ಟುಕೊಳ್ಳುವ, ನೈತಿಕತೆಗೆ ಬೆಲೆ ಕೊಡುವ ಸಮಾಜ ಮಾತ್ರ ಏಳಿಗೆ ಸಾಧಿಸಬಲ್ಲದು. ಪರಸ್ಪರರ ಏಳಿಗೆಯನ್ನು ಬಯಸುವ ಜನರೇ ನಿಜವಾದ ನಾಗರಿಕರೆನಿಸಬಲ್ಲರು. ಜಾತಿ, ಮತ, ಧರ್ಮ, ಪಂಥ, ಇತ್ಯಾದಿಗಳು ವೈಯಕ್ತಿಕ ಆಚರಣೆಗಳಿಗಷ್ಟೇ ಸೀಮಿತಗೊಳ್ಳಬೇಕು. ಒಟ್ಟು ದೇಶದ, ಸಮಾಜದ ಹಿತ ಪರಿಗಣನೆಗೆ ಬಂದಾಗ ಇವಾವುದೂ ಅಡ್ಡಿಯಾಗಬಾರದು. ಹಿಂದುಳಿದವರು, ಅಶಕ್ತರು, ದುರ್ಬಲರು, ಹೀನ-ದೀನ ಸ್ಥಿತಿಯಲ್ಲಿರುವವರು ಯಾರೇ ಆಗಲಿ ಅವರನ್ನು ಜಾತಿ/ಧರ್ಮಗಳ ಕನ್ನಡಕಗಳಿಂದ ನೋಡದೇ ಮುಂದೆ ತರುವ ಪ್ರಾಮಾಣಿಕ ಪ್ರಯತ್ನ ನಡೆದರೆ ಮಾತ್ರ ದೇಶದ ಉದ್ಧಾರ ಸಾಧ್ಯ, ಇಲ್ಲದಿದ್ದರೆ ಖಂಡಿತಾ ಸಾಧ್ಯವಿಲ್ಲ. ಸತ್ಯಂ ಬೃಹದೃತಮುಗ್ರಂ ದೀಕ್ಷಾ ತಪೋ ಯಜ್ಞಃ ಪೃಥಿವೀಂ ಧಾರಯಂತಿ| ಸಾ ನೋ ಭೂತಸ್ಯ ಭವ್ಯಸ್ಯ ಪತ್ನ್ಯುರುಂ ಲೋಕಂ ಪೃಥಿವೀ ನಃ ಕೃಣೋತು|| (ಅಥರ್ವ.೧೨.೧.೧.) 'ಸತ್ಯ, ಮನೋವೈಶಾಲ್ಯ, ನ್ಯಾಯ, ಪರಾಕ್ರಮ, ವ್ರತನಿಷ್ಠೆ, ಕಷ್ಟಸಹಿಷ್ಣುತೆ, ವೇದಜ್ಞಾನ ಮತ್ತು ತ್ಯಾಗಭಾವಸಂಪನ್ನ ಸತ್ಕರ್ಮ ಇವು ಭೂಮಿಯನ್ನು ಉದ್ಧರಿಸುತ್ತವೆ. ನಮ್ಮ ಅತೀತದ ಮತ್ತು ಭವಿಷ್ಯದ ಪಾಲಿಕೆಯಾದ ಭೂಮಿಯು ನಮಗಾಗಿ ವಿಶಾಲವಾದ ರಾಷ್ಟ್ರವನ್ನು ಉಂಟುಮಾಡಲಿ' ಎಂಬುದು ಇದರ ಸಂದೇಶವಾಗಿದೆ. ಈ ಗುಣಗಳನ್ನು ಮೈಗೂಡಿಸುವ ನೈಜ ಶಿಕ್ಷಣವನ್ನು ನಮ್ಮ ಮಕ್ಕಳಾದರೂ ಪಡೆಯುವ ಸಲುವಾಗಿ ಯೋಜಿಸುವ ಹೊಣೆ ನಮ್ಮದೇ ಆಗಿದೆ.
