ಶನಿವಾರ, ಅಕ್ಟೋಬರ್ 20, 2018
ಮೂಢ ನಂಬಿಕೆ
ಹಲವು ವರ್ಷಗಳ ಹಿಂದಿನ ಸಂಗತಿ. ಹಳೇಬೀಡಿನ ತುಂಬು ಕುಟುಂಬದ ಪ್ರಧಾನ ವ್ಯಕ್ತಿಯಾದ ನಮ್ಮ ತಾಯಿ ಲಕ್ಷ್ಮಮ್ಮನವರು ಹಿತ್ತಲಿನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಗೆಯೊಂದು ಅವರ ತಲೆಯ ಮೇಲೆ ಕುಳಿತುಹೋಗಿತ್ತು. ತಾಯಿಯವರಿಗೆ ಗಾಬರಿಯಾಗಿ ಒಳಕ್ಕೆ ಓಡಿ ಬಂದವರು ಸ್ವಲ್ಪ ಹೊತ್ತು ಕುಳಿತು ಸುಧಾರಿಸಿಕೊಂಡರು. ನಮ್ಮ ಊರಿನ ಪ್ರಮುಖ ಪುರೋಹಿತರು ಮತ್ತು ಜ್ಯೋತಿಷಿಗಳ ಬಳಿಗೆ ಹೋಗಿ ವಿಚಾರಿಸಿದರೆ 'ಕಾಗೆ ತಲೆಯ ಮೇಲೆ ಕುಳಿತರೆ ಮರಣದ ಸೂಚನೆ' ಎಂದುಬಿಟ್ಟರು. ಮೊದಲೇ ಆತಂಕಿತರಾಗಿದ್ದ ನಮ್ಮ ತಾಯಿಗೆ ಜ್ವರ ಬಂದಿತು. ಇದಾಗಿ ಏಳೆಂಟು ದಿನಗಳಾಗಿರಬಹುದು. ಹಲ್ಲಿಯೊಂದು ಸಹ ಅವರ ತಲೆಯ ಮೇಲೆ ಬಿದ್ದುಬಿಟ್ಟಿತು. ಮೊದಲೇ ಹೆದರಿದ್ದ ಅವರು ಇನ್ನೂ ಹೆದರಿಬಿಟ್ಟರು. ನಮ್ಮ ಜೋಯಿಸರು ಪಂಚಾಂಗ ಹರಡಿಕೊಂಡು ತಲೆ ಆಡಿಸಿ ಹೇಳಿದರು: "ಇನ್ನು ಆರು ತಿಂಗಳಲ್ಲಿ ಮರಣ". ನಮ್ಮ ತಾಯಿ ಕುಸಿದುಹೋಗಿ ಹಾಸಿಗೆ ಹಿಡಿದುಬಿಟ್ಟರು. ಕೆಲವು ದಿನಗಳಲ್ಲಿ ಹಾಸಿಗೆ ಬಿಟ್ಟು ಏಳಲೂ ಆಗದಷ್ಟು ನಿಶ್ಶಕ್ತಿ ಅವರನ್ನು ಆವರಿಸಿತು. ಅವರಿಗೆ ತಾವು ಸಾಯುವುದು ಖಂಡಿತ ಅನ್ನಿಸಿಬಿಟ್ಟಿತ್ತು. ನಾನು ಬೇಲೂರಿನ ನನ್ನ ಸ್ನೇಹಿತನೊಬ್ಬನಿಗೆ ವಿಷಯ ತಿಳಿಸಿ ಹೇಗೆಲ್ಲಾ ಧೈರ್ಯ ಹೇಳಬೇಕೆಂದು ಹೇಳಿಕೊಟ್ಟು ಮನೆಗೆ ಕರೆದುಕೊಂಡು ಬಂದೆ. ಅವನೂ ಕಚ್ಚೆಪಂಚೆ, ಸಿಲ್ಕ್ ಜುಬ್ಬಾ ಧರಿಸಿ ಢಾಳಾಗಿ ವಿಭೂತಿ ಪಟ್ಟೆ, ಕುಂಕುಮ ಹಚ್ಚಿಕೊಂಡು ಬಂದಿದ್ದ. ಅಮ್ಮನಿಗೆ, "ಇವರು ಪ್ರಸಿದ್ಧ ಜ್ಯೋತಿಷಿ. ನಾಲ್ಕು ವರ್ಷ ಕೇರಳದಲ್ಲಿ ಅಧ್ಯಯನ ಮಾಡಿದ್ದಾರೆ. ಇವರನ್ನೂ ಭವಿಷ್ಯ ಕೇಳೋಣ ಅಂತ ಕರಕೊಂಡು ಬಂದಿದೀನಿ" ಎಂದು ಹೇಳಿ ನನ್ನ ಸ್ನೇಹಿತನಿಗೆ ಮುಂದುವರೆಸುವಂತೆ ಸೂಚನೆ ಕೊಟ್ಟೆ. ಆಗಿನ ಸಂಭಾಷಣೆ:
ಸ್ನೇಹಿತ: ಅಮ್ಮಾ, ಕಾಗೆ ತಲೆಯ ಮೇಲೆ ಕುಳಿತದ್ದು ಎಂದು? ಎಷ್ಟು ಹೊತ್ತಿಗೆ?
ಅಮ್ಮ: ಶನಿವಾರ, ಬೆಳಿಗ್ಗೆ ೮ ಗಂಟೆ ಇರಬಹುದು.
ಸ್ನೇಹಿತ: (ಕಣ್ಣುಮುಚ್ಚಿ ಏನೋ ಮಣಮಣಿಸಿ, ನಂತರ ಕವಡೆಗಳನ್ನು ಹಾಕಿ ಎಣಿಸಿ, ಗುಣಿಸಿದಂತೆ ಮಾಡಿ) ಶನಿವಾರ. ಹೂಂ. ಶನಿದೇವರ ವಾರ. ಶನಿಯ ವಾಹನ ಕಾಕರಾಜ ನಿಮ್ಮ ತಲೆಯ ಮೇಲೆ ಕುಳಿತು ಆಶೀರ್ವಾದ ಮಾಡಿದ್ದಾನೆ. ನಿಮಗೆ ಅಭಯ ನೀಡಿದ್ದಾನೆ. ಸಂತೋಷಪಡಿ.
ಅಮ್ಮ: ಆದರೆ ತಲೆ ಮೇಲೆ ಹಲ್ಲಿ ಬಿದ್ದಿತ್ತಲ್ಲಾ?
ಸ್ನೇಹಿತ: ಆಮೇಲೆ ಏನಾಯಿತು?
ಅಮ್ಮ: ಪರಕೆಯಲ್ಲಿ ಹಲ್ಲಿಗೆ ಹೊಡೆದೆ. ಅದು ಸತ್ತುಹೋಯಿತು. ಹೊರಗೆ ಹಾಕಿದೆ.
ಸ್ನೇಹಿತ: (ಜೋಳಿಗೆಯ ಚೀಲದಿಂದ ಪಂಚಾಂಗ ತೆಗೆದು ನೋಡಿ ಏನೋ ಲೆಕ್ಕಾಚಾರ ಹಾಕಿದಂತೆ ಮಾಡಿ): ಸರಿಯಾಗಿಯೇ ಇದೆ. ಹಲ್ಲಿ ಬಿದ್ದರೆ ಮರಣ. ಹಲ್ಲಿ ತಲೆ ಮೇಲೆ ಬಿತ್ತು. ಸತ್ತು ಹೋಯಿತು. ನಿಮಗೆ ಶನಿದೇವನ ಆಶೀರ್ವಾದ ಗಟ್ಟಿಯಾಗಿದೆ. ನಿಮಗೆ ಪೂರ್ಣ ಆಯಸ್ಸಿದೆ. ನಿಮ್ಮ ತಲೆ ಮೇಲೆ ಕಲ್ಲು ಎತ್ತಿ ಹಾಕಿದರೂ ನಿಮಗೆ ಸಾವಿಲ್ಲ. ತಾಯಿ, ಪುಣ್ಯವಂತರು ನೀವು. ಹೋಗಿ ದೇವರಿಗೆ ದೀಪ ಹಚ್ಚಿ ನಮಸ್ಕಾರ ಮಾಡಿಬನ್ನಿ.
ನಂತರದಲ್ಲಿ ಖುಷಿಯಿಂದ ಹಾಸಿಗೆಯಿಂದ ಎದ್ದ ಅಮ್ಮ ಕೈಕಾಲು ತೊಳೆದುಕೊಂಡು ದೇವರ ಮುಂದೆ ದೀಪ ಹಚ್ಚಿದ್ದರು. ಗೆಲುವಾಗಿದ್ದರು. ನನ್ನಿಂದಲೇ ಐವತ್ತು ರೂಪಾಯಿ (ಆಗ ಆ ಹಣ ದೊಡ್ಡ ಮೊತ್ತವೇ ಆಗಿತ್ತು.) ದಕ್ಷಿಣೆ ಹಣವನ್ನು ತಾಂಬೂಲದೊಂದಿಗೆ ಅವನಿಗೆ ಕೊಡಿಸಿದ್ದರು. ಅವನನ್ನು ಬಸ್ಸು ಹತ್ತಿಸಿ ಬರಲು ಅವನೊಂದಿಗೆ ಹೋದಾಗ ಅವನು ಹೇಳಿದ್ದು: "ಈ ಸುಳ್ಳು ಜ್ಯೋತಿಷ್ಯ ಹೇಳಿದ್ದು ಎಷ್ಟು ಸರೀನೋ ಗೊತ್ತಿಲ್ಲ. ನಿನಗೋಸ್ಕರ ಬಂದೆ. ಬಂದದ್ದಕ್ಕೂ ಲಾಭ ಅಯಿತು ಬಿಡು". "ಜ್ಯೋತಿಷ್ಯ ಸುಳ್ಳೋ, ನಿಜಾನೋ ನನಗೆ ಮುಖ್ಯ ಅಲ್ಲ. ಅಮ್ಮ ಗೆಲುವಾದಳಲ್ಲ, ಅದು ಮುಖ್ಯ" ಎಂದು ನಾನು ಹೇಳುತ್ತಿದ್ದಾಗ ಬೇಲೂರು ಬಸ್ಸು ಬಂದಿತ್ತು. ಅವನನ್ನು ಕಳಿಸಿ ಮನೆಗೆ ಬಂದರೆ ಅಮ್ಮ ಅದಾಗಲೇ ಹಾಸಿಗೆ ಮಡಿಸಿಟ್ಟಾಗಿತ್ತು. ಕೆಲವೇ ದಿನಗಳಲ್ಲಿ ಮೊದಲಿನಂತೆ ಉತ್ಸಾಹ ಅವರಲ್ಲಿ ಮನೆ ಮಾಡಿತ್ತು. ಈ ಘಟನೆ ನಡೆದ ನಂತರದಲ್ಲೂ ಮುಂದಿನ ೨೫ ವರ್ಷಗಳವರೆಗೆ ನಮ್ಮಮ್ಮ ಬದುಕಿದ್ದರು.
-ಹೆಚ್.ಎಸ್. ಪುಟ್ಟರಾಜು, ಜಾವಗಲ್.
***
ಮಾಹಿತಿಗೆ: ಇದು ಡಿಸೆಂಬರ್, 2014ರ ಕವಿಕಿರಣ ಸಂಚಿಕೆಯಲ್ಲಿ ಪ್ರಕಟಿತ ಲೇಖನ. ಪುಟ್ಟರಾಜು ಹೇಳಿದ್ದ ವಿಚಾರವನ್ನು ಲೇಖನವಾಗಿಸಿ ಪ್ರಕಟಿಸಿದೆ.
ಪುಟ್ಟರಾಜು, ಹೋಗಿ ಬಾ!
ನಂಬುವುದು ಕಷ್ಟವಾಯಿತು. 'ಪುಟ್ಟರಾಜು ಹೋಗಿಬಿಟ್ಟ' ಎಂಬ ಸುದ್ದಿ ದೂರವಾಣಿ ಮೂಲಕ ತಿಳಿದಾಗ ಗರಬಡಿದುಬಿಟ್ಟಂತಾಯಿತು. ನನ್ನ ತಾಯಿಯ ತಮ್ಮ, ನನ್ನದೇ ವಯಸ್ಸಿನವನು ಕಣ್ಮರೆಯಾದ ಎಂದು ತಿಳಿದಾಗ ಆಘಾತವಾಗಿತ್ತು. ಆದರೆ, ಸತ್ಯ ಸತ್ಯವೇ. ಬಾಲ್ಯದ ಗೆಳೆತನದ ತಾಳಿಕೆ ಬಹಳ ದೀರ್ಘವಾಗಿರುತ್ತದೆ. ಆದರೆ ನನ್ನ ಮತ್ತು ಪುಟ್ಟರಾಜುವಿನದು ಅದಕ್ಕೂ ಮೀರಿದ ಹುಟ್ಟಿನಿಂದಲೂ ಬಂದ ಗೆಳೆತನ. ಹುಟ್ಟಿನಿಂದ ಬಂದ ಗೆಳೆತನಕ್ಕೆ ಎಂದೂ ಚ್ಯುತಿ ಬರಲೇ ಇಲ್ಲ. ಕೊನೆತನಕ ಮಧುರ ವಿಶ್ವಾಸ ಯಾವುದೇ ಚುಕ್ಕೆಯಿಲ್ಲದಂತೆ ಉಳಿದಿತ್ತು. ಒಂದು ಸಣ್ಣ ಸ್ವರೂಪದ ಮನಸ್ತಾಪವಾಗಲೀ, ಕಿತ್ತಾಟವಾಗಲೀ, ಜಗಳವಾಗಲೀ ಹುಡುಗಾಟಕ್ಕಾದರೂ, ಬಾಲ್ಯದ ಹುಡುಗಾಟದ ದಿನಗಳಲ್ಲೂ ಆಗಿರಲೇ ಇಲ್ಲ. ಇಬ್ಬರೂ ಹುಟ್ಟಿದ್ದು ಹಳೇಬೀಡಿನ ಮನೆಯಲ್ಲಿಯೇ! ಅವನು ಹುಟ್ಟಿದ ಕೆಲವು ತಿಂಗಳುಗಳಲ್ಲೇ ನಾನೂ ಈ ಭೂಮಿಗೆ ಬಂದಿದ್ದು. ಅಜ್ಜ ಪುಟ್ಟಯ್ಯನವರ ನೆನಪಿನಲ್ಲಿ ಅವನಿಗೆ ಪುಟ್ಟರಾಜು ಎಂದು ಹೆಸರಿಟ್ಟಿದ್ದರು. ನನಗೆ ನಾಗರಾಜ ಎಂಬ ಹೆಸರು ಬರಲು ಕಾರಣ ನನ್ನ ತಾಯಿಯ ಅಣ್ಣ ಶ್ರೀನಿವಾಸಮೂರ್ತಿಯವರು. "ಭಾವ, ಮಗುವಿಗೆ ನಾಗರಾಜ ಎಂದು ಹೆಸರಿಡಿ" ಎಂದು ಅವರು ನನ್ನ ತಂದೆಯವರಿಗೆ ಬರೆದಿದ್ದ ಪೋಸ್ಟ್ ಕಾರ್ಡನ್ನು ನನಗೆ ಓದಲು, ಬರೆಯಲು ಬಂದ ನಂತರದಲ್ಲಿ ನಾನೇ ಓದಿದ್ದೆ. ಹಿಂದೆಲ್ಲಾ ಬರುತ್ತಿದ್ದ ಪೋಸ್ಟ್ ಕಾರ್ಡುಗಳನ್ನು ತೊಲೆಗೋ, ಕಿಟಿಕಿಯ ಸರಳಿಗೋ ಕಟ್ಟುತ್ತಿದ್ದ ಒಂದು ಕೊಕ್ಕೆಯ ತಂತಿಗೆ ಚುಚ್ಚಿ ಇಡುತ್ತಿದ್ದರು. ಎಷ್ಟೋ ವರ್ಷಗಳವರೆಗೆ ಅವು ಇರುತ್ತಿದ್ದವು. ಹೀಗಾಗಿ ಆ ಕಾರ್ಡು ನನಗೆ ಓದಲು ಸಿಕ್ಕಿತ್ತು. ಪುಟ್ಟರಾಜುವನ್ನು ಪುಟ್ಟ ಎಂದು ಕರೆಯುತ್ತಿದ್ದರೆ, ನನ್ನನ್ನು ಈಗಲೂ ರಾಜು ಎಂತಲೇ ನನ್ನ ಬಂಧುಗಳು, ಹತ್ತಿರದವರು ಕರೆಯುತ್ತಾರೆ. ಪುಟ್ಟರಾಜು ಎಂಬ ಹೆಸರಿನಲ್ಲಿಯೇ ಪುಟ್ಟ ಮತ್ತು ರಾಜು ಎರಡೂ ಇವೆ. ಇದು ನಮ್ಮ ಅಕಳಂಕಿತ ಸ್ನೇಹದ ಗುರುತಾಗಿ ಭಾವಿಸುತ್ತೇನೆ.
ನನ್ನ ಮತ್ತು ಪುಟ್ಟರಾಜವಿನ ಸ್ನೇಹ ಸಂಬಂಧಗಳ ಬಗ್ಗೆ ಈ ಸಂದರ್ಭದಲ್ಲಿ ಹಂಚಿಕೊಂಡು ನೋವು ಮರೆಯಬಯಸುವ, ಸಮಾಧಾನ ಪಟ್ಟುಕೊಳ್ಳುವ ಸಣ್ಣ ಪ್ರಯತ್ನವಿದು. ಚಿಕ್ಕಂದಿನಲ್ಲಿ ಬೇಸಿಗೆಯ ರಜೆ ಬಂತೆಂದರೆ ನನ್ನ ವಾಸ ಹಳೇಬೀಡಿನ ಅಜ್ಜಿಯ ಮನೆಯಲ್ಲಿಯೇ. ಬೇಸಿಗೆ ರಜ ಏನು, ಯಾವುದೇ ರಜಾದಿನಗಳು, ಸಣ್ಣಪುಟ್ಟ ಸಮಾರಂಭಗಳು ಇತ್ಯಾದಿ ದಿನಗಳಲ್ಲೂ ಹಳೇಬೀಡಿನಲ್ಲೇ ಇರುತ್ತಿದ್ದುದು. ಹಳೇಬೀಡಿನ ಮನೆಯೋ ಮಕ್ಕಳ ಸಾಮ್ರಾಜ್ಯ. ಅಲ್ಲಿಯ ಮಕ್ಕಳು, ಊರಿನ ಮಕ್ಕಳು ಸೇರಿ ಬೀದಿಗಳಲ್ಲಿ ಆಡುತ್ತಿದ್ದರೆ ಅದೊಂದು ದೊಡ್ಡ ಸೈನ್ಯಗಳ ನಡುವಿನ ಕಾದಾಟವೇನೋ ಎಂಬಂತಿರುತ್ತಿತ್ತು. ಹಳೇಬೀಡಿನ ಬಹುತೇಕರು ನನ್ನ ಪರಿಚಿತರು, ವಿಶ್ವಾಸಿಗಳು ಆಗಿರುವುದು ಇದೇ ಕಾರಣಕ್ಕೆ. ಕಳ್ಳ-ಪೋಲಿಸ್ ಆಟ, ಚಿನ್ನಿ-ದಾಂಡು, ಬುಗುರಿ, ಲಗೋರಿ, ಗೋಲಿಯಾಟ, ಚೆಂಡಾಟ, ಇತ್ಯಾದಿ ಯಾವುದೇ ಆಟವಿರಲಿ, ಪುಟ್ಟರಾಜುವಿನ ಗುಂಪಿನಲ್ಲೇ ನಾನಿರಬೇಕು. ಆಟದ ನಡುವೆ ಇತರರೊಂದಿಗೆ ಜಗಳಗಳಾದಾಗ ಅವನು ನನ್ನ ಪಕ್ಷಪಾತಿಯಾಗಿರುತ್ತಿದ್ದ. ನನಗೆ ಅವನದೇ ಭೀಮಬಲವಾಗಿರುತ್ತಿತ್ತು. ಗೋಲಿ, ಚಿನ್ನಿ-ದಾಂಡು, ಬುಗುರಿ ಇತ್ಯಾದಿಗಳಲ್ಲಿ ಚುರುಕಾಗಿದ್ದ ನನ್ನನ್ನು ಸೇರಿಸಬಾರದೆಂದು ಹೇಳುತ್ತಿದ್ದ ಕೆಲವು ಹುಡುಗರ ಬಾಯಿ ಮುಚ್ಚಿಸುತ್ತಿದ್ದವನು ಪುಟ್ಟರಾಜು. ಗೋಲಿಯಾಟದಲ್ಲಿ ಎರಡು ದೊಡ್ಡ ಡಬ್ಬಿಗಳಷ್ಟು ಗೋಲಿಗಳನ್ನು ಗೆದ್ದು ಪುಟ್ಟರಾಜುವಿಗೆ ಕೊಟ್ಟಿದ್ದೆ. ಇಬ್ಬರೂ ಸೇರಿ ಬುಗುರಿಯಾಟದಲ್ಲಿ ಎಷ್ಟು ಜೊತೆಗಾರರ ಬುಗುರಿಗಳಿಗೆ ಗುನ್ನ ಹಾಕಿ ಒಡೆದಿದ್ದೆವೋ ಲೆಕ್ಕವಿಲ್ಲ. ದೇವಸ್ಥಾನದ ಮೇಲ್ಭಾಗದಲ್ಲೆಲ್ಲಾ ಹತ್ತಿ ಕುಣಿಯುತ್ತಿದ್ದೆವು. ಯಾರ ಯಾರದೋ ಮನೆಯ ಅಟ್ಟಗಳು, ಸಂದಿ-ಗೊಂದಿಗಳಲ್ಲಿ ಅಡಗಿ ಆಟವಾಡುತ್ತಿದ್ದೆವು. ೫೦-೬೦ ಮಕ್ಕಳು ಒಟ್ಟಿಗೇ ಧಡಗುಟ್ಟಿಕೊಂಡು ಆಟವಾಡುವಾಗ ಅದೊಂದು ರಣರಂಗವೇನೋ ಎಂಬಂತೆ ಕಾಣುತ್ತಿತ್ತು. ಮನೆಯವರಿಗೆ ಮಕ್ಕಳನ್ನು ಹಿಡಿದು ಸ್ನಾನ, ತಿಂಡಿ, ಊಟ ಮಾಡಿಸುವುದೆಂದರೆ ಹರಸಾಹಸವಾಗುತ್ತಿತ್ತು. ರಜೆ ಮುಗಿದು ವಾಪಸು ಹೋಗುವಾಗ ಹೋಗಬೇಕಲ್ಲಾ ಎಂಬ ಸಂಕಟದೊಂದಿಗೆ ಮರಳುತ್ತಿದ್ದೆ.
ಪ್ರಾಥಮಿಕ ಶಾಲಾದಿನಗಳಲ್ಲಿ ಕೆಲವೊಮ್ಮೆ ಅವನೊಂದಿಗೆ ಅವನ ತರಗತಿಗೂ ಹೋಗಿ ಕುಳಿತುಕೊಳ್ಳುತ್ತಿದ್ದೆ. ಆಗೆಲ್ಲಾ ಮಾಸ್ತರುಗಳು ಇದಕ್ಕೆ ಆಕ್ಷೇಪಿಸುತ್ತಿರಲಿಲ್ಲ. ಅಲ್ಲಿನ ಶಾಲೆಯಲ್ಲಿ ಮಕ್ಕಳಿಗೆ ಅವರು ಕಲಿತಿಕೊಂಡಿದ್ದಾರೋ ಇಲ್ಲವೋ ಎಂಬುದನ್ನು ಮಾಸ್ತರರು ಪರೀಕ್ಷಿಸುವ ವಿಧಾನವೂ ವಿಚಿತ್ರವಾಗಿತ್ತು. ಒಂದು ಪ್ರಶ್ನೆ ಕೇಳಿದಾಗ ಉತ್ತರ ಹೇಳದ ವಿದ್ಯಾರ್ಥಿ ನಿಂತುಕೊಂಡಿರಬೇಕಿತ್ತು. ನಂತರ ಪಕ್ಕದ ವಿದ್ಯಾರ್ಥಿಯ ಸರದಿ. ಹೀಗೆ ಸರಿಯುತ್ತರ ಬರುವವರೆಗೂ ಮುಂದುವರೆಯುತ್ತಿತ್ತು. ಸರಿಯುತ್ತರ ಹೇಳಿದ ವಿದ್ಯಾರ್ಥಿಯಿಂದ ಉತ್ತರ ಹೇಳದ ಸಹಪಾಠಿಗಳ ಮೂಗು ಹಿಡಿಸಿ ಕೆನ್ನೆಗೆ ಹೊಡೆಸುತ್ತಿದ್ದರು. ಹೀಗೆಯೇ ಒಂದು ಸಲ ಸುಮಾರು ೧೦-೧೨ ಹುಡುಗರು ಉತ್ತರ ಹೇಳದೇ ನಿಂತುಕೊಂಡರು. ಪುಟ್ಟರಾಜುವೂ ಉತ್ತರ ಹೇಳದೆ ನಿಂತುಕೊಂಡ. ಪಕ್ಕದಲ್ಲಿದ್ದ ನಾನು ಉತ್ತರ ಹೇಳಿದೆ. ಪುಟ್ಟರಾಜು ನನ್ನ ಕಿವಿಯಲ್ಲಿ ಮೆಲ್ಲಗೆ ಪಿಸುಗುಟ್ಟಿದ್ದ: "ಆ ಕೊನೆಯಲ್ಲಿ ನಿಂತಿದ್ದಾಳಲ್ಲಾ ಅವಳಿಗೆ ಜೋರಾಗಿ ಬಾರಿಸು. ನನಗೆ ಎರಡು ಸಲ ಹೊಡೆದಿದ್ದಾಳೆ". ಆ ಹುಡುಗಿಯ ಹೆಸರನ್ನು ಗೀತಾನೋ. ಲೀಲಾನೋ ಏನೋ ಹೇಳಿದ್ದ, ನನಗೆ ನೆನಪಿಲ್ಲ. ನಾನು ಹಾಗೆಯೇ ಮಾಡಿದ್ದೆ. ಏಟಿನ ರಭಸಕ್ಕೆ ಆ ಹುಡುಗಿಯ ಕಣ್ಣಿನಲ್ಲಿ ನೀರು ತುಳುಕಿತ್ತು.
ಚಿಕ್ಕಂದಿನಲ್ಲಿ ಮಕ್ಕಳು ಒಬ್ಬರೊಬ್ಬರಿಗೆ ಅಡ್ಡಹೆಸರುಗಳನ್ನು ಇಟ್ಟು ಚುಡಾಯಿಸುವುದು, ರೇಗಿಸುವುದು ಸಾಮಾನ್ಯವಾಗಿತ್ತು. ಕೆಲವೊಮ್ಮೆ ದೊಡ್ಡವರೂ ಅದೇ ಹೆಸರಿನಿಂದ ಅವರುಗಳನ್ನು ರೇಗಿಸುತ್ತಿದ್ದುದು ತಮಾಷೆಯಾಗಿರುತ್ತಿತ್ತು, ಕಂಕಭಟ್ಟ, ಕಾಳಂಭಟ್ಟ, ಪೆದ್ದಂಭಟ್ಟ, ತಿಮ್ಮಿ, ದಾಸಿ, ಬೋಂಡ, ಪಾಯಸ, ರವೆ ಉಂಡೆ, ಹೀಗೆ ಅಡ್ಡ ಹೆಸರುಗಳಿರುತ್ತಿದ್ದವು. ಪುಟ್ಟರಾಜುವಿಗಿದ್ದ ಅಡ್ಡ ಹೆಸರು ಕಾಳಂಭಟ್ಟ! ಒಮ್ಮೊಮ್ಮೆ ಮನೆಯಲ್ಲಿ ಎಲ್ಲರೊಡನೆ ಕುಳಿತು ಅಜ್ಜಿಯೋ, ಅತ್ತೆ ಪ್ರಭಾಮಣಿಯವರೋ ಕೈತುತ್ತು ಹಾಕುತ್ತಿದ್ದಾಗಿನ ತುತ್ತಿನ ರುಚಿಯನ್ನು, ಅದು ಕೆಂಪುಮೆಣಸಿನಕಾಯಿ, ತೆಂಗಿನಕಾಯಿ ತುರಿ, ಉಪ್ಪು ಸೇರಿಸಿ ರುಬ್ಬಿದ ಚಟ್ನಿ ಕಲಸಿದ ಅನ್ನವಾದರೂ, ಈಗಲೂ ನೆನಪಿಸಿಕೊಳ್ಳುವಂತಾಗುತ್ತದೆ. ಹತ್ತು-ಹನ್ನೆರಡು ಜನರಿಗೆ ಕೈತುತ್ತು ಹಾಕುವಾಗ ಮತ್ತೆ ನಮ್ಮ ಸರದಿ ಬರುವವರೆಗೆ ಕೈಯೊಡ್ಡಿ ಕುಳಿತಿರುತ್ತಿದ್ದೆವು. ಹಂಚಿ ತಿನ್ನುವ ಅಭ್ಯಾಸ ಬರಬೇಕೆಂದರೆ ಒಟ್ಟು ಕುಟುಂಬದಲ್ಲಿ ಇರಬೇಕು, ಒಟ್ಟಾಗಿ ಇರಬೇಕು. ಊಟವಾದ ಮೇಲೆ ರಾಮಸ್ವಾಮಿ ಹೇಳುವ ಬಾಯಿ ಬಿಟ್ಟುಕೊಂಡು ಕೇಳುವಂತಿದ್ದ ಸ್ವಾರಸ್ಯಕರ ಕಟ್ಟುಕಥೆಗಳನ್ನು ಕೇಳಿ ಮಲಗುತ್ತಿದೆವು.
ಹಳೇಬೀಡಿನ ಮನೆಯಲ್ಲಿ ನನಗೆ ಅಜ್ಜನೆಂದರೆ ಭಯಮಿಶ್ರಿತ ಪ್ರೀತಿ ಮತ್ತು ಗೌರವ. ಆಸ್ತಮಾ ಕಾರಣದಿಂದ ನರಳುತ್ತಿದ್ದ ಮತ್ತು ಸದಾ ಗಂಭೀರವಾಗಿರುತ್ತಿದ್ದ ಶಾನುಭೋಗ ಸುಬ್ಬರಾಯರಿಗೆ ಸಿಟ್ಟು ಜಾಸ್ತಿ. ಒಮ್ಮೆ ಎಲ್ಲರೂ ಊಟಕ್ಕೆ ಕುಳಿತಿದ್ದಾಗ ಪುಟ್ಟರಾಜ ಯಾವ ಕಾರಣಕ್ಕೋ ಹಟ ಮಾಡುತ್ತಿದ್ದ. ಅವನ ಗಲಾಟೆ ಗಮನಿಸುತ್ತಿದ್ದ ನನ್ನಜ್ಜ ಪಕ್ಕದಲ್ಲಿದ್ದ ಹಿತ್ತಾಳೆ ಲೋಟವನ್ನು ಅವನೆಡೆಗೆ ಬೀಸಿದ್ದರು. ಠಣ್ಣನೆ ಶಬ್ದ ಮಾಡುತ್ತಾ ಅದು ಪುಟ್ಟರಾಜುವಿನ ತಲೆಗೆ ಅಪ್ಪಳಿಸಿತ್ತು. ಅವನು ನೋವಿನಿಂದ ಊಟ ಬಿಟ್ಟು ಅಳುತ್ತಾ ಹೊರಗೆ ಓಡಿದಾಗ ಅಜ್ಜಿ ಅವನನ್ನು ಹಿಂಬಾಲಿಸಿ ಓಡಿಹೋಗಿ ಅವನನ್ನು ಸಮಾಧಾನಿಸಿ ಊಟ ಮಾಡುವಂತೆ ಮಾಡಿದ್ದರು. ನಾನೂ ಹೆದರಿ ಗಬಗಬನೆ ಊಟ ಮಾಡಿ ಮೇಲೆದ್ದಿದ್ದೆ. ತಾಯಿಯ ಇತರ ತಮ್ಮಂದಿರಾದ ಸೂರ, ಗೋಪಾಲ, ಶಂಕರ, ರಾಮಸ್ವಾಮಿಯವರನ್ನೂ ಸಹ ಅವರು ವಯಸ್ಸಿನಲ್ಲಿ ನನಗಿಂತ ದೊಡ್ಡವರಾಗಿದ್ದರೂ ಅವರೊಡನೆ ಇರುವ ಸಲಿಗೆ, ಪ್ರೀತಿ, ವಿಶ್ವಾಸಗಳಿಂದಾಗಿ ಏಕವಚನದಲ್ಲೇ ಚಿಕ್ಕಂದಿನಿಂದಲೂ ಮಾತನಾಡಿಸುತ್ತಾ ಬಂದಿರುವೆ. ತಿಳುವಳಿಕೆ ಬಂದ ಮೇಲೂ ಈ ಸ್ವಭಾವ ಮುಂದುವರೆದಿದ್ದು ಇದನ್ನು ಯಾರೂ ತಪ್ಪಾಗಿ ಭಾವಿಸಿಲ್ಲ. ನಾನು ಬಹುವಚನ ಬಳಸುತ್ತಿದ್ದುದು ತಾಯಿಯ ಅಣ್ಣ ದಿ. ಶ್ರೀನಿವಾಸಮೂರ್ತಿಯವರನ್ನು ಕುರಿತು ಮಾತ್ರ. ನನ್ನ ಅಜ್ಜ ಕಾಯಿಲೆಯಿಂದ ವಿಧಿವಶರಾದಾಗ ನನ್ನ ಮತ್ತು ಪುಟ್ಟರಾಜುವಿನ ವಯಸ್ಸು ೧೦ ವರ್ಷಗಳಷ್ಟೆ ಆಗಿತ್ತು. ಪ್ರಜಾವಾಣಿ ಪತ್ರಿಕೆಯ ೩ನೆಯ ಪುಟದಲ್ಲಿ, 'ಹಳೇಬೀಡಿನ ಹುಲಿ ಎಂದು ಪ್ರಸಿದ್ಧರಾಗಿದ್ದ ಶ್ಯಾನುಭೋಗ್ ಹೆಚ್.ಪಿ. ಸುಬ್ಬರಾಯರು ನಿಧನರಾದರು' ಎಂಬ ಸಣ್ಣ ಸುದ್ದಿ ಪ್ರಕಟವಾಗಿತ್ತು.
ಒಂದು ಸಲ ಅವನಿಗೆ ನಾಲ್ಕಾಣೆ ಪಾವಲಿ ಸಿಕ್ಕಿತ್ತು. ಆಗ ನಾಲ್ಕಾಣೆ ಎಂದರೆ ದೊಡ್ಡ ಹಣವೇ! ಆಗ ಆಣೆ ರೂಪಾಯಿ ಕಾಲ. ಒಂದು ಆಣೆಗೆ ಹನ್ನೆರಡು ಕಾಸು. ಒಂದು ರೂಪಾಯಿಗೆ ೧೬ ಆಣೆ. ೬ ಕಾಸು ಒಂದು ತೂತಿನ ಬಿಲ್ಲೆ ನಾಣ್ಯ, ೩ ಕಾಸು ದೊಡ್ಡ ತಾಮ್ರದ ನಾಣ್ಯ. ಒಂದೊಂದು ಕಾಸಿಗೂ ಬೆಲೆ ಇತ್ತು. ಚಿಲ್ಲರೆ ಸಮಸ್ಯೆ ಇರಲಿಲ್ಲ. ಈಗ ೨೫ ಪೈಸೆ, ೫೦ ಪೈಸೆಗಳಿಗೂ ಬೆಲೆಯೇ ಇಲ್ಲ, ಸಿಗುವುದೂ ಇಲ್ಲ. ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗಿ ಕಡಲೆಕಾಯಿ ತಂದ. ಒಂದು ದೊಡ್ಡ ಚೀಲದ ತುಂಬಾ ಕಡಲೆಕಾಯಿ ಬಂತು. ನನ್ನನ್ನು ಅಲ್ಲೇ ನಿಲ್ಲಿಸಿ ಮನೆಗೆ ಓಡಿಹೋಗಿ ಜೇಬಿನಲ್ಲಿ ಒಂದೆರಡು ಅಚ್ಚು ಬೆಲ್ಲವನ್ನೂ ಇಟ್ಟುಕೊಂಡು ಬಂದ. ಇಬ್ಬರೂ ಶಾಲೆಯ ಮೆಟ್ಟಿಲ ಮೇಲೆ ಕುಳಿತು ಸಾಕಾಗುವಷ್ಟು ತಿಂದೆವು. ಆದರೂ ಮುಕ್ಕಾಲು ಚೀಲ ಕಡಲೆಕಾಯಿ ಉಳಿದಿತ್ತು. ಏನು ಮಾಡುವುದು? ಮನೆಯಲ್ಲಿ ಹೇಳಿದರೆ ಬೈತಾರೆ. ಮೆಲ್ಲಗೆ ಮನೆಯ ಹಿತ್ತಲ ಗೋಡೆಯ ಬಳಿಯಿಂದ ಬಂದವನು ಅಲ್ಲಿ ಚೀಲ ಇಟ್ಟ. ಮುಂಬಾಗಿಲಿಂದ ಇಬ್ಬರೂ ಬಂದೆವು. ಯಾರೂ ನೋಡದಂತೆ ಚೀಲವನ್ನು ಅಟ್ಟಕ್ಕೆ ಸಾಗಿಸಿದ. ನನ್ನನ್ನು ಕೆಳಗೆ ಇರಲು ಹೇಳಿ ಅವನು ಅಟ್ಟ ಹತ್ತಿದ. "ನಾನು ಮೊದಲು ಹೋಗಿ ತಿನ್ನುತ್ತೇನೆ. ಆಮೇಲೆ ನೀನು ಹೋಗಿ ತಿನ್ನು. ಇವತ್ತು ಅದನ್ನು ಮುಗಿಸಿಬಿಡಬೇಕು" ಎಂದು ಹೇಳಿದ. ಹಾಗೆ ಹೋದವನು ಎಷ್ಟು ಹೊತ್ತಾದರೂ ಕೆಳಗೆ ಬರಲೇ ಇಲ್ಲ. ಊಟದ ಸಮಯ ಆಯಿತು. ಎಲ್ಲರೂ ಬಂದರೂ ಪುಟ್ಟನ ಸುಳಿವಿಲ್ಲ. ಅವನನ್ನು ಹುಡುಕಲು ಶುರು ಮಾಡಿದರು. ನನ್ನನ್ನು ಕೇಳಿದರು. ನನಗೆ ಉಭಯಸಂಕಟ. ಹೇಳುವಂತಿಲ್ಲ, ಬಿಡುವಂತಿಲ್ಲ. ಗೊತ್ತಿಲ್ಲ ಎಂದುಬಿಟ್ಟೆ. ಊರಲ್ಲೆಲ್ಲಾ ಹುಡುಕಾಡಿದರೂ ಅವನು ಸಿಗದಾದಾಗ ಅಜ್ಜಿ ಆತಂಕದಿಂದ ಅಳತೊಡಗಿದರು. ನನಗೆ ಅವರು ಅಳುವುದನ್ನು ನೋಡಲಾಗದೆ ಪುಟ್ಟ ಅಟ್ಟದಲ್ಲಿ ಇರುವುದನ್ನು ಹೇಳಿಬಿಟ್ಟೆ. ಮೇಲೆ ಹತ್ತಿ ನೋಡಿದರೆ ಅವನು ಕಡಲೆಕಾಯಿ ತಿಂದೂ ತಿಂದೂ ಸುಸ್ತಾಗಿ ಮಲಗಿಬಿಟ್ಟಿದ್ದ. ನಿದ್ದೆ ಬಂದಿತ್ತು. ಎಷ್ಟು ತಿಂದರೂ ಚೀಲ ಖಾಲಿಯಾಗಿರಲಿಲ್ಲ. ಇನ್ನೂ ಅರ್ಧ ಚೀಲ ಕಡಲೆಕಾಯಿ ಉಳಿದಿತ್ತು. ಅವನ ಪರಿಸ್ಥಿತಿ ನೋಡಿ ಯಾರೂ ಅವನನ್ನು ಬೈಯಲಿಲ್ಲ. ಮರುದಿನವೆಲ್ಲಾ ಭೇದಿ ಕಿತ್ತುಕೊಂಡಿತ್ತು. ನಾನೂ ಹೊಟ್ಟೆನೋವಿನಿಂದ ಒದ್ದಾಡಿದ್ದೆ. ಹೆಚ್ಚಾಗಿದ್ದ ಕಡಲೆಕಾಯಿಯನ್ನು ಏನು ಮಾಡಬೇಕಿತ್ತೆಂದು ನಮ್ಮಿಬ್ಬರಿಗೂ ಹೊಳೆಯದೆ ಈ ಫಜೀತಿಯಾಗಿತ್ತು. ಅಲ್ಲದೆ ಈಗಿನಂತೆ ಪದಾರ್ಥಗಳನ್ನು ದಂಡ ಮಾಡುವ ಮನಸ್ಥಿತಿ ಆಗಿನ ಕಾಲದಲ್ಲಿ ಇರಲಿಲ್ಲ.
ಬಾಲ್ಯ, ಯೌವನದ ದಿನಗಳಲ್ಲಿನ ಆಟ, ಹುಡುಗಾಟ, ತುಂಟಾಟಗಳನ್ನು ಯಾವ ಮುಚ್ಚುಮರೆ ಇಲ್ಲದೆ ಇಬ್ಬರೂ ಹಂಚಿಕೊಳ್ಳುತ್ತಿದ್ದೆವು. ಹಳೇಬೀಡಿನ ದೊಡ್ಡಕೆರೆಗೆ ಊರಿನ ಹೆಚ್ಚಿನ ಹೆಂಗಸರು ಬಟ್ಟೆಗಳನ್ನು ಒಗೆಯಲು ಬುಟ್ಟಿಗಳಲ್ಲಿ ಇಟ್ಟುಕೊಂಡು ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಒಟ್ಟಿಗೇ ಮಾತನಾಡಲು, ಕಷ್ಟ-ಸುಖಗಳನ್ನು ಹಂಚಿಕೊಳ್ಳಲೂ ಅವಕಾಶವಾಗುತ್ತಿದ್ದುದೂ ಇದಕ್ಕೆ ಒಂದು ಕಾರಣವಾಗಿದ್ದಿರಬಹುದು. ಪುಟ್ಟರಾಜು ಜೊತೆಗೆ ಓದುತ್ತಿದ್ದ ಕೆಲವು ಹುಡುಗಿಯರೂ ಅಲ್ಲಿ ಬಟ್ಟೆ ಒಗೆಯಲು ಹೋಗುತ್ತಿದ್ದರಂತೆ. ಪುಟ್ಟರಾಜು ಆಗ ಕೆರೆಯಲ್ಲಿ ಈಜಾಡಲು ಹೋಗುತ್ತಿದ್ದನಂತೆ. ಆ ಹುಡುಗಿಯರು ಬರಿಯ ಚಡ್ಡಿಯಲ್ಲಿ ಈಜುತ್ತಿದ್ದ ಇವನನ್ನು ನೋಡುತ್ತಾ ಮುಸಿ ಮುಸಿ ನಗುತ್ತಿದ್ದರಂತೆ. ಅವನೂ ಆ ಹುಡುಗಿಯರನ್ನು ಮೆಚ್ಚಿಸಲು ಕೆರೆಯ ಮಧ್ಯಭಾಗದವರೆಗೂ ಈಜಿಕೊಂಡು ಹೋಗಿಬರುತ್ತಿದ್ದನಂತೆ. ಒಂದು ಸಲ ನನ್ನನ್ನೂ ಕರೆದುಕೊಂಡು ಹೋಗಿ ಆ ರೀತಿ ಈಜಾಡಿದ್ದ. ಈಜು ಬಾರದ ನಾನು ಕೆರೆಯ ದಂಡೆಯಲ್ಲಿ ನಿಂತು ನೋಡುತ್ತಿದ್ದೆ. ಅವನ ಕಟ್ಟುಮಸ್ತಾಗಿದ್ದ ಶರೀರ ನೀರಿನಲ್ಲಿ ತೊಯ್ದು ಬಿಸಿಲಿನಲ್ಲಿ ಮಿರಮಿರನೆ ಹೊಳೆಯುತ್ತಿತ್ತು. ಅವನು ಹೇಳಿದ್ದ ಸಂಗತಿ ನಿಜವಾಗಿತ್ತು. ಕೆಲವು ಹುಡುಗಿಯರು ಅವನು ಈಜುವುದನ್ನು ನೋಡುತ್ತಾ ನೆಪ ಮಾತ್ರಕ್ಕೆ ಬಟ್ಟೆ ಒಗೆಯುತ್ತಿದ್ದುದನ್ನು ಗಮನಿಸಿದ್ದೆ.
ಪುಟ್ಟರಾಜನಿಗೆ ಓದಿನಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಅದು ಹೇಗೋ ಎಸ್ಸೆಸ್ಸೆಲ್ಸಿವರೆಗೆ ಬಂದಿದ್ದ. ಎಸ್ಸೆಸ್ಸೆಲ್ಸಿಯಲ್ಲಿ ಹಲವಾರು ಸಲ ನಪಾಸಾಗಿದ್ದ. ೯-೧೦ ಸಲ ಸಪ್ಲಿಮೆಂಟರಿ ಪರೀಕ್ಷೆಗೆ ನಾಮಕಾವಸ್ಥೆಗೆ ಹೋಗಿಬಂದಿದ್ದ. ಅನೇಕ ಸಲ ಪಠ್ಯಪುಸ್ತಕಗಳು ಬದಲಾಗಿದ್ದರಿಂದ ಹಳೆಯ ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಪರೀಕ್ಷಾಪತ್ರಿಕೆಗಳನ್ನು ಮಂಡಳಿ ಸಿದ್ಧಪಡಿಸಬೇಕಾಗಿತ್ತು. ಹೀಗಾಗಿ ಅತಿ ಹಳೆಯ ಸ್ಕೀಮಿನ ಎಲ್ಲಾ ವಿದ್ಯಾರ್ಥಿಗಳನ್ನೂ ತೇರ್ಗಡೆ ಮಾಡುವ ನಿರ್ಧಾರವನ್ನು ಮಂಡಳಿ ಒಮ್ಮೆ ತೆಗೆದುಕೊಂಡಿತ್ತು. ಈ ವಿಷಯ ಪೇಪರಿನಲ್ಲಿ ಬಂದಿದ್ದನ್ನು ಓದಿದ್ದ ನಾನು, ಪುಟ್ಟನಿಗೆ, "ಈ ಸಲ ನೀನು ಪಾಸಾಗುತ್ತೀಯ" ಎಂದಿದ್ದೆ. ಅವನು, "ಅದು ಹೇಗೆ ಸಾಧ್ಯ? ಉತ್ತರಪತ್ರಿಕೆಯಲ್ಲಿ ಒಂದಕ್ಷರವನ್ನೂ ನಾನು ಬರೆದೇ ಇಲ್ಲ" ಎಂದಿದ್ದ. ಕೊನೆಗೂ ಅವನು ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣನಾಗಿಯೇಬಿಟ್ಟ! ಹೀಗೆ ಪಾಸಾದವರನ್ನು 'ಗಾಂಧಿ ಪಾಸು' ಎನ್ನುತ್ತಿದ್ದರು. ಗಾಂಧಿ ಹೆಸರನ್ನು ಇಂತಹದಕ್ಕೆಲ್ಲಾ ಏಕೆ ಬಳಸುತ್ತಾರೋ ಗೊತ್ತಿಲ್ಲ. ಅವನಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಇರಬಹುದು. ಆದರೆ ಅವನ ವ್ಯವಹಾರ ಜ್ಞಾನ, ಲೋಕಸಂಗ್ರಹ ಶಕ್ತಿ, ಧೈರ್ಯ ಇತರರನ್ನು ಮೀರಿಸುವಂತಿತ್ತು.
'ಶ್ರೀ ಕೃಷ್ಣ ಸೋಡಾ ಫ್ಯಾಕ್ಟರಿ' - ಹಳೇಬೀಡು ಕುಟುಂಬದ ಕೊಡುಗೆ ಮತ್ತು ಕುಟುಂಬವನ್ನು ಭದ್ರ ನೆಲೆಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ಸೂರ, ಗೋಪಾಲ, ಶಂಕರ, ರಾಮು, ಪುಟ್ಟ, ಚಿದ ಎಲ್ಲರೂ ಇಲ್ಲಿ ಕೆಲಸ ಮಾಡಿದ್ದಾರೆ, ಗೋಲಿ ಸೋಡಾಬಾಟಲುಗಳಿಗೆ ಗ್ಯಾಸ್ ತುಂಬಿಸಿದ್ದಾರೆ, ಬಣ್ಣ ಬಣ್ಣದ ಸಿಹಿನೀರಿನ ಕ್ರಶ್ ಬಾಟಲುಗಳನ್ನು ಸಿದ್ಧಪಡಿಸಿದ್ದಾರೆ, ಹೊತ್ತು ಇತರ ಅಂಗಡಿಗಳಿಗೆ ಮಾರಾಟಕ್ಕೆ ಕೊಟ್ಟಿದ್ದಾರೆ, ಬಸ್‌ಗಳು ಬಂದಾಗ ಕ್ರೇಟುಗಳನ್ನು ಹೆಗಲ ಮೇಲೆ ಹೊತ್ತು 'ಸೋಡಾ, ಸೋಡಾ' ಎಂದು ಮಾರಾಟ ಮಾಡಿ ಸಂಪಾದಿಸಿದ್ದಾರೆ, ಬಾಟಲುಗಳನ್ನು ತೊಳೆದಿದ್ದಾರೆ, ಲಿಂಬು ಶರಬತ್ತು ಮಾಡಿದ್ದಾರೆ. ಅಜ್ಜಿ ಶರಬತ್ತಿನ ಕಾನ್ಸೆಂಟ್ರೇಟ್ಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ನಾನು ಅಂಗಡಿಯಲ್ಲಿ ಕುಳಿತು ಇವರೆಲ್ಲರ ಚಟುವಟಿಕೆಗಳನ್ನು ಗಮನಿಸಿದ್ದೇನೆ. ಮನೆಯ ಮುಂದಿನ ಸೋಡಾ ರೂಂನಲ್ಲಿ ಸಹ ಸೋಡಾ, ಕ್ರಶ್‌ಗಳನ್ನು ತಯಾರಿಸುವುದು, ಇತ್ಯಾದಿ ಮಾಡಲಾಗುತ್ತಿತ್ತು. ಬಾಟಲುಗಳನ್ನು ತೊಳೆಯುವುದು, ದೊಡ್ಡ ಕ್ರೇಟುಗಳಲ್ಲಿ ಬಾಟಲುಗಳನ್ನು ಸಾಗಿಸಲು ಒಂದು ಕೈಗಾಡಿಯಿತ್ತು. ಆ ಗಾಡಿಯಲ್ಲಿ ನಾವುಗಳೂ ಕುಳಿತು ದೂಡಿಕೊಂಡು ಹೋಗಿ ಆಟವಾಡುತ್ತಿದ್ದೆವು. ಸೂರ, ಗೋಪಾಲ, ಶಂಕರ, ರಾಮು, ಚಿದ ಎಲ್ಲರೂ ತಮ್ಮದೇ ಆದ ವೃತ್ತಿಜೀವನ ಆರಿಸಿಕೊಂಡು ಹೋದಾಗ, ಸೋಡಾ ಫ್ಯಾಕ್ಟರಿಯನ್ನು ಅಭಿವೃದ್ಧಿ ಪಡಿಸಿ ಕೊನೆಯವರೆಗೂ ಮುಂದುವರೆಸಿ, ನಂತರ ಬೇಕರಿಯನ್ನೂ ಪ್ರಾರಂಭಿಸಿ ಉಚ್ಛ್ರಾಯ ಸ್ಥಿತಿಗೆ ತಂದವನೇ ಪುಟ್ಟರಾಜು! ಒಂದು ಘಟನೆ ನೆನಪಿಗೆ ಬರುತ್ತಿದೆ. ಈ ಸೋಡಾ ಫ್ಯಾಕ್ಟರಿ ಎದುರಿಗೆ ಮತ್ತೊಬ್ಬರು ತಮ್ಮದೇ ಆದ ಸೋಡಾ ಫ್ಯಾಕ್ಟರಿ ಇಟ್ಟರು. ಆಗ ಗೋಲಿ ಸೋಡಾದ ಬೆಲೆ ೧೫ ಪೈಸೆ ಇದ್ದಿರಬಹುದು. ಪುಟ್ಟರಾಜ ತಾನು ಮಾರುವ ಸೋಡಾದ ಬೆಲೆ ೧೨ ಪೈಸೆಗೆ ಇಳಿಸಿದ. ಪ್ರತಿಸ್ಪರ್ಧಿಯೂ ೧೨ ಪೈಸೆಗೆ ಮಾರತೊಡಗಿದಾಗ, ೧೦ ಪೈಸೆಗೆ ಇಳಿಸಿದ. ಹೀಗೆ ಪೈಪೋಟಿ ನಡೆದು ೮ ಪೈಸೆಗೆ ಇಬ್ಬರೂ ಮಾರತೊಡಗಿದರು. ಪುಟ್ಟರಾಜು ೫ ಪೈಸೆಗೆ ಇಳಿಸಿದಾಗ ಇನ್ನೊಂದು ಅಂಗಡಿಯವನು ಕೈಚೆಲ್ಲಲೇಬೇಕಾಯಿತು. ಕೊನೆಗೆ ಉಳಿದದ್ದು ಇವನ ಸೋಡಾ ಫ್ಯಾಕ್ಟರಿಯೇ! ಎಲ್ಲರೂ ಹಳೇಬೀಡು ಬಿಟ್ಟರೂ, ಇವನು ಮಾತ್ರ ಅಲ್ಲಿಯೇ ಬಹಳ ವರ್ಷಗಳ ಕಾಲ ಇದ್ದವನು. ಈಚೆಗೆ ಕೆಲವು ವರ್ಷಗಳ ಹಿಂದೆ ವ್ಯಾಪಾರದ ಸ್ಥಳವನ್ನು ಜಾವಗಲ್ಲಿಗೆ ಸ್ಥಳಾಂತರಿಸಿ ಮಗನನ್ನು ಉದ್ಯಮದಲ್ಲಿ ಪ್ರತಿಷ್ಠಾಪಿಸಿದವನು. ಯಾವ ಟೆಕ್ಕಿಗೂ ಕಡಿಮೆಯಿಲ್ಲದಂತೆ ಸಂಪಾದನೆ ಮಾಡುವ, ಹಲವು ಜನರಿಗೆ ಜೀವನೋಪಾಯಕ್ಕೆ ದಾರಿ ಮಾಡಿರುವ ಉದ್ಯಮದ ಈ ಸ್ಥಿತಿಯ ಹಿನ್ನೆಲೆಯಲ್ಲಿ ಪುಟ್ಟರಾಜುವಿನ ಮತ್ತು ಅವನಿಗೆ ಜೊತೆಯಾಗಿ, ತಕ್ಕಂತೆ ಕೈಜೋಡಿಸಿ ಮುನ್ನಡೆಸುತ್ತಿರುವ ಮಗ ರಾಘವೇಂದ್ರನ ಶ್ರಮವಿದೆ. ಬೆಂಗಳೂರಿನಲ್ಲೂ ಮನೆ ಕಟ್ಟಿಸಿದ್ದಾನೆ. ಅಲ್ಲಿಯೂ ಒಂದು ಬೇಕರಿ, ಕಾಂಡಿಮೆಂಟ್ಸ್ ಅಂಗಡಿ ತೆರೆದಿದ್ದ. ಆದರೆ ನಿರ್ವಹಣಾ ವೆಚ್ಚ ಜಾಸ್ತಿಯಾಗಿದ್ದರಿಂದ ಅದನ್ನು ಮುಚ್ಚಬೇಕಾಯಿತು. ಅದಕ್ಕೆ ಪುಟ್ಟರಾಜು ನನ್ನ ಮಗಳೊಂದಿಗೆ ಮಾತನಾಡುತ್ತಾ ನೀಡಿದ್ದ ಪ್ರತಿಕ್ರಿಯೆಯೆಂದರೆ, "ನನಗೆ ನಷ್ಟವಾಗಲಿಲ್ಲ. ಬೆಂಗಳೂರಿನಲ್ಲಿ ಹೇಗೆ ವ್ಯಾಪಾರ ಮಾಡಬೇಕೆಂಬುದು ಗೊತ್ತಾಯಿತು. ಮತ್ತೆ ಬೆಂಗಳೂರಿನಲ್ಲಿ ಅಂಗಡಿ ತೆರೆಯುತ್ತೇನೆ"- ಇದು ಪುಟ್ಟರಾಜನ ರೀತಿ, ನೀತಿ!
