ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಮೇ 9, 2010

ರಾಯರ ಊರುಗೋಲು

ರಾಯರ ಊರುಗೋಲು
     ರಾಯರಿಗೆ ಪ್ರತಿದಿನ ಮುಂಜಾನೆ ಬೇಗ ಎದ್ದು ವಾಕಿಂಗ್ ಹೋಗುವ ಅಭ್ಯಾಸವಿತ್ತು. ವಯಸ್ಸಾಗಿದ್ದರಿಂದ ಹೆಚ್ಚು ದೂರ ಹೋಗುತ್ತಿರಲಿಲ್ಲ. ಮನೆಯ ಹತ್ತಿರದಲ್ಲೇ ಸ್ವಲ್ಪ ದೂರ ಹೋಗಿ ಬರುತ್ತಿದ್ದರು. ಒಮ್ಮೆ ಹೀಗೆ ಹೋಗುವಾಗ ರಸ್ತೆಯಲ್ಲಿ ಎಡವಿ ಬಿದ್ದರು. ಸಣ್ಣ ಪುಟ್ಟ ತರಚಿದ ಗಾಯಗಳಾದವು. ಅವರು ಹಿಡಿದಿದ್ದ ಊರುಗೋಲಿನ ಹಿಡಿಕೆ ಮುರಿದುಹೋಯಿತು.ಬಿದ್ದ ಪೆಟ್ಟಿಗಿಂತ ಮುರಿದ ಊರುಗೋಲಿನ ಚಿಂತೆ ಅವರಿಗೆ ಜಾಸ್ತಿಯಾಯಿತು. ಕೆಲವು ವರ್ಷಗಳ ಹಿಂದೆ ನಡೆದಾಡುವಾಗ ತಡವರಿಸುತ್ತಿದ್ದುದನ್ನು ಕಂಡ ಅವರ ಮಗ ಕೊಡಿಸಿದ್ದ ಊರುಗೋಲು ಅವರಿಗೆ ಮೆಚ್ಚುಗೆಯಾಗಿತ್ತು. ಎಲ್ಲಿ ಹೋಗುವಾಗಲೂ ಅದನ್ನು ಬಿಡುತ್ತಿರಲಿಲ್ಲ. ಅದರ ಮೇಲೆ ಮೋಹವಿತ್ತಲ್ಲದೆ ಅವಲಂಬಿತರೂ ಆಗಿದ್ದರು. ಅದನ್ನು ರಿಪೇರಿ ಮಾಡಿಸಲು ಬಡಗಿಯನ್ನು ಹುಡುಕಿಕೊಂಡು ಹೋದ ಅವರಿಗೆ ಸಮೀಪದ ಹೊಸಮನೆಯಲ್ಲಿ ಮರಗೆಲಸ ಮಾಡುತ್ತಿದ್ದ ಬಡಗಿ ಕಂಡು ಅವನನ್ನು ವಿಚಾರಿಸಿದರು.
ರಾಯರು: ಈ ಕೋಲನ್ನು ರಿಪೇರಿ ಮಾಡಿಕೊಡುತ್ತೀಯೇನಪ್ಪಾ?
ಬಡಗಿ:      ಆಗಲಿ. ನಾಳೆ ಮಾಡಿಕೊಡುತ್ತೇನೆ.
ರಾಯರು: ಈಗಲೇ ಮಾಡಿಕೊಟ್ಟರೆ ಒಳ್ಳೆಯದು. ಇದೇ ನನ್ನ ಕಾಲು. ಎಷ್ಟು ಕೊಡಬೇಕು?
ಬಡಗಿ:     ಇಪ್ಪತ್ತೈದು ರೂಪಾಯಿ ಆಗುತ್ತೆ. ರಿವೆಟ್ ಹಾಕಬೇಕು. ಗಮ್ ಹಾಕಿ ಸರಿಯಾಗಿ ಕೂಡಿಸಬೇಕು. ಬಹಳ ಕೆಲಸವಿದೆ.
ರಾಯರು: ಇಪ್ಪತ್ತು ರೂಪಾಯಿ ಕೊಡುತ್ತೇನೆ. ಸರಿಯಾಗಿ ಮಾಡಿಕೊಡಪ್ಪಾ.
