ಈಗ ಘಟನೆಯ ವಿಷಯಕ್ಕೆ ನೇರವಾಗಿ ಬರುತ್ತೇನೆ. ಅದು ಫೆಬ್ರವರಿ ತಿಂಗಳಿನ ಒಂದು ದಿನ. ಮಂಗಳೂರು ಜಿಲ್ಲೆಯಲ್ಲಿ ಕರಾವಳಿ ಉತ್ಸವ ನಡೆಯುತ್ತಿದ್ದ ಸಂದರ್ಭ. ಬೆಳ್ತಂಗಡಿ ತಾಲ್ಲೂಕು ಆಡಳಿತದ ವತಿಯಿಂದಲೂ ಧರ್ಮಸ್ಥಳದಲ್ಲಿ ಮಹಾರಾಷ್ಟ್ರ, ಒರಿಸ್ಸಾ ಮತ್ತು ಅಸ್ಸಾಂ ರಾಜ್ಯಗಳಿಂದ ಬಂದ ಕಲಾವಿದರಿಂದ ವೈವಿಧ್ಯಮಯ 'ಸಾಂಸ್ಕೃತಿಕ ರಸಸಂಜೆ' ಕಾರ್ಯಕ್ರಮ ಏರ್ಪಾಡಾಗಿತ್ತು. ಉತ್ಸವ ಸಮಿತಿಯ ಅಧ್ಯಕ್ಷನಾಗಿದ್ದ ನಾನು ಪೂರ್ವಭಾವಿಯಾಗಿ ಎಲ್ಲಾ ವ್ಯವಸ್ಥೆಗಳ ಮೇಲ್ವಿಚಾರಣೆ ನೋಡಿಕೊಂಡಿದ್ದೆ. ಆದಿನ ಕಛೇರಿಯ ತುರ್ತು ಕೆಲಸಗಳನ್ನು ಮುಗಿಸಿ ಸಂಜೆ 5 ಘಂಟೆಯ ವೇಳೆಗೆ ಬೆಳ್ತಂಗಡಿಯಿಂದ ಧರ್ಮಸ್ಥಳಕ್ಕೆ ಕಾರ್ಯಕ್ರಮದ ಅಂತಿಮ ವ್ಯವಸ್ಥೆ ನೋಡಲು ಹೊರಟೆ. ಸುಮಾರು 6 ಘಂಟೆಯ ಹೊತ್ತಿಗೆ ಧರ್ಮಸ್ಥಳದ ಗ್ರಾಮಲೆಕ್ಕಿಗರಿಗೆ ಒಂದು ದೂರವಾಣಿ ಕರೆ ಬಂತು. (ನನ್ನಲ್ಲಿ ಮೊಬೈಲ್ ಫೋನ್ ಇರಲಿಲ್ಲ). ಅದು ಕಛೇರಿಯ ದ್ವಿತೀಯ ದರ್ಜೆ ಗುಮಾಸ್ತ ವಿನಾಯಕ ಮತ್ತು ಶಿರಸ್ತೇದಾರ್ ಗೋಪಾಲನಾಯಕರು (ಹೆಸರುಗಳನ್ನು ಬದಲಿಸಿದೆ) ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತದ ಬಲೆಗೆ ಬಿದ್ದಿದ್ದ ಸುದ್ದಿಯಾಗಿತ್ತು. ನನಗೂ ಅಲ್ಲಿಗೆ ಬರಲು ಲೋಕಾಯುಕ್ತ ಇನ್ಸ್ ಪೆಕ್ಟರರು ಫೋನಿನ ಮೂಲಕ ತಿಳಿಸಿದರು. ಕಾರ್ಯಕ್ರಮ ನಡೆಯುತ್ತಿರುವುದರಿಂದ ಮುಗಿಸಿ ಬರುವುದಾಗಿ ಹೇಳಿದೆ. ನಾನು ಬೆಳ್ತಂಗಡಿ ಬಿಟ್ಟ ಸಮಯಕ್ಕೆ ಸರಿಯಾಗಿ ಲೋಕಾಯುಕ್ತ ಪೋಲಿಸರು ಕಛೇರಿಯಲ್ಲಿದ್ದು, ವಿಷಯ ತಿಳಿದೇ ನಾನು ಅಲ್ಲಿಂದ ಪರಾರಿಯಾಗಿದ್ದೆನೆಂದು ಸುದ್ದಿ ಹಬ್ಬಿತ್ತು. ನನ್ನನ್ನೂ ಪ್ರಕರಣದಲ್ಲಿ ಸಿಕ್ಕಿಸುವ ಹುನ್ನಾರವಿದೆಯೆಂದೂ, ನಾನು ಕಛೇರಿಗೆ ಬರಬಾರದೆಂದು ಇನ್ನೊಬ್ಬ ನೌಕರರು ಕಛೇರಿಯ ಹೊರಗೆ ಬಂದು ಇತರರಿಗೆ ತಿಳಿಯದಂತೆ ಫೋನು ಮಾಡಿದ್ದರು. ನಿಜಕ್ಕೂ ನನಗೆ ಗಾಬರಿಯಾಗಿತ್ತು. ಪ್ರಕರಣ ಏನೆಂದೇ ಗೊತ್ತಿರದಿದ್ದ ನನ್ನನ್ನು ಆರೋಪಿಗಳಲ್ಲಿ ಒಬ್ಬನನ್ನಾಗಿ ಮಾಡಬಹುದೆಂದು ಅಂಜಿದ್ದೆ. ಏಕೆಂದರೆ ಇಂತಹ ಪ್ರಕರಣಗಳನ್ನು ನಾನು