ಪುಟ್ಟರಾಜುಗೆ ರಾ.ಸ್ವ.ಸಂಘದ ನಿಕಟ ಸಂಬಂಧವಿತ್ತು. ೧೯೭೦ರ ದಶಕದಲ್ಲಿ ಎರಡು ವರ್ಷಗಳ ಕಾಲ ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ವಿಸ್ತಾರಕ್ ಆಗಿ ಕೆಲಸ ಮಾಡಿದ್ದ. ನಾನು ಆಗ ಬಿಎಸ್‌ಸಿ ಓದುತ್ತಿದ್ದೆ. ಆಗ ನಾನು ಯಾವ ದೊಡ್ಡ ಮನುಷ್ಯನಾಗಿದ್ದೆನೋ ಗೊತ್ತಿಲ್ಲ, ಅವನಿಗೆ ಉಪದೇಶ ಮಾಡಿದ್ದೆ, "ಮೊದಲು ಮನೆಯ ಕಡೆ ಗಮನ ಕೊಡು, ಆಮೇಲೆ ದೇಶದ ಕೆಲಸ". ಅವನು ನಕ್ಕು ಸುಮ್ಮನಾಗಿದ್ದ. ನನಗೂ ಚಿಕ್ಕಂದಿನಿಂದಲೂ ಸಂಘದ ಸಂಪರ್ಕವಿದ್ದರೂ, ಅತಿ ಹೆಚ್ಚು ಸಂಪರ್ಕಕ್ಕೆ ಬರಲು ಪುಟ್ಟರಾಜುವೇ ಕಾರಣವೆಂದರೆ ತಪ್ಪಿಲ್ಲ. ಸಂಘದ ಪ್ರಚಾರಕರುಗಳು ಹಳೇಬೀಡಿನ ಮನೆಗೆ ಸಂಪರ್ಕಕ್ಕೆ, ಊಟಕ್ಕೆ ಬಂದಾಗ 'ಬಿಟ್ಟಿ ಊಟದವರು' ಎಂದು ಪುಟ್ಟರಾಜುವಿನೊಡನೆ ನಾನು ಹೇಳಿದ್ದುದೂ ಇದೆ. ಆಗಲೂ ಅವನು ನನ್ನೊಡನೆ ಚರ್ಚೆ ಮಾಡಿರಲಿಲ್ಲ. ಮುಗುಳ್ನಕ್ಕಿದ್ದ. ಆದರೆ, ಆ 'ಬಿಟ್ಟಿ ಊಟದವರ' ಹಿರಿಮೆ, ಗರಿಮೆಗಳ ಅರಿವು ನನಗೆ ಆಗಲು ಹೆಚ್ಚು ಸಮಯ ಆಗಲಿಲ್ಲ. ಆ ಬಿಟ್ಟಿ ಊಟದವರು ಇತರರ ಸಲುವಾಗಿ ತಮ್ಮ ಸ್ವಂತದ ಜೀವನವನ್ನೇ 'ಬಿಟ್ಟಿರುವುದು' ನನ್ನ ಕಣ್ಣು ತೆರೆಸಿತು. ನಂತರದಲ್ಲಿ ನಾನೂ ಕಟ್ಟರ್ ಸಂಘಿಯಾಗಿ ಬದಲಾದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪುಟ್ಟರಾಜು ಭೂಗತ ಕೆಲಸಗಳನ್ನು ಮಾಡಿದರೆ, ನಾನು ಬಂದಿಯಾಗಿ ಸೆರೆಮನೆಯಲ್ಲಿದ್ದೆ. ಆಗ ಪ್ರಾಂತ ಪ್ರಚಾರಕರಾಗಿದ್ದ ಶ್ರೀ ಹೊ.ವೆ. ಶೇಷಾದ್ರಿಯವರೂ ಸೇರಿದಂತೆ ಹಲವರು ಹಳೇಬೀಡಿನ ಮನೆಗೆ ಬಂದು ಹೋಗಿದ್ದಿದೆ. ಅಲ್ಲಿನ ಸಬ್‌ಇನ್ಸ್‌ಪೆಕ್ಟರರು ಮಫ್ತಿಯಲ್ಲಿ ಒಮ್ಮೆ ಇವನ ಮನೆಗೆ ಬಂದಿದ್ದಾಗ ಇವನು ಮನೆಯಲ್ಲಿರಲಿಲ್ಲ. ನನ್ನ ಅಜ್ಜಿಗೆ ಅವರು ಸಬ್‌ಇನ್ಸ್‌ಪೆಕ್ಟರ್ ಎಂದು ಗೊತ್ತಿಲ್ಲ. ಯಾರೋ ಸಂಘದವರು ಎಂದೇ ತಿಳಿದುಕೊಂಡು ಮನೆಯಲ್ಲಿದ್ದ ಕಡಲೆಕಾಯಿಯನ್ನು ಅವರ ಮುಂದಿನ ಬೆಂಚಿನ ಮೇಲೆ ಸುರಿದು, ಬೆಲ್ಲವನ್ನೂ ಕೊಟ್ಟು ಮಾತನಾಡಿಸತೊಡಗಿದರು. "ನನ್ನ ಮೊಮ್ಮಗ ಜೈಲಿನಲ್ಲಿದ್ದಾನೆ. ಇವನಿಗೂ ಒಂದು ಸ್ವಲ್ಪ ಬುದ್ಧಿ ಹೇಳಿ. ಎಲ್ಲಾ ಸರಿ ಆಗುವವರೆಗೆ ಸುಮ್ಮನಿರಲು ಹೇಳಿ" ಎಂದು ಅವರಿಗೇ ಹೇಳಿದ್ದರು. ಕಡಲೆಕಾಯಿ, ಬೆಲ್ಲ ಕೆಲಸ ಮಾಡಿತ್ತು. ಅವರು, "ಏನು ಮಾಡ್ತಾನಮ್ಮಾ?" ಎಂದು ಕೇಳಿದ್ದರು. ಅಜ್ಜಿ, "ಏನು ಮಾಡ್ತಾನೆ? ಸರ್ಕಾರ ಸರಿಯಿಲ್ಲ. ಜನರಿಗೆ ಬುದ್ಧಿ ಬರೋವರೆಗೂ ಸರಿಯಾಗಲ್ಲ" ಅಂತಿರ್ತಾನೆ. ಇದನ್ನು ಬಿಟ್ಟು ಇನ್ನೇನು ಮಾಡ್ತಾನೆ ಅಂದಿದ್ದರು. ಸಬ್‌ಇನ್ಸ್‌ಪೆಕ್ಟರ್, "ಪರಿಸ್ಥಿತಿ ಸತಿಯಿಲ್ಲ ಕಣಮ್ಮಾ. ನಿಮ್ಮ ಮಗನಿಗೆ ಹುಷಾರಾಗಿರಲು ಹೇಳಿ. ಪೊಲೀಸ್ನೋರು ಅರೆಸ್ಟ್ ಮಾಡಿದರೆ ಕಷ್ಟ" ಎಂದು ಹೇಳಿಹೋಗಿದ್ದರು. ಮುಂದೊಮ್ಮೆ ಜನಾಂದೋಲನದಿಂದಾಗಿ ತುರ್ತುಪರಿಸ್ಥಿತಿ ಕೊನೆಗೊಳ್ಳಲೇಬೇಕಾಗಿ ಬಂದಿತ್ತು. ಎಲ್ಲಾ ಸರಿಹೋಗತೊಡಗಿತ್ತು.
ದಿನಗಳು ಉರುಳಿದವು. ಒಂದು ಸಲ ಹಳೇಬೀಡಿಗೆ ಹೋಗಿದ್ದಾಗ ಪುಟ್ಟ, "ರಾಜು, ನಾನು ಮದುವೆ ಆಗೋ ಹುಡುಗೀನ ತೋರಿಸ್ತೀನಿ ಬಾ" ಎಂದು ಪೇಟೆ ಬೀದಿಯಲ್ಲಿಯೇ ಇದ್ದ ರತ್ನಮ್ಮನವರ ಮನೆಗೆ ಕರೆದುಕೊಂಡು ಹೋಗಿ ಸತ್ಯವತಿಯನ್ನು ತೋರಿಸಿದ್ದ. ನನ್ನ ಸಂಕೋಚದ ಸ್ವಭಾವದಿಂದಾಗಿ ಸತ್ಯವತಿಯನ್ನು ದಿಟ್ಟಿಸಿ ನೋಡಲಾಗದಿದ್ದರೂ ನೋಡಿದ್ದೆ. ನನಗೆ ಅವರು ಕುಡಿಯಲು ಹಾಲು ಕೊಟ್ಟರು. ನನ್ನ ಪರಿಚಯವನ್ನೂ ಅವರಿಗೆ ಮಾಡಿಕೊಟ್ಟ. ನನಗೆ ಕಕ್ಕಾಬಿಕ್ಕಿಯಾಗಿತ್ತು. ನನಗೆ ಅವರೊಡನೆ ಏನು ಮಾತನಾಡಲಿಕ್ಕಿದೆ? ಏನೋ ತೊದಲಿದ್ದೆ. ಹೊರಗೆ ಬಂದಾಗ ಪುಟ್ಟ ಕೇಳಿದ್ದ, "ಹೇಗಿದ್ದಾಳೆ?" ನಾನು, "ಚೆನ್ನಾಗಿದ್ದಾಳೆ" ಎಂದಿದ್ದೆ. ಮುಂದೊಂದು ದಿನ ಅವರುಗಳ ಸರಳ ವಿವಾಹವಾಯಿತು.
ನನ್ನದೂ ಮದುವೆಯಾಯಿತು. ನೌಕರಿಯ ನಿಮಿತ್ತವಾಗಿ ಹಲವಾರು ಊರುಗಳಿಗೆ ವರ್ಗಾವಣೆಯಾಗಿ ಊರೂರು ಸುತ್ತಿದೆ. ಹೀಗಾಗಿ ನಮ್ಮಿಬ್ಬರ ಭೇಟಿ ಅಪರೂಪವಾಗಿತ್ತಾದರೂ, ಸಮಾರಂಭಗಳು, ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿತ್ತು. ಬೇಲೂರಿನಲ್ಲಿ ನೌಕರಿಯ ಸಲುವಾಗಿ ಬಂದಾಗ ಮತ್ತೆ ವಾರಕ್ಕೊಮ್ಮೆಯಾದರೂ ಸಿಗುತ್ತಿದ್ದೆವು. ಇಬ್ಬರ ಬಾಂಧವ್ಯ ಸ್ಥಿರವಾಗಿಯೇ ಮುಂದುವರೆದಿತ್ತು. ನನ್ನ ಎಲ್ಲಾ ಚಟುವಟಿಕೆಗಳನ್ನೂ ಅವನು, ಅವನದನ್ನು ನಾನೂ ಮೆಚ್ಚುತ್ತಿದ್ದೆವು. ಸೇವೆಯಿಂದ ಸ್ವಯಂನಿವೃತ್ತಿ ಹೊಂದಿ ಹಾಸನಕ್ಕೆ ಬಂದಾಗ, ಹಾಸನಕ್ಕೆ ಯಾವುದೇ ಕಾರಣಕ್ಕೆ ಬಂದರೂ ನನ್ನ ಮನೆಗೆ ಅವನು ಬರದೇ ಹೋಗುತ್ತಿರಲಿಲ್ಲ. ನಮ್ಮಿಬ್ಬರಲ್ಲಿ ಫೋನಿನಲ್ಲಾದರೂ ನಿರಂತರವಾಗಿ ಸಂಪರ್ಕ ಇದ್ದೇ ಇತ್ತು. ಎಲ್ಲರೊಡನೆ ಸಹಜವಾಗಿ, ಮುಕ್ತವಾಗಿ, ನಿಸ್ಸಂಕೋಚವಾಗಿ ಮಾತನಾಡುವ ಅವನ ಸ್ವಭಾವ ಯಾರಿಗೆ ತಾನೇ ಮೆಚ್ಚುಗೆಯಾಗದಿರದು?
ನಮ್ಮ ಕುಟುಂಬ ಸಮಾವೇಶಗಳಿಗೂ ತಪ್ಪದೆ ಬರುತ್ತಿದ್ದ. ನಮ್ಮ ಪತ್ರಿಕೆ ಕವಿಕಿರಣದ ಒಬ್ಬ ಒಳ್ಳೆಯ ಓದುಗ ಇವನೇ ಆಗಿದ್ದ. ಮೊದಲ ಸಂಚಿಕೆಯನ್ನು ನನ್ನ ತಮ್ಮ ಅನಂತ ಪ್ರಾಯೋಜಿಸಿದ್ದರೆ, ಎರಡನೆಯ ಸಂಚಿಕೆಯನ್ನು ಪ್ರಾಯೋಜಿಸಿದ್ದವನು ಇವನೇ. ಪ್ರತಿ ಸಂಚಿಕೆ ತಲುಪಿದಾಗ, "ಪತ್ರಿಕೆ ತಲುಪಿತು. ತುಂಬಾ ಚೆನ್ನಾಗಿದೆ" ಎನ್ನುತ್ತಾ ಅದರಲ್ಲಿದ್ದ ಲೇಖನಗಳ ಬಗ್ಗೆ ಮಾತನಾಡುತ್ತಿದ್ದ. ಕೊನೆಯ ಸಲ ಅವನು ನನಗೆ ಭೇಟಿಯಾಗಿದ್ದು ಒಂದೂವರೆ ತಿಂಗಳ ಹಿಂದೆ ಅನಸೂಯತ್ತೆಯ ೮೦ನೆಯ ಹುಟ್ಟುಹಬ್ಬ ಮತ್ತು ಮುರಳಿ-ಉಮಾರ ೨೫ನೆಯ ವಿವಾಹ ವಾರ್ಷಿಕೋತ್ಸವದ ಸಮಾರಂಭದಲ್ಲಿ. ಬಹಳ ಹೊತ್ತು ಒಟ್ಟಿಗೇ ಕುಳಿತು ಮಾತನಾಡಿದೆವು, ಒಟ್ಟಿಗೇ ಊಟ ಮಾಡಿದೆವು. ನಮ್ಮ ಕವಿಕಿರಣ ಟ್ರಸ್ಟ್ ಮತ್ತು ಪತ್ರಿಕೆಯ ಹೊಸ ಸ್ವರೂಪದ ಬಗ್ಗೆ ತಿಳಿಸಿದಾಗ ಅವನು, "ನಾನು ಏನು ಮಾಡಬೇಕು, ಹೇಳು, ಮಾಡುತ್ತೇನೆ" ಎಂದಿದ್ದ. ನಂತರ ಅವನನ್ನು ನೋಡಿದ್ದು, ಅವನು ಶಾಂತನಾಗಿ ಚಿರನಿದ್ರೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ! ಅಯ್ಯೋ ವಿಧಿಯೇ!!
ಅವನು ಬರೆಯುತ್ತಿರಲಿಲ್ಲವಾದರೂ, ಓದುವ ಹವ್ಯಾಸ ಇತ್ತು. ಮಹರ್ಷಿ ದಯಾನಂದ ಸರಸ್ವತಿಯವರ ಸತ್ಯಾರ್ಥ ಪ್ರಕಾಶ ಓದಿ ಪ್ರಭಾವಿತನಾಗಿದ್ದ. ಗೊಡ್ಡು ಮತ್ತು ಅರ್ಥವಿಲ್ಲದ ಆಚರಣೆಗಳನ್ನು ಅನುಸರಿಸುತ್ತಿರಲಿಲ್ಲ. ಹಾಗೆಂದು ಮನೆಯ ಯಾರೊಬ್ಬರ ಭಾವನೆಗಳಿಗೂ ನೋವಾಗುವಂತೆ ನಡೆದುಕೊಳ್ಳುತ್ತಿರಲಿಲ್ಲ. ಒಳಗೊಂದು, ಹೊರಗೊಂದು ಎಂಬ ಸ್ವಭಾವ, ನಡವಳಿಕೆಗಳು ಅವನದಾಗಿರಲಿಲ್ಲ. ಮುಚ್ಚುಮರೆ, ಕಪಟತನಗಳಿರಲಿಲ್ಲ. ಪುಟ್ಟರಾಜು ಬರೆಯದಿದ್ದರೂ, ಅವನು ನನ್ನೊಡನೆ ಹಂಚಿಕೊಂಡಿದ್ದ ಒಂದು ವಿಷಯವನ್ನು ಅವನ ಹೆಸರಿನಲ್ಲೇ 'ಮೂಢನಂಬಿಕೆ' ಎಂಬ ಶೀರ್ಷಿಕೆಯಲ್ಲಿ ಲೇಖನವಾಗಿಸಿ ಡಿಸೆಂಬರ್, ೨೦೧೪ರ ಕವಿಕಿರಣದಲ್ಲಿ ಪ್ರಕಟಿಸಿದ್ದೆ. ನೆನಪಿನ ಸುರುಳಿಗಳು ಬಿಚ್ಚಿಕೊಳ್ಳುತ್ತಲೇ ಇವೆ. ಬಡಬಡಿಕೆ ನಿಲ್ಲುವುದೇ ಇಲ್ಲ. ಇದು ನನಗಾಗಿ ನಾನು ಬಡಬಡಿಸಿರುವುದು. ಕ್ಷಮಿಸಿ.
ವೈಯಕ್ತಿಕವಾಗಿ ಏನೇ ಸಮಸ್ಯೆಗಳು ಬಂದರೂ ಎದೆಗುಂದದೆ, ಅದಕ್ಕಾಗಿ ಯಾರನ್ನೂ ದೂಷಿಸದೆ, ದ್ವೇಷಿಸದೆ ನಿರ್ಲಿಪ್ತನಾಗಿ ಬಂದದ್ದನ್ನು ಬಂದಂತೆ ಸ್ವೀಕರಿಸುವ ಅವನ ನಿರ್ಲಿಪ್ತತೆ ಎಲ್ಲರಿಗೂ ಬರುವುದು ಕಷ್ಟ. ಎಷ್ಟೋ ಸಲ ನೋವು ನುಂಗಿ ನಗುವ ನಂಜುಂಡನಾಗಿ ಅವನು ನನಗೆ ಕಂಡಿದ್ದಾನೆ. ಕರ್ಮಯೋಗಿಯಂತೆ ಬಾಳಿದ್ದಾನೆ. ದಸರಾ ಉತ್ಸವ ನೋಡಲು ಪತ್ನಿ, ಸೊಸೆ ಮತ್ತು ಮೊಮ್ಮಗಳು ಮೈಸೂರಿಗೆ ಹೋಗಿದ್ದಾರೆ. ಅಂದು ಆಯುಧಪೂಜೆ. ಎಂದಿನಂತೆ ಕೆಲಸ ಕಾರ್ಯಗಳನ್ನು ಮಾಡಿದ್ದಾನೆ. ಅಡುಗೆ ಮಾಡಿ, ತಾನು ಊಟ ಮಾಡಿ ಮಗನಿಗೂ ಬಡಿಸಿದ್ದಾನೆ. ಸ್ವಲ್ಪ ಸಮಯದ ನಂತರ ಎದೆನೋವು ಕಾಣಿಸಿಕೊಂಡಿದೆ. ಮಗ ತಕ್ಷಣ ವೈದ್ಯರ ಬಳಿ ಕರೆದೊಯ್ದಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದೊಯ್ಯಲು ಸಿದ್ಧನಾದ ಸಂದರ್ಭದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ಎಲ್ಲಾ ಮುಗಿಯಿತು! ಅವನ ಅನಿರೀಕ್ಷಿತ ಅಂತ್ಯದ ಕುರಿತು ಇತರರಿಗಿರಲಿ, ಸ್ವತಃ ಪುಟ್ಟರಾಜುವಿಗೂ ಗೊತ್ತಿತ್ತೋ ಇಲ್ಲವೋ! ಇದರಲ್ಲಿ ನಮಗೆ ಒಂದು ಸಂದೇಶವೂ ಇದೆ, "ಮುಂದೆ ಮಾಡಬೇಕು ಎಂದುಕೊಂಡಿರುವ ಕೆಲಸಗಳನ್ನು ಮುಂದಕ್ಕೆ ಹಾಕದೆ ಇಂದೇ ಮಾಡಿ" ಎಂಬುದೇ ಆ ಸಂದೇಶ, ಆದೇಶ!
"ನ ಕಿಲ್ಬಿಷಮತ್ರ ನಾಧಾರೋ ಅಸ್ತಿ, ನ ಯನ್ಮಿತ್ರೈ ಸಮಮಮಾನ ಏತಿ| ಅನೂನಂ ಪಾತ್ರಂ ನಿಹಿತಿಂ ಏತತ್ಪಕ್ತಾರಂ ಪಕ್ವಃ ಪುನರಾವಿಷಾತಿ||" - ಆ ಪರಮಾತ್ಮನ ನ್ಯಾಯವಿಧಾನದಲ್ಲಿ ನ್ಯೂನತೆಯೆಂಬುದೇ ಇಲ್ಲ. ಗೂಢವಾಗಿ ಇರಿಸಲ್ಪಟ್ಟ ದೋಷವಿಲ್ಲದ ಪಾತ್ರೆಯಲ್ಲಿ ಬೇಯುತ್ತಿರುವ ಆಹಾರವನ್ನು ಬೇಯಿಸಿದವನೇ ಉಣ್ಣಬೇಕಿದೆ. 'ಮಾಡಿದ್ದುಣ್ಣೋ ಮಹರಾಯ' ಎಂಬುದೇ ಈ ವೇದಮಂತ್ರದ ಅರ್ಥ. 'ಕರ್ಮಕ್ಕೆ ತಕ್ಕ ಫಲವಿದೆ' ಎಂಬುದು ಭಗವದ್ಗೀತೆಯ ಸಾರ. ಪುಟ್ಟರಾಜು, ನೀನೊಬ್ಬ ಕರ್ಮಯೋಗಿ. ಕರ್ಮ ಮಾಡುತ್ತಲೇ ಜೀವನ ಮುಗಿಸಿದೆ. ಒಳ್ಳೆಯ ಕರ್ಮಗಳ ರಾಶಿಯೇ ನಿನ್ನ ಬೆನ್ನಿಗಿದೆ. ಪುಟ್ಟರಾಜುವಾಗಿ ನಿನ್ನ ಕರ್ಮಪಥ ಅಂತ್ಯವಾಗಿದೆ. ಮುಂದೆ ನೀನು 'ದೊಡ್ಡ'ರಾಜುವಾಗಿ ಮತ್ತೊಂದು ರೀತಿಯಲ್ಲಿ ಮುನ್ನಡೆಯುವ ಬಗ್ಗೆ ನಮಗೆ ಅದಮ್ಯ ವಿಶ್ವಾಸವಿದೆ. ಆದರೆ, ದೇವರ ಆಟ ಹೇಗಿದೆಯೆಂದರೆ ಹಿಂದೆ ಹೇಗಿದ್ದೆವು, ಮುಂದೆ ಹೇಗಾಗುತ್ತೇವೆ ಎಂಬುದು ಯಾರಿಗೂ ಗೊತ್ತಾಗುವುದೇ ಇಲ್ಲ. ಆದರೆ, ಅವನ ಸಂದೇಶ ಮಾತ್ರ ಸ್ಪಷ್ಟ, 'ಒಳ್ಳೆಯದು ಮಾಡಿದರೆ ಒಳ್ಳೆಯದೇ ಆಗುತ್ತದೆ'. ನಮ್ಮ ಸನಾತನ ಧರ್ಮದ ತಿರುಳೂ ಇದೇ ಆಗಿದೆಯೆಂಬುದು ಆಧ್ಯಾತ್ಮಿಕ ಶ್ರೇಷ್ಠರೆಲ್ಲರ ಮಾತು! ಅದೇನೇ ಇರಲಿ, ಪ್ರೀತಿಯ ಪುಟ್ಟರಾಜು, ನನ್ನ ಪಾಲಿಗೆ, ನಿನ್ನನ್ನು ನಂಬಿರುವವರ, ನಿನ್ನನ್ನು ಪ್ರ್ರೀತಿಸುವವರ, ನಿನ್ನ ಬಂಧುಗಳು, ಸ್ನೇಹಿತರು, ವಿಶ್ವಾಸಿಗಳೆಲ್ಲರ ಪಾಲಿಗೆ ನೀನೊಂದು ದೊಡ್ಡ ಶೂನ್ಯ ನಿರ್ಮಿಸಿ ಹೋಗಿರುವೆ. ಅದನ್ನು ಸಹಿಸುವ ಶಕ್ತಿಯನ್ನು ದೇವರು ಎಲ್ಲರಿಗೂ ಕೊಡಲಿ. ಹೋಗಿ ಬಾ, ಪುಟ್ಟರಾಜು! ನಿನ್ನ ಮುಂದಿನ ಪಯಣ ಸುಖಮಯವಾಗಿರಲಿ, ಆನಂದದಾಯಕವಾಗಿರಲಿ.
-ಕ.ವೆಂ.ನಾಗರಾಜ್.
ಮಂಗಳವಾರ, ಅಕ್ಟೋಬರ್ 2, 2018
ಷಣ್ಮುಖರಾಗೋಣ!
ನಾವು ಆರು ಜನರು ಕವಿಕಿರಣ ವಿಶ್ವಸ್ತ ಮಂಡಳಿಯ ಸದಸ್ಯರು - ಷಣ್ಮುಖರು! ಆರು ಜನರಿಗೂ ಅವರದೇ ಆದ ಕೆಲಸ ಕಾರ್ಯಗಳು! ಅದು ಅವರವರು ಇಷ್ಟಪಡುವ ಸಾಮಾಜಿಕ ಕಾರ್ಯಗಳಿರಬಹುದು, ಹವ್ಯಾಸಗಳಿರಬಹುದು, ವೃತ್ತಿಯಲ್ಲಿ ವ್ಯಸ್ತರಿರಬಹುದು, ಕೌಟುಂಬಿಕ ಸಮಸ್ಯೆಗಳು, ಜವಾಬ್ದಾರಿಗಳಿರಬಹುದು, ಇನ್ನಿತರ ಒತ್ತಡಗಳಿರಬಹುದು, ಏನೋ ಇರಬಹುದು! ಆದರೂ, ಈ ಕಾರ್ಯ ಮಾಡಲು ಮುಂದೆ ಬಂದಿದ್ದೇವೆ. ಇದಕ್ಕೆ ಸಮಯ ಹೊಂದಾಣಿಕೆ ಹೇಗೆ? ಏನು ಮಾಡಬಹುದು? ಒಂದೆರಡು ಸಣ್ಣ ಟಿಪ್ಸ್, ನಮಗಾಗಿ!!
೧. ಮನಸ್ಸು ಮಾಡೋಣ:
ನಮ್ಮ ಮನಸ್ಸು ಒಪ್ಪುವ ಕೆಲಸಕ್ಕೆ ಸಮಯ ಹೊಂದಾಣಿಕೆ ಆಗಿಯೇ ಆಗುತ್ತದೆ. ಮೊದಲು ನಮ್ಮ ಮನಸ್ಸನ್ನು ಅಣಿ ಮಾಡಿಕೊಳ್ಳೋಣ. ಬಲವಂತದಿಂದ ಆಗುವ ಕೆಲಸ ಇದಲ್ಲ. ನಮ್ಮ ಮನಸ್ಸಿಗೇ ಬರಬೇಕು. ಇದಕ್ಕಾಗಿ ಮಾಡುವ ಕೆಲಸದ ವಿವರ ಮತ್ತು ಪರಿಜ್ಞಾನ ಹೊಂದಬೇಕು. ವಿಶ್ವಸ್ತ ಮಂಡಳಿಯ ಕೆಲಸ ಸದಾ ಕಾಲ ಇರುವುದಿಲ್ಲ. ಮತ್ತು ಇದನ್ನು ಪ್ರತಿನಿತ್ಯ ಮಾಡಲೇಬೇಕು ಎಂಬುದೂ ಇಲ್ಲ. ನಮ್ಮ ದಿನನಿತ್ಯದ, ವೃತ್ತಿ, ಹವ್ಯಾಸ, ಕೌಟುಂಬಿಕ, ಸಾಮಾಜಿಕ ವಿಷಯಗಳಿಗೆ ಮತ್ತು ಇಂತಹ ಇನ್ನಿತರ ಸಂಗತಿಗಳಿಗೆ ಸಂಬಂಧಿಸಿದ ಕರ್ತವ್ಯಗಳ ನಿರ್ವಹಣೆ ಮಾಡಿ ಉಳಿಯುವ ಸ್ವಲ್ಪ ಸಮಯವನ್ನಾದರೂ ಈ ಕೆಲಸಕ್ಕೆ ನೀಡಲು ಮನಸ್ಸನ್ನು ಅಣಿಗೊಳಿಸಿಕೊಳ್ಳಬೇಕು. ಸಮಯ, ಸಂದರ್ಭ, ಅಗತ್ಯತೆ ಅನುಸರಿಸಿ ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ಸಮಯವನ್ನು ವಿಶೇಷವಾಗಿ ಹೊಂದಿಸಿಕೊಳ್ಳಲು ಮನಸ್ಸು ಸಿದ್ಧವಿರುವಂತೆ ನೋಡಿಕೊಳ್ಳಬೇಕು. ಒಂದು ಪ್ರಧಾನ ಅಂಶವೆಂದರೆ, ಇದು ಆರು ಜನರ ಪೈಕಿ ಯಾರೊಬ್ಬರೂ ಇನ್ನೊಬ್ಬರ ಸಲುವಾಗಿ, ಅವರ ಉಪಕಾರಕ್ಕಾಗಿ ಮಾಡುತ್ತಿರುವ ಕೆಲಸವಾಗಿಲ್ಲ. ಎಲ್ಲರೂ ಮಾಡುತ್ತಿರುವುದು ಒಂದು ಯಜ್ಞವೆಂಬ ಭಾವನೆಯಿಂದ! ಹೇಳುವ ಮಂತ್ರ - ಇದಂ ನಮಮ - ಇದು ನಮಗಾಗಿ ಅಲ್ಲ! ಎಲ್ಲರಿಗಾಗಿ!! ಆತ್ಮ ಸಂತೋಷದ ಸಲುವಾಗಿ!! ಪರಮಾತ್ಮನ ಪ್ರೀತ್ಯರ್ಥದ ಸಲುವಾಗಿ!!