      ಇವರ ಸಂಭಾಷಣೆಯನ್ನು ಗಮನಿಸುತ್ತಿದ್ದ ಮನೆಯ ಮಾಲಿಕರು ಬಡಗಿಗೆ ಊರುಗೋಲು ರಿಪೇರಿ ಮೊದಲು ಮಾಡಿಕೊಡಲು ತಿಳಿಸಿ ಕುಳಿತುಕೊಳ್ಳಲು ಕುರ್ಚಿ ಕೊಟ್ಟು ನೀರು ಬೇಕೇ ಎಂದು ಕೇಳಿದರು. ಮನೆಯಾಕೆಗೆ ಹೇಳಿ ಕಾಫಿ ಮಾಡಿಸಿಕೊಟ್ಟರು. ಮೈ ಕೈ ನೋವಿದ್ದ ರಾಯರಿಗೆ ಕಾಫಿ ಹಿತವಾಗಿತ್ತು. ಬಡಗಿಗೂ ಏನನ್ನಿಸಿತೋ ಬಹಳ ಮುತುವರ್ಜಿಯಿಂದ ರಿಪೇರಿ ಮಾಡಿಕೊಟ್ಟ. ರಾಯರು ಹಣ ಕೊಡಲು ಹೋದರೆ ಆತ ಬೇಡವೆಂದ. ಆಗ ನಡೆದ ಸಂಭಾಷಣೆ:
ರಾಯರು: ಏಕಪ್ಪಾ? ಸಾಲಲಿಲ್ಲವೇ? ಇಪ್ಪತ್ತೈದು ರೂಪಾಯಿಯನ್ನೇ ತೊಗೋ.
ಬಡಗಿ:      ಬೇಡ ಸಾರ್. ನನಗೂ ವಯಸ್ಸಾದ ತಂದೆಯಿದ್ದಾರೆ. ನಿಮ್ಮಿಂದ ಈ ಕೆಲಸಕ್ಕೆ ದುಡ್ಡು ಪಡೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ. ನನ್ನ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಹರಸಿ ಸಾರ್. ಅಷ್ಟು ಸಾಕು.
ರಾಯರು: ಹಣ ಕೊಡದಿರಲು ನನಗೂ ಸರಿಯಾಗುವುದಿಲ್ಲ. ಹೋಗಲಿ, ಹತ್ತು ರೂಪಾಯಿಯಾದರೂ ತೆಗೆದುಕೋ.
      ಹತ್ತು ರೂಪಾಯಿಯನ್ನು ಕೊಟ್ಟು ಬಡಗಿಗೆ, ಮನೆಮಾಲಿಕರಿಗೆ ಧನ್ಯವಾದ ಹೇಳಿ ಕೋಲನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಾ ರಾಯರು ಮನೆಗೆ ವಾಪಸಾದರು.
                                                                                                                    -  ಕ.ವೆಂ. ನಾಗರಾಜ್.
(ಲೇಖಕನ ಸ್ವಗತ: ಆ ಬಡಗಿಯ, ಹೊಸಮನೆ ಮಾಲಿಕನಲ್ಲಿನ ಹಿರಿಯರನ್ನು, ವಯಸ್ಸಾದವರನ್ನು ಗೌರವಿಸುವ ಮನೋಭಾವ ಎಲ್ಲರಿಗೂ ಬಂದರೆ ಎಷ್ಟು ಚೆನ್ನ!) 

