ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಜೂನ್ 24, 2013

ಅರ್ಥವಿಲ್ಲದ ಇಲಾಖಾ ವಿಚಾರಣೆಗಳು - ೩: ಹೀಗೂ ಉಂಟು!

     ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳ ಕುರಿತು ಇನ್ನೂ ಒಂದೆರಡು ಉದಾಹರಣೆಗಳನ್ನು ಇಲ್ಲಿ ಉಲ್ಲೇಖಿಸಿ, ಮುಂದಿನ ಲೇಖನದಲ್ಲಿ ಇಲಾಖಾ ವಿಚಾರಣೆಗಳು ಅರ್ಥಪೂರ್ಣವಾಗಲು ಇರುವ ಅಡೆ ತಡೆಗಳು, ಅವುಗಳನ್ನು ನಿವಾರಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಬರೆಯುವೆ. ಆದರೆ ಜಡ್ಡುಗಟ್ಟಿದ ವ್ಯವಸ್ಥೆಯಲ್ಲಿ ಬದಲಾವಣೆಗಳು ಅಷ್ಟು ಸುಲಭವಲ್ಲವೆಂಬುದು ಅನುಭವವೇದ್ಯ. 
     ಅವನೂ ಒಬ್ಬ ಗ್ರಾಮಲೆಕ್ಕಿಗ, ಹೆಸರು ಫರ್ನಾಂಡಿಸ್ ಎಂದಿಟ್ಟುಕೊಳ್ಳೋಣ. ಇದು ೩೦ ವರ್ಷಗಳ ಹಿಂದಿನ ಘಟನೆ. ಬ್ಯಾಂಕಿನ ನಕಲಿ ಸೀಲು ಮಾಡಿಟ್ಟುಕೊಂಡು ಹಣ ಗುಳುಂ ಮಾಡಿಯೂ ದಕ್ಕಿಸಿಕೊಂಡಿದ್ದ ಒಬ್ಬನ ಕಥೆ ಹಿಂದೆಯೇ ಹೇಳಿರುವೆ. ಇವನು ಅಷ್ಟು ಪ್ರಚಂಡನಲ್ಲವಾದರೂ ಅವನ ತಮ್ಮನೆನ್ನಬಹುದು. ಇವನು ಮಾಡುತ್ತಿದ್ದುದೇನೆಂದರೆ, ವಸೂಲಾದ ಸರ್ಕಾರಿ ಬಾಕಿಗಳನ್ನು ಬೇರೆ ಬೇರೆ ಶೀರ್ಷಿಕೆಗಳಲ್ಲಿ ಬೇರೆ ಬೇರೆ ಚಲನ್ನುಗಳಲ್ಲಿ ಬರೆದು ಬ್ಯಾಂಕಿಗೆ ಜಮ ಮಾಡಬೇಕಿದ್ದು, ಇವನು ವಸೂಲಾದ ನೀರು ತೆರಿಗೆ, ನಿರ್ವಹಣಾಕರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಹಣ ಜಮಾ ಮಾಡುತ್ತಿದ್ದ. ಈ ಬಾಬಿನಲ್ಲಿ ಬರುತ್ತಿದ್ದ ಹಣ ಜಾಸ್ತಿ ಇದ್ದುದರಿಂದ ಹೀಗೆ ಮಾಡುತ್ತಿದ್ದನೇನೋ! ಈ ಕೆಲಸ ಸುಮಾರು ೪ ವರ್ಷಗಳವರೆಗೆ ನಡೆದಿದ್ದರೂ ಯಾರೊಬ್ಬರ ಗಮನಕ್ಕೆ ಬಂದಿರಲಿಲ್ಲವೆಂದರೆ ಆಶ್ಚರ್ಯವೇ ಸರಿ. ನಂತರದಲ್ಲಿ ಗ್ರಹಚಾರವಶಾತ್ ಒಬ್ಬರು ಉಪತಹಸೀಲ್ದಾರರು ಅವನ ದಫ್ತರ್ ತನಿಖೆ ಮಾಡಿದಾಗ ಈ ವಿಷಯ ಹೊರಬಿದ್ದಿತ್ತು. ತಕ್ಷಣದಲ್ಲಿ ಅವರು ಗ್ರಾಮಲೆಕ್ಕಿಗ ಆ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿದ್ದ ದಿನದಿಂದಲೂ ಪರಿಶೀಲಿಸಿದಾಗ ಸುಮಾರು ೬೦ ಸಾವಿರ ರೂ. ದುರುಪಯೋಗವಾಗಿದ್ದು ಗೊತ್ತಾಯಿತು. ೩೦ ವರ್ಷಗಳ ಹಿಂದಿನ ೬೦ ಸಾವಿರವೆಂದರೆ ಈಗಿನ ಬೆಲೆ ಎಷ್ಟು ಎಂಬುದನ್ನು ನಿಮ್ಮ ಊಹೆಗೇ ಬಿಡುವೆ. ವಿಷಯ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಯಿತು. ಗ್ರಾಮಲೆಕ್ಕಿಗನನ್ನು ಅಮಾನತ್ತಿನಲ್ಲಿ ಇರಿಸಿದರು. ಈ ಹಂತದಲ್ಲಿ ಅವನಿಂದ ದುರುಪಯೋಗವಾದ ಹಣವನ್ನು ಕಟ್ಟಿಸಲು ಪ್ರಯತ್ನಿಸಲಾಯಿತು. ಕ್ರಿಮಿನಲ್ ಮೊಕದ್ದಮೆ ಹೂಡುವ ಭಯ ತೋರಿಸಿದ್ದಾಯಿತು. ಆದರೆ, ಕಟ್ಟಲು ಅವನಲ್ಲಿ ಬಿಡಿಗಾಸೂ ಇರಲಿಲ್ಲ. ಸಿಕ್ಕ ಹಣವನ್ನೆಲ್ಲಾ  ಬಾಂಬೆ, ಮದರಾಸುಗಳಿಗೆ ಹೋಗಿ ಹೆಣ್ಣು, ಹೆಂಡಗಳಿಗೆ ಸುರಿದುಬಿಟ್ಟಿದ್ದ ಅವನು ಅಕ್ಷರಶಃ ಪಾಪರ್ ಆಗಿದ್ದ. ಸಂಬಳ ಬಿಟ್ಟರೆ ಬೇರೆ ಗತಿಯಿರಲಿಲ್ಲ. ಉಪತಹಸೀಲ್ದಾರ್, ರೆವಿನ್ಯೂ ಇನ್ಸಪೆಕ್ಟರ್ ಜೊತೆಗೂಡಿ ಬೇರೊಂದು ತಾಲ್ಲೂಕಿನಲ್ಲಿದ್ದ ಫರ್ನಾಂಡಿಸನ ತಂದೆಯನ್ನು ಕಂಡು, ಹಣ ಕಟ್ಟದಿದ್ದರೆ ಮಗ ಜೈಲಿಗೆ ಹೋಗುತ್ತಾನೆಂದು ತಿಳಿಸಿದಾಗ ಮನೆಯ ಮರ್ಯಾದೆಗೆ ಅಂಜಿದ ಆ ಬಡಪಾಯಿ ರೈತ ತನ್ನ ಹೆಸರಿನಲ್ಲಿದ್ದ ಜೀವನಾಧಾರವಾಗಿದ್ದ ಎರಡೂವರೆ ಎಕರೆ ಜಮೀನಿನಲ್ಲಿ ಎರಡು ಎಕರೆ ಜಮೀನು ಮಾರಿ, ಮಗ ನುಂಗಿ ಹಾಕಿದ್ದ ಹಣವನ್ನು ಸರ್ಕಾರಕ್ಕೆ ಕಟ್ಟಿದ. ಎಂತಹ ಅಪ್ಪನಿಗೆ ಎಂತಹ ಮಗ!
