ನನ್ನದು?
ಇರುವುದು ನಿನದಲ್ಲ ಬರುವುದು ನಿನಗಲ್ಲ
ತರಲಾರದ ನೀನು ಹೊರುವೆಯೇನನ್ನು?|
ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ
ಫಲಧಾರೆ ಹರಿಯಗೊಡು ಮರುಳು ಮೂಢ||
ದೀಪಾವಳಿ
ಒಡಲಗುಡಿಯ ರಜ-ತಮಗಳ ಗುಡಿಸಿ
ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ|
ಮನದ ಕತ್ತಲ ಕಳೆದು ತಿಳಿವಿನ ಬೆಳಕ
ಪಸರಿಪುದೆ ದೀಪಾವಳಿ ತಿಳಿ ಮೂಢ||
ಸಮಪಾಲು
ಅಹುದಿಹುದು ಅಡೆತಡೆಯು ಬಾಳಹಾದಿಯಲಿ
ಸಾಗಬೇಕರಿತು ಪತಿ ಪತ್ನಿ ಜೊತೆಜೊತೆಯಲಿ|
ಸಮಪಾಲು ಪಡೆದಿರಲು ನೋವು ನಲಿವಿನಲಿ
ಬಾಳು ಬಂಗಾರ ಬದುಕು ಸಿಂಗಾರ ಮೂಢ||
ನೀತಿವಂತ
ನೀತಿವಂತರ ನಡೆಯು ನ್ಯಾಯಕಾಸರೆಯು
ನುಡಿದಂತೆ ನಡೆಯುವರು ಸವಿಯ ನೀಡುವರು|
ಪ್ರಾಣವನೆ ಪಣಕಿಟ್ಟು ಮಾತನುಳಿಸುವರು
ಜಗದ ಹಿತ ಕಾಯ್ವ ಧೀರರವರು ಮೂಢ||
************
-ಕ.ವೆಂ.ನಾಗರಾಜ್
ನಾಗರಾಜ್,
ಪ್ರತ್ಯುತ್ತರಅಳಿಸಿಇದೀಗ ವೇದಸುಧೆಯಿಂದಲೇ ನಿಮ್ ಬ್ಲಾಗ್ ಪ್ರವಶಿಸಲು ಸಾಧ್ಯವಾಗಿ ಬಂದಿರುವೆ. ಮೂಢ ಉವಾಚ ಚೆನ್ನಾಗಿದೆ. ಕಗ್ಗದ ರೀತಿಯಲ್ಲಿದೆ.ಇನ್ನೂ ಬರೆಯಿರಿ. ಶುಭವಾಗಲಿ. ವೇದಸುಧೆಯಲ್ಲಿ ಧ್ವನಿ ಪೇರಿಸುವ ಪ್ರಯೋಗ ಮುಂದವರೆದೇ ಇದೆ.ಇಂದು ಇನ್ನೊಂದು ಪ್ರಯೋಗ ಮಾಡಿರುವೆ. ನೋಡಿ. ನಿಮ್ಮ ಅನಿಸಿಕೆ ತಿಳಿಸಿ.
ಶ್ರೀಧರ್, ಧನ್ಯವಾದ.ವೇದಸುಧೆಯಲ್ಲಿ ನನ್ನ ಅನಿಸಿಕೆ ತಿಳಿಸಿದ್ದೇನೆ.
ಪ್ರತ್ಯುತ್ತರಅಳಿಸಿ