ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜೂನ್ 11, 2013

ಅವಧೂತ ಮುಕುಂದೂರು ಸ್ವಾಮಿಗಳು ಹೇಳಿದ 'ರಾಮಣ್ಯ'

     ಅವಧೂತ ಮುಕುಂದೂರು ಸ್ವಾಮಿಗಳು ಹಳ್ಳಿಯ ಜನರಿಗೆ ಅವರು ಆಡುವ ಭಾಷೆಯಲ್ಲಿಯೇ ಜೀವನಾದರ್ಶದ ವಿಚಾರಗಳನ್ನು ಅವರಿಗೆ ಅರ್ಥವಾಗುವಂತೆ ಹೇಳುತ್ತಿದ್ದರು. ದಿ.ಬೆಳಗೆರೆ ಕೃಷ್ಣಶಾಸ್ತ್ರಿಗಳು ಅವರ ಕುರಿತು ಬರೆದ ವೈಚಾರಿಕ ಕೃತಿ 'ಯೇಗ್ದಾಗೆಲ್ಲಾ ಐತೆ'ಯಲ್ಲಿ ಅವಧೂತರು ರಾಮಾಯಣದ ಕುರಿತು ವ್ಯಾಖ್ಯಾನಿಸಿದ ಕುರಿತು ತಿಳಿಸಿರುವುದು ಮನೋಜ್ಞವಾಗಿದೆ. ರಾಮಾಯಣ ಕುರಿತು ಒಬ್ಬರು, "ಅದರಲ್ಲೇನು ವಿಶೇಷ? ರಾವಣಾಸುರ ಸೀತೇನ ಕದ್ದ, ಕಪಿಸೈನ್ಯ ಕಟ್ಕೊಂಡು ಲಂಕಾ ಪಟ್ಣಕ್ಕೆ ಹೋಗಿ ಅವನನ್ನು ಕೊಂದು ರಾಮ ಸೀತಮ್ಮನ್ನ ತಂದ ಅಷ್ಟೇ ತಾನೆ?" ಎಂದಾಗ ಅವಧೂತರು, "ಅದು ಮ್ಯಾಗಳ ಕಥೆ ನೀನೇಳೋದು. ಆದರೆ ಒಳಗೈತಪ್ಪಾ ಅದರ ಸಕೀಲು. ಆ ಸಕೀಲು ಇಡಕಂಡ್ರೆ ನೋಡಪ್ಪ ಆ ಕತೇನೇ ಬೇರೆ." 
     "ಆ ಸಕೀಲನ್ನು ನಮಗೂ ತಿಳಿಯುವಂತೆ ಹೇಳಿ ಸ್ವಾಮಿ ನೋಡೋಣ" ಎಂದಾಗ ಅವರು, "ಅದು ಸಕೀಲು ಅಂದ್ರೆ ನೋಡೋದಲ್ಲ ಮಗ. ಅದನ್ನು ಇಡೀಬೇಕು. ಇಡಿದು ನಡೀಬೇಕು. ನಡೆದು ಪಡೀಬೇಕು. ಆಗ ಅದರ ಸವಿ, ಸೊಗಸು, ಸುಖ. ಅದಕ್ಕೇನಪ್ಪಾ ರಾಮಣ್ಯ ಅಂದ್ರೆ ಸಾಮನ್ಯ ಅಲ್ಲ. ಅದೊಂದು ಇನ್ನೊಂದು ಮಾತೈತೆ. ಅದೇನು ಮಹಾ ಬ್ರಹ್ಮವಿದ್ಯೆನೇನೋ ಅಂತಾರೆ. ಬ್ರಹ್ಮವಿದ್ಯೆ ಅಂದ್ರೆ ಸಾಮಾನ್ಯ ಅಲ್ಲ. ಅದು ಎಲ್ರಿಗೂ ಎಂಗಂದ್ರಂಗೆ ಸಿಗೋದಲ್ಲ. ಸಾಧಿಸಿ ತಿಳಿದವರಿಗೆ ಸಿಗತೈತೆ ಅದರ ರಾಸ್ಯ."