೨. ವಿಶ್ವಸ್ತ ಮಂಡಳಿಯ ವಿಶ್ವಸನಾ ಪತ್ರ (ಟ್ರಸ್ಟ್ ಡೀಡ್) ಓದೋಣ!
ನಾವು ಮಾಡುವ ಕೆಲಸದ ಅರಿವು ನಮಗಿರಬೇಕು; ಅದಕ್ಕಾಗಿ ಟ್ರಸ್ಟ್ ಡೀಡ್ ಅನ್ನು ಸಮಯ ಮಾಡಿಕೊಂಡು ಓದೋಣ, ಮನನ ಮಾಡಿಕೊಳ್ಳೋಣ! ಟ್ರಸ್ಟಿನ ಧ್ಯೇಯೋದ್ದೇಶಗಳನ್ನು ಓದುತ್ತಾ ಹೋದಂತೆ ನಮಗೆ ವಿವಿಧ ಭಾವಗಳು ಮೂಡಬಹುದು: ಇದೆಂತಹ ಹುಚ್ಚು ಕಲ್ಪನೆ, ಇದು ನಮ್ಮಂತಹವರಿಂದ ಸಾಧ್ಯವೇ? ಮಾಡಲು ಕೆಲಸವಿಲ್ಲ, ನಮಗೆ ಈಗಿರುವ ಕೆಲಸಕಾರ್ಯಗಳೇ ಹಾಸಿ ಹೊದೆಯುವಷ್ಟಿರುವಾಗ ಇದಕ್ಕೆಲ್ಲಾ ಎಲ್ಲಿ ಸಮಯ ಕೊಡುವುದು? ಹೀಗೆ ಸಮ್ಮಿಶ್ರ ವಿಚಾರಗಳು ಮನಸ್ಸಿನಲ್ಲಿ ಮೂಡಬಹುದು. ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ: ಈ ಉದ್ದೇಶ ಸರ್ವ ಸಾಮಾನ್ಯನ ಹಿತದ ಸಲುವಾಗಿ ಇದೆಯೇ, ಇಲ್ಲವೇ? ಬರುವ ಉತ್ತರ ಇದೆಯೆಂದೇ ಆಗಿರುತ್ತದೆ. ಎರಡನೆಯ ಪ್ರಶ್ನೆ: ನಮ್ಮಿಂದ ಈ ಕೆಲಸ ಸಾಧ್ಯವೇ? ಉತ್ತರ: ಖಂಡಿತಾ ಸಾಧ್ಯ! ಇಂತಹ ಕೆಲಸಗಳನ್ನು ಹಿಂದೆ ಮಾಡಿದ್ದವರು, ಈಗ ಮಾಡುತ್ತಿರುವವರು ಮತ್ತು ಮುಂದೆ ಮಾಡುವವರೂ ನಮ್ಮ ನಿಮ್ಮಂತಹ ಸಾಮಾನ್ಯರೇ. ಬೇಕಾಗಿರುವುದು ಮಾನಸಿಕ ಬಲ ಮತ್ತು ಮಾಡಬೇಕೆಂಬ ಮನಸ್ಸು, ಅಷ್ಟೇ! ಇರುವ ಆರು ಜನರೂ ಸಂಘ ಪರಿವಾರದ ಮೂಲದವರು, ಅವರ ವಿಚಾರಗಳಿಂದ ಪ್ರೇರಿತರಾದವರು ಮತ್ತು ಇದೇ ಉದ್ದೇಶದ ಚಟುವಟಿಕೆಗಳಲ್ಲಿ ಒಂದಲ್ಲಾ, ಒಂದು ರೀತಿಯಲ್ಲಿ ತೊಡಗಿಸಿಕೊಂಡವರೇ! ಮಾಡುತ್ತಿರುವ ಕೆಲಸವನ್ನೇ ಇನ್ನೊಂದು ರೂಪದಲ್ಲಿ ಮಾಡುತ್ತಿದ್ದೇವೆ ಅಷ್ಟೇ! ಮನಸ್ಸು ಮಾಡಿದರೆ ನಮ್ಮ ಕಣ್ಣ ಮುಂದೆಯೇ ಉದ್ದೇಶ ಈಡೇರುವುದನ್ನು ಕಾಣುವ ಸೌಭಾಗ್ಯ ನಮ್ಮದಾಗುತ್ತದೆ, ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆಯಂತೂ ಖಂಡಿತಾ ಕಾಣುತ್ತದೆ. ನಮ್ಮ ತೊಡಗುವಿಕೆಯ ರೀತಿ ಇದನ್ನು ಅವಲಂಬಿಸಿದೆ.
೩. ಕವಿಕಿರಣ ಪತ್ರಿಕೆಯ ಪ್ರಭೆ ಬೆಳಗಿಸುವುದು:
ಟ್ರಸ್ಟಿನ ಮೊದಲ ಹೆಜ್ಜೆಯಾಗಿ ಕವಿಕಿರಣ ಪತ್ರಿಕೆಯನ್ನು ಬೆಳೆಸುವತ್ತ ಗಮನ ನೀಡಿದರೆ ಜೊತೆ ಜೊತೆಗೆ ಟ್ರಸ್ಟಿನ ಇತರ ಉದ್ದೇಶಗಳೂ ಈಡೇರುವುದನ್ನು ಕಾಣಲು ಸಾಧ್ಯವಿದೆ. ಇರುವ ಆರು ಜನರೂ ಸಂಪನ್ಮೂಲ ವ್ಯಕ್ತಿಗಳೇ, ಶಕ್ತಿಯುಳ್ಳವರೇ ಆಗಿದ್ದಾರೆ. ಆದರೆ ಅವರ ಶಕ್ತಿ ಪ್ರತ್ಯೇಕವಾಗಿ ಹರಿದು ಹಂಚದಿರುವಂತೆ, ಸಂಘಟಿತವಾಗಿ ಪ್ರವಹಿಸಿದರೆ ಅನಿರೀಕ್ಷಿತ ಫಲ ಸಿಗುತ್ತದೆಂಬುದರಲ್ಲಿ ಅನುಮಾನವಿಲ್ಲ. ಯಾವುದೇ ಕೆಲಸವನ್ನು ಸಣ್ಣದು ಎಂಬ ದೃಷ್ಟಿಯಿಂದ ನೋಡದೆ ಮಾಡಲು ಗಮನ ಕೊಡೋಣ. ಸಣ್ಣ ಸಣ್ಣ ಕೆಲಸಗಳು ಅಡೆತಡೆಯಿಲ್ಲದೆ ಚೆನ್ನಾಗಿ ಆದರೆ, ದೊಡ್ಡ ದೊಡ್ಡ ಕೆಲಸಗಳು ಮತ್ತಷ್ಟು ಚೆನ್ನಾಗಿ ಮತ್ತು ಸುಲಭವಾಗಿ ಆಗುತ್ತವೆ. ದೊಡ್ಡ ಕೆಲಸಗಳಿಗೆ ಸಣ್ಣ ಕೆಲಸಗಳೇ ತಳಪಾಯ. ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ ಎಂಬ ಭಾವನೆಯಿಂದ ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿರಿಸಿ ಕೆಲಸ ಮಾಡುವ ಮನೋಭಾವ ಎಲ್ಲರಲ್ಲೂ ಬರಬೇಕು. ಇನ್ನು ಎರಡು, ಎರಡೂವರೆ ತಿಂಗಳಲ್ಲಿ ತ್ರೈಮಾಸಿಕ ಕವಿಕಿರಣದ ಹೊಸ ರೂಪ ಅವತರಿಸಬೇಕು. ಅದಕ್ಕಾಗಿ ನಾವು ಸಹಕರಿಸಬೇಕು. ಕವಿಮನೆತನದವರು ಮತ್ತು ಬಂಧುಗಳನ್ನು ಚಂದಾದಾರರು, ಪೋಷಕರುಗಳನ್ನಾಗಿಸಲು ಮೊದಲ ಹಂತದಲ್ಲಿ ಕೆಲಸ ಪ್ರಾರಂಭವಾಗಬೇಕು. ಪರಿಚಯವಿರುವ ಸ್ನೇಹಿತರು, ಹಿತೈಷಿಗಳನ್ನೂ ಮಾತನಾಡಿಸಬೇಕು. ಇನ್ನೊಬ್ಬರನ್ನು ಈ ಬಗ್ಗೆ ಪ್ರೇರಿಸುವ ಮೊದಲು ನಾವು ಆ ಕೆಲಸ ಮಾಡಿರಬೇಕು, ನಮ್ಮ ದೇಣಿಗೆಯನ್ನು ನಾವು ಮೊದಲು ಸಕಾಲದಲ್ಲಿ ನೀಡೋಣ ಮತ್ತು ಆಗ ನಮಗೆ ನೈತಿಕ ಬಲ ಸಹಜವಾಗಿ ಇರುತ್ತದೆ. ಕೆಲಸ ವೇಗವಾಗಿ ಆಗುತ್ತದೆ. ಟ್ರಸ್ಟಿನ ಒಂದು ಔಪಚಾರಿಕ ಉದ್ಘಾಟನೆ ಮತ್ತು ಕವಿಕಿರಣ ಪರಿಚಯಿಸುವ ಸಮಾರಂಭವನ್ನು ನವೆಂಬರ್ ತಿಂಗಳಿನಲ್ಲಿ ಅಥವ ಡಿಸೆಂಬರ್ ಮೊದಲ ವಾರದ ಒಳಗೆ ಮಾಡಿದರೆ ಕಾರ್ಯಕ್ಕೆ ಅನುಕೂಲವಾಗಬಹುದು. ಇದಕ್ಕೆಲ್ಲಾ ಬೇಕಾಗುವ ಸಮಯವನ್ನು, ಮೊದಲೇ ಹೇಳಿದಂತೆ ನಮ್ಮ ನಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಕೊಂಡ ನಂತರ ಉಳಿಯುವ ಸಮಯದಲ್ಲಿ ಕೊಡಲು ಸಾಧ್ಯವಿದೆ.
ಷಣ್ಮುಖರಾಗೋಣ! ಭಿನ್ನ ವಿಚಾರಗಳು, ಭಿನ್ನ ಕೆಲಸ ಕಾರ್ಯಗಳಿದ್ದರೂ ಒಂದು ಸಮಾನ ಭಾವದ, ಸರ್ವಹಿತದ ಕೆಲಸಕ್ಕಾಗಿ, ಆರು ತಲೆಗಳಿದ್ದರೂ, ಒಂದೇ ದೇಹದೊಂದಿಗೆ ಚಲಿಸುವ ಷಣ್ಮುಖನಂತೆ ಮುಂದೆ ಸಾಗೋಣ!
-ಕ.ವೆಂ. ನಾಗರಾಜ್.
ಭಾನುವಾರ, ಸೆಪ್ಟೆಂಬರ್ 30, 2018
ಕವಿಕಿರಣ - ೧೧ ವರ್ಷಗಳ ಪಯಣ - ಭಾಗ: ೨
ಆರ್ಥಿಕ ಸಂಪನ್ಮೂಲ ಕ್ರೋಢೀಕರಣ
ಕವಿಕಿರಣ ಪತ್ರಿಕೆಗೆ ಭಾರತದ ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ಸ್ ಇಂದ ಶೀರ್ಷಿಕೆಗೆ ಒಪ್ಪಿಗೆ ಪಡೆದ ನಂತರದಲ್ಲಿ ಸೋದರ ಸುರೇಶನನ್ನು ಮುದ್ರಕ ಮತ್ತು ಪ್ರಕಾಶಕ ಎಂದು ಅಧಿಕೃತಗೊಳಿಸಿ ಆವನಿಗೆ ಶಿವಮೊಗ್ಗ ಅಪರ ಜಿಲ್ಲಾಧಿಕಾರಿಯವರ ಸಮಕ್ಷಮದಲ್ಲಿ ಅಗತ್ಯದ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಅಧಿಕಾರ ಪತ್ರ ನೀಡಿದೆ. ಪ್ರಮಾಣ ಪತ್ರ ಸಲ್ಲಿಸಿದ ನಂತರ ಪತ್ರಿಕೆಯ ನೋಂದಣಿ ಪತ್ರ ಬಂದಿತು. ಪತ್ರಿಕೆ ಅಧಿಕೃತವಾಗಿ ಬೆಂಗಳೂರಿನಲ್ಲಿ ನಡೆದ ಕವಿಮನೆತನದವರ ಮೂರನೆಯ ಕುಟುಂಬ ಸಮಾವೇಶದ ಸಂದರ್ಭದಲ್ಲಿ ಬಿಡುಗಡೆಯೂ ಆಯಿತು. ಪ್ರಾರಂಭದ ಸಂಚಿಕೆಗೆ ಅಮೆರಿಕಾದಲ್ಲಿರುವ ನನ್ನ ಕಿರಿಯ ಸಹೋದರ ಅನಂತ ಪ್ರಾಯೋಜಕನಾಗಿ ಮುಂದೆ ಬಂದಿದ್ದ. ಬೆಂಗಳೂರಿನ ಸಮಾವೇಶದಲ್ಲಿಯೇ ಜಾವಗಲ್ಲಿನಲ್ಲಿದ್ದ ನನ್ನ ತಾಯಿಯ ತಮ್ಮ ಪುಟ್ಟರಾಜುವನ್ನು ಮುಂದಿನ ಸಂಚಿಕೆಗೆ ಪ್ರಾಯೋಜಕನಾಗಲು ಒಪ್ಪಿಸಿದ್ದೆ. ಹೀಗೆ ಅಡಿಗಳನ್ನಿಟ್ಟು ಕವಿಕಿರಣ ಮುನ್ನಡೆಯಲಾರಂಭಿಸಿತು. ಮೊದಲ ಎರಡು ಸಂಚಿಕೆಗಳನ್ನು ಶಿವಮೊಗ್ಗದ ರಾಯಲ್ ಪ್ರಿಂಟರ್ಸಿನಲ್ಲಿ ಮುದ್ರಿಸಿ ಪಡೆಯಲಾಗಿತ್ತು. ಆ ವೇಳಗೆ ೧೪-೦೭-೨೦೦೯ರಲ್ಲಿ ನನ್ನ ತಂದೆ ಕವಿ ವೆಂಕಟಸುಬ್ಬರಾಯರು ಕೀರ್ತಿಶೇಷರಾದರು. ನಾನೂ ಸ್ವ ಇಚ್ಛಾ ನಿವೃತ್ತಿ ಪಡೆದು ಹಾಸನಕ್ಕೆ ಬಂದೆ. ನಂತರದ ಕವಿಕಿರಣ ಪತ್ರಿಕೆಗಳ ಮುದ್ರಣ ಮಿತ್ರ ಪಾಂಡುರಂಗರವರ (ಈಗ ಅವರು ಕವಿಕಿರಣ ಚಾರಿಟಬಲ್ ಟ್ರಸ್ಟಿನ ಸದಸ್ಯರುಗಳ ಪೈಕಿ ಒಬ್ಬರು) ಬಾಲಾಜಿ ಪ್ರಿಂಟರ್ಸಿನಲ್ಲಿ ಮುದ್ರಣ ಮಾಡಿಸಲು ಪ್ರಾರಂಭವಾಗಿದ್ದು, ಅದು ಅವಿರತವಾಗಿ ಮುಂದುವರೆದುಕೊಂಡು ಬಂದಿದೆ. ಪಾಂಡುರಂಗರವರ ಸಹಕಾರದ ಬಗ್ಗೆ ತಿಳಿಸಲೇಬೇಕು. ಅವರು ಮುದ್ರಣಕ್ಕೆ ಸಂಬಂಧಿಸಿದ ಕಾಗದ ಮತ್ತು ಇತರ ಕನಿಷ್ಠ ವೆಚ್ಚವನ್ನು ಮಾತ್ರ ಪಡೆಯುತ್ತಿದ್ದು, ಅವರ ಲಾಭಾಂಶವನ್ನು ತೆಗೆದುಕೊಳ್ಳುತ್ತಲೇ ಇರಲಿಲ್ಲ. ನಿಮ್ಮ ಸಾಮಾಜಿಕ ಕಾರ್ಯದಲ್ಲಿ ನನ್ನದೂ ಒಂದು ಸಣ್ಣ ಪಾಲಿರಲಿ ಎಂದು ಅವರು ಹೇಳುತ್ತಿದ್ದರು. ಅವರೇ ಒಂದೆರಡು ಸಲ ತಮ್ಮ ಪಾಲಿನ ದೇಣಿಗೆ ಎಂದು ಹಣ ನೀಡಿದ್ದೂ ಇದೆ.
ಮೂಲ ವಿಷಯಕ್ಕೆ ಬರುತ್ತೇನೆ. ಕವಿಕಿರಣ ಪತ್ರಿಕೆಗೆ ಒಬ್ಬೊಬ್ಬ ಕವಿ ಕುಟುಂಬಗಳವರು ವಾರ್ಷಿಕವಾಗಿ ರೂ. ೫೦೦/- ಕೊಡಬೇಕೆಂಬುದು ಸಮಾವೇಶದ ಸಂದರ್ಭದಲ್ಲಿ ಮಾತಾಗಿತ್ತು. ಪ್ರಾರಂಭದ ಒಂದೆರಡು ವರ್ಷ ಹಲವರು ನೀಡಿದರು. ನಂತರ ಅವರ ಸಂಖ್ಯೆ ಕ್ಷೀಣಿಸಿತು. ಆದರೂ ಪತ್ರಿಕೆಗೆ ಯಾವುದೇ ಚಂದಾದರ ನಿಗದಿಸದೆ ಉಚಿತವಾಗಿ ಎಲ್ಲಾ ಕವಿ ಕುಟುಂಬಗಳವರಿಗೂ, ಬಂದುಗಳಿಗೂ ಮತ್ತು ಮಿತ್ರರಿಗೂ ಅಂಚೆಯ ಮೂಲಕ ಮತ್ತು ಖುದ್ದಾಗಿ ವಿತರಣೆ ಆಗುತ್ತಿತ್ತು. ಇಂತಹ ಪರಿಸ್ಥಿತಿ ಬರಬಹುದೆಂಬ ನಿರೀಕ್ಷೆ ಇದ್ದುದರಿಂದ ಪ್ರತಿ ಸಂಚಿಕೆಗೂ ಒಬ್ಬರನ್ನು ಪ್ರಾಯೋಜಕರಾಗುವಂತೆ ಪ್ರೇರಿಸಿ ಸಂಚಿಕೆ ಮುನ್ನಡೆಸಿಕೊಂಡು ಬರಲಾಯಿತು. ಪ್ರಾಯೋಜಕರಾಗಲು ಒಪ್ಪಿ ನಂತರ ಹಿಂದೆ ಸರಿದಿದ್ದ ಇಬ್ಬರು ಮಹನೀಯರೂ ಇದ್ದರು. ಪ್ರಾಯೋಜಕರಾಗಿ ಮುಂದೆ ಬಂದು ಸಹಕರಿಸಿದ್ದ ಮಹನೀಯರುಗಳಿವರು:
೧. ಶ್ರೀ ಕ.ವೆಂ. ಅನಂತ, ಕಾಲೇಜ್‌ವಿಲೆ, ಪಿಎ, ಯು.ಎಸ್.ಎ. (ಎರಡು ಸಂಚಿಕೆಗಳು)
೨. ಶ್ರೀ ಹೆಚ್,ಎಸ್. ಪುಟ್ಟರಾಜು, ಜಾವಗಲ್, ಅರಸಿಕೆರೆ ತಾ.
೩. ಕವಿಮನೆತನದ ಓರ್ವ ಹಿರಿಯರು, ಬೆಂಗಳೂರು (ಇವರು ಹೆಸರು ಪ್ರಕಟಿಸಲು ಇಚ್ಛಿಸಿರಲಿಲ್ಲ)
೪. ಶ್ರೀ ಬಿ.ವಿ. ಹರ್ಷ, ಬೆಂಗಳೂರು. (ಈಗ ಲಂಡನ್)
೫. ದಿ. ಶ್ರೀ ಕವಿ ವೆಂಕಟಸುಬ್ಬರಾಯರ ಮಕ್ಕಳು.(ವಿಶೇಷ ಪೂರಕ ಸಂಚಿಕೆ-೧)
೬. ಶ್ರೀ ಎನ್. ಶ್ರೀನಿವಾಸ, ಬೆಂಗಳೂರು.
೭. ಶ್ರೀ ಹೆಚ್..ಕೆ. ಸತ್ಯನಾರಾಯಣ, ಶಿಕಾರಿಪುರ.
೮. ಶ್ರೀ ಬಿ.ಎಲ್. ಸತೀಶಕುಮಾರ್, ಬೆಂಗಳೂರು..
೯. ಶ್ರೀ ಎಮ್.ಎಸ್. ನಾಗೇಂದ್ರ, ಬೆಂಗಳೂರು..
೧೦. ಶ್ರೀಮತಿ ಸುಬ್ಬಲಕ್ಷ್ಮಮ್ಮ ಸುಬ್ಬರಾವ್, ಬೆಂಗಳೂರು..
೧೧. ಶ್ರೀ ವಿನಯ್ ನಾಗರಾಜ್, ಬೆಂಗಳೂರು..
೧೨. ಶ್ರೀ ಕ.ವೆಂ.ನಾಗರಾಜ್, ಹಾಸನ.
೧೩. ಕೆಳದಿ ಜೋಯಿಸ್ ಮನೆತನದವರು
೧೪. ದಿ. ಶ್ರೀ ಸಾ.ಕ. ಕೃಷ್ಣಮೂರ್ತಿ, ಬೆಂಗಳೂರು..
೧೫. ದಿ. ಶ್ರೀಮತಿ ರತ್ನಮ್ಮ ಬ.ನ.ಸುಂದರರಾವ್ ಕುಟುಂಬವರ್ಗ, ಬೆಂಗಳೂರು.
೧೬. ಶ್ರೀ ಹೆಚ್.ಎಸ್.ರಾಮಸ್ವಾಮಿ, ಹಾಸನ, ಶ್ರೀಮತಿಯರಾದ ಸೀತಮ್ಮ ವೆಂಕಟಸುಬ್ಬರಾವ್,
ಸಾವಿತ್ರಮ್ಮಸತ್ಯನಾರಾಯಣ, ಬೆಂಗಳೂರು.
೧೭. ಶ್ರೀ ಎಸ್.ಕೆ. ಪ್ರಕಾಶ್, ಶ್ರೀ ಎಸ್.ಕೆ. ಗೋಪಿನಾಥ್, ಬೆಂಗಳೂರು. (ವಿಶೇಷ ಪೂರಕ ಸಂಚಿಕೆ-೨)
೧೮. ಶ್ರೀಮತಿ ಬಿಂದುರಾಘವೇಂದ್ರ, ಬೆಂಗಳೂರು.
೧೯. ಶ್ರೀ ಕವಿ ವೆಂ. ಸುರೇಶ್, ಶಿವಮೊಗ್ಗ.
೨೧. ಡಾ|| ಕೆ. ಕೃಷ್ಣಜೋಯಿಸ್, ಶ್ರೀ ಹೆಚ್.ಎಸ್.ಜಯಶಂಕರ, ಶ್ರೀಮತಿ ಹೆಚ್.ಎಸ್. ಸಾವಿತ್ರಮ್ಮ,
ಬೆಂಗಳೂರು.
ವಿಶೇಷವೆಂದರೆ ವಾರ್ಷಿಕ ಚಂದಾ ಹಣವನ್ನು ನೀಡಲು ಯಾವುದೇ ಕುಟುಂಬಗಳನ್ನವರನ್ನಾಗಲೀ, ಬಂಧುಗಳನ್ನಾಗಲೀ ಒತ್ತಾಯಿಸಲೇ ಇಲ್ಲ. ಸಂಗ್ರಹಕ್ಕಾಗಿ ಯಾರನ್ನೂ ನಿಯೋಜಿಸಲಿಲ್ಲ. ಸ್ವಪ್ರೇರಣೆಯಿಂದ ನೀಡಲಿ ಎಂಬುದು ಅಪೇಕ್ಷೆಯಾಗಿತ್ತು. ಅದಕ್ಕೆ ಸ್ಪಂದಿಸಿದ್ದವರು ಕೆಲವರು ಮಾತ್ರ. ಅಂತಹ ಸತತ ಪ್ರೋತ್ಸಾಹಕರನ್ನು ನೆನೆಯಲೇಬೇಕು. ಹೆಸರಿಸಬೇಕೆಂದರೆ:
ಶ್ರೀ/ಶ್ರೀಮತಿಯರಾದ:
೧. ದಿ. ಕವಿ ವೆಂಕಟಸುಬ್ಬರಾಯರು, ಶಿವಮೊಗ್ಗ
೨. ದಿ. ಸಾ.ಕ. ಕೃಷ್ಣಮೂರ್ತಿಯವರು, ಬೆಂಗಳೂರು
೩. ಕ.ವೆಂ. ನಾಗರಾಜ್, ಹಾಸನ,
೪. ಕವಿ ವೆಂ. ಸುರೇಶ್, ಶಿವಮೊಗ್ಗ,
೫. ಡಾ. ಕೆಳದಿ ಗುಂಡಾಜೋಯಿಸ್, ಕೆಳದಿ,
೬. ಸಾ.ಕ. ರಾಮರಾವ್, ಬೆಂಗಳೂರು,
೭. ಸೀತಮ್ಮ ವೆಂಕಟಸುಬ್ಬರಾವ್, ಬೆಂಗಳೂರು,
೮. ಸುಬ್ಬಲಕ್ಷ್ಮಮ್ಮ ಸುಬ್ಬರಾವ್, ಬೆಂಗಳೂರು,
೯. ಡಾ. ಕೆಳದಿ ಕೃಷ್ಣಜೋಯಿಸ್, ಬೆಂಗಳೂರು,
ಮೇಲೆ ಹೆಸರಿಸಿದವರಲ್ಲದೆ, ಭೇಟಿಯಾದ ಸಂದರ್ಭಗಳಲ್ಲಿ ಆಗಾಗ್ಗೆ ವಂತಿಕೆ ನೀಡುವವರೂ ಇದ್ದರು. ಎಲ್ಲರೂ ಅಭಿನಂದನಾರ್ಹರು. ಮಿತ್ರರ ಪೈಕಿ ಕವಿಕಿರಣದ ಕಾರ್ಯ ಮೆಚ್ಚಿ ಕೇಳದಿದ್ದರೂ ಸ್ವ ಇಚ್ಛೆಯಿಂದ ಆಗಾಗ್ಗೆ ಹಣ ನೀಡುತ್ತಿದ್ದ ಶ್ರೀಯುತ ರಮೇಶ ಕಾಮತ್, ಗುರುಪ್ರಸಾದ ಕಾಮತ್, ಸುಮಂಗಲಿ ಸಿಲ್ಕ್ಸ್‌ನ ಗೋಪಾಲಕೃಷ್ಣ ಮೊದಲಾದವರೂ ಅಭಿನಂದನೆಗೆ ಪಾತ್ರರು. ಇಷ್ಟೆಲ್ಲದರ ನಡುವೆ, ಚಂದಾ ಇಲ್ಲದೆ, ಸಂಗ್ರಹಕ್ಕೆ ತೊಡಗದೆ, ಜಾಹಿರಾತು ಇಲ್ಲದೆ ೧೧ ವರ್ಷಗಳ ನಂತರದಲ್ಲಿಯೂ, ಪತ್ರಿಕೆಯ ನಿಧಿಯಾಗಿ ರೂ. ೬೪೧೦೮/- ಶಿಲ್ಕು ಉಳಿದಿದೆ. ಜಮಾ-ಖರ್ಚುಗಳ ಪ್ರತಿ ಪೈಸೆಗೂ ಲೆಕ್ಕ ಇಟ್ಟಿದೆ. ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತಲೂ ಇತ್ತು. ಈ ಹಣ ಈಗ ಕವಿಕಿರಣ ಚಾರಿಟಬಲ್ ಟ್ರಸ್ಟಿನ ಪ್ರಾರಂಭಿಕ ನಿಧಿಯಾಗಲಿದೆ. ಎಲ್ಲಾ ವಿಶ್ವಸ್ತರುಗಳೂ ತಮ್ಮ ದೇಣಿಗೆಯಾಗಿ ತಲಾ ರೂ. ೧೫೦೦೦/- ನೀಡಲಿದ್ದಾರೆ. ಸತ್ಕಾರ್ಯಕ್ಕೆ ನಾಂದಿಯಾಗಲಿದೆ. ಸಜ್ಜನ ಬಂದುಗಳೂ ತಮ್ಮ ಸಹಾಯ ಹಸ್ತ ಚಾಚಲು ಅವಕಾಶವಿದೆ.
-ಕ.ವೆಂ.ನಾಗರಾಜ್.
