ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಆಗಸ್ಟ್ 18, 2010

ಮೂಢ ಉವಾಚ -17

ಭುಗಿಲೆದ್ದ ಜ್ವಾಲಾಗ್ನಿ ಮನೆಯನ್ನೆ ಸುಟ್ಟೀತು
ಹದವರಿತ ಬೆಂಕಿಯದು ಅಟ್ಟುಣಬಡಿಸೀತು|
ಕ್ರೋಧಾಗ್ನಿ ತರದಿರದೆ ಬಾಳಿನಲಿ ವಿರಸ?
ಹದವರಿತ ಕೋಪವದು ಹಿತಕಾರಿ ಮೂಢ||

ದುಷ್ಟ ಶಿಕ್ಷಣಕಾಗಿ ಶಿಷ್ಟ ರಕ್ಷಣೆಗಾಗಿ
ಸಮಾಜಹಿತಕಾಗಿ ಧರ್ಮ ರಕ್ಷಣೆಗಾಗಿ|
ರಾಷ್ಟ್ರ ಭದ್ರತೆಗಾಗಿ ಆತ್ಮಸಮ್ಮಾನಕಾಗಿ
ಕೋಪವದುಕ್ಕುಕ್ಕಿ ಬರಲಿ ಮೂಢ||

ಬರುವುದೆಲ್ಲದಕು ಹಿಡಿಯುವುದು ಗ್ರಹಣ
ಕೂಡಿಡುವ ಬಚ್ಚಿಡುವ ನಿಪುಣ ತಾ ಕೃಪಣ|
ಕೈಯೆತ್ತಿ ಕೊಡಲಾರ ಬಂದದ್ದು ಬಿಡಲಾರ
ಲೋಭಿಯಾ ಲೋಭಕೆ ಮದ್ದುಂಟೆ ಮೂಢ||

ದೃಷ್ಟಿಭೋಗಕ್ಕುಂಟು ವಿನಿಯೋಗಕಿಲ್ಲ
ಅಪಹಾಸ್ಯ ನಿಂದೆಗಳಿಗಂಜುವುದೆ ಇಲ್ಲ|
ಪ್ರಾಣವನೆ ಬಿಟ್ಟಾನು ಕೈಯೆತ್ತಿ ಕೊಡನು
ಲೋಭಿಯಾ ಲೋಭಕೆ ಮದ್ದುಂಟೆ ಮೂಢ||


-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. ಚೆನ್ನಾಗಿದೇರಿ! ನಾಲ್ಕಾರು ಬ್ಲಾಗಿಗೆ ನೀವೂ ಹೋಗಿ ಪ್ರತಿಕ್ರಿಯಿಸಿ, ಆಗ ನಾಲ್ಕುಜನ ನಿಮ್ಮ ಬ್ಲಾಗಿಗೆ ಬರುತ್ತಾರೆ, ಇಲಾವಾದರೆ ಯಾರಿಗೂ ನೀವು ಬರೆದಿದ್ದು ಕಾಣುವುದಿಲ್ಲ, ಬೇಸರಬೇಡ, ಇದು ನೆಟ್ ಅಲ್ಲವೇ? ಒಂದುಕಡೆಯಿಂದ ಇನ್ನೊಂದು ಕಡೆಗೆ ಎಲ್ಲಾ ಕೊಂಡಿಗಳದೇ ಜಾದು! ಅದೇ ಜಾಡು ಕೂಡ ಹೌದು-ಹಿಡಿದು ಹಿಂಬಾಲಿಸಲು! ನಿಮ್ಮ ಅ ಸೇವಾಪುರಾಣ ಓದಿ ಬೇಸರವೂ ಆಯಿತು, ಆಪ್ತತೆಯೂ ಬಂತು, ದುಃಖವೂ ಆಯಿತು, ನಮ್ಮೊಳಗೇ ಒಬ್ಬ ಸಾಧಕನಿದ್ದಾನಲ್ಲ ಎಂಬ ಸಂತೋಷವೂ ಆಯಿತು, ಹೀಗೇ ಮಿಶ್ರಪ್ರತಿಕ್ರಿಯೆ ಇರುವುದರಿಂದ ಪ್ರತಿಕ್ರಿಯಿಸಲಿಲ್ಲ, ಈಗ ಬರೆದಿದ್ದೇನೆ, ನಮನಗಳು

    ಪ್ರತ್ಯುತ್ತರಅಳಿಸಿ
  2. ಶ್ರೀಯುತ ವಿ.ಆರ್. ಭಟ್ಟರಿಗೆ ನಮಸ್ಕಾರ. ನಿಮ್ಮ ಕಳಕಳಿಯ ಪ್ರತಿಕ್ರಿಯೆ ಸಹಜ ಸಂತಸ ಕೊಟ್ಟಿದೆ. ನಿಮ್ಮ ಸಲಹೆ ಅಮೂಲ್ಯ.ಮತ್ತೊಮ್ಮೆ ವಂದನೆ.

    ಪ್ರತ್ಯುತ್ತರಅಳಿಸಿ