ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಮೇ 12, 2010

ಮೂಢ ಉವಾಚ - 7


               ಸೂತ್ರ
ಸರಸರನೆ ಮೇಲೇರಿ ಗಿರಕಿ ತಿರುಗಿ
ಪರಪರನೆ ಹರಿದು ದಿಕ್ಕೆಟ್ಟು ತಲೆಸುತ್ತಿ|
ಬೀಳುವುದು ಗಾಳಿಪಟ ಬಂಧ ತಪ್ಪಿದರೆ
ಸೂತ್ರ ಹರಿದರೆ ಎಚ್ಚರವಿರು ಮೂಢ||

               ನಾನತ್ವ
ತಾನೇ ಸರಿ ತನ್ನದೇ ಸರಿ ಕಾಣಿರಿ
ಎಂಬ ಸರಿಗರ ಸಿರಿಗರ ಬಡಿದ ಪರಿ|
ಏನು ಪೇಳ್ವುದೋ ತಿಪ್ಪೆಯ ಒಡೆಯ
ತಾನೆಂಬ ಶುನಕದ ಹಿರಿಮೆಗೆ ಮೂಢ||

               ಹೆದರಿಕೆ
ಅವರಿಲ್ಲ ಇವರಿಲ್ಲ ನಿನ್ನವರು ಯಾರಿಲ್ಲ
ಹಿತವಿಲ್ಲದ ಕಹಿಪ್ರವರ ಜಗಕೆ ಬೇಕಿಲ್ಲ|
ಬಿದ್ದೆದ್ದು ನಡೆಯದಿರೆ ಒಗೆಯುವರು ಕಲ್ಲ
ಹೆದರಿಕೆ ಸಲ್ಲ ದೇವನಿಹನಲ್ಲ ಮೂಢ||

               ತೃಪ್ತಿ
ಉಣ್ಣಲುಡಲಿರಬೇಕು ನೆರಳಿರಬೇಕು
ಮನವರಿತು ಅನುಸರಿಪ ಮಡದಿ ಬೇಕು|
ಬೆಳಕಾಗಿ ಬಾಳುವ ಮಕ್ಕಳಿರಬೇಕು
ಇರುವುದೇ ಸಾಕೆಂಬ ಮನ ಬೇಕು ಮೂಢ||
               
                             -ಕ.ವೆಂ.ನಾಗರಾಜ್.

3 ಕಾಮೆಂಟ್‌ಗಳು:

  1. Ksraghavendranavada
    25MAY2010 5:42
    ಮೂಢ ಉವಾಚ ಚೆನ್ನಾಗಿದೆ ಕವಿನಾಗರಾಜರೇ.
    ಬೆಳ್ಳಾಲ ಗೋಪೀನಾಥ ರಾವ್
    25MAY2010 7:49
    ಎಷ್ಟು ಚೆನ್ನಾಗಿ ಹೇಳಿದಿರಿ ಸ್ವಾಮೀ
    ತುಂಬಾನೇ ಚೆನ್ನಾಗಿದೆ.
    ನೀವು ತಿಳಿಸಿದಂತೆಯೇ ಪ್ರತಿ ಗಾಳಿಪಟಕ್ಕೂ ಅದರದ್ದೇ ಆಕಾಶ.
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  2. [ಶುನಕದ ಹಿರಿಮೆ]

    ಬಲು ಕಠಿಣ ಪದವೆಂದೇ ನನ್ನೆಣಿಕೆ.

    ಪ್ರತ್ಯುತ್ತರಅಳಿಸಿ