ಕಂಡಿದ್ದೆ. ನನ್ನ ಜಂಘಾಬಲವೇ ಉಡುಗಿತ್ತು. ಗ್ರಾಮಲೆಕ್ಕಿಗರ ಮೊಬೈಲ್ ಫೋನಿನಿಂದ ಜಿಲ್ಲಾಧಿಕಾರಿಯವರಿಗೆ ವಿಷಯ ತಿಳಿಸಿದೆ. ಯಾವ ಕಾರಣಕ್ಕಾಗಿ ನನ್ನ ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೋ ಅನ್ನುವುದೂ ತಿಳಿಯದೆಂದೂ, ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸಬಹುದೆಂಬ ಆತಂಕವನ್ನೂ, ತನ್ನನ್ನು ಬೆಳ್ತಂಗಡಿಗೆ ಬರಹೇಳಿರುವುದನ್ನೂ ಅವರ ಗಮನಕ್ಕೆ ತಂದೆ. ಜಿಲ್ಲಾಧಿಕಾರಿಯವರಿಗೆ ನನ್ನ ಬಗ್ಗೆ ವಿಶ್ವಾಸವಿತ್ತು. ಅವರು ಅಲ್ಲಿಗೆ ಹೋಗದಿರಲು ಸಲಹೆ ಕೊಟ್ಟರು. ಅಸಿಸ್ಟೆಂಟ್ ಕಮಿಷನರ್ ಅವರಿಗೂ (ನಂತರದಲ್ಲಿ ಅವರು ಶಿವಮೊಗ್ಗದಲ್ಲೂ ನನಗೆ ಜಿಲ್ಲಾಧಿಕಾರಿಯಾಗಿದ್ದರು, ಪ್ರಸ್ತುತ ಹುಬ್ಬಳ್ಳಿಯಲ್ಲಿ ಜೆಸ್ಕಾಮ್ ನಿರ್ದೇಶಕರಾಗಿದ್ದಾರೆ) ನನ್ನ ಆತಂಕವನ್ನು ಗಮನಕ್ಕೆ ತಂದೆ. ನನ್ನ ಕುರಿತು ಒಳ್ಳೆಯ ಅಭಿಪ್ರಾಯವಿದ್ದ ಅವರು ಜಿಲ್ಲಾದಿಕಾರಿಯವರೊಂದಿಗೂ ಮಾತನಾಡಿದರು ಮತ್ತು ನನ್ನನ್ನು ಅಂದು ಪುತ್ತೂರಿಗೆ ಬಂದು ಉಳಿದುಕೊಳ್ಳಲು ತಿಳಿಸಿದರು. ಅಂದು ರಾತ್ರಿ ಪುತ್ತೂರಿನ ಪ್ರವಾಸಿ ಮಂದಿರದಲ್ಲಿ ಉಳಿದೆ. (ಸುಮಾರು ಹತ್ತು-ಹನ್ನೆರಡು ಸಲ) ಬೆಳ್ತಂಗಡಿಗೆ ಬರುವಂತೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಬೆದರಿಕೆ ಧ್ವನಿಯಲ್ಲಿ ಪದೇ ಪದೇ ಫೋನು ಮಾಡುತ್ತಿದ್ದರು. ನಾನು ಕಾರ್ಯಕ್ರಮ ಮುಗಿದಿಲ್ಲವೆಂದು ಸಬೂಬು ಹೇಳುತ್ತಾ ಇದ್ದೆ. ಮಹಜರ್, ಹೇಳಿಕೆ, ಇತ್ಯಾದಿಗಳನ್ನು ಮುಗಿಸುವಾಗ ರಾತ್ರಿ 8-30 ಘಂಟೆಯಾಗಿತ್ತೆಂದು ತಿಳಿಯಿತು. ಅಂದು ಲೋಕಾಯುಕ್ತ ಅಧಿಕಾರಿಗಳು ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲೆ ಉಳಿದಿರುವ ವಿಷಯವೂ ತಿಳಿಯಿತು. ಬಹುಷಃ ಅವರು ನನಗಾಗಿ ಕಾದಿದ್ದರು. ನನಗೆ ಅಂದು ರಾತ್ರಿಯೆಲ್ಲಾ ನಿದ್ದೆ ಬಂದಿರಲಿಲ್ಲ. ಆತಂಕ, ದುಗುಡದಲ್ಲೇ ಕಳೆದಿದ್ದೆ. ಮರುದಿನ ಬೆಳಿಗ್ಗೆ 11 ಘಂಟೆ ವೇಳೆಗೆ ಲೋಕಾಯುಕ್ತ ಅಧಿಕಾರಿಗಳು ಬೆಳ್ತಂಗಡಿ ಬಿಟ್ಟುಹೋದ ನಂತರದಲ್ಲಿ ನಾನು ಬೆಳ್ತಂಗಡಿಗೆ ಹೋದೆ. ಯಾವುದೇ ವಾಹನ ಎದುರಿಗೆ ಬಂದರೂ ಅದು ಲೋಕಾಯುಕ್ತ ಅಧಿಕಾರಿಗಳು ಇರುವ ವಾಹನವೆಂದೇ ನನಗೆ ಭಾಸವಾಗುತ್ತಿತ್ತು.
