ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಜೂನ್ 5, 2013

ಪರಮೇಶಿ


    ಮಗ ದೂಕಿದ ರಭಸಕ್ಕೆ ಬೋರಣ್ಣ ಮುಖ ಅಡಿಯಾಗಿ ಬಿದ್ದ. ಮೂಗು ಒಡೆದು ರಕ್ತ ಚಿಮ್ಮಿತ್ತು. ಹೆಗಲಲ್ಲಿದ್ದ ಟವೆಲಿನಿಂದ ರಕ್ತ ಸುರಿಯದಂತೆ ಒತ್ತಿ ಹಿಡಿದುಕೊಂಡ ಬೋರಣ್ಣನನ್ನು ದುರುಗುಟ್ಟಿಕೊಂಡು ನೋಡಿದ ಪರಮೇಶಿ ಅಪ್ಪನ ಮುರುಕುಲು ಟ್ರಂಕು ಕೊಡವಿ ಅದರಲ್ಲಿದ್ದ ೨೦೦ ರೂಪಾಯಿ ಎತ್ತಿಕೊಂಡು ಹೊರಟ. ಪರಮೇಶಿಯ ಹೆಂಡತಿ ನಾಗಿಗೆ ಇದೆಲ್ಲಾ ಮಾಮೂಲು. ಅವಳು ಗೊಣಗಾಡಿಕೊಂಡು ಕಸ ಗುಡಿಸುವುದನ್ನು ಮುಂದುವರೆಸಿದಳು. ಮನೆಯ ಕಟ್ಟೆಯ ಮೇಲೆ ತಲೆಯ ಮೇಲೆ ಕೈ ಹೊತ್ತು ಕುಳಿತ ಬೋರಣ್ಣ, 'ಎಂಥಾ ಮಗ ಹಿಂಗಾಗ್ಬುಟ್ನಲ್ಲಾ' ಅಂತ ಕೊರಗುತ್ತಿದ್ದ. ಪರಮೇಶಿ ಮೊದಲು ಹೀಗಿರಲಿಲ್ಲ. ಅಪ್ಪನ ಜೊತೆ ಜೊತೆಗೆ ಇದ್ದ ಒಂದೂವರೆ ಎಕರೆ ಹೊಲದಲ್ಲಿ ಕಷ್ಟಪಟ್ಟು ಗೇಮೆ ಮಾಡುತ್ತಿದ್ದ. ಬರುವ ಆದಾಯ ಹೊಟ್ಟೆ ಬಟ್ಟೆಗೆ ಸಾಕಾಗುತ್ತಿತ್ತು. ಗೆಳೆಯರ ಸಾವಾಸದಿಂದ ಕುಡಿಯುವ ಚಟಕ್ಕೆ ಬಿದ್ದ ಮೇಲೆ ಪರಮೇಶಿಗೆ ಹಣ ಸಾಲದಾಗುತ್ತಿತ್ತು. ಅಪ್ಪನಿಗೆ ಬರುತ್ತಿದ್ದ ಸಂಧ್ಯಾ ಸುರಕ್ಷದ ಪಿಂಚಣಿ ಹಣದ ಮೇಲೂ ಅವನ ಕಣ್ಣು ಬೀಳುತ್ತಿತ್ತು. ಈಗ ಆಗಿದ್ದೂ ಅದೇ. 