     "ನೋಡಪ್ಪಾ ದಸರತ ಅಂತ ಒಬ್ಬ. ಅಂಗಂದ್ರೇನು? ಕರ್ಮೇಂದ್ರಿಯಗಳು ಐದು. ಜ್ಞಾನೇಂದ್ರಿಯಗಳು ಐದು. ಇವು ಅತ್ತು ಸೇರಿಸಿ ರಥ ಮಾಡಿಕೊಂಡು ಹತ್ತಿ ಸವಾರಿ ಮಾಡಿದ ಅವನು, ಅಂದ್ರೆ ಇಂದ್ರಿಯಗಳನ್ನು ಸ್ವಾಧೀನ ಮಾಡಿಕೊಂಡವನು ಯಾರೇ ಆಗಿರಲಿ ಅವನು ದಸರತ. ಅಂತವನು ಯಾವಾಗಲೂ ಸಂತೋಸಾನೇ ಪಡೀತಾನೆ. ಆ ಸಂತೋಸಾನೇ ರಾಮ. ಅವನೇ ಆನಂದ, ರಾಮ ಅಂದ್ರೆ ಆನಂದ. ಅವನ ತಮ್ಮಗಳು ಲಕ್ಷ್ಮಣ, ಭರತ, ಸತೃಗ್ನ, ಆನಂದದ ಬೆಳಕು ಮನಾನಂದ, ಆತ್ಮಾನಂದ, ಬ್ರಹ್ಮಾನಂದ."
     "ಸೀತಮ್ಮನಿಗೆ ತಂದೆ ತಾಯಿ ಇಲ್ಲ. ಅಂಗೇ ತಾನಾಗೇ ಬಂದವಳು ಸೀತೆ. ಜ್ಞಾನಾಂಬಿಕೆ. ಜನಕ ರಾಜ ಯಗ್ನ ಮಾಡಿದ. ಸಾಧನೆ ಮಾಡಿದ. ಜ್ಞಾನಾಂಬಿಕೆ ಸಿಕ್ಕಿದಳು. ಜನಕರಾಜನು ರುಸೀನೂ ಆಗಿದ್ದ. ರಾಮ ಧನಸ್ಸು ಮುರಿದ. ಧನಸ್ಸು ಅಂದ್ರೆ ಶರೀರ. ಇದನ್ನು ಮುರಿದ್ರು, ಅಂದ್ರೆ ಸ್ಥೂಲ ಶರೀರ ದಾಟಿ ವೋಗಿ ಸೀತೆಯನ್ನು ಪಡೆದ. ಅಲ್ಲಿಗೆ ರಾಮ ಅಂದ್ರೆ ಆನಂದ, ಸೀತೆ ಅಂದ್ರೆ ಜ್ಞಾನ. ಎರಡೂ ಬಂದದ್ದು ಅಂದ್ರೆ ಜ್ಞಾನಾನಂದ ಅಂಬೋದು ಮೂಡಿಬಂತು."
     "ಇನ್ನು ಮಾಯಾಮೃಗ. ಅದು ಜಿಂಕೆ. ಬಂಗಾರದ ಜಿಂಕೆ. ಅಂದಮೇಲೆ ಇದ್ದ ಕಡೆ ಇರೋದಲ್ಲ. ಅದನ್ನ ಇಡ್ಕೊಂಡು ಬಾ ಅಂದ್ಲು ಸೀತಮ್ಮ. ರಾಮ ಕೊಂದೇಬಿಟ್ಟ. ಅಂದ್ರೆ ಈ ಜಗತ್ತಿನ ಐಶ್ವರ್ಯದ ಆಸೆ ಮಾಯೆ. ಅದನ್ನು ಕೊಂದೇಬಿಟ್ಟ. ಅಂದ್ರೆ ಜ್ಞಾನಾನಂದ ಇದ್ದಲ್ಲಿ ಮಾಯೆ ಸತ್ತುಹೋಗುತ್ತೆ ಅಂಬೋ ಮಾತು ಅದು."
     "ರಾವಣ ಅತ್ತು ತಲೆ. ಅದೇ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು. ದಸರತ ಅವನ್ನೇ ರತ ಊಡಿಕೊಂಡು ಸವಾರಿ ಮಾಡ್ದ. ಅಂದ್ರೆ ಅವನ್ನ ತಾನೇಳ್ದಂಗೆ ಕೇಳಾಂಗೆ ಸ್ವಾಧೀನ ಮಾಡಿಕೊಂಡಿದ್ದ. ಅದೇ ರಾವಣಾಸುರ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳನ್ನು ತಲೆ ತುಂಬ ತುಂಬಿಕೊಂಡು ಅವನ್ನೇ ಒತ್ಕೊಂಡು ಓಡಾಡ್ತಿದ್ದ. ಅವು ಅವನ್ತಲೆ ಮೇಲೆ ಕುಂತು ಅವನ್ನ ಆಟ ಆಡಿಸ್ತಿದ್ವು. ಅಂದ್ರೆ ಇಂದ್ರಿಯಗಳಿಗೆ ದಾಸನಾಗಿದ್ದ. ಇವನಿಗೆ ಇಪ್ಪತ್ತು ಕೈಗಳು. ನಿಜ-ನಿಜ ಇಪ್ಪತ್ತು ಕೈಗಳು, ಸಪ್ತಧಾತುಗಳು, ಸಪ್ತ ವ್ಯಸನಗಳು, ಅರಿಷಡ್ವರ್ಗಗಳು. ಅಲ್ಲಿಗೆ ಇಪ್ಪತ್ತು ಕೈಗಳು ಆದವಲ್ಲಾ, ಅವುಗಳದೇ ಕಾರುಬಾರು. (ನಗುತ್ತಾ) ಎಂಗೈತೆ ನೋಡು."
     "ಅವನು ಸೀತಮ್ಮನನ್ನು ಬಯಸಿದ. ಅಂದರೆ ಜ್ಞಾನಾಂಬಿಕೆಯನ್ನು ಅಲ್ಲ. ಸಪ್ತ ಧಾತುಗಳು, ಸಪ್ತ ವ್ಯಸನಗಳು, ಅರಿಷಡ್ವರ್ಗಗಳನ್ನು ಒತ್ಕೊಂಡು ಮೆರೆಯೋರಿಗೆ ಜ್ಞಾನಾಂಬಿಕೆ ವಶವಾದಾಳೆ? ಅವಳು ಅಶೋಕವನದಾಗಿದ್ಲು. ಅವಳಿಗೆ ಶೋಕ ಎಲ್ಲೀದು?" ನಕ್ಕರು.
     "ನೋಡು ಸುಗ್ರೀವ ಅಂದ್ರೆ ಒಳ್ಳೆ ತಲೆ, ಅಂದ್ರೆ ಒಳ್ಳೆ ಯೋಚನೆಗಳು. ಜಾಂಬುವಂತ, ಅವನು ಬ್ರಮ್ಮನ ಮಗ, ಅಂದ್ರೆ ಬ್ರಮ್ಮಾನಂದ. ಇನ್ನು ಆಂಜನೇಯ ಒಳ್ಳೇ ದೃಷ್ಟಿ ಇರೋ ಇವರೆಲ್ಲಾ ಆನಂದ ಅಂಬೋ ರಾಮರ ಗುಂಪು. ರಾವಣ ಅಂಬೋ ಅಹಂಕಾರ, ಮಮಕಾರಗಳನ್ನು ಕತ್ತರಿಸಿ ಆಕಿಬಿಟ್ರೆ ಆಗ ಒಳ್ಳೆ ಮನಸ್ಸು, ಒಳ್ಳೇ ದೃಷ್ಟಿ ಬ್ರಮ್ಮಗ್ನಾನ, ಎಲ್ಲಾ ಒಂದಾದವು. ಅಂದ್ರೆ ಗ್ನಾನಾನಂದ ಸಿಕ್ಕಿತು."
     "ನೋಡಪ್ಪ ಸಾಧಿಸಿದರೆ (ತಮ್ಮ ಶರೀರವನ್ನು ತೋರಿಸಿ) ಎಲ್ಲಾ ಇದ್ರಾಗೆ ಐತೆ ರಾಮಾಯಣ. ಇದೇ ಅದರ ಸಕೀಲು."
     "ಅವನ್ನೋಡು, ವಾಲ್ಮೀಕಿ ರುಸಿ, ಅವನೇ ಅಂತೆ ಈ ಸಕೀಲೆಲ್ಲಾ ಇಂಗಡಿಸಿ ಕತೆ ಮಾಡಿ ಬರೆದೋನು. ಅವನಿನ್ಯಾರು? ವಾಲ್ಮೀಕಿ ಅಂದ್ರೆ ವುತ್ತ ಅಂತಾರೆ. ಈ ಶರೀರವೇ ವುತ್ತ. ಇದ್ರಾಗೆ ತಯಾರಾದ ಗ್ನಾನಾನಂದ ಪಡೆದೋನೆ ರುಸಿ. ಅವನೇ ವಾಲ್ಮೀಕಿ ರುಸಿ. ಅವನಿಗಲ್ದೆ ಇನ್ಯಾರಿಗೆ ಸಾಧ್ಯ ಆದಾತು ಈ ಒಳಗಿನ ಸಕೀಲೆಲ್ಲಾ ಸೇರಿಸಿ ಅನುಭವ ತಕ್ಕಂಡು ಅವನ್ನೇ ಇಂಗೆ ಕತೆ ಕಟ್ಟಿ ಏಳಾಕೆ? ಆನ ಪುರಾಣ ಓದಿ ವರಗೇ ತಿಳ್ಕಂಡು ವರಗೇ ಅದಕ್ಕೆ ತಕ್ಕಂತ ವರಗಿನ ಆಟ ಆಡ್ತಾರೆ."
*************** 