ನಾನು ಕಛೇರಿಯಲ್ಲೂ ಹೆಚ್ಚು ಹೊತ್ತು ಕುಳಿತಿರಲಾಗದೆ ತುರ್ತು ಕಾಗದ ಪತ್ರಗಳನ್ನು ನೋಡಿ ಹೊರಡುವವನಿದ್ದೆ. ಪ್ರಕರಣದ ಬಗ್ಗೆ ಗೊತ್ತಿದ್ದ ನೌಕರನೊಬ್ಬರಿಂದ ವಿವರ ತಿಳಿದೆ. ಅಷ್ಟರಲ್ಲಿ ಲೋಕಾಯುಕ್ತ ಕಛೇರಿಯ ಒಬ್ಬ ನೌಕರರು ಬಂದು ಪ್ರಕರಣದ ಕಡತವನ್ನು ನನ್ನ ಸ್ವೀಕೃತಿ ಪಡೆದು ಹಿಂತಿರುಗಿಸಿದರು. ನಾನು ಕೂಡಲೇ ಲೋಕಾಯುಕ್ತ ಕಛೇರಿಗೆ ಹೋಗಿ ಎಸ್.ಪಿ.ಯವರನ್ನು ಕಾಣಬೇಕೆಂದು ಹೇಳಿದರು. ಅದೇ ಸಮಯಕ್ಕೆ ನನಗೆ ದೂರವಾಣಿಯಲ್ಲೂ ಸಂಪರ್ಕಿಸಿದ ಲೋಕಾಯುಕ್ತ ಇನ್ಸ್‌ಪೆಕ್ಟರ್ 'ನಾನು ಪಾತಾಳದಲ್ಲಿ ಅಡಗಿದ್ದರೂ ಎಳೆದು ತೆಗೆಯುತ್ತೇನೆಂದು' ಬೆದರಿಸಿದ್ದರು. ನನ್ನ ಮಗಳ ಮದುವೆ ಸದ್ಯದಲ್ಲೇ ಮಾಡಬೇಕಿತ್ತು. ನನಗೇನಾದರೂ ತೊಂದರೆಯಾದರೆ ನನ್ನ ಮಕ್ಕಳ ಭವಿಷ್ಯಕ್ಕೂ ತೊಂದರೆ ಆಗಬಹುದಿತ್ತು. ಮಿಗಿಲಾಗಿ ನನ್ನ ಬಗ್ಗೆ ಸದಭಿಪ್ರಾಯ ಹೊಂದಿದ್ದ ಕುಟುಂಬದವರು, ಬಂಧುಗಳು, ಮಿತ್ರರು, ಇತರರ ಎಲ್ಲರ ಮುಂದೆ ನಾನು ತಲೆ ತಗ್ಗಿಸುವಂತಹ ಪರಿಸ್ಥಿತಿ ಬರುತ್ತಿತ್ತು. ಹಾಗೇನಾದರೂ ಆದರೆ ಸಾಯುವುದೇ ಮೇಲೆಂದು ಅಂದುಕೊಂಡಿದ್ದೆ. ಆತ್ಮಹತ್ಯೆ ಮಾಡಿಕೊಂಡರೆ ಕುಟುಂಬದವರ ಗತಿಯೇನು ಎಂದೂ ಚಿಂತಿತನಾಗಿದ್ದೆ. ಆದರೆ ಮರ್ಯಾದೆ ಕಳೆದುಕೊಂಡು ಬದುಕುವ ಧೈರ್ಯ ಭಾವಜೀವಿಯಾದ ನನಗೆ ಇರಲಿಲ್ಲ. ಬೆಳ್ತಂಗಡಿಯಲ್ಲಿ ಆಗ ರಮೇಶಚಂದ್ರ (ಹೆಸರು ಬದಲಿಸಿದೆ) ಅನ್ನುವವರು ಪೋಲಿಸ್ ಇನ್ಸ್‌ಪೆಕ್ಟರ್ ಆಗಿದ್ದರು. ಅವರೂ ಒಬ್ಬರೇ ಇದ್ದು, ನಾನೂ ಸಹ ಬೆಳ್ತಂಗಡಿಯಲ್ಲಿ ಒಬ್ಬನೇ (ಹಾಸನದಲ್ಲಿ ನನ್ನ ಕುಟುಂಬವಿತ್ತು) ಇದ್ದುದರಿಂದ ರಾತ್ರಿ ಹೊತ್ತು ಪ್ರವಾಸಿ ಮಂದಿರದಲ್ಲಿ ಒಟ್ಟಿಗೇ ಊಟ ತರಿಸಿಕೊಂಡು ಕಷ್ಟ-ಸುಖ ಮಾತನಾಡಿಕೊಳ್ಳುತ್ತಿದ್ದೆವು. ಅವರಿಗೆ ನಾನು ಎಂಥವನು ಎಂಬ ಬಗ್ಗೆ ಗೊತ್ತಿತ್ತು. ಅದೃಷ್ಟವಶಾತ್ ಲೋಕಾಯುಕ್ತ ಇನ್ಸ್‌ಪೆಕ್ಟರ್ ಮತ್ತು ಅವರು ಒಂದೇ ಬ್ಯಾಚಿನವರಾಗಿದ್ದು ಮಿತ್ರರಾಗಿದ್ದರು. ಅವರು