     ಪರಮೇಶಿಯ ಇಸ್ಪೀಟು ಗೆಳೆಯರು ಕೊಟ್ಟಿದ್ದ ಸಲಹೆ ಅವನಿಗೆ ಚೆನ್ನಾಗಿ ಕಂಡಿತ್ತು. ಅಪ್ಪನಿಗೆ ೬೦ ವರ್ಷ ಆಗಿರದಿದ್ದರೂ ಸರ್ಕಾರೀ ಡಾಕ್ಟರರಿಗೆ ಲಂಚ ಕೊಟ್ಟು ೬೫ ವರ್ಷ ಅಂತ ಸರ್ಟಿಫಿಕೇಟು ಮಾಡಿಸಿದ. ಜಮೀನು ಇದ್ದರೆ ಪಿಂಚಣಿ ಬರಲ್ಲ ಅಂತ ವಿಲೇಜ್ ಅಕೌಂಟೆಂಟ್ ಹೇಳುತ್ತಿದ್ದುದನ್ನು ಕೇಳಿದ್ದ ಅವನು ಅಪ್ಪನನ್ನು ಪುಸಲಾಯಿಸಿ, ಅವನಿಗೆ ಇಷ್ಟವಿಲ್ಲದಿದ್ದರೂ ಪಿಂಚಣಿ ಆಸೆ ತೋರಿಸಿ ಜಮೀನನ್ನು ತನ್ನ ಹೆಸರಿಗೆ ಬರೆಸಿಕೊಂಡ. ಮಕ್ಕಳು ತನ್ನನ್ನು ನೋಡಿಕೊಳ್ಳುತ್ತಿಲ್ಲವೆಂದು ಅಪ್ಪನಿಂದ ಅಫಿಡವಿಟ್ಟು ಮಾಡಿಸಿದ. ಅಪ್ಪನ ಕೈಯಲ್ಲಿದ್ದ ಉಂಗುರ ಮತ್ತು ಕೊರಳಲ್ಲಿದ್ದ ಒಂದೆಳೆ ಬಂಗಾರದ ಸರ ಲಂಚಕ್ಕಾಗಿ ಖರ್ಚಾದರೂ ಪಿಂಚಣಿ ಆದೇಶ ಬಂದಾಗ ಬೋರಣ್ಣ ಖುಷಿ ಪಟ್ಟಿದ್ದ. ಹೇಗೋ ಜೀವನಕ್ಕೆ ಹಗುರವಾಯ್ತು ಅಂದುಕೊಂಡಿದ್ದ. ಆ ಹಣವನ್ನೂ ಪರಮೇಶಿ ಈರೀತಿ ಕಿತ್ತುಕೊಂಡು ಹೋಗತೊಡಗಿದಾಗ ಅವನಿಗೆ ಕೊರಗುವುದೊಂದೇ ಉಳಿದಿದ್ದ ದಾರಿಯಾಗಿತ್ತು.
     ಹಲವು ದಿನಗಳ ನಂತರ ಪರಮೇಶಿಗೆ ಇನ್ನೊಂದು ಐಡಿಯಾ ಹೊಳೆಯಿತು. ಹೆಂಡತಿಯ ಊರು ದುಮ್ಮೇನಹಳ್ಳಿಯ ವಿಳಾಸದಲ್ಲಿ ಅಪ್ಪನಿಗೆ 'ರುದ್ದಾಪಿ' (ವೃದ್ಧಾಪ್ಯ ವೇತನ) ಮಾಡಿಸಲು ಆರು ತಿಂಗಳು ಅಲೆದಾಡಿದ. ಅಂತೂ ಅದೂ ಸಿಕ್ಕಿತು. ಆ ಹಳ್ಳಿಯ ಹತ್ತಿರದ ಬ್ಯಾಂಕಿನಲ್ಲಿ ಅಕೌಂಟು ತೆಗೆದು ಹಣ ಅಲ್ಲೇ ಜಮಾ ಆಗುವಂತೆ ಆಯಿತು. ಅಪ್ಪನೊಡನೆ ಆದ ಒಪ್ಪಂದದಂತೆ ಆ ಹಣ ಪರಮೇಶಿಯ ಪಾಲಾಗುತ್ತಿತ್ತು. ಕುಡಿತ, ಇಸ್ಪೀಟಿನ ಚಟಕ್ಕೆ ಬಿದ್ದ ಅವನು ಮಾಡಿದ ಸಾಲಕ್ಕೆ ಪಿತ್ರಾರ್ಜಿತವಾಗಿದ್ದ ಜಮೀನು ಸಾಲಗಾರರ ಸ್ವತ್ತಾಗಲು ತಡವಾಗಲಿಲ್ಲ. ನಾಗಿ ಕೂಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಮನೆಯ ಕಡೆ ಯೋಚನೆ ಮಾಡುವುದನ್ನೇ ಪರಮೇಶಿ ಬಿಟ್ಟಿದ್ದ. ಹಗಲಿನಲ್ಲಿ ಗೆಳೆಯರೊಡನೆ ಪಾಳು ಮನೆಯ ಜಗಲಿಯಲ್ಲಿ ಇಸ್ಪೀಟಾಟ, ಸಂಜೆ ಹೊತ್ತು ಕುಡಿಯುವುದಕ್ಕೆ ಅಂದಿನ ಖರ್ಚು ಹೇಗಾದರೂ ನಿಭಾಯಿಸಿದರೆ ಅವನಿಗೆ ತೃಪ್ತಿಯಾಗುತ್ತಿತ್ತು. ಎಡವಟ್ಟಾದಾಗ ನಾಗಿಯ ಹತ್ತಿರಾನೋ, ಅಪ್ಪನ ಹತ್ತಿರಾನೋ ಕುಡಿಯುವುದಕ್ಕೆ ಹಣ ಕಿತ್ತುಕೊಳ್ಳುತ್ತಿದ್ದ. ಕೊಡದಿದ್ದರೆ ನಾಲ್ಕು ಬಾರಿಸುತ್ತಲೂ ಇದ್ದ. ಇನ್ನು ಮುಂದೆ ಅಗ್ಗದ ದರದಲ್ಲಿ ಹೆಂಡ ಕೊಡ್ತಾರಂತೆ, ರೂಪಾಯಿಗೆ ಒಂದು ಕೆಜಿ ಅಕ್ಕಿಯಂತೆ, ೩೦ ಕೆಜಿ ಕೊಡ್ತಾರಂತೆ ಅಂತ ಸುದ್ದಿ ಕೇಳಿದ ದಿನ ಪರಮೇಶಿ ಗೆಳೆಯರೊಡನೆ ಖುಷಿಗೆ ಹೆಚ್ಚಾಗೇ ಕುಡಿದು ಸಂಭ್ರಮ ಪಟ್ಟಿದ್ದ. ಹೇಗೂ ಅಪ್ಪನ ಹೆಸರಿನಲ್ಲಿ ಒಂದು ಕಾರ್ಡು ಮತ್ತು ತನ್ನ ಹೆಸರಿನಲ್ಲಿ ಒಂದು ಕಾರ್ಡು ಇರುವುದರಿಂದ ೬೦ ಕೆಜಿ ಅಕ್ಕಿ ಸಿಗುತ್ತೆ. ೧೫ ಕೆಜಿ ಮನೆಗೆ ಸಾಕಾಗುತ್ತೆ, ಉಳಿದ ೪೫ ಕೆಜಿ ಅಕ್ಕಿಯನ್ನು ಮಾರಿದರೆ ಎಷ್ಟು ಸಿಗಬಹುದು ಎಂದು ಅವನ ಮನಸ್ಸು ಲೆಕ್ಕ ಹಾಕುತ್ತಿತ್ತು.
     ಕೆಲಸ ಮಾಡಲು ಒಗ್ಗದ ಸೋಂಬೇರಿ ಪರಮೇಶಿ ಗೆಳೆಯರ ಬಳಗ ಸಾಯಂಕಾಲದ ಖರ್ಚಿಗೆ ಹೇಗಾದರೂ ದುಡ್ಡು ಹೊಂದಿಸೋಕೆ ಮನೆಹಾಳು ಐಡಿಯಾಗಳನ್ನೇ ಮಾಡುತ್ತಿತ್ತು. ಅದರಿಂದ ಹಾಗೂ ಹೀಗೂ ಕಾಸು ಹೊಂದಾಣಿಕೆಯಾಗುತ್ತಿತ್ತು. ಊರಿನಲ್ಲಿ ಸಣ್ಣ ಪುಟ್ಟ ಕಳ್ಳತನ ಆದರೂ ಜನ ಇವರನ್ನೇ ಅನುಮಾನಿಸುತ್ತಿದ್ದರು. ದಪ್ಪ ಚರ್ಮದ ಇವರಿಗೆ ಅದರಿಂದ ಏನೂ ಅನ್ನಿಸುತ್ತಿರಲಿಲ್ಲ. ದಿನಗಳು ಹೀಗೇ ಸಾಗುತ್ತಿದ್ದವು. ಒಮ್ಮೆ ಇವರು ಮಾಮೂಲು ಕಟ್ಟೆ ಮೇಲೆ ಬೀಡಿ ಸೇದುತ್ತಾ ಕುಳಿತಿದ್ದಾಗ ತಿಮ್ಮೇಗೌಡ ತನ್ನ ಹೆಂಡತಿಯೊಂದಿಗೆ ಬ್ಯಾಗು ಹಿಡಿದು ಪೇಟೆ ಬಸ್ಸು ಹತ್ತಿದ್ದನ್ನು ಕಂಡರು. ಇವರುಗಳು ಕಣ್ಣಿನಲ್ಲೇ ಮಾತನಾಡಿಕೊಂಡರು. ಸದ್ದಿಲ್ಲದೆ ತಿಮ್ಮೇಗೌಡನ ಮನೆಯ ಕಡೆಗೆ ಹೊರಟರು. ಹಳ್ಳಿಯ ಹೆಚ್ಚಿನವರು