8 ಕಾಮೆಂಟ್‌ಗಳು:

  1. ಅವಧೂತ ಮುಕುಂದೂರು ಸ್ವಾಮಿಗಳ ಬಗ್ಗೆ ತುಂಬಾ ಕೇಳಿದ್ದೆ ಈಗ ತುಸು ಪರಿಚಯವಾದಂತೆ ಆಯಿತು. ದಿ.ಬೆಳಗೆರೆ ಕೃಷ್ಣಶಾಸ್ತ್ರಿಗಳು ತೀರಿಕೊಂಡ ದಿನ ನನ್ನ ಹಿರಿಯ ಮಿತ್ರರೊಬ್ಬರು ಅವರು ಸ್ವಾಮಿಗಳ ಬಗ್ಗೆ ಬರೆದಿದ್ದಾರೆ ಎಂದು ಉಲ್ಲೇಖಿಸಿದ್ದರು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಮಸ್ತೆ ಬದರೀನಾಥರೇ. ಅವರ ಕುರಿತ ಪುಸ್ತಕವನ್ನು ತಪ್ಪದೇ ಓದಲು ಶಿಫಾರಸು ಮಾಡುತ್ತಿದ್ದೇನೆ. ಅನೇಕ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ.

      ಅಳಿಸಿ
  2. ಅವಧೂತ ಮುಕುಂದೂರು ಸ್ವಾಮಿಗಳಿಗೆ ಶರಣು.... ಅವರ್ 'ರಾಮಣ್ಯ' ಸರಳ - ವಿರಳ ಹಾಗು ಪಾತ್ರ ಪರಿಚಯ ಅನೇಕ ವಿಚಾರವ೦ತಿಕೆಯನ್ನು ಸೂಚಿಸುತ್ತಿದೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಪ್ರತಿಕ್ರಿಯೆಗೆ ವಂದನೆಗಳು 'ಬಿಳಿಮುಗಿಲು'ರವರೇ. ನೋಡುವ ದೃಷ್ಟಿಕೋನ ಹೇಗಿರಬೇಕು ಎಂಬುದಕ್ಕೆ ಈ ಪ್ರಸಂಗ ಉದಾಹರಣೆಯಾಗಿದೆ.