     ಜಿಲ್ಲಾಧಿಕಾರಿಯವರಿಂದ ಇಲಾಖಾ ವಿಚಾರಣೆ ಏಕೆ ಮಾಡಬಾರದೆಂದು ಸಂಬಂಧಿಸಿದ ಗ್ರಾಮಲೆಕ್ಕಿಗ, ಅವನ ಲೆಕ್ಕಪತ್ರಗಳನ್ನು ಸರಿಯಾಗಿ ಪರಿಶೀಲಿಸದಿದ್ದ ರೆವಿನ್ಯೂ ಇನ್ಸ್ ಪೆಕ್ಟರುಗಳು, ಗುಮಾಸ್ತರುಗಳು, ಉಪತಹಸೀಲ್ದಾರರುಗಳು ಸೇರಿದಂತೆ ೧೩ ನೌಕರರುಗಳಿಗೆ ನೋಟೀಸುಗಳು ಜಾರಿಯಾದವು. ಒಬ್ಬ ಚಾಣಾಕ್ಷ ಉಪತಹಸೀಲ್ದಾರ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸುವಾಗ ತನ್ನ ಹೆಸರಿನ ಬದಲಿಗೆ ನನ್ನ ಹೆಸರನ್ನು ಸೇರಿಸಿದ್ದರಿಂದ ನನಗೂ ನೋಟೀಸು ಬಂದಿತ್ತು. ವಾಸ್ತವಾಂಶ ತಿಳಿಸಿ ನಾನು ಉತ್ತರಿಸಿದ್ದೆ. ಫರ್ನಾಂಡಿಸ್ ಜಿಲ್ಲಾಧಿಕಾರಿಯವರ ಕಛೇರಿಯ ಹಿರಿಯ ಆಧಿಕಾರಿಗೆ ಐದು ಸಾವಿರ ರೂ. ನೈವೇದ್ಯ ಅರ್ಪಿಸಿ ಕೈಮುಗಿದು ಬಚಾವು ಮಾಡಲು ಕೋರಿಕೊಂಡ. ಆ ಅಧಿಕಾರಿಯ ಸಲಹೆಯಂತೆ ತಹಸೀಲ್ದಾರರು ಸರ್ಕಾರಕ್ಕೆ ಬರಬೇಕಾಗಿದ್ದ ಹಣ ಪೂರ್ಣವಾಗಿ ಬಂದಿರುವುದರಿಂದ ನೌಕರರಿಗೆ ಎಚ್ಚರಿಕೆ ನೀಡಿ ಪ್ರಕರಣ ಮುಗಿಸಬಹುದೆಂದು ಪತ್ರ ಬರೆದರು. ವಿಷಯ ಮುಗಿದೇಹೋಯಿತು. ವಿಚಾರಣೆ ನಡೆಯಲೇ ಇಲ್ಲ. ಒಂದು ವೇಳೆ ವಿಚಾರಣೆ ನಡೆದಿದ್ದರೆ, ತಾತ್ಕಾಲಿಕವಾಗಿಯಾದರೂ ಹಣ ದುರುಪಯೋಗವಾಗಿದ್ದುದು ರುಜುವಾತಾಗಿ ಫರ್ನಾಂಡಿಸ್ ನೌಕರಿ ಕಳೆದುಕೊಳ್ಳುತ್ತಿದ್ದ!
     ಇಲಾಖಾ ವಿಚಾರಣೆ ನಡೆಯದಿರಲು ನಾನೇ ಕಾರಣನಾಗಿದ್ದ ಪ್ರಸಂಗವೊಂದನ್ನು ಇಲ್ಲಿ ಉಲ್ಲೇಖಿಸುವೆ. ಇದೂ ಸಹ ದಶಕಗಳ ಹಿಂದಿನ ಕಥೆ. ನನ್ನ ಕ್ರಮ ಸರಿಯಾಗಿತ್ತೇ ಅಥವಾ ತಪ್ಪೇ ಎಂದು ನೀವೇ ನಿರ್ಧರಿಸಿ. ತಿಮ್ಮೇನಹಳ್ಳಿ ವೃತ್ತದ ಗ್ರಾಮಲೆಕ್ಕಿಗ - ಹೆಸರು ರಾಮೇಗೌಡ ಎಂದಿರಲಿ, ನಿವೃತ್ತಿಗೆ ೩ ವರ್ಷಗಳಿದ್ದವು - ಒಳ್ಳೆಯ ಕೆಲಸಗಾರನೇನೂ ಆಗಿರಲಿಲ್ಲ. ಸರ್ಕಾರಿ ಬಾಕಿ ವಸೂಲಿಯಲ್ಲಿ ಇತರ ಎಲ್ಲಾ ಗ್ರಾಮಲೆಕ್ಕಿಗರುಗಳಿಗಿಂತಲೂ ತೀರಾ ಹಿಂದಿರುತ್ತಿದ್ದ ಈತ ಈ ಕಾರಣಕ್ಕಾಗಿ ಪ್ರತಿ ಸಿಬ್ಬಂದಿ ಸಭೆಯಲ್ಲೂ ನನ್ನಿಂದ ಬೈಸಿಕೊಳ್ಳುತ್ತಿದ್ದ. ಸರ್ಕಾರಿ ಬಾಕಿ ವಸೂಲಿಗೆ ಆದ್ಯತೆ ಕೊಟ್ಟಿದ್ದ ನಾನು ಒಂದು ಅಲಿಖಿತ ನಿಯಮ ಪಾಲಿಸುತ್ತಿದ್ದೆ. ಜನರು ತಮ್ಮ ಕೆಲಸಗಳಿಗೆ ಬಂದ ಸಂದರ್ಭದಲ್ಲಿ ಅವರು ಸರ್ಕಾರಿ ಬಾಕಿ ಪಾವತಿಸಿರುವುದನ್ನು ಖಚಿತಪಡಿಸಿಕೊಂಡು, ಪಾವತಿಸಿರದಿದ್ದಲ್ಲಿ ಪಾವತಿಸಿದ ನಂತರ ಅವರ ಕೆಲಸ ಮಾಡಿಕೊಡುತ್ತಿದ್ದೆ. ಹೀಗಾಗಿ ಜನರಿಗೂ ಅದು ಅಭ್ಯಾಸವಾಗಿ ಕಛೇರಿಗೆ ಬರುವಾಗ ಕಂದಾಯ, ಇತ್ಯಾದಿ ಪಾವತಿಸಿದ ರಸೀದಿಗಳನ್ನು ತೆಗೆದುಕೊಂಡು ಬರುತ್ತಿದ್ದರು. ಒಮ್ಮೆ ತಿಮ್ಮೇನಹಳ್ಳಿಯ ಒಬ್ಬ ರೈತ ಖಾತೆ ಬದಲಾವಣೆಗೆ ಬಂದಿದ್ದವನು ತಾನು ಕಟ್ಟಿದ್ದ ರೂ. ೨೫೦೦ ರೂ. ರಸೀದಿ ನನಗೆ ತೋರಿಸಿದ್ದ. ನನಗೆ ಆಶ್ಚರ್ಯವಾಯಿತು. ಏಕೆಂದರೆ ರಾಮೇಗೌಡ ಹಿಂದಿನ ತಿಂಗಳು ಸರ್ಕಾರಕ್ಕೆ ಕಟ್ಟಿದ್ದ ವಸೂಲು ಮಾಡಿದ ಒಟ್ಟು ಮೊಬಲಗೇ ರೂ. ೯೫೦ ಆಗಿತ್ತು. ಆ ರಸೀದಿಯನ್ನು ಸ್ವೀಕೃತಿ ಪತ್ರ ನೀಡಿ ಆ ರೈತನಿಂದ ಪಡೆದು ಅವನ ಕೆಲಸ ಮಾಡಿಕೊಟ್ಟು, ರಾಮೇಗೌಡನ ಮೂಲ ರಸೀದಿ ತರಿಸಿ ಪರಿಶೀಲಿಸಿದೆ. ಮೂಲ ರಸೀದಿಯಲ್ಲಿ ಆ ರೈತನ ಹೆಸರಿನಲ್ಲಿ ಇದ್ದ ಮೊಬಲಗು ೧೫೦ ಮಾತ್ರ ಆಗಿತ್ತು. ತಕ್ಷಣ ಅವನು ವಸೂಲಿ ಮಾಡಿದ ಇತರ ರೈತರುಗಳ ರಸೀದಿಗಳನ್ನೂ ಪಡೆದು ಪರಿಶೀಲಿಸಿದಾಗ ರೈತರ ಹೆಸರಿನಲ್ಲಿ ಇದ್ದ ಮತ್ತು ಮೂಲ ರಸೀದಿಯಲ್ಲಿ ಇದ್ದ ಮೊಬಲಗುಗಳು ಬೇರೆಯೇ ಆಗಿದ್ದವು. ರಸೀದಿ ಹಾಕುವಾಗ ಡಬಲ್ ಸೈಡ್ ಕಾರ್ಬನ್ ಉಪಯೋಗಿಸಿ ರಸೀದಿ ಬರೆದು ಎರಡನೆಯ ಪ್ರತಿಯನ್ನು ರೈತರಿಗೆ ಕೊಡಬೇಕಿತ್ತು. ಮೂಲ ರಸೀದಿಯ ಹಿಂಭಾಗದಲ್ಲಿ ಸಹ ಕಾರ್ಬನ್ ಅಚ್ಚು ದಾಖಲಾಗಿ ತಿದ್ದುವಿಕೆಗೆ ಅವಕಾಶವಾಗದಿರಲಿ ಎಂಬುದು ಅದರ ಉದ್ದೇಶವಿತ್ತು. ರೈತರಿಗೆ ಎರಡನೆಯ ಪ್ರತಿಯನ್ನು ಮಾತ್ರ ಪ್ರತ್ಯೇಕ ಬರೆದುಕೊಟ್ಟು, ನಂತರ ಡಬಲ್ ಸೈಡ್ ಕಾರ್ಬನ್ ಉಪಯೋಗಿಸಿ ಮೂಲ ರಸೀದಿಯನ್ನು ಕಡಿಮೆ ಮೊಬಲಗಿಗೆ ಪ್ರತ್ಯೇಕವಾಗಿ ಬರೆದು ರಾಮೇಗೌಡ ಚಾಣಾಕ್ಷತನ ತೋರಿದ್ದ. ಇದು ಗೊತ್ತಾಗಿ ಆತನ ಎಲ್ಲಾ ಕಡತಗಳು, ಖಾತೆ, ಖಿರ್ದಿಗಳನ್ನು ವಶಪಡಿಸಿಕೊಂಡೆ. 