-ಕ.ವೆಂ.ನಾಗರಾಜ್.

ಮಂಗಳವಾರ, ಆಗಸ್ಟ್ 1, 2017

ಆಕ್ಷೇಪಿಸುವುದೇಕೆ? ಒಪ್ಪಿಕೊಂಡುಬಿಡೋಣ!


     ಹಕ್ಕಿಗಳು ಆಗಸದಲ್ಲಿ ಸ್ವಚ್ಛಂದವಾಗಿ ಹಾರುವುದನ್ನು ಕಂಡಾಗ, ಜುಳು ಜುಳು ನಿನಾದ ಮಾಡುತ್ತಾ ನದಿ ಹರಿಯುವುದನ್ನು ಕಂಡಾಗ, ಸುಂದರ ಗುಡ್ಡ-ಬೆಟ್ಟಗಳು, ಹಸಿರು ತುಂಬಿದ ವನರಾಜಿಯನ್ನು ಕಂಡಾಗ, ರಾತ್ರಿಯ ಸಮಯದಲ್ಲಿ ಬೆಳಗುವ ಚಂದ್ರ, ಹೊಳೆಯುವ ನಕ್ಷತ್ರಗಳನ್ನು ಕಂಡಾಗ ನಮಗೆ ಏನು ಅನ್ನಿಸುತ್ತದೆ? ನಮಗೆ ಆ ಕುರಿತು ಆಕ್ಷೇಪಣೆ ಮಾಡಬೇಕೆನ್ನಿಸುತ್ತೆಯೇ? ಹಕ್ಕಿ ಹಾಗೆ ಹಾರಬಾರದಿತ್ತು, ಹೀಗೆ ಹಾರಬೇಕಿತ್ತು, ನದಿ ಇನ್ನೂ ರಭಸವಾಗಿ ಹರಿಯಬೇಕಿತ್ತು, ದಿಕ್ಕು ಬದಲಾಯಿಸಿ ಹರಿಯಬೇಕಿತ್ತು, ಕಾಡಿನಲ್ಲಿ ಏನೇನೋ ಕಾಡುಗಿಡಮರಗಳು ಬೆಳೆಯುವ ಬದಲು ಕೇವಲ ಮಾವು, ಸಂಪಿಗೆಯಂತಹ ಮರಗಳೇ ಬೆಳೆಯಬೇಕಿತ್ತು, ಚಂದ್ರ ಯಾವಾಗಲೂ ಪೂರ್ಣ ರೀತಿಯಲ್ಲೇ ಇರಬೇಕಿತ್ತು ಎಂದು ಮುಂತಾಗಿ ಅನ್ನುತ್ತೇವೆಯೇ? ಇಲ್ಲ, ಅವು ಹೇಗಿವೆಯೋ ಹಾಗೆ ಅವನ್ನು ಒಪ್ಪಿಕೊಳ್ಳುತ್ತೇವೆ ಅಲ್ಲವೇ? ಅಂತಹ ಯಾವುದೇ ಆಕ್ಷೇಪಣೆಗಳು ಇಲ್ಲದ್ದರಿಂದಲೇ ಅವುಗಳನ್ನು ಕಂಡು ಮನಸ್ಸು ಸಂತೋಷಗೊಳ್ಳುತ್ತದೆ. ನಮ್ಮ ಸಂತೋಷದ ಮೂಲ ಇಲ್ಲಿದೆ, ಬದಲಾಯಿಸಲಾಗದುದನ್ನು ಬದಲಾಯಿಸಲು ಹೆಣಗಾಡದೆ ಇರುವುದನ್ನು ಇರುವಂತೆಯೇ ಒಪ್ಪಿಕೊಳ್ಳುವುದರಲ್ಲಿದೆ, ಅದರೊಂದಿಗೆ ಹೊಂದಿಕೊಳ್ಳುವುದರಲ್ಲಿದೆ.