      ಅಳಿಸಿ
  3. ಈ ಪುಸ್ತಕವನ್ನು ೩-೪ ಬಾರಿ ಓದಿದ್ದೇನೆ .. ಮುಕುಂದೂರು ಸ್ವಾಮಿಗಳ ಒಂದೊಂದು ಮಾತುಗಳು ಕೂಡ ಎಷ್ಟು ಒಳ ಅರ್ಥ ಅಡಗಿಸಿಕೊಂಡಿದೆ. ನನ್ನ ನೆಚ್ಚಿನ ಪುಸ್ತಕಗಳಲ್ಲಿ 'ಯೆಗ್ದಾಗೆಲ್ಲ ಐತೆ " ಕೂಡ ಒಂದು .. ಮುಕುಂದೂರು ಸ್ವಾಮಿಗಳು ಮತ್ತು ಕೃಷ್ಣ ಶಾಸ್ತ್ರಿಗಳು ಓಡಾಡಿರುವ ದೇವನೂರು,ಹೇಮಗಿರಿ , ಅವರು ತಂಗಿದ್ದ ಬೋಳನಹಳ್ಳಿ ಗಳಲ್ಲಿ ನಾನು ನಡೆದಾದಿರುವುದು ನನ್ನ ಪುಣ್ಯವೇ ಸರಿ ಅನಿಸುತ್ತದೆ ..

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದ ಗಿರೀಶರೇ, ಹಾಸನ ಜಿಲ್ಲೆಯ ಜಾವಗಲ್ ಸಮೀಪದ ಮುಕುಂದೂರು ಮಠಕ್ಕೂ ಒಮ್ಮೆ ಭೇಟಿ ಕೊಡಿ.ಅಲ್ಲಿ ಅವರ ಗದ್ದುಗೆ ಇದೆ.

      ಅಳಿಸಿ
  4. ಕಣ್ಣಿಗೆ ಕಂಡಿದ್ದು ಒಂದು ಕಿವಿಗೆ ಕೇಳಿದ್ದು ಒಂದು ಹೃದಯಕ್ಕೆ ತಟ್ಟುವುದು ಒಂದು. ಒಂದು ಮಹಾಕಾವ್ಯವನ್ನು ಎಷ್ಟು ಸಲೀಸಾಗಿ ಎಲ್ಲರಿಗೂ ಅರ್ಥವಾಗುವ ಹಾಗೆ ಹೇಳುವುದಷ್ಟೇ ಅಲ್ಲ ಅದರ ನೀತಿಯನ್ನು ಸಾರಾಂಶವನ್ನು ಹೇಗೆ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎನ್ನುವ ತತ್ವನ್ನು ಸುಂದರವಾಗಿ ವಿವರಿಸಿರುವ ಈ ಲೇಖನಕ್ಕೆ ನಮನಗಳು. ಹಾಗೆಯೇ ಪುಸ್ತಕದಲ್ಲಿ ಇರುವ ವಿಷಯವನ್ನು ಮಸ್ತಕಕ್ಕೆ ಸಲೀಸಾಗಿ ತಲುಪಿಸಬಹುದಾದ ಆ ಪುಸ್ತಕಕ್ಕೆ ಆ ಹಿರಿಯ ಚೇತನಗಳಿಗೆ ನಮನಗಳು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಶ್ರೀಕಾಂತ ಮಂಜುನಾಥರೇ, 'ಯೇಗ್ದಾಗೆಲ್ಲಾ ಐತೆ' ಪುಸ್ತಕ ಇಂತಹ ಅನೇಕ ಮನನೀಯ ವಿಚಾರಗಳನ್ನು ಒಳಗೊಂಡಿದ್ದು ಓದಬೇಕಾದ ಪುಸ್ತಕವಾಗಿದೆ. ಧನ್ಯವಾದಗಳು.

      ಅಳಿಸಿ