ಶುಕ್ರವಾರ, ಸೆಪ್ಟೆಂಬರ್ 28, 2018
ಕವಿಕಿರಣ - ೧೧ ವರ್ಷಗಳ ಪಯಣ - ಭಾಗ: ೧
ಕವಿಕಿರಣ ಪತ್ರಿಕೆ ಸಾರ್ಥಕ ೧೧ ವರ್ಷಗಳನ್ನು ಪೂರ್ಣಗೊಳಿಸಿ, ಹೊಸ ರೀತಿಯಲ್ಲಿ ೧೨ನೆಯ ವರ್ಷಕ್ಕೆ ಕಾಲಿಡಲು ಸಿದ್ಧವಾಗಿದೆ. ೧೧ ವರ್ಷಗಳಲ್ಲಿ ನಾನು ಬರೆದ ಸಂಪಾದಕೀಯದ ವಿಷಯಗಳು ಸುಮಧುರ ಬಾಂಧವ್ಯ, ಉತ್ತಮ ವ್ಯಕ್ತಿತ್ವದ ಆಶಯ, ಸಜ್ಜನ ಶಕ್ತಿಯ ಉದ್ದೀಪನೆಗೆ ಸಂಬಂಧಿಸಿದವೇ ಆಗಿದ್ದವು. ಸಂಪಾದಕೀಯದ ವಿಷಯಗಳ ಸಂಕ್ಷಿಪ್ತ ವಿವರಣೆ ಕೊಡುವ ಪ್ರಯತ್ನ ಇದು:
ಡಿಸೆಂಬರ್, ೨೦೦೮: ಕವಿಕಿರಣದ ಆಶಯ
ಜೂನ್, ೨೦೦೯: ಉತ್ತಮ ಬಾಂಧವ್ಯದೆಡೆಗೆ
ಡಿಸೆಂಬರ್, ೨೦೦೯: ಕಹಿ ನೆನಪುಗಳನ್ನು ಮರೆತು ಕ್ಷಮಿಸಿ ಚೆನ್ನಾಗಿರಬೇಕು.
ಜೂನ್, ೨೦೧೦: ಕವಿಮನೆತನದ ಕಳೆದುಹೋದ ಕೊಂಡಿಗಳನ್ನು ಸೇರಿಸುವ ಪ್ರಯತ್ನ ಆಗಲಿ.
ಜೂನ್, ೨೦೧೦: ದಿ. ಕವಿ ವೆಂಕಟಸುಬ್ಬರಾಯರ ನೆನಪಿನಲ್ಲಿ. (ವಿಶೇಷ ಸಂಚಿಕೆ)
ಡಿಸೆಂಬರ್, ೨೦೧೦: ನಾವೆಷ್ಟು ಒಳ್ಳೆಯವರು? ಒಳಗಿನ ಕಶ್ಮಲಗಳ ನಿವಾರಣೆಯ ಅಗತ್ಯ.
ಜೂನ್, ೨೦೧೧: ಸಂಪ್ರದಾಯಗಳು ಸಂಕೋಲೆಗಳಾಗಬಾರದು.
ಡಿಸೆಂಬರ್, ೨೦೧೧: ಸಹವಾಸ ದೋಷ ಕಾರಣ ಅಲ್ಲ; ನಮ್ಮ ತಪ್ಪುಗಳಿಗೆ ನಾವೇ ಕಾರಣ.
ಜೂನ್, ೨೦೧೨: ಎಂದೆಂದೂ ಇರುವ ಪರಮಾತ್ಮ ಹೊಸದಾಗಿ ಅವತರಿಸುವುದಿಲ್ಲ. ಅವನು ನಮ್ಮೊಳಗೂ ಇದ್ದಾನೆ. ಜಾಗೃತರಾಗೋಣ. ಸಜ್ಜನ ಶಕ್ತಿಗೆ ಬಲ ತುಂಬೋಣ.
ಡಿಸೆಂಬರ್, ೨೦೧೨: ನಾವು ಬದಲಾದರೆ ಜಗತ್ತು ಬದಲಾಗುತ್ತದೆ.
ಜೂನ್, ೨೦೧೩: ಸಮಾನತೆ, ವಿಶ್ವಭ್ರಾತೃತ್ವ ಮತ್ತು ನಾವು.
ಡಿಸೆಂಬರ್, ೨೦೧೩: ಜಾತಿ ಪದ್ಧತಿ ಒಳ್ಳೆಯದಲ್ಲ. ಯಾರೂ ಮೇಲಲ್ಲ, ಯಾರೂ ಕೀಳಲ್ಲ.
ಜೂನ್, ೨೦೧೪: ಸಾಧಕನ ರೀತಿ, ಸಾಧನೆಯ ಹಾದಿ.
ಡಿಸೆಂಬರ್, ೨೦೧೪: ಆಹಾರದ ಪೋಲು ಸಮಾಜಕ್ಕೆ ಬಗೆಯುವ ದ್ರೋಹ.
ಜೂನ್, ೨೦೧೫: ದುರ್ವಿಚಾರಗಳು ದೂರವಾಗಲಿ.
ಡಿಸೆಂಬರ್, ೨೦೧೫: ನಮ್ಮ ಹಣೆಯ ಬರಹಕ್ಕೆ ನಾವೇ ಹೊಣೆ. ಅದನ್ನು ದೇವರೂ ಬದಲಾಯಿಸಲಾರ. ಬದಲಾಯಿಸುವ ಶಕ್ತಿ ಇದ್ದರೆ ಅದು ನಮಗೇ!
ಜೂನ್, ೨೦೧೬: ಕವಿಕಿರಣ ಪತ್ರಿಕೆ ನಡೆದು ಬಂದ ಹಾದಿಯ ಅವಲೋಕನ.
ಜೂನ್, ೨೦೧೬: ದಿ. ಸಾ. ಕ. ಕೃಷ್ಣಮೂರ್ತಿಯವರ ನೆನಪಿನಲ್ಲಿ (ವಿಶೇಷ ಸಂಚಿಕೆ).
ಡಿಸೆಂಬರ್, ೨೦೧೭: ಋಣಾತ್ಮಕ ಮನೋಭಾವ ತ್ಯಜಿಸೋಣ; ಭರವಸೆಯಿರಲಿ.
ಜೂನ್, ೨೦೧೮: ಇಂದೇನೋ, ಮುಂದೇನೋ ಎಂಬ ಅನಿಶ್ಚಿತ ಸ್ಥಿತಿಯಲ್ಲಿರುವ ಮನುಷ್ಯ ಪಾಲಿಗೆ ಬಂದದ್ದೇ ಪಂಚಾಮೃತ ಎಂಬ ಸಮಚಿತ್ತ ಮನೋಭಾವ ಬೆಳೆಸಿಕೊಳ್ಳಬೇಕು. ಇರುವ ಅಲ್ಪ ಕಾಲದಲ್ಲಿ ಸಮಾಜೋಪಯೋಗಿಯಾಗಿ ಬಾಳಬೇಕು.
-ಕ.ವೆಂ.ನಾಗರಾಜ್.
ಸೋಮವಾರ, ಸೆಪ್ಟೆಂಬರ್ 24, 2018
'ಕವಿಕಿರಣ' ಪತ್ರಿಕೆ 2008ರಲ್ಲಿ ಆರಂಭವಾದಾಗ ಶುಭ ಹಾರೈಸಿ ಬಂದಿದ್ದ ಸಂದೇಶಗಳು
'ಕವಿಕಿರಣ' ಪತ್ರಿಕೆ 2008ರಲ್ಲಿ ಆರಂಭವಾದಾಗ ಅನೇಕರು ಶುಭ ಹಾರೈಸಿ ಹರಸಿದ್ದರು. ಕೆಲವು ಆಯ್ದ ಸಂದೇಶಗಳು ಇವು:
ದಿ. ಕವಿ ವೆಂಕಟಸುಬ್ಬರಾಯರು ಸ್ವಹಸ್ತಾಕ್ಷರದಲ್ಲಿ ನೀಡಿದ ಸಂದೇಶ
ಶೃಂಗೇರಿ ಶ್ರೀ ಶಾರದಾ ಪೀಠದ ವತಿಯಿಂದ
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರಿಂದ
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಿಂದ
ಸಾಗರದ ಅಸಿಸ್ಟೆಂಟ್ ಕಮಿಷನರರವರಿಂದ
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಿಂದ
ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ
ಗುರುವಾರ, ಸೆಪ್ಟೆಂಬರ್ 20, 2018
’ಕವಿಕಿರಣ’ ಮೂಡಿದ್ದು ಹೀಗೆ!
’ಕವಿಕಿರಣ’ ಪತ್ರಿಕೆ ಪ್ರಾರಂಭವಾದ ಹಿನ್ನೆಲೆ ಅವಲೋಕಿಸಿದಾಗ ಸುಮಧುರ ಬಾಂಧವ್ಯದ ಕನಸು ನನಸಾಗಿಸುವ ಸಹೃದಯತೆ ಅದರಲ್ಲಿರುವುದು ಗೋಚರವಾಗುತ್ತದೆ. ವಂಶವೃಕ್ಷದ ಸರಪಳಿಗಳನ್ನು ಹುಡುಕಿ, ಜೋಡಿಸಿ, ಬೆಸೆಯುವ ಕಾರ್ಯಕ್ಕೆ ಮನ್ನಣೆ ಬಂದಿದ್ದು ಹಾಗೂ ಆ ಹಾದಿಯಲ್ಲಿ ಮುನ್ನಡೆಯುವ ಪ್ರೇರಣೆ ಸಾಕಾರವಾದದ್ದು ಸಹೋದರ ಕವಿ ಸುರೇಶರ ಮನೆಯಲ್ಲಿ ದಿನಾಂಕ 28-01-2007ರಂದು ಅವರು ಪ್ರಾಯೋಜಿಸಿದ ಕವಿ ಕುಟುಂಬಗಳ ಮತ್ತು ಬಂಧು-ಬಳಗದವರ ಪ್ರಥಮ ಸಮಾವೇಶದಲ್ಲಿ.
ಕೆಳದಿಯಲ್ಲಿ ದಿ. ಶ್ರೀ ರಾಮಮೂರ್ತಿ ಸಹೋದರರು ದಿನಾಂಕ 25-12-2007ರಲ್ಲಿ ನಡೆಸಿಕೊಟ್ಟ ಎರಡನೆಯ ಕುಟುಂಬ ಸಮಾವೇಶದಲ್ಲಿ ಕೆಲವು ಧೃಢ ಹೆಜ್ಜೆಗಳನ್ನಿಡಲಾಯಿತು. ಅವುಗಳಲ್ಲಿ ಒಂದು ಸಂವಹನ ಮಾಧ್ಯಮವಾಗಿ ಪತ್ರಿಕೆಯನ್ನು ಹೊರತರಬೇಕೆಂಬ ನಿರ್ಣಯ. ಕವಿ ಸುರೇಶ್ ಒಂದು ಮಾದರಿ ವಾರ್ಷಿಕ ಪತ್ರಿಕೆಯನ್ನು ’ಕೆಳದಿ ಕವಿವಾಹಿನಿ’ ಎಂಬ ಹೆಸರಿನಲ್ಲಿ ಸಿದ್ಧಪಡಿಸಿ ತಂದಿದ್ದರು. (ಚಿತ್ರ ಗಮನಿಸಿ).
ಪತ್ರಿಕೆ ಪ್ರಾರಂಭಿಸುವ ಬಗ್ಗೆ ಒಂದು ಸಮಿತಿ ರಚಿಸಲಾಯಿತು. ಸಮಿತಿಯಲ್ಲಿದ್ದವರು: ಶ್ರೀ/ಶ್ರೀಮತಿಯರಾದ ೧. ಕ.ವೆಂ.ನಾಗರಾಜ್ -ಸಂಪಾದಕರು, ೨. ಕವಿ ಸುರೇಶ್ -ಸಹಸಂಪಾದಕರು, ೩. ಎಸ್.ಕೆ. ಗೋಪಿನಾಥ್, ೪. ಶೈಲಜಾ ಪ್ರಭಾಕರ್, ೫. ಕೆ.ಎನ್. ಶಿವಪ್ರಸಾದ್, ೬. ಎಂ.ಎಸ್. ನಾಗೇಂದ್ರ, ೭. ಕೆ.ವೆಂಕಟೇಶ ಜೋಯಿಸ್ ಮತ್ತು ೮. ಕೆ.ಶ್ರೀಕಂಠ - ಸದಸ್ಯರುಗಳು. ಪತ್ರಿಕೆ ಹೇಗಿರಬೇಕು, ಏನು ಶೀರ್ಷಿಕೆ, ಕಾಲಾವಧಿ, ಎಷ್ಟು ಪ್ರತಿ ಮುದ್ರಿಸಬೇಕು, ವಿತರಣೆ ಹೇಗೆ, ವೆಚ್ಚ ಹೇಗೆ ಭರಿಸುವುದು, ಇತ್ಯಾದಿ ಹಲವು ವಿಷಯಗಳ ಕುರಿತು ಮೇಲ್ಕಂಡವರೊಂದಿಗೆ ಪತ್ರವ್ಯವಹಾರ ನಡೆಸಿ ಚರ್ಚಿಸಲಾಯಿತು.
ದಿನಾಂಕ 15-06-2008ರಂದು ಬೆಂಗಳೂರಿನ ಹಿರಿಯರಾದ ಶ್ರೀ ಎಸ್.ಕೆ.ಕೃಷ್ಣಮೂರ್ತಿಯವರ ನಿವಾಸದಲ್ಲಿ ಸಮಿತಿ ಸದಸ್ಯರಾದ ನಾಗರಾಜ್, ಸುರೇಶ್ ಮತ್ತು ಗೋಪಿನಾಥ್ ಮತ್ತು ಆಸಕ್ತರು ಸಭೆ ಸೇರಿ ಕೈಗೊಂಡ ಪ್ರಮುಖ ನಿರ್ಧಾರಗಳು:
೧. ’ಕವಿಕಿರಣ’ ಎಂಬ ಹೆಸರಿನಲ್ಲಿ ಪತ್ರಿಕೆ ಹೊರತರಬೇಕು.
(ಸೂಚಿತವಾಗಿದ್ದ ಶೀರ್ಷಿಕೆಗಳು: ಕವಿಪ್ರಭಾ, ಕವಿಪ್ರಭೆ, ಕವಿಪತ್ರಿಕೆ, ಕವಿಚಕ್ಷು, ಕವಿವಾಣಿ, ಕವಿವಾರ್ತೆ, ಕವಿನೋಟ, ಕವಿವಾಹಿನಿ, ಪರಸ್ಪರ, ಸ್ನೇಹಧಾರಾ, ಕವಿಕಿರಣ, ಪ್ರೇರಣಾ, ಏನೆಂದರೆ, ಹೊಂಗಿರಣ, ಹೊಸದಿಗಂತ, ಅನ್ವೇಷಣೆ, ಆಶಾಕಿರಣ, ಸ್ನೇಹಸೇತು);
೨. ವರ್ಷಕ್ಕೊಮ್ಮೆ ಹೊರತರಬೇಕೆಂದಿದ್ದ ಪತ್ರಿಕೆಯನ್ನು ಅರ್ಧವಾರ್ಷಿಕವಾಗಿ ಹೊರತರಬೇಕೆಂಬ ನಾಗರಾಜರ ಸಲಹೆಯನ್ನು ಒಪ್ಪಲಾಯಿತು.
೩. ಎ-೪ ಅಳತೆಯಲ್ಲಿ ೨೪ ಪುಟಗಳಿರಬೇಕು;
೪. ಪ್ರತಿ ಕವಿಕುಟುಂಬಗಳವರು ವಾರ್ಷಿಕ ರೂ. ೫೦೦/- ಚಂದಾ ನೀಡಬೇಕು. ಈ ಹಣವನ್ನು ವಾರ್ಷಿಕ ಸಮ್ಮೇಳನ ನಡೆಸಲು ಯಾರೂ ಮುಂದೆ ಬರದಿದ್ದ ಸಂದರ್ಭದಲ್ಲಿ ಬಳಸಲು ಚಿಂತಿಸಬಹುದು; ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಕುಟುಂಬಗಳವರು ಮತ್ತು ಹಿತೈಷಿಗಳು ಸ್ವಪ್ರೇರಣೆಯಿಂದ ನೀಡಿದ ಹಣವನ್ನು ಸ್ವೀಕರಿಸಬಹುದು;
೫. ಸಂಗ್ರಹವಾಗುವ ಹಣವನ್ನು ಶ್ರೀ ಎಸ್.ಕೆ.ಕೃಷ್ಣಮೂರ್ತಿ ಮತ್ತು ಶ್ರೀ ಸುರೇಶರ ಹೆಸರಿನಲ್ಲಿ ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕಿನಲ್ಲಿ ಜಂಟಿ ಖಾತೆ ತೆರೆದು ಇರಿಸಬೇಕು;
೬. ರೂ. 5000/- ಮತ್ತು ಮೇಲ್ಪಟ್ಟು ಹಣ ನೀಡಿ ಸಂಚಿಕೆಯ ಪ್ರಾಯೋಜಕರಾಗಬಹುದು;
೭. ಪ್ರಥಮ ಸಂಚಿಕೆಯನ್ನು ಮೂರನೆಯ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಬಿಡುಗಡೆಗೊಳಿಸಬೇಕು.
ಪ್ರಥಮ ಸಂಚಿಕೆಯ ಪ್ರಾಯೋಜಕರಾಗಿ ಅಮೆರಿಕಾದಲ್ಲಿರುವ ಸಹೋದರ ಶ್ರೀ ಕ.ವೆಂ. ಅನಂತ ಮುಂದೆ ಬಂದು ಸಹೃದಯತೆ ಮೆರೆದರು. ಪ್ರಥಮ ಸಂಚಿಕೆಯ ಕರಡು ಸಿದ್ಧಪಡಿಸಿ ಹಿರಿಯರೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಿ ದಿನಾಂಕ 28-12-2008ರಂದು ಬೆಂಗಳೂರಿನಲ್ಲಿ ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್ ಮತ್ತು ಶ್ರೀಮತಿ ಮತ್ತು ಎಂ.ಎಸ್.ನಾಗೇಂದ್ರರವರು ಆಯೋಜಿಸಿದ ತೃತೀಯ ವಾರ್ಷಿಕ ಸಮಾವೇಶದಲ್ಲಿ ಬಿಡುಗಡೆಗೊಳಿಸಲಾಯಿತು.
-ಕ.ವೆಂ.ನಾಗರಾಜ್.
ಕೆಳದಿಯಲ್ಲಿ ದಿ. ಶ್ರೀ ರಾಮಮೂರ್ತಿ ಸಹೋದರರು ದಿನಾಂಕ 25-12-2007ರಲ್ಲಿ ನಡೆಸಿಕೊಟ್ಟ ಎರಡನೆಯ ಕುಟುಂಬ ಸಮಾವೇಶದಲ್ಲಿ ಕೆಲವು ಧೃಢ ಹೆಜ್ಜೆಗಳನ್ನಿಡಲಾಯಿತು. ಅವುಗಳಲ್ಲಿ ಒಂದು ಸಂವಹನ ಮಾಧ್ಯಮವಾಗಿ ಪತ್ರಿಕೆಯನ್ನು ಹೊರತರಬೇಕೆಂಬ ನಿರ್ಣಯ. ಕವಿ ಸುರೇಶ್ ಒಂದು ಮಾದರಿ ವಾರ್ಷಿಕ ಪತ್ರಿಕೆಯನ್ನು ’ಕೆಳದಿ ಕವಿವಾಹಿನಿ’ ಎಂಬ ಹೆಸರಿನಲ್ಲಿ ಸಿದ್ಧಪಡಿಸಿ ತಂದಿದ್ದರು. (ಚಿತ್ರ ಗಮನಿಸಿ).
ಪತ್ರಿಕೆ ಪ್ರಾರಂಭಿಸುವ ಬಗ್ಗೆ ಒಂದು ಸಮಿತಿ ರಚಿಸಲಾಯಿತು. ಸಮಿತಿಯಲ್ಲಿದ್ದವರು: ಶ್ರೀ/ಶ್ರೀಮತಿಯರಾದ ೧. ಕ.ವೆಂ.ನಾಗರಾಜ್ -ಸಂಪಾದಕರು, ೨. ಕವಿ ಸುರೇಶ್ -ಸಹಸಂಪಾದಕರು, ೩. ಎಸ್.ಕೆ. ಗೋಪಿನಾಥ್, ೪. ಶೈಲಜಾ ಪ್ರಭಾಕರ್, ೫. ಕೆ.ಎನ್. ಶಿವಪ್ರಸಾದ್, ೬. ಎಂ.ಎಸ್. ನಾಗೇಂದ್ರ, ೭. ಕೆ.ವೆಂಕಟೇಶ ಜೋಯಿಸ್ ಮತ್ತು ೮. ಕೆ.ಶ್ರೀಕಂಠ - ಸದಸ್ಯರುಗಳು. ಪತ್ರಿಕೆ ಹೇಗಿರಬೇಕು, ಏನು ಶೀರ್ಷಿಕೆ, ಕಾಲಾವಧಿ, ಎಷ್ಟು ಪ್ರತಿ ಮುದ್ರಿಸಬೇಕು, ವಿತರಣೆ ಹೇಗೆ, ವೆಚ್ಚ ಹೇಗೆ ಭರಿಸುವುದು, ಇತ್ಯಾದಿ ಹಲವು ವಿಷಯಗಳ ಕುರಿತು ಮೇಲ್ಕಂಡವರೊಂದಿಗೆ ಪತ್ರವ್ಯವಹಾರ ನಡೆಸಿ ಚರ್ಚಿಸಲಾಯಿತು.
ದಿನಾಂಕ 15-06-2008ರಂದು ಬೆಂಗಳೂರಿನ ಹಿರಿಯರಾದ ಶ್ರೀ ಎಸ್.ಕೆ.ಕೃಷ್ಣಮೂರ್ತಿಯವರ ನಿವಾಸದಲ್ಲಿ ಸಮಿತಿ ಸದಸ್ಯರಾದ ನಾಗರಾಜ್, ಸುರೇಶ್ ಮತ್ತು ಗೋಪಿನಾಥ್ ಮತ್ತು ಆಸಕ್ತರು ಸಭೆ ಸೇರಿ ಕೈಗೊಂಡ ಪ್ರಮುಖ ನಿರ್ಧಾರಗಳು:
೧. ’ಕವಿಕಿರಣ’ ಎಂಬ ಹೆಸರಿನಲ್ಲಿ ಪತ್ರಿಕೆ ಹೊರತರಬೇಕು.
(ಸೂಚಿತವಾಗಿದ್ದ ಶೀರ್ಷಿಕೆಗಳು: ಕವಿಪ್ರಭಾ, ಕವಿಪ್ರಭೆ, ಕವಿಪತ್ರಿಕೆ, ಕವಿಚಕ್ಷು, ಕವಿವಾಣಿ, ಕವಿವಾರ್ತೆ, ಕವಿನೋಟ, ಕವಿವಾಹಿನಿ, ಪರಸ್ಪರ, ಸ್ನೇಹಧಾರಾ, ಕವಿಕಿರಣ, ಪ್ರೇರಣಾ, ಏನೆಂದರೆ, ಹೊಂಗಿರಣ, ಹೊಸದಿಗಂತ, ಅನ್ವೇಷಣೆ, ಆಶಾಕಿರಣ, ಸ್ನೇಹಸೇತು);
೨. ವರ್ಷಕ್ಕೊಮ್ಮೆ ಹೊರತರಬೇಕೆಂದಿದ್ದ ಪತ್ರಿಕೆಯನ್ನು ಅರ್ಧವಾರ್ಷಿಕವಾಗಿ ಹೊರತರಬೇಕೆಂಬ ನಾಗರಾಜರ ಸಲಹೆಯನ್ನು ಒಪ್ಪಲಾಯಿತು.
೩. ಎ-೪ ಅಳತೆಯಲ್ಲಿ ೨೪ ಪುಟಗಳಿರಬೇಕು;
೪. ಪ್ರತಿ ಕವಿಕುಟುಂಬಗಳವರು ವಾರ್ಷಿಕ ರೂ. ೫೦೦/- ಚಂದಾ ನೀಡಬೇಕು. ಈ ಹಣವನ್ನು ವಾರ್ಷಿಕ ಸಮ್ಮೇಳನ ನಡೆಸಲು ಯಾರೂ ಮುಂದೆ ಬರದಿದ್ದ ಸಂದರ್ಭದಲ್ಲಿ ಬಳಸಲು ಚಿಂತಿಸಬಹುದು; ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಕುಟುಂಬಗಳವರು ಮತ್ತು ಹಿತೈಷಿಗಳು ಸ್ವಪ್ರೇರಣೆಯಿಂದ ನೀಡಿದ ಹಣವನ್ನು ಸ್ವೀಕರಿಸಬಹುದು;
೫. ಸಂಗ್ರಹವಾಗುವ ಹಣವನ್ನು ಶ್ರೀ ಎಸ್.ಕೆ.ಕೃಷ್ಣಮೂರ್ತಿ ಮತ್ತು ಶ್ರೀ ಸುರೇಶರ ಹೆಸರಿನಲ್ಲಿ ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕಿನಲ್ಲಿ ಜಂಟಿ ಖಾತೆ ತೆರೆದು ಇರಿಸಬೇಕು;
೬. ರೂ. 5000/- ಮತ್ತು ಮೇಲ್ಪಟ್ಟು ಹಣ ನೀಡಿ ಸಂಚಿಕೆಯ ಪ್ರಾಯೋಜಕರಾಗಬಹುದು;
೭. ಪ್ರಥಮ ಸಂಚಿಕೆಯನ್ನು ಮೂರನೆಯ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಬಿಡುಗಡೆಗೊಳಿಸಬೇಕು.
ಪ್ರಥಮ ಸಂಚಿಕೆಯ ಪ್ರಾಯೋಜಕರಾಗಿ ಅಮೆರಿಕಾದಲ್ಲಿರುವ ಸಹೋದರ ಶ್ರೀ ಕ.ವೆಂ. ಅನಂತ ಮುಂದೆ ಬಂದು ಸಹೃದಯತೆ ಮೆರೆದರು. ಪ್ರಥಮ ಸಂಚಿಕೆಯ ಕರಡು ಸಿದ್ಧಪಡಿಸಿ ಹಿರಿಯರೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಿ ದಿನಾಂಕ 28-12-2008ರಂದು ಬೆಂಗಳೂರಿನಲ್ಲಿ ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್ ಮತ್ತು ಶ್ರೀಮತಿ ಮತ್ತು ಎಂ.ಎಸ್.ನಾಗೇಂದ್ರರವರು ಆಯೋಜಿಸಿದ ತೃತೀಯ ವಾರ್ಷಿಕ ಸಮಾವೇಶದಲ್ಲಿ ಬಿಡುಗಡೆಗೊಳಿಸಲಾಯಿತು.
-ಕ.ವೆಂ.ನಾಗರಾಜ್.
28-12-2008ರಂದು ಬೆಂಗಳೂರಿನಲ್ಲಿ ನಡೆದ ಕವಿಕುಟುಂಬಗಳ ಮತ್ತು ಬಂಧು-ಬಳಗದವರ ಸಮಾವೇಶದಲ್ಲಿ 'ಕವಿಕಿರಣ' ಬಿಡುಗಡೆಯಾದ ಸಂದರ್ಭದ ಕೆಲವು ದೃಷ್ಯಗಳು
ಶುಭ ಹಾರೈಸಿದ ಶ್ರೀ ಸಾ.ಕ.ಕೃಷ್ಣಮೂರ್ತಿಯವರು
ವಯೋವೃದ್ಧ ಶ್ರೀ ಹೆಬ್ಬೈಲು ಕೃಷ್ಣಮೂರ್ತಿಯವರಿಂದ ಸಂಚಿಕೆ ಬಿಡುಗಡೆ
ವೇದಿಕೆಯಲ್ಲಿ: ಶ್ರೀಯುತ ಸಾ.ಕ.ಕೃಷ್ನಮೂರ್ತಿ, ಡಾ.ಕೆಳದಿ ಕೃಷ್ಣಜೋಯಿಸ್, ಹೆಬ್ಬೈಲು ಕೃಷ್ಣಮೂರ್ತಿ, ದಿ. ಕವಿ ವೆಂಕಟಸುಬ್ಬರಾವ್, ಎಂ.ಎಸ್. ನಾಗೇಂದ್ರ, ಮೊಮ್ಮಗಳು ಅಕ್ಷಯಳೊಂದಿಗೆ ಕವಿನಾಗರಾಜ್.