     ಭಿನ್ನತೆ ಜಗದ ನಿಯಮವಾಗಿದೆ. ಭಿನ್ನತೆಯ ಕಾರಣದಿಂದಲೇ ಜಗತ್ತು ಅಸ್ತಿತ್ವದಲ್ಲಿದೆ. ಭಿನ್ನತೆಯಿರುವುದರಿಂದಲೇ ಜಗತ್ತಿನಲ್ಲಿ ಸ್ವಾರಸ್ಯವಿದೆ, ನವರಸಗಳಿಗೆ ಆಸ್ಪದವಿದೆ. ಎಲ್ಲವೂ ಒಂದೇ ರೀತಿಯಲ್ಲಿ ಇದ್ದರೆ ಅಲ್ಲಿ ಸುಖವೂ ಇರುವದಿಲ್ಲ, ದುಃಖವೂ ಇರುವುದಿಲ್ಲ, ಜಗತ್ತಿನ ಅಗತ್ಯವೂ ಇರುವುದಿಲ್ಲ. ನಿಧಾನವಾಗಿ ಯೋಚಿಸಿದರೆ ಇದರ ಸತ್ಯ ಅರಿವಾಗುತ್ತದೆ ಮತ್ತು ಇದನ್ನು ಅಕ್ಷೇಪಿಸದೆ ಒಪ್ಪಿಕೊಳ್ಳಬೇಕಾಗುತ್ತದೆ. ಎಲ್ಲರೂ ಒಂದೇ ರೀತಿಯಲ್ಲಿ ಬುದ್ಧಿವಂತರು ಅಥವ ದಡ್ಡರು, ಬಲಶಾಲಿಗಳು ಅಥವ ಕೃಷಕಾಯರು, ಆರೋಗ್ಯವಂತರು ಅಥವ ರೋಗಿಗಳು, ಶ್ರೀಮಂತರು ಅಥವ ಬಡವರು,  ಸುಂದರರು ಅಥವ ಕುರೂಪಿಗಳು, ಕೆಟ್ಟವರು ಅಥವ ಒಳ್ಳೆಯವರು ಆಗಿರಲು ಸಾಧ್ಯವೇ? ಇದೇ ಪ್ರಪಂಚ! ಇಂತಹ ಪ್ರಪಂಚದಲ್ಲಿ ಹೇಗಿರಬೇಕು ಎಂದು ವಿವೇಚಿಸಿ ನಡೆಯುವುದು ಸೂಕ್ತ.
     ಆಕ್ಷೇಪಣೆ ಮಾಡುವುದಾದರೂ ಏಕೆ? ಎಲ್ಲರೂ ತಮ್ಮಂತೆಯೇ ಇರಬೇಕು, ತಮ್ಮ ವಿಚಾರವನ್ನೇ ಒಪ್ಪಬೇಕು, ತಮಗೆ ಅನುಕೂಲವಾಗಿರಬೇಕು ಎಂಬ ಅಂತರ್ಗತ ಅನಿಸಿಕೆಯೇ ಆಕ್ಷೇಪಿಸಲು ಮೂಲಕಾರಣ. ಇನ್ನೊಬ್ಬರ ವಿಚಾರಗಳನ್ನು ಒಪ್ಪದ ಮನೋಭಾವ ಇದಕ್ಕೆ ಪುಷ್ಟಿ ಕೊಡುತ್ತದೆ. ಈ ವಿಚಾರದಲ್ಲಿ ತಮ್ಮ ಮತ್ತು ಇತರರ ನಡುವೆ ಒಮ್ಮತ ಮೂಡದಿದ್ದಲ್ಲಿ ಅಲ್ಲಿ ಅಶಾಂತಿ ಮೂಡುತ್ತದೆ. ಪರಿಣಾಮವಾಗಿ ಸಂತೋಷಕ್ಕೆ ಅಲ್ಲಿ ಸ್ಥಾನ ಇರುವುದಿಲ್ಲ. ಇಲ್ಲಿ ಒಂದು ಪ್ರಯೋಗ ಮಾಡಿ ನೋಡಿ. ನಮ್ಮ ನಡವಳಿಕೆಗಳನ್ನು