ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಆಗಸ್ಟ್ 12, 2010

ಮೂಢ ಉವಾಚ -16

ಕೋಪವೆಂಬುದು ಕೇಳು ವಂಶದಾ ಬಳುವಳಿಯು
ಸಜ್ಜನರ ಸಹವಾಸ ಪರಿಹಾರದಮೃತವು|
ಕೋಪದ ತಾಪದಿಂ ಪಡದಿರಲು ಪರಿತಾಪ
ಶಾಂತಚಿತ್ತದಲಿ ಅಡಿಯನಿಡು ಮೂಢ||


ದೇಹದೌರ್ಬಲ್ಯವದು ಸಿಡಿಮಿಡಿಗೆ ಕಾರಣವು
ಅಸಹಾಯಕತೆ ತಾ ಕೋಪಾಗ್ನಿಗದು ಘೃತವು|
ದೇಹಧಾರ್ಢ್ಯವನು ಕಾಪಿಟ್ಟು ಧೃಢಚಿತ್ತದಲಿ
ಮುನ್ನಡೆದು ವ್ಯಗ್ರತೆಯ ನಿಗ್ರಹಿಸು ಮೂಢ||


ಕೀಳರಿಮೆಯದು ತಾ ಸಿಟ್ಟಿಗದು ಹೇತುವು
ಅಭಿಮಾನಕಾಘಾತ ಕಿಚ್ಚಿಗದು ಕಾರಣವು|
ಬಲಶಾಲಿಗಳೊಡನಾಡಿ ಧೀಶಕ್ತಿ ನೀಗಳಿಸು
ಛಲದಿಂದ ಬಲಗಳಿಸಿ ಮೇಲೇರು ಮೂಢ||


ರಾಷ್ಟ್ರ ರಾಷ್ಟ್ರದ ನಡುವೆ ರಾಜ್ಯ ರಾಜ್ಯದ ನಡುವೆ
ಗ್ರಾಮ ಗ್ರಾಮದ ನಡುವೆ ಜಾತಿ ಜಾತಿಯ ನಡುವೆ|
ಮನುಜ ಮನುಜರನಡುವೆ ಧಗಧಗಿಸುವ ದ್ವೇಷದ
ಮೂಲ ಕ್ರೋಧಾಗ್ನಿಯಲ್ಲದೆ ಮತ್ತೇನು ಮೂಢ||
***************
-ಕವಿನಾಗರಾಜ್.

2 ಕಾಮೆಂಟ್‌ಗಳು:

  1. ಮೂಢ ಉವಾಚ.. ವಿಚಾರವಾದಿಯ ಉವಾಚದ೦ತೆ ಇದೆಯಲ್ಲ..!
    ಮೂಢನೆ೦ದದ್ದು ಮ೦ಕುತಿಮ್ಮನ೦ತೆ "ಮುದ್ರಿಕೆ"ಯೇ?..?
    ಚಿತ್ರ ಚೆನ್ನಾಗಿದೆ.. ಕೆಳದಿಯ ದೇವಸ್ಥಾನವಲ್ಲವೆ?

    ಅನ೦ತ್

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು, ಅನಂತರಾಜರೇ. ವಿಚಾರವಾದಿ ಎಂಬ ಪದ ಒಂದು ರೀತಿಯಲ್ಲಿ ವಿವಾದಾಸ್ಪದ ಪದವಾಗಿದೆ, ಬುದ್ಧಿಜೀವಿಗಳು ಎಂಬ ಪದದಂತೆ! ಇಂತಹ ಹಣೆಬರಹ ಹೊರುವುದು ಕಷ್ಟ. ಮೂಢ ಎಂಬುದು ಅಂಕಿತ(ಮುದ್ರಿಕೆ)ವಾಗಿ ಉಪಯೋಗಿಸಿರುವ ಪದ. ಚಿತ್ರ ಇಕ್ಕೇರಿಯ ಅಘೋರೇಶ್ವರ ದೇವಾಲಯದ್ದು.

    ಪ್ರತ್ಯುತ್ತರಅಳಿಸಿ