6 ಕಾಮೆಂಟ್‌ಗಳು:

  1. ಸಂಪದಿಗರ ಪ್ರತಿಕ್ರಿಯೆಗಳು:
    http://sampada.net/blog/kavinagaraj/16/07/2010/26872

    ಪ್ರತ್ಯುತ್ತರಅಳಿಸಿ
  2. ತುಂಬಾ ಮನಸ್ಸಿಗೆ ಹಿಡಿಸಿತು. ರಾಯರ ಊರುಗೋಲು ಮುರಿದದ್ದು, ಬಡಗಿ ಮತ್ತು ಮನೆ ಮಾಲಿಕರ ಸಹೃದಯತೆ ಮತ್ತು ರಾಯರ ಕೆಲಸಕ್ಕೆ ಕೊಟ್ಟ ಪ್ರತಿ ಫಲ ಎಲ್ಲವೂ ಮೆಚ್ಚುಗೆಯಾಯಿತು.

    ಒಳ್ಳೆ ಸರಳ ಶೈಲಿ ಬರಹಗಾರರು ನೀವು. ಭೇಷ್!

    ನನ್ನ ಬ್ಲಾಗಿಗೂ ಬನ್ನಿರಿ.

    ಪ್ರತ್ಯುತ್ತರಅಳಿಸಿ
  3. ಮೆಚ್ಚಿ ಪ್ರತಿಕ್ರಿಯಿಸಿದ ಪ್ರತಾಪ್ ಮತ್ತು ಬದರಿನಾಥರಿಗೆ ವಂದನೆಗಳು.

    ಪ್ರತ್ಯುತ್ತರಅಳಿಸಿ
  4. Ksraghavendranavada
    16JUL2010 6:18
    ಹೌದು,
    ಒಳ್ಳೆಯ ನೀತಿಯುತ ಕಥೆ.
    ನಮಸ್ಕಾರಗಳೊ೦ದಿಗೆ,

    Kavinagaraj
    16JUL2010 8:20
    ರಾಘವೇಂದ್ರರೇ, ಇದು ನಾನು ನನ್ನ ತಂದೆಗೆ ನಾನು ಕೊಡಿಸಿದ್ದ ಊರುಗೋಲಿನ ಕಥೆ. ಮೆಚ್ಚಿದ್ದಕ್ಕೆ ವಂದನೆ. ಚಿತ್ರದಲ್ಲಿರುವವರೇ ನನ್ನ ತಂದೆ ಮತ್ತು ನನ್ನ ಮೊಮ್ಮಗಳು.

    16JUL2010 8:41
    ಅ೦ದಾಜು ಮಾಡಿದ್ದೆ. ಆದರೆ ಹಾಗೆಯೇ ಪ್ರತಿರ್ಕಿಯಿಸಿ, ಹಾಗಲ್ಲ ರೀ ಅ೦ಥ ನೀವು ಅ೦ದರೆ ಅ೦ಥ ಮೇಲಿನ ರೀತಿ ಪ್ರತಿಕ್ರಿಯಿಸಿದೆ. ಅಷ್ಟೇ.
    ನಮಸ್ಕಾರಗಳು.
    ನಾವಡ
    ಹೊಳೆ ನರಸೀಪುರ ಮಂಜುನಾಥ
    17JUL2010 8:46
    ಕವಿ ನಾಗರಾಜರೆ, ನಿಮ್ಮ ಊರುಗೋಲಿನ ಕಥೆ ಓದಿ ಅದೇಕೋ ಗೊತ್ತಿಲ್ಲ, ದೂರದಲ್ಲಿ ಒಬ್ಬ೦ಟಿಯಾಗಿರುವ ಅಪ್ಪನನ್ನು ನೆನೆದು ಕಣ್ಗಳು ತು೦ಬಿ ಬ೦ದವು.

    ಬರೆದದ್ದು ಸಾರ್ಥಕವಾಯಿತೆಂದೆನಿಸಿತು, ನಿಮ್ಮ ಪ್ರತಿಕ್ರಿಯೆ ನೋಡಿ, ಮಂಜು. ಧನ್ಯವಾದಗಳು.
    -ನಾಗರಾಜ್.

    ಸುರೇಶ್ ನಾಡಿಗ್
    17JUL2010 9:04
    ನಾಗರಾಜರೆ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  5. ಪ್ರತಿಕ್ರಿಯೆ ೨:
    ಬಡವನದು ಯಾವಾಗಲೂ ಹೃದಯ ವೈಶಾಲ್ಯತೆ. :-)
    ಈಗಿನ ವಾಲ್ಮಾರ್ಟಿಗೆ ಚಿಲ್ಲರೆ ಮಾರುಕಟ್ಟೆ ಒತ್ತೆ ಇಟ್ಟಂತೆ ಯಾವುದೋ ಹೊರ ದೇಶದ ಕಂಪನಿಗೆ ಸರ್ಕಾರ ಬಡಗಿ ಕೆಲಸ ಅಡವಿಟ್ಟರೆ? ಅಧೋಗತಿಯೇ! :-(

    ಪ್ರತ್ಯುತ್ತರಅಳಿಸಿ