ಒಪ್ಪದವರು ನಮ್ಮ ಕುರಿತು ಟೀಕೆ, ಟಿಪ್ಪಣಿಗಳನ್ನು ಮಾಡಿದರೆ ವಿಚಲಿತಗೊಳ್ಳದೆ ಸ್ವೀಕರಿಸೋಣ. ನಾವೇನೂ ಬದಲಾಗಬೇಕಿಲ್ಲ, ನಮ್ಮ ಅಂತರಂಗ ಹೇಳಿದಂತೆ ಕೇಳಿ ಮುಂದುವರೆದರಾಯಿತು. ಇದರಿಂದ ನಮಗೂ ಅವರ ಕುರಿತು ವಿಮರ್ಶಿಸಲು ಸ್ವಾತಂತ್ರ್ಯ ಸಿಗುತ್ತದೆ. ಅವರೂ ಅದನ್ನು ಆಕ್ಷೇಪಿಸುವುದಿಲ್ಲ ಮತ್ತು ಅವರ ನಡವಳಿಕೆಗಳು ನಮ್ಮ ಮೇಲೆ ಏನೂ ಪ್ರಭಾವ ಬೀರಲಾರವು. ನಮ್ಮ ಹಲವು ಹಳೆಯ ಸಮಸ್ಯೆಗಳನ್ನು ಅವಲೋಕಿಸಿದರೆ ಗೋಚರವಾಗುವ ಸಂಗತಿಗಳು ಆಶ್ಚರ್ಯಕರವಾಗಿರುತ್ತವೆ. ಅಂತಹ ಕೆಟ್ಟ ಘಟನೆಗಳ ನೆನಪುಗಳು ಸಮಸ್ಯೆಗಳ ಬಗ್ಗೆ ನಾವೋ, ಇತರರೋ ನೀಡಿದ ಪ್ರತಿಕ್ರಿಯೆಗಳೇ ಆಗಿರುತ್ತವೆ! ಅಂತಹ ಪ್ರತಿಕ್ರಿಯೆಗಳನ್ನು ನೀಡಿರದಿದ್ದರೆ? ಕಹಿ ನೆನಪುಗಳು ಸಂಗ್ರಹಗೊಳ್ಳುತ್ತಲೇ ಇರುತ್ತಿರಲಿಲ್ಲ.
     ಒಂದೇ ಕುಟುಂಬದ ಸದಸ್ಯರುಗಳೂ, ಒಂದೇ ಸಂಘ-ಸಂಸ್ಥೆಯ ಸದಸ್ಯರುಗಳೂ, ಆತ್ಮೀಯರೆಂದು ಭಾವಿಸುವ ಸ್ನೇಹಿತರ ವಲಯದಲ್ಲೂ ಪರಸ್ಪರ ಹೊಂದಾಣಿಕೆ ಆಗದ ಅನೇಕ ಸಂಗತಿಗಳು ಇರುತ್ತವೆ. ಆದರೂ ಇವರುಗಳು ಹೊಂದಿಕೊಂಡು ಹೋಗುವುದಕ್ಕೆ ಹೆಚ್ಚಿನ ಸಂಗತಿಗಳು ಪರಸ್ಪರರಿಗೆ ಒಪ್ಪಿಗೆಯಾಗುವುದೇ ಕಾರಣ. ನಾವು ಇತರರೊಂದಿಗೆ ಹೊಂದಿಕೊಂಡುಹೋಗುತ್ತೇವೆಂದರೆ ಅವರ ನ್ಯೂನತೆಗಳನ್ನು ನಾವು ಸಹಿಸಿಕೊಳ್ಳುತ್ತೇವೆ ಎಂದು ಅರ್ಥ. ಹಾಗೆಯೇ, ಇತರರು ನಮ್ಮೊಂದಿಗೆ ವಿಶ್ವಾಸವಾಗಿರುತ್ತಾರೆಂದರೆ ಅವರು ನಮ್ಮ ತಪ್ಪುಗಳನ್ನು ಸಹಿಸಿಕೊಳ್ಳುತ್ತಾರೆ ಎಂದು ಅರ್ಥ.
     ಎಲ್ಲರೂ ಅವರಿದ್ದ ಹಾಗೆಯೇ ಇರಲಿ ಅಂದರೆ ಜಗತ್ತು ಕಳ್ಳಕಾಕರು, ಲೂಟಿಕೋರರು, ದುಷ್ಟರ ಆವಾಸವಾಗುತ್ತದೆ. ಜಗತ್ತಿನ ಒಳ್ಳೆಯವರ ಗತಿ ಏನು, ಧರ್ಮ, ಸತ್ಯ, ನ್ಯಾಯ, ಶಾಂತಿ, ಇತ್ಯಾದಿಗಳ ಗತಿ ಏನು ಅಂತೀರಾ? ದುಷ್ಟ ಶಿಕ್ಷಣ, ಶಿಷ್ಟ ರಕ್ಷಣಕಾರ್ಯಕ್ಕಾಗಿ ಸಜ್ಜನರು ಪ್ರಯತ್ನಿಸುತ್ತಲೇ ಇರಬೇಕು. ಇದು ನಿರಂತರವಾಗಿ ನಡೆಯಬೇಕಾದ ಕಾರ್ಯ. ದಶಕಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಿತ್ರರೊಬ್ಬರು ಒಮ್ಮೊಮ್ಮೆ ಹತಾಶೆಯಿಂದ ಹೇಳುತ್ತಿರುತ್ತಾರೆ: ಇಷ್ಟು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇವೆ. ಏನು ಪ್ರಯೋಜನ ಆಗಿದೆ? ನಮ್ಮ ಜನರನ್ನು ತಿದ್ದುವುದು ಕಷ್ಟ. ಬದಲಾಗಲಿಲ್ಲವೆಂದು ಧೃತಿಗೆಡಬೇಕಿಲ್ಲ. ನಿರಂತರ ಪ್ರಯತ್ನದ ಫಲ ನಿರೀಕ್ಷಿತ ಎಡೆಯಿಂದಲ್ಲವಾದರೂ ಬೇರೆ ಒಂದಲ್ಲಾ ಒಂದು ರೀತಿಯಲ್ಲಿ ಬಂದೇಬರುತ್ತದೆ. ಪಂಚತಂತ್ರದಲ್ಲಿ ಒಂದು ನೀತಿವಾಕ್ಯವಿದೆ: ಸರ್ಪಾನಾಂ ಚ ಕಲಾನಾಂ ಚ ಸರ್ವೇಷಾಂ ದುಷ್ಟಚೇತಸಾಂ | ಅಭಿಪ್ರಾಯಾಃ ನ ಸಿಧ್ಯಂತಿ ತೇನ ವರ್ತತೇ ಇದಂ ಜಗತ್ || -ಸರ್ಪಗಳು, ಕುಟಿಲರು ಯಾವಾಗಲೂ ದುಷ್ಟಕಾರ್ಯಗಳಲ್ಲೇ ತೊಡಗಿರುತ್ತಾರೆ. ಆದರೆ ಅವರ ಇಚ್ಛೆಗಳು ಈಡೇರಲಾರವು, ಜಗತ್ತು ಹೀಗೆಯೇ ನಡೆಯುತ್ತಿರುತ್ತದೆ!