ಕವಿಕಿರಣದ ಆಶಯದ ಕುರಿತು ಸಂಪಾದಕ ಕವಿನಾಗರಾಜರ ಮಾತು
ಕವಿ ವೆಂಕಟಸುಬ್ಬರಾಯರು ಹರಸಿದ ಸಂದರ್ಭ
ಸಾಕ್ಷಿಯಾದ ಬಂಧು - ಬಳಗದ ಸಮೂಹ
ಮಂಗಳವಾರ, ಸೆಪ್ಟೆಂಬರ್ 18, 2018
ಕವಿಕಿರಣ ಚಾರಿಟಬಲ್ ಟ್ರಸ್ಟ್
ಸಧೃಢ ಮತ್ತು ಸ್ವಸ್ಥ ಭಾರತ ನಿರ್ಮಾಣಕ್ಕೆ ನಮ್ಮ ಅಳಿಲು ಸೇವೆಯೂ ಸಲ್ಲಲಿ ಎಂಬ ಉದ್ದೇಶದಿಂದ ಈ ವಿಶ್ವಸ್ತ ಸಂಸ್ಥೆಯ ರಚನೆಯಾಗಿದೆ. ಸಾರ್ವಜನಿಕ ಹಿತಾಸಕ್ತಿಯೇ ಪ್ರಧಾನವಾದ ಈ ಲಾಭರಹಿತ ಸಂಸ್ಥೆ ದಿನಾಂಕ ೫-೦೯-೨೦೧೮ರಂದು ಅಧಿಕೃತವಾಗಿ ನೋಂದಾವಣೆಯಾಗಿದ್ದು, ಅಂದು ಶಿಕ್ಷಕರ ದಿನಾಚರಣೆಯ ದಿನವಾಗಿ ಗುರುಗಳನ್ನು ಸ್ಮರಿಸಿಕೊಳ್ಳುವ ದಿನವಾಗಿರುವುದೂ ವಿಶೇಷ. ಹಾಸನದಲ್ಲಿ ಪ್ರಧಾನ ಕಛೇರಿ ಹೊಂದಿರುವ ಈ ಸಂಸ್ಥೆ, ಬೆಂಗಳೂರು ಮತ್ತು ಶಿವಮೊಗ್ಗಗಳಲ್ಲಿ ತನ್ನ ಶಾಖಾ ಕಛೇರಿಗಳನ್ನು ತೆರೆದಿದೆ.
ಧ್ಯೇಯ ಮತ್ತು ಉದ್ದೇಶ:
* ಸಾಂಸ್ಕೃತಿಕ ಮತ್ತು ಸನಾತನ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಅಥವ ಅಂತಹ ಸಂಸ್ಥೆಗಳಿಗೆ ಅಗತ್ಯದ ನೆರವು, ಸಹಕಾರ ನೀಡುವುದು; ಗುರುಕುಲ ಪದ್ಧತಿಯ ಶಿಕ್ಷಣಕ್ಕೆ ಒತ್ತು ನೀಡುವುದು; ವೇದಾಧ್ಯಯನಕ್ಕೆ ಪ್ರೋತ್ಸಾಹ;
* ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಸಮವಸ್ತ್ರ, ಪಠ್ಯಪುಸ್ತಕಗಳು, ಲೇಖನ ಸಾಮಗ್ರಿಗಳು, ಇತ್ಯಾದಿ ಒದಗಿಸುವುದು; ಬೋಧನೆ, ತರಬೇತಿ, ವೃತ್ತಿಪರ ಕೌಶಲ್ಯ ತರಬೇತಿಗಳು, ಮಾರ್ಗದರ್ಶನ ನೀಡುವುದು ಅಥವ ಈ ರೀತಿಯ ಕಾರ್ಯಗಳನ್ನು ಮಾಡುವವರಿಗೆ ಸಹಕಾರ ನೀಡುವುದು;
* ಪುರಾತನ ಸಾಂಸ್ಕೃತಿಕ, ಐತಿಹಾಸಿಕ ವಿಷಯಗಳಲ್ಲಿ ಅಧ್ಯಯನ, ಸಂಶೋಧನೆಗಳನ್ನು ನಡೆಸಲು ಅಗತ್ಯದ ಪ್ರೋತ್ಸಾಹ ಮತ್ತು ಸಹಕಾರ ನೀಡುವುದು; ವಿಶೇಷವಾಗಿ ಕೆಳದಿ ಸಂಸ್ಥಾನದ ಮತ್ತು ಕೆಳದಿ ಕವಿಮನೆತನಕ್ಕೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ;
* ಸಕಾರಾತ್ಮಕ ವಿಷಯಗಳಿಗೆ ಆದ್ಯತೆ ನೀಡುವ ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕಗಳ ಮುದ್ರಣ ಮತ್ತು ಪ್ರಕಾಶನ ಮಾಡುವುದು ಅಥವ ಇಂತಹ ಸದುದ್ದೇಶದ ಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕಗಳ ಪ್ರಕಟಣೆಗೆ ನೆರವು ನೀಡುವುದು; ಇತಿಹಾಸ, ಸಂಸ್ಕೃತಿ, ಸಂಸ್ಕಾರ, ವೇದಗಳು, ಯೋಗ, ರಾಷ್ಟ್ರೀಯತೆಯ ಉದ್ದೀಪನೆ, ಕೋಮು ಸಾಮರಸ್ಯ, ಸಾಹಿತ್ಯ, ಇತ್ಯಾದಿಗಳಿಗೆ ಪ್ರಕಟಣೆಗಳಲ್ಲಿ ಆದ್ಯತೆ ನೀಡುವುದು; ನಕಾರಾತ್ಮಕ ವಿಷಯಗಳಿಗೆ ಆದ್ಯತೆ ಸಿಗುತ್ತಿರುವ ಇಂದಿನ ಕಾಲದಲ್ಲಿ ಸಜ್ಜನಶಕ್ತಿಯನ್ನು ಪ್ರಚೋದಿಸುವ ಕಾರ್ಯಕ್ಕೆ ಒತ್ತು ನೀಡುವುದು;
* ರಾಷ್ಟ್ರೀಯ ವಿಪತ್ತು ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭಗಳಲ್ಲಿ ಸಂತ್ರಸ್ತರ ನೆರವಿಗೆ ಧಾವಿಸುವುದು;
* ಮೇಲಿನ ವಿಷಯಗಳಿಗೆ ಪೂರಕವಾದ ಇನ್ನಿತರ ಕಾರ್ಯ ಚಟುವಟಿಕೆಗಳನ್ನು ನಡೆಸುವುದು.
ಮೊದಲ ಕಾರ್ಯವಾಗಿ ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ' ಅರ್ಧವಾರ್ಷಿಕ ಪತ್ರಿಕೆಯನ್ನು ಪ್ರಕಟಿಸುವ ಹೊಣೆಯನ್ನು ಟ್ರಸ್ಟ್ ವಹಿಸಿಕೊಂಡಿದ್ದು, ಇದನ್ನು ಸಾರ್ವಜನಿಕ ಪತ್ರಿಕೆಯಾಗಿಸಿ ಪ್ರಥಮ ಹಂತದಲ್ಲಿ ತ್ರೈಮಾಸಿಕ ಪತ್ರಿಕೆಯಾಗಿ ಹೊರತರಲಾಗುವುದು. ನಂತರದ ವರ್ಷದಿಂದ ಇದನ್ನು ಮಾಸಿಕ ಪತ್ರಿಕೆಯಾಗಿ ಪರಿವರ್ತಿಸಲಾಗುವುದು. ಈ ಪತ್ರಿಕೆಯಲ್ಲಿ ಇತಿಹಾಸ, ವೇದಗಳ ಸಂದೇಶ, ಯೋಗದ ಮಹತ್ವ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ, ದೇಶದ ಸಮಗ್ರತೆ, ಭಾವೈಕ್ಯತೆ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಲೇಖನಗಳು ಇರಲಿವೆ. ಆಯಾ ವಿಷಯಗಳಲ್ಲಿ ಅಧ್ಯಯನ ಮಾಡಿರುವ ವಿದ್ವಜ್ಜನರ ಬರಹಗಳು ಶೋಭಿಸಲಿವೆ.
ಸಾವಿರಾರು ಮೈಲುಗಳ ಪ್ರಯಾಣವಾಗಲೀ, ಹಿಮಾಲಯ ಪರ್ವತ ಏರುವುದಾಗಲೀ ಪ್ರಾರಂಭವಾಗುವುದು ಇಡುವ ಮೊದಲ ಸಣ್ಣ ಹೆಜ್ಜೆಯಿಂದಲೇ! ಸಾಧಿಸುವ ಛಲ ಮತ್ತು ವಿಶ್ವಾಸದೊಂದಿಗೆ ಈ ಸಮಾಜಸೇವೆಯ ಕಾರ್ಯ ಪ್ರಾರಂಭಿಸಲಾಗಿದೆ. ಸಜ್ಜನ ಬಂಧುಗಳು ಸಹಕಾರಿಯಾಗಲಿದ್ದಾರೆ. ಅಂತಹ ಸಜ್ಜನ ಬಂಧುಗಳಲ್ಲಿ ನೀವೂ ಒಬ್ಬರಾಗಿ; ಸೇವಾಕಾರ್ಯಗಳಿಗೆ ದೇಣಿಗೆ ನೀಡಿ ಸಹಕರಿಸಿ, ನಮ್ಮೊಡನೆ ಹೆಜ್ಜೆ ಹಾಕಿರಿ ಎಂಬುದು ನಮ್ಮ ನಮ್ರ ವಿನಂತಿ.
ಕ.ವೆಂ.ನಾಗರಾಜ್, ಅಧ್ಯಕ್ಷರು ;
ಕವಿ ವೆಂ. ಸುರೇಶ್, ಉಪಾಧ್ಯಕ್ಷರು;
ಹರಿಹರಪುರ ಶ್ರೀಧರ್, ಕಾರ್ಯದರ್ಶಿ;
ಡಾ.ಕೆ.ಜಿ. ವೆಂಕಟೇಶಜೋಯಿಸ್, ಸಹಕಾರ್ಯದರ್ಶಿ;
ಎಂ.ಜೆ. ಪಾಂಡುರಂಗಸ್ವಾಮಿ, ಪ್ರಕಟಣಾ ವಿಭಾಗದ ಮುಖ್ಯಸ್ಥರು;
ಎನ್.ಬಿಂದುರಾಘವೇಂದ್ರ, ಕೋಶಾಧಿಕಾರಿ.
.ಗುರುವಾರ, ಮೇ 31, 2018
ಅಭಿವೃದ್ಧಿ ಎಂದರೆ ಏನು? ಮತ್ತು ಹೇಗೆ?
ಅಭಿವೃದ್ಧಿಯೇ ನಮ್ಮ ಮಂತ್ರ, ವಿಕಾಸವೇ ನಮ್ಮ ತಂತ್ರ ಎಂಬ ಮಾತುಗಳನ್ನು ಧಾರಾಳವಾಗಿ ಬಳಸಲಾಗುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ತಮ್ಮ ಸಾಧನೆಗಳನ್ನು ಹೇಳಿಕೊಳ್ಳುವಾಗ, ನಮ್ಮ ಅವದಿಯಲ್ಲಿ ಹೀಗೆ ಮಾಡಿದೆವು, ಹಾಗೆ ಮಾಡಿದೆವು ಎಂದು ದೊಡ್ಡ ಪಟ್ಟಿಯನ್ನೇ ಜನರ ಮುಂದಿಡುತ್ತಾರೆ. ಪತ್ರಿಕೆಗಳಲ್ಲಿ, ವಿವಿಧ ಮಾಧ್ಯಮಗಳಲ್ಲಿ ತಮ್ಮ ಸಾಧನೆಗಳ ಕುರಿತು ಜಾಹಿರಾತುಗಳನ್ನು ಕೊಡುತ್ತಾರೆ. ತಹಸೀಲ್ದಾರನಾಗಿ ಹಲವು ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಿದ್ದ ಸಂದರ್ಭದಲ್ಲಿ ರಾಜಕಾರಣಿಗಳು ಮತ್ತು ಜನರ ನಡುವಿನ ಸಂಪರ್ಕಕೊಂಡಿಯಂತೆ ಕೆಲಸ ಮಾಡಿದ, ಹಳ್ಳಿಗಳಲ್ಲಿ ಸುತ್ತಿ ಜನರ ಅಭಿಪ್ರಾಯಗಳನ್ನೂ ಹತ್ತಿರದಿಂದ ಕಂಡಿರುವ ನನಗೆ ಅಭಿವೃದ್ಧಿ ಎಂಬ ಪದದ ವ್ಯಾಖ್ಯೆ ಬದಲಾಗದೆ ನಿಜವಾದ ಅಭಿವೃದ್ಧಿ ಅಸಾಧ್ಯ ಎಂಬ ಭ್ರಮನಿರಸನವೂ ಕಾಡಿದೆ.
ಯಾರ ಅಭಿವೃದ್ಧಿ?
ಜನರ ಪ್ರಾಥಮಿಕ ಅವಶ್ಯಕತೆಗಳನ್ನು ಅಂದರೆ ಕುಡಿಯುವ ನೀರು, ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಇತ್ಯಾದಿ ಸಂಗತಿಗಳು ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುವುದು ಅಭಿವೃದ್ಧಿಯ ಮೂಲ ತತ್ವ ಆಗಿರಬೇಕು. ಈ ಮೂಲಭೂತ ವಿಷಯಗಳಲ್ಲಿ ರಾಜಿ ಇರಬಾರದು ಮತ್ತು ಇವುಗಳನ್ನು ಎಲ್ಲಾ ರಾಜಕೀಯ ಪಕ್ಷಗಳವರೂ ತಮ್ಮ ಪಕ್ಷದ ಕಾರ್ಯಕ್ರಮ ಎಂಬಂತೆ ಬಿಂಬಿಸಿಕೊಳ್ಳುವ ಪ್ರವೃತ್ತಿ ನಿಲ್ಲಬೇಕು. ವಸತಿ ಯೋಜನೆಯನ್ನೇ ಉದಾಹರಣೆಗೆ ತೆಗೆದುಕೊಂಡರೆ ಇಂದಿರಾಗಾಂಧಿ ಹೆಸರಿನಲ್ಲಿ, ರಾಜೀವಗಾಂಧಿ ಹೆಸರಿನಲ್ಲಿ, ವಾಜಪೇಯಿಯವರ ಹೆಸರಿನಲ್ಲಿ ಹೀಗೆ ಯಾವ ರಾಜಕೀಯ ಪಕ್ಷ ಅಧಿಕಾರದಲ್ಲಿ ಇರುತ್ತದೋ ಅವರ ನಾಯಕರುಗಳ ಹೆಸರಿನಲ್ಲಿ ವಸತಿ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಬಡವರಿಗೆ ಸೂರು ಅನ್ನುವ ಈ ಉದ್ದೇಶದ ಕಾರ್ಯಕ್ರಮ ಪಕ್ಷದ್ದಂತೂ ಅಲ್ಲ. ಹಣ ಸರ್ಕಾರದ್ದು, ಹೆಸರು ಮಾತ್ರ ರಾಜಕೀಯ ನೇತಾರರದು. ಕಳೆದ ಆರು ದಶಕಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ಸಾಧನೆ ಎಂದರೆ ಪ್ರತಿಯೊಂದು ಯೋಜನೆಗೂ ಅವರ ನೇತಾರರದೇ ಹೆಸರು! ಇಂದಿರಾಗಾಂಧಿ, ರಾಜೀವಗಾಂಧಿಯವರ ಹೆಸರಿನಲ್ಲಿ ಎಷ್ಟು ಯೋಜನೆಗಳಿವೆಯೋ, ಅವರ ಹೆಸರಿನಲ್ಲಿ ಇರುವ ಸರ್ಕಾರಿ, ಅರೆಸರ್ಕಾರಿ ಸಂಸ್ಥೆಗಳು ಎಷ್ಟೋ ಎಂಬುದನ್ನು ಲೆಕ್ಕ ಹಾಕುವುದೇ ಕಷ್ಟ. ವಸತಿ ಯೋಜನೆಗಳು (ನಿವೇಶನ ಮಂಜೂರಾತಿಯೂ ಸೇರಿ) ರಾಜಕೀಯ ಪಕ್ಷದವರ ಗುತ್ತಿಗೆಯಂತೆ ಆಗಿರುವುದು ವಿಷಾದಕರ. ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಾಸಕರ ಅಧ್ಯಕ್ಷತೆಯಲ್ಲಿರುವ ಸಮಿತಿಗಳು ನಿಜವಾಗಿಯೂ ಅಗತ್ಯವಿರುವವರಿಗೆ ಯೋಜನೆಗಳ ಫಲ ಸಿಗುವುದಕ್ಕೆ ಬದಲಾಗಿ ತಮ್ಮ ಅನುಯಾಯಿಗಳಿಗೆ, ಪಕ್ಷದ ಕಾರ್ಯಕರ್ತರುಗಳಿಗೆ, ಅನರ್ಹರಿಗೆ ದಕ್ಕುವಂತೆ ಮಾಡುತ್ತಿವೆ ಎಂದರೆ ಕಠಿಣವಾಗಿ ಕಂಡರೂ ಸತ್ಯವಾಗಿದೆ. ಜೊತೆಗೆ ರಾಜಕಾರಣಿಗಳು, ಅಧಿಕಾರಿಗಳು, ನೌಕರರು, ಮಧ್ಯವರ್ತಿಗಳು ಫಲಾನುಭವಿಗಳಿಂದ ಹಣ ವಸೂಲಿಯಲ್ಲಿ ತೊಡಗುವುದೂ ಇದೆ. ಇಲ್ಲಿ ಅಭಿವೃದ್ಧಿ ಎಲ್ಲಾಯಿತು, ಯಾರದಾಯಿತು?
ಕುಡಿಯುವ ನೀರಿನ ಯೋಜನೆಯಲ್ಲಿ ರಾಜಕೀಯ ನುಸುಳಲೇಬಾರದು. ಆದರೆ ಆಗುತ್ತಿರುವುದೇನು? ಅವರಿಗೆ ಹೆಸರು ಬರುತ್ತದೆ ಎಂದು ಇವರು, ಇವರಿಗೆ ಕೆಟ್ಟ ಹೆಸರು ಬರಲಿ ಎಂದು ಅವರು ಪರಸ್ಪರ ಕಾಲೆಳೆಯುತ್ತಾ ಸಮಸ್ಯೆ ಇತ್ಯರ್ಥಕ್ಕಿಂತ ಹೆಚ್ಚು ಮಾಡುವುದರಲ್ಲೇ ರಾಜಕೀಯ ನೇತಾರರು ತೊಡಗಿರುವುದು ದುರದೃಷ್ಟ. ಕಾವೇರಿ, ಮಹದಾಯಿ, ಎತ್ತಿನಹೊಳೆ ಇತ್ಯಾದಿ ಸಮಸ್ಯೆಗಳು ಉಲ್ಬಣಗೊಂಡಿರುವುದೇ ರಾಜಕೀಯ ಪಕ್ಷಗಳ ನೇತಾರರ ಸಣ್ಣತನಗಳಿಂದ! ಕುಡಿಯುವ ನೀರಿನ, ನೀರಾವರಿಯ ವಿಷಯದಲ್ಲಿ ರಾಜಕೀಯ ಮಾಡದಿದ್ದರೆ ಅದೊಂದು ದೊಡ್ಡ ಸಾಧನೆ. ಇದನ್ನು ಸಾಧಿಸಲು ಸಾಧ್ಯವಾದರೆ ಇದೇ ಅಭಿವೃದ್ಧಿ!
ಆ ಅಧಿಕಾರಿ ಏಕೆ ಆತ್ಮಹತ್ಯೆ ಮಾಡಿಕೊಂಡ?
ಬಹಳ ವರ್ಷಗಳ ಹಿಂದಿನ ಘಟನೆಯಿದು. ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲ್ಲೂಕಿನ ಸಹಾಯಕ ಕೃಷಿನಿರ್ದೇಶಕರೊಬ್ಬರು ಅಲ್ಲಿನ ಶಾಸಕರ ಆಜ್ಞಾನುವರ್ತಿಯಾಗಿ ಅವರ ಇಷ್ಟಾನಿಷ್ಟಗಳನ್ನು ಅನುಸರಿಸಿ ಕೆಲಸ ಮಾಡುತ್ತಿದ್ದರು. ಒಮ್ಮೆ ಶಾಸಕರು ಅವರಿಗೆ ಹಣದ ಬೇಡಿಕೆ ಇಟ್ಟಿದ್ದಲ್ಲದೆ ಅದನ್ನು ಹೊಂದಿಸಲು ಮಾರ್ಗವನ್ನೂ ತೋರಿಸಿದರು. ಅದೆಂದರೆ ನಡೆಯದ ಕಾಮಗಾರಿಗಳಿಗೆ ಸುಳ್ಳು ಬಿಲ್ಲುಗಳನ್ನು ಸೃಷ್ಟಿಸಿ ಹಣ ಹೊಂದಿಸುವುದು! ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿಯೂ ಶಾಸಕರು ಭರವಸೆಯಿತ್ತಿದ್ದರು. ಸರಿ, ಹಣ ಹೊಂದಾಣಿಕೆಯಾಯಿತು. ಶಾಸಕರ ಮಾತಿನಂತೆ ಅಧಿಕಾರಿಗೆ ಯಾರಿಂದಲೂ ತೊಂದರೆ ಆಗಲಿಲ್ಲ. ಆದರೆ, ನಿಜವಾದ ತೊಂದರೆ ಶಾಸಕರಿಂದಲೇ ಆರಂಭವಾಗಿತ್ತು. ಶಾಸಕರು ಆಗಾಗ್ಗೆ ಹಣಕ್ಕೆ ಹೇಳಿಕಳಿಸುತ್ತಿದ್ದರು. ಕೊಡದಿದ್ದರೆ ಸುಳ್ಳುಬಿಲ್ಲುಗಳ ವಿಚಾರ ಹೊರತೆಗೆದು ಕೆಲಸಕ್ಕೆ ಸಂಚಕಾರ ತರುವುದಾಗಿ ಬೆದರಿಸುತ್ತಿದ್ದರು. ಬರುಬರುತ್ತಾ ಇದು ವಿಪರೀತಕ್ಕೆ ಇಟ್ಟುಕೊಂಡಾಗ ಆ ಅಧಿಕಾರಿ ಖಿನ್ನತೆಗೆ ಒಳಗಾಗಿ ಮೃತ್ಯುಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ವಿಷಯ ಎಲ್ಲಾ ಪತ್ರಿಕೆಗಳಲ್ಲೂ ಪ್ರಕಟವಾಯಿತು. ವಿಧಾನಸಭೆಯಲ್ಲೂ ಚರ್ಚೆಯಾಯಿತು. ಮುಂದೇನಾಯಿತು? ಏನೂ ಆಗಲಿಲ್ಲ! ಮೃತ ಅಧಿಕಾರಿಯದು ತಪ್ಪಿರಲಿಲ್ಲವೆನ್ನುವಂತಿಲ್ಲ. ಆದರೆ ಆ ತಪ್ಪಿಗೆ ಆತ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ನಿಜವಾದ ಅಪರಾಧಿಗೆ ಶಿಕ್ಷೆ ಆಗಲೇ ಇಲ್ಲ. ಜನರೂ ತಮಗೆ ಇದು ಸಂಬಂಧಿಸಿದ್ದಲ್ಲವೆಂಬಂತೆ ಸುಮ್ಮನಿದ್ದರು!
ಕಣ್ಣಿಗೆ ಕಾಣುವಂತಹ ಸಾರ್ವಜನಿಕ ಕಟ್ಟಡಗಳು, ಶಾಲಾ ಕಾಲೇಜುಗಳು, ವಸತಿ ನಿಲಯಗಳು, ಸರ್ಕಾರಿ ಕಟ್ಟಡಗಳು, ಇತ್ಯಾದಿ ನಿರ್ಮಾಣಗಳನ್ನು ಸಾಧನೆಯೆಂಬಂತೆ ರಾಜಕೀಯ ನೇತಾರರು ಚಿತ್ರಗಳ ಸಹಿತ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಶಂಕುಸ್ಥಾಪನೆಗೂ ಪ್ರಚಾರ, ಉದ್ಘಾಟನೆಗೂ ಪ್ರಚಾರ! ಇಂತಹ ಕಾರ್ಯಕ್ರಮಗಳಿಗೆ ಖರ್ಚನ್ನು ಅಧಿಕಾರಿಗಳು, ಗುತ್ತಿಗೆದಾರರೇ ಭರಿಸುತ್ತಾರೆ. ಆ ಖರ್ಚಿಗೆ ಭ್ರಷ್ಠಾಚಾರದ ಮಾರ್ಗದಲ್ಲೇ ಹಣ ಹೊಂದಾಣಿಕೆಯಾಗುತ್ತದೆ. ಈ ಪ್ರಚಾರಕ್ಕೆ ಬಳಸುವ ಹಣದಿಂದಲೇ ಅಂತಹ ಮತ್ತೊಂದು ಕಾಮಗಾರಿ ಆಗಬಹುದಾಗಿರುತ್ತದೆ. ಕಟ್ಟಡಗಳು ಪೂರ್ಣಗೊಂಡರೂ ಹಲವಾರು ಕಾರಣಗಳಿಂದ ಉದ್ಘಾಟನೆಯಾಗದೆ, ಉಪಯೋಗಕ್ಕೆ ಬರದೆ ಶಿಥಿಲವಾಗಿರುವುದೂ, ಅನೈತಿಕ ಚಟುವಟಿಕೆಗಳ ತಾಣವಾಗಿರುವುದೂ ಇದೆ. ಇದಕ್ಕೆ ವ್ಯಯವಾದ ಹಣ ಎಷ್ಟು, ನಷ್ಟ ಯಾರದು ಎಂಬ ಬಗ್ಗೆ ಜನಸಾಮಾನ್ಯರು ಪ್ರಶ್ನಿಸುವಂತಾದರೆ ಅದು ಅಭಿವೃದ್ಧಿ! ಪ್ರತಿ ಕಾಮಗಾರಿ, ಅದು ಕಟ್ಟಡವಿರಬಹುದು, ರಸ್ತೆಯಿರಬಹುದು, ಏನೇ ಇರಬಹುದು, ಅದರಲ್ಲಿ ಗುತ್ತಿಗೆದಾರನ ಲಾಭ, ಅಧಿಕಾರಿಗಳು, ರಾಜಕಾರಣಿಗಳಿಗೆ ಶೇಕಡಾವಾರು ಮಾಮೂಲು ಸಂದಾಯವಾಗದೆ ಸಾಧ್ಯವೇ ಇಲ್ಲ! ಇದು ಎಲ್ಲರಿಗೂ ಗೊತ್ತಿರುವ ಬಹಿರಂಗ ರಹಸ್ಯ. ಹೀಗಾಗಿ ಆ ಕಾಮಗಾರಿಗಳ ಗುಣಮಟ್ಟವನ್ನು ಪ್ರಶ್ನಿಸುವಂತೆಯೇ ಇಲ್ಲ. ಶೇ. ೪೦ರಿಂದ ೫೦ರಷ್ಟು ಹಣ ಕಾಮಗಾರಿಗಳಿಗೆ ನಿಜವಾಗಿ ಖರ್ಚಾದರೆ ಅದು ಉತ್ತಮವೆನ್ನುವ ಮಟ್ಟದಲ್ಲಿ ಇಂದಿನ ಸ್ಥಿತಿ ಇದೆ. ಎಷ್ಟೋ ಕಾಮಗಾರಿಗಳೇ ಆಗದೆ ಹಣ ಗುತ್ತಿಗೆದಾರರ, ರಾಜಕಾರಣಿಗಳ, ಅಧಿಕಾರಗಳ ಜೇಬು ಸೇರುತ್ತಿರುವುದು ಸುಳ್ಳಲ್ಲ. ಪುರಸಭೆ, ನಗರಸಭೆಗಳ ವ್ಯಾಪ್ತಿಯಲ್ಲಿ ಆಗಿರುವ ಚರಂಡಿ ಕಾಮಗಾರಿಗಳ ಒಟ್ಟು ಉದ್ದ ಲೆಕ್ಕ ಹಾಕಿದರೆ ಅದು ಜಿಲ್ಲಾಕೇಂದ್ರದಿಂದ ರಾಜಧಾನಿ ಬೆಂಗಳೂರಿನವರೆಗೂ ತಲುಪುವ ಸಾಧ್ಯತೆ ಇದೆ. ಇದರ ಸತ್ಯಾಸತ್ಯತೆಯನ್ನು ಯಾರು ಬೇಕಾದರೂ ಪರಿಶೀಲಿಸಬಹುದು. ಆದರೆ ಆ ಚರಂಡಿಗಳೇ ಇರುವುದಿಲ್ಲ.
ಇದು ಅಭಿವೃದ್ಧಿಯೇ?