     ಅಂದು ರಾತ್ರಿ ಸುಮಾರು ಎಂಟು ಗಂಟೆಯ ಹೊತ್ತಿಗೆ ನನ್ನ ಮನೆಗೆ ಬಂದ ರಾಮೇಗೌಡ ನನ್ನ ಕಾಲು ಹಿಡಿದುಕೊಂಡು ಜೋರಾಗಿ ಅಳತೊಡಗಿದ. ಮನೆಯಲ್ಲಿದ್ದ ನನ್ನ ಪತ್ನಿ ಮತ್ತು ಪುಟ್ಟ ಮಕ್ಕಳು ಗಾಬರಿಯಾಗಿದ್ದರು. ಅವನನ್ನು ಬಲವಂತವಾಗಿ ಕುರ್ಚಿಯಲ್ಲಿ ಕೂರಿಸಿ "ಏನು ಹೇಳಬೇಕೋ ಸರಿಯಾಗಿ ಹೇಳು, ನಾಟಕ ಬೇಡ" ಎಂದು ಗದರಿಸಿದೆ. ಅವನು, "ಸಾರ್, ನನ್ನ ಸರ್ವಿಸಿನಲ್ಲೇ ಇಂಥಾ ಕೆಲಸ ಮಾಡಿರಲಿಲ್ಲ. ವಿಧಿಯಿಲ್ಲದೆ ಈಗ ಹೀಗೆ ಮಾಡಿದೆ. ಎರಡು ತಿಂಗಳಿನಿಂದ ಮಾತ್ರ ಈರೀತಿ ಮಾಡಿದೀನಿ ಸಾರ್. ನನ್ನ ಅಳಿಯ ದೀಪಾವಳಿ ಹಬ್ಬಕ್ಕೆ ಮನೆಗೆ ಬಂದವನು ಉಡುಗೊರೆಯಾಗಿ ಮಾವ ಸ್ಕೂಟರ್ ತೆಗೆಸಿಕೊಡಲಿ ಅಂತ ಮಗಳ ಮೂಲಕ ಬಲವಂತ ಮಾಡಿದ್ದ ಸಾರ್. ನನ್ನ ಹತ್ತಿರ ಹಣ ಇರಲಿಲ್ಲ. ೧೮೦೦೦ ರೂ. ಸಾಲ ಮಾಡಿ ಸ್ಕೂಟರ್ ತೆಗೆದುಕೊಟ್ಟೆ. ಅದಕ್ಕೋಸ್ಕರ ಹೀಗೆ ಮಾಡಿದೆ. ಕ್ರಮೇಣ ಹೊಂದಿಸಿ ಸರಿ ಮಾಡ್ತೀನಿ ಸಾರ್. ನೀವು ಡಿ.ಸಿ.ಗೆ ಬರೆದರೆ ನನ್ನ ನೌಕರಿ ಹೋಗುತ್ತೆ. ನನಗೆ ಇರೋದು ಒಂದೆರಡು ವರ್ಷ ಸರ್ವೀಸು ಅಷ್ಟೆ. ನಾನು ಮುಳುಗಿ ಹೋಗ್ತೀನಿ. ಅದೂ ಅಲ್ಲದೆ ಮರ್ಯಾದೆ ಪ್ರಶ್ನೆ ಸಾರ್. ತಲೆ ಎತ್ತಿ ನಡೆಯೋಕ್ಕೆ ಆಗಲ್ಲ. ನೀವು ಕೈಬಿಟ್ಟರೆ ನಾನು ಖಂಡಿತಾ ನೇಣು ಹಾಕಿಕೊಂಡು ಸಾಯ್ತೀನಿ, ಫಾಲಿಡಾಲ್ ಕುಡೀತೀನಿ. ಇದು ನಿಮ್ಮಾಣೆ ಸತ್ಯ ಸಾರ್" ಅಂದಾಗ ನನಗೆ ಏನು ಹೇಳಬೇಕೋ ತೋಚಲಿಲ್ಲ. "ಆಯ್ತು, ಎರಡು ದಿನ ಯೋಚಿಸಿ ನಿನಗೆ ಹೇಳಿಯೇ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ" ಎಂದು ಭರವಸೆ ಕೊಟ್ಟ ಮೇಲೆಯೇ ಅವನು