ದೂರವಾಣಿ ಮೂಲಕ ಲೋಕಾಯುಕ್ತ ಇನ್ಸ್‌ಪೆಕ್ಟರರ ಹತ್ತಿರ ಮಾತನಾಡಿ ನನ್ನನ್ನು ಸುಖಾಸುಮ್ಮನೆ ಸಿಕ್ಕಿಸಬಾರದೆಂದೂ, ನಂಬಿಕೆಯಿಂದ ನನ್ನನ್ನು ಲೋಕಾಯುಕ್ತ ಕಛೇರಿಗೆ ಕಳುಹಿಸಿಕೊಡುವುದಾಗಿಯೂ ಹೇಳಿ ನನ್ನ ಸ್ವಭಾವದ ಬಗ್ಗೆ ವಿವರಿಸಿದ್ದರು. ನನಗೆ ಸ್ವಲ್ಪ ಹಣವನ್ನೂ ತೆಗೆದುಕೊಂಡು ಹೋಗಿ ಅಲ್ಲಿಗೆ ತಲುಪಿಸಲು ಸಲಹೆ ಕೊಟ್ಟರು. 'ಇಂದಿನ ಪರಿಸ್ಥಿತಿ ಹಾಗಿದೆ, ಉಳಿದುಕೊಳ್ಳಲು ಹೀಗೆ ಮಾಡಬೇಕಾದ ಅನಿವಾರ್ಯತೆಯಿದೆ' ಎಂದು ನನ್ನನ್ನು ಒಪ್ಪಿಸಿದ್ದರು. ನನಗೂ 'ಬದುಕ'ಬೇಕಿತ್ತು. ಎರಡು ದಿನಗಳ ನಂತರ ಲೋಕಾಯುಕ್ತ ಕಛೇರಿಗೆ ನಾನು ಬರಬೇಕೆಂದು ನನಗೆ ದೂರವಾಣಿಯಲ್ಲಿ ತಿಳಿಸಲಾಯಿತು. ಪ್ರಕರಣದ ಪೂರ್ಣ ವಿವರ ತಿಳಿಸುತ್ತಾ ಅದರಲ್ಲಿ ನನ್ನ ಪಾತ್ರವೇನೂ ಇರದ ಬಗ್ಗೆ ವಿಷದೀಕರಿಸಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಇಂತಹ ಸನ್ನಿವೇಶದಲ್ಲಿ ತನಗೆ ಕಡಬ ಮತ್ತು ಬೆಳ್ತಂಗಡಿ ಎರಡೂ ಕಡೆಯ ಕೆಲಸಗಳನ್ನು ನೋಡಿಕೊಳ್ಳುವುದು ಕಷ್ಟವೆಂದೂ, ಯಾರಾದರೂ ತಹಸೀಲ್ದಾರರನ್ನು ನೇಮಿಸಲು ಸರ್ಕಾರಕ್ಕೆ ಪತ್ರ ಬರೆಯಲು ಕೋರಿಕೊಂಡೆ. ಜಿಲ್ಲಾಧಿಕಾರಿಯವರೂ ಸಹ ಲೋಕಾಯುಕ್ತ ಎಸ್.ಪಿ.ಯವರೊಂದಿಗೆ ಮಾತನಾಡಿ 'ಅನಗತ್ಯವಾಗಿ ತಹಸೀಲ್ದಾರರನ್ನು ಸಿಕ್ಕಿಸಬಾರದೆಂದೂ, ಅವರದು ನಿಜವಾಗಿಯೂ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲು ತಮ್ಮ ಅಭ್ಯಂತರವಿಲ್ಲ'ವೆಂದೂ ಹೇಳಿದ್ದರು. ಆ ನಾಲ್ಕು ದಿನಗಳಲ್ಲಿ ನಾನು ಅನುಭವಿಸಿದ ಮಾನಸಿಕ ಯಾತನೆ ನನಗೆ ಮಾತ್ರ ಗೊತ್ತು. ಊಟ, ತಿಂಡಿ ಸೇರುತ್ತಿರಲಿಲ್ಲ, ನಿದ್ದೆ ಬರುತ್ತಿರಲಿಲ್ಲ. ನಾನು ಕಡಬದ ವಿಶೇಷ ತಹಸೀಲ್ದಾರನೂ ಆಗಿದ್ದರಿಂದ ನನ್ನ ವಾಸ್ತವ್ಯ ಸುಬ್ರಹ್ಮಣ್ಯದಲ್ಲಿತ್ತು. ಸಂಜೆ ಸುಬ್ರಹ್ಮಣ್ಯ ದೇವಸ್ಥಾನದ ಜಗಲಿಯ ಮೇಲೆ ಕುಳಿತು ಈ ಪರಿಸ್ಥಿತಿಯಿಂದ ಪಾರುಮಾಡೆಂದು ಮನಸ್ಸಿನಲ್ಲೇ ಧ್ಯಾನಿಸುತ್ತಾ ಗಂಟೆಗಟ್ಟಲೆ ಕುಳಿತಿರುತ್ತಿದ್ದೆ. ಅದು 'ನಿಜವಾದ ಧ್ಯಾನ'ವಾಗಿತ್ತು, ಏಕೆಂದರೆ ಈ ವಿಚಾರ ಬಿಟ್ಟು ಬೇರೆ ಯಾವುದೇ ಸಂಗತಿ ನನ್ನ ತಲೆಯಲ್ಲಿರಲಿಲ್ಲ!