ಹಾಸನದ ಸ್ಟೇಡಿಯಮ್ಮಿನಲ್ಲಿ ಒಂದು ಹೈಟೆಕ್ ಶೌಚಾಲಯ ನಿರ್ಮಿಸಿ ಸುಮಾರು ೮ ವರ್ಷಗಳಾಗಿವೆ. ಆ ಸಮಯದಲ್ಲಿ ಆ ಕಾಮಗಾರಿಗೆ ಸುಮಾರು ೮ರಿಂದ೧೦ ಲಕ್ಷ ವೆಚ್ಚ ತೋರಿಸಿರಬಹುದು, ಅಥವ ಅದಕ್ಕೂ ಹೆಚ್ಚಾಗಿರಬಹುದು. ಅದನ್ನು ಇದುವರೆವಿಗೂ ಸಾರ್ವಜನಿಕ ಉಪಯೋಗಕ್ಕೆ ತೆರೆದಿಲ್ಲ. ಏಕೆ ತೆರೆದಿಲ್ಲ ಎಂಬುದಕ್ಕೆ ಅಧಿಕಾರಿಗಳಾಗಲೀ, ಸಾರ್ವಜನಿಕರಾಗಲೀ ತಲೆ ಕೆಡಿಸಿಕೊಂಡಿಲ್ಲ. ಹಾಗೆಂದು ಅಲ್ಲಿ ಬೇರೆ ಶೌಚಾಲಯಗಳಿವೆಯೇ ಎಂದರೆ ಅದೂ ಇಲ್ಲ. ಗಂಡಸರು ಆ ಶೌಚಾಲಯದ ಗೋಡೆಯ ಬಳಿಯೇ ತಮ್ಮ ಬಾಧೆ ತೀರಿಸಿಕೊಳ್ಳುತ್ತಾರೆ. ಹೆಂಗಸರು ತಮ್ಮ ಮನೆಗಳಿಗೇ ಹೋಗಬೇಕು. ಇಷ್ಟಾದರೂ ಯಾರೂ ಗೊಣಗಾಡುವುದಿಲ್ಲವೆಂದರೆ ಜಡ್ಡುಗಟ್ಟಿದ ವ್ಯವಸ್ಥೆಯಲ್ಲಿ ಬದಲಾವಣೆ ನಿರೀಕ್ಷಿಸಬಹುದೆ? ಪ್ರತಿನಿತ್ಯ ನೂರಾರು, ವಿಶೇಷ ದಿನಗಳಲ್ಲಿ ಸಾವಿರಾರು ಜನರು ಬಂದು ಹೋಗುವ ಸ್ಥಳದಲ್ಲಿನ ಪರಿಸ್ಥಿತಿಯೇ ಹೀಗಿದೆ. ಈ ಕಾಮಗಾರಿಗೆ ಆದ ವೆಚ್ಚ ವ್ಯರ್ಥವಾದಂತೆ ಅಲ್ಲವೆ? ಇದು ಅಭಿವೃದ್ಧಿಯೇ? ಜನ ಜಾಗೃತರಾಗಿದ್ದರೆ, ಆಗಿರುವ ವೆಚ್ಚ ಸರಿಯೇ ಎಂದು ಗಮನಿಸುತ್ತಿದ್ದರು, ಶೌಚಾಲಯ ತೆರೆಯುವಂತೆ ಮಾಡುತ್ತಿದ್ದರು, ತೆರೆದರೂ ಸ್ವಚ್ಚವಾಗಿ ನಿರ್ವಹಣೆಯಾಗುವಂತೆ ನಿಗಾ ವಹಿಸುತ್ತಿದ್ದರು.
ಹಣ, ಹೆಂಡ, ಸೀರೆ, ವಸ್ತುಗಳನ್ನು ಹಂಚದೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೆನ್ನುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಒಬ್ಬ ಪ್ರಾಮಾಣಿಕ ವ್ಯಕ್ತಿ ಚುನಾವಣೆಗೆ ನಿಂತರೆ ಠೇವಣಿ ಉಳಿಸಿಕೊಳ್ಳವುದೂ ಅನುಮಾನ. ಇಂತಹ ಪರಿಸ್ಥಿತಿಯಲ್ಲಿ ಗೆದ್ದವರ ಉದ್ದೇಶ ಮತ್ತಷ್ಟು ಹಣ ಬಾಚಿಕೊಳ್ಳುವುದೇ ಆಗುವುದು ಸಹಜ. ಹೀಗಿರುವಾಗ ಜನರ ಅಭಿವೃದ್ಧಿ ಹೇಗೆ ಸಾಧ್ಯ? ಭ್ರಷ್ಠಾಚಾರಕ್ಕೆ ಕಡಿವಾಣ ಬೀಳದೆ ಅಭಿವೃದ್ಧಿ ಸಾಧ್ಯವೇ ಇಲ್ಲ. ಭ್ರಷ್ಠಾಚಾರ ನಿವಾರಣೆಗೆ ಪ್ರಧಾನಿ ಮೋದಿಯವರ ಹಲವಾರು ದಿಟ್ಟ ಕ್ರಮಗಳಿಗೆ ಜನಸಾಮಾನ್ಯನ ಮೆಚ್ಚುಗೆ ಇರುವುದರಿಂದಲೇ ಜನ ಅವರ ಪಕ್ಷಕ್ಕೆ ಒಲವು ತೋರಿಸುತ್ತಿದ್ದಾರೆ. ನಿಜವಾಗಿ ಅಭಿವೃದ್ಧಿ ಬಯಸುವುದಾದಲ್ಲಿ ಆಸಕ್ತ ಜನರು, ಸಾಮಾಜಿಕ ಸಂಸ್ಥೆಗಳು, ಸಂಘಟನೆಗಳು ಹಳ್ಳಿ ಹಳ್ಳಿಗಳಲ್ಲಿ, ಹಿಂದುಳಿದ ಮತ್ತು ಕೊಳಚೆ ಪ್ರದೇಶಗಳ ನಿವಾಸಿಗಳಲ್ಲಿ ಆಮಿಷಕ್ಕೆ ಒಳಗಾಗದೆ ಮತ ನೀಡುವಂತಹ ಸ್ಥಿತಿ ತರಲು ಮತ್ತು ಭ್ರಷ್ಠಾಚಾರ ನಿಯಂತ್ರಣಕ್ಕೆ ಒತ್ತುಕೊಡಲು ಜನಜಾಗೃತಿ ಮೂಡಿಸುವುದೊಂದೇ ದಾರಿಯಾಗಿದೆ. ಭ್ರಷ್ಠಾಚಾರ ಹತ್ತಿಕ್ಕದೆ ಅಭಿವೃದ್ಧಿ ಕನಸುಮನಸಿನಲ್ಲೂ ಸಾಧ್ಯವಿಲ್ಲ. ಭ್ರಷ್ಠಾಚಾರವೇ ಅಭಿವೃದ್ಧಿಗೆ ಕಂಟಕ ಮತ್ತು ಸಕಲ ಸಮಸ್ಯೆಗಳ ತಾಯಿಯಾಗಿದೆ. ಜನಜಾಗೃತಿ ಮೂಡಿಸುವುದೇ ಇಂದಿನ ಆದ್ಯತೆಯ ಕೆಲಸವಾಗಬೇಕಿದೆ.
-ಕ.ವೆಂ.ನಾಗರಾಜ್.
**************
ಭಾನುವಾರ, ಏಪ್ರಿಲ್ 22, 2018
ಶ್ರೀಮತಿ ಎಂ.ಎನ್.ಚಂದ್ರಲೇಖ ಹೆಚ್.ಎಸ್.ಸುಬ್ರಹ್ಮಣ್ಯ ಚಾರಿಟಬಲ್ ಟ್ರಸ್ಟ್
ಮಿತ್ರ ಸುಬ್ರಹ್ಮಣ್ಯ ನಿವೃತ್ತ ಪ್ರೌಢಶಾಲಾ ಶಿಕ್ಷಕರು. ನನಗೆ ಬಾಲ್ಯಕಾಲದಿಂದಲೂ ಪರಿಚಿತ ಮತ್ತು ಬಂಧು. ಕಳೆದ ವರ್ಷ ಅವರ ಪತ್ನಿ ಶ್ರೀಮತಿ ಚಂದ್ರಲೇಖಾ ವಿಧಿವಶರಾದರು. ಚಂದ್ರಲೇಖಾ ಸುಬ್ರಹ್ಮಣ್ಯರು ಬಾಲ್ಯದ ಒಡನಾಡಿಗಳು, ಸಂಬಂಧಿಗಳು. ಆ ಸಂಬಂಧ ಮುಂದೆ ವೈವಾಹಿಕ ಜೀವನದಲ್ಲಿಯೂ ಒಟ್ಟಿಗೆ ಮುಂದುವರೆಯಿತು. ೧೪ ವರ್ಷಗಳ ಬಾಲ್ಯದ ಒಡನಾಟ, ೩೩ ವರ್ಷಗಳ ವೈವಾಹಿಕ ಜೀವನದ ಸಂಗಾತಿಯಾಗಿ ಸುಖ-ದುಃಖಗಳೆಲ್ಲದರಲ್ಲಿ ಸಹಭಾಗಿಯಾಗಿದ್ದ ಚಂದ್ರಲೇಖಾ ಶಿಕ್ಷಕಿಯಾಗಿ ಮಕ್ಕಳ ಕಣ್ಮಣಿಯಾಗಿದ್ದರಲ್ಲದೆ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಳಕಳಿಯನ್ನೂ ಹೊಂದಿ ತನು-ಮನ-ಧನಗಳಿಂದ ತೊಡಗಿಕೊಂಡಿದ್ದವರು. ಇಂತಹ ಸುದೀರ್ಘ ಒಡನಾಟ ಅಕಾಲಿಕವಾಗಿ ಅಂತ್ಯಗೊಂಡಿದ್ದರಿಂದ ಸುಬ್ರಹ್ಮಣ್ಯ ವಿಚಲಿತರಾದರೂ, ಸಾವರಿಸಿಕೊಂಡು ಪತ್ನಿಯ ಸಾಮಾಜಿಕ ಕಳಕಳಿಯನ್ನು ಮುಂದುವರೆಸಿಕೊಂಡು ಹೋಗುವ ನಿರ್ಧಾರ ಮಾಡಿದರು. ಅವರ ಪತ್ನಿ ತಮ್ಮ ಸೇವಾವಧಿಯಲ್ಲಿ ಗಳಿಸಿ ಉಳಿಸಿದ್ದ ಹಣವನ್ನು ನಿಗದಿತ ಠೇವಣಿಯಲ್ಲಿರಿಸಿ ಅದರಿಂದ ಬರುವ ಉತ್ಪತ್ತಿಯನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ನಿರ್ಧರಿಸಿದರು. ಪತ್ನಿಯ ಹೆಸರನ್ನು ಆ ಮೂಲಕ ಚಿರಸ್ಥಾಯಿಯಾಗಿ ಉಳಿಸಬೇಕೆಂಬ ಉದ್ದೇಶದಿಂದ ಶ್ರೀಮತಿ ಎಂ.ಎನ್.ಚಂದ್ರಲೇಖ ಹೆಚ್.ಎಸ್.ಸುಬ್ರಹ್ಮಣ್ಯ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ರಿಜಿಸ್ಟರ್ ಮಾಡಿಸಿದರು. ಬಡರೋಗಿಗಳಿಗೆ, ವೃದ್ಧರಿಗೆ, ವಿದ್ಯಾರ್ಥಿಗಳಿಗೆ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ನೆರವು ಒದಗಿಸುವುದು ಟ್ರಸ್ಟಿನ ಮೂಲ ಧ್ಯೇಯೋದ್ದೇಶವಾಗಿದೆ. ಶ್ರೀ ಹೆಚ್.ಎಸ್.ಸುಬ್ರಹ್ಮಣ್ಯ ಟ್ರಸ್ಟಿನ ಅಧ್ಯಕ್ಷರು, ಶ್ರೀ ಹೆಚ್.ಆರ್.ರಂಗಸ್ವಾಮಿ ಉಪಾಧ್ಯಕ್ಷರು, ಶ್ರೀಮತಿ ನಾಗಶ್ರೀಚೇತನ್ ಕಾರ್ಯದರ್ಶಿ ಮತ್ತು ಶ್ರೀ ಹೆಚ್.ಆರ್.ವಿನಾಯಕ ಖಜಾಂಚಿಯಾಗಿದ್ದರೆ, ಶ್ರೀಯುತರಾದ ಕ.ವೆಂ.ನಾಗರಾಜ್, ಹೆಚ್.ಎಸ್.ರಾಮಸ್ವಾಮಿ, ಕೆ.ಎಸ್.ನಾಗರಾಜ್, ಹೆಚ್.ವಿ.ಗೋಪಾಲಕೃಷ್ಣ ಮತ್ತು ಶ್ರೀಮತಿ ಎಲ್.ಎಸ್. ಮಾಧುರಿಯವರುಗಳು ಟ್ರಸ್ಟಿನ ಸದಸ್ಯರುಗಳಾಗಿರುವಂತೆ ಟ್ರಸ್ಟ್ ರಚನೆಯಾಗಿದೆ.
ದಿನಾಂಕ ೧೯.೪.೨೦೧೮ರಂದು ಶ್ರೀ ಸುಬ್ರಹ್ಮಣ್ಯರವರ ಪತ್ನಿಯ ವೈಕುಂಠ ಸಮಾರಾಧನೆಯ ದಿನದಂದು ಹಾಸನದ ಸಂಗಮೇಶ್ವರ ಬಡಾವಣೆಯ ಶ್ರೀ ಶಿವಪಾರ್ವತಿ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ, ಬಂದಿದ್ದ ಬಂಧುಗಳು, ಸ್ನೇಹಿತರುಗಳ ಸಮ್ಮುಖದಲ್ಲಿ ಟ್ರಸ್ಟಿನ ಔಪಚಾರಿಕ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ಜೀವನಾದರ್ಶಗಳು, ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವ ೬೩ ಚಿಂತನಗಳ ಗುಚ್ಛ ತ್ರಿಷಷ್ಟಿ ಸಿಂಚನ ಹೆಸರಿನ ಪುಸ್ತಕದ ಬಿಡುಗಡೆಯಾಯಿತು. ಪ್ರೊ. ವಿ ನರಹರಿ (೧೦), ಶ್ರೀ ಕ.ವೆಂ.ನಾಗರಾಜ್ (೩೧), ಶ್ರೀಮತಿ ಸುಶೀಲಾ ಸೋಮಶೇಖರ್ (೧೫) ಮತ್ತು ಶ್ರೀ ಜಿ.ಎಸ್.ಮಂಜುನಾಥ್ (೭) ರವರುಗಳ ಲೇಖನಗಳ ಸಂಗ್ರಹವೇ ತ್ರಿಷಷ್ಟಿ ಚಿಂತನ. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಲೇಖಕರುಗಳು ಮತ್ತು ಪುಸ್ತಕ ಮುದ್ರಿಸಿದ ಬಾಲಾಜಿ ಪ್ರಿಂಟರ್ಸಿನ ಶ್ರೀ ಪಾಂಡುರಂಗರವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಟ್ರಸ್ಟಿನ ಉದ್ದೇಶಕ್ಕೆ ಪೂರಕವಾಗಿ ಪ್ರಾರಂಭಿಕ ನಡೆಯಾಗಿ ಸಕಲೇಶಪುರ ತಾ. ಬಾಗೆ, ಜಮ್ಮನಹಳ್ಳಿ ಮತ್ತು ಅಂಬೇಡ್ಕರ್ ನಗರದ ೧೮೦ ಮಕ್ಕಳಿಗೆ ಸಮವಸ್ತ್ರಗಳನ್ನು ಉಚಿತವಾಗಿ ತಲುಪಿಸುವ ಸಲುವಾಗಿ ಸಂಬಂಧಿಸಿದ ಶಾಲಾ ಮುಖ್ಯಸ್ಥರಿಗೆ ಕೊಡಲಾಯಿತು. ಹಳೇಬೀಡಿನ ಶ್ರೀ ಕೇಶವಮೂರ್ತಿಯವರು ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದು ಅವರಿಗೆ ನೆರವಾಗುವ ಸಲುವಾಗಿ ರೂ. ೧೫೦೦೦/- ಚೆಕ್ ನೀಡಲಾಯಿತು. ಶಿವಮೊಗ್ಗ ಜಿಲ್ಲೆ ಹೊಸನಗರ ತಾ. ಗರ್ತಿಕೆರೆಯ ರಾ.ಸ್ವ.ಸಂ. ಪ್ರೇರಿತ ಶಾಲೆಯ ಉಪಯೋಗಕ್ಕೆ ಯು.ಪಿ.ಎಸ್. ಖರೀದಿಸಲು ರೂ. ೧೫೦೦೦/- ಚೆಕ್ ಅನ್ನು ಶಾಲೆಯ ಕಾರ್ಯದರ್ಶಿ ಶ್ರೀ ರಾಘವೇಂದ್ರರವರಿಗೆ ನೀಡಲಾಯಿತು. ಟ್ರಸ್ಟಿನ ಧ್ಯೇಯೋದ್ದೇಶಗಳನ್ನು ಕುರಿತು ಶ್ರೀ ಕ.ವೆಂ. ನಾಗರಾಜ್ ಮಾತನಾಡಿದರು. ಪ್ರೊ. ನರಹರಿಯವರು ಟ್ರಸ್ಟಿನ ಉದ್ದೇಶವನ್ನು ಮನಸಾರೆ ಶ್ಲಾಘಿಸಿ ಎಲ್ಲರೂ ಈ ಕಾರ್ಯದಲ್ಲಿ ಜೊತೆಗೂಡಲು ಕರೆ ನೀಡಿದರು. ಭಾವುಕರಾಗಿ ಮಾತನಾಡಿದ ಶ್ರೀ ಸುಬ್ರಹ್ಮಣ್ಯ ಪತ್ನಿಯ ನೆನಪನ್ನು ಉಳಿಸುವ ಮತ್ತು ಆಕೆಯ ಆಶಯದಂತೆ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗೆ, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕೆ, ಬಡ ರೋಗಿಗಳು ಮತ್ತು ಅಸಹಾಯಕರಿಗೆ ನೆರವು ನೀಡುವ ಕಾರ್ಯವನ್ನು ಮುಂದುವರೆಸುವುದಾಗಿ ಹೇಳಿ ಎಲ್ಲಾ ಬಂಧುಗಳು ಮತ್ತು ಸ್ನೇಹಿತರ ಸಹಕಾರ ಕೋರಿದರು. ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಶ್ರೀ ಸುಬ್ರಹ್ಮಣ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು.
-ಕ.ವೆಂ.ನಾಗರಾಜ್.
ಸಮಾರಂಭದ ಕೆಲವು ದೃಷ್ಯಗಳು:
ಭಾನುವಾರ, ಏಪ್ರಿಲ್ 8, 2018
ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ- ಗೌರವ ಸಾಕು, ಗೌರವಧನ ಬೇಡ!
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ 12-13 ವರ್ಷದ ಬಾಲಕನಾಗಿದ್ದವರಿಗೂ ಸ್ವಾತಂತ್ರ್ಯ ಹೋರಾಟಗಾರರ ಪಟ್ಟ ಮತ್ತು ಪಿಂಚಣಿ ಸಿಗುತ್ತದೆ. ಆ ಸಮಯದಲ್ಲಿ ಮತ್ತಾವುದೋ ಕಾರಣಕ್ಕಾಗಿ ಜೈಲಿನಲ್ಲಿದ್ದವರೂ ಪ್ರಮಾಣ ಪತ್ರ ಪಡೆದು ಸ್ವಾತಂತ್ರ್ಯ ಹೋರಾಟಗಾರರೆನಿಸಿಕೊಂಡ ಬಗ್ಗೆಯೂ ಜನರು ಆಡಿಕೊಂಡದ್ದನ್ನು ಕೇಳಿದ್ದೇನೆ. ಯಾವುದೇ ದಾಖಲೆಗಳಿಲ್ಲದಿದ್ದರೂ ಶಿಫಾರಸಿನ ಆಧಾರದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟ ಪಡೆದವರ ಸಂಖ್ಯೆಯೇ ಹೆಚ್ಚು ಎಂಬುದು ವಿಪರ್ಯಾಸ. ಇಂತಹ ಶಿಫಾರಸುಗಳ ಬಲದಿಂದ ಖೊಟ್ಟಿ ಸ್ವಾತಂತ್ರ್ಯ ಹೋರಾಟಗಾರರು ಸವಲತ್ತುಗಳ ಲಾಭ ಪಡೆಯಲು ಅವಕಾಶವಿದೆ, ಪಡೆಯುತ್ತಿದ್ದಾರೆ ಎಂಬ ಆರೋಪಗಳೂ ಇವೆ. ಇದನ್ನು ಪ್ರಸ್ತಾಪಿಸುತ್ತಿರುವ ಉದ್ದೇಶವೆಂದರೆ ಈಗ 1975-77ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೂ ಪಿಂಚಣಿ ಕೊಡಬೇಕೆಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಬಿಹಾರ, ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಪಿಂಚಣಿ ಕೊಡುತ್ತಿದ್ದಾರೆ, ಕರ್ನಾಟಕದಲ್ಲೂ ಕೊಡಬೇಕೆಂದು ಒತ್ತಾಯ ಮಾಡುವ ಪ್ರಯತ್ನಗಳು ಆರಂಭವಾಗಿದೆ. ವೈಯಕ್ತಿಕವಾಗಿ ನನಗೆ ಇಂತಹ ಪ್ರಯತ್ನ ಒಳ್ಳೆಯದಲ್ಲವೆಂದು ಅನ್ನಿಸುತ್ತಿದೆ. ಅದಕ್ಕೆ ಪೂರಕವಾಗಿ ನನ್ನ ವಿಚಾರಗಳನ್ನು ಮಂಡಿಸುತ್ತಿರುವೆ.
'ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಪಿಂಚಣಿ ಕೊಡಬಾರದೆಂದು ಹೇಳಲು ನೀವು ಯಾರು?' ಎಂಬ ಪ್ರಶ್ನೆಗೆ ಉತ್ತರ ಕೊಟ್ಟು ಮುಂದುವರೆಸುವೆ. ಸ್ವತಃ ನಾನೂ ಒಬ್ಬ 1975-77ರ ತುರ್ತು ಪರಿಸ್ಥಿತಿಯ ಸಂತ್ರಸ್ತನಾಗಿದ್ದವನು. ಆಗ ನಾನು 23-24ರ ತರುಣ. (ಈಗ ನನಗೆ 67 ವರ್ಷಗಳು.) ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಕೇವಲ ಎರಡು ವರ್ಷಗಳಾಗಿದ್ದವು. ಆ ಸಮಯದಲ್ಲಿ ನಿಷೇಧಕ್ಕೆ ಒಳಗಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನೆಂಬ ಕಾರಣದಿಂದ ನನ್ನನ್ನು ರಾಷ್ಟ್ರೀಯ ಭದ್ರತಾ ನಿಯಮಗಳ ಅನುಸಾರ ಬಂಧಿಸಿ ಹಾಸನದ ಜೈಲಿಗೆ ಅಟ್ಟಿದ್ದರು. ನೌಕರಿಯಿಂದ ಅಮಾನತ್ತು ಮಾಡಿದ್ದರು. 13 ಸುಳ್ಳು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದ್ದರು. ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾಗಿದ್ದವನು. ಒಂದೂವರೆ ವರ್ಷಗಳ ಕಾಲ ಸೇವೆಯಿಂದ ಅಮಾನತ್ತಿನಲ್ಲಿ ಇದ್ದವನನ್ನು ವಿಚಾರಣೆಯ ಫಲಿತಾಂಶಕ್ಕೆ ಒಳಪಟ್ಟು ಹಾಸನದಿಂದ ದೂರದ ಗುಲ್ಬರ್ಗ ಜಿಲ್ಲೆಯ ಸೇಡಮ್ ತಾಲ್ಲೂಕಿಗೆ ವರ್ಗಾಯಿಸಿದ್ದರು ಅನ್ನುವ ಬದಲು ಒಗಾಯಿಸಿದ್ದರು ಅನ್ನಬಹುದು. ನನ್ನ ತಂದೆಯವರು ಆಗ ಹಾಸನದ ನ್ಯಾಯಾಲಯದಲ್ಲಿ ಶಿರಸ್ತೇದಾರರಾಗಿದ್ದು, ಅವರು ಕೆಲಸ ಮಾಡುತ್ತಿದ್ದ ನ್ಯಾಯಾಲಯಕ್ಕೇ ನಾನು ವಿಚಾರಣೆಗೆ ಹಾಜರಾಗಬೇಕಾಗಿ ಬರುತ್ತಿತ್ತು. ಅಂತಹ ದಿನಗಳಲ್ಲಿ ತಂದೆಯವರು ಕರ್ತವ್ಯಕ್ಕೆ ರಜೆ ಹಾಕುತ್ತಿದ್ದರು, ನ್ಯಾಯಾಲಯಕ್ಕೆ ಬರುತ್ತಿರಲಿಲ್ಲ. ಇಷ್ಟೇ ಸಾಲದೆಂಬಂತೆ, ಮನೆಯಲ್ಲಿ ನಿಷೇಧಿತ ಸಂಸ್ಥೆಯ ಚಟುವಟಿಕೆಗಳಿಗೆ ಆಸ್ಪದ ಕೊಡುತ್ತಿದ್ದರೆಂದು ಕಾರಣ ನೀಡಿ ತಂದೆಯವರು ಕೆಲಸ ಮಾಡುತ್ತಿದ್ದ ನ್ಯಾಯಾಲಯದ ನ್ಯಾಯಾಧೀಶರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಪ್ರಸ್ತಾವನೆ ಸಲ್ಲಿಸಿ ನನ್ನ ತಂದೆಯನ್ನೂ ಕೆಲಸದಿಂದ ಕಡ್ಡಾಯ ನಿವೃತ್ತಿಗೊಳಿಸಲು ಶಿಫಾರಸು ಮಾಡಿದ್ದರು. ಆಗ ಶ್ರೀ ಕೋ. ಚೆನ್ನಬಸಪ್ಪನವರು ಜಿಲ್ಲಾ ಜಡ್ಜ್ ಆಗಿದ್ದು ಪ್ರಸ್ತಾವನೆಯನ್ನು ಒಪ್ಪದಿದ್ದುದರಿಂದ ನನ್ನ ತಂದೆಯವರ ನೌಕರಿ ಉಳಿದಿತ್ತು. ಜೈಲಿನ ಗೋಡೆಗೆ ಒರಗಿ ಕುಳಿತು, ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದ ನನಗೆ ಮುಂದೇನು ಮಾಡಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕಿಕೊಳ್ಳುತ್ತಿದ್ದೆ. ನನ್ನ ನೌಕರಿ ಮರಳಿ ಸಿಗುವ ಭರವಸೆ ನನಗಿರಲಿಲ್ಲ. ನನಗೆ, ನನ್ನ ಕುಟುಂಬದವರಿಗೆ ಅನಗತ್ಯ ಕಿರುಕುಳ ಕೊಟ್ಟಿದ್ದ ಹಲವಾರು ಜನರನ್ನು ಕೊಂದುಹಾಕುವ ಬಗ್ಗೆಯೂ ರೋಷತಪ್ತ ಮನಸ್ಸು ಚಿಂತಿಸುತ್ತಿತ್ತು. ಯಾರು ಯಾರನ್ನು ಹೇಗೆ ಕೊಲ್ಲಬೇಕೆಂಬ ಬಗ್ಗೆಯೂ ಲೆಕ್ಕಾಚಾರ ಹಾಕುತ್ತಿತ್ತು. ಆದರೆ ರಾ.ಸ್ವ.ಸಂಘದ ಹಿರಿಯರು ಮತ್ತು ಸುಮನಸ್ಕರ ಸಹವಾಸಗಳಿಂದ ಬಂದಿದ್ದ ಸಂಸ್ಕಾರ ನನ್ನನ್ನು ದಾರಿ ತಪ್ಪಲು ಬಿಡಲಿಲ್ಲ. ಇಂತಹ ಸಂಸ್ಕಾರ ಇಲ್ಲದೇ ಇದ್ದಿದ್ದರೆ ನಾನೊಬ್ಬ ಉಗ್ರ ಹಿಂಸಾವಾದಿಯಾಗುತ್ತಿದ್ದುದರಲ್ಲಿ ಸಂದೇಹವಿಲ್ಲ. ನನ್ನ ಮುಂದಿನ ಭವಿಷ್ಯವೇ ಮಸುಕಾಗಿದ್ದ ಸಂದರ್ಭವನ್ನು ಎದುರಿಸಿ ಬಂದಿದ್ದ ನಾನು ಅದಕ್ಕಾಗಿ ಈಗ ಪ್ರತಿಫಲರೂಪವಾಗಿ ಪಿಂಚಣಿಯನ್ನೋ, ಗೌರವಧನವನ್ನೋ ನಿರೀಕ್ಷಿಸಿದರೆ, ಅದೂ 40 ವರ್ಷಗಳ ನಂತರದಲ್ಲಿ, ಅದು ನನಗೆ ನಾನೇ ಮಾಡಿಕೊಳ್ಳುವ ಅವಮಾನವೆಂಬುದು ನನ್ನ ವೈಯಕ್ತಿಕ ಅನಿಸಿಕೆ. ನಾನಂತೂ ಅದನ್ನು ನಿರೀಕ್ಷಿಸುವುದಿಲ್ಲ ಮತ್ತು ಅದಕ್ಕಾಗಿ ಕೋರುವುದೂ ಇಲ್ಲ.