- ಎಂಬುದು ಇದರ ಅರ್ಥ. ರಾಮ-ರಾವಣರುಗಳು, ಕೃಷ್ಣ-ಕಂಸರುಗಳು ಸದಾ ಕಾಲ ಇದ್ದೇ ಇರುತ್ತಾರೆ, ಈಗಲೂ ಇದ್ದಾರೆ. ಅನೇಕ ಸಾಧು-ಸಂತರುಗಳು, ದಾರ್ಶನಿಕರು ಕಾಲಕಾಲಕ್ಕೆ ಸಮಾಜ ಒಳ್ಳೆಯ ರೀತಿಯಲ್ಲಿ ಸಾಗಲು ಮಾರ್ಗದರ್ಶನ ಮಾಡುತ್ತಲೇ ಬಂದಿದ್ದಾರೆ. ಇಂದಿಗೂ ಸಹ ಸಮಾಜ, ದೇಶ, ಧರ್ಮಗಳಿಗಾಗಿ ಸ್ವಂತದ ಸುಖ-ಸಂತೋಷಗಳನ್ನು ಬದಿಗೊತ್ತಿ ಪೂರ್ಣ ಜೀವನವನ್ನು ಮುಡುಪಿಟ್ಟ ಸಹಸ್ರ ಸಹಸ್ರ ಜನರಿದ್ದಾರೆ. ಇಂತಹವರ ಪ್ರಯತ್ನಗಳೇ ಸಮಾಜವನ್ನು ಇನ್ನೂ ಬದುಕಿಸಿರುವುದು! ಇಂತಹ ಸಾಧಕರುಗಳು ಸಮಾಜ ಬದಲಾಗಲಿಲ್ಲವೆಂದು ಹತಾಶೆಗೊಳಗಾಗುವುದಿಲ್ಲ, ಆಕ್ಷೇಪಿಸುವುದೂ ಇಲ್ಲ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಲೇ ಹೋಗುತ್ತಾರೆ. ಇವರ ಕಾರ್ಯದ ಫಲ ಸಾಮಾನ್ಯರಿಗೆ ಸಿಕ್ಕೇ ಸಿಗುತ್ತದೆ.
     ಮತ್ತೆ ಮೂಲ ವಿಷಯಕ್ಕೆ ಬರುತ್ತೇನೆ. ಆಕ್ಷೇಪಣೆ ಮಾಡುವುದರಿಂದ ಪ್ರಯೋಜನ ಕಡಿಮೆ. ಜಗತ್ತು ಹೇಗಿದೆಯೋ, ಜನರು ಹೇಗಿದ್ದಾರೋ ಹಾಗೆ ಅವರನ್ನು ಪ್ರಥಮತಃ ಒಪ್ಪಿಕೊಳ್ಳಬೇಕು. ನಂತರದಲ್ಲಿ ಸಮಾಜ, ದೇಶದ ಹಿತದೃಷ್ಟಿಯಿಂದ ಆಗಬೇಕಾದ ಬದಲಾವಣೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಸಾಗಬೇಕು. ಸಮಾನ ಮನಸ್ಕರನ್ನು ಒಟ್ಟುಗೂಡಿಸುವ ಕೆಲಸ ಸಾಗಬೇಕು. ಆಗ ಸಜ್ಜನಶಕ್ತಿ ಜಾಗೃತಗೊಳ್ಳುತ್ತದೆ. ದುಷ್ಟಶಕ್ತಿಗಳು ತಾವಾಗಿ ಮೂಲೆ ಸೇರುತ್ತವೆ. ಆಕ್ಷೇಪಣೆ ಮಾಡಿದರೆ ತಾನೇ ಅಶಾಂತಿ ಉಂಟಾಗುವುದು! ಮುಳ್ಳು ಚುಚ್ಚುತ್ತದೆಯೆಂದು ನೆಲಕ್ಕೆಲ್ಲಾ ಚರ್ಮ ಹಾಸುವ ಬದಲು ನಮ್ಮ ಕಾಲುಗಳಿಗೆ ನಾವು ಪಾದರಕ್ಷೆ ಧರಿಸಿದರೆ ಸಾಕು. ನಾವು ಬದಲಾದರೆ ಜಗತ್ತೂ ಬದಲಾಗುತ್ತದೆ.
-ಕ.ವೆಂ.ನಾಗರಾಜ್.