ಒಂದು ಜಮೀನಿನ ಭೂಪರಿವರ್ತನೆಗೆ ಸಂಬಂಧಿಸಿದ ಪ್ರಕರಣ ಅದಾಗಿತ್ತು. ಇದರಲ್ಲಿ ತಹಸೀಲ್ದಾರರ ಗಮನಕ್ಕೇ ಬಾರದಂತೆ ಶಿರಸ್ತೇದಾರರು ಅರ್ಜಿ ಸ್ವೀಕರಿಸ್ದಿ, ಗುಮಾಸ್ತರಿಗೆ ನೇರವಾಗಿ ನೀಡಿದ್ದಲ್ಲದೆ, ಕೆಲವು ಆಕ್ಷೇಪಣೆಗಳನ್ನು ಹಾಕಿ ತಾವೇ 'ತಹಸೀಲ್ದಾರರ ಪರವಾಗಿ' ಎಂದು ಸಹಿ ಮಾಡಿದ್ದರು. ಭೂ ಪರಿವರ್ತನಾ ಶುಲ್ಕ ಕಟ್ಟಿಸಲು (ರೂ.55/-) ನನ್ನ ಆದೇಶಕ್ಕೆ ಇಟ್ಟಿದ್ದರು. ನನ್ನ ಗಮನಕ್ಕೇ ಬಾರದಂತೆ ನಡವಳಿಕೆಗಳನ್ನು ನಡೆಸಿದ್ದ ಬಗ್ಗೆ ತಿಳಿಯುವ ಸಲುವಾಗಿ 'ಚರ್ಚಿಸಿರಿ' ಎಂದು ಬರೆದಿದ್ದೆ. ಶಿರಸ್ತೇದಾರರು ಬಂದು 'ಇನ್ನು ಮುಂದೆ ಹೀಗೆ ಮಾಡುವುದಿಲ್ಲವೆಂದೂ, ಕ್ಷಮಿಸಬೇಕೆಂದೂ' ಕೋರಿದ್ದರ ಮೇರೆಗೆ ಎಚ್ಚರಿಕೆ ನೀಡಿ 'ಚರ್ಚಿಸಿದೆ, ಒಪ್ಪಿದೆ' ಎಂದು ಅದೇ ದಿನ ಆದೇಶಿಸಿದ್ದೆ. (ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಿದ್ದರೆ ನಾನು ಬರೆದ 'ಚರ್ಚಿಸಿ' ಷರಾ ಲಂಚ ಪಡೆಯುವ ಸಲುವಾಗಿ ಎಂದು ವಾದಿಸಲು ಅವಕಾಶವಿತ್ತು.) ಇದಾಗಿ ಸುಮಾರು ಇಪ್ಪತ್ತು ದಿನಗಳ ನಂತರ ಅವರುಗಳು ಸಿಕ್ಕಿಹಾಕಿಕೊಂಡಿದ್ದರು. ಬಲೆಗೆ ಸಿಕ್ಕಿಸುವ ಮುನ್ನ ರಹಸ್ಯವಾಗಿ ಗುಮಾಸ್ತರ, ಶಿರಸ್ತೇದಾರರ ಸಂಭಾಷಣೆಗಳನ್ನು ಧ್ವನಿಮುದ್ರಿಸಿಕೊಂಡಿದ್ದರಂತೆ. ನನ್ನನ್ನೂ ಕಂಡು ಮಾತನಾಡುವಂತೆ ದೂರುದಾರರಿಗೆ ತಿಳಿಸಿದ್ದರಂತೆ. ಆದರೆ ಹಿಂದಿನ ಎರಡು ದಿನಗಳು ನಾನು ಸಾಂದರ್ಭಿಕ ರಜೆಯಲ್ಲಿದ್ದರಿಂದ ಅವರಿಗೆ ನನ್ನನ್ನು ಸಂಪರ್ಕಿಸಲಾಗಿರಲಿಲ್ಲ. ಬಹುಷಃ ಅವರು ನನ್ನನ್ನು ಕಂಡಿದ್ದರೆ ನಾನು ಕಡತ ತೆಗೆಯಿಸಿ ಇತ್ಯರ್ಥ ಪಡಿಸಿರುತ್ತಿದ್ದೆನೇನೋ! ಆಗ ಇಂತಹ ಪ್ರಸಂಗ ಎದುರಾಗದೇ ಇದ್ದಿರಬಹುದಿತ್ತೋ ಏನೋ! ನಾನು ಅಂದು ಕಛೇರಿಯಿಂದ ಧರ್ಮಸ್ಥಳಕ್ಕೆ ಹೊರಟ ಸಮಯದಲ್ಲೇ ಲೋಕಾಯುಕ್ತ ಅಧಿಕಾರಿಗಳು ಕಛೇರಿಯಲ್ಲಿದ್ದು, (ಅವರು ಬಂದಿದ್ದ ವಿಷಯ ನನಗೆ ಗೊತ್ತಿರಲಿಲ್ಲ) ನಾನು ಹೊರಡುವುದು 2-3 ನಿಮಿಷಗಳು ತಡವಾಗಿದ್ದರೂ ನನಗೆ ತೊಂದರೆಯಾಗುವ ಎಲ್ಲಾ ಸಂಭವಗಳೂ ಇದ್ದವು. ಧರ್ಮಸ್ಥಳ ಮಂಜುನಾಥನೇ ನನ್ನನ್ನು ಕಾಪಾಡಿರಬೇಕು! ದೂರು ಅರ್ಜಿದಾರರು ಗುಮಾಸ್ತರಿಗೆ ರೂ. 6000/- ಹಣ ಕೊಟ್ಟಿದ್ದರು. ಸೋಡಿಯಂ ಕಾರ್ಬೋನೇಟ್ ಪುಡಿ ಬೆರೆಸಿದ ನೀರಿನಲ್ಲಿ ಅವರ ಕೈ ಅದ್ದಿಸಿದಾಗ ಅದು ನೇರಳೆ ಬಣ್ಣಕ್ಕೆ ತಿರುಗಿತ್ತು. ಅಂಗಿಯ ಜೇಬಿನಲ್ಲಿ ಇಟ್ಟುಕೊಂಡಿದ್ದ ಆ ಹಣ ಮತ್ತು ಅಂಗಿಯನ್ನೂ ವಶಪಡಿಸಿಕೊಂಡರು. ಅವರ ಹತ್ತಿರ ಈ ಹಣವಲ್ಲದೆ ಇನ್ನೂ ರೂ. 3930/- ಹಣ ಇದ್ದು ಆ ಪೈಕಿ ರೂ.30/- ವಾಪಸು ನೀಡಿ 3900/- ಅನ್ನೂ ಜಪ್ತಿ ಮಾಡಿಕೊಂಡಿದ್ದರು. ಶಿರಸ್ತೇದಾರರ ಬಳಿ ರೂ.2750/- ಮತ್ತು ಅವರ ಮೇಜಿನ ಡ್ರಾಯರಿನಲ್ಲಿ ರೂ. 1000/- ಇದ್ದು ಆ ಪೈಕಿ ರೂ.150/- ಅನ್ನು ಹಿಂತಿರುಗಿಸಿ ರೂ. 3600/- ಅನ್ನು ವಶಪಡಿಸಿಕೊಂಡರು. ಗುಮಾಸ್ತರಿಗೆ ಸ್ವ ಇಚ್ಛಾ ಹೇಳಿಕೆ ಬರೆದುಕೊಡಲು ಇನ್ಸ್‌ಪೆಕ್ಟರ್ ತಿಳಿಸಿದಾಗ ಅವರು ರಾಷ್ಟ್ರೀಯ ಉಳಿತಾಯ ಪತ್ರ ಖರೀದಿ ಸಲುವಾಗಿ ಹಣ ಪಡೆದಿತ್ತೆಂದೂ, ಅಂಚೆ ಕಛೇರಿಯ ಸಮಯವಾಗಿದ್ದರಿಂದ ಮರುದಿನ ಖರೀದಿಸುವ ಸಲುವಾಗಿ ಹಣ ಇಟ್ಟುಕೊಂಡಿದ್ದೆಂದು ಬರೆದುಕೊಟ್ಟರು. ಇನ್ಸ್‌ಪೆಕ್ಟರರು ಆ ಹೇಳಿಕೆ ಹರಿದು ಹಾಕಿ 'ತಹಸೀಲ್ದಾರರಿಗೆ ಕೊಡುವ ಸಲುವಾಗಿ ಪಡೆದಿದ್ದೆನೆಂದು ಬರೆದುಕೊಡು, ನಿನಗೆ ಅನುಕೂಲವಾಗುತ್ತದೆ' ಎಂದು ಸಲಹೆ ಕೊಟ್ಟಿದ್ದರು. (ಈ ಎಲ್ಲಾ ಸಂಗತಿಗಳು ನನಗೆ ನಂತರ ಕಛೇರಿಯ ನೌಕರರು ಮತ್ತು ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದದ್ದು). ಆದರೆ ಪುನಃ ಗುಮಾಸ್ತರು ಮೊದಲಿನ ರೀತಿ ಬರೆದಿದ್ದಂತೆಯೇ ಬರೆದಾಗ ಇನ್ಸ್‌ಪೆಕ್ಟರ್ ಸಿಟ್ಟಿಗೆದ್ದು ಗುಮಾಸ್ತರ ಕಪಾಳಕ್ಕೆ ಬಾರಿಸಿ "ನಾನು ಹೇಳಿದಂತೆ ಬರೆದುಕೊಡು. ಬದುಕುವ ದಾರಿ ನೋಡಿಕೋ" ಎಂದು ಗದರಿಸಿ ಆ ಕಾಗದವನ್ನೂ ಹರಿದುಹಾಕಿದ್ದರಂತೆ. ಆಗ ಗುಮಾಸ್ತ ವಿನಾಯಕ "ಸಾರ್, ತಹಸೀಲ್ದಾರರ ಸಲುವಾಗಿ ಎಂದು ಬರೆದುಕೊಟ್ಟರೆ ಅವರಿಗೆ ಅನ್ಯಾಯವಾಗುತ್ತದೆ, ಅವರು ಒಳ್ಳೆಯವರು, ನನ್ನ ಮಕ್ಕಳಿಗೂ ಒಳ್ಳೆಯದಾಗುವುದಿಲ್ಲ. ನೀವು ಇಷ್ಟೊಂದು ಬಲವಂತ ಮಾಡುವುದಾದರೆ ನಾನೇ ಲಂಚ ತೆಗೆದುಕೊಂಡೆ ಎಂದು ಬರೆದುಕೊಡುತ್ತೇನೆ" ಎಂದು ಹೇಳಿದ್ದರಂತೆ. ಪುನಃ ತಾವು ಮೊದಲು ಬರೆದುಕೊಟ್ಟ ಹೇಳಿಕೆಯನ್ನೇ ಮೂರನೆಯ ಸಲವೂ ಬರೆದುಕೊಟ್ಟರಂತೆ. ಆ ಗುಮಾಸ್ತರನ್ನು ನಾನು ನೆನೆಸಿಕೊಳ್ಳುತ್ತಲೇ ಇರುತ್ತೇನೆ. ಅವರೇನಾದರೂ ಆ ರೀತಿ ಹೇಳಿಕೆ ಕೊಟ್ಟಿದ್ದರೆ ನನ್ನನ್ನೂ ಆ ಪ್ರಕರಣದಲ್ಲಿ ಖಂಡಿತಾ ಸಿಲುಕಿಸಿರುತ್ತಿದ್ದರು. ಗುಮಾಸ್ತರ ಆ ಮಾತು ನನ್ನ ಸೇವಾವಧಿಯ ಅತ್ಯುನ್ನತ ಪ್ರಶಸ್ತಿ ಎಂದು ನಾನು ಭಾವಿಸಿದ್ದೇನೆ. ಬೇರೆ ಯಾರೇ ಆದರೂ ಆ ಸಮಯದಲ್ಲಿ ದಿಕ್ಕು ತೋಚದೆ ಇನ್ಸ್‌ಪೆಕ್ಟರ್ ಹೇಳಿದಂತೆ ಬರೆದುಕೊಟ್ಟಿರುತ್ತಿದ್ದರು. ಶಿರಸ್ತೇದಾರರು ಬೆದರಿಕೆಗೆ ಮಣಿದು ಮೇಜಿನ ಡ್ರಾಯರಿನಲ್ಲಿದ್ದ ರೂ.1000/- ತಹಸೀಲ್ದಾರರಿಗೆ ಕೊಡುವ ಸಲುವಾಗಿತ್ತೆಂದು ಹೇಳಿಕೆ ಕೊಟ್ಟಿದ್ದುದು ಇದಕ್ಕೆ ಸಾಕ್ಷಿ. ಆದರೆ ಅದು ದೂರು ಅರ್ಜಿಗೆ ಸಂಬಂಧಿಸಿದ್ದಲ್ಲದ ಮತ್ತು ಯಾವ ಪ್ರಕರಣಕ್ಕೆ ಸಂಬಂಧಿಸಿದ್ದೆಂದು ಗೊತ್ತಿಲ್ಲದ ಹಣವಾಗಿದ್ದರಿಂದ ನನ್ನನ್ನು ಸೇರಿಸಲು ಅವಕಾಶವಿರಲಿಲ್ಲ. ಆಶ್ಚರ್ಯದ ಸಂಗತಿಯೆಂದರೆ ಈ ಲಂಚದ ಪ್ರಕರಣದಲ್ಲಿ ಮಧ್ಯಸ್ತಿಕೆದಾರರಾಗಿ ಬೆಳ್ತಂಗಡಿಯ ನೋಟರಿ ಒಬ್ಬರು ದಳ್ಳಾಳಿಯ ಕೆಲಸ ಮಾಡಿದ್ದರು! ನೋಟರಿ ಮಹಾಶಯರು 'ತಹಸೀಲ್ದಾರರಿಗೆ, ಶಿರಸ್ತೇದಾರರಿಗೆ, ಗುಮಾಸ್ತರಿಗೆ, ಎಲ್ಲರಿಗೂ ಹಣ ಕೊಡಬೇಕು' ಎಂದು ದೂರು ಅರ್ಜಿದಾರರಿಗೆ ಹೇಳಿದ್ದ ಮಾತನ್ನು ರಹಸ್ಯವಾಗಿ ದ್ವನಿಮುದ್ರಿಸಿಕೊಳ್ಳಲಾಗಿತ್ತಂತೆ!
ಎರಡು ದಿನಗಳ ನಂತರ ನನ್ನ ಮಿತ್ರ ಇನ್ಸ್‌ಪೆಕ್ಟರರ ಸಲಹೆಯಂತೆ 'ಹಣ' ಇಟ್ಟುಕೊಂಡು ಲೋಕಾಯುಕ್ತ ಇನ್ಸ್ ಪೆಕ್ಟರರನ್ನು ಅವರ ಕಛೇರಿಯಲ್ಲೆ ಕಂಡೆ. ಅವರು ವಿಶ್ವಾಸದಿಂದಲೇ ಮಾತನಾಡಿಸಿದರು. ಹಿಂದಿನ ದಿನ ಪುನಃ ಬೆಳ್ತಂಗಡಿಗೆ ಹೋಗಿ ನನ್ನ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದರಂತೆ. ಹಿಂದಿನ ತಹಸೀಲ್ದಾರರ ಮೇಲೆ ಇದ್ದ ಹಲವಾರು ದೂರುಗಳಿಂದಾಗಿ ನನ್ನ ಬಗ್ಗೆ ಸಹ ತಪ್ಪು ಗ್ರಹಿಕೆಯಾಗಿತ್ತೆಂದೂ ಅನ್ಯಥಾ ಭಾವಿಸಬಾರದೆಂದೂ ಹೇಳಿದರು. ತಂದಿದ್ದ ಹಣವನ್ನು ಅವರು ಪಡೆದು ನನ್ನನ್ನೂ ಕರೆದುಕೊಂಡು ಹೋಗಿ ಎಸ್.