ಕಣ್ಣು ಒರೆಸಿಕೊಂಡು ಹೋದದ್ದು. ನನ್ನ ಪತ್ನಿ 'ಅವನಿಗೆ ತೊಂದರೆ ಮಾಡಬೇಡಿ' ಅಂದರೆ, ನನ್ನ ಪುಟ್ಟ ಮಕ್ಕಳು ನನ್ನನ್ನು ಕೆಟ್ಟವನೆಂಬಂತೆ ನೋಡಿದ್ದರು. ಅಂದು ರಾತ್ರಿಯೆಲ್ಲಾ ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆ.
     ಮರುದಿನ ಮಧ್ಯಾಹ್ನ ರಾಮೇಗೌಡನನ್ನೂ ಕರೆದುಕೊಂಡು ಹೋಗಿ ಪ್ರವಾಸಿ ಮಂದಿರದ ಕೊಠಡಿಯಲ್ಲಿ ಕುಳಿತು, ಅವನಿಂದಲೇ ಖಾತೆ, ಖಿರ್ದಿಗಳನ್ನು ಪರಿಶೀಲಿಸಿ ಅವನ ವೃತ್ತದ ಎಲ್ಲಾ ರೈತರುಗಳಿಂದ ವಸೂಲು ಮಾಡಲು ಬಾಕಿಯಿರುವ ಮೊಬಲಗನ್ನು ಲೆಕ್ಕ ಹಾಕಿಸಿದೆ. ಅವುಗಳಲ್ಲಿ ಮೂಲ ರಸೀದಿಯಲ್ಲಿ ಬರೆದ ಮೊಬಲಗುಗಳನ್ನು ಮಾತ್ರ ವಸೂಲಾದಂತೆ ತೋರಿಸಿದ್ದು, ಉಳಿದ ವಸೂಲು ಮಾಡಬೇಕಾದ ಮೊಬಲಗು ರೂ. ೪೨೦೦೦ ಆಗಿತ್ತು. ಪ್ರತಿ ಬಾಕಿ ಮೊಬಲಗಿಗೂ ರಸೀದಿಗಳನ್ನು ಹಾಕಿ, ಪೂರ್ಣ ರೂ. ೪೨೦೦೦ ಮೊಬಲಗನ್ನು ಸರ್ಕಾರಕ್ಕೆ ಜಮಾ ಮಾಡಿದರೆ ಮಾತ್ರ ಬಿಡುವುದಾಗಿ ಅವನಿಗೆ ತಿಳಿಸಿದೆ. "ಸಾರ್, ನಾನು ಉಪಯೋಗಿಸಿಕೊಂಡದ್ದು ರೂ. ೧೫೦೦೦ ಮಾತ್ರ. ನನಗೆ ಬರೆ ಹಾಕಬೇಡಿ ಸಾರ್" ಅಂತ ಗೋಗರೆದ. "ನೋಡು, ನೀನು ಕಳೆದುಕೊಳ್ಳುವುದು ಏನೂ ಇಲ್ಲ. ಈಗಾಗಲೇ ವಸೂಲು ಮಾಡಿರುವವರಿಂದ ನೀನು ವಸೂಲು ಮಾಡುವ ಅಗತ್ಯ ಬರುವುದಿಲ್ಲ. ವಸೂಲು ಮಾಡಿರದಿದ್ದವರಿಂದ ರಸೀದಿ ಕೊಟ್ಟು ಹಣ ಪಡೆದುಕೋ. ಹೇಗೂ ನಿನಗೆ ವಸೂಲು ಮಾಡಲು ಈ ತಿಂಗಳಿನಲ್ಲಿ ಇನ್ನೂ ಹತ್ತು ದಿವಸ ಸಮಯ ಇದೆ. ಅವರಿಂದ ಹಣ ಬರಲಿ, ಬಿಡಲಿ. ಈ ತಿಂಗಳಂತೂ ನೀನು ಪೂರ್ತಾ ಹಣ ಕಟ್ಟಲೇಬೇಕು. ಕೊಡದಿದ್ದವರಿಂದ ನಿಧಾನವಾಗಿಯಾದರೂ ನೀನು ಹಣ ಕಟ್ಟಿರುವುದರಿಂದ ವಸೂಲು ಮಾಡಿಕೊಂಡೇ ಮಾಡಿಕೊಳ್ಳುತ್ತೀಯ. ನಿನಗೆ ನಷ್ಟವೇನೂ ಆಗುವುದಿಲ್ಲ" ಎಂದೆ. ಅವನು ಎರಡು ತಿಂಗಳ ಕಾಲಾವಕಾಶ ಕೇಳಿದರೂ ನಾನು ಒಪ್ಪಲಿಲ್ಲ. ಆ ತಿಂಗಳು ಅವನು ಕಷ್ಟಪಟ್ಟು ರೂ.