ಸಂಭ್ರಮದ ಕಾರ್ತಿಕ ದೀಪೋತ್ಸವ, ಭಾರತ ಮಾತಾ ಪೂಜನ



     ಹಾಸನ ನಗರದ ತಣ್ಣೀರು ಹಳ್ಳ ಬಡಾವಣೆಯಲ್ಲಿ ಅಲ್ಲಿನ ಶಿವಾಜಿ ಶಾಖೆಯ ಸ್ವಯಂಸೇವಕರು ನಿನ್ನೆ  ಕಡೆಯ ಕಾರ್ತಿಕ ಸೋಮವಾರದ ನಿಮಿತ್ತ ದೀಪೋತ್ಸವ ಮತ್ತು ಭಾರತ ಮಾತಾ ಪೂಜನ ಕಾರ್ಯಕ್ರಮ ಏರ್ಪಡಿಸಿ ನನ್ನನ್ನು ಮಾತನಾಡಲು ಆಹ್ವಾನಿಸಿದ್ದರು. ಅಲ್ಲಿ ಸೇರಿದ್ದ ಬಡಾವಣೆಯ ಮಕ್ಕಳು, ಮಾತೆಯರ ಸಂಭ್ರಮ ಕಂಡು ಸಂತೋಷವಾಯಿತು. ಅಖಂಡ ಭಾರತದ ನಕ್ಷೆಯನ್ನು, ಓಂಕಾರವನ್ನು ರಂಗೋಲಿಯಲ್ಲಿ ಬಿಡಿಸಿ ಸುತ್ತಲೂ ಹಣತೆ ಹಚ್ಚುವಾಗಿನ, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವಾಗಿನ ಅವರ ಉತ್ಸಾಹ ಮನ ಮುಟ್ಟಿತು. ದೀಪ ಹಚ್ಚುವ ಕಾರ್ಯದ ಹಿರಿಮೆ, ಭಾರತವನ್ನು ವಿಶ್ವಗುರುವಾಗಿಸುವಲ್ಲಿ ಅಡ್ಡಿಯಾಗಿರುವ ನಮ್ಮವರನ್ನೇ ಗುರುತಿಸಿ ಅಡ್ಡಿ ನಿವಾರಿಸುವ ಅಗತ್ಯ, ತಪ್ಪು ಇತಿಹಾಸವನ್ನು ಮಕ್ಕಳಿಗೆ ಬೋಧಿಸುತ್ತಿರುವುದರಿಂದ ಆಗುತ್ತಿರುವ ಅನಾಹುತಗಳನ್ನು ವಿವರಿಸಿ, ಸ್ವಾಭಿಮಾನದಿಂದ ನಮ್ಮತನವನ್ನು ಉಳಿಸಿ, ಬೆಳೆಸಬೇಕಾದ ಕಾರ್ಯಕ್ಕೆ ಗಮನ ಕೊಡಬೇಕೆಂದು ತಿಳಿಸಲಾಯಿತು. ಮಹಾಭಾರತದ ಶಕುನಿ, ಜಯಚಂದ್ರ, ಮೀರ್ ಸಾದಿಕ್, ಮಣಿಶಂಕರ ಅಯ್ಯರ್ ಮುಂತಾದವರ ನಡೆಗಳನ್ನು ಉದಾಹರಿಸಿ, ಒಳ್ಳೆಯ ಕಾರ್ಯಕ್ಕೆ ಅಡಿಪಾಯ ಹಾಕುತ್ತಿರುವ ಇಂದಿನ ಪ್ರಧಾನಿಯವರ ಒಳ್ಳೆಯ ಕೆಲಸಗಳಿಗೆ ಎಲ್ಲರೂ ಸಹಕರಿಸುವುದು ಭಾರತವನ್ನು ಮತ್ತೊಮ್ಮೆ ಪ್ರಪಂಚದ ಅಗ್ರಗಣ್ಯರಾಷ್ಟ್ರವಾಗಿಸಲು ಸಹಕಾರಿಯೆಂದು ಗಮನಕ್ಕೆ ತರಲಾಯಿತು. ಸಿಹಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. 
-ಕ.ವೆಂ.ನಾಗರಾಜ್.






-