ಪಿ.ಯವರಿಗೆ ಪರಿಚಯಿಸಿದರು. ಅವರೂ ನನ್ನೊಡನೆ ವಿಶ್ವಾಸದಿಂದಲೇ ಮಾತನಾಡಿದರು. ಇನ್ಸ್‌ಪೆಕ್ಟರರು ನನ್ನಿಂದ ಪಡೆದಿದ್ದ ಹಣವನ್ನು ನನ್ನ ಎದುರಿಗೇ ಎಸ್.ಪಿ.ಯವರಿಗೆ ಕೊಟ್ಟರು. ನಂತರ ನನಗೆ ಕೆಲವು ಪ್ರಶ್ನಾವಳಿ ಇರುವ ಪತ್ರ ನೀಡಿ ಅದಕ್ಕೆ ಉತ್ತರ ಕಳುಹಿಸಿಕೊಡುವಂತೆ ತಿಳಿಸಲಾಯಿತು. ನಂತರದಲ್ಲಿ ನಾನು ಇನ್ಸ್‌ಪೆಕ್ಟರರಿಗೆ "ಹಣ ಯಾರು ಯಾರಿಗೆ ಕೊಡಬೇಕೆಂಬ ಬಗ್ಗೆ ನನಗೆ ತಿಳುವಳಿಕೆ ಇರಲಿಲ್ಲ. ತಮಗೂ ತಲುಪಿಸುತ್ತೇನೆ" ಎಂದಾಗ ಅವರು "ನಿಮ್ಮಿಂದ ಹಣ ಪಡೆಯಬೇಕೆ? ನೀವು ನನಗೆಂದು ತಂದಿದ್ದರೂ ನಾನು ಪಡೆಯುತ್ತಿರಲಿಲ್ಲ. ತರುವುದೂ ಬೇಡ, ನಾನು ತೆಗೆದುಕೊಳ್ಳುವುದೂ ಇಲ್ಲ. ನೀವು ನೆಮ್ಮದಿಯಿಂದ ಹೋಗಿ" ಎಂದರು. ಈ ಪ್ರಕರಣದಲ್ಲಿ ಗುಮಾಸ್ತರು, ಶಿರಸ್ತೇದಾರರು ಲಂಚಕ್ಕೆ ಬೇಡಿಕೆ ಇಟ್ಟದ್ದು ನನಗೆ ಗೊತ್ತಿತ್ತೇ, ರಾಷ್ಟ್ರೀಯ ಉಳಿತಾಯ ಪತ್ರಕ್ಕಾಗಿ ಹಣ ಸಂಗ್ರಹಿಸಬಹುದೇ, ಗುಮಾಸ್ತರಿಗೆ ಬಡ್ತಿಯಾಗಿ ವರ್ಗಾವಣೆಯಾಗಿದ್ದರೂ ಅವರನ್ನು ಸೇವೆಯಿಂದ ಏಕೆ ಬಿಡುಗಡೆ ಮಾಡಿರಲಿಲ್ಲ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸಮಂಜಸ ಲಿಖಿತ ಉತ್ತರ ನೀಡಿ ನಿಟ್ಟುಸಿರು ಬಿಟ್ಟಿದ್ದೆ. 'ಇಂತಹ' ಸೇವೆ ಸಾಕು ಅನ್ನಿಸಿಬಿಟ್ಟಿತ್ತು. ನನ್ನನ್ನು ಕುತ್ತಿನಿಂದ ಪಾರು ಮಾಡಿದ ದೇವರು ಗುಮಾಸ್ತ ವಿನಾಯಕ, ಜಿಲ್ಲಾಧಿಕಾರಿ, ಅಸಿಸ್ಟೆಂಟ್ ಕಮಿಷನರ್, ಪೋಲಿಸ್ ಇನ್ಸ್‌ಪೆಕ್ಟರ್ ಮತ್ತು ಲೋಕಾಯುಕ್ತ ಇನ್ಸ್‌ಪೆಕ್ಟರರ ರೂಪಗಳಲ್ಲಿ ಪ್ರಕಟಗೊಂಡಿದ್ದನೆಂದರೆ ತಪ್ಪಿಲ್ಲ. ಮುಂದೆ 8-10 ದಿನಗಳಲ್ಲಿ ಬೆಳ್ತಂಗಡಿಗೆ ಬೇರೊಬ್ಬ ತಹಸೀಲ್ದಾರರು ಸರ್ಕಾರದಿಂದ ನೇಮಕವಾಗಿ ಬಂದಾಗ ಅವರಿಗೆ ಛಾರ್ಜು ವಹಿಸಿ 'ಅಧಿಕ'ಪ್ರಭಾರೆಯಿಂದ ಬಿಡುಗಡೆ ಹೊಂದಿದೆ! ಕಛೇರಿಯ ನೌಕರರು ನನಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭಕ್ಕೆ ಮನಸ್ಸಿರದಿದ್ದ ಕಾರಣದಿಂದ ಹೋಗಲಿಲ್ಲ.
*************
-ಕ.ವೆಂ.ನಾಗರಾಜ್.
*******************