೨೫೦೦೦ ವಸೂಲು ಮಾಡಿ, ಉಳಿದ ರೂ. ೧೭೦೦೦ ಅನ್ನು ಸಾಲ ಮಾಡಿ ಪೂರ್ಣ ಬಾಕಿ ಮೊಬಲಗನ್ನು ಸರ್ಕಾರಕ್ಕೆ ಕಟ್ಟಿದ. ಆ ತಿಂಗಳ ಸಿಬ್ಬಂದಿ ಸಭೆಯಲ್ಲಿ ಸರ್ಕಾರಿ ಬಾಕಿಯನ್ನು ಪೂರ್ಣವಾಗಿ ವಸೂಲು ಮಾಡಿದ ಅವನನ್ನು ಅಭಿನಂದಿಸಿ ಹೂವಿನಹಾರ ತರಿಸಿ ಅವನ ಕೊರಳಿಗೆ ಹಾಕಿದಾಗ ಅವನು ತೋರಿದ್ದ  -ನಗಲೂ ಆಗದಿದ್ದ, ಅಳಲೂ ಆಗದಿದ್ದ- ವಿಚಿತ್ರ ಮುಖಭಾವ ಇನ್ನೂ ನೆನಪಿಗೆ ಬರುತ್ತಿದೆ. 'ರಾಮೇಗೌಡನಂತಹವರೇ ಪೂರ್ಣ ಸರ್ಕಾರಿ ಬಾಕಿ ವಸೂಲು ಮಾಡಿರುವಾಗ ನಿಮಗೇನಾಗಿದೆ' ಎಂದು ಇತರ ಸಿಬ್ಬಂದಿಗೂ ವಸೂಲಿ ಕಾರ್ಯ ಚುರುಕುಗೊಳಿಸಲು ಹುರಿದುಂಬಿಸಿದ್ದೆ. ರಾಮೇಗೌಡ ಮುಂದೆ ಪೂರ್ಣ ಸೇವೆ ಸಲ್ಲಿಸಿ ನಿವೃತ್ತನೂ ಆದ, ಕೆಲವು ವರ್ಷಗಳ ಹಿಂದೆ ದೈವಾಧೀನನೂ ಆದ. ನನ್ನ ಮತ್ತು ರಾಮೇಗೌಡನ ಮಧ್ಯೆ ಮಾತ್ರ ಇದ್ದ ಸತ್ಯ ಈಗ ಹೊರಗೆಡವಿ ನಿರಾಳನಾಗಿರುವೆ. 
ಹಿಂದಿನ ಲೇಖನಗಳಿಗೆ ಲಿಂಕ್:
1. ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - 1:  http://kavimana.blogspot.in/2013/05/blog-post_21.html
2. ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - 2: http://kavimana.blogspot.in/2013/05/blog-post_28.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