ನಿಜ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅದೆಷ್ಟು ಜನರು ಪ್ರಾಣ ಕಳೆದುಕೊಂಡರೋ, ಅದೆಷ್ಟು ಕುಟುಂಬಗಳು ಬೀದಿಗೆ ಬಿದ್ದವೋ, ಅದೆಷ್ಟು ಜನರು ಶಾಶ್ವತವಾಗಿ ಅಂಗವಿಕಲರಾದರೋ ಅದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಅಂತಹವರನ್ನು ಸ್ಮರಿಸುವುದು, ನಿಜಕ್ಕೂ ಆಸರೆ ಅಗತ್ಯವಿರುವವರಿಗೆ ಆಸರೆ ಒದಗಿಸುವುದು ಉತ್ತಮವಾದ ಕಾರ್ಯವೇ. ಅಂತಹವರನ್ನು ಗುರುತಿಸಿ ಅವರಿಗೆ ಸಹಾಯಹಸ್ತ ಚಾಚಿದರೆ ಅದು ಮೆಚ್ಚುವ ಕಾರ್ಯ. ನಾನು ಹಾಸನ ಜಿಲ್ಲೆಯನ್ನೇ ಉದಾಹರಣೆಯಾಗಿಟ್ಟುಕೊಂಡು ನನಗೆ ತಿಳಿದ ಮಾಹಿತಿಯನ್ನು ಹೇಳುವುದಾದರೆ, ಆ ಸಂದರ್ಭದಲ್ಲಿ ಯಾವುದೇ ವಿಚಾರಣೆಯಿಲ್ಲದೆ ಬಂಧಿಸಿಡಬಹುದಾಗಿದ್ದ ಆಂತರಿಕ ಭದ್ರತಾ ಸಂರಕ್ಷಣಾ ಕಾಯದೆ (ಮೀಸಾ) ಅನ್ವಯ ಬಂಧಿತರಾಗಿದ್ದವರು 13 ಜನರು. ಅವರಲ್ಲಿ 10 ಜನರು ಈಗಾಗಲೇ ಮೃತರಾಗಿದ್ದಾರೆ ಮತ್ತು ಅವರ ಕುಟುಂಬಗಳು ಆರ್ಥಿಕ ಸುಸ್ಥಿತಿಯಲ್ಲಿವೆ. ಮೀಸಾ ಬಂದಿಯಾಗಿದ್ದ ರಾ.ಸ್ವ.ಸಂಘದ ಜಿಲ್ಲಾ ಪ್ರಚಾರಕರಾಗಿದ್ದ ಶ್ರೀ ಪ್ರಭಾಕರ ಕೆರೆಕೈ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅನುಭವಿಸಿದ ದೈಹಿಕ, ಮಾನಸಿಕ ಹಿಂಸೆಗಳ ಕಾರಣದಿಂದ ತುರ್ತು ಪರಿಸ್ಥಿತಿ ಹಿಂತೆಗೆತವಾದ ಕೆಲವು ವರ್ಷಗಳ ನಂತರದಲ್ಲಿ ಮತಿಭ್ರಮಣೆಗೊಳಗಾಗಿ ಮೃತಿ ಹೊಂದಿದ್ದರು. ಉಳಿದ ಮೂವರೂ ಮೀಸಾ ಬಂಧಿತರಾಗಿದ್ದವರು ಸಹ ಒಳ್ಳೆಯ ಆರ್ಥಿಕ ಸ್ಥಿತಿಯವರಾಗಿದ್ದಾರೆ. ಭಾರತ ರಕ್ಷಣಾ ನಿಯಮಗಳ ಅನುಸಾರ ಬಂಧಿತರಾಗಿದ್ದವರು ಸುಮಾರು 300 ಜನರು. ಅವರಲ್ಲಿಯೂ ಬಹುತೇಕರು ಮೃತರಾಗಿದ್ದಾರೆ ಮತ್ತು ಹಲವರು ಈಗ ಪರಸ್ಥಳಗಳಲ್ಲಿದ್ದು ಎಲ್ಲಿದ್ದಾರೋ ತಿಳಿದಿಲ್ಲ. ಇರುವ ಉಳಿದವರೂ ಸಹ ಪಿಂಚಣಿ ಅವಲಂಬಿಸಿಯೇ ಜೀವನ ಸಾಗಿಸಬೇಕು ಎಂಬ ಸ್ಥಿತಿಯಲ್ಲಿರುವವರು ಬಹುಷಃ ಯಾರೂ ಇಲ್ಲವೆನ್ನಬೇಕು. ಇನ್ನು ಸಾವಿರಾರು ಜನರು ಪ್ರತಿಭಟನೆಯಲ್ಲಿ ತೊಡಗಿದ್ದರೂ, ಜೈಲುಗಳಲ್ಲಿ ಸ್ಥಳಾವಕಾಶವಿಲ್ಲದಿದ್ದರಿಂದ ಪೊಲೀಸರು ಅವರನ್ನು ಹೊಡೆದು, ಬಡಿದು ಹಿಂಸಿಸಿ ಬಿಟ್ಟುಬಿಟ್ಟಿದ್ದರು. ಇನ್ನು ಭೂಗತ ಚಟುವಟಿಕೆಗಳಲ್ಲಿ ತೊಡಗಿ ಚಳುವಳಿಯನ್ನು ಜೀವಂತವಾಗಿರಿಸಿದ್ದವರ ಸಂಖ್ಯೆಯೂ ದೊಡ್ಡದಿದೆ. ಅವರುಗಳಿಗೆ ಗೌರವಧನ ನೀಡಲು ಶಿಫಾರಸು ಪತ್ರಗಳೇ ಆಧಾರವಾಗುತ್ತವೆ. ಹೆಚ್ಚಿನ ರಾ.ಸ್ವ. ಸಂಘದ ಪ್ರಚಾರಕರು, ಕಾರ್ಯಕರ್ತರು ಶಿಫಾರಸಿನ ಗೋಜಿಗೇ ಹೋಗಲಾರರು. ಆಗ ಹೋರಾಟದಿಂದ ದೂರವಿದ್ದ ಹಲವರು ಇಂತಹ ಶಿಫಾರಸಿನ ಲಾಭ ಪಡೆಯುವುದಿಲ್ಲ ಎಂದೂ ಹೇಳಲಾಗದು. ಹೋರಾಟದಲ್ಲಿ ಪಾಲುಗೊಂಡಿದ್ದವರು ಸ್ವಪ್ರೇರಣೆಯಿಂದ, ಪ್ರಜಾಪ್ರಭುತ್ವದ ಮತ್ತು ದೇಶದ ಹಿತದೃಷ್ಟಿಯಿಂದ ಮಾಡಿದ್ದರೇ ಹೊರತು ಯಾವುದೇ ಫಲಾಪೇಕ್ಷೆಯ ನಿರೀಕ್ಷೆ ಅವರಲ್ಲಿರಲಿಲ್ಲ.
ಪಿಂಚಣಿಯೋ, ಗೌರವಧನವೋ ಬರುತ್ತದೆಯೆಂದರೆ, ಬಂದರೆ ಬರಲಿ ಎಂಬ ಮನೋಭಾವದವರೂ ಇರುತ್ತಾರೆ. ತುಂಬಾ ಅನುಕೂಲ ಸ್ಥಿತಿಯಲ್ಲಿರುವ ಒಬ್ಬ ಸ್ನೇಹಿತರು ಹೇಳಿದ್ದೇನೆಂದರೆ, ಒಂದು ಐದು ಸಾವಿರ ಕೊಟ್ಟರೆ ಕೊಡಲಿ ಬಿಡಿ. ನಾವು ತೆಗೆದುಕೊಳ್ಳದೆ ಅದನ್ನು ಬೇರೆ ಯಾವುದೋ ಅಗತ್ಯವಿರುವ ಸಂಸ್ಥೆಗೆ ಅಥವ ಜನರಿಗೆ ಸಿಗುವಂತೆ ಮಾಡಿದರಾಯಿತು! ಹಣದ ಪ್ರಲೋಭನೆಯೇ ಅಂತಹದು. ಯಾರೋ ಕೊಡುವ ಹಣವನ್ನು ಇನ್ನು ಯಾರಿಗೋ ದಾನ ಮಾಡುವ ಬದಲು, ಸಾಧ್ಯವಾದರೆ ನಮ್ಮಲ್ಲಿರುವ ಹಣದಿಂದಲೇ ಸಹಾಯ ಮಾಡೋಣ. ಸರ್ಕಾರದಿಂದ ಪಡೆದು ಏಕೆ ಕೊಡಬೇಕು? ಈಗ ಮಾಡಬಹುದಾದುದೇನೆಂದರೆ, ದೀನಸ್ಥಿತಿಯಲ್ಲಿ ಇರಬಹುದಾದವರನ್ನು ಗುರುತಿಸಿ ಅಂತಹವರಿಗೆ ಮಾತ್ರ ಅವರ ಅಗತ್ಯ ಅನುಸರಿಸಿ ಸಹಾಯ ಸಿಗುವಂತೆ ನೋಡಿಕೊಳ್ಳಬೇಕು, ಅಷ್ಟೆ. ಅಂದು ಹೋರಾಟ ಮಾಡಿದವರೆಲ್ಲರೂ ಈಗ 60 ವರ್ಷಗಳನ್ನು ಮೀರಿದವರೇ ಆಗಿದ್ದಾರೆ. ಅವರಿಗೆ ಗೌರವಧನ ಬೇಡ, ಗೌರವ ಸಾಕು. ಅವರ ವಯಸ್ಸು, ಅನುಭವಗಳನ್ನು ಆಧರಿಸಿ, ಅವರವರ ಶಕ್ತಿ, ಸಾಮರ್ಥ್ಯ ಅನುಸರಿಸಿ ಅವರ ಸೇವೆ, ಮಾರ್ಗದರ್ಶನಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಅದು ನಿಜವಾಗಿ ಅವರುಗಳಿಗೆ ಸಲ್ಲಿಸಬಹುದಾದ ಗೌರವವಾಗುತ್ತದೆ.
-ಕ.ವೆಂ.ನಾಗರಾಜ್.
ಪಾಠ ಮರೆತುಹೋಯಿತು!
ಆ ಮಗು ಒಂದನೆಯ ತರಗತಿಯಲ್ಲಿ ಓದುತ್ತಿದ್ದಾಗ ಅವನ ಶಾಲೆಯ ಮಾಸ್ತರು ಬಸವಣ್ಣನವರ ವಿಚಾರ ಹೇಳುತ್ತಾ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕೆಂದು ಹೇಳಿದ್ದರು. ಶಾಲೆ ಮುಗಿಸಿ ಮರಳಿ ಬರುವಾಗ ಮಳೆ ಪ್ರಾರಂಭವಾದುದರಿಂದ ಒಂದು ಮನೆಯ ಮುಂಭಾಗದಲ್ಲಿ ನಿಂತಿತ್ತು. ಆಗ ಓಡಿ ಬಂದ ನಾಯಿಯೊಂದೂ ಸಹ ರಕ್ಷಣೆಗಾಗಿ ಅದೇ ಮನೆಯ ಬಳಿ ಬಂದು ನಿಂತಿತು. ಇವನು ನಿಂತಿದ್ದರಿಂದ ನಾಯಿಗೆ ಜಾಗ ಸಾಲದಾಗಿ ಅರ್ಧ ನೆನೆಯುತ್ತಿತ್ತು. ಮಗು ಯೋಚಿಸಿತು, "ನನಗಾದರೆ ಮನೆಯಿದೆ, ಬಟ್ಟೆಯಿದೆ. ಪಾಪ, ಈ ನಾಯಿಗೆ ಏನಿದೆ?" ನಾಯಿಗೆ ಜಾಗ ಬಿಟ್ಟು ನೆನೆದುಕೊಂಡೇ ಮನೆಗೆ ವಾಪಸು ಬಂದ ಮಗನನ್ನು ಕಂಡ ತಾಯಿಗೆ ನೆನೆದುಕೊಂಡು ಬಂದ ಕಾರಣ ತಿಳಿಸಿತು.ನೆನೆದಿದ್ದ ಮಗುವನ್ನು ಒರೆಸಿ ಬೇರೆ ಬಟ್ಟೆ ಹಾಕಿದ ತಾಯಿ ಮಗುವನ್ನು ಮುದ್ದಾಡಿದಳು. ವಿಷಯ ತಿಳಿದ ತಂದೆಯೂ ಖುಷಿಪಟ್ಟು ಮಗುವಿಗೆ ಹೊಸ ಬಟ್ಟೆ, ಚಾಕೊಲೇಟ್ ಕೊಡಿಸಿದ. ಕಾಲ ಸರಿಯಿತು, ಮಗು ದೊಡ್ಡದಾಗುತ್ತಾ ಹೋದಂತೆ ಆ ಮಾಸ್ತರ ಪಾಠ ಮರೆತುಹೋಗುತ್ತಾ ಒಂದೊಮ್ಮೆ ಪೂರ್ತಿ ಮರೆತೇಹೋಯಿತು.
-ಕ.ವೆಂ.ನಾಗರಾಜ್.
ಸೋಮವಾರ, ಮಾರ್ಚ್ 26, 2018
ಒಳ್ಳೆಯ ದಿನಗಳು ಬರಲಿವೆ!
ಹೌದು, ಒಳ್ಳೆಯ ದಿನಗಳು ಬರಲಿವೆ! ಈ ಮಾತನ್ನು ಯಾವುದೇ ರಾಜಕೀಯ ನಾಯಕರನ್ನು ಸಮರ್ಥಿಸಲು ಬರೆಯುತ್ತಿಲ್ಲ ಅಥವ ಈ ಮಾತಿಗೆ ರಾಜಕೀಯ ಮಹತ್ವವನ್ನೂ ಕೊಡಬೇಕಿಲ್ಲ. ನಾನು ಸಹಜವಾದ ವಿಷಯವನ್ನು ಸಹಜವಾಗಿ ಪ್ರಸ್ತಾಪಿಸುವ ಸಲುವಾಗಿ ಈ ವಾಕ್ಯವನ್ನು ಆರಿಸಿಕೊಂಡಿರುವೆ, ಅಷ್ಟೆ. ಪ್ರತಿಯೊಬ್ಬರೂ ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದುಕೊಂಡೇ ಜೀವಿಸುತ್ತಾರೆ ಎಂಬುದು ಸತ್ಯ. ಈಗ ಇರುವುದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಬಾಳಬೇಕು ಎಂಬುದೇ ಎಲ್ಲರ ಪ್ರಬಲವಾದ ಇಚ್ಛೆಯಾಗಿರುವುದರಿಂದ, ಈಗ ಇರುವ ಕಷ್ಟದ, ದುಃಖದ ಸ್ಥಿತಿಯನ್ನು ಸಹಿಸಿಕೊಂಡು ಮುಂದುವರೆಯುವುದು, ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾಭಾವನೆಯಿಂದ! ಒಳ್ಳೆಯ ದಿನಗಳಿಗಾಗಿ ನಮ್ಮ ಪ್ರಯತ್ನ ಅಚಲವಾಗಿದ್ದರೆ, ಸತತವಾಗಿದ್ದರೆ ಆ ದಿನಗಳು ಬಂದೇ ಬರುತ್ತವೆ.
ನಾವು ಒಂದು ವಿಧದ ಆಸೆ, ಭರವಸೆ, ನಿರೀಕ್ಷೆಯ ಕಾರಣದಿಂದಾಗಿ ಬದುಕಿರುತ್ತೇವೆಯೇ ಹೊರತು, ಕೇವಲ ಈಗಿನ ಅನುಭವಗಳ ಕಾರಣಗಳಿಂದ ಅಲ್ಲ. ನಮ್ಮೊಳಗೆ ಅದೇನೋ ಇದೆ, ಅದು ಈ ನಿರೀಕ್ಷೆಯ ಬಲದಿಂದ ನಮ್ಮನ್ನು ಬಂಧಿಸಿರುತ್ತದೆ. ಈಗಿರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಆಸೆಯೇ ನಮ್ಮನ್ನು ಬಂಧಿಸುವ ಆ ಶಕ್ತಿಯಾಗಿದೆ. ಇದೇ ಆತ್ಮೋನ್ನತಿಯ ಆಸೆ! ನಮ್ಮ ಅಸ್ತಿತ್ವಕ್ಕೆ, ಬದುಕಿಗೆ ಬೆಲೆ ಬರುವುದೇ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಅಂತರ್ಗತ ಪ್ರಜ್ಞೆಯಿಂದ ಎಂಬುದನ್ನು ನಾವು ಗಮನಿಸಬೇಕು. ಆತ್ಮಾವಲೋಕನ ಮಾಡಿಕೊಂಡರೆ ತಿಳಿದೀತು, ಈ ಪ್ರಪಂಚದಲ್ಲಿ ಇಂದು ನಾವು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ನಾವು ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ನಾವು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ನಾವು ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುಂತೆ, ಸಹನೀಯವಾಗುವಂತೆ ಮಾಡುತ್ತದೆ ಎಂಬುದು ಸತ್ಯವಲ್ಲವೇ? ಈ ಆಸೆ ಹೊರನೋಟಕ್ಕೆ ಕಾಣುವುದಿಲ್ಲ. ಆದರೆ ಇದು ನಮ್ಮೊಳಗೇ ನಮಗೆ ಕಾಣದಂತೆಯೇ ಕೆಲಸ ಮಾಡುತ್ತಿರುತ್ತದೆ. ಈ ಬದುಕುವ, ಮೇಲೇರುವ ಆಸೆ ನಮ್ಮ ವಿಚಿತ್ರ ಮತ್ತು ವಿಶಿಷ್ಟವಾದ ಗುಣವಾಗಿದೆ. ಈ ಗುಣದ ಕಾರಣವನ್ನು ತರ್ಕದ ಮೂಲಕ ತಿಳಿಯುವುದು ಸಾಧ್ಯವಿದೆಯೆಂದು ಅನ್ನಿಸುವುದಿಲ್ಲ. ಇದು ತರ್ಕಾತೀತವಾದ ವಿಸ್ಮಯವೆನ್ನಬಹುದು.
ಒಂದು ಅರ್ಥದಲ್ಲಿ ನೋಡಿದರೆ ನಾವು ಬದುಕಿರುವ, ಉಸಿರಾಡುತ್ತಿರುವ ಪ್ರತಿದಿನವೂ ಒಳ್ಳೆಯ ದಿನವೇ! ಏಕೆಂದರೆ ಮತ್ತಷ್ಟು ಒಳ್ಳೆಯದನ್ನು ನೋಡಲು, ಕಾಣಲು ಪ್ರತಿದಿನವೂ ಅವಕಾಶ ಮಾಡಿಕೊಡುತ್ತದೆ. ಕೆಲವು ದಿನಗಳು ಕೆಟ್ಟ, ಕಷ್ಟದ, ದುಃಖದ ದಿನಗಳೆಂದು ನಮಗೆ ಅನ್ನಿಸಬಹುದು. ಒಳ್ಳೆಯ ದಿನಗಳ, ಸಂತೋಷದ ಕ್ಷಣಗಳ ಉತ್ಕಟ ಅನುಭವವಾಗಬೇಕಾದರೆ ದುಃಖ, ಕಷ್ಟಗಳ ಅನುಭವವೂ ಆಗಬೇಕು. ಬೆಳಿಗ್ಗೆ ಎದ್ದಾಗ ನಮ್ಮ ಭುಜಗಳ ಮೇಲೆ ತಲೆ ಇದ್ದರೆ, ಇಂದು ಶುಭದಿನ, ಶುಭವಾಗಲಿದೆ ಎಂದೇ ದಿನವನ್ನು ಪ್ರಾರಂಭಿಸಿದರೆ ಆ ದಿನ ಶುಭವಾಗಿಯೇ ಇರುತ್ತದೆ. 1975-77ರಲ್ಲಿ ಅಂದಿನ ಶ್ರೀಮತಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರಾಳ ತುರ್ತು ಪರಿಸ್ಥಿತಿ ಹೇರಿ, ಪ್ರಜಾಫ್ರಭುತ್ವಕ್ಕೆ ಕಳಂಕ ತಂದಿದ್ದ ಸಂದರ್ಭದಲ್ಲಿ ಅದೆಷ್ಟು ಅಮಾಯಕರು ಜೀವ ಕಳೆದುಕೊಂಡರೋ, ಕಷ್ಟ-ನಷ್ಟಗಳನ್ನು ಅನಭವಿಸಿದರೋ ಲೆಕ್ಕವಿಲ್ಲ. ಸ್ವತಃ ನಾನೂ ಹಾಸನದ ಜೈಲಿನಲ್ಲಿ ಭಾರತ ರಕ್ಷಣಾ ಕಾಯದೆಯ ಅಡಿಯಲ್ಲಿ ಬಂಧಿಸಲ್ಪಟ್ಟಿದ್ದೆ. 13 ಸುಳ್ಳು ಕ್ರಿಮಿನಲ್ ಮೊಕದ್ದಮೆಗಳನ್ನು ನನ್ನ ಮೇಲೆ ಹೂಡಲಾಗಿತ್ತು. ನನ್ನನ್ನು ನೌಕರಿಯಿಂದ ತೆಗೆದಿದ್ದರು. ಆಗ ಜೈಲಿನ ಗೋಡೆಯನ್ನು ಒರಗಿಕೊಂಡು ಅನಿಶ್ಚಿತ ಭವಿಷ್ಯದ ಕುರಿತು ಚಿಂತಿಸುತ್ತಿದ್ದ ದಿನಗಳನ್ನು ನೆನೆಸಿಕೊಂಡರೆ ಇಂದಿನ ಪ್ರತಿಯೊಂದು ದಿನವೂ ನನಗೆ ಸಂತೋಷದ ದಿನವಾಗಿ ಕಾಣುತ್ತದೆ. ಅಂದಿನ ಕಷ್ಟದ ದಿನಗಳು ಮುಂದೆ ನನ್ನನ್ನು ಮಾನಸಿಕವಾಗಿ ಮತ್ತಷ್ಟು ಬಲಿಷ್ಠನನ್ನಾಗಿ ಮಾಡಿದವು ಎಂದರೆ ಅದರಲ್ಲಿ ಉತ್ಪ್ರೇಕ್ಷೆಯಿಲ್ಲ. ಕೆಟ್ಟ ದಿನಗಳನ್ನು ನಿಭಾಯಿಸಬಲ್ಲವನು ಒಳ್ಳೆಯ ದಿನಗಳನ್ನು ಕಾಣಬಲ್ಲ. ಜೀನ್ ಸೈಮನ್ಸ್ ಎಂಬಾಕೆ ಬರೆಯುತ್ತಾಳೆ, "ನನ್ನ ತಾಯಿಯ ಜೀವನ ನರಕವಾಗಿತ್ತು. ಆಕೆ 14 ವರ್ಷದವಳಾಗಿದ್ದಾಗ ನಾಝಿಗಳ ಯಾತನಾಶಿಬಿರದಲ್ಲಿ ಬಂದಿಯಾಗಿದ್ದಳು. ಈಗ ಜೀವನದ ಬಗ್ಗೆ ಅವಳ ಅನಿಸಿಕೆಯೆಂದರೆ, ಭೂಮಿಯ ಮೇಲಿನ ಪ್ರತಿಯೊಂದು ದಿನವೂ ಶುಭದಿನವೇ!" ಮೃತ್ಯುವಿನ ದರ್ಶನ ಮಾಡಿಬಂದು ಬದುಕುಳಿದವರೆಲ್ಲರ ಅನುಭವವೂ ಸಾಮಾನ್ಯವಾಗಿ ಇದೇ ಆಗಿರುತ್ತದೆ.
ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾವಾದವೇ ಜೀವನ; ಅಯ್ಯೋ, ಎಲ್ಲವೂ ಮುಗಿಯಿತು ಎನ್ನುವ ನಿರಾಶಾವಾದವೇ ಮರಣ. ಆಶಾವಾದಕ್ಕೆ ದುರ್ಯೋಧನ ಉತ್ತಮ ಉದಾಹರಣೆಯಾಗಿದ್ದಾನೆ. ತಾನೊಬ್ಬನೇ ಹಸ್ತಿನಾಪುರವನ್ನು ಆಳಬೇಕು, ಪಾಂಡವರನ್ನು ಸೋಲಿಸಲೇಬೇಕು ಎಂಬ ಛಲದಿಂದ ಕುರುಕ್ಷೇತ್ರದ ಯುದ್ದದಲ್ಲಿ ತೊಡಗಿದ್ದಾಗ, ಅವನ ಕಣ್ಣಮುಂದೆಯೇ ಅವನ ಸಹೋದರರು ಹತರಾದರು, ದ್ರೋಣ, ಭೀಷ್ಮ, ಕರ್ಣರಂತಹ ಅತಿರಥ, ಮಹಾರಥರೆಲ್ಲರೂ ಧರೆಗುರುಳಿದರು. ಆದರೂ ಅವನಿಗೆ ವಿಶ್ವಾಸವಿತ್ತು, ಶಕುನಿ ಇನ್ನೂ ಇದ್ದಾನೆ, ಯುದ್ಧದಲ್ಲಿ ಗೆಲ್ಲುವಂತೆ ಮಾಡುತ್ತಾನೆ. ಸ್ವತಃ ತಾನು ಸಾಯುವವರೆಗೂ ತಾನೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಇಟ್ಟುಕೊಂಡೇ ಸತ್ತವನು ಅವನು. ದುರ್ಯೋಧನನ ಜೀವನ ನಮಗೆ ಆದರ್ಶವಲ್ಲದಿದ್ದರೂ, ಅವನ ಎಡೆಬಿಡದ ಆಶಾವಾದ, ಛಲಗಳು ಅನುಕರಣೀಯವಾಗಿವೆ.
ಕೇವಲ ಆಸೆ, ಭರವಸೆ, ನಿರೀಕ್ಷೆಗಳೇ ನಮ್ಮ ಒಳ್ಳೆಯ ದಿನಗಳ ನಿರೀಕ್ಷೆಗೆ ಸಾಕಾಗುವುದಿಲ್ಲ. ನಮ್ಮ ಒಳ್ಳೆಯ ದಿನಗಳನ್ನು ಬೇರೆ ಯಾರೋ ತಂದುಕೊಡುತ್ತಾರೆ ಎಂದು ನಿರೀಕ್ಷಿಸುವುದೂ ತರವಲ್ಲ. ನಾವು ಯಾರೋ ನಮಗೆ ಒಳ್ಳೆಯ ದಿನಗಳನ್ನು ತಂದುಕೊಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡು ಕೈಕಟ್ಟಿ ಕುಳಿತರೆ ಹಿಂದೆ ಉಳಿಯುವವರು, ಭ್ರಮನಿರಸನಕ್ಕೆ ಪಕ್ಕಾಗುವವರು ನಾವೇನೇ. ನಮ್ಮ ಒಳ್ಳೆಯ ದಿನಗಳಿಗಾಗಿ ನಾವೇ ಶ್ರಮಿಸಬೇಕು. ವಿವೇಕಾನಂದರು ಹೇಳಿದಂತೆ, ನಮ್ಮ ಏಳಿಗೆಯ ಶಿಲ್ಪಿಗಳು ನಾವೇ! ಪರದೇಶದ ಒಬ್ಬ ಯಾತ್ರಿಕ ಒಮ್ಮೆ ಒಬ್ಬ ಸನ್ಯಾಸಿಯನ್ನು ಭೇಟಿ ಮಾಡಿದನಂತೆ. ಒಂದು ಸಣ್ಣ ಗುಡಿಸಲಿನಲ್ಲಿದ್ದ ಆ ಸನ್ಯಾಸಿಯ ಹತ್ತಿರ ಇದ್ದುದು ಒಂದು ಚಾಪೆ ಮತ್ತು ಒಂದು ಕುಡಿಯುವ ನೀರಿನ ಪಾತ್ರೆ ಅಷ್ಟೆ. ಆಶ್ಚರ್ಯಗೊಂಡ ಯಾತ್ರಿಕ ಸನ್ಯಾಸಿಯನ್ನು ಕೇಳಿದನಂತೆ: "ಸ್ವಾಮಿ, ನಿಮ್ಮ ಪೀಠೋಪಕರಣಗಳು ಎಲ್ಲಿ?" ಸನ್ಯಾಸಿಯಿಂದ ಮರುಪ್ರಶ್ನೆ ಬಂದಿತು: "ನಿಮ್ಮ ಪೀಠೋಪಕರಣಗಳು ಎಲ್ಲಿ?" ಯಾತ್ರಿಕ ಹೇಳಿದ, "ಸ್ವಾಮಿ, ನಾನೊಬ್ಬ ಯಾತ್ರಿಕ. ನನ್ನ ಪೀಠೋಪಕರಣಗಳು ನನ್ನ ಊರಿನಲ್ಲಿವೆ". ಸನ್ಯಾಸಿ ಹೇಳಿದನಂತೆ, "ನಾನೂ ಒಬ್ಬ ಯಾತ್ರಿಕ!" ಜೀವನದ ಪಾಠ ಇಲ್ಲಿದೆ. ಜನರು ತಾವು ಶಾಶ್ವತವಾಗಿರುತ್ತೇವೆಂದುಕೊಂಡು ಮೂರ್ಖರಂತೆ ಬಾಳುತ್ತಾರೆ. ಅರ್ಥ ಮಾಡಿಕೊಂಡರೆ ನಮ್ಮ ಜೀವನದ ಪ್ರತಿದಿನವೂ ಶುಭದಿನ ಆಗಿರಲೇಬೇಕು! ಎಲ್ಲರಿಗೂ, ಎಲ್ಲಾ ದಿನಗಳೂ ಶುಭದಿನಗಳಾಗಲೆಂದು ಆಶಿಸೋಣ. ನಿಜ ಅಲ್ಲವೇ? ಒಳ್ಳೆಯ ದಿನಗಳು ಖಂಡಿತಾ ಬರಲಿವೆ! ಸ್ವಾಗತಿಸಲು ಸಿದ್ಧರಾಗೋಣ.
-ಕ.ವೆಂ.ನಾಗರಾಜ್.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)