ಜಮೀನು, ಕೂಲಿ ಕೆಲಸಗಳಿಗೆ ಹೋಗಿ ಮುದುಕರು, ಮೋಟರು ಮಾತ್ರ ಕೆಮ್ಮುತ್ತಾ, ನರಳುತ್ತಾ ಮನೆಗಳಲ್ಲಿ ಉಳಿದಿದ್ದ ಹೊತ್ತು ಅದು. ಹೊಂಚು ಹಾಕಿ ತಿಮ್ಮೇಗೌಡನ ಮನೆಗೆ ಹೋದ ಅವರು ತಿಮ್ಮೇಗೌಡನ ಮಗಳು ಇವರು ಯಾಕೆ ಬಂದರು ಎಂದು ಅಂದುಕೊಳ್ಳುವ ಹೊತ್ತಿಗೆ ಇವರ ಹಿಡಿತಕ್ಕೆ ಸಿಕ್ಕಿಬಿದ್ದಿದ್ದಳು. ಬಾಯಿ ಮುಚ್ಚಿದ್ದರಿಂದ ಕೊಸರಾಡಲು ಮಾತ್ರ ಅವಳಿಗೆ ಸಾಧ್ಯವಾಗಿದ್ದುದು. ಕೆಲವೇ ನಿಮಿಷಗಳಲ್ಲಿ ಎಲ್ಲಾ ಮುಗಿಯಿತು. ಬಾಯಿಯೊಡನೆ ಮೂಗೂ ಮುಚ್ಚಿದ್ದರಿಂದ ಅವಳ ಆಯಸ್ಸೂ ಮುಗಿದಿತ್ತು. ಅವಳು ಸತ್ತಿದ್ದನ್ನು ಕಂಡು ಗಾಬರಿಯಾದ ಗೆಳೆಯರು ಸ್ವಲ್ಪ ಹೊತ್ತಿನಲ್ಲೇ ಸಾವರಿಸಿಕೊಂಡು ಅವಳನ್ನು ಅಡಿಗೆ ಕೋಣೆಗೆ ಎಳೆದುಹಾಕಿ, ಮೈಮೇಲೆ ಸೀಮೆ ಎಣ್ಣೆ ಸುರಿದು, ಗ್ಯಾಸ್ ಸ್ಟೌವಿನ ಗ್ಯಾಸ್ ಹೊರಬಿಟ್ಟು ಅಡಿಗೆಮನೆಯ ಬಾಗಿಲು, ಕಿಟಕಿಗಳನ್ನು ಹಾಕಿ ಯಾರಿಗೂ ಕಾಣದಂತೆ ಒಬ್ಬೊಬ್ಬರಾಗಿ ಹೊರಬಂದರು. ಬಂದವರೇ ಅರ್ಧ ಘಂಟೆಯ ನಂತರದಲ್ಲಿ ಮನೆಯ ಹಿಂಭಾಗದಿಂದ ಬೆಂಕಿ ಕಡ್ಡಿ ಗೀರಿ ಅಡಿಗೆ ಮನೆಯ ಕಿಟಕಿಯ ಒಳಗೆ ಹಾಕಲು ಪರಮೇಶಿಯನ್ನು ಪುಸಲಾಯಿಸಿದರು. ಪರಮೇಶಿ ಅಡಿಗೆ ಮನೆ ಕಿಟಕಿ ತೆರೆದು ಕಡ್ಡಿ ಗೀರುತ್ತಿದ್ದಂತೆಯೇ ಭುಗಿಲೆದ್ದ ಜ್ವಾಲೆ ಅವನ ಮುಖದ ಮೇಲೇ ಅಪ್ಪಳಿಸಿತ್ತು. ಗ್ಯಾಸ್ ಸಿಲಿಂಡರ್ ಸಿಡಿದು ೧೭ ವರ್ಷದ ರುಕ್ಮಿಣಿ ಮತ್ತು ಮನೆಯ ಹಿಂಭಾಗದಲ್ಲಿ ಹೋಗುತ್ತಿದ್ದ ಪರಮೇಶ ಎಂಬ ವ್ಯಕ್ತಿಯ ದುರ್ಮರಣ ಎಂದು ಮರುದಿನ ಪತ್ರಿಕೆಗಳಲ್ಲಿ ಸುದ್ದಿ ಬಂದಿತ್ತು. 

-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. ತಕ್ಕ ಶಾಸ್ತಿಯೇ ಆಯಿತು... ಉದ್ಯೋಗ ಕೊಡುವ ಬದಲು ಸರ್ಕಾರ ಹೀಗೆ ಸೋಂಬೇರಿಗಳನ್ನು ಪ್ರೋತ್ಸಾಹಿಸುವಂತಹ ಯೋಜನೆಗಳನ್ನೇ ತಂದರೆ ಬದಲಾಗಲು ಸಾಧ್ಯವೇ

    ಪ್ರತ್ಯುತ್ತರಅಳಿಸಿ