ರಾಯರ ಊರುಗೋಲು
ರಾಯರಿಗೆ ಪ್ರತಿದಿನ ಮುಂಜಾನೆ ಬೇಗ ಎದ್ದು ವಾಕಿಂಗ್ ಹೋಗುವ ಅಭ್ಯಾಸವಿತ್ತು. ವಯಸ್ಸಾಗಿದ್ದರಿಂದ ಹೆಚ್ಚು ದೂರ ಹೋಗುತ್ತಿರಲಿಲ್ಲ. ಮನೆಯ ಹತ್ತಿರದಲ್ಲೇ ಸ್ವಲ್ಪ ದೂರ ಹೋಗಿ ಬರುತ್ತಿದ್ದರು. ಒಮ್ಮೆ ಹೀಗೆ ಹೋಗುವಾಗ ರಸ್ತೆಯಲ್ಲಿ ಎಡವಿ ಬಿದ್ದರು. ಸಣ್ಣ ಪುಟ್ಟ ತರಚಿದ ಗಾಯಗಳಾದವು. ಅವರು ಹಿಡಿದಿದ್ದ ಊರುಗೋಲಿನ ಹಿಡಿಕೆ ಮುರಿದುಹೋಯಿತು.ಬಿದ್ದ ಪೆಟ್ಟಿಗಿಂತ ಮುರಿದ ಊರುಗೋಲಿನ ಚಿಂತೆ ಅವರಿಗೆ ಜಾಸ್ತಿಯಾಯಿತು. ಕೆಲವು ವರ್ಷಗಳ ಹಿಂದೆ ನಡೆದಾಡುವಾಗ ತಡವರಿಸುತ್ತಿದ್ದುದನ್ನು ಕಂಡ ಅವರ ಮಗ ಕೊಡಿಸಿದ್ದ ಊರುಗೋಲು ಅವರಿಗೆ ಮೆಚ್ಚುಗೆಯಾಗಿತ್ತು. ಎಲ್ಲಿ ಹೋಗುವಾಗಲೂ ಅದನ್ನು ಬಿಡುತ್ತಿರಲಿಲ್ಲ. ಅದರ ಮೇಲೆ ಮೋಹವಿತ್ತಲ್ಲದೆ ಅವಲಂಬಿತರೂ ಆಗಿದ್ದರು. ಅದನ್ನು ರಿಪೇರಿ ಮಾಡಿಸಲು ಬಡಗಿಯನ್ನು ಹುಡುಕಿಕೊಂಡು ಹೋದ ಅವರಿಗೆ ಸಮೀಪದ ಹೊಸಮನೆಯಲ್ಲಿ ಮರಗೆಲಸ ಮಾಡುತ್ತಿದ್ದ ಬಡಗಿ ಕಂಡು ಅವನನ್ನು ವಿಚಾರಿಸಿದರು.
ರಾಯರು: ಈ ಕೋಲನ್ನು ರಿಪೇರಿ ಮಾಡಿಕೊಡುತ್ತೀಯೇನಪ್ಪಾ?
ಬಡಗಿ: ಆಗಲಿ. ನಾಳೆ ಮಾಡಿಕೊಡುತ್ತೇನೆ.
ರಾಯರು: ಈಗಲೇ ಮಾಡಿಕೊಟ್ಟರೆ ಒಳ್ಳೆಯದು. ಇದೇ ನನ್ನ ಕಾಲು. ಎಷ್ಟು ಕೊಡಬೇಕು?
ಬಡಗಿ: ಇಪ್ಪತ್ತೈದು ರೂಪಾಯಿ ಆಗುತ್ತೆ. ರಿವೆಟ್ ಹಾಕಬೇಕು. ಗಮ್ ಹಾಕಿ ಸರಿಯಾಗಿ ಕೂಡಿಸಬೇಕು. ಬಹಳ ಕೆಲಸವಿದೆ.
ರಾಯರು: ಇಪ್ಪತ್ತು ರೂಪಾಯಿ ಕೊಡುತ್ತೇನೆ. ಸರಿಯಾಗಿ ಮಾಡಿಕೊಡಪ್ಪಾ.
ಇವರ ಸಂಭಾಷಣೆಯನ್ನು ಗಮನಿಸುತ್ತಿದ್ದ ಮನೆಯ ಮಾಲಿಕರು ಬಡಗಿಗೆ ಊರುಗೋಲು ರಿಪೇರಿ ಮೊದಲು ಮಾಡಿಕೊಡಲು ತಿಳಿಸಿ ಕುಳಿತುಕೊಳ್ಳಲು ಕುರ್ಚಿ ಕೊಟ್ಟು ನೀರು ಬೇಕೇ ಎಂದು ಕೇಳಿದರು. ಮನೆಯಾಕೆಗೆ ಹೇಳಿ ಕಾಫಿ ಮಾಡಿಸಿಕೊಟ್ಟರು. ಮೈ ಕೈ ನೋವಿದ್ದ ರಾಯರಿಗೆ ಕಾಫಿ ಹಿತವಾಗಿತ್ತು. ಬಡಗಿಗೂ ಏನನ್ನಿಸಿತೋ ಬಹಳ ಮುತುವರ್ಜಿಯಿಂದ ರಿಪೇರಿ ಮಾಡಿಕೊಟ್ಟ. ರಾಯರು ಹಣ ಕೊಡಲು ಹೋದರೆ ಆತ ಬೇಡವೆಂದ. ಆಗ ನಡೆದ ಸಂಭಾಷಣೆ:
ರಾಯರು: ಏಕಪ್ಪಾ? ಸಾಲಲಿಲ್ಲವೇ? ಇಪ್ಪತ್ತೈದು ರೂಪಾಯಿಯನ್ನೇ ತೊಗೋ.
ಬಡಗಿ: ಬೇಡ ಸಾರ್. ನನಗೂ ವಯಸ್ಸಾದ ತಂದೆಯಿದ್ದಾರೆ. ನಿಮ್ಮಿಂದ ಈ ಕೆಲಸಕ್ಕೆ ದುಡ್ಡು ಪಡೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ. ನನ್ನ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಹರಸಿ ಸಾರ್. ಅಷ್ಟು ಸಾಕು.
ರಾಯರು: ಹಣ ಕೊಡದಿರಲು ನನಗೂ ಸರಿಯಾಗುವುದಿಲ್ಲ. ಹೋಗಲಿ, ಹತ್ತು ರೂಪಾಯಿಯಾದರೂ ತೆಗೆದುಕೋ.
ಹತ್ತು ರೂಪಾಯಿಯನ್ನು ಕೊಟ್ಟು ಬಡಗಿಗೆ, ಮನೆಮಾಲಿಕರಿಗೆ ಧನ್ಯವಾದ ಹೇಳಿ ಕೋಲನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಾ ರಾಯರು ಮನೆಗೆ ವಾಪಸಾದರು.
- ಕ.ವೆಂ. ನಾಗರಾಜ್.
(ಲೇಖಕನ ಸ್ವಗತ: ಆ ಬಡಗಿಯ, ಹೊಸಮನೆ ಮಾಲಿಕನಲ್ಲಿನ ಹಿರಿಯರನ್ನು, ವಯಸ್ಸಾದವರನ್ನು ಗೌರವಿಸುವ ಮನೋಭಾವ ಎಲ್ಲರಿಗೂ ಬಂದರೆ ಎಷ್ಟು ಚೆನ್ನ!)